00236. ಕಥೆ: ಪರಿಭ್ರಮಣ..(40)

00236. ಕಥೆ: ಪರಿಭ್ರಮಣ..(40)

……….ಏಕಾಂಗಿತನ ಮುತ್ತಲು, ಮನಸೆ ಬೆತ್ತಲು…!
_______________________________________________________________________________
ಅವರೋಹಣ…ಆಕ್ರಮಣ…ಅಧಃಪತನ…ಆರೋಹಣ…ಮನಸೆನ್ನುವ ಚಾರಣ, ಈ ಬದುಕಿನ ಹೂರಣ!
_______________________________________________________________________________

00236. ಕಥೆ: ಪರಿಭ್ರಮಣ..(40)

( ಪರಿಭ್ರಮಣ..39ರ ಕೊಂಡಿ – https://nageshamysore.wordpress.com/00234-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-39/ )

ಇವರಾಡುತ್ತಿದ್ದ ಮಾತುಗಳನ್ನೆಲ್ಲ ಕೇಳುತ್ತಿದ್ದ ಸುರ್ಜಿತ್ ತಾನು ನಡುವೆ ಬಾಯಿ ಹಾಕುತ್ತ, ‘ಎಲ್ಲಾ ಸರಿ, ಎಲ್ಲಾ ಕಲ್ಚರುಗಳಲ್ಲೂ ಕುಡಿಯೋಕೆ ಮುಂಚೆ ‘ಚಿಯರ್ಸ’ ಅಂತಲೊ, ‘ಗನ್ಬೇ’ ಅಂತಲೊ ಅಥವಾ ಅವರವರ ಭಾಷೆಯಲ್ಲಿ ಏನಾದರೂ ‘ಕೋರಸ್’ ನಲ್ಲಿ ಹೇಳ್ತಾರಲ್ಲಾ, ಅದು ಯಾಕೆ?’ ಎಂದು ಚಿನಕುರುಳಿ ಪಟಾಕಿ ಸಿಡಿಸಿದ್ದ.

‘ ಹೌದಲ್ಲಾ? ಅದ್ಯಾಕೆ ಅನ್ನುತ್ತಾರೆ? ಏನಾದರೂ ರೀಸನಿಂಗ್ ಇರಬಹುದ? ಅಥವ ಕುಡಿತದ ಪಾರ್ಟಿಗೆ ಸೇರಿದ ಪರಿಚಿತ-ಅಪರಿಚಿತರೆಲ್ಲ ಮಾತು ಶುರು ಹಚ್ಚಿಕೊಳ್ಳಲಿಕ್ಕೊಂದು ಸ್ಟಾರ್ಟರಿದ್ದ ಹಾಗೊ?’ ಎಂದು ತಲೆ ಕೆರೆದುಕೊಂಡ ರಾಮಮೂರ್ತಿ. ಸುತ್ತ ನೆರೆದು ಜತೆಯಾಗಿದ್ದ ಥಾಯ್ ಸಹೋದ್ಯೋಗಿಗಳಿಗೂ ಸಹ ಅದರ ಕುರಿತು ಮಾಹಿತಿ ಇರಲಿಲ್ಲ. ಶ್ರೀನಾಥ ಮಾತ್ರ ಮಾತನಾಡದೆ ತುಟಿಯಂಚಲ್ಲೆ ನಗುತ್ತ ವೈನಿನ ಹನಿಯನ್ನು ಚಪ್ಪರಿಸುತ್ತಿದ್ದ. ಅದನ್ನು ಗಮನಿಸಿದ ಸುರ್ಜಿತ್, ‘ಸಾರ್..ನಿಮ್ಮ ಸೈಲೆಂಟ್ ಸ್ಮೈಲ್ ನೋಡಿದರೆ, ನಿಮಗೇನೊ ಉತ್ತರ ಗೊತ್ತಿರೊ ಹಾಗಿದೆ..ಸ್ವಲ್ಪ ಹಾಗೆ ಹೇಳಿಬಿಡಿರಲ್ಲಾ ?’ ಎಂದ ಅಣಕದ ದನಿಯಲ್ಲೆ.

‘ ಉತ್ತರ ಗೊತ್ತಿದೆಯೊ ಇಲ್ಲವೊ ಗೊತ್ತಿಲ್ಲ… ಆದರೆ ಆ ಕುರಿತು ಕೇಳಿದ್ದ ಅಥವ ಓದಿದ್ದ ಬಹಳ ಹಳೆಯ ವಿಷಯವೊಂದು, ಬಹುಶಃ ಜೋಕಿನ ರೂಪದಲ್ಲಿರಬೇಕು – ಅದರ ನೆನಪಾಯ್ತಷ್ಟೆ…’ ಇನ್ನೂ ಅದರ ನೆನಪಿನಲ್ಲೆ ಮುಳುಗಿದ್ದ ಮುಗುಳ್ನಗೆಯ ತೆರೆ ಸಡಿಲಿಸದೆ ಉತ್ತರವಿತ್ತಿದ್ದ ಶ್ರೀನಾಥ.

‘ ಜೋಕಾದ್ರೂ ಆಗಲಿ ಹೇಳಿ ಸಾರ್ ಹಾಗಾದ್ರೆ..? ನಮಗೂ ಸ್ವಲ್ಪ ಜ್ಞಾನೋದಯವಾಗಲಿ..’ ಎಂದ ಸೌರಭ್ ಕುತೂಹಲದಿಂದ..

‘ ಅದೇನು ದೊಡ್ಡ ವಿಷಯವಲ್ಲ.. ಬಟ್ ನನಗೇನೊ ಲಾಜಿಕಲ್ಲಾಗಿದೆ ಅನಿಸಿತ್ತು ಅದನ್ನು ಕೇಳಿದಾಗ…ಅದಕ್ಕೆ ಇಷ್ಟವಾಯ್ತೊ ಏನೋ? ಓಕೆ..ಹೇಳಿಯೆಬಿಡುತ್ತೇನೆ ನೋಡಿ. ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ಕೆಲವು ಪ್ರಶ್ನೆಗಳನ್ನು ಉತ್ತರಿಸುವುದರ ಮೂಲಕ ಯತ್ನಿಸುವುದು ವಾಸಿ. ಮೊದಲಿಗೆ ಇದನ್ನು ಹೇಳಿ – ನಾವು ಏನು ಕುಡಿದರೂ, ಏನು ಮಾಡಿದರೂ ಅದರ ಸಕಲ ಪರಿಣಾಮದ ಅನುಭವವಾಗುವುದು ಯಾವುದರ ಮೂಲಕ?’

‘ಇನ್ಯಾವುದರ ಮೂಲಕ..ಪಂಚೇಂದ್ರಿಯಗಳ ಮೂಲಕ ತಾನೆ.. ಒನ್ ಆಫ್ ದಿ ಫೈವ್ ಸೆನ್ಸಸ್…?’ ಸೌರಭನ ಉತ್ತರ ತಟ್ಟನೆ ಬಂದಿತ್ತು.

‘ರೈಟ್ ಆನ್ಸರ… ಎಲ್ಲವನ್ನು ಗ್ರಹಿಸಿ ನೋಡುವ ಕಾರ್ಯ ಪಂಚೇಂದ್ರಿಯಗಳದ್ದೆ ತಾನೇ? ನಾವು ಮಾಮೂಲಿಯಾಗಿ ಏನಾದರೂ ಕುಡಿದಾಗ, ತಿಂದಾಗ ಸಾಧಾರಣ ಯಾವುದಾದರೊಂದೊ ಅಥವಾ ಎರಡೊ ಇಂದ್ರೀಯಗಳು ಅದರ ಅನುಭವವನ್ನು ಗ್ರಹಿಸುವುದು ಸಾಮಾನ್ಯ – ಉದಾಹರಣೆಗೆ ಮೂಗು ಲಡ್ಡುವಿನ ವಾಸನೆ ಹಿಡಿಯುವಂತೆ, ನಾಲಿಗೆಯ ಮೂಲಕ ಬಾಯಿ ಅದರ ರುಚಿ ನೋಡುವಂತೆ…’

‘ಹೌದೌದು…ಸಿಗರೇಟಿಗೂ ಹಾಗೆಯೇ ಮೂಗು ಬಾಯಿಯದೆ ಕೋ ಆಪರೇಷನ್….’

‘ ಆದರೆ ಯಾವುದೇ ಆಲ್ಕೋಹಾಲಿಕ್ ಡ್ರಿಂಕ್ಸ್ ಕುಡಿದಾಗ ಮಾತ್ರ, ಹೆಚ್ಚು ಕಡಿಮೆ ದೇಹದ ಎಲ್ಲ ಐದು ಇಂದ್ರಿಯಗಳು ಒಂದೆ ಸಾರಿಗೆ ಒಟ್ಟಾಗಿ ಅದರ ಅನುಭವವನ್ನು ಗ್ರಹಿಸಿಕೊಂಡು ಸಕ್ರೀಯವಾಗಿ ಬಿಡುತ್ತವಂತೆ.. ಉದಾಹರಣೆಗೆ ಕುಡಿತ ಶುರುವಾಗುತ್ತಿದ್ದಂತೆ ಘಾಟು ವಾಸನೆ ಮೂಗಿಗೆ ಬಡಿಯುತ್ತಲೇ ಕಹಿಯ ರುಚಿಗೆ ಸಿಂಡರಿಸಿಕೊಳ್ಳುವ ಮುಖದಲ್ಲಿ, ಒಳಗೆ ಸೇರುತ್ತಿರುವ ಗುಂಡು ಒಳಗಿಂದಲೆ ಸ್ನಾಯುಗಳಡಿ ನುಗ್ಗಿ ತೊಗಲಿನ ಪದರಗಳನ್ನು ಮುತ್ತಿಕ್ಕುತ್ತ, ಅದರ ಸೂಕ್ಷ್ಮ ರಂಧ್ರಗಳನ್ನು ದಾಟಿ ಕಣ್ಣಿಗೆ ಕಾಣದಂತೆಯೆ ಮತ್ತೆ ದೇಹದಿಂದಾಚೆಗೆ ಬೆಚ್ಚನೆಯ ಅನುಭೂತಿಯಾಗಿ ಹೊರ ಸೂಸುವಾಗ, ಕುಡಿವವನ ಚರ್ಮದಲ್ಲಿ ಏನೇನೊ ಸಂವೇದನೆ ಮೂಡಿ ಮುಖವೆಲ್ಲ ಬೆವರುತ್ತ ಬಿಸಿಯಾಗಿ ‘ಜುಂ’ ಅಂದು ಬಿಡುತ್ತದೆ; ಕಣ್ಣುಗಳು ಬರಿ ಬಣ್ಣದ ದ್ರವವನ್ನು ನೋಡುವುದು ಮಾತ್ರವಲ್ಲ, ಘಾಟನ್ನು ತುಂಬಿಕೊಳ್ಳುತ್ತ ಮತ್ತಿನಿಂದಲೆ ಕೆಂಪೇರಿ ಬಿಡುತ್ತವೆ, ಚರ್ಮದೊಳಗಿನ ಆಲಾಪನೆ ಮೃದುವಾದ ಅಂಗಗಳನ್ನೆಲ್ಲ ಹತ್ತಿಯಂತೆ ಹಗುರಾಗಿಸಿದಾಗ, ಹೊರಚಾಚಿದ ಮೃದ್ವಸ್ಥಿ ಕಿವಿಗಳು, ಅವು ಇದ್ದ ಜಾಗದಲ್ಲಿ ಇದೆಯೊ ಇಲ್ಲವೊ ಎಂದು ಅನುಮಾನವಾಗಿ ಮುಟ್ಟಿ ನೋಡುಕೊಳ್ಳುವ ಹಾಗೆ ಮಾಡಿಬಿಡುತ್ತದೆ ಕುಡಿತದ ಕರೆಂಟು! ಇನ್ನು ಮತ್ತೊಂದು ಮೃದ್ವಂಗಿಯಾದ ನಾಲಿಗೆಗೂ ಅದೇ ಪಾಡು – ಬೆಂಡು ಹಿಡಿದಂತಾಗಿ ಅದಿನ್ನು ಇದ್ದಲ್ಲೆ ಇದೆಯಾ ಇಲ್ಲವಾ ಎಂದು ಅನುಮಾನವಾಗುವಷ್ಟು… ; ಇನ್ನು ಮೂಗಿನ ಕುರಿತು ಹೆಚ್ಚು ಹೇಳುವ ಹಾಗೆಯೆ ಇಲ್ಲ – ಮೊದಲ ವಾಸನೆ ನೋಡುವುದೆ ಅಲ್ಲಿಂದ; ಜತೆಗೆ ಬಾಯಿಂದ ಒಳಗೆ ಸೇರಿದ್ದು ತನ್ನೆಲ್ಲ ಒಳಗಿನ ರೌಂಡ್ ಮುಗಿಸಿ ಮತ್ತೆ ಗಂಟಲೇರಿ ಮೇಲೆ ಬರುವಾಗ ಒಂದು ರೀತಿಯ ಸಂತೃಪ್ತಿಯ ತೇಗಾಗಿ ಹೊರಬಂದು ಮೂಗೆಲ್ಲಾ ತುಂಬಿಕೊಂಡಾಗ ಏನೊ ಹಗುರಾದ ತೇಲುತ್ತಿರುವ ಅನುಭೂತಿ. ಹೀಗೆ ಎಲ್ಲ ಅಂಗಗಳು ಅದರಲ್ಲೂ ನಮ್ಮ ಪಂಚೇಂದ್ರಿಯಗಳು ಕುಡಿದ ಅಮಲಿನಲ್ಲಿ ಏನಾದರೂ ಖುಷಿಯ ಸಂವೇದನೆಯನ್ನು ಅನುಭವಿಸುತ್ತವಂತೆ, ಬೇರೆ ಯಾವುದೋ ಲೋಕಕ್ಕೆ ರವಾನೆಯಾಗಿಹೋದಂತೆ.. ಆದರೆ ನಾಲಿಗೆಯೊಂದನ್ನು ಮಾತ್ರ ಬಿಟ್ಟು..’

‘ಯಾಕೆ ಸಾರ್..? ನಾಲಿಗೆಯೂ ಖುಷಿಯನ್ನ ಅನುಭವಿಸಲೇ ಬೇಕಲ್ಲಾ? ಬಾಯಿಂದಲೆ ನಾಲಿಗೆ ಮುಟ್ಟಿಟ್ಕೊಂಡೆ ತಾನೆ ಕುಡಿಯೊ ಡ್ರಿಂಕ್ಸ್ ಒಳಗೆ ಹೋಗೋದು? ನಾಲಿಗೆ ಖುಷಿ ಪಡಲ್ಲ ಅಂಥ ಹೇಗೆ ಹೇಳುವುದು ?’ ಗುಂಪಿನಲ್ಲಿದ್ದ ಥಾಯ್ ಸೇಲ್ಸ್ ಮ್ಯಾನೇಜರ ಕುನ್. ಮನೋಪ್ ನಡುವೆ ಬಾಯಿ ಹಾಕಿದ್ದರು ಈ ಬಾರಿ. ಕುಡಿಯುವ ಡ್ರಿಂಕ್ಸಿನ ವಿಚಾರ ಎಲ್ಲರಲ್ಲೂ ತುಸು ಮತ್ತಿನ ರೀತಿಯ ಕುತೂಹಲವೇರಿಸಿದಂತೆ ಕಾಣುತ್ತಿತ್ತು.

‘ ಎಗ್ಸಾಕ್ಟ್ ಲಿ.. ಆದರೆ ಯಾವುದೆ ಡ್ರಿಂಕ್ಸು ಕುಡಿಯೋವಾಗ ಆ ರುಚಿಗೆ ಕುಡಿಯುವವರ ಮುಖ ಹೇಗಿರುತ್ತೆ ಹೇಳಿ ನೋಡೋಣ? ಖುಷಿಯಾಗಿ ಸ್ವೀಟ್ ಫ್ರೂಟ್ ಜ್ಯೂಸ್ ಕುಡಿದ ಹಾಗಿರುತ್ತಾ?’

‘ ನಾನು ನೋಡಿದ ಹಾಗೆ ಹೆಚ್ಚು ಕಮ್ಮಿ ಮುಖ ಹಿಂಡಿಕೊಂಡು, ಕಿವುಚಿಕೊಂಡು, ಕಣ್ಣು ಮೂಗು ಮುಚ್ಚಿ ಒಂದೆ ಏಟಿಗೆ ಸುರಿದುಕೊಳ್ಳೊ ಹಾಗಿರೋದು ಸಾಮಾನ್ಯ ಅನುಭವ…’ ಮತ್ತೆ ಸೌರಭನದೆ ಉವಾಚ ತೂರಿ ಬಂದಿತ್ತು.

‘ ನೋಡಿದ್ಯಾ? ಬೇರೆಲ್ಲ ಇಂದ್ರಿಯಗಳು ಕುಡಿಯೋದನ್ನ ನೇರವಾಗಿ ಎಂಜಾಯ್ ಮಾಡ್ತಿದ್ರೆ, ಅದಕ್ಕೆ ಗೇಟ್ ವೇ ಆಗಿರೊ ಬಾಯಿ, ನಾಲಿಗೆ ಮಾತ್ರ ‘ಹೆಂಗಪ್ಪಾ ಕುಡಿಯೋದು..’ ಅನ್ನೊ ರೀತಿ ಕಷ್ಟ ಪಟ್ಕೊಂಡೆ ಕುಡಿಯಬೇಕಾಗುತ್ತಲ್ಲಾ?’

‘ ಹೌದೌದು..ಸಾಮಾನ್ಯ ನನಗೆ ಗೊತ್ತಿರೊ ಡ್ರಿಂಕ್ಸೆಲ್ಲಾ ಹಾಗೇನೆ.. ಕುಡಿದ ಮೇಲಿನ ಫೀಲಿಂಗ್ ಗ್ರೇಟು ಇರಬಹುದಾದರೂ ನಾಲಿಗೆ, ಬಾಯಿ ಮೂಲಕ ಕುಡಿಯೋವಾಗ ಮಜವಾಗಿ ಕುಡಿಯುತ್ತೆ ಅಂತ ಅನ್ಸೋದಿಲ್ಲಾ..ಅದರಲ್ಲೂ ಪ್ಯಾಕೆಟ್ಟು ತರದ ಹೆಂಡವಾದರಂತೂ ಮಾತಾಡುವಂತೆಯೆ ಇಲ್ಲ..’ ಎಂದು ಪೂರಾ ‘ದೇಸಿ’ ಮಾಲಿಗೆ ಇಳಿದುಬಿಟ್ಟಿದ್ದ ಸುರ್ಜೀತ್..

‘ ರೈಟ್.. ಬಹುಶಃ ಬಹಳ ಹಿಂದೇನೆ ಇದನ್ನ ಚೆನ್ನಾಗಿ ಅಬ್ಸರ್ವ್ ಮಾಡಿರ್ಬೇಕು ನಮ್ಮ ಕುಡಿತದ ಖಯಾಲಿಯ ಪೂರ್ವಜರು.. ಎಲ್ಲಾ ಕುಡಿಯೋದು ಸಂತೋಷದ ಅನುಭವಕ್ಕೆ ಅಥವಾ ದುಃಖದ ಫೀಲಿಂಗನ್ನ ಹುಸಿ ಸುಖದ ‘ಪೇಂಟ್’ ಹಚ್ಚಿ ಮರೆತು ಸಂತೋಷವಾಗಿರಲಿಕ್ಕೆ ಅಲ್ಲವಾ? ಆದರೆ ನಾಲಿಗೆ ಅನ್ನೋ ಇದೊಂದು ಅಂಗ ಮಾತ್ರ ಕಷ್ಟ ಪಡೊ ಫೀಲಿಂಗಿನಲ್ಲಿ ಸಫರ್ ಮಾಡೋದ್ಯಾಕೆ – ಅದು ಸರಿಯಾಗಿ ಕುಡಿಯೋಕೆ ಅಂತ ಬಾಯ್ಬಿಡೊ ಹೊತ್ತಿನಲ್ಲೆ? ಅಂತ ಲಾಜಿಕಲ್ಲಾಗಿ ಧೀರ್ಘವಾಗಿ ಯೋಚಿಸಿ, ಕನಿಷ್ಠ ಬಾಯಿ ಮತ್ತು ನಾಲಿಗೆ ಮಾಡೊ ಮುಖ್ಯ ಕೆಲಸ ಅಂದ್ರೆ ಮಾತೆ ತಾನೆ? ಕುಡಿಯೋದರಲ್ಲಿ ಖುಷಿ ಅನುಭವ ಸಿಗದಿದ್ರೆ ಏನಂತೆ? ಮಾತಿನಲ್ಲಾದರೂ ಖುಷಿಯ ವಾಸನೆ, ಆರಂಭ ಇರಲಿ ಅಂದ್ಕೊಂಡು ‘ಚಿಯರ್ಸ್’ ಅಂತ ಹೇಳಿ ಕುಡಿಯೋಕೆ ಆರಂಭಿಸ್ತಾರೆ ಅಂತ… ಅದಕ್ಕೆ ಕುಡಿಯೊವಾಗ ಹೇಳೊ ಪದಗಳೆಲ್ಲ ಸಂತೋಷ, ಹರ್ಷೋದ್ರೇಕ, ಉಲ್ಲಾಸ, ಉತ್ಸಾಹದ ಅರ್ಥಗಳನ್ನ ಕೊಡೋದು..’

ಅದನ್ನು ಕೇಳಿ ಎಲ್ಲರ ಮುಖದಲ್ಲೂ ತೆಳುವಾದ ನಗೆ ಮೂಡಿತ್ತು, ‘ನಿಜವೊ, ಸುಳ್ಳೊ, ಜೋಕೊ… ಲಾಜಿಕ್ಕೆನೊ ಲಾಜಿಕಲ್ಲಾಗೆ ಇದೆ..’ ಎಂದ ಸೌರಭನ ಮಾತಿಗೆ ಮಿಕ್ಕವರೂ ತಲೆಯಾಡಿಸಿದ್ದರು. ಅದೆ ಹೊತ್ತಿಗೆ ಬಾಯಿ ಹಾಕಿದ ರಾಮಮೂರ್ತಿ, ‘ನಾನು ನೋಡಿದ ಹಾಗೆ ಆರಂಭದಲ್ಲಿ ಮಾತ್ರವಲ್ಲದೆ ಪ್ರತಿ ರೌಂಡಿಗೂ, ಕೆಲವೊಮ್ಮೆ ಮಧ್ಯೆ ಮಧ್ಯೆ ಕೂಡಾ ಚಿಯರ್ಸನ್ನು ಹೇಳುತ್ತಲೇ ಇರುತ್ತಾರಲ್ಲ? ಅದು ಏಕೆ?’ ಎಂದು ಕೇಳಿದ್ದ.

ಈ ಬಾರಿ ತಟ್ಟನೆ ಬಾಯಿ ಹಾಕಿದ ಸೌರಭ, ‘ಅದಕ್ಕೂ ಇದೆ ಲಾಜಿಕ್ಕಲ್ವ? ಪ್ರತಿ ಸಾರಿ ಕುಡಿದಾಗಲೂ ನಾಲಿಗೆಗೆ ಕಹಿನೆ ಆಗುತ್ತಲ್ಲ..ಅದಕ್ಕೆ ಇರಬೇಕು..’ ಎಂದ.

ಅದನ್ನೊಪ್ಪಿಕೊಳ್ಳದ ರಾಮಮೂರ್ತಿ, ‘ಒಂದು ರೌಂಡ್ ಒಳಗೆ ಇಳಿದ ಮೇಲೆ ಯಾವ ರುಚಿ ತಾನೆ ಗೊತ್ತಾಗೊ ಹಾಗಿರುತ್ತೆ? ಎಲ್ಲಾ ಬರಿ ಅಯೋಮಯ ಅಷ್ಟೆ ಅಂತಾರಲ್ಲ…? ಸೋ ಐ ಡೊಂಟ್ ಥಿಂಕ್ ದಟ್ ಲಾಜಿಕ್ ಹೋಲ್ಡ್ಸ್ ಗುಡ್…’

ಕುಡಿಯದವನ ಬಾಯಿಂದ ಹೊರಡುತ್ತಿದ್ದ ಕುಡುಕ ಉವಾಚದ ಮಾತು ಕೇಳುತ್ತಲೇ ನಸುನಗುತ್ತಿದ್ದ ಶ್ರೀನಾಥನನ್ನು ನೋಡಿದ ಸುರ್ಜೀತ್, ‘ಶ್ರೀನಾಥ್ ಸಾರ್ ಇನ್ನೂ ನಗುತ್ತಲೆ ಇದ್ದಾರೆ.. ಅಂದರೆ ಇದಕ್ಕೂ ಏನೊ ‘ಸ್ಮಾರ್ಟ್ ಎಕ್ಸ್ ಪ್ಲಲನೇಷನ್’ ಇರಬೇಕೂಂತ ಕಾಣುತ್ತೆ..’ ಎಂದ.

‘ಸ್ಮಾರ್ಟೇನೂ ಅಲ್ಲ..ಆದರೆ ಹಿಂದಿನ ವಿವರಣೆಯ ಮುಂದುವರೆದ ಭಾಗ ನೆನಪಿಗೆ ಬಂತು ಅಷ್ಟೆ..’

‘ಸಾರ್ ಅದೇನೂಂತ ಹೇಳಿಬಿಡಿ.. ಸ್ಟೋರಿ ಪೂರ್ತಿಯಾಗಿಬಿಡಲಿ’ ಮತ್ತೆ ಉತ್ತೇಜಿಸಿದ ಸೌರಭ.

‘ನಾನು ಮೊದಲೆ ಹೇಳಿದ್ದೆ ನೆನಪಿದೆಯ? ನಾಲಿಗೆ, ಕಿವಿಯಂತಹ ಮೃದು ಅಂಗಗಳು ಇದ್ದಲ್ಲೆ ಇದೆಯೊ ಇಲ್ಲವೊ ಎಂದು ಅನುಮಾನ ಬರುವಷ್ಟು ಹಗುರವಾಗಿ, ನಡುನಡುವೆ ಅನುಮಾನದಿಂದ ಮುಟ್ಟಿ ಪರೀಕ್ಷಿಸಿ ನೋಡುತ್ತಿರಬೇಕಾಗುತ್ತದೆ ಎಂದು?’

‘ಹೌದು..ನೆನಪಿದೆ ಹಾಗೆ ಹೇಳುತ್ತಲ್ಲೇ ಅವನ್ನೆಲ್ಲ ಮೃದ್ವಂಗಿ, ಮೃದ್ವಸ್ತಿಗಳ ಗುಂಪಿಗೆ ಸೇರಿಸಿದ್ದೂ ನೆನಪಿದೆ…’ ಮತ್ತೊಂದು ಛೇಡಿಕೆಯ ದನಿ ತೂರಿ ಬಂದಿತ್ತು.

ಅದನ್ನು ನಿರ್ಲಕ್ಷಿಸುತ್ತಲೆ ಮುಂದುವರೆಸಿದ್ದ ಶ್ರೀನಾಥ, ‘ಬಹುಶಃ ಕುಡಿಯುತ್ತ ಕುಡಿಯುತ್ತ ಮೈ ಮೇಲಿನ ಹತೋಟಿ ತಪ್ಪುತ್ತಾ ಹೋಗುವ ಅಂಶ ಕುಡಿದವರ ಪ್ರಜ್ಞೆಗು ನಿಲುಕುತ್ತಾ ಹೋದರೂ, ಅದರ ತೀರಾ ಆಳದ ಪರಿಣಾಮದ ಹೆಚ್ಚಿನ ಅನುಭವವಾಗುವುದು – ಇದ್ದಲ್ಲೆ ಇದೆಯೊ ಇಲ್ಲವೊ ಎಂದನುಮಾನ ಹುಟ್ಟಿಸುವ ನಾಲಿಗೆ, ಕಿವಿಗಳಲ್ಲಿ ಮಾತ್ರವಂತೆ..’

‘ಅದಕ್ಕೆ..?’

‘ ಕುಡಿತದ ಅಮಲಿನಲ್ಲೂ ಯಾರಿಗೂ ಗೊತ್ತಾಗದ ರೀತಿಯಲ್ಲಿ ಅವೆರಡು ಇದ್ದಲ್ಲೆ ಇವೆಯೆಂದು ಹೇಗಾದರೂ ಖಾತರಿಪಡಿಸಿಕೊಳ್ಳಬೇಕಲ್ಲ?’

‘ ಸಾರ್ ಸ್ವಲ್ಪ ಉದ್ದ ಜಾಸ್ತಿಯಾಯ್ತು.. ಕ್ಲೈಮಾಕ್ಸಿಗೆ ಬಂದುಬಿಡಿ ಬೇಗ..’

‘ ಇದೊ ಆಗಲೆ ಬಂದಾಯ್ತಲ್ಲಾ? ಪ್ರತಿ ರೌಂಡಿನಲ್ಲಿ ಮುಂದುವರೆಯುವ ಮುನ್ನ ‘ಕಂಡೀಷನ್’ ಸರಿಯಿದೆಯೇ ಇಲ್ಲವೇ ಎಂದು ಟೆಸ್ಟ್ ಮಾಡಿ ನೋಡಿಕೊಂಡು ನಂತರ ಏರಿಸುವುದು ಸೇಫ್ ವಿಧಾನವಲ್ಲವೇ? ನಾಲಿಗೆ-ಕಿವಿ ಇವೆರಡು ಸರಿಯಿದ್ದರೆ ಮಿಕ್ಕೆಲ್ಲ ಸರಿಯಿರುತ್ತದೆಂದೆ ಅರ್ಥ.. ಅದಕ್ಕೆ ಮುಂದಿನ ಗ್ಲಾಸು ತುಟಿಗೆ ತಗುಲಿಸುವ ಮುನ್ನ ನಾಲಿಗೆ ಕಿವಿ ಎರಡು ಇದ್ದಲ್ಲೆ ಇದ್ದು ಚೆನ್ನಾಗಿ ಕೆಲಸ ಮಾಡುತ್ತಿವೆ ಎಂದು ಒಂದೆ ಏಟಿಗೆ ತಿಳಿಯುವ ವಿಧಾನ ಎಂದರೆ ಏನಾದರೂ ಮಾತು ಆಡಿ ನೋಡುವುದು – ಆ ಮಾತು ಸರಿಯಾಗಿ ಹೊರಟರೆ ನಾಲಿಗೆ ಇನ್ನೂ ಸರಿಯಾಗಿದೆ ಎಂದರ್ಥ; ಅದು ಸರಿಯಾಗಿದೆಯೆ ಇಲ್ಲವೆ ಎಂದು ಗೊತ್ತಾಗಬೇಕಾದರೆ ಕಿವಿಯೂ ಸರಿಯಾಗಿ ಕೇಳಿಸಿಕೊಂಡಿರಬೇಕಲ್ಲ?’

‘ ವಾಹ್..ವಾಟ್ ಎ ಲಾಜಿಕ್? ಆ ಹೊತ್ತಿನಲ್ಲಿ ಟೆಸ್ಟ್ ಮಾಡಲು ಕೂಡ ಏನೇನೊ ಮಾತನಾಡುವ ಬದಲು ಹರ್ಷದಿಂದ ‘ಚಿಯರ್ಸ್’ ಅಂದರೆ ಯಾರಿಗೂ ಗೊತ್ತಾಗದ ಹಾಗೆ ‘ಸೆಲ್ಫ್ ಟೆಸ್ಟ್’ ಮಾಡಿಕೊಂಡ ಹಾಗೂ ಇರಬೇಕು..ಶಿಷ್ಠಾಚಾರದ ಪಾಲನೆಯಾದ ಹಾಗೂ ಇರಬೇಕು… ವೆರಿ ಸ್ಮಾರ್ಟ್..’

‘ ಆದರೆ ಕುಡಿಯುತ್ತಾ ಕುಡಿಯುತ್ತಾ ಕೇಳಿಸಲಿ, ಬಿಡಲಿ ಅದರಲ್ಲೆ ಮುಳುಗಿ ಹೋಗುತ್ತಾರೆಂಬುದು ಬೇರೆಯ ವಿಷಯ..’ ಎಂದು ಮತ್ತೆ ನಕ್ಕ ಶ್ರೀನಾಥ. ಅದೆ ಹೊತ್ತಿನಲ್ಲಿ ಎಲ್ಲರ ಮುಖದಲ್ಲೂ ತೆಳುವಾದ ಲಾಸ್ಯವಾಗಿ ಹರಡಿಕೊಂಡ ನಗೆಯಿಂದಾಗಿ ಎಲ್ಲರೂ ಆ ಗಳಿಗೆಯಲ್ಲಿ ನಿರಾಳಮನದವರಾಗಿ, ಆರಂಭವಾಗಲಿರುವ ಕಾರ್ಯಕ್ರಮಕ್ಕೆ ಸಡಿಲ ಮನದೊಂದಿಗೆ ಸಿದ್ದರಾಗಿರುವುದನ್ನು ಸೂಚಿಸಿತ್ತು.

ಇವರ ಮಾತುಗಳು ಹೀಗೆ ನಡೆದಿರುವಂತೆ, ಆಗಲೆ ಹೆಚ್ಚುಕಡಿಮೆ ಎಲ್ಲರೂ ಕೌ ಬಾಯ್ ಡ್ರೆಸ್ಸಿನಲ್ಲಿ ಬಂದು ಸೇರಿಬಿಟ್ಟಿದ್ದರು ಆ ಪಂಕ್ಷನ್ ಹಾಲಿನಲ್ಲಿ. ಅದೊಂದು ಹಾಲ್ ಎನ್ನುವುದಕ್ಕಿಂತ ತೆರೆದ ಕುಟೀರದಂತ ಸಭಾಂಗಣ ಎನ್ನುವುದೆ ಸೂಕ್ತವಾಗಿತ್ತು. ಮರದ ತೊಲೆಗಳು ಮತ್ತು ಸಾಂಪ್ರದಾಯಿಕ ವಸ್ತುಗಳಿಂದ ನಿರ್ಮಿಸಿದ್ದು ಮಾತ್ರವಲ್ಲದೆ ವೃತ್ತಾಕಾರದ ಅದರ ಪರಿಧಿಯ ಸುತ್ತಲು ಮೇಲ್ಛಾವಣಿಯ ಎತ್ತರ ಮಾಮೂಲಿ ಆಳಿನೆತ್ತರಕ್ಕಿಂತ ತುಸುವಷ್ಟೆ ಹೆಚ್ಚಿಗಿದ್ದು, ಕೈಯೆತ್ತಿದರೆ ಅದರ ಮೇಲ್ತುದಿ ಕೈಗೆ ಎಟಕುವಂತಿತ್ತು. ಅದರ ಜಾರುವಂತಿದ್ದ ಮೇಲ್ಛಾವಣಿ ಒಳಕೇಂದ್ರಕ್ಕೆ ಹೋದಂತೆ ಸ್ವಲ್ಪ ಸ್ವಲ್ಪವೆ ಎತ್ತರವಾಗುತ್ತ, ನಡು ಮಧ್ಯದಲ್ಲಿ ಮಾತ್ರ ಪೂರ್ತಿ ಎರಡಾಳಿನ ಮಟ್ಟದ ಎತ್ತರಕ್ಕೆ ಏರಿಕೊಂಡಿತ್ತು – ಅಲ್ಲಿದ್ದ ಎತ್ತರದ ವೇದಿಕೆಯ ದೆಸೆಯಿಂದಾಗಿ. ಆ ವೇದಿಕೆಯ ಮೇಲಾಗಲೆ ಅಂಚಿನ ಸುತ್ತಲೂ ಡ್ರಮ್ಮು, ಕೀ ಬೋರ್ಡ್, ಗಿಟಾರುಗಳ ಜತೆ ಸಂಗೀತದ ಶಬ್ದ ಸಂಯೋಜನೆಯನ್ನು ನಿಯಂತ್ರಿಸಿ ಸಂಸ್ಕರಿಸಿ ಹೊರಗೆಡವುವ ಆಂಪ್ಲಿಫೈಯರ, ಸ್ಪೀಕರ ಬಾಕ್ಸ್ ಗಳಾದಿಯಾಗಿ ಸಕಲವೂ ಜೋಡಿಸಿಟ್ಟ ಎಲೆಕ್ಟ್ರಾನಿಕ್ ಉಪಕರಣಗಳನ್ನು ನೋಡಿದರೆ ಆ ದಿನ ಸಂಗೀತ ಸಂಜೆಯಂತಹ ಕಾರ್ಯಕ್ರಮವೊಂದು ಆಯೋಜಿಸಲ್ಪಟ್ಟಿರಬಹುದೆಂದು ಯಾರಾದರೂ ಸುಲಭವಾಗಿ ಊಹಿಸಬಹುದಿತ್ತು. ಬಾರ್ ಕೌಂಟರಿನ ಪಕ್ಕದಲ್ಲಿದ್ದ ಖಾಲಿ ಜಾಗವೊಂದರಲ್ಲಿ ಆ ದಿನದ ಔತಣ ಕೂಟದ ಬಗೆಬಗೆಯ ಆಹಾರವನ್ನು ಪೇರಿಸಿಟ್ಟಿದ್ದ ದೊಡ್ಡ ಗಾತ್ರದ ಟ್ರೇಗಳನ್ನು ಜೋಡಿಸಿಟ್ಟಿತ್ತು – ಗುಂಪಲ್ಲಿ ಗದ್ದಲವಾಗದಂತೆ ನೋಡಿಕೊಳ್ಳಲೇನೊ ಎಂಬಂತೆ ಎರಡು ಸಾಲಿನಲ್ಲಿ. ಅದರ ಹತ್ತಿರ ಗಡಿಬಿಡಿಯಿಂದ ಓಡಾಡುತ್ತಿದ್ದ ಕುನ್. ತಿದಾರತ್ ಶ್ರೀನಾಥನನ್ನು ಕಂಡವಳೆ ಅವನ ಹತ್ತಿರಕ್ಕೆ ಓಡಿ ಬಂದು ಕಿವಿಯಲ್ಲೇನೊ ಉಸುರಿಹೋಗಿದ್ದಳು. ಅದನ್ನು ಕೇಳುತ್ತಿದ್ದಂತೆ ಶ್ರೀನಾಥನ ಮುಖದಲ್ಲಿ ಅಚ್ಚರಿಯ ಭಾವವು ಪ್ರಕಟವಾಗಿದ್ದರೂ, ತಲೆ ಮಾತ್ರ ಎಡಬಲಕ್ಕಾಡುತ್ತ ಆಗಲೆಂಬಂತೆ ಸಮ್ಮತಿ ಸೂಚಿಸಿತ್ತು. ತುಸು ಹೊತ್ತಿನ ಬಳಿಕ ಮೈಕಿನ ಅನೌನ್ಸ್ ಮೆಂಟ್ ಕೇಳಿಸಿತ್ತು, ಎಲ್ಲರೂ ಒಳಬಂದು ತಮಗೆ ಬೇಕಾದಲ್ಲಿ ಜಾಗ ಹಿಡಿದು ಆಸೀನರಾಗಬೇಕೆಂದು. ಎಲ್ಲರೂ ಬಂದು ತಮ್ಮ ತಮ್ಮ ಇಚ್ಛಾನುಸಾರ ಸೀಟುಗಳಲ್ಲಿ ತಮಗೆ ಬೇಕಾದವರ ಗುಂಪಿನ ಜತೆಯಲ್ಲಿ ಆರಾಮವಾಗಿ ಕುಳಿತುಕೊಂಡರು. ಕೆಲವರು ಮರದ ಬೊಡ್ಡೆಗಳಂತಹ ಆಸನಗಳಲ್ಲಿ ಕಾಲು ಚಾಚಿಕೊಂಡು ಆರಾಮವಾಗಿ ಕೂತಿದ್ದರೆ, ಕಡಿಮೆ ಎತ್ತರದಲ್ಲಿ ಕೂರಲಾಗದವರು ಸ್ವಲ್ಪ ಎತ್ತರದ ಆಸನಗಳಲ್ಲಿ ವಿರಮಿಸಿದ್ದರು. ಶ್ರೀನಾಥ ಮಾತ್ರ ಕುನ್. ತಿದಾರತ್ ಆಗಲೆ ಕಿವಿಯಲ್ಲಿ ಹೇಳಿದ್ದಂತೆ ವೇದಿಕೆಯ ಹತ್ತಿರ ಹೋಗಿ ನಿಂತುಕೊಂಡಿದ್ದ ಕುನ್. ಲಗ್ ಜತೆಯಲ್ಲಿ. ಸ್ವಲ್ಪ ಹೊತ್ತಿನ ನಂತರ ವೇದಿಕೆಯ ಮೇಲೆ ಒಂದೈದು ನಿಮಿಷದ ಮಟ್ಟಿಗೆ ಹೋಗಬೇಕಾಗಿ ಬರುತ್ತದೆಯೆಂದೆ ಅವಳು ಅವನ ಕಿವಿಯಲ್ಲುಸಿರಿದ್ದಿದ್ದು. ಸದ್ಯ ಅಲ್ಲೇನು ಭಾಷಣ ಮಾಡಲು ಕೇಳದಿದ್ದರೆ ಸಾಕೆಂದುಕೊಂಡ ಶ್ರೀನಾಥನಿಗೆ ತಾನು ಇಂಗ್ಲೀಷಿನಲ್ಲಿ ಮಾತನಾಡಿದರೂ ಅಲ್ಲಿರುವವರಿಗೆ ಅರ್ಥವಾಗುವುದು ಅಷ್ಟರಲ್ಲೆ ಇದೆ ಎಂದುಕೊಳ್ಳುತ್ತಿರುವಾಗಲೆ ಕಾರ್ಯಕ್ರಮದ ಪಟ್ಟಿಯನ್ನು ಅನೌನ್ಸ್ ಮಾಡಿದ್ದರು. ಮೊದಲ ಕೆಲ ಆರಂಭಿಕ ಕಿರುಕಾರ್ಯಗಳ ನಂತರವಷ್ಟೆ ಡಿನ್ನರ್ ಮತ್ತು ಸಂಗೀತ ಸಂಜೆಯೆಂದು ಸೂಚಿಸಿದ್ದರಿಂದ ವೇದಿಕೆಯ ಕಾರ್ಯ ತೀರಾ ಉದ್ದವಿರಲಾರದು ಎನಿಸಿ ಕೊಂಚ ಸಮಾಧಾನವಾಗಿತ್ತು ಶ್ರೀನಾಥನಿಗೆ.

ಆದರೆ ಕುನ್. ಲಗ್ ಜತೆಗೆ ವೇದಿಕೆಯ ಮೇಲೆ ಕರೆಸುವ ಉದ್ದೇಶವೇನಿತ್ತೆಂದು ಮುನ್ನವೆ ಅವನಿಗೂ ತಿಳಿಸಿರಲಿಲ್ಲ. ಬಹುಶಃ ಪ್ರಾಜೆಕ್ಟು ಯಶಸ್ಸಿನ ಕುರಿತು ನಾಲ್ಕಾರು ಮಾತಾಡಬಹುದೆಂದು ಅನಿಸಿತ್ತೆ ಹೊರತಾಗಿ ಮತ್ತೇನು ಖಚಿತವಿರಲಿಲ್ಲ. ಏನಿರಬಹುದೆಂಬ ತೊಯ್ದಾಟದಲ್ಲಿ ತೊಡಗಿಸಿಕೊಳ್ಳುವ ಮೊದಲೆ ಸ್ಟೇಜಿನ ಮೇಲೆ ಹೋದ ಕುನ್. ಲಗ್ ತಮ್ಮ ಮಾತನ್ನು ಆರಂಭಿಸಿಯೆ ಬಿಟ್ಟಿದ್ದರು.. ಮೊದಲಲ್ಲಿ ಒಂದೆರಡು ಮಾತನ್ನು ಇಂಗ್ಲೀಷಿನಲ್ಲಿಯೆ ಆರಂಭಿಸಿ ಪ್ರಾಜೆಕ್ಟಿನ ಅಭೂತಪೂರ್ವ ಯಶಸ್ಸನ್ನು ಬಾಯ್ತುಂಬ ಹೊಗಳುತ್ತಲೆ, ಮಿಕ್ಕ ಭಾಷಣವನ್ನು ಥಾಯ್ ಭಾಷೆಯಲ್ಲಿ ಮುಂದುವರೆಸಲು ಅನುಮತಿ ಕೋರಿ ಕ್ಷಮೆ ಯಾಚಿಸುತ್ತ ಮುಂದುವರೆಸಿದ್ದರು. ಹೆಚ್ಚು ಕಡಿಮೆ ಪ್ರಾಜೆಕ್ಟಿನ ಯಶಸ್ಸಿನ ಅಭಿನಂದನೆಯನ್ನು ಸಲ್ಲಿಸುವ ಭಾಷಣವಾಗಿತ್ತೆಂದು ಪ್ರಾಜೆಕ್ಟ್ ಟೀಮಿನ ಸದಸ್ಯರುಗಳ ಕರತಾಡನದ ಸದ್ದಿನ ಮೂಲಕ ಗೊತ್ತಾಗುತ್ತಿತ್ತು. ಒಂದು ಹತ್ತು ನಿಮಿಷ ಮುಂದುವರೆದ ಆ ಮಾತು ನಂತರ ಮತ್ತೆ ಇಂಗ್ಲೀಷಿಗೆ ಬದಲಾಗಿ, ಪ್ರಾಜೆಕ್ಟಿನ ಸದಸ್ಯರುಗಳಿಗೆಲ್ಲ ಆ ಯಶಸ್ಸಿನ ಕುರುಹಾಗಿ ಕೊಡಬೇಕೆಂದಿದ್ದ ಬೋನಸ್ಸು ಮತ್ತು ಪ್ರಾಜೆಕ್ಟ್ ಸರ್ಟಿಫಿಕೇಟುಗಳನ್ನು ಆ ವೇದಿಕೆಯ ಮೇಲೆ ಕೊಡಲಿರುವುದಾಗಿ ಘೋಷಿಸಿದರು; ಅದಕ್ಕೆ ತನ್ನನ್ನು ಮೊದಲೆ ವೇದಿಕೆಯ ಮೇಲೆ ಬರಬೇಕೆಂದು ಆಹ್ವಾನಿಸಿದ್ದರು ಎಂದು ಆಗ ಅರಿವಾಗಿತ್ತು ಶ್ರೀನಾಥನಿಗ – ತನ್ನನ್ನು ಏಕೆ ವೇದಿಕೆಗೆ ಕರೆಸಲಿದ್ದರೆಂಬ ವಿಷಯ ಆಗಷ್ಟೆ ಸುಸ್ಪಷ್ಟವಾಗಿತ್ತು. ತದ ನಂತರ ಒಬ್ಬೊಬ್ಬರನ್ನಾಗಿ ವೇದಿಕೆಗೆ ಕರೆದು ಶ್ರೀನಾಥ ಮತ್ತು ಕುನ್.ಲಗ್ ಜಂಟಿಯಾಗಿ ಬೋನಸ್ ಸರ್ಟಿಫಿಕೇಟ್ ವಿತರಣಾ ಕಾರ್ಯಕ್ರಮವನ್ನು ನೇರವೇರಿಸಿದ ಮೇಲೆ ಗುಂಪಿನಲ್ಲಿ ಶ್ರೀನಾಥನ ತಂಡದ ಸದಸ್ಯರೂ ಸೇರಿದಂತೆ, ಎಲ್ಲರ ಮುಖದಲ್ಲು ಖುಷಿಯ ನಗೆಯರಳಿತ್ತು. ಆ ವಿತರಣೆಯ ಕೊನೆಯಲ್ಲಿ ಶ್ರೀನಾಥ ತನ್ನನ್ನೆ ಬೋನಸ್ಸಿನ ಗುಂಪಿನಿಂದ ಹೊರಗಿರಿಸಿಕೊಂಡಿದ್ದ ಕಾರಣ, ಅವನಿಗೊಂದು ನೆನಪಿನ ಕಾಣಿಕೆಯಾಗಿ ದೊಡ್ಡದೊಂದು ಬುದ್ಧನ ವಿಗ್ರಹವನ್ನು ಕಾಣಿಕೆಯಾಗಿ ನೀಡಿದಾಗ ಆ ಕರತಾಡನದ ಮಧ್ಯೆ ಶ್ರೀನಾಥನಿಗು ಆ ಅಚ್ಚರಿಯ ಅನಿರೀಕ್ಷಿತ ಕಾಣಿಕೆ ಮುದ ತಂದು, ಆ ಮಧ್ಯಾಹ್ನದ ದುಸ್ವಪ್ನ ಆರೋಪಿಸಿದ್ದ ಹೊರೆ ಮತ್ತಷ್ಟು ಕಳಚಿ ಹಗುರವಾದಂತೆ ಭಾಸವಾಗಿತ್ತು, ಆ ಬುದ್ಧನ ಶಾಂತ ಮುದ್ರೆಯ ಮುಖಭಾವದಂತೆ. ಅದೆಲ್ಲಾ ಮುಗಿದ ಮೇಲೆ ಕುನ್. ಲಗ್ ಅವನನ್ನು ತಮ್ಮ ಜತೆಯಲ್ಲೆ ಕೂರಿಸಿಕೊಂಡಿದ್ದರು ವೇದಿಕೆಯ ಹತ್ತಿರದ ಮುಂದಿನ ಸಾಲಿನಲ್ಲಿ.

ಅಲ್ಲಿಂದಾಚೆಗೆ ಶುರುವಾಗಿತ್ತು ಅಲ್ಲಿನ ಬ್ಯಾಂಡೊಂದರ ಗಾಯನ, ನೃತ್ಯಗಳ ಮೋಜಿನ ಮೋದದ ಸೊಗಡು. ಬಫೆಯ ಸಾಲುಗಳನ್ನು ತೆರೆದು ವೈವಿಧ್ಯಮಯ ರೀತಿಯ ಭಕ್ಷ್ಯ ಭೋಜ್ಯಗಳನ್ನು ಅನಾವರಣಗೊಳಿಸುತ್ತಿದ್ದಂತೆ ಎಲ್ಲರೂ ಒಬ್ಬೊಬ್ಬರೆ ಪ್ಲೇಟುಗಳಲ್ಲಿ ತಮಗೆ ಬೇಕಾದ ಭಕ್ಷ್ಯಗಳನ್ನು ತಂತಮ್ಮ ಶಕ್ತ್ಯಾನುಸಾರ ತುಂಬಿಕೊಂಡು, ಹರಟೆ ಹೊಡೆದುಕೊಂಡು ಬ್ಯಾಂಡಿನ ಹಾಡು ಕೇಳುತ್ತ, ತಿಂದುಕೊಂಡೆ ಆಸ್ವಾದಿಸತೊಡಗಿದ್ದರು. ಪಾನೀಯ, ಪೇಯಗಳಿಗಂತೂ ಮುಕ್ತ ಹರಿವಿನ ನೀತಿಯನ್ನು ಘೋಷಿಸಿದ್ದ ಕಾರಣ ಬೀರನ್ನು ಬಯಸುವ ‘ಬೀರಬಲ್ಲರಾಗಲಿ’, ವಿಸ್ಕಿ ರಮ್ಮು ಶಾಂಪೇನುಗಳ ‘ಬಾಹುಬಲಿ’ಗಳಾಗಲಿ, ತಮಗೆ ತೃಪ್ತಿಯಾಗುವವರೆಗೆ ಇತಿಮಿತಿಯಿಲ್ಲದಂತೆ ಒಳಗಿಳಿಸತೊಡಗಿದ್ದರು. ಹಿಂದಕ್ಕೆ ಹೊರಡುವುದೇನಿದ್ದರೂ ಮರುದಿನ ಹೊತ್ತೇರಿದ ಮೇಲಾದ ಕಾರಣ, ಕುಡಿದು ತೂರಾಡಿ ಅಲ್ಲೆ ಕುಸಿದು ಬಿದ್ದರೂ ಚಿಂತಿಸುವ ಅಗತ್ಯವಿರಲಿಲ್ಲ. ಹಾಟ್ ಡ್ರಿಂಕ್ಸಿನ ಜತೆಗೆ ಊಟದ ಪ್ಲೇಟು ಹಿಡಿದು ಬಂದ ಕುನ್. ಲಗ್ ಜತೆ ಕಂಪನಿ ಕೊಡದಿದ್ದರೆ ಚೆನ್ನಾಗಿರದೆಂದು ಅನಿಸಿ ಮಿಕ್ಕವರನ್ನೆಲ್ಲ ಅವರವರಿಗೆ ಚೆನ್ನಾಗಿ ಒಡನಾಟವಿದ್ದವರ ಗುಂಪಲ್ಲಿ ಸೇರಿಕೊಳ್ಳಲು ಸೂಚಿಸಿ ತಾನೂ ಕುನ್. ಲಗ್ ಜತೆ ಕುಳಿತಿದ್ದ ಅವರಿದ್ದ ಮುಂದಿನ ಸೀಟುಗಳ ಸಾಲೊಂದರಲ್ಲಿ. ಅವರಿಬ್ಬರೂ ಸ್ವಸ್ಥವಾಗಿ ತಳಾರ ಕೂರುತ್ತಿದ್ದಂತೆ ಅಲ್ಲಿಗೆ ಆಗಮಿಸಿತ್ತು ಇಬ್ಬರಿಗೂ ಜತೆಗೊಡುವಂತೆ ಕುನ್. ಸೋವಿಯ ಸವಾರಿ. ಅಷ್ಟೊತ್ತಿಗಾಗಲೆ ಒಂದೆರಡು ‘ರೌಂಡ್’ ಮುಗಿದಿದ್ದ ಕಾರಣಕ್ಕೊ ಏನೊ ಅವನ ಕಣ್ಣಾಗಲೆ ಕೆಂಪು ಕೆಂಪಾಗಿತ್ತು. ಎಲ್ಲರು ಚೆನ್ನಾಗಿ ಹಸಿದಿದ್ದ ಕಾರಣ ಮೊದಲು ತಿನ್ನುವುದರತ್ತ ಗಮನ ಹರಿಸಿದ್ದರೂ, ಜತೆಯಲ್ಲಿ ಪಾನೀಯದ ಸೇವನೆಯೂ ಅವ್ಯಾಹತವಾಗಿ ಸಾಗುತ್ತಿದ್ದ ಕಾರಣ ಆಗಲೆ ಎಲ್ಲರ ಮೈ ಹಗುರವಾಗಿ ತೇಲುತ್ತ ಮಾತುಗಳ ಶಿಷ್ಟಾಚಾರವೆಲ್ಲ ಕರಗಿ ಸಲಿಗೆಯ ಸಡಿಲ ಹಂತಕ್ಕೆ ಇಳಿಯುತ್ತಿದ್ದಾಗಲೆ, ಊಟ ಮುಗಿಸಿದ್ದ ಕೆಲವರು ಸ್ಟೇಜಿಗೆ ಹೋಗಿ ಗುಂಪಿನ ಪರವಾನಗಿ ಪಡೆದು ಥಾಯ್ ಹಾಡುಗಳನ್ನು ತಾವೆ ಹಾಡತೊಡಗಿದ್ದರು. ಮಿಕ್ಕವರು ತಾವು ಕೂತಿದ್ದಲ್ಲಿಂದಲೆ ಅದನ್ನು ಎಂಜಾಯ್ ಮಾಡುತ್ತ, ತಾಳ ಹಾಕುತ್ತ ದನಿಗೂಡಿಸತೊಡಗಿದ್ದರು. ಹೀಗೆ ಕೆಲವೆ ನಿಮಿಷಗಳಲ್ಲಿ ಪೂರ್ತಿ ವಾತಾವರಣದ ಖದರೆ ಬದಲಾದಂತಾಗಿ ಎಲ್ಲ ಟ್ರಾನ್ಸಿನಲ್ಲಿ ಬೇರಾವುದೊ ಲೋಕವನ್ನು ಹೊಕ್ಕವರಂತೆ ಫೀಲಾಗತೊಡಗಿದ್ದರು ಬಣ್ಣಬಣ್ಣದ ದೀಪಗಳ ನಡುವೆ. ಅವರೊಂದಿಗೆ ನೆಪ ಮಾತ್ರಕ್ಕೆ ವೈನಿನ ಲೋಟ ಹಿಡಿದು ಆಗೀಗೊಮ್ಮೆ ಒಂದೊಂದೆ ಹನಿಯನ್ನು ಗುಟುಕರಿಸುತ್ತಿದ್ದ ಶ್ರೀನಾಥ ಮಾತ್ರ, ಅದೆ ಸದಾವಕಾಶವೆಂದು ಭಾವಿಸಿ ಕುನ್. ಲಗ್ ಮುಂದೆ ಕುನ್. ಸೋವಿ ಮಾಡಿದ ಮಹಾನ್ ಕಾರ್ಯ ಪ್ರಾಜೆಕ್ಟನ್ನು ಹೇಗೆ ಯಶಸ್ಸಿನತ್ತ ಒಯ್ಯಲು ಸಹಕಾರಿಯಾಯ್ತೆಂದು ಹೇಳುತ್ತಲೆ, ಅದರಲ್ಲಿ ಕುನ್. ಸೋವಿಯ ಸಹಕಾರವಿರದಿದ್ದರೆ ಪ್ರಾಜೆಕ್ಟು ಹೇಗೆ ಅಡ್ಡದಾರಿ ಹಿಡಿಯುವ ಸಾಧ್ಯತೆಯಿತ್ತೆಂದು ವರ್ಣಿಸಿದಾಗ ಆ ಕುಡಿದ ಅಮಲಿನಲ್ಲೂ ಕುನ್. ಸೋವಿಯ ಕಣ್ಣಲ್ಲಿ ಮಿಂಚಿದ ಕೃತಜ್ಞತಾ ಭಾವವನ್ನು ಗಮನಿಸದಿರಲಾಗಿರಲಿಲ್ಲ ಶ್ರೀನಾಥನಿಗೆ. ಹೀಗೆ ಏನೇನನ್ನೊ ಮಾತಾಡುತ್ತ ಕುಳಿತ ಮೂವರ ಗುಂಪು ಸುಲಲಿತವಾಗಿ ಯಾವುದಾವುದೊ ವಿಷಯವನ್ನು ಹುಡುಕಿ ಚರ್ಚಿಸತೊಡಗಿದಾಗ ಏನು ಮಾತನಾಡುವ ವಿಷಯವಿದ್ದಿತು ಎಂಬಂತಿದ್ದ ಆರಂಭದ ಅಳುಕು ಭಾವನೆ ತೊಲಗಿ, ಸಂಬಂಧಿಸಿದ ಹಾಗು ಸಂಬಂಧಿಸದ ವಿಷಯಗಳೆಲ್ಲ ಸಾಣೆ ಹಿಡಿದು ಬಂದಂತೆ ಒಂದೊಂದಾಗಿ ಅವತರಿಸತೊಡಗಿತ್ತು, ನಿರಾಯಾಸವಾಗಿ.

(ಇನ್ನೂ ಇದೆ)
___________

( ಪರಿಭ್ರಮಣ..41ರ ಕೊಂಡಿ – https://nageshamysore.wordpress.com/00237-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-41/ )

ಅವರೋಹಣ, ಆಕ್ರಮಣ, ಅಧಃಪತನ, ಆರೋಹಣ, ಪರಿಭ್ರಮಣ, ನಾಗೇಶ ಮೈಸೂರು, ನಾಗೇಶಮೈಸೂರು, ನಾಗೇಶ, nageshamysore, Nagesha Mysore, nagesha

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s