00324. ‘ಹೋಮ್ ಸ್ವೀಟ್ ಹೋಮ್..!’

00324.’ಹೋಮ್ ಸ್ವೀಟ್ ಹೋಮ್..!’

ಜಗದೆಲ್ಲೆಡೆ ಸುತ್ತಿ ಬಂದರು ಕೊನೆಯಲ್ಲಿ ಮನೆಯನ್ನು ಬಿಟ್ಟರಿಲ್ಲ ಎನ್ನುವುದು ಸತ್ಯದ ಮಾತೆ. ಅದರಲ್ಲೂ ವ್ಯವಹಾರ ನಿಮಿತ್ತ ಊರೆಲ್ಲ ಸುತ್ತುವ ಹಣೆಬರಹದವರಿಗೆ ಊರಿಗೊಂದೆಂಬಂತೆ ಹೋಟೆಲು ರೂಮಿನಲ್ಲಿ ತಂಗುವ ಅನಿವಾರ್ಯದಿಂದಾಗಿ ಮನೆಯ ತಪನೆ ಇನ್ನೂ ಹೆಚ್ಚು ಕಾಡುವುದು ಸಾಮಾನ್ಯ ವಿಷಯವೆ. ವಿಚಿತ್ರವೆಂದರೆ ಈ ಹೋಟೆಲು ತಂಗುವಿಕೆಯಲ್ಲಿ ಮಾಮೂಲಿ ಮನೆಯಲ್ಲಿರುವುದಕ್ಕಿಂತ ಹೆಚ್ಚು ಸೌಕರ್ಯ, ಐಷಾರಾಮಿ ವೈಭೋಗಗಳು, ಶಿಸ್ತು, ಅಚ್ಚುಕಟ್ಟುಗಳ ಜತೆಗೆ ಮೇಳೈಸಿಕೊಂಡು ಒಂದು ರೀತಿಯ ರಾಜೋಪಚಾರ ಸಿಕ್ಕುವುದರಿಂದ ಮನಸಿಗೆ ಹೆಚ್ಚು ಪ್ರಿಯವಾಗಬೇಕು. ಸಾಲದ್ದಕ್ಕೆ ಗುಡಿಸಬೇಕಿಲ್ಲ, ತೊಳೆದು ಬೆಳಗುವ ಗೋಜಿಲ್ಲ, ಅಡುಗೆ ಮಾಡಬೇಕೆನ್ನುವ ತಪನೆಯಿಲ್ಲ ಎಂಬೆಲ್ಲ ಕಾರಣಕ್ಕೆ ಆತ್ಮೀಯವಾಗಬೇಕು. ಆದರೆ ಆ ಅದ್ದೂರಿತನ, ವೈಭವದ ‘ವಾಹ್’ ಅನುಭೂತಿ ಕೇವಲ ಮೊದಮೊದಲಷ್ಟೆ ಪ್ರಸ್ತುತ. ನಿಧಾನವಾಗಿ ಆ ನಾಲ್ಕು ಗೋಡೆಯ ಯಾಂತ್ರಿಕತೆ ಆವರಿಸಿಕೊಂಡು , ಅದು ಮೊದಲ ನೋಟದಲುಂಟುಮಾಡಿದ್ದ ಮಾಂತ್ರಿಕತೆಯ ಉನ್ಮೇಷವನ್ನಳಿಸಿ ಮನವನ್ನು ಜಡ್ಡುಗಟ್ಟಿಸತೊಡಗುತ್ತದೆ. ಆ ಶಿಸ್ತು, ವ್ಯವಸ್ಥಿತ ರೀತಿಯೆ ಬೋರು ಹೊಡೆಸುವ ದೈನಂದಿನ ಪ್ರಕ್ರಿಯೆಯಾದಾಗ ನೆನಪಾಗುವುದು – ಬಿಟ್ಟು ಬಂದ ಮನೆಯ ಚಿತ್ರ. ಆ ಅಸ್ತವ್ಯಸ್ತ ಚೆಲ್ಲಾಡಿದ ವಸ್ತುಗಳ ನಡುವೆ ಸೋಮಾರಿತನದಿಂದ ಮುಸುಕೊದ್ದು ಮಲಗುವ ನಿರುಪಯೋಗಿ ಕೆಲಸವೆ ಎಷ್ಟೊ ಪ್ರಿಯವಾದ, ಆತ್ಮೀಯವಾದ ಅಪ್ಯಾಯತೆಯೆನಿಸಿ ಮನ ಮನೆಯತ್ತ ತುಡಿಯತೊಡಗುತ್ತದೆ. ಪಯಣ ಮುಗಿಸಿ ಹಿಂದಿರುಗಿ ಆ ಅರೆಬರೆ ಅಚ್ಚುಕಟ್ಟಿನ ಒಳಗೆ ಕಾಲಿಡುತ್ತಿದ್ದಂತೆ ನಿರಾಳತೆಯ ಭಾವ; ಪರಿಚಿತ ವಾತಾವರಣದಲ್ಲಿ ಏನೊ ಹಾಯೆನಿಸುವ ಅನುಭವ. ಬಹುಶಃ ಸ್ವತಃ ಪರಿಪೂರ್ಣ – ಪರಿಪಕ್ವವಲ್ಲದ ಮನಕ್ಕೆ ಅರೆಬರೆ ಪಕ್ವ ವಾತಾವರಣವೆ ಆತ್ಮಸಖನೇನೊ? ಮಿಕ್ಕೆಲ್ಲಾ ಕೇವಲ ಕ್ಷಣಿಕ ಚಿತ್ತ ಚಾಂಚಲ್ಯಗಳಷ್ಟೆ. ಅದೆ ಭಾವವನ್ನು ಬಿಂಬಿಸುವ, ಪ್ರಸ್ತಾವಿತ ಕವನ ‘ಅಚ್ಚುಕಟ್ಟು – ಅಸ್ತವ್ಯಸ್ತ’

ಅಚ್ಚುಕಟ್ಟು – ಅಸ್ತವ್ಯಸ್ತ
______________________________

ಯಾರು ಬದುಕುತ್ತಾರಪ್ಪ ಪ್ರತಿದಿನ
ಈ ಅಚ್ಚುಕಟ್ಟಿನ ಉಸಿರುಗಟ್ಟುವ ಜಾಗ
ಹತ್ತಡಿಯುದ್ದ ಅಗಲದ ಸ್ವಚ್ಚ ಶುದ್ಧ
ಕೊಠಡಿಯೊಳಗಿನದೆಲ್ಲ ಫಳಫಳ.. ||

ಯಾರೊ ಬಂದೆ ಬರುತ್ತಾರೆ ದಿನವೂ
ಗಿರಾಕಿಗಳೆ ಬದಲಾಗುವ ಖದರು
ಬರುವ ಮುನ್ನ ಬಂದಾಗ ತದನಂತರ
ದಂಡು ದಂಡಾಗಿ ಬೆಳಗಿ ತೊಳೆವ ಆಟ ||

ಸುಸ್ತಾಗಿ ಬಂದವರೆ ಸುಸ್ತು ಹೊಡೆದು
ಬೆಕ್ಕಸ ಬೆರಗಾಗುತ ಅಂದ ಚಂದಕೆ
ತಲೆದೂಗೊ ಪರಿ ಮೊದಲೆರಡು ದಿನ
ಬೋರಾಗುವ ಚಿತ್ರ ಮಿಕ್ಕೆಲ್ಲ ಅನುಮಾನ ||

ಮುಖವಾಡ ಲೇಪನ ಶೃಂಗರಿತ ಪರಿ
ಕೃತಕತೆಯ ಹೆಗ್ಗಳಿಕೆ ಮರುಕಳಿಸುತ್ತ
ಸಹಜಕೆ ತೊಡಿಸಿದ ಬೇಡಿ ಮುಜುಗರ
ನಮ್ಮನೆ ಮೀರಿದ ಪಕ್ವತೆ ಅಳುಕಿನ ಭಾರ ||

ಅಲ್ಲಲ್ಲಿ ಚೆಲ್ಲಾಡಿ ಬಿದ್ದ ಬಟ್ಟೆ ಬರೆ ಪುಸ್ತಕ
ಮಡಿಸಿ ಗುಡಿಸಲು ಕಾದ ಹೊದಿಕೆ ನೆಲ
ಮಿಕ್ಕ ಸೋಮಾರಿತನ ತುಸು ಅಸ್ತವ್ಯಸ್ತ
ಮನೆಯೆ ವಾಸಿ, ಭಾರಿ ಹೋಟೆಲಿಗಿಂತ! ||

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s