00328. ಕುಡುಕರ ರಾಜ್ಯದ ‘ಕಂಡಲ್ಲಿ ಗುಂಡು’ (ಕುಡುಕರ ಹಾಡು)

00328. ಕುಡುಕರ ರಾಜ್ಯದ ‘ಕಂಡಲ್ಲಿ ಗುಂಡು’ (ಕುಡುಕರ ಹಾಡು)
______________________________________________

ಕಂಡಲ್ಲಿ, ಗುಂಡು, ರಾಜ್ಯ, ಕುಡುಕ, ಕುಡಿತ, ಹಾಸ್ಯ, ನಾಗೇಶ, ಮೈಸೂರು, ನಾಗೇಶ ಮೈಸೂರು, nagesha, mysore, nageshamysore

ಪರಿಸ್ಥಿತಿ ಹದಗೆಟ್ಟು ಕೈ ಮೀರುವಂತಾಗ, ಪಾತಕಿಗಳ ಕಿರುಕುಳ ಅತಿಯಾಗಿ ಅವರ ಇರುವಿಕೆಯೆ ಸಮಾಜದ ಸ್ವಾಸ್ಥ್ಯಕ್ಕೆ ಅಪಾಯಕರ ಎನಿಸಿದಾಗ ಅಂತಹವರ ನಿವಾರಣೆಗಾಗಿ ಪೋಲಿಸರು ಬಳಸುವ ‘ಕಂಡಲ್ಲಿ ಗುಂಡು’ ತರಹದ ಪಾಲಿಸಿ ನೆನಪಾಗುವುದು ಸಹಜ. ಆದರೆ ಸುರಾಪ್ರಿಯರಿಂದ ‘ಗುಂಡು’ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಕುಡುಕರ ಸಂಜೀವಿನಿ ‘ಮದಿರೆ’ಯ ಕತೆಯೆ ಬೇರೆ. ಇಲ್ಲಿ ಕ್ಲಬ್ಬು, ಬಾರು, ಗಡಂಗುಗಳು ಕಂಡಾಗೆಲ್ಲ ‘ಗುಂಡು’ ಹಾಕುವ ಸ್ವೇಚ್ಛೆ ಕುಡುಕ ಬಂಧುಗಳದು. ಕಟ್ಟಾ ಅಭಿಮಾನಿಗಳಿಗಂತು ಅದಕ್ಕೆ ಹಗಲೂ, ಇರುಳೆಂಬ ಪರಿವೆಯೂ ಇರಬೇಕಿಲ್ಲ. ಮಾರುವ ಜಾಗ ತೆರೆದಿದ್ದರೆ ಸರಿ, ಜತೆಗೊಬ್ಬರು ಸಿಕ್ಕರಂತು ಇನ್ನೂ ಸರಿ..! ಅದರಲ್ಲೂ ಪೋಲಿ ಐಕಳ ಗುಂಪುಗಳು ಒಟ್ಟಾಗಿ ಧಾಳಿಯಿಕ್ಕಲು ಹೊರಟುಬಿಟ್ಟರೆ ಮಾತನಾಡುವಂತಿಲ್ಲ. ಈ ಕುಡುಕರ ರಾಜ್ಯದ ‘ಕಂಡಲ್ಲಿ ಗುಂಡು’ ಕುಡಿವ ದಣಿಗಳಿಗೆಷ್ಟು ಅಪಾಯಕರವೊ, ತೆರಿಗೆ ಹಾಕಿ ಆದಾಯದ ಸುಲಭ ದಾರಿ ಮಾಡಿಕೊಳ್ಳುವ ಪ್ರಭೃತಿಗಳಿಗಷ್ಟೆ ಆಪ್ಯಾಯಮಾನಕರ. ಬರಿ ಆಗೀಗೊಮ್ಮೆ ಶಿಷ್ಟಾಚಾರಕ್ಕೆ ಕುಡಿವ ನಡುವರ್ಗದವರು ಈ ಗುಂಪಿಗೆ ಸೇರದವರಾದರು ಅವರು ಆಗಿಗೊಮ್ಮೆ ಗುಂಡೇರಿಸಿ ರಂಗಾಗುತ್ತ ತಮ್ಮ ಕೈಲಾದ ಕರಸೇವೆ ಮಾಡುತ್ತಲೆ ಇರುತ್ತಾರೆ.

ಈ ಕೆಳಗಿನ ಪದ್ಯ ಕಟ್ಟಾ ಮದಿರಾಭಿಮಾನಿಗಳದು – ಕಂಡಲ್ಲಿ ಗುಂಡೇರಿಸುವ ಸಾಹಸಿಗಳ ಕುರಿತು ಹೆಣೆದದ್ದು. ಇಲ್ಲಿ ಕುಡಿತ ಸರಿಯೆ ತಪ್ಪೆ ಅನ್ನುವ ಜಿಜ್ಞಾಸೆಗಿಂತ ಆ ಸಂಧರ್ಭ ಸನೀವೇಶಗಳ ‘ವೈಭವ’ ವರ್ಣನೆಯಷ್ಟೆ ಪರಿಗಣಿತ. ಕುಡುಕರ ಪರವಾಗಿ ಬರೆದದ್ದು ಕಮ್ಮಿ ಎನ್ನುವ ಅಪವಾದಕ್ಕೆ ಎಡೆಗೊಡದಂತಿರಲು ಹೆಣೆದ ಒಂದು ಲಘು ಕವನ. ಓದಿ ಮತ್ತೇರಿದಂತಾದರೆ ಕುಡಿದವರಂತೆ ಖುಷಿ ಪಡಿ – ಆದರೆ ಕಂಡಲ್ಲಿ ಗುಂಡು ಹಾಕಲು ಮಾತ್ರ ಹೋಗಬೇಡಿ. ಅದು ಪಕ್ಕಾ ಕುಡುಕರ ಜನ್ಮ ಸಿದ್ದ ಹಕ್ಕು ಮಾತ್ರ – ನಮ್ಮಾ ನಿಮ್ಮದಲ್ಲ 🙂

‘ಕಂಡಲ್ಲಿ ಗುಂಡು’
______________________________

ಕುಡುಕರಾ ರಾಜ್ಯದ, ಕಾನೂನು ಕಣೊ ಗುಗ್ಗು
ಗುಟ್ಟೂಗಿಟ್ಟೊಂದು ಇಲ್ಲ, ಬಿದ್ದ ಮೇಲೆ ಪೆಗ್ಗು
ಕಟು’ನಿಷ್ಠೆ’, ಗೋಳೆ’ಬಾರ’,’ಪೋಲಿ’ಸ್ ದಂಡು
ಕುಡುಕರದೀ ರಾಜ್ಯದಲ್ಲಿ, ಕಂಡಲ್ಲೆಲ್ಲ ಗುಂಡು! ||

ರಾತ್ರಿಗಷ್ಟೆ ಸ್ವಲ್ಪ ನೈಂಟಿ, ಚಳಿಗಿರಬೇಕಪ್ಪ
ಆಮೇಲೆ ಥರ್ಟೀ ಸಿಕ್ಸ್ಟೀ, ಜತೆಗಿದ್ದರೆ ತಪ್ಪ?
ಎತ್ತೊ ಮೊದಲಷ್ಟೆ ಶ್ಯಾನೆ, ಆಣೆ ಗ್ಯಪ್ತಿ ನೆಪ್ಪು
ಪರಮಾತ್ಮಾ ಇಳಿದಂಗೆ, ಭಗವಂತನು ಬೆಪ್ಪು ||

ಹಗಲಲ್ಲೂ ಸೂರ್ಯಾನೆ, ಚಂದ್ರ ಎದ್ದೇಳಣ್ಣ
ತಲೆ ಭಾರಕೆ ಕಣ್ಕೆಂಪು, ಸೇಂದಿಯೆ ಹಂಗಣ್ಣ
ಮೋರೆಗ್ಮೂರು ನೀರೆರಚಿ, ಹಾಕ್ ಹೆಜ್ಜೆ ಭಾರ
ಬೀದಿ ಕೊನೆ ಕಳ್ಳಂಗ್ಡಿಗಿಲ್ಲ, ಪಾಪ ವ್ಯಾಪಾರ! ||

ಜಗುಲಿ ಹತ್ತಿದ್ದಷ್ಟೆ ಅಂಗ್ಡಿ, ಸೀನಣ್ಣ ಮಾತಾಟ
ಜಾಸ್ತಿಯಾಯ್ತು ಬ್ಯಾಡಪ್ಪ, ನೆನ್ನೇನೆ ಕೂತಾಟ
ತಗಳಣ್ಣ ಥರ್ಟಿ ತಾನೆ, ನಿಂಗ್ಯಾವ್ದೊಡ್ ಲೆಕ್ಕಾ
ಕಡ್ಲೆಬೀಜ ಬಿಸೀ ಪಕೋಡ, ತಂದಿಡ್ತಿನಿಲ್ಲೆ ಪಕ್ಕ! ||

ಬ್ಯಾಡ ಬ್ಯಾಡ ವಲ್ಲೆ ವಲ್ಲೆ, ಬರಿ ಎಲ್ಲ ಮಾತಲ್ಲೆ
ಜನ್ಮಜನ್ಮದನುಬಂಧ ಕಣಣ್ಣ, ಗ್ಲಾಸು ಕೈಯಲ್ಲೆ
ಕಿಕ್ಕಿರಿದರು ಕಿಕ್ಕೇರದವ, ಅಲ್ಲಾಡದಾ ಪಾರ್ಟಿ
ಅನ್ಕೊಂಡೇನೆ ಮುಟ್ಟೆಬಿಡ್ತೆ ಎರಡ್ನೆ ಗ್ಲಾಸ್ಗೆ ನೈಂಟಿ! ||

ಬಾಡೂಟದ ವಾಸನೆಗೆ, ಮೂಗ್ಹೊಳ್ಳೆಲೆ ಯಜ್ಞ
ಕರಿ ಸಾಂಬಾರಲಿ ಮೀನಿದ್ದರೆ, ವಾಸನೆಗೆ ಲಗ್ನ
ಜುಗಲ್ಬಂಧಿ ಕಟ್ಬೇಕು ಕಣ್ಲ, ಕುಡಿಸಿ ಬಾಯ್ತುಂಬ
ತೇಗಲ್ಲುರಿ ಬರುತಿದ್ದರೆ, ವಾಸನೆಗೆಷ್ಟೊಂದ್ಜಂಬಾ! ||

ಕುಡುಕರ ಸಾವಾಸವೆ ಕುಡಿತ, ಬಿಡ್ತಾನೆ ದಿನಾ
ಕಟ್ಕೊಂಡ್ ಹೆಂಡಿರ ಹಂಗೆ ಬೆಳಿಗ್ಗೇನೆ ಒಡೆತನ
ಹಗಲೂ ರಾತ್ರಿ ಯಾವ್ಲೆಕ್ಕ, ಕುಡಿತಾನ್ಹಂಗೆ ಬೆಕ್ಕ
ಕಣ್ಮುಚ್ಚಿ ಕುಡಿದೆ ಹಾಲು, ಕೈಗೆಲ್ಲಿ ತಾನೆ ಸಿಕ್ಕಾ! ||

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s