00353: ತಲೆಯಿಲ್ಲದವಗಿಲ್ಲ ತಲೆನೋವು

00353: ತಲೆಯಿಲ್ಲದವಗಿಲ್ಲ ತಲೆನೋವು (ಲಘು ಹರಟೆ)
_____________________________________

ಮೊನ್ನೆ ಯಾಕೋ ತಲೆ ಭಾರವೆಂದು ನರಳುತ್ತ ಕೂತಿದ್ದಾಗ ಹೀಗೆ ಯಾರೋ ಸಿಕ್ಕರು. ನಮಸ್ಕಾರದ ಔಪಚಾರಿಕತೆಯೆಲ್ಲ ಮುಗಿದ ಮೇಲೆ ಗಮಗಮಿಸುತ್ತಿದ್ದ ಮೂಲ ನೀಲಗಿರಿ ತೈಲದ ವಾಸನೆ ಹಿಡಿದು, “ಯಾಕೆ ಹುಷಾರಿಲ್ವಾ?”ಎಂದರು.

” ಏನಿಲ್ಲ ಸ್ವಲ್ಪ ತಲೇನೋವು..” ಎಂದೆ ದೇಶಾವರಿ ಪೆಚ್ಚು ನಗೆ ಬೀರುತ್ತ.

” ಒಂದಷ್ಟು ಬಿಸಿ ಕಾಫಿ ಕುಡುದು ಬೆಚ್ಚಗೆ ಮಲಗೇಳೋದಲ್ವ ? ಎಲ್ಲಾ ಸರಿಯಾಗಿರೋದಲ್ಲಾ ?” ಎಂದು ತಲೆ ನೋವಿನ ಯೂನಿವರ್ಸಲ್ ಸಲ್ಯೂಷನ್ ನೆನಪಿಸಿದರು..

” ಈಗ ಸ್ವಲ್ಪ ಹೊತ್ತಲ್ಲಿ ಅಮೃತಾಂಜನ್ ಹಚ್ಚಿದೀನಿ.. ಸ್ವಲ್ಪ ಹೊತ್ತಿಗೆಲ್ಲ ಸರಿ ಹೋಗುತ್ತೆ ಬಿಡಿ..” ಅಂದೆ ನಾನು ಮತ್ತೆ ಅದೇ ನಗೆ ನಗುತ್ತ..

“.. ನೀವು ಗಟ್ಟಿಗರು ಬಿಡಿ ಮಾರಾಯ್ರೆ… ಅಂತು ನಿಮಗೆ ತಲೆಯಿರೊದಂತು ಖಚಿತಾ ಆದಂಗಾಯ್ತು ಬಿಡಿ..”

“ಹಾಂ..?”

“ತಲೆಯಿದ್ದೊರಿಗೆ ಮಾತ್ರ ತಾನೆ ತಲೆ ನೋವ್ ಬರೋದು ? ಏನೇನೊ ಯೋಚಿಸಿ, ಚಿಂತಿಸಿ ತಲೆಗೆ ಒಳ್ಳೆ ಕೆಲ್ಸ ಕೊಡ್ತಿರಾ ಅಂತ ತಾನೆ ಅರ್ಥಾ ? ಅಲ್ಲಿಗೇ ನಿಮಗೆ ತಲೆ ಇದೆ ಅನ್ನೋದ್ ಗಟ್ಟಿ ಆದಂಗಲ್ವಾ ಮಾರಾಯ್ರೆ ? ಅದೇ ನನ್ನ ನೋಡಿ ! ತಲೆನೋವೆ ಬರಲ್ಲಾ.. ನಂಗೆ ಆಗಾಗ ಅನುಮಾನ ಬಂದ್ಬಿಡುತ್ತೆ ತಲೆ ನಿಜವಾಗ್ಲೂ ಇದೆಯೊ, ಇಲ್ವೊ ಅಂತಾ..” ಎಂದು ತಮ್ಮ ಮೇಲೆ ಜೋಕ್ ಮಾಡಿಕೊಳ್ಳುತ್ತ ಇನ್ನೊಂದು ಹೊಸ ತರದ ಹುಳಾ ಬಿಟ್ಟು ಹೊರಟುಹೋದರು..!

ಹೀಗೆ ತೀರಾ ದೊಡ್ಡ ತರದ ಗಿರಾಕಿ ಎಂದನಿಸಿಕೊಳಲು ಹೋಗದೆ, ಎಲ್ಲರನ್ನೂ ಅವರೆ ಸ್ವಯಂ ವೈದ್ಯರಾಗುವಂತೆ ಮಾಡುವ ಅಥವಾ ಹತ್ತಿರದವರನ್ನೆ ತಜ್ಞ ವೈದ್ಯರನ್ನಾಗಿಸುವ ತಲೆ ನೋವು ಎಲ್ಲರಿಗೂ ಸುಪರಿಚಿತವೆ ಸರಿ. ತೀರಾ ಪರಿಚಿತರೆನ್ನುವ ಸದರಕ್ಕೊಳಗಾಗಿ ಕೊಂಚ ಅಸಡ್ಡೆಗು ಒಳಗಾಗುವ ಈ ತಲೆನೋವಿಗೊಂದು ಕೈ ಕುಲುಕುವ ಯತ್ನ ಈ ಸರಳ ಕವನದ ಮೂಲಕ 🙂

ತಲೆ ಶೂಲೆ, ತಲೆ ಶೂಲೆ
ಹೆಣ ಭಾರ ಹೆಗಲ ಮೇಲೆ
ಜಗದ ಹೇರು ಹೊತ್ತ ಹಾಗೆ
ಸಿಡಿಯಿತೇನು ತಲೆ ಸೋಗೆ ||

ಎಳೆಯ ತಲೆ ಬಲಿತ ತಲೆ
ಲೆಕ್ಕವಿಲ್ಲ ಎಲ್ಲ ಒಂದೆ ಬೆಲೆ
ಬಂದಾಗ ಸಮ ಶಿರೋಭಾರ
ಬಾಮು ಗುಳಿಗೆಗೆ ವ್ಯಾಪಾರ ||

ಅಂಜನ ಹಾಕೋ ಅಮೃತ
ಹಣೆ ಮೂಗು ಕುತ್ತಿಗೆ ಸುತ್ತ
ಹಚ್ಚಿ ನೀಲಗಿರಿ ದಟ್ಟ ವಾಸನೆ
ಹೊದ್ದೆ ಮಲಗೆ ಗಾಢ ಸುಮ್ಮನೆ ||

ಕಳೆದುಹೋದರೆಲ್ಲಾ ಬೆವರಲೆ
ಅಳಿದುಳಿದ ಜಾಡು ಹಿಂದಲೆ
ಬಿಸಿ ಕಾಫಿ ಕಡು ಕುಡಿದ ತೃಪ್ತಿ
ಶಿರವೇದನೆ ಮಡು ಕರಗಿ ಜಪ್ತಿ ||

ಸಿಕ್ಕವರೊಬ್ಬರ ತಮಾಷೆ ಮಾತು
ತಲೆಯಿರುವುದು ಖಾತರಿಯಾಯ್ತು !
ಬರದಿದ್ದರೆ ತಲೆ ನೋವು ಉಚಿತ
ಆಗಲೆಂತು ತಲೆಯಿರುವಾ ಖಚಿತ? ||

(ತಲೆ, ನೋವು, ಹರಟೆ, ನಾಗೇಶ, ಮೈಸೂರು, ನಾಗೇಶಮೈಸೂರು, nagesha, mysore, nageshamysore)