00335. ಮನದ ಗುಟ್ಟಿನ ವಿಷಯ…

00335. ಮನದ ಗುಟ್ಟಿನ ವಿಷಯ…
__________________________
(sampada 08.08.2015)

ಬದುಕು ಕಟ್ಟಿ ಕೊಡುವ ಅನೇಕ ಭಾವ ಸಂಗಮಗಳಲ್ಲಿ, ನಿರಂತರ ಕಾಡುವ ವಿಷಾದ, ಖೇದದ ಭಾವ ಬಲು ಸಾಮಾನ್ಯವಾಗಿ ಕಾಣ ಸಿಗುವಂತದ್ದು. ಅದರಲ್ಲೂ ಈ ಭಾವ ಜನನದ ಮೂಲ ಮೊದಲ ಪ್ರೇಮವಾಗಿದ್ದರಂತೂ, ಜೀವನವಿಡಿ ಕಾಡುವ ಸಿಹಿನೋವಾಗಿ ಉಳಿದುಬಿಡುವ ಸಾಮರ್ಥ್ಯವುಳ್ಳದ್ದು. ಇನ್ನು ಆ ಪ್ರೇಮ ಹೂವಾಗರಳದೆ, ಕೇವಲ ಮನದ ಗುಟ್ಟಿನ ವಿಷಯವಾಗಿ ಉಳಿದು ಹೋಗಿದ್ದರಂತು, ಅದೊಂದು ನಿತ್ಯ ನೂತನ ಕೊರಗಾಗಿ ಜೀವನವಿಡಿ ಸತಾಯಿಸಿಕೊಂಡೆ ಬರುತ್ತದಂತೆ. ಪ್ರೇಮ ಬಯಲಾಗಿ ಸಾಫಲ್ಯ ಪಡೆಯದಿದ್ದರೇನಂತೆ ? ಒಡ್ಡೊಡೆದು ಪ್ರವಹಿಸುವ ಮನದ ಭಾವನೆಗಳಿಗೆ ತಡೆಗೋಡೆ ಹಾಕಲು ಸಾಧ್ಯವೆ ? ಆದರೆ ಆ ಸಂಧರ್ಭದಲ್ಲೂ ತನ್ನ ಮನದ ಪ್ರೇಮಿಯ ಒಳಿತನ್ನೆ ಬಯಸುತ್ತ, ಮತ್ತೊಂದೆಡೆ ತನ್ನ ಹೇಳಿಕೊಳ್ಳಲಾಗದ ಇಚ್ಛೆಯನ್ನರಿಯದೇ ಹೋದ ಕಾರಣಕ್ಕೆ ದೂರುತ್ತ, ದುಮ್ಮಾನ ಪಡುತ್ತ ದಿನ ದೂಡುವ ಅಮರ ಪ್ರೇಮಿಗಳಿಗೇನು ಕೊರತೆಯಿಲ್ಲ. ಕೊನೆಗದು ಮಂಕಾಗಿಸಿ ಮರುಳು ಹಿಡಿಸುವ ಮನೋವ್ಯಾಧಿಯಾಗಬಹುದು; ಅಥವಾ ಒಳಗಿನ ವೇದನೆಯನ್ನೆ ನಿವೇದನೆಯಾಗಿಸಿ, ನಿರಂತರ ಸ್ಪೂರ್ತಿಯ ಚಿಲುಮೆಯಾಗಿಸಿ ಯಾವುದಾದರೊಂದು ಕ್ರಿಯಾತ್ಮಕ ಹೊದಿಕೆಯಡಿ ವಿಜೃಂಭಿಸಿ, ಅದರ ಪಲ್ಲವ, ತಲ್ಲಣಗಳ ಪ್ರಕಟ ರೂಪವಾಗಿ ಸ್ರವಿಸಬಹುದು – ಕಥೆ, ಕಾವ್ಯ, ಕವನಗಳಂತೆ. ಅದು ಅಣೆಕಟ್ಟು ಹಾಕಿಟ್ಟ ಮನದ ಗುಟ್ಟುಗಳಿಗೆ, ಮತ್ತದರ ಮೇಲೆ ಬೇರೂರಿದ ಕಲ್ಪನೆ, ಊಹೆಗಳ ವಿಸ್ತರಣೆಗಳಿಗೆ ಮೂರ್ತರೂಪ ನೀಡುತ್ತ, ಕಾಲ ಕಳೆದಂತೆ ಮಾಗಿದ ಗಾಯದಾಳದಿಂದಲೆ ಪಕ್ವತೆ, ಪ್ರಬುದ್ಧತೆಯೊಂದು ತುಣುಕಾಗಿ ಹೊರಹೊಮ್ಮುವುದು ಅಸಹಜವೇನಲ್ಲ. ಅಂತೆಯೆ ಆ ವ್ಯವಹಾರದ ನಡುವಲ್ಲೂ ಆಗಾಗ್ಗೆ ಭೇಟಿಯಿತ್ತು, ನೆನಪಿನ ರೂಪದಲ್ಲಿ ರುಜು ಹಾಕಿ ಹೋಗುವ ಆ ಮನದಳದ ಗುಟ್ಟುಗಳೂ ಅಪರೂಪವಲ್ಲ. ಬದಲಿಗೆ ಅವೇ ಸ್ಪೂರ್ತಿಯ ಮೂಲವಾಗಿ, ಗುಟ್ಟನ್ನು ಇಷ್ಟಿಷ್ಟೆ ಬಯಲಾಗಿಸುವಂತೆ ಮತ್ತೊಂದು ರೂಪದಲ್ಲಿ ಬಿಚ್ಚಿಕೊಳ್ಳುವುದು ಉಂಟು. ಆಗಲೂ ಒಳಿತನ್ನೆ ಬಯಸುವ ಹಿತೈಷಿಯ ಭಾವ ಈ ಕೆಳಗಿನ ಕವನದ ಮೂಲ ಸರಕು.

ಮನದ ಗುಟ್ಟಿನ ವಿಷಯ…
__________________________

ಚಳಿಗಾಲದ ರಾತ್ರಿ
ನೀ ಕಾಡುವುದು ಖಾತ್ರಿ
ಹೇಳದೆ ಓಡಿದೆಯೇಕೆ ಹೆಸರ ಕೊಟ್ಟು?
ಹಗಲಿರುಳು ಬಿಡದೆ ಕಾಡೆ
ನಿನ್ನ ಹಾಡ ಹಗಲ ದರೋಡೆ
ಸವರಿ ಹೋದೆಯ ತಲೆಯೊಳ್ಹೆಸರ ಬಿಟ್ಟು? ||

ನೀ ಬಿಟ್ಟ ಹುಳು ಕೀಟ
ಕೊರೆದಿದೆ ನಿಲ್ಲದೆ ಸತತ
ನೀ ದಾಟಿದನಂತಗಳ ದೂರ ತಳ್ಳಿ ಬದಿಗೆ;
ಯಾವ ಪಯಣದ ಬಂಡಿ
ಹಿಡಿದು, ಬಂದವೊ ಮೈ ಗಿಂಡಿ
ಹುಳಿ ಹಿಂಡಿ ಕುಣಿಯುತಿವೆ, ಎದೆಯ ಒಳಗೆ ||

ಅಲ್ಲೆಲ್ಲೊ ಸುಖದಲಿಹ ಭ್ರಮೆ
ಆಶಿಸುತಲೆ ಮನದಾಳ ದಿಗ್ಭ್ರಮೆ
ಹರಸಿದ ಕಾಮನೆ, ಸುಖ ದುಃಖ ಗೊಂದಲದಲ್ಲಿ ;
ಸುಖಿಸೆಂದು ಬಯಸುತಲೆ
ದುಃಖವಿರೆ ನೆನಪಾಗೊ ತೆವಲೆ
ನಿನ್ನ ಹರ್ಷಕು ತಳುಕು ಹಾಕೊ, ಮಿಡಿತ ನಿಲದಿಲ್ಲಿ ||

ತಣ್ಣಗಿರು ನೀನೆಂದೆ, ಚಳಿಗಲ್ಲ
ಬೆಚ್ಚಗಿರು ಎಂದಾಗ, ಬಿಸಿಲೂ ಅಲ್ಲ
ಕಟ್ಟಿಕೊಟ್ಟ ನೆನಪ ಭಂಡಾರ, ಮನ ಗ್ರಂಥಾಲಯ
ಏಕಾಂತದಲಿ ಹೊಕ್ಕು ಕೂತೆ ;
ಬಿಚ್ಚುತ ಪುಟಪುಟಗಳ ಮಾತೆ !
ಕವಿತೆಯಾಗಿಸುತ ಮನದಾ, ಗುಟ್ಟಿನ ವಿಷಯ! ||

————————————————–
ನಾಗೇಶ ಮೈಸೂರು
—————————————————

ಮನದ, ಗುಟ್ಟಿನ, ವಿಷಯ, ನಾಗೇಶ, ಮೈಸೂರು, ನಾಗೇಶಮೈಸೂರು, ವಿಷಾದ, ಪ್ರೇಮ, ಯಾತನೆ, nagesha, mysore, nageshamysore

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s