00308. ದೋನಿ ನಾವೆ ಹಂಗಾಮ

00308. ದೋನಿ ನಾವೆ ಹಂಗಾಮ
_______________________

ಅಂತೂ ಇಂತೂ 2015 ವಿಶ್ವಕಪ್ ಕ್ರಿಕೆಟ್ಟಿನ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದಾಗಿದೆ. ಈಗಾಗಲೆ ಉದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ನ್ಯೂಜಿಲೆಂಡ್, ಸಮಬಲ ಪ್ರದರ್ಶಿಸಿದ ಸೌತ್ ಆಫ್ರಿಕ ತಂಡವನ್ನು ಮಣಿಸಿ ಫೈನಲ್ ತಲುಪಿ ತನ್ನ ಎದುರಾಳಿ ಯಾರಾಗಬಹುದೆಂಬ ಕುತೂಹಲದಲ್ಲಿ ಕಾಯುತ್ತಿದೆ. ಅದರ ನಿರ್ಧಾರವಾಗಲಿಕ್ಕೆ ಮಿಕ್ಕಿರುವುದು ಇನ್ನೊಂದೆ ಒಂದು ದಿವಸ; ನಾಳಿನ ಭಾರತ – ಆಸ್ಟ್ರೇಲಿಯ ಸೆಮೀಫೈನಲ್ಲಿನಲ್ಲಿ ಗೆದ್ದವರು ಫೈನಲ್ಲಿಗೆ ನಡೆಯಲಿದ್ದಾರೆ. ಮಾಧ್ಯಮಗಳು, ಜನ ಸಾಮಾನ್ಯರು, ಬೆಟ್ಟಿಂಗಿನ ರಾಜರು – ಎಲ್ಲರ ನಡುವೆಯ ಬಿಸಿ ಚರ್ಚೆಯ ಕುತೂಹಲದ ವಿಷಯ – ಏನಾಗಲಿದೆ ಈ ಮ್ಯಾಚಿನ ಫಲಿತಾಂಶ ಎಂದು.

ವಿಶ್ವಕಪ್ಪಿನ ಇದುವರೆಗಿನ ಫಲಿತಾಂಶಗಳನ್ನು ನೋಡಿದರೆ – ಭಾರತದ ಪ್ರದರ್ಶನ ನಿರೀಕ್ಷೆಗೂ ಮೀರಿದ ಮಟ್ಟದ್ದು ಎಂದೆ ಹೇಳಬೇಕು. ಅದೇನು ಇದ್ದಕ್ಕಿದ್ದಂತೆ ಒಗ್ಗಟ್ಟಿನ ತಂಡವಾಗಿ ಒಂದುಗೂಡಿದ ಕಾರಣವೊ, ಮೂರ್ನಾಲ್ಕು ತಿಂಗಳಿಂದ ಆಸ್ಟೇಲಿಯಾವನ್ನೆ ಮನೆ ಮಾಡಿಕೊಂಡ ಕಾರಣ ಉಂಟಾದ ‘ಸಾಮೀಪ್ಯದ ಆಪ್ತತೆ, ಆಪ್ಯಾಯತೆ’ ಯ ಕಾರಣವೊ, ಅಥವಾ ರವಿಶಾಸ್ತ್ರಿಯಂತಹ ಚಾಲೂಕಿನ ಮೆದುಳುಗಳು ಹಿನ್ನಲೆಯಲ್ಲಿ ಬೆನ್ನೆಲುಬಾಗಿ ನಿಂತ ಸಹಕಾರಕ್ಕೊ, ಟೆಸ್ಟಿನಿಂದ ನಿವೃತ್ತಿಯಾಗಿ ಏಕದಿನ ಪಂದ್ಯಕ್ಕೆ ಪೂರ ಗಮನ ಹರಿಸತೊಡಗಿದ ನಾಯಕ ದೋನಿಯ ಅನುಭವ ಮತ್ತು ಚಾತುರ್ಯದ ಕಾರಣಕ್ಕೊ – ಎಲ್ಲಾ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನದ ಜೊತೆಗೆ, ಸದ್ದುಗದ್ದಲವಿಲ್ಲದ ‘ಸೈಲೆಂಟ್ ಪರ್ಫಾರ್ಮೆನ್ಸ್’ ಕೂಡ ಎದ್ದುಕಾಣುತ್ತಿದೆ, ಹಲವಾರು ಅಂಕಿ ಅಂಶಗಳಲ್ಲಿ. ಎಲ್ಲಾ ಪಂದ್ಯಗಳಲ್ಲೂ ಎದುರಾಳಿಯನ್ನು ಪೂರ್ತಿ ಅಲೌಟ್ ಮಾಡಿದ್ದಾಗಲಿ, ವೇಗದ ಮತ್ತು ಸ್ಪಿನ್ನಿನ ಎರಡೂ ವಿಭಾಗದಲ್ಲಿಯು ಮಿಂಚತೊಡಗಿದ್ದಾಗಲಿ, ಪ್ರತಿ ಪಂದ್ಯದಲ್ಲೂ ಒಬ್ಬರಲ್ಲಾ ಒಬ್ಬರು ದಾಂಡಿಗರು ಬ್ಯಾಟ್ ಬೀಸಿ ರನ್ನು ಪೇರಿಸಿದ್ದಾಗಲಿ, ಉತ್ತಮ ಫೀಲ್ಡಿಂಗಿನಲ್ಲಾಗಲಿ – ಎದ್ದು ಕಾಣುವ ಕುರುಹುಗಳು ಇಡಿ ತಂಡ ಒಗ್ಗೂಡಿದ ಮನಸಿನಿಂದ ಆಡುತ್ತಿವೆಯೆನ್ನುವುದಕ್ಕೆ ನಿದರ್ಶನ. ಒಟ್ಟಾರೆ ‘ದೋನಿಯ ನಾವೆ (ದೋಣಿ)ಯ ಹಂಗಾಮ (ಸಂಚಲನೆ)’ ಇನ್ನು ಧೂಳೆಬ್ಬಿಸಿಕೊಂಡು ಸದ್ದು ಮಾಡುತ್ತಲೆ ಮುನ್ನಡೆದಿದೆ ಇಲ್ಲಿಯತನಕ.

ಮತ್ತೊಂದು ಕುತೂಹಲಕರ ವಿಷಯವೆಂದರೆ, ಹಿಂದಿನ ವಿಶ್ವ ಕಪ್ ಗಳಿಗೆ ಹೋಲಿಸಿದರೆ ಆಸ್ಟ್ರೇಲಿಯ ಅಷ್ಟೇನು ಸೋಲಿಸಲೆ ಆಗದ ತಂಡದಂತೆ ಸಡ್ಡು ಹೊಡೆದು ನಿಂತಿಲ್ಲ – ಇಲ್ಲಿಯವರೆಗೆ. ಹೀಗಾಗಿಯೆ ಹೆಚ್ಚು ಕಡಿಮೆ ಎಲ್ಲರು 50:50 ಚಾನ್ಸ್ ಇದೆಯೆನ್ನುವ ಮಾತಾಡುತ್ತಿದ್ದಾರೆ. ಫೈನಲ್ಲಿನಲ್ಲಿ ಕೂಡ ಎಷ್ಟೆ ಬಲಯುತ ತಂಡವಾದರು ಆ ದಿನ ನಮ್ಮದಾಗಿದ್ದರೆ ಒಂದು ಚಾನ್ಸ್ ಇದ್ದೆ ಇರುತ್ತದೆ. ‘ದೋನಿ ನಾವೆ ಹಂಗಾಮ’ ಇದುವರೆವಿಗು ನಡೆದಂತೆ ಮುಂದಿನೆರಡು ಮ್ಯಾಚುಗಳಲ್ಲಿಯು ನಡೆದು ತನ್ನ ಜಾದೂ ತೋರಿದರೆ, ಕ್ರಿಕೆಟ್ ಇತಿಹಾಸಕ್ಕೆ ಮತ್ತೊಂದು ಬಣ್ಣದ ಗರಿ ಸೇರಿಸುವ ಅವಕಾಶ. ಅದು ಸಾಕಾರವಾಗುವುದೊ ಇಲ್ಲವೊ ಎನ್ನಲು ಇನ್ನು ಕೆಲವು ದಿನ ಕಾದು ನೋಡಬೇಕಾದರು, ಇಲ್ಲಿಯವರೆಗಿನ ಸಾಧನೆಯನ್ನು ಕಡೆಗಣಿಸದೆ ‘ಶಹಬಾಷ್’ ಎನ್ನುವುದರಲ್ಲಿ ತಪ್ಪೇನೂ ಇಲ್ಲ. ಇಲ್ಲಿಯವರೆಗು ದೇಶವೆ ತಲೆಯೆತ್ತಿ ಹೆಮ್ಮೆಯಿಂದ ನಿಲ್ಲುವಂತೆ ಸಾಗಿದ ‘ದೋನಿ ನಾವೆ ಹಂಗಾಮ’ ಇನ್ನೆರಡು ಮ್ಯಾಚುಗಳಲ್ಲಿಯು ತನ್ನ ಜಾದು ತೋರಿಸಲೆಂಬ ಹಾರೈಕೆ, ಆಶಯದೊಂದಿಗೆ ಈ ಪುಟ್ಟ ಕವನ – ‘ದೋನಿ ನಾವೆ ಹಂಗಾಮ’. ಹಾಗೆಯೆ, ಒಂದು ವೇಳೆ ಯಶಸ್ಸು ನಮ್ಮದಾಗದಿದ್ದರು, ಚೆನ್ನಾಗಿ ಸಾಮರ್ಥ್ಯಕ್ಕೆ ತಕ್ಕ ಆಟವಾಡಿ ಸೋಲಿನಲ್ಲೂ ಗೌರವವುಳಿಸಿದರೆ ಅದನ್ನು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಿ ‘ಭೇಷ್’ ಎನ್ನುವ ದೊಡ್ಡತನ ನಮ್ಮದಿರಲಿ.

ಅಲ್ ದ ಬೆಸ್ಟ್ ‘ಇಂಡಿಯಾ’ ಕಮ್ ‘ದೋನಿ & ಕೊ!’

ದೋನಿ ನಾವೆ ಹಂಗಾಮ
_______________________

ಕೋಹ್ಲಿ, ರಹಾನೆ, ಧವನ್
ಜಡೆಜಾ, ರೈನಾ, ಅಶ್ವಿನ್
ರೋಹಿತ್-ಶಮಿ
ಮೋಹಿತ್-ಉಮಿ
ದೋನಿ ನಾವೆ ಹಂಗಾಮ ||

ಗೆಲ್ಲುವರಷ್ಟೆ ಸಲ್ಲುವರೊ
ಸಲ್ಲುವರ ಸಲುವಾಗಿ ತೇರೊ
ಗೆದ್ದು ಬಂದರುತ್ಸವ ಜೋರೊ
ಸೋತ ಪಾಡು ಕೇಳುವರಾರೊ
ದೋನಿ ನಾವೆ ಹಂಗಾಮ ||

ಬೌಂಡರಿ ಸಿಕ್ಸರು ಸಿಂಗಲ್ಲು
ಕ್ಯಾಮರ ನೋಡೆಲ್ಲಾ ಆಂಗಲ್ಲು
ಕುರುಡು ವಿಕೆಟ್ಟಿಗು ಕಣ್ಕಟ್ಟು
ನೋಡಡಿಗಡಿಗಿರೊ ಎಡವಟ್ಟು
ದೋನಿ ನಾವೆ ಹಂಗಾಮ ||

ಶೀತಲವಿದ್ದರೂ ನಾಯಕತ್ವ
ಒತ್ತಡದಲಿದೆಯೆ ಮಹತ್ವ ?
ಬೇಯುತ ನಶಿಸೊ ಜೀವಸತ್ವ
ಬೆಂದೊತ್ತಡ ಕುಸಿದ ಗುರುತ್ವ ?
ದೋನಿ ನಾವೆ ಹಂಗಾಮ ||

ಬಾಜಿಯೇನು ಕಮ್ಮಿಯದೆ
ಖಾಜಿ ನ್ಯಾಯ ಗೆಲ್ಲುವುದೆ ?
ಬೇಕು ಅರಿ ಭಂಟರ ಎಂಟೆದೆ
ಕೊನೆ ಹಂತದಲಂತು ಕುಂಟದೆ
ದೋನಿ ನಾವೆ ಹಂಗಾಮ ||

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha MN
WeBlog site: nageshamysore.wordpress.com

ದೋನಿ, ನಾವೆ, ಹಂಗಾಮ, ವಿಶ್ವಕಪ್, ವಿಶ್ವ, ಕಪ್, ವರ್ಲ್ಡ್ ಕಪ್, ನಾಗೇಶ, ನಾಗೇಶಮೈಸೂರು, ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s