00327. ಲಿಸ್ಟ್ ಮ್ಯಾನೇಜರು!

00327. ಲಿಸ್ಟ್ ಮ್ಯಾನೇಜರು!
_____________________

ನಮ್ಮ ಬಹುತೇಕ ಜನರ ಬದುಕಿನಲ್ಲಿ ಈ ಲಿಸ್ಟ್ ಮ್ಯಾನೇಜರುಗಳ ಪಾತ್ರ ಅನಿವಾರ್ಯವೆಂದು ಕಾಣುತ್ತದೆ. ಯಾಕೆಂದರೆ, ಮನೆವಾರ್ತೆಯ ಜವಾಬ್ದಾರಿ ಹೊತ್ತವರು ಅದನ್ನು ನಿಭಾಯಿಸಲು ಬೇಕಾದ ಸರಕಿನ ಪಟ್ಟಿ ತಯಾರಿಸುವುದು ನಮ್ಮಲ್ಲಿ ಎಂದಿನಿಂದಲೊ ನಡೆದುಬಂದ ಅಭ್ಯಾಸ. ಅದರಲ್ಲು ಗಂಡನೆಂಬ ಪ್ರಾಣಿಯ ನೆನಪಿನ ಶಕ್ತಿಯ ಮೇಲೆ ಅಪಾರ ಅನುಮಾನ, ಅಪನಂಬಿಕೆಗಳಿರುವ ಸತೀ ಮಣಿಗಳಿಗಂತು ಇದು ತುರ್ತಾದ ಅಗತ್ಯ. ಈಗಿನ ಆಧುನಿಕ ಯುಗದಲ್ಲಿ ಇಬ್ಬರೂ ಕೆಲಸ ಮಾಡಿಕೊಂಡು, ಇಬ್ಬರು ಹೊಣೆಗಾರಿಕೆ ಹಂಚಿಕೊಳ್ಳುವುದು ಸಹಜವಾದ ಕಾರಣ ಇದರ ಹೊಣೆ ಒಬ್ಬರ ಪಾಲಿಗೆ ಹೊರಿಸಲ್ಪಡದಿದ್ದರು, ಇಬ್ಬರಲ್ಲಿ ಯಾರಿಗೆ ಅದಕ್ಕೆ ಬೇಕಾದ ಚಾತುರ್ಯ, ಚತುರತೆ ಇರುವುದೊ ಅವರ ಪಾಲಿಗೆ ವಹಿಸಲ್ಪಡುವುದು ಅಪರೂಪವೇನಲ್ಲ. ಹೀಗಾಗಿ ತರಕಾರಿ, ದಿನಸಿಯಿಂದ ಹಿಡಿದು ಮಿಕ್ಕೆಲ್ಲಾ ತರದ ಕೆಲಸಗಳಿಗು ವಾರದ ಕೊನೆಯ ‘ಚೆಕ್ ಲಿಸ್ಟ್’ ಹಾಕಿಕೊಂಡು ಅಲೆದಾಡುವ ಮಂದಿ ಆಗಲೂ ಇದ್ದಂತೆ ಈಗಲೂ ಇದ್ದಾರೆ – ಕೈಲಿರುವ ಟ್ಯಾಬು ಮೊಬೈಲುಗಳೆ ಚೆಕ್ ಲಿಸ್ಟುಗಳಾಗುವ ಅಲ್ಪ ವ್ಯತ್ಯಾಸ ಬಿಟ್ಟರೆ.

ತುಸು ಹಳತಿನ ಕಾಲದ ಗೃಹಿಣಿಯರ ಪೇಪರ್ ಚೆಕ್ ಲಿಸ್ಟ್ ಮ್ಯಾನೇಜ್ಮೆಂಟು – ಸಾಧಾರಣ ತಿಂಗಳಿಗೊಮ್ಮೆಯ ವ್ಯವಹಾರ. ತದನಂತರದ್ದು ಏನಿದ್ದರು ದೈನಂದಿನ ಸಣ್ಣಪುಟ್ಟ ಸರಕುಗಳ ನಿಭಾವಣೆಯಷ್ಟೆ. ಆದರೆ ಎಲ್ಲರೂ ನಿಷ್ಠೆಯಿಂದ ವ್ಯವಸ್ಥಿತವಾಗಿ, ಯೋಜನಾಬದ್ಧವಾಗಿ ತಮ್ಮ ತಿಂಗಳ ಲಿಸ್ಟ್ ತಯಾರಿಸುವುದಿಲ್ಲ. ಕೆಲವರಂತು ಗಳಿಗೆಗೊಮ್ಮೆ, ಗಂಟೆಗೊಮ್ಮೆ ಮನಸಿಗೆ ಬಂದದ್ದನ್ನು ಬರೆದು ಗಂಡನೆಂಬ ಪ್ರಾಣಿ ಯಾವಾಗ ಹೊರಗೆ ಹೊರಟೀತೊ? ಎಂದು ಜಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ – ಲಿಸ್ಟನ್ನು ಕೈಗಿತ್ತು ಕೈ ತೊಳೆದುಕೊಳ್ಳಲು…! ಪಾಪ ವಾಕಿಂಗೊ, ವಾಯು ವಿಹಾರವೊ, ಗೆಳೆಯರ ಜತೆ ಭೇಟಿಯೊ ಎಂದು ಹೊರಟವರಿಗೆ ಅವರ ಸ್ವಾತಂತ್ರವನ್ನು ನಿರ್ಬಂಧಿಸಿ, ಯೋಜನೆಯೆಲ್ಲವನ್ನು ಬುಡಮೇಲಾಗಿಸುವ ಈ ಕಿರು ಪಟ್ಟಿಗಳೆಂದರೆ ವಿಪರೀತ ಕೋಪ, ಅಲರ್ಜಿ; ಒಂದೆ ಬಾರಿಗೆ ಕೊಟ್ಟು ಮುಗಿಸಬಾರದೆ ಎನ್ನುವ ರೋಷವೆ ಅದರರ್ಧದಷ್ಟಿರುತ್ತದೆ! ಸಾಲದ್ದಕ್ಕೆ ನಡುದಾರಿಯಲ್ಲಿ ಸೇರ್ಪಡೆಯಾಗುವ ಮತ್ತಷ್ಟು ಐಟಂಮುಗಳು – ಹಾಳು ಮೊಬೈಲು ದೆಸೆಯಿಂದಾಗಿ…! ಅಷ್ಟಾದರೂ ಮನೆಗೆ ಬಂದ ಮೇಲೆ ಮರೆತುಬಿಟ್ಟ ಮತ್ತಷ್ಟು ಸಾಮಾನುಗಳ ಪಟ್ಟಿಯ ಗೊಣಗಾಟ.. ಹೀಗಾಗಿ ಈ ಲಿಸ್ಟ್ ಮ್ಯಾನೇಜರುಗಳ ಉದ್ದೇಶವೆ ತಮ್ಮ ಮನಶ್ಯಾಂತಿ, ಯೋಜನಾಬದ್ದ ಕ್ರಮವನ್ನು ಹಾಳುಗೆಡವಿ ಅಲ್ಲೊಲ್ಲಕಲ್ಲೊಲವಾಗಿಸುವುದೆ ಇರಬೇಕೆಂಬ ಗುಮಾನಿ ಮೂಡಿಸಿ ಅವರ ಮೇಲಿನ ವಿಪರೀತ, ಅಘೋಷಿತ ರೋಷವಾಗಿ ಬದಲಾಗುವುದು ಸಹಜವೆ. ಆದರೆ ಅನ್ನದೆ ಅನುಭವಿಸಬೇಕಾದ ಅನಿವಾರ್ಯಗಳಲ್ಲಿ ಇದೂ ಒಂದಾಗಿಬಿಡುತ್ತದೆ – ಸುಮ್ಮನೆ ಪರಸ್ಪರ ದೋಷಾರೋಪಣೆ, ಚರ್ಚೆಗಿಳಿಯುವ ಮನಸಾಗದೆ. ಅಂತಹ ಲಿಸ್ಟ್ ಮ್ಯಾನೇಜರಿಕೆಯೊಂದರ ‘ಸ್ನಾಪ್ ಶಾಟ್’ ಈ ಕವನ. ನಿಮ್ಮ ಮನೆಯಲ್ಲೂ ಇಂತಹ ಲಿಸ್ಟ್ ಮ್ಯಾನೇಜರುಗಳಿರಬಹುದು – ಓದಿ ಆನಂದಿಸುವುದು ಮಾತ್ರವಲ್ಲದೆ, ಅವರಿಗೆ ಕೇಳಿಸಿಯೂ ಆನಂದಿಸಬಹುದು – ಸೂಕ್ತ ರಕ್ಷಾಕವಚದ ಸುರಕ್ಷೆಯೊಡನೆ 🙂

ಲಿಸ್ಟ್ ಮ್ಯಾನೇಜರು!
___________________

ಮನೆಯಲೊಂದು ನಿತ್ಯ ಪ್ರೆಷರ್ರು ಕುಕ್ಕರು
ಸರ್ವದಾ ಸಿದ್ದ ಲಿಸ್ಟು ಮ್ಯಾನೇಜರು
ಗಳಿಗೆಗೊಂದು ಗಂಡಾಂತರ ಸರಕು
ನೆನಪಾದಂತೆಲ್ಲ ಉರುಳಿ ಧಿಮಾಕು ||

ವಾಕಿಂಗೊ ವಾಯು ಸೇವನೆಗೊ
ಪಾರ್ಕಿಗೊ ಸಮಸ್ಕರ ಜತೆ ಭೇಟಿಗೊ
ಸುಳಿವು ಸಿಕ್ಕರೆ ಸಾಕು ಹೊರಡೊ ಸಿದ್ದತೆ
ಸದ್ದಿಲ್ಲದೆ ಉಸುರುತ ಸಾಮಾನಿನ ಕಂತೆ ||

ಮಾತ ಬಿನ್ನಾಣ, ಆದರೆ ತನ್ನಿ ಅನ್ನೋಣ
ಬೆಣ್ಣೆಯ ಕೂದಲು, ಬೀಳದಂತೆ ಹೆಣ
ಮೊದಲ ಸಾಲಲ್ಲುದುರಿ ಒಂದೆರಡು
ಕೇಳಿಯೂ ಕೇಳಿಸದಂತೆ ಜತೆಗ್ಹನ್ನೆರಡು ||

ಹಾಳಾಗಲಿ ಅಸ್ತವ್ಯಸ್ತ ಪಥ ಯೋಜನೆ
ಗತವಾಗಿ ಸಿದ್ದತೆ ಕಾರ್ಯಗತವಾಗದ ಬವಣೆ
ಸರಕಂಗಡಿ ಬೀದಿ ಸೇವಿಸಲೆಲ್ಲಿ ಮೋದ
ಹಾಳು ಪೆಟ್ರೋಲು ಇಂಗಾಲದಿಬ್ಬನಿ ಶೋಧ ||

ಹಣೆಬರಹ, ಗೊಣಗಿ ಸುಖವಿಲ್ಲ – ಅನುಭವ
ಕೈ ಚೀಲ ಹಿಡಿದು ನಡೆವಲ್ಲೆ ಕುಸಿದ ಭಾವ
ಹೇಗೊ ಎಂತೊ ಮುಗಿಸಿ ಒಪ್ಪಿಸಿರೆ ಚೀಲ
ಹೇಳಲೆ ಮರೆತೆ ಎಂದು ಮತ್ತೆರಡರ ಬಾಲ! ||

——————————————————————–

ನಾಗೇಶ ಮೈಸೂರು, ಸಿಂಗಪುರ
——————————————————————–

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s