00311. ಗೊರಕೆ ಪುರಾಣ

00311. ಗೊರಕೆ ಪುರಾಣ
____________________

ಈ ಗೊರಕೆ ಪುರಾಣ ಬರೆಯಲ್ಹೊರಟರೆ ಅದೇನು ಮೊದಲನೆಯದೂ ಅಲ್ಲ, ಕೊನೆಯದೂ ಅಲ್ಲ. ಹೊಗಳಿದರಾಗಲಿ ತೆಗಳಿದರಾಗಲಿ ಲೆಕ್ಕಿಸದೆ ತನ್ನ ಪಾಡಿಗೆ ತಾನು ತನ್ನ ಕಾರ್ಯಭಾರ ನಿರ್ವಹಿಸುವ ಅದರ ನಿರ್ಲಿಪ್ತ ಪರಿಗೆ ಉರಿದು ಬಿದ್ದಷ್ಟೆ ಸಹಜವಾಗಿ ಭೇಷ್ ಎಂದವರು ಅನೇಕ. ಹೀಗಾಗಿ ಅದರ ವಿಶ್ವರೂಪವನ್ನು ದೂಷಿಸಿ, ಖಂಡಿಸುವ ಬದಲು ಅದರ ಆರೋಹಣಾವರೋಹಣಗಳ ನಯನ ಮನೋಹರ, ಕರ್ಣಾನಂದಕರ ಅದ್ಭುತವನ್ನು ಮನಸಾರೆ ಆಸ್ವಾದಿಸಲು ಕಲಿತರೆ ಅದರೊಂದಿಗಿನ ಸಹಜೀವನ ಸುಲಭ ಸಾಧ್ಯವಾದೀತು. ಅದರಲ್ಲು ಒಟ್ಟಾಗಿ ಜೀವಿಸುವ ಸಾಮಾಜಿಕ ವಾತಾವರಣದಲ್ಲಿ ಗೊರಕೆ ಶೂರರು ಒಬ್ಬರಿದ್ದರು ಕಥೆ ಮುಗಿದಂತೆಯೆ ಲೆಕ್ಕ ; ಮಿಕ್ಕವರು ಬೇಕಿರಲಿ ಬಿಡಲಿ, ನೇರವಾಗಿಯೊ – ಪರೋಕ್ಷವಾಗಿಯೊ, ಲಘುವಾಗಿಯೊ – ತೀವ್ರವಾಗಿಯೊ ಅದರ ಬವಣೆ ಅನುಭವಿಸಿ ತೀರಲೆಬೇಕು. ಅದನ್ನು ತಾಳಲಾಗದ ಸೂಕ್ಷ್ಮಮತಿಗಳಾದರಂತು, ಏಗಬೇಕಾದ ಪರಿಸ್ಥಿತಿ ಇನ್ನೂ ವಿಷಮ. ಪರದೇಶಗಳಲ್ಲಿ ಸಂಗಾತಿ ವಿಪರೀತ ಗೊರಕೆ ಹೊಡೆದು ನಿದ್ರೆಗೆ ಭಂಗ ತರುವ ಕಾರಣವೊಡ್ಡಿ ವಿಚ್ಛೇದನ ಬಯಸಿದವರೂ ಉಂಟು..!

ಈ ಗೊರಕೆಯ ಅವತಾರವನ್ನು ವರ್ಣಿಸುವ ಬಗೆಯಂತು ಅಪರಿಮಿತ. ಸದ್ದು ಮಾಡುವ ಯಾವುದೆ ಸರಕಾದರೂ ಸರಿ ಅದು ಗೊರಕೆಯ ಸಂವಾದಿಯಾಗಿ ಬಳಕೆಯಾಗಬಹುದು. ಯಾವುದೆ ಬಗೆಯ ಕಾಡುವ ಅಸಹನೆಯಾಗಲಿ ಅದು ಗೊರಕೆಯನ್ನು ವರ್ಣಿಸುವ ಪಕ್ಕಾ ಸಲಕರಣೆಯಾಗಿಬಿಡಬಹುದು. ಒಂದು ಕಡೆ ನೆಮ್ಮದಿಯ ನಿದ್ದೆಯ ಪ್ರತೀಕವಾದರೆ ಮತ್ತೊಂದೆಡೆ ಪರರ ನಿದ್ದೆಗೆ ಭಂಗ ತರುವ ದಾನವನಾಗಿ ಪ್ರಸ್ತುತ. ಅದನ್ನು ಲಘು ಲಹರಿಯಲ್ಲಿ, ಗೊರಕೆಯಂತದ್ದೆ ಪ್ರಾಸದ ಲಯದಲ್ಲಿ ಹಿಡಿದಿಡುವ ಯತ್ನ ಈ ಕೆಳಗಿನ ಪದ್ಯ ಪಂಕ್ತಿಗಳದು. ಪಂಕ್ತಿಯಿಂದ ಪಂಕ್ತಿಗೆ ನೇರ ಕೊಂಡಿಯಿರದಿದ್ದರು ಗೊರಕೆಯೆಂಬ ಸಡಿಲ ಬಂಧದಿಂದ ಒಗ್ಗೂಡಿಸಿದ ಈ ಪಂಕ್ತಿಗಳನ್ನು ಬೇರೆಯಾಗಿಯೆ ಓದಿದರೂ ಅಡ್ಡಿಯಿಲ್ಲ, ಜತೆ ಸೇರಿಸಿಕೊಂಡು ಓದಿದರೂ ಸರಿಯೆ – ಗೊರಕೆ ಮಾತ್ರ ಗೊರಕೆಯೆ ! ಅದನ್ನು ಓದುತ್ತಲೆ, ಓದುಗರೆ ಇನ್ನಷ್ಟು ಸಾಲನ್ನು ಹೊಸೆದು ಹೊಸದಾಗಿ ಸೇರಿಸಿ ಮತ್ತಷ್ಟು ವಿಸ್ತರಿಸುವ ಹಾಗೆ ಹುಮ್ಮಸ್ಸು ನೀಡಿದರು ಅದರಲ್ಲಿ ಅಚ್ಚರಿಯೇನೂ ಇಲ್ಲ. ಗೊರಕೆಯ ಸರಕೆ ಅಂತದ್ದು..!

ಗೊರಕೆಯ ತಲೆ ಹರಟೆ ತುಣುಕುಗಳು ಈ ಕೆಳಗೆ – ಕಾಲಕ್ಷೇಪದ ಸರಕಾಗಿ 🙂

ಗೊರಕೆ ಪುರಾಣ
____________________

ಗೊರಕೆ
ಪುಕ್ಕಟೆ ಸರಕೆ
ಆರಂಭಕೆ ಹುಲ್ಲು ಗರಿಕೆ
ಕೊನೆ ಮೊದಲಿಲ್ಲ ಕುಟ್ಟಿದ ಒನಕೆ ||

ಸ-ಮುದ್ರ
ಸಂಚಕಾರ ನಿದ್ರ
ಲಯ ಬದ್ದ ವಾದ್ಯಗೋಷ್ಠಿ
ತಲೆದೂಗಬೇಕು ಮೆಚ್ಚುತೆ ಸಮಷ್ಟಿ ||

ಉಬ್ಬರವಿಳಿತ
ಶಯನ ಸಂಗೀತ
ಗೊಗ್ಗರಲೆ ಏರಿಳಿದ ಭರತ
ಮಗ್ಗುಲಲಿ ಮಲಗಿದವರಾ ಕಾಡುತ ||

ಉಸಿರೊ
ಕಟ್ಟಿದ ಕೆಸರೊ
ಸದ್ದೆ ಗುದ್ದು ನಾಸಿಕದೊಡವೆ
ಪ್ರದರ್ಶನಕಿಟ್ಟ ಮೇಲೆಲ್ಲಿದೆ ಪರಿವೆ ||

ಕೊರೆತ
ನಿಲ್ಲದ ಮೊರೆತ
ಕಿಟಕಿ ಬದಿಗಿರಲಿ ಪ್ರಹಾರ
ಕಾವಲದೆ ಸದ್ದು ತಡೆ ಕಳ್ಳ ಕಾಕರ ||

ಗೊರೆವವ
ಗೋಗರೆಯುವ
ನನ್ನ ಪಾಡಿಗೆ ಬಿಡಿರೆನ್ನುವ
ಗೊರಕೆಯವನ ಸ್ವೇಚ್ಛೆಯ ಭಾವ ||

ಹರಕೆ
ಗೊರಕೆ ಸ್ವರಕೆ
ಮೊರೆವ ಬಾಯಿಗೆ ತುರುಕೆ
ಹೊರಬಾರದಿರಲಿ ಕಸ ಪೊರಕೆ ||

ಆರೋಪ
ನಿಲಿಸದ ಜಪ
ತಟ್ಟಿದಂತೆ ಜನ್ಮಜನ್ಮ ಶಾಪ
ಕಷ್ಟವೊ ಸುಖವೊ ಅನುಭವಿಸಪ್ಪ! ||

ಸ್ವರಕೆ
ಮನಗಳಾಗಿ ಬೆರಕೆ
ದೂರವಾಗೊ ಸಂಗಾತಿ ತೆಕ್ಕೆ
ಕಿವಿಗೆ ಹತ್ತಿ ಇಟ್ಟೆ ಮಲಗುವ ಬೆಕ್ಕೆ ||

ವಾದನ
ಸಹಿಸದೆ ನಿತ್ಯಕದನ
ಬೇಡೆನಿಸಿ ಸತತ ಶಿರಚ್ಛೇದನ
ವಿದೇಶದಲುಂಟಂತೆ ಮದುವೆ ವಿಚ್ಛೇದನ ||

ಅರಿವೆ
ಇಲ್ಲದ ತರವೆ
ಸಾಗುವ ನಿರಂತರ ನಾವೆ
ಬರಿ ದೂರಲೆಂತು ಆದಂತೆ ಮದುವೆ ||

ಭೂಷಣ
ಗೊರಕೆ ಜಾಣ
ಆಡಿಕೊಂಡಿರಲಿ ಗೊಣಗೊಣ
ನಮ್ಮ ಪಾಡಿಗೆ ಗೊರಕೆ ಹೊಡೆಯೋಣ ||

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

ಗೊರಕೆ, ಪುರಾಣ, ನಾಗೇಶ, ಮೈಸೂರು, ನಾಗೇಶಮೈಸೂರು,nagesha, mysore, nageshamysore

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s