00238. ಕಥೆ: ಪರಿಭ್ರಮಣ..(41)

00238. ಕಥೆ: ಪರಿಭ್ರಮಣ..(41)

……….ಏಕಾಂಗಿತನ ಮುತ್ತಲು, ಮನಸೆ ಬೆತ್ತಲು…!
_______________________________________________________________________________
ಅವರೋಹಣ…ಆಕ್ರಮಣ…ಅಧಃಪತನ…ಆರೋಹಣ…ಮನಸೆನ್ನುವ ಚಾರಣ, ಈ ಬದುಕಿನ ಹೂರಣ!
_______________________________________________________________________________

00238. ಕಥೆ: ಪರಿಭ್ರಮಣ..(41)

( ಪರಿಭ್ರಮಣ..40ರ ಕೊಂಡಿ – https://nageshamysore.wordpress.com/00235-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-40/ )

ಸುತ್ತಲ ವಾದ್ಯ ಗೋಷ್ಟಿಯ ವಾತಾವರಣ, ಅಬ್ಬರ, ಗದ್ದಲಗಳ ಹಿಮ್ಮೇಳಗಳ ಜತೆ ಮುಕ್ತವಾಗಿ ಹರಿಯುತ್ತಿದ್ದ ಮದ್ಯಪಾನದ ‘ಮದಿರೆ’ ಸಂಗಮದಲ್ಲಿ ಎಲ್ಲರು ಬೇರೆಲ್ಲಾ ಚಿಂತೆ ಮರೆತು ಹೆಚ್ಚು ಕಡಿಮೆ ಮೈ ಮನವನೆಲ್ಲ ಪೂರ್ತಿ ಸಡಿಲಿಸಿ ಆ ಹೊತ್ತಿನ ಮಟ್ಟಿಗಾದರೂ ಯಾವ ಕಟ್ಟುಪಾಡು, ಅಂಕೆ ಶಂಕೆಗಳಿಲ್ಲದೆ ಅಸ್ವಾದಿಸುತ್ತಾ ವಿಶ್ರಮಿಸಿಕೊಳ್ಳುವುದೆಂದು ನಿರ್ಧರಿಸಿಕೊಂಡುಬಿಟ್ಟಂತಿತ್ತು. ಹೀಗಾಗಿ ಎಲ್ಲೆಡೆ ಅವ್ಯಾಹತವಾಗಿ ಸ್ಥಾನಮಾನಗಳ ಅಡೆತಡೆಯಿಲ್ಲದೆ ಮುಕ್ತ ಮಾತುಕತೆ ನಡೆಯುತ್ತ ಹೋಗಿತ್ತು; ಆರಂಭದಲ್ಲಿ ಆಫೀಸಿನ ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳೆ ಮಾತಿನ ಸರಕಾದರೂ, ಕ್ಷಿಪ್ರದಲ್ಲೆ ಚರ್ಚೆ ವೈಯಕ್ತಿಕ ಸಂಗತಿಗಳತ್ತ ಹರಿದು ಪ್ರತಿಯೊಬ್ಬರು ಮನ ಬಿಚ್ಚಿ ಮಾತಾಡುವ ವಾತಾವರಣ ಮತ್ತು ಅದಕ್ಕೆ ಪೂರಕವಾದ ಮತ್ತೇರಿಸುವ ‘ಸುರಾಪಾನ’ದ ಪರಿಸರ ನಿರ್ಮಾಣವಾಗಿತ್ತು. ಅದೆ ಲಹರಿಯಲ್ಲಿ ಸಾಗಿದ್ದ ಶ್ರೀನಾಥ, ಕುನ್. ಸೋವಿ ಮತ್ತು ಕುನ್. ಲಗ್ ಜತೆಗಿನ ಮಾತುಕತೆ ಕೂಡ ಪ್ರತಿಯೊಬ್ಬರು ತಂತಮ್ಮ ಸಂಸಾರಿಕ ಜೀವನದ ಮಾಹಿತಿಗಳನ್ನು ಪರಸ್ಪರ ವಿನಿಮಯಿಸಿಕೊಳ್ಳುವ ಮಟ್ಟಕ್ಕೆ ಮುಟ್ಟಿತ್ತು. ಮೊದಲಿಗೆ ಅದರ ನಾಂದಿ ಹಾಡಿದ್ದ ಕುನ್. ಲಗ್ ತಮಗಿರುವ ಎಂಟೆ ವರ್ಷದ ಏಕೈಕ ಪುತ್ರಿಯ ಕುರಿತಾಗಿ ಗುಣಗಾನ ಮಾಡತೊಡಗಿದಾಗ, ತಾನು ಆಫೀಸಿನಲ್ಲಿ ಕಾಣುವುದಕ್ಕಿಂತ ಬೇರೆಯದೆ ಆದ ವ್ಯಕ್ತಿತ್ವವನ್ನು ಕಾಣುತ್ತಿದ್ದೇನೆನಿಸಿತ್ತು, ಶ್ರೀನಾಥನಿಗೆ. ಈಗಿನ ವಾಣಿಜ್ಯ ಜಗತ್ತಿನಲ್ಲಿ ಹೆಣಗುತ್ತ ಕೆಲಸ ಮಾಡುವ ಪ್ರತಿಯೊಬ್ಬರ ಬದುಕಲ್ಲು ಈ ಬಗೆಯ ಎರಡು ಮುಖವಿರುವ ವ್ಯಕ್ತಿತ್ವ ಕಾಲ ದೇಶಾತೀತವಾಗಿ ಎಲ್ಲೆಡೆಯೂ ಒಂದೆ ರೀತಿಯೇನೊ ಅನಿಸಿಬಿಟ್ಟಿತ್ತು – ಒಂದು ಆಫೀಸಿನ ಪೋಷಾಕಿನೊಳಗಡಗಿದ ವ್ಯಕ್ತಿತ್ವ, ಮತ್ತೊಂದೆಡೆ ವೈಯಕ್ತಿಕ ಜೀವನದ ಸಾಂಸಾರಿಕ ದಿರಿಸುಟ್ಟ ಸೌಮ್ಯ, ಭಾವನಾತ್ಮಕ ವ್ಯಕ್ತಿತ್ವದ ಪ್ರಕಟ. ಈಗಿನ ಜಗದಲ್ಲಿ ಅನಿವಾರ್ಯವಾದ ಈ ಮುಖವಾಡಗಳ ಕುರಿತೆ ಚಿಂತಿಸುತ್ತ ಕೇಳಿದ್ದ ಶ್ರೀನಾಥ ತುಸು ಛೇಡಿಕೆಯ ದನಿಯಲ್ಲಿ,

‘ ನಿಮ್ಮ ಮಾತು ಕೇಳಿದರೆ ನೀವು ನಿಮ್ಮ ಮಗಳನ್ನು ತುಂಬಾ ಹಚ್ಚಿಕೊಂಡಿರುವಂತೆ ಕಾಣುತ್ತದೆ.. ನಿಮ್ಮ ಪತ್ನಿಯೇನು ಇದರಿಂದ ಈರ್ಷೆಗೊಳಗಾಗುವುದಿಲ್ಲ ತಾನೆ?’

‘ ಒಳಗಾಗದೆ ಮತ್ತೇನು? ಏ ವುಮೆನ್ ಇಸ್ ಅ ವುಮೆನ್ ಎವೆರಿ ವೇರ್ ಆಲ್ ಓವರ್ ದ ವರ್ಲ್ಡ್… ಸೊ, ತುಂಬಾ ಟ್ಯಾಕ್ಟಿಕಲ್ಲಾಗಿ ನಿಭಾಯಿಸಬೇಕು – ಅದರಲ್ಲೂ ಇಬ್ಬರು ಹೆಂಗಳೆಯರ ನಡುವೆ ಸಿಕ್ಕಿಕೊಂಡ ನನ್ನಂತಹ ಬಡಪಾಯಿಯಾದರೆ ಮಾತನಾಡುವ ಹಾಗೆಯೆ ಇಲ್ಲ… ಆದರೆ ತಾಯಿ ಮಗಳು ಒಂದಾಗಿ ನನಗೆದುರಾಗಿಬಿಟ್ಟರೆ ಅದು ಇನ್ನೂ ಅಪಾಯದ ಸೂಚನೆ.. ಅದಕ್ಕೆ ನನ್ನ ಮಗಳನ್ನು ನನ್ನ ಕಡೆಯಿರುವಂತೆ ನೋಡಿಕೊಂಡುಬಿಟ್ಟಿದ್ದೇನೆ..’ ಎಂದು ಕಣ್ಣು ಮಿಟುಕಿಸಿದ್ದರು ಕುನ್. ಲಗ್

‘ಮಗಳ ಮೇಲೆ ಅಪಾರ ಪ್ರೀತಿಯೆಂದರೆ ತಾಯಿಗೆ ಹೊಟ್ಟೆಕಿಚ್ಚಾದರು ಕೂಡ, ಮಾತನಾಡುವಂತಿಲ್ಲವಲ್ಲಾ?’ ಎಂದು ನಡುವೆ ಬಾಯಿ ಹಾಕಿದ್ದ ಕು. ಸೋವಿ.

ಅದನ್ನು ಕೇಳಿ ಗಹಿಗಹಿಸಿ ನಗುತ್ತ, ‘ ಮಗಳ ಮೇಲಿನ ಪ್ರೀತಿಯನ್ನು ಕಡಿಮೆ ಮಾಡು ಎಂದು ಹೇಳುವಂತಿಲ್ಲವಲ್ಲ? ಆದರೆ ಮಗಳು ದೊಡ್ಡವಳಾಗುತ್ತ ಆಗುತ್ತ ಪಕ್ವವಾಗುವ ಹೆಣ್ಣು ಮನದ ಖಾಸಗಿತನ ಮತ್ತು ಸೂಕ್ಷ್ಮಜ್ಞತೆಯಿಂದಾಗಿ ಅವರಿಬ್ಬರು ಒಂದು ಗುಂಪಾಗಿಬಿಡುವುದು ಊಹಿಸಲಾಗದ ವಿಷಯವೇನಲ್ಲ.. ಆದರೆ ನನ್ನ ಮಗಳ ಕೇಸಿನಲ್ಲಿ ಅದಾಗಲಿಕ್ಕೆ ಇನ್ನು ಸ್ವಲ್ಪ ಕಾಲ ಬೇಕು.. ಅದಾಗುವ ಮೊದಲು ಸಿಕ್ಕಷ್ಟು ಸಮಯ ‘ಐ ಯಾಮ್ ಎಂಜಾಯಿಂಗ್ ಮೈ ಹೇ ಡೇಸ್..’ – ಒಳಗಿಳಿಯುತ್ತಿದ್ದ ಮದ್ಯದ ಪ್ರಭಾವದಿಂದ ಉಕ್ಕೇರುತ್ತಿದ್ದ ಉತ್ತೇಜಕ ಮನಸ್ಥಿತಿಯಲ್ಲಿ ಮನ ಲಹರಿಯನ್ನು ಹರಿಯಬಿಡತೊಡಗಿದ್ದರು ಕುನ್. ಲಗ್ ಸಾಹೇಬರು..

ಅದೆ ಹೊತ್ತಿನಲ್ಲಿ ಸ್ವಲ್ಪ ಹೆಚ್ಚಾಗಿಯೆ ಕುಡಿದು ಮತ್ತೇರಿದಂತಿದ್ದ ಕುನ್. ಸೋವಿ, ತುಸು ಅರೆಬರೆ ತೊದಲಿನ ದನಿಯಲ್ಲಿ, ‘ಸದ್ಯ ನನಗಂತೂ ಆ ಪ್ರಾಬ್ಲಮ್ ಇಲ್ಲಪ್ಪ…ನನಗಿರುವವನು ಒಬ್ಬನೆ ಗಂಡು ಮಗ..ಸದಾ ತಾಯಿಯ ಜತೆಯೆ ಅಂಟಿಕೊಂಡಿರುವವ.. ನಾನೇನಿದ್ದರೂ ಆಗೀಗೊಮ್ಮೆ ಅವನನ್ನು ಗದರಿಸಿವ ಮೋಡಿನಲ್ಲೆ ಇದ್ದರೆ ಸಾಕು..’ ಎಂದು ಉವಾಚಿಸಿದ್ದ.

‘ ಅಯ್ಯೊ ಸಾಕು ಸುಮ್ಮನಿರಪ್ಪ.. ಗಂಡಿಗಿಂತ ಹೆಣ್ಣಿನ ತಂದೆಯಾಗುವುದೆ ವಾಸಿ.. ಯಾಕೆಂದರೆ ಮದುವೆಯಾಗುವ ಹೊತ್ತಿಗೆ ಹೆಣ್ಣಿಗೆ ದುಡ್ಡು ಕೊಟ್ಟು ಮದುವೆ ಮಾಡಿಕೊಳ್ಳುವ ಪ್ರಮೇಯ ಬರುವುದಿಲ್ಲ… ಇಲ್ಲದಿದ್ದರೆ ವಧುದಕ್ಷಿಣೆಗೆ ಈಗಿನಿಂದಲೆ ಹೊಂಚಬೇಕಾಗುತ್ತದೆ..’ ಎಂದು ಕೀಟಲೆಯಲಿ ಮಾರ್ನುಡಿದಿದ್ದರು ಕುನ್. ಲಗ್.

‘ ಹೌದೌದು.. ಅದೇನೊ ನಿಜವೆ..’ ಎಂದು ಗಹಿಗಹಿಸಿ ನಕ್ಕು ‘ಅಂದ ಹಾಗೆ ನಿಮ್ಮ ಫ್ಯಾಮಿಲಿಯ ಬಗ್ಗೆ ಏನೂ ಹೇಳಲೆ ಇಲ್ಲವಲ್ಲ?’ ಎಂದು ಶ್ರೀನಾಥನತ್ತ ತಿರುಗಿದ್ದ ಕುನ್. ಸೋವಿ.

‘ ನನ್ನದೇನು ಹೇಳಿಕೊಳ್ಳಲು ಹೆಚ್ಚೇನಿಲ್ಲ.. ಸದ್ಯಕ್ಕೆ ಹೆಂಡತಿ ಊರಿನಲ್ಲಿ ತವರು ಮನೆಯಲ್ಲಿದ್ದಾಳೆ ಈಚೆಗಷ್ಟೆ ಜನಿಸಿದ ಹೆಣ್ಣು ಮಗುವಿನೊಂದಿಗೆ..ನಾನಿನ್ನು ಮಗುವಿನ ಮುಖ ನೋಡಿರುವುದು ಬರಿಯ ಫೋಟೊದಲ್ಲಷ್ಟೆ.. ಹೀಗಾಗಿ ಇನ್ನು ಅಟ್ಯಾಚ್ಮೆಂಟಿನ ಮಾತು ಸ್ವಲ್ಪ ದೂರವೆ ಎನ್ನಬೇಕು…’ ಎಂದಿದ್ದ ಪೆಚ್ಚುನಗೆ ನಗುತ್ತ.

‘ ಹೇಗಿದ್ದರೂ ನೀನು ಬ್ಯಾಂಕಾಕಿನಲ್ಲೆ ಇದ್ದಿಯಲ್ಲ – ನಿನ್ನ ಜತೆಗೆ ಅವರನ್ನು ಇಲ್ಲಿಗೆ ಕರೆಸಬಹುದಿತ್ತಲ್ಲ?’ ಕುತೂಹಲದಿಂದ ಕೇಳಿದ್ದ ಕುನ್. ಸೋವಿ. ಅಷ್ಟು ದಿನವಾದರೂ ಒಮ್ಮೆಯೂ ಸ್ವಂತ ವಿಷಯ ಮಾತನಾಡದ ಕಾರಣ ಅವನಿಗೂ ಕೊಂಚ ಕುತೂಹಲ ಗರಿಗೆದರಿಕೊಂಡಿತ್ತು.

‘ ನಾನೂ ಅದನ್ನೆ ಯೋಚಿಸುತ್ತಿದ್ದೇನೆ..ನಾನು ಪ್ರಾಜೆಕ್ಟ್ ಮುಗಿಸಿ ವಾಪಸ್ಸು ಹೋಗುವ ಮೊದಲು ಒಮ್ಮೆಯಾದರೂ ಅವರನ್ನೆಲ್ಲಾ ಕರೆಸಿಕೊಂಡು ಇಲ್ಲೆಲ್ಲಾ ಸುತ್ತಾಡಿಸಬೇಕೆಂದು.. ಇಷ್ಟು ದಿನ ಪ್ರಾಜೆಕ್ಟ್ ಬಿಜಿಯಲ್ಲಿ ಸಾಧ್ಯವಿರಲಿಲ್ಲ.. ಇನ್ನು ಮುಂದೆ ಸ್ವಲ್ಪ ಬಿಡುವಾಗುವುದರಿಂದ ಸಾಧ್ಯವಾಗಬಹುದೆಂದುಕೊಂಡಿದ್ದೇನೆ… ಸಾಲದ್ದಕ್ಕೆ ಅಲ್ಲಿಂದ ಬರಲು ಬೇಕಾದ ಪಾಸ್ಪೋರ್ಟ್, ವೀಸಾ, ಇನ್ಶ್ಯುರೆನ್ಸುಗಳಿಗೆಲ್ಲ ಇನ್ನು ಪರದಾಡುತ್ತಲೆ ಇದ್ದಾರೆ.. ಅದೆಲ್ಲಾ ಆಗುವ ತನಕ ಯಾವುದೆ ಖಚಿತ ಪ್ಲಾನು ಹಾಕುವಂತಿಲ್ಲ…’ ಇನ್ನು ಖಚಿತವಾಗದ ಸುದ್ದಿಯ ಕುರಿತೆ ಆಲೋಚಿಸುತ್ತ ಎತ್ತಲೊ ನೋಡುತ್ತಾ ನುಡಿದಿದ್ದ ಶ್ರೀನಾಥ..

‘ನಾನು ಕೇಳಿದ್ದು ಆ ಕುರಿತಲ್ಲ..’ ಅವನನ್ನು ಮಧ್ಯದಲ್ಲೆ ತಡೆದಿದ್ದ ಕುನ್. ಸೋವಿ..’ ನೀನು ಪ್ರಾಜೆಕ್ಟಿಗೆ ಬಂದಾಗಲೆ ಜತೆಯಲ್ಲೆ ಕರೆದುಕೊಂಡು ಬರಬಹುದಿತ್ತಲ್ಲವೆ? ಆ ರಾಮಮೂರ್ತಿಯ ಕುಟುಂಬ ಬಂದಿರುವ ಹಾಗೆ..?’

‘ ರಾಮ ಮೂರ್ತಿಯ ವಿಷಯವೆ ಬೇರೆ.. ಅವನಿಗಾಗಲೆ ಮಗು ಹುಟ್ಟಿಯಾಗಿತ್ತು ಈ ಪ್ರಾಜೆಕ್ಟಿಗೆ ಸೇರುವ ಮೊದಲೆ.. ಆದರೆ ನನ್ನ ಕೇಸಿನಲ್ಲಿ ಗರ್ಭಿಣಿಯಾದ ಕಾರಣ ಕಂಪನಿಯ ನೀತಿ, ನಿಯಮಾನುಸಾರ ಅನುಮತಿ ಸಿಗಲಿಲ್ಲ..’

ಈಗ ತನಗೂ ಕುತೂಹಲ ಕೆದರಿದಂತೆ ಕಂಡ ಕುನ್. ಲಗ್ , ‘ಯಾಕೆ? ನಮ್ಮದು ನಿಮ್ಮದು ಒಂದೆ ರೀತಿಯ ಪಾಲಿಸಿಯಲ್ಲವಾ? ಆ ನಿಯಮದನುಸಾರ ಕರೆದುಕೊಂಡು ಬರಲು ಆಗುತ್ತಿತ್ತಲ್ಲವೆ? ಅದೂ ಇಷ್ಟು ದೊಡ್ಡ ಪ್ರಾಜೆಕ್ಟಿನಲ್ಲಿ ವರ್ಷಾನುಗಟ್ಟಲೆ ಇರಬೇಕಾದಾಗ?’ ಎಂದು ಕೇಳಿದ್ದರು.

‘ ಎರಡು ವರ್ಷಕ್ಕು ಹೆಚ್ಚಿನ ಅವಧಿಯ ಡೆಪ್ಯುಟೇಷನ್ನಿಗೆ ಮಾತ್ರ ಆ ಲಾಂಗ್ ಟರ್ಮ್ ಕಾಂಟ್ರಾಕ್ಟ್ ನೀತಿ ಅಪ್ಲೈಯಾಗುತ್ತದೆಯಂತೆ..ಆಗ ಹೆಂಡತಿ ಮಕ್ಕಳನ್ನು ಜತೆಗೆ ತರಲು ಯಾವ ಅಡ್ಡಿಯೂ ಇರುವುದಿಲ್ಲ ಮತ್ತು ಹೋದ ಕಡೆಯೆ ಗರ್ಭಿಣಿಯಾಗಿ ಮಗು ಜನಿಸಿದರೂ ತೊಂದರೆಯಿಲ್ಲ..ಕಂಪನಿಯ ನೀತಿಯನುಸಾರ ಅದಕ್ಕೆ ಬೇಕಾದ ಇನ್ಸ್ಯೂರೆನ್ಸ್ ಕವರೇಜ್ ಎಲ್ಲವನ್ನು ಕಂಪನಿಯ ವತಿಯೊಂದ ನೀಡುತ್ತಾರೆ…ಆದರೆ ನಮ್ಮದು ಎರಡು ವರ್ಷಕ್ಕೆ ಸ್ವಲ್ಪ ಕಡಿಮೆಯಿರುವ ಅವಧಿಯ ಪ್ರಾಜೆಕ್ಟ್.. ಹೀಗಾಗಿ ಲಾಂಗ್ ಟರ್ಮ್ ನೀತಿ ಬಳಕೆಯಾಗಲಿಲ್ಲ…’

‘ ಮತ್ತೆ ರಾಮಮೂರ್ತಿ ತನ್ನ ಹೆಂಡತಿ, ಮಕ್ಕಳನ್ನು ಕರೆತಂದಿರುವುದು?’ ಕುನ್. ಸೋವಿಯ ಅಚ್ಚರಿ ತುಂಬಿದ ಪ್ರಶ್ನಾರ್ಥಕ ದನಿಯಲ್ಲಿ ಕೇಳಿದ್ದ.

‘ ಅವೆಲ್ಲ ಬೇಕಿದ್ದವರು ತಮ್ಮ ಸ್ವಂತ ಖರ್ಚಿನಲ್ಲಿ ಕರೆಸಿಕೊಳ್ಳಬೇಕು.. ಕಂಪನಿಯಿಂದ ಏನೂ ಸಹಾಯ ಸಿಗುವುದಿಲ್ಲಾ..’

‘ಓಹ್ ಐ ಸೀ.. ದಟ್ ಇಸ್ ಪ್ರೆಟಿ ಬ್ಯಾಡ್ ಅಂಡ್ ಅನ್ ಫೇರ್…’ ಉದ್ಗರಿಸಿದ್ದರು ಕುನ್. ಲಗ್ ‘ ನೀನೇಕೆ ರಾಮಮೂರ್ತಿಯ ಹಾಗೆ ಮಾಡಲಿಲ್ಲ?’

‘ ಹೇಗೆ ಮಾಡಲಿ ? ಮೊದಲಿಗೆ ಪ್ರೆಗ್ನೆನ್ಸಿಯಲ್ಲಿ ಪ್ರಯಾಣಿಸಲು ತೊಡಕು..ಮತ್ತೆ ಅವರನ್ನು ನೋಡಿಕೊಳ್ಳಲೆಂದು ಅವರಪ್ಪ ಅಮ್ಮಂದಿರನ್ನೊ, ನಮ್ಮ ಅಮ್ಮ, ಅಪ್ಪಂದಿರನ್ನೊ ಕರೆಸಬೇಕು – ಸ್ವಂತ ಖರ್ಚಿನಲ್ಲಿ..ಸಾಲದ್ದಕ್ಕೆ ಅವರ ಆಸ್ಪತ್ರೆ, ಪ್ರೆಗ್ನೆನ್ಸಿಯ ಖರ್ಚಿಗೆ ಇನ್ಶ್ಯೂರೆನ್ಸ್ ಕವರೇಜ್ ಇರುವುದಿಲ್ಲ..ಜತೆಗೆ ಭಾಷೆಯ ತೊಂದರೆ ಇರುವ ಕಾರಣ ಇಂಟರ್ನ್ಯಾಶನಲ್ ಹೈಟೆಕ್ ರೀತಿಯ ಆಸ್ಪತ್ರೆಗಳನ್ನೆ ಹುಡುಕಬೇಕು… ಇದ್ಯಾವ ಖರ್ಚು ಕಂಪನಿಯ ಲೆಕ್ಕದಲ್ಲಿ ಬರದ ಕಾರಣ ಎಲ್ಲಾ ಸ್ವಂತವಾಗಿ ಭರಿಸಬೇಕು..ಕಂಪನಿಯ ದೃಷ್ಟಿಯಲ್ಲಿ ಇವೆಲ್ಲ ‘ವೈಯಕ್ತಿಕ ಸಮಸ್ಯೆಗಳು’..ಪ್ರಾಜೆಕ್ಟ್ ನಡೆಸಲು ಜನ ಒದಗಿಸುವುದಕ್ಕಷ್ಟೆ ಅವರ ಗಮನ…’

‘ ಓಹ್ ! ನಾನೆಲ್ಲೊ ವೈಯಕ್ತಿಕ ಕಾರಣದಿಂದಾಗಿ ಯಾರೂ ಜತೆಗೆ ಬರಲಿಲ್ಲವೆಂದುಕೊಂಡಿದ್ದೆ.. ಇಷ್ಟೊಂದು ಹಿನ್ನಲೆಯಿರುವುದು ಗೊತ್ತಿರಲಿಲ್ಲ…ಪ್ರಾಜೆಕ್ಟ್ ಶುರುವಿನ ಮೊದಲಲ್ಲೆ ಗೊತ್ತಿದ್ದರೆ, ಇವಕ್ಕೆಲ್ಲಾ ಏನಾದರೂ ವ್ಯವಸ್ಥೆ ಮಾಡಬಹುದಿತ್ತೇನೊ?’ ಎಂದಿದ್ದರೂ ಅನುಕಂಪದ ದನಿಯಲ್ಲಿ ಕುನ್.ಲಗ್

ಈಗ ಪ್ರಾಜಕ್ಟಿನ ಭಯಂಕರ ಯಶಸ್ಸಿನಲ್ಲಿ ಹೀಗೆ ಸಂತಾಪದ ದನಿಯಲ್ಲಿ ಹೇಳುತ್ತಿದ್ದರೂ, ಆರಂಭದಲ್ಲಿ ಈ ಸೌಲಭ್ಯಗಳನ್ನು ಕೇಳಿದ್ದರೆ ಕೊಡುತ್ತಿದ್ದರೆಂದು ಖಂಡಿತವಾಗಿ ಅನಿಸಿರಲಿಲ್ಲ ಶ್ರೀನಾಥನಿಗೆ… ಪ್ರತಿಯೊಂದನ್ನು ಅಗತ್ಯ / ಅನಗತ್ಯ ವೆಚ್ಚದ ದೃಷ್ಟಿಕೋನದಿಂದ ನೋಡುವ ಕಂಪನಿ ವ್ಯವಹಾರದಲ್ಲಿ ಇಂತಹ ಕೋರಿಕೆಗಳನ್ನು ತಿರಸ್ಕರಿಸುವ ಸಾಧ್ಯತೆಯೆ ಹೆಚ್ಚು. ಅಲ್ಲೆಲ್ಲ ರಾಜ್ಯವಾಳುವುದು ಬಡ್ಜೆಟ್ಟೆಂಬ ಇತಿಮಿತಿಯ ಮಾಯಾಂಗನೆ ಮಾತ್ರವೆ…ಅಲ್ಲದೆ ಹಾಗೆ ಅನುಕೂಲ, ಸವಲತ್ತನ್ನು ಕೇಳುವುದೆ ಕೇಳಿದವರ ಪೊಗರು, ತಿಮಿರಿನ ರೂಪಕವಾಗಿ ಕಂಡರೂ ಅಚ್ಚರಿಯಿರುವುದಿಲ್ಲ – ಅದರಲ್ಲೂ ಇದಾವುದನ್ನು ಒದಗಿಸದೆಯೆ ಬೇರೆಯವರು ಸಿಗುವ ಸುಲಭ ಸಾಧ್ಯತೆಯಿರುವಾಗ. ಆದರೆ ಈಗಿನ ಕಥೆಯೆ ಬೇರೆ..ಪ್ರಚಂಡ ಯಶಸ್ಸು , ಕಂಡರಿಯದ ಟರ್ನೋವರಿನ ಫಲಿತಾಂಶ ಈಗ ಬಾಯಲ್ಲಿ ಆ ಮಾತನ್ನಾಡಿಸುತ್ತಿದೆ ಸಹಜವಾಗಿ ಮತ್ತು ಸುಲಭವಾಗಿ. ಅದಕ್ಕವರನ್ನು ದೂರುವಂತಿಲ್ಲ – ಅದು ಅವರ ಸಂಸ್ಥೆಯ ನಿಯಮದ ಫಲ; ಯಾರ ತಪ್ಪೂ ಅಲ್ಲ. ಮೊದಲೆ ಕನ್ಸಲ್ಟೆಂಟುಗಳೆಂದರೆ ದುಬಾರಿ ಬಿಳಿಯಾನೆಗಳೆಂಬ ಮಸೂರದಲ್ಲೆ ಕಣ್ಣಿಗೆ ಕಣ್ಣಿಟ್ಟು ನೋಡುವ ವಾಣಿಜ್ಯ ಜಗ….

‘ ನಾನು ಐಟೀ ಜಗತ್ತಿನಲ್ಲಿ ದೊಡ್ಡ ದೊಡ್ಡ ಸಂಬಳ, ಲಗ್ಜುರಿ ಜೀವನ ಎಂತೆಲ್ಲಾ ಅಸೂಯೆ ಪಡುತ್ತಿದ್ದೆ.. ಆದರೆ ಈಗ ಅದರ ಕುರಿತು ಮರುಕವೂ ಆಗುತ್ತಿದೆ…’ ಕುನ್.ಸೋವಿಯ ಅಚ್ಚರಿ ತುಂಬಿದ ಮರುಕದ ದನಿ ನುಡಿದಿತ್ತು. ತೀರಾ ಹತ್ತಿರದ ಕುಟುಂಬದ ಮಟ್ಟಿನ ಸವಲತ್ತನ್ನು ಒದಗಿಸದ ಕಂಪನಿ ಪಾಲಿಸಿಯ ಕುರಿತು ವಿಪರೀತ ರೋಷದ ಜತೆಗೆ ಅದನ್ನು ಅನುಭವಿಸಬೇಕಾದ ಶ್ರೀನಾಥನ ಮೇಲಿನ ಅನುಕಂಪವೂ ಅವನ ಮಾತಿನಲ್ಲಿ ಧ್ವನಿಸುತ್ತಿತ್ತು.

‘ ಕುನ್. ಸೋವಿ..ನಮ್ಮಲ್ಲೊಂದು ಗಾದೆಯಿದೆ ದೂರದ ಬೆಟ್ಟ ನುಣ್ಣಗೆ ಅಂತ…ಎಲ್ಲಾ ಪ್ರೊಫೆಷನ್ನಿಗೂ ಅದರದೆ ಆದ ಛಾಲೆಂಜುಗಳಿರುತ್ತವೆ..ವ್ಯವಹಾರಿಕವಾಗಿ ಅಥವ ವೈಯಕ್ತಿಕವಾಗಿ..ನಿವ್ವಳ ಮೊತ್ತದಲ್ಲಿ ಎಲ್ಲವೂ ಒಂದೆ..ಹಣದ ಹಿಂದೆ ಬಿದ್ದರೆ ಕುಟುಂಬದ ಅಥವಾ ವೈಯಕ್ತಿಕ ಹಿತಾಸಕ್ತಿಗೆ ಹೊಡೆತ, ಬೇಡವೆಂದು ಬಿಟ್ಟರೆ ಕೆರಿಯರಿಗೆ ಹೊಡೆತ…ಎಲ್ಲಾದರೂ ಕಾಮ್ಪ್ರೊಮೈಸ್ ಆಗಲೇಬೇಕು’ ಎಂದು ಪೆಚ್ಚು ನಗೆ ನಕ್ಕಿದ್ದ ಶ್ರೀನಾಥ.

ವಾಸ್ತವದಲ್ಲಿ ಚಾಲನೆಯಲ್ಲಿರುವ ನಿಜ ಸ್ಥಿತಿಯೆಂದರೆ, ಐಟಿ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿರುವ ದಿಸೆಯಲ್ಲಿ ಹೆಣಗಬೇಕಾದ ಕಂಪನಿಗಳು ಒಂದು ಕಡೆ ತಮ್ಮ ಖರ್ಚು ವೆಚ್ಚಗಳನ್ನು ಮಿತಿಮೀರದಂತೆ ಅಂಕೆಯಲ್ಲಿಟ್ಟುಕೊಳ್ಳುತ್ತಲೆ ಮತ್ತೊಂದೆಡೆ ಲಾಭಕ್ಕೆ ಕೊರೆಯಿರದಂತೆ ನೋಡಿಕೊಂಡು ವ್ಯವಹಾರ ನಿಭಾಯಿಸಬೇಕಾದ ಅಗತ್ಯವಿರುತ್ತದಲ್ಲದೆ, ಆ ದಿಸೆಯಲ್ಲಿ ಎದುರಾಗುವ ತಮ್ಮದೆ ರೀತಿಯ ಇತರ ಕಂಪನಿಗಳ ಸ್ಪರ್ಧೆಯ ದರ ಮತ್ತು ಸೇವಾಮಟ್ಟಗಳನ್ನು ಮೀರಿಸುವಂತಹ ದರ ಮತ್ತು ಸೇವೆಗಳನ್ನು ನೀಡಬೇಕಾಗುತ್ತದೆ. ಕಂಪನಿಗಳ ಇನ್ನೆಷ್ಟೊ ತರದ ಮೇಲ್ವೆಚ್ಚಗಳನ್ನು, ಅನಗತ್ಯ ಖರ್ಚುವೆಚ್ಚಗಳನ್ನು ಸಂಪೂರ್ಣ ಹತೋಟಿಯಲ್ಲಿಡಲು ಸಾಧ್ಯವಾಗದೆ ಇದ್ದಾಗ ಐಟಿ ಕಂಪನಿಗಳಿಗೆ ಉಳಿಯುವ ಕಾಸ್ಟ್ ಕಟಿಂಗ್ ಅಥವ ಕಾಸ್ಟ್ ಕಂಟ್ರೋಲಿಂಗಿನ ಏಕೈಕ ಮಾರ್ಗವೆಂದರೆ – ಆ ವೃತ್ತಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ವೆಚ್ಚ ಮತ್ತು ಸವಲತ್ತುಗಳತ್ತ ಕೆಂಗಣ್ಣು ಹಾಯಿಸುವುದು. ಬೇರೆ ಮಾಮೂಲಿ ರೀತಿಯ ಉತ್ಪಾದನಾಧಾರಿತ ಕಾರ್ಖಾನೆ, ಕಂಪನಿಗಳಲ್ಲಾದರೆ ಹಣಕಾಸು ಕಡಿತಗೊಳಿಸಬೇಕಾದರೆ ಹಲವಾರು ವಿಭಿನ್ನ ದಾರಿಗಳಿರುತ್ತವೆ – ಸರಕು ಕೊಂಡುಕೊಳ್ಳುವಿಕೆಯನ್ನು ಕಡಿತಗೊಳಿಸುವುದು, ಅನಗತ್ಯ ಉತ್ಪಾದನೆಯನ್ನು ನಿಯಂತ್ರಿಸುವುದು, ಖರ್ಚು ವೆಚ್ಚಗಳನ್ನು ಹದ್ದುಬಸ್ತಿನಲ್ಲಿಡಲು ಉಗ್ರಾಣದಲ್ಲಿ ಕಡಿಮೆ ಸರಕಿನ ಸ್ಟಾಕ್ ಇರುವಂತೆ ನೋಡಿಕೊಳ್ಳುವುದು, ಯಂತ್ರಾದಿ ಪರಿಕರ ಸಲಕರಣೆಗಳ ಖರೀದಿಯನ್ನು ಮುಂದೂಡುವುದು ಅಥವಾ ಕತ್ತರಿ ಹಾಕುವುದು, ಬೇಡದ ಆಸ್ತಿ, ಪಾಸ್ತಿಗಳಿದ್ದರೆ ಮಾರಿಹಾಕುವುದು, ಸೇಲ್ ಹೆಚ್ಚಾಗಿಸುವ ಸಾಧ್ಯತೆಗಾಗಿ ತೀರುವಳಿ ಮಾರಾಟ, ಸೇಲ್ಸ್ ಪ್ರಮೋಶನ್, ಡಿಸ್ಕೌಂಟೆಡ್ ಸೇಲ್ ಇತ್ಯಾದಿಗಳ ಮೊರೆ ಹೋಗುವುದು – ಹೀಗೆ, ಅನೇಕ ದಾರಿಗಳ ಸಾಧ್ಯತೆ ಸಹಜವಾಗಿಯೆ ತೆರೆದುಕೊಳ್ಳುತ್ತದೆ – ಉದ್ಯೋಗಿಗಳ ಸಂಖ್ಯೆಯನ್ನು ಕಡಿತ ಮಾಡುವತ್ತ ಅಥವಾ ಅವರ ಸಂಬಳ, ಸವಲತ್ತುಗಳತ್ತ ಕಣ್ಣು ಹಾಕುವ ಕೊಟ್ಟ ಕೊನೆಯ ಹಾದಿಯ ಕದ ತಟ್ಟುವ ಮೊದಲೆ. ಅಲ್ಲಿ ಸಾಧ್ಯವಿರುವ ಎಲ್ಲಾ ಮಾರ್ಗಗಳಲ್ಲೂ ವೆಚ್ಚವನ್ನು ಹದ್ದುಬಸ್ತಿನಲ್ಲಿಡುವ ಅಥವಾ ನಿಯಂತ್ರಿಸುವ ಕ್ರಮ ಕೈಗೊಳ್ಳಬಹುದು.

ಆದರೆ ಐಟಿ ಕಂಪನಿಗಳಲ್ಲಿ ಅದು ಅಷ್ಟು ಸರಳವಲ್ಲ ; ‘ಉದ್ಯೋಗಿಗಳೆ ನಮ್ಮ ಏಕೈಕ ಆಸ್ತಿ’ ಎಂಬ ಘನ ಅಸ್ತಿಭಾರದಡಿ ಕಾರ್ಯ ನಿರ್ವಹಿಸುವ ಐಟಿ ಕಂಪನಿಗಳಲ್ಲಿ ಅನಗತ್ಯ ಖರ್ಚು ವೆಚ್ಚ ನಿಯಂತ್ರಿಸಲಿರುವ ದಾರಿಗಳು ತೀರಾ ಕಡಿಮೆಯೇ. ಇರುವ ಎಲ್ಲವು ಹೆಚ್ಚು ಕಡಿಮೆ ಉದ್ಯೋಗಿಗಳ ಮತ್ತವರ ಸಂಬಳ, ಸಾರಿಗೆ ಸವಲತ್ತುಗಳ ಸುತ್ತಲೇ ಸುತ್ತುವ ಸಾಧ್ಯತೆಯೆ ಜಾಸ್ತಿ. ಬೇರಾವ ‘ಸೂಕ್ತ’ ದಾರಿಯೂ ಗೋಚರವಾಗದ ಕಡೆ ವಿಧಿಯಿಲ್ಲದೆ ಈ ಮಾರ್ಗ ಹಿಡಿಯುವ ಬಾಸುಗಳು ಕಂಪನಿಯ ನಿಯಮ ಮತ್ತು ಕಾನೂನನುಸಾರ ಸುಲಭದಲ್ಲಿ ಸಂಬಳವನ್ನು ಕಡಿತ ಮಾಡಲು ಸುಲಭವಾಗಿ ಸಾಧ್ಯವಾಗುವುದಿಲ್ಲ; ಅದು ವರ್ಷಕ್ಕೊಮ್ಮೆ ನಡೆಸುವ ವೇತನ ಹೆಚ್ಚಳದ (ಇಳಿಕೆಯ) ಪ್ರಕ್ರಿಯೆಯಾದ ಕಾರಣ, ಕಡಿತ ಮಾಡಲು ಮಾರುಕಟ್ಟೆಯ ಸ್ಪರ್ಧಾತ್ಮಕ ಶಕ್ತಿಗಳು ಬಿಡುವುದು ತೀರಾ ಅಪರೂಪವೆ. ವ್ಯವಹಾರದ ಒಟ್ಟಾರೆ ಆರ್ಥಿಕ ಆರೋಗ್ಯದ ಸ್ಥಿತಿಗತಿ ತೀರಾ ಹೀನಾಯವಾಗಿದ್ದಾಗಷ್ಟೆ ಕೊಂಚ ನಿಯಂತ್ರಣ ಸಾಧ್ಯವಿದ್ದರೂ ಅಲ್ಲಿಯೂ ಶೇಕಡಾವಾರು ಕಡಿಮೆ ಮಟ್ಟದ ವೇತನ ಹೆಚ್ಚಳವಾಗುವಂತೆ ನೋಡಿಕೊಳ್ಳಬಹುದೆ ಹೊರತು ಸಂಬಳ ಇರುವುದಕ್ಕಿಂತ ಕಡಿಮೆಯಾಗಿಸುವ ಸಾಧ್ಯತೆ ಅಪರೂಪದಲ್ಲಿ ಅಪರೂಪವೆಂದೆ ಹೇಳಬೇಕು. ಅಲ್ಲದೆ ಐಟಿ ಕಂಪೆನಿಗಳಲ್ಲಿ ವೇತನದತ್ತ ನಿಯಂತ್ರಣದ ಕಣ್ಣು ಹಾಕಿದರೆ, ಕೆಲಸಕ್ಕೆ ಸರಿಸೂಕ್ತವಾದ ತಾಂತ್ರಿಕ ಪ್ರತಿಭೆಯುಳ್ಳ ವ್ಯಕ್ತಿಗಳು ಸಿಗುವುದಿಲ್ಲ. ಆಗ ಮಾರುಕಟ್ಟೆಯಲ್ಲಿ ಸೂಕ್ತ ಗುಣಮಟ್ಟವನ್ನು ನಿಯಂತ್ರಿಸಲಾಗದೆ ಕಳಪೆ ಸೇವೆಯ ದೆಸೆಯಿಂದ ಸಂಪ್ರೀತಗೊಳಿಸಲಾಗದೆ ತಾತ್ಕಾಲಿಕವಾಗಿಯೊ, ಶಾಶ್ವತವಾಗಿಯೊ ಕಸ್ಟಮರುಗಳನ್ನು ಕಳೆದುಕೊಳ್ಳಬೇಕಾದ ರಿಸ್ಕು ಇರುತ್ತದೆ. ಸಂಪನ್ಮೂಲಗಳನ್ನು ನಿಭಾಯಿಸಿ, ನಿರ್ವಹಿಸುವ ಐಟಿ ಮ್ಯಾನೇಜರುಗಳು ಇದೆಲ್ಲಾ ನಿರ್ಬಂಧಗಳ ನಡುವೆ ಹೆಣಗುತ್ತಲೆ ಕಂಪನಿಯ ಗುರಿ ಮುಟ್ಟುವ ಸಾಹಸದತ್ತ ಹೆಜ್ಜೆಯಿಕ್ಕಬೇಕು, ಜತೆಗೆ ಹೊರಗಿನ ಪರಿಸರದಿಂದೆರಗುವ ಅನಿರೀಕ್ಷಿತ ನಿರ್ಬಂಧ, ತೊಡಕುಗಳನ್ನು ಜತೆ ಜತೆಗೆ ನಿಭಾಯಿಸಿ ನಿವಾರಿಸಿಕೊಳ್ಳುತ್ತ ಮುನ್ನಡೆಸಬೇಕು…

ಇಂತಹ ಪರಿಸ್ಥಿತಿಯಲ್ಲಿ ಕೊಂಚ ‘ಸೇಫ್’ ಎನಿಸುವ ವೆಚ್ಚ ತಗ್ಗಿಸುವ ದಾರಿಗಾಗಿ ಮ್ಯಾನೇಜರುಗಳು ಸದಾ ಹುಡುಕುತ್ತಲೇ ಇರುವುದರಿಂದ, ಕೆಲವೊಮ್ಮೆ ತೀರಾ ನಿಕೃಷ್ಟವಾದ ಚಿಲ್ಲರೆ ದಾರಿಗಳನ್ನು ಹಿಡಿದು ‘ಮೂತ್ರದಲ್ಲಿ ಮೀನು ಹಿಡಿದಂತಹ’ ಪರಿಹಾರಗಳನ್ನು ಹುಡುಕುವವರಿಗೇನೂ ಕಡಿಮೆಯಿಲ್ಲ. ಅದರಲ್ಲೂ ಕಸ್ಟಮರುಗಳ ಕಡೆಯಿಂದ ಅವರು ಕೇಳಿದ್ದ ಬೆಲೆಗೆ ಒಪ್ಪಿಗೆ ಬರದೆ ಸಾಕಷ್ಟು ‘ಶಿಷ್ಠಾಚಾರಿ ಚೌಕಾಶಿ’ ನಡೆದು ಹೋಗಿದ್ದು, ಬಿಸಿನೆಸ್ ಕೈ ಬಿಟ್ಟು ಹೋಗಬಾರದೆಂದು ತೀರಾ ಕಡಿಮೆ ದರಕ್ಕೆ ಅಥವಾ ಕಡಿತದ ಲಾಭಾಂಶಕ್ಕೆ ಒಪ್ಪಿಕೊಂಡುಬಿಟ್ಟಿದ್ದರಂತು ಮಾತಾಡುವ ಹಾಗೆಯೆ ಇಲ್ಲ. ಆ ನಷ್ಟವನ್ನು ಸರಿದೂಗಿಸುವ ಸಲುವಾಗಿ ಎಲ್ಲಾ ತರಹದ ಖರ್ಚು ವೆಚ್ಚ ನಿಯಂತ್ರಣಕ್ಕು ಕೈ ಹಾಕಿ, ಮೇಲ್ನೋಟಕ್ಕೆ ಕತ್ತರಿಸಿದ್ದೆ ಗೊತ್ತಾಗದಂತೆ ನವಿರಾಗಿ ಕತ್ತರಿಯಾಡಿಸುವುದು ಈ ಜಗತ್ತಿನಲ್ಲಿ ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆ. ಐಟಿ ಜಗದಲ್ಲಿ ಈ ರೀತಿಯ ಸಾಕಷ್ಟು ಸಾಧ್ಯತೆಗಳು ಸುಲಭವಾಗಿ ತಲೆದೋರುತ್ತವೆ – ಮಾನವೀಯ ಕಂಪನಗಳನ್ನು ತುಸು ಬದಿಗಿಟ್ಟು ನಿಷ್ಠೂರತೆಯಿಂದ ಕಾರ್ಯವೆಸಗಳು ಹೊರಟವರಿಗೆ. ಅದಕ್ಕೆ ಸರಿಸೂಕ್ತವಾದ ‘ತಾತ್ಕಾಲಿಕ ನೀತಿಯೊಂದನ್ನು’ ನಿರ್ಧರಿಸಿ ಅಂಗಿಕರಿಸಿದರಾಯ್ತು – ಮಿಕ್ಕೆಲ್ಲಾ ಕೆಲಸ ಆ ತಾತ್ಕಾಲಿಕ ರೂಲ್ಸಿನಡಿಯಲ್ಲಿ ನಿರ್ವಹಿಸಬೇಕಾದ ಪರಿಕ್ರಮವಷ್ಟೆ. ಈ ಪ್ರಾಜೆಕ್ಟುಗಳ ವಿಷಯಕ್ಕೆ ಬಂದಾಗ ಅದಕ್ಕಾಗಿ ಕಸ್ಟಮರುಗಳ ತಾಣಕ್ಕೆ ಹೋಗಿ ತಿಂಗಳಾನುಗಟ್ಟಲೆ, ವರ್ಷಾನುಗಟ್ಟಲೆ ಕೆಲಸ ಮಾಡಬೇಕಾದ ಸಂಧರ್ಭದಲ್ಲಿ ಹೋದವರೆಲ್ಲ ಹೆಚ್ಚು ಕಡಿಮೆಒಂದೆ ತರಹದ ಕೆಲಸ ಮಾಡುತ್ತಿದ್ದರೂ ಕೂಡ, ಅವರು ಅಲ್ಲಿರಬೇಕಾದ ಅವಧಿಯ ಉದ್ದದ ಮೇಲೆ ಅವರ ಸವಲತ್ತುಗಳ ನಿರ್ಧಾರವಾಗುತ್ತದೆ; – ಕಂಪೆನಿಯ ವತಿಯಿಂದ ಫ್ಯಾಮಿಲಿ ಜತೆಗೆ ಹೋಗಬಹುದಾ, ಇಲ್ಲವಾ? ಅವರ ಪ್ರಯಾಣದ ಖರ್ಚುವೆಚ್ಚ ಕಂಪನಿಯದ, ಉದ್ಯೋಗಿಯದ? ಜತೆಗೆ ಮಕ್ಕಳು ಜತೆಯಲ್ಲಿದ್ದರೆ, ಓದು ವಿದ್ಯಾಭ್ಯಾಸ ಇತ್ಯಾದಿಗಳ ಖರ್ಚು ವೆಚ್ಚದ ಕಥೆಯೇನು? ಅವರುಗಳಿಗೆ ಇರಲು ಬೇಕಾದ ವಸತಿ ಮತ್ತಿತರ ಹೆಚ್ಚುವರಿ ವೆಚ್ಚ ಯಾರಿಗೆ ಸೇರಿದ್ದು – ಹೀಗೆ ಹಲವಾರು ‘ನಿರ್ದಿಷ್ಠ ನಿಯಮ’ದಡಿ ಹಿಡಿದಿಡಲಾಗದ ಅದೆಷ್ಟೊ ವಿಷಯಗಳನ್ನು ನಿರ್ದಾಕ್ಷಿಣ್ಯವಾಗಿ ಸವರಿ ಹಾಕಿಬಿಡುತ್ತಾರೆ ಸವಲತ್ತಿನ ದೃಷ್ಟಿಯಿಂದ.

ಕೆಲವು ಪಾಪಪ್ರಜ್ಞೆಯುಳ್ಳ ‘ಗಿಲ್ಟಿ’ ಮ್ಯಾನೇಜರುಗಳು ಈ ತಾಪತ್ರಯವೇ ಬೇಡವೆಂದು ಮದುವೆಯಾಗಿರದ ಯುವ ಬ್ರಹ್ಮಚಾರಿಗಳನ್ನೇ ಹುಡುಕಿ ಪ್ರಾಜೆಕ್ಟಿಗೆ ಕಳಿಸುವುದು ಉಂಟು; ಆಗ ವರ್ಷಾಂತರದಿಂದ ಕತ್ತೆಯಂತೆ ದುಡಿಯುತ್ತಿರುವ ತಮಗಿರದ ಭಾಗ್ಯ ನಿನ್ನೆ ಮೊನ್ನೆ ತಾನೆ ಬಂದ ಹೊಸಬರ ಪಾಲಾಗುವುದಲ್ಲ ಎಂಬ ಸಂಕಟಕ್ಕೆ ಎಷ್ಟೊ ಹಿರಿಯ ಅನುಭವಿ ಉದ್ಯೋಗಿಗಳು ಅದು ತಮಗೆ ‘ಫೇರ್ ಡೀಲ್’ ಅಲ್ಲವೆಂದು ಗೊತ್ತಿದ್ದರೂ ವಿಧಿಯಿಲ್ಲದೆ ಕೊಟ್ಟಷ್ಟೇ ಸವಲತ್ತಿಗೆ ಬಾಯ್ಮುಚ್ಚಿಕೊಂಡು ಒಪ್ಪ್ಕೊಂಡು, ಪ್ರಾಜೆಕ್ಟಿನ ಕೆಲಸ ಮಾಡುವುದು ಮಾಮೂಲಿನ ದೃಶ್ಯ. ಅದರಲ್ಲೂ ವಿದೇಶಕ್ಕೆ ಹೋಗಿ ಬಂದವರೆಂದೆನಿಸಿಕೊಳ್ಳುವ ಆಸೆ ಮತ್ತು ಅದರಿಂದುದ್ಯುಕ್ತವಾಗುವ ಸರೀಕರ ಜತೆಗಿನ ಸಮಾಜದಲ್ಲಿನ ಸ್ಥಾನಮಾನಗಳ ಒತ್ತಡ ಎಲ್ಲ ರೀತಿಯ ತ್ಯಾಗಕ್ಕೂ ಸಿದ್ದ ಮಾಡಿಸಿಬಿಡುತ್ತದೆ. ಅದರಲ್ಲೂ ಕೆಲವರು ಹೇಗೊ ಸ್ವಂತದಲ್ಲಿ ಖರ್ಚುವೆಚ್ಚ ಹೊಂದಿಸಿಕೊಂಡು ಕುಟುಂಅದ ಹೆಚ್ಚಿನ ಹೊರೆ ನಿಭಾಯಿಸಲು ಯತ್ನಿಸಿದರು, ಗರ್ಭಿಣಿಯಾಗಿರುವ ಸ್ಥಿತಿಯಲ್ಲೊ ಅಥವಾ ಆಗತಾನೆ ಹುಟ್ಟಿದ ಮಕ್ಕಳ ಪಾಲನೆಯ ಅಗತ್ಯವಿರುವ ಪರಿಸ್ಥಿತಿಯಿದ್ದಾಗ, ಆ ಅಗಾಧ ಖರ್ಚುವೆಚ್ಚಗಳನ್ನು ನಿಭಾಯಿಸಲು ಹೆಣಗಾಡುವ ಬದಲು ಸತಿಯೊಬ್ಬಳನ್ನೆ ಭಾರತಕ್ಕೆ ಕಳಿಸಿ, ಅಲ್ಲೆ ಮನೆಯವರ್ಯಾರಾದರೂ ನೋಡಿಕೊಳ್ಳುವ ವ್ಯವಸ್ಥೆ ಮಾಡುವುದು ಸೂಕ್ತ ಹಾಗು ಸಮಯೋಚಿತವಾಗಿ ಕಾಣುತ್ತದೆ – ಅದರಿಂದುದ್ಭವವಾಗುವ ಹತ್ತಿರದ ಬಂಧು ಬಳಗದ ಜತೆಗಿನ ಸಾಮಾಜಿಕ ತಿಕ್ಕಾಟಗಳನ್ನು ನಿಭಾಯಿಸುವುದರ ಸಂಕಟದ ಹೊರತಾಗಿಯೂ; ಇಲ್ಲದಿದ್ದರೆ ಮೂರು ಕಾಸು ಉಳಿಸಲೆಂದು ಬಂದ ವಿದೇಶ ಯಾತ್ರೆ, ಊರಿನಲ್ಲುಳಿಸಿರುವ ಅಷ್ಟಿಷ್ಟು ಗಂಟನ್ನು ನುಂಗಿ ಹಾಕಿಬಿಡುವ ಸಾಧ್ಯತೆಯೇ ಜಾಸ್ತಿ !

ಕುನ್. ಸೋವಿ ಮತ್ತು ಕುನ್. ಲಗ್ – ಅವರಿಬ್ಬರ ಮಾತುಗಳನ್ನು ಕೇಳುತ್ತಿದ್ದ ಹಾಗೆ ಇವೆಲ್ಲ ಆಲೋಚನೆಗಳು ಸಿನಿಮಾ ಪರದೆಯ ಮೇಲೆ ಮೂಡಿದ ಚಲನ ಚಿತ್ರದಂತೆ ಶ್ರೀನಾಥನ ಮನಃಪಟಲದಲ್ಲಿ ಒಂದೆ ಓಘದಲ್ಲಿ ಮೂಡಿಬಂದಿತ್ತು, ಯಾವುದೆ ಅನುಕ್ರಮಣತೆಯಿಲ್ಲದೆ. ತಾನೇನಾದರೂ ಆ ‘ಫ್ಯಾಮಿಲಿ ಕಂಡೀಷನ್’ ಗಳನ್ನು ಹಾಕಿದ್ದರೆ ತಾನು ಆ ಪ್ರಾಜೆಕ್ಟಿನಲ್ಲೆ ಇರುತ್ತಿರಲಿಲ್ಲವೆಂದು ಅವನಿಗೆ ಚೆನ್ನಾಗಿ ಗೊತ್ತಿದ್ದ ಕಾರಣ, ಅವನಿಗರಿವಿಲ್ಲದಂತೆಯೇ ಮೆಲುನಗೆಯೊಂದು ಮೂಡಿತ್ತು ತುಟಿಯಂಚಿನಲ್ಲಿ. ಅಲ್ಲದೆ ಈ ಪ್ರಾಜೆಕ್ಟಿನ ಬಡ್ಜೆಟ್ ಕಡಿಮೆಯಿದ್ದ ನೆಪ ಹೇಳಿ ಒಟ್ಟಾರೆ ದರವನ್ನು ಹಿಗ್ಗಾಮುಗ್ಗಾ ಎಳೆದಾಡಿ ತೀರಾ ಕಡಿಮೆ ಹಣಕ್ಕೆ ಒಪ್ಪಿಕೊಳ್ಳುವಂತೆ ಕಸ್ಟಮರರ ಕಡೆಯಿಂದ ತೀವ್ರ ಒತ್ತಡ ಹಾಕಿದ್ದರೆಂದು ಸಾಕಷ್ಟು ಕಥೆ ಕೇಳಿದ್ದ ಶ್ರೀನಾಥ. ಆ ತರ್ಕದಲ್ಲಿ ನೋಡಿದರೆ, ತಮ್ಮ ಆ ಸ್ಥಿತಿಗೆ ಮೂಲ ಕಾರಣರಾದವರು ಬಹುಶಃ ಕುನ್. ಲಗ್ ರವರೆ ಎಂದು ಹೇಳಬಹುದಾದರೂ, ಅವರು ಕಸ್ಟಮರಾದ ಕಾರಣ ಹಾಗೆನ್ನುವಂತಿಲ್ಲ – ಕನಿಷ್ಠ ಬಹಿರಂಗವಾಗಿಯಾದರೂ. ಅಲ್ಲದೆ ಅವರಿರುವಂತಹ ಜವಾಬ್ದಾರಿಯುತ ಸ್ಥಾನದಲ್ಲಿ ಆದಷ್ಟು ಕನಿಷ್ಠ ಬಡ್ಜೆಟ್ಟಿನಲ್ಲಿ ನಿಭಾಯಿಸಲೆತ್ನಿಸುವುದು ಅವರ ಆದ್ಯ ಕರ್ತವ್ಯ ಸಹ. ಹಿಗಾಗಿ ಒಟ್ಟಾರೆ ಪರಿಸ್ಥಿತಿಯ ದೃಷ್ಟಿಯಲ್ಲಿ ನೋಡಿದರೆ – ಯಾರೂ ವಿಲನ್ನುಗಳಲ್ಲ; ಆ ಪರಿಸ್ಥಿತಿ, ಸನ್ನಿವೇಶ, ಅದೃಷ್ಟದಾಟಗಳೆ ನಿಜವಾದ ವಿಲನ್ನುಗಳೆನ್ನಬೇಕೇನೊ? ಬಹುಶಃ ತಾನು ಪ್ರಾಜೆಕ್ಟು ಮ್ಯಾನೇಜರನಾಗಿರದೆ ತನ್ನ ಬಾಸುಗಳ ಹಾಗೆ ರಿಸೋರ್ಸ್ (ಮಾನವ ಸಂಪನ್ಮೂಲಗಳ) ಮ್ಯಾನೇಜರನಾಗಿದ್ದರೆ, ತಾನೂ ಸಹ ಅವರ ಹಾಗೆಯೆ ಅಸಮ್ಮತವಾದದ್ದನ್ನು ಮಾಡಬೇಕಾದ, ಆ ರೀತಿಯೆ ನಡೆದುಕೊಳ್ಳಬೇಕಾದ ಒತ್ತಡ, ಒತ್ತಾಯಕ್ಕೆ ಸಿಲುಕುತ್ತಿದ್ದನೋ ಏನೋ?

ಆ ಪರಿಸ್ಥಿತಿಯಲ್ಲಿ ಶ್ರೀನಾಥನನ್ನು, ಸಂಭಾಳಿಸಬೇಕಿದ್ದ ಆರ್ಥಿಕ ಪರಿಸ್ಥಿತಿಗಿಂತ ಹೆಚ್ಚು ಬಾಧಿಸುತ್ತಿದ್ದುದು ಅದರ ಪರಿಣಾಮವಾಗಿ ಉದ್ಭವಿಸಿದ್ದ ಸಾಮಾಜಿಕ ಏಕಾಂತ. ತನ್ನ ಸಮಾನ ವಯಸ್ಕರು ಮತ್ತು ಮನಸ್ಕರು ಹೆಚ್ಚಿರದ ವಾತಾವರಣದಲ್ಲಿ, ಅಪರಿಚಿತ ದೇಶ-ಕೋಶ-ಭಾಷಾ ಸಂಸ್ಕೃತಿಯ ನಡುವಲ್ಲಿ ಪ್ರಾಜೆಕ್ಟಿನ ಒತ್ತಡದೊಂದಿಗೆ ಹೆಣಗಾಡುತ್ತಲೆ, ದೂರದಿಂದಲೆ ನಿರ್ವಹಿಸಬೇಕಾದ ಸಾಂಸಾರಿಕ ಜಂಜಾಟಕ್ಕು ತಲೆಯೊಡ್ಡುತ್ತ, ಸ್ವಂತ ಸಂಸಾರದ ಪರಿವೆಯಿಲ್ಲದೆ ವಿದೇಶಿ ಹಣದ ಮೋಹದಲ್ಲಿ ಬಿದ್ದಿರುವನಲ್ಲಾ ಎಂಬ ಪ್ರತ್ಯಕ್ಷ ಹಾಗೂ ಪರೋಕ್ಷ ದೂರುಗಳನ್ನು ಕೇಳಿದರೂ ಕೇಳದವನಂತೆ ನಟಿಸುತ್ತ, ಬಿಡುವಿನ ಅರೆಗಳಿಗೆಯಲ್ಲೂ ವಿಶ್ರಮಿಸಬಿಡದೆ ಸದಾ ಕಾಡುವ ‘ಗೇಣು ಹೊಟ್ಟೆ ತುಂಡು ಬಟ್ಟೆಗಾಗಿ ಏಕಿದೆಲ್ಲಾ ಪರಿ ಹೊಡೆದಾಟ, ಒದ್ದಾಟ, ಜಂಜಾಟ?’ ಎಂದು ಉತ್ತರ ಗೊತ್ತಿಲ್ಲದ ಪ್ರಶ್ನೆಗಳ ಸಾಗರದಲ್ಲಿ ಮುಳುಗಿ ತೊಳಲಾಡುವ ಏಕಾಂಗಿ ಮನ ತನ್ನ ಸಮಾನ ಮನಸ್ತರದ ಜತೆಯಿರದೆ ಒದ್ದಾಡುವ ಪರಿ, ಬರಿಯ ಮಾತಿಗೆ ನಿಲುಕದ, ವಾಸ್ತವದಲ್ಲಿ ಸುಲಭದಲ್ಲಿ ಗ್ರಹಿಸಲಾಗದ . ಕಂಪನಿಯ ಪ್ರಾಜೆಕ್ಟಿನ ಹೆಸರಲಿ ಊರು, ಕೇರಿ ಬಿಟ್ಟು ಹೊರಗೆ ಬಂದಿದ್ದರು, ಅದರ ನಿರ್ಬಂಧಿತ ಪರಿಸರದ ಪರಿಣಾಮದಿಂದುಂಟಾಗುವ ಸಾಮಾಜಿಕ ಅಸಮತೋಲನದಿಂದ ಉಂಟಾಗುವ ಮಾನಸಿಕ ಪ್ರಕ್ಷುಬ್ದತೆಗೆ ಕಂಪನಿ ಹೊಣೆಗಾರಿಕೆ ವಹಿಸುವುದಿಲ್ಲ – ಅದೆಲ್ಲ ವೈಯಕ್ತಿಕ ನಿಭಾವಣೆಯ ಪರಿಧಿಗೆ ಸೇರಿದ್ದು.

ತುಸು ಸಡಿಲ ತರದಲ್ಲಿ ಬೆರೆಯಬಲ್ಲ ಅಥವಾ ಆ ಮನಸ್ಥಿತಿ ಹೆಚ್ಚು ಜನರಲ್ಲಿರುವ ತಂಡಗಳಲ್ಲಿ ಈ ‘ಸಾಮಾಜಿಕ ಕೊರತೆ’ಯ ಗ್ಯಾಪ್ ಪರಸ್ಪರಾವಲಂಬನೆಯ ಒಡನಾಟದಿಂದ ಕೊಂಚ ಮಟ್ಟಿಗೆ ನಿವಾರಣೆಯಾಗುವುದಾದರೂ, ಶ್ರೀನಾಥನಂತಹ ಪ್ರಾಜೆಕ್ಟ್ ಮ್ಯಾನೇಜರನ ಭೂಮಿಕೆಯಿರುವೆಡೆ ಆ ಅಧಿಕಾರದ ಸ್ಥಾನಮಾನ ಕೂಡ ಒಡನಾಟದ ರೀತಿ, ನೀತಿ, ಪರಿಮಿತಿ, ಪರಿಧಿಗಳನ್ನು ನಿರ್ಧರಿಸುವುದರಿಂದ ಕೆಲವು ಎಲ್ಲೆಕಟ್ಟಿನ ಸರಹದ್ದನ್ನು ದಾಟಿ ಒಡನಾಡಲಿಕ್ಕೆ ಸಾಧ್ಯವಾಗುವುದಿಲ್ಲ. ಅಲ್ಲದೆ ಮೇಲಧಿಕಾರಿಯಾಗಿ ತೀರಾ ಸಲಿಗೆ, ಸರಾಗ ಕೊಟ್ಟರೆ ತಲೆಯ ಮೇಲೆ ಕೂರುವ ಗುಂಪಿನ ಕೆಲವರ ಮತ್ತೊಂದು ಬಗೆಯ ತಲೆನೋವನ್ನು ಎದುರಿಸಿ ನಿಭಾಯಿಸಬೇಕಾಗುತ್ತದೆ. ಇವೆಲ್ಲದರ ಸಮಷ್ಟಿ ಪರಿಣಾಮ ಮನಸನ್ನು ಮತ್ತಷ್ಟು ಸುರಕ್ಷಣಾ ಬದಿಯತ್ತ ತಳ್ಳಿ, ಎಷ್ಟು ಬೇಕೋ ಅಷ್ಟು ಮಾತ್ರ ಒಡನಾಟಕ್ಕೆ ಸೀಮಿತವಾಗಿಸಿ, ಏಕಾಂತದ ಆವರಣಕ್ಕೆ ಮತ್ತಷ್ಟು ಬೇಲಿ ಕಟ್ಟಿ ಇನ್ನೂ ಆಳದ ಏಕಾಂತದ ನೆಲೆಗಟ್ಟಿಗೆ ತಳ್ಳಿ ಮತ್ತಷ್ಟು ವಿಹ್ವಲತೆಯತ್ತ ದೂಡಿಬಿಡುತ್ತದೆ. ಇವೆಲ್ಲಾ ತಾಕಲಾಟಗಳಿಂದ ಜರ್ಝರಿತವಾದ ಆ ದುರ್ಬಲ ಮನಸ್ಥಿತಿಗೆ ಸರಿತಪ್ಪಿನ ವಿವೇಚನೆಯಾದರೂ ಎಲ್ಲಿರುತ್ತದೆ? ಆ ಹೊತ್ತಿನ ಭೀಕರ, ಭಯಂಕರ ಏಕಾಂಗಿತನವಷ್ಟೆ ಕಣ್ಮುಂದೆ ಭೂತಾಕಾರವಾಗಿ ನಿಂತು, ಹತ್ತಿಕ್ಕಲಾರದ ಮನೋದೌರ್ಬಲ್ಯವಾಗಿ ಪ್ರಜ್ವಲಿಸುತ್ತಿರುತ್ತದೆ. ಅದನ್ನು ಹತ್ತಿಕ್ಕುವ ಹವಣಿಕೆಯಲ್ಲಿ ಏನೋ ಮಾಡಲು ಹೋಗಿ, ಇನ್ನೇನೊ ಆಗುವ ಸಾಧ್ಯತೆ ನಿಚ್ಛಳವಾಗಿದ್ದರೂ ಗೊಂದಲದಲ್ಲಿ ಕಡಿವಾಣವಿರದ ಮನ ಹುಚ್ಚು ಕುದುರೆಯ ಹಾಗೆ ಕೆನೆಯುತ್ತ, ಏನು ಬೇಕಾದರೂ ಮಾಡಲೂ ಸಿದ್ದವಾಗಿಬಿಡುತ್ತದೆ – ತನ್ನರಿವಿಲ್ಲದ ಹಾಗೆ, ತನ್ನ ಮೇಲೆ ಸ್ವನಿಯಂತ್ರಣವಿಲ್ಲದ ಹಾಗೆ.

ವಿಪರ್ಯಾಸವೆಂದರೆ ಹೊರ ಜಗತ್ತಿನಲ್ಲಿ ಮಾತ್ರ, ಅದರಲ್ಲೂ ಪ್ರಾಜೆಕ್ಟಿನ ಚಟುವಟಿಕೆಗಳ ನಡುವೆ ಇದರ ತೃಣ ಮಾತ್ರದ ಸುಳಿವನ್ನು ಕೊಡಬಿಡದ ವೃತ್ತಿಪರತೆ, ಒಳಗಿಂದೆಲ್ಲಿಂದಲೊ ಮೇಲೆದ್ದು ಬಂದು ಶಿಸ್ತಿನ ಸಿಪಾಯಿಯಂತೆ ಕಾರ್ಯ ನಿರ್ವಹಿಸತೊಡಗುತ್ತದೆ – ಯಾವುದೊ ಬೇರೆಯದೆ ಆದ ವ್ಯಕ್ತಿತ್ವವನ್ನು ಪ್ರದರ್ಶಿಸುತ್ತಿರುವ ಮತ್ತೊಬ್ಬ ವ್ಯಕ್ತಿಯನ್ನು ನೋಡುತ್ತಿರುವಂತೆ. ಬಹುಶಃ ಒಂದು ವಿಧದಲ್ಲಿ ಒಂಟಿತನದ ಮುಖೇನ ಕಾಡುವ ಏಕಾಂತದ ಖಾಸಗಿತನಕ್ಕಿಂತ, ಅದರ ಬಲೆಗೆ ಸಿಕ್ಕಿಕೊಳ್ಳಲವಕಾಶ ನೀಡದೆ, ಯಾವುದಾದರೊಂದು ರೀತಿಯಲ್ಲಿ ಸದಾ ‘ಬಿಜಿ’ಯಾಗಿರಿಸುವ ಪ್ರಾಜೆಕ್ಟು ಮತ್ತದರ ಅಂತಿಮ ಗಮ್ಯವೆ ಹೆಚ್ಚು ಪ್ರಿಯವಾಗಿ, ಸಂಪೂರ್ಣ ಗಮನ, ಮನಸೆಲ್ಲ ಪೂರ್ತಿಯಾಗಿ ಅಲ್ಲೆ ಕೇಂದ್ರೀಕೃತವಾಗಿ ಅವಿರತ ಶ್ರದ್ಧೆಯಿಂದ ಅಗತ್ಯ ಮೀರಿದ ಮಟ್ಟದಲ್ಲಿ ದುಡಿಸತೊಡಗಿದರೂ ಅಚ್ಚರಿಯೇನಿಲ್ಲ. ವಿಚಿತ್ರವೆಂದರೆ ಇಲ್ಲಿಯೂ ಗೆಲ್ಲುವುದು ಕಂಪನಿಯೆ! ನ್ಯಾಯವಾಗಿ ಸಿಗಬೇಕಿದ್ದ ಸವಲತ್ತು ಸೌಲಭ್ಯಗಳಿಗೆ ಕತ್ತರಿ ಹಾಕಿ, ಆ ರೀತಿಯ ಮಾನಸಿಕ ಪರಿಸ್ಥಿತಿಗೆ ಸ್ವತಃ ತಾನೆ ಮೂಲ ಕಾರಣವಾಗಿದ್ದರು, ಅದರ ಪರಿಣಾಮವಾಗಿ ಉಂಟಾಗುವ ಧನಾತ್ಮಕತೆಯ ಫಲಿತವೆಲ್ಲ ಪ್ರಾಜೆಕ್ಟಿನ ಬಗಲಿಗೆ ಸೇರಿದರೆ, ಋಣಾತ್ಮಕತೆಯ ಹೊರೆ ಮಾತ್ರ ವ್ಯಕ್ತಿಯ ವೈಯಕ್ತಿಕ ಖಾತೆಗೆ ಸೇರಿಬಿಡುತ್ತದೆ..! ಪ್ರಾಜೆಕ್ಟಿನ ಯಶಸ್ಸೆ ತನ್ನನ್ನಲ್ಲಿಡಿಸಿರುವ ಮತ್ತು ಮುಂದುವರೆಸುವ ಮೂಲ ಕಾರಣವಾದ್ದರಿಂದ, ಕೇವಲ ವೈಯಕ್ತಿಕ ಹಿತಕ್ಕಾಗಿ ಅಥವಾ ತಮಗೆ ಅನ್ಯಾಯವಾಗುತ್ತಿದೆಯೆಂಬ ರೋಷದಿಂದಾಗಿ ಯಾರೂ ಪ್ರಾಜಿಕ್ಟಿನ ಹಿತಾಸಕ್ತಿಗೆ ಮಾರಕವಾಗುವಂತೆ ನಡೆಯುವುದಾಗಲಿ, ‘ಕಾಂಪ್ರೊಮೈಸ್’ ಮಾಡಿಕೊಳ್ಳಲಾಗಲಿ ಇಚ್ಚಿಸುವುದಿಲ್ಲ – ತೀರಾ ತಲೆ ಕೆಟ್ಟಿದ್ದರಷ್ಟೇ ಹೊರತು! ಯಾಕೆಂದರೆ ಅದು ತಮ್ಮ ಕಾಲಡಿಗೆ ಕುಸಿಯುವ ಮರಳನ್ನು ಸುರಿದುಕೊಂಡ ಹಾಗೆ ಲೆಕ್ಕ…

ಇದೆಲ್ಲವನ್ನು ಚೆನ್ನಾಗರಿತ ಶ್ರೀನಾಥನನ್ನು ಸಹ ಬಿಡದ ಅದೆ ಮಾನಸಿಕ ಸಾಂಗತ್ಯರಾಹಿತ್ಯತೆಯೆ ಕಾಡಿ, ದುರ್ಬಲನನ್ನಾಗಿಸಿ ಏನೆಲ್ಲಾ ಮಾಡಿಸುತ್ತಿದ್ದರು ಅದರ ಅಸೀಮ ಶಕ್ತಿಯೆದುರಿಗೆ ಹೋರಾಡಿ ಏಗಲಾಗದೆ ಸೋಲೊಪ್ಪಿಕೊಂಡು ಶರಣಾಗಿಬಿಟ್ಟಿದ್ದ – ವಿಧಿಯಲ್ಲಿ ಬರೆದಿಟ್ಟಂತಾಗಲಿ ಎಂದು. ಕುನ್.ಸು ಜತೆಗಿನ ಒಡನಾಟವೂ ಕೂಡ ಆ ದೌರ್ಬಲ್ಯವನ್ನು ಹತ್ತಿಕ್ಕಲಾಗದ ಅಸಹಾಯಕತೆಯ ಮೊತ್ತವೆ ಆಗಿದ್ದು, ಆ ಗಳಿಗೆಯ ದುಡುಕಿನ ಫಲಿತವಾಗಲು ಕಾರಣವೆಂದು ಗೊತ್ತಿದ್ದೂ ಅದನ್ನು ತಡೆಹಿಡಿಯಲಾಗದ ದೌರ್ಬಲ್ಯಕ್ಕೆ ಅಡಿಯಾಳಾಗಿಸಿದ್ದು. ಈಗ ಕುನ್. ಸೋವಿ ಮತ್ತು ಕುನ್. ಲಗ್ ಆ ವಿಷಯವೆತ್ತುತ್ತಿದ್ದ ಹಾಗೆ ಅದೆಲ್ಲೊ ಮನದ ಮೂಲೆಯಲಡಗಿದ್ದ ನೈತಿಕ ಪ್ರಜ್ಞೆಯನ್ನು ಪ್ರಚೋದಿಸಿ ಬಡಿದೆಬ್ಬಿಸಿದಂತಾಗಿ, ತಾನಲ್ಲಿ ಏಕಾಂಗಿಯೆಂಬ ನೆಪದಲ್ಲಿ ತಾನು ಮಾಡಿದ್ದೆಲ್ಲ ಸರಿಯೊ? ತಪ್ಪೊ? ಎಂಬ ಜಿಜ್ಞಾಸೆಯ ಗೊಂದಲದಲ್ಲಿ ಬಿದ್ದು, ತನಗೆ ತಾನೆ ಅಪರಿಚಿತನೆಂಬ ಭಾವ ಇದ್ದಕ್ಕಿದ್ದಂತೆ ಒಮ್ಮೆಗೆ ಮೂಡಿಬಂದು, ಎಲ್ಲೊ ಯಾವುದೊ ಅಪರಿಚಿತ ತಾಣದಲ್ಲಿ ತನ್ನರಿವಿಲ್ಲದೆ, ಮೊಟ್ಟ ಮೊದಲ ಬಾರಿಗೆ ಯಾರ್ಯಾರೋ ಅಪರಿಚಿತರ ನಡುವೆ ಬಂದು ಕೂತ ಹಾಗೆ ‘ಫೀಲಾಗ’ತೊಡಗಿದ. ಆ ಅನುಭೂತಿಯ್ಹುಟ್ಟಿಸಿದ ಚಡಪಡಿಕೆ, ಅಸಹನೆ ತಟ್ಟನೆ ದೂರದೂರಿನಲ್ಲಿದ್ದ ಹೆಂಡತಿ ಮಕ್ಕಳನ್ನು ಏಕಾಏಕಿ ನೆನಪಿಸಿ ಅವರಲ್ಲಿ ಹೇಗಿದ್ದಾರೋ, ಏನೋ ಎಂದು ಕಳವಳಿಸತೊಡಗಿದ್ದ – ತಾನವರನ್ನು ನಿನ್ನೆ ಮೊನ್ನೆ ತಾನೇ ಬಿಟ್ಟು ಬಂದಿರುವವನ ಹಾಗೆ!

ಆ ಅಂತರ್ಮಥನದ ಗೊಂದಲದ ಸ್ಥಿತಿಯಲ್ಲಿ ಇನ್ನು ಅದೆಷ್ಟು ಹೊತ್ತು ಕೂತಿರುತ್ತಿದ್ದನೊ ಶ್ರೀನಾಥ – ಕುನ್. ಸೋವಿ ಡ್ರಿಂಕ್ಸ್ ಸುರಿದ ರಭಸಕ್ಕೆ ಗ್ಲಾಸಿನ ಭಾರ ಹೆಚ್ಚಿ ಕೈಯನ್ನು ಕೆಳಗೆ ಜಗ್ಗಿದಂತಾಗದಿದ್ದಿದ್ದರೆ. ಆ ಪ್ರಕ್ರಿಯೆಯಿಂದ ತನ್ನ ಯೋಚನಾಲಹರಿಯ ಮೌನದ ಹರವಿನಿಂದ, ಮಾತುಕತೆ ಗದ್ದಲ ತುಂಬಿದ ವಾಸ್ತವ ಲೋಕಕ್ಕೆ ತಟ್ಟನೆ ವಾಪಸ್ಸು ಬಂದ ಶ್ರೀನಾಥ, ‘ಛೆ! ಇದೇನಿದು? ಕುಡಿತ ಹೆಚ್ಚಾದಂತಿದೆ ? ಏನೇನೊ ಅಸಂಬದ್ಧವೆಲ್ಲ ಅನಿಸುತ್ತಾ ಎಲ್ಲೆಲ್ಲೊ ಎಳೆದುಕೊಂಡು ಹೋಗುತ್ತಾ ಇದೆಯಲ್ಲ?’ ಎಂದು ಭಾರವಾದಂತಿದ್ದ ತಲೆ ಹಗುರವಾಗಿಸುವವನಂತೆ ಮೆಲುವಾಗಿ ಒದರಿಕೊಳ್ಳುತ್ತಿದ್ದ ಹೊತ್ತಿನಲ್ಲಿ ಇದ್ದಕ್ಕಿದ್ದಂತೆ ಮುಂದೊಡ್ಡಿದ್ದ ಕುನ್. ಲಗ್ ರ ಕೈ ಕಣ್ಮುಂದೆ ಕಾಣಿಸಿಕೊಂಡಿತ್ತು. ಅದೇನೆಂದು ಮಂಜು ಕವಿದಂತಿದ್ದ ಕಣ್ಣುಗಳನ್ನು ತುಸು ಆಳವಾಗಿ ತೆರೆದು ನೋಡಿದರೆ, ಅವನು ಅದುವರೆಗೂ ನೋಡದಿದ್ದ ಅಷ್ಟು ದಪ್ಪ, ಅಷ್ಟು ಉದ್ದದ ಗಾತ್ರದ ‘ಹುಕ್ಕಾ!’ ಒಂದನ್ನು ಅವರ ತುಟಿಗಿಟ್ಟುಕೊಂಡು ಮತ್ತೊಂದನ್ನು ಬೆರಳುಗಳ ನಡುವೆ ಹಿಡಿದು ಶ್ರೀನಾಥನತ್ತ ‘ತೆಗೆದುಕೊ..’ ಎನ್ನುವಂತೆ ಚಾಚಿದ್ದರು… ಕೈಯಲ್ಲಿ ಅದರ ಕಟ್ಟೊಂದನ್ನು ಹಿಡಿದಿದ್ದ ಕುನ್. ಸೋವಿ ಆಗಲೆ ಒಂದನ್ನು ತುಟಿಯಲ್ಲಿ ಹಚ್ಚಿಕೊಂಡು ಶ್ರೀನಾಥನನ್ನೇ ನೋಡುತ್ತಿದ್ದ ತುಂಟತನದ ನಗೆ ನಗುತ್ತ – ಶ್ರೀನಾಥ ಸಿಗರೇಟು ಸೇದದ ವಿಷಯ ಗೊತ್ತಿದ್ದ ಕಾರಣ!

(ಇನ್ನೂ ಇದೆ)
__________________

( ಪರಿಭ್ರಮಣ..42ರ ಕೊಂಡಿ – https://nageshamysore.wordpress.com/00238-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-42/ )

ಅವರೋಹಣ, ಆಕ್ರಮಣ, ಅಧಃಪತನ, ಆರೋಹಣ, ಪರಿಭ್ರಮಣ, ನಾಗೇಶ ಮೈಸೂರು, ನಾಗೇಶಮೈಸೂರು, ನಾಗೇಶ, nageshamysore, Nagesha Mysore, nagesha

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s