00321. ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ..

00321. ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ.. (ಭಾಗ 1/3)
______________________________________________________

ದಿನದ ಕೊನೆಯ ಮೇಯ್ಲೊಂದನ್ನು ಓದಿ ಮುಗಿಸಿ, ಚುಟುಕಾದ ಮಾರುತ್ತರ ಬರೆದು ಕಳಿಸಿದವನೆ ಮೊಬೈಲಿನ ಗಡಿಯಾರದತ್ತ ಕಣ್ಣು ಹಾಯಿಸಿದ ಗಂಭೀರ, ‘ ಓಹ್.. ಆಗಲೆ ಆರೂವರೆ..’ ಎಂದುಕೊಂಡು ಸ್ವಲ್ಪ ಅವಸರದಲ್ಲೆ ಕಂಪ್ಯೂಟರು ಮುಚ್ಚಿ ಬ್ಯಾಗಿಗೆ ಸೇರಿಸಿ ಹೊರಟ. ಅದು ಅವನ ನಿತ್ಯದ ದಿನಚರಿ – ಆರರಿಂದ ಆರೂವರೆಗೂ ಮೊದಲೆ ಆಫೀಸು ಬಿಟ್ಟು ಹೊರಟುಬಿಡುವುದು. ಆಗಲೆ ಇನ್ನು ಚೆನ್ನಾಗಿ ಬೆಳಕಿರುವುದರಿಂದ ಸಂಜೆಯ ತಂಪು ಹವೆಯಲ್ಲಿ ತೀರಾ ಬೆವರದೆ ನಡೆದು ಮನೆ ಸೇರಿಬಿಡಬಹುದು. ಅದೇ ಆರೂವರೆ ದಾಟಿತೆಂದರೆ ಯಾಕೊ ವಾಕಿಂಗ್ ಹೊರಡಲು ಮನಸಾಗುವುದಿಲ್ಲ.. ಆ ನಂತರದ ವಾಕಿಂಗಿನಲ್ಲಿ ಬೆನ್ನಿನಲ್ಲಿ ಬ್ಯಾಗು ನೇತು ಹಾಕಿಕೊಂಡು ಎಷ್ಟೆ ಬೇಗನೆ ನಡೆದು ಹೊರಟರೂ ಆರು ಕಿಲೊಮೀಟರು ದೂರದ ಸಿಟಿಯ ಮಧ್ಯದಲ್ಲಿರುವ ಮನೆ ಸೇರುವ ಹೊತ್ತಿಗೆ ಕನಿಷ್ಠ ಒಂದು ಗಂಟೆ ಹತ್ತು ನಿಮಿಷವಾದರೂ ಬೇಕು. ಜತೆಗೆ ಹೋಗುವ ದಾರಿಯಲ್ಲೆ ಮಗನಿಗೆಂದು ಏನಾದರೂ ತಿನ್ನಲು ಕಟ್ಟಿಸಿಕೊಂಡು ಹೋಗುವ ಕಾರಣ ಮತ್ತೊಂದು ಹದಿನೈದಿಪ್ಪತ್ತು ನಿಮಿಷವನ್ನು ಸೇರಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಆರೂವರೆಯ ನಂತರ ಹೊರಟರೆ ಮನೆಯಲ್ಲಿ ಕಾದಿರುವ ಮಗನ ಊಟದ ಸಮಯದಲ್ಲಿ ಏರುಪೇರಾಗಿಬಿಡುತ್ತದೆ. ಅದಕ್ಕೆ ಅವಕಾಶ ಕೊಡದೆ ಒಂದೊ ಆರೂವರೆಗೆ ಮೊದಲೆ ಹೊರಡುತ್ತಾನೆ ಇಲ್ಲವೆ ತಡವಾಯ್ತೆಂದರೆ ಬಸ್ಸಿನಲ್ಲೊ, ಟ್ರೈನಿನಲ್ಲೊ ಹೊರಟುಬಿಡುತ್ತಾನೆ. ಆ ಕಾರಣಕ್ಕಾಗಿಯೆ ಎಂಟಕ್ಕು ಮೊದಲೆ ಆಫೀಸಿಗೆ ಬರುವುದನ್ನು ರೂಢಿಸಿಕೊಂಡಿದ್ದಾನೆ – ಕಡ್ಡಾಯವಾಗಿ ನಿರ್ವಹಿಸಲೆಬೇಕಾದ ದೈನಿಕ ಗಂಟೆಗಳ ಅವಧಿಯಲ್ಲಿ ಯಾವುದೆ ವ್ಯತ್ಯಯವಾಗಲಿ, ಖೋತಾವಾಗಲಿ ಆಗದಂತೆ ನೋಡಿಕೊಳ್ಳಲು. ಎಲ್ಲಕ್ಕಿಂತ ಹೆಚ್ಚಿನ ಪ್ರೇರಣೆಯೆಂದರೆ ಈ ನೆಪದಲ್ಲಿಯಾದರು ಸ್ವಲ್ಪ ದೈಹಿಕ ವ್ಯಾಯಾಮ ಸಿಕ್ಕಂತಾಗುವುದಲ್ಲ ಎನ್ನುವುದು. ಕನಿಷ್ಠ ವಾರಕ್ಕೆ ಮೂರು ದಿನ ನಡೆದರು ಸಾಕು ದೈನಂದಿನ ಆರೋಗ್ಯದ ಕೋಟಾ ಮುಗಿಸಲು ಸಾಧ್ಯ – ದಿನಕ್ಕರ್ಧ ಗಂಟೆಯ ಲೆಕ್ಕದಲ್ಲಿ…

‘ದಿನವೂ ನಡೆಯುತ್ತೀಯಲ್ಲಾ, ಬೋರಾಗುವುದಿಲ್ಲವಾ..? ಅದು ಅಷ್ಟೊಂದು ದೂರಾ..! ಹೋಗಿ ತಲುಪುವುದರಲ್ಲೆ ತುಂಬಾ ಹೊತ್ತಾಗಿಬಿಡುವುದಿಲ್ಲಾ?’ ಎಂದು ಅಚ್ಚರಿಯಿಂದ ಕಣ್ಣರಳಿಸಿ ಕೇಳುತ್ತಾಳೆ ಥಾಯ್ ಹುಡುಗಿ ಕುನ್. ಜಂದ್ರ… ಮಸಲಾ ಅವಳನ್ನು ಹುಡುಗಿಯೆನ್ನುವುದೆ ತಪ್ಪು.. ಇಬ್ಬರು ಬೆಳೆದ ಹೆಣ್ಣು ಮಕ್ಕಳ ತಾಯಿಯವಳು. ಗಂಡ ಮತ್ತು ಮಕ್ಕಳಿಬ್ಬರನ್ನೂ ಬ್ಯಾಂಕಾಕಿನಲ್ಲೆ ಬಿಟ್ಟು ತಾನೊಬ್ಬಳೆ ವರ್ಗಾವಣೆ ಮಾಡಿಸಿಕೊಂಡು ಸಿಂಗಪುರ ಸೇರಿಕೊಂಡಿದ್ದಾಳೆ… ಇಲ್ಲಿನ ಡಾಲರಿನ ಸಂಬಳ ಥಾಯ್ಲ್ಯಾಂಡಿನ ಕರೆನ್ಸಿಯಲ್ಲಿ ಹಲವು ಪಟ್ಟು ತೂಗುವುದು ಒಂದು ಕಾರಣವಾದರೆ, ಬ್ಯಾಂಕಾಕಿನಲ್ಲಿದ್ದಾಗ ಅವಳ ಸಿನಿಯಾರಿಟಿ ಮತ್ತು ಸರ್ವೀಸಿನ ಅವಧಿಯನ್ನು ಪರಿಗಣಿಸದೆ, ಕೇವಲ ಇಂಗ್ಲೀಷ್ ಭಾಷೆ ಚೆನ್ನಾಗಿ ಬರುವುದೆಂಬ ಒಂದೆ ಕಾರಣಕ್ಕೆ ಆಗ ತಾನೆ ಹೊಸದಾಗಿ ಸೇರಿದ್ದ ಜೂನಿಯರ ಉದ್ಯೋಗಿಯನ್ನು ವಿಭಾಗದ ಮುಖ್ಯಸ್ಥನನ್ನಾಗಿ ಮಾಡಿ ತನ್ನನ್ನು ಕಡೆಗಣಿಸಿದರಲ್ಲ ಎಂಬುದು ಮತ್ತೊಂದು ಕಾರಣ – ಅದೂ ಡಬಲ್ ಗ್ರಾಜುಯೇಷನ್ ಮುಗಿಸಿ, ಎಂಬಿಯೆ ಮಾಡಿಕೊಂಡರು… ಅದಕ್ಕೂ ಮೀರಿದ ಸಂಸಾರದ ವೈಯಕ್ತಿಕ ಕಾರಣವಿರಬಹುದೆಂದು ಗಂಭೀರನ ಗುಮಾನಿ. ಅಲ್ಲವಾದಲ್ಲಿ ಗಂಡ-ಮನೆ-ಮಕ್ಕಳು ಎಲ್ಲರನ್ನು ಬಿಟ್ಟು, ಬಾರದ ಭಾಷೆಯ ಮೇಲೆ ಪ್ರಭುತ್ವ ಸಾಧಿಸಲು ಅಹರ್ನಿಶಿ ಬಡಿದಾಡುತ್ತ ಈ ದೂರದೂರಿನಲ್ಲಿ ಒದ್ದಾಡುವ ಅಗತ್ಯವಾದರೂ ಏನು ? ಎಂದವನ ಜಿಜ್ಞಾಸೆ. ತನ್ನ ಸಂಸ್ಕೃತಿ, ಸಂಪ್ರದಾಯದ ಆಚಾರ ವಿಚಾರಗಳ ಮಾನದಂಡದಲ್ಲಿ ಅವಳದನ್ನು ಹೋಲಿಸಿ ನೋಡುವುದೆ ತಪ್ಪು ಎಂದೆನಿಸಿದಾಗ ತನ್ನ ಅನಿಸಿಕೆಯನ್ನು ನಿರಾಕರಿಸಿಕೊಳ್ಳಲೂ ಯತ್ನಿಸಿದ್ದಾನೆ. ಆದರೂ ಅವಳ ಆಗಮನ ಮತ್ತು ಇರುವಿಕೆಯೆ ಅವನಿಗೊಂದು ಅಚ್ಚರಿ ಮತ್ತು ಅದ್ಭುತ ನಿಗೂಢ..!

ಅವಳು ಮಾತ್ರವಲ್ಲದೆ ಸುಮಾರು ಮಂದಿ ಆ ಪ್ರಶ್ನೆ ಕೇಳಿದ್ದಾರೆ ಅವನಿಗೆ – ದಿನವೂ ಆರು ಕಿಲೊಮೀಟರ್ ಎಂದಾಕ್ಷಣವೆ ಯಾರೊ ಹುಚ್ಚನನ್ನು ನೋಡುವಂತೆ ದೃಷ್ಟಿ ಹರಿಸುತ್ತ. ಗಂಭೀರ ಎಷ್ಟೊ ಬಾರಿ ಪ್ರಾಮಾಣಿಕವಾಗಿ ವಿವರಿಸಲು ಯತ್ನಿಸಿದ್ದಾನೆ ಅದರ ಹಿಂದಿನ ತರ್ಕವನ್ನು. ತಾನು ನಡೆದು ಸ್ಟಾಪು ಸೇರಿ ಬಸ್ಸಿಗೊ, ಟ್ರೈನಿಗೊ ಕಾದು ಮನೆ ತಲುಪಲು ಹೇಗೂ ಸುಮಾರು ನಲವತ್ತರಿಂದ ಐವತ್ತು ನಿಮಿಷ ಹಿಡಿಯುತ್ತದೆ.. ನಡೆದೆ ಹೊರಟರು ಅಬ್ಬಬ್ಬಾ ಎಂದರೆ ಇನ್ನರ್ಧ ಗಂಟೆ ಮಾತ್ರ ಹೆಚ್ಚು. ಸುಮ್ಮನೆ ಬಸ್ಸಿನಲ್ಲಿ ಕೂತು ಪಯಣಿಸುವ ಸಮಯದಲ್ಲಿಯೆ ಪುಕ್ಕಟೆ ವ್ಯಾಯಾಮ ದೊರಕಿದ್ದೂ ಅಲ್ಲದೆ, ಅದಕ್ಕಾಗಿ ಬೇರೆ ಸಮಯ ವ್ಯಯಿಸುವ ಅಗತ್ಯವಿಲ್ಲದೆ ಅನುಕೂಲ ದೊರಕುತ್ತದೆಯಾಗಿ, ಈ ಬಿಡುವಿಲ್ಲದ ಆಧುನಿಕ ದಿನಗಳಲ್ಲಿ ಸಿಕ್ಕ ಸಮಯವನ್ನು ಸದುಪಯೋಗಿಸಿಕೊಂಡು ನಡೆಯುವುದೆ ಉತ್ತಮವಲ್ಲವೆ? ಎಂದು ವಿವರಿಸುತ್ತಾನೆ. ಆದರೂ ಏಕೊ ಅವರು ತನ್ನ ಮಾತನ್ನು ನಂಬಿದರೆಂದು ಅವನಿಗೆಂದೂ ಅನಿಸಿದ್ದೆ ಇಲ್ಲ. ಮೊದಲು ಬಂದಾಗ ಸಪೂರವಾಗಿ ಬಳುಕುವ ಬಳ್ಳಿಯಂತಿದ್ದ ಕುನ್. ಜಂದ್ರ ಅಲ್ಲಿಗೆ ಬಂದ ಮೇಲೆ ಮನೆಯೂಟದ ಬದಲಿಗೆ ಹೊರಗಿನೂಟದ ಜತೆಗೆ ಪೀಡ್ಜಾ, ಬರ್ಗರು, ಕೇಕು, ಡೋನಟ್ಗಳಾದಿ ಎಲ್ಲಾ ಜಂಕ್ ಪುಡ್ಡುಗಳನ್ನೆ ತಿಂದುಕೊಂಡು ಮೂರು ಸುತ್ತು ಊದಿಕೊಂಡಿದ್ದಾಳೆ – ಮೂರು ಹೆಜ್ಜೆಯಿಕ್ಕಿದರು ಏದುಸಿರು ಬಿಡುವಷ್ಟು.ಹೀಗಾಗಿ ಅವಳಲ್ಲಿ ವಾಕಿಂಗ್ ಬಗ್ಗೆ ಮಾತನಾಡಿ ಫಲವಿಲ್ಲ ಎಂದು ನಕ್ಕು ಸುಮ್ಮನಾಗಿಬಿಡುತ್ತಾನೆ, ಏನೂ ಉತ್ತರಿಸದೆ.

ಆದರೆ ಬರಿಯ ವ್ಯಾಯಮದೊಂದು ಉದ್ದೇಶ ಮಾತ್ರವೆ ಅದರ ಪ್ರೇರಣಾ ಶಕ್ತಿಯಲ್ಲವೆಂಬುದು ಬಹುಶಃ ಅವನಿಗೆ ಮಾತ್ರವೆ ಗೊತ್ತಿರುವ ಸತ್ಯವೆನ್ನಬೇಕು. ಮೂಲತಃ ಆ ಉದ್ದೇಶದಿಂದಲೆ ಆರಂಭವಾದ ಪ್ರಕರಣ ವಾರಕ್ಕೊಂದು ಕೇಜಿ ತೂಕವಿಳಿಸಿಕೊಳ್ಳುವ ಹುನ್ನಾರವಾಗಿಯೆ ಓಂನಾಮ ಹಾಡಿದರು, ದಿನಗಳೆದಂತೆಲ್ಲ ಅದೊಂದು ಹವ್ಯಾಸ ಪ್ರೇರಿತ ಚಪಲವಾಗಿ ಅದರ ಜತೆಜತೆಗೆ ಕೆಲವು ಆಯಾಚಿತ ಆಯಾಮದ ಹೊಸ ಬೆಳವಣಿಗೆಗಳನ್ನು ಹುಟ್ಟು ಹಾಕಿಸಿ, ಆಳವಾಗಿ ಬೆಸೆದುಕೊಂಡು ಅಂತರ್ಗತವಾಗಿಸಿಬಿಟ್ಟಿತ್ತು. ಆ ಬೆಳವಣಿಗೆಯ ಎರಡು ಅನಿವಾರ್ಯ ಮುಖಗಳೆಂದರೆ ಆ ಟಿಶ್ಯೂ ಪೇಪರು ಮಾರುವ ವೃದ್ಧೆ ಮತ್ತು ಕಾಫಿ, ಟೀ ಬೆರೆಸಿಕೊಡುವ ಕ್ಯಾಂಟಿನಿನ ಚಿರ ಯುವಕನಂತೆ ಕಾಣುವ ವೃದ್ಧ ಟೀ ಅಂಕಲ್. ಅವರಿಬ್ಬರೂ ಅಪರಿಚಿತರು ಅದು ಹೇಗೆ ಗಂಭೀರನ ದೈನಂದಿನ ಪ್ರಕ್ರಿಯೆಯಲ್ಲಿ ಏಕಾಏಕಿ ಪಾಲುದಾರರಾಗಿಬಿಟ್ಟರೆಂದು ಗಂಭೀರನಿಗೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಅವನರಿವಿಗೆ ನಿಲುಕುವ ಹೊತ್ತಿಗೆ ಅವರಿಬ್ಬರೂ ಅವನ ನಿತ್ಯದ ಚಟುವಟಿಕೆಯಲ್ಲಿ ಹಾಸುಹೊಕ್ಕಾಗಿ ಬೆಸೆದುಹೋಗಿ, ಅದು ಹೇಗಾಯ್ತೆಂಬ ಕುತೂಹಲದ ಪ್ರಶ್ನೆಯನ್ನೂ ಹುಟ್ಟಿಸದಷ್ಟು ಸಹಜವಾಗಿ ಹಿನ್ನಲೆಗೆ ಸರಿದು ಹೋಗಿದ್ದವು. ಅದು ಸಂಭವಿಸಿದ್ದು ಸಹ ಅನಿರೀಕ್ಷಿತ ಸ್ತರದಲ್ಲೆ ಆದರೂ ಯಾವುದೆ ರೀತಿಯ ನಾಟಕೀಯತೆಯಿರದೆ ಸಹಜವಾಗಿ ಘಟಿಸಿದ್ದ ಪ್ರಕರಣಗಳಾದ ಕಾರಣ ಅದೇನು ವಿಶೇಷವೆಂದು ಅನಿಸಿರಲೆ ಇಲ್ಲ. ಆದರೆ ಅವನಿಗೆ ನಿಜಕ್ಕು ಅವು ವಿಶೇಷವೆನಿಸತೊಡಗಿದ್ದು, ಅವುಗಳ ಘಟಿಸುವಿಕೆಯನ್ನು ಬಲವಂತವಾಗಿ ಆರೋಪಿಸುತ್ತ ಅದರ ಪೂರಕವಾಗುವ ಘಟನೆಗಳತ್ತ ಗಮನ ಸೆಳೆಯುವ ಪ್ರಕ್ರಿಯೆ ತನ್ನಂತಾನೆ ಆರಂಭವಾದಾಗ.

ನಿಜಕ್ಕು ಅವೇನೂ ಅಂತಹ ಮಹಾನ್ ಸಂಭವಗಳೇನೂ ಆಗಿರಲಿಲ್ಲ. ದಿನವೂ ನಡೆವ ಹಾದಿಯಲ್ಲಿ ಕಾಣುವ ಚಿತ್ರಣಗಳು ಅವನ ಬದುಕಿನಲ್ಲೊಂದೊಂದು ತುಣುಕಾಗಿ ಸೇರಿಕೊಂಡು, ಅವಿಭಾಜ್ಯ ಅಂಗಗಳಾಗಿ ಬದಲಾದುದಷ್ಟೆ ಅಚ್ಚರಿಯ ಕಾರಣ. ಸಿಂಗಪುರದ ಒಂದು ವೈಶಿಷ್ಠ್ಯತೆಯೆಂದರೆ ಸಿಟಿಯ ನಟ್ಟ ನಡುವಲ್ಲೆ ಹೋದರೂ ಅಲ್ಲೊಂದು ಜಾಗ್ ಮಾಡುವ ಅಥವಾ ವಾಕ್ ಮಾಡುವ ಸಲುವಾಗಿರುವ ಪುಟ್ಪಾತ್ ಅಥವಾ ವಾಕ್ ವೇಯ ಇರುವಿಕೆ. ಹೀಗಾಗಿ ನಡೆದುಕೊಂಡು ಬರುತ್ತಲೆ ಸುತ್ತಲ ವಾಣಿಜ್ಯಮಯ ಜಗದ ಕಣ್ಣೋಟ ಸಿಗುವುದರ ಜತೆ ಜತೆಗೆ ನಡುನಡುವೆ ಯಥೇಚ್ಛವಾಗಿರುವ ಹಸಿರು ಸಸ್ಯ ರಾಶಿಯ ಸಾಲುಗಳು, ಪಾರ್ಕುಗಳು ಕಾಣಿಸಿಕೊಳ್ಳುತ್ತಲೆ ಇರುತ್ತವೆ. ಅದರ ನಡುನಡುವಲ್ಲೆ ಆಧುನಿಕ ಬದುಕಿನ ಅವಿಭಾಜ್ಯ ಅಂಗಗಳಾದ ವಿಶಾಲ ರಸ್ತೆಗಳು, ವಾಹನಗಳು, ಶಿಸ್ತುಬದ್ಧ ಟ್ರಾಫಿಕ್ ಸಿಗ್ನಲ್ಲುಗಳು ಸಿಕ್ಕಿ ಎರಡು ಜಗಗಳ ನಡುವಿನ ಸಂತುಲಿತ ಸ್ಥಿತಿಯ ಅನಾವರಣ ಮಾಡುತ್ತಲೆ, ಅವೆರಡಕ್ಕು ನಡುವಿನ ಸೇತುವೆಯನ್ನು ಕಟ್ಟುವ ಕೆಲಸ ಮಾಡುತ್ತವೆ. ಟ್ರಾಫಿಕ್ಕಿನಲ್ಲಿ ನಿಂತು ಗುಂಡಿಯೊಂದನ್ನು ಒತ್ತಿ ಸರದಿಯ ಹಾದಿ ಕಾಯುವಾಗ, ಆ ಸಣ್ಣ ಪ್ರಕ್ರಿಯೆ ಕೂಡ ಎರಡು ಜಗಗಳ ನಡುವಿನ ಕೊಂಡಿಯ ನೂರೆಂಟು ಸಲಕರಣೆಗಳಲ್ಲೊಂದು ಎಂದು ಭಾಸವಾಗುವಷ್ಟು ಒಗ್ಗಿಹೋಗಿದೆ ಅವನ ಮನ. ಅವನ ಆ ದೈನಿಕ ಯಾನದ ಜೈವಿಕಾಜೈವಿಕ ಪರಿಸರದೊಡನೆಯ ಮೌನ ಸಂವಾದದ ಮತ್ತೊಂದು ತುಣುಕು – ಉದ್ದಕ್ಕು ಎದುರಾಗುವ ತರತರದ ಜನ ಯಾತ್ರೆ. ವಿಭಿನ್ನ ದಿರುಸಿನ, ವಿಭಿನ್ನ ವಯೋಮಾನ ಮತ್ತು ಮನೋಸ್ಥಿತಿಯ ಅಸಂಖ್ಯಾತ ಜನರು ಸರಿದು ಹೊಗುತ್ತಾರೆ ಆ ಕ್ರಮಿಸುವ ಪುಟ್ಟ ಹಾದಿಯಲ್ಲಿ. ಆದರೇಕೊ ಒಮ್ಮೆಯೂ ಅವರಲ್ಲಾರು ಪರಿಚಿತ ಮುಖಗಳೆಂದು ಅವನಿಗನಿಸಿದ್ದಿಲ್ಲ. ದಿನವು ನಡೆವಾಗ ಒಮ್ಮೆ ಸಿಕ್ಕವರು ಮತ್ತೆ ಸಿಗಬೇಕೆಂದೇನು ಕಾನೂನೇನು ಇಲ್ಲವಾದರು, ಅಪರೂಪಕ್ಕೊಮ್ಮೆಯಾದರು ಆ ಭೇಟಿಯ ತುಣುಕುಗಳು ಮರುಕಳಿಸಬಹುದಲ್ಲ ? ಗಂಭೀರನಿಗದೂ ಅನುಮಾನವೆ – ಬಹುಶಃ ಅನೇಕರು ದಿನವು ಸಿಗುತ್ತಿದ್ದರು, ಅದರತ್ತ ಜಾಗೃತ ಗಮನವಿರಿಸದ ತಾನೆ ಗುರುತಿಸಲಾಗುತ್ತಿಲ್ಲ ಎಂದು. ಹಾಗೆಂದು ಆ ಯಾತನೆಯೇನು ಅವನನ್ನು ಭಾದಿಸುವುದಿಲ್ಲ. ದಾರಿಯಲ್ಲಿ ಸಿಕ್ಕುವ ಅಂಗಡಿಗಳು, ಮತ್ತಲ್ಲಿ ಆಗೀಗೊಮ್ಮೆ ಸರಕು ಕೊಳ್ಳುವ ಪರಿಪಾಠಕ್ಕೊ ಏನೊ, ಅವೇ ಹೆಚ್ಚು ಪರಿಚಿತ ವ್ಯಕ್ತಿತ್ವಗಳಂತೆ ಕಾಣಿಸಿಕೊಳ್ಳುತ್ತವೆ – ಅದರಲ್ಲು ಬರ್ಗರ ಕಿಂಗ್, ಮೆಕ್ಡೊನಾಲ್ಡ್, ಕೇಯಫ್ಸಿ, ಪೀಡ್ಜಾ ಹಟ್ಟಿನಂತಹ ಅಂಗಡಿಗಳು…

ಬಹುಶಃ ಅವಷ್ಟೆ ಆಗಿದ್ದರೆ ಅವೆಂದೊ ತಂತಾನೆ ಬೇಸರ ಹುಟ್ಟಿಸಿ ಆಸಕ್ತಿ ಕುಗ್ಗಿಸಿಬಿಡುತ್ತಿದ್ದವೊ ಏನೊ – ಆ ಟಿಶ್ಯೂ ಪೇಪರು ಮಾರುವ ವೃದ್ಧೆಯೊಡನೆ ವ್ಯವಹರಿಸುವ ಸಂಧರ್ಭ ಉದ್ಭವಿಸದಿದ್ದರೆ.. ಅದೊಂದು ರೀತಿಯ ವಿಚಿತ್ರ ಬೆಳವಣಿಗೆಯೆಂದೆ ಅನಿಸಿತ್ತು ಗಂಭೀರನಿಗೆ. ದಿನವು ಹಾದು ಹೋಗುವ ಹಲವಾರು ಬೃಹತ್ಕಟ್ಟಡಗಳ ನಡುವೆ ವಿಶಾಲ ಹರವಿನಲ್ಲಿದ್ದ ಬಯಲು ಪ್ರದೇಶದಿಂದಾವೃತ್ತ ಮತ್ತು ಕೆಲವೆ ಮಹಡಿಗಳ ಆ ಚರ್ಚಿನ ತಾಣ, ಆ ಕಾರಣದಿಂದಲೆ ಏನೊ ತನ್ನ ಸುತ್ತ ಒಂದು ವಿಭಿನ್ನ ವಾತಾವರಣವನು ಸೃಜಿಸಿಕೊಂಡಂತಿತ್ತು. ಇದ್ದಕ್ಕಿದ್ದಂತೆ ಕಟ್ಟಡಗಳ ಕಾಡಿನ ನಡುವಿನಿಂದ ಧುತ್ತನೆದುರಾಗುವ ದಟ್ಟ ವನರಾಜಿಯ ನಡುವೆ ತುಸು ಹಳೆಯ ವಾಸ್ತುಶಿಲ್ಪದ ಚರ್ಚಿನ ಕಟ್ಟಡ ಆ ನಡೆಯುವ ಕಾಲುಹಾದಿಯಿಂದಲೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆ ಚರ್ಚಿನ ಕಟ್ಟಡವಿದ್ದ ಎತ್ತರದ ದಿಬ್ಬ ಸುಮಾರು ನೂರು ಮೀಟರು ದೂರದಲ್ಲಿದ್ದರು ಹೊರಗಿಂದ ನಡೆಯುವಾಗ ಅದರ ಪೂರ್ಣ ವಿಹಂಗಮ ನೋಟ ಕಣ್ಣಿಗೆ ನಿಲುಕುವ ಹಾಗಿದ್ದ ಭೂ ವಿನ್ಯಾಸಕ್ಕೆ ಬಹುಶಃ ಕಾಂಪೌಂಡಲ್ಲದ ತುಸುವೆ ಎತ್ತರದ ಬೇಲಿಯೂ ಕಾರಣವಿತ್ತೇನೊ? ತನ್ನ ಬೃಹತ್ ವ್ಯಾಪ್ತಿಯ ಗಾತ್ರದಿಂದಲೆ ಗಮನ ಸೆಳೆಯುತ್ತಿದ್ದ ಆ ಚರ್ಚಿನ ಪ್ರವೇಶ ದ್ವಾರವನ್ನು ದಾಟಿಯೆ ಮುಂದುವರೆಯುತ್ತಿದ್ದ ಕಾಲು ಹಾದಿಯಲ್ಲಿ, ಕಾರುಗಳಿಗೆಂದೆ ಮಾಡಿದ್ದ ರಸ್ತೆಯನ್ನು ದಾಟಿದರೆ ಸುಮಾರು ಐವತ್ತು ಮೆಟ್ಟಿಲುಗಳಿದ್ದ ಪ್ರವೇಶ ಮಾರ್ಗ – ನಡೆದು ಬರುವವರಿಗಾಗಿ. ಅದು ನೇರ ಚರ್ಚಿನ ಬಾಗಿಲಿಗೆದುರಾಗಿಯೆ ನಿರ್ಮಿಸಿದ್ದ ಕಾರಣ ಒಳಾಂಗಣದ ಅಸ್ಪಷ್ಟ ನೋಟ ಮೆಟ್ಟಿಲುಗಳಿಂದಲೆ ಕಾಣುವಂತಿತ್ತು. ಅದನ್ನು ದಾಟಿ ಮತ್ತೆ ಹತ್ತೆಜ್ಜೆ ಮುನ್ನಡೆದರೆ ಅಲ್ಲಿಯೂ ಹೆಚ್ಚಾಗಿ ಬಳಸದ ಅದೇ ರೀತಿಯ ಮತ್ತೊಂದು ಹಳೆಯ ಮೆಟ್ಟಿಲ ಸಾಲು. ಬಹುಶಃ ಹೊಸದರ ನಿರ್ಮಾಣವಾದ ಮೇಲೆ ಅದರ ಬಳಕೆ ಹೆಚ್ಚಿರದ ಕಾರಣ ಒಂದು ರೀತಿ ಶಿಥಿಲಗೊಂಡ ಹಾಗೆ ಕಾಣುತ್ತಿತ್ತು. ಆದರು ಕಾಲ್ನಡಿಗೆಯ ಜನ ಅದನ್ನು ಮಾಮೂಲಿನ ಹಾಗೆಯೆ ಬಳಸುತ್ತಿದ್ದರು ಅಭ್ಯಾಸ ಬಲದಿಂದೆಂಬಂತೆ – ಬಹುಶಃ ಬಸ್ ಸ್ಟಾಪಿಗೆ ಪಕ್ಕದಲ್ಲಿದ್ದ ಮತ್ತೊಂದು ಕಾರಣಕ್ಕು ಇರಬಹುದೇನೊ… ಗಂಭೀರ ಮೊಟ್ಟ ಮೊದಲ ಬಾರಿಗೆ ಆ ಟಿಶ್ಯೂ ಪೇಪರು ಮಾರುವ, ಕೆಳಗಿನ ಮೆಟ್ಟಿಲುಗಳ ಮೇಲೊ ಅಥವಾ ರಸ್ತೆ ಬದಿಯಲ್ಲೊ ಕೈಲೊಂದಷ್ಟು ಪ್ಯಾಕೆಟ್ಟು ಮತ್ತು ಬದಿಯಲ್ಲೊಂದು ಚೀಲ ಹಿಡಿದು ಸದಾ ಆ ಜಾಗದಲ್ಲಿಯೆ ನಿಲ್ಲುತ್ತಿದ್ದ ವೃದ್ಧೆಯನ್ನು ನೋಡಿದ್ದು ಆ ಜಾಗದಲ್ಲಿಯೆ…

**************

ಆಕೆ ಸುಮಾರು ಅರವತ್ತರ ಆಸುಪಾಸಿನ ವೃದ್ಧ ಮಹಿಳೆ. ಸಾಧಾರಣ ಗಾತ್ರ ಎತ್ತರದ ಬಾಬ್ ಮಾಡಿಸಿದ ಕೂದಲಿನ ಅಗಲ ಮುಖದಲ್ಲಿ ಏಶಿಯಾ ಮತ್ತು ಪಾಶ್ಚಿಮಾತ್ಯ ಚಹರೆಗಳ ಮಿಶ್ರಣ… ಅದಕ್ಕೆ ಹೊಂದುವಂತೆ ಸದಾ ತುಂಬು ತೋಳಿನದೊಂದು ಶರಟು ಮತ್ತು ಮಂಡಿಯುದ್ದದ ಸ್ಕರ್ಟ್ ಯುನಿಫಾರಂಮಿನಂತೆ ಧರಿಸಿ ನಿಲ್ಲುವ ಅವಳ ಭಂಗಿ ಒಮ್ಮೆ ನೋಡಿದರೆ ಸಾಕು, ಸದಾ ಕಣ್ಣಿನಲ್ಲೆ ನೆಲೆ ನಿಂತು ಬಿಡುವಂತಹ ವ್ಯಕ್ತಿತ್ವ. ಅದೇಕೆ ಆ ಚಿತ್ರ ಹಾಗೆ ಮನದಲ್ಲಿ ನಿಂತು ಬಿಡುವುದೆಂದು ಅನೇಕ ಬಾರಿ ಯೋಚಿಸುತ್ತಿದ್ದ ಗಂಭೀರನಿಗೆ ಒಮ್ಮೆ ಅದೇಕಿರಬಹುದೆಂದು ತಟ್ಟನೆ ಹೊಳೆದಿತ್ತು – ಅದು ಸದಾ ಅವಳ ಮುಖದಲ್ಲಿರುವ ಮಂದಹಾಸದಿಂದ. ಮುಖವೆ ಮಂದಹಾಸವಾಗುವ ಆ ಪರಿಯ ನೋಟವೆ ಅದನ್ನು ಚಿತ್ರಪಠದಂತೆ ಬೇರೂರಿಸಿಬಿಡುತ್ತಿತ್ತು. ಹೋಗಿ ಬರುವ ಪ್ರತಿಯೊಬ್ಬರಿಗು ಕಾಣುವಂತೆ ಆ ಟಿಶ್ಯೂ ಪೇಪರಿನ ಕಟ್ಟನ್ನು ಕೈಯಲ್ಲಿ ಹಿಡಿದು ನಿಂತಿದ್ದರು ಯಾರಿಗು ಕೊಳ್ಳುವಂತೆ ಒತ್ತಾಯ ಮಾಡುತ್ತಿರಲಿಲ್ಲ. ಇಷ್ಟವಿದ್ದವರು ತಾವಾಗಿಯೆ ಮನಸಿಗೆ ಬಂದಷ್ಟು ಚಿಲ್ಲರೆ ಹಣ ಕೊಟ್ಟರೆ ಅದರನುಸಾರ ಒಂದಷ್ಟು ಕಟ್ಟುಗಳನ್ನೆಣಿಸಿ ಕೊಡುವಳು. ನಿರಂತರವಿರುವ ನಗೆಯಷ್ಟೆ ಅವಳ ಬಂಡವಾಳವಿದ್ದರು, ಸಾಕಷ್ಟು ಜನ ಅವಳಿಂದ ಕೊಳ್ಳುವುದು ಕಂಡಾಗ ಬಹುಶಃ ಆ ಮಾಂತ್ರಿಕ ನಗೆಯೆ ಅದರ ಗುಟ್ಟಿರಬಹುದೆಂದೂ ಅನಿಸಿತ್ತು. ಇಲ್ಲದಿದ್ದರೆ ಕೊಡುವ ಹಣಕ್ಕೆ ಅದರ ಐದರಷ್ಟು ಅಂಗಡಿಯಲ್ಲಿ ಸಿಗುವುದೆಂದು ಗೊತ್ತಿದ್ದೂ ಯಾರು ತಾನೆ ಅಲ್ಲಿ ಕೊಳ್ಳಬಯಸುತ್ತಾರೆ ? ದಾನ ಧರ್ಮಾ ಕರ್ಮದ ಪರಿಗಣನೆಯ ಸಾತ್ವಿಕತೆ ಮತ್ತು ಕೊಳ್ಳುವುದರಿಂದ ಅವಳಿಗೆ ಸಹಾಯವಾಗುವುದೆಂಬ ಕರುಣೆ ಮತ್ತು ಅನುಕಂಪದ ಭಾವನೆಯಷ್ಟೆ ಅಲ್ಲಿನ ಪ್ರೇರಣೆ. ಬಹುಶಃ ಅಲ್ಲೆ ಹತ್ತಿರದಲ್ಲಿರಬಹುದಾದ ವೃದ್ದಾಶ್ರಮದಲೆಲ್ಲೊ ವಾಸಿಸುವ ಆಕೆ ಬದುಕಿಗೆ ಭಿಕ್ಷಾಟನೆಯಂತಹ ವೃತ್ತಿಗಿಳಿಯದೆ ಆ ಇಳಿ ವಯಸ್ಸಿನಲ್ಲು ದುಡಿದು ತಿನ್ನುವ ಉತ್ಸಾಹ ತೋರುವ ಗುಣ ವಿಶಿಷ್ಠವೆನಿಸಿದ್ದರಿಂದಲೆ ಗಂಭೀರನೂ ದಿನವು ಅವಳಿಂದ ಖರೀದಿಸತೊಡಗಿದ್ದ – ಒಂದು ಡಾಲರು ನಾಣ್ಯವನ್ನು ಅವಳ ಕೈಗಿತ್ತು.

ಹೀಗೆ ದಿನವು ಚರ್ಚಿನ ಹತ್ತಿರ ಬಂದಾಗ ಚಿಲ್ಲರೆಗಾಗಿ ತಡಕುತ್ತ ಸಿಕ್ಕಿದಷ್ಟನ್ನು ಎತ್ತಿಕೊಂಡು ಆ ವೃದ್ಧೆಗೆ ನೀಡುತ್ತ ಅವಳಿತ್ತಷ್ಟು ಟಿಶ್ಯೂ ಪೇಪರಿನ ಪುಟಾಣಿ ಕಟ್ಟುಗಳನ್ನೆತ್ತಿಕೊಂಡು ನಡೆಯುವುದು ಅಭ್ಯಾಸವಾಗಿಹೋಯ್ತು ಗಂಭೀರನಿಗೆ. ಅದು ಬರಬರುತ್ತ ಹೇಗಾಯ್ತೆಂದರೆ ಅವನು ದೂರದಲ್ಲಿ ಬರುವುದನ್ನು ಕಂಡಕೂಡಲೆ ಅವಳ ಮುಖ ತಟ್ಟನೆ ಅರಳಿ, ಅವನಿಗೆ ಕೊಡಲೆಂದು ಟಿಶ್ಯೂ ಪೇಪರಿನ ಕಟ್ಟುಗಳನ್ನು ಜೋಡಿಸಿಡಲಾರಂಭಿಸಿಬಿಡುತ್ತಿದ್ದಳು. ಅವನು ಮಾಮೂಲಿ ಗಿರಾಕಿಯೆಂದು ಗೊತ್ತಾದ ಮೇಲಂತು ಬೇರೆಯವರಿಗೆ ಕೊಡುವುದಕ್ಕಿಂತ ಒಂದೆರಡು ಕಟ್ಟು ಹೆಚ್ಚೆ ಜೋಡಿಸಿ ಕೊಡತೊಡಗಿದಳು. ಆಕೆಯ ಲೆಕ್ಕಾಚಾರಕ್ಕಿಂತ ಹೆಚ್ಚು ನೀಡುವ ಅವಳ ಪ್ರಕ್ರಿಯೆಯೆ ಮುಜುಗರಕ್ಕೆ ಕಾರಣವಾಗಿ, ಹಾಗೆ ಹೆಚ್ಚು ನೀಡಿದ್ದನ್ನು ಮತ್ತೆ ಹಿಂತಿರುಗಿಸಿ ನೀಡಲು ಯತ್ನಿಸುವುದು, ಅದನ್ನವಳು ನಿರಾಕರಿಸಿ ಮತ್ತೆ ಒತಾಯದಿಂದ ಅವನಿಗೇ ನೀಡುವುದು ದಿನವೂ ನಡೆಯುವ ದೃಶ್ಯವಾಗಿಬಿಟ್ಟಿತ್ತು. ಆ ವಿಧಿಯೆ ಅಭ್ಯಾಸವಾಗಿ ಹೋಗಿ, ಹೊರಡುವ ಮೊದಲು ಜೋಬಲ್ಲಿ ಚಿಲ್ಲರೆಯಿಲ್ಲದೆ ಹೋದರೆ ಮುಜುಗರವಾದೀತೆಂದು ಮೊದಲೆ ಪರೀಕ್ಷಿಸಿ ನೋಡಿ ಹೊರಡುವ ಪರಿಪಾಠವೂ ಆರಂಭವಾಗಿಹೋಯಿತು ಗಂಭೀರನಿಗೆ. ಒಂದೆರಡು ಬಾರಿಯಂತು ಇನ್ನೇನು ಹೊರಡಬೇಕೆಂದು ಎದ್ದು ನಿಂತವನಿಗೆ ತಟ್ಟನೆ ಚಿಲ್ಲರೆಯಿಲ್ಲವೆಂದು ಅರಿವಾಗಿ, ಯಾಕೊ ಹೊರಡಲೂ ಮನಸಾಗದೆ ಆ ದಿನದ ವಾಕಿಂಗ್ ಪ್ರೋಗ್ರಾಮನ್ನೆ ರದ್ದು ಮಾಡಿ ಕೆಲಸ ಮುಂದುವರೆಸಿದ್ದ…! ಹಾಗೆ ಅದೇ ಫಲಿತಾಂಶ ಒಂದೆರಡು ಬಾರಿ ಮರುಕಳಿಸಿದಾಗ ಮಧ್ಯಾಹ್ನದ ಲಂಚಿನ ಹೊತ್ತಲ್ಲಿ ಊಟಕ್ಕೆಂದು ಹೋದಾಗ ಒಂದಷ್ಟು ಚಿಲ್ಲರೆ ಉಳಿಯುವ ಹಾಗೆ ಮಾಡಿಕೊಳ್ಳುವ ಪರಿಪಾಠವೂ ಶುರುವಾಯ್ತು. ಆದರೆ ಅದಕ್ಕೊಂದು ವ್ಯವಸ್ಥಿತ ರೂಪ ಬಂದಿದ್ದು ಬೆಳಗಿನ ಹೊತ್ತಿನ ಬ್ಲಾಕ್ ಕಾಫಿ ಕುಡಿಯಲಾರಂಭಿಸಿದ ದಿನದಿಂದ; ಅದಕ್ಕು ಪ್ರೇರಣೆಯಾದದ್ದು ಕ್ಯಾಂಟಿನ್ನಿನ ಮತ್ತೊಂದು ವಿಶಿಷ್ಠ ವ್ಯಕ್ತಿತ್ವದಿಂದಾಗಿ ಎನ್ನುವುದು ಮತ್ತೊಂದು ಸೋಜಿಗ…

ಸಾಧಾರಣವಾಗಿ ಬೆಳಗಿನ ತಿಂಡಿ ಮನೆಯಲ್ಲಿ ಮುಗಿಸಿಯೆ ಆಫೀಸಿಗೆ ಹೋಗುತ್ತಿದ್ದ ಗಂಭೀರನಿಗೆ ಬೆಳಗಿನ ಹೊತ್ತು ಸಾಧಾರಣವಾಗಿ ಕ್ಯಾಂಟಿನ್ನಿಗೆ ಹೋಗುವ ಅಗತ್ಯವಿರುತ್ತಿರಲಿಲ್ಲ. ಆದರೆ ಮನೆಯಲ್ಲಾರು ಇರದೆ ಊರಿಗೆ ಹೋದ ದಿನಗಳಲ್ಲಿ ಮಾತ್ರ ಕ್ಯಾಂಟಿನ್ನಿಗೊಂದು ಭೇಟಿ ಹಾಕಲೆ ಬೇಕಾಗಿ ಬರುತ್ತಿತ್ತು – ಖಾಲಿ ಹೊಟ್ಟೆಗೊಂದಿಷ್ಟು ಮೇವು ಹಾಕುವ ಸಲುವಾಗಿ. ಅಲ್ಲಿ ಹತ್ತಾರು ಬಗೆಯ ಆಯ್ಕೆಗಳಿದ್ದರು ಬರಿಯ ಟೋಸ್ಟ್ ಮಾಡಿದ ಪ್ಲೇನ್ ಬ್ರೆಡ್ ಮತ್ತು ಸಕ್ಕರೆ, ಹಾಲಿರದ ಬ್ಲಾಕ್ ಕಾಫಿಗಳೆ ಪ್ರತಿನಿತ್ಯದ ಆರ್ಡರಾಗಿರುತ್ತಿತ್ತು. ಸದಾ ಆ ಕ್ಯಾಂಟಿನ್ನಿನ ಕೌಂಟರಿನಲ್ಲಿರುತ್ತಿದ್ದ ಚಾಂಗ್ ಪೀಟರ ಸುಮಾರು ಅರವತ್ತರ ಹತ್ತಿರದ ಚುರುಕಾದ ವ್ಯಕ್ತಿ. ಅವನಿರುವ ಎತ್ತರಕ್ಕೊ, ವಯಸಿನ ಪ್ರಭಾವಕ್ಕೊ ಅವನನ್ನು ನೋಡಿದರೆ ‘ಲಾರ್ಡ್ ಆಫ್ ದಿ ರಿಂಗ್ಸ್’ ಸಿನಿಮಾದಲ್ಲಿದ್ದ ವಿಚಿತ್ರ ಆಕಾರದ ಪ್ರಾಣಿಯನ್ನು ಹಿಂದಿನಿಂದ ಕಂಡಂತೆ ಅನಿಸುತ್ತಿತ್ತು. ಬಹುಶಃ ಅವನು ನಡೆಯುತ್ತಿದ್ದ ನಡಿಗೆಯ ರೀತಿಯೂ ಅದಕ್ಕೆ ಕಾರಣವೇನೊ. ಅದೇನೆ ಇದ್ದರು ಅವನದೊಂದು ವಿಶಿಷ್ಠ ರೀತಿಯ ವ್ಯಕ್ತಿತ್ವ; ದಿನವು ಬರುವ ನೂರಾರು ಗಿರಾಕಿಗಳ ಮುಖವನ್ನು ನೆನಪಿಟ್ಟುಕೊಂಡು ಪ್ರತಿನಿತ್ಯ ಅವರೇನು ಆರ್ಡರು ಮಾಡುವರೆಂಬುದನ್ನು ಕರಾರುವಾಕ್ಕಾಗಿ ನೆನಪಿಸಿಕೊಂಡು ಅವರು ಬಾಗಿಲಿನಿಂದ ಕೌಂಟರಿನತ್ತ ಬರುವ ಹೊತ್ತಿಗೆ ಅರ್ಧ ಆರ್ಡರು ಸಿದ್ದ ಪಡಿಸಿಟ್ಟುಬಿಡುತ್ತಿದ್ದ..! ಸಾಲದ್ದಕ್ಕೆ ಸೊಗಸಾದ ಮಾತಿನ ಚಾತುರ್ಯವೂ ಸೇರಿಕೊಂಡು ಒಂದು ರೀತಿಯ ‘ಅಜಾತಶತ್ರು ಅಂಕಲ್’ ಎಂದೆ ಹೆಸರಾಗಿಹೋಗಿದ್ದ…

ಅವನ ಚಾತುರ್ಯದ ಪರಿಚಯವಾದ ಮೇಲೆ ಊರಿಂದ ಎಲ್ಲ ಹಿಂತಿರುಗಿದ್ದರು, ಬರಿಯ ಬ್ಲಾಕ್ ಕಾಫಿಯ ನೆಪದಲ್ಲಾದರು ಹೋಗಿ ಅವನ ಕೈನ ಕಾಫಿ ಕುಡಿಯುವುದು ಅಭ್ಯಾಸವಾಗಿ ಹೋಗಿತ್ತು ಗಂಭೀರನಿಗೆ. ಹಾಗೆ ಕಾಫಿ ಖರೀದಿಸಿದಾಗೆಲ್ಲ ಮರಯದೆ ಒಂದಷ್ಟು ಚಿಲ್ಲರೆಯನ್ನು ಕೇಳಿ ಪಡೆಯುತ್ತಿದ್ದ ಟಿಶ್ಯೂ ಪೇಪರಿನ ವೃದ್ಧೆಯ ಸಲುವಾಗಿ. ಹೀಗೆ ಒಂದು ಮಧ್ಯಾಹ್ನ ಕ್ಯಾಂಟಿನ್ನಿನ ಹೊರಗೆ ಕಾಫಿ ಕುಡಿಯುತ್ತ ಕುಳಿತ ಹೊತ್ತಲ್ಲಿ ಆ ‘ಪೀಟರ ಅಂಕಲ್’ ತಟ್ಟನೆ ಬಂದು ಇವರು ಕೂತಿದ್ದ ಟೇಬಲ್ಲಿನಲ್ಲೆ ಬಂದು ಕುಳಿತು ಮಾತಿಗಿಳಿದಾಗ ಅವನ ವ್ಯಕ್ತಿತ್ವದ ಮತ್ತೊಂದು ಮಗ್ಗುಲಿನ ಪರಿಚಯವೂ ಆಗಿತ್ತು, ಅವನ ಹಾಸ್ಯ ಪ್ರಜ್ಞೆಯ ಸರಳ ಹಾಗು ನೇರ ಮಾತಿನ ಪರಿಚಯವಾದಾಗ. ಆಗಲೆ ಅವನ ಮತ್ತೊಂದು ವಿಭಿನ್ನ ಹವ್ಯಾಸವು ಅನಾವರಣಗೊಂಡಿದ್ದು – ಅವನ ಸಿಗರೇಟು ಹೊಸೆಯುವ ಕಲೆ. ಸಾಧಾರಣವಾಗಿ ಸಿದ್ದ ಮಾಡಿಟ್ಟ ಸಿಗರೇಟನ್ನು ಪ್ಯಾಕಿಂದೆತ್ತಿ ಸೇದುವ ಜನರನ್ನು ಎಲ್ಲೆಡೆ ಕಾಣಬಹುದಾದರು ಅವನ ಹಾಗೆ ತನ್ನ ಸಿಗರೇಟನ್ನು ತಾನೆ ಮಾಡಿಕೊಳ್ಳುವವರನ್ನು ಗಂಭೀರ ಅದುವರೆಗೆ ಕಂಡಿರಲಿಲ್ಲ. ತಂಬಾಕು ಮತ್ತು ಬಿಳಿ ಪೇಪರಿನ ಹಾಳೆಗಳಿದ್ದ ಪುಟ್ಟ ಪೆಟ್ಟಿಗೆಯೊಂದನ್ನು ಜೇಬಿನಿಂದ ಹೊರ ತೆಗೆದವನೆ, ತುಸು ತಂಬಾಕಿನ ಸೊಪ್ಪನ್ನು ಕೈಯಲ್ಲೆತ್ತಿಕೊಂಡು ಸುರುಳಿಯಾಗಿ ಸುತ್ತಿ, ಆ ಬಿಳಿಯ ಪೇಪರಿನ ನಡುವಲ್ಲಿಟ್ಟವನೆ, ಎರಡು ಹಸ್ತಗಳ ನಡುವೆ ಸುರುಳಿ ಸುತ್ತುತ್ತ ಪೇಪರಿನ ತುದಿ ತಲುಪಿದಾಗ ಅದನ್ನು ತುಟಿಯ ನಡುವೆ ನಾಲಿಗೆಯ ತುದಿಗೆ ತಗುಲಿಸಿ, ಅದರ ಮೆಲುವಾದ ಅಂಟನ್ನು ಒದ್ದೆಯಾಗಿಸಿ, ಮೆಲುವಾಗಿ ಒತ್ತಿ ಅರೆ ಸೆಕೆಂಡು ಹಿಡಿದುಬಿಟ್ಟರೆ ಅವನ ಸಿಗರೇಟು ಸೇದಲು ಸಿದ್ದ. ಆ ಸುತ್ತುವ ವೈಭವದ ಇಡೀ ಪ್ರಕ್ರಿಯೆ ಕೆಲವೆ ಸೆಕೆಂಡುಗಳಲ್ಲಿ ಮುಗಿದು ಕಿಂಗ್ ಸೈಜಿನ ಬೀಡಿಯ ಗಾತ್ರದಲ್ಲಿ ಅವನ ತುಟಿಗಳ ನಡುವೆ ರಾರಾಜಿಸಿಬಿಡುತ್ತಿತ್ತು. ಬಹುಶಃ ಆ ಹೊತ್ತು ಮಾತ್ರವೆ ಅವನ ವಿಶ್ರಾಮದ ಗಳಿಗೆಯಾಗಿರುತ್ತಿತ್ತೇನೊ ? ಆ ದಿನವು ಹಾಗೆ ಸಿಗರೇಟು ಸೇದುತ್ತಲೆ ಪ್ರತಿ ಬಾರಿ ಚಿಲ್ಲರೆ ಕೇಳುವ ಹಿನ್ನಲೆ ವಿಚಾರಿಸಿದ್ದ ಗಂಭೀರನಲ್ಲಿ. ಟಿಶ್ಯೂ ಪೇಪರಿನ ವೃದ್ಧೆಯ ಪ್ರವರ ಅರಿವಾದ ಮೇಲೆ ಮುಂದಿನ ಬಾರಿಯಿಂದ ಕೇಳುವ ಮೊದಲೆ ಚಿಲ್ಲರೆ ಎತ್ತಿಟ್ಟು ಕೊಡುವ ಪರಿಯನ್ನು ಆರಂಭಿಸಿಬಿಟ್ಟಿದ್ದ ಆ ಕಿಲಾಡಿ ತಾತ…! ಆದರೂ ಒಮ್ಮೊಮ್ಮೆ ಏನಾದರು ಏರುಪೇರಾಗಿ ಜೀಬಿನಲ್ಲಿದ್ದ ಚಿಲ್ಲರೆಯು ಯಾವುದೊ ಕಾರಣದಿಂದ ಖರ್ಚಾಗಿ, ಖಾಲಿಯಾದ ಸಂಧರ್ಭಗಳು ಇರದಿರುತ್ತಿರಲಿಲ್ಲ. ಆಗ ಒಂದು ಡಾಲರು ನಾಣ್ಯದ ಬದಲು ಎರಡು ಡಾಲರಿನ ನೋಟು ಎತ್ತಿಕೊಡುವ ರೀತಿಯೂ ಚಾಲನೆಗೆ ಬಂತು. ಹೇಗು ನಡೆಯದೆ ಹೋದ ದಿನದ ಹಣದ ಲೆಕ್ಕವು ಇರುತ್ತಿತ್ತಲ್ಲ? ಜತೆಗೆ ಒಂದು ವೇಳೆ ನಡೆಯದೆ ಬಸ್ಸಿನಲ್ಲಿ ಹೋದರೆ ಟಿಕೆಟ್ಟಿಗಾಗಿ ಖರ್ಚಾಗುತ್ತಿದ್ದ ಹಣವನ್ನೆ ಆ ವೃದ್ಧೆಗೆ ಕೊಟ್ಟಂತೆ ಆಗುತ್ತದೆ, ಮತ್ತು ಸುಲಭ ಖರ್ಚಿನ ವ್ಯಾಯಾಮವೂ ಆದಂತೆ ಆಗುತ್ತದೆ ಎನ್ನುವ ವಾದವೂ ಸೇರಿಕೊಂಡು, ಯಾವಾಗಲಾದರು ಎರಡು ಮೂರು ದಿನ ತಪ್ಪಿ ಹೋದಾಗ ಐದು ಡಾಲರನ್ನು ಕೊಡುವ ಮಟ್ಟಕ್ಕೆ ತಲುಪಿಬಿಟ್ಟಿತ್ತು, ಈ ಹವ್ಯಾಸ…

ಗಂಭೀರನಿಗೆ ಅಚ್ಚರಿಯಾಗಿದ್ದ ವಿಷಯವೂ ಅದೇ – ಅದೇಕೆ ಹೀಗೆ ಹೆಚ್ಚೆಚ್ಚೆ ಕೊಟ್ಟರು, ಹಾಗೆ ಕೊಡುವಾಗ ಯಾವುದೆ ಹಿಡಿತದ, ಹಿಂಜರಿತದ ಅಥವಾ ಯಾಕೆ ಕೊಡಬೇಕೆಂದು ಪ್ರಶ್ನಿಸುವ ಭಾವಗಳೆ ಉದಿಸದೆ, ಕೊಡಲೆಬೇಕೆನ್ನುವ – ಕೊಟ್ಟು ನಿರಾಳವಾಗುವ ಒಂದು ರೀತಿಯ ತೃಪ್ತಿ ಹಾಗೂ ಸಾರ್ಥಕ್ಯದ ಭಾವಗಳೆ ಉದ್ಭವಿಸುತ್ತಿವೆಯಲ್ಲ ಎಂಬುದು. ಆ ವೃದ್ಧೆಯ ಕೈಂಕರ್ಯಕ್ಕೆ ತನ್ನ ಕೈಲಾದ ಅಳಿಲು ಸೇವೆ ಮಾಡುತ್ತಿರುವೆನೆಂಬ ಸಂತೃಪ್ತಿಯೆ ಕಾರಣ ಎನ್ನುವುದಾದರೆ ಆ ತೃಪ್ತಿ ಬೇರೆ ಯಾರಿಗೆ ಕೊಟ್ಟರು ಬರುವಂತಿರಬೇಕಿತ್ತು… ಆದರೆ ವಾಸ್ತವದಲ್ಲಿ ಅದು ಹಾಗಿಲ್ಲ. ಬಹುಶಃ ಆ ವೃದ್ಧೆಯ ಮುಗುಳ್ನಗೆಯೊಡಗೂಡಿದ ಸೌಜನ್ಯಪೂರ್ಣ, ಸಾತ್ವಿಕ ನಡುವಳಿಕೆಯಿಂದ ಆ ಕೊಟ್ಟು ತೃಪ್ತನಾಗುವ ಪರಿಣಾಮವುಂಟಾಗುತ್ತಿದೆಯೆ ? ಕೊಡುವುದರಲ್ಲಿನ ತೃಪ್ತಿ ಎಂದರೆ ಇದೇಯೇನು? ಹೀಗೆ ಅನೇಕಾನೇಕ ವಾದಸರಣಿಗಳು ಕಣ್ಮುಂದೆ ಬಂದು ನಿಲ್ಲುತ್ತಿದ್ದರು, ಯಾಕೊ ಯಾವುದು ಸರಿಯಾದ ತರ್ಕವೆಂದೆನಿಸದ ಅಸಂಪೂರ್ಣ ಭಾವವೆ ತುಂಬಿಕೊಂಡುಬಿಡುತ್ತಿತ್ತು. ಅದೆಲ್ಲದರ ನಡುವೆಯೂ ಅವಳ ನಡುವಳಿಕೆ ಮಾತ್ರ ಯಾವುದೆ ವ್ಯತ್ಯಯವಿಲ್ಲದ ಒಂದೇ ತೆರನಾದ ಹದವಾದ ಲಹರಿಯಲ್ಲಿರುತ್ತಿದ್ದುದು ಅವಳ ಕುರಿತಾದ ಗೌರವವನ್ನು ಮತ್ತಷ್ಟು ಹೆಚ್ಚಿಸಲು ಕಾರಣವಾಗಿತ್ತು. ಆ ಗೌರವದ ಭಾವ ಮತ್ತು ಕೊಟ್ಟು ಸಂತೃಪ್ತಿಯನ್ನು ಕಾಣುವ ಕುರಿತಾದ ಅನಿಸಿಕೆಯ ಒಳಗುಟ್ಟು ಅರಿವಾಗೆ ಮತ್ತೊಂದು ಅನಿರೀಕ್ಷಿತ ಮತ್ತು ಅನಪೇಕ್ಷಿತ ಬೆಳವಣಿಗೆಯಾಗುವವರೆಗು ಕಾಯಬೇಕಾಯ್ತು – ಅವಳಿಗೊಬ್ಬ ಪ್ರತಿಸ್ಪರ್ಧಿ ಹುಟ್ಟಿಕೊಳ್ಳುವ ರೂಪದಲ್ಲಿ…!

ಅದೊಂದು ದಿನ ನಡೆದು ಬರುತ್ತಿದ್ದ ಗಂಭೀರನಿಗೆ ಇದ್ದಕ್ಕಿದ್ದಂತೆ ಆ ಮೆಟ್ಟಿಲಿನ ಎಡದ ಬದಿಯಲ್ಲು ನಿಂತ ಮತ್ತೊಬ್ಬಾಕೆ ಕಂಡಾಗ ಮೊದಮೊದಲು ಯಾರೊ ಚರ್ಚಿಗೆ ಬಂದವರಾರೊ ಇರಬೇಕೆಂದುಕೊಂಡರು, ಅವಳ ಕೈಲಿದ್ದ ಟಿಶ್ಯೂ ಪೇಪರು ಮತ್ತು ಬಗಲಿನ ಚೀಲ ನೋಡಿದ ಮೇಲೆ ಇವಳಾರೊ ಮತ್ತೊಂದು ಮುದುಕಿ ಎಂದರಿವಾಗಿತ್ತು. ಅವಳು ಬಂದ ಮೇಲೆ ಇಬ್ಬರು ದ್ವಾರ ಪಾಲಕರಂತೆ ಮೆಟ್ಟಿಲ ಆರಂಭದ ಎರಡು ಬದಿಗಳಲ್ಲು ಜಯ ವಿಜಯರ ಪೋಸಿನಲ್ಲಿ ನಿಂತಂತೆ ಕಂಡಿತ್ತು. ಮೊದಲ ದಿನ ಕಂಡಾಗ ಅರೆಗಳಿಗೆ ಏನು ಮಾಡಬೇಕೆಂದು ತೋಚದಿದ್ದರು, ತಕ್ಷಣವೆ ಸಾವರಿಸಿಕೊಂಡು ಆ ಹೊಸ ಮುದುಕಿಯ ಕೈಗೂ ಒಂದು ಡಾಲರಿನ ನಾಣ್ಯ ಹಾಕಿದ್ದ. ನಾಣ್ಯವನ್ನು ಪಡೆದ ಆ ಹೊಸ ಮುದುಕಿ ಕೊಡಲೊ ಬೇಡವೊ ಎನ್ನುವಂತೆ ಕೈಲಿದ್ದ ಐದು ಕಟ್ಟಿನ ಕಂತೆಯಿಂದ ಬರಿ ಒಂದು ಸಣ್ಣ ಪೊಟ್ಟಣವನ್ನು ಮಾತ್ರ ಎದುರಿಗ್ಹಿಡಿದಾದ ಅದನ್ನೆ ಸ್ವೀಕರಿಸಿದ್ದ ಅವಳ ಮುಖವನ್ನೆ ನೋಡುತ್ತ. ಎಂದಿನಂತೆ ಹಳೆಯ ವೃದ್ಧೆಯ ಮೊಗದಲ್ಲಿ ಮಾತ್ರ ಅದೇ ನಗು, ವೃತ್ತಿ ಮಾತ್ಸರ್ಯದ ಕುರುಹೂ ಕಾಣದ ಪ್ರಶಾಂತ ಭಾವ, ಎಂದಿನಂತೆ ಪೊಟ್ಟಣಗಳ ಕಂತೆಯನ್ನು ಕೊಟ್ಟು ನಗುತ್ತಲೆ ‘ಥ್ಯಾಂಕ್ಸ್’ ಹೇಳುವ ದನಿ. ಅವಳಿಗೆ ಹೋಲಿಸಿದರೆ ಹೊಸ ಮುದುಕಿಯದೊಂದು ರೀತಿಯ ಭಾವನಾ ಶೂನ್ಯ ಮುಖ. ತಾನೊಲ್ಲದ ಕೆಲಸವನ್ನು ಯಾರದೊ ಬಲವಂತಕ್ಕೆ, ಅನಿವಾರ್ಯವಾಗಿ ವಿಧಿಯಿಲ್ಲದೆ ಮಾಡುತ್ತಿರುವೆನೆಂಬ ಭಾವನೆ ಸೂಸುವ ಶುಷ್ಕ ಪ್ರಕ್ಷೇಪ. ಅದೆಲ್ಲ ಭಾವವನ್ನು, ಬಲವಂತದಿಂದೆಳೆದು ತಂದ ದೈನ್ಯತೆಯ ಜತೆಗೆ ಬೆರೆಸಿ ಮುಖದಲ್ಲಿ ಬಿಂಬಿಸಿದಾಗ ಜೀವವಿಲ್ಲದ ಕಣ್ಣೋಟ, ನಿರ್ಭಾವುಕತೆಗಳೆ ವಿಜೃಂಭಿಸಿ ಯಾಕೊ ಮೊದಲು ಅವಳಿಂದ ದೂರ ಹೋದರೆ ಸಾಕೆನಿಸುವ ಒತ್ತಾಯವೆ ಪ್ರಬಲವಾಗಿಬಿಡುವ ಚರ್ಯೆ. ಆ ವೃದ್ದೆಯ ಪರಿಪಕ್ವತೆಯೆದುರು ಈ ಮುದುಕಿಯ ಉಢಾಫೆಯ ಭಾವ ತುಲನೆಯಾಗಿ ಹೋಲಿಕೆಯಾದಾಗ ಇನ್ನೂ ಅಸಹನಿಯವೆನಿಸಿ, ಒಂದು ರೀತಿಯ ತುಚ್ಛ ಭಾವನೆ ಮೂಡಿಸಿಬಿಟ್ಟಿತ್ತು… ಬಹುಶಃ ಅವರಿಬ್ಬರ ನೈಜ ವ್ಯಕ್ತಿತ್ವವಿರುವುದೆ ಹಾಗೇನೊ.. ಆದರೂ ಮನದಲ್ಲಿ ಹೀಗನಿಸುವುದರ ಕಾರಣವನ್ನು ಹುಡುಕಲೂ ಆಗದೆ ಅಲ್ಲಗಳೆಯಲೂ ಆಗದೆ ತಲೆ ಕೆರೆದುಕೊಳ್ಳುವಂತೆ ಮಾಡಿಬಿಟ್ಟಿತ್ತು ಈ ಪ್ರಸಂಗ.

*************

ಆಮೇಲಾಮೇಲೆ ಆ ಹೊಸ ಮುದುಕಿಯೂ ಅಲ್ಲಿ ದಿನ ನಿತ್ಯವೂ ನಿಲ್ಲುವ ಪರಿಪಾಠ ಆರಂಭವಾದಾಗ, ಯಾಕೊ ಗಂಭೀರನಿಗೆ ಅವಳನ್ನು ನಿರ್ಲಕ್ಷಿಸಿ ಹಳೆಯ ವೃದ್ಧೆಗೆ ಮಾತ್ರ ಹಣ ತೆತ್ತು ಖರೀದಿಸಲು ಒಂದು ಬಗೆಯ ಮುಜುಗರವೆನಿಸಿತ್ತು. ಆ ಮುಜುಗರದಿಂದ ತಪ್ಪಿಸಿಕೊಳ್ಳಲು ತಿಣುಕುತ್ತಿದ್ದಾಗ, ಅದಕ್ಕೊಂದು ಸರಳ ಉಪಾಯವೂ ಹೊಳೆದುಬಿಟ್ಟಿತ್ತವನಿಗೆ; ಅದರಂತೆ ಪ್ರತಿ ಬಾರಿಯೂ ಸಿಕ್ಕ ಚಿಲ್ಲರೆಯಲ್ಲಿ, ಪೂರ್ತಿ ಡಾಲರನ್ನು ಆ ವೃದ್ಧೆಗಿತ್ತರೆ ಮಿಕ್ಕ ಪುಡಿ ಚಿಲ್ಲರೆಗಾಸನ್ನು ಮಾತ್ರ ಹೊಸ ಮುದುಕಿಗೆ ನೀಡತೊಡಗಿದ. ಒಂದೆರಡು ದಿನ ಇವನನ್ನೆ ಗಮನಿಸಿದ ಆ ಹೊಸ ಮುದುಕಿ, ನಂತರ ಇದ್ದಕ್ಕಿದ್ದಂತೆ ಬರಿಯ ಕಾಸನ್ನು ಮಾತ್ರ ಸ್ವೀಕರಿಸುತ್ತಿದ್ದಳೆ ಹೊರತು ಕೈಲಿದ್ದ ಟಿಶ್ಯೂ ಪೇಪರಿನ ಕಟ್ಟನ್ನು ಮಾತ್ರ ರವಾನಿಸುತ್ತಿರಲಿಲ್ಲ. ‘ಅರೆ! ಬಲವಂತದಿಂದ ಕಾಸು ಕೀಳುವ ಇವಳ ಪೊಗರು ನೋಡು?’ ಎಂದುಕೊಂಡೆ ಅವಳ ಕೈಯಿಂದ ಒಂದು ಪೊಟ್ಟಣವನ್ನಾದರು ತೆಗೆದುಕೊಳ್ಳಬೇಕೆಂದು ತಾನೆ ಬಲವಂತದಿಂದ ಅವಳ ಕೈಯಲ್ಲಿದ್ದ ಕಟ್ಟನ್ನು ಹಿಡಿದು ಸೆಳೆದುಕೊಳ್ಳಲು ಹೋದರೂ ಅವಳ ಬಲವಾದ ಬಿಗಿ ಹಿಡಿತ, ಅದನ್ನು ಸುಲಭದಲ್ಲಿ ಬಿಡದೆ, ತೀರಾ ಇಷ್ಟವಿರದಿದ್ದರು ನೀಡಬೇಕಲ್ಲ ಎನ್ನುವ ಸಂಕಟದ ರೂಪದಲ್ಲಿ ವ್ಯಕ್ತವಾಗುತ್ತಿತ್ತು. ಅವಳ ಆ ಹತಾಶ ಧಾರ್ಷ್ಟ್ಯಕ್ಕೆ ಬೇಸತ್ತು ತಾನೆ ಕೈ ಬಿಟ್ಟು ಹೋಗಿ ಬಿಡುತ್ತಿದ್ದ ಗಂಭೀರ. ನಂತರ ಸಿಕ್ಕುವ ವೃದ್ಧೆಯದು ಮಾತ್ರ, ಅದೇ ನಗೆ , ಅದೇ ಸ್ವಭಾವ, ಅದೇ ಪ್ರತಿಕ್ರಿಯೆ. ಅವಳೊಂದು ರೀತಿಯಲ್ಲಿ ಸಹಜ ಸ್ವಾಭಾವಿಕ ಮೌಲ್ಯದ ನಿರ್ದಿಷ್ಠ ಪ್ರತೀಕವಾಗಿ ಕಾಣತೊಡಗಿದರೆ, ಹೊಸ ಮುದುಕಿ ಮೌಲ್ಯಗಳನ್ನು ಗಣಿಸದ ಕೃತಿಮ ಲೆಕ್ಕಾಚಾರದ ಮೌಲ್ಯಹೀನ ವ್ಯಕ್ತಿತ್ವದ ಕುರುಹಾಗಿ ಕಾಣತೊಡಗಿದ್ದಳು. ಮೌಲ್ಯದ ಅಪಮೌಲ್ಯವೆ ಅವಳೇನೊ ಅನಿಸತೊಡಗಿತ್ತು ಗಂಭೀರನಿಗೆ. ಆ ನಂತರ ಗಂಭೀರನಿಗೆ ಹಳೆಯ ಪ್ರಶ್ನೆಗಳಿಗೆ ಉತ್ತರವೂ ದೊರಕತೊಡಗಿತ್ತು… ಆ ಹಳೆಯ ವೃದ್ಧೆಯ ಜತೆಗಿನ ವ್ಯವಹಾರದ ಸಂತೃಪ್ತಿಗೆ ಕಾರಣ, ಅವಳೆ ನೈಜ ಮೌಲ್ಯಗಳ ಸ್ಪಷ್ಟ ಪ್ರತೀಕವಾಗಿ ಕಾಣಿಸಿಕೊಳ್ಳತೊಡಗಿದ್ದು. ಮೌಲ್ಯಾಧಾರಿತ ನಾಯಕತ್ವಕ್ಕೆ ಆಕರ್ಷಿತವಾಗುವ ಸಹಜ ಪರಿಯಿಂದಾಗಿಯೆ ಆ ಹೇಳಿಕೊಳ್ಳಲಾಗದ ತೃಪ್ತ ಭಾವನೆ ಮೂಡಿತ್ತೆಂದು ಆಗರಿವಾಗಿತ್ತು. ಆ ಅರಿವಿಗೆ ಕಾರಣಳಾದಳಲ್ಲ ಎಂದು ಆ ಹೊಸ ಮುದುಕಿಯನ್ನು ಕಡೆಗಣಿಸದೆ, ಇನ್ನು ಅಷ್ಟಿಷ್ಟು ನೀಡುತ್ತಲೆ ಇದ್ದ ಗಂಭೀರ – ಅವಳು ಟಿಶ್ಯೂ ಪೇಪರು ಕೊಡಲಿ, ಬಿಡಲಿ..!

ದಿನಚರಿಯೇನೊ ಮುಂದುವರೆದರು ಯಾಕೊ ಅಲ್ಲಿಂದಾಚೆಗೆ ಒಂದು ರೀತಿಯ ಅಳುಕು, ಚಂಚಲತೆ, ಅನ್ಯಾಯ ಮಾಡುತ್ತಿರುವ ಭಾವನೆ ಉದ್ಭವಿಸಿಕೊಂಡುಬಿಟ್ಟಿತ್ತು ಗಂಭೀರನ ಮನದಲ್ಲಿ. ಆ ಮುದುಕಿಯ ಮನೋಭಾವ ಸರಿಯಿರದಿದ್ದರು ಅದನ್ನು ಸುಖಾಸುಮ್ಮನೆ ಒಪ್ಪಿಕೊಂಡು ಅದನ್ನು ಪರೋಕ್ಷವಾಗಿ ಪ್ರೊತ್ಸಾಹಿಸುತ್ತ ನಡೆಯುವುದು ಒಂದು ವಿಧದಲ್ಲಿ ಆ ಪ್ರೌಢ ವೃದ್ಧೆಗೆ ಮಾಡಿದ ಅನ್ಯಾಯವಲ್ಲವೆ ? ಎಂಬ ಆಲೋಚನೆಯುದಿಸಿ ದಿನೇ ದಿನೇ ಗಾಢವಾಗತೊಡಗಿತು. ತಾನು ಕೊಡುವ ಹಣಕ್ಕಿಂತ ಹೆಚ್ಚಾಗಿ, ಆ ಕ್ರಿಯೆಯಿಂದ ಪ್ರೋತ್ಸಾಹಿಸಲ್ಪಡುವ ಅವರವರು ಪ್ರತಿನಿಧಿಸುವ ಮೌಲ್ಯಗಳಿಗೆ, ತಾನು ಕುಮ್ಮುಕ್ಕು ಕೊಟ್ಟಂತಾಗುತ್ತಿರುವ ಕಾರಣವೆ ಅವನನ್ನು ಹೆಚ್ಚು ಭಾದಿಸತೊಡಗಿತು. ಆಫೀಸಿನ ಕೆಲಸದಲ್ಲು ಎಷ್ಟೊ ಬಾರಿ, ನಿಯತ್ತಿನಿಂದ ಕೆಲಸ ಮಾಡಿಕೊಂಡು ಹೋಗುತ್ತಿದ್ದರು ಅದರ ಸೂಕ್ತ ಫಲ ದೊರಕದೆ ತೊಳಲಾಡುವ ಮಂದಿಯ ಮನಸ್ಥಿತಿ ಗಂಭೀರನಿಗೆ ಚೆನಾಗಿ ಗೊತ್ತಿತ್ತು – ಅವನೆ ಸಾಕಷ್ಟು ಬಾರಿ ಅದರ ಬಲಿಪಶುವಾಗಿದ್ದ ಕಾರಣ. ಆಗೆಲ್ಲ ವ್ಯವಸ್ಥೆಯನ್ನು, ಅದನ್ನು ಪೋಷಿಸುವ ಅಥವಾ ಬದಲಿಸಲೆತ್ನಿಸದೆ ನಿರ್ಲಕ್ಷಿಸುವ ಮೇಲಿನ ಜನರನ್ನು ಮನದಲ್ಲೆ ಶಪಿಸುತ್ತಿದ್ದ ಗಂಭೀರನಿಗೆ ಈ ಪರಿಸ್ಥಿತಿಯಲ್ಲಿ ತಾನು ಮಾಡುತ್ತಿರುವುದು ಸಹ ಅವರದ್ದಕ್ಕಿಂತ ವಿಭಿನ್ನವೇನು ಅಲ್ಲವೆಂದು ಅನಿಸಿ ‘ಗಿಲ್ಟಿ’ಯ ಫೀಲಿಂಗ್ ಬಲವಾಗತೊಡಗಿತು. ಹೆಸರು, ಗುರುತು, ಊರು, ಕೇರಿ ಗೊತ್ತಿರದವಳ ನಡುವಳಿಕೆಯನ್ನು ಖಂಡಿಸುವ ಬದಲು ಪರೋಕ್ಷ ಪ್ರೋತ್ಸಾಹಿಸುವ ಹಾದಿ ಹಿಡಿದ ತಾನು, ಅದೇ ರಣನೀತಿ ಅನುಸರಿಸುವ ಬಾಸುಗಳ ಕುರಿತು ದೂರಾಡುವುದು ನ್ಯಾಯಸಮ್ಮತವಲ್ಲವೆಂದು ಅನಿಸಿ ಅದನ್ನು ವಿರೋಧಿಸುವ ಧಾರ್ಷ್ಟ್ಯ, ಎದೆಗಾರಿಕೆ ತನ್ನಲ್ಲಿರದ್ದಕ್ಕಾಗಿ ಖೇದಿಸತೊಡಗಿತು ಗಂಭೀರನ ಪ್ರಕ್ಷುಬ್ದ ಮನಸು. ಮೌಲ್ಯಗಳ ಕುರಿತು ಮಾತಾಡುವ ತಾನೆ ಅದರ ಅಪಮೌಲ್ಯದ ಹರಿಕಾರನಾಗುವ ಸಂಭವ ತನ್ನ ದೌರ್ಬಲ್ಯದ ಸಂಕೇತವೆಂದೆ ಅನಿಸತೊಡಗಿತ್ತು. ಅಲ್ಲಿಂದಾಚೆಗೆ ಆ ತಾಪವನ್ನು ಅಷ್ಟಿಷಾದರು ಶಮನಗೊಳಿಸಲು, ವೃದ್ಧೆಗೆ ನೀಡುವ ಹಣ ಆ ಮುದುಕಿಗೆ ದಕ್ಕುವುದಕ್ಕಿಂತ ಹೆಚ್ಚಿರಬೇಕೆಂದು ಜಾಗೃತವಾಗಿಯೆ ನೋಡಿಕೊಳ್ಳತೊಡಗಿದ. ಒಮ್ಮೊಮ್ಮೆ ರಜೆ ಹಾಕಿದಂತೆ ಆ ಮುದುಕಿ ಕಾಣಿಸದಿದ್ದರೆ ಇಬ್ಬರ ಪಾಲನ್ನು ಆ ಹಳೆಯ ವೃದ್ಧೆಗೆ ನೀಡಿ ಖುಷಿಯಿಂದ ನಡೆಯುತ್ತಿದ್ದ. ಅದೇ ವೃದ್ಧೆಯ ರಜೆಯಿದ್ದ ದಿನ ಮಾತ್ರ ಮುದುಕಿಗೆ ಸಲ್ಲುತ್ತಿದ್ದಷ್ಟೆ ಕೊಟ್ಟು, ಅವಳಿಂದೇನನ್ನು ಪಡೆಯದೆ ಮುಂದೆ ಸಾಗುತ್ತಿದ್ದ. ಒಂದು ವಿಧದಲ್ಲಿ ಪ್ರತಿಫಲಾಪೇಕ್ಷೆಯಿರದೆ ನಿನ್ನ ಕರ್ಮ ಮಾಡಿಕೊಂಡು ಹೋಗೆನ್ನುವ ಕರ್ಮ ಸಿದ್ದಾಂತವನ್ನು ಪಾಲಿಸುತ್ತ, ಯಾವುದೊ ಋಣಭಾದೆಯಿಂದ ಮುಕ್ತನಾಗುವವನಂತೆ ನಡೆದಿತ್ತು ಅವನ ಚರ್ಯೆ.

ಇದೆಲ್ಲದರ ಮಧ್ಯೆಯೂ ಆ ವೃದ್ಧೆಗೆ ನೀಡುತ್ತಿರುವ ಸಹಾಯ ಸಕಾರಾತ್ಮಕ ಮೌಲ್ಯಗಳಿಗೆ ನೀಡುತ್ತಿರುವ ಮನ್ನಣೆ ಮತ್ತು ಪ್ರೋತ್ಸಾಹ ತಾನೆ ಎಂಬ ಅರಿವು ತುಸು ಸಮಾಧಾನ ನೀಡಿ, ಹೊಸ ಮುದುಕಿಯ ಅಪಮೌಲ್ಯದ ಪರಿಗಣನೆಯನ್ನು ತುಸು ಶಾಂತವಾಗಿಸಿದ್ದಷ್ಟೆ ಅಲ್ಲದೆ ಒಂದು ರೀತಿಯ ಅದರದೆ ಆದ ಸಂತುಲಿತ ಸ್ಥಿತಿಯನ್ನು ಸೃಜಿಸಿಕೊಂಡು ಸಾಗತೊಡಗಿತ್ತು. ಆದರೆ ನಿಸರ್ಗ ನಿಯಮದಲ್ಲಿ ಯಾವುದು ನಿರಂತರವಲ್ಲ, ಶಾಶ್ವತವೂ ಅಲ್ಲವೆನ್ನುವ ಸತ್ಯವನ್ನು ಮನದಟ್ಟಾಗಿಸುವ ಮತ್ತೊಂದು ಬೆಳವಣಿಗೆ ಆ ಸಮತೋಲಿತ ಸ್ಥಿತಿಯನ್ನು ಮತ್ತೆ ಏರುಪೇರಾಗಿಸುವ ಹಾಗೆ ಚಿಗುರೊಡೆಯತೊಡಗಿತು. ಅದಕ್ಕೆ ಕಾರಣವಾದದ್ದು ಇವರಾರು ಅಲ್ಲದೆ, ಅವರಾರಿಗು ಸಂಬಂಧಿಸದ ಚರ್ಚ್ ಎನ್ನುವುದು ಮಾತ್ರ ವಿಪರ್ಯಾಸಕರವಾಗಿತ್ತು. ಯಾವುದೆ ಸಂತುಲಿತ ಸ್ಥಿತಿಯೂ ತನ್ನಂತಾನೆ ಸಂಪೂರ್ಣ ಎಂದು ಬೀಗುತ್ತಿದ್ದರು, ಅದಕ್ಕೆ ನೇರ ಸಂಬಂಧಿಸದ ಸುತ್ತಲ ಪರಿಸರ ಹೇಗೆ ತನ್ನ ಪ್ರಭಾವ ಬೀರಿ ಇಡಿ ಸಮಸ್ಥಿತಿಯನ್ನು ಅಲ್ಲೋಲಕಲ್ಲೋಲವಾಗಿಸಬಹುದೆನ್ನುವ ಸ್ಪಷ್ಟ ಕಲ್ಪನೆಯಿರದ ಗಂಭೀರನಿಗೆ ಆ ಬೆಳವಣಿಗೆ ಒಂದು ಮಹತ್ತರ ಜೀವನ ಪಾಠವಾಗುವುದೆಂಬ ಸ್ಥೂಲ ಕಲ್ಪನೆಯೂ ಇರಲಿಲ್ಲ.

ಎಲ್ಲವು ಶುರುವಾದದ್ದು ಒಂದು ದಿನ ತಾನು ನಡೆವ ಹಾದಿಯಲ್ಲಿ ಇದ್ದಕ್ಕಿದ್ದಂತೆ ಕಂಡು ಬಂದ ಅಡ್ಡಗಟ್ಟೆಯೊಂದರ ಮೂಲಕ. ಮಾಮೂಲಿ ಹಾದಿಗೆ ತಡೆ ಹಾಕಿ, ಬದಲಿ ತಾತ್ಕಾಲಿಕ ಹಾದಿಯತ್ತ ನಡೆಸುವ ಹಾಗೆ ಮರದ ಹಲಗೆಗಳನ್ನು ಹಾಸಿ ಮಾರ್ಗ ಚಿಹ್ನೆಗಳನ್ನು ಅಂಟಿಸಿಬಿಟ್ಟಿದ್ದರು. ಜತೆಗೆ ಅದುವರೆವಿಗು ದೃಷ್ಟಿಗೆ ನಿಲುಕುತ್ತಿದ್ದ ಚರ್ಚು ಮತ್ತದರ ವಿಶಾಲ ಸುತ್ತಾವರಣವನ್ನು ಪೂರ್ಣ ಮರೆ ಮಾಚುವಂತೆ ಎತ್ತರದ ಜಂಕ್ ಶೀಟಿನ ಗೋಡೆಗಳು ಎದ್ದು ನಿಂತಿದ್ದವು – ಅದರ ಹಿಂದೆ ಏನೊ ಕಟ್ಟುವ, ದುರಸ್ತಿ ಮಾಡುವ ಕಾರ್ಯ ಆರಂಭವಾಗಿದೆಯೆಂದು ಸೂಚಿಸುತ್ತ. ಹಾಗೆ ನಡೆದು ಅವರಿಬ್ಬರು ನಿಲ್ಲುತ್ತಿದ್ದ ಮೆಟ್ಟಿಲ ಹತ್ತಿರ ಬಂದರೆ ಮೊದಲ ಮೂರ್ನಾಲ್ಕು ಮೆಟ್ಟಿಲು ಬಿಟ್ಟು ಮಿಕ್ಕೆಲ್ಲ ಆ ಹೊಸ ಜಂಕ್ ಶೀಟಿನ ಗೋಡೆಯೊಳಗಡೆ ಸೇರಿಕೊಂಡುಬಿಟ್ಟಿತ್ತು.. ಅರ್ಥಾತ್ ಇನ್ನು ಮುಂದೆ ಅಲ್ಲಿಂದ ಜನ ಹೋಗುವುದಾಗಲಿ, ಬರುವುದಾಗಲಿ ಸಾಧ್ಯವೇ ಇರಲಿಲ್ಲ – ಕನಿಷ್ಠ ದುರಸ್ತಿ ಕಾರ್ಯ ಮುಗಿಯುವವರೆಗೆ. ಆ ದಿನ ಅಚ್ಚರಿಯೆಂಬಂತೆ ಆ ಹೊಸ ಮುದುಕಿ ತಟ್ಟನೆ ಮಾಯವಾಗಿಬಿಟ್ಟಿದ್ದಳು – ಜನರಿಲ್ಲದ ಕಡೆ ತನ್ನ ವ್ಯಾಪಾರ ಕುದುರುವುದು ಕಷ್ಟ ಎಂದು ಗ್ರಹಿಸಿ ಚಾಣಾಕ್ಷತೆಯಿಂದ ಕೂಡಲೆ ಜಾಗ ಬದಲಿಸಿಬಿಟ್ಟಿರಬೇಕು ಆ ಅವಕಾಶವಾದಿ ಮುದುಕಿ! ಆ ಹಳೆಯ ವೃದ್ಧೆ ಮಾತ್ರ ಹಾಗೆ ನಿಂತಿದ್ದಳು – ರಸ್ತೆಯಲ್ಲಿ ಬರುವ ಗಿರಾಕಿಗಳಾದರು ಕೊಳ್ಳುವರೇನೊ ಎನ್ನುವಂತೆ. ಆ ಮುಖದಲ್ಲಿರುತ್ತಿದ್ದ ಎಂದಿನ ನಗೆ ಮಾತ್ರ ಮಾಯವಾಗಿಹೋಗಿತ್ತು… ಅದೇ ಮೊದಲ ಬಾರಿಗೆ ಅವಳು ಗಂಭೀರನೊಡನೆ ಒಂದೆರಡು ಮಾತು ನುಡಿದದ್ದು ಸಹ – ‘ ಸುತ್ತಲು ಹೊಸ ಕಾಂಪೌಂಡ್ ಹಾಕುವರಂತೆ.. ಇನ್ನು ಮುಂದೆ ಇಲ್ಲಿ ನಿಲ್ಲುವ ಹಾಗಿಲ್ಲ.. ಮೇನ್ ಗೇಟಿನ ಬಳಿ ನಿಲ್ಲಲು ಬಿಡುವುದಿಲ್ಲ… ಎಲ್ಲಿ ಹೋಗಬೇಕೊ ಗೊತ್ತಾಗುತ್ತಿಲ್ಲ…’ ಎಂದಿದ್ದಳು ಖೇದ, ವಿಷಾದ, ಆತಂಕದ ದನಿಯಲ್ಲಿ. ಬಡಜನರಿಗೆ, ಬಲಹೀನರಿಗೆ ಆಸರೆಯಾಗುವ ಇಂತಹ ಧಾರ್ಮಿಕ ತಾಣಗಳೂ, ಈ ಅಪರೂಪದ ಸಂಧರ್ಭದಲ್ಲಿ ತೊಡಕಾಗುವ ಪರಿ ಗಂಭೀರನಿಗು ವಿಚಿತ್ರವೆನಿಸಿತು. ಅದೇ ಕೊನೆಯ ಬಾರಿ – ಆ ನಂತರ ಆ ಗೌರವಾನ್ವಿತ ವೃದ್ಧೆಯೂ ಆ ಜಾಗದಲ್ಲಿ ಮತ್ತೆಂದು ಕಾಣಿಸಿಕೊಳ್ಳಲಿಲ್ಲ ಗಂಭೀರನಿಗೆ. ಕಳೆದುಹೋದ ಮೌಲ್ಯಗಳ ಹಾಗೆ ತಟ್ಟನೆ ಏಕಾಏಕಿ ಮಾಯವಾಗಿಬಿಟ್ಟಿದ್ದಳು! ಗಂಭೀರನಿಗೆ ಅದಕ್ಕಿಂತಲು ಹೆಚ್ಚು ಖೇದವೆನಿಸಿದ್ದು ಆ ಮಾಯವಾಗಿದ್ದ ಮುದುಕಿ ಮುಂದೊಂದು ದಿನ ತಟ್ಟನೆ ಫರ್ಲಾಂಗು ದೂರದಲಿದ್ದ ಬಸ್ಟಾಪಿನಲ್ಲಿ ದಿಢೀರನೆ ಪ್ರತ್ಯಕ್ಷವಾದಾಗ.. ಕೈಯೊಡ್ಡಿ ನಿಂತವಳ ಕೈಲಿ ಟಿಶ್ಯೂ ಪೇಪರು ಇರದಿದ್ದರು ಅದೇ ಒಣಮೊಗದ ಹಕ್ಕೊತ್ತಾಯದ ಭಾವ. ಅವಳು ಪ್ರತಿನಿಧಿಸುವ ಅಪಮೌಲ್ಯದ ಹಾಗೆ, ನೈತಿಕಾನೈತಿಕ ಪರಿಗಣನೆಯಿರದೆ ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ನುಸುಳಿ ಹೇಗೊ ಪ್ರಸ್ತುತವಾಗಿಬಿಡುವ ಛಾತಿ ಅಂತಹವರಿಗೆ ಮಾತ್ರವೆ ಸಾಧ್ಯವೇನೊ ಅಂದುಕೊಂಡ. ಅಥವಾ ಅಪಮೌಲ್ಯಗಳ ಸಮಷ್ಟಿ ಮೊತ್ತ ದಬ್ಬಾಳಿಕೆಯಿಂದ ರಾಜ್ಯವಾಳುವ ಪರಿಯೆ ಕಲಿಯುಗದ ಮಹಿಮೆಯಿರಬಹುದೆಂದುಕೊಂಡು ನಿಟ್ಟುಸಿರಿಟ್ಟ. ಅಲ್ಲಿಯ ವಾತಾವರಣದಲ್ಲಿ ಆ ವೃದ್ಧೆಯಂತಹ ಸಜ್ಜನರಿಗೆ, ಅವಳು ಪ್ರತಿನಿಧಿಸುವ ಸಚ್ಚರಿತ ಮೌಲ್ಯಗಳಿಗೆ ತಾವೆ ಇರದು ಎನಿಸಿ ವಿಷಾದವೂ ಆಯ್ತು.

ಈಗಲೂ ಎಂದಿನಂತೆ ತನ್ನ ವಾಕಿಂಗ್ ಮುಂದುವರೆಸಿರುವ ಗಂಭೀರನಿಗೆ ಯಾಕೊ ಆ ಹಾದಿಯಲ್ಲಿ ಜೀವವಿರುವಂತೆಯೆ ಕಾಣುವುದಿಲ್ಲ. ಕೊಟ್ಟು ಕಳೆದುಕೊಳ್ಳುವುದರಲ್ಲಿದ್ದ ಸುಖ ಮಾಯವಾಗಿ ಅದರಿಂದಾಗುತ್ತಿದ್ದ ಋಣ ಪರಿಹಾರಕ್ಕೆ ದೊಡ್ಡ ಏಟು ಬಿತ್ತೇನೊ ಎಂಬ ಕರ್ಮಾಧೀನ ಜಿಜ್ಞಾಸೆಯೂ ಬಾಧಿಸತೊಡಗಿದೆ. ಮೊದಲಿಗೆ ಪ್ರತಿದಿನವಿರುತ್ತಿದ್ದ ಪ್ರಕ್ರಿಯೆ ಈಗ ವಾರಕ್ಕೊಮ್ಮೆಯೊ, ಎರಡು ಬಾರಿಯೊ ಎನ್ನುವಂತಾಗಿ ಇನ್ನೇನು ಅದೂ ನಿಂತುಹೋಗಬಹುದೆನ್ನುವ ಅನಿಸಿಕೆ ಕಾಡತೊಡಗಿದ್ದಾಗ, ತಟ್ಟನೆ ಬದಲಾದ ದೈನಂದಿನ ಕ್ರಿಯೆಯೊಂದು ಅದರ ಬದಲಿ ಮಾರ್ಗ ತೋರಿಸಿತು – ಹೊಸದಾಗಿ ಸ್ಕೂಲಿಗೆ ಸೇರಿದ ಮಗಳ ದಿನಚರಿಯ ದೆಸೆಯಿಂದ. ಮನೆಗು ಆಫೀಸಿಗು ನಡುವೆಯಿದ್ದ ಸ್ಕೂಲಿಗೆ ನೇರ ಬಸ್ಸಿರದ ಕಾರಣ ಬೆಳಿಗ್ಗೆ ಅವಳನ್ನು ಕರೆದೊಯ್ದು ಸ್ಕೂಲಿಗೆ ಬಿಟ್ಟು ನಂತರ ಬಸ್ಸು ಹಿಡಿದು ಆಫೀಸಿನ ಹತ್ತಿರದ ಸ್ಟೇಷನ್ನೊಂದನ್ನು ತಲುಪಬೇಕು. ಅಲ್ಲಿಂದ ಸುಮಾರು ಇಪ್ಪತ್ತು ನಿಮಿಷ ಕಾಲುಹಾದಿಯಲ್ಲಿ ನಡೆದರೆ ಚೇತೋಹಾರಿಯೆನಿಸುವ ಉದ್ಯಾನದ ಮೂಲಕ ಸಾಗಿ ಆಫೀಸಿಗೆ ತಲುಪಬಹುದು. ಈ ಹೊಸ ದಿನಚರಿಯಿಂದ ಸಂಜೆಯ ವಾಕಿಂಗು ಬೆಳಗಿಗೆ ಬದಲಾಗಿ ಹೊಸದೊಂದು ಸಮತೋಲನವನ್ನು ಸೃಜಿಸುವ ಹಾಗೆ ರೂಪುಗೊಳ್ಳತೊಡಗಿತ್ತು. ಒಂದೆರಡು ದಿನ ಆ ದಾರಿಯಲ್ಲಿ ಅಡ್ಡಾಡಿದವನಿಗೆ ಒಮ್ಮೆ ಸ್ಟೇಷನ್ನಿನ ಮಾಮೂಲಿ ದ್ವಾರದ ಬದಲು ಮತ್ತೊಂದು ಬದಲಿ ದ್ವಾರದ ಮೂಲಕ ಹೊರಬಂದಾಗ ಅಲ್ಲೊಂದು ದೊಡ್ಡ ಮಾರ್ಕೆಟ್ಟು, ರೆಸ್ಟೋರೆಂಟು ಮತ್ತು ಅಂಗಡಿಗಳ ದೊಡ್ಡ ಸಾಲೆ ಇರುವುದು ಕಂಡಿತ್ತು. ‘ಪರವಾಗಿಲ್ಲವೆ.. ಆಗೀಗೊಮ್ಮೆ ಶಾಪಿಂಗಿಗೆ ಅನುಕೂಲವಾಗಿದೆ’ ಎಂದುಕೊಂಡು ತಿರುಗ ಹೊದವನಿಗೆ ತಟ್ಟನೆ ಎದುರಿಗೆ ನಿಂತಿದ್ದ ಬೊಚ್ಚು ಬಾಯಿನ ಎಂಭತ್ತರ ಹರೆಯದ ವೃದ್ದೆಯೊಬ್ಬಳು ಪೂರ್ತಿ ಬಾಯಿ ತೆರೆದುಕೊಂಡು ನಗುತ್ತ ನಿಂತಿರುವುದು ಕಣ್ಣಿಗೆ ಬಿತ್ತು.. ಅವಳ ಕೈಯಲ್ಲು ಅದೇ ಟಿಶ್ಯೂ ಪೇಪರಿನ ಕಟ್ಟುಗಳು, ಬಗಲಿನ ಚೀಲ, ಸುಕ್ಕು ಹಿಡಿದ ನಡುಗುವ ಕೈಗಳು…!

ಏನನಿಸಿತೊ ಏನೊ, ಪರ್ಸಿನೊಳಗಿದ್ದ ಚಿಲ್ಲರೆಯನ್ನೆಲ್ಲ ತೆಗೆದು ಅವಳ ಹಸ್ತಕ್ಕೆ ತುಂಬಿಸಿಬಿಟ್ಟವನೆ, ಅವಳ ಕೈಯಿಂದ ಒಂದೆ ಒಂದು ಕಟ್ಟನ್ನು ಮಾತ್ರ ಸಾಂಕೇತಿಕವಾಗಿಯೆಂಬಂತೆ ಕೈಗೆತ್ತಿಕೊಂಡ ಗಂಭೀರ. ಇದ್ದಕ್ಕಿದ್ದಂತೆ ಅವನಿಗೆ ಮೌಲ್ಯಗಳು ಏಕಾಏಕಿ ಎಲ್ಲಿಗೂ ಕಳುವಾಗುವುದಿಲ್ಲ ಎನಿಸಿತು.. ಬದಲಿಗೆ ಉಸಿರುಗಟ್ಟುವ ವಾತಾವರಣ ತೊರೆದು ಸಹನೀಯವೆನಿಸುವ ಕಡೆಗೆ ವಲಸೆ ಹೋಗಿಬಿಡುತ್ತವೊ ಏನೊ.. ಹೀಗಾಗಿ ನಾವಿದ್ದಲ್ಲೆ ಅದನ್ನು ಹುಡುಕುತ್ತ ನಾವೂ ಕಳುವಾಗುವ ಬದಲು, ಅವು ಹೋದತ್ತ ನಾವೆ ಹುಡುಕಿಕೊಂಡು ಹೋಗಬೇಕಷ್ಟೆ.. ಅಥವಾ ಹೊಸದಾಗೆಲ್ಲೊ ಎದುರಾದಾಗ ಗುರುತಿಸುವ ಛಾತಿಯಾದರು ಇರಬೇಕು.. ಬಹುಶಃ ಇದೆ ಬದಲಾವಣೆಯ ರಹಸ್ಯ ನಿಯಮ. ನಿಂತ ನೀರಾಗದೆ ಹರಿವ ಜರಿಯಾಗುತ್ತ, ಸೂಕ್ತ ಎಡೆಯಲ್ಲಿ ಬೇರೂರುತ್ತ ಹೋದರೆ ಅಲ್ಲೆ ಹೊಸ ಮೌಲ್ಯದ ಮತ್ತೊಂದು ಪ್ರಪಂಚದ ಸ್ಥಾಪನೆಯಾಗುತ್ತದೆ – ಅದನ್ನು ಕಲುಷಿತವಾಗಿಸಿ ಹಾಳುಗೆಡವುವ ಛೇಧಕಗಳು ಬಂದು ಅತಿಕ್ರಮಿಸುವತನಕ. ಹೀಗೆ ಈ ಮೌಲ್ಯದ ಹೋರಾಟ – ನಿರಂತರ ಕದನ, ಆ ವೃದ್ಧೆ – ಮುದುಕಿಯರ ಬದುಕಿನ ಹೋರಾಟದಂತೆ. ಇಲ್ಲಿ ಯಾರದು ಗೆಲವು, ಯಾರದು ಸೋಲು ಎನ್ನುವುದು ಮುಖ್ಯವಲ್ಲ. ಯಾರ ತಾಳಿಕೊಳ್ಳುವ ಶಕ್ತಿ, ಬಲ ಹೆಚ್ಚಿನದೆನ್ನುವ ಜಿಜ್ಞಾಸೆಯಷ್ಟೆ ಪ್ರಸ್ತುತ. ಈ ಹೊಸ ವೃದ್ಧೆಯ ವಯಸ್ಸನ್ನು ಗಮನಿಸಿದರೆ ಎಲ್ಲಾ ಅಡೆತಡೆ ಒತ್ತಡಗಳ ನಡುವೆಯೂ ಮೌಲ್ಯಗಳು ಜೀವಂತವಾಗಿರುವುದರಲ್ಲಿ ಸಂದೇಹವೇನೂ ಇಲ್ಲ… ಆ ವೃದ್ಧೆಯೂ ಇಂತದ್ದೆ ಮತ್ತೊಂದು ತಾಣವನ್ನು ಕಂಡುಕೊಳ್ಳುತ್ತಾಳೆ, ತನ್ನಂತಹವರೆ ಮತ್ತೊಂದಷ್ಟು ಮಂದಿ ಗಿರಾಕಿಗಳಾಗಿ ಆಧಾರ ನೀಡುತ್ತಾರೆ – ತಮ್ಮ ಸರದಿ ಮುಗಿಯುವತನಕ. ನಿರಂತರ ಚಕ್ರದಂತೆ ನಿಲದೆ ಸಾಗುತ್ತದೆ ಈ ಬದುಕಿನ, ಮೌಲ್ಯದ ಆವರ್ತನ ಪ್ರಕ್ರಿಯೆ..

ಯಾವುದೊ ನಿರಾಳ ಭಾವದಿಂದ ಮನಸೆಲ್ಲ ಹಗುರಾದಂತೆನಿಸಿ, ಮತ್ತದೆ ಹಳೆಯ ಹರ್ಷಭಾವದಿಂದ ಆಫೀಸಿನತ್ತ ನಡೆಯತೊಡಗಿದ ಗಂಭೀರ, ಆ ಪ್ರೌಢ ವೃದ್ಧೆಯ ನಗುವನ್ನೆ ಮನದೆ ನೆನೆಯುತ್ತ. ಅವಳ ಮೌಲ್ಯಕ್ಕು ಎಲ್ಲೊ ಒಂದೆಡೆ ಹೊಸ ಜಾಗ, ಹೊಸ ಗಿರಾಕಿ ಖಂಡಿತ ಸಿಕ್ಕಿರಬಹುದೆಂಬ ಅನಿಸಿಕೆಯೆ ಸಮಾಧಾನದ ಭಾವ ಮೂಡಿಸಿ, ತನ್ನರಿವಿಲ್ಲದೆ ತನಗೆ ಪ್ರಿಯವಾದ ಹಾಡಿನ ಸಾಲೊಂದನ್ನು ಗುನುಗುತ್ತ ಹೆಜ್ಜೆಯನ್ನು ಬಿರುಸಾಗಿಸಿದ, ತನ್ನ ಗಂಭೀರ ಮೊಗದಲ್ಲಿ ಮುಗುಳ್ನಗೆಯನ್ನು ಅರಳಿಸುತ್ತ…

(ಮುಕ್ತಾಯ)

ಚರ್ಚೂ, ಟಿಶ್ಯೂ, ಪೇಪರು, ಮುದುಕಿ, ಮೌಲ್ಯ, ಇತ್ಯಾದಿ, ಸಣ್ಣಕತೆ, ನಾಗೇಶ, ಮೈಸೂರು, ನಾಗೇಶಮೈಸೂರು, nagesha, mysore, nageshamysore

http://sampada.net/%E0%B2%B8%E0%B2%A3%E0%B3%8D%E0%B2%A3%E0%B2%95%E0%B2%A4%E0%B3%86-%E0%B2%9A%E0%B2%B0%E0%B3%8D%E0%B2%9A%E0%B3%82-%E0%B2%9F%E0%B2%BF%E0%B2%B6%E0%B3%8D%E0%B2%AF%E0%B3%82-%E0%B2%AA%E0%B3%87%E0%B2%AA%E0%B2%B0%E0%B3%81-%E0%B2%AE%E0%B3%81%E0%B2%A6%E0%B3%81%E0%B2%95%E0%B2%BF-%E0%B2%AE%E0%B3%8C%E0%B2%B2%E0%B3%8D%E0%B2%AF-%E0%B2%87%E0%B2%A4%E0%B3%8D%E0%B2%AF%E0%B2%BE%E0%B2%A6%E0%B2%BF-%E0%B2%AD%E0%B2%BE%E0%B2%97-13

http://sampada.net/%E0%B2%B8%E0%B2%A3%E0%B3%8D%E0%B2%A3%E0%B2%95%E0%B2%A4%E0%B3%86-%E0%B2%9A%E0%B2%B0%E0%B3%8D%E0%B2%9A%E0%B3%82-%E0%B2%9F%E0%B2%BF%E0%B2%B6%E0%B3%8D%E0%B2%AF%E0%B3%82-%E0%B2%AA%E0%B3%87%E0%B2%AA%E0%B2%B0%E0%B3%81-%E0%B2%AE%E0%B3%81%E0%B2%A6%E0%B3%81%E0%B2%95%E0%B2%BF-%E0%B2%AE%E0%B3%8C%E0%B2%B2%E0%B3%8D%E0%B2%AF-%E0%B2%87%E0%B2%A4%E0%B3%8D%E0%B2%AF%E0%B2%BE%E0%B2%A6%E0%B2%BF-%E0%B2%AD%E0%B2%BE%E0%B2%97-23

http://sampada.net/%E0%B2%B8%E0%B2%A3%E0%B3%8D%E0%B2%A3%E0%B2%95%E0%B2%A4%E0%B3%86-%E0%B2%9A%E0%B2%B0%E0%B3%8D%E0%B2%9A%E0%B3%82-%E0%B2%9F%E0%B2%BF%E0%B2%B6%E0%B3%8D%E0%B2%AF%E0%B3%82-%E0%B2%AA%E0%B3%87%E0%B2%AA%E0%B2%B0%E0%B3%81-%E0%B2%AE%E0%B3%81%E0%B2%A6%E0%B3%81%E0%B2%95%E0%B2%BF-%E0%B2%AE%E0%B3%8C%E0%B2%B2%E0%B3%8D%E0%B2%AF-%E0%B2%87%E0%B2%A4%E0%B3%8D%E0%B2%AF%E0%B2%BE%E0%B2%A6%E0%B2%BF-%E0%B2%AD%E0%B2%BE%E0%B2%97-33

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s