00261. ಕಥೆ: ಪರಿಭ್ರಮಣ..(52)

00261. ಕಥೆ: ಪರಿಭ್ರಮಣ..(52)

……….ಏಕಾಂಗಿತನ ಮುತ್ತಲು, ಮನಸೆ ಬೆತ್ತಲು…!
_______________________________________________________________________________
ಅವರೋಹಣ…ಆಕ್ರಮಣ…ಅಧಃಪತನ…ಆರೋಹಣ…ಮನಸೆನ್ನುವ ಚಾರಣ, ಈ ಬದುಕಿನ ಹೂರಣ!
_______________________________________________________________________________

00261. ಕಥೆ: ಪರಿಭ್ರಮಣ..(52)

( ಪರಿಭ್ರಮಣ..51ರ ಕೊಂಡಿ – https://nageshamysore.wordpress.com/00257-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-51/ )

ಅವರೋಹಣ, ಆಕ್ರಮಣ, ಅಧಃಪತನ, ಆರೋಹಣ, ಪರಿಭ್ರಮಣ, ನಾಗೇಶ ಮೈಸೂರು, ನಾಗೇಶಮೈಸೂರು, ನಾಗೇಶ, nageshamysore, Nagesha Mysore, nagesha

ಮಧ್ಯಾಹ್ನದ ಸಮಯ ಕಳೆಯುತ್ತಿದ್ದಂತೆ ಬೆಳಿಗ್ಗೆ ತಿಂದಿದ್ದೆಲ್ಲ ಅರಗಿ, ಕರಗಿ ಹೊಟ್ಟೆಯೆಲ್ಲ ಖಾಲಿಯಾದಂತಾಗಿ ಇದ್ದಕ್ಕಿದ್ದಂತೆ ಒಳಗಿನಿಂದ ಚುರುಗುಟ್ಟುವ ಮೆಲುವಾದ ಪ್ರಕ್ರಿಯೆ ಆರಂಭವಾಗಿತ್ತು. ಸಾಧಾರಣವಾಗಿ ಅದು ಲಂಚಿನ ಹೊತ್ತಾದ ಕಾರಣ ದೇಹದೊಳಗಿನ ಜೈವಿಕ ಗಡಿಯಾರ ಈಗಾಗಲೆ ತನ್ನ ಪ್ರಭಾವ ತೋರಿಸಲು ಆರಂಭಿಸಿತ್ತು. ಮಾಮೂಲಿ ಊಟದ ಹೊತ್ತೆಂಬುದು ಒಂದು ಕಾರಣವಾದರೆ ಆ ದಿನವೆಲ್ಲ ಮತ್ತೆ ಊಟ ಸಿಗದೆಂಬ ಅರಿವು ಅಗತ್ಯಕ್ಕಿಂತ ಹೆಚ್ಚಿನ ಒತ್ತಡವಾಗಿ ಪರಿಣಮಿಸಿ ಹಸಿವೆಯ ಪರಿಮಾಣವನ್ನು ಹೆಚ್ಚಿಸತೊಡಗಿತ್ತು. ಅದೂ ಮಾನೆಸ್ಟರಿ ವಾಸದ ಮೊದಲ ದಿನವಾದ ಕಾರಣ ಇನ್ನು ಹೆಚ್ಚಿನ ಹೊಟ್ಟೆಯೊಳಗಿನ ತಳಮಳಕ್ಕೆ ಕಾರಣವಾಗಿತ್ತು. ಆ ಹೊಯ್ದಾಟದಲ್ಲಿ ಮನದೊಳಗಡೆ ಮೂಡತೊಡಗಿದ್ದ ಭಾವಗಳೆಲ್ಲ ಕಲಸಿಕೊಂಡು ಮನಃಪಟಲದ ಮೇಲೆ ಮೂಡಿದ್ದ ಚಿತ್ರಣಗಳೆಲ್ಲ ಅಡ್ಡಾದಿಡ್ಡಿಯಾಗಿ ಸ್ಥಿತ್ಯಂತರವಾಗತೊಡಗಿತ್ತು. ನಿಧಾನವಾಗಿ ಆರಂಭವಾದ ಆ ಹೊಟ್ಟೆಯೊಳಗಿನ ಉರಿ ಕ್ರಮೇಣವಾಗಿ ಪ್ರಖರಗೊಳ್ಳುತಲೆ ಹೋಗಿ ಒಂದು ಹಂತದಲ್ಲಿ ಪೂರ್ತಿ ಭುಗಿಲೆದ್ದ ಬೆಂಕಿಯಂತೆ ಪ್ರಜ್ವಲಿಸಿ, ಏನಾದರೂ ತಿನ್ನದೆ ಇದ್ದರೆ ಇನ್ನು ತಡೆಯುವುದು ಸಾಧ್ಯವೆ ಇಲ್ಲವೇನೊ ಅನ್ನುವ ಅನಿಸಿಕೆಯ ಜತೆಗೆ ಹೇಳಿಕೊಳ್ಳಲು ಆಗದ, ಬಿಡಲು ಆಗದ ಒಳಗಿನ ಸಂಕಟವಾಗಿ ಕಾಡತೊಡಗಿತ್ತು. ಆ ಅಸ್ಥಿರ ಸ್ಥಿತಿಯಲ್ಲಿ ತಾನು ನೆನೆದುಕೊಂಡ ಕೆಲಸ ಸಾಧ್ಯವೆ ಇಲ್ಲವೆಂದರಿವಾಗಿ ಎಲ್ಲವನ್ನು ಬದಿಗಿಟ್ಟು ಬರಿಯ ಮುಚ್ಚಿದ ಕಣ್ಣಿನ ಧ್ಯಾನ ಮುದ್ರೆಯಲ್ಲಿ ಕೂತಂತೆ ಕುಳಿತು ಕಣ್ಣೋಟವನ್ನು ಏಕಾಗ್ರತೆಯಿಂದ ಹುಬ್ಬು, ನಾಸಿಕದ ನಡುವಿನತ್ತ ಕೇಂದ್ರಿಕರಿಸಲು ಯತ್ನಿಸತೊಡಗಿದ್ದ ಶ್ರೀನಾಥ. ನೋಡು ನೋಡುತ್ತಲೆ ಮನ ಎಲ್ಲೊ ತಲ್ಲೀನವಾದಂತೆ ತನ್ನಂತರಂಗದಾಂತರ್ಯದಲ್ಲೆ ಕರಗುತ್ತ, ಯಾವುದೊ ಕಾಣದ ಮಾಯಾ ಲೋಕಕ್ಕೆ ಜಾರಿದಂತೆ ಅನುಭವವಾಗುತ್ತ, ಕ್ಷಿಪ್ರದಲ್ಲೆ ಸುತ್ತಲಿನ ಪರಿಸರದ ಪ್ರಭಾವವೆಲ್ಲ ಮಾಯವಾಗಿ ಯಾವುದೊ ಬೆಳಕಿನ ಕಾಂತಿ ಪುಂಜವೊಂದರ ತುಣುಕುಗಳು ಮಾತ್ರ ಕಂಡು ಕಂಡು ಮರೆಯಾಗುವ ವಿಚಿತ್ರ ಅನುಭೂತಿಯಾಗಿ ಕಾಡತೊಡಗಿತು.

ಹೀಗೆ ಎಲ್ಲೊ ಕಳುವಾದಂತೆ ಯಾವುದೊ ಅತೀತ ಪ್ರಜ್ಞೆಯ ಮುಷ್ಟಿಯೊಳಗೆ ಸಿಲುಕಿ ಪೂರ್ಣ ಮೈ ಮರೆತಂತಹ ಸ್ಥಿತಿಯಲ್ಲಿದ್ದವನಿಗೆ ಸರಿ ಸುಮಾರು ಒಂದು ಗಂಟೆಯ ಹೊತ್ತಿಗೆ ಅಂತರಾಳದೊಳಗೆ ಯಾರೊ ಬಡಿದೆಬ್ಬಿಸಿದಂತೆ ಅನಿಸಿ ಎಚ್ಚರವಾಗಿತ್ತು. ಅರೆರೆ, ಇದ್ದೆಲ್ಲಿ ಹೋಗಿದ್ದೆ ಇಷ್ಟು ಹೊತ್ತು? ಕಾಲವೆ ಕಳೆದುಹೋದಂತೆ ಭಾಸವಾಗಿತ್ತಲ್ಲ? ಯಾವುದೊ ಗಾಢಾವಸ್ಥೆಯ ಸುಷುಪ್ತಿಯಲ್ಲಿ, ಸಮಾಧಿ ಸ್ಥಿತಿಯಲ್ಲಿದ್ದಂತೆ ಭಾಸವಾಗಿತ್ತಲ್ಲ? ಅದೇನು ಒಂದು ರೀತಿಯ ಯೋಗನಿದ್ರಾ ಸ್ಥಿತಿಯೊ ಅಥವಾ ಹಾಗೆಯೆ ಅರಿವಿಲ್ಲದೆಯೆ ಮಾಮೂಲಿ ನಿದ್ರೆಗೆ ಜಾರಿ ಹೋಗಿದ್ದೇನೆ? ಇರಲಾರದು… ಒಂದು ರೀತಿಯ ಸುತ್ತಲ ಪರಿಸರದ ಪ್ರಜ್ಞೆ, ಗಿಡಗಂಟಿಗಳ ಕೊರಳಿಂದ ಹೊರಡುತ್ತಿದ್ದ ಕಲರವ, ಗಾಳಿಯ ಸದ್ದಿಗೆ ಮತ್ತು ಚಲನೆಗನುಗುಣವಾಗಿ, ಸ್ಪರ್ಶದ ಅನುಭೂತಿಗೊಳಗಾಗಿ ಪ್ರತಿಸ್ಪಂದಿಸುತ್ತಿದ್ದ ಬಾಹ್ಯಂಗಾಂಗ ಪ್ರಜ್ಞೆ – ಎಲ್ಲವು ಸಮೀಕರಿಸಿ ಅದೊಂದು ನಿದಿರೆಯೆಂದು ಹೇಳಲಾಗದ ಎಚ್ಚರವೆಂದೂ ಪರಿಗಣಿಸಲಾಗದ ವಿಭಿನ್ನ ಅವಸ್ಥೆಯೆಂದು ಮಾತ್ರ ಸ್ಪಷ್ಟವಾಗಿಹೋಗಿತ್ತು. ಅದನ್ನು ಕುರಿತು ಆಲೋಚಿಸುತ್ತಿದ್ದ ಹೊತ್ತಲ್ಲೆ ತಟ್ಟನೆ ಅವನ ಗಮನಕ್ಕೆ ಬಂದಿತ್ತು – ಇದ್ದಕ್ಕಿದ್ದಂತೆ ಮರೆಯಾಗಿ ಹೋಗಿದ್ದ ಹಸಿವಿನ ಸಂಕಟದ ತೊಳಲಾಟ; ಅಷ್ಟೊಂದು ತೀವ್ರವಾಗಿ ಬಾಧಿಸುತ್ತ, ಆ ಬಾಧೆಯಲ್ಲಿ ಮರುದಿನದವರೆಗೆ ಕಳೆಯಬೇಕಲ್ಲ ಎಂದು ಚಿಂತೆ ಹಿಡಿಸಿದ್ದ ವಿಪರೀತದ ಭಾವ ಅದ್ಯಾವ ಮಾಯದಲ್ಲಿ ನೆನಪಿನ ಕಾಡುವಿಕೆಯ ಸ್ತರದಿಂದ ಜಾರಿಕೊಂಡು ಇದ್ದಕ್ಕಿದ್ದಂತೆ ಕಣ್ಮರೆಯಾಗಿತ್ತೊ – ಒಂದೂ ಗೊತ್ತೆ ಆಗಿರಲಿಲ್ಲ. ವಿಚಿತ್ರವೆಂದರೆ ಹಾಗೆ ಹಸಿವೆಯಾಗಿದ್ದೆ ಸುಳ್ಳು ಎನ್ನುವಂತೆ, ಹಸಿವಿನ ಸುಳಿವಿಲ್ಲದ ಹಾಗೆ ಸಮ ಸ್ಥಿತಿಯಾಗಿ ಹೋಗಿತ್ತು, ಹೊಟ್ಟೆ ತುಂಬಿಕೊಂಡು ಭಾರವಾದಂತಹ ಭಾವನೆಯಲ್ಲದಿದ್ದರೂ. ಬಹುಶಃ ‘ಈ ಹಸಿವೆ ಕೂಡ ಒಂದು ರೀತಿಯ ಮಾಂಕ್ ಸಾಕೇತರು ಹೇಳಿದ್ದ ತನ್ನ ಸ್ವಯಂ ಸಮತೋಲನದ ಸ್ಥಿತಿಯನ್ನು ಕಂಡುಕೊಂಡಿರಬೇಕು ತನ್ನಲ್ಲೆ ಹಸಿವನ್ನು ನಿಭಾಯಿಸಿ, ನಿವಾರಿಸಿಕೊಳ್ಳುವ ಹಾಗೆ’ ಎಂದುಕೊಳ್ಳುತ್ತಲೆ ಮಾಂಕ್ ಸಾಕೇತರು ತನಗೆ ವಹಿಸಿದ್ದ ಕಾರ್ಯದಲ್ಲಿ ನಿಗಾವಹಿಸಲು ಯತ್ನಿಸುವ ಹೊತ್ತಿಗೆ ಸರಿಯಾಗಿ ಹಗಲ್ಹೊತ್ತಿನ ಕೂಟ ಸಭೆಗೆ ವೇಳೆಯಾಯ್ತೆಂದು ಸೂಚಿಸುವ ಗಂಟೆ ಬಾರಿಸಿದ ಸದ್ದು ಕೇಳಿಸಿತು.

ಮತ್ತೆ ಮಧ್ಯಾಹ್ನದ ಪ್ರಾರ್ಥನೆಯ ಸಾಮೂಹಿಕ ಕೂಟ ನಡೆಯುವ ಜಾಗಕ್ಕೆ ಬಂದು ಭಾಗವಹಿಸುವ ಹೊತ್ತಿಗೆ ಹಸಿವೆಯೆ ಇಲ್ಲವೆನ್ನುವಂತೆ ಮಾಯವಾಗಿಹೋಗಿತ್ತು. ಆದರೆ ಅದೆಲ್ಲ ಮುಗಿಯುವಷ್ಟರಲ್ಲಿ ಚಹಾದ ಹೊತ್ತಾಗಿ, ಚಹಾದ ಜೊತೆ ಜೊತೆಯಾಗಿ ರಸ್ಕಿನ ರೀತಿಯ ಪುಡಿ ಬಿಸ್ಕೆಟ್ಟುಗಳ ವಿತರಣೆಯೂ ಆಗಿತ್ತು. ತಿನ್ನುವುದೇನನ್ನು ಮತ್ತೆ ಕುಟಿಗೆ ಒಯ್ಯುವಂತಿಲ್ಲದ ಕಾರಣ ಹಸಿವೆಯಿರದಿದ್ದರು ಅದನ್ನೆ ಬಾಯಾಡಿಸಿ ಚಹಾ ಕುಡಿದು ಮತ್ತೆ ಕುಟಿಯತ್ತ ನಡೆಯುವಾಗ ಸಹ, ಆ ಅದ್ಭುತ ಸೃಷ್ಟಿ ಪ್ರಕ್ರಿಯೆಯ ಕುರಿತಾದ ಸಂವಾದವೆ ತಲೆಯಲ್ಲಿ ಗಿರಗಿಟ್ಟಲೆ ಹೊಡೆದುಕೊಂಡು ಗಿರಗಿರನೆ ಸುತ್ತುತ್ತಿತ್ತು… ಎಷ್ಟೊಂದು ಸರಳ ಮತ್ತು ವೈಶಿಷ್ಠಪೂರ್ಣ ಅದ್ಭುತ – ಈ ಸೃಷ್ಟಿ ಪ್ರಕ್ರಿಯೆ? ಆಳಕ್ಕಿಳಿದು ನೋಡುತ್ತಾ ಹೋದಂತೆ ಇದು ಮಾನವ ಜೀವಿಗಳಲ್ಲಿ ಅಥವಾ ಬರಿ ಕೆಲವೆ ಪ್ರಾಣಿ, ಪಶು, ಪಕ್ಷಿಗಳಲ್ಲಿರುವ ಪವಾಡ ಮಾತ್ರವಲ್ಲ – ಯಾವುದೆ ಸಂಕೀರ್ಣ ಜೀವಿಯ ಸೃಷ್ಟಿ ಚಕ್ರದ ಒಗಟನ್ನು ಒಡೆದು ನೋಡಿದರೂ ಇದೆ ಮೂಲ ಸೂತ್ರ ಎಂದು ಅರಿವಾದಾಗ ಆ ಸೃಷ್ಟಿ ಪ್ರಜ್ಞೆಯ ಆಗಾಧ ಬುದ್ಧಿಮತ್ತೆಯ ಅತೀ ಸರಳ ನಿರೂಪಣಾ ಸೂತ್ರವನ್ನು ಕಂಡು ಬೆಕ್ಕಸ ಬೆರಗಾಗುವಂತಾಗಿತ್ತು. ತಾನಾಗೆ ವಿಭಜಿಸಿಕೊಳ್ಳುವ ಕೆಲವು ಏಕ ಕೋಶ ಜೀವಿಗಳನ್ನು ಬಿಟ್ಟರೆ ಮಿಕ್ಕೆಲ್ಲದರಲ್ಲು ಇದೆ ಪ್ರಕ್ರಿಯೆಯೆ. ಅಸ್ಥಿತ್ವದ ರೂಪುರೇಷೆ ಬರೆಯುವ ವಿಸ್ಮಯದ ಅದ್ಭುತವನ್ನು ಅದು ಹೇಗೆ ತಾನೆ ಬರಿ ಮಾತಲಿ ವಿವರಿಸಿ ಹೇಳಲು ಸಾಧ್ಯ? ಯಾವುದೊ ಅಂಡಾಣು ಮತ್ತು ವೀರ್ಯಾಣು ಎಲ್ಲಿಂದಲೊ ಬಂದು ಸೇರಿದರೆ ಮುಗಿಯಿತು; ಯಾರೊ ಬರೆದಿಟ್ಟ ಸಾಮಾನು ಪಟ್ಟಿ ಬಿಚ್ಚಿಕೊಂಡಂತೆ ತಂತಾನೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ, ಒಂದು ನಿರ್ದಿಷ್ಠ ಅನುಕ್ರಮಣತೆಯಲ್ಲಿ – ದಿನಚರಿಯ ನಿಗದಿತ ಆಗು ಹೋಗುಗಳನ್ನೆಲ್ಲ ಯಾರೊ ಆಗಲೆ ಬರೆದು ಕಿವಿಯಲಿ ಗುಟ್ಟಂತೆ ಹೇಳಿ ಬಿಟ್ಟು, ಅವನ್ನೆಲ್ಲ ಒಂದೊಂದಾಗಿ ಕ್ರಮಬದ್ಧವಾಗಿ, ಅನಾವರಣಗೊಳಿಸಲು ಅವ್ಯಕ್ತದಲೆ ನಿರ್ದೇಶಿಸುತ್ತಿದ್ದಾರೇನೊ ಎನ್ನುವಂತೆ. ಒಂದರ ಹಿಂದೊಂದರ ಸಾಲನುಕ್ರಮಣತೆಯಲ್ಲಿ ಶಿಸ್ತುಬದ್ಧಾಗಿ ಯಾರೊ ಅದಾಗ ತಾನೆ ಬಂದು ಸ್ವಿಚ್ಚು ಒತ್ತಿ ಹೋದಂತೆ ನಡೆಯುವ ಆ ಕಾರ್ಯದ ಕ್ಷಮತೆ ಮತ್ತು ದಕ್ಷತೆ – ಅದೆಷ್ಟರ ಮಟ್ಟಿಗಿರಬಹುದು? ಪ್ರತಿ ಪ್ರಾಣಿ ಮತ್ತು ಸಸ್ಯ ಜೀವಿಯ ಸೃಷ್ಟಿ ಚಕ್ರದ ಉದ್ದಗಲಳತೆಗಳು ಬೇರೆ ಬೇರೆಯಿದ್ದರೂ, ಅವೆಲ್ಲದರಲ್ಲಿ ಒಂದೆ ಪ್ರಕ್ರಿಯೆ ಬೇರೆ ಬೇರೆಯದೆ ಆದ ಸೂಕ್ತ ಸಮಯಾವರ್ತಗಳಲ್ಲಿ ಸ್ವಯಂ ನಿರ್ದೇಶಿಸಿಕೊಂಡು ನಿರಂತರವಾಗಿ ನಡೆದು ಬಂದಿರುವುದನ್ನು ನೋಡಿದರೆ, ಇದೊಂದು ಮಹಾನ್ ವಿಜ್ಞಾನಿಯ ಮಹಾನ್ ಪ್ರಕ್ರಿಯೆಗಳಲ್ಲೊಂದು ಎಂಬುದನ್ನು ಅಲ್ಲಗಳೆಯಲಾದರೂ ಹೇಗೆ ಸಾಧ್ಯ?…’

‘… ಅಂದ ಮೇಲೆ ಈ ಪ್ರಕ್ರಿಯೆ ತನ್ನಂತಾನೆ ಯಾವುದೆ ಪ್ರಕಟ ಹತೋಟಿ ಅಥವಾ ನಿಯಂತ್ರಣವಿರದಿದ್ದರೂ ಎಲ್ಲಾ ವೈವಿಧ್ಯ ಜೀವರಾಶಿಗಳಲ್ಲೂ ಏಕಕಾಲದಲ್ಲಿ ಅವಿರತ ಸಾಗುವಂತೆ ನಡೆಸುತ್ತಿರುವ ಅದೃಶ್ಯ ಶಕ್ತಿಯಾದರೂ ಯಾವುದು? ಅದೇನು ಈ ಭೂಮಿಯ ಗುರುತ್ವದಲ್ಲಿ ಅಂತರ್ಗತವಾಗಿರುವ ವಿಶೇಷ ಜಾಣ್ಮೆಯೆ? ಅಥವ ಭುವಿಯ ಪರಿಸರ, ವಾತಾವರಣದಲ್ಲಿ ಅನಾವರಣಗೊಂಡ ನಿಸರ್ಗದ ಜಾಣತನವೆ? ಇಲ್ಲವೆ ಅದೆಲ್ಲವನ್ನು ಮೀರಿದ ಪಂಚಭೂತಗಳ ಯಾವುದೊ ಸಂಯೋಜಿತ ಸಮೀಕರಣದ ವೈವಿಧ್ಯಗಳು ನಿಯಂತ್ರಿಸುತ್ತಿರುವ ಜೀವಾಜೀವ ನಿಯಮವೆ? ಬಹುಶಃ ಇದೆಲ್ಲದರ ಒಟ್ಟುಗೂಡಿಸಿದ ಯಾವುದೊ ಸಮತೋಲನದ ಪರಿ ಉಂಟುಮಾಡಿದ ಅತ್ಯಾದ್ಭುತ ಸಂಕಲಿತ ಸಮಷ್ಟಿ ಸ್ಥಿತಿಯೆ? ಅದೇನೆ ಆಗಿರಲಿ – ಒಂದೇ ಸಾಮಾನ್ಯ ಸೂತ್ರವೆ ಎಲ್ಲಾ ಜೀವ ವೈವಿಧ್ಯಗಳಲ್ಲು ಅಡಿಗಲ್ಲಾಗಿ, ತಳಹದಿಯನ್ನು ಹಾಕಿಕೊಂಡು ನಿಯಂತ್ರಿಸುತ್ತಿದೆಯೆಂದರೆ ಇದೆಲ್ಲದರ ಮೂಲದಲ್ಲಿರುವ ‘ಸಾಮಾನ್ಯ ಮೂಲತತ್ವ’ ಒಂದೆ ಆಗಿರಬೇಕಲ್ಲವೆ? ಹಾಗೆಯೆ ಅದು ಸರಳದಿಂದ ಹಿಡಿದು ಸಂಕೀರ್ಣದವರೆಗೆ ಎಲ್ಲೆಡೆಯಲ್ಲಿಯೂ ಯಾವುದೆ ಕುಂದಿರದಂತೆ ಕೆಲಸ ಮಾಡಬೇಕಾದರೆ ಇವೆಲ್ಲದರಲ್ಲೂ ಅಡಕವಾಗಿರಬಹುದಾದ ‘ಸಹ ಸಾಮಾನ್ಯ ಸಮಾನ ಮೂಲ ತತ್ವ (uniform common basic philosophy)’ ತೀರಾ ಕ್ಲಿಷ್ಟದ್ದಿರದೆ ಸರಳವಾಗಿಯೆ ಇರಬೇಕಲ್ಲವೆ? ಹಾಗಾದಲ್ಲಿ ಪ್ರಕೃತಿಯ ಗೂಢ ರಹಸ್ಯಗಳು, ನಿಗೂಢ ನಿಯಮಗಳು ಬಹುಶಃ ನಾವಂದುಕೊಂಡದ್ದಕ್ಕಿಂತ ಸರಳ ಸ್ತರದ ಸಹಜ ಉತ್ತರಗಳಾಗಿ ಅನಾವರಣಗೊಂಡು ಅಸ್ತಿತ್ವದಲ್ಲಿದ್ದು ಬಿಟ್ಟಿವೆಯೆ? ಅದರ ಫಲಿತವಾಗಿ ಉದ್ಭವಿಸಿದ ಫಲಿತಗಳನ್ನೆ ಗುಣೀಕರಿಸಿ, ಗುಣಿತಗಳ ಗುಣಿತವೆ ಸಂಕೀರ್ಣ ಸ್ವರೂಪಕ್ಕೆ ಕಾರಣವಾಗಿ, ಆ ಮೂಲದ ಸರಳ ಉತ್ತರವನ್ನು ಮರೆಮಾಚಿಬಿಟ್ಟಿವೆಯೆ? ಅದು ಅಷ್ಟು ಸರಳವಾಗಿರಲು ಸಾಧ್ಯವೆ ಇಲ್ಲವೆಂಬ ಹುಸಿ ನಂಬಿಕೆಯಲ್ಲಿ ಅದರತ್ತ ನೋಡದೆ ಅದರ ಹೊರ ಪದರದಲ್ಲಿ ಕಾಣುವ ಗೊಂದಲ ಪ್ರಚೋದಕ ಮೇಲ್ಸೂಚನೆಗಳ ಜಾಡು ಹಿಡಿದು ಪರಿಭ್ರಮಿಸುತ್ತಿದೆಯೆ ಈ ಭ್ರಾಮಕ ಜಗ? ಬಹುಶಃ ಇದು ನಿಜವೆ ಆದರೆ ಹೊರಗೆ ಸಹಸ್ರಾರು ಕವಲುಗಳಾಗಿ ಚಾಚಿದ ಅಸಂಖ್ಯಾತ ಪ್ರಕ್ಷೇಪಗಳ, ಮೂಲ ಸಿದ್ದಾಂತವನ್ನು ಹಿಡಿದಿಟ್ಟಿರುವ ಸಮೂಲ ಸಿದ್ದಾಂತ ಕೇವಲ ಬೆರಳೆಣಿಕೆಯ ಕೆಲವಷ್ಟೆ ಮಾತ್ರವೆ ? ಕಾಯಿಲೆಗಳ ಗುಣ ಲಕ್ಷಣಗಳು ನೂರೆಂಟಿದ್ದರೂ, ಮೂಲ ರೋಗಕಾರಕ ಕಾರಣ ಒಂದೆ ಇದ್ದಾಗ – ಮೂಲದ ಅದೊಂದಕ್ಕೆ ಮದ್ದಿತ್ತರೆ ಮಿಕ್ಕೆಲ್ಲ ಬಾಹ್ಯ ಲಕ್ಷಣಗಳು ತಂತಾನೆ ಮಾಯವಾಗಿಬಿಡುವ ಹಾಗೆ, ಮೂಲಕಾರಣ ಶೋಧಿಸಿ ಮದ್ದಿತ್ತ ಮೇಲೆ ಲಕ್ಷಣಗಳ ಅವಲಕ್ಷಣಗಳೆಲ್ಲ ತಾವಾಗಿಯೆ ಹಿಂಗಿ ಹೋಗಬೇಕು. ಇದು ನಿಸರ್ಗ ಸಹಜ ಪ್ರಕ್ರಿಯೆಯ ಸಹಜ ಸಾಮಾನ್ಯ ಅವತಾರವೆ ಆಗಿದ್ದಲ್ಲಿ, ಹುಲು ಮಾನವರಾದ ನಾವು ಸಿಕ್ಕಿ ನರಳಾಡುವ ನೂರೆಂಟು ತೊಳಲಾಟ, ಯಾತನೆ, ವೇದನೆಗಳೆಲ್ಲದರ ಮೂಲದಲ್ಲಿರುವ ಬೃಹನ್ಮೂಲ ಕಾರಣ ಕೇವಲ ಕೆಲವೇ ಕೆಲವು – ಬಹುಶಃ ಕೇವಲ ಒಂದೇ ಒಂದು ಆಗಿರಬಹುದೆ? ಅಂತಾದರೆ ಸುಮ್ಮನೆ ನೂರೆಂಟು ಜಂಜಡದ ಜತೆ ಹೊಡೆದಾಡುವ ಬದಲು ಅದೊಂದು ಬೃಹನ್ಮೂಲ ಕಾರಣದತ್ತ ಪತ್ತೇದಾರಿ ಪರಿಶೋಧನೆ ನಡೆಸಿ ಅದರ ಪರಿಹಾರದತ್ತ ಗಮನ ಹರಿಸಿದರೆ ಸಾಕೆ? ಅದೊಂದು ಪರಿಹಾರ ಕಂಡರೆ ಮಿಕ್ಕೆಲ್ಲ ತಂತಾನೆ ಪರಿಹಾರ ಕಂಡಂತೆ ಮಾಯವಾಗಿಬಿಡಬಹುದೆ – ರೋಗ ನಿಧಾನದ ವಿಧಾನದಲ್ಲಿ ರೋಗ ಲಕ್ಷಣದ ಮೂಲ ಕಾರಣ ಗೊತ್ತಾದರೆ ಇಡಿ ರೋಗಲಕ್ಷಣ ಸಮೂಹವೆ ಏಕಾಏಕಿ ಮಾಯವಾಗುವಂತೆ….?’

‘ ಅಂದ ಹಾಗೆ ಮಾಂಕ್ ಸಾಕೇತರ ‘ದ್ವಂದ್ವ ಸಂಬಂಧಿ’ ಸಿದ್ದಾಂತಕ್ಕೂ ಇದಕ್ಕೂ ಏನಾದರೂ ಕೊಂಡಿಯಿದೆಯೆ? ಎಲ್ಲೊ ಏನೊ ಸಂಬಂಧವಿರುವಂತೆ ಕಂಡರೂ ಹೇಗೆ ಹೊಂದಿಕೊಳ್ಳುತ್ತವೆಂದು ಸ್ಪಷ್ಟವಾಗುತ್ತಿಲ್ಲವಲ್ಲಾ? ಪರ ಮತ್ತು ವಿರೋಧಿ ದ್ವಂದ್ವಗಳ ಜಂಟಿ ಅಸ್ತಿತ್ವದಲ್ಲೆ ಉತ್ತರದ ಕೊಂಡಿ ಅಡಗಿದೆಯೆ? ಮಾಂಕ್ ಸಾಕೇತರ ಜತೆಗಿನ ಸಂವಾದದ ಎಳೆ ಹಿಡಿದು ಹೊರಟರೆ ಈ ದ್ವಂದ್ವಗಳೆರಡರ ಸಮತೋಲಿತ ಸ್ಥಿತಿಯಷ್ಟೆ ಅದರ ಅಸ್ತಿತ್ವವನ್ನು ಉಳಿಸುವ ಸರಕಾದರೆ, ಅದರ ಅನುಸಾರ ಈಗಾಗಲೇ ಅಸ್ತಿತ್ವದಲ್ಲಿ ಇರುವ ಪ್ರತಿಯೊಂದು ‘ಅಸ್ತಿತ್ವವೂ’ ಯಾವುದೊ ಒಂದು ಸಮತೋಲನದಲ್ಲಿ ಈಗಾಗಲೆ ಇರಬೇಕಲ್ಲವೆ? ಇಲ್ಲದಿದ್ದರೆ ಅದು ಅಸ್ತಿತ್ವದಲ್ಲೆ ಇರದೆ ಪರಸ್ಪರ ಘರ್ಷಣೆಯಲ್ಲಿ ಅಸ್ತಿತ್ವಕ್ಕೆ ಬರುವ ಮುನ್ನವೆ ಕಳೆದು ಹೋಗಬೇಕಾಗಿತ್ತು. ಹಾಗೆ ಆಗಿಲ್ಲವೆಂದ ಮೇಲೆ, ಅವೆರಡು ಪ್ರತಿದ್ವಂದ್ವಿ ದ್ವಂದ್ವಗಳು ಸಮತೋಲನದ ಸ್ಥಿತಿಯಲ್ಲಂತೂ ಇರಲೇ ಬೇಕು… ಆದರೆ? ಹಾಗೆ ಸಮತೋಲನದಲ್ಲಿ ಇದ್ದ ಮೇಲೆ ಅದು ಈ ರೀತಿಯ ಯಾವ ಗೊಂದಲವನ್ನು, ತೊಡಕನ್ನು ಉಂಟುಮಾಡದ ನಿಷ್ಕ್ರಿಯ ಸ್ಥಿತಿಯಲ್ಲಿ ಇರಬೇಕಿತ್ತಲ್ಲವೆ? ಯಾವುದೆ ಅಲ್ಲೋಲಕಲ್ಲೋಲತೆಗು ಬಿಡದೆ ‘ಸರಿದೂಗಿಸಿಕೊಂಡು’ ನಡೆಯಬೇಕಿತ್ತಲ್ಲವೆ? ಮತ್ತೇಕಿ ಗೊಂದಲ, ಸಂಶಯ, ದಾರಿ ತಪ್ಪಿಸುವ ನಡೆ, ಅಧಃಪತನದತ್ತ ಒಯ್ಯುವ ಗಡಿಬಿಡಿ ಇತ್ಯಾದಿ? ಎಲ್ಲೊ ಏನೊ ಸರಿಯಾಗಿ ಹೊಂದುತ್ತಿಲ್ಲವಲ್ಲಾ….?’

‘ ಅರೆ…? ‘ಸಮತೋಲಿತ ಸ್ಥಿತಿ’ ಎಂದ ಮಾತ್ರಕ್ಕೆ ‘ಸರ್ವ ಸಮರ್ಪಕ ಸಂಪೂರ್ಣ ಸಮತೋಲಿತ ಸ್ಥಿತಿ’ ಎಂದೇಕೆ ಅಂದುಕೊಳ್ಳಬೇಕು? ಪ್ರಾಯಶಃ ಆ ‘ಫರ್ಫೆಕ್ಟ್ ಇಕ್ವಿಲಿಬ್ರಿಯಂ’ ಸ್ಥಿತಿಯಲ್ಲಷ್ಟೆ ಪ್ರಶಾಂತ, ಪರಿಶುದ್ಧ, ನಿಷ್ಕ್ರಿಯ ಸ್ಥಿತಿಯಲ್ಲಿರುವುದು ಸಾಧ್ಯವೊ, ಏನೊ? ಎಲ್ಲಾ ವ್ಯವಸ್ಥೆಗಳಲ್ಲಿ ಇರುವಂತೆ ಈ ‘ಸಮತೋಲನದ ಸ್ಥಿತಿಯ’ ಅಸ್ತಿತ್ವಕ್ಕೂ ಕೆಲವು ಕನಿಷ್ಠ ಮತ್ತು ಗರಿಷ್ಠ ಮಿತಿಗಳಿರಬೇಕು. ಎಲ್ಲಿಯತನಕ ಎರಡು ಪ್ರತಿಸ್ಪರ್ಧಿ ದ್ವಂದ್ವಗಳು ಈ ಮಿತಿಯ ನಡುವಲ್ಲೆ ಓಡಾಡಿಕೊಂಡಿರುತ್ತವೆಯೊ ಅಲ್ಲಿಯವರೆಗೆ ಸಮತೋಲನದ ಸ್ಥಿತಿಯಂತೂ ಕಾಯ್ದುಕೊಂಡಿರುತ್ತದೆಯೇನೊ? ಆ ಮಿತಿಯಿಂದ ಹೊರಗಿದ್ದರೆ ತಮ್ಮದೆ ಪರಸ್ಪರ ಘರ್ಷಣೆಯಿಂದ ನಾಶವಾಗಿ ಹೋಗುತ್ತವೆಯಾದರು, ಆ ಮಿತಿಯ ಒಳಗಿರುವತನಕ ಎರಡೂ ಪರಸ್ಪರ ಹೊಂದಿಕೊಂಡಿರುವ ಸಮತೋಲನದ ಸ್ಥಿತಿಯ ಅಸ್ತಿತ್ವಕ್ಕೆ ಒಗ್ಗಿಕೊಂಡುಬಿಡುತ್ತಿರಬೇಕು. ಅಂದರೆ ಸಮತೋಲನ ಸ್ಥಿತಿ ತಲುಪಿದೆಯೆಂದ ಮಾತ್ರಕ್ಕೆ ಅದು ‘ಸರ್ವಶ್ರೇಷ್ಟ ಸಮತೋಲಿತ ಸ್ಥಿತಿ’ ಎಂದು ಹೇಳಲಾಗದೆಂದಾಯ್ತು. ಅದು ಕೇವಲ ಅಸ್ತಿತ್ವವನ್ನು ಯಾವುದೋ ಒಂದು ‘ಬದುಕುಳಿದ’ ಅಥವಾ’ ಅಳಿದುಳಿದ’ ಅದರದೆ ಸ್ಥಿತಿಯಲ್ಲಿ ಕಾಯ್ದಿಟ್ಟುಕೊಳ್ಳಲು ಸಾಕಾಗುವುದೆ ಹೊರತು ಅದರಿಂದ ಮನಸೋ ಇಚ್ಛೆಯನುಸಾರ ನಿರೀಕ್ಷಿತ ಫಲಿತ ಪಡೆಯುವ ಉನ್ನತೋತ್ಕೃಷ್ಟ ಗುಣಮಟ್ಟದಲ್ಲಿ ಅಲ್ಲ… ಉದಾಹರಣೆಗೆ ಒಂದು ಅಸ್ತಿತ್ವದ ಎರಡು ಪರ-ವಿರೋಧಿ ದ್ವಂದ್ವಗಳನ್ನು ಪರಿಗಣಿಸಿದರೆ, ಅದರಲ್ಲಿ ಒಂದನ್ನು ಧನಾತ್ಮಕ ಪರಿಣಾಮ ಬೀರುವ ‘ಸುಸ್ತಿತ್ವ’ ಎಂದು ಕರೆದು ಮತ್ತೊಂದನ್ನು ಋಣಾತ್ಮಕ ಪರಿಣಾಮ ಬೀರುವ ‘ದುಸ್ತಿತ್ವ’ ಎಂದು ಕರೆಯೋಣ… ಈಗ ಸಮತೋಲನದ ಸ್ಥಿತಿಯಲ್ಲಿ ‘ಸುಸ್ತಿತ್ವ’ ಮತ್ತು ‘ದುಸ್ತಿತ್ವ’ ಎರಡೂ ಒಟ್ಟಾಗಿದ್ದರೂ ಸುಸ್ತಿತ್ವದ ಬಲ ಶೇಕಡ ಇಪ್ಪತೈದರಷ್ಟಿದ್ದರೆ, ಶೇಕಡಾ ಎಪ್ಪತೈದರ ಬಲವಿರುವ ದುಸ್ತಿತ್ವದ ಕೈ ಮೇಲಾಗಿ ಅದೆ ರಾಜ್ಯಭಾರ ನಡೆಸುತ್ತದೆ, ದಬ್ಬಾಳಿಕೆಯಿಂದಾದರೂ ಸರಿ. ಇವೆರಡರ ಬಲ ತಲಾ ಶೇಕಡ ಐವತ್ತೆಂದರೆ ಎರಡು ಶಕ್ತಿಗಳೂ ಸಮಬಲವೆನ್ನಬಹುದಾದರೂ ಕೆಲವೊಮ್ಮೆ ಅದರ (ಸುಸ್ತಿತ್ವ), ಮತ್ತೆ ಕೆಲವೊಮ್ಮೆ ಇದರ (ದುಸ್ತಿತ್ವ) ಕೈ ಮೇಲಾಗುತ್ತ ಸತ್ಪರಿಣಾಮ, ದುಷ್ಪರಿಣಾಮ ಎರಡೂ ಸಮ ಪ್ರಮಾಣದಲ್ಲಿ ಘಟಿಸುವಂತೆ ಪ್ರಭಾವಿಸಬಹುದು…ಅದೆ ಸುಸ್ತಿತ್ವ ಎಪ್ಪತೈದಾದರೆ ಸುಖಗಾಮಿ ಪರಿಣಾಮವೆ ಹೆಚ್ಚಾಗಿರುತ್ತದೆ. ಪ್ರಾಯಶಃ ಮಾಂಕ್ ಸುಕೇತರು ಹೇಳಿದ ‘ಶೂನ್ಯ’ ಪರಿಸ್ಥಿತಿಯೆಂದರೆ – ಸುಸ್ತಿತ್ವ ನೂರಾಗಿ ದುಸ್ತಿತ್ವ ಸೊನ್ನೆಯಾಗಬೇಕು..ಅಂದರೆ ದುಸ್ತಿತ್ವ ನಿಜಕ್ಕೂ ತನ್ನ ಮಿತಿಯ ಕನಿಷ್ಠ ಮಟ್ಟಕ್ಕಿಳಿಯುವಂತಾಗಬೇಕು..ಅದೆ ಪರಿಪೂರ್ಣ ನಿಜ ಯೋಗಿಯ ಸ್ಥಿತಿ… ಅಂದರೆ ಆ ದುಸ್ತಿತ್ವ ತನ್ನ ಕನಿಷ್ಠ ಮಿತಿಯಾದ ಶೂನ್ಯವನ್ನು ಮುಟ್ಟಿ ತಗುಲಿಕೊಂಡೆ ನಿಂತುಬಿಡಬೇಕು – ಮತ್ತಷ್ಟು ಕೆಳಗೆ ಹೋಗದಂತೆ ; ಇಲ್ಲವಾದರೆ ಆ ಮಿತಿಯಿಂದಾಚೆಗೆ ಅಸ್ತಿತ್ವದ ಇರುವಿಕೆಯೆ ಪ್ರಶ್ನಾರ್ಥಕವಾಗಿಬಿಡುವುದರಿಂದ… ಅಥವಾ, ಯಾರಿಗೆ ಗೊತ್ತು? ಆ ಮಟ್ಟವನ್ನು ಮುಟ್ಟಬಲ್ಲ ಶಕ್ತಿಯಿರುವಂತಹ ಯೋಗಿಗಳಂತಹವರು ಆ ಸ್ಥಿತಿಯಲ್ಲೂ ಅಸ್ತಿತ್ವದಲ್ಲಿರುವ ಬೇರೇ ಉಪಾಯಗಳನ್ನು ಕಂಡುಕೊಂಡಿದ್ದಾರೊ, ಏನೊ?’

‘ ಆದರೆ ಈ ಸುಸ್ತಿತ್ವ- ದುಸ್ತಿತ್ವದ ಜಂಟಿ ಸ್ಥಿತಿ ಯಾವಾಗಲೂ ಈ ನಿರ್ಧಾರಿತ ಅನುಪಾತದಲ್ಲಿಯೆ ಹಾಗೆಯೆ ಇದ್ದು ಬಿಡುವುದೆ ? ಇದ್ದು ಬಿಡಬೇಕೆ ? ಇರಲಾರದು… ಬಾಹ್ಯ ಪರಿಸರದ ವಾತಾವರಣ ಸದಾ ನಿರಂತರವಾಗಿ ಬದಲಾಗುತ್ತಿದ್ದರೆ ಅದು ಈ ಸಮತೋಲನತೆಯ ಮೇಲೂ ಪ್ರಭಾವ ಬೀರಲೆ ಬೇಕಲ್ಲವೆ? ಅಂದರೆ ಈ ನಿರ್ದಿಷ್ಠ ಸಮ ಸ್ಥಿತಿ ಬದಲಾಗದೆ ಒಂದೆ ರೀತಿಯಿದ್ದರೆ, ಬದಲಾದ ಪರಿಸರಕ್ಕೆ ಹೊಂದಿಕೆಯಾಗದ ಸನ್ನಿವೇಶ ಉದ್ಭವಿಸಿ ಮತ್ತೆ ಸಮವಿದ್ದ ಸ್ಥಿತಿಯೆ ಅಸಮ ಸ್ಥಿತಿಯಾಗಿ ಬದಲಾಗಿಬಿಡುವುದಿಲ್ಲವೆ? ಅಂದರೆ ಈ ಸಮತೋಲನದ ಸ್ಥಿತಿಯೂ ಸ್ಥಿರವಾದ ಅಚರವಲ್ಲ ಎಂದಾಯ್ತು… ಅದು ಕೂಡ ಕಾಲ, ದೇಶ, ಪರಿಸರಕ್ಕನುಗುಣವಾಗಿ ಬದಲಾಗುತ್ತ, ಹೊಂದಿಕೊಳ್ಳುತ್ತ ಹೋಗಬೇಕು; ಇರದಿದ್ದರೆ ಸ್ಥಿರವಿದ್ದ ಅನುಪಾತ ಮತ್ತೆ ಬದಲಾಗಿ, ಬದಲಾದ ನಡುವಳಿಕೆಗೆ ಕಾರಣವಾಗಬಹುದು.. ಅಂದರೆ ಜೀವನವಿಡಿ ಇದೊಂದು ಮುಗಿಯದ ನಿರಂತರ ಯುದ್ಧ ಎಂದಂತಾಯ್ತೆ? ಅವಿರತವಾಗಿ ಈ ಸ್ಥಿತಿಯನ್ನು ತೂಗಿಸಿಕೊಂಡು ಸಮತೋಲಿಸುತ್ತಲೆ ಹೋಗಬೇಕೆ? ಒಂದು ಕಾಲಘಟ್ಟದಲ್ಲಿ ಒಂದು ರೀತಿಯ ಗುಣ ನಡುವಳಿಕೆಯಿದ್ದ ವ್ಯಕ್ತಿಯೊಬ್ಬ ಬದಲಾಗಿದ್ದಾನೆಂದು ಹೇಳಿದರೆ, ಅವನ ವ್ಯಕ್ತಿತ್ವ ಸ್ವತಃ ಬದಲಾಗಿದೆ ಅನ್ನುವುದಕ್ಕಿಂತ, ಅವನ ಆ ಸಮತೋಲಿತ ಸ್ಥಿತಿ ಪರಿಸ್ಥಿತಿಗನುಗುಣವಾಗಿ ಬದಲಾಗಲಿಲ್ಲವೆಂದು ಅರ್ಥವೇನೊ? ಬದಲಾಗಿ ಅಸ್ತಿತ್ವದಲ್ಲಿರಬೇಕಾದ ಸಂತುಲಿತ ಸ್ಥಿತಿಗನುಸಾರ ಅವನು ನಿರಂತರ ಬದಲಾಗುತ್ತಿದ್ದರೆ ಹೊರ ಜಗತ್ತಿಗೆ ಅವನು ಬದಲೇ ಆಗದ ಒಂದೆ ಸಮತೋಲನ ಸ್ಥಿತಿಯಲ್ಲಿರುವವನಂತೆ ಕಾಣಿಸುತ್ತಾನೆ.. ಬಹುಶಃ ಹೊರಗಿನ ಜಗತ್ತು ಅದನ್ನು ಪಕ್ವತೆ, ಪ್ರಬುದ್ಧತೆ, ಸರಳತೆ ಎಂದೆಲ್ಲ ಕರೆದುಕೊಳ್ಳುತ್ತದೇನೊ..?’

‘ ಅಂದ ಹಾಗೆ…..ನನ್ನೆಲ್ಲಾ ಚಡಪಡಿಕೆ, ಆತಂಕ, ದೌರ್ಬಲ್ಯ, ತೊಡಕುಗಳ ಮೂಲವಾದ ದ್ವಂದ್ವವೂ ಒಂದೆ ಬೃಹನ್ಮೂಲದಿಂದ ಹೊರಟ ತರತರದ ಕವಲುಗಳ ವಿಭಿನ್ನ ಅವತಾರಗಳೆ?’ ಇದ್ದಕ್ಕಿದ್ದಂತೆ ಏನೊ ಆಘಾತಕಾರಿ ಜ್ಞಾನೋದಯವಾದಂತೆ ಕಂಪಿಸಿತ್ತು ಶ್ರೀನಾಥನ ಮನ, ಆ ಧ್ಯಾನದ ಗಳಿಗೆಯಲೂ… ಹೌದೆನ್ನುವಂತೆ ಪಿಸುಗುಟ್ಟುವಂತೆ ಮೆಲುವಾಗಿ ಹರಿದು ಸುತ್ತುವರೆದಿತ್ತು ಆ ರಾತ್ರಿಯ ತಂಗಾಳಿಯ ತಂಪಿನಲೆ.

ತಂಗಾಳಿಯ ಮೆಲುಕು ಮೆಲುವಾಗಿ ಬಾಹ್ಯಕರಣದೊಂದಿಗೆ ಅಂತಃಕರಣವನ್ನು ಸವರಿದಂತಾದಾಗ ಎಚ್ಚೆತ್ತುಕೊಂಡ ಶ್ರೀನಾಥನಿಗೆ ತನ್ನ ಮೈ ಮುಖವೆಲ್ಲಾ ಆ ತಂಗಾಳಿಯಲ್ಲೂ ಬೆವರಿ ನೀರಾಡಿಕೊಂಡಿರುವುದು ಗಮನಕ್ಕೆ ಬಂತು. ಬಹುಶಃ ಒಳಗಿನ ಅಂತರ್ಮಥನದ ಆಲೋಚನೆಯೆಬ್ಬಿಸಿದ ತರಂಗಾಂತರಗಳು ತಮ್ಮ ತೀವ್ರತೆ ಮತ್ತು ಗಾಢತೆಯಿಂದ ಅಂತರ್ಜ್ಞಾನೋಷ್ಣದ ಶಾಖದಿಂದುದ್ಭವಿಸಿದ ಬಿಸಿಯ ಸಂವೇದನೆಯುಂಟು ಮಾಡುತ್ತಿರಬಹುದೆಂದುಕೊಳ್ಳುತ್ತಲೆ, ಚಿಂತನೆಯ ಗತಿಯನ್ನು ತಾನು ಶೋಧಿಸಬೇಕಾಗಿರುವ ವೈಯಕ್ತಿಕ ಹರವಿನತ್ತ ಹಾಯಿಸಲು ಯತ್ನಿಸತೊಡಗಿದ ಶ್ರೀನಾಥ. ಆ ದಿನ ಮಧ್ಯಾಹ್ನದ ಹೊತ್ತಲ್ಲಿ ಏಕಾಗ್ರಚಿತ್ತವಾಗಿ ಮೂಡದೆ ಕಲಸಿಹೋಗಿದ್ದ ಲಹರಿ, ಈಗ ಮಾತ್ರ ಸ್ಪುಟವಾಗಿ ಯಾವುದೆ ಅಡೆತಡೆಯಿಲ್ಲದ ನಿರಂತರವಾಹಿನಿಯಾಗಿ ಮೂಡತೊಡಗಿತ್ತು – ಮನಃಪಟಲದ ಮೇಲೆ.. ಆ ಮಧ್ಯಾಹ್ನದ ಅನ್ಯಮನಸ್ಕತೆಯಿಲ್ಲದೆ ಸ್ಪುಟವಾಗಿ, ನಿರಂತರವಾಗಿ ಗಹನಾಲೋಚನಾಲಹರಿ ಮೂಡಿ ಬರುತ್ತಿರುವ ಈ ಹೊತ್ತಿನಲ್ಲಿ, ಆ ಭಾವ ಸಮಾಧಿಯಿಂದ ಪೂರ್ತಿ ಹೊರಜಿಗಿದು ಮತ್ತೆ ಬಾಹ್ಯ ಪ್ರಚೋದನೆಗಳಿಂದ ಪ್ರಕ್ಷುಬ್ದಿತನಾಗುವ ಮೊದಲೆ, ತನ್ನೆಲ್ಲ ಹಳೆಯ ನೆನಪುಗಳನ್ನು ಮಾಂಕ್ ಸಾಕೇತರ ಸೂಚನೆಯನುಸಾರ ಒತ್ತಡರಹಿತ ನಿರ್ಭಾವುಕ ಸ್ಥಿತಿಯಲ್ಲಿ ಮನಃಪಟಲದ ಮೇಲೆ ತಂದುಕೊಳ್ಳಲು ಗಮನವನ್ನು ಕೇಂದ್ರೀಕರಿಸತೊಡಗಿದ ಶ್ರೀನಾಥ. ಈ ಬಾರಿ ಅಚ್ಚರಿಯೆಂಬಂತೆ ಮೊದಲು ಮೂಡಿಬಂದ ಚಿತ್ರಣ ಬಾಲ್ಯದ, ಶಾಲಾ ದಿನಗಳದ್ದು; ಅದೂ ಅವನೆಂದೂ ನೆನಪಿಸಿಕೊಳ್ಳದ, ಜಾರಿ ಚೆಲ್ಲಾಡಿಕೊಂಡು ಕಾಣೆಯಾಗಿ ಹೋಗಿದ್ದ, ಪ್ರಮುಖವೆಂದೂ ಗಣಿಸಿರದಿದ್ದ ಸಣ್ಣಪುಟ್ಟ ಪ್ರವರಗಳೆಲ್ಲ ನೆನಪಿನ ಹಾಳೆ ಬಿಚ್ಚಿ ಇದ್ದಕ್ಕಿದ್ದಂತೆ ಒಮ್ಮೆಗೆ ಯಾವುದೊ ಮೂಲೆಯಲ್ಲಿ ಪ್ರತ್ಯಕ್ಷಗೊಂಡು, ಹೆಕ್ಕಿ ತೆಕ್ಕೆಗೆತ್ತಿಕೊಂಡ ಯಾವುದಾವುದೊ ಬಣ್ಣ ಬಣ್ಣದ ಹರಳಿನಂತೆ ಪಡಿಮೂಡತೊಡಗಿತ್ತು. ಮೊದಲಿಗೆ ಇದಾವುದೊ ಸಲ್ಲದ ನೆನಪೆಂದು ಅತ್ತ ಸರಿಸಲೆತ್ನಿಸಿದವನಿಗೆ ಕುನ್. ಸಾಕೇತರ ನುಡಿಗಳ ನೆನಪಾಗಿ ಆ ಪ್ರಯತ್ನ ನಿಲ್ಲಿಸಿ ತಾನಾಗಿ ನೆನಪಿನ ಪದರದಲ್ಲಿ ಬಂದದ್ದೆಲ್ಲಾ ಬರಲಿ ಎಂದು ತೀರ್ಮಾನಿಸಿ, ಅದರ ಕೈಗೆ ಚಿತ್ತವನ್ನೊಪ್ಪಿಸಿ ತಾನು ಕೇವಲ ನಿರ್ಲಿಪ್ತನಂತೆ ದೃಷ್ಟಿಸುವ ಬಾಹ್ಯವೀಕ್ಷಕನಂತೆ ಕುಳಿತುಬಿಟ್ಟಿದ್ದ. ಅದೊಂದು, ತಾನೆ ಕಣ್ಮುಚ್ಚಿ ಕುಳಿತ, ತನ್ನ ದೇಹದಿಂದಲೆ ಎದ್ದು ಹೊರಬಂದ, ಹೊರಗಿನ ಕಣ್ಣಿಂದ ತನ್ನನ್ನೆ ಅವಲೋಕಿಸುತ್ತಿರುವ ಅನುಭೂತಿ.. ಸಿನಿಮಾ ಥಿಯೇಟರಿನ ಪರದೆಯ ಮೇಲೆ ಓಡುತ್ತಿರುವ ಚಿತ್ರವನ್ನು ನೋಡಿದ ಹಾಗೆ.. ಚಿತ್ರ ಮಂದಿರದಲ್ಲಾದರೆ ಒಂದೆ ಕಡೆ ಸೀಟಿನಲ್ಲಿ ಕೂತು ನೋಡುವ ಅನುಭವ.. ಆದರೆ ಇಲ್ಲಿ ಮಾತ್ರ ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಅಡ್ಡಾಡಿಕೊಂಡು , ಎಲ್ಲಾ ಕೋನಗಳಲ್ಲೂ ನಿರಾತಂಕವಾಗಿ ನೋಡುವ ವಿಶಿಷ್ಠ ಹಾಗೂ ಮುಕ್ತ ಅನುಭವ. ತನ್ನ ಮುಂದೆಯೆ ತನ್ನ ಹೊರಗೆ ತನಗೆ ಸಂಬಂಧಪಟ್ಟಿದ್ದೇನೊ ನಡೆಯುತ್ತಿರುವುದನ್ನು ನೋಡುತ್ತಿರುವ ಮುಕ್ತಾತ್ಮದ ರೀತಿ…

ಮೊದಲ ದೃಶ್ಯ ಪಟಲದಲ್ಲಿ ಮೂಡಿದ ಚಿತ್ರಣ ಚಿಕ್ಕ ಹುಡುಗನೊಬ್ಬನನ್ನು ತಾಯೊಬ್ಬಳು ಬೀದಿಯಲ್ಲಿ ತೋಳು ಹಿಡಿದು ದರದರನೆ ಎಳೆದೊಯ್ಯುತ್ತಿರುವ ದೃಶ್ಯ..ಅವಳ ಬಲದ ಕೈಲಿರುವ ಬೆತ್ತದ ಕೋಲೊಂದು ಎಳೆದೊಯ್ಯಲು ಪ್ರತಿರೋಧವನ್ನೊಡ್ಡುತ್ತಿರುವ ಹುಡುಗನ ಪ್ರತಿಕ್ರಿಯೆಯ ಅನುಪಾತಕ್ಕನುಗುಣವಾಗಿ ಅವನ ಮೈಮೇಲೆ ನರ್ತಿಸುತ್ತಿದೆ, ಬಾಯಲ್ಲಿ ನಿಲ್ಲದ ಬೈಗುಳದ ಜತೆ… ಅದನ್ನು ಮೀರಿಯೂ ಅತ್ತು, ಚೀರಾಡಿ, ಭೋರಾಡುತ್ತ ತನ್ನ ಪ್ರತಿರೋಧನವನ್ನು ಮುಂದುವರೆಸುತ್ತಲೆ ಇದ್ದಾನೆ ಹುಡುಗ, ತನ್ನ ಒರಟು ಸ್ವಾಭಿಮಾನಿ ಹಠಮಾರಿತನವನ್ನು ಬಿಡದೆ… ಆ ದೃಶ್ಯದಲಿದ್ದ ಹುಡುಗ ತಾನೆ ಎಂದು, ಅದರಲ್ಲಿದ್ದ ಹೆಂಗಸು ತನ್ನ ತಾಯೆಂದು ಪಕ್ಕನೆ ಗುರುತಿಸಿತ್ತು ಶ್ರೀನಾಥನ ಮನಸು – ಪ್ರೈಮರಿ ಸ್ಕೂಲಿನ ಒಂದನೆಯದೊ, ಎರಡನೆಯದೊ ತರಗತಿಗೆ ಹೋಗುವಾಗಿನ ಘಟನೆ – ನಿರಂತರವಾಗಿ ಸುಮಾರು ದಿನ ಸಾಗುತ್ತಿದ್ದ ದೈನಂದಿನ ಪರಾಕ್ರಮವದು ! ಅದರ ಚಿತ್ರ ನಿಚ್ಛಳವಾಗುತ್ತ ಮತ್ತಷ್ಟು ವಿವರಗಳತ್ತ ಸರಿಯುವ ಮೊದಲೆ ಇದ್ದಕ್ಕಿದ್ದಂತೆ ದೃಶ್ಯ ಬದಲಾಯಿಸಿಕೊಂಡು ಹೋಗಿ ಮತ್ತೊಂದು ದೃಶ್ಯ ಮನಃಪಟಲದಲ್ಲಿ ಸರಿದಾಡತೊಡಗಿತ್ತು – ಈ ಬಾರಿ ಅಖಾಡ ನೇರ ಶಾಲೆಯ ಅಂಗಳಕ್ಕೆ ಜಿಗಿದುಬಿಟ್ಟಿದೆ.. ಅಲ್ಲಿಯೂ ಅದೇ ಹುಡುಗನ ಹಠ ಮುಂದುವರೆದಂತಿದೆ..ನಿಲ್ಲದ ಅಳು, ಭೋರ್ಗರೆತ, ಚೀರಾಟ. ಅಮ್ಮನ ಬದಲಿಗೆ ಈಗಲ್ಲಿ ಟೀಚರಳೊಬ್ಬಳ ಕೈ ಬೆತ್ತ…ನಿಲ್ಲಿಸದ ಅಳುವಿಗೆ ಬೇಸತ್ತು ಅವನನ್ನೆಳೆದುಕೊಂಡು ಹೋಗಿ ಹೆಂಚು ಹೊದಿಸಿದ ತರಗತಿ ಕೋಣೆಗಳ ನಡುವಿನ ಓಣಿಯೊಂದರಲ್ಲಿ ಬಿಸಿಲಲ್ಲಿ ನಿಲ್ಲುವ ಶಿಕ್ಷೆ ವಿಧಿಸಿದ್ದಾರೆ – ಅವನಂತೆಯೆ ನಿಂತ ಮತ್ತೆರಡು ಮೂರು ಹುಡುಗರ ಜತೆ.. ಆದರೆ ಅವರಾರು ಇವನಂತೆ ರೋಧಿಸುತ್ತಿಲ್ಲ, ಸುಮ್ಮನೆ ನಿಂತಿದ್ದಾರಷ್ಟೆ.. ಇವನ ಆವೇಶ, ರೋಧನವೇಕೊ ಇದ್ದಕ್ಕಿದ್ದಂತೆ ಗಗನ ಮುಟ್ಟುತ್ತದೆ.. ಅದೆ ಹೊತ್ತಿನಲ್ಲಿ ಅಲ್ಲಿಗೆ ಬಂದ ಶಿಸ್ತಿಗೆ ಹೆಸರಾದ ಹೆಡ್ ಮೇಡಮ್ಮಿನ ಕಣ್ಣಿಗೂ ಬೀಳುತ್ತದೆ ಆ ಆರ್ತನಾದ… ಅದೇನಾಯ್ತೊ? ಆಕೆ ಅಲ್ಲೆ ಹತ್ತಿರವಿದ್ದ ನಲ್ಲಿಯ ಕೆಳಗೆ ತುಂಬಿಸಿಟ್ಟಿದ್ದ ಬಕೇಟೊಂದರ ನೀರನ್ನೆಲ್ಲ ಎತ್ತಿ ಅನಾಮತ್ತಾಗಿ ಆ ಹುಡುಗನ ಮೈ ಮೇಲೆ ಸುರಿದುಬಿಡುತ್ತಾಳೆ.. ಆದರೆ ಹುಡುಗನ ರೌದ್ರಾವತಾರ ಮಾತ್ರ ಅಭಾಧಿತ…! ಆಗ ಮತ್ತೆ ಸರಕ್ಕನೆ ದೃಶ್ಯದ ಬದಲು.. ಈಗ ಆ ಹುಡುಗನೆ ಬೆಳೆದು ಸ್ವಲ್ಪ ದೊಡ್ಡವನಾದಂತೆ ಕಾಣುತ್ತಿದ್ದಾನೆ.. ಸ್ಕೂಲಿನ ಸಮವಸ್ತ್ರ ಮತ್ತು ಬಗಲಿನ ಪಾಟಿ ಚೀಲ ಜತೆಗೆ ಇವೆ. ಅದೆ ಶಾಲೆಯ ಇನ್ನೊಬ್ಬ ಹುಡುಗನೂ ಜತೆಯಲ್ಲಿದ್ದಾನೆ.. ಇಬ್ಬರೂ ಆ ಉರಿ ಬಿಸಿಲಲ್ಲಿ ಆಟದ ಮೈದಾನವೊಂದರ ಜಾರುಬಂಡೆಯಡಿಯ ಸಂದಿಯ ನೆರಳಲ್ಲಿ ಕುಳಿತಿದ್ದಾರೆ – ಎಲ್ಲಿಂದಲೊ ಕದ್ದಾಯ್ದು ತಂದ ಸೀಬೆ ಹಣ್ಣನ್ನು ಚೀಪುತ್ತ.. ಸ್ಕೂಲು ಮುಗಿದ ಹೊತ್ತಾಗುವ ತನಕ ಅಲ್ಲಿಂದ ಕದಲುವಂತಿಲ್ಲ..ಏಕೆಂದರೆ ಚಕ್ಕರು ಹೊಡೆದಾಗ ಯಾರ ಕೈಗೂ ಸಿಕ್ಕದಂತೆ ಅವಿತಿರಲು ಅದೇ ಸರಿಯಾದ ಜಾಗ…!

ಮತ್ತೆ ದೃಶ್ಯ ಇನ್ನೆಲ್ಲಿಗೊ ವರ್ಗಾವಣೆ… ಈಗ್ಯಾವುದೊ ಬೀದಿಯ ದೃಶ್ಯ. ಅದೇ ಹುಡುಗ, ಆದರೆ ಜತೆಯಲ್ಲಿ ಏಳೆಂಟು ಪಡ್ಡೆ ಹುಡುಗರ ಗುಂಪು. ಎಲ್ಲಾ ಸೇರಿ ಯಾರೊ ಮತ್ತೊಬ್ಬ ಹುಡುಗನನ್ನು ಅಟ್ಟಿಸಿಕೊಂಡು ಓಡುತ್ತಿದ್ದಾರೆ…ಕೊನೆಗವನು ಯಾವುದೊ ಗಲ್ಲಿ ಬಿದ್ದು ತಪ್ಪಿಸಿಕೊಳ್ಳಲು ಹವಣಿಸುತ್ತಿದ್ದಾಗ ಎರಡು ಕಡೆಯಿಂದ ಬಂದು ಅವನನ್ನು ನಡುವಲ್ಲಿ ಹಿಡಿದು ಹಾಕಿಬಿಡುತ್ತಾರೆ.. ಈ ಹುಡುಗನ ಕಣ್ಣಲ್ಲಿ ಗೆದ್ದ ವಿಜಯದ ಅಹಂಭಾವದ ನಗೆ.. ಸಿಕ್ಕಿಬಿದ್ದ ಹುಡುಗನ ಕಣ್ಣಲ್ಲಿ ಭೀತಿ… ಈ ಹುಡುಗ ಅವನ ಕತ್ತಿನ ಪಟ್ಟಿ ಹಿಡಿದು ಕುಕ್ಕರಿಸಿ, ಬೀದಿ ಬದಿಯ ಬೀಗ ಹಾಕಿದ್ದ ಮನೆಯ ಜಗುಲಿಯೊಂದರಲ್ಲಿ ಕೂಡಿಸಿ ತನ್ನ ಜೇಬಿನಿಂದ ಏನನ್ನೊ ಹೊರತೆಗೆಯುತ್ತಾನೆ.. ಅದೊಂದು ಪೆನ್ಸಿಲ್ ಅಳಿಸುವ ರಬ್ಬರಿನ ತುಂಡು.. ಅದನ್ನು ಬ್ಲೇಡಿನಲ್ಲಿ ಕೊರೆದು ಮಧ್ಯದಲ್ಲಿ ಹೆಡ್ಡೆಯೆತ್ತಿದ ಹಾವಿನ ಕೆತ್ತನೆ ಮಾಡಿಟ್ಟಿದೆ… ಜೇಬಿನಿಂದ ಪೆನ್ನೊಂದನ್ನು ತೆಗೆದು ಅದರ ಮೊನೆಯತ್ತ ಹಿಡಿದು ಆ ಹಾವಿನ ಕೆತ್ತಿದ್ದ ಉಬ್ಬಿದ್ದ ಭಾಗವನ್ನು ಉಜ್ಜುತ್ತಾನೆ ಆ ದರ್ಪದ ಹುಡುಗ – ಇಂಕೆಲ್ಲಾ ಅಲ್ಲಿ ಪಸರಿಸಿ ಅಂಟಿಕೊಳ್ಳುವ ಹಾಗೆ.. ಇಂಕಿನಿಂದ ಒದ್ದೆಯಾದದ್ದೆ ತಡ, ಅದನ್ನು ಆ ಹುಡುಗನ ಕೆನ್ನೆ, ಕೈ, ಕಾಲು, ಷರಟಿನ ಮೇಲೆಲ್ಲ ಒತ್ತತೊಡಗುತ್ತಾನೆ – ಹಾವಿನ ಮುದ್ರೆ ಎದ್ದು ಕಾಣುವ ಹಾಗೆ. ಬಿಡಿಸಿಕೊಳ್ಳಲು ಚಡಪಡಿಸುತ್ತಿರುವ ಆ ಹುಡುಗನನ್ನು ಬಿಡದಂತೆ ಗಟ್ಟಿಯಾಗಿ ಹಿಡಿದುಕೊಳ್ಳುತ್ತಾರೆ ಮಿಕ್ಕವರು, ಹಳೆಯ ಬ್ಲಾಕ್ ಅಂಡ್ ವೈಟ್ ಸಿನಿಮಾದಲ್ಲಿ ವಿಲನ್ನುಗಳ ಗುಂಪು ಬಡಪಾಯಿಯೊಬ್ಬನನ್ನು ಹಿಡಿದು ಅಟ್ಟಾಡಿಸುವ ಹಾಗೆ… ‘ಕಿಂಗ್ ಕೋಬ್ರಾ ಬಾಸಿನ ಜತೆ ಜಗಳ ಮಾಡ್ತಿಯೇನೊ? ನೋಡು ಏನು ಮಾಡಿದ್ದಿನಿಂತ..’ ಎಂದೆಲ್ಲಾ ಏನೇನೊ ಒದರಾಡುತ್ತಿದ್ದಂತೆ ಮತ್ತೆ ದೃಶ್ಯ ಬದಲು…

(ಇನ್ನೂ ಇದೆ)
__________

( ಪರಿಭ್ರಮಣ..53ರ ಕೊಂಡಿ – https://nageshamysore.wordpress.com/00262-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-53/ )

ಅವರೋಹಣ, ಆಕ್ರಮಣ, ಅಧಃಪತನ, ಆರೋಹಣ, ಪರಿಭ್ರಮಣ, ನಾಗೇಶ ಮೈಸೂರು, ನಾಗೇಶಮೈಸೂರು, ನಾಗೇಶ, nageshamysore, Nagesha Mysore, nagesha

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s