00298. ಶಿವ ತಾಂಡವ …….

00298. ಶಿವ ತಾಂಡವ …….
_____________________

ಸೃಷ್ಟಿ ಸ್ಥಿತಿ ಲಯ ತ್ರಿಕಾರ್ಯ ನಿರತ ತ್ರಿಮೂರ್ತಿಗಳು ಅನುಕ್ರಮದಲ್ಲಿ ಈ ಮೂರು ಕ್ರಿಯೆಗಳ ಉಸ್ತುವಾರಿ ನಿಭಾಯಿಸಿಕೊಂಡು, ಕಾಲ ಕಲ್ಪಾದಿ ಯುಗಾಂತರಗಳನ್ನು ದಾಟಿಸಿಕೊಂಡು ನಡೆಸುತ್ತಾರೆಂಬುದು ಸಾಮಾನ್ಯವಾಗಿ ಪ್ರಚಲಿತವಿರುವ ನಂಬಿಕೆ. ಅಂತೆಯೆ ಯುಗಾಂತರದದಾವುದೊ ಕಾಲ ಘಟ್ಟದಲ್ಲಿ ಮಹಾನ್ ಪ್ರಳಯವೊಂದನ್ನು ಉತ್ಕರ್ಷಿಸಿ, ತನ್ನದೆ ಸೃಷ್ಟಿಯ ಅದೇ ಜಗವನ್ನು ವಿನಾಶದ ಹಾದಿಯಲ್ಲಿ ನಡೆಸಿ ನುಂಗಿ ನೀರು ಕುಡಿಯುವ ಕಲ್ಪನೆಯೂ ಗೊತ್ತಿರುವ ಕಥೆಯೆ. ಆ ತಿರೋದಾನದ ಹೊತ್ತಲ್ಲಿ ನಡೆಸುವ ರುದ್ರ ತಾಂಡವದಲ್ಲಿ ಸೃಷ್ಟಿಯ ಸಕಲವು ನಿಶ್ಯೇಷವಾಗಿ, ಎಲ್ಲವೂ ಶೂನ್ಯದಲ್ಲಿ ಆಪೋಶಿತವಾಗಿ ಬಟ್ಟ ಬಯಲಿನ ಖಾಲಿ ಬ್ರಹ್ಮಾಂಡದ ವಿಶಾಲ ಅಂಧಕಾರದ ಬಯಲು ಮಾತ್ರ ಮಿಕ್ಕುಳಿದುಬಿಟ್ಟಿರುವುದಂತೆ; ಆ ಭೀಷಣ ನಾಟ್ಯದ ಹೊತ್ತಲಿ ವಿನಾಶದ ಪರಿಚ್ಛೇದ ಮುಗಿದರೂ ಪರಶಿವನ ತಾಂಡವ ನಿಂತಿರುವುದಿಲ್ಲವಾಗಿ, ಆ ರೌದ್ರತೆಯನ್ನು ಮಣಿಸಿ, ತಂಪಾಗಿಸಿ ತಹಬದಿಗೆ ತರಲೆಂದೆ ಜಗನ್ಮಾತೆಯ ಲಾವಣ್ಯ, ಲಾಸ್ಯಾದಿ ಮನೋಹರ ಶಾಂತ ನರ್ತನ ತಾಂಡವಕ್ಕೆ ಜತೆ ಕೊಡುವುದಂತೆ – ಹಂತ ಹಂತವಾಗಿ ಆ ರೌದ್ರಾವೇಶವನ್ನು ರಮಿಸಿ ತಣಿಸುತ್ತ, ಮುದ ನೀಡುವ ಅನುರಾಗಪೂರ್ಣ ಸ್ಥಿತಿಯತ್ತ ಶಿವನನ್ನು ನಿಧಾನವಾಗಿ ಕರೆದೊಯ್ಯುತ್ತ . ಹೀಗೆ ಶಾಂತ ನರ್ತನವಾದ ಹೊತ್ತಲ್ಲೆ ಹಿರಣ್ಯ ಗರ್ಭವಾಗಿ ಶಿವನೊಡಲನ್ನು ಸೇರಿದ್ದ ವಿನಾಶಪೂರ್ವ ತೇಜ ಮತ್ತೆ ಅನಾವರಣಗೊಂಡು ಮರುಸೃಷ್ಟಿಯ ಪುನರುತ್ಥಾನಕ್ಕೆ (ಅನುಗ್ರಹ) ಬೀಜ ಮೂಲವಾಗುವ ಮುಖೇನ ಮತ್ತೆ ತ್ರಿಕಾರ್ಯಕ್ಕೆ ಚಾಲನೆ ಕೊಡುವುದಂತೆ ಬ್ರಹ್ಮದ ಚಿತ್ತ.

ಆ ರುದ್ರ ತಾಂಡವದ ಕಲ್ಪನೆಯನ್ನು ಹಿಡಿದಿಡುವ ಯತ್ನ ಈ ಪದ್ಯದ ಮೂಲಕ… 🙂

ಶಿವ ತಾಂಡವ
______________________________

ಗಿರಗಿರಗಿರ, ಗಿರಗಿರಗಿರ, ಗಿರಗಿರಗಿರ, ಗಿರಿಗಿಟ್ಟಲೆ
ತಕಿಟ ತಜಣು, ತಕತಕ ಧಿಂ, ತೊಂ ತನನ ನಾಟ್ಯದಲೆ
ತಾಂಡವೋತ್ಕಟಟ್ಟಹಾಸ, ರುದ್ರಾವೇಷ ಕಂಪನ ಕುಲ
ಬ್ರಹ್ಮಾಂಡ ಲಯ, ಆಲಯಮಯ, ಅದುರಲ್ಲೆ ಸೃಷ್ಟಿ ಸಕಲ||

ಎತ್ತೆಸೆದ ಹೆಜ್ಜೆ ಪಾದದ ಘನ, ಅಪ್ಪಳಿಸೆ ವಿಹ್ವಲ ವಿಶ್ವ
ಅಡಿ ಊರಿಟ್ಟೆಡೆ ಕರಗಿ ಶಿಲೆ, ನೀರಾವಿಯಾಗಿ ಪಂಚಾಶ್ವ
ಪಂಚಭೂತ ಅದಲುಬದಲು, ಹಾಹಾಕಾರ ವಿಸ್ಮಯ ಜಗ
ನೋಡಲೆಂತು ಅದುರಿ ನೆಲೆ, ಅನುಭಾವದೆ ಕರಗೊ ಸೊರಗ ||

ಯಾರಿಗೆಂದು ತೆರೆದ ಕಣ್ಣೊ, ಕುಪಿತನಾಗಿ ತನ್ನ ಮೇಲೆ
ಬಿಟ್ಟನೇನು ತೀಕ್ಷ್ಣ ತೀರ್ಥ, ಸುಡುವ ಜ್ವಾಲೆ ಸ್ವಸೃಷ್ಟಿ ಲೀಲೆ
ಹೊಲಸು ಫಲಸು ಕಲಸಿ ಬಿರುಸು, ಸರ್ವನಾಶ ಸಂತಾನ
ನುಂಗುತೆಲ್ಲ ಮೂಲರೂಪ, ಮರು ನಿರ್ಮಾಣಕೆ ಮತ್ತೆ ಧ್ಯಾನ ||

ಧ್ಯಾನ ಜ್ಞಾನ ಕಾರ್ಯಾ ಕಾರಣ, ಅರಿತವರೆಲ್ಲುಂಟು ಜನ
ಅರೆಬರೆಯಲದದೆ ಅರಿವು, ಪಕ್ವಾಪಕ್ವ ಚರ್ವಿತಾಚರ್ವಣ
ನುಡಿದರಾರೊ ಮರು ಸೃಷ್ಟಿಗೆ, ಮುನ್ನುಡಿಯೆ ಮಹಾಪ್ರಳಯ
ರುದ್ರ ತಾಂಡವ ಅಘೋರ ನೃತ್ಯ, ವಿನಾಶದತ್ತ ಶಿವ ವಿಕ್ರಯ ||

ಪುರುಷ ರೌದ್ರ ಪ್ರಕೃತಿ ಸುಭದ್ರ, ಶಾಂತಿಮತಿಗದೆ ಲಾಸ್ಯ
ಲಾವಣ್ಯದ ಲಯಬದ್ಧ, ತಾಳ ಮೇಳಗಳ ಬಿನ್ನಾಣ ಪರುಷ
ಪ್ರಳಯಾಶೇಷ ಹಿರಣ್ಯಗರ್ಭ, ನೇವರಿಸುತೆ ಶಿವ ಶಾಂತ ರೂಪ
ವಿಶ್ರಮಿಸೆ ಮಡಿಲು, ಸತಿಸುಧೆ ಕಡಲು, ಮರುಸೃಷ್ಟಿಗದೆ ಸಲ್ಲಾಪ ||

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

ಶಿವ, ತಾಂಡವ, ತ್ರಿಕಾರ್ಯ, ಸೃಷ್ಟಿ, ಸ್ಥಿತಿ, ಲಯ, ತಿರೋದಾನ, ಅನುಗ್ರಹ, ನಾಗೇಶ, ಮೈಸೂರು, ನಾಗೇಶಮೈಸೂರು, nagesha, mysore, nageshamysore,

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s