00281. ನಾಡದೇವಿಗೊಂದು ನಮನ

00281. ನಾಡದೇವಿಗೊಂದು ನಮನ
________________________

ಮತ್ತೆ ನಾಡಹಬ್ಬ ‘ಕನ್ನಡ ರಾಜ್ಯೋತ್ಸವ’ ಕಾಲಿಕ್ಕುತಿದೆ. ಇಡೀ ವರ್ಷ ಧೂಳು ಹಿಡಿಯುತ್ತಿದ್ದ ಕನ್ನಡ ಬಾವುಟಗಳೆಲ್ಲ ಕೊಡವಿಕೊಂಡೆದ್ದು ನಿಂತು, ಸಿಂಗರಿಸಿಕೊಂಡು ಮೆರೆದಾಡುವ ಕಾಲ. ರಸ್ತೆ, ಗಲ್ಲಿ, ಸರ್ಕಲ್ಲುಗಳ ಕಂಬಗಳಿಗೂ ಸಿಂಗರಿಸಿಕೊಂಡು ನಲಿಸಾಡುವ ಸುಸಮಯ. ರಾಜ್ಯ ಸರಕಾರವೂ ಸೇರಿದಂತೆ, ಆಡಳಿತದ ಚುಕ್ಕಾಣಿ ಹಿಡಿದ ಸೂತ್ರಧಾರರು ಭಾಷಣಗಳ ಜತೆಗೆ ನಾಡು-ನುಡಿಯ ಏಳಿಗೆ, ಪ್ರಗತಿಗೆ ನಿಜಾಯತಿಯಿಂದ, ಪ್ರಾಮಾಣಿಕತೆಯಿಂದ ಏನನ್ನಾದರೂ ಮಾಡಬಹುದಾದ ಅವಕಾಶ. ಕನ್ನಡ ರಾಜ್ಯೋತ್ಸವವನ್ನಾಚರಿಸುವ ಸಂಘ ಸಂಸ್ಥೆಗಳಿಗೆ ಸಾರ್ವಜನಿಕ ಕಾರ್ಯಕ್ರಮಗಳನ್ನೇರ್ಪಡಿಸಿ ಸಾಂಸ್ಕೃತಿಕವಾಗಿ ಆಚರಿಸುವ ಮೂಲಕ ಒಂದಷ್ಟು ಕಲಾವಿದರಿಗೆ ಅವಕಾಶ ನೀಡುವ ಸಾಧ್ಯತೆ. ಅದೆ ಹೊತ್ತಿನಲ್ಲೆ ನಾಡು ನುಡಿಯ ಏಳಿಗೆಗೆ ದುಡಿದವರನ್ನು ಗುರುತಿಸಿ, ಸನ್ಮಾನಿಸಿ ಶಾಲು ಹೊದಿಸಿ ಹಾರ ಹಾಕುವ ಸಂಧರ್ಭ ಸಹ. ಪ್ರತಿ ಬಾರಿಯು ಕನ್ನಡ ರಾಜ್ಯೋತ್ಸವದ ಆಚರಣೆ ಮಾಡುವ ಸಿಂಗಪುರದ ಕನ್ನಡ ಸಂಘ ಈ ಬಾರಿಯೂ ‘ನಾಡೋತ್ಸವ’ ಕಾರ್ಯಕ್ರಮವನ್ನೇರ್ಪಡಿಸಿದೆ. ಈ ಬಾರಿಯ ವಿಶೇಷವೆಂದರೆ ನವೆಂಬರ ಒಂದರಂದೆ ಈ ಕಾರ್ಯಕ್ರಮ ನಡೆಯುತ್ತಿರುವುದು – ಬಹುಶಃ ಈ ಬಾರಿಯ ಒಂದನೆ ದಿನಾಂಕ ಶನಿವಾರವಾದ ಕಾರಣ. ಹಿಂದೆ ತುಸು ದಿನಗಳ ತರುವಾಯ ಯಾವುದಾದರು ವಾರದ ಕೊನೆಯಲ್ಲಿ ನಡೆಯುತ್ತಿತ್ತು. ಹೀಗಾಗಿ, ಈ ಬಾರಿ ನವೆಂಬರ ಒಂದರಂದೆ ಸಿಂಗಪುರದಲ್ಲು ಕನ್ನಡ ಸುಧೆ ತನ್ನ ಪರಿಮಳ ಬೀರಲಿದೆ.

ಇದರ ನಡುವೆ ಧೂಳು ಹಿಡಿದಂತಿದ್ದ ಕನ್ನಡ ಮನಗಳು ಧೂಳೊದರಿ, ಜಡತೆ ಬಿಟ್ಟೆದ್ದು, ‘ಜಯ ಭಾರತ ಜನನೀಯ ತನುಜಾತೆ, ಜೋಗದ ಸಿರಿ ಬೆಳಕಿನಲ್ಲಿ..’ ಎಂದು ಹಾಡುವ ಕಾಲ – ಕನಿಷ್ಠ ರಾಜ್ಯೋತ್ಸವದ ತಿಂಗಳ ಮಟ್ಟಿಗಾದರು. ವರ್ಷಪೂರ ಜಡಸ್ಥಿತಿಯಲ್ಲಿರುವಂತೆ ಮಲಗಿರುವ ಮನಸುಗಳಿಗೆ ನವೆಂಬರ ಒಂದು ಎಂದ ತಕ್ಷಣವೆ , ಯಾರೊ ಬಡಿದೆಚ್ಚರಿಸಿದಂತಾಗಿ ಅಷ್ಟಿಷ್ಟು ಚಾಲನೆ ಕಾಣಿಸಿಕೊಳ್ಳುವುದೆ ಒಂದು ಪುಣ್ಯವೆನ್ನಬೇಕು. ಈ ಆಚರಣೆಯ ನೆಪ, ನೆನಪು ಇರದಿದ್ದರೆ ಆ ಕನ್ನಡ ಪ್ರೇಮ ಸ್ಪುಟವಾಗಿ ಪ್ರಕಟವಾಗಲಿಕ್ಕೆ ಸೂಕ್ತ ಹಾದಿ ಸಿಗದೆ ಒಳಗೆ ಮಣಿದು, ಮುರುಟಿಹೋಗುತ್ತಿತ್ತೊ ಏನೊ? ಸದ್ಯ ನವೆಂಬರ ಒಂದರ ನಾಡಹಬ್ಬದ ಆಚರಣೆ ಹಾಗೆ ನಿಷ್ಕ್ರಿಯವಾಗಲಿಕ್ಕೆ, ಧೂಳು ಹಿಡಿದು ಕೂರಲಿಕ್ಕೆ ಬಿಡುವುದಿಲ್ಲ.

ಆ ಒಂದು ಧೂಳು ಕೊಡವಿಕೊಂಡೆದ್ದ ಕಾಲದ, ಅರೆಗಳಿಗೆಯ ಚೇತನಶೀಲ ಕ್ಷಣವೊಂದರಲ್ಲಿ ಹುಟ್ಟಿದ ನಮನಭಾವ ನಾಡದೇವಿ, ಕನ್ನಡಾಂಬೆ, ಭುವನೇಶ್ವರಿಯ ಮೇಲಿನದೊಂದು ಗೀತೆಯಾಗಿ ಹೊರಹೊಮ್ಮಿದ ರೀತಿ ಈ ಕೆಳಗಿದೆ. ಈ ‘ನಾಡದೇವಿಗೊಂದು ನಮನ’ದ ಮೂಲಕ ಸಮಸ್ತ ಸಂಪದರಿಗೆ ಮತ್ತು ಕನ್ನಡ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಹಾರಿಸುತ್ತ ಈ ಕವನವನ್ನು ಆ ತಾಯಿಗೆ ಅರ್ಪಿಸುತ್ತಿದ್ದೇನೆ, ವಿನಮ್ರ ಭಾವದಲ್ಲಿ.

ನಾಡದೇವಿಗೊಂದು ನಮನ
_________________

ಉತ್ಸಾಹದ ಸತ್ಸಾಹಸ
ಉದಾರತೆಯ ಅತಿರಸ
ಬಾಂಧವ್ಯದಲೆ ಸಮರಸ
ಕನ್ನಡ ತಾಯಿಗೆಲ್ಲಿ ವಿರಸ ||

ಸಲಹಲೆಲ್ಲ ಸಕಲರೊಂದೆ
ಮಡಿಲಲೆತ್ತಿ ಆಡಿಸುತೊಂದೆ
ಭಾವದಲಿ ತಾವಿತ್ತು ತನದೆ
ತನಗಿರದಿದ್ದರು ತೋರಗೊಡದೆ ||

ಅಪ್ಪಿದವರೆಲ್ಲರಿಗು ಅಪ್ಪುಗೆ
ಕೇಳಲಿ ಬಿಡಲಿ ಇರಲೊಪ್ಪಿಗೆ
ತನಗಿರುವುದನೆ ಹಂಚುತಲೆ
ತಾನು ತನ್ನೊಟ್ಟಿಗೆ ಬಾಳೆನ್ನಲೆ ||

ಆಡಲಿ ಬಿಡಲಿ ನುಡಿಗಟ್ಟು
ಪೀಡಿಸದಿರುವ ಒಳಗುಟ್ಟು
ನಿನ್ನ ಪಾಡಿಗೆ ನೀನಿರೆ ಸ್ವಸ್ಥ
ಯಾರನಾಗಬಿಡಳು ಅಸ್ವಸ್ಥ ||

ಅಂಥ ಮಾತೆ ಅವಳ ನುಡಿ
ಭಾರತಾಂಬೆಗವಳೆ ಕನ್ನಡಿ
ಅದನರಿತು ಗೌರವಿಸೆ ಸರ್ವ
ನಾಡು ನುಡಿಯೇಳಿಗೆಗೆ ಪರ್ವ ||

————————————————————————————
ನಾಗೇಶ ಮೈಸೂರು, ಸಿಂಗಪುರ
————————————————————————————-

ನಾಡದೇವಿಗೊಂದು-ನಮನ, ನಾಡದೇವಿ, ನಮನ, ಕನ್ನಡ, ರಾಜ್ಯೋತ್ಸವ, ಕನ್ನಡ-ರಾಜ್ಯೋತ್ಸವ, ನಾಡಹಬ್ಬ, ನಾಗೇಶ, ಮೈಸೂರು, ನಾಗೇಶಮೈಸೂರು, nagesha, mysore, nageshamysore (Sampada)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s