00303. ಕೊಟ್ಟು ಪುರುಷ, ಪಡೆದು ಪ್ರಕೃತಿ..

00303. ಕೊಟ್ಟು ಪುರುಷ, ಪಡೆದು ಪ್ರಕೃತಿ..
___________________________

ಕೊಟ್ಟು, ಪುರುಷ, ಪಡೆದು, ಪ್ರಕೃತಿ, ನಾಗೇಶ, ಮೈಸೂರು, ನಾಗೇಶಮೈಸೂರು, ಕವನ, nagesha, mysore, naageshamysore

ಸೃಷ್ಟಿಯ ಅತ್ಯಮೋಘ, ಅದ್ಭುತ ಪರಿಕಲ್ಪನೆಯಲ್ಲಿ ಪ್ರಕೃತಿ-ಪುರುಷದ ಸಂವಾದಿ ಪಾತ್ರ ಆ ಸಮಷ್ಟಿತ ಸ್ಥಿತಿಯ ಅಭಿವ್ಯಕ್ತ, ಮೂರ್ತ ರೂಪವೆನ್ನಬಹುದು. ಅವೆರಡರ ಸರಸ-ಸಲ್ಲಾಪದ ಪರಿಯೆ ಜಗದ ಮೂರ್ತಾಮೂರ್ತ ರೂಪಗಳೆಲ್ಲದರ ಪ್ರಸ್ತಾರ-ವಿಸ್ತಾರಕ್ಕೆ ಕಾರಣಿಭೂತವಾದ ಕಾರಣ, ಅವುಗಳ ಕುರಿತಾದ ಅದಮ್ಯ ಕುತೂಹಲ, ಜೀವಕ್ಕೆ. ಅವೇನು, ಅವುಗಳ ಮೂಲ ಸ್ವರೂಪವೇನು? ಬದುಕಿನ ವಿಡಂಬನೆಯಲ್ಲಿ ಅವುಗಳು ವಹಿಸುವ ಪಾತ್ರವೆಂತದ್ದು? ಅವುಗಳು ಪ್ರತಿನಿಧಿಸುವ ಸತ್ವಗಳ ಪ್ರಕಟಾರ್ಥವೇನು? ಅವೇನು ಕಡಿವಾಣದ ಮೂಲಕ ನಿಯಂತ್ರಣದ ಅಪೇಕ್ಷೆಯನ್ನು ಬಿಂಬಿಸುತ್ತವೆಯೊ, ಅಥವ ಸ್ವೇಚ್ಛೆಯ ಮುಖೇನ ಸ್ವಚ್ಛಂದತೆಯನ್ನು ಸಾರುವ ಸ್ವೈರವಿಹಾರದ ಲಹರಿಗಳೊ? ಹೀಗೆ ನೂರೆಂಟು ಪ್ರಶ್ನೆಗಳನ್ನೆಬ್ಬಿಸಿ ತಳಬುಡ ಸೋಸುವಂತೆ ಪ್ರೇರೇಪಿಸುವ ಅವುಗಳ ನಿಗೂಢ ಸತ್ವ ಒಮ್ಮೊಮ್ಮೆ ಸರಳ ಪ್ರಕ್ಷೇಪದಂತೆ ಕಂಡರೆ, ಮತ್ತೊಮ್ಮೆ ಸಂಕೀರ್ಣ ಒಗಟಿನಂತೆಯೂ ಕಾಣಿಸಿಕೊಳ್ಳುತ್ತದೆ. ಅವುಗಳ ಕುರಿತಾದ ಸ್ಪಷ್ಟ, ಸಂಪೂರ್ಣ, ಪರಿಪೂರ್ಣ ಚಿತ್ರಣ ಸಿಗುವುದು ತುಸು ಕಸರತ್ತಿನ ಮಾತೆ. ಅಷ್ಟೇಕೆ, ಸ್ವಯಂ ಆ ಪ್ರಕೃತಿ ಪುರುಷಗಳಿಗೆ ಎಷ್ಟೊ ಬಾರಿ ಸಂದೇಹ, ಸಂಶಯ, ಅನುಮಾನ ಬಂದುಬಿಡಬಹುದು – ತಮ್ಮದೆ ಅಸ್ತಿತ್ವದ ಬಗೆಗೆ. ಅಂತದ್ದೊಂದು ಸಂಧರ್ಭದಲ್ಲಿ ನಡೆಯುವ ಪ್ರಕೃತಿ-ಪುರುಷಗಳ ನಡುವಿನ ಸಂವಾದ ಈ ಕೆಳಗಿನ ಕವಿತೆ. ಕೊಟ್ಟು ಕಳೆದುಕೊಳ್ಳುವ ಪುರುಷ, ಪಡೆದು ತುಂಬಿಕೊಳ್ಳುವ ಪ್ರಕೃತಿ ಎನ್ನುವುದು ಮೇಲ್ನೋಟದ ಕಾಣ್ಕೆಯಾದರು, ಸೂಕ್ಷ್ಮಸ್ತರದ ಅವಲೋಕನದಲ್ಲಿ ಕೊಟ್ಟು ಪಡೆದುದೆಲ್ಲ ಕಲಸುಮೇಲೋಗರವಾಗಿ, ವಿಭಿನ್ನ ಆಯಾಮಗಳಲ್ಲಿ ಪರ್ಯಾಯ ರೀತಿಯ ಪ್ರಾತಿನಿಧಿಕಗಳಾಗುವ ಗೊಂದಲವೂ ಸಮ್ಮಿಳಿತವಾಗಿ ಅಂತರ್ಗತವಾಗಿದೆ. ಒಟ್ಟಾರೆ ಅನಾದಿ ಕಾಲದ ಈ ಮೂಲ ಸ್ವರೂಪಿ ತತ್ವಗಳ ಕುರಿತಾದ ಕುತೂಹಲ ನಿತ್ಯವೂ ಜೀವಂತ!

ಕೊಟ್ಟು ಪುರುಷ, ಪಡೆದು ಪ್ರಕೃತಿ..
_______________________

ಬೆಳದಿಂಗಳಡಿ
ನೆರಳು ಮರದ ಕುಡಿ
ಎದೆಗೊರಗಿ ಮಾತಾಡಿತ್ತು –
ಮೌನ ಬಿಮ್ಮನೆ ಪ್ರೇಕ್ಷಕನಾಗಿ ||

ಚಿಗುರು ಬೆರಳ ಹೆಣೆದು
ಹಾವ್ತೋಳಿಗೆ ತೋಳ್ಬೆಸೆದು
ಉಲಿದ ಪ್ರಶ್ನೆ ಗಹನ
ಏನೀ ಪುರುಷ ಪ್ರಕೃತಿ ಮರ್ಮ? ||

ಗಹಿಗಹಿಸಿತು ಮೌನ ಗೌಣ
ಗಹನಕು ಚಿಂತನೆ ಕ್ರಮಣ
ಸಖಿ, ಕಳೆದುಕೊಳುವುದೆ ಪುರುಷ
ಅದ ಪಡೆಯುವ ಸುಖಿ ಪ್ರಕೃತಿ ||

ಅರಿಯಲಿಲ್ಲ ಸಾರ; ತಲೆಯೆತ್ತಿ
ಪ್ರಶ್ನೆಯಾದವಳಿಗಿತ್ತ ಮುತ್ತು..
ಜಡಶಕ್ತಿ ನಿಷ್ಕ್ರಿಯ, ನಿಶ್ಚಲ ಕುಲ
ವ್ಯಯಿಸದ ಚಲನೆ, ಸೃಷ್ಟಿಗೆ ಮೂರ್ತ ||

ನೀಡುತಲೆ ಪುರುಷ ವ್ಯಯ
ಪಡೆದ ಪ್ರಕೃತಿ ಅವ್ಯಯ ತ್ಯಾಗಿ
ಕೊಟ್ಟು ಪಡೆದ ಸಮನ್ವಯ ಶಕ್ತಿ
ಮೊತ್ತದಲಿ ಸಮಷ್ಟಿಯೆ ತುಲನೆ ||

ಕೊಟ್ಟ ಹೆಚ್ಚುಗಾರಿಕೆ, ಪಡೆದ ಭಾರ
ತೂಗಿಸಿ, ಸಮತೋಲಿಸಿ ಅವಲಂಬನೆ
ನಿಜದಿ ಎರಡಲ್ಲ – ಪ್ರಕೃತಿ ಪುರುಷ
ಅದ್ವೈತದ ದ್ವೈತರೂಪದ ಮಾಯೆ ||

ವಿಕಸಿಸಲು ಸೃಷ್ಟಿ, ಜೀವನ ದೃಷ್ಟಿ
ವಿದಳನದಿಂದ ಸಮ್ಮಿಲನ ಕೃಷಿ
ಕೊಟ್ಟು ಪಡೆದ ಲೆಕ್ಕಾಚಾರ ಲೌಕಿಕ
ಸಖಿ, ಜಗದ ಚೌಕಾಭಾರವಷ್ಟೆ ಸಂಗತ ||

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
(Sampada)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s