00309. ಟಿಟ್-ಬಿಟ್ಸ್ ! (ಕಚ’ಗುಳಿಗೆ’ – 07)

00309. ಟಿಟ್-ಬಿಟ್ಸ್ ! (ಕಚ’ಗುಳಿಗೆ’ – 07)
_____________________________

ಆಗಿಗೊಮ್ಮೆ ಬರೆದ ತುಣುಕುಗಳ ಸಂಗಮ ಈ ಹನ್ನೆರಡು ಹನಿಗಳು. ಇವುಗಳಲ್ಲಿ ಯಾವುದಾದರೂ ಕೆಲವನ್ನು ಆಗಲೆ ಹಿಂದಿನ ಪ್ರಕಟಣೆಯಲ್ಲಿ ಸೇರಿಸಿದ್ದೇನೊ, ಏನೊ ಸರಿಯಾಗಿ ನೆನಪಿಲ್ಲವಾದರು, ಬಹುತೇಕ ಪ್ರಕಟಿಸದವುಗಳೆ ಆಗಿವೆ. ವಾರದ ಕೊನೆಯ ಸೋಮಾರಿ ನಿದ್ದೆಯಿಂದೆದ್ದ ಹೊತ್ತಲಿ ತುಸು ಪದ ಲಾಸ್ಯದಲಿ ತೊಡಗಿಸುವ ಕಸರತ್ತು ಮಾಡಬಹುದೆನ್ನುವ ಆಶಯದಿಂದ ಇಲ್ಲಿ ಸೇರಿಸುತ್ತಿದ್ದೇನೆ. ಟಿಟ್ ಬಿಟ್ಸ್ ತಿಂದ ಹಾಗೆ ಒಂದೊಂದನ್ನೆ ಚಪ್ಪರಿಸಿ ಸವಿದರೆ ಸ್ವಾದ ಮುದ ಕೊಡಬಹುದು – ಸವಿದು ನೋಡಿ 🙂

01. ಉರುಳು
______________

ಮಾಡಿದ ಪಾಪ
ಆಗದಂತೆ
ಕುತ್ತಿಗೆಗೆ ‘ಉರುಳು’
ದೇಗುಲದ ಸುತ್ತ
ಹಾಕುತ್ತಾರೆ
ಒದ್ದೆಯಲೆ ‘ಉರುಳು’ !

02. ಪಾಪ
___________

ಈಗಂತೂ
ಎಲ್ಲೆಡೆ ಬರಿ
‘ಪಾಪ’ ಮಾಡುವ ಜನ;
ಅದಕ್ಕೆ
ನಮ್ಮ ಜನಸಂಖ್ಯೆ
ದಶಕಗಳಲೆ ದ್ವಿಗುಣ !

03. ಮನಸಾ
________________

ಬೇಡದಿರೆ
ವಿರಸ,
ವೈಮನಸ –
ಸ್ವೀಕರಿಸಬೇಕು
ಮನಸಾ,
ಸಂಗಾತಿಯ
ಮನಸ !

04. ಸಂಗಾತಿ ಸಂಗತಿ
________________

ಸಂಗಾತಿ
ಇನ್ನೊಬ್ಬಳಿರುವ
ಸಂಗತಿ,
ಸಂಗಾತಿಗೆ
ಗೊತ್ತಾಗಬಾರದ
ಸಂಗತಿ !

05. ಅತ್ತರು
______________

ಇನಿಯನೆದೆಗೊರಗಿ
ನಲ್ಲೆ ಗಳಗಳ ‘ಅತ್ತರು’,
ಜತೆಗವನ ಅಳಿಸಿದ್ದು
ಅವಳು ಹಚ್ಚಿದ್ದ
ಗಮಗಮ ‘ಅತ್ತರು’ !

06. ಸೂರ್ಯ-ಚಂದ್ರ-ಭೂಮಿ
__________________

ಸೂರ್ಯ
ಜಗದ ಮೊದಲ
ಮೈಕ್ರೋವೇವ್ ಓವನ್ ;
ಚಂದ್ರ
ಮೊದಲ ರೆಫ್ರಿಜಿರೇಟರು..
ಭೂಮಿ ?
ಬಡಪಾಯಿ ಗ್ರಾಹಕ !

07. ಕುತೂಹಲ
____________

ತುಟಿಗಳ ಬದಲು
ಹಕ್ಕಿ ಕೊಕ್ಕಿರೆ ಜನ,
ಹೇಗಿರುತ್ತಿತ್ತೊ –
ಪ್ರೇಮಿಗಳ ಚುಂಬನ ?

08. ಹೆರಿಗೆ
___________

ಹೊಸತ
ಬರೆಯಲೇನಾದರು
ಹೆಣಗುವ ಕವಿಗೆ
ಅಲ್ಲವೆ
ದಿನ ನಿತ್ಯ
ಚೊಚ್ಚಿಲ ಹೆರಿಗೆ ?

09. ಗೊಣಗೊಣ
_________________

ನಿತ್ಯ
ಬಸುರಿ-ಬಾಣಂತಿ
ಕವಿ ಮನ
ಬೇಕಿತ್ತೆ ಕಲ್ಯಾಣ ?
ಮನೆಯಾಕೆ ಗೊಣಗೊಣ !

10. ಪ್ರಸೂತಿ ಪಟು
______________

ಯಾರಿಲ್ಲ
ಕವಿಗಿಂತ ಚತುರ
ಪ್ರಸೂತಿ ಪಟು
ಹಗಲಿರುಳು
ಪ್ರಸವ ವೇದನೆ
ಬರೆವ ಜಿಗುಟು !

11. ಮಧು ಚಂದ್ರ ?
_______________

ಕವಿಯ ಜತೆ
ಮನೋಹರ
ಮೊದಲ ಮಧುಚಂದ್ರ
ಬರಿ ಕನಸು..
ನಿರ್ಲಜ್ಜ ಕವಿತೆ ಜತೆ
ಲಲ್ಲೆಗೀಗಾಗಲೆ
ಮನೆ ತುಂಬಾ
ಕಾವ್ಯದ ಕೂಸು !

12. ಮಾತು-ಮಾತೆ
____________

ಹೆತ್ತವಳ ಮಾತೆ
ವೇದ-ವಾಕ್ಯ
ಅನಿಸಿತ್ತೆ ..
ಕಟ್ಟಿಕೊಂಡವಳ ‘ಮಾತೆ’
ಆಗುವ ತನಕ
ನಮ್ಮತ್ತೆ !

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

ಹನಿಗವನ, ಟಿಟ್ ಬಿಟ್ಸ್, ಹನಿ, ಚುಟುಕ, ನಾಗೇಶ, ಮೈಸೂರು, ನಾಗೇಶಮೈಸೂರು, nagesha, mysore, nageshamysore

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s