00312. ಏಪ್ರಿಲ್ ಪೂಲ್..!

00312. ಏಪ್ರಿಲ್ ಪೂಲ್..!
___________________

‘ಟ್ರಿನ್… ಟ್ರಿನ್..’ ಎನ್ನುತ್ತಿದ್ದ ಪೋನಿನ ಸದ್ದಿಗೆ ಮಟಮಟ ಮಧ್ಯಾಹ್ನದ ಆ ಬಿರು ಬಿಸಿಲಿನ ನಿದ್ದೆ ಕದಡಿಹೋಗಿ ‘ ಯಾರು ಈ ಹೊತ್ತಲ್ಲಿ ನಿದ್ದೆ ಕೆಡಿಸಿದ ಗೂಬೆ?’ ಎಂದು ಬೈಯ್ದುಕೊಳ್ಳುತ್ತಲೆ ಕೈಗೆ ಮೊಬೈಲೆತ್ತಿಕೊಂಡು ‘ ಹಲೊ..’ ಎಂದೆ. ಯಾರಿರಬಹುದೆನ್ನುವ ಅನುಮಾನ ನಿಸ್ಸಂಶಯವಾಗಿ ತೊಲಗಿ ಹೋಗುವ ಹಾಗೆ ಅತ್ತ ಕಡೆಯಿಂದ ಗುಬ್ಬಣ್ಣನ ಗುಟುರು ದನಿ ಕೇಳಿಸಿತ್ತು.

‘ ಸಾರ್.. ನಾನು ಗುಬ್ಬಣ್ಣ.. ನಮಸ್ಕಾರ ಸಾರ್.. ನಿದ್ದೆಯಿಂದೆಬ್ಬಿಸಿಬಿಟ್ಟೆಂತ ಕಾಣುತ್ತೆ..’ ಎಂದ ಪೆಚ್ಚು ನಗೆ ನಟಿಸುತ್ತ. ನನ್ನ ‘ ಹಲೊ’ ಎನ್ನುವ ಮಾತಿಂದಲೆ ನಿದ್ದೆಯಾಳದಿಂದೆದ್ದು ಬಂದದ್ದನ್ನು ಗಮನಿಸಿ, ಅದಕ್ಕೆ ನನ್ನಿಂದ ಬೆಂಡು ಎತ್ತಿಸಿಕೊಳ್ಳುವ ಮೊದಲೆ ತಾನೆ ಆಡಿ ತಪ್ಪಿಸಿಕೊಳ್ಳುವ ಸ್ಕೆಚ್ ಹಾಕುತ್ತಾ ಇದ್ದಾನೆ ಖದೀಮ…

‘ ಕಾಣುತ್ತೆ ಏನು ಬಂತು ? ಖಡಾಖಂಡಿತವಾಗಿ ನಿದ್ದೆ ಕೆಡಿಸಿಬಿಟ್ಟೆ ನಕ್ಷತ್ರಿಕನ ಹಾಗೆ.. ಹಾಳಾದ್ದು ಪೋನಿಂದ ಏನು ಮಾಡುವ ಹಾಗಿಲ್ಲ. ಇಲ್ಲಾಂದ್ರೆ ಮೊದಲು ಎರಡು ಬಿಗಿದು ಆಮೇಲೆ ಮಿಕ್ಕಿದ ಮಾತಾಡುತ್ತಿದ್ದೆ..’ ಗಡದ್ದಾಗಿ ತಿಂದು ಡೀಪ್ ಸಮಾಧಿ ಸ್ಥಿತಿಯಲ್ಲಿದ್ದವನ ನಿದ್ದೆಗೆಡಿಸಿದ ಕೋಪವೆಲ್ಲ ಧಾರಾಕಾರವಾಗಿ ಗುಬ್ಬಣ್ಣನ ಮೇಲೆ ಮುಸಲಧಾರೆಯಾಗಲಿಕ್ಕೆ ಸಿದ್ದವಾಗುತ್ತಿರುವಂತೆ.

‘ಸಾರಿ ಸಾರ್..ಬೇಜಾರು ಮಾಡಿಕೊಳ್ಳಬೇಡಿ… ಮ್ಯಾಟರು ತುಂಬಾ ಇಂಪಾರ್ಟೆಂಟು.. ಅದಕ್ಕೆ ಮಟಮಟ ಮಧ್ಯಾಹ್ನಾಂತ ಗೊತ್ತಿದ್ದೂ ತಡ್ಕೊಳ್ಳೊಕಾಗ್ಲಿಲ್ಲ….’ ಎಂದ ಗುಬ್ಬಣ ಸಂತೈಸುವ ದನಿಯಲ್ಲಿ.

ಅವನ ಏಮಾರಿಸುವ ಗುಣ ಗೊತ್ತಿದ್ದ ನಾನು ಸುಲಭದಲ್ಲಿ ಬಲೆಗೆ ಬೀಳದೆ ಇರುವಂತೆ ಎಚ್ಚರಿಕೆ ವಹಿಸುತ್ತ ,’ ಅದೆಲ್ಲಾ ಪೀಠಿಕೆ ಬೇಡ.. ಸುಖ ನಿದ್ದೆಯಿಂದ ಎಬ್ಬಿಸಂತು ಆಯ್ತಲ್ಲ..? ಆ ಪಾಪವೇನು ಸುಮ್ಮನೆ ಬಿಡಲ್ಲ.. ತಿಗಣೆ ಜನ್ಮವೆ ಗ್ಯಾರಂಟಿ ನಿನಗೆ.. ಅದು ಬಿಟ್ಟು ಮ್ಯಾಟರಿಗೆ ಬಾ’ ಎಂದೆ ಮೀಟರಿನ ಮೇಲೆ ಕಣ್ಣಿಟ್ಟ ಆಟೋ ಗಿರಾಕಿಯ ಹಾಗೆ.

‘ ತಿಗಣೆಯಾದ್ರೂ ಸರೀನೆ ನಿಮ್ಮ ಹಾಸಿಗೇಲೆ ಸೇರ್ಕೊಳ್ಳೊ ದೋಸ್ತಿ ನಮ್ಮದು ಸಾರ್…ಸುಮ್ನೆ ಯಾಕೆ ಕೋಪ ನಿಮಗೆ?’ ತಿಗಣೆಯಾದರೂ ಕಾಡುವವನೆ ಹೊರತು ಬಿಡುವವನಲ್ಲ ಎನ್ನುವ ವಿಕ್ರಮನ ಭೇತಾಳದಂತೆ ಪಟ್ಟು ಬಿಡದೆ ನುಡಿದ ಗುಬ್ಬಣ್ಣ..

‘ ಗುಬ್ಬಣ್ಣಾ… ನಾನೀಗ ಪೋನ್ ಇಟ್ಟು ಮತ್ತೆ ನಿದ್ದೆಗೆ ಹೋಗಿ ಬಿಡ್ತೀನಿ ನೋಡು..ಬೇಗ ವಿಷಯಕ್ಕೆ ಬಾ…’ ಹೆದರಿಸುವ ದನಿಯಲ್ಲಿ ಗದರಿಸಿದೆ.

‘ ಆಯ್ತು.. ಆಯ್ತು ಸಾರ್.. ಬಂದೆ… ಆದರೆ ಮ್ಯಾಟರು ಪೋನಲ್ಲಿ ಹೇಳೊದಲ್ಲ… ಶಕುಂತಲಾ ರೆಸ್ಟೋರೆಂಟಲ್ಲಿ ಮೀಟ್ ಮಾಡಿ ‘ಚಿಕನ್ ಬಾದಾಮ್’ ಜತೆ ಬಿರಿಯಾನಿ ಆರ್ಡರ ಮಾಡಿ ತಿಂತಾ ಜತೆಜತೆಯಲ್ಲೆ ವಿಷಯ ಹೇಳ್ತೀನಿ..’

‘ ಅಯ್ಯೊ ಪೀಡೆ..! ಹಾಗಿದ್ದ ಮೇಲೆ ಮನೆ ಹತ್ತಿರ ತಲುಪಿದ ಮೇಲಲ್ಲವ ಪೋನ್ ಮಾಡೋದು ? ಇನ್ನೊಂದು ಸ್ವಲ್ಪ ಹೊತ್ತು ನೆಮ್ಮದಿಯ ನಿದ್ದೆ ತೆಗೀತಿದ್ನಲ್ಲಾ ? ಊರಿಗೆ ಮುಂಚೆ ಯಾಕೆ ಪೋನ್ ಮಾಡ್ಬೇಕಿತ್ತೊ ಗೂಬೆ ಮುಂಡೆದೆ ?’ ಮತ್ತೆ ಮನಸಾರೆ ಬೈಯುತ್ತ ಯಥೇಚ್ಛವಾಗಿ ಮಂತ್ರಾಕ್ಷತೆ ಹರಿಸಿದ್ದೆ ಗುಬ್ಬಣ್ಣನ ಮೇಲೆ.

‘ ತಾಳಿ ಸಾರ್ ಸ್ವಲ್ಪ… ಸುಮ್ನೆ ಕೂಗಾಡ್ಬೇಡಿ… ಈಗ ನಿಮ್ಮ ಮನೆಗೆ ಮೂರು ಸ್ಟೇಷನ್ ದೂರದಲ್ಲಿದ್ದೀನಿ.. ಅಲ್ಲಿಗೆ ಬರೋಕೆ ಹತ್ತು ನಿಮಿಷ ಸಾಕು.. ಅಷ್ಟರಲ್ಲಿ ಎದ್ದು ರೆಡಿಯಾಗಲಿ ಅಂತ್ಲೆ ಈಗ ಪೋನ್ ಮಾಡಿದ್ದು..’ ಎಂದು ಬಾಯಿ ಮುಚ್ಚಿಸಿಬಿಟ್ಟ.

‘ ಸರಿ ಹಾಳಾಗ್ಹೋಗು .. ನಂದು ರೆಡಿಯಾಗೋದು ಸ್ವಲ್ಪ ಲೇಟಾಗುತ್ತೆ, ಬಂದು ಕಾಯಿ..’ ಎಂದು ಉರಿಸುವ ದನಿಯಲ್ಲಿ ಹೇಳಿ ಪೋನ್ ಇಡುವುದರಲ್ಲಿದ್ದೆ.. ಆಗ ಮತ್ತೆ ಗುಬ್ಬಣ್ಣನೆ, ‘ಸಾರ್..ಒಂದೆ ನಿಮಿಷ… ಅಪರೂಪಕ್ಕೆ ನಮ್ಮೆಜಮಾನತಿ ಇವತ್ತು ‘ದಂರೂಟ್’ ಮಾಡಿದ್ಲು.. ನಿಮಗು ಸ್ವಲ್ಪ ಸ್ಯಾಂಪಲ್ ತರ್ತಾ ಇದೀನಿ… ಶುಗರು ಗಿಗರು ಅಂತೆಲ್ಲ ನೆಪ ಹೇಳ್ಬೇಡಿ ಸಾರ್..’ ಅಂದ.

‘ದಂರೂಟ್’ ಅಂದರೆ ನನ್ನ ‘ಪಕ್ಕಾ ವೀಕ್ನೇಸ್’ ಅಂತ ಚೆನ್ನಾಗಿ ಗೊತ್ತು ಗುಬ್ಬಣ್ಣನಿಗೆ. ಶುಗರು ಇರಲಿ ಅದರಪ್ಪನಂತಹ ಕಾಯಿಲೆಯಿದ್ದರೂ ಬಿಡುವವನಲ್ಲ ಅಂತ ಗೊತ್ತಿದ್ದೆ ಗಾಳ ಹಾಕುತ್ತಿದ್ದಾನೆ ಕಿಲಾಡಿ.. ಅಲ್ಲದೆ ಸಿಂಗಪುರದಲ್ಲಿ ಬೇರೆಲ್ಲಾ ಸಿಕ್ಕಬಹುದಾದರು ‘ದಂರೂಟ್’ ಮಾತ್ರ ಎಲ್ಲಿಯೂ ಸಿಕ್ಕುವುದಿಲ್ಲ; ನನ್ನ ಶ್ರೀಮತಿಗೆ ಅದನ್ನು ಮಾಡಲು ಬರುವುದಿಲ್ಲ ಅಂತ ಅವನಿಗೂ ಗೊತ್ತು… ಆ ಹೆಸರು ಎತ್ತುತ್ತಿದ್ದ ಹಾಗೆ ನಾನು ಅರ್ಧ ಶಾಂತವಾದ ಹಾಗೆ ಎಂದು ಲೆಕ್ಕಾಚಾರ ಹಾಕಿಯೆ ಕಾಳು ಹಾಕುತ್ತಿದ್ದಾನೆ.. ಅಥವಾ ಕೂಲಾಗಿಸಲು ಸುಖಾಸುಮ್ಮನೆ ಬರಿ ಹೋಳು ಹೊಡೆಯುತ್ತಿದ್ದಾನೆಯೊ , ಏನು ?

‘ ಗುಬ್ಬಣ್ಣಾ… ಈ ವಿಷಯದಲ್ಲಿ ಮಾತ್ರ ರೀಲು ಬಿಡಬೇಡ ನೋಡು… ನೀನು ತಿನ್ನ ಬೇಕೂಂತಿರೊ ಬಾದಾಮ್ ಚಿಕನ್ ಜಾಗದಲ್ಲಿ ನೀನೆ ಕಿಚನ್ ಸೇರುವ ಹಾಗೆ ತದುಕಿ ಹಾಕಿಬಿಡುತ್ತೇನೆ’ ಎಂದೆ ವಾರ್ನಿಂಗ್ ದನಿಯಲ್ಲಿ. ನಿಜ ಹೇಳಬೇಕೆಂದರೆ, ಶಕುಂತಲದಲ್ಲಿ ನಿಜವಾಗಿ ಸಿಗೋದು ‘ಕ್ಯಾಶೂವ್ ಚಿಕನ್ (ಗೊಡಂಬಿ)’.. ಆದರೆ ಅದನ್ನು ತಮಿಳಿಂದ ಭಾಷಾಂತರ ಮಾಡುವಾಗ ‘ಕ್ಯಾಶೂವ್’ ಹೋಗಿ ‘ಬಾದಾಮ್’ ಆಗಿಹೋಗಿತ್ತು. ಎರಡರ ರುಚಿಯೂ ಬೊಂಬಾಟೆ.. ಅಂದ ಮೇಲೆ ಹೆಸರು ಕಟ್ಟಿಕೊಂಡೇನಾಗಬೇಕು ? ನಾವೂ ಬಾದಾಮ್ ಚಿಕನ್ ಅಂತ್ಲೆ ಕರೆಯುತ್ತಿದ್ದೆವು…

‘ ಸಾರ್.. ದಂರೂಟಿನ ವಿಷಯದಲ್ಲಿ, ಅದರಲ್ಲೂ ನಿಮ್ಮ ಜತೆ ಹುಡುಗಾಟವೆ? ಖಂಡಿತ ಇಲ್ಲ ಸಾರ್..ನಮ್ಮಪ್ಪರಾಣೆ, ಗೂಗಲೇಶ್ವರನಾಣೆ ಕಟ್ಟಿಸಿಕೊಂಡು ಬರ್ತಾ ಇದೀನಿ.. ಆದ್ರೆ ಈ ಟ್ರೈನು ಏಸಿಗೆ ಅರ್ಧ ಬಿಸಿಯೆಲ್ಲ ಹೋಗಿ ತಣ್ಣಗಿದ್ರೆ ನನ್ನ ಬೈಕೋಬೇಡಿ….’. ಮೊದಲಿಗೆ ಅವರಪ್ಪ ಈಗಾಗಲೆ ‘ಗೊಟಕ್’ ಅಂದಿರೋದ್ರಿಂದ ಆ ಅಣೆ ಹಾಕೋದಕ್ಕೆ ಯಾವ ತಾಪತ್ರಯವೂ ಇರಲಿಲ್ಲ. ಇನ್ನು ಗೂಗಲೇಶ್ವರ ಸತ್ತವನೊ, ಬದುಕಿದವನೊ ಎಂದು ಗೂಗಲ್ ಮಾಡಿಯೆ ಹುಡುಕಿ ನೋಡಬೇಕೇನೊ?

ಅಲ್ಲಿಗೆ ನನ್ನ ನಿದ್ರೆಯೆಲ್ಲ ಪೂರ್ತಿ ಹಾರಿ ಹೋಗಿ, ನಾಲಿಗೆ ಆಗಲೆ ಕಡಿಯತೊಡಗಿತ್ತು.. ‘ಸರೀ ಗುಬ್ಬಣ್ಣ.. ಸೀಯೂ ಇನ್ ಟೆನ್ ಮಿನಿಟ್ಸ್ ..’ ಎನ್ನುತ್ತ ಬಚ್ಚಲು ಮನೆಗೆ ನಡೆದಿದ್ದೆ.. ಶಕುಂತಲಾಗೆ ಹೋಗುವ ದಾರಿಯಲ್ಲೆ ಟ್ರೈನ್ ಸ್ಟೇಷನ್ನಿನ ಹತ್ತಿರ ಕಾದು, ಹೊರಬರುತ್ತಿದ್ದಂತೆ ಹಿಡಿಯಲು ಸಿದ್ದನಾಗಿ ನಿಂತಿದ್ದವನನ್ನು ನಿರಾಶೆಗೊಳಿಸದಂತೆ ಎಸ್ಕಲೇಟರ್ ಹತ್ತಿ ಬರುತ್ತಿರುವ ಗುಬ್ಬಣ್ಣ ಕಾಣಿಸಿದ. ಬಹಳ ಮುಂಜಾಗರೂಕತೆ ವಹಿಸಿದವನ ಹಾಗೆ ಬಲದ ಕೈಯಲೊಂದು ಪುಟ್ಟ ಸ್ಟೀಲು ಡಬರಿ ಹಿಡಿದುಕೊಂಡೆ ಬರುತ್ತಿರುವುದನ್ನು ಗಮನಿಸಿ ಈ ಬಾರಿ ಬರಿ ಹೋಳು ಹೊಡೆದಿಲ್ಲ, ನಿಜವಾಗಿಯೂ ‘ದಂರೋಟು’ ತಂದಿರುವನೆಂದು ಖಾತ್ರಿಯಾಗಿ ಬಿಗಿದಿದ್ದ ನರಗಳೆಲ್ಲ ಸಡಿಲಾಗಿ ಮುಖದಲ್ಲಿ ಕಂಡೂಕಾಣದ ತೆಳು ನಗೆ ಹರಡಿಕೊಂಡಿತು – ಸ್ವಲ್ಪ ಮೊದಲು ಗುಬ್ಬಣ್ಣನ ಜೊತೆಯೆ ವಾಗ್ಯುದ್ಧಕ್ಕಿಳಿದಿದ್ದೆ ಸುಳ್ಳೇನೊ ಎನ್ನುವ ಹಾಗೆ.

ಇಬ್ಬರೂ ನಡೆಯುತ್ತಿದ್ದ ಪುಟ್ಪಾತಿನ ಪೂರ್ತಿ ಅಗಲವನ್ನು ನಮ್ಮ ವಿಶಾಲ ‘ತನು’ಮನಗಳಿಂದ ಈಗಾಗಲೆ ಧಾರಾಳವಾಗಿ ಆಕ್ರಮಿಸಿಕೊಂಡು ಮಿಕ್ಕವರೆಲ್ಲ ನಮ್ಮ ಹಿಂದೆ ಪೆರೇಡ್ ಬರುವಂತೆ ಮಾಡಿದ್ದರು, ಅದರ ಪರಿವೆಯಿಲ್ಲದವರಂತೆ ಸ್ಟೀಲ್ ಡಬರಿಯ ಬಾಯಿ ಬಿಚ್ಚಿ ಪುಟ್ಟ ಸ್ಪೂನಿನಿಂದ ಕೈ ಬಾಯಿಗೆ ಕೆಲಸವೊದಗಿಸುತ್ತ ನಮ್ಮ ಪಾಡಿಗೆ, ನಮ್ಮ ಲೋಕದಲ್ಲಿ ನಡೆದಿದ್ದ ನಮಗೆ ಪಕ್ಕದವರಾರೊ ರಸ್ತೆಗಿಳಿದು ನಮ್ಮನ್ನು ಓವರ್ಟೇಕ್ ಮಾಡಿ, ನಮ್ಮತ್ತ ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನಡೆದಾಗಲೆ ನಾವು ಮಾಡಿದ್ದ ‘ಮಿನಿ ಟ್ರಾಫಿಕ್ ಜಾಮಿನ’ ಅರಿವಾಗಿದ್ದು. ಪುಣ್ಯಕ್ಕೆ ಅಷ್ಟು ಹೊತ್ತಿಗೆ ರೇಸ್ ಕೋರ್ಸ್ ರೋಡಿನ ಶಕುಂತಲಾಗೆ ಬಂದು ತಲುಪಿಯಾಗಿತ್ತು, ಜತೆಗೆ ‘ದಂರೂಟ್’ ಡಬ್ಬಿಯೂ ಖಾಲಿಯಾಗಿತ್ತು. ಏನೂ ಗೊತ್ತಿರದವರಂತೆ ಪಕ್ಕಕ್ಕೆ ಸರಿದು ರೆಸ್ಟೋರೆಂಟ್ ಒಳಗೆ ಹೊಕ್ಕೆವು. ಊಟದ ಸಮಯ ಮೀರಿ ಬಹಳ ಹೊತ್ತಾಗಿದ್ದ ಕಾರಣ ಹೆಚ್ಚು ಜನರಿರಲಿಲ್ಲವಾಗಿ ನಮಗೆ ಮಾತಿಗೆ ಬೇಕಿದ್ದ ದೇವಮೂಲೆ ಸರಾಗವಾಗಿ ಸಿಕ್ಕಿತ್ತು. ಅಲ್ಲಿದ್ದ ಐ ಪ್ಯಾಡಿನ ಮೂಲಕ ‘ಬಾದಮ್ ಚಿಕನ್ ವಿತ್ ಬಿರಿಯಾನಿ’ ಆರ್ಡರ ಮಾಡಿದ ಮೇಲೆ ನನಗೊಂದು ಪ್ಲೇಟ್ ಪಕೋಡ / ಬಜ್ಜಿ ಜತೆ ಸೇರಿಸಿ ಮಾತಿಗಾರಂಭಿಸಿದ.

‘ಸಾರ್.. ನಿಮಗೊಂದು ಗೋಲ್ಡನ್ ಆಪರ್ಚುನಿಟಿ … ಭಾರಿ ಸುವರ್ಣಾವಕಾಶ…’ ಎಂದು ಪೀಠಿಕೆ ಹಾಕಿದ್ದ ಗುಬ್ಬಣ್ಣ. ಅಂದರೆ ಏನೊ ಕೊಕ್ಕೆಯಿದ್ದರು ಇದ್ದೀತು ಹುಷಾರಾಗಿರಬೇಕು ಎಂದು ನನ್ನನ್ನು ನಾನೆ ಗಾರ್ಡ್ ಮಾಡಿಕೊಳ್ಳುವ ಪೊಸಿಷನ್ನಿಗೆ ತಂದುಕೊಂಡು, ‘ನೆಟ್ಟಗೆ, ಸುತ್ತು ಬಳಸದೆ ವಿಷಯಕ್ಕೆ ಬಾ ಗುಬ್ಬಣ್ಣ.. ಪೀಠಿಕೆಯೇನು ಬೇಡಾ..’ ಎಂದೆ.

‘ ನೋ ಕ್ಯಾಚ್ ಸಾರ್.. ಬಿಲ್ಕುಲ್ ಗೋಲ್ಡೆನ್ ಆಪರ್ಚುನಿಟಿ… ಆಲ್ ಡ್ಯೂ ಟು ಡೈವರ್ಸಿಟಿ ಡ್ರೈವ್..’ ಎಂದ

ನನಗೆ ನಮ್ಮ ಸರಕಾರಿ ಘೋಷವಾಕ್ಯ ‘ ಯುನಿಟಿ ಇನ್ ಡೈವರ್ಸಿಟಿ’ ಬಿಟ್ಟರೆ ಬೇರಾವ ಸಿಟಿಯೂ ಗೊತ್ತಿರಲಿಲ್ಲ. ಅದೇ ಬಿರುಸಿನಲ್ಲೆ, ‘ಇದ್ಯಾವುದಪ್ಪ ಹೊಸ ಯುನಿವರ್ಸಿಟಿ ಇದ್ದ ಹಾಗಿದೆ ? ‘ಡೈ’ಯುವವರ ಸಿಟಿ ಅರ್ಥಾತ್ ಸಾಯುವವರ ಸಿಟಿ ಅಂತಲಾ?’ ಎಂದೆ.

‘ ಸುಮ್ಮನಿರಿ ಸಾರ್ ತಮಾಷೆ ಸಾಕು… ನಿಮಗೆ ಗೊತ್ತಿರಬೇಕಲ್ಲಾ? ಈಗ ಎಲ್ಲಾ ದೊಡ್ಡ ದೊಡ್ಡ ಕಂಪನಿಗಳಲ್ಲಿ ಅದರಲ್ಲೂ ಎಂಎನ್ಸಿಗಳಲ್ಲಿ ದೊಡ್ಡ ತರದಲ್ಲಿ ಶುರುವಾಗಿದೆಯಲ್ಲ – ಕಲ್ಚರಲ್, ಜೆಂಡರ್, ಏಜ್ ಅಂತೆಲ್ಲಾ ? ಆ ಡೈವರ್ಸಿಟಿ…’ ಗುಬ್ಬಣ್ಣ ವಿವರಿಸಲೆತ್ನಿಸಿದ.

ನನಗೆ ಸರಕಾರಿ ಮಟ್ಟದಲ್ಲಿ ಜಾತಿಯಾಧಾರಿತ ಮೀಸಲಾತಿಯಂತಹ, ಎಲೆಕ್ಷನ್ನಿನಲ್ಲಿ ಮಹಿಳಾ ಮೀಸಲಾತಿಯಂತಹ ಡೈವರ್ಸಿಟಿ ಬಿಟ್ಟರೆ ಬೇರೆ ತರದ, ಅದರಲ್ಲೂ ಖಾಸಗಿ ಜಗದ ಯಾವ ‘ಸಿಟಿಗಳ’ ಐಡಿಯಾ ಇರಲಿಲ್ಲ… ಆದರೂ ಇತ್ತೀಚೆಗೆ ಎಲ್ಲಾ ಕಂಪನಿ ಬೋರ್ಡುಗಳಲ್ಲಿ ಕನಿಷ್ಠ ಒಬ್ಬಳಾದರು ಮಹಿಳಾ ಡೈರೆಕ್ಟರು ಇರಲೇಬೇಕೆಂಬ ಕಡ್ಡಾಯ ರೂಲ್ಸ್ ಮಾಡಿದ ಸುದ್ದಿ ಓದಿದ್ದು ನೆನಪಾಯ್ತು.

‘ ಜ್ಞಾಪಕ ಬಂತು ಕಣೊ ಗುಬ್ಬಣ್ಣ.. ಮೊನ್ನೆ ಮೊನ್ನೆ ನಮ್ಮ ಐಎಂಎಫ್ ಮ್ಯಾನೇಜಿಂಗ್ ಡೈರೆಕ್ಟರ್ ಕ್ರಿಸ್ಟಿನ್ ಲೆಗಾರ್ಡ್ ಭಾರತಕ್ಕೆ ಬಂದಾಗ, ನಮ್ಮ ಮ್ಯಾನೇಜ್ಮೆಂಟುಗಳಲ್ಲಿ ಹೆಂಗಸರು ಕಮ್ಮಿ ಆ ಡೈವರ್ಸಿಟಿ ಹೆಚ್ಚಿಸಬೇಕು ಅಂತ ಅಪ್ಪಣೆ ಕೊಡಿಸಿದರಲ್ಲಾ, ಆ ಡೈವರ್ಸಿಟಿ ತಾನೆ?’ ಎಂದೆ.

‘ನೋಡಿದ್ರಾ ಸಾರ್.. ಎಷ್ಟು ಪರ್ಪೆಕ್ಟಾಗಿ ಹಿಡಿದು ಹಾಕಿದ್ರಿ ? ಡೈವರ್ಸಿಟಿಯಲ್ಲಿ ಹಲವಾರು ತರ ಇದ್ರು ನಾವೀಗ ಮಾತಾಡ್ಬೇಕಿರೋದು ಇದೇ ಡೈವರ್ಸಿಟಿ ಬಗ್ಗೆ..’ ಎಂದವನೆ ಟೇಬಲ್ಲಿಗೆ ಕೈಯಾನಿಸಿ ಮುಂದೆ ಬಂದವನೆ, ಮೆಲುವಾದ ದನಿಯಲ್ಲಿ, ‘ ಹೆಚ್ಚು ಕಡಿಮೆ ನಮ್ಮ ಹಕ್ಕಿನ ಹೋರಾಟ ಹಾಗು ಅಸ್ತಿತ್ವದ ಪ್ರಶ್ನೆ..’ ಎಂದು ಬಾಂಬ್ ಸಿಡಿಸಿದ!

ಡೈವರ್ಸಿಟಿ ಅಂತ ಶುರು ಹಚ್ಚಿಕೊಂಡವನು ಇದ್ದಕ್ಕಿದ್ದಂತೆ ಏಕಾಏಕಿ ಹಕ್ಕು, ಹೋರಾಟ, ಅಸ್ತಿತ್ವವೆಂದು ವಿಷಯಾಂತರ ಮಾಡಿದ್ದು ನೋಡಿ ಗಾಬರಿಯಾಯ್ತು ಇವನೇನು ‘ವಿಮೆನ್ಸ್ ಲಿಬ್’ ನ ಮೂಲಕ್ಕೇನಾದರು ಕೈ ಹಾಕ ಹೊರಟಿದ್ದಾನೆಯೆ? ಎಂದು. ಆದರು ಮೊದಲು ಅನುಮಾನ ಪರಿಹರಿಸಿಕೊಂಡುಬಿಡಬೇಕೆಂದು ‘ಗುಬ್ಬಣ್ಣಾ, ಯಾಕೊ ಟ್ರಾಕ್ ಬಿಟ್ಟು ಓಡೋ ಹಾಗೆ ಕಾಣ್ತಿದೆಯಲ್ಲಾ ? ನೋಡು ಅದೇನಾದ್ರು ಸರಿ ಮಹಿಳಾ ಸಂಘ, ಸಂಘಟನೆಗಳ ವಿರುದ್ಧ ಏನಾದ್ರೂ ಹೋರಾಡೊ ಪ್ಲಾನ್ ಹಾಕಿದ್ರೆ ಹೇಳು.. ನಾನು ಈಗ್ಲೆ ಇಲ್ಲಿಂದ ಕಂಬಿ ಕೀಳ್ತೀನಿ.. ಮೊದ್ಲೆ ನನ್ ಹೆಂಡ್ತಿ ಮಹಿಳಾ ಚಳುವಳಿ ಅದೂ ಇದೂ ಅಂತ ಪುಲ್ ಟೈಮ್ ಮೆಂಬರಾಗಿರುವವಳು..’ ಅಂದೆ…!

‘ ಹಾಗೇನು ಇಲ್ಲಾ ಸಾರ್.. ನೀವ್ಯಾಕೆ ಸುಮ್ಮ ಸುಮ್ಮನೆ ಗಾಬರಿಯಾಗ್ತೀರಿ ? ಈಗ ಇದ್ದಕ್ಕಿದ್ದ ಹಾಗೆ ಎಲ್ಲಾ ಕಡೆ ಈ ಜೆಂಡರ್ ಡೈವರ್ಸಿಟಿ ಅಂತ ಶುರುವಾದ್ಮೇಲೆ, ಎಲ್ಲಾರೂ ಎಲ್ಲಾ ಲೆವಲ್ಲಿನ ಮ್ಯಾನೇಜ್ಮೆಂಟಲ್ಲೂ ಕನಿಷ್ಠ ಶೇಕಡಾ ಐವತ್ತಾದರು ಹೆಂಗಸರಿರಬೇಕು ಅಂತ ಶುರು ಹಚ್ಕೊಂಡ್ಬಿಟ್ಟಿದಾರೆ ಸಾರ್..’

‘ಅದರಲ್ಲೇನೊ ತಪ್ಪು ಗುಬ್ಬಣ್ಣ? ಮೊದಲಿಂದ ಹಾಗೇ ಇರ್ಬೇಕಿತ್ತು.. ಏನೊ ಕಾರ್ಯಾಕಾರಣ ಹಾಗಾಗಲಿಲ್ಲ… ಈಗಲಾದರು ಮಾಡ್ತಾ ಇದಾರಲ್ಲಾ ಅಂತ ಖುಷಿ ಪಡೋದಲ್ವಾ..?’ ಅಂದೆ.

‘ ಸಾರ್.. ಖಂಡಿತಾ ಧಾರಾಳವಾಗಿ ಮಾಡ್ಲಿ, ಯಾರು ಬೇಡಾಂದ್ರೂ… ಆದರೆ ಅದನ್ನ ಸಿಸ್ಟಮ್ಯಾಟಿಕ್ಕಾಗಿ ಮಾಡ್ಕೊಂಡು ಬರಬೇಕಲ್ವಾ? ಇನ್ನು ಐದು ವರ್ಷದಲ್ಲಿ ಶೇಕಡ ಐವತ್ತರ ಗುರಿ ಸಾಧಿಸಬೇಕು ಅಂತ ಹೊರಟಿದ್ದಾರೆ ಸಾರ್…’ ಅಳುವ ದನಿಯಲ್ಲಿ ಗುಬ್ಬಣ್ಣ ಅಲವತ್ತುಗೊಂಡ..

ಅದರಲ್ಲಿ ಅಳುವಂತದ್ದೇನೊ ಗೊತ್ತಾಗಲಿಲ್ಲ ನನಗೆ..’ ಅಲ್ಲವೊ, ಐದು ವರ್ಷ ರೀಸನಬಲ್ ಅಲ್ವಾ..? ಅದರಲ್ಲಿ ಅಳೋದು ಏನಿದೆಯೊ? ‘ ಎಂದೆ ಕಕ್ಕುಲತೆಯಿಂದ.

‘ ಸಾರ್.. ಅಲ್ಲೆ ಇರೋದು ಎಡವಟ್ಟು…. ಐದು ವರ್ಷವಲ್ಲ, ಒಂದೆ ವರ್ಷದಲ್ಲಿ ಮಾಡಲಿ, ಯಾರು ಬೇಡಾಂದ್ರೂ? ಆದರೆ ನಮಗೆಲ್ಲ ಏಟು ಬೀಳದ ಹಾಗೆ ಪಾಲಿಸಿ ಮಾಡಬೇಕಲ್ವಾ ಸಾರ್..?’

ನನಗಿನ್ನು ಏಟು ಬೀಳುತ್ತಿರುವುದು ಎಲ್ಲಿ ಎಂದು ಗೊತ್ತಾಗಲಿಲ್ಲ. ಮೊದಲೆ ಟ್ಯೂಬ್ ಲೈಟಿನ ಮಾದರಿ ; ಇಂತಹ ಒಳ ಸೂಕ್ಷ್ಮಗಳೆಲ್ಲ ತಟ್ಟನೆ ಹೊಳೆಯುವುದಿಲ್ಲ..

‘ಗುಬ್ಬಣ್ಣಾ.. ನೀನು ಸರಳವಾಗಿ ನೇರವಾಗಿ ವಿವರಿಸಿ ಹೇಳು.. ‘ಡಕ್ವರ್ತ್ – ಲೂಯಿಸ್’ ಲೆಕ್ಕಾಚಾರದ ತರಹ ಮಳೆ ಬಂದು ಕ್ರಿಕೆಟ್ ಆಟ ನಿಂತಾಗ ಹೊಡೆಯಬೇಕಾದ ರನ್ ಲೆಕ್ಕಾನೆ ಏರುಪೇರು ಮಾಡಿಬಿಡಬೇಡ.. ಸೌತ್ ಆಫ್ರಿಕ ಒಂದು ಬಾಲಲ್ಲಿ ಇಪ್ಪತ್ತೆರಡು ರನ್ ಹೊಡೆಯಬೇಕು ಎನ್ನುವ ಲೆಕ್ಕಾಚಾರದ ಹಾಗೆ…’ ಎಂದು ಅವನತ್ತಲೆ ಗೂಗ್ಲಿಯನ್ನು ತಿರುಗಿಸಿದೆ.

‘ ಸಾರ್.. ಈಗ ಇರೋ ಪರ್ಸೆಂಟೇಜು ಏನೂಂತ ಗೊತ್ತಾ..?’

ಖಂಡಿತ ಗೊತ್ತಿರಲಿಲ್ಲ.. ಬರಿ ಬೋರ್ಡ್ ಲೆವೆಲ್ಲಲ್ಲಿ ಮಾತ್ರ ತುಂಬಾನೆ ಕಡಿಮೆ ಅಂತ ಮೊನ್ನೆ ಓದಿದ್ದಷ್ಟೆ – ಅದೂ ತಂತಮ್ಮ ಫ್ಯಾಮಿಲಿ ಹೆಂಗಸರಲ್ಲೆ ಒಬ್ಬರನ್ನ ಡೈರೆಕ್ಟರಾಗಿ ಆರಿಸಿಕೊಳ್ತಾ ಇದಾರೆ, ಲಾಸ್ಟ್ ಡೇಟಿಗೆ ಮುಂಚೆ ಅಂದ ಮೇಲೆ, ಬಾರಿ ಕಡಿಮೆಯೆ ಇರಬೇಕು ಅಂದುಕೊಂಡೆ. ನಾನು ಉತ್ತರಿಸದೆ ಇದ್ದಾಗ ತಾನೆ ಮುಂದುವರೆದು ನುಡಿದ ಗುಬ್ಬಣ್ಣ, ‘ ಕೆಳಗಿನ ಹಂತದಲ್ಲಿ ಸುಮಾರು ಮೂವ್ವತ್ತು ಪೆರ್ಸೆಂಟ್ ಇದ್ದರು, ಮೇಲೆ ಮೇಲೆ ಹೋಗ್ತಾ ತುಂಬಾ ಕಡಿಮೆ ಆಗ್ತಾರೆ ಸಾರ್.. ಹೆಚ್ಚುಕಡಿಮೆ ಹತ್ತರಿಂದ ಹದಿನೈದರ ಒಳಗೆ…ಬೋರ್ಡ್ ಲೆವಲ್ಲಿನಲ್ಲಂತು ತೀರಾ ಮೋಸಾ..’

‘ ಅಂದ ಮೇಲೆ ನಿನ್ನ ಗೋಳೇನು ಅಂತ ಇನ್ನು ಗೊತ್ತಾಗ್ತಾ ಇಲ್ಲಾ..’

‘ ಸಾರ್.. ಅವರನ್ನ ಬೇಗ ಮುಂದೆ ತರೋ ಕೆಲಸ ಸ್ಪೀಡಾಗಿ ಮಾಡ್ಲಿ ಏನೂ ಅಭ್ಯಂತರ ಇಲ್ಲಾ.. ಆದರೆ ಹಾಗೆ ಮಾಡೋಕೆಂತ ವಿಶೇಷ ಬಡ್ಜೆಟ್ಟೊ, ಪ್ರೊಗ್ರಾಮೊ ಇಟ್ಕೊಂಡ್ ಮಾಡ್ಬೇಕಲ್ವಾ ಸಾರ್..’

‘ ಇದೂ ಸ್ಪೆಶಲ್ ಪ್ರೋಗ್ರಾಮೇ ಅಲ್ವಾ..?’

‘ ಸಾರ್.. ಕಂಪನಿಯಲ್ಲಿ ಇದನ್ನ ಮಾಡೋಕೆ ಹೊರಟಿರೋದು ನಿಜಾ ಆದ್ರೂ, ಅದಕ್ಕೆ ಅಂತ ಸ್ಪೆಶಲ್ ಬಡ್ಜೆಟ್ ಇಲ್ಲಾಂದ್ರೆ ಏನಾಗುತ್ತೆ ಹೇಳಿ?’

‘ ಏನಾಗುತ್ತೆ?’

‘ ಅಯ್ಯೊ ಚಚ್ಕೊಂಡ್ರು ನಿಮ್ ಹತ್ರ… ಸಾರ್ ಕಂಪನೀಲಿ ಎಲ್ಲಾದಕ್ಕು ಬಡ್ಜೆಟ್ಟಿನ ಕೋಟಾ ಇರುತ್ತೆ, ಹಾಗೆ ಪ್ರಮೋಶನ್ಗೂ ಕೂಡಾ..’

ನನಗೆ ಸ್ವಲ್ಪ ವಿಷಯದ ವಾಸನೆ ಹತ್ತತೊಡಗಿತು..

‘ ಕಂಪನೀಲಿ ಪ್ರಮೋಶನ್ ಬಡ್ಜೆಟ್ಟು ಹಾಗೆ ಇಟ್ಟು ಅವರ ಪರ್ಸೆಂಟೇಜ್ ಐವತ್ತಾಗಬೇಕು ಅಂದ್ರೆ ಏನಾಗುತ್ತೆ ಹೇಳಿ?’

‘ ಗೊತ್ತಾಯ್ತು ಬಿಡೊ.. ಇದರರ್ಥ ಮುಂದಿನ ಐದು ವರ್ಷ ಗುರಿ ಮುಟ್ಟೋಕೆ ಅಂತ, ಜಾಸ್ತಿ ಜಾಸ್ತಿ ಅವರಿಗೆ ಪ್ರಮೋಶನ್, ಪೊಸಿಷನ್ನು ಕೊಡ್ಬೇಕಾಗುತ್ತೆ… ಆದರೆ ಬಡ್ಜೆಟ್ ಲಿಮಿಟ್ ಇರೋದ್ರಿಂದ ಎಲಿಜಿಬಲಿಟಿ ಇರೋ ಗಂಡಸರಿಗು ಕೊಡೋಕಾಗ್ದೆ ಸೈಡ್ ಲೈನ್ ಮಾಡ್ಬೇಕಾಗುತ್ತೆ.. ಎಲ್ಲಾ ಬ್ಯಾಲೆನ್ಸ್ ಆಗೋತನಕ…’ ಬೋಧಿ ವೃಕ್ಷದಡಿ ಜ್ಞಾನೋದಯವಾದ ಬುದ್ಧನ ಶಾಂತ ದನಿಯಲ್ಲಿ ತಣ್ಣಗೆ ನುಡಿದೆ ನಾನು.

ಕೊಂಚ ಹೊತ್ತು ಮ್ಲಾನವದನನಾಗಿ ಮಾತಾಡದೆ ಕೂತಿದ್ದ ಗುಬ್ಬಣ್ಣ… ಅವನ ಕೊನೆ ಪ್ರಮೋಶನ್ ಬಂದು ಈಗಾಗಲೆ ಆರೇಳು ವರ್ಷವೇ ಕಳೆದುಹೋಗಿತ್ತು.. ಈ ಬಾರಿ ಬಂದೆ ಬರುವುದೆಂದು ತುಂಬಾ ನಂಬಿಕೆ ಇಟ್ಟುಕೊಂಡು ಕೂತಿದ್ದವನಿಗೆ ಈ ಹೊಸ ಡೆವಲಪ್ಮೆಂಟು ರಾಹು ಬಡಿದಂತೆ ಅಡ್ಡಗಾಲಿಕ್ಕುವ ಎಲ್ಲಾ ಸಾಧ್ಯತೆಗಳು ಗೋಚರಿಸತೊಡಗಿದ್ದವು.. ಅದಕ್ಕೆ ಬಾದಾಮ್ ಚಿಕನ್ನಿನ ಮುಂದೆ ಕೂತಿದ್ದು, ಐಸಿನಲ್ಲಿಟ್ಟ ಕೋಲ್ಡ್ ಸಾಲ್ಮನ್ನಿನ ಹಾಗೆ ಮುಖ ಮಾಡಿಕೊಂಡು ಕೂತಿದ್ದ ಗುಬ್ಬಣ್ಣ. ಹೀಗೆ ಅವನ ತರದ ಪಾಪದವರು ಇನ್ನು ಎಷ್ಟು ಮಂದಿಯಿರುವರೊ ಪಾಪ..?

‘ಗುಬ್ಬಣ್ಣ ಇದೇನೊ ಒಂದೊ ಎರಡೊ ಕಂಪನಿಗಳ ಕಥೆಯಾದರೆ ಏನಾದರು ಹಾಳಾಗಿ ಹೋಗಲಿ ಎನ್ನಬಹುದು.. ಆದರೆ ಇಡಿ ಜಗತ್ತೆ ಮಾತಾಡಿಕೊಂಡು ಹೊರಟಿರುವ ಹಾಗೆ ಒಗ್ಗಟ್ಟಲ್ಲಿ ಜಾರಿ ಮಾಡುತ್ತಾ ಇರೋ ಹಾಗಿದೆಯಲ್ಲಯ್ಯ ? ಹೌ ಡು ಯು ಫೇಸ್ ಸಚ್ ಎ ತ್ಸುನಾಮಿ..?’ ಎಂದೆ.

‘ ಸಾರ್.. ಹಾಗಂತ ಸುಮ್ನೆ ಇದ್ರೆ ಅದೂ ದೊಡ್ಡ ಅನ್ಯಾಯ ಅಲ್ವಾ ಸಾರ್? ವೀ ಆರ್ ನಾಟ್ ಎಗೆನೆಸ್ಟ್ ದಿಸ್ ಇನಿಶಿಯೇಟೀವ್.. ವೀ ಆರ್ ಓನ್ಲಿ ಆಸ್ಕಿಂಗ್ ಇಟ್ ಟು ಬಿ ಫೇರ್ ಟು ಅಸ್..’

‘ ಸುಮ್ಮನಿರದೆ ಚಳುವಳಿ ಮಾಡ್ತೀರಾ ಗುಬ್ಬಣ್ಣಾ..? ಇದೆಲ್ಲಾ ಆಗೊ ಹೋಗೊ ಮಾತಾ? ಹೇಗ್ರಪ್ಪ ಮಾಡ್ತೀರಾ? ಯಾರ ಹತ್ರ ಮಾಡ್ತೀರಾ?’ ಎಂದೆ ಸ್ವಲ್ಪ ಗಾಬರಿಯ ದನಿಯಲ್ಲೆ.

‘ ಅದಕ್ಕೆ ಅಲ್ವಾ ಸಾರ್ ನಿಮ್ ಹತ್ರ ಬಂದಿದ್ದು…’

ನಾನು ಈ ಜಾಗತಿಕ ಚಕ್ರವ್ಯೂಹದಲ್ಲಿ ಹೇಗೆ ಪಾತ್ರ ವಹಿಸಬಲ್ಲೆ ಎಂಬ ಅನುಮಾನ ಮೊಳೆಯುವ ಮೊದಲೆ ಗುಬ್ಬಣ್ಣನ ಮಾತು ಮುಂದುವರೆದಿತ್ತು.., ‘ ಸಾರ್.. ನೀವ್ ಹೇಗು ಕಥೆ, ಕವನಾ ಅಂತ ಬರ್ಕೊಂಡ್ ಸುಮ್ನೆ ಟೈಮ್ ವೇಸ್ಟ್ ಮಾಡ್ತಿರ್ತೀರಾ.. ಅದರ ಬದಲು ಈಗ ನಾನು ಹೇಳೊ ಥೀಮಲ್ಲಿ ಒಂದು ಫರ್ಸ್ಟ್ ಕ್ಲಾಸ್ ಇಂಗ್ಲೀಷ್ ಆರ್ಟಿಕಲ್ ಬರೆದುಕೊಡಿ.. ನಮಗೆ ಗೊತ್ತಿರೊರೊಬ್ಬರು ಇಂಟರ್ ನ್ಯಾಶನಲ್ ಮ್ಯಾಗಜೈನಿನಲ್ಲಿ ಪಬ್ಲಿಷ್ ಮಾಡೋದೆ ಅಲ್ದೆ, ಐಎಮೆಫ್ ತರದ ಇಂಟರ್ನ್ಯಾಶನಲ್ ಲಾಬಿನಲ್ಲಿ ಈ ಆರ್ಗ್ಯುಮೆಂಟ್ ಇಟ್ಕೊಂಡು ಈ ಅನ್ಯಾಯನ ಎತ್ತಿ ತೋರಿಸ್ಬೇಕೂಂತ ಪ್ಲಾನ್ ಮಾಡ್ತಾ ಇದಾರೆ… ಆದರೆ ಇದು ಒಬ್ರು, ಇಬ್ರು ಮಾಡೊ ಕೆಲಸ ಅಲ್ಲಾ… ನೀವು ನಿಮ್ಮ ತರದವರು ಒಂದು ಹತ್ತಾರು ಜನ ಬರೆದುದ್ದಕ್ಕೆ ನಮ್ಮಂತಹ ಸಾವಿರಾರು ಜನ ಸೈನ್ ಹಾಕ್ತೀವಿ, ಪೆಟಿಶನ್ನಿಗೆ ಸ್ಟ್ರೆಂತ್ ಬರೊ ಹಾಗೆ. ನೀವೊಂದು ಸರಿಯಾದ ರೀತಿಯ ಆರ್ಟಿಕಲ್ ಬರೆದ್ರೆ ರಾತ್ರೊ ಫೇಮಸ್ ಆಗಿಬಿಡಬಹುದು…’ ಎಂದು ದೊಡ್ಡ ಭಾಷಣವನ್ನೆ ಮಾಡಿಬಿಟ್ಟ.

‘ಗುಬ್ಬಣ್ಣಾ ಕಥೆ ಅನ್ನು ಕವನ ಅನ್ನು, ಊಹೆ ಮಾಡಿ ಹುಟ್ಟಿಸ್ಕೊಂಡು ಏನೊ ಬರೆದುಬಿಡಬಹುದು..ಇದು ಸೀರಿಯಸ್ ಆರ್ಟಿಕಲ್.. ಅಲ್ದೆ ಸರಿಯಾದ ಥೀಮಿನ ಐಡಿಯಾನೂ ಇಲ್ದೆ ನಾನು ಏನೂಂತ ಬರೀಲಿ?’ ನಾನಿನ್ನು ಅರ್ಥವಾಗದ ಗೊಂದಲದಲ್ಲೆ ನುಡಿದೆ.. ಒಂದು ಕಡೆ ಓವರ್ನೈಟ್ ಹೆಸರಾಗಿಬಿಡುವ ಛಾನ್ಸ್ ಎಂದು ಎಗ್ಸೈಟ್ ಆಗುತ್ತಿದ್ದರೆ, ಮತ್ತೊಂದೆಡೆ ‘ಸರಿಯಾದ ಹೂರಣ’ವಿಲ್ಲದೆ ಇದೆಲ್ಲಾ ಅಗುವ ಮಾತಾ ?’ ಎನ್ನುವ ಅನುಮಾನದ ಜಿಜ್ಞಾಸೆ.

‘ ಸಾರ್.. ಆ ಐಡಿಯಾ ಫ್ಲಾಟ್ ಫಾರಂ ಬೇಕಾದಷ್ಟು ಇದೆ… ಇದುವರೆವಿಗು ಕೈಗಾರಿಕೆ, ಇಂಡಸ್ಟ್ರಿಗಳಲ್ಲಿ ಅವರಿಗೆ ಅನ್ಯಾಯ ಆಗಿರೊ ಹಾಗೆ ಇನ್ನು ಎಷ್ಟೊ ಕಡೆ ನಮಗು ಅನ್ಯಾವಾಗಿದೆ.. ಅದನ್ನೆಲ್ಲ ಸಹಿಸ್ಕೊಂಡೆ ಅಡ್ಜೆಸ್ಟ್ ಮಾಡ್ಕೊಂಡೆ ನಾವೂ ಹೋಗ್ತಾ ಇಲ್ವಾ..?’

‘ ಅರ್ಥವಾಗಲಿಲ್ಲ ಗುಬ್ಬಣ್ಣ..?’

‘ ಸಾರ್.. ಒಂದು ದೊಡ್ಡ ಉದಾಹರಣೆ ಕೊಡ್ತೀನಿ ನೋಡಿ ಸಾರ್… ಹಿಂದೆಲ್ಲ ಎಷ್ಟೊಂದು ಸಂಶೋಧನೆಗಳು ನಡೆದರು, ಏನೆಲ್ಲ ಕಂಡುಹಿಡಿದರು ಈ ಪುರುಷರು ಅದಕ್ಕೆಲ್ಲ ಸ್ತ್ರೀಲಿಂಗದಲ್ಲಿ ಹೆಸರಿಟ್ಟು ಎಷ್ಟೊಂದು ಗೌರವ ತೋರಿಸಿದರು? ನಾವೀಗಲೂ ಅದನ್ನೆ ಅನುಕರಿಸುತ್ತಿಲ್ಲವಾ? ಅದನ್ನೇನಾದರೂ ಬದಲಿಸಲಿಕ್ಕೆ ಕೇಳುತ್ತಿದ್ದೀವಾ..?’

ಗುಬ್ಬಣ್ಣನ ಒಗಟಿನ ಉತ್ತರಗಳೆ ಹಾಗೆ.. ಯಾವುದೂ ನೇರ ಒಂದೆ ಇಡುಗಂಟಿನಲ್ಲಿ ಬರುವುದಿಲ್ಲ.. ಎಲ್ಲಾ ಕಂತು ಕಂತಲ್ಲೆ.

‘ ಇಲ್ಲಿ ಇದ್ದಕ್ಕಿದ್ದಂತೆ ಸ್ತ್ರೀಲಿಂಗ, ಪುಲ್ಲಿಂಗ ಎಲ್ಲಿಂದ ಬಂತೊ ಗುಬ್ಬಣ್ಣಾ? ನನಗೊಂದೂ ಅರ್ಥವಾಗುತ್ತಿಲ್ಲಾ..’

‘ ಸಾರ್.. ನಿಮಗೆ ಅರ್ಥ ಮಾಡಿಸೋಕೆ ಅಂತ ಒಂದು ಉದಾಹರಣೆ ಹೇಳ್ತೀನಿ.. ಕಂಪ್ಯೂಟರನ್ನೆ ತೊಗೊಳ್ಳಿ…’

ನೇರ ಐಟಿಗೆ ಕೈ ಹಾಕಿದ ಕಾರಣ ನನಗೂ ಕುತೂಹಲ ಕೆರಳಿತು, ‘ ಕಂಪ್ಯೂಟರಿನಲೆಂತದೊ ಲಿಂಗ ಬೇಧಾ?’ ಎಂದೆ.

‘ ಅದನ್ನೆ ಹೇಳ್ತಾ ಇದೀನಿ ಕೇಳಿ ಸಾರ್.. ‘ಕಂಪ್ಯೂಟರ್’ ಪದ ಸ್ತ್ರೀಲಿಂಗ ಸಾರ್..’

‘ ಹಾಂ…! ‘

‘ ಸಾರ್..ಎಲ್ಲರು ಅದನ್ನ ‘ ಕಂಪ್ಯೂಟ್ – ಹರ್’ ಅನ್ನುತ್ತರೆ ಹೊರತು, ‘ ಕಂಪ್ಯೂಟ್-ಹಿಮ್ ‘ ಅಂತಲೊ ಅಥವಾ ‘ ಕಂಪ್ಯೂಟ್- ಹೀ’ ಅಂತಲೊ, ಅಷ್ಟೇಕೆ ‘ಕಂಪ್ಯೂಟ್-ಇಟ್’ ಅಂತಲೊ ಕೇಳಿದ್ದೀರಾ..?’

ನಾನ್ಯಾವತ್ತು ಕೇಳಿರಲಿಲ್ಲ; ಜತೆಗೆ ಕಂಪ್ಯುಟರ್ ಅನ್ನು ‘ಸ್ತ್ರೀಲಿಂಗ’ ಅಂತಲೂ ಯೋಚಿಸಿರಲಿಲ್ಲ, ಗುಬ್ಬಣ್ಣನ ಅದ್ಭುತ ಕಲ್ಪನಾತೀತ ವಿವರಣೆಯನ್ನು ಕೇಳುವವರೆಗೆ.

‘ಗುಬ್ಬಣ್ಣ ಇದು ಯಾಕೊ ಸ್ವಲ್ಪ ಅತಿ ಅನ್ನಿಸ್ಲಿಲ್ವಾ?’ ಅಳುಕುತ್ತಳುಕುತ್ತಲೆ ಕೇಳಿದ್ದೆ ನಾನು.

‘ ಅತಿಯೇನು ಬಂತು ಸಾರ್.. ನಿಜ ಹೇಳ್ಬೇಕೂಂದ್ರೆ ಇಂಡಿಯಾದಲ್ಲಿ ಯಾವಾಗ್ಲೊ ಈ ಲೈನಲ್ಲಿ ಯೋಚ್ನೆ ಮಾಡೊ ಜನ ಹುಟ್ಕೊಂಡಿದಾರೆ ಸಾರ್.. ನಾವೇ ಇನ್ನು ಬ್ಯಾಕ್ವರ್ಡು…’

‘ ಇಂಡಿಯಾದಲ್ಲಾ..?’ ನಾನು ಅಚ್ಚರಿಯಲ್ಲೆ ಗೊಣಗಿದೆ..

‘ ಅದೇ ಸಾರ್ ಈ ಐಟಿ ಬಿಟ್ಟು ಆಟೋಮೋಟಿವ್ ಪದ ‘ಸ್ಕೂಟರ್’ ತೊಗೊಳ್ಳಿ.. ಅಲ್ಲೂ ನೋಡಿ ಕೊನೆಯಲ್ಲಿ ‘-ಹರ್’ ಸ್ತ್ರೀಲಿಂಗವೆ ಇದೆ.. ಆದರೆ ಓಡಿಸೋರು ಮಾತ್ರ ಗಂಡಸರೂ ಉಂಟು, ಹೆಂಗಸರೂ ಉಂಟು..’

‘ಅದಕ್ಕೆ..?’

‘ ಅದಕ್ಕೆ ನೋಡಿ, ಯಾವುದೊ ಒಂದು ಇಂಡಿಯನ್ ಕಂಪನಿಯವರು ‘ ಸ್ಕೂಟರ್’ ಬದಲು ‘ಸ್ಕೂಟೀ’ ತಯಾರಿಸಿ ಅದನ್ನ ಪುಲ್ಲಿಂಗವಾಗಿಸೊ ಪ್ರಯತ್ನ ಮಾಡಿದರು…’ ಎಂದ ಗುಬ್ಬಣ್ಣ..

‘ಎಲಾ ಇವನಾ?’ ಎಂದುಕೊಂಡೆ. ಸುಳ್ಳೊ ನಿಜವೊ ಆರ್ಗ್ಯುಮೆಂಟಂತು ಲಾಜಿಕಲ್ಲಾಗಂತು ಇದೆ ಅಂದುಕೊಂಡೆ. ನಿರ್ಜೀವಗಳಿಗೆ ಹೆಸರಿಡುವಾಗಲೂ ಇವೆಲ್ಲ ನೋಡಬೇಕಲ್ಲಪ್ಪಾ ಅನಿಸಿ ನಗುವು ಬಂತು.

‘ ಗುಬ್ಬಣ್ಣಾ.. ಎಲ್ಲೊ ಒಂದೆರಡು ರೈಮಿಂಗ್ ಇರೊ ಇಂತಹ ಒಂದೆರಡು ಉದಾಹರಣೆ ಕೊಟ್ಟು ಎಲ್ಲ ಜನರಲೈಸ್ ಮಾಡೋಕಾಗುತ್ತೇನೊ..? ಅವೆಲ್ಲ ಜಸ್ಟ್ ಕೋ-ಇನ್ಸಿಡೆನ್ಸ್ ಕಣೊ’ ಎಂದೆ.

‘ ಯಾವುದು ಸಾರ್ ಕೋ-ಇನ್ಸಿಡೆನ್ಸು? ಗಂಡಸರ ವೀಕ್ನೆಸ್ಸೆ ಹೆಂಗಸರಲ್ವಾ? ಅದಕ್ಕೆ ತಾನೆ ಅವರೇನೆ ಕಂಡು ಹಿಡಿದರು ಅದಕ್ಕೆ ಹೆಂಗಸರ ಹೆಸರೆ ಇಡೋದು? ಈ ಕಂಪ್ಯೂಟರು, ಸ್ಕೂಟರುಗಳ ಹಾಗೆ ಎಷ್ಟೊಂದು ಉದಾಹರಣೆ ಗಳಿವೆ ನೋಡಿ? ರೆಫ್ರಿಜಿರೇಟರ್, ಕುಕ್ಕರ್, ಮಿಕ್ಸರ್, ಫುಡ್ ಪ್ರೋಸೆಸ್ಸರ್, ಟೇಪ್ ರೆಕಾರ್ಡರ, ಡೀವಿಡಿ ಪ್ಲೇಯರ್, ಅಡಾಪ್ಟರ್, ಏರ್ ಕಂಡೀಷನರ್, ಮೋಟಾರ್, ಹೆಲಿಕಾಪ್ಟರ್, ಬ್ಲೆಂಡರ್, ಚಾಪರ್, ಸ್ಲಿಪ್ಪರ್, ಸಾಕರ್, ಕ್ರಿಕೆಟರ್, ರೆಸ್ಲರ್, ಬಾಕ್ಸರ್, ಸಿಕ್ಸರ್, ಪೇಪರ್, ಸ್ಟಾಪ್ಲರ್, ಪಂಚರ್, ಟೈಯರ್, ಡ್ರೈವರ್, ಡಾಕ್ಟರ್, ಲಾಯರ್, ಎಂಜಿನಿಯರ್, ಮ್ಯಾನೇಜರ್, ಸುಪರ್ವೈಸರ್… ಎಲ್ಲಾ ‘..ಹರ್’ ಗಳೆ ಹೊರತು ‘…ಹಿಮ್’ ಆಗಲಿ ‘ ಹೀ’ ಆಗಲಿ ಇದೆಯಾ..? ಇದೆಲ್ಲಾ ಅವರ ಮೇಲಿರೊ ರೆಸ್ಪೆಕ್ಟಿಗೆ ಪ್ರೂಫ್ ಅಲ್ವಾ ಸಾರ್.. ? ಹಾಗೆ ನೋಡಿದರೆ ಇನ್ನು ಎಷ್ಟು ಉದಾಹರಣೆ ಬೇಕು…? ಲಿಸ್ಟ್ ಮಾಡ್ತಾನೆ ಹೋಗ್ಬಹುದು ಗೊತ್ತಾ ಸಾರ್…?’

ಹೀಗೆ ಅವ್ಯಾಹತವಾಗಿ ಸಾಗಿದ್ದ ಗುಬ್ಬಣ್ಣನ ಲಿಸ್ಟಿಂಗ್ ಅಡೆ ತಡೆಯಿಲ್ಲದೆ ನಾನ್-ಸ್ಟಾಪ್ ರೈಲಿನಂತೆ ಓಡುವುದು ಕಂಡು ನಾನೇ ಬ್ರೇಕ್ ಹಾಕಿ ನಿಲ್ಲಿಸಬೇಕಾಯ್ತು..

‘ ಓಕೆ ಓಕೆ ಗುಬ್ಬಣ್ಣ.. ಪಾಯಿಂಟ್ ನೋಟೆಡ್.. ಪಂಚ್-ಹರ್, ಟೈ-ಹರ್, ಬ್ಲೆಂಡ್-ಹರ್ ಗಳನ್ನೆಲ್ಲ ಬಿಟ್ಟು ವಿಷಯಕ್ಕೆ ಬಾ.. ನಾವ್ಹೀಗೆ ವಾದ ಮಾಡಿದ್ರೆ ನಿಮ್ಮ ಹೆಸರು ಯಾರಿಗೆ ಬೇಕು, ನಿಮಗೆ ಬೇಕಾದಂಗೆ ಬದಲಿಸಿಕೊಳ್ಳಿ ಅಂತ ‘ ಕಂಪ್ಯೂಟ್-ಹಿಮ್, ರೆಫ್ರಿಜಿರೇಟ್-ಹಿಮ್, ಕುಕ್-ಹಿಮ್, ಟೇಪ್ರೆಕಾರ್ಡ್-ಹಿಮ್, ಪುಡ್ ಪ್ರೊಸೆಸ್ಸ್-ಹಿಮ್, ಬಾಕ್ಸ್-ಹಿಮ್, ಪಂಚ್-ಹಿಮ್, ಚಾಪ್-ಹಿಮ್, ಬ್ಲೆಂಡ್-ಹಿಮ್ ಅಂತೆಲ್ಲ ಹೊಸ ನಾಮಕರಣ ಮಾಡಿ ಹಾಗೆ ಕರೆದು ಕರೆದು ಹೆಸರಲ್ಲೆ ಕೊಂದು ಹಾಕಿಬಿಡ್ತಾರೊ… ಇದುವರೆವಿಗು ಹಾಗೆ ಹೆಸರಿಟ್ಟಿದ್ದೆ ಹೆಂಗಸರ ಮೇಲಿನ ದಬ್ಬಾಳಿಕೆಗೆ ಸಾಕ್ಷಿ ಅಂತ ಗುಲ್ಲೆಬ್ಬಿಸಿಬಿಟ್ಟರಂತು ಕಾವ್ಯಮಯವಾಗಿಟ್ಟ, ಇದ್ದ ಹೆಸರುಗಳು ಕಾಂಟ್ರೋವರ್ಸಿಯಾಗಿಬಿಡುತ್ತೆ ಕಣೊ….’

ಅದನ್ನೆಲ್ಲ ಕೇಳುವ ಮೂಡಿನಲ್ಲಿರಲಿಲ್ಲ ಗುಬ್ಬಣ್ಣ, ‘ ಸಾರ್, ಯಾವುದರಲ್ಲಿ ತಾನೆ ರಿಸ್ಕು ಇರಲ್ಲ ಹೇಳಿ? ಇನ್ ಫ್ಯಾಕ್ಟ್, ನಾವೇನು ಅವರ ವಿರುದ್ಧ ಪ್ರೊಟೆಸ್ತ್ ಮಾಡ್ತಾ ಇದೀವಾ ? ನಮಗೆ ಅನ್ಯಾಯವಾಗದ ಹಾಗೆ ಅವರ ಪ್ರಗತಿಯೂ ಆಗೊ ಹಾಗೆ ಏನಾದರು ಮೆಶರ್ ಮಾಡಿ ಅಂತ ಕೇಳ್ತಿದ್ದೀವೆ ಹೊರತು, ಅವರದನ್ನು ಕೊಡಬಾರದು ಅಂತಿಲ್ಲವಲ್ಲ..? ಅವರಿಗೆ ನಾವು ಸಪೋರ್ಟ್ ಮಾಡಿದ ಲೆಕ್ಕವೆ ಅಲ್ವಾ..? ಬೇಕಿದ್ರೆ ಜತೆಗೊಂದು ಕ್ಯಾಚಿ ಸ್ಲೋಗನ್ನೂ ಸೇರಿಸಿ – ‘ಮಹಿಳಾ ಮ್ಯಾನೇಜ್ಮೆಂಟ್ ಹೆಚ್ಚಲಿ, ಪುರುಷರ ಹಕ್ಕಿಗೆ ಚ್ಯುತಿ ಬರದಿರಲಿ’ ಅಂತ..’

ಗುಬ್ಬಣ್ಣ ಬಿಲ್ಕುಲ್ ರೆಡಿಯಾಗಿ ಬಂದಂತಿತ್ತು.. ನಾನು ಬರೆದದ್ದು ಇಂಟರನ್ಯಾಶನಲ್ ಲೆವಲ್ಲಲ್ಲಿರಲಿ, ಯಾವುದೊ ಒಂದು ನಾಲ್ಕೈದು ಜನ ಓದೊ ಬ್ಲಾಗಿನಲ್ಲಿ ಬರುತ್ತೆ ಅಂದರು ನಾನು ಬರೆದುಕೊಡುವವನೆ ಅಂತ ಅವನಿಗೆ ಚೆನ್ನಾಗಿ ಗೊತ್ತು.. ನನ್ನ ವೀಕ್ ಏರಿಯ ಅದು..

‘ಟೆಲ್ ಮಿ ವಾಟ್ ಶುಡ್ ಐ ಡು?’ ಎಂದೆ..

‘ ಏನಿಲ್ಲ ಸಾರ್, ಇದೇ ತರದ ಒಂದಷ್ಟು ಆರ್ಗ್ಯುಮೆಂಟ್ ಒಟ್ಟಾಗಿಸಿ ನೀವೊಂದು ಅದ್ಬುತ ಲೇಖನ ಬರೆದುಕೊಡಿ ಸಾಕು.. ಮಿಕ್ಕಿದ್ದು ನನಗೆ ಬಿಡಿ.. ನೋಡ್ತಾ ಇರಿ ಹೇಗೆ ನಿಮ್ಮನ್ನ ಸ್ಟಾರ್ ಮಾಡಿಬಿಡ್ತೀನಿ ಅಂತ’ ಎಂದ.

ನನಗೆ ಅದರ ಬಗೆ ಅನುಮಾನವಿದ್ದರೂ, ಹಾಳು ಕೀರ್ತಿಕಾಮನೆಯ ಶನಿ ಯಾರನು ತಾನೆ ಬಿಟ್ಟಿದ್ದು? ಪ್ರಲೋಭನೆಗೊಳಗಾದವನಂತೆ ಆಯಾಚಿತವಾಗಿ ತಲೆಯಾಡಿಸಿದ್ದೆ…

‘ ಆದರೆ ಒಂದೆ ಒಂದು ಕಂಡೀಷನ್ನು ಸಾರ್..’

ಇದೋ ‘ ಕ್ಯಾಚ್’ ಈಗ ಬಂತು ಅಂದುಕೊಂಡೆ – ‘ ಕಂಡೀಷನ್ನಾ? ಏನಾ ಕಂಡೀಷನ್ನು?’

‘ ಏನಿಲ್ಲಾ ಸಾರ್ ಗಾಬರಿಯಾಗಬೇಡಿ.. ಈ ಲೇಖನ ನಾಳೆ ಬೆಳಿಗ್ಗೆಯೆ ಕಳಿಸಬೇಕಂತೆ.. ಅಂದರೆ ಇವತ್ತು ರಾತ್ರಿಯೆ ನೀವಿದನ್ನ ಬರೆದುಕೊಡಬೇಕು..’

‘ ಗುಬ್ಬಣ್ಣಾ ಈಗಾಗಲೆ ಸಾಯಂಕಾಲ..!’

‘ ಸಾರ್.. ಇಂಟರ ನ್ಯಾಶನಲ್ ಎಕ್ಸ್ ಪೋಷರ್.. ಸುಮ್ಮನೆ ಬಿಟ್ಟುಕೊಡಬೇಡಿ’ ಗುಬ್ಬಣ್ಣ ಮತ್ತೆ ಪ್ರಲೋಭಿಸಿದ್ದ..

‘ ಸರಿ ಹಾಳಾಗಲಿ.. ಏನೊ ಬರೆದು ರಾತ್ರಿಯೆ ಕಳಿಸುತ್ತೀನಿ… ಏನಾಯ್ತು ಅಂತ ಬೆಳಿಗ್ಗೆ ಹೇಳು’ ಎಂದು ಮಾತು ಮುಗಿಸಿದ್ದೆ.

‘ ಸಾರ್.. ಇವತ್ತೆ ಲಾಸ್ಟ್ ಡೇಟ್ ಆಗಿರೋದ್ರಿಂದ ಡೈರೆಕ್ಟಾಗಿ ಈ ಇ-ಮೇಲ್ ಅಡ್ರೆಸ್ಸಿಗೆ ಕಳಿಸಿ ಅಂತ ಹೇಳಿದ್ದಾರೆ, ತಗೊಳ್ಳಿ’ ಅಂತ ಒಂದು ಮಿಂಚಂಚೆ ವಿಳಾಸವಿದ್ದ ಚೀಟಿ ಜೇಬಿಂದ ತೆಗೆದುಕೊಟ್ಟವನೆ ಮತ್ತೆ ಮಿಕ್ಕುಳಿದ ಬಾದಮ್ ಚಿಕನ್ನಿನತ್ತ ಗಮನ ಹರಿಸಿದ.

ಮನೆಗೆ ಬಂದವನೆ ನೇರ ಕಂಪ್ಯೂಟರಿನ ಮುಂದೆ ಕುಳಿತು ‘ಕಾಂಟ್ರೊವರ್ಸಿ’ ಆಗದ ಹಾಗೆ, ಎರಡು ಕಡೆಯ ಪಾಯಿಂಟುಗಳು ಹೈ ಲೈಟ್ ಆಗುವ ಹಾಗೆ, ಒಂದು ಲೇಖನ ಬರೆದು, ತಿದ್ದಿ ತೀಡಿ, ಮಧ್ಯರಾತ್ರಿ ಹನ್ನೆರಡಾಗುವ ಮೊದಲೆ ಇ-ಮೇಲಲ್ಲಿ ಕಳಿಸಿ ಮೇಲೆದ್ದಿದ್ದೆ. ಸುಸ್ತಾಗಿ ನಿದ್ದೆ ಎಳೆಯುತ್ತ ಇದ್ದುದರ ಜತೆಗೆ ಬರೆದ ಆಯಾಸವೂ ಸೇರಿಕೊಂಡು ಹಾಸಿಗೆಗೆ ಬಿದ್ದಂತೆ ಗಾಢ ನಿದ್ದೆಗೆ ಜಾರಿಕೊಂಡ್ದಿದ್ದೆ.. ರಾತ್ರಿಯೆಲ್ಲಾ ಇಂಟರ್ ನ್ಯಾಶನಲ್ ಮ್ಯಾಗಜೈನಿನಲ್ಲಿ ಪಬ್ಲಿಷ್ ಆದ ಹಾಗೆ, ಫರ್ಸ್ಟ್ ಪ್ರೈಜು ಹೊಡೆದ ಹಾಗೆ… ಏನೇನೊ ಕನಸು…

ಮರುದಿನ ಎದ್ದಾಗಲೆ ಮಟಮಟ ಮಧ್ಯಾಹ್ನವಾಗಿ ಹಿಂದಿನ ದಿನದ್ದೆಲ್ಲ ಮರೆತೆ ಹೋದಂತಾಗಿತ್ತು. ಪೂರ್ತಿ ಎಚ್ಚರವಾಗುತ್ತಿದ್ದಂತೆ ಹಿಂದಿನ ರಾತ್ರಿ ಕಳಿಸಿದ್ದ ಮಿಂಚಂಚೆ ನೆನಪಾಗಿ ಗುಬ್ಬಣ್ಣನಿಗೆ ಪೋನಾಯಿಸಿದೆ. ಲೈನಿನಲ್ಲಿ ಸಿಕ್ಕಿದರು ಯಾಕೊ ಗುಬ್ಬಣ್ಣನ ದನಿ ಸ್ವಲ್ಪ’ಡೌನ್’ ಆದಂತಿತ್ತು..

‘ ಸಾರ್..ಈಗ ತುಂಬ ಬಿಜಿ.. ಆಮೇಲೆ ಪೋನ್ ಮಾಡ್ತೀನಿ.. ‘ ಎಂದ

‘ಯಾಕೊ ವಾಯ್ಸ್ ಡಲ್ಲೂ ಗುಬ್ಬಣ್ಣ? ಹುಷಾರಾಗಿದ್ದಿಯಾ ತಾನೆ ? ಇವತ್ತು ಆಫೀಸಿಗೆ ರಜೆಯಲ್ವ – ಇವತ್ತೆಂತಾ ಬಿಜಿನಯ್ಯ..?’ ಎಂದೆ.

‘ ಸಾರ್.. ಎಲ್ಲಾ ಆಮೇಲೆ ಹೇಳ್ತೀನಿ… ಸ್ವಲ್ಪ ಅರ್ಜೆಂಟು’ ಅಂದಾಗ ನನಗೇಕೊ ಮೆಲ್ಲಗೆ ಅನುಮಾನ ಶುರುವಾಯ್ತು.

‘ ಗುಬ್ಬಣ್ಣಾ.. ನೀನು ಹೇಳಿದ್ದ ಇ-ಮೇಲ್ ಅಡ್ರೆಸ್ಸಿಗೆ ಆರ್ಟಿಕಲ್ ಬರೆದು ಕಳಿಸಿಬಿಟ್ಟೆ ಕಣೊ, ರಾತ್ರಿ ಹನ್ನೆರಡಾಗೊ ಮೊದಲೆ… ಇನ್ನೊಂದು ಐದು ನಿಮಿಷ ತಡವಾಗಿದ್ರು ಡೇಡ್ ಲೈನ್ ಮಿಸ್ ಆಗಿಬಿಡ್ತಿತ್ತು..’ ಎಂದೆ.

‘ ಕಳಿಸಿಯೆಬಿಟ್ರಾ..? ಕಳಿಸದೆ ಇದ್ರೆ ಚೆನ್ನಾಗಿತ್ತೇನೊ..?’ ಗುಬ್ಬಣ್ಣ ಏನೊ ಗೊಣಗುಟ್ಟಿದ್ದು ಕೇಳಿಸಿತು…

‘ ಗುಬ್ಬಣ್ಣಾ… ಯಾಕೊ ನಿನ್ನೆಯೆಲ್ಲ ಅಷ್ಟೊಂದ್ ಅರ್ಜೆಂಟ್ ಮಾಡಿದವನು ಇವತ್ತು ಪೂರ್ತಿ ಟುಸ್ ಬಲೂನಿನ ಹಾಗೆ ಮಾತಾಡ್ತಾ ಇದ್ದೀ..?’

‘ಸಾರ್…’ ರಾಗವಾಗಿ ಎಳೆದ ಗುಬ್ಬಣ್ಣನ ದನಿ ಕೇಳಿಯೆ ಏನೊ ಎಡವಟ್ಟಿರುವಂತೆ ಅನಿಸಿತು…

‘ಏನೊ..?’

‘ನಾವಿಬ್ಬರು ಏಮಾರಿಬಿಟ್ವಿ ಸಾರ್…’

ನಾನು ಕೂತಲ್ಲೆ ಬಾಂಬ್ ಬಿದ್ದವರಂತೆ ಅದುರಿಬಿದ್ದೆ ಅವನ ಮಾತು ಕೇಳುತ್ತಿದ್ದಂತೆ, ಆ ಗಾಬರಿಯಲ್ಲೆ ‘ಯಾಕೊ.. ಏನಾಯ್ತೊ..?’ ಎಂದು ಹೆಚ್ಚು ಕಡಿಮೆ ಕಿರುಚಿದ ದನಿಯಲ್ಲಿ…..

‘ ಸಾರ್ …ಇವತ್ತು ಬೆಳಿಗ್ಗೆ ಇನ್ನೊಂದು ಇ-ಮೇಲ್ ಬಂದಿತ್ತು ಸಾರ್.. ನಿನ್ನೆ ನಾವು ಕಳಿಸಿದ ಇ-ಮೇಲ್ ಎಲ್ಲ ಹೋಕ್ಸ್ ಸಾರ್, ಬರಿ ಫೇಕೂ..’ ಎಂದ…

‘ವಾ….ಟ್…? ಇಂಟರ ನ್ಯಾಶನಲ್ ಮ್ಯಾಗಜೈನ್..? ಅರ್ಟಿಕಲ್ ಪಬ್ಲಿಷಿಂಗ್.. .ಮೆನ್ಸ್ ಕಾಸ್.. ? ಎಲ್ಲಾ ಹೋಕ್ಸಾ…?’

‘ ಹೌದು ಸಾರ್.. ಇವತ್ತು ಬೆಳಿಗ್ಗೆ ಬಂದ ಮೆಸೇಜಲ್ಲಿ ಥ್ಯಾಂಕ್ಸ್ ಫಾರ್ ದ ಪಾರ್ಟಿಸಿಪೇಷನ್ ಅಂಡ್ ಸಪೋರ್ಟ್ ಅಂತ ಥ್ಯಾಂಕ್ಯೂ ಕಾರ್ಡ್ ಬೇರೆ ಕಳಿಸಿದ್ದಾರೆ ಸಾರ್..’ ಅಂದ.

ನನಗೆ ಗುಬ್ಬಣ್ಣನ ಮೇಲೆ ಪೂರ್ತಿ ಉರಿಯುತ್ತಿದ್ದರು ಕೋಪವನ್ನು ಹಾಗೆಯೆ ಬಿಗಿ ಹಿಡಿದವನೆ, ‘ ಯಾಕೆ ಹೋಕ್ಸ್ ಮಾಡಿದ್ದು ಅಂತೇನಾದ್ರೂ ಬರೆದಿದ್ದಾರಾ?’ ಎಂದೆ.

‘ ಸಾರ್.. ಇವ್ವತ್ತೆಷ್ಟು ಡೇಟು ಹೇಳಿ..?’

‘ ಈಗ ನನ್ನ ಪ್ರಶ್ನೆಗೆ ಉತ್ತರ ಹೇಳೂಂದ್ರೆ ಡೇಟ್ ಗೀಟೂ ಅಂತ ಡೈವರ್ಟ್ ಮಾಡೋಕ್ ಟ್ರೈ ಮಾಡ್ತಾ ಇದೀಯಾ ?’

‘ ಮೊದ್ಲು ಹೇಳಿ ಸಾ.. ಆಗ ನಿಮ್ಗೆ ಗೊತ್ತಾಗುತ್ತೆ..’

‘ ಇವತ್ತು ಏಪ್ರಿಲ್ ಎರಡೂ..’

‘ ಅಂದ ಮೇಲೆ ನಿನ್ನೆ ಡೇಟು ಎಷ್ಟು ಸಾರ್..’

‘ ಇವತ್ತು ಎರಡಾದ್ರೆ ನಿನ್ನೆ ಎಷ್ಟೂಂತ ಗೊತ್ತಿಲ್ವೆ.. ಏಪ್ರಿಲ್ ಫಸ್ಟ್..’

ಹಾಗೆನ್ನುತ್ತಿದ್ದಂತೆ ತಟ್ಟನೆ ನನಗೆ ಜ್ಞಾನೋದಯವಾಯ್ತು – ಇದು ಯಾರೊ ಏಪ್ರಿಲ್ ಪೂಲ್ ಮಾಡಲು ನಡೆಸಿದ ಫ್ರಾಂಕ್ ಎಂದು…!

‘ ಗುಬ್ಬಣ್ಣಾ..? ಅಂದ್ರೆ…..’

‘ ಹೌದು ಸಾರ್… ನಾವಿಬ್ರೂ ಯಾರೊ ಮಾಡಿದ ಫ್ರಾಂಕಿಗೆ ಏಪ್ರಿಲ್ ಪೂಲ್ ಆಗಿ ಹೋದ್ವಿ – ಸೊಫಿಸ್ಟಿಕೇಟ್ ಆಗಿ..’ ಗುಬ್ಬಣ್ಣನ ದನಿಯಲ್ಲಿದ್ದುದ್ದು ಖೇದವೊ, ಹಾಸ್ಯವೊ ಗೊತ್ತಾಗಲಿಲ್ಲ. ಹಾಗೆ ನೋಡಿದರೆ ನಿಜಕ್ಕು ಪೂಲ್ ಆಗಿದ್ದು ಅವನಲ್ಲ, ನಾನು.. ಅದಕ್ಕೆ ಅವನೂ ಒಳಗೊಳಗೆ ನಗುತ್ತಿರಬೇಕು..

‘ ಇವತ್ತು ಕಳಿಸಿದ ಮೇಸೇಜಲ್ಲಿ ಅದೇ ಬರೆದಿತ್ತು ಸಾರ್.. ಥ್ಯಾಂಕ್ ಫಾರ್ ದಿ ಎಫರ್ಟ್ ಅಂಡ್ ಪಾರ್ಟಿಸಿಪೇಶನ್ ಅಂತ.. ಜತೆಗೆ ಗುಡ್ ಲಕ್ ಫಾರ್ ದಿ ಆರ್ಟಿಕಲ್ ಅಂತ..’

ಮಿಂಚಂಚೆ ಕಳಿಸುವಾಗ, ರೆಕಮೆಂಡ್ ಮಾಡಿದವರ ಹೆಸರು, ಇ-ಮೇಲ್ ವಿಳಾಸವನ್ನು ಜತೆಗೆ ಸೇರಿಸಿ ಕಳಿಸಬೇಕೆಂದು ಯಾಕೆ ಹೇಳಿದ್ದರೆಂದು ಈಗರಿವಾಗಿತ್ತು. ನನ್ನ ಇ-ಮೇಲ್ ತೆಗೆದು ನೋಡಿದ್ದರೆ ಗುಬ್ಬಣ್ಣನ ಥ್ಯಾಂಕ್ಯೂ ಮೇಲ್ ನನ್ನ ಮೇಲ್ ಬಾಕ್ಸಲ್ಲೂ ಇರುತ್ತಿತ್ತೆಂದು ಖಚಿತವಾಗಿತ್ತು.

‘ ಗುಬ್ಬಣ್ಣಾ… ಇವತ್ತು ಸಾಯಂಕಾಲ ಫ್ರೀ ಇದೀಯಾ? ಜಗ್ಗಿಸ್ ರೆಸ್ಟೊರೆಂಟಲ್ಲಿ ಬಟರ್ ಚಿಕನ್ ತುಂಬಾ ಚೆನ್ನಾಗಿರುತ್ತೆ..’

ಗುಬ್ಬಣ್ಣಾ ಕಿಲಾಡಿ.. ಅವನಿಗೆ ಚಿಕನ್ನಿನ ಯಾವ ಸೈಡಿಗೆ ಬಟರು ಹಾಕಿರುತ್ತೆಂದು ಚೆನ್ನಾಗಿ ಗೊತ್ತು.. ‘ ಸಾರ್ ಇವತ್ತು ಪೂರ್ತಿ ಬಿಜಿ ನೆಕ್ಸ್ಟ್ ವೀಕ್ ನೋಡೋಣಾ … ಅಂದಹಾಗೆ ಇಬ್ಬರು ಹೀಗೆ ಏಮಾರಿದ್ದು ಯಾರಿಗು ಗೊತ್ತಾಗೋದು ಬೇಡಾ.. ನಾನೂ ಬಾಯ್ಬಿಡೊಲ್ಲಾ, ನೀವೂ ಸುಮ್ಮನಿದ್ದುಬಿಡಿ…’ ಎಂದು ಅವನೆ ಪೋನಿಟ್ಟುಬಿಟ್ಟ – ಮೊದಲ ಬಾರಿಗೆ…!

ನನಗೆ ಮಾತ್ರ ಕೋಪ ಇಳಿದಿರಲಿಲ್ಲ – ಅದರಲ್ಲು ಗುಬ್ಬಣ್ಣನ ಮೇಲೆ, ‘ಅವನು ಏಮಾರಿದ್ದಲ್ಲದೆ, ನನ್ನನ್ನು ಸಿಕ್ಕಿಸಿದನಲ್ಲಾ’ ಎಂದು. ಆ ಕೋಪಕ್ಕೆ ಮತ್ತೊಮ್ಮೆ ಕಂಪ್ಯೂಟರಿನ ಮುಂದೆ ಕುಳಿತೆ, ಇಡೀ ಎಪಿಸೋಡನ್ನೆ ಈ ಬರಹದ ರೂಪಕ್ಕಿಳಿಸಿ ಅವನನ್ನು ಎಕ್ಸ್ ಪೋಸ್ ಮಾಡಲು – ಹೀಗಾದರು ಅವನ ಮೇಲೆ ಸೇಡು ತೀರಿಸಿಕೊಳ್ಳುವವನ ಹಾಗೆ. ಬರೆದು ಪ್ರಕಟಿಸಿದ ಮೇಲೆ ಅವನಿಗೂ ಓದಿಸಬೇಕೆಂದಿದ್ದೇನೆ, ನಾನೆ ಕೂತು ಓದಿದರೂ ಸರಿಯೆ….

ಆದರೆ ಅದರಲ್ಲಿನ ದೊಡ್ಡ ಸಿಕ್ರೇಟ್ – ಎಪಿಸೋಡನ್ನ ಅವನ ಹೆಸರಲ್ಲಿ ಬರೆದು ಪ್ರಕಟಿಸುತ್ತಿದ್ದೇನೆಂದು ಮಾತ್ರ ಹೇಳುವುದಿಲ್ಲ – ಕನಿಷ್ಠ ಈ ಏಪ್ರಿಲ್ ತಿಂಗಳು ಮುಗಿಯುವವರೆಗಾದರೂ..!

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

ಗುಬ್ಬಣ್ಣ, ಏಪ್ರಿಲ್, ಪೂಲ್, ಏಪ್ರಿಲ್ ಪೂಲ್, ನಾಗೇಶ, ಮೈಸೂರು, ನಾಗೇಶ ಮೈಸೂರು, nagesha, mysore, nageshamysore

http://sampada.net/%E0%B2%8F%E0%B2%AA%E0%B3%8D%E0%B2%B0%E0%B2%BF%E0%B2%B2%E0%B3%8D-%E0%B2%AA%E0%B3%82%E0%B2%B2%E0%B3%8D%C2%A0

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s