00301. ಈಗೆಲ್ಲಿ, ಪೋಲಿ ಹೈಕಳ ಹೋಲಿ ?

00301. ಈಗೆಲ್ಲಿ, ಪೋಲಿ ಐಕಳ ಹೋಲಿ ?
_____________________________

ಆ ಕಾಲವೊಂದಿತ್ತು, ದಿವ್ಯ ತಾನಾಗಿತ್ತು..

ಹೋಳಿಯ ಜತೆಗೆ ಒದ್ದುಕೊಂಡ ಬಂದ ಬಾಲ್ಯದ ನೆನಪು ಇಣುಕುತ್ತಿದೆ… ಜಾರುತ್ತಿದ್ದ ತುಂಡು ಚಡ್ಡಿ ಮೇಲೆತ್ತಿಕೊಂಡು ಓಡುತ್ತಿದ್ದ ಕೇರಿ ಐಕಳ ಜತೆ, ಮೀಸೆ ಹೊತ್ತ ಪಂಚೆ, ಬನೀನಿನ ಪ್ರಾಯದ ಹುಡುಗರು ಕೈಯಲೊಂದೊಂದು ಮೊರ, ಬಾರಿಸಲೊಂದು ಕೋಲು ಹಿಡಿದು ಬೀದಿ ಬೀದಿಯ ಮನೆ ಮನೆಗೆ ಹೋಗುತ್ತಿದ್ದ ದೃಶ್ಯ.. ‘ಕಾಮಣ್ಣ ಮಕ್ಕಳು, ಕಳ್ಳ ನನ್ನ ಮಕ್ಕಳು..’ ಎಂದು ಕಿರಿಚಿಕೊಂಡೆ ಮನೆಯವರತ್ತ ಕಾಮದಹನದ ಉರುವಲು ಬೇಡುತ್ತಿದ್ದ ಬಂಡಾಟ.. ಹಳೆ ಬಟ್ಟೆ ಬರೆ, ಸೌದೆ, ಬೆರಣಿಯಾದಿಯಾಗಿ ಕೊಟ್ಟದ್ದನ್ನೆಲ್ಲ ತಳ್ಳುಗಾಡಿಯಲ್ಲಿ ಪೇರಿಸಿಕೊಂಡು ನಡೆವುದೊಂದು ಬಗೆಯಾದರೆ, ಕೊಡಲೊಲ್ಲದ ಮನೆ ಮುಂದಿನ ಬೇಲಿ, ಮರದ ಗೇಟು, ಒಣಗಲಿಕ್ಕೆ ಹಾಕಿದ್ದ ಕಟ್ಟಿಗೆಯಾದಿಯಾಗಿ ಸಿಕ್ಕಿದ್ದನ್ನೆಲ್ಲಿ ಎಗರಿಸಿಕೊಂಡು ಓಡಿ ಹೋಗುತ್ತಿದ್ದುದ್ದು ಮತ್ತೊಂದು ಬಗೆ. ಹೀಗೆಲ್ಲ ಏನೇನೊ ಹುನ್ನಾರ ಮಾಡಿ ಸೇರಿಸಿದ್ದೆಲ್ಲಾ ಉರುವಲನ್ನು ಬೀದಿ ತುದಿಯ ಚೌಕದಲ್ಲಿ ಗುಡ್ಡೆ ಹಾಕಿ, ಬೆಂಕಿ ಹಾಕಿ ಸುಡುವ ಸಿದ್ದತೆ ನಡೆಸಿರುವಾಗಲೆ ಮತ್ತೊಂದೆಡೆ, ‘ಪರಮಾತ್ಮನನ್ನು’ ಒಳಗೇರಿಸಿ ಆ ಮತ್ತಿನಲ್ಲೆ ಹಾದಿ ಹೋಕರನ್ನು ತಡೆದು ನಿಲ್ಲಿಸಿ ಕಾಸು ಕೊಡದ ಹೊರತು, ದಾರಿ ಬಿಡುವುದಿಲ್ಲವೆಂದು ಅಡ್ಡ ಹಾಕುತ್ತಿದ್ದುದು ಮಾತ್ರವಲ್ಲದೆ, ಕೊಡಲೊಪ್ಪದವರಿಗೆ ಬಣ್ಣ ಎರಚುವುದಾಗಿ ಹೆದರಿಸಿ ಪುಂಡಾಟಿಕೆ ನಡೆಸುತಿದ್ದುದು ಇನ್ನೊಂದು ಬಗೆಯ ದೃಶ್ಯ ವೈವಿಧ್ಯ. ಕೊನೆಗೆ ಎಲ್ಲವನ್ನು ಸುಟ್ಟುಹಾಕಿ, ಕುಣಿದು ಕುಪ್ಪಳಿಸಿ ಹೋಲಿಯಾಚರಣೆ ಮಾಡುತ್ತಿದ್ದ ದಿನಗಳು ಈಗ ಅಪರೂಪವೆಂದೆ ಹೇಳಬೇಕು. ಈಗೆಲ್ಲ ಬರಿ ಬಣ್ಣದೆರಚಾಟವೆ ಪ್ರಮುಖ ಆಚರಣೆಯಾಗಿಬಿಟ್ಟಿದೆ.

ಆ ಹಳೆಯ ನೆನಪೆಲ್ಲದರ ತುಣುಕುಗಳ ಸಂಕಲಿತ ರೂಪ – ಈ ಪುಟ್ಟ ಕವನ 🙂

ಈಗೆಲ್ಲಿ, ಪೋಲಿ ಹೈಕಳ ಹೋಲಿ ?
_____________________

ಕಾಮಣ್ಣ ಮಕ್ಕಳು
ಕಳ್ಳ ನನ್ನ ಮಕ್ಕಳು
ಸೌದೆ ಬೆಣ್ಣಿ ಕದ್ದದ್ದು ನೆನಪಿದೆಯಾ?
ಮೊರದ ಜತೆ ಕೋಲು
ದಬದಬ ಹೊಡೆ ಡೋಲು
ಮನೆ ಮನೆಗಿಟ್ಟದ್ದು, ದಂಡು ಧಾಳಿಯ? ||

ಕಟ್ಟಿಗೆ, ಬಟ್ಟೆ, ಬೆರಣಿ
ಹಳತೇನೇನಿದೆ ತನ್ನಿ
ಸುಟ್ಟು ಜತೆಗೊಟ್ಟೆ, ಕಾಮನ ದಹನ ;
ಕೊಡದಿರೆ ಬೇಲಿ ಬಾಗಿಲು
ಮನೆ ಮುಂದಿಟ್ಟೆಲ್ಲ ಉರುವಲು
ಕ್ಷಣದಲ್ಲೆ ಮಾಯವಲ್ಲ, ಶಿವನಿಗರ್ಪಣ ! ||

ಬೈದರು ಯಾರಿಗೆ ಲೆಕ್ಕ?
ಪೇರಿಸಿ ಕೂಡುಬೀದಿ ಚೌಕ
ಓಡಾಡುವ ಜನ ತೆರ, ತೆತ್ತರೆ ನಿರಪಾಯ
ಕೊಡದವರಿದ್ದರು ಬಹಳ
ಚೆಲ್ಲಿ ಮೇಲೆ ಬಣ್ಣದ ಕವಳ
ಸುಂಕದವನ ಸುಖ ದುಃಖ, ನ್ಯಾಯಾನ್ಯಾಯ ||

ಪೋಲಿಗಳದೀ ಹೋಲಿ
ಬೀದಿಗೆ ಚೆಲ್ಲಿದ ಓಕುಳಿ
ಹೋಲಿಕಾ ದಹನದ ಜತೆ ಕಾಮನ ಹಬ್ಬ;
ತುಡುಗೊ ಹುಡುಗೊ ಬಿಡಿ
ಒಗ್ಗೂಡಿ ತುಂಟಾಟದ ಕಿಡಿ
ಈಗೆಲ್ಲ ಮಂಗಮಾಯ, ಬರಿ ಬಣ್ಣದ ಜುಬ್ಬಾ ||

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
(Sampada)
(ಈಗೆಲ್ಲಿ, ಪೋಲಿ, ಐಕಳ, ಹೋಲಿ, ನಾಗೇಶ, ಮೈಸೂರು, ನಾಗೇಶಮೈಸೂರು, nagesha, mysore, nageshamysore)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s