00320. ಸಣ್ಣ ಕಥೆ: ಹತ್ತು ಡಾಲರಿನ ಸುತ್ತ…

ಸಣ್ಣ ಕಥೆ:
00320. ಹತ್ತು ಡಾಲರಿನ ಸುತ್ತ…
_________________________

‘ಅಬ್ಬಾ! ಈ ಅದ್ದೂರಿ ರೂಮಿಗೆ ದಿನವೊಂದಕ್ಕೆ ಮುನ್ನೂರು ಡಾಲರ್ ಬಾಡಿಗೆಯೆ ?’ ಎಂದು ಬೆರಗಿನಿಂದ ಸುತ್ತಲು ದಿಟ್ಟಿಸಿದ ಲೌಕಿಕ. ಚಿಕಾಗೊದಲ್ಲಿನ ಪ್ರತಿಷ್ಠಿತ ಹೋಟೆಲೊಂದರ ದುಬಾರಿ ವೆಚ್ಚದ ಆ ಕೊಠಡಿಯ ಒಪ್ಪ ಒರಣಭರಿತ ವೈಭವೋಪೇತ ಅಲಂಕರಣವೆ ದಂಗು ಬಡಿಸುವಂತಿತ್ತು. ಎಲ್ಲವೂ ಅಚ್ಚುಕಟ್ಟು ಮಾತ್ರವಲ್ಲದೆ ಅತೀವ ಶಿಸ್ತು, ಮೇಲ್ವರ್ಗದ ಅಭಿರುಚಿಗಳ ಅಭಿವ್ಯಕ್ತಿಯ ಪ್ರತೀಕದಂತಿತ್ತು. ತಾನಿರುವ ಮೂರು ರಾತ್ರಿಗಳ ತಂಗುವಿಕೆಗೆ ಆ ವಿಶಾಲ, ವೈಭವಪೂರ್ಣ ತಾಣವೇಕೆ ಬೇಕಿತ್ತು, ಬರಿ ಕಾಲು ಚಾಚಿ ಮಲಗಲಿಕ್ಕೆ ಸಾಧ್ಯವಿರುವ ಪುಟ್ಟ ಹೋಟೆಲು ರೂಮೆ ಸಾಕಿತ್ತಲ್ಲವೆ ? ಎನಿಸಿ ಯಾಕೊ ಮುಜುಗರವೂ ಆಯ್ತು. ಆದರೆ ಕಂಪೆನಿಯ ಬಿಜಿನೆಸ್ ಟ್ರಿಪ್ಪಿನ ಸಲುವಾಗಿ ಜಾಗತಿಕ ಸಮ್ಮೇಳನವೊಂದರಲ್ಲಿ ಪಾಲ್ಗೊಳ್ಳಲು ಬಂದ ಎಲ್ಲರೂ ಅದೇ ಹೋಟೆಲಿನಲ್ಲೆ ಇರಬೇಕೆಂದು ತಾಕೀತು ಮಾಡಿದ್ದ ಕಾರಣ ಲೌಕಿಕನೂ ಅಲ್ಲೆ ಇರಬೇಕಾಗಿ ಬಂದಿತ್ತು. ಅಷ್ಟು ದೊಡ್ಡ ಜಾಗಗಳಲಿದ್ದು ಅನುಭವವಿಲ್ಲದ ಕಾರಣಕ್ಕೊ ಏನೊ ‘ಆ ಪರಿಸರದಲ್ಲಿ ಹೇಗೆ ವರ್ತಿಸಬೇಕೊ, ಯಾವ ಯಾವ ಬಗೆಯ ಮುಖವಾಡಗಳನ್ನು ಹಾಕಬೇಕೊ ಹೇಗೊ ?’ ಎನ್ನುವ ಆತಂಕವೂ ಜತೆಗೆ ಸೇರಿಕೊಂಡು ಮುಜುಗರದ ಅಸಹನೆ ಹೇಳಿಕೊಳ್ಳಲಾಗದ ಚಡಪಡಿಕೆಯಾಗಿ ಮಾರ್ಪಾಡಾಗಿ ಆ ನಿರಾಳ ವಾತಾವರಣದಲ್ಲೂ ಕಂಗಾಲಾಗತೊಡಗಿತ್ತು ಲೌಕಿಕನ ಮನ.

ಅದೇ ತಾನೆ ಹೊರಗಿನಿಂದ ಬರುವಾಗ ತಡೆಯಲಾಗದ ಗಾಳಿ, ಚಳಿಗೆ ನಡುಗುತ್ತ ಬೇಸಿಗೆಯ ಆರಂಭವೆಂದು ತೀರಾ ಬೆಚ್ಚನೆ ಬಟ್ಟೆ ತರದ ಮುಟ್ಠಾಳತನಕ್ಕೆ ತನ್ನನ್ನೆ ಶಪಿಸಿಕೊಂಡು ಬಂದಿದ್ದವನಿಗೆ, ಈ ರೂಮಿನ ಬೆಚ್ಚನೆಯ ವಾತಾವರಣದಿಂದ ಕೆಲವೆ ಗಳಿಗೆಗಳಲ್ಲಿ ಬೆವರುವ ಅನುಭವಾವಾದಾಗ, ಹೊರಗಿನ ದಿರುಸನ್ನು ಬಿಚ್ಚಿ ವಾರ್ಡರೋಬಿನ ಮೂಲೆಯ ನೇತುಕಡ್ಡಿಗೆ ತಗುಲಿ ಹಾಕಿದವನೆ, ಹೂವಿನ ರಾಶಿ ಹಾಸಿದಂತೆ ಮೃದುವಾಗಿದ್ದ ಪಲ್ಲಂಗದ ಮೇಲೆ ದೊಪ್ಪನೆ ಹಿಮ್ಮುಖವಾಗಿ ಉರುಳಿ ಬಿದ್ದ. ಆ ಗಳಿಗೆಯಲ್ಲು ಮತ್ತದೆ ಕೆಲಸಕ್ಕೆ ಬಾರದ ಆಲೋಚನೆಗಳು ಮುತ್ತತೊಡಗಿದಾಗ, ಆ ಹೊತ್ತಿನ ಸುಖದ ಐಷಾರಾಮವನ್ನು ಅನುಭವಿಸಿ ಆಹ್ಲಾದಿಸದೆ ತಾನೇಕೆ ಬೇರೇನೇನೊ ಯೋಚಿಸುತ್ತ ಅಸ್ಥಿರ ಮನಸ್ಥಿತಿಯಲ್ಲಿ ತೊಳಲಾಡುತ್ತಿರುವನೆಂದು ಅವನಿಗೆ ಅರ್ಥವಾಗಲಿಲ್ಲ. ‘ಛೇ ! ಇಂತಹ ದುಬಾರಿ, ಐಷಾರಾಮಿ ಜಾಗಗಳಿಗೆ ಪದೆಪದೇ ಬರಲು ಸಾಧ್ಯವೆ ? ನಾನೇಕೆ ಸಿಕ್ಕಿರುವ ಈ ಸದಾವಕಾಶದ ಸುಖದಾಲಿಂಗನದಲ್ಲಿ ಮೈಮರೆಯುವುದನ್ನು ಬಿಟ್ಟು, ಕೆಲಸಕ್ಕೆ ಬಾರದ ತೊಳಲಾಟದಲ್ಲಿ ಸಮಯ ವ್ಯರ್ಥ ಮಾಡುತ್ತಿರುವೆ ?’ ಎನಿಸಿ, ಯಾವುದೋ ಪ್ರಜ್ಞೆ ಜಾಗೃತವಾಗಿ ಆಂತರ್ಯವನ್ನು ಬಡಿದೆಬ್ಬಿಸಿದ ಹಾಗೆ ತಟ್ಟನೆ ಮೇಲೆದ್ದವನೆ ರೂಮಿನ ಎಲ್ಲಾ ಪಾರ್ಶ್ವಗಳನ್ನು ಇಂಚಿಂಚಾಗಿ, ಆಳವಾಗಿ ಗಮನಿಸಿ ನೋಡತೊಡಗಿದ.

ನೆಲ ಗೋಡೆ ಬಚ್ಚಲುಮನೆಯ ಬಾತ್ ಟಬ್ಬಿನಿಂದ ಹಿಡಿದು ಕಮೋಡದವರೆಗೂ ಎಲ್ಲವೂ ಫಳಫಳ ಹೊಳೆವ ಕನ್ನಡಿಯಂತಿದ್ದು, ಧೂಳಾಗಲಿ, ಕಸಕಡ್ಡಿಯಾದಿಯಾಗಿ ಚಿಕ್ಕ ಚುಕ್ಕೆಯಾಗಲಿ ಒಂದಿನಿತೂ ಇರದ ಹಾಗೆ ಸ್ವಚ್ಛ ಶುದ್ಧ ಸ್ಪಟಿಕದಂತೆ ಕಾಣುತ್ತಿದ್ದ ಅದರ ಶುಚಿಬದ್ಧ ಶಿಸ್ತಿಗೆ ಬೆರಗಾಗುತ್ತಲೆ ಬಾತ್ರೂಮಿಗು, ಲಿವಿಂಗ್ ರೂಮಿನಂತಿದ್ದ ಬೆಡ್ರೂಮಿಗು ನಡುವಿದ್ದ ಅರೆ ಪಾರದರ್ಶಕ ಗಾಜಿನ ಗೋಡೆಯತ್ತ ದಿಟ್ಟಿಸಿ ನೋಡಿ , ‘ ವಾಹ್ ! ಇದರ ರಸಿಕತೆಯೆ? ಹನಿಮೂನಿಗೊ, ವಿಹಾರಕ್ಕೊ ಬಂದ ಜೋಡಿಗಳಿಗೆ ಈ ನಡು ತೆರೆಯಿಂದನಾವರಣವಾಗುವ ಅಸ್ಪಷ್ಟ ದೃಶ್ಯವೆ ಏನೆಲ್ಲ ರೋಚಕ ಭಾವೋದ್ವೇಗವನ್ನೆಬ್ಬಿಸಿ ಜೋಡಿ ಹಕ್ಕಿಗಳಂತೆ ವಿಹರಿಸುವ ಮೂಡಿಗೆ ತಂದುಬಿಡಬಹುದೆಂದು ಊಹಿಸುತ್ತಲೆ ಆ ಗೋಡೆಯ ಮೇಲ್ಮೆಯನ್ನು ಮೆಲುವಾಗಿ ಸ್ಪರ್ಶಿಸಿದ – ಅದರ ನುಣುಪಿನ ಒರಟುತನದ ಅಳತೆ ನೋಡುವವನ ಹಾಗೆ. ಅರೆ! ಹಾಗೆ ಮುಟ್ಟಿದ್ದೆ ತಡ ಅರೆಪಾರದರ್ಶಕದಂತಿದ್ದ ಗಾಜಿನ ಪದರ ಇದ್ದಕ್ಕಿದ್ದಂತೆ ಪೂರ್ತಿ ಪಾರದರ್ಶಕವಾಗಿ ಬದಲಾಗಿ ಹೋಯ್ತು! ಅದರ ಮಿಂಚಿನ ಪರಿವರ್ತನೆಗೆ ಅದುರಿಬಿದ್ದು ಆಯಾಚಿತವಾಗಿ ಅದೆ ಮೇಲ್ಮೈಯನ್ನು ಮತ್ತೊಮ್ಮೆ ಮುಟ್ಟಿದ ಪರಿಣಾಮ ಅದೆ ಪಾರದರ್ಶಕ ಮತ್ತೆ ಅರೆಪಾರದರ್ಶಕವಾಗಿ ಬದಲಾಗಿಹೋಯ್ತು. ಅದರ ಸ್ಪರ್ಶ ಸ್ಪಂದನ ಸೂಕ್ಷ್ಮಜ್ಞತೆಗೆ ಸೋಜಿಗಪಡುತ್ತಲೆ -‘ ಮಕ್ಕಳ ಜತೆ ಇಂತಹ ರೂಮಿನಲ್ಲಿ ತಂಗಿದರೆ ಏನಪ್ಪ ಗತಿ ? ಗೊತ್ತಿದ್ದೊ, ಇರದೆಯೊ ಹೊರಗಿನಿಂದ ಗಾಜನ್ನು ಮುಟ್ಟಿಬಿಟ್ಟರೆ ‘ಏ’ ಸರ್ಟಿಫಿಕೇಟ್ ಸಿನಿಮಾ ದೃಶ್ಯದ ಪುಕ್ಕಟೆ ಟಿಕೇಟು ಕೊಟ್ಟಂತಾಗುವುದಲ್ಲಾ?! ‘ ಎಂದು ಗಾಬರಿಗೊಳ್ಳುತ್ತಲೆ ಹೊರಗೆ ಬಂದು ಆ ಕಡೆಯ ಗೋಡೆ ಮುಟ್ಟಿದರೆ – ಏನು ಬದಲಾಗದೆ ಯಥಾ ರೀತಿಯಲಿದ್ದದ್ದನ್ನು ಕಂಡು ಕೊಂಚ ಸಮಾಧಾನವಾಯ್ತು. ಪರವಾಗಿಲ್ಲ, ಬುದ್ದಿವಂತಿಕೆ ಬಳಸಿ ಒಳಗಿನಿಂದ ಮಾತ್ರ ಸಾಧ್ಯವಾಗುವ ಹಾಗೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಲೆ ಫ್ರಿಡ್ಜು, ಸ್ನ್ಯಾಕುಗಳಿಟ್ಟಿದ್ದ ಮೂಲೆಗೆ ಬಂದ.

ಆ ಮೂಲೆಯಲಿದ್ದ ಮರದ ಪೀಠೋಪಕರಣವೆ ಮತ್ತೊಂದು ಅದ್ಭುತ ಕಲಾಕೃತಿಯಂತಿತ್ತು. ಅದರಲಿದ್ದ ಹತ್ತಾರು ಖಾನೆಯ ಹಿಡಿಗಳನ್ನು ಎಳೆದು ನೋಡಿದರೆ, ಬೇರೆ ಹೋಟೆಲುಗಳಲ್ಲಿ ಸುಮ್ಮನೆ ತಟ್ಟೆಯೊಂದರಲ್ಲಿ ಜೋಡಿಸಿಡುವ ಸಕ್ಕರೆ, ಕಾಫಿ, ಚಹಾ ಇತ್ಯಾದಿ ಕಿರುಪೊಟ್ಟಣಗಳನ್ನು ಒಪ್ಪವಾಗಿ ಜೋಡಿಸಿಟ್ಟಿದ್ದು ಕಂಡು ಬಂತು. ಅದರ ಕೆಳ ಹಂತದಲ್ಲಿದ್ದ ದೊಡ್ಡ ಖಾನೆಯಲ್ಲಿ ಪುಟ್ಟದೊಂದು ಕಾಫಿ ಮೇಕರು ಮತ್ತದಕ್ಕೆ ಹಿಡಿಸುವ ಗಾತ್ರದ, ಕತ್ತರಿಸಿದ ಕೋನಾಕಾರದ ರೆಡಿಮೇಡ್ ಕಾಫಿ ಮಿನಿ ಕಪ್ಪುಗಳು ಜೋಡಿಸಿದ್ದು ಕಾಣಿಸಿತು. ಎಲ್ಲಕ್ಕಿಂತ ಮೇಲಿನ ಸಾಲಿನ ಖಾನೆಯಲ್ಲಿ ತರತರದ ಕುರುಕು ತಿಂಡಿಗಳು – ಕಡಲೆ ಕಾಯಿ ಬೀಜ, ಬಾದಾಮಿ, ಗೊಡಂಬಿ, ಚಿಪ್ಸು, ಚಾಕಲೇಟ್ ಇತ್ಯಾದಿ. ಕುತೂಹಲಕ್ಕೆ ಅದರ ಮೇಲೆ ನಮೂದಿಸಿದ್ದ ಬೆಲೆಯನ್ನು ನೋಡಿಯೆ ಬೆಚ್ಚಿದ ಲೌಕಿಕ ‘ ಅಬ್ಬಾ! ಇದು ಹಗಲ ದರೋಡೆಯೆ ! ಇಪ್ಪತ್ತೈದು ಗ್ರಾಮು ಇಲ್ಲದ ಕಡಲೆ ಬೀಜಕ್ಕೆ ಹತ್ತು ಡಾಲರೆ? ದೊಡ್ಡ ಹೋಟೆಲಿನ ಹೆಸರಲ್ಲಿ ಹೇಗೆಲ್ಲ ದುಡ್ಡು ಕೀಳುತ್ತಾರೆ?’ ಎಂದುಕೊಳ್ಳುತ್ತಲೆ ಕೈಗೆತ್ತಿಕೊಂಡ ಕಿರುಡಬ್ಬವನ್ನು ಹಾಗೆ ಸ್ವಸ್ಥಾನಕ್ಕೆ ಸೇರಿಸಿದ – ಮೊದಲಿಟ್ಟಿದ್ದ ಹಾಗೆಯೆ ನಿಖರವಾಗಿ ಕೂರಿಸುತ್ತ.

ಆ ದಿನದ ಡಿನ್ನರಿಗೆ ಆರುಗಂಟೆಯ ನಂತರ ಹೊರಡಲು ಹೇಳಿದ್ದ ಕಾರಣ ಸಮಯವೆಷ್ಟಾಯಿತೆಂದು ನೋಡಿಕೊಂಡ ಲೌಕಿಕನಿಗೆ ಗಡಿಯಾರ ನಾಲ್ಕೂವರೆಯೆಂದು ತೋರಿಸಿದಾಗ, ಇನ್ನು ಒಂದೂವರೆ ಗಂಟೆ ಕಳೆಯಬೇಕು ಎಂದು ಮತ್ತೆ ಹಾಸಿಗೆಯ ಮೇಲುದುರಿಕೊಂಡು ಮೊಬೈಲಿನ ಜತೆ ಆಡತೊಡಗಿದ. ಒಂದೆರಡು ಗಳಿಗೆಯಲ್ಲಿ ಪರದೆಯನ್ನು ನೋಡುತ್ತಿದ್ದ ಆಯಾಸಕ್ಕೊ, ಪ್ರಯಾಣದ ಸುಸ್ತಿಗೊ, ಬೆಚ್ಚನೆಯ ಹಿತವಾದ ಸುಖೋಷ್ಣಕ್ಕೊ ಮಂಪರು ಬಂದಂತಾಗಿ ಅವನಿಗರಿವಿಲ್ಲದಂತೆ ಕಣ್ಣು ಮುಚ್ಚಿಸಿ ನಿದಿರಾವಶನನ್ನಾಗಿಸಿತ್ತು.

ಗಾಢ ಮಂಪರಿನಲ್ಲಿ ಹಾಸಿಗೆಯ ಮೇಲೆ ಕೆಡವಿಕೊಂಡರೆಗಳಿಗೆಯಲ್ಲೆ ಯಾವುದೊ ಮಯಕ ಆವರಿಸಿಕೊಂಡವನಂತೆ ಮಲಗಿದವನಿಗೆ ಏನೊ ಅರೆ ಎಚ್ಚರದಲ್ಲಿದ್ದಂತೆ, ಕಣ್ಣೆದುರಿಗೇನೊ ನಡೆಯುತ್ತಿರುವಂತೆ, ಅದನ್ನು ಗಾಢವಾಗಿ ಆವರಿಸಿಕೊಂಡು ನೋಡುತ್ತಿದ್ದಂತೆ ಭಾವ.. ಯಾವುದೊ ಬೇರೆ ತಾಣದಲ್ಲಿದ್ದಂತೆ ಕಂಡ ಪರಿಸರದಲ್ಲೂ ರೂಮಿನ ಚಾವಣಿಯಲಿ ನೇತುಹಾಕಿದ್ದ ಜ್ವಾಜ್ಯಾಲಮಾನ್ಯ ದೀಪದ ಪ್ರಖರ ಬೆಳಕೆ ಅಲ್ಲಿಯೂ ಹಬ್ಬಿಕೊಂಡಂತಹ ವಿಲಕ್ಷಣ ಅನಿಸಿಕೆ… ಆ ಬೆಳಕಿನ ನಡುವಲ್ಲೊಂದು ಗಂಟೆಯ ಸದ್ದು ತೇಲಿ ಬರುತ್ತಿರುವ ಅನುಭೂತಿ.. ಹಾಗೆ ಮತ್ತೀನ್ನೇನು ಕಾಣಲಿದೆಯೊ ಎಂದು ದಿಟ್ಟಿಸಿ ನೋಡಲೆತ್ನಿಸುತ್ತಿರುವಂತೆ ಯಾಕೊ ಆ ಗಂಟೆಯ ಸದ್ಧು ಗಾಢವಾಗಿ, ತೀವ್ರವಾಗುತ್ತ ಹೋದಂತನಿಸಿತು. ಅದರ ತೀವ್ರತೆ ಹೆಚ್ಚಿದಂತೆಲ್ಲ ಆ ಸದ್ದಿಂದಲೆ ಎಂಬಂತೆ ಅದುವರೆಗೆ ಮೂಡಿದ್ದ ದೃಶ್ಯವೆಲ್ಲ ಕರಗುತ್ತ ತುಸುತುಸುವಾಗಿ ಮಾಯವಾಗತೊಡಗಿತು. ಅದನ್ನು ಕರಗೆ ಬಿಡದೆ ಹಿಡಿಯಹೋದಂತೆ, ಅದು ಇನ್ನಷ್ಟು ಕ್ಷಿಪ್ರವಾಗಿ ಕರಗುತ್ತ ಮಸುಕಾಗತೊಡಗಿತು. ಅದರ ಜತೆ ಜತೆಯಲ್ಲೆ, ಅದರ ವಿಲೋಮಾನುಪಾತದಲ್ಲಿ ಗಂಟೆಯ ಸದ್ದು ಹೆಚ್ಚುತ್ತ ಹೋದಂತೆ ಭಾಸವಾಗಿ ಇನ್ನು ತಡೆಯಲೆ ಆಗದು ಎನಿಸಿ ತಟ್ಟನೆ ಕಣ್ಣುಬಿಟ್ಟ ಲೌಕಿಕ..

ಅದು ಹೊರಗಿನಿಂದ ಒಂದೆ ಸಮನೆ ಬಡಿದುಕೊಳ್ಳುತ್ತಿದ್ದ ಬಾಗಿಲ ಕರೆಗಂಟೆಯ ಸದ್ದು….

ಆಲಸಿಕೆ ಅನಾಸಕ್ತಿಯಿಂದಲೆ ಮೇಲೆದ್ದು ಬಾಗಿಲು ತೆರೆದರೆ – ರೂಮ್ ಸರ್ವೀಸಿನ ಹೆಂಗಸೊಬ್ಬಳು ಬಾಗಿಲಲ್ಲೆ ನಿಂತಿದ್ದು ಕಾಣಿಸಿತು. ಆಕಳಿಸುತ್ತಲೆ ಪೂರ್ತಿ ಬಾಗಿಲು ತೆರೆದು ಅವಳು ತನ್ನ ಸಲಕರಣೆಗಳ ಟ್ರಾಲಿಯ ಸಮೇತ ಒಳಗೆ ಬರಲು ಅನುವು ಮಾಡಿಕೊಡುತ್ತ ಬದಿಗೆ ಸರಿದು ನಿಂತವನನ್ನು ಕಂಡು ತಾನು ಅವನ ನಿದ್ರಾಭಂಗಕ್ಕೆ ಕಾರಣವಾದೆನೆಂದರಿವಾಗಿ, ‘ ಸಾರಿ ಸರ್..’ ಎಂದು ತಪ್ಪಿತಸ್ಥಳ ದನಿಯಲ್ಲಿ ನುಡಿದಳು. ಅದಕ್ಕೆ ಮಾರುತ್ತರಿಸುವ ಗೋಜಿಗೆ ಹೋಗದೆ ನಿರ್ಲಕ್ಷ್ಯದಿಂದ ಒಳ ನಡೆದವನೆ ಎದುರಿನ ಸೋಫಾದ ಮೇಲೆ ಕೂತು ಟೀವಿಯನ್ನು ಹಾಕಿ ಚಾನೆಲ್ಲುಗಳನ್ನು ತಿರುಗಿಸತೊಡಗಿದ. ಆದರೆ ಐದೆ ನಿಮಿಷಗಳಲ್ಲಿ ಅದು ಬೋರಾಗಿ , ಟೀವಿ ಆರಿಸಿ ಅವಳ ಕೌಶಲಪೂರ್ಣ ಕೆಲಸವನ್ನು ದಿಟ್ಟಿಸಿ ನೋಡುತ್ತ ಕುಳಿತ. ಆಗವನ ಗಮನಕ್ಕೆ ತಟ್ಟನೆ ಬಂದಿದ್ದು ಅವಳ ಲಕ್ಷಣವಾದ ಶಿಸ್ತುಬದ್ಧ ಆಕರ್ಷಕ ರೂಪ..

ರಾಜಾ ಸೈಜಿನ ಆ ದೊಡ್ಡ ಹಾಸಿಗೆಯ ಮೇಲಿನ ಹೊದಿಕೆ, ಹಾಸುಗಳನ್ನೆಲ್ಲ ಲೀಲಾಜಾಲವಾಗಿ ಎತ್ತಿ , ಒದರಿ ಟ್ರಾಲಿಗೆ ಸೇರಿಸುತ್ತ ಅಲ್ಲಿಂದ ಅಷ್ಟೆ ಸಲೀಸಾಗಿ ಮಡಿ ಮಾಡಿದ ಶುಭ್ರ ವಸ್ತ್ರಗಳನ್ನು ಬದಲಾಯಿಸುತ್ತಿದ್ದವಳು ಯಾವುದೊ ದಕ್ಷಿಣ ಏಶಿಯಾದ ದೇಶದಿಂದ ಬಂದವಳೆಂದು ಮುಖ ಚಹರೆಯನ್ನು ನೋಡಿದಾಗಲೆ ಗೊತ್ತಾಗುತ್ತಿತ್ತು. ಭಾರತೀಯ ಚಹರೆಯೂ ಕಾಣಿಸಿಕೊಂಡಂತಿದ್ದರು, ಯಾಕೊ ಭಾರತೀಯಳಲ್ಲ ಅನಿಸಿತು. ಬಾಂಗ್ಲಾದೇಶವೊ, ಶ್ರೀಲಂಕಾವೊ ಇರಬಹುದೇನೊ ಅಂದುಕೊಂಡ ಲೌಕಿಕನಿಗೆ ಅವಳ ವಯಸು ಮೂವತ್ತರ ಆಚೀಚೆ ಇರುವಂತೆ ಕಂಡಿತು. ತೀರಾ ತೆಳುವೂ ಅಲ್ಲದ ದಢೂತಿಯು ಅಲ್ಲದ ಮಧ್ಯಮ ಗಾತ್ರದ ಹೆಣ್ಣಾಗಿದ್ದರು ಬಹುಶಃ ಸರಾಸರಿಗಿಂತ ಹೆಚ್ಚು ಉದ್ದವಿದ್ದ ಕಾರಣಕ್ಕೊ ಏನೊ ಸಣ್ಣವಳಾಗಿಯೆ ಕಾಣುತ್ತಿದ್ದಳು. ಆದರೆ ಆ ದೇಹದ ಗಾತ್ರಕ್ಕೆ ಅವಳ ಕೈಗಳ ಮಾತ್ರ ದೊಡ್ಡದಿರುವಂತೆ ಅನಿಸಿತು – ಬಹುಶ ದಿನ ನಿತ್ಯವೂ ಅವಳ ಕೆಲಸಕ್ಕೆ ಅದೆ ಅವಳ ಮೂಲ ಸಲಕರಣೆಯಾಗಿರುವ ಕಾರಣದಿಂದ.

ಆ ಕೆಲಸದ ನಡುವೆಯೆ ಇತ್ತ ತಿರುಗಿದವಳಿಗೆ, ಅವನು ತದೇಕಚಿತ್ತನಾಗಿ ತನ್ನನ್ನೆ ನೋಡುತ್ತಿರುವನೆಂಬ ಅರಿವು ಮೂಡುತ್ತಿದ್ದಂತೆ ಒಂದು ರೀತಿಯ ಲಜ್ಜೆಯುಂಟಾಗಿ ಅವನನ್ನೆ ನೋಡುತ್ತ ಒಮ್ಮೆ ಕಿರುನಕ್ಕಳು. ಹಾಗೆಯೆ ಮಾಡುತ್ತಿದ್ದ ಕೆಲಸ ನಿಲ್ಲಿಸದೆ, ಆಂಗ್ಲ ಭಾಷೆಯಲ್ಲಿಯೆ, ‘ಯಾವ ದೇಶ ? ಇಂಡಿಯಾ ?’ ಎಂದಳು ಪ್ರಶ್ನಿಸುವ ದನಿಯಲ್ಲಿ.

ಆ ಮಾತಿಗೆ ಹೌದೆನ್ನುವಂತೆ ತಲೆಯಾಡಿಸುತ್ತ, ‘ಹೌದು ಬೆಂಗಳೂರಿನಿಂದ, ಕೆಲಸದ ನಿಮಿತ್ತ ಬಂದಿರುವೆ..’ ಎಂದ.

‘ ಓಹ್..! ನಾನೂ ಕೂಡ ಅಲ್ಲೆ ಪಕ್ಕದವಳೆ’ ಅಂದಳು.

ತನ್ನನುಮಾನ ನಿಜವಾದದ್ದಕ್ಕೆ ಖುಷಿಯಾಗಿ , ‘ ಬಾಂಗ್ಲಾದೇಶ?’ ಎಂದ ಮೆಲುವಾದ ದನಿಯಲ್ಲಿ.

‘ ಇಲ್ಲಾ ಭೂತಾನ್…’

‘ ಓಹ್ ದ ಕಂಟ್ರಿ ದಟ್ ಎಂಜಾಯ್ಸ್ ಮೋಸ್ಟ್ ಪೀಸ್ ಫುಲ್ ಲೈಫ್..’ ಎಂದ.

ಅಭಿವೃದ್ಧಿ ಹೊಂದಿದ ದೇಶಗಳೂ ಸೇರಿದಂತೆ ಜಗತ್ತಿನೆಲ್ಲಾ ದೇಶಗಳ ಜನ ಜೀವನದ ಅಧ್ಯಯನ ನಡೆಸಿದಾಗ, ಭೂತಾನಿನ ಜನ ಅತ್ಯಂತ ಸಂತೋಷದಿಂದಿರುವ ಜನಗಳಿಂದ ತುಂಬಿದ ದೇಶವೆಂದು ಮೊದಲ ಸ್ಥಾನ ಪಡೆದಿರುವ ಸುದ್ದಿ ನೆನಪಾಗಿತ್ತು. ಪ್ರಗತಿ ಭೌತಿಕ ಸುಖ ತರಬಹುದೆ ಹೊರತು ಮಾನಸಿಕ ಸಂತಸವನ್ನಲ್ಲ; ಅದರ ಮಾನದಂಡ, ಅಳತೆಗಳೆ ಬೇರೆ…

‘ ನಾವು ನೆರೆಯ ದೇಶವಾದರು ನಮ್ಮ ಜೀವನವೆಲ್ಲ ಭಾರತದ ಜೀವನದ ಹಾಗೆ.. ತುಂಬಾ ಹತ್ತಿರದ ಹೋಲಿಕೆ’ ಕೆಲಸ ಮಾಡುತ್ತಲೆ ಮಾತು ಮುಂದುವರೆಸಿದ್ದಳು. ಬಹುಶಃ ರೂಮಿಂದ ರೂಮಿಗೆ ಹೋಗಿ ಒಬ್ಬಂಟಿಯಾಗಿ ಒಂದೇ ರೀತಿಯ ಕೆಲಸ ಮಾಡುವ ಅವಳಿಗೆ ಯಾರಾದರೊಡನೆ ನಿರಾಳವಾಗಿ ಮಾತಾಡಲು ಸಿಗುವ ಅವಕಾಶಗಳೂ ಬಹಳ ಕಡಿಮೆಯಿರಬೇಕು. ಅದರಲ್ಲೂ ಹೋಟೆಲಿನ ಅತಿಥಿಗಳ ಜತೆಯೆಂದರೆ ಇನ್ನು ಹೆಚ್ಚು ನಿಯಮ, ಕಟ್ಟುಪಾಡುಗಳು ಸೇರಿಕೊಳ್ಳುತ್ತವೆ. ಒಂದೆ ಕಡೆಯವರೆಂಬ ಸರಾಗ ಭಾವವಷ್ಟೆ ಅವಳನ್ನು ಮಾತನಾಡಲು ಅನುವು ಮಾಡಿಕೊಟ್ಟಿತ್ತೇನೊ..

‘ ನೀನಿಲ್ಲಿ ದಿನವು ಎಷ್ಟು ಗಂಟೆ ಕೆಲಸ ಮಾಡಬೇಕು?’ ಸುಮ್ಮನೆ ಮಾತಿಗೆ ಮಾತು ಎಂಬಂತೆ ಮತ್ತೆ ಆಕಳಿಸುತ್ತ ಪ್ರಶ್ನಿಸಿದ ಲೌಕಿಕ.

‘ಗಂಟೆ, ಗಿಂಟೆ ಲೆಕ್ಕವೇನಿಲ್ಲ.. ದಿನವೂ ಒಂಭತ್ತು ಹತ್ತಕ್ಕೆ ಬರುತ್ತೇನೆ. ಇಡಿ ಹೋಟೆಲಿನ ಎರಡು ಹಂತಗಳ ಎಲ್ಲಾ ರೂಮುಗಳು ನನ್ನ ಪಾಲಿನ ಜವಾಬ್ದಾರಿ.. ಅವೆಲ್ಲ ಮುಗಿಯುವ ತನಕ ಕೆಲಸ ಮಾಡುತ್ತೇನೆ. ಹೀಗಾಗಿ ತುಸು ತಡವಾಗಿ ಬಂದರು ಪರವಾಗಿಲ್ಲ, ಬೇಗ ಹೋಗಲೆಂದರೂ ಸರಿ – ಕೆಲಸ ಮುಗಿಯಿತೆಂದರೆ ಹೊರಡಬಹುದು.. ದಿನವು ಹೆಚ್ಚು ಕಡಿಮೆ ಹತ್ತು ಹನ್ನೆರಡು ಗಂಟೆ ಕೆಲಸ..’ ಎಂದಳು ಫ್ರಿಡ್ಜು, ಕಾಫಿ, ಚಹಾ ಮತ್ತು ಕುರುಕು ತಿಂಡಿ ಖಾನೆಗಳನ್ನು ಪರಿಶೀಲಿಸುತ್ತ..

‘ಹತ್ತು ಹನ್ನೆರಡು ಗಂಟೆಯೆಂದರೆ ತುಂಬಾ ಹೆಚ್ಚಾಗಲಿಲ್ಲವ ? ಅದೂ ಈ ಶ್ರಮದ ಕೆಲಸ…?’

‘ ಇಲ್ಲಿ ತುಂಬಾ ಚೆನ್ನಾಗಿ ಸಂಬಳ ಕೊಡುತ್ತಾರೆ… ಕೆಲಸ ಶ್ರಮದಾಯಕವಾದರು ಸಂಪಾದನೆ ಚೆನ್ನಾಗಿರುವುದರಿಂದ ತೊಂದರೆಯಿಲ್ಲ.. ಅದರಲ್ಲೂ ಚಿಕಾಗೊ ತುಂಬಾ ತುಟ್ಟಿಯಾದ ಜಾಗ..ನಾವಿಲ್ಲಿ ಬಂದು ಹತ್ತು ವರ್ಷವಾದರು ಇನ್ನು ಮನೆ ಮಾಡಲು ಆಗಿಲ್ಲ…’

‘ ನಿನ್ನ ಗಂಡನು ಇಲ್ಲೆ ಕೆಲಸ ಮಾಡುತ್ತಿರುವನೇ?’ ಲೌಕಿಕನಿಗೆ ಕೊಂಚ ಆಸಕ್ತಿ ಮೂಡಿತ್ತು ಬದುಕಿನ, ಮನೆಯ ವಿಷಯಕ್ಕೆ ಬಂದಾಗ.

ಅವಳ ಮುಖದಲ್ಲೇನೊ ತೆಳುವಾದ ವಿಷಾದದ ರೇಖೆಯೊಂದು ಹಾದುಹೋದಂತೆ ಭಾಸವಾಯ್ತು ಲೌಕಿಕನಿಗೆ. ಕಂಡು ಕಾಣದ ಆ ಭಾವ ಸ್ಪಷ್ಟವಾಗಿ ಮೂಡುವ ಮೊದಲೆ ಅವಳಿಂದ ಬಂದ ಉತ್ತರ ಅದನ್ನು ಮರೆಯಾಗಿಸಿತ್ತು..’ ಟ್ರಕ್ ಡ್ರೈವರ್ ಕೆಲಸ… ಹೀಗಾಗಿ ವಾರವೆಲ್ಲ ರಸ್ತೆಯಲ್ಲೆ ಇರಬೇಕು.. ‘

ಸುಖ ಜೀವನದಾಸೆಯಲ್ಲಿ ದೇಶ ಬಿಟ್ಟು ಬಂದು ಏನೆಲ್ಲ ಕಷ್ಟ ಪಡುತ್ತಾರಾದರು, ಅವರಿಬ್ಬರು ಇದೇ ಕೆಲಸವನ್ನು ಸ್ವದೇಶದಲ್ಲಿ ಮಾಡಿಕೊಂಡಿದ್ದರೆ ಸಿಗುತ್ತಿದ್ದ ಸುಖಕ್ಕಿಂತ ಈ ಬದುಕು ಬಹುಪಾಲು ಉತ್ತಮವಾಗಿರಬೇಕು..

‘ಇಬ್ಬರಿಗು ಈ ರೀತಿಯ ಕೆಲಸ ಕಷ್ಟಕರವಲ್ಲವೆ?’ ಎಂದ.

‘ಕೆಲಸದ ಮಾತು ಇರಲಿ.. ಈ ಸಿಟಿ ತುಂಬಾ ದುಬಾರಿಯಾದ ಕಾರಣ ದುಡಿಯದೆ ಬದುಕುವುದೆ ದುಸ್ತರ.. ನಮ್ಮಂತಹವರ ಸಂಬಳಗಳಲ್ಲಿ ಬರಿ ಜೀವನ ಸಾಗಿಸಲಷ್ಟೆ ಸಾಧ್ಯ… ಅದಕ್ಕೆ ಹತ್ತಾರು ವರ್ಷ ಕಳೆದರು ನಾವಿನ್ನು ಬಾಡಿಗೆ ಮನೆಯಲ್ಲೆ ಇರುವಂತಹ ಸ್ಥಿತಿ.. ಸಾಲದ್ದಕೆ ಮನೆಯಲ್ಲಿ ಮಗಳನ್ನು ನೋಡಿಕೊಳ್ಳಲು ಯಾರು ಇರುವುದಿಲ್ಲವಲ್ಲ ? ಅದಕ್ಕೆ ನಮ್ಮ ತಾಯಿಯನ್ನು ಕರೆಸಿಕೊಂಡು ಜತೆಯಲ್ಲೆ ಇಟ್ಟುಕೊಂಡಿದ್ದೇನೆ. ಈ ಎಲ್ಲಾ ಖರ್ಚುಗಳು ಸೇರಿದರೆ ಉಳಿಸುವುದೆಲ್ಲಿ ? ಮನೆ ಕೊಳ್ಳುವುದೆಲ್ಲಿ?’

ಹೊರಗಿನ ಕೆಲಸ ಮುಗಿದ ಕಾರಣ ಬಾತ್ ರೂಮಿನಿಂದ ಪುಟಾಣಿ ಬಾಟಲುಗಳನ್ನು ಹೊರತಂದು ಅವಕ್ಕೆ ಶಾಂಪು, ದ್ರವರೂಪಿ ಸೋಪುಗಳನ್ನು ತುಂಬಿಸುತ್ತ ಮುಂದುವರೆಸಿದ್ದಳು..’ ಅದಕ್ಕೆ ನಾವೀಗ ಸೀರಿಯಸ್ಸಾಗಿ ಯೋಚಿಸುತ್ತಿದ್ದೇವೆ.. ಇಲ್ಲಿ ಇನ್ನೊಂದೆರಡು ಮೂರು ವರ್ಷ ಕಳೆದುಬಿಟ್ಟು ಸ್ವಲ್ಪ ಹಣ ಸೇರಿಸಿಕೊಂಡು ಕನ್ಸಾಸ್ ಪ್ರಾಂತ್ಯಕ್ಕೆ ಹೋಗಿಬಿಡಬೇಕು ಎಂದು.. ಆ ದುಡ್ಡಿಗೆ ಇಲ್ಲೇನು ಸಿಗದಿದ್ದರು, ಅಲ್ಲಿಯ ಬೆಲೆಗೆ ನಮಗೆ ಸಾಕೆನಿಸುವ ಮಟ್ಟದ ಮನೆ ಕೊಳ್ಳಲು ಸಾಧ್ಯ… ಚಿಕಾಗೊ ತರಹ ದೊಡ್ಡ ಪಟ್ಟಣವಲ್ಲ ನಿಜ.. ಈ ದೇಶದಲ್ಲಿ ಇರುವುದೆ ಹೇಗಿದ್ದರು ಊರಿಂದ ಹೊರಗೆ.. ಅದು ಚಿಕಾಗೊ ಆದರೇನು ? ಮತ್ತೊಂದಾದರೇನು? ‘

ಎಲ್ಲರ ಕಥೆಯೂ ಒಂದಲ್ಲ ಒಂದು ತರದ ದುರಂತ ಅಥವಾ ವಿಷಾದವೆ.. ನನ್ನದೇನು ಕಡಿಮೆಯದೆ ? ಆನೆ ಭಾರ ಆನೆಗೆ, ಇರುವೆ ಭಾರ ಇರುವೆಗೆ ಎಂದು ನಿಟ್ಟುಸಿರು ಬಿಟ್ಟ ಲೌಕಿಕ, ‘ ಅದೇನೊ ನಿಜವೆ…’ಎಂದ.

‘ ಸರಿ ನನ್ನ ಕೆಲಸವೆಲ್ಲ ಮುಗಿಯಿತು… ಇನ್ನೇನಾದರೂ ಬೇಕಿತ್ತ?’ ಎಂದವಳ ದನಿಗೆ ತನ್ನ ಆಲೋಚನಾ ಲೋಕದಿಂದ ವಾಸ್ತವಕ್ಕೆ ಬಂದ ಲೌಕಿಕ ‘ಸರಿ’ ಎನ್ನುವಂತೆ ತಲೆಯಾಡಿಸಿದ. ಹೋಗುವ ಮೊದಲು ಮತ್ತೆ ಹಿಂತಿರುಗಿ ನೋಡುತ್ತ, ‘ ಇನ್ನು ಎಷ್ಟು ದಿನ ಇರುತ್ತೀರಿ?’ ಎಂದಳು

‘ಒಟ್ಟು ಮೂರು ದಿನ..’

‘ ಸರಿ ಅಂದ ಮೇಲೆ ಮತ್ತೆರಡು ದಿನವು ನೋಡುವ ಸಾಧ್ಯತೆಯಿದೆ… ಹೆಚ್ಚು ಕಡಿಮೆ ಇದೇ ಸಮಯದಲ್ಲಿ.. ಬೈ ಬೈ..’ ಎಂದು ಬಾಗಿಲು ಹಾಕಿಕೊಂಡು ಹೊರಟುಹೋದಳು.

ಅವಳು ಹೋದತ್ತಲೆ ನೋಡುತ್ತ ಸುಮ್ಮನೆ ಕುಳಿತಿದ್ದವನಿಗೆ ತಾನು ಹೊರಡುವ ಸಮಯ ಹತ್ತಿರವಾಯ್ತೆಂದರಿವಾಗಿ ಮೇಲೇಳುತ್ತಿದ್ದಂತೆ, ಏನೊ ದೊಡ್ಡ ಪ್ರಮಾದವಾದವನಂತೆ ‘ ಅರೆರೆ! ಅವಳ ಹೆಸರು ಕೇಳುವುದನ್ನೆ ಮರೆತುಬಿಟ್ಟೆನಲ್ಲ?’ ಎಂದು ಪೇಚಾಡಿಕೊಂಡ…!

*******

ದಿನವೆಲ್ಲಾ ಮೀಟೀಂಗು, ಸೆಮಿನಾರು, ಲಂಚು, ಡಿನ್ನರುಗಳೆಂದು ಸಮಯವುರುಳಿದ್ದೆ ಗೊತ್ತಾಗಲಿಲ್ಲ ಲೌಕಿಕನಿಗೆ. ನೋಡ ನೋಡುತ್ತಿದ್ದಂತೆ ವಾಪಸು ಹೊರಡಬೇಕಾದ ಹಿಂದಿನ ದಿನವು ಬಂದು ಬಿಟ್ಟಿತ್ತು. ಮಾರನೆಯ ಬೆಳಗೆ ಚೆಕ್ ಔಟ್ ಮಾಡಬೇಕಿದ್ದ ಕಾರಣ ಎಲ್ಲಾ ಪ್ಯಾಕಿಂಗ್ ಮುಗಿಸಿ ರಾತ್ರಿ ಬೇಗನೆ ಮಲಗಿಬಿಡಬೇಕೆಂದು ಯೋಚಿಸಿದವನಿಗೆ ಇದ್ದಕ್ಕಿದ್ದಂತೆ ನೆನಪಾಗಿತ್ತು – ಬೆಳಗಿನ ಹೊತ್ತಲ್ಲಿ ದೊಡ್ಡದೊಂದು ಸರತಿ ಸಾಲೆ ಇರುವುದೆಂದು. ಅವನ ಜತೆಯಲ್ಲಿ ಬಂದಿದ್ದವರೆಲ್ಲ ಒಂದೆ ಸಾರಿ ವಾಪಾಸಾಗುವುದರಿಂದ ಆ ಅವಸರದಲ್ಲಿ ಸಾಲಲ್ಲಿ ಕಾಯುವುದು ತುಸು ತ್ರಾಸದಾಯಕವೆನಿಸಿತು. ಆಗಲೆ ಮತ್ತೊಂದು ಆಲೋಚನೆಯೂ ಹೊಳೆಯಿತು – ‘ಯಾಕೆ ಹಿಂದಿನ ರಾತ್ರಿಯೆ ಚೆಕ್ ಔಟ್ ಮಾಡಿಬಿಡಬಾರದು?’ ಎಂದು. ಬಿಲ್ ಎಲ್ಲ ಸೆಟಲ್ ಮಾಡಿ ಇನ್ವಾಯ್ಸ್ ತೆಗೆದುಕೊಂಡುಬಿಟ್ಟರೆ ಮರುದಿನ ಬರಿಯ ಡೋರ್ ಕೀ ವಾಪಸು ಕೊಟ್ಟು ಹೋಗಿಬಿಡಬಹುದು. ಕೊಡದೆ ಇದ್ದರು ಸಮಸ್ಯೆಯಿರುವುದಿಲ್ಲ – ಎಲೆಕ್ಟ್ರಾನಿಕ್ ಕೀ ಆದ ಕಾರಣ ಸಿಸ್ಟಮ್ಮಿನಲ್ಲೆ ಡೀ-ಆಕ್ಟಿವೇಟ್ ಮಾಡಿ ನಿಷ್ಕ್ರೀಯವಾಗಿಸಿಬಿಡುತ್ತಾರೆ. ಆದರೆ ಕೊನೆ ಗಳಿಗೆಯ ತರಲೆ, ತಾಪತ್ರಯ ಇರುವುದಿಲ್ಲ… ಸರಿ, ಅದೇ ಒಳ್ಳೆಯ ಯೋಜನೆ ಎಂದುಕೊಂಡವನೆ ನೇರ ಚೆಕ್-ಔಟ್ ಕೌಂಟರಿನಲ್ಲಿ ಆ ಸಾಧ್ಯತೆಯ ಕುರಿತು ವಿಚಾರಿಸತೊಡಗಿದ. ಬಹುಶಃ ಇಂತಹ ಎಷ್ಟೊ ಕೇಸುಗಳನ್ನು ನೋಡಿದ್ದವರಿಗೆ ಇದೇನು ಹೊಸ ಬೇಡಿಕೆಯಲ್ಲದ ಕಾರಣ, ‘ ನೋ ಪ್ರಾಬ್ಲಮ್..’ ಎನ್ನುತ್ತಲೆ ಸರಸರನೆ ಅಲ್ಲೆ ಇನ್ವಾಯ್ಸ್ ಅನ್ನು ಪ್ರಿಂಟ್ ಮಾಡಿಕೊಟ್ಟುಬಿಟ್ಟರು. ಅದನ್ನೆತ್ತಿಕೊಂಡು ವಿವರಗಳತ್ತ ಕಣ್ಣು ಹಾಯಿಸಿ ಎಲ್ಲಾ ಸರಿ ಇದೆಯೆ ಎಂದು ನೋಡಿದರೆ ಯಾವುದೊ ಒಂದು ರೂಮ್ ಸರ್ವೀಸ್ ಐಟಂ ‘ ಹತ್ತು ಡಾಲರು’ ಎಂದು ನಮೂದಿಸಿರುವುದು ಕಂಡು ಬಂತು. ಅದೇನಿರಬಹುದೆಂದು ನೋಡಿದವನಿಗೆ ರೂಮಿನ ಮಿನಿ ಬಾರಿನಿಂದ ಯಾವುದೊ ಸ್ನ್ಯಾಕ್ ಐಟಂ ತೆಗೆದುಕೊಂಡದ್ದಾಗಿ ನಮೂದಿಸಿದ್ದು ಕಂಡು ಬಂತು. ‘ಅರೆರೆ…ಇದೇನಿದು? ನಾನು ಮಿನಿ ಬಾರಲ್ಲೇನು ಮುಟ್ಟೆ ಇಲ್ಲವಲ್ಲಾ? ಇದೇನೆಂದು ಕೇಳಿಬಿಡಲೆ? ಎಂದುಕೊಂಡವನಿಗೆ ಯಾವುದಕ್ಕು ಒಮ್ಮೆ ರೂಮಿನಲ್ಲಿ ಪರಿಶೀಲಿಸಿ ನಂತರ ವಿಚಾರಿಸುವುದು ವಾಸಿ ಎನಿಸಿ ಹಾಗೆ ಮಡಿಚೆತ್ತಿಕೊಂಡು ರೂಮಿನತ್ತ ನಡೆದ.. ಆದರು ಮನದಲ್ಲಿ ಮಾತ್ರ ಏನೊ ವಿಲಕ್ಷಣ ಚಡಪಡಿಕೆ, ಅಸಹನೆ, ನಿರಾಳವಿಲ್ಲದ ಭಾವ..

ಲಿಪ್ಟನ್ನೇರಿ ನಡೆದಾಗಲೂ ಅದೇ ಯೋಚನೆಯ ಗುಂಗು ತೀವ್ರವಾಗುತ್ತ ಹೋದಾಗ ‘ ಛೇ! ಕೇವಲ ಹತ್ತು ಡಾಲರಿನ ವಿಷಯಕ್ಕೇಕೆ ಇಷ್ಟೊಂದು ಚಿಂತೆ? ಪರಿಶೀಲಿಸಿ ನೋಡಿ ನಂತರ ತೆಗೆಸಿ ಹಾಕಿದರಾಯ್ತು.. ಅದಕ್ಕೇಕಿಷ್ಟೊಂದು ಆಳದ ಚಂಚಲತೆ, ಚಡಪಡಿಕೆ?’ ಎಂದು ಸಮಾಧಾನ ಪಡಿಸಿಕೊಳ್ಳಲೆತ್ನಿಸಿದರು ಯಾಕೊ ಮನದ ಮೊರೆತ ಮಾತ್ರ ನಿಲ್ಲಲಿಲ್ಲ. ಹಣಕ್ಕಿಂತ ಹೆಚ್ಚಾಗಿ ‘ಅದು ಹೇಗೆ ತಾನು ಮಾಡಿರದ ವೆಚ್ಚವೊಂದು ತನ್ನರಿವಿಲ್ಲದೆ ಸೇರಿಕೊಂಡುಬಿಟ್ಟಿತು ?’ ಎಂಬ ಲೆಕ್ಕಾಚಾರದ ಜಿಜ್ಞಾಸೆಯೆ, ಘಟಿಸಿದ ಘಟನೆಯ ಕನಿಷ್ಠ ಗುರುತ್ವವನ್ನು ಆಲೋಚನೆಯಲ್ಲಿ ಗರಿಷ್ಠ ಮಟ್ಟಕ್ಕೇರಿಸಿ ಕಾಡತೊಡಗಿತು. ಅದರ ಮೊರೆತದ ಗದ್ದಲ ಯಾವ ಮಟ್ಟಕ್ಕೆ ಮುಟ್ಟಿಬಿಟ್ಟಿತ್ತೆಂದರೆ ರೂಮಿನ ಒಳಗೆ ತಲುಪಿದ ಕೂಡಲೆ ಅವನ ಗ್ರಹಿಕೆಗು ನಿಲುಕದ ವೇಗದಲ್ಲಿ ರಿಸೆಪ್ಷನ್ನಿನ್ನತ್ತ ಪೋನಾಯಿಸುವಷ್ಟು..

ಇವನ ಉದ್ವೇಗಪೂರ್ಣ ಅಹವಾಲನ್ನು ಆಲಿಸಿದ ಅತ್ತ ಕಡೆಯ ಮಧುರ ದನಿ, ಅಷ್ಟೆ ಶಾಂತ ದನಿಯಲ್ಲಿ, ‘ ಡೊಂಟ್ ವರಿ ಸಾರ್.. ಇಟ್ಸ್ ಆಲ್ರೈಟ್.. ನೀವು ನಾಳೆ ಹೊರಡುವಾಗ ಚೆಕ್ ಔಟ್ ಕೌಂಟರಿನಲ್ಲಿ ಹೇಳಿ, ಅವರು ತಿದ್ದಿದ ಮತ್ತೊಂದು ಬಿಲ್ ಕೊಡುತ್ತಾರೆ.. ಅದರಲ್ಲಿ ತೊಡಕೇನು ಇಲ್ಲ’ ಎಂದಾಗ ಕುಣಿಯುತ್ತಿದ್ದ ಮನ ಸ್ವಲ್ಪ ತಹಬದಿಗೆ ಬಂದಿತ್ತು.

ನಂತರ ಶಾಂತನಾಗಿ ಮಾರನೆಯ ಪ್ಯಾಕಿಂಗಿನ ಕುರಿತು ಸಿದ್ದತೆ ನಡೆಸತೊಡಗಿದ ಲೌಕಿಕ, ಹೊರಗೆ ಹರಡಿಕೊಂಡಿದ್ದ ಮತ್ತು ನೇತು ಹಾಕಿದ್ದ ಬಟ್ಟೆ ಬರೆಗಳನ್ನೆಲ್ಲ ಒಂದೊಂದಾಗಿ ಮಡಚಿ ಒಳಗಿಡತೊಡಗಿದ. ಹಾಗೆಯೆ ಎಲ್ಲವನ್ನು ಸಾವರಿಸಿಡುತ್ತ ಇದ್ದಾಗ ಇದ್ದಕ್ಕಿದ್ದಂತೆ ಮಿನಿ ಬಾರಿನ ಕಡೆ ಗಮನ ಹರಿದು ಬಿಲ್ಲಿನಲ್ಲಿ ಸೇರಿಸಿದ್ದ ವಸ್ತುವೇನಿದ್ದಿರಬಹುದೆಂಬ ಕುತೂಹಲದ ತುಣುಕು ಮತ್ತೆ ಇಣುಕಿ, ಅದರ ಖಾನೆಯನ್ನೆಳೆದು ನೋಡಿದವನಿಗೆ ತಟ್ಟನೆ ದಿಗ್ಭ್ರಾಂತಿಯೊಂದು ಕಾಡಿತ್ತು…!

ಆ ಖಾನೆಯ ಮೇಲಿನ ಸಾಲಿನಲ್ಲಿದ್ದ ಒಂದು ತಿಂಡಿಯ ಡಬ್ಬದ ಮುಚ್ಚಳದ ಸೀಲು ತೆರೆದಂತಿದ್ದು, ಕಾಲು ಭಾಗ ಖಾಲಿಯಾಗಿರುವುದು ಕಾಣಿಸಿತು!

ಒಂದರೆಗಳಿಗೆ ತನ್ನ ಕಣ್ಣನ್ನೆ ನಂಬದವನಂತೆ ಅವಾಕ್ಕಾಗಿ ನಿಂತುಬಿಟ್ಟ ಲೌಕಿಕ… ತೆರೆದ ಡಬ್ಬಿ, ಅರೆ ಖಾಲಿಯಾಗಿದ್ದ ತಿನಿಸು, ಅದರ ಮಾಮೂಲಿ ಜಾಗದಲ್ಲಿ ಇಟ್ಟಿದ್ದ ಬದಲಿ ಹೊಸ ತಿನಿಸಿನ ಡಬ್ಬ – ತನಗೆ ಅರಿವಿಲ್ಲದಂತೆ ತಾನೆ ಏನಾದರು ತಿಂದುಬಿಟ್ಟಿರುವೆನೆ ? ಯಾವುದೊ ಜ್ಞಾನದಲ್ಲಿ ತಿಂದು ಮರೆತುಬಿಟ್ಟಿರುವೆನೆ ? ಎಲ್ಲವನ್ನು ಅಷ್ಟು ನಿಖರವಾಗಿ ನೆನಪಿನಲ್ಲಿಡುವ ತಾನು ಮರೆಯಲಾದರು ಹೇಗೆ ಸಾಧ್ಯ ? ಅದು ಈ ರೀತಿಯ ವಿಷಯದಲ್ಲಿ ತುಂಬಾ ಹುಷಾರಿ.. ಎರಡು ಹೆಜ್ಜೆ ನಡೆದರೆ ಹೋಟೆಲಿನೆದುರಿನ ಅಂಗಡಿಯಲ್ಲಿ ಕೇವಲ ಒಂದೆರಡು ಡಾಲರಿಗೆ ಅದೆ ತಿನಿಸೆ, ಅದೂ ದುಪ್ಪಟ್ಟು ಗಾತ್ರದ್ದು ಸಿಗುವಾಗ, ಈ ರೀತಿ ಹತ್ತಿಪ್ಪತ್ತು ಪಟ್ಟು ದುಬಾರಿ ಬೆಲೆ ತೆತ್ತು ಈ ಹಿಡಿ ಗಾತ್ರದ ಡಬ್ಬ ಕೊಳ್ಳುವ ಅನಿವಾರ್ಯವಾದರು ಏನು? ಇಲ್ಲ ಇದು ತಾನಂತು ಬಿಚ್ಚಿಟ್ಟ ಡಬ್ಬಿಯಲ್ಲ. ದಿನವೂ ಲಂಚು, ಡಿನ್ನರು ಎಂದು ಗಡದ್ದಾಗಿಯೆ ತಿನ್ನುತ್ತಿರುವುದರಿಂದ ರಾತ್ರಿ ಒಂದು ಹೊತ್ತಲ್ಲಿ ಹಸಿವೆಯಾಗಿ ತಿಂದದ್ದು ಎಂದು ಹೇಳುವ ಹಾಗೂ ಇಲ್ಲ… ಅಂದ ಮೇಲೆ ಇದನ್ನು ಎತ್ತಿಕೊಂಡು ಬಿಚ್ಚಿಟ್ಟದ್ದು ಅಲ್ಲದೆ ಕಾಲುಭಾಗ ತಿಂದು ಖಾಲಿ ಮಾಡಿದ್ದು ಯಾರು?

ಒಂದು ವೇಳೆ ಆ ರೂಮ್ ಸರ್ವೀಸಿನ ಭೂತಾನ್ ಹೆಂಗಸಿನ ಕೆಲಸವೇನಾದರು ಇರಬಹುದೆ ? ದಿನವೂ ರೂಮಿನ ಸರ್ವೀಸ್ ಮಾಡುತ್ತ, ಸ್ಟಾಕ್ ಬದಲಾಯಿಸುವಾಗ ಈ ಡಬ್ಬ ಪೊಟ್ಟಣಗಳು ಕಣ್ಣಿಗೆ ಬೀಳುತ್ತಲೆ ಇರುತ್ತವೆ. ಎದುರಿಗಿದ್ದರು ಮುಟ್ಟಬಹುದಷ್ಟೆ ಹೊರತು ತಿನ್ನುವಂತಿಲ್ಲವಾಗಿ, ಅದೆಷ್ಟು ಬಾರಿ ತಿನ್ನಬೇಕೆಂಬ ಪ್ರಲೋಭನೆಯನ್ನು ಅದುಮಿಟ್ಟುಕೊಂಡು ಕೆಲಸ ಮಾಡುವ ಪರಿಸ್ಥಿತಿ ಉಂಟಾಗಿರಬಹುದೊ ? ಅದೆ ರೀತಿಯ ತಿನಿಸು ಹೊರಗೆ ಅಗ್ಗದಲ್ಲಿ ಸಿಗುವುದಾದರು ಇಲ್ಲಿ ಇಷ್ಟೊಂದು ದುಬಾರಿ ವೆಚ್ಚದಲ್ಲಿ, ನೀಟಾದ ಪ್ಯಾಕಿಂಗಿನಲ್ಲಿ ಇಟ್ಟ ತಿನಿಸಿನ ರುಚಿಯ, ವೈವಿಧ್ಯದ ವಿಶೇಷತೆಯೇನಿರಬಹುದು ಎಂಬ ಕುತೂಹಲ, ಕೌತುಕ ಸುಮಾರು ಬಾರಿ ಕಾಡಿರಬಹುದಲ್ಲ ? ಆದರೂ ವೃತ್ತಿಪರ ಬದ್ಧತೆ ಮತ್ತು ನಿಯಮಗಳ ಭೀತಿಯಿಂದ ಅದನ್ನು ಮುಟ್ಟದೆ ಬಿಟ್ಟಿರಬೇಕು. ಆದರೆ ಮೊನ್ನೆ ತನ್ನೊಡನಾಡಿದ ಮಾತುಕತೆಯ ಸಲಿಗೆಯಿಂದಾಗಿಯೊ, ಅಥವಾ ತಾನೆ ತಿಂದರು ತಿಂದಿರಬೇಕೆಂಬ ಅನಿಸಿಕೆಯಲ್ಲಿ ನಾನು ಗಮನಿಸುವುದಿಲ್ಲವೆಂದುಕೊಂಡು ತಡೆಯಲಾಗದೆ ಡಬ್ಬಿ ತೆರೆದು ರುಚಿ ನೋಡಿಬಿಟ್ಟಿರಬೇಕು…!

ಹೌದು.. ಅದೆ ಸರಿಯಾದ ಊಹೆ.. ಆ ಗಳಿಗೆಯ ಲೆಕ್ಕಾಚಾರದ ಭಂಡ ಧೈರ್ಯದಲ್ಲಿ ಡಬ್ಬಿ ತೆರೆದು ತಿಂದುಬಿಟ್ಟಿರಬೇಕು… ಕಾಲು ಭಾಗ ಖಾಲಿಯಾಗಿ ಅದರ ಕುರಿತಾದ ಆರಂಭಿಕ ಕುತೂಹಲ ತಣಿಯುವ ಹೊತ್ತಿಗೆ, ತಾನು ಮಾಡಿದ ತಪ್ಪಿನ ಭೀತಿ ಪ್ರಬಲವಾಗಿ ಭಯ ಹುಟ್ಟಿಸಿಬಿಟ್ಟಿರಬೇಕು.. ಗಿರಾಕಿ ದೂರು ಕೊಟ್ಟು ಕೆಲಸಕ್ಕೆ ಸಂಚಕಾರ ಬರುವಂತಾದರೆ ಎನ್ನುವ ಅರಿವು ಮತ್ತಷ್ಟು ಹೆದರಿಸಿ, ಮಿಕ್ಕಿದ್ದನ್ನು ತಿನ್ನಲು ಬಿಡದೆ ಕಂಗೆಡಿಸಿಬಿಟ್ಟಿರಬೇಕು. ಆ ಹೊತ್ತಿನಲ್ಲಿ ತಿನ್ನಬೇಕೆನ್ನುವ ಪ್ರಲೋಭನೆಯನ್ನು ಅಧಿಗಮಿಸಿದ ವಾಸ್ತವ ಭೀತಿ, ಮಿಕ್ಕ ಭಾಗವನ್ನು ತಿನ್ನಬಿಡದೆ ಹಾಗೆಯೆ ವಾಪಸ್ಸು ಇಟುಬಿಡುವಂತೆ ಪ್ರೇರೇಪಿಸಿಬಿಟ್ಟಿರಬೇಕು – ದೂರು ಕೊಡಬೇಕೆಂದುಕೊಂಡ ಗಿರಾಕಿಯೂ ನಡೆದಿದ್ದನ್ನು ಊಹಿಸಿಯೊ, ಅಥವಾ ತಾನೆ ತಿಂದಿರಬಹುದೆಂಬ ಅನಿಸಿಕೆಯಲ್ಲೊ ಮಿಕ್ಕ ಭಾಗವನ್ನು ತಿಂದು ಸುಮ್ಮನಾಗುವನೆಂಬ ಆಶಯದಲ್ಲಿ…..

ಹೀಗೆ ನಡೆದಿರಬಹುದಾದುದರ ಚಿತ್ರಣದ ಊಹಾ ಪರಿಸರ ಲೌಕಿಕನ ಮನದಲ್ಲಿ ಮೂಡುತ್ತಿದಂತೆ, ಅದು ಹಾಗೆಯೆ ನಡೆದಿರಬಹುದೆಂಬ ನಂಬಿಕೆ ಬಲವಾಗುತ್ತ ಹೋಯ್ತು.. ಜತೆಗೆ ತಿನ್ನಲೆತ್ತಿಕೊಂಡರು ಮುಗಿಸಬಿಡದ ಮನಸ್ಸಾಕ್ಷಿ ಮತ್ತೆ ವಾಪಸ್ಸು ಇಡಿಸಿಬಿಟ್ಟ ಸನ್ನಿವೇಶದ ಕುರಿತು ಕರುಣೆ, ಖೇದವೂ ಉಂಟಾಯ್ತು… ಆ ಗಳಿಗೆಯಲ್ಲಿ ಏನೆಲ್ಲ ಮನೊ ಚಪಲ, ತಾಕಲಾಟ, ಸಂದಿಗ್ದಗಳ ಹೊಯ್ದಾಟ ಅವಳನ್ನು ಆವರಿಸಿಕೊಂಡಿರಬಹುದೆನ್ನುವ ಅನುಕಂಪದ ಭಾವವು ಜತೆ ಸೇರಿ, ಆ ಅರೆಖಾಲಿಯಾಗಿದ ಡಬ್ಬಿಯನ್ನು ತಿನ್ನದೆ ಹಾಗೆ ಖಾನೆಯ ಮೇಜಿನ ಮೇಲಿಟ್ಟುಬಿಟ್ಟ – ಮುಂದಿನ ಬಾರಿ ಅವಳಿಗೆ ಮತ್ತೆ ಎತ್ತಿಕೊಳ್ಳಲು ಕೈಗೆ ಸಿಗುವ ಹಾಗೆ. ಅದೆ ಸಮಯದಲ್ಲಿ ತಟ್ಟನೆ ರಿಸೆಪ್ಷನ್ ಕೌಂಟರಿಗೆ ಪೋನ್ ಮಾಡಿ ದೂರು ಕೊಟ್ಟದ್ದು ನೆನಪಾಗಿ, ‘ ಓಹ್.. ಅದರಿಂದವಳಿಗೇನಾದರು ತೊಂದರೆಯಾಗಿಬಿಟ್ಟರೆ? ಮತ್ತೆ ಪೋನ್ ಮಾಡಿ ತಾನೆ ತಿಂದು ಮರೆತುಬಿಟ್ಟೆ ಎಂದು ದೂರು ವಾಪಸು ಪಡೆದುಬಿಡಲೆ ?’ ಎಂದುಕೊಂಡವನಿಗೆ ‘ಹೇಗು ಚೆಕ್ ಔಟ್ ಹೊತ್ತಿನಲ್ಲಿ ಬಿಲ್ ಸರಿ ಮಾಡಿಸಿಕೊ – ಎಂದು ನುಡಿದಿರುವಳಲ್ಲ ? ಏನು ಬದಲಿಸದೆ ಸುಮ್ಮನೆ ಇದ್ದುಬಿಟ್ಟರೆ ತಾನು ತಿಂದ ಹಾಗೆ ಲೆಕ್ಕವಲ್ಲವೆ ?’ ಅನಿಸಿ ಮತ್ತೇನು ಮಾಡದೆ ಹಾಗೆ ಸುಮ್ಮನಿದ್ದು ಬಿಟ್ಟ – ಮತ್ತೆ ಅವಳು ಮರುದಿನ ಆ ಡಬ್ಬಿ ನೋಡಿದಾಗ ಇದೆಲ್ಲ ಆಲೋಚನೆ, ಚಿಂತನೆ ಅವಳಿಗು ಅರಿವಾಗಿ ಡಬ್ಬಿಯನ್ನು ತೆಗೆದುಕೊಳ್ಳುವಳೆಂಬ ಅನಿಸಿಕೆಯಲ್ಲಿ. ಆದರೆ ಅದಾಗುವ ಹೊತ್ತಲ್ಲಿ ತಾನು ವಿಮಾನದ ಒಡಲಲ್ಲಿ ಪ್ರಪಂಚದ ನಡುವಲ್ಲೆಲ್ಲೊ ಹಾರುತ್ತಿರುತ್ತೇನೆ ಎಂದು ನೆನಪಾಗಿ ಮೆಲ್ಲಗೆ ನಕ್ಕ ಲೌಕಿಕ, ಯಾವುದಕ್ಕು ಇರಲೆಂದು ಅಲ್ಲಿದ್ದ ಟಿಶ್ಯೂ ಪೇಪರಿನ ಮೇಲೆ ಒಂದೆರಡು ಸಾಲು ಗೀಚಿದವನೆ ಆ ತಿನಿಸಿನ ಡಬ್ಬಿಯ ಅಡಿಯಲಿಟ್ಟ. ಯಾಕೊ ಅದುವರೆಗಿದ್ದ ಚಡಪಡಿಕೆ, ಆತಂಕವೆಲ್ಲ ಮಾಯವಾಗಿ ತುಂಬಾ ನಿರಾಳವಾದ ಭಾವವುಂಟಾಗಿ ಪ್ರಶಾಂತ ನೆಮ್ಮದಿಯಲ್ಲಿ ಸೋಫಾಕ್ಕೊರಗಿ ಕಣ್ಮುಚ್ಚಿದವನಿಗೆ ಏನೊ ಘನ ಕಾರ್ಯ ಮಾಡಿದಂತಹ ಹಗುರ, ಹೆಮ್ಮೆಯ ಭಾವ…

*******

ಉಪಸಂಹಾರ :

ಅದು ಹೋಟೆಲಿನ ಹೌಸ್ ಕೀಪಿಂಗಿನ ಹಿಂಭಾಗದ ಕೋಣೆ. ಅಲ್ಲಿಬ್ಬರು ಹೌಸ್ ಕೀಪಿಂಗ್ ಡಿಪಾರ್ಟ್ಮೆಂಟಿನ ಏಶಿಯಾ ಮೂಲದ ಇಬ್ಬರು ಗೆಳತಿಯರು ಕೆಲಸ ಮುಗಿಸಿ ಚೇಂಜ್ ರೂಪಿನಲ್ಲಿ ಏಪ್ರನ್ ತೆಗೆದು ಬಟ್ಟೆ ಬದಲಿಸುತ್ತಿದ್ದಾರೆ… ಪಕ್ಕ ಪಕ್ಕದ ಕಂಪಾರ್ಟ್ಮೆಂಟಿನಲ್ಲಿದ್ದ ಅವರಿಬ್ಬರ ಹೊರತು ಅಲ್ಲಿ ಬೇರಾರು ಇಲ್ಲ. ಎಡಭಾಗದ ರೂಮಿನಲ್ಲಿದ್ದವಳು ತುಸು ಮೆತ್ತನೆಯ ದನಿಯಲ್ಲೆ, ‘ ಏನೇ ಇದು ? ಎರಡು ವಾರವಾದರೂ ಏನು ಕ್ರಮ ತೆಗೆದುಕೊಳ್ಳಲೇ ಇಲ್ಲವಲ್ಲ..? ಆ ಭೂತಾನ್ ಭೂತಿಣಿಗೆ ಏನು ಆದಂತೆಯೆ ಕಾಣುತ್ತಿಲ್ಲ ? ಮಾಮೂಲಿನಂತೆ ಕೆಲಸಕ್ಕೆ ಬರುತ್ತಾಳೆ, ಹೋಗುತ್ತಾಳೆ? ಆವತ್ತು ನೀನು ಎಲ್ಲಾ ನಾನು ಹೇಳಿದ ಹಾಗೆ ಮಾಡಿದೆ ತಾನೆ? ‘ ಎಂದಳು.

‘ ಅಯ್ಯೊ..! ನನಗು ಅದೇ ಅರ್ಥವಾಗುತ್ತಿಲ್ಲ.. ಅವತ್ತು ಅವಳು ಆ ರೂಮಿಗೆ ಹೌಸ್ ಕೀಪಿಂಗ್ ಸರ್ವೀಸ್ ಮಾಡಲು ಹೋಗುವ ಮೊದಲೆ, ನಾನೆ ಒಳಗೆ ಹೋಗಿ ಒಂದು ಡಬ್ಬಿ ತೆಗೆದು ಕಾಲು ಭಾಗ ಖಾಲಿ ಮಾಡಿ ಮಿಕ್ಕಿದ್ದನ್ನು ಅಲ್ಲೆ ವಾಪಸ್ಸು ಇಟ್ಟು ಬಂದುಬಿಟ್ಟೆ.. ಆಮೇಲೆ ಸರ್ವೀಸಿಂಗ್ ಮುಗಿದ ಮೇಲೂ ಹೋಗಿ ಚೆಕ್ ಮಾಡಿದ್ದೆ.. ನಾನಂದುಕೊಂಡಂತೆ ಹಳೆಯ ಡಬ್ಬಿ ತೆಗೆದು ಹೊಸದನ್ನು ಇಟ್ಟಿದ್ದಳು…. ನೋಡಿದರೆ, ಗಿರಾಕಿಯೆ ದೂರು ಕೊಡಲಿಲ್ಲವೆಂದು ಕಾಣುತ್ತದೆ… ಅಥವಾ ಅವನ ಗಡಿಬಿಡಿ ದಿನಚರಿಯಲ್ಲಿ ಗಮನಿಸಿದನೊ ಇಲ್ಲವೊ ?’ ಎಂದಳು ಮತ್ತೊಬ್ಬಾಕೆ.

ಅವರಿಬ್ಬರು ಬಟ್ಟೆ ಬದಲಿಸಿ ಹೊರಬರುವಾಗ ಮತ್ತೆ ಮೊದಲಿನವಳು, ‘ ಕನಿಷ್ಠ ದೂರು ಕೊಟ್ಟಿದ್ದರೆ ಒಂದು ವಾರ್ನಿಂಗ್ ಆದರು ಕೊಡಬಹುದೇನೊ ಅಂದುಕೊಂಡಿದ್ದೆ.. ಅಂತಾದರೂ ಈ ಬಾರಿ ಬೆಸ್ಟ್ ಸ್ಟ್ಯಾಫ್ ಅವಾರ್ಡ್ ಅವಳಿಗೆ ತಪ್ಪಿ, ಮತ್ತಾರಿಗಾದರು ಸಿಕ್ಕುತ್ತಿತ್ತೊ ಏನೊ ?’ ಎಂದಳು ನಿಟ್ಟುಸಿರಿಡುತ್ತ.

ಯಾಕೆ ಏನು ಆಗಲಿಲ್ಲವೆಂದು ಪೂರ್ತಿ ಸ್ಪಷ್ಟವಾಗಿ ಗೊತ್ತಾಗದಿದ್ದರು ಅದರ ಮಾರನೆ ದಿನ ಅವರಿಬ್ಬರಿಗು ಸೂಕ್ಷ್ಮವಾಗಿ ಗೊತ್ತಾಗಿತ್ತು – ಹೋಟಿಲಿನ ಹೌಸ್ ಕೀಪಿಂಗ್ ಸ್ಟಾಫಿಗೆಲ್ಲ ಸೇರಿದಂತೆ ನಡೆಸಿದ ತರಬೇತಿ ಕಾರ್ಯಕ್ರಮದಲ್ಲಿ ಕೊಟ್ಟ ಉದಾಹರಣೆಯೊಂದನ್ನು ಕೇಳಿದಾಗ….
***
ತಿಂಗಳಿಗೊಮ್ಮೆ ಕಡ್ಡಾಯವಾಗಿ ಕೊಡುವ ಆ ತರಬೇತಿಯ ಮೀಟಿಂಗಿನಲ್ಲಿ ಪ್ರತಿ ಬಾರಿಯೂ ಏನಾದರೊಂದು ವಿಷಯಾಧಾರಿತ ವಸ್ತುವಿನ ಕುರಿತು ಉಪನ್ಯಾಸ ನೀಡುವುದು ಚಿಕಾಗೊದ ಆ ಹೋಟೆಲಿನಲ್ಲಿ ಅನೇಕ ವರ್ಷಗಳಿಂದ ನಡೆದು ಬಂದ ಪದ್ದತಿ… ಈ ಬಾರಿಯು ಅಂತೆಯೆ ಸೇರಿಸಿದ್ದ ವಿಷಯ ‘ಗ್ರಾಹಕ ನಡುವಳಿಕೆ ಮತ್ತು ನಮ್ಮ ಪ್ರತಿಕ್ರಿಯೆ’. ಡಿನ್ನರಿನ ಕೂಟದಲ್ಲಿ ಹೋಟೆಲಿನ ಕೆಲಸಕ್ಕೆ ಸೇರಿದ್ದವರೆಲ್ಲರು ಆ ದಿನ ಕಡ್ಡಾಯವಾಗಿ ಭಾಗವಹಿಸಲೆಬೇಕಾಗಿತ್ತು. ಜತೆಗೆ ಪ್ರತಿ ಬಾರಿಯೂ ಆಯ್ದ ಕೆಲವರಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶವೂ ಇರುತ್ತಿತ್ತು. ಈ ಬಾರಿ ರೆಸೆಪ್ಷನ್ನಿನ ಯುವತಿಯೊಬ್ಬಳ ಸರದಿ. ಅವಳು ಕೆಲವೊಮ್ಮೆ ಗ್ರಾಹಕರು ಹೇಗೆ ವರ್ತಿಸುತ್ತಾರೆ, ಹೇಗೆ ಕೆಲವು ದೂರು, ಆರೋಪಗಳನ್ನು ಸಲ್ಲಿಸುತ್ತಾರೆ, ಹೇಗೆ ಕೆಲವೊಮ್ಮೆ ಅದು ನಿಜವೂ ಆಗಿರಬಹುದು, ಸುಳ್ಳು ಆಗಿರಬಹುದು, ಅಂತಹ ಸಂಧರ್ಭಗಳಲ್ಲಿ ಹೇಗೆ ಪ್ರತಿಕ್ರಿಯಿಸಬೇಕೆಂದು ಕೆಲವು ಉದಾಹರಣೆಗಳ ಮೂಲಕ ವಿವರಿಸುತ್ತಿದ್ದಳು. ಹಾಗೆ ನೀಡುತ್ತಿದ್ದ ಉದಾಹರಣೆಯಲ್ಲಿ ಇತ್ತೀಚೆಗೆ ಒಬ್ಬ ಕಸ್ಟಮರ್ ತಾನು ತೆಗೆದುಕೊಂಡಿರದ ಮಿನಿಬಾರ್ ತಿನಿಸಿಗೆ ಚಾರ್ಜ್ ಮಾಡಿರುವುದರ ಕುರಿತು ದೂರು ಕೊಟ್ಟಿದ್ದನ್ನು ಉದಾಹರಿಸುತ್ತ, ಆ ಹೊತ್ತಲ್ಲಿ ಆ ದೂರನ್ನು ನಿರಾಕರಿಸದೆ, ಆರೋಪವನ್ನು ತಿರಸ್ಕರಿಸದೆ ಹೇಗೆ ಅದನ್ನು ಒಪ್ಪಿಕೊಂಡು ಸೆಟಲ್ಮೆಂಟ್ ಹೊತ್ತಿನಲ್ಲಿ ಇನ್ವಾಯ್ಸ್ ತಿದ್ದಿಸಿಕೊಳ್ಳುವಂತೆ ಸಲಹೆ ನೀಡಿದಳು, ಅದು ಹೇಗೆ ಗ್ರಾಹಕನ ನಿರಾಳತೆಗೆ ಸಹಕಾರಿಯಾಯ್ತು ಎಂದು ವಿವರಿಸಿದಳು. ಹಾಗೆಯೆ ಮುಂದುವರೆದು ಕೆಲವೊಮ್ಮೆ ಟೆಂಕ್ಷನ್ನಿನಲ್ಲಿ ಗ್ರಾಹಕರು ದೂರಿತ್ತರು, ಶಾಂತವಾದಾಗ ಅವರು ಮರೆತಿದ್ದ ವಿಷಯ ನೆನಪಿಗೆ ಬಂದೊ, ಅಥವಾ ತಾವು ಕೊಟ್ಟ ದೂರು ಸಕಾರಣದ್ದಲ್ಲವೊಂದೊ ಅರಿವಾಗಿ ತಾವೆ ದೂರು ಹಿಂದೆ ಪಡೆಯುವ ಪ್ರಕರಣಗಳನ್ನು ವಿವರಿಸುತ್ತ, ಈ ಕೇಸಿನಲ್ಲಿ ಗ್ರಾಹಕ ಮತ್ತೆ ಆ ದೂರಿನ ಬಗ್ಗೆ ಮಾತಾಡದೆ ಬಿಲ್ಲು ಪಾವತಿಸಿ ಹೋದ ಬಗೆಯನ್ನು ವಿವರಿಸಿದಳು. ಯಾವುದೆ ಆತಂಕದ ಸಂಧರ್ಭದಲ್ಲು ಒತ್ತಡಕ್ಕೆ ಸಿಲುಕದೆ ಸಮಾಧಾನವಾಗಿ ನಿಭಾಯಿಸಿದರೆ ಬಹುತೇಕ ಸಮಸ್ಯೆಗಳು ತಂತಾನೆ ಪರಿಹಾರವಾಗುತ್ತವೆ ಎಂಬುದು ಅವಳ ಮಾತಿನ ಸಾರವಾಗಿತ್ತು.
***
ಭೂತಾನಿನ ಆ ಹೆಂಗಸು ಲೌಕಿಕ ಹೊರಟ ಸಂಜೆಗೆ ಮತ್ತೆ ಅವನ ರೂಮಿಗೆ ಸರ್ವೀಸಿಂಗಿಗೆ ಹೋದಾಗ ಖಾಲಿಯಾಗಿದ್ದ ರೂಮಿನಲ್ಲಿ ಮುಕ್ಕಾಲು ಭಾಗ ತಿನ್ನದೆ ಉಳಿದಿದ್ದ ಡಬ್ಬಿ ಕೈಗೆ ಸಿಕ್ಕಿತ್ತು. ಅದು ನೇರ ಕಣ್ಣಿಗೆ ಕಾಣುವಂತೆ ಇಟ್ಟಿದ್ದು ಮಾತ್ರವಲ್ಲದೆ ಅದರಡಿಯಲ್ಲಿದ್ದ ಟಿಶ್ಯೂ ಪೇಪರಿನಲ್ಲಿ ಏನೊ ಬರೆದಿದ್ದಂತೆ ಕಾಣಿಸಿತು. ಎತ್ತಿಕೊಂಡು ನೋಡಿದರೆ ಅದರಲ್ಲಿ, ‘ಥ್ಯಾಂಕ್ಯೂ, ಧನ್ಯವಾದ್.. ದಿಸ್ ಇಸ್ ಫಾರ್ ಯೂ’ ಎಂದು ಬರೆದಿತ್ತು. ಅದನ್ನು ನೋಡುತ್ತಿದ್ದಂತೆ ಅವಳ ಮುಖದಲ್ಲೊಂದು ಮುಗುಳ್ನಗೆ ಮೂಡಿತ್ತು. ‘ಕೇವಲ ಒಂದು ದಿನ ಕೆಲವು ಗಳಿಗೆ ಸಹಜವಾಗಿ ಮಾತಾಡಿದ್ದಕ್ಕೆ ಈ ಥ್ಯಾಂಕ್ಸ್ ಜತೆ ತಿನಿಸಿನ ಡಬ್ಬವನ್ನು ಬಿಟ್ಟು ಹೋಗಿರುವನಲ್ಲ, ತುಂಬಾ ಒಳ್ಳೆಯ ಮನುಷ್ಯ’ ಎಂದುಕೊಳ್ಳುತ್ತಲೆ ಆ ಡಬ್ಬಿಯನ್ನು ತೆಗೆದಿಟ್ಟುಕೊಂಡಳು, ಅವನದನ್ನಲಿ ಬಿಟ್ಟು ಹೋದ ಹಿನ್ನಲೆಯ ನೈಜ ಅರಿವೆ ಇರದೆ. ಆ ರಾತ್ರಿ ಮನೆಗೆ ಹೋದಾಗ ಅದರ ರುಚಿ ನೋಡಿದ ಮಗಳು, ‘ ಅಮ್ಮ ಎಲ್ಲಿಂದ ತಂದೆ ಇದನ್ನು? ತುಂಬಾ ಚೆನ್ನಾಗಿದೆ?…’ ಎಂದು ಕೇಳಿದಾಗ, ತಾನು ಒಂದೆರಡು ಕಾಳು ಬೀಜ ಬಾಯಿಗೆ ಹಾಕಿಕೊಳ್ಳುತ್ತ ‘ ಹೀಗೆ ಯಾರೊ ಗೊತ್ತಿರುವ ಅಂಕಲ್ ಹೋಟೆಲಿಗೆ ಬಂದಿದ್ದರು.. ನಿನ್ನ ಮಗಳಿಗೆ ಕೊಡು ಅಂತ ಕೊಟ್ಟು ಹೋದರು’ ಅಂದಾಗ ಎಂಟು ವರ್ಷದ ಆ ಹುಡುಗಿಯ ಮುಖದಲ್ಲಿ ಮಲ್ಲಿಗೆಯಂತಹ ನಗು ಅರಳಿತ್ತು. ಅದನ್ನು ನೋಡಿ ತಾನೂ ನಕ್ಕವಳೆ ಹಾಸಿಗೆಯಲ್ಲಿ ಮಗ್ಗುಲು ಬದಲಿಸಿದ್ದಳು ಆ ಭೂತಾನಿನ ಹೆಂಗಸು.
***
ಬೆಳಿಗ್ಗೆಯೆ ಅವಸರದಲ್ಲಿ ಏರ್ಪೋರ್ಟಿಗೆ ಹೊರಡಬೇಕಾದ ಲೌಕಿಕ ತನ್ನ ಲಗೇಜನ್ನೆಲ್ಲ ಎಳೆದುಕೊಂಡು ರಿಸೆಪ್ಷನ್ನಿನಲ್ಲಿ ಕೀ ಕೊಡಲು ಹೋದಾಗ, ಆ ಸ್ವಾಗತಕಾರಿಣಿ , ‘ ಸಾರ್ ಒಂದು ನಿಮಿಷ.. ‘ ಎನ್ನುತ್ತ ಅವನ ಕೈಗೊಂದು ಕವರನ್ನು ಕೊಟ್ಟಿದ್ದಳು. ಅದನ್ನು ತೆಗೆದು ನೋಡಲು ಪುರುಸೊತ್ತಿಲ್ಲದೆ ಇನ್ವಾಯ್ಸಿನ ಮತ್ತೊಂದು ಕಾಪಿಯಿರಬಹುದೆಂದುಕೊಂಡು ಅದನ್ನು ಕಂಪ್ಯೂಟರ ಬ್ಯಾಗಿಗೆ ಸೇರಿಸಿ ನಡೆದವನಿಗೆ ಗಡಿಬಿಡಿಯಲ್ಲಿ ಅದರ ವಿಷಯ ಮರೆತೆ ಹೋಗಿತ್ತು. ಏರ್ಪೋರ್ಟ್ ತಲುಪಿ ಚೆಕ್-ಇನ್ ಆದ ಮೇಲೆ, ವಲಸೆ ರಹದಾರಿ ಮತ್ತು ಸುರಕ್ಷಾ ತಪಾಸಣೆಯ ವಿಧಿಗಳನ್ನೆಲ್ಲ ಮುಗಿಸಿ ಲಾಂಜೊಂದರಲ್ಲಿ ಕೂತು ವಿಮಾನದ ಬೋರ್ಡಿಂಗ್ ಅನೌನ್ಸ್ ಮೆಂಟಿಗೆ ಕಾಯತೊಡಗಿದಾಗ ತಟ್ಟನೆ ಆ ಕವರಿನ ನೆನಪಾಗಿತ್ತು. ಸರಿ ಅದೇನೆಂದು ನೋಡಿಯೆಬಿಡುವ ಎಂದುಕೊಂಡು ಹೊರತೆಗೆದು ಕವರು ಬಿಚ್ಚಿದ. ಅವನಂದುಕೊಂಡಂತೆ ಅದು ಇನ್ವಾಯ್ಸ್ ಆಗಿರದೆ ಇಪ್ಪತ್ತು ಡಾಲರಿನ ಗಿಫ್ಟ್ ವೋಚರು ಆಗಿತ್ತು! ಅದೇಕೆ ಆ ವೋಚರು ಕೊಟ್ಟರೆಂದು ಅಚ್ಚರಿಪಡುತ್ತ ಅದರ ಜತೆಗಿದ್ದ ಲೆಟರು ನೋಡಿದರೆ – ಹೋಟೆಲಿನ ಲಾಯಲ್ಟಿ ಗ್ರಾಹಕ ಮೆಂಬರಶಿಪ್ ಕಾರ್ಡ್ ಪಡೆಯಲೊಪ್ಪಿಕೊಂಡ ಕಾರಣಕ್ಕೆ ಮತ್ತು ಹೋಟೆಲಿನ ಸೇವಾಮಟ್ಟದ ಕುರಿತಾದ ಸರ್ವೆ ಕಾರ್ಡನ್ನು ತುಂಬಿಸಿದ್ದರ ಕೃತಜ್ಞತೆಯ ಕುರುಹಾಗಿ ಆ ಗಿಫ್ಟ್ ವೋಚರ್ ನೀಡಿದ್ದರೆಂದು ವಿವರಿಸಿತ್ತು..

ತಾನು ಹತ್ತು ಡಾಲರಿನ ಮೊತ್ತಕ್ಕೆ ತಲೆ ಕೆಡಿಸಿಕೊಂಡು ಒದ್ದಾಡಿ ಕೊನೆಗೊಂದು ಡಬ್ಬದ ತಿನಿಸು ಹಿಂದೆ ಬಿಟ್ಟು ಬಂದರೆ, ಇಲ್ಲಿ ಅದರ ಋಣವಿಟ್ಟುಕೊಳ್ಳದೆ ಬಡ್ಡಿಯ ಸಮೇತ ಹಿಂದಿರುಗಿಸುವ ಹಾಗೆ ಇಪ್ಪತ್ತು ಡಾಲರು ವೋಚರೀನ ರೂಪದಲ್ಲಿ ವಾಪಸ್ಸು ಬಂದಿದೆ..! ‘ಎಲ್ಲಾ ಅಯೋಮಯವೆ’ ಎಂದುಕೊಂಡು ಟರ್ಮಿನಲ್ಲಿನ ಒಳಗೆ ಇದ್ದ ಶಾಪಿಂಗಿನ ಅಂಗಡಿಗಳಲ್ಲೆ ಸುತ್ತಾಡತೊಡಗಿದ ಆ ಇಪ್ಪತ್ತು ಡಾಲರಿಗೆ ಏನು ಸಿಗಬಹುದೆಂದು. ಆ ಗಿಫ್ಟ್ ವೋಚರನ್ನು ಸ್ವೀಕರಿಸುವ ಮಾಹಿತಿ ಫಲಕವಿದ್ದ ಅಂಗಡಿಯೊಂದರ ಮುಂದೆ ನೇತು ಹಾಕಿದ್ದ ಪಾಶ್ಮೀನ ಕಾಶ್ಮೀರಿ ಶಾಲೊಂದರ ಸೊಗಸಾದ ವಿನ್ಯಾಸ ಕಣ್ಸೆಳೆದಂತಾಗಿ ಅದರ ಬೆಲೆಯೆಷ್ಟೆಂದು ನೋಡಿದರೆ ಇಪ್ಪತ್ತೊಂದು ಡಾಲರು ಎಂದಿತ್ತು. ತುಟಿಯಂಚಿನಲ್ಲೆ ಮುಗುಳ್ನಕ್ಕ ಲೌಕಿಕ ಅದನ್ನೆತ್ತಿಕೊಂಡು ಪೇ ಕೌಂಟರಿನತ್ತ ನಡೆಯುವ ಹೊತ್ತಿಗೆ ಸರಿಯಾಗಿ ಅವನ ಫ್ಲೈಟ್ ಬೋರ್ಡಿಂಗಿಗೆ ಸಿದ್ದವಾಗಿರುವ ಕುರಿತು ಅನೌನ್ಸ್ಮೆಂಟ್ ಬರಲಾರಂಭಿಸಿದ್ದನ್ನು ಕೇಳಿಸಿಕೊಂಡು, ತನ್ನ ಹೆಜ್ಜೆಯ ಗತಿಯನ್ನು ತೀವ್ರಗೊಳಿಸಿದ…

(ಮುಕ್ತಾಯ)

ಹತ್ತು, ಡಾಲರು, ಸುತ್ತ, ಚಿಕಾಗೊ, ಭೂತಾನ್, ಲೌಕಿಕ, ನಾಗೇಶ, ಮೈಸೂರು, ನಾಗೇಶಮೈಸೂರು, nagesha, mysore, nageshamysore

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s