00344. ಬೇಲೂರು….

00344. ಬೇಲೂರು….
_________________

(ಸಿಂಗಪುರ ಕನ್ನಡ ಸಂಘದ ‘ಸಿಂಗಾರ 2015’ ದ್ವೈವಾರ್ಷಿಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದು.)

ಹಿಂದೊಮ್ಮೆ ಬೇಲೂರಿಗೆ ಭೇಟಿಯಿತ್ತಿದ್ದಾಗ ಗೈಡೊಬ್ಬನ ಮೂಲಕ ದೇಗುಲ, ಶಿಲಾಬಾಲಿಕೆಯರ ವಿವರಣೆ ಕೇಳುತ್ತಿದ್ದೆ.. ಆಗ ಪ್ರಾಸಂಗಿಕವಾಗಿ ಹಳೇಬೀಡು ನಾಶವಾದರೂ ಬೇಲೂರು ಗುಡಿ ಮಾತ್ರ ಹೇಗೆ ಧಕ್ಕೆಗೊಳಗಾಗದೆ ಉಳಿದುಕೊಂಡಿತೆಂಬುದನ್ನು ವಿವರಿಸುತ್ತ, ಯಗಚಿ ನದಿಯ ಮರಳಿಂದಲೆ ಇಡಿ ದೇಗುಲವನ್ನು ಮುಚ್ಚಿ, ಮರೆಮಾಚಿ ರಕ್ಷಿಸಿದರೆಂಬುದನ್ನು ಕೇಳಿದಾಗ ಮೂಡಿದ ಕವನವಿದು. ಅಂದು ಮರಳು ಮುಚ್ಚಿ ರಕ್ಷಿಸಿದ ಸಂಪತ್ತನ್ನು ಇಂದು ನಾವೆಷ್ಟು ಜೋಪಾನವಾಗಿ ನೋಡಿಕೊಂಡಿದ್ದೇವೆನ್ನುವುದು ಅಲ್ಲಿರುವ ಫಲಕ, ಬರಹಗಳ ಸ್ಥಿತಿ ನೋಡಿದರೆ ಗೊತ್ತಾಗುತ್ತದೆ. ಬಹುಶಃ ಮರಳಡಿ ಹೂತಿದ್ದರೆ ಅದು ಹೆಚ್ಚು ಕ್ಷೇಮವಾಗಿರುತ್ತಿತ್ತೊ ಏನೊ ಅನಿಸಿದ್ದು ನಿಜವೆ. 

ಆದರೆ ಅದನ್ನು ಮೀರಿ ಕಾಡಿದ ಭಾವ – ಅದು ಹೇಗೆ ಆ ಯೋಜನೆ, ಉಪಾಯ ಹೊಳೆಯಿತು? ಹೊಳೆದರು ಅದನ್ನು ಸಾಧಿಸಿ ಕಾರ್ಯಗತಗೊಳಿಸಲು ಬೇಕಾದ ಮನೋಬಲ, ಸಾಗಾಣಿಕಾ ಸಾಮರ್ಥ್ಯ, ಅದ್ವಿತೀಯ ವೇಗ – ಎಲ್ಲಕ್ಕು ಹೆಚ್ಚಾಗಿ ಕಾಪಿಡಬೇಕೆನ್ನುವ ಆ ಅಭಿಮಾನದ ಸ್ವಾಭಿಮಾನ ಹೇಗೆ ಸಿದ್ದಿಸಿತು ? ಎಂದು. ನಮ್ಮಲ್ಲೂ ಆ ಅಭಿಮಾನದ ತುಣುಕು ಅಷ್ಟಿಷ್ಟಾದರು ಇಣುಕಿ ಮಿಕ್ಕುಳಿದುದನ್ನು ಜತನದಿಂದ ಕಾಪಾಡಿ, ಸಂರಕ್ಷಿಸಿಕೊಂಡು ಹೋಗುವ ಸದ್ಭುದ್ಧಿ ನೀಡಲೆಂದು ಹಾರೈಸೋಣ.

ಯಗಚಿ ಹೊಳೆ
ಮರಳೆಲ್ಲ ಮೊಗಚಿ
ಬಚ್ಚಿಟ್ಟ ರಹಸ್ಯ ಗೊತ್ತ?
ಈ ಬೇಲೂರ ಚಿತ್ತ… ||

ಯಾರೊ, ಯಾರ್ಯಾರೊ
ಚತುರಂಗ ಸೈನ್ಯದ ಕಾಲ
ತನ್ನುಸುಕಲಿ ಬಚ್ಚಿಟ್ಟ ಬಲ
ಉಳಿಗೆಲ್ಲಿತ್ತಲ್ಲಿ ಉಳಿಗಾಲ ? ||

ಕಟ್ಟಿಡಲು ನೂರಾರು ವರ್ಷ
ಕೆಡವಲೆಷ್ಟು ಗಂಟೆ? ನಿಮಿಷ ?
ಸೈನ್ಯವೆ ಶರಧಿ, ಕ್ಷಣ ವರದಿ
ಹಳೆಬೀಡಾಯಿತೆ ಪಾಳು ತುದಿ..||

ಪಾಲಾಯ್ತೆಂದೆಲ್ಲಿ ಪೊಗರಲ್ಲಿ
ಚಾಣಾಕ್ಷತೆಗಿತ್ತು ಚಿಗುರು
ಹೊಳೆ ಮಡಿಲೆ ಮರಳೊ ಮರಳು
ಹೂತರು ದೇಗುಲ ಕರಗದ ಪಾತ್ರ .. ||

ಕರಗಿ ದಂಡು ಧಾಳಿ ಧಾರ್ಷ್ಟ್ಯ
ಕಾಲದ ಹುಂಡು ಕಳಚಿಟ್ಟಿತ್ತ
ಕಳವಳಕಿಷ್ಟು ಕಣ್ಮರೆ ಕೈ ಕಾಲು
ಕಲ್ಲ ನಿಧಿ ಪಳೆಯುಳಿಕೆ ಕುಶಾಲು.. ||

ಪುಣ್ಯವೊ? ಪಾಪವೊ? ಎಂತೊ?
ಅಳಿದುಳಿದಿದ್ದು ಹೆಮ್ಮೆ ಸೊತ್ತು
ಉಳಿಸಬಾರದೆ ಬೆಳಕ ಹಿಡಿಯಿತ್ತು..
ಕೊಳಕು ಪರಭಾರೆಯ ಬದಿಗಿಟ್ಟು? ||

ಯಗಚಿ ಮೊಗಚಿದರಂದು ಕಲೆಗೆ
ಬರಿ ಅರಚಿದರು ಸಾಕು ಬೆಳಗೆ
ಬರವೇಕೊ ಮೌಲ್ಯ ಗರಬಡಿತ
ನಾವೆ ಹಚ್ಚಬೇಕು ಹಣತೆ ಗುಣಿಸುತ್ತ.. ||

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s