00310. ಶ್ರೀ ರಾಮನಾಗುವ ಸಂಕಟ

00310. ಶ್ರೀ ರಾಮನಾಗುವ ಸಂಕಟ
________________________

ಶ್ರೀರಾಮ, ರಾಮ, ನವಮಿ, ಸಂಕಟ, ನಾಗೇಶ, ಮೈಸೂರು, ನಾಗೇಶಮೈಸೂರು, nagesha, mysore, nageshamysore

ಶ್ರೀ ರಾಮನವಮಿಯ ಸಂಧರ್ಭದಲ್ಲಿ ಶ್ರೀ ರಾಮ ನಾಮಾಮೃತವನ್ನು ಪಾನಕ, ನೀರು ಮಜ್ಜಿಗೆಗಳ ಸೇವನೆಯ ಮೂಲಕ ಆಚರಿಸುವ ಸಂಭ್ರಮ ನಮಗೆ ಹೊಸದೇನಲ್ಲ. ಬೇಸಿಗೆಯ ಬಿರುಸು ಬಿಚ್ಚಿಕೊಳ್ಳುವ ಹೊತ್ತಿಗೆ ಈ ಪಾನಕ-ನೀರು ಮಜ್ಜಿಗೆಯ ತಂಪುಗಳು ನಿಜಕ್ಕೂ ಆಹ್ಲಾದಕರ ಅನುಭೂತಿ ತರುವ ಪೇಯಗಳು. ಆದರೆ ಬರಿ ಹೊಟ್ಟೆ ತಂಪಾದರೆ ಸಾಲದು, ಆಧ್ಯಾತ್ಮಿಕ ಹಸಿವಿಗೆ ತಂಪೆರೆವ ದೇವನ್ನಾಮ ಸ್ಮರಣೆಯೂ ಆಗಬೇಕಲ್ಲ ? ಶ್ರೀರಾಮ ನವಮಿಗೆ ಅವನ ಸ್ಮರಣೆಗಿಂತ ಮಿಗಿಲಾದದ್ದು ಏನಿದ್ದೀತು ಅನಿಸಿ ರಾಮನ ಬಾಲ್ಯದ, ಮದುವೆಯಾಗುವವರೆಗಿನ ರಾಮ ಕಥಾ ಸಾರವನ್ನು ಈ ಕೆಳಗಿನ ಪದ್ಯಗಳಲ್ಲಿ ಬಿಡಿಸಿಡಲು ಯತ್ನಿಸಿದ್ದೇನೆ. ‘ಶ್ರೀ ರಾಮನಾಗಿ ಬದುಕುವ ಸಂಕಟ’ ಅನ್ನುವ ತಲೆ ಬರಹದೊಂದಿಗೆ ಆರಂಭಿಸಿದ ಈ ‘ಫ್ರೀಸ್ಟೈಲ್ ರಾಮಾಯಣ’ ಕೊನೆಯತನಕ ಹೊರಟರೆ ತುಂಬಾ ಉದ್ದದ ಸರಕಾಗುವ ಕಾರಣ ಬರಿ ಹದಿನೈದು ಪಂಕ್ತಿಗೆ ನಿಲ್ಲಿಸಿದ್ದೇನೆ. ದೇವರ ಸ್ಮರಣೆಯ ನೆಪಕ್ಕೆ ಉದ್ದ ಎಷ್ಟಾದರು ಸಾಲದು, ಬರಿ ಅಷ್ಟಿಷ್ಟಿದ್ದರೂ ಸಾಕು – ಎಲ್ಲವು ಮನಸಿನಂತೆ ಮಹಾದೇವ ಅನ್ನುವ ಲೆಕ್ಕ ಅಲ್ಲವೆ ? ಪಂಕ್ತಿಯ ವ್ಯಾಖ್ಯಾನ, ವಿವರಣೆಗೆ ಸಮಯದ ಅಭಾವ – ಮುಂದೆಂದಾದರು ಮತ್ತೆ ಪ್ರಯತ್ನಿಸುವೆ. ಹಿನ್ನಲೆ / ಮುನ್ನುಡಿಯ ರೂಪದ ಮೂರು ಪದ್ಯಗಳನ್ನು ಜತೆಗೆ ಸೇರಿಸಿದ್ದೇನೆ 🙂

ಹಿನ್ನಲೆ / ಮುನ್ನುಡಿ
____________________________________________

ಮೂರ್ಖತೆಯ ತೆಗುಳು, ದ್ವಾರಪಾಲರ ಅಹಂಕಾರಗಳು
ನೆಮ್ಮದಿಯ ವೈಕುಂಠ, ಕಿಚ್ಚನ್ಹಚ್ಚಿಸಿ ಮಹಾಲಕ್ಷ್ಮಿಗೆ ದಿಗಿಲು
ಸನಕಾದಿ ಮುನಿಗಳ ಶಾಪ, ಭೂಲೋಕದ ಜನ್ಮಪರಿತಾಪ
ಸೇವೆಯಾಳುಗಳ ವತಿಯಿಂದ, ಶ್ರೀ ಹರಿಗೂ ಬಿಡದ ಕೂಪ || 01 ||

ಸೇವಕರ ತಪ್ಪಿಗೆ ಮಾಲೀಕನೆ, ಹೊತ್ತಂತೆ ಹೊಣೆ ಯಾತನೆ
ಭೂಭಾರವಿಳಿಸೆ ಅವತಾರವನೆತ್ತೊ, ಅಪೂರ್ವ ಸಂಘಟನೆ
ದುಷ್ಟರಾದರು ಸರಿ ದೂರವಿರಲಾರೆವೆಂದಾ ಜಯ ವಿಜಯ
ಅವರ ಕರ್ಮಕೆ ಭೂಲೋಕದಲಿ ಜನಿಸಿದ ಅದ್ಬುತ ವಿಷಯ || 02 ||

ಸ್ಥಿತಿಕರ್ತನ ತಪ್ಪೇನಿಲ್ಲಿ, ಕರುಣೆಯ ಕ್ಷೀರಸಾಗರ ಹೊನಲು
ಭಕ್ತರಂತೆ ಕೈಂಕರ್ಯದವರಿಗು ಹೃದಯವೈಶಾಲ್ಯ ಕಡಲು
ಮುಕ್ತರನಾಗಿಸಲವರನೆ ಪಡಬಾರದ ಪಾಡು ಭೂಲೋಕದೆ
ಭುವಿ ಮನುಜರ ಹಾಗೆ ನೋವು,ಬವಣೆ,ವಿಷಾದ,ಬೇಸರದೆ || 03 ||

ಶ್ರೀ ರಾಮನಾಗುವ ಸಂಕಟ
_____________________________________________

ದುಃಖವೆ ಬದುಕಾಯ್ತೆ ಸೀತೆ, ಶ್ರೀ ರಾಮನದೇನು ಕಡಿಮೆ ಮಾತೆ?
ರಾಮನಾಗಿ ಬದುಕುವ ಸಂಕಟ, ಮರ್ಯಾದಾಪುರುಷೋತ್ತಮ ವ್ಯಥೆ || 01 ||

ಏಕ ಪತ್ನಿ ವ್ರತಸ್ತನ ಘನತೆ, ಸತಿ ದೂರವಿದ್ದರೂ ವಿರಹವಷ್ಟೆ ಜತೆ
ಹಿರಿಯ ಮಗನಾಗಿ ಹೊಣೆ ಹೆಗಲೇರಿತ್ತೆ, ರಾಜ ಮುಕುಟವೆ ಮಿತ್ತೆ? || 02 ||

ದಶರಥನಾಗುತ ಮುಪ್ಪು, ಮಕ್ಕಳಿಲ್ಲದ ಸಂಕಟ ಮನಸಿಗೆ ಹೆಪ್ಪು
ಯಜ್ಞಯಾಗದ ಫಲವೆ ತಂದಿತ್ತು, ಹಿರಿ ಮಗ ರಾಮನಾದ ತೀರ್ಪು || 03 ||

ತಪ ಜಪ ಯೋಗಿ ವಿಶ್ವಾಮಿತ್ರ, ಹನ್ನೆರಡರ ಬಾಲ ಸಹಪಾತ್ರ
ಯಜ್ಞ ಭಂಜಕರ ಸೊಕ್ಕಡಗಿಸಲೆ, ರಕ್ಕಸರ ಕಾಯುವ ನಿಮಂತ್ರ || 04 ||

ಸರಿ ಕಾದವನ ರೋಷಾವೇಷ, ದಮನಕೆ ಯಜ್ಞ ನಿರ್ವಿಘ್ನ ಹರ್ಷ
ಮುನಿವರ ಒಯ್ಯಲವರ ಮಿಥಿಲೆ, ಹಾದಿಯಹಲ್ಯೆ ಶಾಪನಾಶ || 05 ||

ಕಲ್ಲಾದವಳ ಪಾಡೆನೊ ಮುಕ್ತಿ, ಗೌತಮನ ಶಾಪದ ಸಮಾಪ್ತಿ
ಅವರಿವರುದ್ದಾರದ ಆಸಕ್ತಿ, ಮಾಡಲಿಲ್ಲೇಕೊ ಸ್ವಾರ್ಥಕೆ ಸ್ವಸ್ತಿ || 06 ||

ಮಿಥಿಲೆಗೆ ರಾಮ ಬರದೆ, ಶಿವಧನುಸನು ಸೀತಾ ಸ್ವಯಂವರದೆ
ಮುರಿದೆತ್ತದಿರೆ ಪ್ರಕರಣ, ವಿಶ್ವಾಮಿತ್ರನೆ ರಾಮಾಯಣ ಕಾರಣ || 07 ||

ಸ್ವಯಂವರಕೊಯ್ದವನವನು, ಬಿಲ್ಮುರಿಸಿ ಸೀತೆಯ ಕಟ್ಟಿದವನು
ನಿಮಿತ್ತವಾಗಿತ್ತೆ ಮಹರ್ಷಿ ಪಾತ್ರ, ಶ್ರೀಹರಿ-ಲಕ್ಷ್ಮಿಯ ಭೂಸಾಂಗತ್ಯ || 08 ||

ಹೆದೆಯೇರದೆ ಮುರಿದಾ ಬಿಲ್ಲು, ಜಾನಕಿಯ ವರಮಾಲೆ ಕೊರಳು
ಸೇರಿತಲ್ಲ ಅಪೂರ್ವಜೋಡಿ, ಭೂಲೋಕಕಿಳಿದ ವೈಕುಂಠಗಾರುಡಿ || 09 ||

ಸಂಭ್ರಮಕೆಣೆಯುಂಟೆ ಅಗಣಿತ, ವಿವಾಹಮಹೋತ್ಸವಕೆ ಸ್ವಾಗತ
ಅದ್ದೂರಿಯ ಸೀತಾಕಲ್ಯಾಣ, ಅಯೋಧ್ಯೆಯೆಲ್ಲ ಮಿಥಿಲಾ ಠಿಕಾಣ || 10 ||

ವೈಭವ ಕೇಳರಿಯದ ಮಾತ, ನ ಭೂತೋ ನ ಭವಿಷ್ಯದ ಚರಿತ
ರಾಜಕುವರಿ ವರಿಸಿದ ಶ್ರೀಕರ, ಅಗ್ನಿಸಾಕ್ಷಿ ಕಾಪಿಡುವ ಅಧಿಕಾರ || 11 ||

ಸಪ್ತಪದಿ ದಾಟಿದ ಸೀತೆ, ಶ್ರೀ ರಾಮನ ಜತೆಯಾದಳೆ ಪುನೀತೆ
ಹಿಗ್ಗು ಕುಗ್ಗಲೆಲ್ಲ ಜತೆಯಿರುವೆ, ಎಂದವರಿಗಿತ್ತೆ ಭವಿತದ ಅರಿವೆ? || 12 ||

ಸಂತಸ ಗಳಿಗೆಗಳೆ ಕ್ಷಣಿಕ, ಅವುಗಳಲೊಂದೀ ಮದುವೆಯ ಲೆಕ್ಕ
ಪಾಡುಪಟ್ಟ ಬಾಳಿನ ನಡುವೆ, ಸತಿಪತಿಗಳು ಪಡೆದದ್ದು ಕೊಂಚವೆ || 13 ||

ಸೋದರರಿಗು ಜತೆಯಲೆ ಮದುವೆ, ಮಾಡಿ ಮುಗಿಸಿ ಒಂದಾದುವೆ
ಲಕ್ಷ್ಮಣ ಶತೃಘ್ನ ಭರತ ಚತುರ್ಭುಜ, ಊರ್ಮಿಳಾದಿ ಬಳಗ ಸಹಜ || 14 ||

ಜಕ್ಕವಕ್ಕಿ ಜೋಡಿಯ ತೆರದೆ, ವಿಹರಿಸಿ ನವ ವಧುವರ ಕೂಡದೆ
ಹಾರಡುವ ಸಂಭ್ರಮ ಸುನೀತ, ನೋಡುತೆ ಮಹರಾಜನು ತೃಪ್ತ || 15 ||

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

Sriiraama, raama, navami, saMkaTa, naagESa, maisuuru, naagESamaisuuru,

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s