00251. ಕಥೆ: ಪರಿಭ್ರಮಣ..(48)

00251. ಕಥೆ: ಪರಿಭ್ರಮಣ..(48)

……….ಏಕಾಂಗಿತನ ಮುತ್ತಲು, ಮನಸೆ ಬೆತ್ತಲು…!
_______________________________________________________________________________
ಅವರೋಹಣ…ಆಕ್ರಮಣ…ಅಧಃಪತನ…ಆರೋಹಣ…ಮನಸೆನ್ನುವ ಚಾರಣ, ಈ ಬದುಕಿನ ಹೂರಣ!
_______________________________________________________________________________

00251. ಕಥೆ: ಪರಿಭ್ರಮಣ..(48)

( ಪರಿಭ್ರಮಣ..47ರ ಕೊಂಡಿ – https://nageshamysore.wordpress.com/00249-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-47/ )

ಹೊರಡುವ ಸಿದ್ದತೆಯನುಸಾರವಾಗಿ ಚೆಕ್ ಲಿಸ್ಟ್ ಮಾಡಿಕೊಂಡು ಅದರಲ್ಲಿ ಈಗಾಗಲೆ ಇರುವುದನ್ನು ಬಿಟ್ಟು ಮಸ್ಕಿಟೊ ಕಾಯಿಲ್ ನಂತಹ ಮಿಕ್ಕ ವಸ್ತುಗಳನ್ನೆಲ್ಲ ಹತ್ತಿರದ ಸುಪರ ಸ್ಟೋರೊಂದರಲ್ಲಿ ಖರೀದಿಸಿ ಪ್ಯಾಕೆಟೊಂದರಲ್ಲಿ ಸುತ್ತಿ ಎತ್ತಿಟ್ಟುಕೊಂಡ ಶ್ರೀನಾಥ, ವನ್ಯಾಶ್ರಮಧಾಮದ ವಿಳಾಸಕ್ಕೆ ಪತ್ರ ಬರೆಯಲು ಕುಳಿತ. ಬರೆಯಲು ಹೋಗುವಾಗಲೆ ಯಾಕೊ ಕೈ ನಡುಗಿದಂತೆ ಅದುರಿ ಅಳುಕುಂಟಾಗಿಸಿ ಕಾಡಿದಾಗ ‘ಛೆ! ಈ ಹಾಳು ಕಂಪ್ಯೂಟರು, ಇ ಮೇಯಿಲುಗಳ ಸಹವಾಸದಿಂದ ಅಲ್ಪ ಸ್ವಲ್ಪ ಇದ್ದ ಬರೆಯುವ ಹವ್ಯಾಸವೂ ತಪ್ಪಿ ಹೋಗುತ್ತಿದೆ… ಮೊದಲಾದರೆ ಗೆಳೆಯರಿಗೊ, ಮನೆಗೊ ಪತ್ರ ಬರೆಯುವ ಆಹ್ಲಾದವಾದರೂ ಇರುತ್ತಿತ್ತು. ಈಗ ಮೇಯ್ಲು ಹಾಕಿಯೊ ಅಥವಾ ಪೋನ್ ಕಾಲ್ ಮಾಡಿ ಮಾತನಾಡಿಯೊ ಕೈ ತೊಳೆದುಕೊಂಡುಬಿಡಬಹುದು….ಅದಕ್ಕೆ ಪೆನ್ನು ಹಿಡಿದರೆ ಎರಡು ಸಾಲು ಬರೆಯಲು ಸಂಕಟವಾಗುತ್ತದೆ…’ ಎಂದುಕೊಳ್ಳುತ್ತಲೆ ಮಾಂಕ್ ಸಾಕೇತರಿಗೆ ನಿರ್ದೇಶಿಸಿದ ಪುಟ್ಟ ಕೋರಿಕೆ ಪತ್ರ ಮುಗಿಸಿ, ತಾರೀಖಿನ ಸಮೇತ ವಿವರಗಳನ್ನು ನಮೂದಿಸಿ ಸಹಿ ಹಾಕಿದ. ‘ಅದನ್ನು ಕುನ್. ರತನ ಕೈಗಿತ್ತರೆ ಸಾಕು, ಕೊರಿಯರ ಹುಡುಗನ ಮೂಲಕ ಶೀಘ್ರದಲ್ಲಿ ರವಾನಿಸುತ್ತಾಳೆ. ಅದರಲ್ಲೂ ಮಾಂಕುಗಳ ಜತೆಗಿರಲು ಹೋಗುತ್ತಿರುವುದೆಂದರೆ ತೀರಾ ಧರ್ಮಭೀರುವಾದ ಅವಳು ಅಲ್ಲಿಂದಲೆ ಹಾಸಿಕೊಂಡು ಅಡ್ಡಬಿದ್ದರೂ ಅಚ್ಚರಿಯಿಲ್ಲ’ – ಎಂದೆಲ್ಲಾ ಯೋಚಿಸಿ ಅವಳ ಡೆಸ್ಕಿಗೆ ಲೆಟರನ್ನು ತಲುಪಿಸಿ ತನ್ನ ಅಪಾರ್ಟ್ಮೆಂಟಿಗೆ ವಾಪಸ್ಸು ಬಂದ. ಅವಳೆ ಸಿಕ್ಕಿದ ಕಾರಣ ಎಲ್ಲವನ್ನು ನಿಖರವಾಗಿ ವಿವರಿಸಿ ಹೇಳಿ ನಾಳೆಯ ಹೊತ್ತಿಗೆ ತಲುಪುವಂತೆ ವ್ಯವಸ್ಥೆ ಮಾಡಲು ವಿನಂತಿಸಿಕೊಂಡು ಹಿಂತಿರುಗಿದ್ದ. ಬಹಳ ನಂಬಿಕಸ್ತ ಹುಡುಗಿ, ಪಾಪ..! ತಲುಪಿದ ಸುದ್ದಿಯನ್ನು ಕಳಿಸುವುದಲ್ಲದೆ ತಲುಪುವವರೆಗಿನ ವಿವರವನ್ನು ಹಂತ ಹಂತವಾಗಿ ಕೊರಿಯರಿಗನುಸಾರವಾಗಿ ಕಳಿಸಿಕೊಟ್ಟರೂ ಅಚ್ಚರಿಯಿಲ್ಲ….

ಮತ್ತೆ ಮಾಂಕ್ ಸಾಕೇತರು ನೀಡಿದ್ದ ಪೋನ್ ನಂಬರಿಗೆ ಡಯಲ್ ಮಾಡಿ ತಾನು ಬರುತ್ತಿರುವ ನಿಖರ ದಿನಾಂಕದ ವಿವರಗಳನ್ನು ಅವರಿಗಿತ್ತು, ಮಾಂಕ್ ಸಾಕೇತರಿಗೆ ತಲುಪಿಸುವಂತೆ ಕೋರಿಕೊಂಡ. ಕುನ್. ರತನಳ ಸಹಾಯದಿಂದ ರಾತ್ರಿಯ ಪಯಣದ ಲಗ್ಜುರಿ ಬಸ್ಸಿನ ಪಯಣದ ಟಿಕೇಟ್ಟಿನ ವ್ಯವಸ್ಥೆಯನ್ನು ಮಾಡಿಯಾಗಿದ್ದ ಕಾರಣ, ದಿನಾಂಕದ ಕುರಿತು ಮತ್ತಾವ ಗೊಂದಲವೂ ಇರಲಿಲ್ಲ. ಕೆಲವು ಮುಖ್ಯವಾದ ವಾಕ್ಯಗಳನ್ನು ಇಂಗ್ಲಿಷಿನಿಂದ ಥಾಯ್ ಭಾಷೆಗೆ ಅವಳಿಂದಲೆ ಭಾಷಾಂತರಿಸಿ ಚೀಟಿಯೊಂದರಲ್ಲಿ ಬರೆಸಿಟ್ಟುಕೊಂಡಿದ್ದ ; ಹೀಗಾಗಿ ‘ಟುಕ್ ಟುಕ್..’ ಅಥವಾ ‘ಟ್ಯಾಕ್ಸಿ’ ಹಿಡಿದು ಹೋಗಲಾಗಲಿ, ಮಧ್ಯೆ ಏನಾದರೂ ಕೊಂಡು ತಿನ್ನಬೇಕಿದ್ದರೆ ಬಳಸಬೇಕಿದ್ದ ಥಾಯ್ ‘ಸರ್ವೈವಲ್ ಕಿಟ್’ ಗಾಗಲಿ ಚಿಂತೆ ಇರಲಿಲ್ಲ. ಆದರೆ ನಿಜಕ್ಕೂ ಶ್ರೀನಾಥನಿಗಿದ್ದ ಭೀತಿ ಆ ಭಾಷೆಯಲ್ಲಿ ಸಂವಹನವನ್ನು ನಿಭಾಯಿಸುವುದಾಗಿರಲಿಲ್ಲ…; ಬದಲಿಗೆ ಅಲ್ಲಿ ಹೋಗಿ ಆಶ್ರಮವನ್ನು ಸೇರಿದ ಮೇಲೆ ಕೇವಲ ಒಂದೆ ಹೊತ್ತು, ಅದೂ ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ಆಹಾರ ಸೇವನೆ ಮಾಡಿದರೆ, ಮಿಕ್ಕ ದಿನ ಪೂರ್ತಿ ತಡೆದುಕೊಂಡು ಇರಬಲ್ಲೇನೆ ಎಂಬುದು. ಮರುದಿನದ ಎಂಟು ಗಂಟೆಯ ತನಕ ಮತ್ತೆ ಆಹಾರ ಸೇವನೆ ನಿಷಿದ್ಧವಾದ ಕಾರಣ, ನಡುವೆ ಇರುವ ಟೀ ಬ್ರೇಕ್ ಮಾತ್ರದಲ್ಲೆ ಪೂರ್ತಿ ಇಪ್ಪತ್ತನಾಲ್ಕು ಗಂಟೆಗಳನ್ನು ನಿಭಾಯಿಸಬೇಕಿತ್ತು. ತೀರಾ ಡಯಬಿಟಿಕ್ ರೀತಿಯ ತಿನ್ನಲೇಬೇಕಾದ ಕಾಯಿಲೆಯುಳ್ಳವರೂ ಕೂಡ ಹಿರಿಯ ಮಾಂಕ್ ಜತೆ ಚರ್ಚಿಸಿಯೆ ಮತ್ತಾವುದಾದರು ಉಪಾಯವಿದೆಯೆ ಎಂದು ನಿರ್ಧರಿಸಬೇಕಾಗುತ್ತಿತ್ತು. ಆದರೆ ಶ್ರೀನಾಥನ ವಿಷಯದಲ್ಲಿ ಕಾಯಿಲೆಯ ಯಾವ ಕಾರಣಗಳ ಅಡ್ಡಿಯೂ ಇರಲಿಲ್ಲ. ಇದ್ದುದೆಲ್ಲ ಅವನ ಮನಸತ್ವದ, ಮಾನಸಿಕ ಧೃಢತೆಯ ಆತಂಕಗಳಷ್ಟೆ. ನಿಜವಾಗಬಹುದಾದ ಆತಂಕಗಳಿಗಿಂತ ಅದು ಸಾಧ್ಯವಾಗುವುದೊ ಇಲ್ಲವೊ ಎಂಬ ಅಳುಕಿನ ಕಲ್ಪನೆ ಉದ್ದೇಪಿಸಿದ ಗಾಬರಿಯೆ ಹೆಚ್ಚಿನದಾಗಿತ್ತು. ಕೊನೆಗೆ ಆ ಆಲೋಚನೆಗೆ ಬೇಸತ್ತು ‘ ಆಗಿದ್ದಾಗಲಿ.. ತೀರಾ ತಡೆಯಲಾಗದಿದ್ದರೆ, ಯಾವುದಾದರೂ ಕಾಯಿಲೆಯ ನೆಪ ಹೇಳಿ ಏನಾದರೂ ಗಿಟ್ಟಿಸಿಕೊಂಡರಾಯ್ತು.. ಈಗಿಂದಲೆ ಯಾಕೆ ಚಿಂತೆ?’ ಎಂದು ನಿರ್ಧರಿಸಿ ನಿರಾಳನಾಗಿದ್ದ ಶ್ರೀನಾಥ.

ಆದರೆ ಅದಕ್ಕೆ ಮೀರಿದ ದೊಡ್ಡ ಚಿಂತೆಯೊಂದು ಅವನ ಎದುರಾಗಿ ನಿಂತು ಒಳಗೊಳಗೆ ಕಾಡುತ್ತಿತ್ತು, ಹೊರಗೆ ಪ್ರಕಟವಾಗದೆಯೆ. ಹೆಚ್ಚುಕಡಿಮೆ ತಾನು ಒಂದು ವಾರ ‘ವಾಟ್ ಪಃ ನಾನಾಚಟ್’ ಆಶ್ರಮಕ್ಕೆ ಹೋಗಿಬಿಟ್ಟರೆ ಆ ಒಂದು ವಾರ ಪೂರ್ತಿ ತನ್ನನ್ನು ಯಾರೂ ಸಂಪರ್ಕಿಸಲೂ ಸಾಧ್ಯವಾಗುವುದಿಲ್ಲ. ಆಫೀಸೇನೊ ಮೂರು ದಿನ ರಜೆಯಿರುವ ಕಾರಣ ಆ ತೊಂದರೆಯಂತೂ ಇಲ್ಲ – ಮಿಕ್ಕುಳಿದ ಎರಡು ದಿನಕ್ಕೆ ರಜೆ ಹಾಕುವುದರಿಂದ ಆ ಕಡೆ ಯಾವ ತೊಡಕು ಬರುವುದಿಲ್ಲ. ಆದರೆ ಮಗುವಿನ ಆಸ್ಪತ್ರೆಯ ಪರಿಸ್ಥಿತಿಯಲ್ಲಿ ಹೆಂಡತಿಗೆ ಈ ವಿಷಯ ಹೇಳಿ ಹೋಗುವುದಾದರೂ ಹೇಗೆ? ಕೇಳುತ್ತಿದ್ದಂತೆಯೆ ಮಗುವಿನ ಈ ಸ್ಥಿತಿಯಲ್ಲೂ ಇನ್ನಾವುದೊ ಮಜಾ ಉಡಾಯಿಸೊ ಟ್ರಿಪ್ ಹೋಗುತ್ತಿದ್ದಾನೆಂದುಕೊಂಡು ಮೇಲೆ ಬಿದ್ದು ಎಗರಾಡಿದರೆ? ಅದನ್ನು ಸರಿಯಾಗಿ ನಿಭಾಯಿಸಿ ಅವಳಿಗರ್ಥವಾಗುವಂತೆ ಹೇಳದಿದ್ದರೆ, ಸಮಸ್ಯೆಯ ಪರಿಹಾರಕ್ಕೆಂದು ಹೋಗುವ ಪ್ರಯಾಣವೆ ಸಮಸ್ಯೆಯ ವಸ್ತುವಾಗಿ, ಹೋದ ಕಾರ್ಯಕ್ಕೆ ಮನಗೊಡಲು ಸಾಧ್ಯವಾಗದೆ ಬಳಲಿ ಸೋತು ಹೋಗುವಂತಾಗಿಬಿಡಬಹುದು. ಆದರೆ ಅವಳಿಗದನ್ನು ಹೇಳುವುದಾದರೂ ಹೇಗೆ? ಊರಿನಲ್ಲಿದ್ದಾಗ ದೇವಸ್ಥಾನಕ್ಕೂ ಮುಖ ಮಾಡದವನು, ಮನೆಯಲ್ಲೂ ಕೂಡ ಪೂಜೆ ಗೀಜೆಯೆಂದು ತಲೆ ಕೆಡಿಸಿಕೊಳ್ಳದವನು, ಹಬ್ಬ ಹರಿದಿನಕ್ಕು ಗಂಧದಕಡ್ಡಿಯನ್ನು ಹಚ್ಚದವನು – ಈಗ ಒಂದು ವಾರದ ಮಟ್ಟಿಗೆ ‘ಸನ್ಯಾಸಿ ದೀಕ್ಷೆ’ಯಲ್ಲಿರಲು ಹೊರಟಿರುವೆನೆಂದರೆ ನಂಬುತ್ತಾಳೆಯೆ – ಅದರಲ್ಲೂ ಈ ಹೊತ್ತಿನಲ್ಲಿ? ಏನೊ ಬೊಗಳೆ ಬಿಟ್ಟು ಎಲ್ಲೊ ಸುತ್ತಾಡಲೊ ಅಥವಾ ಯಾವುದೊ ಆಫೀಸು ಕೆಲಸದ ಮೇಲೊ ಹೊರಟಿರುವೆನೆಂದು ಮೂಗು ಮುರಿದು, ‘ನಿಮಗೆ ಮನೆಗಿಂತ ಆಫೀಸೆ ಹೆಚ್ಚು..’ ಎಂದು ಬಿಕ್ಕಳಿಸಿ, ಹೀಯಾಳಿಸುತ್ತಾಳೆಯೆ ಹೊರತು ತಾನು ಹೀಗೊಂದು ಧಾರ್ಮಿಕ ನೆಲೆಯಲ್ಲಿ ಏನೊ ಸತ್ಯಾನ್ವೇಷಣೆಗೆ ಹೊರಟಿರುವೆನೆಂದರೆ ಅವಳು ಖಂಡಿತಾ ನಂಬುವುದಿಲ್ಲ. ಇನ್ನು ಅವಳಿಗೆ ನಂಬಿಕೆಯಾಗುವಂತೆ ಯಾವ ಕಥೆ ಕಟ್ಟಬೇಕೆಂಬುದೆ ದೊಡ್ಡ ಭೂತಾಕಾರದ ಸಮಸ್ಯೆಯಾಗಿ ಕಾಡುವ ಕುರುಹು ತೋರತೊಡಗಿತ್ತು. ಆದರೆ ಹೇಳದೆಯಂತೂ ಹೋಗುವಂತಿರಲಿಲ್ಲ ; ತೀರಾ ತುರ್ತಾದರೆ ಅಥವಾ ಮಗುವಿಗೆ ತೀರ ವಿಷಮ ಸ್ಥಿತಿಯ ಸಂಧರ್ಭ ಬಂದರೆ, ಕನಿಷ್ಠ ಮಾಂಕ್ ಸಾಕೇತರನ್ನು ಸಂಪರ್ಕಿಸಲು ಬಳಸಿದ್ದ ಆ ಮೆಡಿಟೇಶನ್ ಸೆಂಟರಿನ ಪೋನ್ ನಂಬರಾದರು ಕೊಡಲೆ ಬೇಕಿತ್ತು. ಅದೇನಾದರೂ ಆಗಲಿ ಸದ್ಯಕ್ಕೆ ಮಗುವಿನ ಸ್ಥಿತಿ ಹೇಗಿದೆಯೊ ಎಂದು ತಿಳಿಯಲಾದರೂ ಪೋನ್ ಮಾಡಬೇಕಿತ್ತು – ಆ ಸಂಧರ್ಭದ ಪರಿಸ್ಥಿತಿ ನೋಡಿಕೊಂಡು ಸೂಕ್ತ ಸಮಯದಲ್ಲಿ ಹೇಳಲಾಗುವುದೆ ? ಎಂದು ಪ್ರಯತ್ನಿಸಿ ನೋಡುವುದೆಂದು ನಿರ್ಧರಿಸಿಕೊಂಡು ಕುನ್. ರತನಳಿಗೆ ಆಸ್ಪತ್ರೆಯ ನಂಬರನ್ನು ನೀಡಿ ಪೋನ್ ಕನೆಕ್ಟ್ ಮಾಡಿ ತನ್ನ ಅಪಾರ್ಟ್ಮೆಂಟಿಗೆ ಟ್ರಾನ್ಸ್ಫರ ಮಾಡಲು ಕೇಳಿಕೊಂಡ.

ಅತ್ತ ಲೈನಿನಲ್ಲಿರುವಂತೆ ಹೇಳಿ ಕುನ್. ರತನ ಕನೆಕ್ಟ್ ಮಾಡಲು ಯತ್ನಿಸುತ್ತಿದ್ದಂತೆ, ಇತ್ತ ಶ್ರೀನಾಥನ ಎದೆಯಲ್ಲಿ ಒನಕೆ ಕುಟ್ಟಿದಂತೆ ‘ದಢ್’ ‘ದಢ್’ ಎನ್ನುತ್ತ ಜೋರಾಗಿ ಸದ್ದು ಮಾಡುತ್ತಿತ್ತು ಕಾತರದಿಂದ ವೇಗದಲ್ಲಿ ಓಡುತ್ತಿದ್ದ ಹೃದಯದ ಆವೇಗ. ಅತ್ತ ಕಡೆಯಿಂದ ಲತಳ ದನಿ ಕಿವಿಗೆ ಬೀಳುವ ತನಕ ಆ ಆವೇಗ ಇಳಿಯುವಂತಿರಲಿಲ್ಲ; ಕಳೆದ ಬಾರಿಯ ಹಾಗೆ ನಿರಾಳ ದನಿಯ ಪ್ರಪುಲ್ಲ ವಾಣಿ ಕೇಳುವುದೊ ಅಥವ ಮತ್ತೇನೊ ಹೆಚ್ಚು ಕಡಿಮೆಯಾಗಿ ಹೊಸ ಆತಂಕವೇನಾದರು ಉದ್ಭವಿಸಿಕೊಂಡ ಪರಿಣಾಮದ, ಗಾಬರಿ ತುಂಬಿದ ದನಿ ಕೇಳಿಸುವುದೊ ಎಂಬ ಆತಂಕಭರಿತ ಉದ್ವೇಗವೆ ಅದಕ್ಕೆ ಕಾರಣವಾಗಿತ್ತು. ಒಳ ಮನಸಿನಲ್ಲೇನೊ ಎಲ್ಲವೂ ಸರಿಯಿರಬೇಕೆಂಬ ಮಾಂಕ್ ಸಾಕೇತರ ಅಂತರ್ದನಿಯ ದಿಟ್ಟತನವೆ ಮೊಳಗಿ ಧೈರ ತುಂಬಿಸುತ್ತಿದ್ದರೂ ಅದನ್ನು ಧೃಡಪಡಿಸುವ ಸುದ್ದಿ ಅತ್ತ ಕಡೆಯಿಂದ ಬರುವ ತನಕ ಯಾವುದೊ ಅಸಹನೆಯಿಂದೊಡಗೂಡಿದ ಅಸಹನೀಯ ಭಾವ ಆವರಿಸಿಕೊಂಡಂತೆ ಕಾಣುತ್ತಿತ್ತು. ಬಹುಶಃ ಆ ಸುದ್ದಿ ಸುಖಪ್ರದವಾದದ್ದಾದರೆ ತಾನು ಹೇಳಬೇಕಾದ ಸುದ್ದಿಗೆ ಉತ್ತಮ ತಳಾಧಾರ ದೊರೆತಂತಾಗುವುದೆಂಬ ಹಿನ್ನಲೆಯ ಸ್ವಾರ್ಥವೂ ಅದಕ್ಕೆ ಕಾರಣವಾಗಿತ್ತೇನೊ? ಹೀಗಾಗಿ ಕುನ್. ರತನ ಕನೆಕ್ಟ್ ಮಾಡಿದ ಮೇಲೂ ಕ್ಲಿನಿಕ್ಕಿನ ಸ್ವಾಗತಕಾರಿಣಿಯ ಡೆಸ್ಕಿನಿಂದ ವಾರ್ಡಿಗೆ ವರ್ಗಾವಣೆಯಾಗುವ ಹೊತ್ತಿನ ಸಂಗೀತದ ಅಲೆಯಂತೆ ಅವನೆದೆಯೂ ಇನ್ನು ಏರಿಳಿಯುತ್ತಲೆ ಇತ್ತು ಅವನಿಗರಿವಿಲ್ಲದಂತೆ. ಅರೆಹೊತ್ತಿನ ಸಂಗೀತದ ಬಿಡುವು ಕೂಡಾ ಕ್ಷಿಪ್ರದ್ದಾಗಿರದೆ ಏಕಿಷ್ಟು ಧೀರ್ಘವಾಗಿದೆಯೆಂದುಕೊಳ್ಳುವ ಹೊತ್ತಿಗೆ ಸರಿಯಾಗಿ ಅತ್ತಕಡೆಯಿಂದ ತೇಲಿ ಬಂದಿತ್ತು ‘ಹಲೋ’ ಎಂಬ ದನಿ. ಹಿನ್ನಲೆಯಲ್ಲಿ ಮತೊಂದೆರಡು ದನಿಗಳು ಕೇಳಿ ಬರುತ್ತಿದ್ದು , ದನಿಯ ಶೈಲಿಯಿಂದಲೆ ಅತ್ತೆ ಮಾವನದೆಂದು ಗುರುತಿಸಿದರು, ಅದರ ದೆಸೆಯಿಂದಾಗಿ ಹೆಂಡತಿಯ ದನಿಯಲಿದ್ದ ಭಾವ ಪಕ್ಕನೆ ಗೊತ್ತಾಗಲಿಲ್ಲ. ಸಂಗೀತದ ನಡುವೆ ಇನ್ನೂ ಕಿವಿಗೆ ಬೀಳದಿದ್ದ ದನಿಗೆಂದು ಕಾದು ಕುಳಿತಿದ್ದವನು, ದನಿ ಕೇಳಿಸಿದಾಗ ತಟ್ಟನೆ ಉತ್ತರಿಸಲರಿವಾಗದೆ ತಡವರಿಸುವಂತಾದರೂ, ಸಾವರಿಸಿಕೊಂಡವನೆ ತಾನೂ ‘ ಹಲೋ..’ ಎಂದ.

‘ಅಪ್ಪ ಅಮ್ಮ ಬಂದಿದಾರೆ..ಇಲ್ಲೆ ವಾರ್ಡಿನಲ್ಲಿದಾರೆ…’ ಎಂದಳು ಲತ ತುಸು ಮೆಲುವಾದ ದನಿಯಲ್ಲಿ, ತಾನು ಎಂದಿನಂತೆ ನಿರಾಳವಾಗಿ ಮಾತನಾಡಲಾಗದೆಂಬುದನ್ನು ಪರೋಕ್ಷವಾಗಿ ಸೂಚಿಸುತ್ತ. ಅದು ಅರ್ಥವಾದವನಂತೆ ಅಷ್ಟೆ ತೆಳುವಾದ ದನಿಯಲ್ಲಿ,

‘ ಮತ್ತೆ ಡಾಕ್ಟರು ಬಂದಿದ್ದರ..? ಪಾಪು ಆರೋಗ್ಯ ಈಗ ಹೇಗಿದೆ ? ಅದೆ ಔಷಧಿ ಹಾಕ್ತಾ ಇದೀಯಾ ಇನ್ನೂ?’ ಎಂದು ಒಂದೆ ಬಾರಿಗೆ ಹಲವಾರು ಪ್ರಶ್ನೆಗಳ ಮಳೆ ಸುರಿಸಿದ.

ಇವನ ತಳಮಳವನ್ನರ್ಥ ಮಾಡಿಕೊಂಡವಳ ಬುದ್ದಿವಂತಿಕೆಯ ದನಿಯಲ್ಲಿ, ‘ ಹೂಂ..ರೀ.. ಈಗ ಎಷ್ಟೋ ಪರವಾಗಿಲ್ಲ..ಡಾಕ್ಟರು ತಿರುಗಿ ಬಂದು ನೋಡಿಕೊಂಡು ಹೋದ್ರು.. ‘ಈಗ ಜ್ವರ ಪೂರ್ತಿ ಇಳಿದಿದೆ, ಆದರೆ ನಿಲ್ಲದ ಭೇಧಿಯಿಂದ ಮಗು ತುಂಬಾ ಸುಸ್ತಾಗಿ ಹೋಗಿದೆ..ಅದು ಮತ್ತೆ ಗೆಲುವಾಗಲಿಕ್ಕೆ ಸ್ವಲ್ಪ ಸಮಯ ಬೇಕು’ ಅಂದರು… ‘ಇನ್ನೆರಡು ದಿನ ಇಲ್ಲೆ ಇರಲಿ ಮಾಮೂಲಿ ಹಾಲಿನ ಜತೆ ಸ್ವಲ್ಪ ಸಪ್ಲಿಮೆಂಟ್ಸ್ ಕೊಡೋಣ.. ಬೇಕಾದರೆ ಸ್ವಲ್ಪ ಡ್ರಿಪ್ಸು ಹಾಕಿಸೋಣ.. ಶಕ್ತಿ ತುಂಬಿಕೊಳ್ಳುತ್ತೆ’ ಅಂತ ಹೇಳಿ ಹೋದರು…’ ಎಂದಳು.

ಅವಳ ಮಾತು ಕೇಳುತ್ತಿದ್ದಂತೆ ಕೊಂಚ ನಿರಾಳವಾದಂತಾಗಿ ಅವನರಿವಿಲ್ಲದೆ ಒಂದು ಧೀರ್ಘ ನಿಟ್ಟುಸಿರು ಬಿಟ್ಟ ಶ್ರೀನಾಥ, ಅವಳಿಗೂ ಕೇಳಿಸುವ ಹಾಗೆ.. ಅದನ್ನು ಕೇಳಿಸಿಕೊಂಡವಳೆ ಅವನ ಆತಂಕದ ಗುರುತ್ವದ ಅರಿವಾದವಳಂತೆ, ಜತೆಗೆ ಅವನಿಗೂ ಮಗುವಿನ ಕುರಿತಾದ ಆತಂಕ ಕಾಡಿರುವುದರ ಕುರಿತು ಸಮಾಧಾನವೂ ಆದಂತಾಗಿ, ‘ ಇನ್ನೇನು ಚಿಂತೆಯಿಲ್ಲ ಅಂತ ಡಾಕ್ಟರೆ ಹೇಳಿದರು ರೀ..ಏನು ಯೋಚನೆ ಮಾಡಬೇಡಿ.. ಆರಾಮವಾಗಿ ನಿಮ್ಮ ಕೆಲಸದತ್ತ ಗಮನ ಕೊಡಿ..ಅಬ್ಬಬ್ಬಾ ಅಂದರೆ ಇನ್ನು ಎರಡೆ ದಿನಕ್ಕೆ ಮಗು ಪೂರ್ತಿ ಚೇತರಿಸಿಕೊಂಡು ಬಿಡುತ್ತದೆ… ಆಗ ಡಿಸ್ಚಾರ್ಜು ಮಾಡಿಸಿಕೊಂಡು ಮನೆಯಲ್ಲೆ ನೋಡಿಕೊಳ್ಳಬಹುದು ಅಂದಿದ್ದಾರೆ ಡಾಕ್ಟರು…’ ಅನ್ನುತ್ತಿದ್ದಂತೆ ಹಿನ್ನಲೆಯಲ್ಲೇನೊ ಕ್ಷೀಣವಾದ ಮಗುವಿನ ದನಿ ಕೇಳಿಸಿದಂತಾಯ್ತು, ಗಿಲಕಿಯ ಸದ್ದಿನೊಂದಿಗೆ.

‘ ಅದೇನು ಅಲ್ಲಿ ಸದ್ದು? ಪಾಪು ಮಾಡಿದ್ದ …? ‘ ಎಂದು ಕೇಳಿದ ಶ್ರೀನಾಥ ಅನುಮಾನದಲ್ಲೆ. ಇನ್ನು ಹಾಸಿಗೆಯ ಮೇಲೆ ಮಲಗಿದ ಸ್ಥಿತಿಯಲ್ಲಿರುವ ಮಗು ಸದ್ದು ಮಾಡಲಿಕ್ಕಿಲ್ಲವೆಂಬ ಎಣಿಕೆಯ ಭಾವದಲ್ಲಿ.

‘ ಹೌದು ರೀ.. ನಮ್ಮಮ್ಮ ಎತ್ತಿ ತೊಡೆಯ ಮೇಲೆ ಹಾಕಿಕೊಂಡಿದಾರೆ… ಅವರು ಗಿಲಕಿ ತೋರಿಸಿ ಆಡಿಸಿದರು.. ಅದಕ್ಕೆ ತುಟಿ ತೆಗೆದು ನಗ್ತಾ ಇದಾಳೆ.. ಆದರೂ ಸದ್ದು ಮೊದಲಿನ ಹಾಗೆ ಬರ್ತಾ ಇಲ್ಲ.. ಹುಷಾರು ತಪ್ಪುವ ಮುಂಚೆ ನಕ್ಕಿದರೂ ಕಿರುಚಿದಂಗೆ ಇರ್ತಿತ್ತು.. ಒಳ್ಳೆ ರಾಕ್ಷಸ ಸದ್ದಿನ ಹಾಗೆ. ಎಲ್ಲಾ ಬಜಾರಿ ಘಟವಾಣಿಯ ಗಂಟಲು ಅಂತ ರೇಗಿಸ್ತಿದ್ದರು. ಈಗ ತುಟಿಯೆಲ್ಲ ಒಣಗಿ ಹೋದಂತೆ ಮುರುಟಿಕೊಂಡು ಸದ್ದೆ ಇಲ್ಲಾ… ಡಾಕ್ಟರು ಹೇಳಿದ ಹಾಗೆ ತುಂಬಾ ವೀಕಾಗಿ ಹೋಗಿದ್ದಾಳೆ..ಆದರೆ ನಿನ್ನೆ ಮೊನ್ನೆಗೆ ಹೋಲಿಸಿದರೆ ಅದೆಷ್ಟೊ ವಾಸಿ …’ಸದ್ಯ ಬಾಯ್ಬಿಟ್ಟು ನಗ್ತಾ ಇದಾಳಲ್ಲ? ದೇವರು ದೊಡ್ಡವನು’ ಅಂತ ಈಗ ತಾನೆ ನಟಿಕೆ ತೆಗೆದರು ನಮ್ಮಮ್ಮ…’ ಎಂದಳು ಲತ.

ಆ ಮಾತು ಕೇಳುತ್ತಿದ್ದಂತೆ ಮಗುವಿನ ಸ್ಥಿತಿಯಲ್ಲಿ ಮತ್ತಷ್ಟು ಸುಧಾರಣೆಯಾಗಿದೆಯೆಂದರಿವಾಗಿ ಪೂರ್ತಿ ನಿರಾಳವಾಯ್ತು ಶ್ರೀನಾಥನಿಗೆ. ‘ಇನ್ನೆರಡು ದಿನದಲ್ಲಿ ಡಿಸ್ಚಾರ್ಜು ಆಗಲಿದೆಯೆಂದರೆ, ತಾನು ‘ವಾಟ್ ಪಃ ನಾನಾಚಟ್’ ನತ್ತ ಹೊರಡುವ ಮೊದಲೆ ಇವರೆಲ್ಲ ಮನೆ ಸೇರಿಕೊಂಡಿರುತ್ತಾರೆ. ಸದ್ಯ, ಅದೊಂದು ಆತಂಕ ತಪ್ಪಿದಂತಾಗಿಬಿಟ್ಟರೆ ಸನ್ಯಾಸಾಶ್ರಮ ವಾಸ ನಿರಾತಂಕವಾಗಿಬಿಡುತ್ತದೆ – ಯಾವುದೆ ಮಾನಸಿಕ ಆತಂಕ ಗೊಂದಲವಿಲ್ಲದೆ’ ಎಂದುಕೊಳ್ಳುತ್ತಿದ್ದಂತೆ, ‘ಅರೆ..! ಈಗ ನಡೆದಿರುವುದೆಲ್ಲ, ಮಾಂಕ್ ಸಾಕೇತರ ನುಡಿಗಳಿಗೆ ಅನುಗುಣವಾಗಿಯೆ ನಡೆಯುತ್ತಿರುವಂತೆ ಕಾಣುತ್ತಿದೆಯಲ್ಲ? ಮೊದಲಿಗೆ ಅವರನ್ನು ಸಂಪರ್ಕಿಸಲು ನಿರ್ಧರಿಸುತ್ತಿದ್ದಂತೆ ಮಗುವಿನ ಆರೋಗ್ಯದಲ್ಲಿ ಚಕ್ಕನೆ ಪ್ರಗತಿ ಕಂಡು ಬಂದಿತ್ತು… ಅದರ ಕುರಿತು ಅವರನ್ನೆ ಮತ್ತೆ ಪ್ರಶ್ನಿಸಿದಾಗಲೂ ಉತ್ತರಿಸದೆ, ತಾನಿಡುತ್ತಿರುವ ಹೆಜ್ಜೆ ಸರಿಯಾಗಿದ್ದರೆ ಅದರ ಪ್ರತಿಬಿಂಬ ಸುತ್ತಲಿನ ಆಗುಹೋಗುಗಳಲ್ಲಿ ಧನಾತ್ಮಕ ಯಾ ಋಣಾತ್ಮಕ ಪ್ರತಿಕ್ರಿಯೆಯ ರೂಪದಲ್ಲಿ ತಾನಾಗಿಯೆ ಕಾಣಿಸಿಕೊಳ್ಳುತ್ತದೆಂದು ಹೇಳಿ ಅದರಲ್ಲೆ ಉತ್ತರ ಹುಡುಕಲು ಆದೇಶಿಸಿದ್ದರು… ಮೊದಲು ಆಶ್ರಮವಾಸಕ್ಕೆ ಹೋಗುವುದೊ, ಬಿಡುವುದೊ ತುಸು ಗೊಂದಲವಿದ್ದರೂ, ಹೋಗಿಯೆ ತೀರುವುದೆಂದು ನಿರ್ಧರಿಸಿಕೊಳ್ಳುತ್ತಿದ್ದಂತೆ ಅದರ ಪ್ರತಿಫಲದ ಫಲಿತವೊ ಎಂಬಂತೆ ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಾಣಿಸುತ್ತಿದೆ.. ಮೊದಲ ಮೂರು ದಿನದಲ್ಲಿ ಪಾತಾಳಕ್ಕಿಳಿದಂತಿದ್ದ ಪರಿಸ್ಥಿತಿ ಏಕಾಏಕಿ ತಾನವರನ್ನು ಸಂಪರ್ಕಿಸಿದ ಗಳಿಗೆಯಿಂದ ಪ್ರಗತಿಯನ್ನೆ ತೋರುತ್ತಿದೆ. ಅಂದರೆ ಇದೆಲ್ಲಾ ಅವರ ಮಾತಿನಂತೆ ತಾನಿಡುತ್ತಿರುವ ‘ಸರಿ ಹೆಜ್ಜೆಯ’ ಫಲಿತವೆ? ಅಥವಾ ಮತ್ತೆ ಅದೇ ಕಾಕತಾಳೀಯತೆಯ ವಿಧಿಯಾಟವೆ? ಏನಾದರೂ ಸರಿ, ಈ ದಿಕ್ಕಿನಲ್ಲಿ ಫಲಿತವಂತು ಸರಿಯಾಗಿ ಬರುತ್ತಿರುವುದರಿಂದ ತಾನು ಮಾಡುತ್ತಿರುವುದೇನೊ ಸರಿಯಾದ ಹಾದಿಯಲ್ಲೆ ಇರಬೇಕು. ಬೇರೇನೂ ಆಲೋಚಿಸದೆ ಅದನ್ನೆ ಮುಂದುವರೆಸುವುದು ಸರಿ.. ಸದ್ಯಕ್ಕೆ, ಈ ಒಂದು ವಾರದ ‘ಸನ್ಯಾಸಾಶ್ರಮ’ ಕಥೆಯನ್ನು ಲತಳಿಗೆ ಹೇಳುವುದು ಹೇಗೆ ಎಂದು ಆಲೋಚಿಸುವತ್ತ ಗಮನ ಕೊಡಬೇಕು.. ಅವರು ಹೇಳಿರುವಂತೆ, ವಿಚಾರದ ಹಾದಿ ಸರಿಯಿದ್ದರೆ ಈ ವಿಚಾರದಲ್ಲೂ ಅವಳು ಸುಲಭದಲ್ಲಿ ಸಮ್ಮತಿಸುವ ದಾರಿ ತಂತಾನೆ ಕಾಣಿಸಬೇಕಲ್ಲ? ಮೊದಲಾಗಿದ್ದರೆ ಹೇಳದೆಯೂ ಹೊರಟುಬಿಡುತ್ತಿದ್ದ – ಅದು ಬೇರೆ ವಿಷಯ; ಈಗ ಈ ಮಗುವಿನ ಆಸ್ಪತ್ರೆಯ ಅಧ್ಯಾಯದ ನಂತರ ಹಾಗೆ ಮಾಡುವ ಧೈರ್ಯವಿಲ್ಲ…..

‘ ರೀ.. ಈ ಆಸ್ಪತ್ರೆಯದೆಲ್ಲ ಮುಗಿದ ಮೇಲೆ ನಂಜನಗೂಡಿಗೆ ಮತ್ತು ಚಾಮುಂಡಿಬೆಟ್ಟಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರೋಣ ಅಂದರು ಅಮ್ಮ…. ಯಾವುದೊ ಒಂದೆರಡು ಹರಕೆ ಬೇರೆ ಮಾಡಿಕೊಂಡಿದ್ದಾರೆ.. ಡಿಸ್ಚಾರ್ಜು ಆದ ಮೇಲೆ ಒಂದೆರಡು ದಿನ ನೋಡಿಕೊಂಡು ಹೋಗಿ ಹರಕೆ ತೀರಿಸಿಕೊಂಡು ಬಂದುಬಿಡುತ್ತೀವಿ… ಈಗಲ್ಲ… ಪೂರ್ತಿ ಹುಷಾರಾಗಿ ಓಡಾಡುವ ಹಾಗಾದ ಮೇಲೆ…’ ಅತ್ತಕಡೆಯಿಂದ ಕೇಳುತ್ತಿದ್ದವಳ ದನಿಗೆ ಬೆಚ್ಚಿ ಬಿದ್ದ ಶ್ರೀನಾಥ..!

ಆಗ ತಾನೆ ತನ್ನ ಪ್ರಯಾಣದ ವಿಷಯವನ್ನು ಹೇಗೆ ಎತ್ತುವುದೆನ್ನುವ ಜಿಜ್ಞಾಸೆಯಲ್ಲಿ ಮಾಂಕ್ ಸಾಕೇತರ ಸಿದ್ದಾಂತದ ಮನಾವಲೋಕನ ನಡೆಸುತ್ತಿರುವ ಹೊತ್ತಿಗೆ ಸರಿಯಾಗಿ, ಆ ವಿಷಯವನ್ನೆತ್ತಲು ಸುಲಭವಾಗುವಂತಹ ಮಾತು ಅವಳ ಬಾಯಿಂದಲೆ ಬರುವುದೆ? ಇದನ್ನು ಮತ್ತೆ ಅವರ ಮಾತಿನ ನಿಖರತೆಗೆ ಸಾಕ್ಷಿಯೆನ್ನಬೇಕೊ, ಅಥವಾ ಮತ್ತೊಂದು ‘ಕಾಕತಾಳೀಯತೆ’ ಎನ್ನಬೇಕೊ? ಒಂದು ಹಂತ ಮೀರಿದ ಮೇಲೆ ಎಲ್ಲವೂ ‘ಪವಾಡವೊ, ಕಾಕತಾಳೀಯತೆಯೊ’ ಎಂದು ಬೇರ್ಪಡಿಸಲೆ ಆಗದ ತೆಳು ಗೆರೆಯ ಅಯೋಮಯವೆ ಎನಿಸಿ, ಮನದ ಮತ್ತೊಂದು ಓಣಿಯಲ್ಲಿ ನಡೆಯುತ್ತಿದ್ದ ಆ ಮಂಥನವನ್ನು ಹಾಗೆ ಹರಿಯಬಿಡುತ್ತ ಪ್ರಕಟದಲ್ಲಿ ತನ್ನ ಆಲೋಚನೆಯನ್ನು ಹೇಳಲು ಇದೆ ಸರಿಯಾದ ಸಂಧರ್ಭವೆನಿಸಿ ಬಾಯ್ತೆರೆದ..

‘ ಸರಿ ಎಲ್ಲಾ ಹೋಗಿ ಬನ್ನಿ.. ನಿನ್ನೆ ಬ್ಯಾಂಕಿಗೆ ಒಂದಷ್ಟು ಹಣ ಕಳಿಸಿಯಾಗಿದೆ.. ಹರಕೆ ಪರಕೆಗೆಲ್ಲ ಅದರಲ್ಲೆ ಬಳಸಿಕೊ…ಸಾಕಾಗದಿದ್ದರೆ ಹೇಳು, ಯಾರ ಹತ್ತಿರವಾದರು ತಕ್ಷಣಕ್ಕೆ ವ್ಯವಸ್ಥೆ ಮಾಡುತ್ತೇನೆ… ಆಮೇಲೆ ಮತ್ತೆ ಟ್ರಾನ್ಸ್ಫರ ಮಾಡುತ್ತೇನೆ…’ ಎಂದ.

ಅವನ ಮಾತು ಕೇಳುತ್ತಿದ್ದಂತೆ ಮತ್ತೆ ಖುಷಿಯಿಂದ ಅರಳಿದ ಮೊಗದಲ್ಲಿ, ‘ ಇಲ್ಲಾರಿ ಅಷ್ಟೊಂದೇನೂ ಬೇಕಾಗುವುದಿಲ್ಲ..ಎಲ್ಲಾ ಒಂದೆರಡು ಮೂರು ಸಾವಿರದಲ್ಲೆ ಮುಗಿದು ಹೋಗುತ್ತೇ ಎಂದರು.. ಖರ್ಚು ಹೆಚ್ಚಾದರೆ ಏನಿದ್ದರು ಈ ಕ್ಲಿನಿಕ್ಕಿನದೆ ಅನ್ನುತ್ತಿದ್ದರು ಅಪ್ಪ…’

‘ಅದೂ ಏನೂ ತೀರಾ ದುಬಾರಿಯಿರುವುದಿಲ್ಲ ಬಿಡು..ನನ್ನ ಫ್ರೆಂಡಿಗೆ ನಾನೀಗಾಗಲೆ ಹೇಳಿಕೊಂಡಿದ್ದೇನೆ… ಅದಿರಲಿ ಲತಾ ಮತ್ತೊಂದು ಮುಖ್ಯವಾದ ವಿಷಯ …’ ಎಂದು ರಾಗವೆಳೆದು ನಿಲ್ಲಿಸಿದ ಶ್ರೀನಾಥ…

‘ ಏನು?’ ಎಂದಳು ಮಾಮೂಲಿನ ದನಿಯಲ್ಲಿ, ಅವನು ಹೇಳಹೊರಟಿರುವ ಮಾತಿನ ಹಿನ್ನಲೆಯರಿಯದೆ…

‘ ನನಗಿಲ್ಲೊಬ್ಬರು ಥಾಯ್ ಪ್ರೀಸ್ಟ್ ಸಿಕ್ಕಿದ್ದರು..ದೊಡ್ಡ ಬುದ್ಧಿಸ್ಟ್ ಮಾಂಕ್ ಅವರು…’

‘ ಮಾಂಕಾ…? ಅಲ್ಲಿನ ಮಾಂಕುಗಳಿಗೆಲ್ಲಾ ತುಂಬಾ ಪವರ್ಸ್ ಇರುತ್ತಂತಲ್ಲಾ ಹೌದಾ…?’ ತಟ್ಟನೆ ಟ್ರಾಕ್ ಬದಲಿಸಿದ ಕುತೂಹಲವನ್ನೆ ಬಂಡವಾಳವಾಗಿಸಿ ಕೇಳಿದಳು. ಶ್ರೀನಾಥ ಅದರತ್ತ ಹೆಚ್ಚು ಗಮನಿಸದೆ,

‘ ಏನೊ ತುಂಬಾ ಪವರ್ ಇರುವವರ ಹಾಗೆ ಕಾಣಿಸಿದರು.. ಅವರಿರೊ ದೇವಾಲಯದ ಆಶ್ರಮ ಅಲ್ಲೆಲ್ಲೊ ಕಾಡಿನಲ್ಲಿದೆಯಂತೆ…ಅವರು ವಾಸಿಸೋದು ಆ ಕಾಡಿನ ದೇವಾಲಯದಲ್ಲೆ…’

‘ ಅರೆರೆ… ನಮ್ಮ ಹಳೆ ಕಾಲದಲ್ಲಿ ಗುರುಕುಲಗಳು ಕಾಡಿನಲ್ಲಿರುತ್ತಿತ್ತಲ್ಲಾ, ಹಾಗಾ?’ ಎಂದಳು ಹೆಚ್ಚಿದ ಕುತೂಹಲದಿಂದ.

ಅವಳ ಕಾಮೆಂಟಿಗೆ ನಗು ಬಂದು, ‘ಹೌದಲ್ಲ , ಅದೊಂದು ರೀತಿ ಗುರುಕುಲದಂತೆಯೆ ಅಲ್ಲವೆ? ಆದರೆ ವಯಸ್ಸಾದ ದೊಡ್ಡ ಮಕ್ಕಳಿಗೆ ಮಾತ್ರ..’ ಎಂದುಕೊಳ್ಳುತ್ತ, ‘ಅದು ನಿಜವೇ ಅನ್ನು…! ಅದಿರಲಿ.. ಅವರ ಜತೆ ಅದು ಇದು ಮಾತಾಡುವಾಗ ಪಾಪುವಿನ ಬಗೆ, ಕೆಲಸದ ಬಗ್ಗೆ, ಜೀವನದ ಬಗ್ಗೆ – ಹೀಗೆ ಏನೇನೊ ಮಾತುಕಥೆಗಳು ನಡೆದವು.. ಬಹಳ ವಿಚಿತ್ರವಾಗಿ ಮಾತಾಡುವ ವ್ಯಕ್ತಿಯಾದರೂ ಅವರ ಮಾತಿನಲ್ಲಿ ಏನೊ ಸತ್ಯ ಇರುವ ಹಾಗೆ ಕಾಣುತ್ತಿತ್ತು.. ಧಾರ್ಮಿಕ, ಆಧ್ಯಾತ್ಮಿಕ, ವೇದಾಂತ, ವಿಜ್ಞಾನ, ಜೋತಿಷ – ಎಲ್ಲದರ ಬಗೆಯು ಮಾತನಾಡಬಲ್ಲವರು; ಸುಮಾರು ಹೊತ್ತು ಮಾತನಾಡಿದರು ಮಾತೆ ಮುಗಿದಿರಲಿಲ್ಲ – ಆದರೆ ಅವರು ಹೊರಡುವ ಹೊತ್ತಾಗಿಬಿಟ್ಟಿತ್ತು.. ಅದಕ್ಕೆ ಕೊನೆಯಲ್ಲಿ ಅವರು ಅವರಿರುವ ಆ ಆಶ್ರಮಕ್ಕೆ ಒಂದು ವಾರ ಬಂದು ಹೋಗಿ ಎಂದು ಕರೆದರು…’ ಎಂದು ತಡೆದು ನಿಲ್ಲಿಸಿದ ಶ್ರೀನಾಥ.

‘ ಬಂದು ಹೋಗೆಂದು ಕರೆದರೆ? ಅದೇಕೆ? ಹೋಗಿ ಅಲ್ಲೇನು ಮಾಡಬೇಕು?’

‘ ಇನ್ನೇನಿರುತ್ತದೆ? ಬೌದ್ಧ ದೇವಾಲಯದಲ್ಲಿ ಬೌದ್ಧ ಧರ್ಮದಂತೆ ಧ್ಯಾನ, ಚರ್ಚೆ ಇತ್ಯಾದಿಗಳ ಆಚರಣೆ ಇರುತ್ತದೆಯಷ್ಟೆ.. ಕಾಡಿನಲ್ಲಿರುವ ಆಶ್ರಮವಾದ ಕಾರಣ ಪೂರ್ತಿ ಪ್ರಶಾಂತವಾಗಿರುವ ವಾತಾವರಣವಿರುತ್ತದೆ…ಅಲ್ಲಿನ ಪೂಜೆ ಪುನಸ್ಕಾರಗಳ ಮಧ್ಯೆಯೆ ಬಿಡುವು ಮಾಡಿಕೊಂಡು ಮತ್ತಷ್ಟು ಮಾತನಾಡಿಕೊಳ್ಳಬಹುದು ಅಷ್ಟೆ…’

ಅವನ ಮಾತು ಕೇಳುತ್ತಿದ್ದ ಹೊತ್ತಲ್ಲೆ , ‘ಇದೇನು, ಇದ್ದಕ್ಕಿದ್ದಂತೆ ಸನ್ಯಾಸಿ, ಮಠಗಳ ಸಹವಾಸ, ಚಿಂತೆ ಅಂಟಿಕೊಂಡುಬಿಟ್ಟಿದೆ? ಏನು ಸನ್ಯಾಸಿ, ಗಿನ್ಯಾಸಿ ಆಗಲೆಂದು ಹೊರಟಿಲ್ಲಾ ತಾನೆ’ ಎಂಬ ಅಸಂಗತ ಆಲೋಚನಾ ಲಹರಿಯು ಹಾದುಹೋಗಿ ಮುಖದಲ್ಲೊಂದು ಮುಗುಳ್ನಗೆ ಮೂಡಿಸುತ್ತಿದ್ದಂತೆ, ಇದ್ದಕ್ಕಿದ್ದಂತೆ ‘ಮಗುವಿನ ದಿಢೀರ ಅನಾರೋಗ್ಯ ಏಕಾಏಕಿ ದೈವದಲ್ಲಿ ನಂಬಿಕೆ, ಭಕ್ತಿಯನ್ನು ಹೆಚ್ಚಿಸಿಬಿಟ್ಟಿದೆಯೆ? ಅದರ ಫಲಿತ ಈ ವಿಶೇಷ ಶ್ರದ್ದೆಯಾಗಿ ಚಿಗುರಿಕೊಂಡಿದೆಯೆ?’ ಎಂದೂ ಅನಿಸಿ ಆ ಅನುಭೂತಿ ತಂದ ಹರ್ಷೋತ್ಪುಳಕ ಒಳಗೆಲ್ಲೊ ಮೀಟಿ ಧನ್ಯತೆಯ ಭಾವವನ್ನು ತಂದಂತೆನಿಸಿ, ಏನೊ ಹೊಳೆದವಳಂತೆ ಅವಳೆದೆ ತುಂಬಿ ಬಂದು ಅದನ್ನು ಪ್ರತಿನಿಧಿಸುವ ದನಿಯಲ್ಲಿ, ‘ಅರ್ಥವಾಯಿತು ಬಿಡಿ.. ಪಾಪು ಹುಷಾರಾಗಲಿ ಅಂತ ಅಲ್ಲಿಗೆ ಹೋಗಿ ಬರಬೇಕೆಂದುಕೊಂಡಿದ್ದೀರಾ?’ ಎಂದುಬಿಟ್ಟಳು !

ಅವಳು ಆಗ ತಾನೆ ಉರುಳಿಸಿದ್ದ ‘ನಂಜನಗೂಡು, ಚಾಮುಂಡಿ ಬೆಟ್ಟದ’ ಹರಕೆಯಂತದ್ದೆ ಭಾವವನ್ನು ಈ ಬೌದ್ಧ ದೇವಾಲಯದ ‘ಹೋಗಿ ಬರುವಿಕೆಯ ಕೈಂಕರ್ಯಕ್ಕೆ’ ಆರೋಪಿಸಿದ ತರ್ಕ ಅವನನ್ನು ಅರೆಗಳಿಗೆ ವಿಸ್ಮಯಗೊಳಿಸಿ, ಏನು ಉತ್ತರಿಸಬೇಕೆಂದೆ ಹೊಳೆಯಲಿಲ್ಲ. ಆದರೆ ಅವಳ ಲಾಜಿಕ್ಕಿಗನುಗುಣವಾಗಿ ಇದು ತುಂಬಾ ಸೂಕ್ತವಾಗಿ ಹೊಂದುವ ವಿವರಣೆಯೆನಿಸಿದಾಗ, ಏನೊ ಆಲೋಚಿಸುತ್ತ, ‘ಹೌದೆನ್ನುವಂತೆ’ ತಲೆಯಾಡಿಸಿದ್ದ ಅವಳಿಗೆ ಪೋನಿನಲ್ಲದು ಕಾಣಿಸದಿದ್ದರು. ಅವಳ ತರ್ಕದ ಎಳೆಯನ್ನೆ ಹಿಡಿದುಕೊಂಡು ಮುಂದುವರೆಸುವವನಂತೆ,

‘ ..ಆದರೆ ಅಲ್ಲಿ ಹೋಗಬೇಕೆಂದರೆ ಕನಿಷ್ಠ ಒಂದು ವಾರವಾದರೂ ಅಲ್ಲೆ ಇರಬೇಕಂತೆ… ಅಲ್ಲಿರುವ ತನಕ ಯಾವ ಹೊರಗಿನ ಸಂಪರ್ಕವೂ ಸಾಧ್ಯವಿಲ್ಲ.. ಪೋನ್ ಕೂಡ ಸಾಧ್ಯವಿರುವುದಿಲ್ಲಾ…ಒಂದು ರೀತಿ ಹೊರಗಿನ ಪ್ರಪಂಚದ ಸಂಪರ್ಕ, ಸಂಬಂಧ ಪೂರ್ತಿಯಾಗಿ ನಿರ್ಬಂಧಿಸಿದ ಹಾಗೆ – ಅಲ್ಲಿರುವಷ್ಟು ದಿನವೂ…’

‘ಅದ್ಯಾವುದದು ರೀ, ಒಂದು ವಾರದಷ್ಟು ದೊಡ್ಡ ಹರಕೆ? ನಮಗಿಂತಲು ದೇವರಲ್ಲಿ ನಂಬಿಕೆ ಜಾಸ್ತಿ ಅಂತ ಕಾಣುತ್ತೆ ಆ ಜನಕ್ಕೆ? ನೀವಂತೂ ಇದ್ಯಾವುದನ್ನು ನಂಬದವರು.. ನಿಮಗೆ ಇಷ್ಟು ನಂಬಿಕೆ ಬಂದಿರುವುದನ್ನು ನೋಡಿದರೆ, ತುಂಬಾ ಸತ್ಯದ ದೇವರು ಅಂತ ಕಾಣುತ್ತದೆ..’ ಎಂದು ತನ್ನೂರಿನ ದೇವರುಗಳ ನಂಬಿಕೆಯ ಬಂಡವಾಳವನ್ನೆಲ್ಲ ಒಂದೆ ಏಟಿಗೆ ಅಲ್ಲಿಗೂ ಅನ್ವಯಿಸಿ ಏಕೀಭವಿಸಿಬಿಟ್ಟಳು…!

‘ಪಾಪು ಹುಷಾರಿಲ್ಲದ ಈ ಹೊತ್ತಲ್ಲಿ ಒಂದು ವಾರ ಪೂರ್ತಿ ಅಲ್ಲಿಗೆ ಹೋಗಬೇಕಲ್ಲಾ ಅಂತ ಯೋಚಿಸುತ್ತಿದ್ದೆ… ಹೋದರೆ ಮತ್ತೆ ವಾಪಸ್ಸು ಬರುವ ತನಕ ಪೋನಿನಲ್ಲೂ ಸಿಗುವುದಿಲ್ಲವೆನ್ನೊ ಕಾರಣಕ್ಕೆ…?’

‘ಅಯ್ಯೊ ಅದಕ್ಯಾಕೆ ಯೋಚನೆ? ಹೋಗ್ತಾ ಇರೋದೆ ಪಾಪುವಿಗೆ ಒಳ್ಳೇದಾಗ್ಲಿ ಅಂತ ಅಲ್ವ? ಧಾರಾಳವಾಗಿ, ಆರಾಮವಾಗಿ ಹೋಗಿ ಬನ್ನಿ… ಹೇಗೂ ಪಾಪೂನು ಹುಷಾರಾಗ್ತಾ ಇದೆಯಲ್ಲಾ? ಯಾವಾಗ ಹೋಗಬೇಕು ಅಲ್ಲಿಗೆ?’ ಎಂದು ಪೂರ್ತಿ ಸೀನನ್ನೆ ಬದಲಾಯಿಸಿಬಿಟ್ಟಳು ಒಂದೆ ಮಾತಲ್ಲಿ…

‘ ಹೋದರೆ ಇನ್ನು ನಾಲ್ಕು ದಿನದಲ್ಲಿ ಹೊರಡಬೇಕು…’ ಎಂದ.

‘ಸರಿ ಮತ್ತೆ.. ಅಷ್ಟೊತ್ತಿಗೆ ನಾವೂ ಡಿಸ್ಚಾರ್ಜ್ ಆಗಿ ಮನೆಯಲ್ಲಿರುತ್ತೇವೆ.. ಮತ್ತೆ ಹರಕೆ ತೀರಿಸೋಕೆ ಅಂತ ನಾವೂ ಎರಡು ಮೂರು ದಿನ ಹೇಗೂ ಸುತ್ತಾಡಬೇಕು… ನಿಮ್ಮ ತೀರ್ಥಯಾತ್ರೆಗೆ ಇನ್ನೊಂದೆರಡು ಮೂರು ದಿನ ಜಾಸ್ತಿ ಅಷ್ಟೆ ತಾನೆ?’ ಎಂದು ಇಡೀ ಸಮೀಕರಣವನ್ನು ಸರಳೀಕರಿಸಿಟ್ಟುಬಿಟ್ಟಳು..

ಹರಕೆಗೆ ಸಂಬಂಧಿಸಿದ್ದು ಎಂದರೆ ನಮ್ಮ ಜನಗಳಿಗೆ ದೇಶ, ಭಾಷೆ, ಸಂಸ್ಖೃತಿ, ಆಚಾರ, ವಿಚಾರಗಳ ಯಾವ ಅಡ್ಡಗೋಡೆಯೂ ಕಾಣಿಸುವುದಿಲ್ಲ.. ಎಲ್ಲಾ ದೇವರ ತತ್ವಗಳು ಒಂದೆ ಉದ್ದೇಶ ಪೂರೈಕೆಗೆ ಏಕೀಭವಿಸಿದ ಸರ್ವಸಮ್ಮತ ಆಯಾಮವನ್ನು ಪಡೆದುಕೊಂಡು ಬಿಡುತ್ತವಲ್ಲ? ಎಂದು ತಾತ್ವಿಕ ಮಟ್ಟದಲ್ಲಿ ವಿಸ್ಮಿತಗೊಳ್ಳುತ್ತಿದ್ದ ಶ್ರೀನಾಥ ಅವಳ ಮಾತನ್ನು ಬಾಹ್ಯದಲ್ಲಿ ಕೇಳಿಸಿಕೊಳ್ಳುತ್ತಲೆ,

‘ ಸರಿ..ನೀನಿಷ್ಟು ಧೈರ್ಯ ಕೊಟ್ಟ ಮೇಲೆ ಹೋಗಿ ಬರುವುದೆ ಸರಿ ಬಿಡು. ಇವತ್ತೆ ಅವರಿಗೆ ಕನ್ಫರ್ಮ್ ಮಾಡಿಬಿಡುತ್ತೇನೆ, ರೂಮು ರಿಸರ್ವ್ ಮಾಡಿ ಅಂತ..’ ಎಂದ

‘ ಸರೀ..ವಾಪಸ್ಸು ಬರುವಾಗ ಮರೆಯದೆ ಕುಂಕುಮ ಪ್ರಸಾದ ತನ್ನಿ. ಮಗುವಿಗೆ ಹುಷಾರು ತಪ್ಪಿದಾಗಲೊ, ಭೀತಿಗೊ ಹಣೆಗೆ ಹಚ್ಚಬಹುದು…’ ಎಂದಾಗ ತಡೆಯಲಾಗದಷ್ಟು ನಗು ಬಂದರೂ ತಡೆದುಕೊಂಡು, ಕೊನೆಗು ನಿರಾಯಾಸವಾಗಿ ಸಾಧನೆಯಾದ ಕಾರ್ಯಕ್ಕೆ ಮತ್ತೆ ಮತ್ತೆ ಅಚ್ಚರಿಪಡುತ್ತ ಮಿಕ್ಕ ಮಾತನ್ನು ಆಡಿ ಮುಗಿಸಿದ್ದ.

ಅವಳೊಡನೆ ಮಾತಾಡಿ ಮುಗಿಸಿ ಪೋನಿಟ್ಟ ಮೇಲೂ ಅದು ತನ್ನ ‘ಸರಿ ಹಾದಿಯನ್ಹಿಡಿದ ಪವಾಡದ ಪ್ರಭಾವವೆ?’ ಅಥವಾ ‘ಮತ್ತೊಂದು ಕಾಕತಾಳೀಯತೆಯೆ?’ ಎಂಬ ಜಿಜ್ಞಾಸೆಯಿಂದ ಹೊರಬರಲಾಗದೆ ಅದನ್ನೆ ಆಲೋಚಿಸುತ್ತ ಅರ್ಧ ಗಂಟೆಗೂ ಮೀರಿ ಕೂತುಬಿಟ್ಟಿದ್ದ ಹಾಲಿನ ಸೋಫಾದ ಮೇಲೆ…!

ಹಾಗೆ ಯೋಚಿಸುತ್ತಾ ಕುಳಿತವನಿಗೆ ಯಾಕೋ ಇದ್ದಕ್ಕಿದ್ದಂತೆ ತಾನು ‘ವಾಟ್ ಪಃ ನಾನಾಚಟ್’ಗೆ ಹೋಗುತ್ತಿರುವ ವಿಷಯವನ್ನು ಕುನ್. ಲಗ್ ರಿಗೂ ತಿಳಿಸಿ ಹೊರಡಬೇಕೆನಿಸಿತು. ಹೇಳಿ ಕೇಳಿ ತಾನಿರುವುದು ವಿದೇಶೀ ನೆಲದಲ್ಲಿ. ಏನಾದರೂ ಹೆಚ್ಚು ಕಡಿಮೆಯಾದರೆ ಕಂಪನಿಯ ಕಡೆಯಿಂದ ಅದರ ಜವಾಬ್ದಾರಿ ಹೊರಬೇಕಾದವರು ಕುನ್. ಲಗ್. ವೈಯಕ್ತಿಕವಾಗಿ ತನ್ನ ಸ್ವಂತ ವಿಷಯವನ್ನು ಅವರಿಗೆ ಹೇಳುವ ಅಗತ್ಯವಿರದಿದ್ದರೂ, ನೈತಿಕವಾಗಿ ಈ ಸಂಧರ್ಭದಲ್ಲಿ ಹೇಳಿ ಹೋಗುವುದು ಉಚಿತವೆನಿಸಿತು. ಅಲ್ಲದೆ ಅವರಿಂದ ಪ್ರಯಾಣಕ್ಕೆ ಅನುಕೂಲವಾಗುವಂತೆ ಕೆಲವು ಸಲಹೆ, ಸೂಚನೆಗಳೂ ಸಿಗಬಹುದು ಎನಿಸಿದಾಗ ಹೇಳಿ ಹೋಗುವ ಒತ್ತಡ ಇನ್ನೂ ಹೆಚ್ಚೆ ಆಯಿತು. ಆದರೆ, ‘ಕೌಯಾಯ್ ಕೌ ಬಾಯ್’ ರಿಸಾರ್ಟಿನಲ್ಲಾದ ಪ್ರಕರಣದ ನಂತರ ಅವರನ್ನು ನೋಡಿ, ತಲೆಯೆತ್ತಿ ಮಾತನಾಡುವ ನೈತಿಕ ಶಕ್ತಿಯೆ ಕಳುವಾಗಿ ಹೋಗಿದೆಯೆನಿಸಿಬಿಟ್ಟಿತ್ತು. ಅಪರಾಧೀ ಭಾವದ ಪ್ರಜ್ಞೆಯೆ ಸದಾ ಕುಟುಕುತ್ತಿರುವಾಗ ಎದೆಯೆತ್ತಿಕೊಂಡು ನೇರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದಾದರೂ ಎಂತು? ಹಾಗಿದ್ದೂ, ಆ ಹೊತ್ತಿನಲ್ಲಿ ಮಾತ್ರ ಯಾಕೊ ಹೇಳಿ ಹೋಗಬೇಕೆಂಬ ಪ್ರೇರೇಪಣೆ ತೀರಾ ಬಲವಾಗಿದೆಯೆಂದೆನಿಸಿ ಏನಾದರಾಗಲಿ, ಮರುದಿನ ಅವರನ್ನು ಭೇಟಿಯಾಗಿಬಿಡುವುದೆ ಸರಿಯೆಂದು ನಿರ್ಧರಿಸಿದಾಗ ಯಾವುದೊ ನಿರಾಳತೆಯ ಭಾವ ಆವರಿಸಿಕೊಂಡಂತಾಗಿ ನೆಮ್ಮದಿಯಿಂದ ನಿದ್ದೆಗಿಳಿದಿದ್ದ ಶ್ರೀನಾಥ. ಆ ನಿದ್ದೆಗೆ ಜಾರುವ ಹೊತ್ತಿನಲ್ಲೂ, ‘ ಅರೆ! ಇದೇನು ಮತ್ತೊಂದು ಸರಿ ಹೆಜ್ಜೆಯೆಂಬ ಸೂಚನೆಯೆ? ಇಷ್ಟು ಹೊತ್ತು ಒದ್ದಾಡಿಸಿ, ನಿದ್ದೆಯೆ ಬಾರದೇನೊ ಎನುವಂತಿದ್ದ ಮನಸಿನ ತಾಕಲಾಟವೆಲ್ಲ ಕಮರಿ, ಈ ನಿರ್ಧಾರಕ್ಕೆ ಬರುತ್ತಿದ್ದಂತೆ ತಟ್ಟನೆ ನಿದ್ರೆಯಾವರಿಸಿಕೊಂಡಂತಿದೆಯಲ್ಲ? ಇದೇನು ಮತ್ತೊಂದು ‘ಕಾಕತಾಳೀಯವೆ?’ ಅಥವಾ ‘ಸರಿ ಹೆಜ್ಜೆಯ ಪವಾಡ’ ಪ್ರಭಾವವೆ? ಅಥವಾ ತಾನೆ ಹುಚ್ಚು ಹುಚ್ಚಾಗಿ ಏನೂ ಇರದ ಕಡೆಯೆಲ್ಲ ‘ಪವಾಡಾ, ಕಾಕತಾಳೀಯತೆ’ ಗಳನ್ನು ಆರೋಪಿಸಿಕೊಂಡು ವಿಲಕ್ಷಣ ಚಿಂತನೆ ನಡೆಸುವ ಮುರ್ಖತನಕ್ಕಿಳಿದಿರುವೆನೆ….?’ ಎಂದೆಲ್ಲಾ ಪ್ರಶ್ನಿಸಿಕೊಳ್ಳುತ್ತಿದ್ದವನಿಗೆ ಉತ್ತರಕ್ಕೆ ಹುಡುಕಾಡುವ ಮತ್ತೊಂದು ‘ಪವಾಡತಾಳೀಯತೆ’ ಜರುಗುವ ಮೊದಲೆ ಗೊರಕೆ ಹೊಡೆಯುವ ಮಟ್ಟದ ಗಾಢ ನಿದ್ರೆಯಲಿ ಮುಳುಗಿ ಹೋಗಿದ್ದ ಶ್ರೀನಾಥ.

ಮರುದಿನ ಎದ್ದಾಗ ಎಂದೂ ಇಲ್ಲದಂತಹ ಪ್ರಪುಲ್ಲತೆಯ ಮನಸ್ಥಿತಿಯಲ್ಲಿದ್ದ ಮನಕ್ಕೆ ಸೋಜಿಗ ಪಡುತ್ತ ಆಫೀಸು ಸೇರಿದ್ದ ಶ್ರೀನಾಥ. ಹಿಂದಿನ ರಾತ್ರಿಯ ನಿರ್ಧಾರ ಚೆನ್ನಾಗಿ ನೆನಪಿದ್ದ ಕಾರಣ ಬೆಳಿಗ್ಗೆ ಬೇಗನೆ ಹೊರಟಿದ್ದ ಕುನ್. ಲಗ್ ಬೇರೆ ಯಾವುದೊ ಮೀಟಿಂಗಿನಲ್ಲಿ ಸಿಕ್ಕಿ ಬಿಜಿಯಾಗುವ ಮೊದಲೆ ಕ್ಷಿಪ್ರದಲ್ಲಿಯೆ ಭೇಟಿಯಾಗಿಬಿಡಲು. ಅಂದುಕೊಂಡಂತೆ ಅಂದು ಬಡ್ಜೆಟ್ಟಿನ ಸಾಲು ಸಾಲು ಮೀಟಿಂಗುಗಳಿಗೆ ಸಿದ್ದರಾಗಲಿಕ್ಕೆ ಮಾಮೂಲಿಗಿಂತ ಕೊಂಚ ಮೊದಲೆ ಬಂದಿದ್ದ ಕುನ್. ಲಗ್ ನಿರೀಕ್ಷಿಸದೆ ಇದ್ದ ಇವನ ಮುಖವನ್ನು ಕಂಡವರೆ ಅಚ್ಚರಿಗೊಂಡಿದ್ದರು. ಅವರ ಬಿಜಿ ದಿನಚರಿಯ ಅರಿವಿದ್ದ ಶ್ರೀನಾಥ ಹೆಚ್ಚು ಸಮಯ ವ್ಯಯಿಸದೆ, ಅವರಲ್ಲಿ ಕ್ಷಮೆ ಕೇಳುತ್ತ ಐದು ಹತ್ತು ನಿಮಿಷಗಳ ಸಮಯ ಸಿಗಬಹುದೆ? ಎಂದು ಕೋರಿಕೊಂಡ. ಬಹುಶಃ ಸೆಕ್ರೇಟರಿಯ ಮುಖಾಂತರ ಹೋಗಿದ್ದರೆ ಅದಷ್ಟು ಸುಲಭದಲ್ಲಿ ಸಿಗುತ್ತಿರಲಿಲ್ಲವೇನೊ? ಆದರೆ ಅವನು ನೇರವಾಗಿ ಬಂದು ಕೇಳಬೇಕಾದರೆ ಅವಸರದ ವಿಷಯವೆಂದೆಣಿಸಿ ಬಾಗಿಲು ಮುಂದೆ ಮಾಡಿ ‘ಏನು?’ ಎಂಬಂತೆ ಅವನತ್ತ ನೋಡಿದರು. ಕೌಯಾಯ್ ಘಟನೆಯ ನಂತರ ಅವರ ಜತೆಗಿನ ಮೊದಲ ಭೇಟಿಯಾದ ಕಾರಣ ಒಂದು ರೀತಿಯ ಇರಿಸುಮುರುಸಿನ ಭಾವ ಅವರಲ್ಲೂ ಮನೆ ಮಾಡಿಕೊಂಡಿತ್ತು. ಆಗ ಕುಡಿದ ಹೊತ್ತಿನಲ್ಲಿ ವಿವೇಚನೆ ಕೈಕೊಟ್ಟು ಬಹುಶಃ ಹೇಳಬಾರದ ವಿಷಯವನ್ನೆಲ್ಲ ಹೇಳಿಬಿಟ್ಟೆನಲ್ಲ? ಎಂಬ ಅಪರಾಧಿ ಮನೋಭಾವದ ಜತೆಗೆ ಅದಾದ ನಂತರ ಅವನ ಕುರಿತಾದ ಕಟು ಅಭಿಪ್ರಾಯದ ಮನೋಭಾವವೊಂದು ಮೈದೋರಿಕೊಂಡು ಪ್ರಾಜೆಕ್ಟು ಯಶಸ್ಸಿನ ಪ್ರಭಾವಳಿಯನ್ನು ಅಷ್ಟಿಷ್ಟಾಗಿ ಮಸುಕಾಗಿಸತೊಡಗಿತ್ತು. ಆ ಭಾವದಿಂದಲೆ ಅವನನ್ನು ಕಂಡಾಗ ಮಾಮೂಲಿನಂತೆ ಬರುತ್ತಿದ್ದ ಮುಗುಳ್ನಗೆಯೂ ಕಂಡಿರಲಿಲ್ಲ. ಆದರೆ ಶ್ರೀನಾಥನಲ್ಲೇನೊ ಬಗೆಯ ಹುಚ್ಚು ನೈತಿಕ ಧೈರ್ಯ ಮತ್ತೆ ಪ್ರಕಾಶಿಸಿ ಸಿಕ್ಕಿದ ಆ ಲಘು ಸಮಯದಲ್ಲೆ ತಾನೂ ವಾರದ ಮಟ್ಟಿಗಿನ ರಜೆಯಲ್ಲಿ ‘ವಾಟ್ ಪಃ ನಾನಾಚಟ್’ ಗೆ ಹೋಗುತ್ತಿರುವ ಸುದ್ದಿ ತಿಳಿಸಿಬಿಟ್ಟ. ಅದುವರೆವಿಗು ಅವನೆಡೆಗೆ ಕಠಿಣ ಧೋರಣೆಯ ಮನಸತ್ವದಲ್ಲಿ ಬಿಗಿದುಕೊಂಡಂತಿದ್ದ ಕುನ್. ಲಗ್ ಆ ವಾರದ ಮಟ್ಟಿಗಿನ ಮಾಂಕ್ ಹುಡ್ ಸುದ್ದಿ ಕೇಳುತ್ತಿದ್ದಂತೆ ಪೂರ್ತಿ ಮೆತ್ತಾಗಾಗಿಬಿಟ್ಟರು. ವಿದೇಶಿಯವನಾಗಿ ಅವನಿಂದ ಅದನ್ನು ನಿರೀಕ್ಷಿಸಿರದಿದ್ದರಿಂದಲೊ ಏನೊ ಅಥವಾ ತಪ್ಪು ಮಾಡಿ ಪ್ರಾಯಶ್ಚಿತ ಮಾಡಿಕೊಳ್ಳಬೇಕಾದಾಗ ಅಲ್ಲಿಗೆ ಹೋಗಿದ್ದು ಬರುವ ಥಾಯ್ ಜನರ ಸಂಪ್ರದಾಯದ ಅರಿವಿನ ಕಾರಣದಿಂದಲೊ – ಅವರ ಮನ ಏಕಾಏಕಿ ಅವನತ್ತ ಮತ್ತೆ ಮೃದುವಾಗಿ ಹೋಗಿತ್ತು. ಅದೆ ಬಿರುಸಿನಲ್ಲಿ ಐದತ್ತು ನಿಮಿಷವೆಂದುಕೊಂಡ ಮೀಟಿಂಗು ಅರ್ಧಗಂಟೆಗೂ ಮೀರಿ, ತಾವಾಗಿಯೆ ತಮ್ಮ ಮುಂದಿನ ಮೀಟಿಂಗನ್ನು ಮುಂದೂಡಲು ಹೇಳಿ ಎಲ್ಲಾ ವಿವರಗಳನ್ನು ವಿಚಾರಿಸಿಕೊಂಡರು. ಅರಣ್ಯದಲ್ಲಿದ್ದ ಈ ಆಶ್ರಮದ ಬಗ್ಗೆ ಅವರಿಗು ಹೆಚ್ಚಿನ ಮಾಹಿತಿ ಇರಲಿಲ್ಲ – ಅವರು ಹೋಗಿದ್ದುದು ಅವರಿಗೆ ಹತ್ತಿರದಲ್ಲಿದ್ದ ಥಾಯ್ ಮಾನೆಸ್ಟರಿಗೆ ಮಾತ್ರ.. ಆದರೆ ಅಲ್ಲಿರಬೇಕಾದಾಗ ಏನೇನು ನಿರೀಕ್ಷಿಸಬಹುದು, ಏನೆಲ್ಲಾ ಸಿದ್ದತೆ ಬೇಕೆಂಬ ಒಂದು ಸಂಕ್ಷಿಪ್ತ ವಿವರಣೆಯನ್ನೆ ಕೊಟ್ಟುಬಿಟ್ಟಿದ್ದರು. ಅಲ್ಲಿಂದ ಹೊರಬರುವ ಹೊತ್ತಿಗೆ ತಾನು ಅವರನ್ನು ಭೇಟಿಯಾಗಲೆಂದು ನಿರ್ಧರಿಸಿ ಎಂಥಾ ಒಳ್ಳೆಯ ಕೆಲಸ ಮಾಡಿದೆನೆಂದು ತಾನೆ ಬೆನ್ನು ತಟ್ಟಿಕೊಳ್ಳುವಷ್ಟು ಖುಷಿಯಾಗಿ ಹೋಗಿತ್ತು ಶ್ರೀನಾಥನಿಗೆ….!

ಅಲ್ಲಿಂದ ಮುಂದಿನದೆಲ್ಲ ಕನಸಿನಲ್ಲಿದ್ದಂತೆ ನಡೆದುಹೋಗಿತ್ತು ಶ್ರೀನಾಥನಿಗೆ. ಮುಂದಿನೆರಡು ದಿನಗಳ ನಂತರ ಮಗುವೂ ಪೂರ್ತಿ ಗುಣಮುಖವಾಗಿ ಮನೆಗೆ ವಾಪಾಸ್ಸಾದ ಸುದ್ದಿಯೂ ಬಂದಿತ್ತು. ಅತ್ತ ಕಡೆಯ ಆ ಸುಗಮತೆಯಿಂದ ನಿರಾಳವಾದ ಮನಸು ನೆಮ್ಮದಿಯಿಂದ ಪ್ರಯಾಣಕ್ಕೆ ಮಾನಸಿಕವಾಗಿ ಸಿದ್ದವಾಗುತ್ತಿದ್ದಂತೆ, ಅಲ್ಲಿನ ಬಳಕೆ ಬೇಕಾಗುವ ಕೆಲವು ವಸ್ತುಗಳನ್ನು ಪೊಟ್ಟಣ ಕಟ್ಟಿದ ಕಾಣಿಕೆಯೊಂದನ್ನು ತಂದುಕೊಟ್ಟಿದ್ದರು ಕುನ್. ಲಗ್. ಎಲ್ಲಾ ಮುಗಿದು ಹೊರಡುವ ದಿನ ಬಂದಾಗ ತುಸು ಸಮಯಕ್ಕೆ ಮೊದಲೆ ಕೈಲೊಂದು ಮಧ್ಯಮ ಗಾತ್ರದ ಬ್ಯಾಗು ಹಿಡಿದು ದಿಗ್ವಿಜಯ ಹೊರಟವನಂತೆ ನಡೆದಿದ್ದ ಶ್ರೀನಾಥ – ಸರಳ, ಸಡಿಲ ಬಿಳಿ ಪೈಜಾಮದಂತಹ ಉಡುಗೆಯನ್ನು ಧರಿಸಿ. ಬ್ಯಾಗಿನಲ್ಲೂ ಹೆಚ್ಚಾಗಿ ಏನನ್ನು ತೆಗೆದುಕೊಂಡಿರಲಿಲ್ಲ. ಅಲ್ಲಿಗೆ ಬೇಕಾಗಬಹುದೆಂದು ಹೇಳಲಾಗಿದ್ದ ವಸ್ತುಗಳ ಜತೆ, ಕುನ್. ಲಗ್ ಕೊಟ್ಟಿದ್ದ ಪೊಟ್ಟಣವನ್ನು ಸೇರಿಸಿ ಬೇರೆಲ್ಲ ಬಟ್ಟೆ ಬರೆಯ ಬದಲು ಬರಿಯ ಬಿಳಿಯ ಜುಬ್ಬಾ, ಪೈಜಾಮ ಮತ್ತು ಶ್ವೇತ ಶುಭ್ರವಿದ್ದ ಬಿಳಿಯ ಪಂಚೆಗಳೊಂದೆರಡನ್ನು ತುರುಕಿಕೊಂಡು ಹೊರಟಿದ್ದ – ಉಡುವ ಸಾಧ್ಯತೆಯಿದ್ದರೆ ಅದರಲ್ಲೆ ಆರಾಮವಾಗಿರಬಹುದೆಂದು. ಕುನ್. ಲಗ್ ಕೊಟ್ಟಿದ್ದ ಕಾಣಿಕೆಯೇನಿತ್ತು ಎಂದು ಮಾತ್ರ ಇನ್ನು ತೆಗೆದು ನೋಡಿರಲಿಲ್ಲ. ಎಲ್ಲಾ ಮುಗಿದು ‘ಮೋರ ಚಿಟ್’ ಬಸ್ ಸ್ಟೇಷನ್ನಿಗೆ ಬಂದು ತಾನು ಹೊರಡಬೇಕಾಗಿದ್ದ ಬಸ್ಸನ್ನು ಪತ್ತೆ ಮಾಡಿ ತನ್ನ ಸೀಟನ್ನು ಹುಡುಕಿ ಕೂತಾಗಲಷ್ಟೆ ಆ ಪ್ಯಾಕೆಟ್ಟನ್ನು ನೋಡುವ ಕುತೂಹಲ ಗರಿಗೆದರಿದ್ದು. ‘ಇನ್ನು ಹೋಗಿ ತಲುಪುವ ತನಕ ಕಾಯುವುದೇಕೆ? ಹೇಗೂ ಬಸ್ಸಿನಲ್ಲೂ ಯಾರೂ ಇನ್ನೂ ಬಂದಿಲ್ಲವಲ್ಲ’ ಎನಿಸಿ ಅಲ್ಲೆ ಅದನ್ನು ಬಿಚ್ಚಿ ನೋಡಿದರೆ – ಅಲ್ಲಿ ದೇವಸ್ಥಾನಕ್ಕೆ ಪೂಜೆಯಲ್ಲಿ ಬಳಸುವ ದಪ್ಪ ಊದಿನ ಕಡ್ಡಿಯ ಜತೆಗೆ ಮತ್ತಷ್ಟು ಪೂಜಾ ಸಾಮಾನುಗಳಿದ್ದುವಲ್ಲದೆ ಅಲ್ಲಿರಲು ಬೇಕಾಗುವ ಮತ್ತಷ್ಟು ಪರಿಕರಗಳಿದ್ದವು. ಅದರಲ್ಲಿ ಶ್ರೀನಾಥನ ತುಂಬಾ ಗಮನವನ್ನು ಸೆಳೆದಿದ್ದು ಎರಡು ವಸ್ತುಗಳು – ತುಂಬಾ ಪುಟ್ಟ ಸೈಜಿನದಿದ್ದ ಶಕ್ತಿಶಾಲಿ ಟಾರ್ಚ್ ಲೈಟ್; ಅವನು ತಂದಿದ್ದು ದಢೂತಿ ಗಾತ್ರದ್ದು. ಮೊದಲೆ ತೆರೆದು ನೋಡಿದ್ದರೆ ದೊಡ್ಡದನ್ನು ಮನೆಯಲ್ಲೆ ಬಿಟ್ಟು ಈ ಚಿಕ್ಕದನ್ನೆ ತರಬಹುದಿತ್ತು ಎಂದುಕೊಂಡ. ಮತ್ತೊಂದು ವಸ್ತು ಒಂದು ತೀರಾ ತೆಳುವೂ ಅಲ್ಲದ, ದಪ್ಪವೂ ಅಲ್ಲದ ಮಧ್ಯಮ ಗಾತ್ರದ ತೋಳಿಲ್ಲದ ಸ್ವೆಟರು; ಕಾಡಿನ ಚಳಿಯ ರಾತ್ರಿಗಳಲ್ಲಿ ಉಪಯೋಗಕ್ಕೆ ಬರಬಹುದೆಂದು ಕಳಿಸಿಕೊಟ್ಟಿದ್ದರು. ಅವರ ಮುಂಜಾಗರೂಕತೆಗೆ ಮನಸಿನಲ್ಲೆ ಧನ್ಯವಾದ ಹೇಳಿಕೊಂಡ ಶ್ರೀನಾಥ ಆ ಆರಾಮಾಸನವನ್ನು ಮತ್ತಷ್ಟು ಬಾಗಿಸಿ ಓರೆಯಾಗಿಸಿ ಹಾಗೆಯೆ ಒರಗಿ ಕಣ್ಮುಚ್ಚಿಕೊಂಡ. ಅವನಿಗೆ ತುಸು ಮೆಲುವಾಗಿ ಎಚ್ಚರವಾದಾಗ ಬಸ್ಸು ಆಗಲೆ ಹೊರಟು ನಿಂತು, ಟಿಕೇಟು ಪರೀಕ್ಷಕ ಬಂದು ಭುಜ ಅಲುಗಿಸುತ್ತಿದ್ದ ನೀರಿನ ಬಾಟಲಿ ಹಿಡಿದು.

ಆ ಪಯಣದುದ್ದಕ್ಕು ತಾನಾವುದೊ ಲೋಕದಲ್ಲಿದ್ದಂತೆ ಏನೇನೊ ಕನಸು.. ನಡುನಡುವೆಯೆ ಎಚ್ಚರ..ಮತ್ತೆ ನಿದಿರೆಗೆ ಜಾರಿದಂತಹ ಅನುಭವ..ಎಚ್ಚರದಿಂದಿರಲು ಯತ್ನಿಸಿದರೂ ಬಿಡಲಾಗದಂತೆ ಮುಚ್ಚಿಕೊಳ್ಳುವ ಕಣ್ಣು..ಮುಚ್ಚಿಕೊಂಡರೂ ಎಚ್ಚರವಾದ ಜಾಗೃತ ಪ್ರಜ್ಞೆಯ ಸ್ಥಿತಿಯಲ್ಲೆ ಇದ್ದೇನೆನಿಸುವ ಅನುಭೂತಿ.. ಇವೆಲ್ಲದರ ನಡುವಿನ ತಾಕಲಾಟದಲ್ಲಿ ಜೊಂಪು ನಿದ್ರೆ, ಗಾಢವಾದ, ಆಳವಾದ ಸಂವೇದನೆಯ ಸುಷುಪ್ತಿಯಂತಹ ಸ್ಥಿತಿ.ಆ ಹೊತ್ತಿನಲೆಲ್ಲ ಕಣ್ಣ ಮುಂದೆಯೆ ಏನೇನೊ ನಡೆಯುತ್ತಿರುವಂತೆ , ಕನಸೆಂದು ಹೇಳಲೆ ಆಗದ ಸಂಘಟನೆಗಳು.. ತಾನೂ ಈಗಾಗಲೆ ಆಶ್ರಮದೊಳಗೆ ಹೊಕ್ಕು ಓಡಾಡುತ್ತಿರುವ ಅನುಭವದ ಅನುಭೂತಿ – ಅದನ್ನಿನ್ನು ಒಮ್ಮೆಯೂ ನೋಡದಿದ್ದರೂ…! ಅದೆಲ್ಲಾ ಮಾಯೆಯ ಭ್ರಮಾಧೀನ ಸ್ಥಿತಿಗೊಂದು ತೆರೆಯೆಳೆಯುವಂತೆ ತಟ್ಟನೆ ಬಂದು ನಿಂತಿತ್ತು ಬಸ್ಸು – ಉಬೋನ್ ಅನ್ನು ತಲುಪಿ. ಅಲ್ಲಿಂದ ಬ್ಯಾಗಿನ ಜತೆ ಇಳಿದವನೆ ಹತ್ತಿರವೆ ಕಾಣುತ್ತಿದ್ದ ‘ಟುಕ್ ಟುಕ್ (ಆಟೋ ರಿಕ್ಷಾ)’ ಅನ್ನು ಹತ್ತಿ ‘ವಾಟ್ ಪಃ ನಾನಾಚಟ್’ ಎಂದ ಶ್ರೀನಾಥ – ಹೇಳುವ ಮೊದಲೆ ಭರ್ರೆಂದು ಹೊರಟ ಗಾಡಿಯ ಜೋಲಿಗೆ ತೂರಾಡಿ ಬೀಳುವಂತಾದರು ಸಾವರಿಸಿಕೊಂಡು ಕೂರುತ್ತ..

ಅವನ ಅಲ್ಲಿಯತನಕದ ಜೀವಮಾನದ ನಂಬಿಕೆ, ತಳಹದಿಯ ಅಡಿಗಟ್ಟನ್ನೆ ಅಲುಗಾಡಿಸಿಬಿಡುವ ಮಹತ್ತರ ಜೋಲಿಯೊಂದು ಎದುರಾಗಲಿದೆಯೆಂದು ಆಗ ಅವನಿಗಿನ್ನು ಅರಿವಾಗಿರಲಿಲ್ಲ… ಏನೋ ವಾರದ ಮಟ್ಟಿಗಿನ ಪುಟ್ಟ ಯಾತ್ರೆಯಲ್ಲಿ ಒಂದಷ್ಟು ಜಿಜ್ಞಾಸೆಗಳಿಗೆ ಉತ್ತರ, ಮತ್ತೊಂದಷ್ಟು ಮನಶ್ಯಾಂತಿಗೆ ಸಿಗಬಹುದಾದ ಸರಕು ಎಂಬಷ್ಟು ಮಾತ್ರದ ನಿರೀಕ್ಷೆಯನಿಟ್ಟುಕೊಂಡು ಹೊರಟವನಿಗೆ ಅದು ಅವನ ಅಂತರಂಗದ ತಳ ಬುಡವನೆಲ್ಲ ಸೋಸಿ, ಒಳ ಹೊರಗನ್ನೆಲ್ಲ ಜಾಲಾಡಿಸಿಬಿಡುವ ಅದ್ಭುತ ಆಧ್ಯಾತ್ಮಿಕ, ಮನೋವಿಕಾಸದ ಯಾತ್ರೆಯಾಗಲಿದೆಯೆಂಬ ಅರಿವು ಖಂಡಿತಾ ಇರಲಿಲ್ಲ..!

(ಇನ್ನೂ ಇದೆ)
__________

( ಪರಿಭ್ರಮಣ..49ರ ಕೊಂಡಿ – https://nageshamysore.wordpress.com/00252-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-49/ )

ಅವರೋಹಣ, ಆಕ್ರಮಣ, ಅಧಃಪತನ, ಆರೋಹಣ, ಪರಿಭ್ರಮಣ, ನಾಗೇಶ ಮೈಸೂರು, ನಾಗೇಶಮೈಸೂರು, ನಾಗೇಶ, nageshamysore, Nagesha Mysore, nagesha

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s