00239. ಕಥೆ: ಪರಿಭ್ರಮಣ..(42)

00239. ಕಥೆ: ಪರಿಭ್ರಮಣ..(42)

……….ಏಕಾಂಗಿತನ ಮುತ್ತಲು, ಮನಸೆ ಬೆತ್ತಲು…!
_______________________________________________________________________________
ಅವರೋಹಣ…ಆಕ್ರಮಣ…ಅಧಃಪತನ…ಆರೋಹಣ…ಮನಸೆನ್ನುವ ಚಾರಣ, ಈ ಬದುಕಿನ ಹೂರಣ!
_______________________________________________________________________________

00239. ಕಥೆ: ಪರಿಭ್ರಮಣ..(42)

( ಪರಿಭ್ರಮಣ..41ರ ಕೊಂಡಿ – https://nageshamysore.wordpress.com/00237-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-41/ )

‘ಸಾರಿ ಕುನ್.ಲಗ್, ನಾನು ಧೂಮಪಾನ ಮಾಡುವುದಿಲ್ಲ..ನನಗೆ ಅದರ ಅಭ್ಯಾಸವಿಲ್ಲ..’ ಎಂದು ನಯವಾಗಿಯೆ ನಿರಾಕರಿಸುತ್ತ ನುಡಿದಿದ್ದ ಶ್ರೀನಾಥನನ್ನು ಮತ್ತೆ ನಗುವ ದನಿಯಲ್ಲೆ ಒತ್ತಾಯಿಸುತ್ತ, ‘ನಾನೂ ಕೂಡ ಸಿಗರೇಟು ಸೇದುವುದಿಲ್ಲ.. ಈ ವಿಶೇಷ ಸಂದರ್ಭದಲ್ಲಿ ಸುಮ್ಮನೆ ನೆನಪಿಗೆ ಮತ್ತು ಅನುಭವಕ್ಕಿರಲೆಂದು ಒಂದೆ ಒಂದನ್ನು ಸೇದುತ್ತಿದ್ದೇನೆ ಅಷ್ಟೆ..ಅದರಲ್ಲೂ ಇದು ಸಿಗರೇಟಲ್ಲ … ವಿಶೇಷವಾಗಿ ಮಾಡಿದ ಸ್ಥಳೀಯ ಹುಕ್ಕ, ಇಲ್ಲಿನ ಲೋಕಲ್ ಸ್ಪೆಷಲ್.. ಅಟ್ ಲೀಸ್ಟ್ ಟ್ರೈ ಒನ್ಸ್..’

ಕುಡಿದ ತೇಲುವ ಮತ್ತಿಗೊ, ಯಾಕೊಮ್ಮೆ ಸೇದಿ ನೋಡಬಾರದೆಂಬ ಕುತೂಹಲಕ್ಕೊ, ಅವರು ಅಷ್ಟು ಕೇಳುವಾಗ ಹೇಗೆ ನಿರಾಕರಿಸುವುದೆಂಬ ಸಂಕೋಚಕ್ಕೊ – ಒಟ್ಟಾರೆ ಒಂದು ಹುಕ್ಕಾ ಸೇದಿದ್ದೂ ಆಗಿ ಹೋಗಲಿ, ಒಂದು ಕೈ ನೋಡಿಯೆಬಿಡುವ ಎನ್ನುವ ಅನಿಸಿಕೆಯಲ್ಲಿ ಕೈಗೆತ್ತಿಕೊಂಡ ಶ್ರೀನಾಥ. ಕುನ್. ಸೋವಿ ಅವಾಕ್ಕಾಗಿ ನೋಡುತ್ತಲೆ ತನ್ನ ಲೈಟರಿನ ದೀಪದಿಂದ ಅದನ್ನು ಹಚ್ಚುತ್ತಿದ್ದ ಹಾಗೆ, ಪ್ರಖರ ಕಿಡಿಯಾಗಿ ಪೂರ್ತಿ ಹತ್ತಿಕೊಳಲೆ ತುಸು ಹೊತ್ತು ಹಿಡಿದಾಗ, ಅರೆಗಳಿಗೆಯ ಮಟ್ಟಿಗೆ ಹತ್ತಿಕೊಳ್ಳುತ್ತಲೆ ಆರಿಹೋಗುವ ಬೀಡಿಯನ್ನು ನೆನಪಿಸಿತ್ತು ಶ್ರೀನಾಥನಿಗೆ. ಕೊನೆಗೂ ಪೂರ್ತಿ ಹತ್ತಿಕೊಂಡಾಗ ಉರಿಯುವ ಸೂರ್ಯನಂತೆ ಪ್ರಖರ ಕೆಂಡದ ಪ್ರಕಾಶ ಹೊರಚೆಲ್ಲುತ್ತ ಬೆಳಗುತ್ತಿದ್ದ ಆ ದಢಿಯ ಹುಕ್ಕವನ್ನು ಬೆರಳುಗಳ ನಡುವಲ್ಲಿ ಹಿಡಿದುಕೊಳ್ಳುವುದೆ ಕಷ್ಟವಾದರೂ, ಹೇಗೊ ಸಾವರಿಸಿಕೊಂಡು ತುಟಿಯತ್ತ ಒಯ್ದು ಅರೆಬರೆ ಮನಸಲ್ಲೆ ಒಂದು ‘ಧಂ’ ಎಳೆಯುತ್ತಿದ್ದಂತೆ ಆ ಹುಕ್ಕಾದ ವಿಶೇಷ ವಾಸನೆಯ ಜತೆ ಹೊರಹೊಮ್ಮಿದ ಗಾಡವಾದ ವಾಸನಾಯುಕ್ತ ಹೊಗೆಯಲೆ ಜುಮ್ಮೆನಿಸಿ ಬಾಯಿಯ ಒಳಗೆಲ್ಲ ವ್ಯಾಪಿಸಿದಂತಾಗಿ, ಗಂಟಲಿನ ಪೊಟರೆಯತ್ತ ಮುನ್ನುಗ್ಗಿ ಒಳಗಿಳಿದು ನೇರ ಶ್ವಾಸಕೋಶದ ಕದಗಳನ್ನು ತಟ್ಟಿದಂತಾಗಿ ತಲೆಯೆಲ್ಲ ‘ಜುಂ’ ಅನಿಸಿದ ಅನುಭೂತಿಯಲ್ಲೆ ಅವಾಕ್ಕಾಗಿಸಿ ಕಣ್ಮುಚ್ಚಿ ಮುಚ್ಚಿ ತೆರೆಯುವಂತಾಗಿತ್ತು. ಅವನ ಜನ್ಮದಲ್ಲೆ ಬೀಡಿ ಸಿಗರೇಟು ಸೇದದಿದ್ದವ ನೇರ ಹುಕ್ಕಾಗೆ ಕೈ ಹಾಕಿ ಯಾವುದೊ ಅನಾಹತ ಲೋಕದಲ್ಲಿ ತೇಲಿದವನಂತೆ ಫೀಲಾಗುತ್ತಿದ್ದವನನ್ನು ಕಂಡು ಕುನ್. ಸೋವಿ ಬಿದ್ದು ಬಿದ್ದು ನಗುತ್ತಿದ್ದ. ಸದ್ದಾಗುವಂತಿರದಿದ್ದರೂ, ಮುಗುಳ್ನಗುತ್ತಲೆ ಅವನತ್ತ ನೋಡುತ್ತಿದ್ದ ಕುನ್. ಲಗ್ ಅವನನ್ನು ಉತ್ತೇಜಿಸುವವರಂತೆ ತಾವೂ ಆಳವಾಗಿ ‘ಧಂ’ ಎಳೆಯುತ್ತ, ‘ಮೊದಲ ಸಾರಿ ಹಾಗಾಗುತ್ತೆ.. ಪ್ರೋಸೀಡ್’ ಎನ್ನುತ್ತಿದ್ದಂತೆ, ‘ ಅರೆ , ತಾನೇನು ಕುನ್. ಸೋವಿಗಿಂತ ಕಡಿಮೆಯೇನಲ್ಲವಲ್ಲ ?’ ಅನಿಸಿ ಹಠಕ್ಕೆ ಬಿದ್ದವನಂತೆ ಹುಕ್ಕಾ ಸೇದತೊಡಗಿದ. ಒಂದೆರಡು ಬಾರಿ ‘ಧಂ’ ಎಳೆದ ಮೇಲೆ ಆ ಸೇದುವಿಕೆಯು, ಹುಕ್ಕದ ವಿಭಿನ್ನ ಹಸಿ ವಾಸನೆಯ ಜತೆ ಸೇರಿಕೊಂಡು ಗಂಟಲು, ಮೂಗು, ಬಾಯಿನಂಗಳವೆಲ್ಲ ವ್ಯಾಪಿಸಿ ಒಂದು ವಿಧದ ಹಿತವಾದ ಅನುಭವ ಕೊಡುತ್ತಿದೆಯೆಂದನಿಸಿ, ಆ ಆಸ್ವಾದನೆಯ ತಲ್ಲೀನತೆಯಲ್ಲೆ ತಲೆಯನ್ನು ಮೇಲೆತ್ತಿ ತೇಲುಗಣ್ಣಾಗಿಸಿ ಕಣ್ಮುಚ್ಚಿಕೊಂಡಿದ್ದ. ಆ ಹಿತಾನುಭೂತಿಯನ್ನು ಅನುಭವಿಸುತ್ತಲೆ ಕಣ್ಮುಚ್ಚಿಕೊಂಡು ಹುಕ್ಕಾ ಎಳೆಯತೊಡಗಿದ್ದವನ ಮನದಲ್ಲಿ ಯಾಕೊ ಆ ಹೊತ್ತಿನಲ್ಲೂ ಶಿಶುನಾಳ ಶರೀಫರ ‘ಗುಡುಗುಡಿಯ ಸೇದಿರಣ್ಣ’ ಹಾಡು ನೆನಪಾಗಿ ತುಟಿಯಂಚಲ್ಲಿ ಆಯಾಚಿತ ಮುಗುಳ್ನಗೆಯೊಂದು ತಾನಾಗೆ ಉದಿಸಿತ್ತು. ಅದನ್ನು ನೋಡಿ ಹುಕ್ಕಾ ಎಳೆದ ಮತ್ತಿನ ಖುಷಿಗೆ ಆನಂದದಿಂದ ತನ್ನಲ್ಲಿ ತಾನೇ ನಗುತ್ತಿರುವನೆಂದು ಭಾವಿಸಿ, ತಾವೂ ಮೆಲುವಾಗಿ ನಕ್ಕು ಕುನ್. ಸೋವಿಯತ್ತ ನೋಡಿ ಕಣ್ಣು ಮಿಟುಕಿಸಿದ್ದರು ಕುನ್. ಲಗ್!

ಆ ಗದ್ದಲ, ಮೋಡಿ ತುಂಬಿದ್ದ ಮತ್ತೇರಿಸುವ ವಾತಾವರಣದಲ್ಲಿ ಯಾರು ಕೇಳುತ್ತಿದ್ದರೊ, ಬಿಡುತ್ತಿದ್ದರೊ – ವೇದಿಕೆಯಲ್ಲಿದ್ದ ಗಾಯಕರು ಮಾತ್ರ ಏನನ್ನೋ ಹಾಡುತ್ತಲೆ ಇದ್ದರು. ಅವರನ್ನೇ ಅರೆಕ್ಷಣ ದಿಟ್ಟಿಸಿ ನೋಡಿದವನಿಗೆ ಇದ್ದಕ್ಕಿದ್ದಂತೆ ತನ್ನ ಗುಂಪಿನ ಮಿಕ್ಕವರೆಲ್ಲ ಎಲ್ಲಿ? ಎಂಬ ಅನುಮಾನವುದ್ಭವಿಸಿ ಆ ಮಂಕು ಬೆಳಕಿನ ಅರೆ ಮಬ್ಬಲ್ಲೆ ಸುತ್ತಲು ಕಣ್ಣಾಡಿಸಿದರೆ, ದೂರದ ಒಂದೆರಡು ಗುಂಪುಗಳ ಜತೆ ಕೂಡಿಕೊಂಡು ನಿಂತಿದ್ದ ಸೌರಭ್, ರಾಮಮೂರ್ತಿ, ಶರ್ಮರೆಲ್ಲ ಕಣ್ಣಿಗೆ ಬಿದ್ದಾಗ ಅವರ ಕುರಿತು ಚಿಂತಿಸುವ ಅಗತ್ಯವಿಲ್ಲವೆನಿಸಿ ಮತ್ತೆ ತನ್ನ ಗಮನವನ್ನು ತಾನಿದ್ದ ಗುಂಪಿಗೆ ತಿರುಗಿಸಿದ್ದ. ಸಮಯ ಕಳೆದಂತೆ ಎಲ್ಲರ ನಡುವಿದ್ದ ಸಹೋದ್ಯೋಗಿ ಸಂಬಂಧದ ತೆಳು ಪಾರದರ್ಶಕ ತೆರೆ ಕಳಚಿ ಹೋಗಿತ್ತಲ್ಲದೆ, ಒಳಗಿಳಿದಿದ್ದ ‘ಪರಮಾತ್ಮ’ನ ಪರಾಕ್ರಮದ ದೆಸೆಯಿಂದಾಗಿ ತುಸು ಅಗತ್ಯಕ್ಕಿಂತ ಹೆಚ್ಚೇ ಸ್ವಂತ ವ್ಯಕ್ತಿತ್ವದ ನಿಜವಾದ ಅನಾವರಣವಾಗುತ್ತ ಹೋಗಿ, ಅಂದಿನವರೆಗೂ ಇರದಿದ್ದ ಆತ್ಮೀಯತೆಯ ಹೊಸ ತಾತ್ಕಾಲಿಕ ಭಾವವೊಂದು ಒಡಮೂಡಿಕೊಂಡಿತ್ತು ಪರಸ್ಪರರಲ್ಲಿ. ಹೀಗೆ ನಡೆದುಕೊಂಡಿದ್ದ ಮಾತುಕತೆಯಲ್ಲಿ ಕೊನೆಗೆ ಯಾರು, ಯಾವ ವಿಷಯದ ಕುರಿತು ಏನು ಹೇಳುತ್ತಿದ್ದಾರೊ ಎನ್ನುವ ನೈಜ ಪರಿಗಣನೆ ಹಾಗು ಪರಿವೆಯಿಲ್ಲದ ಹಾಗೆ ಸಾಗುತ್ತ, ಯಾರ್ಯಾರ ಮೇಲೊ ಲಘು ಲಹರಿಯಲ್ಲಿ ಪರಸ್ಪರ ಜೋಕ್ ಮಾಡಿಕೊಳ್ಳುತ್ತ, ನಗುತ್ತ ಕಾಲ ಉರುಳಿದ್ದೆ ಗೊತ್ತಾಗಿರಲಿಲ್ಲ. ಅಷ್ಟು ಹೊತ್ತಿನ ಒಡನಾಟದಿಂದ ಮೊದಲಿಗೆ ತುಸು ಆಯಾಸಗೊಂಡವರಂತೆ ಕಂಡವರೆಂದರೆ ಕುನ್. ಲಗ್. ಆ ಹೊತ್ತಲ್ಲೆ ಅವರು ಇದ್ದಕಿದ್ದಂತೆ ತಟ್ಟನೆ ಗಡಿಯಾರದತ್ತ ನೋಡಿ ಆಗಲೇ ಹನ್ನೆರಡು ದಾಟಿದ್ದನ್ನು ಗಮನಿಸಿ ತಾವಿನ್ನು ಹೆಚ್ಚು ನಿದ್ದೆಗೆಡಲಾಗದೆಂದು ಹೇಳುತ್ತ ಹೊರಡುವ ಸೂಚನೆ ನೀಡಿದರು. ಆ ಹೊತ್ತಿಗಿನ್ನು ಭಯಂಕರ ‘ಸುರಾಪಾನದ ಜೂಮಿನಲ್ಲೆ’ ಇದ್ದ ಕುನ್. ಸೋವಿ, ಅಷ್ಟು ಬೇಗ ಷೋ ಮುಗಿಸಲಿಷ್ಟವಿಲ್ಲದೆ, ತಾನು ಮಿಕ್ಕವರ ಜತೆಯೂ ಮಾತನಾಡಿಕೊಂಡು ಕೊಂಚ ಸಮಯ ಕಳೆಯುವುದಾಗಿ ಹೇಳಿ ಜಾಗ ಖಾಲಿ ಮಾಡಿದ್ದ. ಇನ್ನು ಅಲ್ಲಿ ಮಿಕ್ಕುಳಿದವರು ಕುನ್.ಲಗ್ ಮತ್ತು ಶ್ರೀನಾಥರಿಬ್ಬರೆ. ಒಂದೈದು ನಿಮಿಷದ ನಂತರ ಕಣ್ಸನ್ನೆಯಲ್ಲೆ ಶ್ರೀನಾಥನತ್ತ ‘ಇನ್ನು ಹೊರಡಲೇ?’ ಎಂದು ಸಂಕೇತಿಸುವಷ್ಟು ಹೊತ್ತಿಗೆ ಶ್ರೀನಾಥ ಸಹ, ‘ನನಗೂ ನಿದ್ದೆ ಬರುವಂತಾಗುತ್ತಿದೆ..ನಾನು ಹೊರಡುತ್ತೇನೆ.. ಹೋಗುವ ಮೊದಲು ಯಾಕೋ ಸ್ವಲ್ಪ ಕಾಫಿ ಕುಡಿಯಬೇಕೆನಿಸುತ್ತಿದೆ..’ ಎಂದಿದ್ದ. ಅವನ ಭಾರವಾದ ಮಾತಿನಿಂದಲೆ ಅವನೂ ಸಾಕಷ್ಟು ಕುಡಿತದ ಮತ್ತಿನಲ್ಲಿ ಸಿಲುಕಿಕೊಂಡಿರುವುದನ್ನು ಧಾರಾಳವಾಗಿ ಗುರ್ತಿಸಬಹುದಿತ್ತು. ತೂರಾಡುವುದು ಗೊತ್ತಾಗದಿರಲೆಂದು ಕೂತುಕೊಂಡಿರದಿದ್ದರೆ, ಪ್ರಾಯಶಃ ನಿಂತ ಜಾಗದಲ್ಲೆ ಲೋಲಕದ ಹಾಗೆ ಆಚೀಚೆ ತೂಗುತ್ತಲೆ ನಿಂತಿರುತ್ತಿದ್ದನೊ ಏನೊ – ಲೋಲಕದಂತೆ ಸಮಾನಾವಧಿಯ ಆವರ್ತಗಳಲ್ಲಿ!

ಆ ಸ್ಥಿತಿಯಲ್ಲೂ ಕಾಫಿಯಿದ್ದರೆ ಚೆನ್ನಿತ್ತೆಂಬ ಅವನ ಕೊನೆಯ ಮಾತನ್ನು ಕೇಳುತ್ತಿದ್ದಂತೆ ತೂರಾಡಿಕೊಂಡೆ ಜೋರಾಗಿ ನಗತೊಡಗಿದ ಕುನ್. ಲಗ್, ‘ಇಷ್ಟೆಲ್ಲ ಕುಡಿದು ಆಗಿಯೂ ಮಲಗುವ ಮುನ್ನ ಕಾಫಿಯೆ? ಇಂಟರೆಸ್ಟಿಂಗ್’ ಅಂದಿದ್ದರು ಕೊಂಚ ತೇಲಿದ ದನಿಯಲ್ಲಿ. ಆ ತೇಲುವಿಕೆಯಲ್ಲಿ ದನಿಯ ತಡವರಿಕೆಯನ್ನು ಕಾಣಿಸಿಕೊಳ್ಳದಂತೆ ಬಚ್ಚಿಡುವ ಹವಣಿಕೆ ಸ್ಪಷ್ಟವಾಗಿಯಲ್ಲದಿದ್ದರೂ, ಬಲು ಸೂಕ್ಷ್ಮವಾಗಿ ಗಮನಿಸಿದರೆ ಕಾಣಿಸುತ್ತಿತ್ತು.

‘ಈಗ ಹೊಟ್ಟೆಗೆ ತುಂಬಿಸಿಕೊಂಡಿರುವ ಡ್ರಿಂಕ್ಸ್ ಲೆಕ್ಕ ಹಾಕಿದರೆ, ಎಷ್ಟು ಕಾಫಿ ಕುಡಿದರೂ ಹೊಸದಾಗೇನು ಎಫೆಕ್ಟ್ ಆಗುವುದಿಲ್ಲ.. ಈಗಾಗಲೇ ಪೀಕ್ ಎಫೆಕ್ಟ್ ತಲುಪಿಯಾಗಿದೆ.. ಹೀಗಾಗಿ ಕಾಫಿ ಕುಡಿದರೂ ನಿದ್ದೆ ಮಾತ್ರ ಖಂಡಿತಾ ಬರುತ್ತದೆ. ಈ ಕುಡಿತಕ್ಕೂ ಆ ಕುಡಿತಕ್ಕು ಹೊಂದಾಣಿಕೆ, ಹೋಲಿಕೆಯಿರದ ವಿಚಿತ್ರ ಸಂಬಂಧ ಎನ್ನುವುದು ನಿಜವಾದರೂ, ಯಾಕೊ ಗೊತ್ತಿಲ್ಲ – ಈ ಹೊತ್ತಲ್ಲಿ ಕಾಫಿಯನ್ನು ಕುಡಿಯಲೇ ಬೇಕೆನಿಸುತ್ತಿದೆ..ಬಹುಶಃ ಹುಕ್ಕಾ ಸೇದಿದ ಪರಿಣಾಮವೊ ಏನೋ ಗೊತ್ತಿಲ್ಲ – ಕುಡಿಯಬೇಕೆನ್ನುವ ಅದಮ್ಯ ಚಪಲವನ್ನು ತಡೆದುಕೊಳ್ಳಲಾಗುತ್ತಿಲ್ಲ.. ಅದರಲ್ಲೂ ಕುನ್. ಸು ಇದ್ದಾಗ ಆಫೀಸಿನಲ್ಲಿ ದಿನವೂ ಅವಳು ಮಾಡಿಕೊಡುತ್ತಿದ್ದ ಕಾಫಿ ಕುಡಿದು ಕುಡಿದು ಅಭ್ಯಾಸ… ಈಚೆಗೆ ಅವಳು ಇದ್ದಕ್ಕಿದ್ದಂತೆ ಕೆಲಸದಿಂದ ಮಾಯವಾದ ಮೇಲೆ ಸರಿಯಾದ ಕಾಫಿ ಕುಡಿಯಲು ಶಕ್ಯವಾಗದೆ ಅದನ್ನು ತುಂಬಾ ಮಿಸ್ ಮಾಡಿಕೊಳ್ಳುವಂತಾಗಿಬಿಟ್ಟಿದೆ.. ‘ ಎಂದಿದ್ದ ಶ್ರೀನಾಥ ಕುನ್. ಸು ನೆನಪು ತರಿಸಿದ ಅವ್ಯಕ್ತ ಯಾತನೆಗುಂಟಾದ ಖೇದಕ್ಕೆ ಪೆಚ್ಚಾಗಿ ನಗುತ್ತ. ಯಾಕೊ ಆ ಮತ್ತೇರಿದ ಗಳಿಗೆಯಲ್ಲಿ ಅವಳ ನೆನಪು ಮತ್ತೆ ಮನ ಕದಡಿ ಗಾಢವಾಗಿ ಕಾಡಿದಂತಾಗಿ ಮಾತಿನ ಅಸ್ಪಷ್ಟ ತೊದಲಿನಂತೆ ಎಲ್ಲವೂ ಕಹಿಯಾದಂತೆ ಭಾಸವಾಗತೊಡಗಿತ್ತು. ‘ಛೆ! ಅವಳು ಕೆಲಸ ಕಳೆದುಕೊಂಡಿರದಿದ್ದರೆ ಇಲ್ಲೆಲ್ಲಾ ಎಷ್ಟು ಖುಷಿಯಿಂದ ಕಳೆಕಳೆಯಾಗಿ ಗಲಗಲನೆ ಓಡಾಡಿಕೊಂಡಿರುತ್ತಿದ್ದಳು? ತಾನೀಗ ಕಾಫಿಗಾಗಿ ಹಂಬಲಿಸುವ, ದುಂಬಾಲು ಬೀಳುವ ಅಗತ್ಯವೆ ಇರದಂತೆ ಅದೆಷ್ಟು ಬಾರಿ ತಂದಿಟ್ಟಿರುತ್ತಿದ್ದಳೊ ಕಾಫಿಯನ್ನು – ತಾನು ಬಾಯ್ಬಿಟ್ಟು ಕೇಳುವ ಮೊದಲೆ!

‘ಅವಳು ಮಾಡಿಕೊಡುತ್ತಿದ್ದ ಕಾಫಿಗಿಂತ ಅವಳೇ ಹೆಚ್ಚು ಚೆನ್ನಾಗಿದ್ದಳು ಅಲ್ಲವಾ?’ ತುಂಟ ನಗುವಿನೊಂದಿಗೆ ಹುಬ್ಬು ಹಾರಿಸುತ್ತ ತೊದಲಿದ್ದ ಕುನ್. ಲಗ್ ರತ್ತ ನೋಡಿ ಬೆಚ್ಚಿ ಬಿದ್ದವನಂತೆ ಅದುರಿಬಿದ್ದ ಶ್ರೀನಾಥ ತನ್ನ ಕುನ್. ಸು ಚಿಂತನಾ ಪ್ರಪಂಚದಿಂದ ಹೊರಬಂದು. ‘ತಮ್ಮ ಸೂಕ್ಷ್ಮ ಒಡನಾಟದ ಸುಳಿವು ಇವರಿಗೇನು ಸಿಕ್ಕಿರಲಿಕ್ಕಿಲ್ಲ ತಾನೇ? ಅದೇನು ತನ್ನನ್ನು ತಮಾಷೆಗೆ ಛೇಡಿಸಲು ಹೇಳಿದ್ದೊ ಅಥವಾ ಅವಳ ಕುರಿತಾದ ಸರ್ವರಲ್ಲಿರುವಂತಹದ್ದೆ ಸಾಧಾರಣ ತುಂಟು ಅಭಿಪ್ರಾಯವೊ ?’ ಎಂದಳೆಯುವವನಂತೆ ಅವರ ಮುಖ ನೋಡಿದ್ದ. ಅಲ್ಲಿ ತುಂಟತನದ ಛಾಯೆ ಬಿಟ್ಟರೆ ಮತ್ತೇನೂ ಕುರುಹು ಕಾಣದೆ ಮತ್ತಷ್ಟು ಗೊಂದಲ ಮೂಡಿಸಿದ್ದರೂ ಸದಾ ಕ್ಯಾಬಿನ್ನಿನ ಒಳಗೆ ಕೂರುವ ಅವರ ಕಣ್ಣಿಗಂತಹ ಸೂಕ್ಷ್ಮಗಳು ಕಂಡಿರಲಾರದೆಂದು ಸಮಾಧಾನಿಸಿಕೊಳ್ಳುತ್ತ ಇರುವಾಗಲೆ, ಕಣ್ಣಿಗೆ ಕಂಡಿರದಿದ್ದರೂ ಕಿವಿಗೆ ಬಿದ್ದಿರಬಹುದಲ್ಲ ಎನ್ನುವ ತರ್ಕವೂ ಹಿಂದೆಯೆ ಆತಂಕ ಮೂಡಿಸಿತ್ತು. ಅದೇನೆ ಇದ್ದರೂ ಅಂತಹ ದೊಡ್ಡ ಸಂಸ್ಥೆಯ ಆ ಉನ್ನತ ಸ್ಥಾನದ ವ್ಯಕ್ತಿ ತನ್ನ ಜತೆ ಸರಳವಾಗಿ ಬೆರೆಯುವುದರ ಹಿಂದಿನ ಸೌಜನ್ಯ, ಸಜ್ಜನಿಕೆಗೆ ಬೆರಗಾಗುತ್ತ ತಾನೂ ಹೊರಡಲೆಂದು ಮೇಲೇಳುವ ಹೊತ್ತಿಗೆ ಸರಿಯಾಗಿ – ಅದ್ಯಾವ ಮಾಯದಲ್ಲಿ ಆರ್ಡರ ಮಾಡಿದ್ದರೋ, ಅಲ್ಲಿನ ಸಿಬ್ಬಂದಿಯೊಬ್ಬ, ನಡೆದು ಹೋಗುವಾಗ ಜತೆಗೆ ಕೊಂಡೊಯ್ಯಲನುಕೂಲವಾಗುವ ಹಾಗೆ, ಪ್ಲಾಸ್ಟಿಕ್ ಮುಚ್ಚಳವಿದ್ದ ಪೇಪರ್ ಕಪ್ಪುಗಳಲ್ಲಿ ಹಾಕಿದ್ದ ಕಾಫಿ ಲೋಟಗಳನ್ನೆತ್ತಿಕೊಂಡು ಅವರ ಮುಂದೆ ಪ್ರತ್ಯಕ್ಷನಾಗಿದ್ದ. ಇಬ್ಬರೂ ಒಂದೊಂದು ಕಪ್ ಕೈಗೆತ್ತಿಕೊಂಡು ತುಸುವಾಗಿ ಬಿಸಿಯ ದ್ರವವನ್ನು ಹೀರುತ್ತಲೆ, ತಾವಿರುವ ರೂಮಿನತ್ತ ನಡೆಯತೊಡಗಿದ್ದರು. ಇಬ್ಬರೂ ಒಂದೆ ವಿಲ್ಲಾದ ಎದುರು ಬದುರು ಕೋಣೆಗಳಲ್ಲೆ ಇದ್ದರು ಸಹ ಹೊರಗಿನಿಂದ ಎರಡು ಕೋಣೆಗೂ ಪ್ರತ್ಯೇಕವಾಗಿ ಹೋಗಲು ಸಾಧ್ಯವಿರುವಂತೆ ವಿನ್ಯಾಸವಿದ್ದ ಕಾರಣ, ಎರಡಕ್ಕೂ ಬೇರೆಯದೇ ಆದ ಕೀಲಿ ಕೈ ಕೊಟ್ಟಿದ್ದರು. ಆ ಅಮಲಿನಲ್ಲೂ ತನ್ನ ಕೀಲಿ ಕೈ ಪ್ಯಾಂಟಿನ ಜೇಬಿನಲ್ಲಿ ಭದ್ರವಾಗಿದೆಯೆ? ಎಂದು ಹಸ್ತದಿಂದ ಮುಟ್ಟಿ ನೋಡಿಕೊಳ್ಳುತ್ತಲೆ ಕುನ್. ಲಗ್ ಜತೆ ನಡೆದವನಿಗೆ, ಹಾಗೆ ನಡೆಯುವ ಹಾದಿಯ ಮೆಲುವಾದ ತಂಗಾಳಿ ಮೈ ಸೋಕಿ, ಮೃದುವಾಗಿ ನೇವರಿಸಿ ಕಚಗುಳಿಯಿಟ್ಟಂತಾಗಿ ಆ ಪಲುಕಿಗೆ ಸಂವಾದಿಯಾಗಿ ಹೀರಲು ಕೈಲಿರುವ ಕಾಫಿ ನಿಜಕ್ಕೂ ಸ್ವರ್ಗ ಸಮಾನವೆಂದೆನಿಸುತ್ತಿರುವಾಗ, ತನಗರಿವಿರದಂತೆಲೆ ತಾನು ಚಿಕ್ಕಂದಿನಲ್ಲಿ ನೋಡಿದ್ದ ಮಾಸ್ತರ ಹಿರಣ್ಣಯ್ಯನವರ ನಾಟಕದ ‘ಸುಖವೀವ ಸುರಾ ಪಾನವಿದು ಸ್ವರ್ಗಸಮಾನ …’ ಹಾಡಿನ ಸಾಲು ತುಟಿಯಲ್ಲಿ ಸುಳಿದು ಗುನುಗತೊಡಗಿದಾಗ, ಅದು ಆ ಹೊತ್ತಿನ ಸಂಧರ್ಭದಲ್ಲಿ ತುಸು ಅಸಂಗತವೆನಿಸಿದರು, ಹಿತಕರವೆನಿಸಿ ಉಲ್ಲಸಿತನಾಗುತ್ತ ನಡೆದಿರುವ ಹೊತ್ತಿನಲ್ಲೆ – ‘ಅರೆರೆ.. ಕುನ್. ಸು ಯಾಕೆ ಕೆಲಸ ಕಳೆದುಕೊಂಡಳೆಂದು ಕುನ್.ಲಗ್ ರಿಗೆ ಚೆನ್ನಾಗಿ ಗೊತ್ತಿರಬೇಕಲ್ಲ? ಬಹುಶಃ ಈ ಸಮಯದಲ್ಲಿ ಸೂಕ್ಷ್ಮವಾಗಿ ಕೇಳಿದರೆ ಹೇಳದೆ ಇರಲಾರರು’ ಎನಿಸಿ, ನೇರವಾಗಿ ತಕ್ಷಣವೆ ಕೇಳಲು ಧೈರ್ಯ ಸಾಲದೆ ತುಸು ಪೀಠಿಕೆಯನ್ನು ಹಾಕಿ ನಂತರ ವಿಷಯವನ್ನೆತ್ತಬೇಕೆಂದು ನಿರ್ಧರಿಸಿ ಆ ಪ್ರವಾಸದ ಮಿಕ್ಕ ವಿವರಗಳನ್ನು ಕುರಿತಾದ ಪ್ರಶ್ನೆ ಕೇಳಿದ್ದ..

‘ಕುನ್. ಲಗ್, ನಾಳೆ ವಾಪಸ್ಸು ಹೋಗಲು ಕಡೆಯ ದಿನವಲ್ಲವೇ? ಮೂರು ದಿನ ಕಳೆದು ಹೋಗಿದ್ದೆ ಗೊತ್ತಾಗಲಿಲ್ಲ..ವಾಟ್ ಏ ವಂಡರ್ಪುಲ್ ಎಕ್ಸ್ಕರ್ಷನ್!? ನಾಳೆಯ ಪ್ರೋಗ್ರಾಮಿನಲ್ಲಿ ಏನಾದರೂ ‘ಧಾಂ ಧೂಂ’ ವಿಶೇಷವಿದೆಯೆ ಅಥವಾ ನೇರ ಹಿಂದಿರುಗಿ ಊರು ಸೇರಿಕೊಳ್ಳುವ ಕೆಲಸ ಮಾತ್ರ ಬಾಕಿಯೇ?’

‘ ಎಸ್…ಐ ಆಲ್ಸೋ ಎಂಜಾಯ್ಡ್ ದಿಸ್ ಟ್ರಿಪ್ ಏ ಲಾಟ್. ದಟ್ ಟೂ ಆಫ್ಟರ ಏ ಲಾಂಗ್ ಲಾಂಗ್ ಟೈಮ್…ರಾತ್ರಿಯೆಲ್ಲ ಎಲ್ಲರು ಚೆನ್ನಾಗಿ ‘ಚಿತ್’ ಆಗಿರುವುದರಿಂದ, ನಾಳೆ ಹೆಚ್ಚು ಕಡಿಮೆ ಆರಾಮವಾಗಿ ಎದ್ದು ಹೊರಡುವುದಷ್ಟೆ ಬೆಳಗಿನ ಪ್ರೋಗ್ರಾಮ್.. ಮಧ್ಯಾಹ್ನ ಒಂದು ಸೊಗಸಾದ ಜಾಗದಲ್ಲಿ ಲಂಚ್ ಅರೆಂಜ್ ಮಾಡಿದ್ದಾರೆಂದು ಕೇಳಿದೆ.. ಅಲ್ಲಿ ಲಂಚ್ ಮುಗಿಸಿ ಹೊರಟು ಬ್ಯಾಂಕಾಕ್ ತಲುಪಿದ ಕೂಡಲೆ, ನೇರ ‘ಸಿಯಾಮ್ ಥಿಯೇಟರಿಗೆ’ ಕರೆದುಕೊಂಡು ಹೋಗುತ್ತಾರಂತೆ… ಅದೊಂದು ಅದ್ಭುತ ಜಾಗ – ಥಾಯ್ ಸಾಂಪ್ರದಾಯಿಕ ನಾಟಕ ಕಲೆಯ ಜೀವಂತ ಚಿತ್ರಣವನ್ನು ಅದರೆಲ್ಲಾ ಪುರಾತನ ಸಾಂಪ್ರದಾಯಿಕತೆ ಮತ್ತು ನೂತನ, ಆಧುನಿಕತೆಯ ವೈಭವವನ್ನೆಲ್ಲ ಸಂಯೋಜಿಸಿ ಒಗ್ಗೂಡಿಸಿಟ್ಟ ಅಮೋಘ ದೃಶ್ಯ ವೈಭವದ ರೂಪದಲ್ಲಿ ನೋಡಬಹುದು.. ಮಧ್ಯಾಹ್ನದ ಒಂದು ಶೋ ಪೂರ್ತಿ ನಮಗಾಗಿಯೆ ಬುಕ್ ಮಾಡಿಟ್ಟಿದ್ದಾರೆ ಎಂದು ಕೇಳಿದೆ.. ನಮ್ಮ ಈ ಪ್ರೋಗ್ರಾಮಿಗೆ ಇಟ್ ಇಸ್ ಎ ನೈಸ್ ಕಂಕ್ಲೂಶನ್.. ಅದರಲ್ಲೂ ನಿಮಗೆ ಥಾಯ್ ಸಂಪ್ರದಾಯ ಮತ್ತು ಕಲಾಚಾರದ ಅದ್ಭುತ ಪರಿಚಯ ಮಾಡಿಕೊಳ್ಳುವ ಸದಾವಕಾಶವಿದು..’ ಎಂದು ಅದರ ಕುರಿತಾದ ಪುಟ್ಟ ಭಾಷಣವನ್ನೆ ಬಿಗಿದುಬಿಟ್ಟಿದ್ದರು ಕುನ್. ಲಗ್ . ಅದೇನು ಕಾಫಿಯ ಪ್ರಭಾವವೋ ಅಥವಾ ಅವರ ಸಾಂಸ್ಕೃತಿಕ ಸಂಪದದ ಕುರಿತು ಅವರಿಗಿರುವ ಅಗಾಧ ಅಭಿಮಾನದ ಕುರುಹೊ ಎಂದು ಅರಿವಾಗದ ಅಚ್ಚರಿಯಲ್ಲೆ ಅವರ ಮಾತನ್ನಾಲಿಸುತ್ತಿದ್ದ ಶ್ರೀನಾಥ. ಶ್ರೀನಾಥ ಕೂಡ ಈ ಮೊದಲೆ ಸಿಯಾಮ್ ಥಿಯೇಟರಿನ ಕುರಿತು ಕೇಳಿದ್ದ. ಅದರಲ್ಲೂ ಅದರ ಪ್ರದರ್ಶನಗಳಲ್ಲಿ ಉಂಟು ಮಾಡುವ ಎಫೆಕ್ಟುಗಳು, ನಿಜವಾಗಿಯೂ ಬಳಸುವ ಸಾಮಾಗ್ರಿ-ಪರಿಕರಗಳು ಇಡಿ ರಂಗಮಂದಿರವನ್ನೆ ಒಂದು ಯಕ್ಷಿಣಿ ಲೋಕವನ್ನಾಗಿ ಬದಲಿಸಿಬಿಡುತ್ತದೆಂದು ಕೂಡ ಓದಿದ್ದ. ಯಾರೋ ನೋಡಿ ಬಂದವರೊಬ್ಬರು ಯುದ್ಧದ ದೃಶ್ಯವೊಂದರಲ್ಲಿ ನಿಜವಾದ ಆನೆ,ಕುದುರೆಗಳನ್ನು ಬಳಸಿ, ಆ ಕಾಲದಲ್ಲಿ ಬಳಸುತ್ತಿದ್ದ ಉಡುಪು ದಿರಿಸುಗಳೊಡನೆ ಸ್ಟೇಜಿನಲ್ಲಿ ಪ್ರದರ್ಶನ ಕೊಟ್ಟರೆಂದು ಹೇಳಿದಾಗ ಅದು ಸಾಕಾದಷ್ಟು ದೊಡ್ಡದಾದ,ವಿಶಾಲ ಹಾಗೂ ವೈಭವೋಪೇತವಾದ ಪ್ರದರ್ಶನವೆ ಇರಬೇಕೆಂದು ಅನಿಸಿತ್ತು. ಒಮ್ಮೆಯಾದರೂ ಹೋಗಿಬರಬೇಕೆಂದು ಅನಿಸಿದ್ದರೂ ಸಮಯ ಒದಗಿ ಬಂದಿರಲಿಲ್ಲ – ಈಗ ಈ ರೀತಿಯಾದರೂ ಅವಕಾಶವಾಗುತ್ತಿದೆಯೆನಿಸಿ ಖುಷಿಯೂ ಆಗಿತ್ತು…

‘ವಾಹ್.. ! ನಾನು ಅದರ ಕುಳಿತು ಬಹಳ ಕೇಳಿದ್ದೇನೆ..ಇಟ್ ಇಸ್ ಏ ಗ್ರೇಟ್ ಆಪರ್ಚುನಿಟಿ ಐ ಗೆಸ್.. ಇಟ್ ಇಸ್ ರಿಯಲಿ ಏ ವಂಡರ್ಪುಲ್ ಟ್ರಿಪ್.. ಇ ರಿಯಲಿ ಪಿಟಿ ಕುನ್. ಸು.. ಪಾಪ ಅವಳು ಕೆಲಸದಲ್ಲಿಲ್ಲದ ಕಾರಣ ಈ ಅಪೂರ್ವ ಅವಕಾಶ ಕಳೆದು ಕೊಳ್ಳಬೇಕಾಯ್ತು..’ ಎಂದ ಆ ರೀತಿಯಲ್ಲಾದರೂ ಅವಳ ವಿಷಯವನ್ನೆತ್ತಿದರೆ ನಂತರ ಮತ್ತಷ್ಟು ವಿವರ ಕೆದಕಬಹುದೆಂದುಕೊಳ್ಳುತ್ತ..

ಆ ಮಾತಿನ ನಡುವಲ್ಲೆ ಅವರಿಬ್ಬರೂ ಆಗಲೆ ರೂಮುಗಳ ಹತ್ತಿರ ಬಂದು ನಿಂತಾಗಿತ್ತು. ಶ್ರೀನಾಥನಲ್ಲಿ ತಳಮಳ ಹೆಚ್ಚಾಗುತ್ತ ಹೋಗುತ್ತಿತ್ತು – ಈಗೇನಾದರೂ ಕೇಳಲು ಆಗದಿದ್ದರೆ ಅವರು ಕೆಲ ಕ್ಷಣಗಳಲ್ಲಿ ಒಳ ಹೋಗಿಬಿಡುವುದು ಖಚಿತ; ಆಮೇಲೆ ಕೇಳಲು ಆಗುವುದಿಲ್ಲ.. ಕೇಳುವುದಿದ್ದರೆ ಈಗಲೆ ಕೇಳಿಬಿಡಬೇಕು.. ಈ ಸದಾವಕಾಶ ಮತ್ತೆ ದೊರಕುವುದೆಂದು ಹೇಳಲಾಗದು.. ಆದರೂ ಹೇಗೆ ಕೇಳುವುದು…? ಕೇಳಲು ಬಾಯೇ ಬರುತ್ತಿಲ್ಲವಲ್ಲ..?

‘ ಅವಳು ಇದ್ದರೆ ಚೆನ್ನಾಗಿತ್ತು.. ಕನಿಷ್ಠ ಇಲ್ಲಿಯೂ ಒಳ್ಳೆ ಕಾಫಿ ಸಿಗುತ್ತಿತ್ತು. ಬಟ್ ವ್ಯಾಟ್ ಟು ಡು ? ಬ್ಯಾಡ್ ಲಕ್ ..’ ಎಂದರು ಎತ್ತಲೋ ನೋಡುತ್ತ ಕುನ್. ಲಗ್. ಅವರ ದನಿಯಲ್ಲಿದ್ದುದು ವಿಷಾದವೋ ಖೇದವೊ ಅರ್ಥವಾಗದ ಗೊಂದಲದಲ್ಲೆ, ಕೇಳಲೊ ಬೇಡವೊ ಎಂದು ಅನುಮಾನದಲ್ಲೆ ತಡವರಿಸುತ್ತ ಕೇಳಿದ್ದ ಶ್ರೀನಾಥ..

‘ ಕುನ್. ಲಗ್ ನಿಮ್ಮಲ್ಲೊಂದು ವಿಷಯ ಕೇಳಬೇಕು..ಕೇಳುವುದೊ ಬಿಡುವುದೊ ಗೊತ್ತಾಗುತ್ತಿಲ್ಲಾ..’ ಎಂದಿದ್ದ ತಲೆ ಕೆರೆದುಕೊಳ್ಳುತ್ತ.

‘ಅದೇನದು ಪರವಾಗಿಲ್ಲ ಕೇಳಿ.. ಹೇಳುವಂತಿದ್ದರೆ ಖಂಡಿತ ಹೇಳುವೆ’ ನಶೆಯಲ್ಲಿದ್ದರೂ ಯಾಕೊ ಇದ್ದಕ್ಕಿದ್ದಂತೆ ಎಚ್ಚರದ ಮಾತಾಡಿದ್ದರು ಕುನ್. ಲಗ್

‘ಏನಿಲ್ಲ ನನಗೆ ನೇರ ಸಂಬಂಧ ಪಟ್ಟ ವಿಷಯವೇನಲ್ಲವಾದರೂ ಹಾಳು ಕುತೂಹಲವಷ್ಟೆ.. ಕುನ್. ಸು ಕೆಲಸ ಬಿಡುವಂತಹ ಪರಿಸ್ಥಿತಿ ಬಂದಿದ್ದು ಯಾಕೆ… ಅಂತ…?’

ತಟ್ಟನೆ ಬೆಚ್ಚಿಬಿದ್ದವರಂತೆ ತಲೆಯೆತ್ತಿ ನೋಡಿದ್ದರು ಕುನ್.ಲಗ್ ಅವನತ್ತಲೆ ಆಳವಾಗಿ ದಿಟ್ಟಿಸುತ್ತ.. ‘ಅವರೇಕೆ ತನ್ನನ್ನೆ ಬೇಧಿಸುವಂತೆ ನೋಡುತಿದ್ದ ಹಾಗನಿಸಿತು?’ ಎಂಬ ಅನಿಸಿಕೆ ಮೂಡಿ ಅವನನ್ನು ಮತ್ತಷ್ಟು ವಿಚಲಿತನನ್ನಾಗಿಸಿತ್ತು ಆ ಕ್ಷಣದಲ್ಲಿ.

‘ ಆರ್ ಯೂ ಶೂರ ಯು ವಾಂಟು ನೋ? ಮೇ ಬಿ ಯು ಡೊಂಟ್ ಲೈಕ್ ದಿ ಆನ್ಸರ್…ಐ ಡೊಂಟ್ ಥಿಂಕ್ ಯು ಲೈಕ್ ಇಟ್’ ಎಂದಿದ್ದರು ಗಂಭೀರ ದನಿಯಲ್ಲಿ.

ಅವರು ಹೇಳಲು ಸಿದ್ದರಿರುವ ಸೂಚನೆ ಸಿಕ್ಕಿದ್ದಕ್ಕೆ ಉತ್ತೇಜಿತನಾದ ಶ್ರೀನಾಥ, ‘ಎಸ್ ಪ್ಲೀಸ್.. ಕುನ್. ಲಗ್.. ದಯವಿಟ್ಟು ಹೇಳಿ ನನಗಂತೂ ಕುತೂಹಲವಿದೆ’ ಎಂದ ಕಾತರದ ದನಿಯಲ್ಲಿ. ಅವರು ಮತ್ತೆ ಮಾತನಾಡದೆ ಅವನನ್ನೆ ಆಳವಾಗಿ ದಿಟ್ಟಿಸಿದ್ದರು – ಬಹುಶಃ ಹೇಳುವುದೊ ಬಿಡುವುದೊ ಎನ್ನುವ ಅನುಮಾನದ ದ್ವಂದ್ವ ಇನ್ನೂ ಕಾಡಿದಂತಿತ್ತು… ಕೊನೆಗೆ ಹೇಳಿಯೆ ಬಿಡುವುದಾಗಿ ನಿರ್ಧರಿಸಿ ಕೊಂಡವರಂತೆ ಮೆಲುವಾದ ತಣ್ಣಗಿನ ದನಿಯಲ್ಲಿ ಬಿಚ್ಚಿಡತೊಡಗಿದ್ದರು ಆ ಪ್ರಕರಣದ ಸಾರವನ್ನು – ಮೈಯೆಲ್ಲಾ ಕಿವಿಯಾಗಿ ನಿಂತಿದ್ದ ಶ್ರೀನಾಥನೆದುರಿಗೆ.

ತುಸು ಕುಡಿದ ಅಮಲಿಗೆ ಅಥವಾ ಸ್ವಲ್ಪ ಹೆಚ್ಚಾಗಿ ಕುಡಿದಿದ್ದ ಕಾರಣಕ್ಕೊ ಕಂಡೂ ಕಾಣದಂತೆ ತೂರಾಡುವ ಹಾಗೆನಿಸಿ, ತಾವು ಒಳಗೆ ಹೋಗಬೇಕಿದ್ದ ಬಾಗಿಲನ ಹತ್ತಿರ ನಿಂತವರೆ ಅದನ್ನೆ ಆಸರೆಯನ್ನಾಗಿ ಹಿಡಿದವರಂತೆ ಆತುಕೊಂಡು ನಿಂತೆ ಶ್ರೀನಾಥನತ್ತ ಮುಖ ತಿರುಗಿಸಿ ಆಳವಾದ ದನಿಯಲ್ಲಿ ತಾವು ಹೇಳಹೊರಟಿದ್ದನ್ನು ಒಂದೊಂದೆ ಪದ, ಪದಪುಂಜಗಳ ರೂಪದಲ್ಲಿ ನಿಧಾನವಾಗಿ ಬಿತ್ತರಿಸತೊಡಗಿದ್ದರು – ಸರಿಯಾಗಿ ಭಾಷೆ ಗೊತ್ತಿರದವರು ಸೂಕ್ತ ಪದಗಳಿಗಾಗಿ ಹುಡುಕಿ ಹುಡುಕಿ ಮಾತಾಡುತ್ತಿರುವವರಂತೆ.

‘ ಕುನ್. ಸು ಹೇಳಿ ಕೇಳಿ ಕಾಂಟ್ರಾಕ್ಟ್ ಸ್ಟಾಫ್ … ಆ ರೀತಿಯ ಕಾಂಟ್ರಾಕ್ಟ್ ಸ್ಟಾಫ್ಗಳಿಗೆಂದೆ ರೂಪಿಸಿದ ಕೆಲವು ರೀತಿ-ನೀತಿ-ರಿವಾಜು-ನಿಯಮಾವಳಿಗಳಿರುತ್ತವೆ…’

‘ ಹೌದು…?’ ಕುತೂಹಲ ನಿಮಿರುತ್ತ ದನಿಯಲ್ಲಿನ ಕಂಪನದಲ್ಲಿ ಪ್ರಕಟವಾಗಿತ್ತು.

‘ ಆ ನೀತಿ ಸೂತ್ರಗಳನ್ನು ಪಾಲಿಸದಿದ್ದರೆ ಅಥವಾ ವ್ಯತಿರಿಕ್ತವಾಗಿ ನಡೆದುಕೊಂಡರೆ ಆಡಳಿತ ವರ್ಗದ ವತಿಯಿಂದ ನಾವು ಸೂಕ್ತಕ್ರಮ ಕೈಗೊಳ್ಳಲೇಬೇಕು..’

‘ ನಿಜ..’ ಕಾತರದ ದನಿಯಲ್ಲಿ ಶ್ರೀನಾಥನ ಮಾರುತ್ತರ ಬಂದಿತ್ತು… ಇದೋ ಇನ್ನೇನು ಗುಟ್ಟು ಹೊರಬೀಳಲಿದೆಯೆಂದು..

‘ಅದರಲ್ಲೂ ಅವರು ಕಂಪನಿಯ ಹೊರಗೆ ಹೇಗೆ ವರ್ತಿಸಲಿ, ನಡೆದುಕೊಳ್ಳಲಿ, ಅದು ಕಂಪನಿಯ ಸಂಬಂಧಿತ ವಿಚಾರವಲ್ಲ.. ಆದರೆ ಆಫೀಸಿನ ಒಳಗಿರುವಾಗ ಮಾತ್ರ ನಿಯಮಾನುಸಾರ ನಡೆದುಕೊಂಡು, ಯಾವ ಲಿಖಿತ ಅಥವಾ ಅಲಿಖಿತ ನೀತಿಗೂ, ಕಟ್ಟುಪಾಡಿಗು ಮೋಸವಾಗದಂತೆ ನಡೆದುಕೊಳ್ಳಬೇಕು.. ಅದನ್ನೆಲ್ಲ ಸರಿಯಾಗಿ ವಿವರಿಸಿದ ಮೇಲೆಯೇ ಅವರನ್ನೆಲ್ಲ ಕೆಲಸಕ್ಕೆ ಆರಿಸಿಕೊಳ್ಳುವುದು..’

‘…….?’ ಮುಂದೇನು ಎಂಬ ಕುತೂಹಲದಲ್ಲಿ ಮಾತನಾಡದೆ ಅವರತ್ತಲ್ಲೆ ದಿಟ್ಟಿಸಿದ್ದ ಶ್ರೀನಾಥ, ಮೈಯೆಲ್ಲಾ ಕಿವಿಯಾಗಿ.

‘ಆದರೆ ಈಚೆಗೆ ನಡೆದ ಒಂದು ಪ್ರಕರಣದಲ್ಲಿ ಕುನ್. ಸು ತೀರಾ ಹದ್ದುಮೀರಿ ಕಾನೂನು ಕಟ್ಟಳೆಗಳನ್ನೆಲ್ಲ ಅತಿಕ್ರಮಿಸುವ ರೀತಿಯಲ್ಲಿ, ಅನುಚಿತಳಾಗಿ ನಡೆದುಕೊಂಡಳೆಂದು ಸಾಕ್ಷಿ ಮತ್ತು ಆಧಾರ ಸಹಿತವಾಗಿ ಖಚಿತ ಮಾಹಿತಿ ಸಿಕ್ಕಿತು… ವಿಚಾರಿಸಲಾಗಿ ಸ್ವತಃ ಅವಳು ಕೂಡ ತನ್ನ ತಪ್ಪೊಪ್ಪಿಕೊಂಡಳಾದರೂ ಅದು ತೀರಾ ಕಡೆಗಣಿಸಲೆ ಆಗದ ತಪ್ಪಾಗಿದ್ದುದು ಮಾತ್ರವಲ್ಲದೆ, ಅದರ ವ್ಯತಿರಿಕ್ತ ಪರಿಣಾಮ ಮತ್ತಿತರ ಸಿಬ್ಬಂದಿಯ ಮೇಲೂ ಆಗುವ ಸಾಧ್ಯತೆಯಿದ್ದ ಕಾರಣ ವಿಧಿಯಿಲ್ಲದೆ ತೀರ ಕಠಿಣ ಕ್ರಮ ಕೈಗೊಳ್ಳಬೇಕಾಯ್ತು.. ಈ ಸೂಕ್ಷ್ಮ ಸಂಧರ್ಭದಲ್ಲಿ ಕೆಲಸದಿಂದ ತೆಗೆದುಹಾಕುವುದು ಅವಳ ತಪ್ಪಿಗಿದ್ದ ತೀರಾ ಕನಿಷ್ಠ ಶಿಕ್ಷೆಯಾಗಿತ್ತು ..’

ಅವರು ಈಗಲೂ ಯಾವುದೊ ತೀವ್ರತರವಾದ ತಪ್ಪಿಗೆ ಶಿಕ್ಷೆಯಾಯ್ತೆಂದು ಹೇಳುತ್ತಿದ್ದರಾದರೂ, ಮಾಡಿದ ತಪ್ಪೇನು ಎಂಬುದರ ಕುರಿತು ಮಾತ್ರ ಬಾಯಿ ಬಿಟ್ಟಿರಲಿಲ್ಲ.. ಅದರ ಕುರಿತಾಗಿ ಕೇಳುವ ಕುತೂಹಲದ ಅವಸರವನ್ನು ತಡೆಹಿಡಿಯಲಾಗದೆ, ‘ಅದೆಲ್ಲಾ ಸರಿ ಕುನ್. ಲಗ್.. ಅಷ್ಟೊಂದು ತೀವ್ರ ಶಿಕ್ಷೆ ಕೊಡಿಸುವಂತಹ ರೀತಿಯಲ್ಲಿ ಪ್ರಚೋದಿಸುವ ಹಾಗೆ, ಅವಳು ಮಾಡಿದ ಅಂಥಹ ಭಾರಿ ತಪ್ಪಾದರೂ ಏನು? ಅಷ್ಟೊಂದು ಅಕ್ಷಮ್ಯ ಅಪರಾಧವಾಗಿತ್ತೆ ಅವಳ ತಪ್ಪು ? ವಾರ್ನಿಂಗ್ ಕೊಟ್ಟೊ ಅಥವಾ ಮತ್ತಾವುದೊ ಕೆಲ ದಿನದ ಸಸ್ಪೆನ್ಶನ್ ರೀತಿಯ ಶಿಕ್ಷೆ ಸಾಕಿತ್ತೇನೊ?’

ಮತ್ತೊಂದು ಗಳಿಗೆ ಮಾತನಾಡದೆ ಅವನನ್ನೇ ದಿಟ್ಟಿಸಿದ್ದರು ಕುನ್. ಲಗ್.. ಕೌ ಯಾಯ್ ರೆಸಾರ್ಟಿನ ಆ ಕೊಠಡಿಯ ಬಾಗಿಲಿಗೆದುರಾಗಿದ್ದ ಬೀದಿ ದೀಪದ ಬೆಳಕು ನೇರ ಅವರ ಮುಖದ ಮೇಲೆ ಬಿದ್ದು, ಕತ್ತಲಲ್ಲೂ ಅವರ ಹಣೆಯ ಮೇಲಿನ ನೆರಿಗೆಗಳನ್ನು ಎತ್ತಿ ತೋರಿಸುತ್ತ ಅವರ ‘ಹೇಳಲೋ? ಬಿಡಲೋ?’ ಎಂಬ ದ್ವಂದ್ವವನ್ನು ಮತ್ತಷ್ಟು ಹೆಚ್ಚಿಸಿದಂತೆ ಕಾಣುತ್ತಿತ್ತು. ಕೊನೆಗೇನೊ ನಿರ್ಧರಿಸಿದವರಂತೆ ‘ಆದದ್ದಾಗಲಿ ನನಗೇನು..? ಹೇಳಿಯೆಬಿಡುತ್ತೇನೆ.. ಮಿಕ್ಕಿದ್ದು ನಿನ್ನ ಹಣೆಬರಹ..’ ಎಂದುಕೊಂಡವರಂತೆ ಆ ಹಿನ್ನಲೆಯನ್ನು ಕೂಡ ಬಿಡಿಸಿಡಲು ಸಿದ್ದರಾದರು.

ಆ ಗಳಿಗೆಯಲ್ಲಿ ಅವರು ಹೇಳಲ್ಹೊರಟಿರುವ ವಿಷಯ ತನ್ನ ಕಾಲನ್ನೆ ಸುತ್ತಿಕೊಳ್ಳುವ ಹಾವಿನ ಬಳ್ಳಿಯಂತೆ ತನಗೆ ಕೊಡಲಿ ಕಾವಾಗಲಿದೆಯೆಂದು ಗೊತ್ತಿದ್ದಿದ್ದರೆ, ಬಹುಶಃ ತಾನಾಗಿಯೆ ಅಷ್ಟೊಂದು ಒತ್ತಾಯಿಸಿ ಕೇಳುತ್ತಿರಲಿಲ್ಲವೇನೊ ಶ್ರೀನಾಥ…? ಆದರೆ ಅವನೆಣಿಕೆಗೂ ಮೀರಿದ ವಿಧಿಯಾಟದ ತಿದಿ, ಅವನ ಜತೆ ಚೆಲ್ಲಾಟವಾಡುತ್ತಲೆ ಅವನಿಗೊಂದು ಮರೆಯಲಾಗದ ಪಾಠ ಕಲಿಸಬೇಕೆಂದು ನಿರ್ಧರಿಸಿದಂತಿತ್ತು.. ಒತ್ತಾಯಿಸಿ ಕೇಳದೆ ಸುಮ್ಮನಿದ್ದಿದ್ದರೆ ಕನಿಷ್ಠ ಅದನ್ನು ಹೆಗಲನೇರಿ ಕಾಡುವ ಭೂತವಾಗುವ ಅವಕಾಶದಿಂದಾದರೂ ವಂಚಿಸಬಹುದಿತ್ತು. ಆದರೆ ಹಾಗಾಗಲು ಬಿಡದೆ ಮತ್ತೆ ಮತ್ತೆ ಅದನ್ನರಿಯಲು ತೋರಿದ ವಿಪರೀತ ಕುತೂಹಲಕ್ಕೆ ಬಂದ ಉತ್ತರದಿಂದಾಗಿ, ಮತ್ತೊಮ್ಮೆ ಕೀಳರಿಮೆ ಮತ್ತು ತಪ್ಪಿತಸ್ಥ ಭಾವನೆಯಿಂದ ಆ ರಾತ್ರಿಯೆಲ್ಲ ನಿದ್ದೆಯಿಲ್ಲದೆ ಹೊರಳಾಡುವ ಸಂಕಟಕ್ಕೆ ಸಿಲುಕಬೇಕಾಗಿದ್ದು ಮಾತ್ರವಲ್ಲದೆ, ಅದುವರೆವಿಗೂ ಆ ಪ್ರವಾಸದಿಂದುದ್ಭವಿಸಿದ್ದ ಹರ್ಷಾನಂದ, ಸಂತಸದ ಹೊನಲಿಗೆ ದಿಢೀರನೆ ಕಹಿ ಬೆರೆಸಿ ಉಣಿಸುವ ಕರ್ಮದೀಕ್ಷೆಗೆ ಬುನಾದಿಯಾಗಲಿದೆಯೆಂಬ ನಿರೀಕ್ಷೆ, ಅರಿವು ಕನಸು ಮನಸಿನಲ್ಲೂ ಇರಲಿಲ್ಲ..

‘ವಾರದ ಕೊನೆಯಲ್ಲೊಂದು ದಿನ ಆಫೀಸಿನ ಕೆಲಸಕ್ಕೆ ಸಹಾಯ ಮಾಡಲೆಂದು ಓವರ ಟೈಮಿನಲ್ಲಿ ಬಂದವಳು ಆಫೀಸಿನಲ್ಲಿ ರಜೆಯ ದಿನದಲ್ಲಿ ಸ್ಥಳೀಯ ಸಹೋದ್ಯೋಗಿಗಳು ಬೇರಾರು ಇರದ ಸಂಧರ್ಭದ ಲಾಭ ಪಡೆದು ಆಫೀಸಿನೊಳಗೆ ಇರುವ ಕೊಠಡಿಯೊಂದನ್ನು ಅನೈತಿಕವಾಗಿ ತನ್ನ ದೈಹಿಕ ಕಾಮನೆಯ ಪೂರೈಕೆಗೆ ಬಳಸಿಕೊಂಡು, ತಪ್ಪೆಸಗಿದ್ದೆ ಅವಳು ಮಾಡಿದ್ದ ತಪ್ಪು….!!’

ಆ ಮಾತು ಕೇಳುತ್ತಿದ್ದಂತೆ ಒಳಗೇನೊ ತಟ್ಟನೆ ಕುಸಿದಂತಾಗಿ ಎದೆ ಧಸಕ್ಕೆಂದಿತ್ತು ಶ್ರೀನಾಥನಿಗೆ… ಇದೊಂದು ಅವಳ ಮಾಮೂಲಿ ಚಾಳಿಯೊ? ಅಥವ ದಂಧೆಯ ರೂಪದಲ್ಲಿ ಬೇರಾರದೊ ಜತೆಯಲ್ಲಿ ಸಹ ಅವಳಿಗೀ ರೀತಿಯ ಚರ್ಯೆ, ಸಹವಾಸಗಳಿತ್ತೆ?… ಕುನ್. ಲಗ್ ಹೇಳುತ್ತಿರುವ ಘಟನೆ ತಮ್ಮಿಬ್ಬರನ್ನೆ ಕುರಿತದ್ದಲ್ಲಾ ತಾನೇ? ಅಥವಾ ಅದು…. ನಿಜಕೂ ತಮ್ಮಿಬ್ಬರ ಮಿಲನದ ಆ ದಿನದ ಘಟನೆಯೆ? ವಾರದ ಕೊನೆಯ ಓವರ್ ಟೈಮ್, ಆಫೀಸಿನಲ್ಲಿ ಬೇರಾರು ಸಹೋದ್ಯೋಗಿಗಳಿರದ ಸಂಧರ್ಭ – ಎಲ್ಲವೂ ತನ್ನ ಪರಿಸ್ಥಿತಿಗೆ ತಾಳೆಯಾಗುವಂತಿದೆಯಲ್ಲ? ಪ್ರತಿ ವಾರದ ಕೊನೆಯಲ್ಲೂ ಯಾರದರೂ ಒಬ್ಬಿಬ್ಬರಾದರೂ ಕೆಲಸಕ್ಕೆ ಬಂದಿರುವುದು ಸಾಮಾನ್ಯವಾಗಿ ಕಾಣುವ ಪರಿಸ್ಥಿತಿ. ಆ ದಿನ ಮಾತ್ರ ಅದೇನು ಕಾರಣವೋ ಬೇರಾರು ಬಂದಿರಲಿಲ್ಲದ ಹೊತ್ತಿನಲ್ಲೆ ಆ ಸಂಗಾಟ ನಡೆದುಹೋಗಿತ್ತು. ಅಂದರೆ ಅವರು ಹೇಳುತ್ತಿರುವ ಕಾರಣೀಭೂತ ಘಟನೆ ತಮ್ಮಿಬ್ಬರಿಗೆ ಸಂಬಂಧಿಸಿದ ಮಿಲನದ ಅದೇ ಘಟನೆಯೆ?

ಆ ಅನಿಖರತೆಯ ಜಂಜಾಟದಲ್ಲೆ ದಿಕ್ಕು ತಪ್ಪಿದವನಂತೆ ಅಲೆದಾಡುತ್ತಿದ್ದವನ ಮನ ತಹಬಂದಿಗೆ ಬರುವ ಮೊದಲೆ, ಅದೆ ಕಠಿಣ ದನಿಯಲ್ಲಿ ಮುಂದುವರೆದಿತ್ತು ಕುನ್. ಲಗ್ ರ ದನಿ – ‘ಕೇಳ ಬೇಕೆಂದೆಯಲ್ಲವೆ? ತಗೋ ಎಲ್ಲಾ ಕೇಳಿಬಿಡು’ ಎಂಬಂತೆ.

‘ ಅದರಲ್ಲೂ ಅವಳು ಬಳಸಿದ್ದು ಕಸ್ಟಮರುಗಳ ಟ್ರೈನಿಂಗಿಗೆ ಬಳಸುವ ರೂಮು.. ಅಲ್ಲಿಟ್ಟಿರುವ ಸರಕುಗಳೆಲ್ಲ ‘ಪ್ರಾಡಕ್ಟ್ ಡೆಮೋ’ ಗುಂಪಿಗೆ ಸೇರಿದ್ದು. ಆ ಡೆಮೊ ಸರಕುಗಳ ಸಹಭಾಗವಾಗಿ ಮತ್ತು ಸುರಕ್ಷತೆಯ ದೃಷ್ಟಿಯಿಂದ ಅಲ್ಲೆಲ್ಲ ಕಡೆ ಕ್ಲೋಸ್ ಸರ್ಕ್ಯೂಟ್ ಕ್ಯಾಮರವನ್ನು ಅಳವಡಿಸಿಟ್ಟಿದೆ.. ಅದನ್ನು ಆಫೀಸಿನ ಅವಧಿಯ ನಂತರ, ವಾರದ ಕೊನೆ ಮತ್ತು ರಜೆಯ ದಿನಗಳಲ್ಲಿ ಸ್ವಯಂಚಾಲನೆಯ ಮೋಡಿನಲ್ಲಿಟ್ಟು ಬಿಟ್ಟಿರುತ್ತಾರೆ – ಅಲ್ಲಿ ನಡೆಯುವುದೆಲ್ಲ ರೆಕಾರ್ಡ್ ಆಗುವ ಹಾಗೆ; ಮತ್ತು ಕಂಪನಿಯ ಸುರಕ್ಷತಾ ನಿಯಮಾವಳಿಯನುಸಾರ ಅದನ್ನು ವಾರಕ್ಕೊಮ್ಮೆ ಪರೀಕ್ಷಿಸಿ ವೀಕ್ಷಿಸಿ ನೋಡಿ, ರೆಕಾರ್ಡ ಆದದ್ದನ್ನೆಲ್ಲ ಮತ್ತೊಂದು ಕೇಂದ್ರೀಕೃತ ಸ್ಟೋರೇಜ್ ಡಿಸ್ಕಿಗೊ ಅಥವಾ ಮತ್ತೊಂದು ಡೀವಿಡಿಗೊ ವರ್ಗಾಯಿಸಿ ಕ್ಯಾಮರ ಡಿಸ್ಕಿನಲ್ಲಿರುವ ರೆಕಾರ್ಡಿಂಗ್ ಅನ್ನು ವೀಕ್ಷಿಸಿ ಅಳಿಸಿ ಹಾಕುತ್ತಾರೆ – ಮುಂದಿನ ಹೊಸ ರೆಕಾರ್ಡಿಂಗಿಗೆ ಖಾಲಿ ಜಾಗ ಸಿದ್ದ ಮಾಡಲೆಂದು.. ಆ ವಾರದ ಕೊನೆಯಲ್ಲು ಸಂಬಂಧಿಸಿದ ಸಿಬ್ಬಂದಿಯೊಬ್ಬರು ಹಾಗೆ ಮಾಡಹೊರಟಾಗ ವಾರದ ಕೊನೆಯ ಅವಳ ಈ ಹಳವಂಡವೆಲ್ಲ, ಮಸುಕು ಮಸುಕಾಗಿ ಸ್ವಲ್ಪ ಅಸ್ಪಷ್ಟವಾಗಿದ್ದರು ಕ್ಯಾಮರದಲ್ಲಿ ರೆಕಾರ್ಡಿಂಗ್ ಆಗಿದ್ದು ಗೊತ್ತಾಗಿತ್ತು. ಬೆಳಕಿನ ಅಭಾವದಿಂದ ಮತ್ತು ಆ ರೂಮಿನಲ್ಲಿದ್ದ ಎಲ್ಲಾ ದೀಪಗಳನ್ನು ಹಚ್ಚದಿದ್ದರಿಂದೇನೊ – ಕತ್ತಲಾವರಿಸಿದ್ದ ಕಾರಣಕ್ಕೆ ಆ ವ್ಯಕ್ತಿಗಳಾರೆಂದು ಸ್ಪಷ್ಟವಾಗಿ ಗೊತ್ತಾಗದಿದ್ದ ಕಾರಣಕ್ಕೆ, ಆ ರೆಕಾರ್ಡಿಂಗ್ ಅಳಿಸುವ ವ್ಯಕ್ತಿಗೆ ಅವರು ಯಾರಿರಬಹುದೆಂದು ಸುಳಿವು ಸಿಗಲಿಲ್ಲ.. ಸಿಕ್ಕಿದ್ದರೆ ದೊಡ್ಡ ರಾದ್ದಾಂತವೆ ಆಗಿಹೋಗುತ್ತಿತ್ತೊ ಏನೋ? ಅವರ ಜತೆಗೆ, ಯಾರೋ ಹೊರಗಿನಿಂದ ಟ್ರೈನಿಂಗಿಗೆ ಸಿದ್ದಪಡಿಸಲು ಬಂದಿದ್ದವರಿರಬೇಕೆಂದು, ಕಂಪನಿಯ ಆಂತರಿಕ ಸಿಬ್ಬಂದಿಯಲ್ಲವೆಂದು ಹೇಳಿ ಅವರುಗಳ ಬಾಯಿ ಮುಚ್ಚಿಸಿದರು, ಆ ದಿನ ಆಫೀಸಿಗೆ ಬಂದಿದ್ದವರಾರು ಎಂಬ ದಾಖಲೆ ಪರಿಶೀಲಿಸಲಾಗಿ ಎಲ್ಲಾ ನಿಚ್ಛಳವಾಗಿ ತಿಳಿದುಹೋಗಿತ್ತು..ಅದು ಸಾಲದೆಂಬಂತೆ ಆ ದಿನ ಯೂನಿಫಾರಂ ಕೂಡ ಧರಿಸದೆ ಪ್ರಚೋದಕವಾಗುವ ಆಕರ್ಷಕ ದಿರಿಸನ್ನುಟ್ಟು ಬೇರೆ ಬಂದಿದ್ದನ್ನು ನೋಡಿದರೆ, ಅದೆಲ್ಲ ಪೂರ್ವ ಸಿದ್ದತೆಯನ್ನು ಮಾಡಿಕೊಂಡೆ ಬಂದಿದ್ದಳೆಂದು ಖಚಿತವಾಗಿತ್ತು. ಇಷ್ಟೆಲ್ಲ ಸಾಲದೆಂಬಂತೆ ಅವಳನ್ನು ಪ್ರಶ್ನಿಸಿದಾಗಲೂ ಮಾರುತ್ತರ ನೀಡದೆ ತನ್ನ ತಪ್ಪೊಪ್ಪಿಕೊಂಡಿದ್ದಳು ಬೇರೆ.. ಅದನ್ನು ಯಾರು ಮಾಡಿದ್ದೆಂದು ಗೊತ್ತಿದ್ದೂ ಶಿಕ್ಷಿಸದೆ ಸುಮ್ಮನಿರುವುದು ಕಂಪನಿ ನಿಯಮಗಳನುಸಾರ ಖಂಡಿತ ಸಾಧ್ಯವಿರಲಿಲ್ಲ.. ಅದರ ಫಲಿತವೆ ಅವಳೀ ಶಿಕ್ಷೆ ಅನುಭವಿಸಬೇಕಾಯ್ತು…’ ಎಂದು ತಮ್ಮ ಸುಧೀರ್ಘವಾದ ಮಾತು ನಿಲ್ಲಿಸಿ ಸುಮ್ಮನಾದರು ಕುನ್. ಲಗ್, ಎತ್ತಲೊ ಮೂಲೆಯತ್ತ ದಿಟ್ಟಿಸುತ್ತ.

ಅವರ ಮಾತುಗಳನ್ನು ಕೇಳುತ್ತಿದ್ದಂತೆ ಚಲನೆಯೆ ಸ್ಥಗಿತವಾಗಿ ಸ್ತಂಭಿತವಾದಂತೆ ದಿಗ್ಮೂಢನಾಗಿ ಹೋಗಿದ್ದ ಶ್ರೀನಾಥ. ಅವನಿಗೆ ಖಚಿತವಾಗಿಹೋಗಿತ್ತು – ಅಲ್ಲಿ ಜತೆಯಲಿದ್ದವನು ತಾನೆ ಎಂದು ಕುನ್. ಲಗ್ ರಿಗೆ ಚೆನ್ನಾಗಿಯೆ ಗೊತ್ತಾಗಿದ್ದರೂ, ಸಭ್ಯತೆ ಶಿಷ್ಠಾಚಾರದ ಕಾರಣಕ್ಕೆ ಅವರದನ್ನು ಬಾಯ್ಬಿಟ್ಟು ಹೇಳದೆ ಬರಿಯ ಕುನ್. ಸು ಬಗ್ಗೆ ಮಾತ್ರ ಮಾತಾಡುತ್ತಿರುವರೆಂದು.. ಅವಳನ್ನು ತಪ್ಪಿತಸ್ಥಳೆಂದು ಸೀರಿಯಸ್ಸಾಗಿ ಪರಿಗಣಿಸಿದ್ದಂತೆ ತನ್ನನ್ನು ಯಾಕೆ ಪರಿಗಣಿಸಲಿಲ್ಲ? ತಾನು ಇಲ್ಲಿಯವನಲ್ಲ, ಹೊರಗಿನವನೆಂದೆ? ಅಥವಾ ಇಲ್ಲೂ ಆ ಪುರುಷ ಪ್ರಮುಖ ಸಾಮಾಜಿಕ ವಾತಾವರಣದ ಹಿನ್ನಲೆ ಏನಾದರೂ ಪ್ರಭಾವ ಬೀರಿತ್ತೆ? ಹಾಗೆ ನೋಡಿದರೆ ಕಂಪನಿಯ ದೃಷ್ಟಿಯಲ್ಲಿ ಮಿಲನದ ಸಂಬಂಧವೇನು ಅಪರಾಧವಲ್ಲ – ಅದು ವ್ಯಕ್ತಿಗಳ ವೈಯಕ್ತಿಕ ಮತ್ತು ನೈತಿಕ ಪ್ರಜ್ಞೆಗೆ ಸಂಬಂಧಿಸಿದ ವಿಷಯ… ಆದರೆ, ಆ ಸಂಬಂಧದ ತೆವಲು, ತೀಟೆ ತೀರಿಸಿಕೊಳ್ಳಲು ಕಂಪನಿಯ ಖಾಸಗಿ ಸ್ವತ್ತಾದ ಆಫೀಸಿನ ಜಾಗವನ್ನು, ಅದೂ ಕೆಲಸದ ಹೊತ್ತಲ್ಲಿ ಬಳಸಿಕೊಂಡಿದ್ದು ತಪ್ಪು… ಅದರಿಂದಾಗಿಯೆ ತನ್ನ ಮೇಲಿನ ತೂಗುಕತ್ತಿ ಜಾರಿ ಆ ಆಫೀಸಿನ ಜಾಗದ ನಿರ್ವಹಣ ಹೊಣೆಯ ಭಾಗವಾಗಿದ್ದ ಅವಳ ಹೆಗಲೇರಿಕೊಂಡು ಈ ಶಿಕ್ಷೆಯ ಪರಿಸ್ಥಿತಿಗೆ ಕಾರಣವಾಯ್ತೆ?

ತಮ್ಮ ಮಾತಿನ ಬಾಂಬ್ ಮುಗಿಸಿ ಒಳಹೋಗುವ ಮುನ್ನ ಕುನ್. ಲಗ್ ಕಡೆಯ ಬಾರಿಗೆಂಬಂತೆ ತಿರುಗಿ ನೋಡುತ್ತ ನುಡಿದಿದ್ದರು, ‘ಪ್ರಾಜೆಕ್ಟಿನ ಈ ಅದ್ಭುತ ಯಶಸ್ಸಿನ ಸಹಯೋಗವಿರದಿದ್ದರೆ ಏನೇನೆಲ್ಲಾ ಆಗುತ್ತಿತ್ತೋ ಹೇಳುವುದು ಕಷ್ಟ.. ಆದರೆ ಹಿಂದೆಂದೂ ಕಾಣದಂತಹ ಈ ವಿಜಯ ಮಿಕ್ಕೆಲ್ಲ ಪಾಪಗಳನ್ನು ಮುಚ್ಚಿಹಾಕುವ ಪುಣ್ಯದ ತುಣುಕಾಗಿ ರಕ್ಷಿಸಿಬಿಟ್ಟಿತು.. ಇದೆ ನಿಜವಾಗಿ ನಡೆದ ವಿಷಯ.. ಮತ್ತೊಂದು ವಿಷಯ ಗೊತ್ತಿದೆಯಲ್ಲ? ಇದು ಕಾನ್ಫಿಡೆನ್ಶಿಯಲ್ ಮತ್ತು ವೈಯಕ್ತಿಕ ವಿಷಯವಾದ ಕಾರಣ ಸಂಬಂಧಪಟ್ಟವರ ಹೊರತು ಬೇರೆ ಯಾರಿಗೂ ಗೊತ್ತಾಗಬಾರದೆಂದು? ಗುಡ್ ನೈಟ್ ಅಂಡ್ ಸೀ ಯೂ ಟುಮಾರೋ..’ ಎಂದವರೆ ಬಾಗಿಲು ಹಾಕಿಕೊಂಡು ಒಳನಡೆದಿದ್ದರು.. ಆ ಕೊನೆಯ ಮಾತುಗಳಲ್ಲಿ ಸಹ ಸ್ಪಷ್ಟವಾಗಿತ್ತು – ಅವು ನೇರ ತನ್ನನ್ನೆ ಉದ್ದೇಶಿಸಿ ಆಡಿದ ಮಾತುಗಳೆಂದು. ತಾನೂ ಆ ಘಟನೆಗೆ ಸಂಬಂಧಪಟ್ಟವನಾದ ಕಾರಣದಿಂದಷ್ಟೆ ತನಗೂ ಆ ಮಾಹಿತಿ ಸಿಕ್ಕಿತೆನ್ನುವ ಸ್ಪಷ್ಟ ಸೂಚನೆ ನೀಡಿಯೆ ಒಳನಡೆದಿದ್ದರು ಕುನ್. ಲಗ್; ಅಂದರೆ ಅವಳ ಜತೆಯಲ್ಲಿದ್ದ ಆ ಮತ್ತೊಬ್ಬ ವ್ಯಕ್ತಿ ತಾನೆಂಬುದು ಅವರಿಗೆ ಚೆನ್ನಾಗಿಯೆ ಗೊತ್ತಾಗಿದೆ.. ಸುದೈವಕ್ಕೆ ಅಲ್ಲಿಯೂ ಅವನ ಪ್ರಾಜೆಕ್ಟಿನ ಯಶಸ್ಸೆ ದೈವರೂಪಿಯಾಗಿ ಬಂದು ಅವನನ್ನು ಕಾಪಾಡಿತ್ತೆಂದು ಅರಿವಾದಾಗ ಏನು ಮಾಡಬೇಕೆಂದರಿವಾಗದೆ ದಿಗ್ಭ್ರಾಂತನಾಗಿ ಹಾಗೆಯೇ ನಿಂತುಬಿಟ್ಟ ಶ್ರೀನಾಥ…!

ಆ ಹೊತ್ತಿನಲ್ಲಿ ಬೇರೇನೂ ಮಾಡಲು ತೋಚದೆ, ರೂಮಿನತ್ತ ಹೋಗಲು ಮನಸಾಗದೆ ಅಲ್ಲೆ ಹಾಗೆ ಸುಮ್ಮನೆ ನಿಂತುಬಿಟ್ಟಿದ್ದ ಶ್ರೀನಾಥ ಅದೆಷ್ಟೊ ಹೊತ್ತಿನ ತನಕ … ಈಗ ಅವನನ್ನು ನಿಜಕ್ಕೂ ಭಾಧಿಸುತ್ತಿದ್ದುದು ಕುನ್. ಲಗ್ ರಿಗೆ ತನ್ನ ಈ ವಿಷಯ ತಿಳಿದುಹೋಗಿದೆಯೆಂಬ ಖೇದವಾಗಿರಲಿಲ್ಲ.. ಹೇಗೂ ಗೊತ್ತಾಗಿದೆಯೆಂದರಿವಾದ ಮೇಲೆ ‘ನೀರಿಗಿಳಿದ ಮೇಲೆ ಚಳಿಯೇನು, ಮಳೆಯೇನು’ ಎನ್ನುವ ಭಾವವುದಿಸಿ ಆ ಕೀಳರಿಮೆಯನ್ನು ನಿರ್ಲಕ್ಷಿಸಿ ಹತ್ತಿಕ್ಕಿಸುವಂತೆ ಮಾಡುವಲ್ಲಿ ಸಫಲವಾಗಿತ್ತು. ಅದರ ಬದಲಿಗೆ ತನ್ನಿಂದಾದ ಆ ದಿನದ ಮಹಾನ್ ಅಚಾತುರ್ಯವೆ ಅವಳನ್ನು ಗರ್ಭಿಣಿಯಾಗಿಸಿದ್ದು ಮಾತ್ರವಲ್ಲದೆ, ಅವಳು ಕೆಲಸವನ್ನು ಕಳೆದುಕೊಳ್ಳಲು ಕಾರಣವಾಯ್ತೆಂಬ ಸತ್ಯ ಮಾತ್ರ ಜೀರ್ಣಿಸಿಕೊಳ್ಳಲಾಗದ ಅತೀವ ವಿಷಾದಪೂರ್ಣ ವೇದನೆಯಾಗಿ ಕಾಡತೊಡಗಿತ್ತು.. ಅದುವರೆವಿಗೂ ಅದು ಗೊತ್ತಿರದಿದ್ದರಿಂದ, ಬೇರಾವುದೊ ಅವಳದೆ ಆಗಿರಬಹುದಾದ ವೈಯಕ್ತಿಕ ಕಾರಣಕ್ಕೆ ಕೆಲಸ ಹೋಯ್ತೆಂದುಕೊಂಡಿದ್ದ ತನ್ನ ಪೆದ್ದುತನದ ಪರಮಾವಧಿಗೆ ನಾಚಿಕೆಯೂ ಆಗತೊಡಗಿತ್ತು. ಆ ಹೊತ್ತಿನಲ್ಲಿ ನಡೆದದ್ದನ್ನೆಲ್ಲ ತಾರ್ಕಿಕವಾಗಿ ಜೋಡಿಸಿ ನೋಡಿದ್ದರೆ ಪೂರ್ತಿಯಾಗಲ್ಲದಿದ್ದರೂ ಬಹುತೇಕ ಈ ಕಾರಣವೂ ಇರಬಹುದೆಂಬ ಸಂಶಯವಾದರೂ ಹುಟ್ಟಿಕೊಂಡಿರುತ್ತಿತ್ತು. ತಾನೆ ಮೂಲಕಾರಣನಾಗಿದ್ದ ಕಾರಾಸ್ತಾನದಿಂದುಂಟಾದ ಆಘಾತದ ಅರಿವೂ ಇಲ್ಲದವನಂತೆ ಪ್ರಾಜೆಕ್ಟಿನ ದೊಂಬಿಯಲ್ಲಿ ಸಿಕ್ಕು ಕಳುವಾಗಿಹೋಗಿದ್ದವನಿಗೆ, ಕೊನೆಗೆ ಆ ಪ್ರಾಜೆಕ್ಟಿನ ಯಶಸ್ಸೆ ತನ್ನನ್ನು ಕಾಪಾಡಿದ ವಿಪರ್ಯಾಸಕ್ಕೆ ಏನು ಹೇಳಬೇಕೆಂದೂ ತೋರಲಿಲ್ಲ. ಅದೆ ಗಳಿಗೆಯಲ್ಲಿ ತನ್ನ ಪಾಲಿನ ದೋಷಕ್ಕೂ ಅವಳೆ ಶಿಕ್ಷೆಯನ್ನು ಅನುಭವಿಸುವವಳಂತೆ, ಎಲ್ಲವನ್ನು ತನ್ನ ತಲೆಯ ಮೇಲೆ ಹಾಕಿಕೊಂಡು ತನಗದರ ಸುಳಿವೂ ಕೊಡದೆ ಮೌನವಾಗಿದ್ದುಬಿಟ್ಟ ಉದಾತ್ತತೆ ಮೊದಲೆ ಕುಸಿದಿದ್ದವನನ್ನು ಮತ್ತಷ್ಟು ಕುಗ್ಗಿಸಿ ಕುಬ್ಜನನ್ನಾಗಿಸಿಬಿಟ್ಟಿತ್ತು. ಅದೆಲ್ಲವೂ ಸಾಲದೆಂಬಂತೆ, ಅಷ್ಟೆಲ್ಲ ಮೊದಲೆ ಗೊತ್ತಿದ್ದರೂ ತನ್ನೊಡನೆ ಒಂದು ಮಾತು ಬಿಚ್ಚಿ ಹೇಳದೆ, ಅದಕ್ಕಾಗಿ ಇನಿತೂ ದೂಷಿಸದೆ ಸದ್ದಿಲ್ಲದೆ ಪಕ್ಕದಿಂದಲೆ ಸರಿದುಹೋಗಿ ದೂರಾದ ಉದಾತ್ತ ಮನೋಭಾವದ ಗೌರವಾನ್ವಿತ ಹೆಣ್ಣಾಗಿ ಕುನ್. ಸು ನಡತೆಯ ಹಿಂದಿದ್ದ ಮೇರುಶಿಖರದಂತಹ ಗುಣ ಸ್ವಭಾವ, ಅವನನ್ನು ಮತ್ತಷ್ಟು ಲಜ್ಜೆಗೊಳಿಸಿ ತಲೆ ತಗ್ಗಿಸುವಂತೆ ಮಾಡಿಬಿಟ್ಟಿತ್ತು.

ಅದೇನು ವಿಷಾದವೊ , ಖೇದವೊ, ಅವಮಾನವೊ, ದುಃಖವೊ, ಅಸಹನೆಯೊ ಅಥವಾ ಎಲ್ಲದರ ಕಲಸು ಮೇಲೋಗರವಾದ ಸಮ್ಮಿಶ್ರ ಭಾವವೊ – ಎಲ್ಲವನ್ನು ಒಟ್ಟಾಗಿ ಪೇರಿಸಿಕೊಂಡು ಭೂಪ್ರತಿಷ್ಠಾಪಿತವಾದ ಗಟ್ಟಿ ಶಿಲೆಯಂತೆ ನಿಂತಿದ್ದವನಿಗೆ, ಅದುವರೆವಿಗೂ ಸ್ಥಬ್ದವಾಗಿದ್ದ ಆ ನೀರವ ವಾತಾವರಣದಲ್ಲಿ ಕಾರ್ಯಕ್ರಮ ಮುಗಿಸಿಕೊಂಡ ಮಿಕ್ಕಲವರು ಅತ್ತಲೆ ಬರುತ್ತಿರುವ ಹೆಜ್ಜೆಯ ಸದ್ದು ಮತ್ತು ಮಾತುಗಳೆಲ್ಲ ಬೆರೆತು ಗಾಳಿಯಲ್ಲಿ ತೇಲಿಕೊಂಡು ಬಂದ ಘಂಟಾನಾದದಂತೆ ಕಿವಿಯ ಮೇಲೆ ಬಿದ್ದಾಗ, ತಟ್ಟನೆ ಎಚ್ಚರವಾದವನಂತೆ ಅವರಲ್ಲಿಗೆ ಬಂದು ತಲುಪಿ ಏನಾದರೂ ಪ್ರಶ್ನೆ ಕೇಳುವ ಮೊದಲೆ ಸರಸರನೆ ಬಾಗಿಲು ತೆರೆದು ತನ್ನ ರೂಮಿನೊಳಗೆ ಸೇರಿಕೊಂಡಿದ್ದ – ಅದು ಮತ್ತೊಂದು ನಿದ್ರೆಯಿರದೆ ಹೊರಳಾಡಿಸುವ ಅಗಾಧ ಚಿಂತನೆಯ ವಿಷಾದಪೂರ್ಣ ರಾತ್ರಿಯಾಗಲಿದೆಯೆಂದು ಗೊತ್ತಿದ್ದೂ…!

(ಇನ್ನೂ ಇದೆ)
__________

( ಪರಿಭ್ರಮಣ..43ರ ಕೊಂಡಿ – https://nageshamysore.wordpress.com/00240-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-43/ )

ಅವರೋಹಣ, ಆಕ್ರಮಣ, ಅಧಃಪತನ, ಆರೋಹಣ, ಪರಿಭ್ರಮಣ, ನಾಗೇಶ ಮೈಸೂರು, ನಾಗೇಶಮೈಸೂರು, ನಾಗೇಶ, nageshamysore, Nagesha Mysore, nagesha

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s