00026 – ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 01)

00026 – ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 01)

ಆವತ್ತು ಬೀಷಾನ್ ಎಂಆರ್ಟಿಯ ಆಚೆ ಟ್ರೈನಿಂದಿಳಿದು ಹೋಗುತ್ತಿದ್ದ ಹಾಗೆ , ಬಹಳ ದಿನದಿಂದ ಕಾಣದೆ ಮಾಯವಾಗಿದ್ದ ಗುಬ್ಬಣ್ಣ ಕಣ್ಣಿಗೆ ಬಿದ್ದಾಗ ಬಹಳ ಖುಷಿಯಾಗಿದ್ದಂತೆ ಕಂಡ; ಯಾವುದೊ ಭಯಂಕರ ಅರ್ಜೆಂಟಿನಲ್ಲಿ ಇದ್ದವನಂತೆ ಕಾಣುತಿದ್ದ…

“ಏನೊ ಗುಬ್ಬಣ್ಣ..ತುಂಬಾ ದಿನದಿಂದ ಕೈಗೆ ಸಿಕ್ತಾ ಇಲ್ಲಾ…? ಸಿಂಗಾಪುರದಲ್ಲೆ ಇದೀಯಾ, ಇಲ್ಲಾ ವರ್ಡ್ ಟೂರು ಮಾಡ್ತಾ ಇದೀಯಾ?”

” ಹಾಗೇನೂ ಇಲ್ಲಾ ಸಾರ್…ಚೆನ್ನಾಗಿದ್ದೀರಾ ತಾನೆ? ಸ್ವಲ್ಪ ಅರ್ಜೆಂಟಿನಲ್ಲಿದ್ದೀನಿ…ಸಂಜೆಗೆ ಸಿಕ್ತೀನಿ, ಎಲ್ಲಾ ಡೀಟೈಲಾಗಿ ಮಾತಾಡೋಣ…”

” ಕೈಗೆ ಸಿಕ್ಕಿದಾಗ ಮಾತಾಡೊದು ಬಿಟ್ಟು ಸಂಜೆಗೆ ಬೇರೆ ಸಿಕ್ತೀಯಾ? ಇನ್ನು ಆ ಸಂಜೆ ಬರೋದು ಯಾವ ಕಾಲಕ್ಕೊ……! ಬಾ ಹೇಗೂ ಸಿಕ್ಕಿದ್ದೀಯಾ, ಇಲ್ಲೆ ಹಾಕರ ಸೆಂಟರಲ್ಲಿ ‘ಕಾಫಿ-ಓ’ ನೊ ‘ತೇಸಿ’ನೊ ಕುಡಿತಾ ಮಾತಾಡೋಣ…” ಹೆಚ್ಚು ಕಡಿಮೆ ಓಡಿ ಹೋಗದ ಹಾಗೆ ಕೈ ಹಿಡಿದೆ ಹೇಳಿದೆ.

ಅಂದ ಹಾಗೆ ಸಿಂಗಾಪುರದ ಹಾಕರ ಸೆಂಟರು ಬಗ್ಗೆ ಗೊತ್ತಿರದವರಿಗಾಗಿ ‘ಕಠಿನ ಪದಗಳ ಅರ್ಥ’ :- ‘ಕಾಫಿ ಓ’ ಅಂದರೆ ‘ಹಾಲು ಹಾಕದ ಕರಿ ಕಾಫಿ’, ‘ತೇಹ್ಸಿ’ ಅಥವಾ ಸಾಮಾನ್ಯವಾಗಿ ಕರೆವ ‘ತೇಸಿ’ ಅಂದರೆ ಪರಿಮಳಯುಕ್ತ ಹಾಲ್ಹಾಕಿದ, ಸಕ್ಕರೆ ಭರಿತ ಸಿಹಿ ಸುವಾಸನಾ ಚಹಾ…ನಮ್ಮ ಮಸಾಲೆ ಚಹದ ಹತ್ತಿರದ ನೆಂಟ ಅನ್ನಬಹುದು. ತಾಜಾ ಹಾಲು ಬಳಸಿ, ಲೋಟ ಮತ್ತು ಚಹಾ ಪಾತ್ರೆಗೂ ನಡುವೆ ಗೊಟಾಯಿಸುತ್ತಾ, ಪಾತ್ರೆ, ಲೋಟಾ ಹಿಡಿದ ಕೈಗಳ ನಡುವೆ ಎಷ್ಟಗಲ ಸಾಧ್ಯವೊ ಅಷ್ಟಗಲ ಎತ್ತರಕ್ಕೆ ಹೊಸೆದು ಬೆಸೆದ ನೀರಿನ ಹಗ್ಗದಂತೆ ಸುರಿದೆಳೆದು ಬುರುಬುರು ನೊರೆಯೆಬ್ಬಿಸಿ ನಿಮ್ಮ ಮುಂದಿಟ್ಟರೆ ಅದು ‘ತೇ ತಾರೈ’ (ತೇ ಎಂದರೆ ಹಾಲು, ತಾರೈಯೆಂದರೆ ಆ ನೊರೆಯೆಬ್ಬಿಸುವ ಪರಿಕ್ರಮವಂತೆ – ಎರಡು ಮಲೇಶಿಯದ ಮಲೈ ಭಾಷೆಯಿಂದ ಎರವಲು ಪಡೆದ ಪದಗಳು). ಸಿಂಗಾಪುರದಲ್ಲೆನಾದರೂ ಬಂದೂ ಅಲ್ಲಿನ ಪಾನೀಯದಂಗಡಿಯಲ್ಲಿ ದಾರಿ ತಪ್ಪಿ ಕಂಗಾಲಾದಂತೆ ಭಾಸವಾದರೆ ನೀವು ‘ಸೇಫ್’ ಆಗಿ ಕುಡಿಯಬಹುದಾದ ಚಹಾ ಪಾನೀಯ ಇವೆರಡು. ಹಾಕರು ಸೆಂಟರುಗಳಲ್ಲಿ ನಾವು ಕುಡಿಯೊದಿಲ್ಲ, ಮಡಿ, ಮೈಲಿಗೆ, ಮಾಂಸ, ಮಡ್ಡಿ ಎಲ್ಲಾ ಅಲ್ಲೆ ಕಾಣುತ್ತೆ ಅನ್ನೊ ಬೇಜಾರಿದ್ದರೆ, ಬಿಡಿ ಹೇಗೂ ಬೇಕಾದಷ್ಟು ದಕ್ಷಿಣ ಹಾಗೆ ಉತ್ತರ ಭಾರತದ ನಮ್ಮವರ ರೆಸ್ಟೊರೆಂಟುಗಳು ಬೇಕಾದಷ್ಟಿವೆ – ಲಿಟ್ಲ್ ಇಂಡಿಯಾ ಕಡೆ ಬಂದರೆ. ನಾನು ಹೇಳುತ್ತಾ ಇರೊ ‘ಹಾಕರ ಸೆಂಟರು’ ಸಿಂಗಾಪುರದ ಎಲ್ಲಾ ಕಡೆನೂ ಇರುತ್ತೆ. ಒಂದು ತರಹ ನಮ್ಮ ‘ಕಾಕಾ’ ಟೀ ಅಂಗಡಿಗಳ ತರವೆ – ಬಂದು ತೆರೆದಂಗಳದಂತ ಜಾಗದಲ್ಲಿ ಒಂದು ಟೇಬಲ್ಲಿಡಿದು ಪೇಯ, ಪಾನೀಯಾ ಹೀರುತ್ತ ಹರಟೆ ಹೊಡೆಯುತ್ತಲೊ, ಪೇಪರು ಓದುತ್ತಲೊ, ಮೊಬೈಲಿನ ಬಯಲೊಳಗೆ ನುಗ್ಗಿ ಅಂತರ್ಜಾಲದಲ್ಲಿ ಅಂತರ್ಧಾನರಾಗೊ, ಚಾಟ್ ಮಾಡುತ್ತಲೊ, ಟಿವಿ ಸೀರಿಯಲ್ ನೋಡುತ್ತಲೊ ಅಥವಾ ಎಲ್ಲವನ್ನು ಒಟ್ಟಾಗಿ ಸಮಾನಾಂತರವಾಗಿ ಮಾಡುತ್ತಲೊ ಕಾಲ ಕಳೆಯಬಹುದು, ಗಂಟೆಗಟ್ಟಲೆ – ಅದೆ ರೀತಿಯ ಸುತ್ತಲಿನ ಊಟ, ತಿಂಡಿ ಮಾರುವ ಅಂಗಡಿಗಳಿಂದ ಬರುವ ಸುವಾಸನೆ, ನೇತುಹಾಕಿದ ದೃಶ್ಯಗಳಿಗೆ ನಿಮ್ಮ ಅಭ್ಯಂತವಿಲ್ಲವಾದರೆ. ಸ್ವಲ್ಪ ಕಡಿಮೆ ಕೈಗುಟುಕುವ ಬೆಲೆಯಲ್ಲಿಯೆ ಊಟ, ತಿಂಡಿ, ಪಾನೀಯ ಎಲ್ಲವೂ ಸಿಕ್ಕುವುದರಿಂದ ಸದಾ ಜನರಿಂದ ಗಿಜುಗುಟ್ಟುತ್ತಿರುತ್ತದೆ. ಒಂದಷ್ಟಂಗಡಿಯಲ್ಲಿ ಚೀಣಿ ತಿನಿಸು, ಮತ್ತೆ ಕೆಲವು ಮಲೈ ಮತ್ತು ಇಂಡೋನೇಶಿಯನ್, ನಡುವೆ ಜಪಾನಿ, ಕೊರಿಯ, ಪಾಶ್ಚಾತ್ಯ – ಹೀಗೆ ಎಲ್ಲ ತರದ ಪೆಟ್ಟಿಗೆಯಂಗಡಿಗಳ ಜತೆಗೆ ಒಂದೆರಡು ಪೇಯ, ಪಾನಿಯಗಳ ಅಂಗಡಿಯೂ ಇರುತ್ತದೆ. ನಿಮ್ಮ ಅದೃಷ್ಟ ನೆಟ್ಟಗಿದ್ದರೆ – ಸರಿ ಸುಮಾರು ಎಲ್ಲಾ ಕಡೆ ಭಾರತೀಯ ತಿನಿಸು ಎನ್ನುತ್ತ ರೋಟಿ-ಪ್ರಾಟ, ಬಿರಿಯಾನಿ, ಸೆಟ್ ಊಟ ಸಿಗುತ್ತದೆ. ಇನ್ನೂ ಕೆಲವು ಕಡೆ ನಿಶ್ಚಿತ ಹೊತ್ತಲ್ಲಿ ದೋಸೆ ಸಿಗುವ ಸೌಭಾಗ್ಯವೂ ಉಂಟು!

“ಇಲ್ಲಾ ಸಾ….ಇವಾಗ ಬೇಡ..ಬೆಳಿಗ್ಗೆನೆ ಸುಮಾರು ಮೀಟಿಂಗ್ ಬೇರೆ ಅಟೆಂಡ್ ಮಾಡ್ಬೇಕು….ಇವತ್ತು ಬೇರೆ ಕೊನೆ ದಿನ…..”

“ಏನಯ್ಯಾ ಕೊನೆ ದಿನ? ಪ್ರಾಜೆಕ್ಟು ಮುಗಿತಾ ಬಂತಾ?” ಐಟಿ ಫೀಲ್ಡಿನಲ್ಲಿ ಕೆಲಸ ಮಾಡೊ ಗುಬ್ಬಣ್ಣ ತಕ್ಕಡಿಗೆ ಹಾಕಿದ ಕಪ್ಪೆ ತರಹ ಆರಾರು ತಿಂಗಳಿಗೂ ಒಂದು ಪ್ರಾಜೆಕ್ಟಿನಿಂದ ಇನ್ನೊಂದಕ್ಕೆ ಜಂಪು ಮಾಡುತ್ತಲೆ ಇರೋದ್ರಿಂದ ಅವನ ‘ಕೊನೆ ದಿನ’ ಅಂದ್ರೆ ಯಥಾರೀತಿ ಪ್ರಾಜೆಕ್ಟಿನ ಕೊನೆ ದಿನ ಅನ್ಖೊಂಡೆ. ಅದ್ಯಾವುದೊ ‘ಯಸ್ಯೇಪಿ ಕನ್ಸಲ್ಟೆಂಟ್ ಗಿರಿ’ ಮಾಡುತ್ತಲೆ ಹತ್ತಾರು ವರ್ಷದಿಂದ ಸಿಂಗಾಪೂರದಲ್ಲಿ ಪಿ.ಆರ್. ಆಗಿ ಕಾಲ ಹಾಕ್ತಾ ಇರೊ ಮೇಧಾವಿ. ಮೊದಮೊದಲೂ ಯಾವ ಕಂಪನಿಗೂ ಸೇರದೆ ‘ಫ್ರೀ ಲ್ಯಾನ್ಸಿಂಗ್’ ಅನ್ಕೊಂಡು ತುಡುಗು ದನ ಬೀದಿ ಸುತ್ತಿದ ಹಾಗೆ ಇವನು ‘ಪ್ರಾಜೆಕ್ಟು, ಪ್ರಾಜೆಕ್ಟೂ’ ಅಂತ ಸುತ್ತುತ್ತಿದ್ದಾಗ ಅವನ ಧೈರ್ಯ ಕಂಡು ‘ಭಲೆ’ ಅಂದ್ಕೊಂಡರು, ‘ರಿಸ್ಕ್’ ಅಲ್ವಾ? ಅನಿಸಿ ಭಯನೂ ಆಗ್ತಿತ್ತು. ಗುಬ್ಬಣ್ಣ ಮಾತ್ರ ಆರಾಮಾಗೆ ಕೆಲಸ ಮಾಡಿಕೊಂಡಿದಾನೆ. ನಾನಿನ್ನೂ ಬಾಡಿಗೆ ಮನೇಲೆ ಒದ್ದಾಡ್ತಾ ಇದೀನಿ – ರಾಕೆಟ್ ಸ್ಪೀಡಲ್ಲಿ ಏರೊ ಬಾಡಿಗೆಗೆ ಬೈಕೊಂಡೆ. ಅವನು ನಾಲ್ಕು ರೂಮು ಫ್ಲಾಟ್ ಖರೀದಿ ಮಾಡಿ ಆಗಲೆ ಮೂರ್ನಾಲ್ಕು ವರ್ಷವಾಯ್ತು..ಅದೆಲ್ಲ ನೋಡಿದ್ರೆ, ರಿಸ್ಕು ಅವನದ, ಬಾಡಿಗೆ ಮನೆಲಿ ಒದ್ದಾಡ್ತಾ ಇರೊ ನಂದಾ ಅಂತ ಸಂಶಯಾನು ಬರೋದು ಉಂಟು!

“ಪ್ರಾಜೆಕ್ಟು ಏನು ಇಲ್ಲ ಬಿಡಿ ಸಾರ್..ಮಾಮುಲಿ. ಇದು ಹೊಸ ಪ್ರಾಜೆಕ್ಟು, ಹೋದ ತಿಂಗಳು ತಾನೆ ಶುರುವಾಗಿದ್ದು. ನಾನು ಲಾಸ್ಟು ಡೇಟು ಅಂದಿದ್ದು, ನಮ್ಮ ಕನ್ನಡ ಸಂಘದವರು ಸಿಂಗಾಪುರದಲ್ಲಿ ನಡೆಸೊ ಈ ವರ್ಷದ ಸಿಂಗಾರೋತ್ಸವಕ್ಕೆ, ರಿಜಿಸ್ಟ್ರೇಷನ್ನಿಗೆ ಸಾರ್…ಡೇಟು ಎಕ್ಸ್ ಟೆಂಡು ಮಾಡಿದಾರೆ, ಇವತ್ತೆ ಕೊನೆ ದಿನ. ಅದರ ಬಗ್ಗೆನೆ ಬಂದು ಮಾತಾಡ್ತೀನಿ ಸಾಯಂಕಾಲ ಅಂದಿದ್ದು…ಎಲ್ಲಿ ಸಿಕ್ಕೋಣ ಹೇಳಿ ಸಾರ್…”

“ಸರಿ ಸಾಯಂಕಾಲ ಲಿಟಲ್ ಇಂಡಿಯದಲಿ ಊಟ ಮಾಡ್ಕೊಂಡು ಹಾಗೆ ಮಾತಾಡೋಣ ಬಾ – ಕೋಮಲಾಸೊ, ಆನಂದ ಭವನೊ, ಶರವಣ ಭವನ್ನೊ ನಿಂಗ್ಯಾವುದು ಹಿಡಿಸುತ್ತೊ ಅದಕ್ಕೆ ಹೋಗೋಣ….”

“ಇಲ್ಲ ಗುರುವಾರ ಒಪ್ಪತ್ತು ಸಾರ್…ಇವತ್ತು ರೇಸ್ಕೋರ್ಸ್ ರೋಡಿನಲ್ಲಿ ಹೊಸದಾಗಿ ಆಗಿರೊ ಮುರುಗಾ ಇಡ್ಲಿಗೆ ಹೋಗೋಣ. ಜಾಸ್ತಿ ಜನಾನು ಇರಲ್ಲ, ಅಲ್ಲಿ ಇಡ್ಲೀನು ಚ್ರ್ಮೆನ್ನಾಗಿರುತ್ತೆ..”

“ಸರಿಯಪ್ಪ” ಎಂದವನ ಕೈ ಬಿಟ್ಟೆ..ಅವನು ಅಷ್ಟೆ ವೇಗದಲ್ಲಿ ಟ್ರೈನು ಹಿಡಿಯಲು ಒಳಗೆ ನುಗ್ಗಿ ಮಾಯವಾದ. ನಾನು ಅದೇನು ಕನ್ನಡ ಸಂಘದ ಸುದ್ದಿ – ಇಂಟರ್ನೆಟ್ನಲ್ಲಾದ್ರು ನೋಡಬೇಕು ಅಂದ್ಕೊಂಡೆ ಹೊರಟವನು ಆಫೀಸೊಳಗ್ಹೊಕ್ಕಂತೆ ಯಥಾರೀತಿ ಕೆಲಸದ ಗಡಿಬಿಡಿಗೆ ಸಿಕ್ಕಿ ಆ ವಿಷಯ ಮರೆತೆಬಿಟ್ಟೆ. ಸಂಜೆ ಮತ್ತೆ ಗುಬ್ಬಣ್ಣನ ಪೋನ್ ಬಂದಾಗಲೆ ಆ ವಿಷಯ ನೆನಪಾದದ್ದು. ಕೆಲಸದಂಗಡಿ ಮುಚ್ಚಿ ಟ್ರೈನು ಹಿಡಿದು ಲಿಟಲ್ ಇಂಡಿಯಾ ತಲುಪಿದಾಗ ಗುಬ್ಬಣ್ಣ ಆಗಲೆ ಬಂದು ದಾರಿ ಕಾಯುತ್ತಿದ್ದ. ಹೊಟ್ಟೆಯಾಗಲೆ ತಾಳ ಹಾಕುತ್ತಿದುದರಿಂದ ಇಬ್ಬರು ಸರಸರನೆ ಮುರುಗನ್ ತಲುಪಿ ಮೊದಲು ಆರ್ಡರು ಕೊಟ್ಟು ಮಾತಿಗಿಳಿದೆವು.

“ಸಾರ್..ನಿಮ್ಮಿಂದ ಒಂದು ಹೆಲ್ಪ್ ಬೇಕಾಗಿತ್ತು …..”

“ಸಾಧಾರಣ ನಾನವನ ‘ಹೆಲ್ಪ್’ ಕೇಳಿ ಅಭ್ಯಾಸ…ಈ ಸರಿ ಏನೊ ಕುತೂಹಲಕರವಾಗಿದೆಯಲ್ಲಪ್ಪ ಅನಿಸಿ,”ಏನ್ ಗುಬ್ಬಣ್ಣ ಅಂಥಾದ್ದು? ದುಡ್ಗಿಡ್ಡೇನಾದ್ರೂ ಎಮರ್ಜೆನ್ಸಿ ಇತ್ತ?”

“ದುಡ್ಡಿಂದೇನೂ ಅಲ್ಲ ಸಾರ್…ಅದಾದ್ರೆ ನಿಮ್ಮನ್ಯಾಕ್ ಕೇಳ್ಲಿ? ”

ಅದೇನು ನನ್ನ ಹತ್ರ ದುಡ್ಡು ಕೇಳೋಕ್ ಸಂಕೋಚ ಅನ್ನೊ ಭಾವದಲಿ ಹೇಳ್ತಾ ಇದಾನ ಅಥವಾ ‘ನಿಮ್ಮತ್ರ ದುಡ್ಡೆಲ್ಲಿರುತ್ತೆ ಕೊಡೋಕೆ ಬಿಡಿ’ ಅನ್ನೊ ಉಢಾಪೆಲಿ ಹೇಳಿದನೊ ಗೊತ್ತಾಗಲಿಲ್ಲ. ನಿಜ ಹೇಳೊದಾದ್ರೆ ದುಡ್ಡಿಗೆ ನಾನೆ ಅವನ ಹತ್ರ ಹೋಗ್ಬೇಕೆ ವಿನಃ ಅವನು ನನ್ನ ಹತ್ರ ಬರುವ ಅಗತ್ಯವೇನು ಅವನಿಗಿರಲಿಲ್ಲ.

“ದುಡ್ಡಲ್ಲ ಅಂದ್ಮೇಲೆ ಮತ್ತೇನಪ್ಪ ಗುಬ್ಬಣ್ಣ?”

“ಸಾರ್…ನನಗೆ ನೀವರ್ಜೆಂಟಾಗಿ ಒಂದು ಕವನ ಕನ್ನಡದಲ್ಲಿ ಬರೆದುಕೊಡಬೇಕು!”

ನಾನು ಬೆಚ್ಚಿ ಬಿದ್ದೆ! ಗುಬ್ಬಣ್ಣ ಕವನೆ ಕೇಳೊದೂಂದ್ರೇನು, ಅದೂ ಕನ್ನಡದಲ್ಲಿ? ಅದು ಇಮಾಂಸಾಬರಿಗೂ ಗೋಕುಲಾಷ್ಟಮಿಗೂ ಇರುವ ಸಂಬಂಧವೆ ಹೊರತು ಮಾಮರ ಕೋಗಿಲೆಯದಲ್ಲಾ..ಎಲ್ಲೊ ಏನೊ ಎಡವಟ್ಟಾಗಿದೆ ಅನ್ನಿಸ್ತು.ನಾನು ಕುರ್ಚಿಯಿಂದ ಮುಂದೆ ಬಾಗಿ, ಟೇಬಲ್ಲಿನ ಮೇಲೆ ಮೊಣಕೈಯೂರಿ ಗಲ್ಲಕ್ಕಾನಿಸಿ ಅವನನ್ನೆ ದಿಟ್ಟಿಸಿ ನೋಡುತ್ತಾ,”ಗುಬ್ಬಣ್ಣಾ..” ಎಂದೆ

“ಏನು ಸಾರ್…”

“ನಿನಗೂ ಗೊತ್ತು, ನನಗೂ ಗೊತ್ತು..ನಿನಗೂ ಕಥೆ ಕವನಕ್ಕೂ ಎಷ್ಟು ದೂರಾಂತ…”

“ನಿಜಾ ಸಾರ್…”

“ಸುತ್ತೂ ಬಳಸು ವ್ಯವಹಾರ ನನಗೆ ಹಿಡಿಸಲ್ಲಾ ಅಂತಾನೂ ನಿನಗೆ ಗೊತ್ತು….”

“ಗೊತ್ತೂ ಸಾರ್….”

“ಗುಡ್….ಸರಿ, ಪಟಾಪಟ್ ಅಂಥ ಎಲ್ಲಾ ಕಥೆ ಬಿಚ್ಚಿಡು..ಮುಚ್ಚುಮರೆಯಿಲ್ದೆ…..”

” ಹೇಳ್ತೀನಿ ಸಾರ್….ಆದ್ರೆ ನೀವ್ ಮಾತ್ರ ಹೆಲ್ಪ್ ಮಾಡ್ಬೇಕು..ಕೈ ಬಿಡ್ಬಾರದು….”

“ಮೊದಲು ಕಥೆ ಹೇಳು…ಆಮೇಲೆ ಮುಂದಿನದನ್ನು ನೋಡ್ಕೊಳ್ಳೋಣ….”

” ಸಾರ್..ಊರಿಂದೆಲ್ಲಾ ಹತ್ತಿರದ ನೆಂಟ್ರು ಬಂದು ಸಿಂಗಾಪುರದ ಮನೇಲಿ ಟೆಂಟು ಹಾಕ್ಬಿಟ್ಟಿದಾರೆ , ಒಂದು ವಾರದಿಂದ…..”

” ಸರಿ ಬರಲಿ ಬಿಡು, ಇಲ್ಯಾರು ನೆಂಟ್ರುಗಳು ಬಂದು ಕಾಟಾ ಕೊಡ್ತಾರೆ ಈ ದೂರದ ದೇಶದಲ್ಲಿ? ಅಪರೂಪಕ್ಕೆ ಯಾರೋ ನೆಂಟರು ಬಂದಿದಾರೆ ಅಂದ ಮೇಲೆ ಖುಷಿ ಪಡೊ ವಿಚಾರ ತಾನೆ?”

ಗುಬ್ಬಣ್ಣನ ವದನ ಸುಟ್ಟ ಬದನೆಯ ಹಾಗೆ ಇಂಗಿಕೊಂಡು, ಚಾರ್ಲಿ ಚಾಪ್ಲಿನ್ನೂ, ಮಿಸ್ಟರು ಬೀನುಗಳ ಪೆಚ್ಚುಮೊಗದ ಅವತಾರವೆಲ್ಲಾ ಒಂದೆ ಬಾರಿಗೆ ಅವನ ಮುಖ ಕಮಲದಲ್ಲಿ ಪ್ರತ್ಯಕ್ಷವಾಯ್ತು. ಯಾಕೊ ಏನೊ ಎಡವಟ್ಟು ಜಾಸ್ತಿಯೆ ಆಗಿರುವಂತಿದೆಯಲ್ಲ ಅಂದುಕೊಳ್ಳುತ್ತಿರುವಾಗಲೆ ಗುಬ್ಬಣ್ಣ ಬಾಯ್ಬಿಟ್ಟ…

” ಬಂದಿರೊರೆಲ್ಲಾ..ನಮ್ಮ ಮಿಸ್ಸೆಸ್ಸ್ ಕಡೆಯವ್ರೂ ಸಾರ್…ಅವರ ಖರ್ಚಲ್ಲೆ ಬಂದು ಹೋಗೊ ಮಾಮೂಲಿ ನೆಂಟ್ರಲ್ಲಾ..”

“ಅಂದ್ರೆ…?”

” ನಾವು ಸಿಂಗಾಪುರಕ್ಕೆ ಬಂದು ಇಷ್ಟು ವರ್ಷಾ ಆದ್ರೂ ನಮ್ಮನ್ನೆಲ್ಲ ಮನೆಗೆ ಕರೆದೆ ಇಲ್ಲಾ ಅಂತ ಒಂದೆ ವರಾತ…ಹೋದ ಸಾರಿ ರಜೆಗೆ ಊರಿಗೆ ಹೋದಾಗ, ನಮ್ಮವಳು ನನಗೆ ಅವಮಾನವಾಗುತ್ತೆ ಎಲ್ಲಾರ ಮನೆಗೂ ಹೋಗಿ ಸುಮ್ಮನೆ ಕೂತು, ತಿಂದುಂಡು ಬರೋಕೆ…ಪ್ರತಿ ಸಾರಿನೂ ಕೇಳ್ತಾರೆ ನಮ್ಮನ್ನ ನಿಮ್ಮೂರಿಗೆ ಕರೆಯೊಲ್ವ ಅಂಥ. ನನಗಂತೂ ಸಾಕಾಗಿ ಹೋಗಿದೆ, ಮಾತು ಬದಲಾಯಿಸೊ ಉತ್ತರ ಹೇಳಿ, ಹೇಳಿ…”

ಅದೆ ಸಮಯಕ್ಕೆ ವೈಟರು ಇಡ್ಲಿ ವಡೆ ತಂದು ಟೇಬಲ್ ಮೇಲಿಡುತ್ತಿದ್ದ ಕಾರಣ ತಾತ್ಕಾಲಿಕವಾಗಿ ಮಾತು ನಿಲ್ಲಿಸಿದ ಗುಬ್ಬಣ್ಣ. ತಿಂಡಿಗಳನ್ನೆಲ್ಲಾ ನೀಟಾಗಿ ಜೋಡಿಸಿ, ಇಡ್ಲಿಗಿಂತಲೂ ಹೆಚ್ಚು ತರತರದ ಬಗೆಬಗೆಯ ಚಟ್ನಿಗಳನ್ನು ಪ್ಲೇಟಿನ ತುಂಬಾ ಸಾಲಾಗಿ ಅಲಂಕರಿಸಿ ಇಟ್ಟು , “ಕಾಫಿ ಇಪ್ಪಡಿಯಾ.. ಅಪ್ಪರಮಾ…?” ಎಂದು ಕೇಳಿದ.

“ಕಾಫಿ ತನಿಯಾ ಕೊಂಚ ಲೇಟಾಗೆ ಕೊಂಡು ವಾಂಗೊ…ನಾ ತಿರುಪಿ ಸೊಲ್ರೆ….” ಹರಕು ಮುರುಕು ಬಟ್ಲರು ತಮಿಳಿನಲ್ಲಿ ಗುಬ್ಬಣ್ಣ ಉತ್ತರಿಸಿದ.

ನನ್ನ ತಮಿಳು ಭಾಷಾಜ್ಞಾನ ಚೀಣಿ ಭಾಷಾ ಜ್ಞಾನಕ್ಕಿಂತ ಬಹುಶಃ ಒಂದೆರಡು ಮಿಲಿಮೀಟರಿನಷ್ಟು ಹೆಚ್ಚಿರಬಹುದಾದ್ದರಿಂದ, ಅಲ್ಲಿ ಆರ್ಡರು ಮಾಡುವ ಮತ್ತು ಮಾತಾಡುವ ಎಲ್ಲಾ ವ್ಯವಹಾರವನ್ನು ಅವನಿಗೆ ಬಿಟ್ಟುಬಿಟ್ಟಿದ್ದೆ. ಆದರೂ ಆ ಚಟ್ನಿಗಳ ಕುರಿತು ನನಗೊಂದಷ್ಟು ಕೂತೂಹಲವಿದ್ದೆ ಇತ್ತು – ತಿನ್ನಲಿಕ್ಕಲ್ಲ, ಅದ್ಯಾಕಷ್ಟೊಂದು ಬಗೆಯ ಚಟ್ನಿ ಕೊಡುತ್ತಾರೆ ಎಂದು; ಅಥವಾ ಯಾರಿಗೆ ಗೊತ್ತು? ಆ ಚಟ್ನಿಗಳಿಂದಾನೆ ಇಡ್ಲೀನೂ ಹೆಚ್ಚು ಫೇಮಸ್ಸೊ ಏನೊ..! ಗುಬ್ಬಣ್ಣ ಮಾತ್ರ ಆ ಚಟ್ನಿಗಳ ಪರಮ ಭಕ್ತ ಅಂತ ಗೊತ್ತಿತ್ತು. ಬಾಯಿ ಚಪ್ಪರಿಸುತ್ತ, ರುಚಿಯಲ್ಲೆ ಅದು ಆ ಚಟ್ನಿ, ಈ ಚಟ್ನಿ ಅಂತ ಹೇಳ್ತಾ ಅದರಲ್ಲೆ ಬೆರಳದ್ದಿ ಎಂಜಾಯ್ ಮಾಡೊ ಆಸಾಮಿ. ನನಗೆ ಗೊತ್ತಾಗುತ್ತಾ ಇದ್ದುದ್ದು ಎರಡೆ ವಿಧ – ಒಂದೂ ಚಟ್ನಿ(-ಗಳು), ಮತ್ತೊಂದು ಸಾಂಬಾರು(-ಗಳು) ಆ’ಗಳು’ವಿನ ಡೆಫನೇಶನ್ನೇನಾದರೂ ಯಾದರೂ ಕೇಳಿದರೆ ಅಷ್ಟೆ – ನನ್ನ ಜ್ಞಾನಕೋಶದ ಬಂಡವಾಳವೆಲ್ಲ ಈಚೆಗೆ ಬೀಳುತ್ತಿತ್ತು!

ವೈಟರು ಅತ್ತ ಹೋಗುತ್ತಿದ್ದಂತೆ, ” ಅಲ್ಲಯ್ಯ, ಆಕೆ ಹೇಳೋದ್ರಲ್ಲೂ ತಪ್ಪೇನಿದೆ?..ಹೆಂಗ್ಹೆಂಗ್ಸುರ ಮಾತಾಟದಲ್ಲಿ ಇಂಥಾ ಮಾತುಕಥೆ ತುಂಬಾ ಸೀರಿಯಸ್ ಕಣಯ್ಯಾ…ಜನ ಬೇರೆ ಆಡ್ಕೋತಾರಲ್ಲಾ ಅಂತ ಫೀಲಿಂಗು ಇರೋದು ತಪ್ಪೇನು? ಬನ್ನಿ ಅಂತ ನೀನು ಕರೆದು ಬಿಡೊದೆ ತಾನೆ?”

“…ಅಯ್ಯೊ..ವಿಷಯ ಅದಲ್ಲಾ ಸಾರ್…ಬರಿ ಕರೆಯೋದಾದ್ರೆ ಹೋದಾಗೆಲ್ಲಾ ಕರಿಬೋದು…….”

“ಮತ್ತೇನು ಪೀಡೆ..? ಕರೆಯೋದ್ ತಾನೆ?”

“….ಸಾರ್…ನಮ್ಮ ಕಡೆ ಊರಿಗೆ ಕರೆಯೋದು ಅಂದ್ರೆ ಬಸ್ಸು, ಟ್ರೈನು, ಆಟೊ ಚಾರ್ಜು ಕೊಟ್ಟು ಕರೆಸಿಕೊಳ್ಳಿ ಅಂತರ್ಥ….”

ಗುಬ್ಬಣ್ಣನ ಸಂಕಟ ಈಗರ್ಥವಾಯ್ತು. ಸಿಂಗಾಪುರವೇನು ಮೈಸೂರೆ, ಬೆಂಗಳೂರೆ…ಬಸ್ಸು ಚಾರ್ಜು ಕೊಟ್ಟು ಬಂದು ಬಿಡಿ ಅಂತ ಹೇಳಲೂ? ಸಿಂಗಾಪುರಕ್ಕೆ ಫ್ಲೈಟಿನಲ್ಲೆ ಬರಬೇಕು..ಅದರಲ್ಲಿ ಕರೆಸಿಕೊಂಡದ್ದು ಮಾತ್ರವಲ್ಲದೆ ಅವರಿರುವತನಕ ಊಟೋಪಚಾರದ ಜತೆಗೆ ಸ್ಥಳೀಯ ‘ದುಬಾರಿ ಪ್ರೇಕ್ಷಣೀಯ’ ಸ್ಥಳಗಳ ದರ್ಶನ ಮಾಡಿಸಬೇಕು…ಹೋಗಿ ಅವರಾಗಿಯೆ ಮಾಡಿಕೊಂಡಾದರೂ ಬರುತ್ತಾರೆಯೆ? ಜತೆಗೆ ಗೈಡಿನ ಹಾಗೆ ಯಾರಾದರೂ ಇದ್ದೂ ಅವರ ‘ಯೋಗಕ್ಷೇಮ’ ನೋಡಿಕೊಳ್ಳಬೇಕು….ಅದರಂಥ ಪನಿಶ್ಮೆಂಟು ಮತ್ತೊಂದಿರಲಿಕ್ಕೆ ಸಾಧ್ಯವಿಲ್ಲವೇನೊ? ಬಂದವರಿಗೇನೊ ಜಾಗ ಹೊಸದು, ಉತ್ಸಾಹವೂ ಹೊಸದು. ಆದರೆ ಬಂದವರಿಗೆಲ್ಲ ಅದನ್ನೆ, ತೋರಿಸಿದ್ದನ್ನೆ ತೋರಿಸುತ್ತ ಮತ್ತೆ ಮತ್ತೆ ಅದೆ ಜಾಗಕ್ಕೆ ಹೋಗಿ ಬರುವವರ ಕಥೆ ಏನು ಹೇಳುವುದು? ಸಾಲದೆಂಬಂತೆ ಪ್ರತಿ ಸಾರಿಯೂ ಹೋದವರ ಜತೆ ಅವರೂ ಟಿಕೆಟ್ಟು ಕೊಳ್ಳಬೇಕಲ್ಲಾ? ಮೊದಲೆ ಇಲ್ಲಿನ ಟಿಕೆಟ್ಟು ಬೆಲೆಗಳು ಗಗನ ಮುಖಿ (ಇಲ್ಲಿರುವವರು ರೂಪಾಯಿಗಳ ಜತೆಗೂ ಹೋಲಿಸುವಂತಿಲ್ಲಾ ಬೇರೆ, ಇಲ್ಲದಿದ್ರೆ ಗುಬ್ಬಣ್ಣ ಬಿಟ್ಟು ‘ಜುಗ್ಗಣ್ಣ’ ಅನ್ನೋಕೆ ಶುರು ಮಾಡಿ ಬಿಡ್ತಾರೆ..); ಜತೆಗೆ ನೋಡಿದ್ದನ್ನೆ ತಿರ್ತಿರುಗಾ ನೋಡೊ ಪನಿಶ್ಮೆಂಟಿದೆಯಲ್ಲಾ, ಅದು ಯಾವ ಶತ್ರುವಿಗೂ ಬೇಡಾ! ಅದೇನು ಬಂಗಾರದ ಮನುಷ್ಯಾನೆ, ಇಲ್ಲಾ ಶೋಲೆನೆ? ಹತ್ತಾರ್ಸಾರಿಯಾದರು ಕೂತ್ಕೊಂಡು ನೋಡ್ಕೊಂಡು ಬರೋಣಾ ಅನ್ನೋದಿಕ್ಕೆ?

“ಸರಿ..ಸರಿ..ಅರ್ಥವಾಯ್ತು ಬಿಡೊ ಗುಬ್ಬಣ್ಣ..ಖರ್ಚು ವೆಚ್ಚ ಸಮೇತ ದಂಡನ್ನ ಕರೆಸಿಕೊಂಡಿದ್ದೀಯಾ ವಾಲಗ, ಮೆರವಣಿಗೆ ಸಮೇತ….”

“ಅಯ್ಯೊ..ಅವರಮ್ಮ ಅಪ್ಪಾನೊ ಅಜ್ಜಿನೊ ಅದ್ರೆ ಸರಿ ಪರವಾಗಿಲ್ಲಾ ಸಾರ್….ಅವರೆಲ್ಲ ಆಗ್ಲೆ ಎರಡೆರಡು ಸಲ ಬಂದು ಹೋಗ್ಲಿಲ್ವೆ?”

“ಮತ್ತೆ ಈಗಿನ ದಂಡು ಯಾರದು?”

“ಇನ್ಯಾರು ಸಾರ್…ಅವಳ ಸಿಸ್ಟರುಗಳ ಎರಡು ಫ್ಯಾಮಿಲಿ ಮತ್ತೆ ತಮ್ಮಂದಿರ ಎರಡು ಕುಟುಂಬ..ಒಟ್ಟು ಹನ್ನೆರಡು ಜನಾ ತಳಾರವಾಗಿ ಬಂದು ಅಂಡೂರಿಬಿಟ್ಟಿದ್ದಾರೆ ಸಾರ್…”

” ನಾಲ್ಕು ಫ್ಯಾಮಿಲಿ ಅಂದ್ರೆ ಎಂಟಾಗ್ಬೇಕಲ್ಲಯ್ಯ? ಹನ್ನೆರಡೆಲ್ಲಿಂದಾ ಬಂತು?”

“ಸಾರ್…ಫ್ಯಾಮಿಲಿ ಬಂದ್ರೆ ಬರಿ ಗಂಡಾ ಹೆಂಡ್ತೀನಾ ಬರ್ತಾರೆ?..ಜತೆಗೆ ಚಿಳ್ಳೆ, ಪಳ್ಳೆ ಐಕಳೂ ಎಲ್ಲಾ ಸೇರ್ಕೊಳ್ಳುತ್ತಲ್ಲಾ?”

” ಏನೂ? ದೊಡ್ಡ ತಲೆಗಳ ಜತೆಗೆ ಅವುಕ್ಕೆಲ್ಲಾ ನಿಂದೆ ಟಿಕೆಟ್ಟಾ?!” ನಾನು ಬಿಟ್ಟಬಾಯಿಬಿಟ್ಟ ಭಂಗಿಯಲ್ಲೆ ಬಾಯ್ತೆರೆದು ಕೇಳಿದೆ. ನನಗೀಗ ನಿಧಾನವಾಗಿ ಅವನ ಮೇಲೆ ಕನಿಕರವೂ ಹುಟ್ಟತೊಡಗಿತ್ತು…

” ಅಯ್ಯೊ..ಏನ್ಹೇಳ್ಲಿ ಸಾರ್…ಅದಕ್ಕೂ ಇಂಡೆಂಟು ಬಂದಿತ್ತು…ನಾನು, ದೊಡ್ಡವರು ಚಿಕ್ಕವರು ಯಾರಾದ್ರೂ ಸರಿ ಮನೆಗಿಬ್ಬರಿಗೆ ಮಾತ್ರ ಅನುಮತಿ..ಯಾರೆ ಹೆಚ್ಚಿಗೆ ಕರೆತಂದರೂ ಅವರವರ ಸ್ವಂತ ಖರ್ಚಲ್ಲೆ ಅಂತ ನನ್ನ ಹೆಂಡತಿಗೆ ಸ್ಟ್ರಿಕ್ಟು ಆಗಿ ಹೇಳಿಬಿಟ್ಟಿದ್ದೆ ಸಾರ್…ಅವಳೂ ಕೊನೆಗೆ ಪೆಚ್ಚು ಮುಖ ಹಾಕ್ಕೊಂಡು ಕುಯ್ಯೊ..ಮರ್ರೊ ಅನ್ಕೊಂಡೆ ಅರ್ಧ ಅಳ್ತಾನೆ ಅವರಿಗೆಲ್ಲ ಕಂಡೀಷನ್ ಹಾಕುದ್ಲು ಸಾರ್…” ಅಂದಾ ಗುಬ್ಬಣ್ಣ ಅಳು ಮುಖದಲ್ಲೆ.

“ಅಂದ್ಮೇಲೆ ಲೆಕ್ಕ ಎಂಟಾಗ್ಬೇಕಿತ್ತಲ್ಲಯ್ಯಾ, ಹನ್ನೆರಡೆಲ್ಲಿಂದಾ ಬಂತು? ಕೈಯಿಂದಾ ಹಾಕಿ ಒಂದಷ್ಟು ಜನಾನು ಬಂದ್ರಾ?”

“ಕೈಯಿಂದೆಲ್ಲಿ ಹಾಕ್ತಾರೆ ಸಾರ್…ಎಲ್ಲಾ ನನ್ನ ಗ್ರಹಚಾರ…….”

“ಮತ್ತೇನಾಯ್ತಯ್ಯಾ ಕಥೆ?”

“ಹಾಳು ಗೋಳು ಏನ್ಹೇಳೋದು ಬಿಡಿ ಸಾರ್..’ಪಾಪಿ ಸಮುದ್ರ ಹೊಕ್ಕರೂ ಮೊಣಕಾಲುದ್ದ ನೀರು’..ಅನ್ನೊ ಹಾಗೆ ಹಾಳು ಏರ್ಲೈನೋರು ಈ ಟೈಮಲ್ಲೆ ‘ಸೇಲ್ಸ್ ಪ್ರಮೋಶನ್’ ಅಂತ ಇಬ್ಬರು ವಯಸ್ಕರು ಬುಕ್ ಮಾಡಿದ್ರೆ ಒಂದು ಮೂರನೆ ಟಿಕೇಟ್ ಫ್ರೀ ಅಂತ ಏನೊ ಎರಡು ದಿನದ ಸ್ಪೆಶಲ್ ಡೀಲ್ ಇಟ್ಟಿದ್ರಂತೆ…..ನನ್ಹೆಂಡ್ತಿ, ಅವರೂ ಎಲ್ಲಾ ಜತೆ ಸೇರ್ಕೊಂಡು ಆ ಡೀಲಲ್ಲೆ, ಟಿಕೇಟ್ ಬುಕ್ ಮಾಡ್ಕೊಂಡ್ಬಿಟ್ಟಿದಾರೆ ಸಾರ್…”

“ಅದಕ್ಯಾಕಯ್ಯ ಅಳ್ತೀಯಾ? ಹೋಗ್ಲಿ ಬಿಡು, ನಿನ್ ಕೈಯಿಂದ ಕೊಡೊದಾದ್ರೂ ತಪ್ತಲ್ಲಾ?

“ಏನ್ ತಪ್ತೂ ಬಿಡಿ ಸಾರ್….ಟಿಕೆಟ್ಟೊಂದೆನಾ ಅವರ ಖರ್ಚು? ಈಗ ಬಂದವರಿಗೆಲ್ಲಾ, ಉಳಿಯೊ ವ್ಯವಸ್ತೆ, ಊಟಾ ತಿಂಡಿ, ಅವರ ಓಡಾಟದ ಖರ್ಚು..ಇದೆಲ್ಲಾ ನನ್ತಲೆಗೆ ಬರುತ್ತಲ್ಲಾ ಸಾರ್…”

“ಅದು ಸರಿ ಬಿಡು…ಮತ್ತಿವ್ರಿಗೆಲ್ಲಾ ಉಳಿಯೊಕೆಲ್ಲಿ ವ್ಯವಸ್ತೆ ಮಾಡ್ದೆ? ಎಲ್ಲಾರ್ನೂ ಮನೇಲೆ ಪ್ಯಾಕ್ ಮಾಡಿದ್ದಿಯೋ ಏನ್ಕಥೆ?…….”

“ಮನೆಲೆಲ್ಲಿ ಮೊದಲೆ ಕಿಷ್ಕಿಂದಾ…ಇವರ್ನೆಲ್ಲಾ ತುಂಬಿದರೆ ದೊಂಬಿಗೆ ಅಕ್ಕಾಪಕ್ಕದವರೆಲ್ಲಾ ಕಂಪ್ಲೈಂಟ್ ಮಾಡಿ ಬಿಡ್ತಾರಷ್ಟೆ….ಜತೆಗೆ ಮಗಳಿಗೆ ಬೇರೆ ಎಕ್ಸಾಮ್ ಹೊತ್ತು….”

” ಮತ್ತೇನು ವಾರದಿಂದ ಅವರ್ನೆಲ್ಲಾ ಹೋಟ್ಲಲ್ಲಾ ಹಾಕಿದ್ದಿ?” ಎಂದೆ ಗಾಬರಿಯಾಗಿ.

“ಸದ್ಯ..ಅದೂ ಆಗ್ತಾ ಇತ್ತೊ ಏನೊ….ಪುಣ್ಯಕ್ಕೆ ನಮ್ಮ ಹಳೆ ಬಾಡಿಗೆ ಮನೆ ಓನರು ಸಿಕ್ಕಿ, ಮನೆ ಖಾಲಿಯಾಗ್ತಾ ಇದೆ, ಯಾರಾದ್ರೂ ಗೊತ್ತಿರೋರಿದ್ರೆ ಬಾಡಿಗೆಗೆ ಹೇಳಿ ಅಂದ..ಅವನ್ನೆ ಕೈಕಾಲು ಹಿಡ್ದು, ದಮ್ಮಯ್ಯ ಗುಡ್ಡೆ ಹಾಕಿ ಎರಡು ವಾರ ನಮ್ಮ ಟೂರಿಂಗ್ ಟಾಕೀಸಿಗೆ ಜಾಗ ಕೊಡಪ್ಪಾ…ಆಮೇಲೆ ಬಾಡಿಗೆಗೆ ಕೊಡು, ನಾನೆ ಬೇಕಾದ್ರೆ ಸರಿಯಾದವ್ರನ್ನ ಹುಡುಕಿ ಕೊಡ್ತೀನಿ, ಅರ್ಧ ತಿಂಗಳ ಬಾಡಿಗೇನೂ ಕೊಡ್ತೀನಿ ಅಂತ ಗೋಳಾಡಿದ್ದಕ್ಕೆ ನೂರಿಪ್ಪತ್ತೆಂಟು ಕಂಡಿಷನ್ ಹಾಕಿ ಕೊನೆಗೂ ಒಪ್ಪ್ಕೊಂಡ….ಈ ಹಾಳಾದವ್ರು ಅಲ್ಲೇನು ಗದ್ಲ ಎಬ್ಬಿಸ್ತಾರೊ ಗೊತ್ತಿಲ್ಲಾ…”

“ಅಲ್ಲಿಗೆ ಹನ್ನೆರಡು ಜನವೂ ಅಲ್ಲಿದೆ ಅನ್ನು…ಸದ್ಯ ನಿನ್ನ ಮನೆ ಗಬ್ಬೆಬ್ಬಿಸಲ್ಲವಲ್ಲ ಬಿಡು…ಅದು ಹೇಗೂ ಬಾಡಿಗೆ ಮನೆ…ಹೋದ ಮೇಲೆ ಒಂದು ಜನರಲ್ ಕ್ಲೀನ್ ಮಾಡಿಸಿಬಿಡು ಸರ್ವೀಸ್ ಏಜೆನ್ಸಿಯವರನ್ನ ಕರೆದು….”

“ಇನ್ನೂ ಒಂದೂ ವಾರ ಏಗಾಡ್ಬೇಕು ಸಾರ್..ಈಗ್ಲೆ ಅರ್ಧ ಹೆಣ ಎತ್ತೊಗಿದೆ…ಈಗಾಗ್ಲೆ ಅರ್ಧ ಸಿಂಗಾಪುರೆಲ್ಲಾ ಸುತ್ತಿಸಿ ಆಯ್ತು….ಈಗಾಗ್ಲೆ..ಸುಮಾರು ಸಾವಿರಗಟ್ಲೆ ಡಾಲರು ಆಗ್ಲೆ ಕೈ ಬಿಟ್ಟಿದೆ….ಸಾಲ್ದೂಂತಾ, ‘ನಿಮ್ಗೇನೂ ಸಿಂಗಾಪುರದಲ್ಲಿದ್ದೀರಾ ಬಿಡಿ ಮಹಾರಾಜ ಮಹಾರಾಣಿಯಂಗೆ’ ಅಂತ ಹೇಳ್ತ ಮುಖ ಮೂತಿ ನೋಡ್ದೆ ಖರ್ಚು ಮಾಡಿಸ್ತಾ ಇದಾರೆ ಸಾರು…ಅವರೂರಿಗ್ಹೋದಾಗ ಅವರು ಹಂಗೆ ಖರ್ಚು ಮಾಡುದ್ರು, ನಾವಿಲ್ಲೂ ಹಂಗೆ ಮಾಡೋಕಾಗುತ್ತಾ ಸಾರ್….? ಒಂದೊಂದು ಡಾಲರು ಒಂದು ರೂಪಾಯಿದ್ದಂಗಲ್ವ ನಿಮ್ಗೆ ಅಂತ ಎಳಿತಾನೆ ಇರ್ತಾರೆ ಸಾರ್…ನಮಗೆ ಅದು ನಲ್ವತ್ತೈದು ರೂಪಾಯಿಯಂಗೆ ಕಾಣೋದು ಅಂತ ಹೇಳೋಂಗೂ ಇಲ್ಲಾ, ಬಿಡೊಂಗೂ ಇಲ್ಲ…” ಹೆಚ್ಚು ಕಡಿಮೆ ಗುಬ್ಬಣ್ಣ ಅಳುವುದೊಂದೆ ಬಾಕೀ…..ಪಾಪ! ಬಾಳ ದೊಡ್ಡ ಹೊಡೆತವನ್ನೆ ತಿಂದಿರಬೇಕೂ ಅಂತ ಅನ್ಕೊಂಡೆ…

” ಹೋಗ್ಲಿ ಅಳ್ಬೇಡಾ ಬಿಡೊ ಗುಬ್ಬಣ್ಣ….ಇನ್ನೊಂದು ವಾರಾ ತಾನೆ, ಆಗೋಗುತ್ತೆ…ಹೀಗ್ ಬಂದು ಹಾಗ್ ಹೋಗ್ಬಿಡುತ್ತೆ…”

“ಎಲ್ಲಿಗ್ಹೋಗುತ್ತೆ ಪೀಡೆ ಬಿಡಿ ಸಾರ್…ಈಗ್ಲೆ ಬರ್ಬಾದ್ ಆಗ್ಹೋಗಿದ್ದೀನಿ…ಅದು ಸಾಲದು ಅಂತ…ಈಗವರೆಲ್ಲಾ ಯುನಿವರ್ಸಲ್ ಸ್ಟೂಡಿಯೊ ನೋಡ್ಬೇಕಂತೆ….ಅಲ್ಲಿ ಗೊತ್ತೆ ಇದೆಯಲ್ಲಾ? ಒಬ್ಬೊಬ್ಬರ ಟಿಕೆಟ್ಟೆ ಹತ್ತತ್ರ ನೂರು ಡಾಲರಾಗುತ್ತೆ…ಇನ್ನು ಮೇಲಿನ ಖರ್ಚು ಎಲ್ಲಾ ಸೇರಿದ್ರೆ ಇನ್ನೊಂದೆರಡು ಸಾವಿರ ಕೈಬಿಡೊ ಲೆಕ್ಕಾ ಕಾಣ್ತಾ ಇದೆ ಸಾರ್…” ಎಂದ ಅಳು ಮೋರೆಯಲ್ಲಿ.

ಹೀಗೆ ಮಾತಿನ ಭರದಲ್ಲಿ ತಟ್ಟೆಯಲ್ಲಿದ್ದ ಇಡ್ಲಿ ಯಾವಾಗಲೊ ಮಾಯಾವಾಗಿ, ಚಟ್ನಿಯು ಖಾಲಿಯಾಗಿ ಇಬ್ಬರೂ ಖಾಲಿ ತಟ್ಟೆ ಕೆರೆಯುತ್ತಿದ್ದೆವು. ಗುಬ್ಬಣ್ಣ ಜೋರಾಗಿ ವೈಟರನನ್ನು ಕರೆದು, “ಎನ್ನಂಗೊ…ಕಾಫಿ ಕೊಂಡು ವಾಂಗೊ…” ಎಂದ. ನನಗೂ ಈಗ ಬಿಸಿ ಬಿಸಿ ಕಾಫಿ ಬೇಕಾಗಿತ್ತು..

“ಅದು ಸರಿ ಗುಬ್ಬಣ್ಣ…ಇದೆಲ್ಲಾ ಕಥೆಗೂ ನನ್ನ ಲೇಖನಾ, ಕವಿತೆಗೂ ಏನಪ್ಪಾ ಸಂಬಂಧ?….ಬೈ ಚಾನ್ಸು..ಎರಡು ವಿಷಯಾನೂ ಕನೆಕ್ಟೆಡ್ಡ ಅಥವಾ ಬೇರೆ ವಿಷಯಾನಾ?”

“ಕನೆಕ್ಟೆಡ್ಡಾ….? ಸಾರ್…ಅದಿಲ್ಲಾಂದಿದ್ದಿದ್ರೆ ನನಗಿಲ್ಲಿ ಬರೋಕು ಪುರುಸತ್ತಾಗದಷ್ಟು ಕೆಲಸ….”

“ಗುಬ್ಬಣ್ಣ…ಒಗಟು ಸಾಕು…ಅದೇನು ಕನೆಕ್ಷನ್ನೊ, ಲಿಂಕೊ ಸರಿಯಾಗಿ ಅರ್ಥವಾಗೊ ಹಾಗೆ ಹೇಳಿಬಿಡು….ನನಗಿನ್ನೂ ಇದಕ್ಕೂ ನನ್ನ ಕವಿತೆಗೂ ಏನು ಸಂಬಂಧ ಅಂತ ಗೊತ್ತಾಗ್ತಾ ಇಲ್ಲಾ…”

” ಎಲ್ಲಾ ಮಿಸ್ಟರೀನೂ ಶಾರ್ಟಾಗಿ ಹೇಳಿಬಿಡ್ತೀನಿ ಕೇಳ್ಬಿಡಿ ಸಾರ್….”

“ಹೇಳಪ್ಪಾ ಸದ್ಯಾ…..ಕೊನೆಗೂ ವಿಷಯಕ್ಕೆ ಬರ್ತಾ ಇದ್ದಿಯಲ್ಲಾ…….!”

” ಹೋದ್ವಾರ ಸಿಂಗಾಪುರ ಕನ್ನಡ ಸಂಘದ ಮೈಯಿಲ್ ಬಂತು ಸಾರ್…ಈ ಶನಿವಾರ ‘ಸಿಂಗಾರೋತ್ಸವ-2013′ ಆಚರಣೆ ಇದೆ ಅಂತ….”

“ಸರಿ….ಇದು ವರ್ಷ್ವರ್ಷಾನೂ ಮಾಡ್ತಾರಲ್ಲಾ ಅದೆ ಪ್ರೋಗ್ರಾಮ್ ಅಲ್ವಾ…?”

“ಹೌದು ಸಾರ್..ಅದೆ “ಸಿಂಗನ್ನಡಿಗರಿಂದ ಸಿಂಗನ್ನಡಿಗರಿಗೆ” ಅಂತ ನಡೆಸ್ತಾ ಇರೊ ಏಕೈಕ ವಾರ್ಷಿಕ ಕಾರ್ಯಕ್ರಮ…ತುಂಬಾ ಚೆನ್ನಾಗಿ ನಡಿತಾ ಇದೆ…”

“ಆಹಾ..ಅದಕ್ಕೆ?”

“ಸಾರ್…ಈ ಸಾರಿ ನನ್ನ ಅದೃಷ್ಟಕ್ಕೆ, ಕನ್ನಡ ಸಂಘದವರೂ ಒಂದು ಸರ್ಪ್ರೈಜ್ ಅನೌನ್ಸ್ ಮಾಡಿದಾರೆ….ವಾಲಂಟಿಯರಾಗಿ ಬಂದವರಿಗೆ, ಮತ್ತೆ ಪ್ರೋಗ್ರಾಮ್ನಲ್ಲಿ ಭಾಗವಹಿಸಿದವರಿಗೆ ಡಿಸ್ಕೌಂಟಲ್ಲಿ ಯುನಿವೆರ್ಸಲ್ ಸ್ಟೂಡಿಯೊ ಟಿಕ್ಕೇಟ್ ಕೊಡ್ತಾರಂತೆ ಸಾರ್…ಒಬ್ಬೊಬ್ಬರಿಗೆ ನಾಲ್ಕು ಟಿಕೆಟ್ಟಿನ ಹಾಗೆ…”

“ಒಹ್! ಐಸೀ….”

” ಇವತ್ತೆ ಆನ್ಲೈನ್ ರಿಜಿಸ್ಟ್ರೇಶನ್ಗೆ ಕೊನೆ ದಿನ, ವಾಲೆಂಟಿಯರಾಗಿ (ಸ್ವಯಂ ಸೇವಕರಾಗಿ) ಅಥವಾ ಪಾರ್ಟಿಸಿಪೆಂಟಾಗಿ (ಪ್ರತಿಭಾ ಪ್ರದರ್ಶಕನಾಗಿ)….ಬರೋ ಭಾನುವಾರದ ದಿನಮಾತ್ರ ವ್ಯಾಲಿಡಿಟಿ ಇರುವ ಟಿಕೆಟ್ಟನ್ನ ಇಪ್ಪತ್ತೈದು ಡಾಲರಿಗೆ ಕೊಡ್ತಾರಂತೆ ಸಾರ್..”

ಈಗ ಕೊಳವೆಯ ತುದಿಯಲಿ ಬೆಳಕು ಕಂಡಂತೆ ತುಸುತುಸು ಅರ್ಥವಾಗತೊಡಗಿತು…ಆದರೂ ಮಂಪರಿನ್ನು ಕರಗಿರಲ್ಲಿಲ್ಲ. ಒಟ್ಟಾರೆ ಅರ್ಥವಾಗಿದ್ದೆಂದರೆ ಗುಬ್ಬಣ್ಣನಿಗೆ ನಾಲ್ಕು ಟಿಕೆಟ್ಟುಗಳಾದರೂ ಹೆಚ್ಚು ಕಡಿಮೆ ಎಪ್ಪತ್ತು ಪರ್ಸೆಂಟು ಡಿಸ್ಕೌಂಟಿನಲ್ಲಿ ಸಿಗಲಿದೆ ಎಂಬುದು.

“ಸರಿ ಇನ್ಯಾರನ್ನಾದರೂ ಜತೆ ಹಿಡಿದು ಸೇರಿಸಿಕೊಳ್ಳೊದಲ್ವಾ…ಉಳಿದ ಟಿಕೆಟ್ಟೂ ಕಮ್ಮಿಲೆ ಸಿಕ್ಕುತಲ್ಲಾ…?”

“ಹೌದು ಸಾರ್…ಹಾಗೇನಾದ್ರೂ ಎಲ್ಲಾ ಟಿಕೆಟ್ಟು ಹೀಗೆ ಸಿಕ್ಕಿಬಿಟ್ರೆ, ದೊಡ್ಡ ಶೇವಿಂಗ್ನಿಂದ ಬಚಾವಾಗಿಬಿಡ್ತೀನಿ…ಎಲ್ಲ ಇಪ್ಪತ್ತು-ಇಪ್ಪತ್ತೈದು ಡಾಲರಲ್ಲೆ ಮುಗಿದು ಹೋಗುತ್ತೆ. ಇಲ್ಲಾಂದ್ರೆ ಒಬ್ಬೊಬ್ಬರಿಗೂ ಎಪ್ಪತ್ತೈದು ಬೋಳಿಸಿಕೊಬೇಕು…”

“ಸರಿ ಮತ್ತೆ ಚಿಂತೆ ಬಿಡಲ್ಲ…ನೀನು ಮೊದಲೆ ಪ್ರಚಂಡ…ಯಾರ್ನಾದ್ರೂ ಹುಡುಕಿ ಸೇರಿಸಿಬಿಟ್ಟಿರ್ತಿಯ ಲಿಸ್ಟಲ್ಲಿ”

“ಹೌದು ಸಾರ್..ಹೆಸರೆನೋ ಕೊಟ್ಟುಬಿಟ್ಟಿದ್ದಿನಿ..ಅವರನ್ನು ಇನ್ನು ಬರಿ ಒಪ್ಪಿಸಬೇಕು , ಅಷ್ಟೆ….” ಎಂದು ರಾಗ ಎಳೆದ. ನನಗೇನೊ ಕೊಂಚ ಅನುಮಾನದ ವಾಸನೆ ಬಂದಂತಾಯ್ತು.

“ಏಯ್ ಗುಬ್ಬಣ್ಣ, ನನ್ನ ಹೆಸರೇನಾದರೂ ಕೊಟ್ಬಿಟ್ಟಿದಿಯೊ ಹೇಗೆ? ಮೊದಲೆ ನನಗೆ ತಲೆ ಕೆರ್ಕೊಳಕು ಪುರುಸೊತ್ತಿಲ್ಲ..ಹಂಗೆಲ್ಲಾ ಮಾಡೀಯ..ಜೋಪಾನಾ..” ಎಂದೆ ತುಸು ಮುನ್ನೆಚ್ಚರಿಕೆ ದನಿಯಲ್ಲಿ.

ಒಂದು ಗಳಿಗೆ ಗುಬ್ಬಣ್ಣ ಮಾತಾಡಲಿಲ್ಲ. ಆಗ ತಾನೆ ತಂದಿಟ್ಟ ಕಾಫಿಗೆ ಕೈಹಚ್ಚಿ, ಮೊಬೈಲಿನಲ್ಲೇನೊ ಹುಡುಕತೊಡಗಿದ. ನನಗೇನೊ ಆ ಮೌನವೆಂದರೆ ಡೆಂಜರ ಸಿಗ್ನಲ್ ಅಂತಲೆ ಲೆಕ್ಕಾ…ಆಗ ಒಮ್ಮೆಲೆ ಗುಬ್ಬಣ್ಣ ” ಸಾರ್…ಆಗಲ್ಲ ಅಂತ ಹೇಳ್ಬೇಡೀ…ಈ ಟೈಮಲ್ಲಿ ಕೈ ಬಿಡಬೇಡಿ….ನಿಮ್ಮನ ಕೇಳ್ದೇನೆ, ನಿಮ್ಮ ಹೆಸರನ್ನ ಕವನ ವಾಚನದ ಗುಂಪಿಗೆ ರಿಜಿಸ್ಟರು ಮಾಡಿಸಿಬಿಟ್ಟಿದ್ದೇನೆ ….’ಸೋಲೋ’ ಈವೆಂಟಲ್ಲಿ..” ಅಂತ ಬಾಂಬು ಹಾಕಿದ!

ನನಗೆ ಒಂದು ಗಳಿಗೆ ಮಾತೆ ಹೊರಡಲಿಲ್ಲ…..”ಅಲ್ಲಾ..ಗುಬ್ಬಣ್ಣಾ……….”

“ಸಾರ್…ಬೇರೆ ಏನೂ ಹೇಳ್ಬೇಡಿ…..ನೀವು ಸುಮ್ನೆ ‘ಹೂಂ’ ಅನ್ನಿ..ನಿಮ್ಮನ್ನ, ನಿಮ್ಮ ಫ್ಯಾಮಿಲಿನ ಮತ್ತೊಂದು ದಿನಾ ನಾನೆ ಯುನಿವರ್ಸಲ್ಲಿಗೆ ಕರ್ಕೊಂಡು ಹೋಗ್ತಿನಿ…ರಿಸಾರ್ಟ್ ವರ್ಡ್ ಸೆಂಟೋಸ ಜತೆನೆ ನಮ್ಮ ನೆಕ್ಸ್ಟ್ ಪಾಜೆಕ್ಟು ಅಂತಾ ನಮ್ಮ ಬಾಸು ಆಗ್ಲೆ ಹೇಳಿಬಿಟ್ಟಿದ್ದಾರೆ….”

” ಗುಬ್ಬಣ್ಣಾ…” ಅಂದೆ ಕೊಂಚ ಸಿರಿಯಸ್ಸಾದ ದನಿಯಲ್ಲಿ…

” ಸಾರ್…ಇದೊಂದು ಸಾರಿ ಇಲ್ಲಾನ್ಬೇಡಿ…ದೊಡ್ಡ ಏಟಿನಿಂದ ಪಾರಾಗಿಬಿಡ್ತೀನಿ…ಅದೂ ಅಲ್ಲದೆ, ನೀವು ಅಷ್ಟೊಂದು ಚೆನ್ನಾಗಿ ಬರಿತಿರಾ, ಅದ್ರೂ ಎಲ್ಲೂ ಪಬ್ಲಿಸಿಟಿನೆ ಕೊಡಲ್ಲಾ…ಇಂಥಾ ಕಡೆಯೆಲ್ಲ ಓದ್ಬೇಕು ಸಾರ್…ಆಗ್ಲೆ ನಾಕಾರು ಜನ ಕೇಳಿ ‘ಭೇಷ್’ ಅನ್ನೋದು, ಜನಗಳಿಗೆ ನೀವು ಬರೀತೀರಾಂತ ಗೊತ್ತಾಗೋದು…ಬರಿ ಬರ್ದು ಬರ್ದು ಫ್ರೆಂಡ್ಸಿಗೆ ಕಳ್ಸಿದ್ರೆ ಏನಾಗುತ್ತೆ ಸಾರ್…?ಅವರಿಗೆ ಓದೊ ಪನಿಶ್ಮೆಂಟೂ ಅಷ್ಟೆ!”

ಈಗ ಮೂಲಕ್ಕೆ ಕೈ ಹಾಕಿ ಒಂದೆ ‘ಸಾರಿ ಇಲ್ಲಾ, ಬಿಲ್ಕುಲ್ ಆಗೋದಿಲ್ಲಾ’ ಅನ್ನಬೇಕು ಅನ್ಕೋತಾ ಇದ್ದವನಿಗೂ ಚಿಕ್ಕ ಮಕ್ಕಳಿಗೆ ಚಾಕಲೇಟು ಅಮಿಷದ ಆಸೆ ತೋರಿ ಪುಸಲಾಯಿಸುವ ಹಾಗೆ ‘ಪಬ್ಲಿಸಿಟಿ’ಯ ಏಳೆ ಹಿಡಿದು ಕೊಂಚ ಆಲೋಚಿಸುವಂತೆ ಮಾಡಿದ…

“ಸಾರ್..ನಾನು ಇನ್ಯಾರ್ನಾದರೂ ಕೇಳಿ ಸೇರಿಸ್ಕೋಬೋದಿತ್ತು…ಆದರೆ ಇದು ಕನ್ನಡ ಸಂಘದ ವ್ಯವಹಾರ…ಕನ್ನಡದವರೆ ಆಗ್ಬೇಕು…ಅಲ್ಲದೆ, ನೀವಾಗಿ ನೀವೆ ಇಂಥಾ ಕಡೆಯೆಲ್ಲಾ ಹೋಗಿ ನಿಮ್ಮ ಶಂಖ, ಜಾಗಟೆ ನೀವೆ ಬಾರ್ಸೋದಿಲ್ಲ…ಅದಕ್ಕೆ ನೀವು ಬೇಡಾ ಅನ್ನೋಕು ಚಾನ್ಸು ಇರದ ಹಾಗೆ, ಇವತ್ತು ಕಡೆ ದಿನಾನೆ ನಿಮ್ಹೆಸರೂ ಸೇರಿಸಿಬಿಟ್ಟೆ…..ದಯವಿಟ್ಟು, ಆಗಲ್ಲಾ ಅಂತಾ ಮಾತ್ರ ಹೇಳ್ಬೇಡಿ ಸಾರ್…”

ಅವನ ನೆಂಟರ ಕಥೆಯ ಗೋಳನ್ನೆಲ್ಲಾ ಬೇರೆ ಮೊದಲೆ ಹೇಳಿ ಅನುಕಂಪ ಗಿಟ್ಟಿಸಿದ್ದ…ಜತೆಗೆ ಸಾವಿರಾರು ಡಾಲರು ವ್ಯವಹಾರ, ಪಾಪ ಸಹಾಯ ಮಾಡೋಣ ಅನಿಸಿತು. ಅಲ್ಲದೆ, ಅವನು ಹೇಳಿದ ಹಾಗೆ ನನ್ನ ಗಮನ ಬರೆಯೋದರ ಕಡೆ ಹೆಚ್ಚೆ ಹೊರತು ಅದನ್ನ ಮಾರೋದರ ಕಡೆ ಅಲ್ಲ..ಈ ಮುಖಾಂತರ ಪ್ರತಿಕ್ರಿಯೆ ಹೇಗಿದೆ ಅಂತ ನೋಡುವುದೂ ಸಾಧ್ಯವಾಗುತ್ತೆ, ಒಂದೂ ಕೈ ನೋಡೆಬಿಡೋಣ ಅನಿಸಿತು…

“ಸರಿ ಗುಬ್ಬಣ್ಣ….ಹಾಳಾಗ್ಹೋಗಲಿ…ಇದೊಂದು ಸಾರಿ ನಿನಗೋಸ್ಕರ ಅಂತ ಒಪ್ಕೋತಾ ಇದೀನಿ…ಮತ್ತೊಂದ್ಸಾರಿ ನನ್ನ ಕೇಳ್ದೆ ಇಂತಹ ಕೆಲ್ಸಕ್ಕೆಲ್ಲಾ ಕೈ ಹಾಕ್ಬೇಡ ” ಅಂದೆ.

ಅಷ್ಟರಲ್ಲೆ ಬಿಲ್ಲು ಕೂಡಾ ಬಂದಿತ್ತು..ತೆಗೆದುಕೊಳ್ಳಲು ಹೋದವನನ್ನು ಬಿಡದೆ ತಾನೆ ಎತ್ತಿಕೊಂಡ ಗುಬ್ಬಣ್ಣ..”ಅಯ್ಯೊ ಬಿಡಿ ಸಾರ್, ಇದೇನು ದೊಡ್ಡದು ಅಂತ ತೊಗೋತೀರಿ…ನಾನೆ ಕೊಡ್ತೀನಿ” ಬಂದ ನೆಂಟರ ಉಪಚಾರಕ್ಕೆ ಆಗಿರುವ ಖರ್ಚಿನ ಮುಂದೆ ಈ ಖರ್ಚು ತುಂಬಾ ಜುಜುಬಿ ಅನಿಸಿರಬೇಕು ಅಂದುಕೊಂಡು ನಾನು ಸುಮ್ಮನಾದೆ.

ಸರಿ ಇನ್ನೇನು ಹೊರಡುವ ಸಿದ್ದತೆಯಲ್ಲಿ, “ಆಯ್ತು ಗುಬ್ಬಣ್ಣ, ಆ ಟಿಕೆಟ್ಟೆಲ್ಲಾ ತೊಗೋಳಕ್ಕೆ ಅದೇನು ವ್ಯವಸ್ಥೆ ಬೇಕೊ ನೀನೆ ಮಾಡ್ಕೊ..ಅದ್ರಲ್ಲೆಲ್ಲಾ ಓಡಾಡೋಕೆ ನನ್ನ ಎಳೀಬೇಡಾ….ನನ್ನ ಟೈಮು ಸ್ಲಾಟ್ ಯಾವಾಗ ಅಂತ ಮೊದಲೆ ಹೇಳ್ಬಿಡು.. ನಾನು ಆವತ್ತಿನ ದಿನ ಒಂದುಗಂಟೆ ಮುಂಚೇನೆ ಬಂದು ನನ್ನ ಕೆಲಸ ಮುಗಿಸಿ ಜಾಗ ಖಾಲಿ ಮಾಡ್ತೀನಿ…” ಎಂದೆ

“ಸಾರ್…ಮೊದಲೆ ಟೈಮ್ ಹೇಳೋಕಾಗಲ್ಲಾ .. ಬಹುಶಃ ನೀವು ಶುರುನಿಂದ ಕೊನೆಯನಕ ಇರಬೇಕಾಗುತ್ತೆ…”

“ಯಾಕಪ್ಪಾ ದೊರೆ ? ”

“ಸಾರ್…ಪ್ರೋಗ್ರಾಮ್ ಯಾವ ಕ್ರಮದಲ್ಲಿ ನಡೆಯುತ್ತೆ ಅಂತ ಪ್ರೋಗ್ರಾಮಿಗೆ ಒಂದು ಗಂಟೆ ಮುಂಚೆ ಮಾತ್ರ ಅನೌನ್ಸ್ ಮಾಡ್ತಾರೆ ಸರ್…”

” ಆಗ್ಲಿ ಬಿಡು…ನೀನು ಅದನ್ನ ತಿಳ್ಕೊಂಡೆ ಪೋನ್ ಮಾಡೂ, ಹೇಗೂ ನೀನು ವಾಲಂಟಿಯರಲ್ವಾ…”

“ವಿಷಯ ಅದಲ್ಲಾ ಸಾರ್…ನೀವು ಪೂರ್ತಿ ಆರೇಳು ಗಂಟೆ ಇರಲೇಬೇಕು…”

“ಯಾಕೆ?”

“ನೀವು ವಾಲಂಟಿಯರಾಗಿ ಲಿಸ್ಟಿನಲ್ಲಿದ್ದಿರಲ್ಲ ಸಾರ್…”

“ನಾನು ಕವಿತೆ ಓದೋನು ಅಂದ್ರೆ ಪಾರ್ಟಿಸಿಪೆಂಟು ಅಲ್ವೇನಯ್ಯ, ವಾಲಂಟಿಯರು ಹೇಗಾಗುತ್ತೆ?” , ಹೆಚ್ಚು ಕಮ್ಮಿ ರೇಗುವ ದನಿಯಲ್ಲೆ ಕೇಳಿದೆ.

“ಸಾರ್…ಕೋಪ ಮಾಡ್ಕೋಬೇಡಿ … ನಿಮ್ಮ ಹೆಸರು ವಾಲೇಂಟಿಯರಾಗೂ ಕೊಟ್ಟುಬಿಟ್ಟಿದ್ದೀನಿ…..”

“ಏನಂದೆ?” ಹೆಚ್ಚುಕಮ್ಮಿ ಸೀಟಿನಿಂದ ಎಗರಿಬಿದ್ದವನಂತೆ ಗಾಬರಿಯಿಂದ ಎದ್ದು ನಿಂತವನು, ಸುತ್ತಲಿನವರೆಲ್ಲ ನನ್ನೆ ನೋಡುತ್ತಿರುವುದರ ಅರಿವಾಗಿ ಮತ್ತೆ ಸುಮ್ಮನೆ ಕುಳಿತೆ.

“ಸಾರ್..ಸ್ವಲ್ಪ ನಿಧಾನ…ಕುತ್ಕೊಳ್ಳಿ ಮೊದಲು…”

” ಅಲ್ಲಯ್ಯ …ಇದೇನಾ ನೀನ್ ನನ್ನ ಜೊತೆ ಮಾತಾಡ್ಬೇಕೂಂತಾ ಹೇಳ್ತಾ ಇದ್ದುದ್ದು? ಇನ್ನೂ ಎನೇನು ಏಮಾರಿಸಿದ್ದಿಯಾ ಒಟ್ಟಾಗಿ ಹೇಳ್ಬಿಡು..ಒಂದೇ ಸಾರಿ ಕೇಳ್ಬಿಟ್ಟೂ ಒಂದು ಲೋಟಾ ಹಾಲು ಕುಡಿದುಬಿಡ್ತೀನಿ..ಅದರ ಬಿಲ್ಲು ನೀನೆ ಕೊಟ್ಟುಬಿಡುವೆಯಂತೆ….”

“ಸಾರ್…ಬರಿ ಕೋಪದ ಮಾತಾಡಿದ್ರೆ ಹೇಗೆ? ನನಗೂ ಒಂದು ಚಾನ್ಸ್ ಕೊಡಿ ಏನಾಯ್ತು ಅಂತ ಹೇಳೋಕೆ…..”

“ಆಗೋದ್ ಏನು ನಿನ್ನ ತಲೆ? ನಿನಗಿನ್ನೂ ನಾಲಕ್ಕು ಟಿಕೆಟ್ಟು ಬೇಕು ಅದಕ್ಕೆ ನನ್ನ ವಾಲೆಂಟಿಯರಾಗೂ ಸಿಕ್ಕಿಸಿದ್ದೀಯಾ …”

“ಸಾರ್..ವಿಷಯ ಅದಲ್ಲಾ…ಕನ್ನಡ ಸಂಘದಿಂದ ಪ್ರತಿ ಸರಿ ಬರೀತಾ ಇದ್ದೋರು ಇಂಡಿಯಾಗೆ ವಾಪಸು ಹೊರಟು ಹೋದರಂತೆ..ಅರ್ಜೆಂಟಿಗೆ ಯಾರಾದ್ರೂ ಸಿಕ್ತಾರ ಅಂತ ಹುಡುಕ್ತಾ ಇದ್ರೂ…ತಕ್ಷಣ ನಿಮ್ಮ ನೆನಪಾಯ್ತು ಸಾರ್..ನೀವು ಹೇಗೂ ಬರಿತಿರ್ತಿರಲ್ಲಾ..ಇಲ್ಲಿ ಬರೆದರೆ ಎಲ್ಲರಿಗೂ ಗೊತ್ತಾಗುತ್ತೆ ಅಂತ, ನಿಮಗು ಒಂದುಸ್ವಲ್ಪ ಎಕ್ಸ್ಪೋಶರು ಸಿಗುತ್ತೆ ಅಂಥ ನಾನೆ ಹೆಸರು ಹಾಕಿಸಿಬಿಟ್ಟೆ. ರಿಪೋರ್ಟು ಸುಮಾರು ಪೇಪರುಗಳಲ್ಲಿ ಬರುತ್ತೆ, ಅಲ್ಲೆಲ್ಲಾ ಬರೆದವರ ಹೆಸರು ಹೋಗುತ್ತಲ್ಲ ಅನ್ಕೊಂಡೆ ಅಷ್ಟೆ ಬೇರೆ ಯಾವ ದುರುದ್ದೇಶನೂ ಇಲ್ಲ..ಬೇಕಿದ್ರೆ ಈ ವಾಲಂಟಿಯರು ಟಿಕೆಟ್ಟನ್ನ ನೀವೆ ಇಟ್ಟುಕೊಳ್ಳಿ, ನನಗೆ ಕೊಡಬೇಡಿ…” ಅಂದ.

ಅವನ ದನಿಯಲ್ಲಿದ್ದ ನಿಜಾಯತಿ ಗಮನಿಸಿ ಟಿಕೆಟ್ಟಿಗಾಗೆ ಮಾಡಿದ್ದರೂ, ಜತೆಗೆ ಅವನು ಹೇಳಿದ್ದ ಕಾರಣವೂ ಇರಬಹುದೆನಿಸಿತು. ಏನಿಲ್ಲದಿದ್ದರೂ ಸ್ವಾಮಿ ಕಾರ್ಯ, ಸ್ವಕಾರ್ಯ ಎರಡೂ ಆದೀತೆಂದು ಮಾಡಿದ್ದರೂ ಮಾಡಿರಬಹುದೆಂದುಕೊಂಡು ಸುಮ್ಮನಾದೆ. ಈಗೆಲ್ಲಾ ಆದ ಮೇಲೆ ಮಾಡುವುದಾದರೂ ಏನು? ನೀರಿಗಿಳಿದ ಮೇಲೆ ಮಳೆಯೇನು ಚಳಿಯೇನು ಎಂಬ ಲೆಕ್ಕ ತಾನೆ?

ಒಟ್ಟಿನಲ್ಲಿ ಗುಬ್ಬಣ್ಣನಿಗೆ ಬೇಕಾದ ಅಷ್ಟೂ ಟಿಕೆಟ್ಟು ಸಸ್ತಾದಲ್ಲೆ ಸಿಕ್ಕಿದಂತಾದರೂ, ಮಧ್ಯೆ ಬಡಪಾಯಿ ನಾನು ಅಬ್ಬೇಪಾರಿಯ ಹಾಗೆ ಗಾಳಕ್ಕೆ ಸಿಕ್ಕಿಬಿದ್ದನೇನೊ ಅನಿಸಿ ಕಸಿವಿಸಿಯಾಯ್ತು. ಜತೆಗೆ ಇದು ಒಂದು ಅವಕಾಶವೆ ಅಂದುಕೊಂಡರೆ ಎಲ್ಲಾ ಸುಗಮವಾದೀತೆಂದು ಮನಸಿನಲ್ಲೆ ಮಂಡಿಗೆ ತಿನ್ನುತ್ತ ಗುಬ್ಬಣ್ಣನಿಗೆ ಬೈ..ಬೈ ಹೇಳಿ ಮನೆಯತ್ತ ನಡೆದೆ. ಹೋಗುತ್ತಾ, ಹಿಂದೆ ತಿರುಗಿ ನೋಡುತ್ತಾ, “ಗುಬ್ಬಣ್ಣ , ಎಲ್ಲಾರ್ನೂ ಊರಿಗೆ ಕಳಿಸಿ ಆದಮೇಲೆ ನೆಂಟರ ಪೂರ್ತಿ ಕಥೆಯನ್ನ ವಿವರವಾಗಿ ಹೇಳೊ…” ಎಂದು ಹೇಳಿ ಮುಂದೆ ನಡೆದೆ.

(ಪೂರ್ವಾರ್ಧ ಮುಕ್ತಾಯ – ಉತ್ತರಾರ್ಧ ಇನ್ನು ಬಾಕಿ ಇದೆ, ದಯವಿಟ್ಟು ನಿರೀಕ್ಷಿಸಿ!)
===================================================================================
– ನಾಗೇಶ ಮೈಸೂರು, ಸಿಂಗಾಪುರದಿಂದ
===================================================================================

4 thoughts on “00026 – ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 01)”

ನಿಮ್ಮ ಟಿಪ್ಪಣಿ ಬರೆಯಿರಿ