00240. ಶ್ರಾವಣದೆ ಬಲಗಾಲಿಕ್ಕುತ ಲಕುಮಿ…

00240. ಶ್ರಾವಣದೆ ಬಲಗಾಲಿಕ್ಕುತ ಲಕುಮಿ…
______________________________

ಶ್ರಾವಣದ ನಿಸರ್ಗ ಸಿರಿಯ ಜತೆಗೆ ನರ ಮನುಜರ ಸಿರಿ ಸಂಪದ ಐಶ್ವರ್ಯಗಳನ್ನು ಧಾರೆಯೆರೆದು ಕೃತಾರ್ಥರನ್ನಾಗಿಸುವ, ಮಹಾತಾಯಿ ಶ್ರೀ ಲಕ್ಷ್ಮಿಯನ್ನು ಆರಾಧಿಸಿ ಓಲೈಸುವ ಕೈಂಕರ್ಯಕ್ಕೆ ಇಂಬು ಕೊಡುವ ಶ್ರೀ ವರಮಹಾಲಕ್ಷ್ಮಿ ವ್ರತ ಮತ್ತೆ ಕಾಲಿಕ್ಕುತಿದೆ – ಇದೆ ಎಂಟನೆ ಆಗಸ್ಟ್ 2014ರ ಶುಭ ಶುಕ್ರವಾರದಂದು. ಶ್ರಾವಣ ಬಂತೆಂದರೆ ಹಬ್ಬಗಳು ಸಾಲುಸಾಲಾಗಿ ನಲಿದು ಬರುವ ಮಾಸವಾಗಿ ವರಲಕ್ಷ್ಮಿಯ ಬೆನ್ನಲ್ಲೆ ಶ್ರೀ ಕೃಷ್ಣ ಜನ್ಮಾಷ್ಟಮಿ ಇಣುಕುತ್ತಿರುವಾಗಲೆ, ಚೌತಿಯ ಗಣಪನೂ ‘ಇದೋ ಹೊರಟು ಬಂದೆ’ ಎನ್ನುತ್ತಿದ್ದಾನೆ. ಇದರ ನಡುವಲ್ಲೆ ಉಪಾಕರ್ಮಗಳ ಸಾಲು ಅಣಿಯಾಗಿ ನಿಂತಿರುವುದು ಕಾಣುತ್ತಿರುವಾಗ ಆಗಸ್ಟ್ ತಿಂಗಳ ವಿಶೇಷವಾಗಿ ರಾಷ್ಟ್ರೀಯ ಹಬ್ಬವಾದ ಸ್ವಾತಂತ್ರ ದಿನವೂ ‘ನಾನೇನು ಕಡಿಮೆಯೆ?’ ಎನ್ನುತ್ತಿದೆ. ಒಟ್ಟಾರೆ ಹಬ್ಬಗಳ ನೆಪದಲ್ಲಿ ಹಬ್ಬದೂಟ, ಔತಣ, ಹೊಸ ಬಟ್ಟೆ ಬರೆ, ಸುಣ್ಣ ಬಣ್ಣದ ಸಿಂಗಾರ – ಎಲ್ಲಕ್ಕು ಕಳೆಯೇರುವ ಹೊತ್ತಿಗೆ ಸರಿಯಾಗಿ ಮೊದಲ ಮುನ್ನುಡಿ ಬರೆಯಲೇನೊ ಎಂಬಂತೆ ಬಲದ ಕಾಲಿಟ್ಟು ಮೊದಲಿಗಳಾಗಿ ಬರುತ್ತಿದ್ದಾಳೆ ಮಹಾಲಕ್ಷ್ಮಿ ದೇವಿ – ವರ ಮಹಾಲಕ್ಷ್ಮಿ ವ್ರತದ ರೂಪದಲ್ಲಿ.

ವರ ಮಹಾಲಕ್ಷ್ಮಿ ವ್ರತದ ಆಚರಣೆ ನಮ್ಮ ಗೃಹಿಣಿಯರಲ್ಲಿ ಬಹಳ ಸಾಮಾನ್ಯವಾಗಿ ಕಾಣುವ ದೃಶ್ಯ. ಸಂಭ್ರಮೋತ್ಸಾಹದಿಂದ ವೈಭವೋಪೇತ ಉಡುಪುಗಳನ್ನು ಧರಿಸಿ, ಮಹಾಲಕ್ಷಿಯ ಅಪರಾವತಾರವೇನೊ ಅನ್ನುವಂತೆ ಎಲ್ಲಾ ತರದ ಆಭರಣಾದಿಗಳನ್ನು ತೊಟ್ಟುಕೊಂಡು ತಾಯಿ ಲಕ್ಷಿಯ ಚಿತ್ರಪಟವನ್ನಿಟ್ಟು ಕಲಶ ಸಮೇತ ಹೂ, ಮಾವಿನೆಲೆ, ಅರಿಶಿನ ಕುಂಕುಮಾದಿಗಳಿಂದ ಅಲಂಕರಿಸಿ ಮಹಾಲಕ್ಷ್ಮಿಯ ಅನುಗ್ರಹದ ಸಂಕೇತವಾದ ದ್ರವ್ಯಾಭರಣಗಳನ್ನು ಮುಂದಿಟ್ಟೊ, ತೊಡಿಸಿಯೊ ಪೂಜಿಸಿ ಆರಾಧಿಸುವುದು ಸಾಧಾರಣವಾಗಿ ಕಾಣುವ ದೃಶ್ಯ. ಅದರಲ್ಲೂ ಅದೇಕೊ ಈ ಹಬ್ಬ ಬಂತೆಂದರೆ ನನಗಂತೂ ಬಂಗಾರದ ಕಾಸಿನ ಸರವೆ ಕಣ್ಮುಂದೆ ಬರುತ್ತದೆ – ಬಹುಶಃ ಅದು ಸಂಪ್ರದಾಯದ ಸಿರಿಯ ಜೊತೆಗೆ, ನೈಜ ಸಂಪತ್ತಿನ ಕಣ್ಣು ಕುಕ್ಕುವ ಸಂಕೇತವಾಗಿರುವುದರಿಂದ ಇರಬಹುದೇನೊ. ಇನ್ನು ಸಂಜೆಯ ಹೊತ್ತಿಗೆ ಗೃಹಿಣಿಯರು ಪರಸ್ಪರರನ್ನು ಅರಿಶಿನ ಕುಂಕುಮಕ್ಕೆ ಕರೆದು ಪೂಜಾ ಪ್ರಸಾದ ವಿನಿಯೋಗಿಸಿ ತಮ್ಮ ತಮ್ಮ ಶಕ್ತ್ಯಾನುಸಾರ ತಮ್ಮಲ್ಲಿರುವ ಸಂಪತ್ತು , ಅಡಂಬರವನ್ನು ಪ್ರದರ್ಶಿಸುತ್ತ, ಪರಸ್ಪರರಲ್ಲೆ ತುಲನೆ ಮಾಡುತ್ತ, ಬಾಹ್ಯದಲ್ಲಿ ಬಂಗಾರದ ನಗೆಯನ್ನು ಚೆಲ್ಲುತ್ತಲೆ ಸಂಭ್ರಮಿಸುವುದು ನಮ್ಮ ಸಂಸ್ಖೃತಿ, ಸಂಪ್ರದಾಯದ ಅವಿಭಾಜ್ಯ ಅಂಗವೆ ಆಗಿ ಹೋಗಿದೆ ಎನ್ನಬಹುದು.

ಅವರ ಈ ಸಂಭ್ರಮ, ಉಲ್ಲಾಸ, ಉತ್ಸಾಹಗಳಿಗೆ ಜತೆ ನೀಡುವ ಉದ್ದೇಶದಿಂದ ಲಕ್ಷ್ಮಿ ಪೂಜೆಗೆ ಸಂಬಂಧಿಸಿದಂತೆಯೆ ಹೊಸೆದ ಎರಡು ಸರಳ ಕವಿತಾ ಗೀತೆಗಳು ಈ ಕೆಳಗಿವೆ – ‘ಲಕ್ಷ್ಮಿ ಕಟಾಕ್ಷ’ ಮತ್ತು ‘ಹರಸೆ ಸಂಪದ ಕೊಟ್ಟು’ ಭಕ್ತ ಜನರ ಅಸ್ವಾದನೆಗೆ. ಇಷ್ಟವಾದೀತೆಂಬ ಆಶಯ ಮತ್ತು ಹಬ್ಬದ ಶುಭಾಶಯಗಳೊಂದಿಗೆ ಇದೊ ನಿಮ್ಮ ಮಡಿಲಿಗೆ 🙂

01. ಲಕ್ಷ್ಮಿ ಕಟಾಕ್ಷ
_____________________

ಬದುಕಲೇನೆಲ್ಲ ಹುನ್ನಾರ ಉಳಿಸೆ ನೂರು ಸಾವಿರ ಲಕ್ಷ
ಒಂದಲ್ಲ ಒಂದು ತರದೆ ಗಳಿಸೆ ತಾಯಿ ಲಕ್ಷ್ಮಿ ಕೃಪಾ ಕಟಾಕ್ಷ
ವರ ನೀಡೊ ಮಹಾಲಕುಮಿಯ ಸಂಪ್ರೀತಳಾಗಿಸೊ ಹೆಜ್ಜೆ
ವರ ಮಹಾಲಕ್ಷ್ಮಿ ವ್ರತ ಹಿಡಿದು ಮಾಡುತೇನೆನೆಲ್ಲ ಪೂಜೆ ||

ಕಲಶವಿಟ್ಟ ಹೊತ್ತು ಹರಿಯ ಎದೆ ಕಲಶವೆ ತೆರೆದಿತ್ತು
ಆಪೋಶಿಸುತೆಲ್ಲಾ ತೀರ್ಥ ಒಳಗಿನ ಧಾರೆಗಳ ಹೆಸರಿತ್ತು
ಅಷ್ಟ ಲಕ್ಷ್ಮಿಯರೆಲ್ಲರ ಭಾಗ್ಯ ಮಹಾಲಕ್ಷ್ಮಿಯಲಿ ಅಡಗಿತ್ತು
ಒಂದೆ ವ್ರತದಲೆಲ್ಲ ಲಕ್ಷ್ಮಿಗಳ ಸೌಭಾಗ್ಯದ ಹರಕೆ ಸೊಗಡಿತ್ತು ||

ಶ್ತಾವಣದ ದನಿ ಹನಿಗಳಲಿ ವರ್ಷ ಜೇಂಕಾರ ಸುಹರ್ಷ
ಫಸಲು ಫಲವತ್ತು ಹಲವ್ಹತ್ತು ಧಾರೆಗಳ ಸಹ ಸ್ಪರ್ಷ
ಪೂಜೆಗಿಟ್ಟಾ ಹರಕೆ ಬಿತ್ತನೆಯಾಗದಿರಲವ್ವ ಗೊರಕೆ
ಅಡ್ಡಿಯಾತಂಕಗಳ ಗುಡಿಸೆ ನಿನ್ನ ಕರುಣೆಯ ಪೊರಕೆ ||

ಮುಸ್ಸಂಜೆ ಹೊತ್ತಿನ ಕುಪ್ಪೆಯು ಸಲ್ಲದ ತ್ಯಾಜವೆ ತಾಯಿ
ನೀ ಬಲಗಾಲಿಟ್ಟು ಒಳ ಬರಲಿರುವ ಹೊತ್ತಿನಾದರ ಛಾಯೆ
ಬಂದು ಸೇರುತ ಕಲಶ ವೈಭೋಗದೆ ನೆಲೆಸುತ ಪ್ರತಿವರ್ಷ
ಸಲಹಿ ಕಾಪಾಡಮ್ಮ ಸತತ ಜತೆಗಾತಿಯರೆಲ್ಲರ ಪರುಷ ||

ಮುತ್ತೈದೆ ಬಂದವಳಲ್ಲವೆ ನಿನ್ನ ಹೋಗಬಿಡದೆ ತಡೆದವಳು
ಜೀವವನೆ ತೆತ್ತಳಲ್ಲಾ ನೀನಿತ್ತ ವಾಗ್ದಾನ ಕಟ್ಟಿಹಾಕಿ ಕಾಲು
ಮನುಜ ಮನೆ ಮನದಲಿ ನಿರಂತರ ನೆಲೆಸುವಂತಾಯ್ತಲ್ಲ
ನಿನ್ನ ಬಿಟ್ಟಿರದ ಶ್ರೀ ಹರಿಯು ಬಂದು ನಿನ್ನ ಸೇರದೆ ವಿಧಿಯಿಲ್ಲ ||

————————————————————–
ನಾಗೇಶ ಮೈಸೂರು, ಸಿಂಗಪುರ
————————————————————–

02. ಹರಸೆ ಸಂಪದ ಕೊಟ್ಟು
__________________

ವರವ ಕೊಡೆ ಲಕುಮಿ
ವರದ ಕರ ನಿರಂತರ
ಭುವಿಯ ನರರಿಗೆ ಮುಕ್ತ
ಕರುಣೆ ನೀಡಿ ಅನವರತ ||

ಕ್ಷೀರಸಾಗರದ ವೈಕುಂಠ
ಬತ್ತದ ಸಾಗರವ ಮೊಗೆದು
ತುಂಬೆ ಭಕ್ತರ ಜೋಳಿಗೆ ಪಾತ್ರೆ
ಸುಗಮಿಸಿ ಭೂಲೋಕ ಯಾತ್ರೆ ||

ಕಟ್ಟಿಕೊಂಡಿದ್ದರೇನು ವಸತಿ
ಹರಿಯೆದೆಯ ಹೃದಯದೆ
ಹರಿದು ಬರಲಮ್ಮ ಕೃಪೆ ಗಮನ
ಗೃಹಿಣಿಗೆ ನಿನ್ನ ದೃಷ್ಟಿಯೆ ಗಹನ ||

ಅಷ್ಟ ಲಕ್ಷ್ಮಿಯರ ಕೂಟ
ಯಾರೆನಲಿ ಇಷ್ಟ ಲಕ್ಷ್ಮಿ?
ಸಕಲರ ಸೌಭಾಗ್ಯ ಸಂಕಲಿಸೆ
ವರ ಮಹಾಲಕ್ಷ್ಮಿ ಅವತರಿಸೆ ||

ಅರಿಶಿನ ಕುಂಕುಮ ಸಂಭ್ರಮ
ವನಿತೆಯರಿಗೆಲ್ಲ ನಿನದೆ ಧ್ಯಾನ
ಐಸಿರಿ ವೈಭೋಗ ಪೂಜೆಗೆ ಉಟ್ಟು
ನಿಂತವರನ್ಹರಸೆ ಸಂಪದ ಕೊಟ್ಟು ||

————————————————————–
ನಾಗೇಶ ಮೈಸೂರು, ಸಿಂಗಪುರ
————————————————————–

ಬಲಗಾಲಿಕ್ಕುತ, ಶ್ರಾವಣ, ಲಕುಮಿ, ಲಕ್ಷ್ಮಿ, ವರಮಹಾಲಕ್ಷ್ಮಿ, ವರ, ಮಹಾಲಕ್ಷ್ಮಿ, ಕಟಾಕ್ಷ, ಹರಸೆ, ಸಂಪದ, ಕೊಟ್ಟು, ನಾಗೇಶ, ಮೈಸೂರು, ನಾಗೇಶಮೈಸೂರು, ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s