00235. ಶ್ರಾವಣ, ನೀ ಮಾಡಿದ್ದು ಸರಿಯೆ?

00235. ಶ್ರಾವಣ, ನೀ ಮಾಡಿದ್ದು ಸರಿಯೆ?

ಋತುಗಳ ಹಂಗಿಲ್ಲದೆ ಸದಾ ಸರ್ವದಾ ಒಂದೆ ರೀತಿಯ ಹವಾಮಾನದ ನಿತ್ಯ ಬೇಸಿಗೆಯನ್ನೆ ಹಾಸಿ ಹೊದ್ದು ಮಲಗುವ ಸಿಂಗಪುರಕೆಲ್ಲಿ ಬರಬೇಕು ಆಷಾಢ, ಶ್ರಾವಣ, ಭಾದ್ರಪದ ಮಾಸಗಳ ಸೊಗಡು? ಸದಾ ಸುರಿಯುವ ಬಿಸಿಲ್ಮಳೆಯ ಜತೆಗೆ ಆಗೀಗಷ್ಟು ತಂಪಾಗಿಸುವ ಮಳೆ ಸುರಿದುಕೊಂಡರೆ ಮುಗಿಯಿತಷ್ಟೆ; ತನ್ನ ಬಿರುಸಿನ ಸೆಕೆಗೆ ತಾನೆ ಬೇಸತ್ತು ಸ್ನಾನ ಮಾಡಿಕೊಂಡ ಬಿಸಿಲಮ್ಮನ ಮೈತೊಳೆದ ನೀರೇನೊ ಎಂಬಂತೆ ಒಂದಷ್ಟು ಮಳೆಯ ನೀರು ಚೆಲ್ಲಾಡಿದಂತೆ ಮಾಡಿ ನಂತರ ಮತ್ತೆ ಬಿಸಿಲ ಬಿರುಮಳೆಯನ್ನು ಆಶ್ರಯಿಸುವ ಈ ಹವಾಗುಣಕ್ಕೆ ಅಷಾಢ, ಶ್ರಾವಣ, ಭಾದ್ರಪದಗಳ ವೈವಿಧ್ಯತೆಯ ತಾಳಮೇಳವನ್ನು ಅರ್ಥ ಮಾಡಿಸುವುದು ಕಷ್ಟ. ಆದರೆ ಆ ಸೊಗಸಿನಲ್ಲೆ ಹುಟ್ಟಿ ಬೆಳೆದ ಕವಿ ಮನಸುಗಳು ಕೇಳಬೇಕಲ್ಲ ? ವಾತಾವರಣದಲಿರದಿದ್ದರೆ ಏನಂತೆ – ಕವನಗಳಲ್ಲಿ ಬರಬಾರದೆಂದೇನೂ ಇಲ್ಲವಲ್ಲ? ಇಲ್ಲದ ಋತುಮಾನಗಳನ್ನು ಬರಲಿಲ್ಲದ ಕಾರಣ ನೀಡಿ ಛೇಡಿಸಲು ಸಿಂಗಪುರವಾದರೇನು? ಮರಳುಗಾಡಿನ ಸೌದಿಯಾದರೇನು? ಅಂತದ್ದೊಂದು ಭಾವದಲ್ಲಿ ಕೈ ಕೊಟ್ಟು ಹೋದ ಆಷಾಢದ ಬೆನ್ನಲ್ಲೆ, ಮುಖ ತೋರಿಸದೆ ಮುನಿಸಿಕೊಂಡು ನಿಂತ ಶ್ರಾವಣ ಪ್ರಬುದ್ಧೆಯನ್ನು ದಬಾಯಿಸಿ, ಕಿಚಾಯಿಸುತ್ತ ಭಾದ್ರಪದದ ಆತಂಕದತ್ತ ಇಣುಕಿ ನೋಡುವ ತುಂಟ ಕವನೆ – ‘ಶ್ರಾವಣ, ನೀ ಮಾಡಿದ್ದು ಸರಿಯೆ?’

ಬಹುಶಃ ನಮ್ಮೂರುಗಳಲ್ಲಿ ತಾನಿದ್ದ ಕಡೆಯಲೆಲ್ಲ, ಈಗಾಗಲೆ ಮನಸ್ವೇಚ್ಛೆ ಹೊಯ್ದುಕೊಂಡು ಜನಪದರನ್ನು ಆಹ್ಲಾದಿಸುತ್ತ ಗೋಳಾಡಿಸುತ್ತಿರಬಹುದಾದ ಶ್ರಾವಣಿಯ ಮೇಲಿನ ಈ ಹುಸಿ ಮುನಿಸು, ದೂರು ಅಲ್ಲಿನ ಸನ್ನಿವೇಶ, ಪರಿಸ್ಥಿತಿಗಳಲ್ಲಿ ಅಸಹಜವೆನಿಸಬಹುದಾದರೂ, ಋತುಮಾನಗಳಿಲ್ಲದ ಅಥವಾ ತನ್ನದೆ ಆದ ವಿಭಿನ್ನ ಋತುಗಾನದ ಗಾಲಿಯನ್ನುರುಳಿಸಿಕೊಂಡು ಹೋಗುವ ಭೂಗೋಳದ ಅನೇಕ ಕಡೆಗಳಲ್ಲಿ ಇದು ಪ್ರಸ್ತುತವಾದ ಕಾರಣ, ಕನಿಷ್ಠ ಅಲ್ಲಿರಬಹುದಾದ ‘ಹೋಮ್ ಸಿಕ್’ ಮನಗಳಿಗಾದರೂ ಇದು ಆಪ್ತವೆನಿಸುವ ದೂರೆಂದುಕೊಂಡು ಆಸ್ವಾದಿಸಬಹುದೇನೊ? ಹೇಗೂ ಅವುಗಳಂತೂ ನಮ್ಮನ್ನು ದೂರುವಂತಿಲ್ಲ, ಅಥವ ದೂರಿದ್ದಕ್ಕೆ ಬೇಸತ್ತು ತಮ್ಮ ನಿಯಮ ಬದಲಿಸುವಂತಿಲ್ಲ; ಹೆಚ್ಚೆಂದರೆ ಸ್ವಲ್ಪ ತಡ ಮಾಡಿಯೊ ಅಥವಾ ರೌದ್ರಾಕಾರದ ರೂಪ ತಾಳಿಯೊ ಕಾಡಿಸಬಹುದಷ್ಟೆ – ಮಕ್ಕಳ ಮೇಲಿನ ಮಾತೆಯ ಹುಸಿ ಮುನಿಸಿನ ಹಾಗೆ!

ಇದೊ – ಆ ಛೇಡನೆಯ ಪದವಲ್ಲರಿ ಕವನ 🙂

ಶ್ರಾವಣ, ನೀ ಮಾಡಿದ್ದು ಸರಿಯೆ?
__________________________

ಶ್ರಾವಣ ನೀ ಮಾಡಿದ್ದು ಸರಿಯೆ?
ಕಟ್ಟಿಬಿಟ್ಟು ತೋರಣ ತಳಿರು ತೆಂಗಿನ ಗರಿಯೆ
ಚಪ್ಪರ ಹಾಕಿ ಬಾಳೆ ಕಂದು ಹೊಂಬಾಳೆ
ವಾದ್ಯ ವಾಲಗ ಸಿದ್ದ ನಿನಗಿನ್ನು ನಿದ್ದೆಯೆ? ||

ಯಾರೊ ಬಿಟ್ಟ ರಂಗವಲ್ಲಿಯು ಚೆಲ್ಲಿ
ಮಸುಕಾಗುತಿದೆ ಅಳಿಸಿ ಆಸೆ ಚಿತ್ತಾರವಲ್ಲಿ
ಬಿಲ್ಲಿನಿಂದ ಬಿಟ್ಟ ಬಾಣದಂತೆ ಹೊರಟು
ಗುರಿ ಸೇರದೆ ಇನ್ಯಾರದೊ ಮನೆಗೆ ಹೊಕ್ಕೆಯ? ||

ಕೊಟಕೊಟನುದುರುವ ಆಷಾಢದ ಮಳ್ಳಿ
ತುಟಿ ಪಿಟ್ಟೆನದೆ ಬಲು ತುಟ್ಟಿ ಮಾಡಿಟ್ಟಳಲ್ಲ?
ತುಪುತುಪುನುದುರುವ ನೀ ಚಾವಣಿಯ ಬಳ್ಳಿ
ಮಲ್ಲೆಯಾಗಿಯಾದರು ಉದುರಬೇಕಿತ್ತಲ್ಲ ಮರುಗಿ? ||

ನೀ ಏನೆ ಹೇಳು ಸರಿಯಿಲ್ಲ ಬಿಡು ಬಿಂಕ
ಋತುಮತಿಯಾದ ಹೊತ್ತು ಪ್ರೌಢತೆ ಬರಬೇಕು
ಗಂಭೀರ ಗಾಂಭೀರ್ಯ ಧೀಮಂತಿಕೆ ಗತ್ತಲಿ
ಸುರಿದಿರಬೇಕಿತ್ತಲ್ಲಾ ಬಿಡದೆ ಮೂರು ಹೊತ್ತಲಿ.. ||

ಚೆಲ್ಲು ಚೆಲ್ಲು ಬಾಲೆ ಎಳೆ ಮನಸಿನ ಆಷಾಢ
ಬರಲಿಲ್ಲವೆಂದತ್ತವರಾರು ಬಿಡು ಹುಡುಗಾಟದವಳು
ನೀ ಪಕ್ವ ಪ್ರಬುದ್ಧೆ ಹೀಗೆ ಮಾಡದೆ ಕೂತರೆ ಸದ್ದೆ
ಯಾಕೊ ಸರಿಯಿಲ್ಲ ಬಿಡು, ಭಾದ್ರಪದಕಿಲ್ಲ ನಿದ್ದೆ ||

———————————————————–
ನಾಗೇಶ ಮೈಸೂರು, ಸಿಂಗಪುರ
———————————————————–

ಶ್ರಾವಣ, ಮಾಡಿದ್ದು, ಸರಿಯೆ?, ನಾಗೇಶ, ಮೈಸೂರು, ನಾಗೇಶಮೈಸೂರು, ನಾಗೇಶ ಮೈಸೂರು, nagesha, nageshamysore, nagesha mysore

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s