00283. ಮುಂಜಾವಿನೊಂದು ಚಳಿ ಹೆಕ್ಕುತಾ ಮನಸಾ..

00283. ಮುಂಜಾವಿನೊಂದು ಚಳಿ ಹೆಕ್ಕುತಾ ಮನಸಾ..
__________________________________

ನಡುಗಿಸುವ ಚಳಿಯಲೆದ್ದು, ಸಿಕ್ಕಿದ್ದೇನನ್ನೊ ಹೊದ್ದು ಹಚ್ಚಿದ ಒಲೆಯತ್ತಲೊ, ಬೆಂಕಿಯ ಗೂಡತ್ತಲೊ ಓಡಿ ಚಳಿ ಕಾಯಿಸುತ್ತ ಕೂರುವ ಅನುಭವವೆ ವಿಶಿಷ್ಠವಾದದ್ದು. ಮೈಯ ಹೊರಗಿನ ಪದರವನ್ನೆ ಸೂಜಿ ಹಾಕಿದಂತೆ ಕೊರೆದು ಒಳಗೆ ನುಗ್ಗಿ ಪ್ರಸ್ಥಾನವಾಗಲ್ಹವಣಿಸುತ್ತಿರುವ ಚಳಿಯ ಆಟಾಟೋಪಕ್ಕೆ ಬೇಲಿ ಹಾಕಲು, ನೀರು ಕಾಸುವ ಒಲೆಯೊಂದರ ಮುಂದೆ ನೆಪಕ್ಕೆ ಕಟ್ಟಿಗೆ ತುಂಡುಗಳನ್ನು ತೀಡುತ್ತ ಕೂರುವ ಅನುಭೂತಿ ಇನ್ನೂ ಅನನ್ಯ. ಭುಗಿಲೆದ್ದ ಉರಿ ಕೆಂಡವಾಗಿ ತನ್ನ ಒಡಲೊಳಗಿನಿಂದ ಕಾರಿಕೊಂಡ ಕೋಪದ ಉರಿಯೆಂದು ಬಾಯ್ಬಿಟ್ಟು ಹೇಳಲಾಗದಿದ್ದರು, ಗಾಳಿಯಲ್ಲಿನ ಶಾಖದಲೆಯಾಗಿ ಪಸರಿಸಿಕೊಂಡು ಬಂದು ಜುಮುಗುಟ್ಟಿ ಮರಗಟ್ಟಿದಂತಾಗುತ್ತಿರುವ ತೊಗಲನಪ್ಪಳಿಸುತಿದ್ದಂತೆ, ಮತ್ತೊಂದು ‘ಬೆಂಕಿಯ ಶಾಖದ ಸೂಜಿ’ ಒಳಗೆ ಚುಚ್ಚಿದ ಹಿತವಾದ ಅನುಭವ. ಒಂದೆಡೆ ಚುಚ್ಚುವ ಚಳಿಯ ಸೂಜಿಯನ್ನು ಮತ್ತೊಂದೆಡೆ ಅಪ್ಪಳಿಸುವ ಶಾಖದ ಸೂಜಿ ನಿಷ್ಕ್ರಿಯವಾಗಿಸುತ್ತ ನಡೆದಾಗ ಕೊನೆಗೆ ಯಾರು ಗೆಲ್ಲುವರೆಂಬುದನ್ನು ಕಾಯುತ್ತ, ನೋಡುತ್ತ, ಮೈ ಮರೆತೆಲ್ಲೊ ಜಾರಿ ಹೋಗುತ್ತ ನೆನಪಿನ ಓಣಿ ಹಿಡಿಯುವುದೆ ಒಂದು ಅವರ್ಣನೀಯ ಮನೋಹರ ದಿವ್ಯಾನುಭೂತಿ. ನಡುವಲೊಮ್ಮೊಮ್ಮೆ ಶಾಖವೆ ಗೆದ್ದಿತೇನೊ, ‘ಸೂಜಿಚಳಿ’ಯನಧಿಗಮಿಸಿತೇನೊ ಎನಿಸಿ ಮೇಲೇಳಹೊರಟರೆ, ಎರಡು ಹೆಜ್ಜೆಯಿನ್ನು ಇಡಲಿಕ್ಕಿಲ್ಲ ಆಗಲೇ ತಟ್ಟನೆ ಬಂದಾವರಿಸಿಕೊಂಡು ಚುಚ್ಚುವ ಚಳಿಸೂಜಿ, ಆ ಗೆಲುವೆಷ್ಟು ಕ್ಷಣಿಕವೆಂದರಿವಾಗಿಸಿ ಮತ್ತೆ ಬೆಂಕಿಯ ಶಾಖದತ್ತ, ಕೆಂಡದ ಕೋಪದತ್ತ ದೂಡುತ್ತದೆ – ಶಾಖದ ಸೂಜಿಗೆ ಮತ್ತೆ ಮೈಯೊಡ್ಡಿಕೊಳ್ಳುವ ಅನಿವಾರ್ಯದತ್ತ ದೂಡುತ್ತ.

ಈ ಕಣ್ಣುಮುಚ್ಚಾಲೆಯಾಟದಲ್ಲಿ ಸೂರ್ಯ ಪೂರ್ತಿ ಮೇಲೆದ್ದು ಪ್ರಖರ ಬಿಸಿಲಾಗುವ ತನಕ, ಮೆಲುಮೆಲುವಾಗಿ ತೆರೆದುಕೊಳ್ಳುವ ತನುಮನದ ಆಯಾಮಗಳು ಮೌನದಲೌಕಿಕತೆಯ ರಥವೇರಿ, ದಿವ್ಯಾನುಭೂತಿಯ ಲಹರಿಯಲ್ಲಿ ವಿಹರಿಸುತ್ತ, ಭಾವಲೋಕದ ಕಲ್ಪನೆಯ ಆಯಾಮಗಳನ್ನೆಲ್ಲ ಹತ್ತಿಳಿದು ಬಂದು, ಕೊನೆಗೆ ಅನಿವಾಯವಾಗಿ ಬಂದೆರಗುವ ಬಿಸಿಲ್ಬೆಳಕಿನ ವಾಸ್ತವದಲ್ಲಿ ಲೌಕಿಕಕ್ಕೆ ಮರಳುವ ಪ್ರಕ್ರಿಯೆಯೆ ಸೋಜಿಗವೆನ್ನಬೇಕು – ಪರಿಸರ ಮತ್ತದರ ಸಂಗಾತಿಗಳು ತನುಮನದ ಒಳಹೊರಗನ್ಹೊಕ್ಕು ಉಂಟಾಗಿಸುವ, ಪ್ರಕ್ಷೇಪಿಸುವ ಲೌಕಿಕಾಲೌಕಿಕ ಆಯಾಮಗಳನ್ನು ಪರಿಗಣಿಸಿದರೆ. ಬಹುಶಃ ಈ ಬದಲಾಗುವ ಆಯಾಮಗಳಲ್ಲೆ ಅಡಗಿರಬಹುದು ಅದರ ಸೊಗಡು, ಅಂದ-ಚೆಂದವೆಲ್ಲ. ಅದು ಬದಲಾಗದ ಒಂದೆ ಆಯಾಮವಾಗಿದ್ದಿದ್ದರೆ ಬಹುಶಃ ಆ ಸೊಗಡು ಇರುತ್ತಿರಲಿಲ್ಲವೇನೊ? ಜತೆಗೆ ಆ ಸಂಕ್ಷಿಪ್ತದಲ್ಲಿ ಕಾಡುವ ಕ್ಷಣಿಕತೆಯೆ ಮುಂಜಾವಿನ ಚಳಿಯನ್ನು ಮಹತ್ತರ ಅನುಭೂತಿಯಾಗಿಸುವ ಅಮೂಲ್ಯ ಸರಕಾಗಿಸುತ್ತದೆಯೆನ್ನಬಹುದು. ಅದಕೆಂದೆ ಏನೊ ಮುಂಜಾವಿನ ಚಳಿಯೆನ್ನುತ್ತಿದ್ದಂತೆ ಮನದಲ್ಲುದಿಸುವ ಆಹ್ಲಾದಕರ, ರಾಗರಹಿತ, ಸ್ವಚ್ಛಂದ ಭಾವನೆಗಳು ತಂತಾನೆ ನೆನಪಿನ ಕೋಟೆಗೆ ಲಗ್ಗೆ ಹಾಕಿ ಮೆಲುಕು ಹಾಕಲು ತೊಡಗಿಸಿಕೊಳ್ಳುವುದು. ಆ ದಿವ್ಯಾನುಭೂತಿಯ ಗಳಿಗೆಗಳಿಗೆ ಬೆಲೆ ಕಟ್ಟಲೂ ಆಗದಿರುವಂತೆ, ಶಾಶ್ವತವಾಗಿ ಹಿಡಿದಿಡಲೂ ಆಗದು. ಬಹುಶಃ ಅದಕ್ಕೆಂದೆ ಏನೊ ಅವು ನೆನಪಿನ ಹಿತಾನುಭವದ ಮೂಸೆಯಲ್ಲಿ ಅಮೂಲ್ಯವಾದ ಅನುಭೂತಿಗಳಾಗಿ ಉಳಿದುಕೊಂಡು ನಿರಂತರವಾಗಿ ಕಾಡುವುದು – ವರ್ಷಾಂತರಗಳ ನಂತರದಲ್ಲೂ!

ಆ ನೆನಪಿನ ಮೂಸೆಯಿಂದೆದ್ದ ಲಹರಿಗೆ ಕೊಟ್ಟ ಕವನಗಳೆರಡರ ರೂಪ ಈ ಕೆಳಗೆ – 🙂

01. ಮುಂಜಾವಿನೊಂದು ಚಳಿ,
02. ಚುಚ್ಚುವ ಸೂಜಿಗ’ಲ್ಲು’ (ಳು)

ಮುಂಜಾವಿನೊಂದು ಚಳಿ
_______________________

ಚುಮುಗುಟ್ಟಿಸಿ ಕುಳುಗುಟ್ಟಿಸುವ
ಆ ಮುಂಜಾವಿನ ಜಳಿಯಲಿ
ನೆನಪಿದೆಯೆ ಒಲೆ ಮುಂದೆ ಕೂತು
ಚಳಿ ಕಾಯಿಸಿಕೊಂಡ ಹೊತ್ತು? ||

ಮುದುರಿ ಕುಳಿತ ಮುಹೂರ್ತ
ಕೈ ತಬ್ಬಿ ಮಂಡಿಗಾನಿಸಿ ಗಲ್ಲ
ಹಲ್ಲು ಕಟಕಟಿಸಿ ಶಾಖಕೊಡ್ಡಿ
ಒಲೆಗಪ್ಪೆ ಸನಿಹಕೆಂತ ಮೋಡಿ ! ||

ಕಣ್ಣು ದಿಟ್ಟಿಸಿ ನೋಡಿದ ಮೌನ
ಯಾನ ಬೆಂಕಿಗೊ ಅದರಾಚೆಗೊ ?
ನಡುಗುತಲೆ ತಬ್ಬಿದ ಕಂಬಳಿ ಬಿಸಿ
ಸಂವಹನ ಸಂದೇಶ ಯಾರನರಸಿ ? ||

ಅಲ್ಲೆಲ್ಲೊ ಆಚೆ ಮುಸುಕಿದ ಮಬ್ಬು
ಮರೆಯಾಗಿಸಿ ಬೆಳಕ ಮೋಡ ಚಿತ್ತ
ಚಿತ್ತು ಚಿತ್ತಾಗಿಸುತ ನೆಲಕೆಲ್ಲ ಬಿತ್ತು
ಬೆಳೆಯುತಿದೆ ಹನಿ ಸದ್ದ ಸಾಲವಿತ್ತು ||

ಆ ಸ್ತಬ್ದ ಗಳಿಗೆಯ ಸತ್ಯದ ಮಹತಿ
ಝೆಂಕರಿಸಿ ನೀರವತೆ ಪ್ರಣತಿಯಂತೆ
ಕಟ್ಟಿಗೆ ಸುಟ್ಟೆ ಬೆಚ್ಚಗಿನ ಬೆಳಕ ಹೆಪ್ಪು
ಅಚ್ಚರಿ ಸುಡದೆ ಬೆಚ್ಚಗಿರಿಸಿ ಸಿಹಿನೆನಪು ||

————————————————————————————
ನಾಗೇಶ ಮೈಸೂರು, ೩೧. ಅಕ್ಟೋಬರ . ೨೦೧೪, ಸಿಂಗಪುರ
————————————————————————————-

ಚುಚ್ಚುವ ಸೂಜಿಗ’ಲ್ಲು’ (ಳು)
______________________

ಇರುಳಿನ್ನು ರಾಜ್ಯವಾಳುವ ಹೊತ್ತು
ಚಳಿಗಾಲದ ಮಹಾ ಸಂಸತ್ತು
ಬೆಳಕಿನ್ನು ಹರಿಯದ ಒಗಟು
ನಡುಕವೆ ಬಿಡಿಸಲಾಗದ ಸಗಟು ||

ನಡುಗುವ ಚಳಿಯ ಸೂಜಿ ಚುಚ್ಚಿಕ್ಕಿ
ಸೂಜಿಮದ್ದಿಡೆ ಒಳಗೆಲ್ಲ ಹೊಕ್ಕಿ
ಮರಗಟ್ಟಿದ ಹೊರಗು ಒಳಗಾಗಿ
ಶೀತಲ ನುಂಗಿತೆ ತನುವೆ ಶಿಲೆಯಾಗಿ ||

ತಡೆಯಲಾಗದ ಚಳಿ ಸೂಜಿಯ ಗೆಲ್ಲೆ
ಹುಡುಕಿದೋಟ ಬೆಂಕಿ ಬಗಲಲ್ಲೆ
ಸಿಕ್ಕೆ ಪೇರಿಸಿಟ್ಟ ಕಟ್ಟಿಗೆ ಅಗ್ನಿಯಲೆ
ಕೆಂಡವಾಗುತ ಕೆಂಪಗೆ ಬೂದಿಯ ಚೆಲ್ಲೆ ||

ಕೆಂಡವೇನಲ್ಲ ಪರಮ ಮುಟ್ಟಬಿಡ ಖದೀಮ
ಮುಟ್ಟಬಿಡದಂತೆ ಬೂದಿಯ್ಹೊದ್ದ ಚರ್ಮ
ಮುಟ್ಟಬಂದರೆ ನೀಡೆ ಶಾಖದಲೆ ಸೂಜಿ
ಕಾರುತಲಿರುವ ಗುಟ್ಟಲಿ ಬಿಸಿ ಬೂದಿಗೆ ಮರ್ಜಿ ||

ಚಳಿ ಋಣಾತ್ಮಕ ಹೆಜ್ಜೆ ಕೆಂಡ ಧನಾತ್ಮಕ ಸಜ್ಜೆ
ಚಳಿ ಸೂಜಿಗೆ ಸಿಕ್ಕಾಗದಿರೆ ನಜ್ಜುಗುಜ್ಜೆ
ಬಿಸಿ ಕೆಂಡದ ಸೂಜಿ ಪರಿವಾರ ಸೇರೆ
ಸರಿ ದೂರದಿಂದಲೆ ಸಮತೋಲಿಸುತ ಚಹರೆ ||

ಬಿಡಲೊಲ್ಲ ಚಳಿಗಾರ ಬರಲೊಲ್ಲದ ಶಾಖಚರ
ತಂತಮ್ಮ ಕಾಯಕದೆ ಸೂಜಿಯಾಕಾರ
ಸೂಜಿಮದ್ದಿನ ತೆರದೆ ಹೊಂದಿಸೆ ದೂರ
ಸಹಜೀವನದಲೆರಡು ಜತೆ ಸುಗಮ ಸಂಸಾರ ||

————————————————————————————
ನಾಗೇಶ ಮೈಸೂರು, ೦೧. ನವೆಂಬರ . ೨೦೧೪, ಸಿಂಗಪುರ
————————————————————————————-

ಮುಂಜಾವಿನೊಂದು, ಚಳಿ, ಚುಚ್ಚುವ, ಸೂಜಿಗಳು, ಸೂಜಿಗಲ್ಲು, ಹೆಕ್ಕುತಾ, ಮನಸಾ, ನಾಗೇಶ, ಮೈಸೂರು, ನಾಗೇಶಮೈಸೂರು, nageshamysore, nagesha, mysore

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s