00319. ಪರದೇಶಿ ಚೌರ !

00319. ಪರದೇಶಿ ಚೌರ !
_________________

ಹೆಂಗಸರಿಗೆ ಹೋಲಿಸಿದರೆ ಗಂಡಸರಿಗೆ ಸುತ್ತಲಿನ ವಸ್ತುವಿನ ಇರುವಿಕೆ / ಇಲ್ಲದಿರುವಿಕೆಯ ಪರಿಜ್ಞಾನ ಕಮ್ಮಿ ಎನ್ನುತ್ತದೆ ಒಂದು ಅಧ್ಯಯನ. ಇದರನುಸಾರ ಕಣ್ಣೆದುರಿಗೆ ಇದ್ದರು ಗಮನಿಸದೆ ಅದನ್ನು ಎಲ್ಲೆಡೆ ಹುಡುಕುವ ದೌರ್ಬಲ್ಯ ಗಂಡಿನ ಮನಃಸತ್ವದ್ದಂತೆ. ಎಷ್ಟೊ ಬಾರಿ ಫ್ರಿಡ್ಜಿನಲ್ಲೊ, ಅಲಮೇರಾದಲ್ಲೊ, ವಾರ್ಡ್ರೋಬಿನಲ್ಲೊ – ಎಷ್ಟು ಹುಡುಕಿದರು ಸಿಗದ ವಸ್ತುವಿಗೆ ರೇಗಿಹೋಗಿ, ಕೂಗಾಡತೊಡಗಿದಾಗ ಮನೆಯಾಕೆ ಬಂದೊಂದೆ ಕ್ಷಣದಲ್ಲಿ ಅದಾವ ಮಾಯೆಯಿಂದಲೊ ಎಂಬಂತೆ ಸರಾಗವಾಗಿ ಆ ವಸ್ತುವನ್ನೆತ್ತಿಕೊಡುವ ಅನೇಕ ಸಂಧರ್ಭಗಳನ್ನು ನೆನೆಸಿಕೊಂಡಾಗ ಆ ಅಧ್ಯಯನದ ಫಲಿತಾಂಶದಲ್ಲಿ ನಿಜವಿದ್ದರು ಇರಬಹುದೇನೊ ಅನಿಸುತ್ತದೆ. ಸುದೈವಕ್ಕೆ ಆ ಪುರುಷ – ಮಹಿಳಾ ನಡುವಳಿಕೆಗೆ ಅವರವರಲ್ಲಿರುವ ಯಾವುದೊ ನಿರ್ದಿಷ್ಠ ಜೀನ್ಸೋ, ಹಾರ್ಮೋನೊ ಕಾರಣವೆಂದು ಆ ಅಧ್ಯಯನದಲ್ಲಿಯೆ ಗಮನಿಸಿ ದಾಖಲಿಸಿರುವುದರಿಂದ ಇದೇನು ಬೇಕೆಂದೆ ಮಾಡುವ ತಂಟೆಯಲ್ಲ – ಜನ್ಮಸಿದ್ದವಾದ ಜೀವದೋಷ ಎಂದು ಸಮಾಧಾನಪಟ್ಟುಕೊಳ್ಳಬಹುದು. ಈ ತುಂಟಾಟದ ನಡೆ ನಮ್ಮ ಪರಿಚಿತವಾದ ವಾತಾವರಣದಲ್ಲೆ ಅಂದರೆ ನಮ್ಮ ಮನೆ, ಆಫೀಸುಗಳಂತಹ ಜಾಗದಲ್ಲಿಯೆ ಸಂಭವಿಸುವುದು ವಿಚಿತ್ರ, ಆದರೂ ನಿಜ. ಹೀಗಿರುವಾಗ ಅಪರಿಚಿತ ಜಾಗದಲ್ಲಿ ಅದರಲ್ಲೂ ವಿದೇಶಿ ವಾತಾವರಣದಲ್ಲಿ, ಭಾಷೆ ಬರದ, ಓದಲು ಆಗದ ರೀತಿಯ ತಾಣಗಳಾದರೆ ? ಅಲ್ಲಿಯ ಅನುಭವಗಳು ಇನ್ನು ರೋಚಕವಾಗಿರಬಹುದಲ್ಲವೆ ? ರೋಚಕವೊ, ಮುಜುಗರವೊ ಆ ಹೊತ್ತಲಿ ಹೇಳ ಬರದಿದ್ದರು ಘಟಿಸಿದ ನಂತರ ತಮಾಷೆಯಾಗಿ ಕಂಡುಬರುವುದು ಅನೇಕ ಬಾರಿಯ ಅನುಭವ – ತೀರಾ ಇಕ್ಕಟ್ಟಿನ ಮುಜುಗರದ ಸನ್ನಿವೇಶಗಳಾಗದಿದ್ದ ಪಕ್ಷದಲ್ಲಿ. ಅಂತಹ ಒಂದು ತೆಳು ಲಹರಿಯ ಪ್ರಸಂಗ – ಪುರುಷರ ಗಮನಿಸುವ ಪ್ರವೃತ್ತಿಯ ದೌರ್ಬಲ್ಯವನ್ನು ಹೌದೆಂದು ನಿರೂಪಿಸುವಂತಿದೆ, ಕನಿಷ್ಠ ಅದನ್ನನುಭವಿಸಿದ ಮೂಲ ಕತೃವಿನ ಮಟ್ಟಿಗಾದರು…!

ಪರದೇಶಿ ಚೌರ
_________________

ಮುಖಾಮೂತಿ ಕಾಣದ ದೇಶ
ಭಾಷೆ ಮಾತಾಡಲೆಲ್ಲಿ ಔರಸ
ಕಟ್ಟಬೇಕಿತ್ತಲ್ಲ ತಲೆಗೆ ಪಟ್ಟ
ಚೌರದಂಗಡಿಗು ಹುಡುಕಾಟ ||

ಪಾರ್ಲರುಗಳೇನಿಲ್ಲ ಕಮ್ಮಿ ಸುತ್ತ
ಮಾತಾಡುವರಷ್ಟಿಷ್ಟಾಂಗ್ಲ ದಿಟ
ಅಷ್ಟಕ್ಕಲ್ಲಿ ತೂಗಿದ ಬೆಲೆಯೆ ಕಷ್ಟ
ಅರೆ ಬೊಕ್ಕ ತಲೆಪಾಡು ಎಲ್ಲೆಲ್ಲು ನಿಕೃಷ್ಟ ! ||

ಇರುವುದೆ ಕಮ್ಮಿ, ಫಸಲಲೆಲ್ಲಿ ಹುಲುಸು
ಕತ್ತರಿಗು ಹುಡುಕಾಟ ಎಲ್ಲಿದೆ ಗೊಲಸು
ಶಿಸ್ತಾಗುವ ಸಂಕಟ ಕತ್ತರಿಯಾಡಲೆಬೇಕು
ಮಸ್ತಾಗಿರದಿದ್ದರು ಕೇಶ ‘ಕ್ಯಾಶ’ ತೆರಬೇಕು ||

ಸರಿಯ್ಹೊರಟೆ ಹುಡುಕುತ ಬೀದಿ ಗಲ್ಲಿ
ಬರಲಿ ಬಿಡಲಿ ಭಾಷೆ ನಾಪಿತನಿರಬೇಕಲ್ಲಿ
ಅಲೆದು ಬಿದ್ದು ಗಲ್ಲಿ, ತರಕಾರಿ ಮಾರ್ಕೆಟ್ಟು
ಕಂಡಿತು ತಟ್ಟನೆ ಅಂಗಡಿ, ಚಿಕ್ಕದಿತ್ತೆ ರೇಟು ! ||

ಸರಸರ ನಡೆದೊಳಗೆ ಕೂತವನೆದುರಲ್ಲಿ
ಶುರು ಮೂಕಾಭಿನಯ ಕೈತಲೆ ನರ್ತನದಲಿ
ಮುರುಕು ಭಾಷೆಯಲುದ್ದ ಮೂರೆಂದಿದ್ದೆ
ಕೊಡಬೇಕೆಷ್ಟು ಮುಷ್ಟಿ-ಹೆಬ್ಬೆರಳಲೆ ಕೇಳಿದ್ದೆ ||

ಮಾತಾಡದವ ತೋರಿದ ಕ್ಯಾಲುಕುಲೇಟರ್
ಮೊಬೈಲಿನಲೆ ಎಲ್ಲಾ ಅಂಕಿಯ ಬಾರ್ಟರ್
ಬಾಗಿಲಿಗಿದ್ದ ರೇಟು ಏಕಾಏಕಿ ದುಪ್ಪಟ್ಟು !
ಚೌಕಸಿ ಮಾಡಲು ಬರದೆ ಭಾಷೆಯೆ ಎಡವಟ್ಟು ! ||

ಹೋಲಿಸಿತಲ್ಲೆ ಮನ ಹಿಂದಿನೂರಿಗಿಂತ ಅಗ್ಗ
ಪಾರ್ಲರಿನ ಲೆಕ್ಕದಲ್ಲಿ ಬಿಡಿಗಾಸಲೆ ಭೋಗ
ಹೋಗಲಿ ಬಿಡೆಂದ ಮನ, ಆಡಿಸಿತ್ತೆ ತಲೆಯ
ಶಿರವೊಪ್ಪಿಸಿ ಕೂತೆ ಕೊಡಲೊಪ್ಪುತವನ ಬೆಲೆಯ ||

ಮುಡಿ ತೆಗೆದವನ ಕೌಶಲ ಮೂರೆ ಗಳಿಗೆಯಲಿ
ಮುಗಿಸಿಬಿಟ್ಟ ಪಟ್ಟಾಭಿಷೇಕ ಕಣ್ಣಿವೆಯಿಕ್ಕುವಲಿ
ಏಳಬೇಕೆಂದು ಹೊರಟವನ ತಡೆಯಿತವನ ಸಂಜ್ಞೆ
ತೋರಿಸುತಿನ್ನೊಂದು ಕೋಣೆ ಕರೆದೊಯ್ದಿತ್ತವನಾಜ್ಞೆ ||

ಎದ್ದು ನಡೆವಾಗ ಮುಜುಗರ ಮುಸಿಮುಸಿ ನಗು
ನಗುತ ಕೂತ ಹೆಂಗಳೆಯೊಬ್ಬಿಬ್ಬರ ಗುನುಗು
ಕಂಡೂ ಕಾಣದ ಹಾಗೆ ನಡೆದೊಳಗಿನ ಕೋಣೆ
ಶಯನೋತ್ಸವದಾಸನ ಬಿಸಿ ನೀರ ಮಜ್ಜನ ಮೇನೆ ! ||

ದುಪ್ಪಟು ಕೊಟ್ಟರು ಬಿಡು ಚೌರದ ಜತೆಗೆ ಜಳಕ
ಗಮಗಮಿಸುವ ನೊರೆ ಮುಚ್ಚಿದ ಕಣ್ಣಲೆ ಪುಳಕ
ನಿರಾಳದೆ ತೆತ್ತು ಪೆಚ್ಚು ನಗೆಯೆಸೆದು ಹೆಂಗಳೆಯರೆಡೆ
ಬಹರಲ್ಲ ಸರಾಗದಲೆಂದು ಕ್ಷೌರದಂಗಡಿಯಿಂ ಹೊರಡೆ ||

ದಾಟಲಿದ್ದೆ ಬಾಗಿಲು ಗಾಜಿನ ಹೊಳೆವ ತೊಗಲೂ
ತಟ್ಟನೆ ಬಿತ್ತಲ್ಲಿ ಚಿತ್ರ ಸೊಗದ ಹೆಣ್ಣ ಸೊಂಪ ಕೂದಲು
ಬದಿಯಂಗಡಿಯವನೇಕೊ ದಿಟ್ಟಿಸಿದ್ದ ನಿರಂತರ
ಯಾಕೊ ಅನುಮಾನದಲಿ, ತಿರುಗಿಸಿದ್ದೆ ಕೊಂಚ ಶಿರ… ||

ಹೆಂಗಳೆಯರ ಪಾರ್ಲರದು ನುಗ್ಗಿದ್ದೆ ವಿಶ್ಲೇಷಿಸದೆ !
ಚೈನಾದಂಗಡಿಯೊಳಗೆ ದನದಂತೆ ನಡೆದ ಮೊದ್ದೆ
ನಾಚಿ ತಗ್ಗಿಸಿ ತಲೆಯ ಸರಸರ ದಾಟಿದ್ದೆ ರಸ್ತೆ
‘ಇದ್ದದದೊಂದೆ ಕ್ಷೌರದಂಗಡಿ ಬಿಡು’ ಸಂತೈಸುತ ಬೇಸ್ತು ! ||

ನಾಗೇಶ, ಮೈಸೂರು, ನಾಗೇಶಮೈಸೂರು, ಚೌರ, ಮುಜುಗರ, ಪರದೇಶಿ, nagesha, mysore, nageshamysore

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s