00352. ಹೆಸರಲೆ ದುಪ್ಪಟ್ಟಾದವಳ ಕಥೆ

00352. ಹೆಸರಲೆ ದುಪ್ಪಟ್ಟಾದವಳ ಕಥೆ
_______________________________

(Published in sampada – 23.09.2015)  
ಕಾರು ಇನ್ನೇನು ಹೊರಡುವ ಹೊತ್ತು.. ಡ್ರೈವರು ಗೂ ರೋಂಗ್ ದೂರದಿಂದಲೆ ಬರುತ್ತಿದ್ದುದನ್ನು ಗಮನಿಸಿ ಕಾರಿನ ಬಾಗಿಲು ತೆರೆಯುತ್ತಿದ್ದ… ಆಗ ಕೇಳಿಸಿತ್ತು ಗಾಜಿನ ದೈತ್ಯ ಸ್ವಯಂಚಾಲಿತ ಗೋಡೆಯ ಹತ್ತಿರ ಬರುತ್ತಿದ್ದ ಹಾಗೆ ಹಿಂದಿನಿಂದ ದಾಪುಗಾಲಿಕ್ಕುತ್ತ ಯಾರೊ ಬರುತ್ತಿರುವ ಸದ್ದು – ಅಸಹಜವೇನಲ್ಲ ಆ ಹೊತ್ತಲಿ; ಕೆಲಸ ಮುಗಿಸಿ ಮನೆಗೆ ಹೊರಡುವ ಧಾವಂತ ಪ್ರತಿಯೊಬ್ಬರದು. ಅದರಲ್ಲು ಬಸ್ಸು, ರೈಲು ಹಿಡಿದು ನಡೆವವರ ಕಥೆ ನಿತ್ಯದ ಪ್ರಹಸನ. ಒಂದೂವರೆಯಿಂದ ಎರಡು ಗಂಟೆಯವರೆಗು ರಸ್ತೆಯಲ್ಲೊ, ಟ್ರಾಫಿಕ್ಕಿನಲ್ಲೊ, ತೂಕಡಿಕೆಯಲ್ಲೊ, ತೂಗಾಟದಲ್ಲೊ ಅಥವಾ ಮತ್ತಾವುದೊ ಲೋಕದಲ್ಲಿ ಜಗ್ಗಾಡಿ ನಂತರ ಮನೆ ಸೇರುವುದೆಂದರೆಪ್ರಹಸನವೆ ಸರಿ. ನೋಡಿ ನಲಿವ ದಣಿದ ಪ್ರೇಕ್ಷಕರೆ ಪಾತ್ರಧಾರಿಗಳೂ ಆದ ವಿಚಿತ್ರ, ವಿಸ್ಮಯಕಾರಿ ಪ್ರಪಂಚ. ಈಗಾಗಲೆ ಮಾಮೂಲಿ ಹೊತ್ತು ದಾಟಿ ಹೋದ ಕಾರಣ ಸ್ವತಃ ಏನಾದರು ವ್ಯವಸ್ಥೆ ಮಾಡಿಕೊಳ್ಳಬೇಕು – ಪ್ರಯಾಣಕ್ಕೆ. ಊರಿಂದಾಚೆಗಿನ ಆ ಜಾಗದಲ್ಲಿ ಟ್ಯಾಕ್ಸಿ ಸಿಗುವುದು ಕಷ್ಟ. ಬಸ್ಸಿಗೆ ಕಾಯದೆ ವಿಧಿಯಿಲ್ಲ – ಹತ್ತಿರದ ರೈಲು ನಿಲ್ದಾಣದವರೆಗಾದರು ತಲುಪುವ ತನಕ. ಕಾರಿಟ್ಟುಕೊಂಡವರದು ಟ್ರಾಫಿಕ್ಕಿನಲ್ಲಿ ಸಿಕ್ಕಿ ಬೀಳುವ ಗೋಳಾದರು ನಡುವಿನ ಕಾಯುವ, ಬದಲಿಸುವ ಗೋಜಿರುವುದಿಲ್ಲ.

ಆದರೆ ಈ ದಿನ ಅವಸರದ ಹೆಜ್ಜೆಯಿಕ್ಕುತ್ತ ಪಕ್ಕದಲ್ಲಿ ಹಾದು ಬಂದವಳು ಶುವಾಂಗ್ ಮಿಂಗ್. ಸರಳ ಸ್ವಭಾವದ ಮೆದು ಮಾತಿನ ಎತ್ತರದ ಹುಡುಗಿ. ಯಾವುದೊ ಕೆಲಸದ ಸಂಬಂಧ ಸಹಾಯ ಮಾಡಿದ್ದ ಕಾರಣ ಅವಳ ಮುಖ ನೆನಪಿತ್ತಾದರು ಹೆಸರು ನೆನಪಿನಲ್ಲಿರಲಿಲ್ಲ. ಪರಿಚಯದ ಮುಗುಳ್ನಗೆ ಬೀರಿ ಜತೆಗೆ ನಡೆದವಳನ್ನು ಯಾಂತ್ರಿಕವಾಗಿ, ‘ಮನೆಗೆ ಹೊರಟಿದ್ದಾ?’ ಎಂದಾಗ ‘ಹೂಂ’ಗುಟ್ಟುತ್ತ ತಲೆಯಾಡಿಸಿದ್ದಳು. ಮಾತಿಗೊಂದು ಮುಗುಳ್ನಗೆ ಅವಳಿಗೆ ದೇವರಿತ್ತ ವರವೇನೊ.. ಅಥವಾ ಆಧುನಿಕ ಜಗದ ಸೇವಾ ಉದ್ಯೋಗದಲ್ಲಿರುವವರಿಗೆಲ್ಲ ಕೆಲಸದ ಸಲುವಾಗಿ ಕೊಟ್ಟ ತರಬೇತಿಯ ಪಲುಕೊ ?

“ಎಲ್ಲಿ ಮನೆ?” ಮುಂದಿನ ಪ್ರಶ್ನೆಯೂ ಯಾಂತ್ರಿಕವಾಗಿ ಬಂದಿತ್ತು..

“ಒಂದೂವರೆ ಗಂಟೆಯಷ್ಟು ದೂರ..” ಜಾಗದ ಹೆಸರು ಹೇಳುತ್ತ ಮತ್ತೆ ಅದೇ ನಗೆಯ ತುಣುಕು ಚೆಲ್ಲಿದ್ದಳು. ಅದು ನಾನು ಹೋಗುತ್ತಿರುವ ದಿಕ್ಕಿನಲ್ಲೆ ಇರುವ ಜಾಗ; ನನ್ನ ವಾಸ ಸ್ಥಾನ ಅದಕ್ಕಿಂತ ಮೊದಲೆ ಬರುವುದಾದರು, ಅಲ್ಲಿಂದಲ್ಲಿಗೆ ತೀರಾ ದೂರವೇನಿಲ್ಲ.

“ಈಗ ಶಟಲ್ ಬಸ್ ಇರದ ಕಾರಣ ಮಾಮೂಲು ಬಸ್ಸಿಗೆ ಕಾಯಬೇಕು..” ಎಂದವಳ ದನಿಯಲ್ಲಿ ಬೇಸರಕ್ಕಿಂತ ಹೆಚ್ಚಾಗಿ ದಿನ ನಿತ್ಯದ ಮಾಮೂಲಿ ಕಥೆಯೆನ್ನುವ ನಿರ್ಲಿಪ್ತತೆಯಿತ್ತು. ಆ ಮಾತಾಡುವ ಹೊತ್ತಿಗೆ ಇಬ್ಬರೂ ಕಾರಿನ ಹತ್ತಿರ ಬಂದಿದ್ದೆವು.

ಅವಳತ್ತ ಒಮ್ಮೆ ದಿಟ್ಟಿಸಿ ನೋಡಿದವನೆ, “ನಾನು ಅದೇ ಹಾದಿಯಲ್ಲಿ ನಡೆದಿರುವೆ, ಬೇಕಿದ್ದರೆ ಹತ್ತಿಕೊ.. ಹತ್ತಿರದಲ್ಲೆಲ್ಲಾದರು ಇಳಿದುಕೊಳ್ಳಬಹುದು”.

ಅನಿರೀಕ್ಷಿತವಾದ ಆಹ್ವಾನಕ್ಕೆ ಅವಳಲ್ಲೊಂದು ಬಗೆಯ ಗೊಂದಲ ಏಕಾಏಕಿ ಕಾಣಿಸಿಕೊಂಡಿತು – ಬಸ್ಸು ರೈಲಿನ ಜಂಜಾಟವಿಲ್ಲದೆ ಆರಾಮವಾಗಿ ಹೋಗಬೇಕೆನ್ನುವ ಪ್ರಲೋಭನೆ, ಹೋಗಬಹುದೊ, ಬಾರದೊ ಎನ್ನುವ ವಿವೇಚನೆಯ ತಕ್ಕಡಿಯಲ್ಲಿ ತೂಗಾಡುತ್ತ, ಚಂಚಲತೆಯನ್ನು ಆರೋಪಿಸಿದ ಗಳಿಗೆಯಲ್ಲು ಅದೆ ಮುಗುಳ್ನಗೆಯ ಅಸ್ಪಷ್ಟ ತುಣುಕು. ಬಾಯಿ ಮಾತ್ರ ಸಂಕೋಚ, ದಾಕ್ಷಿಣ್ಯದ ದನಿಯಲ್ಲಿ, “ಬೇಡ, ಬೇಡ..ನಾನು ಬಸ್ಸು ಹಿಡಿದೆ ಹೋಗುತ್ತೇನೆ” ಎಂದಿತ್ತು.

ಆ ಸೌಜನ್ಯಪೂರ್ಣ ಸಂಕೋಚದ ಹಿನ್ನಲೆ ಗೊತ್ತಿದ್ದರಿಂದ ಅವಳ ನಿರ್ಧಾರವನ್ನು ಕೊಂಚ ಸುಲಭವಾಗಿಸುವಂತೆ, “ಹೇಗೂ ನಾನೂ ಅದೇ ದಾರಿಯಲ್ಲಿ ಹೋಗಬೇಕಲ್ಲ ಎಂದು ಕರೆದೆನಷ್ಟೆ..ನನಗೇನು ತೊಂದರೆಯಾಗುವುದಿಲ್ಲ.. ನಿನಗೆ ಸೂಕ್ತವಾಗಿ ಕಂಡ ಹತ್ತಿರದ ಜಾಗದಲ್ಲಿ ಇಳಿದುಕೊ..” ಎಂದೆ.

ಆಗಬಹುದೆನ್ನುವ ನಿರ್ಧಾರಕ್ಕೆ ಆ ಪ್ರಚೋದನೆ ಸಾಕಾಗಿತ್ತೇನೊ, ಸರಿಯೆಂದು ತಲೆಯಾಡಿಸಿ ಜತೆಗೆ ಬಂದಳು. ಗೂ ರೋಂಗ್ ಅವಳ ಭಾಷೆಯೆ ಮಾತನಾಡುವುದರಿಂದ ನಾನು ವಿವರಿಸುವ ಸರ್ಕಸ್ಸು ಮಾಡಬೇಕಾದ ಗೋಜಿರಲಿಲ್ಲ. ಅನಿರೀಕ್ಷಿತವಾಗಿ ತಡವಾಗದಂತೆ ಬೇಗನೆ ಮನೆಗೆ ಹೋಗಬಹುದೆನ್ನುವ ಕಾರಣಕ್ಕೊ ಏನೊ ಪ್ರಪುಲ್ಲವಾದಂತೆ ಅವಳ ಮುಖ ಮಂದಹಾಸದಿಂದ ತುಂಬಿಕೊಂಡಿತ್ತು..

ಆಗ ಅದು ಇದು ಮಾತನಾಡುತ್ತ ಇರುವಾಗ, ಮರೆತುಹೋಗಿದ್ದ ಅವಳ ಹೆಸರನ್ನು ವಿಚಾರಿಸಿಕೊಂಡೆ. ಅದಕ್ಕುತ್ತರವಾಗಿ ಒಂದೆ ಮಗುವಿಗೆ ಪರವಾನಗಿಯಿರುವ ನಾಡಿನಲ್ಲಿ ತಾನು ಹೇಗೆ ಎರಡನೆಯವಳಾಗಿ ಹುಟ್ಟಿದೆ, ತನ್ನ ಹೆಸರಲ್ಲೇಕೆ ‘ದುಪ್ಪಟ್ಟು’ ಎನ್ನುವ ಅರ್ಥವಿದೆ ಎಂದೆಲ್ಲ ವಿವರಿಸಿ ತನ್ನ ಹೆಸರಿನ ಹಿನ್ನಲೆಯನ್ನು ಪೂರ್ತ ತೆಗೆದಿಟ್ಟುಬಿಟ್ಟಳು.. ಅವಳು ಮಾತಾಡಿದ್ದಂತೆ ಅದರ ಹಿನ್ನಲೆಯಲ್ಲಿ ಆ ಜಾಗದ ಪದ್ದತಿ, ಸಂಸ್ಕೃತಿ, ಆಚಾರ, ವಿಚಾರಗಳ ತುಣುಕು ತಂತಾನೆ ಗೋಚರಿಸುತ್ತ ನೈಸರ್ಗಿಕ ನಿಯಮಕ್ಕು, ಮಾನವ ನಿರ್ಮಿತ ನಿರ್ಬಂಧಕ್ಕು ಇರುವ ಕೊಂಡಿಗಳನ್ನೆ ಕುರಿತು ಆಲೋಚಿಸುತ್ತಿದ್ದಾಗ ದಾರಿ ಸವೆದಿದ್ದೆ ತಿಳಿಯದಂತೆ ಅವಳು ಇಳಿಯಬೇಕಾದ ತಾಣ ಬಂದುಬಿಟ್ಟಿತ್ತು…

ಅದೇ ಮುಗುಳ್ನಗೆಯೊಂದಿಗೆ ‘ಥ್ಯಾಂಕ್ಸ್’ ಹೇಳಿ ಹೋದವಳು ಆಡಿದ ಮಾತುಗಳೆ ಕಿವಿಯಲ್ಲಿ ಗುನುಗುತ್ತಿದ್ದವಾಗಿ ಅದನ್ನು ಕಳಚಿ ಹಗುರಾಗಲೆಂದು, ಅಲ್ಲೆ ಕೆಲವು ಸಾಲುಗಳನ್ನು ಗೀಚತೊಡಗಿದೆ – ಪದ್ಯದ ರೂಪದಲ್ಲಿ. ಸ್ಥಳೀಯತೆಯ ಒಂದು ಕಿರುನೋಟಕ್ಕೆ ಬೆಳಕು ಚೆಲ್ಲುವ ಈ ಸಾಲುಗಳು ಅಲ್ಲಿನ ಸ್ಥಿತಿಗತಿಯ ಪ್ರತಿಬಿಂಬವೊ, ಅಥವಾ ನಮ್ಮ ದೃಷ್ಟಿಕೋನದಲ್ಲಿ ನಾ ಕಂಡ ಚಿತ್ರವೊ, ಅಥವ ಅವಳ ನೈಜ ಭಾವನೆಯ ಅಂತರಾಳದ, ಹೇಳಿಕೊಳ್ಳಲಾಗದ ಅನಿಸಿಕೆಯೊ – ಅದೆಲ್ಲವು ಮಿಶ್ರವಾದ ಕಲಸುಮೇಲೋಗರದ ಅನಿಸಿಕೆಯೊ ಗೊತ್ತಿಲ್ಲ. ಮೂಡಿಬಂದದ್ದನ್ನು ಹಾಗೆಯೆ ಮೂಡಿಸಿದ್ದೇನೆ ಪದಗಳ ತೊಡುಗೆಯುಡಿಸಿ 🙂

(ಸೂಚನೆ: ಮೂಲ ಹೆಸರನ್ನು ಬದಲಿಸಿದ್ದೇನೆ)

ಬೇಡದ ಮಗಳೇ ?
_____________________________

ಜಂಗ್ ಶುವಾಂಗ್ ಮಿಂಗ್
ಶುವಾಂಗ್ ಅಂದರೆ ದುಪ್ಪಟ್ಟಂತೆ –
ಮಿಂಗ್ ಕುಟುಂಬದ ಹೆಸರು
ಬೆನ್ನಿಗೆ ಬಿದ್ದವಳು ಇಮ್ಮಡಿ ತಾನೆ ? ||

ಪಾಪ ಗೊತ್ತಲ್ಲಾ, ಒಂದೆ ಕಂದನ
ಮಾತ್ರ ಕೇಳಿಸಬಹುದಂತೆ ಆಕ್ರಂದನ
ದಂಪತಿಗೊಂದೆ ಮಗು ತೂಕ ಹಾಕಿ
ನ್ಯಾಯಬೆಲೆಯಂಗಡಿ ಸರಕು ಸಂತಾನ ||

ಕೇಳಬೇಕಲ್ಲಾ (ಕೆಲ) ದಂಪತಿಗಳು
ಹಾಳು ಮಗನಾಗಿದ್ದರೆ ಚೆನ್ನಿತ್ತಲ್ಲವೆ ?
ಒಂದೆ ಕಲ್ಲಿಗುರುಳಬೇಕು ಹಣ್ಣೊ ಕಾಯೊ
ಅವಳಿ ಬವಳಿ ಸಿಕ್ಕ ಪಾಲಷ್ಟೆ ಬಳುವಳಿ ||

ತವಕ, ತೆವಲಿಗೊಂದು ದಾರಿ ಇದ್ದದ್ದೆ ಬಿಡಿ
ಬೇಕೇ ಬೇಕೆಂದರೆ ತೆರಬೇಕು ರೊಕ್ಕಾ ಮೊತ್ತ
ಕಾಸು ಕೊಟ್ಟು ಮಡಿಲ ತುಂಬುವುದುಂಟೆ ?
ಎರಡನೆ ಜೀವಕೆ ಪರವಾನಗಿ ಗಂಡಾಶಯಕೆ ||

ಕೇಳಬೇಕಲ್ಲ ಕೊಡುವಾತ ಕಾಸಿನ ಮಾತ ?
ನಕ್ಕನಂತೆ ಮತ್ತೊಬ್ಬಳನು ಮುಡಿಸಿ ಮಡಿಲಿಗೆ
ಅದ್ವಿತೀಯವಿಲ್ಲ, ದ್ವಿತೀಯ ಹೆಸರಾಯ್ತಂತೆ
ಹಂಚಿದ ವೃತ್ತಾಂತದೆ ನಗುವಿತ್ತೆ, ವಿಷಾದವಿತ್ತೆ ? ||

—————————————–
ನಾಗೇಶ ಮೈಸೂರು
—————————————–

ನಾಗೇಶ, ಮೈಸೂರು, ನಾಗೇಶಮೈಸೂರು, ಶುವಾಂಗ್, ಮಿಂಗ್, ದುಪ್ಪಟ್ಟು, ಹೆಸರು, ಬೇಡದ, ಮಗಳೆ, nagesha, mysore, nageshamysore