00286. ಎಸ್.ಎಲ್. ಭೈರಪ್ಪನವರ ‘ಆವರಣ’ (ಪುಸ್ತಕ ಪರಿಚಯ)

00286. ಎಸ್.ಎಲ್. ಭೈರಪ್ಪನವರ ‘ಆವರಣ’ (ಪುಸ್ತಕ ಪರಿಚಯ)
__________________________________________

ಪರಿಚಯಿಸುವ ಮುನ್ನ :
_________________

ನಾನು ಕಳೆದ ಬಾರಿ ಭಾರತ ಪ್ರವಾಸದಿಂದ ಹೊತ್ತು ತಂದ ಪುಸ್ತಕಗಳಲ್ಲಿ ಎಸ್.ಎಲ್. ಭೈರಪ್ಪನವರ ‘ಆವರಣ’ವೂ ಒಂದು. ಬಳೇ ಪೇಟೆಯ ಸಾಹಿತ್ಯ ಭಂಡಾರ ಪ್ರಕಾಶನದಿಂದ ಪ್ರಕಟಿತವಾದ ಈ ಪುಸ್ತಕ ಓದಲು ತೆರೆಯುತ್ತಿದ್ದ ಹಾಗೆ ಮೊದಲು ಗಮನ ಸೆಳೆದ ಅಂಶ, ನಾನು ಕೈಲಿ ಹಿಡಿದಿರುವ ಈ ಪುಸ್ತಕದ ಪ್ರತಿ ಮುವ್ವತ್ತೈದನೆ ಮುದ್ರಣದಿಂದ ಹೊರಬಂದದ್ದು ಎಂಬುದು. 2007 ರಲ್ಲಿ ಮೊದಲ ಮುದ್ರಣ ಕಂಡ ಈ ಪ್ರತಿ ಆರೇಳು ವರ್ಷಗಳಲ್ಲಿ ಇಷ್ಟು ಬಾರಿ ಪುನರ್ಮುದ್ರಿತವಾಗಿದೆಯೆಂದರೆ, ಒಂದು ಅಸಾಧಾರಣ ಮಹತ್ವದ ಕೃತಿಯೊಂದು ನನ್ನ ಕೈಲಿದೆಯೆಂಬ ಅನಿಸಿಕೆ ಸಹಜವಾಗಿಯೆ ಸುಳಿದುಹೋಯ್ತು. ಭೈರಪ್ಪನವರಂಥಹ ಪಕ್ವ ಬರಹಗಾರರ ಎಲ್ಲಾ ಕೃತಿಗಳಿಗೂ ಆ ಮೌಲ್ಯ ತಾನೆ ತಾನಾಗಿ ಆರೋಪಿತವಾಗುವುದು ಸಹಜವಾದರೂ, ಈ ಕೃತಿಯ ಹಾಗೆ ಇಷ್ಟು ಶೀಘ್ರಗತಿಯಲ್ಲಿ, ಇಷ್ಟೊಂದು ಬಾರಿ ಮರುಮುದ್ರಣವನ್ನು ಅವರ ಇತರೆ ಯಾವ ಕೃತಿಗಳು ಸಂಪಾದಿಸಿಕೊಂಡಂತೆ ಕಾಣಲಿಲ್ಲ. ಒಂದೆಡೆ ಇದರಿಂದ ಓದುವ ಕುತೂಹಲ ಹೆಚ್ಚಿದರೆ ‘ಆವರಣ’ ಓದತೊಡಗಿದಂತೆ ಆರಂಭದಲ್ಲೆ ಅನಾವರಣವಾಗತೊಡಗಿದ ಕಥಾ ಹಂದರ, ವಸ್ತುವಿನ ಸೂಕ್ಷ್ಮಜ್ಞತೆ ಮತ್ತು ಸಾರ್ಥದ ನಂತರ ಭೈರಪ್ಪನವರು ಕೈಗೆತ್ತಿಕೊಂಡ ಎರಡನೆ ಐತಿಹಾಸಿಕ ಕಥಾನಕದ ಹೂರಣದ ಸುಳಿವುಗಳು ಒಂದು ರೀತಿ ‘ಕ್ಯಾಶುವಲ್ ರೀಡಿಂಗ್’ ಮನಃಸತ್ವದಲ್ಲಿ ಓದಲು ಕುಳಿತವನನ್ನು ಬೆಚ್ಚಿಸಿ ಬಡಿದೆಬ್ಬಿಸಿ ನೆಟ್ಟಗೆ ಕೂರುವಂತೆ ಮಾಡಿಬಿಟ್ಟಿತು.

ನಿಜ ಹೇಳಬೇಕೆಂದರೆ ಪ್ರಬುದ್ಧತೆ, ಗಹನತೆಯ ಹಲವಾರು ಮೆಟ್ಟಿಲುಗಳ ಸ್ತರಗಳನ್ನು ದಾಟಿ ಮೇಲೇರಿ ಅರ್ಥೈಸಿ, ಜೀರ್ಣಿಸಿಕೊಂಡು ವಾಸ್ತವದ ಭಾವೋನ್ಮೇಷಗಳಿಂದ ಮನಸನ್ನು ಪೂರ್ತಿ ಹೊರಗಾಗಿಸಿ, ಕಟು ವಸ್ತು ನಿಷ್ಠತೆ ಮತ್ತು ಆಗಾಧ ಸಮತೋಲಿತ ನಿರ್ಲಿಪ್ತತೆಯ ಆವರಣವನ್ನು ಹೊದ್ದಲ್ಲದ್ದೆ ಈ ಪುಸ್ತಕ ಪರಿಚಯದಂತಹ ಪ್ರಕ್ರಿಯೆ ಕಾರ್ಯ ಸಾಧುವಲ್ಲ. ವಸ್ತು ಸೂಕ್ಷ್ಮಜ್ಞತೆಯ ತೆಳುವಾದ ಗೆರೆ ಇಲ್ಲಿ ಎಷ್ಟು ಸಪೂರವಾಗಿದೆಯೆಂದರೆ ಆಳಕ್ಕೆ ಹೊಕ್ಕು ಅಂತರಾಳದ ಮೂಸೆಯಲ್ಲಿ ಅಷ್ಟೆ ವಸ್ತುನಿಷ್ಟೆಯಿಂದ ಅವಲೋಕಿಸದಿದ್ದರೆ ಕ್ಷಿಪ್ರಗತಿಯಲ್ಲಿ ವಾದದ ಬೇಲಿಯ ಎಡಬದಿಯನ್ನೊ ಅಥವಾ ಬಲಬದಿಯನ್ನೊ ಹಿಡಿದು ವಿಭಿನ್ನ ಪಂಥಗಳ ಬಾವುಟ ಎತ್ತಿ ಹಿಡಿಯುವ ಕಟ್ಟಾಳುಗಳಾಗಿಬಿಡುವ ಅಪಾಯ ಪ್ರತಿ ಹೆಜ್ಜೆಯಲ್ಲೂ ಅನುರಣಿಸುತ್ತದೆ. ಇದರ ಅರಿವಿರುವುದರಿಂದಲೊ ಏನೊ, ಭೈರಪ್ಪನವರಲ್ಲಿರುವ ಲೇಖಕ ಬರಹದ ವಸ್ತುವಿನ ಭಾವನಾತ್ಮಕ ಆವರಣದ ಪರಿಧಿಯಿಂದ ಹೊರನಿಂತು ನಿರ್ಲಿಪ್ತ ವೀಕ್ಷಕನ ರೂಪದಲ್ಲಿ ವಿಷಯನಾವರಣ ಮಾಡುತ್ತಾ ಹೋಗುತ್ತಲೆ ಅಷ್ಟೆ ಶ್ರದ್ದೆಯಿಂದ ಆ ಸಂಗತಿಯ ಮೂಲ, ಆಧಾರ, ಆಕರಗಳನ್ನು ಅನಾವರಣ ಮಾಡುವ ಪರಿ ಈ ಗ್ರಂಥ ರಚನೆಯಲ್ಲಿ ಬಂಡವಾಳ ಹೂಡಿರುವ ಪರಿಶ್ರಮ, ಸಂಶೋಧನೆಗಳ ಪರೋಕ್ಷ ಪ್ರತಿನಿಧಿಯೂ ಆಗುತ್ತದೆ.

ಭೈರಪ್ಪನವರ ಈ ಪುಸ್ತಕ ಪರಿಚಯಿಸಲು ಹೊರಟಾಗ ಕೂಡ ನನ್ನನ್ನು ಕಾಡಿದ್ದು ಒಂದು ರೀತಿಯ ದ್ವಂದ್ವ ಭಾವನೆ. ಮೊದಲನೆಯದು – ಇಂತಹ ಗಹನ ವಸ್ತುವಿನ ಪುಸ್ತಕವನ್ನು ಪರಿಚಯಿಸುವಷ್ಟು ಪಕ್ವತೆ, ಪ್ರಬುದ್ಧತೆ ನನಗಿದೆಯೆ ಎಂಬುದು. ಹಿಂದೆಯೆ ಮನದಲ್ಲಿ ಮೂಡಿದ ಭಾವ – ಪಕ್ವ ಬುದ್ಧಿಜೀವಿಗಳಿಗಿರುವ ವಿಮರ್ಶಾ ದೃಷ್ಟಿಕೋನಕ್ಕಿಂತ ವಿಭಿನ್ನವಾಗಿ ನನ್ನಂತಹ ಸಾಧಾರಣ ಓದುಗರಲ್ಲಿ ಮೂಡಬಹುದಾದ ಅನಿಸಿಕೆಗಳನ್ನು ಹಿಡಿದಿಡುವುದರಲ್ಲಿ ತಪ್ಪೇನೂ ಇಲ್ಲವೆಂದು. ಅಂತೆಯೆ ಇದೊಂದು ಸಮತೋಲನದ ಸಾಮಾನ್ಯರ ದೃಷ್ಟಿಯೂ ಆಗಬಹುದಲ್ಲ ಎಂಬ ಜಿಜ್ಞಾಸೆ. ಎಲ್ಲಕ್ಕಿಂತ ಮೀರಿದ ಸಾಮಾನ್ಯ ಓದುಗರಿಗೂ ಪರಿಚಯಿಸಿ ಓದುವ ಕುತೂಹಲ ಮೂಡಿಸುವ ಹಂಬಲ ; ಓದಿದ ನಂತರ ತನಗೆ ಸರಿಕೊಂಡ ವಿಮರ್ಶೆ, ತೀರ್ಮಾನ, ಅನಿಸಿಕೆಗಳನ್ನು ಅನುಭಾವಿಸಿ ಆರೋಪಿಸಿಕೊಳ್ಳುವುದು ಆಯಾ ಓದುಗನಿಗೆ ಬಿಟ್ಟದ್ದು. ಮನದಲ್ಲಿ ಈ ಚಿಂತನೆ ಪ್ರಬಲವಾದಾಗ ಈ ಕಿರು ಪರಿಚಯ ಲೇಖನ ಬರೆಯಲು ಮತ್ತಷ್ಟು ಪ್ರೇರಣೆ ಸಿಕ್ಕಿದಂತಾಯ್ತು .

ಅಂತೆಯೆ ಕಾಡಿದ ಮತ್ತೊಂದು ಜಿಜ್ಞಾಸೆ – ಧರ್ಮದಂತಹ ಸೂಕ್ಷ್ಮವಸ್ತುವಿನ ಎಳೆಯಲ್ಲಿ ಅಂತರ್ಗತವಾದ ಇತಿಹಾಸದೀ ಕಥಾನಕವನ್ನು ಲೇಖಕರಷ್ಟೆ ಸಮರ್ಥವಾಗಿ ಯಾವುದೆ ಭಾವೋನ್ಮಾದಕ್ಕೊಳಗಾಗದಂತೆ / ಒಳಗಾಗಿಸದಂತೆ ಹೇಳಬಲ್ಲ ಸಾಮರ್ಥ್ಯವಿದೆಯೆ ಎಂಬ ಅಳುಕು. ಆದರೂ ಓದಿದ ನಂತರದ ಮನದ ಮೇಲಿನ ಪರಿಣಾಮ, ಹಚ್ಚಿದ ಚಿಂತನಾ ಕಲನ, ಮೂಡಿದ ಬಗೆಬಗೆಯ ಇತಿಹಾಸ-ವಾಸ್ತವದ ಸಂವಾದಿ ದ್ವಂದ್ವ ಎಲ್ಲವೂ ಕಲಸುಮೇಲೋಗರವಾಗಿ ಬರೆದು ಹಂಚಿಕೊಂಡಲ್ಲದೆ ವಿಶ್ರಮಿಸದ ಬೌದ್ಧಿಕ ಯಾತನೆಯಂತೆ ಕಾಡತೊಡಗಿದ ಒಳಗಿನ ಒತ್ತಡವೂ ಬರೆಯಲು ಸ್ಪೂರ್ತಿಯಿತ್ತಿತು. ಅಷ್ಟಾಗಿಯೂ ಈ ಬರಹ ಭೈರಪ್ಪನವರ ಈ ಕೃತಿಯ ಸೂಕ್ತ ಅನಾವರಣವಾಗಿಸಲು ಯಶಸ್ವಿಯಾಗದಿದ್ದರೆ, ಅದು ನನ್ನ ಬರಹದ ಮಿತಿಯೆ ಹೊರತು ಮೂಲ ಕೃತಿಯ ದೋಷವಲ್ಲ.

ಪರಿಚಯದ ಕಿಂಡಿಯ ಮೂಲಕ ಆವರಣದ ಕಿರು-ಅನಾವರಣ :
________________________________________

ಈ ಐತಿಹಾಸಿಕ ಕಾದಂಬರಿಯ ಮೂಲ ಎಳೆ ಇತಿಹಾಸವನ್ನು ಅಸೀಮ ಸತ್ಯನಿಷ್ಠೆಯ ಮಸೂರದಡಿ ಪರಿವೀಕ್ಷಿಸಿ ಅದರ ನೈಜ್ಯತೆಯ ಮೂಲ ಸರಕನ್ನು ಪದರ ಪದರವಾಗಿ ಬಿಡಿಸಿಡುವುದು. ಆರಂಭದಲ್ಲೆ ಪಾತ್ರಗಳ ಮುಖೇನ ಹೇಳಿರುವಂತೆ ಮೂಲ ಉದ್ದೇಶ ಯಾವುದೆ ಧರ್ಮ, ವ್ಯಕ್ತಿತ್ವ, ಕಾರ್ಯ ಅಥವಾ ಇತಿಹಾಸದ ಹೊಗಳಿಕೆ / ಅವಹೇಳನವಲ್ಲ. ಬದಲಿಗೆ ಇತಿಹಾಸವನ್ನು ಗಾಢವಾದ ವಸ್ತು ನಿಷ್ಠತೆಯಿಂದ ನೋಡುತ್ತ ಅದರ ನಿಜಾನಿಜಗಳನ್ನು ಸಂಶೋಧಿಸುತ್ತ, ಸೋಸುತ್ತ ಖಚಿತಪಡಿಸಿಕೊಳ್ಳುವ ವಿಧಾನ. ಆ ಹಾದಿಯಲ್ಲಿ ರೋಚಕತೆ, ಭಟ್ಟಂಗಿತನ, ಹುಸಿ ಮೆಚ್ಚಿಸುವಿಕೆಯ ಸಾರವತ್ತತೆಯನ್ನು ಬಲವಂತವಾಗಿ ಆರೋಪಿಸುವ ಬದಲು ಇತಿಹಾಸದ ಘಟನೆಗಳಿಗಿರಬಹುದಾದ ಎಲ್ಲಾ ಮೂಲ, ಸಾಕ್ಷ್ಯಾಧಾರಗಳನ್ನು ಒಟ್ಟಾಗಿಸಿ ನಿಷ್ಪತ್ತಿಗೊಳಿಸಿದ ಸತ್ಯವನ್ನು ಹುಸಿ ಆವರಣದ ಹೊದಿಕೆಯಿಂದೆತ್ತಿ ನೈಜ್ಯತೆಯ ಅನಾವರಣದಲ್ಲಿ ಪ್ರತಿಷ್ಟಾಪಿಸುವ ಯತ್ನ ಎದ್ದು ಕಾಣುತ್ತದೆ. ಗ್ರಂಥ ಋಣದ ರೂಪದಲ್ಲಿ ಕಥಾನಕದಲ್ಲೆ ಅಂತರ್ಗತವಾಗಿ ಬರುವ ಈ ಮೂಲಾಧಾರಗಳು ಒಂದೆಡೆ ಈ ಯತ್ನದ ನಿಷ್ಠಾಯತ್ನದ ಪ್ರತೀಕದಂತೆ ಕಂಡರೆ ಮತ್ತೊಂದು ಸ್ತರದಲ್ಲಿ ಇಡಿ ಪುಸ್ತಕವನ್ನು ಬೇರೆಯ ಮಾಮೂಲಿ ಐತಿಹಾಸಿಕ ಕಥಾನಕದ ರಮ್ಯತೆ ರೋಚಕತೆಯಿಂದ ಬೇರ್ಪಡಿಸಿ ಗುಂಪಿನಿಂದೆದ್ದು ಕಾಣುವ ವಿಶಿಷ್ಠತೆಯನ್ನು ಲೇಪಿಸಿಬಿಡುತ್ತವೆ.

ಹೀಗಾಗಿ ನಾವುಗಳು ಹಿಂದೆ ಓದಿರಬಹುದಾದ ಐತಿಹಾಸಿಕ ಕಾದಂಬರಿ ಕಥಾನಕದ ರೀತಿಯ ನಿರೀಕ್ಷೆಯಿಟ್ಟುಕೊಂಡು ಹೊರಟರೆ ಇಲ್ಲಿ ಆ ಸರಕು ಸಿಗುವುದಿಲ್ಲ. ಕೇವಲ ಹತ್ತಾರು ಸ್ಪಷ್ಟಾಸ್ಪಷ್ಟ, ಪೂರ್ಣಾಪೂರ್ಣ ಮಾಹಿತಿಯ ಕೆಲ ಸಾಲಿನ ಆಧಾರಕ್ಕೆ ಊಹೆ, ಕಥಾನಕದ ಜಾಣ್ಮೆ, ಪಾತ್ರಗಳ ಸೃಷ್ಟಿ, ರಮ್ಯತೆ ರೋಚಕತೆಯ ಹಂದರದಲ್ಲಿ ಗೊತ್ತಿದ್ದಷ್ಟು ನೈಜ್ಯತೆಯನ್ನು ಸೇರಿಸುವ ಕಾದಂಬರಿಗಳಿಗಿಂತ ವಿಭಿನ್ನ ಶೈಲಿ ಈ ಕಾದಂಬರಿಯದು. ಇತಿಹಾಸದ ಸತ್ಯಾಸತ್ಯಗಳ ವೈಭವೀಕರಣದ ಗೋಜಿಗೆ ಹೋಗದೆ ಕಥೆಯ ಮುಖ್ಯ ಉದ್ದೇಶದತ್ತ ಗಮನ ಕೆಂದ್ರೀಕರಿಸಲು ಭೈರಪ್ಪನವರು ಇಲ್ಲಿ ಬಳಸಿದ ಕಥಾತಂತ್ರ ಎರಡು ಪ್ರಮುಖ ಟ್ರ್ಯಾಕುಗಳಲ್ಲಿ ಓಡುತ್ತದೆ. ಆಧುನಿಕ ಜಗದ ವಾಸ್ತವ ಪಾತ್ರಗಳೊಡನೆ ಆರಂಭವಾಗುವ ಕಥಾನಕ ಪ್ರತಿ ಪಾತ್ರವೂ ತನ್ನ ಸ್ವಯಂ ಅಂತಃಶೋಧನೆಗೊ ಅಥವಾ ತಾನು ಕಟ್ಟಿಕೊಂಡ ಭ್ರಮಾಲೋಕದಲ್ಲೆ ಮುಳುಗಿ ಕಳುವಾಗುತ್ತಾ ಹೋಗುವ ಪ್ರಕ್ರಿಯೆಯಲ್ಲೆ ಇತಿಹಾಸದ ನಿಜಾನಿಜಗಳನ್ನು ವಾಸ್ತವದ ಪರಿಧಿಯಲ್ಲಿ ಹುಡುಕುತ್ತ ಹೋಗುತ್ತವೆ. ಕೆಲವು ಆ ಹುಡುಕಾಟದ ಉದ್ದೇಶದ ಸುತ್ತ ನಿರ್ಮಿತಗೊಂಡ ಪರಿಸರದ ಹಿನ್ನಲೆಯಲ್ಲೆ ತಮ್ಮದೆ ಆದ ಆವರಣಗಳನ್ನು ನಿರ್ಮಿಸಿಕೊಂಡು ಅದರ ವಕ್ತಾರರಾಗಿ ಕಂಕಣಬದ್ಧರಾಗುವ ಹಾದಿ ಹಿಡಿದಂತೆಯೆ, ಕೇವಲ ಸತ್ಯದ ಹೊಳಹು ಯಾವುದಾವುದೊ ಹುನ್ನಾರದ ಪರದೆಯಡಿ ಹೂತುಹೋಗಿದ್ದು ಮಾತ್ರವಲ್ಲದೆ, ತಿರುಚಿದ ಸಂಗತಿಗಳು ಇತಿಹಾಸದ ತುಣುಕುಗಳಾಗಿ ಹೊಸ ಇತಿಹಾಸ ಬರೆದುಕೊಳ್ಳುವ ಹಾದಿಯನ್ನು ಗಾಬರಿ ಮತ್ತು ಪ್ರಜ್ಞಾವಂತಿಕೆಯಿಂದ ವಿರೋಧಿಸುವ ಹಾಗೂ ಹೋರಾಡುವ ದಾರಿ ಹಿಡಿಯುತ್ತವೆ. ಈ ಎರಡರ ಸಾಂಗತ್ಯ, ತಾಕಲಾಟ, ಹಂತಹಂತದಲ್ಲಿ ಬದಲಾಗುವ ಮನಸ್ಸತ್ವದ ಪರಿ, ಹೊರಗಿನ ಹೊದಿಕೆಯ ಮುಸುಕಿನಡಿಯೆ ಹೊಂದಾಣಿಕೆಯ ಕೃಪೆಯಡಿ ಬದುಕಬೇಕಾಗುವ ಅನಿವಾರ್ಯತೆ, ಆ ಅನಿವಾರ್ಯಗಳನ್ನು ಸ್ವಹಿತಾಸಕ್ತಿಗಾಗಿ ಬಳಸುವ ದಿಗ್ಭ್ರಮೆ ಹಿಡಿಸುವ ಸ್ವಾರ್ಥ ಮತ್ತು ಕೀರ್ತಿಲಾಲಾಸೆ, ಒಂದು ಹಂತದ ನಂತರ ಭಾವನಾತ್ಮಕತೆಯನ್ನು ಮೀರಿ ಪೇಲವವಾಗಿಬಿಡುವ ಸಂಬಂಧಗಳು, ಆ ಸಂಬಂಧದ ನಿರ್ಬಂಧರಾಹಿತ್ಯತೆಯೆ ಹುಟ್ಟುಹಾಕುವ ಸಂದಿಗ್ದಗಳು – ಎಲ್ಲವನ್ನು ಈ ಪಾತ್ರಗಳ ಮೂಲಕವೆ ಭೈರಪ್ಪನವರು ಹಿಡಿದಿಡುವ ಪರಿ ಅದ್ಭುತ!

ಪಾತ್ರಗಳ ಹುಡುಕಾಟ, ಶೋಧನೆಯು ಸಹ ಪಾತ್ರಗಳ ಸೋಗಿನ ತೆವಲಾಗಿ ಬಿಚ್ಚಿಕೊಳ್ಳದೆ, ಅವರ ಸ್ವಂತ ಅನುಭವ, ಬದುಕಿನ ತಪನೆ, ತಾಕಲಾಟದ ಫಲಿತವಾಗಿ ಹುಟ್ಟುವ ಅಂತರಿಕ ತೊಳಲಾಟದ ರೂಪ ತಾಳುವ ಮೂಲಕ ಅವರ ಶೋಧನೆಯ ಸತ್ಯನಿಷ್ಟತೆಯನ್ನು ಮತ್ತಷ್ಟು ಬಲವಾಗಿಸಿಬಿಡುತ್ತದೆ. ಆ ತೊಳಲಾಟದ ಅಂತಃಸ್ಪೋಟ ಬಹಿರ್ಗತವಾದಾಗ ಹಿಡಿಯುವ ದಾರಿಯೆ ಪ್ರೇರಣಾಶಕ್ತಿಯಾಗಿ ರಜಿಯಾ ಬೇಗಂ ಉರುಫ್ ಲಕ್ಷ್ಮಿಯ ಮುಖೇನ ಇತಿಹಾಸ ಕಥಾನಕದ ರೂಪ ತಾಳುವ ಬಗೆ ಎರಡನೆ ಟ್ರಾಕಿನ ಸಾರ. ಹೀಗೆ ಪ್ರಸ್ತುತ ಸಾಮಾಜಿಕ ಸ್ತರದ ಸಂಬಂಧಗಳ ಹೋರಾಟ ಚಿತ್ರಿತವಾಗುತ್ತಲೆ ಹಳೆ ಇತಿಹಾಸದ ಕಥಾನಕದ ಕಡತ ಕಟ್ಟಿಕೊಳ್ಳುತ್ತಾ ಹೋಗುತ್ತದೆ. ಯಾನದ ಪ್ರತಿ ಹೆಜ್ಜೆಯಲ್ಲು ಇತಿಹಾಸದ ಆ ರೂಪಕ್ಕೆ ವಾಸ್ತವದ ಮುಖೇನ ಇಣುಕಿ ಒಂದು ರೀತಿಯ ವಿವೇಚನಾಪೂರ್ಣ ಪರೀಕ್ಷಣೆ, ತುಲನೆ ನಡೆಸುತ್ತಲೆ, ನಂತರ ಇತಿಹಾಸದ ಕಥನ ಕಟ್ಟಿಕೊಡುವ ಪರಿ ಕುತೂಹಲಕಾರಕ. ಅಂತೆಯೆ ತೀರಾ ವೈಭವೀಕರಣದ ಹಂಗನ್ನು ತೊರೆದ ಕಾರಣವೊ ಏನೊ – ಆ ಇತಿಹಾಸದ ಕಥಾನಕವೂ ಪುಸ್ತಕದ ಅರ್ಧಕ್ಕಿಂತ ಕಡಿಮೆ ಪುಟಗಳಲ್ಲೆ ನಿರೂಪಿತವಾಗಿಬಿಡುತ್ತದೆ – ಎಷ್ಟು ಬೇಕೊ ಅಷ್ಟೆ ವಿವರ, ಘಟನೆಗಳಿಗೆ ಸೀಮಿತವಾಗಿಸಿ. ಆದರೆ ಅಷ್ಟರಲ್ಲೆ ಕಲೆ ಹಾಕಿರುವ ವಿವರ, ಈ ಕೃತಿಗೆಂದೆ ನಡೆಸಿರಬಹುದಾದ ಸಂಶೋಧನೆಯ ಆಳ, ನಿಖರತೆಗೆಗಾಗಿ ಪಟ್ಟಿರುವ ಶ್ರಮ ಹೆಜ್ಜೆಜ್ಜೆಯಲ್ಲು ಎದ್ದು ಕಾಣಿಸುತ್ತದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಇಲ್ಲಿ ಬರುವ ಪಾತ್ರಗಳೆಲ್ಲ ಈ ಕಥಾನಕ ಹೇಳುವ ಇತಿಹಾಸದ ವಿಸ್ತೃತ ಪಾತ್ರಗಳೊ ಅಥವಾ ಆ ಇತಿಹಾಸ ಹುಟ್ಟುಹಾಕಿದ ಪ್ರಕ್ರಿಯೆಗಳ ಫಲಶ್ರುತಿಯಾಗಿ ಕಾಲದೇಶಗಳ ಪರೀಕ್ಷೆ ದಾಟಿ ಈಗಿನ ವಾಸ್ತವ ಜಗದ ಪಾತ್ರಗಳಾಗಿರುವುದು. ಇದರಿಂದಾಗಿ ಇತಿಹಾಸದ ಶೋಧನೆಯೆ ಪಾತ್ರಗಳು ತಮ್ಮ ಸ್ವಂತ ಮೂಲವನ್ನು ತಮಗರಿವಿಲ್ಲದೆ ತಾವೆ ಹುಡುಕಿಕೊಂಡು ಹೊರಟಂತೆ ಭಾಸವಾಗಿಬಿಡುತ್ತದೆ.

ಈ ಪಯಣದ ಹಾದಿಯಲ್ಲೆ ಬರುವ ಮತ್ತಿತರ ಪಾತ್ರಗಳ ಮುಖೇನ ಆಯಾ ಧರ್ಮ, ಸಂಸ್ಖೃತಿ, ಆಚಾರ, ವಿಚಾರಗಳ ಒಳದೃಷ್ಟಿ, ಒಳನೋಟ, ವಿಸ್ತಾರ, ಪರಿಮಿತಿಗಳನ್ನು ಬಿಚ್ಚಿ ತೋರಿಸುತ್ತಾ ಹೋಗುವುದು ಅಷ್ಟೆ ಪರಿಣಾಮಕಾರಿಯಾಗಿ ಕಾಣುತ್ತದೆ. ಯಾರತ್ತ ಬೆರಳು ತೋರದೆ, ಸರಿಯೊ ತಪ್ಪೊ ಎಂಬ ಜಿಜ್ಞಾಸೆಗಿಳಿಯದೆ ತಣ್ಣಗೆ ನೀಡುವ ವಿವರ ತಂತಾನೆ ವಿವರಣೆ ನೀಡುವ ಅಂತಃಸತ್ವವಾಗುವುದು ಇಲ್ಲಿನ ವಿಶೇಷ. ಅದರಲ್ಲೂ ಇತಿಹಾಸದ ವಿಷಯಕ್ಕೆ ಬಂದಾಗ, ಇತಿಹಾಸ ಮುಗಿದು ಹೋದ ಕಥೆಯಾದರೂ ಅದನ್ನು ಸರಿಯಾಗಿ ಅರಿತುಕೊಳ್ಳುವುದು ಏಕೆ ಮುಖ್ಯ ಎಂಬುದನ್ನು ಅಂತರ್ಗತವಾಗಿ ಸಾರುವ ಯತ್ನ ಬರಹದುದ್ದಕ್ಕೂ ಅನುರಣಿತವಾಗುತ್ತದೆ. ಹಾಗೆಯೆ ಅದನ್ನು ತಿರುಚಿ ಬರೆಯುವ ಅಪಾಯದ ಕುರಿತು ಸಹ. ಒಟ್ಟಾರೆ ಸತ್ಯ ಶೋಧನೆ ಮತ್ತದರ ಸರಿಯಾದ ಸಾರ್ವತ್ರಿಕ ಅರಿವು ಇಲ್ಲಿನ ಅಂತರ್ಗತ ಸಂದೇಶ; ಅದೆ ಹೊತ್ತಿನಲ್ಲೆ ಸಮಕಾಲೀನ ವಾಸ್ತವತೆಯನ್ನು ಇತಿಹಾಸಕ್ಕೆ ಜವಾಬ್ದಾರನನ್ನಾಗಿಸದೆ, ಕೇವಲ ಇತಿಹಾಸದ ಪಾಠಗಳಷ್ಠೆ ಕಲಿತು ಮುನ್ನಡೆಯಬೇಕೆನ್ನುವ ಪ್ರಬುದ್ಧತೆಯನ್ನು ಸಾರುತ್ತದೆ.

ಇನ್ನು ಕಥಾಹಂದರಕ್ಕೆ ಬಂದರೆ ರಜಿಯಾ (ಪೂರ್ವಾಶ್ರಮದ ಲಕ್ಷ್ಮಿ) ಮೆಚ್ಚಿ ಮದುವೆಯಾಗುವ ಅಮೀರನಿಗಾಗಿ ಹೆತ್ತವರನ್ನು ತೊರೆದು ಮತಾಂತರಕ್ಕು ಸಿದ್ಧವಾಗುವ ವಿದ್ಯಾವಂತ ಪ್ರಬುದ್ಧ ಹೆಣ್ಣು. ಇತಿಹಾಸದ ದಾಖಲೆಯ ಹೊಣೆಗಾರಿಕೆಗೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿಕೊಂಡಾಗ ಕಣ್ಣಿಗೆ ಕಂಡ ಸತ್ಯವನ್ನು ತಿರುಚದೆ ಹಿತಾಸಕ್ತರ ಕೆಂಗಣ್ಣಿಗೂ ಗುರಿಯಾಗದ್ದೆ ಇತಿಹಾಸವನ್ನು ದಾಖಲಿಸುವ ಜಿಜ್ಞಾಸೆ, ದ್ವಂದ್ವಕ್ಕೆ ಸಿಲುಕುವುದರಿಂದ ಆರಂಭವಾಗುವ ಕಥನ ಇತಿಹಾಸಕ್ಕೆ ಕಾಲಿಟ್ಟ ಮುಸ್ಲಿಂ ಪ್ರಭುತ್ವಗಳ ಧಾಳಿ, ಆಂಗ್ಲರ ರೂಪದಲ್ಲಿ ಕಾಲಿಟ್ಟ ಪಾಶ್ಚಾತ್ಯ ಧಾಳಿ, ಅವೆರಡರಲ್ಲು ಅಂತರ್ಗತವಾದ ಇಸ್ಲಾಂ, ಕ್ರಿಶ್ಚಿಯನ್ ಮತ್ತು ಹಿಂದೂ ಧರ್ಮ-ಮತೀಯತೆಗಳ ಹೊಂದಾಣಿಕೆಯ ಮತ್ತು ಬೇರ್ಪಡಿಸಲಾಗದ ತಿಕ್ಕಾಟಗಳ ಚಿತ್ರಣವನ್ನು ಕೊಡುತ್ತಲೆ ಅದರ ಮೂಲ ಬೇರುಗಳನ್ನು ಇತಿಹಾಸದಲ್ಲಿ ಹುಡುಕತೊಡಗುತ್ತದೆ. ಬೇರು ಶೋಧಿಸಿ ಸತ್ಯ ದರ್ಶನವಾಗಿಸಿದರೆ ಅದರಿಂದುಂಟಾಗುವ ನಂಬಿಕೆ ಸೌಹಾರ್ದತೆಗಳ ಬುನಾದಿಯಲ್ಲಿ ಪ್ರಸಕ್ತ ಮತ್ತು ಭವಿತದ ಪೀಳಿಗೆಯನ್ನು ಕಟ್ಟುವ ಪ್ರಯತ್ನದಲ್ಲಿ ಸಾಗಿದ ಪ್ರಕರಣವೆ ಮೂಲವಾಗಿ, ವಾಸ್ತವದ ಸಂಬಂಧಗಳು ಸಡಿಲವಾಗುತ್ತ ಹೋಗುತ್ತವೆ. ವಾಸ್ತವ ಸಂಬಂಧ ಸಡಿಲವಾದಂತೆ ಇತಿಹಾಸದ ಕೊಂಡಿಯೊಡನೆಯ ಸತ್ಯದ ಶೋಧನೆಯ ಬಂಧ ಬಲವಾಗುತ್ತ ಹೋಗುವುದು ವಿಪರ್ಯಾಸ. ಈ ಪ್ರಸ್ತುತ ನಿರ್ಗಮನ ಮತ್ತು ಇತಿಹಾಸಾಗಮನಕ್ಕೆ ಪೂರಕವಾಗುವಂತೆ ಮಿಕ್ಕೆಲ್ಲ ಪಾತ್ರಗಳು ಹತ್ತಿರ ದೂರವಾಗುತ್ತ ಹೋಗುತ್ತವೆ ಮತ್ತು ಆ ಗಳಿಗೆಯ ಬಂಧ ನಿಷ್ಠೆಯನ್ನು ಗಟ್ಟಿಗೊಳಿಸುತ್ತಾ ಹೋಗುತ್ತವೆ. ಇದೆಲ್ಲಾ ಹೂರಣದ ಮಧ್ಯೆ ಬಿಚ್ಚಿಕೊಳ್ಳುವ ಇತಿಹಾಸದ ಅರಿವೂ ಸಹ ಅವರ ವರ್ತಮಾನದ ಮೇಲೆ ಬೀರುವ ಪ್ರಭಾವ, ವರ್ತಮಾನವನ್ನಾಳುವ ಇತಿಹಾಸದ ಶಕ್ತಿಯನ್ನು ತೋರಿಸುತ್ತದೆ. ಎಲ್ಲಾ ಮುಗಿದು ಕೊನೆಯ ನಿರ್ಣಾಯಕ ಹಂತಕ್ಕೆ ಬಂದಾಗ ಘಟಿಸುವ ಅನಿರೀಕ್ಷಿತ ಅಹಿತಕರ ಘಟಿತಗಳು ಇಲ್ಲೂ ಸತ್ಯದರ್ಶನ ನೋಡುವವರಿರಲಿ , ಕೇಳುವವರೂ ಇಲ್ಲ ಎನ್ನುವ ನಿರಾಸೆ ಮೂಡುವ ಹೊತ್ತಿನಲ್ಲೆ ಆಶಾವಾದದ ಹೊಸ ತೆರೆಯೊಂದು ಬಂದು ಅಪ್ಪಿಕೊಳ್ಳುತ್ತದೆ. ಆ ಹೊಸ ತುಣುಕು ಸಹ ಇತಿಹಾಸದ ಸತ್ಯದರ್ಶನದಿಂದ ಪ್ರಭಾವಿತವಾಗಿ ಸ್ವಪ್ರೇರಣೆಯಿಂದ ಸತ್ಯವನ್ನೊಪ್ಪಿಕೊಂಡು ಬಂದ ಇತಿಹಾಸದ ತುಣುಕೆ ಆಗಿರುವುದು ಸಾಂಕೇತಿಕವಷ್ಟೆ ಅಲ್ಲ, ಭೈರಪ್ಪನವರ ನಿಜವಾದ ಕಳಕಳಿ, ಮತೀಯವಾದಿತ್ವಕ್ಕೆ ಹೊರತಾದ ಪ್ರಾಮಾಣಿಕ ಇಂಗಿತವನ್ನು ತೋರಿಸುತ್ತದೆ.

ಒಟ್ಟಾರೆ ಇಡಿ ಕೃತಿಯಲ್ಲಿ ಮತಧರ್ಮದಂತ ಸೂಕ್ಷ್ಮ ವಸ್ತುವಿನ ಸಮರ್ಥ ನಿಭಾವಣೆಗಾಗಿ ಪಟ್ಟ ಪರಿಶ್ರಮ ಕಾಳಜಿ ಎದ್ದು ಕಾಣುತ್ತದೆ. ಪ್ರಕಟಣೋತ್ತರವಾಗಿ ಬರಬಹುದಾದ ಸಂದೇಹ, ಪ್ರಶ್ನೆ, ಅನುಮಾನ, ಟೀಕೆಗಳನ್ನೆಲ್ಲ ಮೊದಲೆ ಊಹಿಸಿ, ಅನುಭಾವಿಸಿ ಅದಕ್ಕೆ ಉತ್ತರಗಳನ್ನು ಪ್ರಶ್ನೆ ಕೇಳುವ ಮೊದಲೆ ಕೊಡುವ ಪ್ರಾಮಾಣಿಕ ಯತ್ನವೂ ಗೋಚರಿಸುತ್ತದೆ. ಇಡೀ ಕೃತಿಯ ಸತ್ವ ಅಡಗಿರುವುದೆ ಈ ಪ್ರಾಮಾಣಿಕ ಇಂಗಿತದ ಅನಾವರಣದಲ್ಲೆ ಎಂದರೆ ತಪ್ಪಾಗಲಾರದು.

‘ಆವರಣ’ ನಾನಾ ಬಾಹ್ಯ ವೇಷಗಳಿಂದ ಜಡ್ಡುಗಟ್ಟಿ ಹೋಗಿರುವ ಪ್ರಸ್ತುತ ಬದುಕಿನ ಮನಃಸತ್ವಗಳನ್ನು ಅನಾವರಣಗೊಳಿಸಿ , ವೇಷ ಕಳಚಿಸಿ ಸಹಜತೆಯತ್ತ ದೂಡಲೆಣಿಸುವ ಒಂದು ಸಶಕ್ತ ಪ್ರಯತ್ನ. ಭೈರಪ್ಪನಂತಹವರ ಪಳಗಿದ ಕೈಯಲ್ಲಿ ಸುಂದರ ಶಿಲ್ಪದಂತೆ ತಿದಿಯೊತ್ತಿಸುತ್ತ ಸಾಗುವ ಕಥಾನಕ ಉದ್ದಕ್ಕೂ ನಮ್ಮ ಸಮಾಜವನ್ನು ಪಿಡುಗಾಗಿ ಕಾಡುತ್ತಿರುವ ಪ್ರಶ್ನೆಗಳನ್ನು ಕೇಳುತ್ತಲೆ ಸಾಗುತ್ತದೆ. ಉತ್ತರ ಸಿಗಲಿ, ಬಿಡಲಿ ಲೆಕ್ಕಿಸದೆ ಸಾಕ್ಷಾಧಾರ ಮುಂದಿಡುತ ಪ್ರತಿಯೊಬ್ಬರಲ್ಲು ಅದೆ ಪ್ರಶ್ನೆ ಅನುರಣಿಸುತ್ತ ಸಾಗುತ್ತದೆ. ಅಂತೆಯೆ ಕಥೆಯುದ್ದಕ್ಕೂs ಯಾವುದೆ ಅಭಿಪ್ರಾಯವಾಗಲಿ, ಹೇಳಿಕೆಯಾಗಲಿ ವೈಯಕ್ತಿಕ ನಿಲುವಿನ ಪ್ರತೀಕವೆಂದು ತಪ್ಪೆಣಿಕೆ ಬರದ ಹಾಗೆ ಪಾತ್ರಗಳಲ್ಲಿ ಅಂತರ್ಗತಗೊಳಿಸಿಬಿಟ್ಟಿದೆ ಭೈರಪ್ಪನವರ ಬರಹದ ಶೈಲಿ. ಒಂದು ರೀತಿಯಲೀ ಲೇಖಕರು ನೇಪಥ್ಯದಲ್ಲಿ ನಿಂತು ಸಾಕ್ಷಿ ಪ್ರಜ್ಞೆಯೆಂಬಂತೆ, ಪ್ರೇಕ್ಷಕರಂತೆ ತಾವೂ ಓದುಗರೊಡನೆ ಕಥಾನಕ ಬಿಚ್ಚಿಕೊಳ್ಳುವ ಬಗೆಯನ್ನು ನಿರ್ಲಿಪ್ತವಾಗಿ ನೋಡುತ್ತಿರುವರೆಂಬ ಭಾವನೆ ಮೂಡಿ ಬರುತ್ತದೆ. ಅದು ಲೇಖಕರಾಗಿ ಭೈರಪ್ಪನವರ ಗೆಲುವಲ್ಲ, ಬದಲಿಗೆ ಅವರ ಬರಹದಲ್ಲಿನ ಅದ್ಭುತ ಸಾಮರ್ಥ್ಯ!

ಇಂಥಹ ಒಂದು ಅದ್ಭುತವನ್ನು ಓದಿ ಆಸ್ವಾದಿಸುವ ಭಾಗ್ಯ ಭೈರಪ್ಪನವರ ಬರಹಗಳನ್ನು ಮೆಚ್ಚಿ ಓದುವ ಅಭಿಮಾನಿ ಕನ್ನಡಿಗರದು!!

20140201-195858.jpg

2 thoughts on “00286. ಎಸ್.ಎಲ್. ಭೈರಪ್ಪನವರ ‘ಆವರಣ’ (ಪುಸ್ತಕ ಪರಿಚಯ)”

    1. ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು. ಬರೆದ ಮೊದಲ ಅವೃತ್ತಿಯನ್ನೆ ತಿದ್ದದೆ, ಪರಿಷ್ಕರಿಸದೆ ಹಾಕಿಬಿಟ್ಟಿದ್ದೇನೆ. ಬಿಡುವಾದಾಗ ಪರಾಮರ್ಶಿಸಿ ಸರಳಿಕರಿಸಲು ಯತ್ನಿಸುತ್ತೇನೆ 🙂

      Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s