00006 – ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(01)

00006 – ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(01)

ಪೀಠಿಕೆ :
ಎಲ್ಲರ ಜೀವನದ ಯೌವ್ವನದ ಚಾಪ್ಟರಿನಲ್ಲಿ ಎಲ್ಲೊ, ಹೇಗೊ ಒಂದೊಂದು ಹೇಳಲಾಗದೆ ಉಳಿದು ಹೋದ ಮಾತು, ಆಡಲಾಗದೆ ಹೂತು ಹೋದ ಪ್ರೀತಿ, ಪ್ರೇಮಗಳ ತಪನೆ, ಮಾಡಲಾಗದೆ ಹೋದ – ಜೀವನಕ್ಕೆ ದೊಡ್ಡ ತಿರುವು ಕೊಡಬಹುದಾಗಿದ್ದ ಒಂದು ಪುಟ್ಟ, ಮನಬಿಚ್ಚಿದ ಸಂಭಾಷಣೆ – ಎಲ್ಲವು ಯಾತನೆಗಳಾಗಿ ಕಾಡುತ್ತ, ನೆನಪುಗಳಾಗಿ ಕೊರೆಯುತ್ತ ಸಾಯದೆ ಬದುಕದೆ ನಿರಂತರ ಅತಂತ್ರವಾಗಿ ನರಳುವುದುಂಟು. ಅಂತಹ ಮೂರು ಸೀನುಗಳ ಒಂದೊಂದು ಟೇಕು ಇಲ್ಲಿದೆ ಮೂರು ಭಾಗಗಳಾಗಿ. ಬರೆದರೆ ಎಲ್ಲರ ಇದೇ ತರಹದ ಸಾವಿರ, ಲಕ್ಷ , ಕೋಟಿಗಳಾಗುವಷ್ಟು ಸರಕು ಇರುವ ಕಾರಣ ಈ ಮೂರರ ಸಾಂಕೇತಿಕತೆಯನ್ನೆ ಎಲ್ಲದರ ಪ್ರತಿನಿಧಿಯೆಂಬಂತೆ ಭಾವಿಸಿಕೊಳ್ಳಬಹುದು. ಒಂದು ವೇಳೆ ಬರೆದರು ಅಷ್ಟಾಗಿ ವ್ಯತ್ಯಾಸವಿರದ ಅದೆ ಕತೆಗಳೆ ಆಗುವುದರಿಂದ ಹೆಚ್ಚು ಪ್ರಯೋಜನವೂ ಇರದು. ಪ್ರಾಯಶಃ ಈಗಾಗಲೆ ಯಾರೆಲ್ಲ ಬರೆದು ಆಗಿಯು ಬಿಟ್ಟಿರಬಹುದು – ಈ ಮೂರನ್ನು ಸೇರಿದಂತೆ!

ಇದೊ ಮೊದಲ ಭಾಗ, ಸ್ವಾಮಿಯ ಸ್ವಗತ…!

ಸೀನ್ 01, ಟೇಕ್ 01 – ಹುಡುಗಾಟ (ಸ್ವಾಮಿಯ ಸ್ವಗತ)
————————————————————————-

ಸ್ವಾಭಿಮಾನದ ಜಲ್ಲೆಗೆ,

ಹೇಗಿದ್ದೀರಿ? ಎಲ್ಲಿದ್ದೀರಿ? ಎಲ್ಲಾ ನಿಮ್ಮ ನಿಮ್ಮ ಸಂಸಾರ, ಮಕ್ಕಳು ಮರಿಗಳ ಜತೆ ಹಾಯಾಗಿದ್ದಿರೆಂದು ಅಂದುಕೊಂಡಿದ್ದೇನೆ, ಹೌದು ತಾನೆ?

ನೋಡಿ – ನೋಡ್ತಾ,ನೋಡ್ತಾ ಹೇಗೆ ವರ್ಷಗಳೆ ಉರುಳಿಹೋಗಿದ್ದು? ಎಷ್ಟೊ ನೆನಪುಗಳು ಇನ್ನೂ ನೆನ್ನೆ, ಮೊನ್ನೆ ಆದ ಹಾಗೆ ನೆನಪಲ್ಲೆ ಭದ್ರವಾಗಿ ಕಚ್ಚಿಕೊಂಡುಬಿಟ್ಟಿವೆ; ದಿನ ಎರಡು ದಿನಕ್ಕೆ ಒಂದೊಂದು ಸಾರಿಯಾದರು ಬಂದು ದಿನಾ ಬೆಳಿಗ್ಗೆ ಕುಡಿಯೊ ಕಾಫಿಯ ಹಾಗೆ ರೆಗ್ಯುಲರಾಗಿ ಬಂದು ಭೇಟಿ ಕೊಟ್ಟು ಹೋಗುತ್ವೆ. ಕನ್ನಡಿಲಿ ನೋಡ್ತಾ ಖಾಲಿಯಾಗಿರೊ ತಲೆ, ನರೆದು ಬಿಳಿಯಾಗ್ತಾ ಇರೊ ಉಳಿದಿರೊ ಕೂದಲನ್ನು ಗಮನಿಸದಿದ್ರೆ ಅಷ್ಟೊಂದು ವರ್ಷಗಳಾಗಿದ್ದು ಗೊತ್ತಾಗೊದೆ ಇಲ್ಲ ಅನ್ಸುತ್ತೆ, ಅಲ್ವಾ?

ಪ್ರೀತಿ, ಪ್ರೇಮ ಅಂದ್ರೇನು ಅಂತ್ಲೆ ತಿಳಿಯದ ವಯಸಲ್ಲಿ ‘ಲೈನ್’ ಹೊಡ್ಕೊಂಡು ನಿನ್ಹಿಂದೆ ಬಿದ್ದಿದ್ದು ನೆನಪಿದೆಯಾ? ಈ “ಲೈನು” ಅನ್ನೊ ಪದ ಬಳಸ್ಬೇಕೂಂದ್ರೆ ಎಷ್ಟೊಂದು ಸಂಕೋಚ ಆಗುತ್ತೆ ಗೊತ್ತಾ? ಅದೆಲ್ಲಾ ತುಂಬಾ ‘ಚೀಪ್’ ಹುಡುಗರು ಮಾಡೊ ಟೈಮ್ಪಾಸ್ ಕೆಲಸ ಅನ್ನೊ ಫೀಲಿಂಗು. ಒಂದು ಪಕ್ಷ ಅದೇ ಕೆಲ್ಸಾನೇ ಆದ್ರು, ಕನಿಷ್ಠ, ಉದ್ದೇಶ ಖಂಡಿತ ತೀರ ಕಳಪೆದಾಗಿರ್ಲಿಲ್ಲ; ಯಾಕೆಂದ್ರೆ ನಾನಾಗ ನಿನ್ಹಿಂದೆ ಬಿದ್ದಿದ್ದು ಟೈಮ್ಪಾಸ್ಗಲ್ಲ ಅಥ್ವ ಆ ಅನುಭವದ ಥ್ರಿಲ್ಗೂ ಅಲ್ಲ. ನೀನು ಇನ್ನು ಹೈಸ್ಕೂಲನ್ನೆ ದಾಟದ ಎಸ್ಸೆಸ್ಸಲ್ಸಿ ಹುಡುಗಿ ಆಗ. ನಾನಾಗ ತಾನೆ ಕಾಲೇಜು ಮೆಟ್ಟಿಲ ಹತ್ತಿದ್ದೆ. ಎಲ್ಲ ಸರಿಯಾಗೆ ನಡೆದ್ರೆ, ಕಾಲೇಜು ಚಕಚಕಾಂತ ಮುಗ್ಸಿ, ‘ಜುಂ’ ಅಂತ ಕೆಲ್ಸ ಹುಡ್ಕಿ, ಪ್ರೀತ್ಸಿದವಳ್ನೆ ಕಟ್ಕೊಂಡು ಸಂಸಾರ ಸಾಗ್ಸಿ ಮಕ್ಳು ಮರಿ ಮಾಡಿ….ಸ್ಸಾರಿ, ಸ್ವಲ್ಪ ಜಾಸ್ತಿ, ಆಯ್ತಾ? ಹೋಗ್ಲಿ ಬಿಡು. ಬರಿ, ಎಗ್ಸಾಂಪಲ್ಗೆ ಹೇಳ್ದೆ ಅಷ್ಟೆ!

ಸುಮಾರು ಹೈಸ್ಕೂಲಿನ ಮೂರು ವರ್ಷವೂ ನಿನ್ಹಿಂದೆ ಒಡಾಡ್ತಿದ್ದೆ ಅಂತ ನೆನಪು. ಒಂದು ದಿನಾನೂ ಮಾತಿಲ್ಲ, ಕಥೆಯಿಲ್ಲ! ದಿನಾ, ನೀನು ಸ್ಕೂಲಿಗ್ಹೋಗೊ ಹೊತ್ತಿಗೆ ಸರಿಯಾಗಿ ಆ ಕೂಳೆ ಸರ್ಕಲ್ ಹತ್ರ, ಕಟ್ಟೆ ಮೇಲ್ ಕೂತ್ಕೊಂಡು ಕಾಯ್ತಾ ಇರ್ತಿದ್ದೆ…ನೀನು, ನಿನ್ನ ಡುಮ್ಮಿ ಫ್ರೆಂಡ್ ಜತೆ ಬರೋದನ್ನೆ ಕಾಯ್ತ. ಹೆಚ್ಚು ಕಮ್ಮಿ ನಿಂದು ದಿನಾ ಅದೇ ಯುನೀಫಾರಂ, ಅದೇ ಶೂಸು, ಜಡೆಗೆ ಅದೆ ಬಿಳಿ ಟೇಪೆ ಹಾಕ್ತಿದ್ರೂ ದಿನಾ ಅದನ್ನೆ ನೋಡೊ ತೆವಲು. ಶನಿವಾರ ಬಂತೂಂದ್ರೆ ಮಾತ್ರ ಹೋಳಿಗೆಯೂಟ್ – ಸ್ಕೂಲಿಗೆ ಕಲರು ಡ್ರೆಸ್ಸು! ಬಹುಶಃ ನಿನ್ಹತ್ರ ಯಾವ್ಯಾವ ಡ್ರೆಸ್ಸಿತ್ತು ಅಂತ ನಿನಗಿಂತ ನನಗೆ ಚೆನ್ನಾಗಿ ಗೊತ್ತಿತ್ತು ಅಂತ ಕಾಣುತ್ತೆ! ಆ ವಾರ ಯಾವ ಡ್ರೆಸ್ಸ್ ಹಾಕಿರ್ತಿ, ಅಂಥ ಗೆಸ್ಸ್ ಮಾಡೊದು, ಅದೆ ಹಾಕಿದ್ರೆ ಎಂಥದೊ ಖುಷಿಪಡೋದು. ಸ್ವೆಟರು ಹಾಕಿದ್ರೆ ಚೆಂದಾನ , ಯಾವ ಕಲರು ಚೆನ್ನಾಗಿರುತ್ತೆ? ಹೀಗೆ ಏನೇನೊ ತೆವಲು, ತವಕ, ಮನಸಾಟ!

ಹೀಗೆ ಏನೆಲ್ಲಾ ಮಾಡಿ, ಏನೇನೂ ಮಾಡದ ಆಕರ್ಷಣಾವೃತ್ತದಲ್ಲಿ ಸಿಕ್ಕಿ ನಿನ್ಹಿಂದೆ ತಿರುಗಿದ್ದು ಈಗ ಇತಿಹಾಸದ ಪುಟದ ಹಸಿರು ಹಾಳೆಗಳಲೊಂದಾಗಿ ಉಳಿದುಬಿಟ್ಟಿತಲ್ಲೆ! ಮೂರು ವರ್ಷಗಳು ಬರಿ ‘ಬಾಡಿ ಲಾಂಗ್ವೇಜಿನಲ್ಲೆ’ ಸಂಭಾಷಿಸುತ್ತ ಮಾತುಕಥೆಯಿಲ್ಲ ಒಂದ್ತರ ಎಳಸು ಪ್ರೇಮವನ್ನ ಅಷ್ಟು ದಿನ ಸಂಭಾಳಿಸಿದ ಶಕ್ತಿಯಾದರೂ ಏನು ಅಂತಿನಿ? ಇದೇ ತರ ನಿನ್ನ ಹಿಂದೆ ಬಿದ್ದೋರ ಲಿಸ್ಟ್ ಮಾಡೋ ಜನಗಳು ನಿನ್ನ ಹಿಂದೆ ಇದ್ದಿದ್ದೂ ಮೋಜಿನ ವಿಷಯ. ಅವರಲ್ಯಾವನೊ ಒಬ್ಬ ನನಗೆ ಮುವ್ವತೈದೊ, ಮುವ್ವತ್ತಾರೊ ಟೋಕನ್ ನಂಬರು ಕೊಟ್ಟ ಸುದ್ದಿ ಕೇಳಿ ನಗುವು ಬಂದಿತ್ತು ಜತೆಗೆ ಅಳುವು ಸಹ! ಅದು ಹೇಗೆ ನೀನಷ್ಟೊಂದು ಪಾಪ್ಯುಲರಾಗಿಬಿಟ್ಟಿದ್ದೆ ಎಂಬ ಪ್ರಶ್ನೆಗಿಂತ, ಅಷ್ಟೊಂದು ಜನರ ಕಣ್ಣು ನಿನ್ನ ಮೇಲಿದೆಯೆಂಬ ಈರ್ಷೆಯೆ ಅಲ್ಲಿ ಹೆಚ್ಚಿನ ಪಾಲಿನ ಸಂಕಟವಾಗಿತ್ತು.

ಇಷ್ಟೆಲ್ಲ ದೂರ ಸಾಗಿದ ಈ ಮೌನ ಪ್ರಮೇಯಕ್ಕೆ ಇದ್ದಕ್ಕಿದ್ದಂತೆ ಬ್ರೇಕ್ ಹಾಕಬೇಕಾಗಿ ಬಂದದ್ದು ಒಂದು ತರಹ ವಿಚಿತ್ರವೆ. ನೀನು ಎಸ್ಸೆಸ್ಸಲ್ಸಿ ಫೇಲಾಗಿ ಮನೆಯಲ್ಲಿ ಕೂತೆ. ಆಚೀಚೆ ಒಡಾಟ ಒಂದು ತರ ಬಂದಾಗಿ ಹೊಯ್ತು. ಕಟ್ಟೆ ಮೇಲಿನ ಕೂತಾಟಕೆ ಗಿರಾಕಿಯೆ ಇಲ್ಲದ ಮೇಲೆ ಅಲ್ಲಿ ಎಷ್ಟು ದಿನ ತಾನೇ ಕೂರಲಿ? ಹೀಗೆ ನೀನು ಕ್ರೂರವಾಗಿ ಮರೆಯಾಗುವ ದ್ರೋಹ ಮಾಡಬಾರದಾಗಿತ್ತು. ಆದರೆ……

ಸೂಚನೆ: ಸ್ವಾಮಿಗೀಗ ಮದುವೆಯಾಗಿ ಮೂರು ಮಕ್ಕಳು. ಭದ್ರಾವತಿಯಲೆಲ್ಲೊ ಹೋಗಿ ಸೇರಿಕೊಂಡಿದ್ದಾನೆಂದು ಕೇಳಿದೆ.

ನಾಗೇಶ ಮೈಸೂರು , ಸಿಂಗಾಪುರ
28.03.2013

ನಿಮ್ಮ ಟಿಪ್ಪಣಿ ಬರೆಯಿರಿ