00322. ಲಘು ಹಾಸ್ಯ: ನಿತ್ಯ ಜೀವನಕ್ಕೆ ಯೋಗ (ಗುಬ್ಬಣ್ಣನ ಯೋಗಾಸನ ಸಂಶೋಧನೆಗಳು !)

00322. ಲಘು ಹಾಸ್ಯ: ನಿತ್ಯ ಜೀವನಕ್ಕೆ ಯೋಗ (ಗುಬ್ಬಣ್ಣನ ಯೋಗಾಸನ ಸಂಶೋಧನೆಗಳು !)
___________________________________________________________

ಜೂನ್ ಇಪ್ಪತ್ತೊಂದನ್ನು ‘ಅಂತರರಾಷ್ಟ್ರೀಯ ಯೋಗ’ ದಿನವನ್ನಾಗಿ ಆಚರಿಸಬೇಕೆಂಬ ಸರಕಾರಿ ಸುತ್ತೋಲೆ ಹೊರಬಿದ್ದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ, ಸುಮಾರು ದೇಶಗಳಲ್ಲಿ ಅದರ ಆಚರಣೆ ಮಾಡುವ ಸಿದ್ದತೆಗಳನ್ನು ಸುದ್ಧಿಯಾಗಿ ಬಿತ್ತರಿಸತೊಡಗಿದಾಗ ಅದರ ದನಿ ಇತರೆ ದೇಶಗಳಂತೆ ಸಿಂಗಪುರದಲ್ಲು ಮಾರ್ದನಿಸಿದ ಕಾಲ.. ಯೋಗವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಔನ್ನತ್ಯಕ್ಕೇರಿಸಲು ಸರಕಾರ ಕೈಗೊಂಡ ಕ್ರಮಗಳ ಕುರಿತಾದ ವರದಿ ಓದುತ್ತ ಕುಳಿತಿದ್ದಾಗ ಯಾಕೊ ತಟ್ಟನೆ ನನಗು, ಯೋಗ ಕಲಿಯಲು (ಪುನರ್) ಆರಂಭಿಸಬೇಕೆಂಬ ಆಕಾಂಕ್ಷೆ ಪ್ರಕಟವಾಗಿ, ಅದು ಪ್ರಬಲವಾದ ಬಯಕೆಯಾಗುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳತೊಡಗಿತು. ವಿಪರ್ಯಾಸವೆಂದರೆ ಆ ಬಯಕೆಗೆ ಎರಡೂ – ಪ್ರೇರಕ ಹಾಗು ಮಾರಕ ಶಕ್ತಿಯಾಗಿದ್ದುದ್ದು ಒಂದೆ ಮೂಲವೆ; ಹಾಳು ಭೂತಾಯಿಯನ್ನೆ ಬಸಿರಲಿಟ್ಟುಕೊಂಡು ಕಾಪಾಡುತ್ತಿರುವಂತೆ ಬಿಂಕ ತೋರಿಸುವ ಗುಢಾಣದ ಹೊಟ್ಟೆ!

ಅದನ್ನು ಕರಗಿಸಲಾದರೂ ಯೋಗಾಸನ ಆರಂಭಿಸಬೇಕೆಂಬ ಮನದಾಶೆ ಉದಯವಾಗಿ ದಶಕಗಳೆ ಉರುಳಿ ಹೋಗಿದ್ದರೂ, ಇನ್ನೂ ಕಾರ್ಯಗತವಾಗದೆ ಹಾಗೆ ಉಳಿದುಹೋಗಿತ್ತು – ಇಚ್ಛಾಶಕ್ತಿಯನ್ನು ಕ್ರಿಯಾಶಕ್ತಿಯಾಗಿಸುವ ಪರಿವರ್ತನಾ ಬಲ ಸಾಕಾಗದೆ. ಆಗೀಗೊಮ್ಮೆ, ಆಗಿದ್ದಾಗಲಿ ಎಂದು ಯತ್ನಿಸಿ ನೋಡಲು ಮೇಲೆದ್ದ ಗಳಿಗೆಯಲ್ಲೆ, ತಟ್ಟನೆ ಮೇಲೇಳುವುದೆ ಎಂತಹ ಕಠಿಣವಾದ ಪರಿಶ್ರಮದ ಕಾರ್ಯ ಎಂದು ಮನವರಿಕೆಯಾಗಿ, ನಾನು ನಿಜಕ್ಕೂ ಆ ಚಿತ್ರ ವಿಚಿತ್ರಾಸನ ಮಾಡಿ ನಿಭಾಯಿಸುವುದುಂಟಾ ? ಎಂಬ ಅಪನಂಬಿಕೆ ಮೂಡಿ ಕುಸಿದು ಕೂತು ಕಣ್ಣು ಮುಚ್ಚಿದ್ದೆ – ಸೋಫಾದಲ್ಲೆ. ಅಲ್ಲಿಗೆ ನನ್ನ ಯೋಗಾಸನದ ಪ್ರೋಗ್ರಾಮ್ ಹಾಗೆ ಸ್ಥಗಿತವಾಗಿ ಹೋಗಿತ್ತು. ಈ ಬಾರಿ ಮಾತ್ರ, ಸರಕಾರವೆ ಇಷ್ಟು ಪ್ರೋತ್ಸಾಹಿಸುತ್ತಿರುವಾಗ ನಾನು ಸುಮ್ಮನಿದ್ದರೆ ‘ನಮ್ಮ ಪುರಾತನ ಕಲಾಚಾರ, ಸಂಸ್ಕೃತಿಗೆ ಅವಮಾನವಲ್ಲವೆ ?’ ಅನಿಸಿ, ಕನಿಷ್ಠ ಒಮ್ಮೆ ಪ್ರಯತ್ನವಾದರೂ ಮಾಡಿ ನೋಡಬೇಕೆಂಬ ದೇಶಾಭಿಮಾನಿ ಪ್ರಜ್ಞೆ ಜಾಗೃತವಾಗುತ್ತಿದ್ದಂತೆ, ಸಿಂಗಪುರದಲ್ಲಿ ಎಲ್ಲೆಲ್ಲಿ ಯೋಗಾಸನದ ತರಗತಿ ನಡೆಸುತ್ತಿದ್ದಾರೆಂದು ಗೂಗಲಿಸಿ ನೋಡಲು ಆರಂಭಿಸುವ ಹೊತ್ತಿಗೆ ಸರಿಯಾಗಿ ಕಿವಿಗೆ ಬಿದ್ದಿತ್ತು ಗುಬ್ಬಣ್ಣನ ಕಂಚಿನ ಕಂಠದ ರಾಗವಾದ ದನಿ –

‘ ನಮಸ್ಕಾರ ಸಾರ್….’

ಪರಿಚಿತ ದನಿಗೆ ಏನೊ ಉತ್ಸಾಹ ಉಕ್ಕಿದಂತಾಗಿ ತಲೆಯೆತ್ತಿ, ಅವನು ಮಾತು ಮುಂದುವರೆಸುವ ಮೊದಲೆ ‘ಏನೊ ಗುಬ್ಬಣ್ಣ, ಬೆಳಿಗ್ಗೆಯೆ, ಅದೂ ‘ವಾರದ ಕೊನೆ ಶನಿವಾರದ ಬೆಳಿಗ್ಗೆಯೆ’ ಸವಾರಿ ಹೊರಟುಬಿಟ್ಟಿದ್ದೀಯಾ? ಶನಿವಾರ, ಭಾನುವಾರ ನಿನಗೆ ಬೆಳಗಾಗುವುದೆ ಮಧ್ಯಾಹ್ನದ ಮೇಲಲ್ಲವಾ? ಅದೂ ಮುಕ್ಕಾಲು ಗಂಟೆ ಟ್ರೈನು ಹಿಡಿದು ಲಿಟಲ್ ಇಂಡಿಯಾ ಏರಿಯಾಗೆ ಬಂದುಬಿಟ್ಟಿದ್ದೀಯಾ?’ ಎಂದೆ ತುಸು ಛೇಡಿಸುವ ದನಿಯಲ್ಲೆ. ‘ಶನಿವಾರ ತರಕಾರಿ, ದಿನಸಿ ತನ್ನಿ ಎಂದು ಕಿಚಾಯಿಸಿ ‘ಒದ್’ದು ಕಳಿಸಿರಬೇಕವನ ಶ್ರೀಮತಿ… ಇರದಿದ್ದರೆ ಇಷ್ಟು ಬೆಳಗಿಗೆ ಅವನ ಸುಪ್ರಭಾತವೆಲ್ಲಿ ಆಗುತ್ತಿತ್ತು?’ ಎಂದುಕೊಂಡೆ ಕೇಳಿದ್ದೆ.

‘ಲಿಟಲ್ ಇಂಡಿಯಾ ಮಧ್ಯೆ ತಳಾರವಾಗಿ ಮನೆ ಮಾಡಿಕೊಂಡು ಪಟ್ಟಾಗಿ ಕೂತುಬಿಟ್ಟಿದ್ದೀರಾ… ನಿಮಗೆ ನಮ್ಮಂತಹವರ ಪಾಡು ಹೇಗೆ ಗೊತ್ತಾಗಬೇಕು ಬಿಡಿ.. ಸೊಪ್ಪು, ತರಕಾರಿ, ದಿನಸಿಯಿಂದ ಉಪ್ಪಿನಕಾಯಿ, ಹಪ್ಪಳದವರೆಗೂ ಎಲ್ಲಕ್ಕೂ ಇಲ್ಲಿಗೆ ತಾನೆ ಬರಬೇಕು? ನಿಮಗೆ ಬೇಕೆಂದಾಗೆಲ್ಲ ಎರಡು ಹೆಜ್ಜೆ ಹಾಕಿದರೆ ಸರಿ, ಎಲ್ಲವೂ ಆವತ್ತವತ್ತಿನದೆ ಫ್ರೆಷ್ಷಾಗಿ ಸಿಕ್ಕಿಬಿಡುತ್ತದೆ… ನಮಗೆ ವಾರಕ್ಕೆ ಸಿಕ್ಕೊದೊಂದೆ ಶನಿವಾರ.. ಅದರಲ್ಲೆ ಎಲ್ಲಾ ಆಗಬೇಕಲಾ ಸಾರ್..’ ಎಂದ ಅರ್ಧ ಈರ್ಷೆ, ಅರ್ಧ ಹತಾಶೆ ಬೆರೆತ ದನಿಯಲ್ಲಿ.

ಅಲ್ಲಿಗೆ ಇದು ನಾನಂದುಕೊಂಡ ಕೇಸೆ ಸರಿ ಎಂದುಕೊಂಡೆ ಟೀಪಾಯಿಯ ಮೇಲಿದ್ದ ಕಾಫಿಯ ಜಗ್ಗನ್ನು ಅವನತ್ತ ದೂಡಿದೆ, ಅವನಿಗೆ ಕಾಫಿಯೆಂದರೆ ಪಂಚಪ್ರಾಣವೆಂದು ಗೊತ್ತಿದ್ದರಿಂದ. ಪ್ರತಿ ಭಾನುವಾರ ಲಿಟಲ್ ಇಂಡಿಯಾ ಪೂರ್ತಿ ಜನ ಜಾತ್ರೆಯಾಗಿ ಬಿಡುವುದರಿಂದ ಸಾಧ್ಯವಾದಷ್ಟು ಶನಿವಾರವೆ ಬಂದು, ವಾರಕ್ಕಾಗುವಷ್ಟೆಲ್ಲಾ ಖರೀದಿಸಿಕೊಂಡು ಹೋಗುವುದು ಬಹು ಸಾಮಾನ್ಯವಾದ ಕಾರಣ ಅದರಲ್ಲಿ ನನಗೂ ಹೊಸತೇನು ಕಾಣಲಿಲ್ಲ. ಅಲ್ಲದೆ ಈ ಭಾನುವಾರದ ಸಂಜೆ ಸೇರುವ ಸಂತೆಯಂತಹ ಜನ ಸಂದಣಿಗೆ ಅಂಜಿಯೆ ಎಷ್ಟೊ ಜನ ಈ ಏರಿಯ ಬಿಟ್ಟು ದೂರದಲೆಲ್ಲೊ ಮನೆ ಮಾಡಿಕೊಂಡು ತಾಪತ್ರಯ ಪಡುತ್ತಾರೆ. ಸಂತೆ ಗದ್ದಲದಂತಹ ವಾತಾವರಣದಲ್ಲೆ ಹುಟ್ಟಿ ಬೆಳೆದ ನನಗೆ ಭಾನುವಾರದ ಸಂಜೆಯ ಎರಡು ಮೂರು ಗಂಟೆಗಳ ಗದ್ದಲಕ್ಕಿಂತ, ಸುತ್ತಲೂ ಇರುವ ನೂರಾರು ಇಂಡಿಯನ್ ರೆಸ್ಟೋರೆಂಟುಗಳು, ಬೇಕೆಂದಾಗ ಕೈಗೆಟಕುವ ತರಕಾರಿ, ದಿನಸಿ ಅಂಗಡಿಗಳು, ಭಾರತದಲ್ಲೆ (ಸ್ವಲ್ಪ ತಮಿಳುನಾಡಿನಲ್ಲಿ) ಇರುವಂತೆ ಅನಿಸಿಕೆ ತರಿಸುವ ಸುತ್ತ ಮುತ್ತಲ ದೇಗುಲ-ದೇವಸ್ಥಾನಗಳು, ರಸ್ತೆಯ ಹೆಸರುಗಳು, ಜನರು – ಇತ್ಯಾದಿಗಳೆ ಪ್ರಿಯವಾದಂತೆನಿಸಿ ಅಲ್ಲಿಯೆ ತಳವೂರಿಬಿಟ್ಟಿದ್ದೆ ವರ್ಷಗಳಿಂದ. ಪುಣ್ಯಕ್ಕೆ ಮನೆ ಸಿಗುವುದೆ ಕಷ್ಟವೆಂದುಕೊಂಡ ಜಾಗದಲ್ಲೆ ಮನೆಯೂ ಸಿಕ್ಕಿ ಅದೆ ಖಾಯಂ ನಿವಾಸವಾಗಿ ಹೋಗಿತ್ತು. ವಾರದ ಕೊನೆಯಲ್ಲಿ ಗುಬ್ಬಣ್ಣ ಬಂದಾಗ ಕಾಫಿ ಕುಡಿಯಲೆಂದು ಹೊರಗೆ ಹೋಗಿ ಜತೆಗೆ ಇಡ್ಲಿ, ವಡೆ, ಪೊಂಗಲ್ ಬಾರಿಸಿ ಬರುತ್ತಿದ್ದ ದಿನಗಳು ಮಾಮೂಲೆ.

‘ಅದಿರಲಿ ಸಾರ್ ಇಷ್ಟು ಬೆಳಿಗ್ಗೇನೆ ಎದ್ದು ಏನು ಮಾಡ್ತಾ ಇದ್ದೀರಾ ? ನನಗೇನೊ ಗ್ರಾಚಾರ ದಿನಸಿ, ಗಿನಸಿ ಅಂತ ಇಲ್ಲಿಗೆ ಓಡಿ ಬರಬೇಕು.. ನೀವಿಲ್ಲೆ ಇರೋ ಜನ – ವಾರದ ಕೊನೆಯೂ ಇಲ್ಲ , ಮೊದಲೂ ಇಲ್ಲ.. ಬೇಕೂಂದಾಗ ಹೋಗಿ ತರಬಹುದಲ್ಲಾ? ನಿಮ್ಮದೇನು ಇಷ್ಟು ಬೆಳಗ್ಗೆಯೆ ಸುಪ್ರಭಾತ ?’ ಎಂದ ಗುಬ್ಬಣ್ಣ.

‘ ಅದೇನೊ ಸರಿ ಗುಬ್ಬಣ್ಣಾ… ಆದರೆ ನಿನ್ನೆ ಸಂಜೆ ಟೀವಿಲಿ ನ್ಯೂಸ್ ನೋಡಿದ ಮೇಲೆ ಈ ಸಾರಿಯಾದರೂ ಯೋಗ ಶುರು ಮಾಡೆ ಬಿಡಬೇಕೂಂತ ಬಹಳಾ ಪ್ರೇರಣೆ ಬಂದು ಹೋಯ್ತು… ನಮ್ಮ ದೇಶದ ಸರ್ಕಾರವೆ ಅದಕ್ಕೊಂದು ಮಿನಿಸ್ಟ್ರಿ ಮಾಡಿಕೊಂಡು ಕೂತಿರುವಾಗ ನಾವೆ ನಮ್ಮ ಪರಂಪರೆಯನ್ನು ಕಡೆಗಣಿಸುವುದು ಸರಿಯಲ್ಲ, ಸ್ವಲ್ಪ ಖರ್ಚಾದರೂ ಸರಿ, ಸರಿಯಾದ ಯೋಗ ಕ್ಲಾಸ್ ಎಲ್ಲಿದೆ ಎಂದು ಹುಡುಕೋಣ ಅನಿಸಿ ಗೂಗಲೇಶ್ವರನ ಗುಹೆಯಲ್ಲಿ ತಡಕಾಡಿದ್ದೆ.. ಅಷ್ಟು ಹೊತ್ತಿಗೆ ನೀನು ಬಂದೆ ನೋಡು..’ ಎಂದು ಒಂದು ಸಂಕ್ಷಿಪ್ತ ವರದಿಯನ್ನೆ ಕೊಟ್ಟು ಬಿಟ್ಟೆ.

ಆದರೆ ಗುಬ್ಬಣ್ಣ ನನ್ನ ಮಾತಿಂದೇನು ಇಂಪ್ರೆಸ್ ಆದಂತೆ ಕಾಣಲಿಲ್ಲ. ಬದಲಿಗೆ ಸದ್ದಿಲ್ಲದೆ ಲೊಚಗುಟ್ಟಿ ಸಂತಾಪ ಸೂಚಿಸುತ್ತಿರುವಂತೆ ಭಾಸವಾಯ್ತು. ನಾನು ಯೋಗ ಅನ್ನುತ್ತಿದ್ದಂತೆ, ನನ್ನೆರಡರಷ್ಟು ಗುಢಾಣದ ಹೊಟ್ಟೆ ಹೊತ್ತಿರುವ ಅವನು, ತಾನೂ ಜತೆಗೆ ಕೈಗೂಡಿಸಲು ಉತ್ಸಾಹ ತೋರುತ್ತಾನೇನೊ ಎಂದುಕೊಂಡಿದ್ದವನಿಗೆ ಕೊಂಚ ನಿರಾಶೆಯೆ ಆಯ್ತು. ಆದರೂ ಪಟ್ಟು ಬಿಡದೆ, ‘ ಯಾಕೊ ಗುಬ್ಬಣ್ಣ ಯೋಗ ಅಂತಿದ್ದ ಹಾಗೆ ಮೂತಿ ಮುದುರಿಸಿಕೊಳ್ಳುತ್ತಿ ? ನೀನು ಇನ್ನು ಚಿಕ್ಕವನೇನಲ್ಲ.. ವಯಸಾದಂತೆ ಯೋಗ ಆರೋಗ್ಯಕ್ಕೆ ಒಳ್ಳೆಯದು.. ಜತೆಗೆ ನೀನು ಬಂದು ‘ಟ್ರೈ’ ಮಾಡಬಾರದೆ?’ ಎಂದೆ ಪುಸಲಾಯಿಸುವ ದನಿಯಲ್ಲಿ.

‘ಅಯ್ಯೊ.. ನಿಮಗಾದರೆ ಎಲ್ಲಾ ಆರಾಮದ ಕೆಲಸ , ಕೂತ ಕಡೆಯೆ ನೀರಾಡದಂತೆ ಎಲ್ಲಾ ಮುಗಿಸಿಕೊಳ್ಳುತ್ತೀರಾ.. ಅದಕ್ಕೆ ಬಾಡಿಗೆ ಸ್ವಲ್ಪ ಎಕ್ಸರ್ಸೈಜ್ ಕೊಡಲಾದರೂ ಯೋಗಾ, ವ್ಯಾಯಾಮ ಅಂತ ಹೊರಡಬೇಕು ಸಾರ್… ನನ್ನಂತಹವರಿಗೆ ಮಾಡುವ ಪ್ರತಿಯೊಂದು ಕೆಲಸವೂ ಯೋಗಾಸನವೆ.. ನಮಗೇಕದೆಲ್ಲ ಬಿಡಿ ಸಾರ್..’ ಎಂದ.

‘ಏಯ್ ಗುಬ್ಬಣ್ಣಾ… ಮಾಡೋಕೆ ಇಷ್ಟವಿಲ್ಲ ಅನ್ನೊ ಸೋಮಾರಿತನಕ್ಕೆ ಬೇಕಾದ್ರೆ ಬರೋಕೆ ಇಷ್ಟವಿಲ್ಲ ಅನ್ನು. ಅದು ಬಿಟ್ಟು ಮಾಡೋ ಕೆಲಸವೆಲ್ಲ ಯೋಗಾಸನವೆ ಅಂತ ನನ್ನ ಹತ್ರವೆ ಬುರುಡೆ ಬಿಡಬೇಡ… ನೀ ಜತೆ ಬರದಿದ್ರೂ ಪರವಾಗಿಲ್ಲಾ..’ ಎಂದೆ ತುಸು ರೇಗುವ ದನಿಯಲ್ಲೆ.

ಹೇಳಿ ಕೇಳಿ ಕನ್ಸಲ್ಟೆಂಟ್ ಗುಬ್ಬಣ್ಣ, ಆ ಮಾತಿಗೆಲ್ಲಾ ಕನಲುವುದುಂಟೆ? ಅವನದಿನ್ನು ಅದೇ ಶಾಂತ ಭಾವ, ಸೌಮ್ಯ ಚೆನ್ನ ಕೇಶವನ ಅದೇ ಮುಖಭಾವ… ಒಂದು ಸಿಪ್ ಕಾಫಿ ಹೀರಿ ಚಪ್ಪರಿಸುತ್ತಲೆ ಮೆಲುವಾದ ದನಿಯಲ್ಲಿ, ‘ ಇಲ್ಲಾ ಸಾರ್ ..ನಿಮ್ಮ ಹತ್ರ ಯಾಕೆ ಬುರುಡೆ ಬಿಡಲಿ.. ನಾನು ಮಾಡುವ ಕೆಲಸದಲ್ಲಾಗಲಿ, ಮನೆಯಲಾಗಲಿ ಗಳಿಗೆಗೊಂದು ತರ ಯೋಗಾಸನ ಹಾಕುತ್ತಲೆ ಇರಬೇಕು. ಇರದಿದ್ದರೆ ಈ ಫೀಲ್ಡಿನಲ್ಲಿ ಹೆಣಗಿ ಬದುಕುವುದೆ ಕಷ್ಟ ಸಾರ್..’ ಎಂದ.

ನಾನು ಕೊಂಚ ಕಿಚಾಯಿಸುವ ದನಿಯಲ್ಲೆ, ‘ಹೌದೌದು.. ಎಲ್ಲಾ ಆಸನಗಳೆ.. ಈಗ ನನ್ನ ಮುಂದೆ ಆಡುತ್ತಿರುವ ಮಾತಿದೆಯಲ್ಲ.. ಅದೂ ಒಂದು ರೀತಿಯ ಆಸನವೆ…’ಬುರುಡಾಸನ’ ಅಂತ, ಅಲ್ಲವೆ?’ ಎಂದೆ – ದನಿಯಲಿದ್ದ ವ್ಯಂಗ್ಯವನ್ನು ಅಡಗಿಸಲೆತ್ನಿಸದೆ.

‘ಸಾರ್.. ಸುಮ್ಮನೆ ಯಾಕೆ ಸಿಟ್ಟು ಮಾಡಿಕೊಳ್ಳುತ್ತೀರ.. ಸ್ವಲ್ಪ ಯೋಚಿಸಿ ನೋಡಿದರೆ ನಿಮಗೆ ಅರ್ಥವಾಗುತ್ತೆ, ಎಲ್ಲವು ಒಂದು ರೀತಿಯ ಆಸನಗಳೆ ಅಂತ… ಬೆಳಗ್ಗೆ ಎಳುವುದರಿಂದ ರಾತ್ರಿ ಮಲಗುವ ತನಕ ಎಲ್ಲವೂ ವಿವಿಧಾಸನಗಳೆ ಸಾರ್.. ಉದಾಹರಣೆಗೆ ಶವಾಸನವನ್ನೆ ತೊಗೊಳ್ಳಿ, ನಾವು ರಾತ್ರಿ ಮಲಗುವಾಗ ಹಾಕುವ ‘ನಿದ್ರಾಸನ’ಕ್ಕೂ ಅದಕ್ಕೂ ಏನು ವ್ಯತ್ಯಾಸವಿದೆ ಹೇಳಿ?’

ನಾನು ಬೆಚ್ಚಿ ಬಿದ್ದವನಂತೆ, ‘ ಲೋ ಗುಬ್ಬಣ್ಣ, ಯೋಗಾಸನ ಅಂದ್ರೆ ಬರಿ ವ್ಯಾಯಾಮ, ವಿಶ್ರಾಮದ ಆಸನ ಮಾತ್ರ ಅಲ್ಲವೊ… ಉಚ್ವಾಸ-ನಿಶ್ವಾಸಗಳನ್ನು ಕ್ರಮಬದ್ಧವಾಗಿ ಮಾಡಬೇಕು.. ಸುಮ್ಮನೆ ಮಲಗಿ ಗೊರಕೆ ಹೊಡೆದರೆ ಶವಾಸನ ಆಗಿಬಿಡುವುದಿಲ್ಲ..!’ ಎಂದೆ.

‘ ಅಯ್ಯೊ.. ಸುಮ್ಮನಿರಿ ಸಾರ್.. ನೀವು ಹಿಂದೆ ಮುಂದೆ ನೋಡದೆ ಎಲ್ಲವನ್ನು ಒಪ್ಪಿಕೊಂಡುಬಿಡುತ್ತೀರಾ.. ನಿಮಗೆ ನಮ್ಮ ಬಾಡಿಯ ‘ಪವರು’ ಗೊತ್ತಿಲ್ಲ, ಅದು ನಿದ್ದೇಲೆ ಎಲ್ಲಾ ಮ್ಯಾನೇಜು ಮಾಡಿಬಿಡುತ್ತದೆ.. ಎಲ್ಲಾ ಶ್ವಾಸವನ್ನು ದೇಹಕ್ಕೆ ತಕ್ಕ ಹಾಗೆ, ಹೇಗೆ ಬೇಕೊ ಹಾಗೆ ಹೊಂದಿಸೊ ಮಹಾನ್ ಕಿಲಾಡಿ ಅದು..’

‘ಸರಿ ಹಾಳಾಗಲಿ, ನಿನ್ನ ಪುರಾಣ.. ನನ್ನ ಜತೆ ಯೋಗ ಕ್ಲಾಸಿಗೆ ಬರುತ್ತಿಯೊ ಇಲ್ಲವೊ ಅಷ್ಟು ಹೇಳು. ಬೇರೆಲ್ಲ ಪಕ್ಕಕಿಡು…!’

‘ಸಾರ್.. ನನ್ನದಿನ್ನು ಶುರುವೆ ಆಗಿಲ್ಲ, ನೀವು ಈಗಲೆ ಎಲ್ಲಾ ಪಕ್ಕಕಿಡು ಅಂದರೆ ಹೇಗೆ ? ಕನಿಷ್ಠ ನನ್ನ ವಾದವನ್ನಾದರೂ ಪೂರ್ತಿ ಕೇಳಿಸಿಕೊಳ್ಳಿ.. ಆಮೇಲೆ ನಿಮಗೆ ಬೇಕಾದಂತೆ ಮಾಡಿ…’

ಗುಬ್ಬಣ್ಣ ಒಂದು ವಿಷಯ ಆರಂಭಿಸಿದರೆ ತಲೆ ಚಿಟ್ಟು ಹಿಡಿಸುವ ತನಕ ಬಿಡುವವನಲ್ಲ; ಅದರಲ್ಲೂ ಆ ‘ಕನ್ಸಲ್ಟೆಂಟ್’ ಕೆಲಸದ ದೆಸೆಯಿಂದ ಎಲ್ಲ ವಿಷಯಕ್ಕೂ ಅದರ ಚಾಳಿಯೆ ಹತ್ತಿಬಿಟ್ಟಿದೆ ಎಂದು ಗೊತ್ತಿದ್ದ ಕಾರಣ ಮತ್ತೆ ವಾಗ್ವಾದಕ್ಕಿಳಿಯದೆ ಸುಮ್ಮನಾದೆ. ‘ಮೌನಂ ಸಮ್ಮತಿ ಲಕ್ಷಣಂ’ ಎಂದುಕೊಂಡು ಮಹಾನುಭಾವ ಮುಂದುವರೆಸೆ ಬಿಟ್ಟ..

‘ ಬೆಳಿಗ್ಗೆ ಏಳುವುದು ಒಂದು ಆಸನವೆ ಸಾರ್.. ಹೃದಯಕ್ಕೆ ಒತ್ತಡ ಬೀಳದಂತೆ ಬಲ ಮಗ್ಗುಲಲ್ಲಿ ಬಲು ಎಚ್ಚರದಿಂದ ಏಳುವ – ‘ಎಚ್ಚರಾಸನ’ ಅಥವಾ ‘ಉದಯಾಸನ’ ಸಾರ್..’

‘ಹೃದಯ ಎಡದ ಬದಲಿಗೆ ಬಲ ಭಾಗದಲ್ಲಿರುವವರ ಕಥೆಯೇನು?’ ಎಂಬ ಪ್ರಶ್ನೆ ತುದಿ ನಾಲಿಗೆಗೆ ಬಂದರು ಅದನ್ನು ವಿವರಿಸುವ ನೆಪದಲ್ಲೆ ಬೆಳಗ್ಗೆ ಹಲ್ಲುಜ್ಜುವುದರಿಂದ ಹಿಡಿದು – ‘ಹಲ್ಲುಜ್ಜಾಸನ’, ‘ಮುಕ್ಕುಳುಸಾಸನ’, ‘ದಂತಾಸನ’, ‘ಶೌಚಾಸನ’, ‘ಸ್ವಚ್ಚಾಸನ’, ‘ವರ್ಜ್ಯಾಸನ’ ಎಂದೆಲ್ಲ ಆರಂಭಿಸಿಬಿಡಬಹುದೆಂದು ಭಯವಾಗಿ, ಬೇರೇನು ಹೇಳದೆ ಬರಿ ‘ಹೂಂ’ಗುಟ್ಟಿದೆ…

‘ಅಷ್ಟೇಕೆ ಸಾರ್..? ಹುಷಾರು ತಪ್ಪಿತು ಎಂದುಕೊಳ್ಳಿ… ಅದೂ ಕೂಡ ನಮ್ಮ ದೇಹ ಮಾಡುವ ವಿವಿಧಾಸನಗಳೆ… ಕೆಮ್ಮಾದರೆ ‘ಕ(ಕಾ)ಫಾಸನ’, ನೆಗಡಿ ‘ಶೀತಾಸನ’, ಜ್ವರ ‘ಉಷ್ಣೋದ್ವೇಗಾಸನ’, ತಲೆ ನೋವು ‘ಶಿರಾಸನ’, ಹೊಟ್ಟೆನೋವು ‘ಉದರಾಸನ’, ಮೈಕೈ ನೋವು ‘ಕೊಬ್ಬಾಸನ’, ಅತಿ ಬೊಜ್ಜು ‘ಗಬ್ಬಾಸನ’ … ಹೀಗೆ ಪಾರ್ಟ್ಸ್ ಕೆಟ್ಟು ಹೋದ ಬಾಡಿ ತನ್ನನ್ನೆ ರಿಪೇರಿ ಮಾಡಿಕೊಳ್ಳಲು ತರತರದ ಆಸನ ಹಾಕುತ್ತೆ, ಸಂಜ್ಞೆ ಕೊಡುತ್ತಾ ಇರುತ್ತೆ.. ನಾವದನ್ನ ಗಮನಿಸೋದಿಲ್ಲ ಅಷ್ಟೆ ಸಾರ್..’ ಎಂದು ತನ್ನ ಹೊಸ ಸಿದ್ದಾಂತವನ್ನೆ ಮಂಡಿಸಿಬಿಟ್ಟ !

ಈ ಮಾತಿನಲ್ಲಿ ಮೋಡಿ ಮಾಡಬಲ್ಲ ಕನ್ಸಲ್ಟೆಂಟುಗಳ ಸಹವಾಸವೆ ಹೀಗೆ. ಸತ್ಯದ ತೆಳು ಎಳೆಯೊಂದು ಸಿಕ್ಕಿದರೂ ಸಾಕು, ಅದಕ್ಕೆ ಸುಣ್ಣ-ಬಣ್ಣ ಹಚ್ಚಿ ವರ್ಣ-ವೈಭವೋಪೇತವಾಗಿಸಿ, ನಂಬದವರನ್ನು ನಂಬಿಸುವ ಮನಸ್ಥಿತಿಗೆ ತರಿಸಿಬಿಡುತ್ತಾರೆ… ನಾನು ಗುಬ್ಬಣ್ಣನ ಮಾತಿನ ಮೋಡಿಗೆ ಸಿಕ್ಕಿ ಅದೆ ಹಾದಿ ಹಿಡಿಯಬಾರದೆಂಬ ಎಚ್ಚರದಲ್ಲೆ, ‘ಗುಬ್ಬಣ್ಣ ಈ ಮಾತಿನ ವರಸೆಯೆಲ್ಲಾ ನಿನ್ನ ಕ್ಲೈಂಟುಗಳ ಹತ್ತಿರ ಇಟ್ಟುಕೊ.. ಹೀಗೆ ಬಿಟ್ಟರೆ ಈಗ ನಾವಾಡುತ್ತಿರುವ ಮಾತುಕಥೆಯೂ ‘ವಾಕಾಸನ’ ಎಂದು ಗಿಲಾವು ಹಚ್ಚಿಬಿಡುತ್ತಿಯಾ.. ವಿಷಯಾಂತರ ಮಾಡದೆ ಬೇಗ ನಿನ್ನ ಪುರಾಣ ಮುಗಿಸು..’ ಎಂದೆ.

‘ ಅರೆ.. ಎಷ್ಟು ಫಾಸ್ಟಾಗಿ, ಚೆನ್ನಾಗಿ ಅರ್ಥ ಮಾಡಿಕೊಂಡು ಬಿಡುತ್ತೀರಾ ಸಾರ್..? ಮಾತು ಸ್ಮೂತಾಗಿದ್ದರೆ ‘ವಾಕಾಸನ’, ಬಿರುಸಾಗಿದ್ದರೆ ‘ವಾಗ್ದಾಳಾಸನ’, ಬೈಗುಳ ಧಾಳಿಗೆ ‘ವಾಗ್ದಂಡಾಸನ’…. ಅದೇ ಲಾಜಿಕ್ಕಲ್ಲೆ ಪೂಜೆಗೆ ‘ಮಡಿಯಾಸನ’, ಹಸಿವಾದಾಗ ‘ನುಂಗಾಸನ’, ದಾಹಕ್ಕೆ ‘ಪೇಯಾಸನ’, ನೀರಡಿಕೆಗೆ ‘ನೀರಾಸನ’, ಪ್ರೇಮಕ್ಕೆ ‘ಶೃಂಗಾರಾಸನ’, ಪ್ರಣಯಿಗಳ ಮುದ್ದಾಟಕ್ಕೆ ‘ಮುದ್ದಾಸನ’ – ‘ಪ್ರೇಮ-ಭಿಕ್ಷಾಸನ’, ‘ದಂತ ಭಗ್ನಾಸನ’, ‘ಕಫಾಲ-ಮೋಕ್ಷಾಸನ’, ‘ನಿರೀಕ್ಷಾಸನ’….. ಆಹಾ! ಇಡೀ ಜಗತ್ತೆ ಬರಿ ಅಸನಮಯವಾಗಿದೆಯಲ್ಲಾ ಸಾರ್..?!’

‘ಹೌದೌದು… ಅದೇ ಲಾಜಿಕ್ಕಲೆ ಮುನಿಸು ಬಂದರೆ ‘ಸಿಟ್ಟಾಸನ’, ಚಚ್ಚುವಷ್ಟು ಕೋಪ ಬಂದರೆ ‘ಗುದ್ದಾಟಾಸನ’, ಕೈಯೊ-ಕಾಲೊ-ತಲೆಯೊ ತೆಗೆಯಬೇಕೆನಿಸಿದಾಗ ‘ಲಾಂಗಾಸನ’, ‘ಮಚ್ಚಾಸನ’, ‘ಬ್ಲೇಡಾಸನ’ ….ಒಟ್ಟರೆ ಜೀವನವೆ ಒಂದು ‘ಬದುಕಾಸನ’ವೆನ್ನಬಹುದು ಬಿಡು..’ ಎಂದೆ ತಾತ್ಸರ, ವ್ಯಂಗ್ಯ ಬೆರೆತ ದನಿಯಲ್ಲಿ. ಆದರೆ ಗುಬ್ಬಣ್ಣ ಅದನ್ನು ಲೆಕ್ಕಿಸದೆ, ಸ್ಥಿತಪ್ರಜ್ಞ ಯೋಗಿಯಂತೆ ತನ್ನ ಭಾಷಣ ಮುಂದುವರೆಸಿದ್ದ.

‘.. ಆ ಲಾಂಗು, ಮಚ್ಚು, ಬ್ಲೇಡೆಲ್ಲ ತಾಮಸ ಯೋಗ ಸಾರ್.. ಅದೆಲ್ಲಾ ರೌಡಿಗಳು, ಪುಂಡರು, ಕೊಳಕು ರಾಜಕೀಯದವರು ಹಾಕುವ ‘ಲಾಗ’ ಗಳು… ನಮ್ಮ ನಿಮ್ಮಂತಹ ಸದ್ಗುಣಶೀಲರಿಗಲ್ಲ.. ನನ್ನಂತಹ ಬಲವಂತರಿಗೆ ರಾಜಯೋಗ, ನಿಮ್ಮಂತಹ ಸೌಮ್ಯಶೀಲರಿಗೆ ಸಾತ್ವಿಕಯೋಗ ಮಾತ್ರ ಸೂಕ್ತ.. ನಮಗೇನಿದ್ದರು ಮನೆ, ಆಫೀಸು, ದೇವಸ್ಥಾನ, ಕ್ಲಬ್ಬುಗಳ ಜಗತ್ತೆ ಸಾಕು… ! ಮನೆ ಬಿಟ್ಟು ಆಫೀಸಿನ ವಿಷಯಕ್ಕೆ ಬನ್ನಿ.. ನನ್ನಂತಹ ಕನ್ಸಲ್ಟೆಂಟುಗಳ ಕೆಲಸವನ್ನೆ ತೆಗೆದುಕೊಳ್ಳಿ. ನಾವು ಹೇಳುವುದಕ್ಕೆ ಯಾರು ‘ಕ್ಯಾರೆ’ ಅನ್ನುತ್ತಾರೆ ಸಾರ್? ಕೆಲಸ ಮಾತ್ರ ಆಗಲೆಬೇಕು, ಆದರೆ ಜವಾನನಿಂದ-ದಿವಾನನವರೆಗು ಎಲ್ಲರಿಗು ದಮ್ಮಯ್ಯ ಗುಡ್ಡೆ ಹಾಕಬೇಕು – ‘ದಯವಿಟ್ಟಾಸನ’ದ ಭಂಗಿಯಲ್ಲಿ .. ಮನೆಗೆ ಗೊತ್ತಿಲ್ಲದಂತೆ ಕ್ಲಬ್ಬಲ್ಲಿ ಹೋಗಿ ಒಂದೆರಡು ರೌಂಡ್ ಪೆಗ್ಗು ಹಾಕಲೂ, ಕೆಲಸದ ನೆಪ ಹೇಳಿ ‘ಸುಳ್ಳಾಫೀಸಾಸನ’ ಹಾಕಬೇಕು… ಇಷ್ಟವಿರಲಿ ಬಿಡಲಿ, ಬಾಸಿಗೆ ಮೆಚ್ಚಿಸಲು ‘ಮಸ್ಕಾಸನ’, ಆಫೀಸಿನಲ್ಲಿ ಹೇಗೊ ಸಮಯ ದೂಡಲು ‘ಮೀಟಿಂಗಾಸನ’, ಸಹೋದ್ಯೋಗಿಗಳ ಕಾಲೆಳೆಯುವ ‘ಚಾಡಿಯಾಸನ’, ಲೆಕ್ಕ ಪರಿಶೋಧಕರ ಕೈಗೆ ಸಿಗದೆ ನುಣುಚಿಕೊಳ್ಳಲು ‘ಆಡಿಟ್ಟಾಸನ’, ಬೇಡದ ಕೆಲಸದಿಂದ ಜಾರಿಕೊಳುವ ‘ನುಣುಚಾಸನ’ – ‘ಬಾಸಾಸನ’, ‘ಬೋನಸ್ಸಾಸನ’, ‘ಇನ್ಕ್ರಿಮೆಂಟಾಸನ’,’ಹಲ್ಲು ಗಿಂಜಾಸನ’, ‘ಕೆಂಗಣ್ಣಾಸನ’ – ಹೀಗೆ ಒಂದಲ್ಲ ಒಂದು ಆಸನ ಹಾಕುತ್ತಲೆ ಇರಬೇಕು ಸಾರ್..’

‘ಸದ್ಯ, ಬರಿ ಮನೆ, ಆಫೀಸಿಗೆ ಮಾತ್ರ ಸೀಮಿತವಾಗಿದೆಯಲ್ಲಾ ನಿನ್ನ ಆಸನಗಳ ಪಟ್ಟಿ… ಮಕ್ಕಳ ಸ್ಕೂಲಿಗೂ ಸೇರಿಸಿಬಿಡುತ್ತಿಯೇನೊ ಅಂದುಕೊಂಡುಬಿಟ್ಟಿದ್ದೆ..!’

‘ ಅರೆರೆ.. ಸ್ಕೂಲಿಗೆ ಯಾರು ಸಾರ್ ಇಲ್ಲಾ ಅಂದಿದ್ದು? ಅಲ್ಲೂ ಹೋಂವರ್ಕ್ನಿಂದ ತಪ್ಪಿಸಿಕೊಳ್ಳಲು ಮಕ್ಕಳ ‘ಕಳ್ಳಾಸನ’, ಕದ್ದು ಸಿನಿಮಾಗೆ ಹೋಗುವ ‘ಚಕ್ಕರಾಸನ’, ಕಿರಿಯ ವಿದ್ಯಾರ್ಥಿಗಳನ್ನು ಗೋಳು ಹಾಕಿಕೊಳ್ಳುವ ‘ರ್ಯಾಗಿಂಗಾಸನ – ‘ಪರೀಕ್ಷಾಸನ’, ‘ಪಾಸಾಸನ’, ‘ಫೇಲಾಸನ’ ಅಂತೆಲ್ಲ ಅಲ್ಲೂ ಹಲವಾರು ಬಗೆಯ ಆಸನಗಳಿವೆ ಬಿಡಿ.. ಹಾಗೆ ನೋಡಲು ಹೋದರೆ ಇಡೀ ಜೀವನ ಒಂದು ‘ನಿತ್ಯ ಸತಾಯ್ಸಾಸನ’ ಸಾರ್..’

ನನಗೆ ಮೆಲ್ಲಗೆ ತಲೆ ‘ಧಿಂ’ ಅನಿಸಲು ಶುರುವಾಗಿತ್ತು. ಅದು ತಲೆ ಚಿಟ್ಟು ಹಿಡಿಯುತ್ತಿದೆಯೆನ್ನುವುದರ ಮೊದಲ ಹಂತದ ಸೂಚನೆ. ಇನ್ನು ಪೂರ್ತಿ ಚಿಟ್ಟು ಹಿಡಿಯುವ ತನಕ ಅವನು ಬಿಡುವುದಿಲ್ಲವೆಂದರಿವಾಗಿ ‘ಅಯ್ಯೊ ಶಿವನೆ…!’ ಎಂದು ಉದ್ಗರಿಸಿಕೊಂಡೆ ಸ್ವಾನುಕಂಪದಿಂದ. ಅದನ್ನು ಅವನ ಮಾತಿಗೆ ಪ್ರತಿಕ್ರಿಯೆಂಬಂತೆ ಭಾವಿಸಿದ ಗುಬ್ಬಣ್ಣ,

‘ಇಷ್ಟಕ್ಕೆ ಶಿವನನ್ನು ಯಾಕೆ ಕರಿತೀರಿ ಬಿಡಿ ಸಾರ್.. ಇನ್ನು ಲಿಸ್ಟ್ ಮಾಡುತ್ತಾ ಹೋದರೆ ಅದಕ್ಕೆ ತ್ರಿಮೂರ್ತಿಗಳನ್ನೆಲ್ಲ ಒಟ್ಟಾಗಿ ಕರೆಯಬೇಕೊ, ಏನೊ? …….. ಹೀಗೆ ಒಂದಲ್ಲ ಒಂದು ಆಸನ ಹಾಕಿಕೊಂಡು ಹೋಗುತ್ತಲೆ ಇರಬೇಕು ಸಾರ್, ಜೀವನದ ಉದ್ದಕ್ಕೂ..’ ( *ಸೂಚನೆ: ಈ ಹಂತದಲ್ಲಿ ಗುಬ್ಬಣ್ಣ ಮತ್ತಷ್ಟು ಆಸನಗಳ ಕಂತೆಯ ಬ್ರಹ್ಮಾಸ್ತ್ರ ತೆಗೆದು ಒಂದೆ ಸಮನೆ ವಾಗ್ಧಾಳಿ ಮಾಡತೊಡಗಿದ ಕಾರಣ ನನ್ನ ತಲೆ ನೋವು ಇನ್ನಷ್ಟು ಪಟ್ಟು ಅಧಿಕವಾಗುತ್ತ ಹೋಯ್ತು.. ಆ ಗೋಳು, ಅದನ್ನು ಓದಿದ ನಿಮಗೆಲ್ಲರಿಗು ಬರುವುದು ಬೇಡವೆಂದು ಮೊದಲೆ ಕತ್ತರಿಯಾಡಿಸಿ ‘ಸೆನ್ಸಾರು’ ಮಾಡಿಬಿಟ್ಟಿದ್ದೇನೆ.. ಆದರೆ ಓದಲೆಬೇಕೆಂಬ ಹಠದಿಂದ ತಲೆ ನೋವು ಬರಿಸಿಕೊಳ್ಳಲು ಉತ್ಸುಕರಿರುವ ವಿಶೇಷ ಗ್ರಾಹಕರು ಕೊನೆಯ ಟಿಪ್ಪಣಿ / ಉಪಸಂಹಾರದ ಪ್ಯಾರದಲ್ಲಿರುವ ವಿವರವನ್ನು ನೋಡಬಹುದು. ಅಲ್ಲಿಂದ ಮುಂದಾಗುವ ಯಾವುದೆ ಅನಾಹುತಕ್ಕು ಗುಬ್ಬಣ್ಣನಾಗಲಿ, ನಾನಾಗಲಿ ಜವಾಬ್ದಾರರಲ್ಲ ಎಂದು ವಿನಮ್ರವಾಗಿ ಸೂಚಿಸುತ್ತೇನೆ – ಲೇಖಕ!)

ಹೀಗೆ ಅವನ ‘ಲಿಸ್ಟಾಸನ’ ಇನ್ನು ಎಷ್ಟು ಉದ್ದಕ್ಕೆ ಬೆಳೆಯುತ್ತ ಹೋಗುತ್ತಿತ್ತೊ ಏನೊ, ಆ ಹೊತ್ತಿಗೆ ಸರಿಯಾಗಿ ಅವನ ಕೈಲಿದ್ದ ಮೊಬೈಲು ಗುಣುಗುಣಿಸತೊಡಗಿ ಕೊಂಚ ನಿರಾಳವಾಯ್ತು – ಹೀಗಾದರೂ ಅವನ ರೀಲಿನ ರೈಲಿಗೆ ಬ್ರೇಕ್ ಬಿತ್ತಲ್ಲ ಅನಿಸಿ. ಅತ್ತ ಕಡೆಯಿಂದ ದನಿ ಕೇಳುತ್ತಿದ್ದಂತೆ ಬದಲಾಗತೊಡಗಿದ ಅವನ ಮುಖ ಚಹರೆಯನ್ನು ಕಂಡಾಗಲೆ ಅದು ‘ಸತಿ-ಸಿಟ್ಟಾಸನ’ವೆ ಇರಬೇಕೇನಿಸಿತು. ಮಾತಿಗಿಂತ ಹೆಚ್ಚು ಕಪ್ಪಿಡುವ ಮೊಗದ ವಿವರ್ಣತೆಯನ್ನು ಗಮನಿಸುತ್ತಲೆ, ‘ಏನಯ್ಯ , ಮುಖದಲ್ಲಿ ಇಷ್ಟೊಂದು ಬೆವರು? ‘ನೀರಿಳಿಸಾಸನ’ವಿದ್ದಂತಿದೆಯಲ್ಲ?’ ಎಂದೆ ಛೇಡನೆಯ ದನಿಯಲ್ಲಿ. ಮೊದಲೆ ‘ಪೆಚ್ಚಾಸನ’ ಹಾಕಿದ್ದ ಮೊಗದಲ್ಲೊಂದು ಪೆಚ್ಚು ನಗೆ ಹಾಕುತ್ತ ಗುಬ್ಬಣ್ಣ, ‘ ಮನೆಗ್ಯಾರೊ ಬರುವ ಪ್ರೋಗ್ರಾಮ್ ಇದೆಯಂತೆ ಸಾರ್.. ಅದಕ್ಕೆ ತರಕಾರಿ, ದಿನಸಿ ಜತೆ ಬೇಗನೆ ಬನ್ನಿ ಅಂತ ‘ಬುಲಾವ್’….’

‘ಅಂದರೆ ‘ಗೆಸ್ಟಾಸನ’ ಕ್ಕೆ ಸಿದ್ದತೆ ಮಾಡಲು ‘ಬುಲಾವಾಸನ’ ಅಂದ ಹಾಗಾಯ್ತು… ಅಂದ ಹಾಗೆ ಗುಬ್ಬಣ್ಣ ಅತಿಥಿಗಳ ಕುರಿತಾದ ‘ಆಸನ’ಗಳ ಬಗ್ಗೆ ಹೇಳಲೆ ಇಲ್ಲವಲ್ಲೊ…?’

‘ ಸಾರ್.. ಅದನ್ನು ಇನ್ನೊಂದು ದಿನಕ್ಕಿಟ್ಟುಕೊಳ್ಳೋಣ.. ಈಗ ನಾನು ತಕ್ಷಣಕ್ಕೆ ಹೊರಡದಿದ್ದರೆ, ‘ಎಡವಟ್ಟಾಸನ’ದ ಸುಳಿಗೆ ಸಿಕ್ಕಿ ‘ಪತಿ-ಮದ ಮರ್ದನಾಸನ’ದ ಹೆಸರಲ್ಲಿ ಮುಸುರೆ ತಿಕ್ಕುವುದರಿಂದ ಹಿಡಿದು ಎಲ್ಲಾ ಕೈಂಕರ್ಯ ಮಾಡಬೇಕಾಗುತ್ತದೆ, ‘ಸತಿ-ಶಾಂತಾಸನ’ದ ಸಲುವಾಗಿ’ – ಎಂದವನೆ ಸಾಮಾನಿನ ಬ್ಯಾಗೆತ್ತಿಕೊಂಡು ದೌಡಾಯಿಸಿಬಿಟ್ಟ ಗುಬ್ಬಣ್ಣ, ‘ಸತಿ-ಕೈಂಕರ್ಯಾಸನ’ದ ಅವಸರದಲ್ಲಿ…

ನಾನು, ಹೋಗಬೇಕೆಂದಿದ್ದ ಯೋಗಾಸನದ ಕ್ಲಾಸನ್ನು ಮರೆತು, ತಲೆನೋವಿನ ಮಾತ್ರೆ ಹುಡುಕಲು ಮೇಲೆದ್ದೆ – ‘ನಿರಾಳಾಸನದ’ಲ್ಲಿ !

(ಶುಭಂ)
ಉಪಸಂಹಾರ / ಟಿಪ್ಪಣಿ :

ಇದುವರೆಗು ತಲೆನೋವಿನ್ನೂ ಬರದಿದ್ದವರು, ಈ ಮಿಕ್ಕ ‘ಸೆನ್ಸಾರಿತ’ ಭಾಗವನ್ನು ಓದಿ ತಲೆ ಕೆಡಿಸಿಕೊಳ್ಳಬಹುದು ಅವರವರ ನಿರೋಧಿ ಶಕ್ತ್ಯಾನುಸಾರ!
(*ಪಡ್ಡೆ ಹುಡುಗರ – ‘ಗುರಾಯ್ಸಾಸನ’, ‘ ಲೈನಾಸನ’, ‘ಡವ್ವಾಸನ’ , ‘ಲವ್ವಾಸನ’, ಸಿನಿಮಾಗಳಲ್ಲಿನ – ‘ಡ್ಯುಯೆಟ್ಟಾಸನ’, ‘ಗಾನಾಸನ’, ‘ಮರ ಸುತ್ತಾಸನ’, ‘ಫೈಟಾಸನ’, ‘ಛೇಸಾಸನ’, ಗರ್ಲ್ಪ್ರೆಂಡುಗಳೊ ಅಥವ ಹುಡುಗಿಯರ ಜತೆ ಶೋಆಫ್ ಮಾಡಿಕೊಳ್ಳುವ ಹುನ್ನಾರದ – ‘ರೆಸ್ಟೋರೆಂಟಾಸನ’, ‘ಸುತ್ತಾಸನ’, ‘ಗಿಫ್ಟಾಸನ’, ಜಂಕುಪುಡ್ಡುಗಳ ಜಗದ – ‘ಪೀಡ್ಜಾಸನ’, ‘ಬರ್ಗರಾಸನ’, ‘ಫ್ಯಾಟಾಸನ’ , ತಿಂದ ಕೊಬ್ಬರಗಿಸಲು ನಡೆಸುವ – ‘ಜಾಗಾಸನ’, ‘ವಾಕಾಸನ’, ‘ಜಿಮ್ಮಾಸನ’, ‘ಏರೋಬಿಕ್ಸಾಸನ’, ಕುಡಿದು ತೂರಾಡುವ ಕುಡುಕರ ಪ್ರಪಂಚದಲ್ಲಿನ – ‘ಬೀರಾಸನ’, ‘ವಿಸ್ಕಾಸನ’, ‘ಜಿನ್ನಾಸನ’, ‘ಗುಂಡಾಸನ’, ‘ಟೈಟಾಸನ’, ರಾಜಕಾರಣಿಗಳಾಟದ – ‘ಪುಂಡಾಸನ’, ‘ಗಡವಾಸನ’, ‘ಓಟಾಸನ’, ‘ಚಿಕನಾಸನ’, ‘ಪ್ಯಾಕೆಟ್ಟಾಸನ’ – ಹೀಗೆ ಯಾವುದರಲ್ಲಿ ತಾನೆ ಇಲ್ಲಾ ಹೇಳಿ ಸಾರ್ ಆಸನಗಳು? ‘ಸಿಕ್ಕಾಸನ’ದ ಚಿಕಿತ್ಸೆಗಳಲ್ಲು – ‘ದವಾಖಾನಾಸನ’, ‘ವೈದ್ಯಾಸನ’, ‘ಹೈಟೆಕ್ಕಾಸನ’, ‘ಹಾಸ್ಪಿಟಲಡ್ಮಿಟ್ಟಾಸನ’, ‘ಲ್ಯಾಬ್ (ಸಹಸ್ರ) ಟೆಸ್ಟಾಸನ’, ‘ ಸಂಪೂರ್ಣ ಚೌರಾಸನ’ ಅಂತೆಲ್ಲ ಬಂದುಬಿಟ್ಟಿವೆ… ಇನ್ನು ಅಕ್ಕಪಕ್ಕದವರ, ನೆಂಟರಿಷ್ಟರ ಮತ್ಸರದಿಂದ ಆಗೊ – ‘ಕಣ್ಣಾಕಾಸನ’, ‘ಗೂಢ-ಶಾಪಾಸನ’, ‘ಕಾಲೆಳೆಯಾಸನ’, ಸಾಲ ಕೊಟ್ಟು ತೆಗೆದುಕೊಳ್ಳುವವರ – ‘ಹನುಮಂತಾಸನ’, ‘ಕೋಡಂಗಾಸನ’, ‘ವೀರಭದ್ರಾಸನ’, ‘ಮೋಸಾಸನ’, ‘ಕಿಕ್ಕಾಸನ’, ಜೀವನವಿಡಿ ದುಡಿದು ಮನೆ, ಮಡದಿ, ಮಕ್ಕಳು ಎಂದು ಹೆಣಗುವ ಜನರ – ‘ಸೈಟಾಸನ’, ‘ಹೌಸಾಸನ’, ಫ್ಲಾಟಾಸನ’, ‘ಲೋನಾಸನ’, ‘ಪೇಯ್ನಾಸನ’, ವರ್ಗ ಭೇಧದ – ‘ಶ್ರಿಮಂತಾಸನ’, ‘ಬಡವಾಸನ’, ‘ಗೃಹಸ್ತಾಸನ’, ‘ಸನ್ಯಾಸಾಸನ’ , ‘ಬ್ರಹ್ಮಚರ್ಯಾಸನ’ ಅಷ್ಟೇಕೆ ಕೊನೆಗೆ ಸಾವಿನಲ್ಲೂ ಬಿಡದ – ‘ಸಾವಾಸನ’, ‘ಗೋತಾಸನ’ )

ಗುಬ್ಬಣ್ಣ, ಯೋಗ, ಯೋಗಾಸನ, ದಿನಾಚರಣೆ, ಜೂನ್, ಇಪ್ಪತ್ತೊಂದು, ನಾಗೇಶ, ಮೈಸೂರು, ನಾಗೇಶಮೈಸೂರು, Nagesha, mysore, nageshamysore

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s