00253. ಗೌರಿ ಹಬ್ಬ

00253. ಗೌರಿ ಹಬ್ಬ
__________________

ಭಾದ್ರಪದ ತದಿಗೆಗೆ ತವರಿಗೆ ಹೊರಟು ಬರುವಳಂತೆ ಗೌರಿ. ಅವಳನ್ನು ಮರಳಿ ಕೈಲಾಸಕ್ಕೆ ಕರೆದೊಯ್ಯಲು ಭಾದ್ರಪದದ ಚತುರ್ಥಿಯಂದು ಬರುವವ ಸುಪುತ್ರ ವಿನಾಯಕ. ಅತಿಥಿಗಳಾಗಿ ಬಂದವರನ್ನು ವಿಶೇಷ ಆತಿಥ್ಯವಿಲ್ಲದೆ ಕಳಿಸಲು ಒಪ್ಪೀತೆ ಭಾರತವರ್ಷದ ಮನಸತ್ವ? ಅದಕೆಂದೆ ಇಬ್ಬರ ಹೆಸರಲ್ಲೂ ಸಂಭ್ರಮದಿಂದ ಹಬ್ಬವನ್ನಾಚರಿಸುತ್ತ, ಅವರಿಗೆ ಪ್ರಿಯವಾದ ಭಕ್ಷ ಭೋಜನಗಳನೆಲ್ಲ ತಯಾರಿಸಿ, ಮಂಗಳಕರ ಶುಭವಸ್ತ್ರವನುಟ್ಟು ನಲಿದಾಡಿ ನಮಿಸಿ ಆಶೀರ್ವಾದ ಬೇಡುವುದು ನಡೆದು ಬಂದ ಸಂಪ್ರದಾಯ. ಅದರಲ್ಲೂ ನಾಳೆ ಕಾಲಿಡಲಿರುವ ಗೌರಿ ಹಬ್ಬವೆಂದರೆ ಸುಮಂಗಲೆಯರಿಗೆ, ಹೆಣ್ಣು ಮಕ್ಕಳಿಗೆ ಅತ್ಯಂತ ಸಂಭ್ರಮದ ಹಬ್ಬ. ಆ ಗೌರಿ ಹಬ್ಬದ ಪೂಜೆ ಗಣೇಶನ ಹಬ್ಬದ ಅಬ್ಬರದಲ್ಲಿ ಕೊಂಚ ಹಿನ್ನಲೆಗೆ ಸರಿದಂತೆ ಕಂಡರೂ ಅದನ್ನು ಸದ್ದಿಲ್ಲದೆ ಆಚರಿಸುವ ಸುಮಂಗಲಿ ಮುತ್ತೈದೆಯರಿಗೆ ಅದೊಂದು ಅತ್ಯಪೂರ್ವ ಸಡಗರದ ಸೊಬಗು. ನೇಮ, ನಿಷ್ಠೆ, ಶ್ರದ್ದೆಗಳಿಂದ ನಡೆಸುವ ಈ ವ್ರತ ಆಚರಣೆಯೊಂದಿಗೆ ತವರಿಂದ ನಿರೀಕ್ಷಿಸುವ ಉಡುಗೊರೆ, ಹಂಚಲ್ಪಡುವ ಬಾಗಿನ, ಕೈಗೆ ಗೌರಿದಾರವೆಂದು ಕಟ್ಟಿಕೊಳ್ಳುವ ಹದಿನಾರು ಗಂಟಿನ ಅರಿಶಿನ ದಾರ, ಇವೆಲ್ಲದರ ಜತೆಗೆ ಮೈಗೆಲ್ಲ ಅರಿಶಿನ ಬಳಿದ ಬಣ್ಣದ ಜೇಡಿ ಮಣ್ಣಿನ ಪ್ರತಿಮೆಯಾಗಿ ಅಕ್ಕಿಯ ಮೇಲೆ ಪ್ರತಿಷ್ಟಾಪಿಸಲ್ಪಟ್ಟು ಪೂಜೆಗೊಳ್ಳುವ ತಾಯಿ ಸ್ವರ್ಣಗೌರಿ – ಎಲ್ಲವೂ ಅನನ್ಯವೆ. ಅದರ ಒಂದು ತುಣುಕಿನ ಪಲುಕು ಈ ಕೆಳಗಿನ ಗೌರಿ ಪದ್ಯ.

ಅಂದ ಹಾಗೆ ‘ಗಂಡಸಿಗ್ಯಾಕೆ ಗೌರಿ ದುಃಖ’ ಅನ್ನುವ ಗಾದೆಯಂತೆ ಇದೆಲ್ಲಾ ಮಾಹಿತಿ ಗೊತ್ತಾಗಿದ್ದು ಹೇಗೆ, ಸಿಕ್ಕಿದ್ದು ಹೇಗೆ, ಕೊಟ್ಟಿದ್ದು ಯಾರು? ಎಂಬ ಅನುಮಾನ ಬರುವುದು ಸಹಜ; ನಿಮ್ಮ ಅನುಮಾನ ಸಾಧುವಾದದ್ದೆ. ಇದೆಲ್ಲ ಮಾಹಿತಿಯ ಮೂಲ ಈ ಕೆಳಗಿನ ವಿಕಿ ಲಿಂಕಿನದೆ. ಅದರ ತಪ್ಪು, ಒಪ್ಪು ನಿಖರತೆ ಭಾಧ್ಯತೆ ಎಲ್ಲವು ಅದರದ್ದೆ.

ಅದನ್ನು ಸರಿಯಾಗಿ ಅರ್ಥೈಸದೆ ಕವನವಾಗಿಸಿದ್ದರೆ – ಅದರ ಭಾಧ್ಯತೆ ಮಾತ್ರ ಪೂರ್ತಿ ನನ್ನದೆ!

http://en.m.wikipedia.org/wiki/Gowri_Habba

ಸರ್ವರಿಗು ಮಂಗಳ ಗೌರಿ ವ್ರತದ ಶುಭಾಶಯಗಳನ್ನು ಕೋರುತ್ತ ಇದೊ ನಿಮ್ಮ ಓದಿನ ಆಸ್ವಾದನೆಗೆ !

ಸ್ವರ್ಣಗೌರಿ ವ್ರತ
______________________

ಸ್ವಯಂ ಆದಿಶಕ್ತಿ ರೂಪಿಣಿ ಮಹಾಮಾಯೆ
ಶಿವನ ಸತಿ ಶಕ್ತಿ ನೀ ಗೌರಿ ಗಣಪನ ತಾಯೆ
ಬಲ ಸಾಹಸ ಧೈರ್ಯ ಭಕ್ತರೀಗೀವ ಮಾತೆ
ಭಾದ್ರಪದ ತದಿಗೆಗೆ ತವರಿಗೆ ಪದ್ದತಿಯಂತೆ ||

ತವರಿಗ್ಹೊರಟವಳ ತಿರುಗಿ ಕರೆದೊಯ್ಯೆ ತಾನೆ
ಚತುರ್ಥಿಗೆ ಬರುವ ಗಣಪ ಕೈಲಾಸದ ಮೇನೆ
ಕರೆದೊಯ್ವ ಮುನ್ನ ಮೆಚ್ಚಿಸಲವಳ ಪೂಜೆ ಸೂಕ್ತ
ಅದಕೆ ಮಂಗಳಾಂಗಿಯರಿಗಿಹ ಸ್ವರ್ಣಗೌರಿ ವ್ರತ ||

ಮುತ್ತೈದೆಯರು ಮಡಿಯುಟ್ಟು ಸಿಂಗರಿಸಿ ಪೂರ
ಮನೆ ಹೆಣ್ಣು ಮಕ್ಕಳ ಜತೆಗೆ ಸಂಭ್ರಮ ಅಪಾರ
ಜೇಡಿಮಣ್ಣಿನ ಬಣ್ಣದ ಅರಿಶಿನ ಗೌರಿಯ ತರಿಸಿ
ಹರಿವಾಣದಲಿಟ್ಟ ಅಕ್ಕಿಯ ನಡುವಲೆ ಸ್ಥಾಪಿಸಿ ||

ಶುಚಿ ಶ್ರದ್ದೆ ಮಡಿಯಿಂದ ಆಚರಿಸುವ ಪೂಜೆಗೆ
ನೆರೆಮನೆ ಗುಡಿಗಳ ಗೌರಿಗು ನಮಿಸಿ ಬಗೆಬಗೆ
ಮಾವಿನೆಲೆ ಬಾಳೆಕಂದ ಮಂಟಪದೆ ವಿರಾಜಿತೆ
ಹತ್ತಿಯ ದಾರ ಹೂಮಾಲೆ ಅಲಂಕಾರಕೆ ಜತೆ ||

ತೀಡಿದ ಹದಿನಾರು ಗಂಟ ಪವಿತ್ರ ಗೌರಿದಾರ
ಕಟ್ಟಿ ಬಲ ಮಣಿಕಟ್ಟಿಗೆ ಆಶೀರ್ವಾದ ಸಾಕಾರ
ಪ್ರತಿ ಗಂಟಿಗು ನಮಿಸುತ ಪೂಜಿಸೆ ಘನ ಭಕ್ತಿ
ದಾರ ಕಟ್ಟಿದವರ ಕೈ ಹಿಡಿಯದಿರುವಳೆ ಶಕ್ತಿ ||

ಅರಿಶಿನ ಕುಂಕುಮ ಕರಿಮಣಿ ಕರಿಬಳೆ ಬಾಚಣಿಗೆ
ಕಿರುಗನ್ನಡಿ ಬಳೆ ಬಿಚ್ಚೋಲೆ ಕಾಯಿ ಕುಪ್ಪಸ ತೂಗೆ
ಅಕ್ಕಿ ಗೋಧಿ ಹೆಸರು ಬೇಳೆ ರವೆ ಬೆಲ್ಲದಚ್ಚಿನ ಜತೆ
ಅರಿಶಿನ ಬಳಿದ ಮೊರದೈದು ಬಾಗಿನ ಸಾಲಾಗಿತ್ತೆ ||

ಮೊದಲ ಬಾಗಿನ ಗೌರಿಗರ್ಪಣೆ ತೆಗೆದಿಟ್ಟು ಪಕ್ಕದೆ
ಮಿಕ್ಕ ನಾಲ್ಕು ಬಾಗಿನ ಮುತ್ತೈದೆಯರಿಗೀವ ಶ್ರದ್ದೆ
ನೂತನ ವಿವಾಹಿತೆ ನೀಡುತ ಹದಿನಾರು ಜೊತೆ
ಸುಮಂಗಲಿಯರ ಹರಕೆಗೆ ಬಾಗಿನದ ಪವಿತ್ರತೆ ||

ಕಾದು ಕಾತರದೆ ತವರಿನ ಮಂಗಳದ್ರವ್ಯ ಕಾಣಿಕೆ
ಹುಗ್ಗಿ ಹೋಳಿಗೆ ಚಿತ್ರಾನ್ನದೌತಣ ವ್ರತದ ಸ್ಮರಣಿಕೆ
ಗೌರಿವ್ರತದ ತನಕ ಸೇರದ ನವ ವಧುವರರುಂಟು
ಸೇರೆ ನವಮಾಸದ ಶಿಶು ಬೇಸಿಗೆ ಆರೋಗ್ಯ ನಂಟು ||

ನೂತನ ವಧು ವರರ ಕರೆಸಿ ಆದರದಿ ಅತ್ತೆ ಮಾವ
ಹಬ್ಬದಾ ಉಡುಗೊರೆ ಮಂಗಳ ದ್ರವ್ಯ ಔತಣ ಭಾವ
ನಂಟು ಬಂಧ ಬೆಸೆಯೆ ಕಡೆವರೆಗು ಸ್ವರ್ಣಗೌರಿ ನೆಪ
ಭುವಿ ಜನ ಹಿತಕೆ ತವರಿಗೆ ತಾಯ ಪ್ರೇಮ ಸ್ವರೂಪ ||

————————————————————————————
ನಾಗೇಶ ಮೈಸೂರು, ಸಿಂಗಪುರ
————————————————————————————-

20140827-225718.jpg

ಗೌರಿ, ಹಬ್ಬ, ಸ್ವರ್ಣ, ಸ್ವರ್ಣಗೌರಿ, ವ್ರತ, ಗಣೇಶ, ತದಿಗೆ, ತೃತೀಯ, ಚತುರ್ಥಿ, ಚೌತಿ, ನಾಗೇಶ, ಮೈಸೂರು, ನಾಗೇಶಮೈಸೂರು, ನಾಗೇಶ ಮೈಸೂರು, nageshad, mysore, nageshamysore, nagesha mysore

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s