00007 – ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(02)

ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(02)

ಪೀಠಿಕೆ :
ಎಲ್ಲರ ಜೀವನದ ಯೌವ್ವನದ ಚಾಪ್ಟರಿನಲ್ಲಿ ಎಲ್ಲೊ, ಹೇಗೊ ಒಂದೊಂದು ಹೇಳಲಾಗದೆ ಉಳಿದು ಹೋದ ಮಾತು, ಆಡಲಾಗದೆ ಹೂತು ಹೋದ ಪ್ರೀತಿ, ಪ್ರೇಮಗಳ ತಪನೆ, ಮಾಡಲಾಗದೆ ಹೋದ – ಜೀವನಕ್ಕೆ ದೊಡ್ಡ ತಿರುವು ಕೊಡಬಹುದಾಗಿದ್ದ ಒಂದು ಪುಟ್ಟ, ಮನಬಿಚ್ಚಿದ ಸಂಭಾಷಣೆ – ಎಲ್ಲವು ಯಾತನೆಗಳಾಗಿ ಕಾಡುತ್ತ, ನೆನಪುಗಳಾಗಿ ಕೊರೆಯುತ್ತ ಸಾಯದೆ ಬದುಕದೆ ನಿರಂತರ ಅತಂತ್ರವಾಗಿ ನರಳುವುದುಂಟು. ಅಂತಹ ಮೂರು ಸೀನುಗಳ ಒಂದೊಂದು ಟೇಕು ಇಲ್ಲಿದೆ ಮೂರು ಭಾಗಗಳಾಗಿ. ಬರೆದರೆ ಎಲ್ಲರ ಇದೇ ತರಹದ ಸಾವಿರ, ಲಕ್ಷ , ಕೋಟಿಗಳಾಗುವಷ್ಟು ಸರಕು ಇರುವ ಕಾರಣ ಈ ಮೂರರ ಸಾಂಕೇತಿಕತೆಯನ್ನೆ ಎಲ್ಲದರ ಪ್ರತಿನಿಧಿಯೆಂಬಂತೆ ಭಾವಿಸಿಕೊಳ್ಳಬಹುದು. ಒಂದು ವೇಳೆ ಬರೆದರು ಅಷ್ಟಾಗಿ ವ್ಯತ್ಯಾಸವಿರದ ಅದೆ ಕತೆಗಳೆ ಆಗುವುದರಿಂದ ಹೆಚ್ಚು ಪ್ರಯೋಜನವೂ ಇರದು. ಪ್ರಾಯಶಃ ಈಗಾಗಲೆ ಯಾರೆಲ್ಲ ಬರೆದು ಆಗಿಯು ಬಿಟ್ಟಿರಬಹುದು – ಈ ಮೂರನ್ನು ಸೇರಿದಂತೆ!

ಇದು ಎರಡನೆಯ ಭಾಗ, ರಾಜನ ಸ್ವಗತ….!

——————————————————————————————————————————–
ಸೀನ್ 2, ಟೇಕ್ 1 : ಹುಡುಕಾಟ (ರಾಜನ ಸ್ವಗತ)
——————————————————————————————————————————–

ಮನೆ ಎದುರಿನ ಚಿಲ್ಲರೆ ಅಂಗಡಿಗೆ ಏನಾದರು ತರಲೆಂದು ಬರುತಿದ್ದ ಆ ಮಧ್ಯವಯಸ್ಕ ಹೆಂಗಸಿನ ಮೊದಲ ಪರಿಚಯವಾಗಿದ್ದು, ಆ ಅಂಗಡಿಯಲ್ಲೆ. ಹೊಸದಾಗಿ ಊರಿಗೆ ಬಂದಿದ್ದ ಮಲೆನಾಡಿನ ಜನ. ಅಲ್ಲಿದ್ದ ಕಾಫಿ ಎಸ್ಟೇಟನ್ನೆಲ್ಲ ಬಿಟ್ಟು ಇದ್ದ ಇಬ್ಬರು ಹೆಣ್ಣು ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಗಂಡ ಹೆಂಡತಿಯಿಬ್ಬರು ಮಕ್ಕಳ ಜತೆ ಬಂದು ನೆಲೆಸಿದ್ದ ಕಥೆ. ಮಕ್ಕಳಿಗೆ ಸರಿಯಾದ ಸ್ಕೂಲ್ ಯಾವುದು, ಟ್ಯೂಶನ್ನು ಯಾರು ಚೆನ್ನಾಗಿ ಹೇಳಿಕೊಡ್ತಾರೆ, ತರಕಾರಿ ಎಲ್ಲಿ ಸಿಗುತ್ತೆ, ಮಾರ್ಕೆಟ್ಟಿಗೆ ಹೋಗೋದ್ ಹೇಗೆ?

ಈ ತರಹ ಎಲ್ಲಾ ಸಣ್ಣಪುಟ್ಟ ವಿವರಗಳಿಗಾಗಿ ಬೆಳೆದ ನಂಟು ಮನೆಗೆ ನಾನೆ ಸಾಮಾನು ಕೊಂಡೊಯ್ದು ಕೊಡುವುದರಿಂದ ಹಿಡಿದು , ಅಲ್ಲೆ ಊಟ ತಿಂಡಿ ಮಾಡುವ ಮಟ್ಟಕ್ಕೆ ಬೆಳೆಯಿತಲ್ಲ – ಅಲ್ಲಿಂದ ತಾನೆ, ನಮ್ಮ ಗೆಳೆತನ ಸಖ್ಯ ಶುರುವಾಗಿದ್ದು? ಆಕೆಯ ಇಬ್ಬರು ಮಕ್ಕಳಲ್ಲಿ ಚಿಕ್ಕವಳೆ ಅಂದ ಚಂದದಲಿ ಬಣ್ಣದ ಪುತ್ಥಳಿಯಂತಿದ್ದರು, ತುಸು ಎಣ್ಣೆಗೆಂಪು ಬಣ್ಣದ ಹಿರಿಮಗಳಾಗಿದ್ದ ನೀನೆ ಏಕೆ ಮನಸಿಗೆ ಹಿಡಿಸಿದೆಯೊ ಗೊತ್ತಿಲ್ಲ. ಬಹುಶಃ ನಿನ್ನ ವಯಸಿಗೆ ಮೀರಿದ ಗಾಂಭೀರ್ಯ, ಚೆಲ್ಲುಚೆಲ್ಲಾಗಾಡದ ಸ್ವಭಾವ, ಪರಿಪಕ್ವತೆಯಲಿರಿಸಿದ ನಡುವಳಿಕೆ ಎಲ್ಲಾ ಸೇರಿ ಒಂದು ತರ ಗೌರವಪೂರ್ಣ ಆದರವನ್ನು ಹುಟ್ಟಿಸಿತ್ತೊ ಏನೊ! ಮೊದಲ ನೋಟದಲ್ಲೆ ಏನೊ ಒಂದು ತರ ಮೊಹರು ಮಾಡಿದಂತೆ ಭಾವನೆಗಳನ್ಹುಟ್ಟಿಸಿಬಿಟ್ಟೆ ನೀನು – ಅದರಿಂದ ಹೊರಬರಲು ಜೀವನ ಪೂರ್ತಿ ಸಾಧ್ಯವಾಗಲೇ ಇಲ್ಲ, ನೋಡು…

ವರ್ಷದ ನಡುವಲ್ಲೆ ನೀನು ನನ್ನ ಸ್ಕೂಲಿಗೆ, ನನ್ನ ತರಗತಿಗೆ ದಾಖಲಾದಾಗ ಆ ಗಳಿಗೆಯಲ್ಲಾದ ಅವರ್ಣನೀಯ ಅನುಭೂತಿಯನ್ಹೇಗೆ ಬಣ್ಣಿಸಲಿ, ಹೇಳು? ಖುಷಿಯ ಉನ್ಮಾದದಿಂದ ಕುಣಿಯುವಂತೆ ಮಾಡಿಬಿಟ್ಟೆಯಲ್ಲೆ ಆಗ? ನಿನಗೆ ಬೇಕಾದ ನೋಟ್ಸ್, ಪುಸ್ತಕ, ಇತ್ತ್ಯಾದಿಗಳಿಗೆಲ್ಲ ನಾನೆ ಸರಬರಾಜುದಾರನಾಗಿ ಅದೆಷ್ಟು ಹೆಮ್ಮೆ, ಸಂತಸದಿಂದ ನಿನ್ನೊಡನಾಡಿದ್ದೆ! ಎಷ್ಟೊಂದು ನೋಟ್ಸೆಲ್ಲ ನಾನೆ ಬರೆದು ಕೊಟ್ಟಿದ್ದೆ, ನನ್ನ ನೋಟ್ಸಿಗಿಂತಲೂ ಸುಂದರವಾಗಿ? ಅವೆಲ್ಲ ನೆನಪಿದೆಯ ಈಗಲೂ? ಮಸಲಾ, ನಿನಗೆ ಇಂಪ್ರೆಸ್ಸ್ ಮಾಡೊದಿಕ್ಕೆ ಅಂತಲೆ ಇವೆಲ್ಲಾ ಮಾಡ್ತಾ ಇದ್ದೆ ಅಂತ ಆಗ ನಿನಗೂ ಗೊತ್ತಿತ್ತ? ಯಾವ ಗಳಿಗೆಲೂ ನೀನನಗಾವ ಭಾವನೆಯನ್ನು ತೋರಿಸಿಕೊಂಡಿರಲಿಲ್ಲ. ನಿನಗಾರೀತಿ ಭಾವನೆಯೆ ಇರಲಿಲ್ಲವಾ ಅಥವಾ ಎಲ್ಲ ಚಾಣಾಕ್ಷ ಹುಡುಗೀರ ಹಾಗೆ ಹೊರ ತೋರಿಸಿಕೊಳ್ಳದೆ ಬಚ್ಚಿಟ್ಟುಕೊಳ್ಳುತ್ತಿದ್ದೆಯ?

ಅವತ್ತಿನ್ನು ನೆನಪಿದೆ – ನಿಮ್ಮಮ್ಮ ಹೂವು ತಂದುಕೊಡಲು ಹೇಳಿದ್ದರು. ನಾನು ಬಂದಾಗ ನೀನು ಮಾತ್ರವೆ ಮನೆಯಲ್ಲಿದ್ದೆ, ಎಲ್ಲಾ ಎಲ್ಲೊ ಹೊರಗೆ ಹೋಗಿದ್ದ ಹೊತ್ತು. ನನಗೊ ಎಂತಹದೊ ಕಂಪನ, ನಡುಕ, ರೋಮಾಂಚನ; ಮೊಟ್ಟ ಮೊದಲ ಬಾರಿಗೆ ಅನಿರೀಕ್ಷಿತವಾಗಿ ಒಬ್ಬಂಟಿಯಾಗಿ ನಿನ್ನ ಜತೆಯಿರುವ ಸರದಿ…ಮೈಯೆಲ್ಲಿ ಬೆವರಿ ನೀರಾದದ್ದು ಒಂದೆಡೆಯಾದರೆ, ಈ ಘಳಿಗೆ ದೀರ್ಘವಾಗಿರಬಾರದೆ ಎಂದು ಎಲ್ಲಾ ದೇವರಿಗು ಹರಕೆ ಹೊತ್ತಿದ್ದು ಇನ್ನೊಂದು ಕಡೆ. ದಂಡೆ ಕಟ್ಟಿ ಮುದ್ದಾಗಿದ್ದ ಮಲ್ಲಿಗೆ ಹೂವನ್ನು ಕೈಯಲ್ಹಿಡಿದು, ನಿನಗೆ ಕೊಡುವಾಗ ಹೂ ಸಮೇತ ಬೊಗಸೆಯಾಗಿದ್ದ ಬಲದ ಕೈಯನ್ನು ಪಲ್ಟಾಯಿಸಿ ಆಕಾಶ ನೋಡುತ್ತಿದ್ದ ನಿನ್ನ ಬಲ ಅಂಗೈಯ ಮೇಲಿಡುವಾಗ, ನನ್ನ ಕೆಳಮುಖದಲಿದ್ದ ಅಂಗೈ ನಿನ್ನ ಅಂಗೈಯ ಮೇಲೆ ಮೊಗುಚಿಹಾಕಿದ ದೋಣಿಯಂತೆ ಕುಳಿತು, ಮೊಟ್ಟ ಮೊದಲ ಬಾರಿಗೆ ತಣ್ಣನೆಯ , ತಂಪಾದ ಹೆಣ್ಣಿನ ಕೈಯ ಸ್ಪರ್ಷಮಾಡಿದ ಅನುಭೂತಿ ನೀಡಿದ್ದನ್ನು ಹೇಗೆ ತಾನೆ ಮರೆಯಲೆ ಈ ಜೀವಮಾನದಲ್ಲಿ? ಬರಿಯ ಹೂವಿಂದಷ್ಟೆ ಬೇರ್ಪಟ್ಟಿದ್ದ ಆ ಎರಡು ಅಂಗೈಗಳು ಸೇರಿದ್ದ ಆ ಗಳಿಗೆಯಲ್ಲೆ ಬಾದಾಮಿಯಾಕಾರದ ಹೂವಿನ ಹಡಗೊಂದನ್ನು ಅಂಗೈಗಳಲ್ಲೆ ಮಾಡಿ ಮುಚ್ಚಿದಂತಿತ್ತು. ಇದೆಲ್ಲಾ ನಡೆದದ್ದು ಕೇವಲ ಅರೆಕ್ಷಣ ಮಾತ್ರ. ಆದರೆ, ಆ ಗಳಿಗೆಯೆ ಕಾಲಮಾಪನದಲಿ ಸ್ತಂಭಿಸಿಹೋದಂತಾಗಿ, ಆ ಇಡಿ ಅನುಭವವೆ ದೀರ್ಘಕಾಲದ ನೀಳ ಕನಸಿನಂತೆ ಭಾಸವಾಗಿ, ಆ ಗಳಿಗೆಯ ದಿವ್ಯ, ಸ್ಮರಣೀಯ ಹಾಗೂ ಪೂಜನೀಯ ರೂಪದಲ್ಲಿ ಮನದಲಿ ಶಾಶ್ವತವಾಗಿ ನೆಲೆ ನಿಂತು ಹೋಯ್ತು…

ಈ ಅನಿರೀಕ್ಷಿತ ಸ್ಪರ್ಷ ನಿನಗೂ ಅಷ್ಟೆ ಆಕಸ್ಮಿಕವೆನಿಸಿರಬೇಕು. ನನಗನಿಸಿದಂತೆ, ನಿನಗೂ ಅಂತಹ ಅನುಭೂತಿಯೇನಾದರೂ ಆಯ್ತೊ, ಇಲ್ಲವೊ ನಾನರಿಯೆ. ಮಿಂಚಿನ ವೇಗದಲ್ಲಿ ನೀ ಕೈ ಸೆಳೆದುಕೊಂಡು ಕಾಫಿ ತರುವ ಅವಸರದಲ್ಲಿ ಒಳ ಓಡಿದ್ದಷ್ಟೆ ನೆನಪು. ಹೀಗಾಗಿ, ನಿನ್ನ ಮುಖದ ಭಾವನೆಗಳನ್ನು ಓದಲೂ ಕೂಡ ಆ ಗಳಿಗೆಯಲ್ಲಿ ಸಾಧ್ಯವಾಗಲಿಲ್ಲ. ಆದರೆ, ಆ ನೆನಪು ಮಾತ್ರ ಈ ಮನದ ಮೂಲೆಯಲೊಂದು ಮಧುರ ಯಾತನೆಯಾಗಿ ಉಳಿದುಹೋಯ್ತು!

ಆಮೇಲೇನೆಲ್ಲಾ ಆಗಿಹೋಯ್ತು? ಇದ್ದಕ್ಕಿದ್ದಂತೆ ನಿಮ್ಮ ತಂದೆ ತೀರಿಕೊಂಡು ರಾತ್ರೋರಾತ್ರಿ ನೀವೆಲ್ಲಾ ಬೀದಿಗೆ ಬಿದ್ದಿದ್ದು, ಏನೆಲ್ಲ ಹರಸಾಹಸ ಮಾಡುತ್ತ ನಿಮ್ಮಮ್ಮ ಜೀವನ ನಡೆಸಲು ಹೆಣಗಾಡಿದ್ದು, ಆ ದಿನಗಳಲ್ಲಿ ಕೈಲಾದ ತರದಲ್ಲಿ ಸಹಾಯ ಮಾಡುವ ಅವತಾರದಲ್ಲಿ ನಿಮ್ಮ ಕುಟುಂಬದ ಜತೆಗಿರುವ ಅವಕಾಶ ಸಿಕ್ಕಿದ್ದು, ಬದುಕಿನ ಜಂಜಾಟದಲಿ ಹೆಜ್ಜೆ ಹೆಜ್ಜೆಗು ಹೆಣಗುತ್ತ, ಎದ್ದು ಬಿದ್ದು ಓದು ಮುಂದುವರೆಸಲು ಯತ್ನಿಸಿದ್ದು, ಅಷ್ಟೆಲ್ಲಾ ಆದರೂ ಎಸ್ಸೆಸ್ಸೆಲ್ಸಿಯಲ್ಲಿ ನೀನು ಫೇಲಾಗಿ ಸಪ್ಲಿಮೇಂಟರಿ ಕೂರಬೇಕಾಗಿ ಬಂದದ್ದು, ಹೆಚ್ಚುಕಡಿಮೆ ನಿನ್ನ ವಿದ್ಯೆಗೆ ಅಲ್ಲೆ ಶ್ರೀಕಾರ ಬಿದ್ದು ಹೋಗಿದ್ದು…ನಾನು ಮಾತ್ರ ಓದಿನಲಿ ಹಿಂದೆ ಬೀಳದೆ, ಮುಂದೆ ಸಾಗಿದೆನೆಂದು ನಿನಗದೆಷ್ಟೊಂದು ಹೆಮ್ಮೆ?

ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ನಾನು ಬೇರೆ ಊರಿಗೆ ಹೊರಟು ಗಮನ ಇನ್ನೆಲ್ಲೊ ಹರಿದರು, ನಮ್ಮ ಗೆಳೆತನ ಹಾಗೆ ಮುಂದುವರೆದಿತ್ತಲ್ಲವೆ? ಮೊದಲಿನ ಹಾಗೆ ದೈನಂದಿನ ಸಹಚರಣೆಯಿರದಿದ್ದರು, ಊರಿಗೆ ಬಂದಾಗೆಲ್ಲ ಮೊದಲು ಸೇರುತ್ತಿದ್ದುದು ಅವರ ಮನೆಯಲ್ಲೇನೆ. ಮನದಲಿ ಆಗಿದ್ದ ಆಸೆಗಳೆಲ್ಲಾ ಬಲಿತು, ಪಕ್ವವಾಗಿ ಮಾಗಿ, ಓದು ಮುಗಿದು ಕೆಲಸವೊಂದು ಸಿಕ್ಕರೆ ಸಾಕು, ಆಮೇಲೆ ಧೈರ್ಯವಾಗಿ ಕೇಳಿಬಿಡುವುದು – ಇಷ್ಟವಿದೆಯೆ, ಇಲ್ಲವೆ ಅಂತ. ಜಾತಿಯದೊಂದು ಅಡ್ಡಿಯಾದರು ನಮಗಿಬ್ಬರಿಗು ಈಗಿರುವ ಸಲಿಗೆ, ಒಡನಾಟ, ಆತ್ಮೀಯತೆಯಲ್ಲಿ ಅದು ಅಡ್ಡಗೋಡೆಯಾಗಲಾರದೆಂಬ ಭಂಡ ಧೈರ್ಯ. ಜತೆಗೆ, ಆಗೊಂದು ಬಾರಿ ನಿಮ್ಮಮ್ಮ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಯಾರೊ ಇಷ್ಟವಿಲ್ಲದವನ ಜತೆ ಮದುವೆ ಮಾಡುವ ಹವಣಿಕೆಗಿಳಿದಾಗ , ಅತ್ತುಕೊಂಡೆ ನನ್ನನ್ನು ಪೋನಿನಲ್ಲು ಕರೆಸಿ ಬೆಟ್ಟದ ಹತ್ತಿರ ವಾಕ್ಮಾಡುತ್ತ ಅತ್ತು ಗೋಳಾಡಿದ್ದು, ನಾನು ಸಮಾಧಾನಿಸಿ ನಿನಗೆ ಬೇಕಾದ ಎಲ್ಲಾ ಸಹಾಯಕ್ಕೂ ನಾನು ಸಿದ್ಧನಿದ್ದೇನೆಂದು ಭರವಸೆಕೊಟ್ಟು, ನಿನ್ನಲ್ಲಿ ಮುಗುಳ್ನಗೆ ಮರಳಿಸಿದ್ದು, ಆ ಸಂದರ್ಭದ ಖುಷಿಯಲ್ಲೆ ನಾವಿನ್ನೂ ಹತ್ತಿರವಾಗಿ ಬಿಟ್ಟೆವಾದ್ದರಿಂದ ಮುಂದೆ ನಾನು ಪ್ರಪೋಸ್ ಮಾಡುವ ಐಡಿಯಾಗೆ ಇನ್ನಷ್ಟು ಬಲ ಬಂದಂತಾಗಿ ನಾನೆಷ್ಟು ಹಿಗ್ಗಿದ್ದೆ ಗೊತ್ತಾ?

ಆಮೇಲೆ ನಡೆದಿದ್ದಕ್ಕೆ ವಿಧಿ ವಿಪರ್ಯಾಸವೆನ್ನಬೇಕೊ, ನನ್ನ ಅಸಹಾಯಕ ಮೂರ್ಖತನವೆನ್ನಬೇಕೊ ನಾನರಿಯೆ. ಆದರೆ ನಡೆದಿದ್ದು ಮಾತ್ರ ನರಕಸದೃಶ! ಬಹುಶಃ, ನೀನು ಫೋನ್ ಮಾಡಿ ಕರೆಸಿ ಅತ್ತಾಗಲೆ, ಪೀಠಿಕೆ ಹಾಕಿ ನಂಟಿನ ಗಂಟನ್ನು ಗಟ್ಟಿಯಾಗಿಸಿಬಿಡಬೇಕಿತ್ತು. ಸಂದರ್ಭದ ದುರುಪಯೋಗಪಡಿಸಿಕೊಳ್ಳುತ್ತಿದ್ದೆನೆಂಬ ಭಾವ ಬರದಿರಲೆಂದು ಪ್ರಯತ್ನಪೂರ್ವಕವಾಗಿ ತಡೆದುಕೊಂಡಿದ್ದೆ. ಹೇಗೂ, ಆ ಸಂದರ್ಭ ಮತ್ತು ನಂತರ ನಾವಿಬ್ಬರು ಮೊದಲಿಗಿಂತ ಹೆಚ್ಚು ಹತ್ತಿರವಾದಂತಾಗಿ ಕೇವಲ ಸಮಯದ ಪ್ರಶ್ನೆಯಷ್ಟೆ ತಾನೆ ಎಂಬ ಭಾವದಲ್ಲೆ ಮೈಮರೆತುಬಿಟ್ಟೆ. ಅದೆಂತಹ ಮೈಮರೆತ ಎಂದು ನಿನ್ನ ಮುಂದಿನ ಸಾರಿಯ ಫೋನು ಬರುವ ತನಕವು ಅರಿವಾಗಿರಲಿಲ್ಲ!

ನಾನು ನನ್ನ ಕನಸಿನ ಲೋಕದಲ್ಲಿದ್ದಾಗ, ನೀನು ಕೆಲಸಕ್ಕೆ ಸೇರಿದ್ದು, ಅಲ್ಲಾರ ಜತೆಯೊ ಗೆಳೆತನ ಪ್ರೇಮಕ್ಕೆ ತಿರುಗಿ ಮದುವೆಯ ಹಂತಕ್ಕೆ ಬಂದಿದ್ದು, ಕೊನೆಗೆ ಅಂತರ್ಜಾತಿಯ ಮದುವೆಗೆ ನಿಮ್ಮಮ್ಮನ ಜತೆ ರಾಯಭಾರ ಮಾಡಲು ನನ್ನನ್ನು ಫೋನ್ ಮಾಡಿ ಕರೆಸಿದ್ದು…ನೀನು ಹತ್ತಿರವೇನೊ ಆದೆ, ಒಂದು ತರದಲ್ಲಿ, ಹಾಗೆಯೆ ದೂರವು ಆಗಿಬಿಟ್ಟೆ, ನನ್ನ ಕನಸಿನರಮನೆಯ ಮಾಡಿ ಚೆಲ್ಲಾಪಿಲ್ಲಿ!

ಈಗೆಲ್ಲಿರುವೆ, ಹೇಗಿರುವೆ ಅರಿಯೆ. ಸುಖವಾಗಿರುವೆ ಅಂತ ಅಂದುಕೊಂಡಿದ್ದೀನಿ. ಈಗಲೂ ನೆನಪಿನಂಗಳದ ತಂಗಳು ಹಾಗೆ ಕಾಡುತ್ತದೆ – ಆವತ್ತಿನಷ್ಟೆ ರುಚಿಯಾಗಿ. ಆ ಮೆಲುಕುಗಳು, ಮಧುರ ಗಳಿಗೆಗಳು, ಜೀವನ್ಸಂಪೂರ್ಣತೆಯ ಅನುಭವ-ಅನುಭಾವ ಕಟ್ಟಿಕೊಟ್ಟ ಆ ಸ್ಪರ್ಷ ಇಂದಿಗೂ ಹಾಗೆ ಹಸಿರಾಗಿಯೆ ಇವೆ, ಜತನದಲ್ಲಿ. ಹೇಳಿಕೊಳ್ಳಲು ನೀನಿಲ್ಲ ಅನ್ನುವುದು ಬಿಟ್ಟರೆ – ಎಲ್ಲವು ಸುಸಂಬದ್ಧವೆ, ನಾಲಿಗೆಯಿಲ್ಲದ ಘಂಟೆಯ ಹಾಗೆ!

ಈ ಬದುಕೆ ಹಾಗೆ ತಾನೆ….?

ಮಲ್ಲಿಗೆಯ ದಂಡೆ ಹಿಡಿದಿಟ್ಟ, ಬೆಸೆದಿಟ್ಟ ಹಸ್ತಗಳು ಮತ್ತು ಆ ತಂಪಾದ ಸ್ಪರ್ಷದ ಅನುಭಾವ ಮಾತ್ರ, ಇನ್ನು ಕರಗೇ ಇಲ್ಲಾ!!

ಸೂಚನೆ : ಅಂದ ಹಾಗೆ, ರಾಜು ಯಾವ ಕಾರಣಕ್ಕೊ ಹಾಗೆ ಅವಿವಾಹಿತನಾಗೆ ಉಳಿದುಬಿಟ್ಟ. ಕೊನೆಯ ಬಾರಿ ಅವನ ಮಾತು ಬಂದಾಗ ಪೂಣೆಯ ಬಾರೊಂದರಲ್ಲಿ ಮ್ಯಾನೇಜರನಾಗಿ ಕೆಲಸ ಮಾಡುತ್ತಿದ್ದನೆಂದು ಯಾರೊ ಹೇಳಿದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s