00316. ಚಿಕಾಗೊ ಬ್ಲೂಸ್…

00316. ಚಿಕಾಗೊ ಬ್ಲೂಸ್…
___________________

ಚಿಕಾಗೊ, ಬ್ಲೂಸ್, ಪಶ್ಚಿಮ, ಬೆಟ್ಟ, ನಾಗೇಶ, ಮೈಸೂರು, ನಾಗೇಶಮೈಸೂರು, ಅಮೇರಿಕ, nagesha, mysore, nageshamysore

ಕಳೆದ ವಾರ ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಅಮೇರಿಕ ಎನ್ನುವ ಪಶ್ಚಿಮದ ಬೆಟ್ಟಗಳತ್ತ ಕಾಲಿಕ್ಕುವ ಕಾಲ ಕೂಡಿಬಂದಿತ್ತು – ವಾಣಿಜ್ಯ ಭೇಟಿಯ ಸಲುವಾಗಿ. ಅಲ್ಲಿಯ ತನಕ ಟಿ.ಕೆ. ರಾಮರಾಯರ ಅದೇ ಹೆಸರಿನ ಕಾದಂಬರಿಯ ತೇಜ, ಬೈರನ್, ಪ್ಲಾಹರ್ಟಿಗಳ ಹೊರತಾಗಿ ಅಮೇರಿಕದ ನೇರ ಪರಿಚಯವಿರಲಿಲ್ಲ. ಅದೇನು ದೂರವಿದೆಯೆಂಬ ಕಾರಣಕ್ಕೊ ಅಥವ ಮತ್ತಾವ ಅಳುಕಿಗೊ – ಇದುವರೆವಿಗು ಅಲ್ಲಿಗೆ ಹೋಗಿ ಕೆಲಸ ಮಾಡುವ ಅಥವಾ ಕಿರು ಪಯಣ ಕೈಗೊಳ್ಳುವ ಅವಕಾಶಗಳು ಸಿಕ್ಕಿದ್ದರು ಯಾಕೊ ಮನಸು ಮಾಡಿರಲಿಲ್ಲ.

ಎಲ್ಲಕ್ಕು ಕಾಲ ಕೂಡಿ ಬರಬೇಕೆನ್ನುತ್ತಾರೆ – ಈ ಬಾರಿ ಆದದ್ದು ಅದೇ ಇರಬೇಕು. ಹೊಸದಾಗಿ ವಹಿಸಿಕೊಂಡ ಜವಾಬ್ದಾರಿಯ ಜಾಗತಿಕ ಸಮಾವೇಶವೊಂದು ಈ ಬಾರಿ ಅಮೇರಿಕಾದಲ್ಲಿ ನಡೆಯುತ್ತಿದ್ದ ಕಾರಣ, ಒಂದು ವಾರದ ಮಟ್ಟಿಗೆ ಹೋಗಲೆ ಬೇಕಾಗಿ ಬಂದಿತ್ತು – ಗಾಳಿ / ಮಾರುತಗಳ ನಗರವೆಂದೆ ಹೆಸರಾದ ಚಿಕಾಗೊ ಸಿಟಿಗೆ. ಆ ಹೊರಡುವ ಸಿದ್ದತೆಗೆ ಅರ್ಜಿ ಹಾಕಿದ ವೀಸಾ ಪ್ರಕ್ರಿಯೆಯಿಂದಲೆ ಆರಂಭ – ಏನೊ ಮಹತ್ತರವಾದ ಕಾರ್ಯ ಕೈಗೆತ್ತಿಕೊಂಡ ಹಾಗೆ. ತಪ್ಪಿಲ್ಲದಂತೆ ಎಚ್ಚರಿಕೆಯಿಂದ ವೀಸಾ ಅರ್ಜಿ ತುಂಬಿಸಿದ್ದಾಗಲಿ, ಸ್ವತಃ ಮುಖತಃ ಆ ಎಂಬೆಸಿಗೆ ಹೋಗಿ ಅರ್ಜಿ ಸಲ್ಲಿಸಿ ಸಂದರ್ಶನದ ಪ್ರಶ್ನೆಗಳಿಗೆ ಉತ್ತರಿಸಿದ್ದಾಗಲಿ, ವೀಸಾ ಸಿಗುವುದೊ ಇಲ್ಲವೊ ಎಂದು ಆತಂಕದಿಂದ ಕಾದಿದ್ದಾಗಲಿ – ಯಾರಿಗೆ ಬೇಕಿತ್ತಪ್ಪ ಈ ಪ್ರಯಾಸದ ಪ್ರವಾಸ ಅದೂ ಹೆಚ್ಚು ಕಡಿಮೆ 24 ಗಂಟೆಯಾದರು ವಿಮಾನದಲ್ಲಿ ಕೂತು ಪಯಣಿಸುವ ರೇಜಿಗೆಯ ಜತೆ – ಎನಿಸಿ ಬೇಸತ್ತುಗೊಳ್ಳುವ ಹೊತ್ತಿಗೆ ವೀಸ ಸಿಕ್ಕಿದ ಸುದ್ದಿ ಬಂದಿತ್ತು. ಅದೂ ಪೂರ ಹತ್ತು ವರ್ಷದ ಅವಧಿಗೆ ಕೊಟ್ಟ ವಲಸೆ ರಹದಾರಿ ಎಂದರಿವಾದಾಗ – ಪರವಾಗಿಲ್ಲ ಅಷ್ಟು ಸಿದ್ದತೆ ಮಾಡಿದ್ದಕ್ಕು ವ್ಯರ್ಥವಾಗಲಿಲ್ಲ, ಹತ್ತು ವರ್ಷದ ವೀಸಾ ಸಿಕ್ಕಿತಲ್ಲ ಎಂದುಕೊಂಡು ಮಿಕ್ಕ ಪಯಣದ ಸಿದ್ದತೆ ನಡೆಸಿದ್ದೆ.

ವ್ಯವಹಾರ ನಿಮಿತ್ತದ ಪಯಣವಾದ ಕಾರಣ ಒಂದು ಚೂರೂ ಪುರುಸೊತ್ತಿರುವ ಸಾಧ್ಯತೆಯಿರಲಿಲ್ಲ. ಇಡೀ ದಿನದ ಸಮಾವೇಶ ರಾತ್ರಿಯೂಟವೂ ಸೇರಿ ಅದೇ ಹೋಟೆಲ್ಲಿನಲ್ಲಿ ನಡೆಯುತ್ತಿದ್ದ ಕಾರಣ ಹೊರಗೆ ಸುತ್ತಾಡುವ ಅವಕಾಶ ತುಂಬಾ ಕಮ್ಮಿಯಿತ್ತು. ಸಿಕ್ಕ ಚೂರು ಪಾರು ಬೆಳಗಿನ ಹೊತ್ತಿನ ಬಿಡುವಲ್ಲಿ ಸಿಟಿಯ ಮಧ್ಯದ ಮಿಲಿಯೆನ್ನಿಯಂ ಪಾರ್ಕ್ ಮತ್ತು ಸುತ್ತ ಮುತ್ತಲ ವಿಶಿಷ್ಠ ಕಟ್ಟಡ ವಾಸ್ತು ವಿನ್ಯಾಸ ಇತ್ಯಾದಿಗಳನ್ನು ಆ ಕೊರೆಯುವ ಚಳಿಯಲ್ಲಿ ಮುದುರಿಕೊಂಡೆ, ನದಿಯ ಸೇತುವೆ ಪಕ್ಕವೆ ನಡೆಯುತ್ತ ನೋಡಿದ್ದಷ್ಟೆ ಲಾಭ. ಆಗಷ್ಟೆ ಅರಿವಾಗಿದ್ದು ಅದನ್ಯಾಕೆ ‘ವಿಂಡೀ ಸಿಟಿ’ ಎಂದು ಕರೆಯುತ್ತಾರೆಂದು. ನಾನು ತಂದಿದ್ದ ದಿರುಸಿನ ಮೇರೆ ಮೀರಿ ಕೊರೆಯುವ ಆ ಹವಾಗುಣ, ಒಂದೆ ಬೆಳಗಿಗೆ ಮೂಗು ಕಟ್ಟಿಸಿ ಶೀತದ ಅನಾವರಣ ಮಾಡಿಬಿಟ್ಟಿತ್ತು.

ಸಮಾವೇಶದ ಭಾಗವಾಗಿ ದಿನವು ಬೆಳಿಗ್ಗೆ ಲಘು ವ್ಯಾಯಮ ಮಾಡಲೆ ಬೇಕಿದ್ದ ಕಾರಣ ಆ ದಿನಚರಿಯಿಂದ ತಪ್ಪಿಸಿಕೊಳ್ಳುವಂತಿರಲಿಲ್ಲ. ಒಂದು ರೀತಿ ಅದರಿಂದಲೆ ದೇಹದ ಶಾಖೋತ್ಪಾದನೆ ಹೆಚ್ಚಿ, ಆ ಚಳಿ ತಡೆಯುವ ಪ್ರತಿರೋಧ ಬರುತ್ತಿತ್ತೆಂದು ಕಾಣುತ್ತದೆ. ಹೀಗೆ ಒಂದು ದಿನ ರಾತ್ರಿಯೂಟಕ್ಕೆ ಒಮ್ಮೆ ಇಟಾಲಿಯನ್ ರೆಸ್ಟೋರೆಂಟಿಗೆ ಹೋದರೆ ಮತ್ತೊಮ್ಮೆ ಚಿಕಾಗೋದ ‘ಚಿಕಾಗೊ ಬ್ಲೂಸ್’ ಎಂದೆ ಹೆಸರಾದ ಬ್ಯಾಂಡಿನ ‘ಬಡ್ಡಿ ರೆಸ್ಟೋರೆಂಟ್’ನಲ್ಲಿ ಮತ್ತೊಂದು ದಿನ – ಅಬ್ಬರದ ಮಾದಕ ಸಂಗೀತದ ಜತೆಗೆ ಬಿಯರಿನ ಗ್ಲಾಸ್ ಹಿಡಿದು. ಆದರೆ ಎಲ್ಲೆ ಹೋದರೂ ಅಷ್ಟೆ – ಬರ್ಗರ್, ಸ್ಯಾಂಡ್ವಿಚ್ಚು, ಪೀಜಾ, ಪಾಸ್ತಾ ತರದ ಪಾಶ್ಚಾತ್ಯ ತಿನಿಸುಗಳು – ಮಾಂಸಾಹಾರದ ವೈವಿಧ್ಯಗಳ ಜತೆಗೆ. ವಾರಕ್ಕೆ ಒಂದು ಸಂಜೆ ಮಾತ್ರ ಗೆಳೆಯರೊಬ್ಬರ ಕೃಪೆಯಿಂದ ಅವರ ಕಾರಿನಲ್ಲಿ ಆಂಧ್ರ ಶೈಲಿಯ ಬಫೆಯೂಟಕ್ಕೆ ಹೋಗಿದ್ದು. ಮಿಕ್ಕೆಲ್ಲ, ಸೊಪ್ಪು ಸದೆ ಜತೆಗೆ ಒಗ್ಗಿದ ಆಹಾರದ ಹುಡುಕಾಟ ನಡೆಸಿ ‘ಸ್ವಾಹ’ ಮಾಡುವ ಕಾರ್ಯ.. ಹಣ್ಣು ಹಂಪಲ ಬ್ರೆಡ್ಡುಗಳು ಯಥೇಚ್ಛವಿರುವ ಕಾರಣ ಹೇಗೊ ನಿಭಾಯಿಸಬಹುದೆನ್ನುವುದು ನಿಜವಾದರೂ ಹಾಳು ಜಿಹ್ವಾಚಪಲಕ್ಕೆ ಕಡಿವಾಣ ಹಾಕುವುದು ಕಷ್ಟವೆ!

ಹಾಗೆ ಬರುವ ಮೊದಲು ಸಿಕ್ಕ ಎರಡು ಗಂಟೆಯ ಅವಧಿಯಲ್ಲಿ ಯಾರೊ ಹೋಗುತ್ತಿದ್ದವರ ಕಾರಿನಲ್ಲಿ ಜತೆಗೂಡಿ ಶಾಪಿಂಗಿಗೆ ನಡೆದಿದ್ದು ಆಯ್ತು – ಅರೋರಾ ಎಂಬ ಹೆಸರಾಂತ ಮಾಳಿಗೆ ಸಂಕೀರ್ಣದಲ್ಲಿ. ಊರಿಂದ ಐವತ್ತು ಮೈಲಿಯಾಚೆಯ ಬಯಲೊಂದರಲ್ಲಿ ಎಲ್ಲಾ ಪ್ರತಿಷ್ಟಿತ ಬ್ರಾಂಡುಗಳ ಶಾಖೆಗಳನ್ನು ತೆರೆದು ತಂತಮ್ಮ ಸರಕನ್ನು ಬಿಕರಿ ಮಾಡುವ ಆ ಜಾಗ ನೋಡಿದಾಗಲೆ ಅನಿಸಿತ್ತು – ಇದೆಲ್ಲ ಒಂದೆರಡು ಗಂಟೆಯಲ್ಲಿ ಸುತ್ತಿ ಮುಗಿಸುವ ಜಾಗವಲ್ಲ, ಕನಿಷ್ಠ ಒಂದು ದಿನವಾದರೂ ಬೇಕು ಎಂದು. ಆದರೆ ಇದ್ದದ್ದೆ ಒಂದು ಗಂಟೆ – ಸರಿ ಒಂದು ಕಡೆಯಿಂದ ನೋಡುತ್ತ ಹೋಗುವುದು, ಮನಸಿಗೆ ಹಿಡಿಸಿದರೆ ಹೆಚ್ಚೊ ಕಡಿಮೆಯೊ ಹೋಲಿಕೆಗಿಳಿಯದೆ ಕೊಂಡುಬಿಡುವುದು ಎಂದು ನಿರ್ಧರಿಸಿ ಹತ್ತಾರು ಅಂಗಡಿ ದಾಟಿದರು ಯಾಕೊ ಸೀಮಿತ ಸಮಯದ ಆತಂಕವೆ ಹೆಚ್ಚೆನಿಸಿ ಯಾವುದು ಕೊಳ್ಳಲಾಗದ ಗಡಿಬಿಡಿ ಶುರುವಾಯ್ತು. ಕೊನೆಗೆ ಕಣ್ಣಿಗೆ ಕಂಡ ರೀಬೋಕ್ ಮಾಳಿಗೆಯಿಂದ ಎಲ್ಲಾ ಸಮಸ್ಯೆ ತೀರಿಹೋಯ್ತು. ಮಿಕ್ಕ ಶಾಪಿಂಗೆಲ್ಲ ನಡೆದದ್ದು ಅದೊಂದೆ ಅಂಗಡಿಯಲ್ಲಿ – ಒಂದಷ್ಟು ಬ್ಯಾಗುಗಳು, ಲಗೇಜುಗಳು, ಟೀ ಶರ್ಟುಗಳು, ಶೂಸುಗಳು ಕೊಳ್ಳುವ ಹೊತ್ತಿಗೆ ಕಾರಿಗೆ ವಾಪಸಾಗುವ ಹೊತ್ತು ಹತ್ತಿರವಾಗಿಬಿಟ್ಟಿತ್ತು. ಹೀಗಾಗಿ ವಾಪಸು ಬರುವ ದಾರಿಯಲ್ಲಿ ಕಂಡ ಅಡಿದಾಸ್ ದೊಡ್ಡಂಗಡಿಗು ಬರಿ ಕಣ್ಣು ಹಾಯಿಸಲಷ್ಟೆ ಆಗಿದ್ದು. ಅಂತೂ ಶಾಪಿಂಗಿನ ಅನುಭವವೂ ಆಗಿ ಎಲ್ಲವು ಸುಸೂತ್ರವಾಗಿ ಮುಗಿದು ಮತ್ತೆ ವಿಮಾನವೇರುವ ಹೊತ್ತಿಗೆ ‘ರಿವರ್ಸ್ ಜೆಟ್ ಲ್ಯಾಗಿನ’ ಚಿಂತೆ ಆರಂಭವಾಗಿತ್ತು…! ಹೋಗುವಾಗ ಅಲ್ಲಿಗೆ ಹೊಂದಿಕೊಳ್ಳಲು ಮೂರು ದಿನ ಹಿಡಿದಿತ್ತು. ಈಗ ಅದನ್ನೆ ಹಿಂತಿರುಗುವ ಹಾದಿಗೆ ಹೊಂದಿಸಲು ಮತ್ತೆ ಮೂರು ದಿನ… ಸಿಂಗಪುರಕ್ಕೆ ಚಿಕಾಗೊಗೆ ಹದಿಮೂರು ಗಂಟೆ ವ್ಯತ್ಯಾಸವಿರುವ ಕಾರಣ ಅಲ್ಲಿ ಶನಿವಾರ ಬೆಳಗ್ಗೆಯೆ ಹೊರಟರು ಭಾನುವಾರ ಮಧ್ಯರಾತ್ರಿ ಬಂದಿಳಿಯಬೇಕಾಯ್ತು – ಕಟ್ಟಿದ ಮೂಗಿನ ಭಾರದೊಡನೆ.

ಹವಾಗುಣದ ಗೂಸಾದೊಡನೆ ‘ಚಿಕಾಗೊ ಬ್ಲೂಸು’ ಮಾದಕ ಅಬ್ಬರದ ಸಂಗಿತದ ಅನುಭವ ಮಿಶ್ರಗೊಂಡು, ‘ಕಟ್ಟಿದ ಮೂಗು-ಜೆಟ್ ಲ್ಯಾಗು’ ಕೊಟ್ಟ ಪರ್ಯಾಯ ರೀತಿಯ ‘ಚಿಕಾಗೊ ಬ್ಲೂಸ್’ ಸೇರಿಕೊಂಡು ಕಟ್ಟಿಕೊಟ್ಟ ಒಂದು ವಿಶಿಷ್ಠ ಅನುಭವಾನುಭೂತಿ ಕರಗಿ ಮರೆಯಾಗುವ ಮೊದಲೆ ಪದಗಳಲ್ಲಿ ಹಿಡಿದಿಡಬೇಕೆನಿಸಿದಾಗ ಮೂಡಿದ ಕವನ – ‘ಚಿಕಾಗೊ ಬ್ಲೂಸ್’ ; ಮತ್ತದರ ಸುತ್ತಿನ ಈ ವ್ಯಾಖ್ಯಾನ / ವಿವರಣೆಯ ಒಗ್ಗರಣೆ… 🙂

ಚಿಕಾಗೊ ಬ್ಲೂಸ್
____________

ಮಾದಕ ಸಂಗೀತದಬ್ಬರ
ಹಾಟ್ಡಾಗ್ ಸ್ಯಾಂಡ್ವಿಚ್ಚುಗಳ ನಡುವೆ
ಕೈಯಲ್ಹಿಡಿದ ಬಿಯರಿನ ಗ್ಲಾಸು
ಕಿವಿ ಗಡಚಿಕ್ಕುವ ಚಿಕಾಗೊ ಬ್ಲೂಸು! ||

ಅಬ್ಬರವೆ ಸಂಗಿತ ಅದೆ ಮಾಧುರ್ಯ
ಕಟ್ಟು ಸಡಿಲಿಸಿ ಚೀರುವ ಹೃದಯ
ಯಾರಾರ ಯಾತನೆ ಏನೋ ಜೀಯ
ಸದ್ದುಗದ್ದಲವೆ ಎಲ್ಲ ಮರೆಸುವ ಮಾಯ ||

ಏಪ್ರಿಲ್ಲ ಚಳಿ ಕರಗಿ ಬೆಚ್ಚಗಾಗಿಸಬೇಕಿತ್ತು
ಯಾಕೊ ಚಿಕಾಗೊ ಇನ್ನು ಬೆವರುತ್ತಲೆ ಇತ್ತು
ನಡುಗಿಸುವದೆ ಚಳಿ ಮಳೆ ಗಾಳಿ ನಗರ
ಬಟ್ಟ ಬಯಲಲಿ ನಡುವೆ ಕಟ್ಟಡ ಸಾಗರ ||

ದೊಡ್ಡದು ದೊಡ್ಡದಿಲ್ಲಿ ಎಲ್ಲ ಪೀಜಾ ಬರ್ಗರ
ಕಟ್ಟಡ ಆಳಾಕಾರ ಬಯಲು ದಿಗಿಲು
ಕಾಣರಲ್ಲ ಜನ ಕಾಲು ಹಾದಿ ನಿರ್ಜನ
ನಡೆಯಲೆ ಹಾದಿಯೆಲ್ಲಿ ಕಾರಿಟ್ಟವನೆ ಜಾಣ ||

ಬಿಸಿಲ ಬಾಣಲೆಯಿಂದ ನಡುಗಿಸೊ ಊರಿಗೆ
ನಡೆದಾಡೆ ಸಂಕೋಚ ದಿರಿಸೆ ಕೊರಗೆ
ಮೆಲ್ಲ ಮೆಲ್ಲನಡಿಯಿಡಲು ನೆಗಡಿ ಶೀತ
ಮೂಗು ಕಟ್ಟಿ ಗೊರಗೊರ ಹೋರಾಟ ಖಚಿತ ||

ಸುಧಾರಿಸಿಕೊಳುವ ಹೊತ್ತು ನೆನಪ ಹೊತ್ತು
ಚಿಕಾಗೊ ಬ್ಲೂಸ್ ಗುಂಗೆ ಉಳಿದಿತ್ತು
ಸಂಗೀತದಬ್ಬರವೊ ಬದುಕೊ ಆಯ್ಕೆ ಸ್ವಂತ
ಲೆಕ್ಕಿಸದೆ ನಡೆದಿದೆ ಚಿಕಾಗೊ ಸಂತ ಧೀಮಂತ ||

ಪಶ್ಚಿಮದ ಬೆಟ್ಟಗಳೊ ಪೂರ್ವದ ತಿರುಳೊ
ಪೂರ್ವ ಪಶ್ಚಿಮ ಮಿಲನ ಏನೆಲ್ಲ ಬಯಲು
ಮನುಜ ಮನುಜ ಬಾಂಧವ್ಯ ಮೀರಿಸಿ ಎಲ್ಲ
ಕಟ್ಟುವ ಸೇತುವೆ ಚಿಕಾಗೊಗೆ ಮಾತ್ರವಲ್ಲ ||

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

2 thoughts on “00316. ಚಿಕಾಗೊ ಬ್ಲೂಸ್…”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s