00243. ಸ್ವಾತ್ಯಂತ್ರ ಮತ್ತು ಸ್ವೇಚ್ಛೆ

00243. ಸ್ವಾತ್ಯಂತ್ರ ಮತ್ತು ಸ್ವೇಚ್ಛೆ
________________________

ಸ್ವಾತ್ಯಂತ್ರೋತ್ಸವದ ದಿನ ಹತ್ತಿರವಾದಂತೆ ಆಚರಣೆಯ ಸಿದ್ದತೆಗಳು ಮತ್ತೆ ಸುದ್ದಿ ಮಾಡುತ್ತಿವೆ; ಅದರಲ್ಲೂ ಭಾರತರತ್ನ, ಕೇಲ್ ರತ್ನದಂತಹ ಪ್ರಶಸ್ತಿಗಳ ಸುದ್ದಿಯೆ ಹೆಚ್ಚು ಗುಡುಗುತ್ತಿದೆ – ನಾವು ಸಿಂಗಪುರದಲ್ಲಿ ನೋಡಲು ಸಾಧ್ಯವಿರುವ ಭಾರತೀಯ ನ್ಯೂಸ್ ಚಾನೆಲ್ಲುಗಳಲ್ಲಿ. ಎಂದಿನಂತೆ ನಮಗಿಲ್ಲಿ ಆಚರಣೆಯ ಸಂಭ್ರಮ ಭಾರತದಲ್ಲಿರುವಂತೆ ಇರುವುದಿಲ್ಲವಾದರು ಆಫೀಸಿಗೆ ಮುಂಚೆ ಎಂಬೆಸಿಯಲ್ಲಿ ಬಾವುಟ ಹಾರಿಸುವುದಲ್ಲಿ ಪಾಲ್ಗೊಳ್ಳಲಿಕ್ಕೊ (ಈ ಬಾರಿಯ ಕಾರ್ಯಕ್ರಮವೇನಿದೆಯೊ ಇನ್ನು ವಿಚಾರಿಸಿಲ್ಲ) ಅಥವಾ ಆಫೀಸಿನಲ್ಲೆ ಕಂಪ್ಯೂಟರಿನ ಮುಂದೆ ಜನಗಣಮನ ಹೇಳಿಕೊಳ್ಳಲಿಕ್ಕೊ ಅಡ್ಡಿಯಿರದು.

ಆ ಆಲೋಚನೆಯ ನಡುವೆಯೆ ಮೂಡಿದ ಕೆಲವು ಸಾಲುಗಳು ತುಸು ಸಿನಿಕತೆಯೆಂಬಂತೆ ಅನಿಸಿದರು, ಕವಿತೆಯ ರೂಪ ತಾಳಿದಾಗ – ಸುತ್ತಮುತ್ತಲ ಆಗುಹೋಗುಗಳು ಸುಪ್ತವಾಗಿಯೆ ಬೀರುವ ಪರಿಣಾಮ ಅಗಾಧ. ಸ್ವತಂತ್ರಕ್ಕು , ಸ್ವೇಚ್ಛೆಗೂ ಅಜಗಜಾಂತರ – ಎಲ್ಲಿಯವರೆಗು ಸ್ವತಂತ್ರತೆ ಸ್ವೇಚ್ಛೆಯ ರೂಪ ತಾಳುವುದಿಲ್ಲವೊ ಅಲ್ಲಿಯವರೆವಿಗು ಅದು ಸಹನೀಯವೆ. ಆದರೆ ಸ್ವೇಚ್ಛೆಯಾದಾಗ ಮಾತ್ರ ಅದು ಯಾವ ರೀತಿಯ ಕರಾಳ, ಭೀಕರ ರೂಪ ತಾಳಬಹುದೆಂದು ಹೇಳಲಾಗದು. ಅಲ್ಲದೆ ಎರಡರ ನಡುವಿನ ಮಿತಿಯನ್ನು ಗುರುತಿಸುವ ಗೆರೆಯೂ ತೀರ ತೆಳುವಾದದ್ದು. ಈ ಸೂಕ್ಷ್ಮ ಗೆರೆಯ ಆಂತರ್ಯವನ್ನರಿತು ಉಚಿತವಾಗಿ ನಡೆದರೆ ಸ್ವಾತ್ಯಂತ್ರ ಎಲ್ಲರಿಗು ಅಪ್ಯಾಯಮಾನವಾಗುವಂತದ್ದು. ಮಿತಿ ಮೀರಿದರೆ ನಾವೀಗ ಪದೆ ಪದೆ ಕೇಳುವ ಅಹಿತಕರ ಸುದ್ದಿ, ಮಾಹಿತಿಗಳಿಗೆ ದಾರಿಯಾಗುವಂತಹದ್ದು.

ಸ್ವಾತಂತ್ರವಿದ್ದಾಗ ಅದರ ಬೆಲೆ ಗೊತ್ತಾಗುವುದಿಲ್ಲವಾದ ಕಾರಣ (ಅದಿಲ್ಲದೆ ಇದ್ದಾಗಿನ ಅನುಭವಿರದ ಕಾರಣ), ಅದನ್ನೆ ಅನಿಯಮಿತವಾಗಿ ವಿಸ್ತರಿಸಿ ಸ್ವೇಚ್ಛೆಯಾಗಿಸಿಕೊಳ್ಳುವುದು ಮನಸಿನ ಸುಲಭ ಪ್ರವೃತ್ತಿಯೆಂದು ಕಾಣುತ್ತದೆ. ತನ್ನದೆನ್ನುವ ಸ್ವಾರ್ಥದ ಪರಿಧಿ ವಿಸ್ತರಿಸಿಕೊಂಡಷ್ಟು, ಅಹಿತಕರ ಸ್ವೇಚ್ಛೆಯ ಸುತ್ತಳತೆಯೂ ಹೆಚ್ಚುತ್ತ ಹೋಗುವುದು ಸತ್ಯದ ಮಾತು. ಬೇಟೆಯಾಡುವ ‘ಆಟದ’ ಪ್ರವೃತ್ತಿಯಾಗಲಿ, ಅತ್ಯಾಚಾರಕ್ಕಿಳಿಯುವ ನೀಚ ಮನಸ್ಥಿತಿಗಾಗಲಿ, ಮೋಸ ವಂಚನೆಯಿಂದ ಮುನ್ನಡೆವ ಅನೈತಿಕ ಹುನ್ನಾರಕ್ಕಾಗಲಿ – ಈ ಸ್ವೇಚ್ಛೆ ನೀಡುವ ಪರೋಕ್ಷ ಕುಮ್ಮುಕ್ಕೆ ಪ್ರಮುಖ ಕಾರಣವಾದ್ದರಿಂದ ಅದಕ್ಕೆ ಕಡಿವಾಣ ಹಾಕಿ ಸೂಕ್ತ ರೀತಿಯಲ್ಲಿ ಸ್ವಾತ್ಯಂತ್ರದ ನಿಜವಾದ ಸವಿಯನ್ನನುಭವಿಸುವುದು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಅತ್ಯಾವಶ್ಯಕ.

ಆ ಒಂದು ಆರೋಗ್ಯಕರ ದೃಷ್ಟಿಕೋನಕ್ಕೆ ಈ ಬಾರಿಯ ಸ್ವಾತಂತ್ರೋತ್ಸವ ನಾಂದಿ ಹಾಡಲೆಂದು ಆಶಿಸುತ್ತ, ಎಲ್ಲರಿಗು ಸ್ವಾತಂತ್ರ ದಿನದ ಶುಭಾಶಯಗಳೊಡನೆ ಈ ಕವನವನ್ನು ಸೇರಿಸುತ್ತಿದ್ದೇನೆ.

ಸ್ವಾತ್ಯಂತ್ರಕೊಂದು ಸ್ವತಂತ್ರ ಗೀತೆ
_______________________________

ಸರ್ವತಂತ್ರ ಸ್ವತಂತ್ರ ಸ್ವಾತಂತ್ರದ ಕುಡಿ ನಾನು
ಸ್ವಾತಂತ್ರದ ವಜ್ರೋತ್ಸವ ಬಂದರು ಅತಂತ್ರವನು
ಅಪ್ಪಿಕೊಂಡೆ ನಡೆವೆ ಅನುಮಾನಿಸದೆ ದೂರದೆಲೆ
ಉಂಡೆಸೆದರು ಕೊರಮರು ನನ್ನಾಗಿಸಿ ಊಟದೆಲೆ ||

ಯಾರೊ ಅಂದರು ನನ್ನನೆ ‘ನೀ ಕುಬ್ಜ ಸಂತಾನ’
ಬೆಳೆಯಲಾದರೂ ಹೇಗೆ, ನಾನೆ ಬೆಳೆಯೆ ಸಂತನಾ?
ದೇಶ ಬೆಳೆದರೆ ತಾನೆ ನಾನೂ ಬೆಳೆವೆ ಫಲವತ್ತೆ
ಬೆಳೆಯದಿದ್ದರು ಕೊನೆಗೆ ಬೆಳೆಸಿ ಉದರದ ತಟ್ಟೆ ||

ಸುಖದ ದಿನಗಳು ಬರಲಿವೆ ತಾಳಿಕೊಳ್ಳೊ ಬಡವ
ಬಂದಾಗ ಏರಿದ ವೆಚ್ಚ ತಡೆದುಕೊಳ್ಳಲಾಗು ಗಡವ
ಬೆಚ್ಚನೆ ದಿನಗಳು ವೆಚ್ಚಕೆ ಹೊನ್ನಿರಬೇಕೊ ಸುಖಕೆ
ಹೊನ್ನಿರೆ ಹೊನ್ನಿ ಜತೆಗೆ ದುಡಿಯ್ಹೊಡೆಯದೆ ಗೊರಕೆ! ||

ಸಂತಸಪಡು ಸ್ವೇಚ್ಛೆ ಸುತ್ತಿ, ಮಾತಾಡುವ ಸ್ವಾತಂತ್ರ
ಎಲ್ಲಿ ಬೇಕೆಂದರಲ್ಲಿ ಹೋಗಿ ಅಲೆದಾಡುವ ನಿಮಂತ್ರ
ಯಾರು ಕೇಳುವರಿಲ್ಲಿ ಗುಟ್ಟಲಿ ಮಾಡಿದರು ಕುತಂತ್ರ?
ಸಿಗುವುದಿನ್ನೆಲ್ಲಿ ಈ ಭುವಿ ಸ್ವರ್ಗ ಆಸ್ವಾದಿಸು ಗಣತಂತ್ರ ||

ನೋಡಿಲ್ಲಿ ಕುಡಿದು ಚಲಾಯಿಸು ಲೆಕ್ಕಿಸರು ಕ್ಷಮೆ ಸಿದ್ದ
ಕೀಟಲೆ ಕಿಚಾಯಿಸು ರೇಗಿಸು ಏಮಾರಿಸು ಪ್ರಬುದ್ಧ
ಬಲಾತ್ಕಾರ ಅತ್ಯಾಚಾರಕು ಕೆಲವರಿಗುಂಟು ಸ್ವಾತಂತ್ರ
ಸಿಗದೆ ತಪ್ಪಿಸಿಕೊಳುವ ಛಾತಿಯಿದ್ದರೆ ಸಾಕೆಲ್ಲ ಸುಸೂತ್ರ ||

————————————————————————————
ನಾಗೇಶ ಮೈಸೂರು, ಸಿಂಗಪುರ
————————————————————————————-

ಸ್ವಾತ್ಯಂತ್ರೋತ್ಸವ, ಸ್ವೇಚ್ಛೆ, ಸ್ವತಂತ್ರ, ಸ್ವಾತಂತ್ರದಿನ, ಸ್ವಾತಂತ್ರ, ನಾಗೇಶ, ಸ್ವತಂತ್ರಗೀತೆ, ಗೀತೆ, ನಾಗೇಶಮೈಸೂರು, ನಾಗೇಶ ಮೈಸೂರು, nagesha mysore, nagesha, nageshamysore

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s