00349. ಚಿಣ್ಣರ ಗಣಪನ ಎರಡು ಹಾಡುಗಳು..

00349. ಚಿಣ್ಣರ ಗಣಪನ ಎರಡು ಹಾಡುಗಳು..
_________________________________  

ಗಣಪನ ಆಗಮನವೆಂದರೆ ಚಿಣ್ಣರಿಂದ ವೃದ್ಧರವರೆಗು ಏನೊ ಬಗೆಯ ಉತ್ಸಾಹ, ಉಲ್ಲಾಸ. ಎಲ್ಲರಲ್ಲು ಭಯ, ಭಕ್ತಿ, ಪ್ರೀತಿಗಳ ಸಂಭ್ರಮವನ್ನುಕ್ಕಿಸುವ ಬೆನಕನ ಹಬ್ಬ ಪ್ರತಿ ವರ್ಷ ಬಂದರು, ಪ್ರತಿ ಬಾರಿಯೂ ನಿತ್ಯ ನೂತನವಾಗಿ ಆಚರಿಸಿಕೊಳ್ಳಲ್ಪಡುವ ಹಬ್ಬ. ಮನೆಯಲ್ಲಿಟ್ಟು ಪೂಜಿಸುವ ಪರಿಕ್ರಮದಿಂದ ಹಿಡಿದು ತಿಂಗಳಾನುಗಟ್ಟಲೆ ಬೀದಿಯ ಚಪ್ಪರ, ಪೆಂಡಾಲುಗಳಡಿ ಅನೇಕಾನೇಕ ಸದ್ದುಗದ್ದಲ ಅಬ್ಬರ ಭರಿತ ಕಾರ್ಯಕ್ರಮಗಳ ಸಮೇತ ಪೂಜಿಸಲ್ಪಡುವ ವಿನಾಯಕನಿಗೆ ಕಡುಬೆಂದರೆ ಎಷ್ಟು ಪ್ರೀತಿಯೊ, ಈ ಗದ್ದಲದ ಆಚರಣೆಯೂ ಅಷ್ಟೆ ಪ್ರೀತಿಯೆಂದು ಕಾಣುತ್ತದೆ.

ಚಿಣ್ಣರಿಗೆ ವಿಶೇಷವಾಗಿ ಕಾಣುವ ಈ ಹಬ್ಬ ಅವರಲ್ಲಿ ಉತ್ಸಾಹ ತುಂಬುವುದು ಮಾತ್ರವಲ್ಲದೆ , ನಮ್ಮ ಹಬ್ಬ ಹರಿದಿನ ಸಂಸ್ಕೃತಿ ಆಚರಣೆಗಳ ಪರಿಚಯಾನುಭವವನ್ನು ಅವರಿಗರಿವಿಲ್ಲದ ಹಾಗೆ ಮಾಡುವುದು ಮತ್ತೊಂದು ಮಹತ್ವದ ಅಂಶ. ಈ ಸಮಯದಲ್ಲಿ ಅಪರೂಪವಾಗುತ್ತಿರುವ ಹರಿಕಥೆ, ಶಿವಕಥೆ, ನಾಟಕ, ನೃತ್ಯ, ಯಕ್ಷಗಾನಗಳ ಜತೆ ಆಧುನಿಕತೆಯ ಅಬ್ಬರದ ವಾದ್ಯಗೋಷ್ಠಿ, ಮೆಲುಕು ದನಿಯ ಭಾವಗೀತೆ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಸಂಸ್ಕೃತಿಯ ಹಲವಾರು ಮುಖಗಳೆಲ್ಲ, ಅದರೆಲ್ಲಾ ತರದ ತಪ್ಪು ಒಪ್ಪುಗಳೊಡನೆ ಅನಾವರಣವಾಗುವುದು ಈ ಸಂಧರ್ಭದಲ್ಲೆ..

ಆಂತಹ ಚಿಣ್ಣರ ಸಲುವಾಗಿಯೆ ಬರೆದ ಎರಡು ಗಣಪನ ಸರಳ ಪದ್ಯಗಳು ಈ ಕೆಳಗೆ (ಗಣ ಸವಾರಿ, ಮೋದಕ-ವಿನಾಯಕ) – ವಾರದ ಕೊನೆಯಲ್ಲಿ ಕಾಲಿಡಲಿರುವ ಗೌರಿ ಗಣೇಶರನ್ನು ಹಾರ್ದಿಕವಾಗಿ ಸ್ವಾಗತಿಸುತ್ತ…:-)

01. ಗಣ ಸವಾರಿ
______________

ಗಣನ ಗಣನೆ
ಗಣ ಗಣನೆ
ಗಂಟೆ ಸದ್ದ ಬಾರಿಸೆ
ತಾನೆ ದಯಮಾಡಿಸೆ ||

ಗಣಗಳೊಡೆಯ
ಗಣೇಶ ಕಾಯ
ಕಾಯಿ ಹಣ್ಣ ಪೂಜೆ
ಕಡುಬಿನ ಜತೆ ಮೋಜೆ ||

ಗಜದ ವದನ
ಗಜಾನನ ಘನ
ಸೊಂಡಿಲಲೆ ಸ್ವಾಹ
ತಿಂಡಿಪೋತ ಆಹಾ! ||

ಶಿರದ ಕೀರ್ತಿ
ಮಂಗಳಾರತಿ
ದಿಟ್ಟಿ ತೆಗೆವ ತರ
ಹಾವ ಸುತ್ತಿದುದರ ||

ಕೀರ್ತಿ ಶನಿ
ಬಿಡದ ದನಿ
‘ನಾಳೆ ಬಾ’ ಎಂದ
ಬುದ್ಧಿವಂತಿಕೆ ಚಂದ ||

ಸಾಧನೆಗೆ ತಿದಿ
ಬೇಕಲ್ಲವೆ ಸಿದ್ಧಿ
ಅವಳ ವರಿಸೊ ಬುದ್ಧಿ
ಹಸೆಯೇರಿ ಸಿದ್ಧಿ ಬುದ್ಧಿ ||

ಬಿದ್ದುಬಿದ್ದು ನಕ್ಕ
ಚಂದಿರನ ಸೊಕ್ಕ
ಮುಕ್ಕಾಗಿಸಿ ಸರದಿ
ಕ್ಷಯ ವೃದ್ಧಿ ವ್ಯಾಧಿ ||

ದಂತದೆ ಅಸುರ
ನಿರ್ನಾಮ ಮತ್ಸರ
ಮುರಿದ ಗರ್ವ ಹಿಡಿಗೆ
ಜತೆ ಪಾಶಾಂಕುಶ ಬಡಿಗೆ ||

ಹೆಣಗುತಲೆ ಭಾರ
ಹೊತ್ತ ಹೆಗ್ಗಣ ಶೂರ
ಮೂಷಿಕನಿಗಿತ್ತ ಕರುಣೆ
ಜನ್ಮಪೂರ ನೆನೆ ಸ್ಮರಣೆ ||

ಚೌತಿಗಿಂದು ರಥ
ಕೈಲಾಸದಿಂದ ಬಂತ
ನಮಿಸಿಪ್ಪತ್ತೊಂದು ಬಾರಿ
ಬೇಡೆ ಹರಸೊ ಗಣ ಸವಾರಿ ||

——————————-
ನಾಗೇಶ ಮೈಸೂರು
——————————–

02. ಮೋದಕ-ವಿನಾಯಕ
_______________________

ನೀಡಿದರೆ ಮೋದಕ
ಹಾಜರಲ್ಲಿ ವಿನಾಯಕ
ಪೂಜೆಗೆ ಕೂತರೆ ಬೆನಕ
ಚಿಣ್ಣರಿಗೆಂತದೊ ಪುಳಕ ||

ಆಕಾರವೆ ಘನ ವಿಸ್ಮಯ
ಆನೆ ಮೊಗ ದೇವ ಕಾಯ
ಸೊಂಡಿಲಲೆ ಗುಳುಂ ಸ್ವಾಹ
ಆರ್ಕಾಸ ಮಜ್ಜಿಗೆ ಏನು ಮಹಾ? ||

ಗೌರಿಗೆಂದನೆ ಒಂದೇ ದಿನ
ಬಂದೆಬಿಡುವೆ ಚೌತಿ ಘನ
ಹಿಂತಿರುಗದೆ ದಿನ ದಿನವು
ನಾಳೆ ಬರುವೆನೆಂಬ ನೆಪವು ||

ಭಾದ್ರಪದಕೆ ಬಂದಾಯ್ತೆ
ಕಡುಬು ವಡೆ ತಿಂದಾಯ್ತೆ
ನಗುವರಾರು ನೋಡೋಣ ?
ಚೌತಿ ಚಂದ್ರಕಥೆ ಹಾಡೋಣ ||

ಹರಸುವೆಯೊ ಸಹಿಸುತೆಲ್ಲ
ಉದರಕೆ ಬಾಚೀ ಪಾಪಗಳ
ಡೊಳ್ಳುಹೊಟ್ಟೆ ಸಹನಾಧೀಶ
ಮೊದಲ ಪೂಜೆ ಕಷ್ಟ ವಿನಾಶ ||

——————————-
ನಾಗೇಶ ಮೈಸೂರು
——————————–

ಗಣಪ, ವಿನಾಯಕ, ಬೆನಕ, ಗಣ, ಸವಾರಿ, ಮೋದಕ, ನಾಗೇಶ, ಮೈಸೂರು, ನಾಗೇಶಮೈಸೂರು, nagesha, mysore, nageshamysore