00004 – ಗಮನೇಶ್ವರಿಯ ಗಮಕ, ವಯಸ್ಸಿನಾ ಮಯಕ…!

ಗಮನೇಶ್ವರಿಯ ಗಮಕ, ವಯಸ್ಸಿನಾ ಮಯಕ…!
ಬಹುಶಃ ನಮ್ಮ ವಯಸಿನೆಲ್ಲರಿಗು ಹೀಗೆ ಆಗುತ್ತದೋ ಏನೊ ಗೊತ್ತಿಲ್ಲ. ಅಥವ ಇದು ತೀರಾ ವೈಯಕ್ತಿಕವಾದ ಭಿನ್ನ ವ್ಯಕ್ತಿಗತ ಅನುಭವವೂ ಇರಬಹುದು. ಅದನ್ಹೇಳಲೆ ಈ ಪೀಠಿಕೆ ಹಾಕಿದ್ದು.

ಮೊನ್ನೆ ಹೀಗಾಯ್ತು ; ದಿನಸಿ, ತರಕಾರಿ ಇತ್ಯಾದಿ ವಾರದ ಅಗತ್ಯಗಳ ಪಟ್ಟಿ ಹಿಡಿದು ವಾಕಿಂಗ್ ಹೊರಟಿದ್ದೆ. ಕಿವಿಯಲ್ಲಿದ್ದ ಹೆಡ್ಫೋನಿನಿಂದ ಗಾನಧಾರೆ ಸುಲಲಿತವಾಗಿ ಹರಿದಿತ್ತು. ಮುಕ್ಕಾಲು ಭಾಗ ಕನ್ನಡದ ಹಾಡುಗಳಿದ್ದರು ನಡುನಡುವೆ ಸುಳಿಯುವ ಒಂದಷ್ಟು ಇಂಗ್ಲೀಷು ಹಾಡುಗಳು. ಇದರ ಮಧ್ಯೆ ನುಸುಳುವ ಅಪರೂಪದ ಅತಿಥಿಯಂತೆ ಹಿಂದಿ ಮತ್ತು ಚೈನೀಸ್ ಹಾಡುಗಳು. ಹಾಂ! ಕೊಂಚ ತಾಳಿ – ಇದರರ್ಥ ನನಗೆ ಚೈನಿಸ್ ಭಾಷೆ ಬರುವುದೆಂದಲ್ಲ. ಯಾವುದೊ ಕಿವಿಗಿಂಪಾದ ಒಂದಷ್ಟು ಹಾಡುಗಳನ್ನು ಚೀನಿ ಸಹೋದ್ಯೋಗಿಯೊಬ್ಬರು ಆರಿಸಿ ಕೊಟ್ಟಿದ್ದರು. ಅದೆ ಹಾಡುಗಳು ಮತ್ತೆ ಮತ್ತೆ ಅಲ್ಲೆ ಗಿರಕಿ ಹಾಕುತ್ತಿದ್ದವಷ್ಟೆ. ಇನ್ನೂ ಹಿಂದಿಯ ಭಾಷಾಪಾಂಡಿತ್ಯ – ಚೀನಿಗಿಂತ ವಾಸಿಯೆನ್ನಬಹುದಾದರು, ಬರಿ ಅರೆಬರೆ ಪಾಂಡಿತ್ಯ; ಮೂರು ಪದ ಅರ್ಥವಾದರೆ ಇನ್ನಾರು ‘ಶುದ್ದ ಪಿಟಿಪಿಟಿ’. ವಾಕ್ಯದಲಿ ಗೊತ್ತಾದ ಒಂದೆರಡು ಪದದ ಬೆನ್ನು ಹಿಡಿದು ಕೊಂಚ ಊಹೆ, ಅನುಭವ ಸೇರಿಸಿ ವಾಕ್ಯದ ಒಟ್ಟಾರೆ ಅರ್ಥ ಗ್ರಹಿಸುವ ‘ಸ್ಟ್ರೀಟ್ ಸ್ಮಾರ್ಟ್’ ವಿಧಾನವಷ್ಟೆ ಗೊತ್ತಿದ್ದುದ್ದು. ಅದೂ, ಸರಳ ಪದ / ವಾಕ್ಯಪುಂಜವಿದ್ದರೆ ಮಾತ್ರ. ತುಸು ಕ್ಲಿಷ್ಟಕರ ಪದವೊ, ಅಥವಾ ವೇಗಪೂರಿತ ಸಂಭಾಷಣೆಯೊ ಬಂದರೆ, ನಾನಲ್ಲೆ ಪಡ್ಚ!

ಅಲ್ಲಿ ಆಗ್ಗಾಗ್ಗೆ ಬರುವ ಹಿಂದಿ ಹಾಡುಗಳಲ್ಲಿ ಒಂದೆರಡು ನಿಜಕ್ಕೂ ನನಗೆ ಬಲು ಪ್ರಿಯವಾದ ಹಾಡುಗಳು – ಕೇಳುವ ಮಾಧುರ್ಯದಿಂದ. ಅದರಲ್ಲೊಂದು ‘ಆಶಾ’ ಚಿತ್ರದ ‘ಶೀಷ ಹೊ ಯ ದಿಲ್ ಹೊ, ಆಖಿರ್ …ಚೂಟ್ ಜಾತಾ ಹೈ…’ ಹಾಡು. ಯಾವಾಗಲೆ ಆ ಹಾಡು ಬಂದರೂ ಮನ ಯಾವುದೆ ಗಮನದಲಿದ್ದರೂ, ತಟ್ಟನೆ ಎಲ್ಲಾ ಸ್ಥಗಿತಗೊಳಿಸಿ ಆ ಹಾಡಿನ ಆರಂಭ ಮತ್ತು ಪಲ್ಲವಿಯತ್ತ ಮುಳುಗಿ ಹೋಗುತ್ತಿತ್ತು. ನನಗೆ ಮೊದಲಿಗೆ ಆ ಹಾಡು ಇಷ್ಟವಾದದ್ದೆ ಆ ಹಾಡಿನ ರಾಗ, ಮಾಧುರ್ಯ ಮತ್ತು ತಾಳ ಹಾಕಿಸುವಂತ ಲಯಬದ್ದವಾದ ಹಾಗೂ ಮೆಲುವಾದ ಸಂಗೀತದಿಂದ.

ಆ ಹಾಡಿನಲ್ಲಿರುವ ಕೆಲವು ಸರಳ ಹಿಂದಿ ಪದಗಳಿಂದಾಗಿ (ಉದಾಹರಣೆಗೆ ಹೃದಯವನ್ನು ಗಾಜಿಗೆ ಹೋಲಿಸಿದ ಸಾಮತಿ) ಹಾಡಿನ ಒಟ್ಟಾರೆ ಭಾವ ಮತ್ತು ಒಳಾರ್ಥ ಸುಮಾರಾಗಿ ಅಂತರ್ಗತಕ್ಕೆ ಅರಿವಾಗುತ್ತಿದ್ದುದರಿಂದಲೊ ಏನೊ, ಹಾಡಿನ ಮಾಧುರ್ಯ ಇನ್ನು ಹೆಚ್ಚಿದಂತೆ ಭಾಸವಾಗಿ ಇನ್ನು ಪ್ರಿಯವೆನಿಸುತಿತ್ತು. ಕೆಲವೊಮ್ಮೆ ಅರ್ಥವಾಗದ ಅಥವ ಅರೆಬರೆ ಅರ್ಥವಾದ ಭಾವಗಳು ಊಹಾಲೋಕದ ಮಜ್ಜನದಡಿ ತನಗಿಷ್ಟವಾದ ಯಾವಾವುದೊ ನವಿರು ಭಾವನೆಗಳನ್ನು ಆರೋಪಿಸಿಕೊಂಡು ಅರ್ಥವಾಗದ ಭಾಗವೆ ಅದರ ಮಾಧುರ್ಯವನ್ನು ಹೆಚ್ಚಿಸುವಂತೆ ಮಾಡಿಬಿಡುತ್ತಿದ್ದವು. ಹಿಂದಿ ಹಾಡುಗಳಲ್ಲ ಹೆಚ್ಚು ಕಡಿಮೆ ನನಗೆ ಇದೆ ಪಾಡಾಗಿದ್ದರಿಂದ, ಇದರಲ್ಲೆ ಒಂದು ತರ ಖುಷಿ, ಆನಂದದ ಅನುಭೂತಿಯನ್ನು ಕಾಣುತ್ತಿದ್ದೆನೆಂದು ಕಾಣಿಸುತ್ತದೆ. ಅಂತೂ ಅದೆಲ್ಲ ಹೇಗಾದರೂ ಇರಲಿ, ನನಗೆ ಅದೊಂದು ಬಹು ಪ್ರಿಯವಾದ ಹಾಡಾಗಿತ್ತೆಂಬುದು ನಿರ್ವಿವಾದ ಹಾಗು ಸತ್ಯದ ಮಾತು.

ಆ ದಿನವು ಆ ಹಾಡು ಗುನುಗಲಾರಂಭಿಸಿದಾಗ ಚಕ್ಕನೆ ಒಂದು ಆಲೋಚನೆ ಬಂತು. ಈಚೆಗೆ ಕೆಲ ಹಿಂದಿ ಮಾತಾಡುವ ಸ್ನೇಹಿತರ ಸಹವಾಸದಿಂದಾಗಿ ನನ್ನ ‘ಹಿಂದಿ ಭಾಷಾ ಜ್ಞಾನ’ ಮೊದಲಿಗಿಂತ ಕೊಂಚ ಪರವಾಗಿಲ್ಲ ಎನ್ನುವ ಮಟ್ಟ ಮುಟ್ಟಿದ್ದರಿಂದ , ಆ ಜ್ಞಾನವನ್ನೆ ಬಳಸಿ ಈ ಹಾಡಿನ ಪೂರ್ಣ ಅರ್ಥ ತಿಳಿಯಲೇಕೆ ಪ್ರಯತ್ನಿಸಬಾರದು ಎನಿಸಿತು. ಶೇಕಡಾ ನೂರಲ್ಲದಿದ್ದರು ಮೊದಲಿಗಿಂತ ಹೆಚ್ಚು ಅರ್ಥವಾಗುವ ಸಾಧ್ಯತೆ ಹೆಚ್ಚಿತ್ತು. ಅಲ್ಲದೆ ನಡೆಯುತ್ತ ಹೋಗುವಾಗ ಮಾಡಲಿನ್ನೇನು ಕೆಲಸವು ಇರಲಿಲ್ಲ. ಬಹುಶಃ ಒಂದೆರಡು ಬಾರಿ ಕೇಳಬೇಕಾಗಬಹುದೇನೊ; ಹಾಗನಿಸಿದ್ದೆ, ಆ ಹಾಡನ್ನು ‘ರಿಪೀಟ್ ಮೋಡ್’ ಗೆ ಸೆಟ್ ಮಾಡಿ ಹಾಡನ್ನು ಹಾಡಿನ ಸಾಹಿತ್ಯವನ್ನು ಗಮನವಿಟ್ಟು ಕೇಳತೊಡಗಿದೆ. ಅಲ್ಲಿಂದಲೆ ಶುರುವಾಯ್ತು ನೋಡಿ ತಮಾಷೆ!

ಈ ಮನವೆಂಬ ಮರ್ಕಟನ ಚಿಂತೆ ಚಿಂತನೆಗಳ ಪರಿ ಹೀಗೆ ಅಂತ ಹೇಳುವಂತಿಲ್ಲಾ ನೋಡಿ. ಈ ಕಾಲದ ಕೆಲಸದ ಒತ್ತಡ, ಬದಲಾವಣೆಯ ವೇಗ, ಸಮಾನಾಂತರ ಕಾರ್ಯ ಚಟುವಟಿಕಾ ಸೂತ್ರ (ಮಲ್ಟಿ ಟಾಸ್ಕಿಂಗ್) ಇತ್ಯಾದಿಗಳೆಲ್ಲ ಸೇರಿ ಗಮನೀಕರಿಸುವ ಸಾಮರ್ಥ್ಯದ ಮೇಲೆ ಅದೆಷ್ಟು ಪರಿಣಾಮ ಬಿರಿದ್ದವೆಂದು ಅಲ್ಲಿಯತನಕ ಅರಿವಿರಲಿಲ್ಲ. ಕೊಂಚ ನಿಗಾವಹಿಸಿ ಗಮನ ಕೆಂದ್ರೀಕರಿಸಿದರೆ ಏನಾದರೂ ಅರಿತು, ಕಲಿತುಬಿಡಬಹುದೆಂಬ ಭಾವನೆ ಮನದಲಿತ್ತು. ಆದರೆ ಆ ದಿನ ಮಾತ್ರ ಏನು ಮಾಡಿದರು ಹಾಡಿನ ಆರಂಭದಿಂದ ಕೊನೆಯತನಕ ಹಾಡಿನ ನುಡಿಗಟ್ಟು ಮತ್ತು ಸಾಹಿತ್ಯವನ್ನು ಸಂಪೂರ್ಣವಾಗಿ ಕೇಳಲು ಆಗಲೇ ಇಲ್ಲ! ಪ್ರಜ್ಞಾಪೂರ್ವಕವಾಗಿ ಹಾಡಿನ ಆರಂಭದಿಂದಲೆ ಆಲಿಸುತಿದ್ದ ಮನ, ಕೆಲ ಸಾಲು ಕರಗುತ್ತಿದ್ದಂತೆ ಇದ್ದಕ್ಕಿದ್ದಂತೆ ಮನವಿನ್ನೆಲ್ಲೊ ತೇಲಿ , ಕೆಲಸದ್ದೊ ಅಥವಾ ಮತ್ತಿನ್ನ್ಯಾವುದೊ ಆಲೋಚನೆ ಅರಿವಿಲ್ಲದ ಹಾಗೆ ಮನವನ್ಹೊತ್ತೊಯ್ದು ಹಾಡಿನ ಲಯದಿಂದಲೆ ಸಂಪೂರ್ಣ ಮಾಯವಾಗಿಸಿ, ಮತ್ತೊಂದು ಲೋಕಕ್ಕೆ ಎತ್ತೆಸೆದು ಕೂರಿಸಿಬಿಡುತ್ತಿತ್ತು. ತಟ್ಟನೆ ಮತ್ತಿನ್ನೊಂದು ಹಾಡಿನ ಸಾಲು , ಹಾಡಿನ ಸಾಮ್ರಾಜ್ಯಕ್ಕೆ ಎಳೆದು ತರುವತನಕ ಹಾಗೆಲ್ಲಿಗೊ ಹೋದ ಅನುಭವವೆ ಗಮ್ಯಕ್ಕೆ ಸಿಗದೆ ಹೋಗುತ್ತಿತ್ತು. ಅದೂ ಸಾಲದೆಂಬಂತೆ, ಈ ಪರಿ ಘಟಿಸುತ್ತಿದ್ದ ಹಂತ, ಸಮಯ ಮತ್ತು ಅದರ ಕರಾರುವಾಕ್ಕಾದ ಪುನರಾವರ್ತನೆಯ ನಿಖರತೆ! ಆ ಹಾಡಿನಲ್ಲಿ ನನಗೆ ಒಂದು ಸಾಲು ತುಂಬಾ ತೊಂದರೆ ಕೊಡುತ್ತಿತ್ತು – ಬಹುಶಃ ಅದರಲ್ಲಿದ್ದ ಪದಗಳ ಅರ್ಥವೊ, ಉಚ್ಚಾರಣೆಯ ತರವೊ ಅಥವ ಆ ಹಾಡಿದ ವೇಗವೊ – ಪ್ರತಿಬಾರಿ ಆ ಸಾಲಿಗ್ಹತ್ತಿರ ಬಂದಾಗೆಲ್ಲ ಅದರ ‘ಝಳಕ್’ ತಪ್ಪಿಸಿಕೊಂಡು ಹೋಗಿಬಿಡುತ್ತಿತ್ತು. ಈ ಬಾರಿ ಆ ಸಾಲಿಗೆ ಗಮನ ಕೊಟ್ಟೆ ಹಿಡಿದು ಹಾಕಬೇಕೆಂದು ನಿರ್ಧರಿಸಿಯೆ ಆಲಿಸ ಹೊರಟಿದ್ದು. ಆ ಸಾಲು ಬರುವ ಹೊತ್ತಿಗೆ ಸರಿಯಾಗೆ ಮನವೆಲ್ಲೊ ಕಳೆದುಹೋದಂತಾಗಿ, ಆ ಸಾಲು ಮುಗಿಯುವ ಹೊತ್ತಿಗೆ ಸರಿಯಾಗಿ ಮತ್ತೆ ಹಾಡಿನ ಪ್ರಪಂಚಕ್ಕೆ ವಾಪಸ್ಸಾಗುತ್ತಿತ್ತು! ಮೊದಲ ಬಾರಿ ಹಾಗಾದಾಗ ಗಮನ ತಪ್ಪಿತೆಂದುಕೊಂಡು ಹಾಡನ್ನು ರೀವೈಂಡು ಮಾಡಿ ಮತ್ತೆ ಕೇಳತೊಡಗಿದೆ. ಎಲಾ ಇವನಾ! ಮತ್ತೆ ಅದೆ ಸಾಲು, ಸಮಯಕ್ಕೆ ಸರಿಯಾಗಿ ಅದೇ ರೀತಿ ಮನವೆಲ್ಲೊ ಕಳೆದು ಹೋಗುವುದೆ?! ಬೆಚ್ಚಿದಂತಾಗಿ ಮತ್ತೆ ರೀವೈಂಡ್ ಮಾಡಿ ಮೊದಲಿನಿಂದ ಮತ್ತೆ ಶುರು ಹಚ್ಚಿದೆ. ತಥ್ ತೇರೀಕೆ! ಮತ್ತೆ ಅದೆ ರಾಮಾಯಣ, ಅದೇ ಗೋಳು, ಅದೆ ಸಾಲು , ಅದೆ ರೀತಿಯಲ್ಲಿ!! ನನಗಂತು ರೇಗಿ ಹೋಯ್ತು , ಪದೆ ಪದೆ ರೀವೈಂಡ್ ಮಾಡಿ. ಇನ್ನು ಮೊದಲಿನ ಚರಣವನ್ನು ದಾಟಿರಲಿಲ್ಲ, ಅಲ್ಲೆ ಇಷ್ಟೊಂದು ತೊಡಕು. ಇನ್ನು ಪೂರ್ತಿ ಹಾಡೆ ಕೇಳರಿಯುವ ಗುರಿ ಬೇರೆ. ಬಡ್ಡಿಮಗಂದೆ! ನಿನಗೆ ಸರಿಯಾಗಿ ಮಾಡುತ್ತೀನಿ ತಾಳು ಎಂದು ಮನದಲ್ಲೆ ಬೈಯ್ಯುತ್ತ ಗಮನ ಕೇಂದ್ರೀಕರಿಸುತ್ತ ಮತ್ತೊಮ್ಮೆ ರಿವೈಂಡ್ ಮಾಡಿದೆ.

ಸದ್ಯ! ನಾನು ನಡೆಯುತ್ತಿದ್ದ ಪುಟ್ಪಾತಿನ ಹಾದಿ ಟ್ರಾಫಿಕ್ಕು ಹಾಗೂ ಇನ್ನಿತರ ಜಂಜಾಟಗಳಿಂದ ದೂರವಾಗಿಸಿ ಸಾಕಷ್ಟು ಯೋಚನಾರಹಿತನಾಗಿ ನಡೆಯಲನುವು ಮಾಡಿಕೊಟ್ಟಿತ್ತು. ಇನ್ನು ಮೊದಲ ಸಾಲಿನ ಆಲಾಪವೆ ಗುಣುಗುಣಿಸಿತ್ತಾಗಿ ದಾರಿಯ ಗಿಡದ ಹೂ ಎಲೆಗಳನ್ನೆಲ್ಲ ನೇವರಿಸುತ್ತ , ಜತೆಗೆ ಮನದಲ್ಲೆ ಗುನುಗುತ್ತಾ ಸಾಗಿದ್ದೆ. ಒಳಮನದಲ್ಲಂತು ಬೇರೇನೊ ಆಲೋಚನೆ ಸದಾಕಾಲವೂ ಇದ್ದದ್ದೆ. ಹೆಚ್ಚೆಚ್ಚು ಹೆಚ್ಚದ ಸಂಬಳ, ಬರದ ಪ್ರಮೋಶನ್ನು, ಬೈದ ಬಾಸು, ಜಗಳವಾಡಿದ ಹೆಂಡತಿ, ಮಾತು ಕೇಳದ ಮಗ, ಚಾದಂಗಡಿಯ ಭಟ್ಟ – ಹೀಗೆ ಏನೇನೊ ಸುಳಿದಾಡುವ ಚಿತ್ರದ ನಡುವೆಯು ತುಟಿ ನಾಲಿಗೆ ಮೆಲುವಾಗಿ ಹಾಡಿಕೊಂಡೆ, ಹಾಡಿಗೆ ದನಿಗೂಡಿಸಿಕೊಂಡೆ ಸಾಗಿತ್ತು – ಸಾಲು ಸಿಕ್ಕಿದ ತಕ್ಷಣ ಕಬಳಿಸಿ ಬೇಟೆಯಾಡಲು ಸಿದ್ದನಿರುವ ಯೋಧನಂತೆ. ಈ ಬಾರಿ ಸಿಕ್ಕೆ ಸಿಗುವುದೆಂಬ ಹಮ್ಮಿನಲೆ ಮುಂದುವರೆದಿದ್ದವ ಮತ್ತೆ ತಟ್ಟನೆ ದಾರಿಯಲ್ಲೆ ನಿಂತೆ….ಅರೆ, ಆ ಸಾಲಾಗಲೆ ಮುಗಿದು ಹೋದಂತಿದೆಯಲ್ಲಾ?!

ಹಹ್ಹಹಹ್ಹ!! ಈ ಬಾರಿಯು ಮತ್ತೆ ಬೇಸ್ತು ಬಿದ್ದಿದ್ದೆ!

ಹೀಗದೆಷ್ಟು ಬಾರಿ ಆಯಿತೊ ನೆನಪಿಲ್ಲ. ಆದರೆ ಒಂದೆ ಒಂದು ಬಾರಿಯು ಸಂಪೂರ್ಣ ಗಮನವಿಟ್ಟು ಕೇಳಿ ಆ ಸಾಲನ್ನು ನೆನಪಿಟ್ಟುಕೊಳ್ಳುವ, ಅರ್ಥಮಾಡಿಕೊಳ್ಳುವ ನನ್ನ ಪ್ರಯತ್ನ ಯಶಸ್ಸಾಗಲೆ ಇಲ್ಲ. ಆ ದಿನವಂತೂ ಅದೆಷ್ಟು ಬಾರಿ ಪ್ರಯತ್ನಿಸಿದೆನೆಂದರೆ – ತಲುಪಬೇಕಾದ ಗಮ್ಯ ಸೇರಿ ಆದ ಕಾರಣ ಬೇರೆ ದಾರಿಯಿಲ್ಲದೆ ಯತ್ನವನ್ನೆ ನಿಲ್ಲಿಸಬೇಕಾಯ್ತು. ಮತ್ತೆ ಹಿಂದಿರುಗುವ ದಾರಿಯಲ್ಲು ಹೆಚ್ಚೂ ಕಡಿಮೆ ಇದೇ ಪುರಾಣದ ಪುನರಾವರ್ತನೆಯಾದಾಗಲಂತೂ ನನಗೆ ಖಚಿತವಾಗಿ ಅನಿಸಿಬಿಟ್ಟಿತು – ನನ್ನ ಬುದ್ಧಿಶಕ್ತಿಗೇನೊ ಆಗಿಹೋಗಿದೆ, ಅಥವ ನನಗಾವುದೊ ಹೆಸರಿಸಲಾಗದ ಕಾಯಿಲೆ ಬಂದು ಸೇರಿಕೊಂಡು ಬಿಟ್ಟಿದೆ ಎಂದು. ಅಥವಾ ವಯಸ್ಸಿನ ಮಯಕ ತನ್ನ ಪ್ರಭಾವ ಬೀರಿ ಹೀಗೆಲ್ಲಾ ಆಡಿಸುತ್ತಿದೆಯೆ? ಅಂತಲೂ ಅನಿಸಿತು. ಸೋಲೊಪ್ಪಿಕೊಳ್ಳದ ಸ್ವಾಭಿಮಾನ, ಇಷ್ಟು ಸಣ್ಣ ಕಾರ್ಯವೂ ಮಾಡಲಾಗದಷ್ಟು ಅತಂತ್ರ ಸ್ಥಿತಿಗಿಳಿದುಬಿಟ್ಟಿದ್ದೇನೆಯೆ ಎಂಬ ಕಳವಳ, ಏನಪ್ಪಾ ಇದೆಂಬ ಭೀತಿ – ಎಲ್ಲಾ ಒಂದೆ ಬಾರಿ ಧಾಳಿಯುಟ್ಟು ಮನವೆಲ್ಲ ಕಲಸು ಮೇಲೋಗರವಾಗಿ ಕುಲಗೆಟ್ಟುಹೋಯ್ತು….

ಅಂತು ಹೀಗೆ ಆ ದಿನ ಪೂರ್ತಿಯೆಲ್ಲ ಆ ಕೀಳರಿಮೆಯಿಂದ ಹೊರಬರಲಾಗಲೇ ಇಲ್ಲ. ಎಷ್ಟು ಬೇಡಿದರು ಬಿಡದೆ ಕೈಗೂಡದೆ ಕಾಡಿದ ಆ ಗಮನೇಶ್ವರಿಯ ಗಮಕ ಬರಿ ಆ ಒಂದು ದಿನದ ಪರಿಪಾಡಲೊ ಅಥವಾ ವಯಸಿನ ಮಯಕದಿಂದ ತೆಕ್ಕೆಗೇರಿದ ಜೀವನ ಶಾಪವೊ ತಿಳಿಯದೆ ಒಂದು ಬಗೆಯ ಆತಂಕವೆ ಹುಟ್ಟಿಕೊಂಡಿತು. ಅದೊಂದು ಸೋಲಿನ ಮುಂದೆ ಮಿಕ್ಕೆಲ್ಲಾ ಗೆಲುವುಗಳು ಗೌಣವಾಗಿ, ನಗಣ್ಯವಾಗಿ ತೋರಿದವು. ಕೊನೆಗೆ, ಅದು ಗಮನೀಕರಣದ ತಪ್ಪಲ್ಲ, ನನಗೆ ಭಾಷೆ ಸರಿಯಾಗಿ ಬರದ ತೊಡಕಷ್ಟೆ ಎಂದು ನನಗೆ ನಾನೆ ಸಮಾಧಾನಿಸಿಕೊಂಡು , ಒಟ್ಟಾರೆ ಆ ವ್ಯರ್ಥ ಪ್ರಯತ್ನವನ್ನೆ ಕೈಬಿಟ್ಟು ಸುಮ್ಮನೆ ಹಾಡಾಲಿಸಿಕೊಂಡೆ ಗುನುಗುತ್ತ ನಡೆದೆ.

ಅರೆ! ಇದೇನಾಶ್ಚರ್ಯ …..!!

ಇಷ್ಟು ಹೊತ್ತು ಕೈ ಕೊಟ್ಟು ಪಾಡು ಪಡಿಸಿದ ಅದೇ ಸಾಲು ಮೆಲುವಾದ, ಸ್ಪಷ್ಟವಾದ ದನಿಯಲ್ಲಿ ಕೇಳಿ ಬರುತ್ತಾ ಇದೆ – ಅದೂ ಪರಿಪೂರ್ಣ ಅರ್ಥ ತಿಳಿಯುವ ಹಾಗೆ…!

ಇಷ್ಟೊತ್ತು ಅಷ್ಟೆಲ್ಲ ಒದ್ದಾಡಿದರು ಬರದ ಸಿದ್ದಿ, ಬೇಡೆಂದು ಕೈಬಿಟ್ಟು ನಿರಾಳವಾದ ತಕ್ಷಣವೆ ತಟ್ಟನೆ ಬಂದು ಹೆಗಲೇರುವುದೆ…?

ಅಂತೂ ಗಮನೇಶ್ವರಿ ದೇವಿ ಪೂರಾ ಕೈ ಬಿಟ್ಟಿಲ್ಲವೆಂದು ಅನಿಸಿ ಕೊಂಚ ಸಮಾಧಾನವಾಯ್ತು, ಕೊನೆಗೂ..!

ನಾಗೇಶ ಮೈಸೂರು, ಸಿಂಗಾಪುರ
26.03.2013

20130328-180329.jpg

8 thoughts on “00004 – ಗಮನೇಶ್ವರಿಯ ಗಮಕ, ವಯಸ್ಸಿನಾ ಮಯಕ…!”

    1. ಸುಪರ್ ಟ್ರೈಯಿಂಗ ಪ್ಲಾಫ್ ಆಯ್ತು..! ಟ್ರೈ ನಿಲ್ಲಿಸಿದ ಕೂಡಲೆ ಸಕ್ಸಸ್ ! ಕೆಲವು ಸಾರಿ ನಾವು ಅಗತ್ಯಕ್ಕಿಂತ ಜಾಸ್ತಿ ಪ್ರಯತ್ನಿಸಿ ಸಿಗೊದನ್ನ ಕಳ್ಕೊತೀವೇನೊ ಅನ್ಸುತ್ತೆ. ಆಲ್ವಾ ? ಸೋ ಕೀಪ್ ಇಟ್ ಸಿಂಪಲ್ ಇಸ್ ದ ಬೆಸ್ಟ್ ಪಾಲಿಸಿ 😊

      Like

    1. ಅರೆರೆ! ಚಮತ್ಕಾರದ ಮಾತಾಡಿ ನನ್ನ ಬಾಯೇ ಕಟ್ಟಿಸಿಬಿಟ್ಟರಲ್ಲ! ಮೊದಲೇ ಬ್ಲಾಗಿಗೆ ಗಿರಾಕಿಗಳಿಲ್ಲದೆ ನೊಣ ಹೊಡಿಯೋ ಸ್ಥಿತಿ. ಇನ್ನು ನೀವು ಹೇಳಿದ ಹಾಗೆ ಮಾಡಿಬಿಟ್ರಿ ಅಂದ್ರೆ ನೊಣಗಳಿಗು ಪರದಾಡೋ ಸ್ಥಿತಿ ಬಂದ್ಬಿಡುತ್ತೆ. ಶಿವನ ಮೇಲೆ ಭಾರ ಹಾಕಿ ಒಂದು ರೌಂಡ್ ಮುಗಿಸಿಬಿಡಿ.😊

      Like

ನಿಮ್ಮ ಟಿಪ್ಪಣಿ ಬರೆಯಿರಿ