00008 – ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(03)

ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(03)

ಪೀಠಿಕೆ :
ಎಲ್ಲರ ಜೀವನದ ಯೌವ್ವನದ ಚಾಪ್ಟರಿನಲ್ಲಿ ಎಲ್ಲೊ, ಹೇಗೊ ಒಂದೊಂದು ಹೇಳಲಾಗದೆ ಉಳಿದು ಹೋದ ಮಾತು, ಆಡಲಾಗದೆ ಹೂತು ಹೋದ ಪ್ರೀತಿ, ಪ್ರೇಮಗಳ ತಪನೆ, ಮಾಡಲಾಗದೆ ಹೋದ – ಜೀವನಕ್ಕೆ ದೊಡ್ಡ ತಿರುವು ಕೊಡಬಹುದಾಗಿದ್ದ ಒಂದು ಪುಟ್ಟ, ಮನಬಿಚ್ಚಿದ ಸಂಭಾಷಣೆ – ಎಲ್ಲವು ಯಾತನೆಗಳಾಗಿ ಕಾಡುತ್ತ, ನೆನಪುಗಳಾಗಿ ಕೊರೆಯುತ್ತ ಸಾಯದೆ ಬದುಕದೆ ನಿರಂತರ ಅತಂತ್ರವಾಗಿ ನರಳುವುದುಂಟು. ಅಂತಹ ಮೂರು ಸೀನುಗಳ ಒಂದೊಂದು ಟೇಕು ಇಲ್ಲಿದೆ ಮೂರು ಭಾಗಗಳಾಗಿ. ಬರೆದರೆ ಎಲ್ಲರ ಇದೇ ತರಹದ ಸಾವಿರ, ಲಕ್ಷ , ಕೋಟಿಗಳಾಗುವಷ್ಟು ಸರಕು ಇರುವ ಕಾರಣ ಈ ಮೂರರ ಸಾಂಕೇತಿಕತೆಯನ್ನೆ ಎಲ್ಲದರ ಪ್ರತಿನಿಧಿಯೆಂಬಂತೆ ಭಾವಿಸಿಕೊಳ್ಳಬಹುದು. ಒಂದು ವೇಳೆ ಬರೆದರು ಅಷ್ಟಾಗಿ ವ್ಯತ್ಯಾಸವಿರದ ಅದೆ ಕತೆಗಳೆ ಆಗುವುದರಿಂದ ಹೆಚ್ಚು ಪ್ರಯೋಜನವೂ ಇರದು. ಪ್ರಾಯಶಃ ಈಗಾಗಲೆ ಯಾರೆಲ್ಲ ಬರೆದು ಆಗಿಯು ಬಿಟ್ಟಿರಬಹುದು – ಈ ಮೂರನ್ನು ಸೇರಿದಂತೆ!

ಇದು ಮೂರನೆಯ ಭಾಗ, ಶ್ರೀನಿವಾಸನ ಸ್ವಗತ….!

ಸೀನ್ 3, ಟೇಕ್ 1 – ‘ಹುಳು’ ಕಾಟ (ಶ್ರೀನಿವಾಸನ ಸ್ವಗತ)
————————————————————————-

ಸ್ವಾಭಿಮಾನದ ಗೆಳತಿಗೆ,

ಲೈಬ್ರರಿಯಲಿ ಸಂವಹನದ ಭಾಷೆಯೆ ಮೌನ. ಕಾಲೇಜು ಲೈಬ್ರರಿಯಾಗಿದ್ದರಂತೂ, ಓದಿಕೊಳ್ಳಲೆಂದೆ ಬರುವ ಎಷ್ಟೊ ವಿದ್ಯಾರ್ಥಿಗಳು ಇರುವುದರಿಂದ ಮೌನಕ್ಕೆ ಇನ್ನು ಅಧಿಕ ಪ್ರಾಧಾನ್ಯತೆ. ಅಲ್ಲಿ ಮೌನವೆ ಸಂವಹನ ಭಾಷೆಯೆಂದರೂ ತಪ್ಪಾಗಲಾರದು – ಜತೆಗೆ ಪಿಸುಗುಟ್ಟುತ್ತ, ಅಂಗಚಲನಾಪೂರಿತ ಭಾಷೆಯಲ್ಲಿ ಸಂಭಾಷಿಸುವ ಅವಯವ ಮತ್ತು ಅದನ್ಹೊತ್ತ ಮಂದಿಗಳನ್ನು ಬಿಟ್ಟರೆ. ಅಂತಹ ಕಡೆಗೆ ಸಾಮಾನ್ಯವಾಗಿ ತಲೆಯಿಟ್ಟೂ ಮಲಗದ ನಮ್ಮಂತಹ ಪಡ್ಡೆ ಹುಡುಗರಿಗೆ ಅಲ್ಲಿಗೆ ಹೋಗಲಿದ್ದ ಆಕರ್ಷಣೆಗಳು ಎರಡು ಮಾತ್ರವೆ; ಒಂದು – ಬೇರೇನು ಮಾಡಲು ಕೆಲಸವಿಲ್ಲದೆ ಬೋರಾದಾಗ, ಕೂತು ನ್ಯೂಸು ಪೇಪರು ಓದಲು ಅದು ಅತ್ಯಂತ ಪ್ರಶಸ್ತ ಜಾಗ. ಎರಡು, ಇಲ್ಲಿಗೆ ಓದಲೊ, ಪುಸ್ತಿಕೆ ಕೊಂಡೊಯ್ಯಲೊ ಬರುವ ಹುಡುಗ ಯಾ ಹುಡುಗಿಯರ ಹಿಂದೆ ಬಿದ್ದಿದ್ದರೆ ಅಥವಾ ಆಗಲೆ ಒಬ್ಬರ ಬಲೆಯಲೊಬ್ಬರು ಬಿದ್ದಾಗಿ , ಕೂತು ಪಿಸುಗುಡಲು ತುರ್ತಾಗಿ ಬೇರಾವುದೆ ತಾಣ ದೊರಕದೆ ಹೋದಾಗ! ಮತ್ತೊಂದು ಸಣ್ಣ ಪಡ್ಡೆ ಕಾರಣವೆಂದರೆ, ಅಲ್ಲಿ ಸೇರಿದ ಹೆಣ್ಣುಡುಗಿಯರ ಸಮೂಹದತ್ತ ಕಣ್ಹಾಯಿಸಿ, ಒಂದು ತರದ ತೆವಲು ತೀರಿಸಿಕೊಳ್ಳುವುದು….

ನಾನು ಆ ದಿನ ಅಲ್ಲಿ ಹೋಗಿದ್ದು …ಹೊರಗೆ ಧಾರಾಕಾರವಾಗಿ ಮಳೆ ಬರುತ್ತಿತ್ತು. ಪೀರಿಯೆಡ್ಡು ಬೇರೆ ಖಾಲಿ. ಈ ಮಳೆಯಲ್ಲಿ ಕ್ಯಾಂಟಿನ್ನಿನತ್ತ ಹೋಗುವುದು ಸಾಧ್ಯವಿರಲಿಲ್ಲ. ಆ ದಿನವೆನ್ನುವುದಕ್ಕೆ ಯಾರೂ ಜತೆಗೂ ಇರಲಿಲ್ಲ, ಒಬ್ಬಂಟಿ ಬೇರೆ. ಕಾಲೇಜಾರಂಭದ ಮೊದಲ ದಿನಗಳಲ್ಲಿ ಇನ್ನು ನಿಖರ ಹಾಗೂ ಕರಾರುವಾಕ್ಕು ಹಾಜರಾತಿಯಿರದ ಪರಿಸ್ಥಿತಿ. ಸರಿ, ಲೈಬ್ರರಿ ಹೊಕ್ಕು ಕುಳಿತೆ, ಪೇಪರಾದರೂ ಓದೋಣವೆಂದು. ಅಚ್ಚರಿಯೆಂದರೆ ಅವತ್ತು ಅನ್ನುವುದಕ್ಕೆ ಇಡಿ ಲೈಬ್ರರಿಯೆ ಖಾಲಿ. ಅದೇ ಮಳೆಯ ಕಾರಣಕ್ಕೊ ಏನೊ, ದ್ವಿತೀಯ ವರ್ಷದ ಹುಡುಗಿಯೊಬ್ಬಳು ನನ್ನ ಹಾಗೆ ಒಳಹೊಕ್ಕು ಪುಸ್ತಕ ಹಿಡಿದು ಕುಳಿತಳು. ಇಡಿ ಹಜಾರವೆ ಖಾಲಿಯಿದ್ದರು, ಯಾಕೊ ಬಂದು ನನ್ನೆದುರಿನ ಮೇಜಿನಲ್ಲೆ ಕುಳಿತಳು. ಬಿದ್ದ ನೆರಳಿಗೆ ತಲೆಯೆತ್ತಿದಾಗ ಅವಳು ದೃಷ್ಟಿಗೆ ಬಿದ್ದು , ಅದೆ ಗಳಿಗೆ ಅವಳು ತಲೆಯೆತ್ತಿದ್ದರಿಂದ ನಮಗರಿವಿಲ್ಲದೆ ಇಬ್ಬರೂ ಪರಸ್ಪರ ಪರಿಚಯದ ಮುಗುಳ್ನಕ್ಕೆವು, ಪರಿಚಯವಿಲ್ಲದಿದ್ದರೂ ಸಹ.

ಹೀಗೆ ಕುಳಿತೆ ಇದ್ದ ಜಾಗದ ನೀರವ ನಿಶ್ಯಬ್ದ, ಖಾಲಿ ಲೈಬ್ರರಿಯ ಸ್ಮಶಾನ ಮೌನ, ಸತತ ಸುರಿತ ಮುಂದುವರೆಸಿಯೆ ಇದ್ದ ಮಳೆ, ಎದುರಿಗೆ ಕುಳಿತ ಲಲನಾಮಣಿ – ಯಾವ ವಿಶ್ವಾಮಿತ್ರ ತಾನೆ, ಸುಮ್ಮನೆ ಓದುತ್ತ ಕೂರಬಲ್ಲ? ಅಲ್ಲದೆ, ಆ ಯುವತಿಯು ಸಾಕಷ್ಟು ಆಕರ್ಷಕ ರೂಪಿನ ಒಡತಿ ಬೇರೆ. ಓದುತ್ತಲೆ ಕಡೆಗಣ್ಣಿನಿಂದ ಅವಳನ್ನೆ ದಿಟ್ಟಿಸಿ ನೋಡಿದೆ…ಹೌದಲ್ಲಾ, ಸೊಗಸಾದ ರೂಪವೆ ಅನಿಸಿತು. ಅತ್ಯಂತ ರೂಪವತಿ ಎಂದು ಹೇಳುವಂತಹ ವಿಶೇಷವೇನೂ ಕಾಣಿಸದಿದ್ದರೂ, ಆ ಮೊಗದಲ್ಲೇನೊ ವಿಶಿಷ್ಟವಾದ ಆಕರ್ಷಣೆ, ಕಳೆಯಿರುವಂತೆ ಅನಿಸುತಿತ್ತು. ಅದೇನಿರಬಹುದೆಂದು ತಡಕಾಡುತ್ತಿರಬೇಕಾದರೆ ತಟ್ಟನೆ ಗಮ್ಯಕ್ಕೆ ನಿಲುಕಿತು ಆ ವಿಶಿಷ್ಟತೆಯ ಮೂಲ ಸರಕು – ಅವಳ ಮೊಂಡು ಮೂಗು. ಒಂದು ರೀತಿಯಲ್ಲಿ ತುಂಡಾಗಿಸಿ ಬಾಗಿಸಿ ತುದಿಯಲಿ ಸುರುಳಿ ಸುತ್ತಿಟ್ಟ ಚೂಪಿನ ಕೊನೆಯೊಂದು ಮತ್ತೊಂದು ವಿಶಿಷ್ಟ ರೀತಿಯಲ್ಲಿ ಮೇಲಕ್ಕೆ ಎತ್ತಿ ಹಿಡಿದಂತ ವಿಶೇಷ ಆಕಾರ. ಸಾಮಾನ್ಯರಾರಲ್ಲೂ ಅದು ಅಷ್ಟಾಗಿ ಕಾಣದ ತರವೇ ಆಗಿ ಕೊಂಚ ವಿಶೇಷವಾಗಿ ಕಂಡಿತ್ತು ಮತ್ತು ಅದೆ ಅವಳ ಸೌಂದರ್ಯದ ಆಕರ್ಷಣೆಯ ಗುಟ್ಟೂ ಆಗಿತ್ತು. ನಾನಾಗ ತಾನೆ ಕ್ಲಿಯೋಪಾತ್ರ ಮೂಗಿನ ಕುರಿತು ಓದಿದ್ದಾ ನೆನಪು ಮರುಕಳಿಸಿ, ಮನದಲ್ಲೆ ಅವಳಿಗೆ ಕ್ಲಿಯೊ ‘ಪಾತ್ರೆ’ ಅಂತಲೆ’ ಅಡ್ಡ ಹೆಸರಿಟ್ಟೆ – ಆ ಪುಟ್ಟ ಪಾತ್ರೆಯಂತಹ ಮೂಗಿನ ಕುಹಕಕ್ಕೆ! ನಂತರದ ದಿನಗಳಲ್ಲಿ ಅವಳ ನಿಜವಾದ ಹೆಸರು ವಾಣಿಯೆಂದು ತಿಳಿದುಬಂದರು, ಈ “ಪಾತ್ರೆಯ” ಹೆಸರು ಮಾತ್ರ ಹಾಗೆ ಉಳಿದು ಹೋಯ್ತು!

ಆ ದಿನ ನಾನವಳನ್ನು ಕದ್ದು ನೋಡುತ್ತಿರುವುದು ಅವಳಿಗೂ ಅರಿವಾಯ್ತೆಂದು ಕಾಣುತ್ತದೆ – ಮುಖ, ಕೆನ್ನೆ ನಾಚಿಕೆ, ಆತಂಕದಿಂದ ಕೆಂಪೇರಿದಂತೆ ಕಂಡಿತು. ಓದುವ ಕಡೆ ಗಮನ ಪೂರ್ತಿ ಹರಿಯದೆ ಚಡಪಡಿಸಿದಂತೆ ಕಂಡು ಬಂತು. ಅಲ್ಲದೆ ಇಡಿ ಹಾಲಿಗೆ ನಾವಿಬ್ಬರೆ ಇದ್ದುದು, ಒಂದು ತರಹ ಮುಜುಗರವನ್ನು ತಂದಿರಬಹುದು – ಗಮನವೆಲ್ಲ ಅವಳತ್ತಲೆ ಕೇಂದ್ರೀಕೃತವಾಗಿದ್ದರಿಂದ. ನಾನೂ ಕೊಂಚ ನೋಟ ಬದಲಿಸಿ, ಅತ್ತಿತ್ತ ನೋಡುತ್ತ ಕೊಂಚ ವಾತಾವರಣ ಸಡಿಲಗೊಳಿಸಲು ಯತ್ನಿಸಿದೆ. ಆಗ ಅವಳಿಗು ಸ್ವಲ್ಪ ನಿರಾಳವಾಯ್ತೆಂದು ಕಾಣುತ್ತದೆ. ಆದರೂ, ಕದ್ದು ಕದ್ದು ನೋಡಾಟ ಮುಂದುವರೆದೇ ಇತ್ತು!

ಏಕತಾನತೆಯಿಂದ ಸುರಿಯುವ ಮಳೆ; ಗಾಜಿನ ಫಲಕ, ಕಿಟಕಿಯ ಮೇಲೆ ಹೊಡೆಯುವ ಜೋರಾದ ಸದ್ದು ಹೊರಗಿನಿಂದ ಒಳನುಗ್ಗಲೆತ್ನಿಸುವುದನ್ನು ಬಿಟ್ಟರೆ ನಿಶ್ಯಬ್ದ, ಮೌನ, ನೀರವದೆಲ್ಲರ ಕಲಸಿದ ಸಂಯುಕ್ತ ಭಾವ..ಈ ಏಕಾಂತದಲಿ ಕೂತ ಕನ್ನೆಯೊಬ್ಬಳ ಸಾಂಗತ್ಯದಲಿ ಅನತಿ ದೂರದಲಿ ಕುಳಿತ ನಾನು..ಏನೇನೊ ಭಾವೋತ್ಕಾರಣದ ತೇರನ್ಹಿಡಿದು, ಎಲ್ಲೆಲ್ಲೊ ಅಲೆದಾಡುವ ಮನ, ಏನೆಲ್ಲಾ ಕಲ್ಪನೆ,ಊಹನೆ..ಬಹುಶಃ ಅವಳಲ್ಲು ಒಂದು ತರಹ ವಿಚಿತ್ರ, ಮಧುರ ಭಾವನೆಗಳನ್ಹುಟ್ಟಿಸಿರಬಹುದೇ ಈ ಮಳೆಯ ರಾಡಿ?

ಹೀಗೆ ಆರಂಭವಾದ ಈ ಕಣ್ಣು ಮುಚ್ಚಾಲೆಯಾಟ ಸುಮಾರೂ ಕಾಲ ಮುಂದುವರೆಯಿತು. ಈಗ ಅವಳು ನಿಯಮಿತವಾಗಿ ಬರುವ ಸಮಯ ನೋಡಿಕೊಂಡು ಲೈಬ್ರರಿಗೆ ನಾನೂ ಹಾಜರು. ಆ ದಿನದಂತೆ, ಇಬ್ಬರೆ ಇರದಿದ್ದರೂ ಸಾಮಾನ್ಯ ಹೆಚ್ಚು ಜನರಿರುತ್ತಿರಲಿಲ್ಲವಾದ್ದರಿಂದ ಕೂರಲು ತುಸು ಖಾಸಗಿ ಜಾಗಗಳಿಗೇನು ಕೊರತೆಯಿರುತ್ತಿರಲಿಲ್ಲ. ಸದಾ ಅವಳ್ಹತ್ತಿರದ ಎದುರು ಸಾಲಿನ ಬೆಂಚೆ ಹಿಡಿಯುತಿದ್ದೆ. ಆಗೆಲ್ಲ ಸಿಕ್ಕಿದಾ ಒಂದೆರಡು ಕ್ಷಣಗಳ ಕಣ್ಣೋಟದ ಮಿಲನದಲ್ಲಿ ಮೊದಲಿಗೆ ಒಂದು ಪರಿಚಯದ ನಗೆಯ ವಿನಿಮಯ; ಕೆಲವೊಮ್ಮೆ ಕೇಳೂ ಕೇಳದ ಹಲೊ ಎನ್ನುವ ತುಟಿ ಪದ್ಯ. ಅಲ್ಲಿಂದ ಮುಂದೆ ಮಾತಾಡಿಸಲು ನನಗೂ ಧೈರ್ಯವಿಲ್ಲ, ಅವಳಿಗೇನನಿಸಿಕೆಯಿದೆಯೊ ಅದೂ ಗೊತ್ತಿಲ್ಲ..ಆದರೆಕೆಲವೊಮ್ಮೆ ನಾನು ಲೈಬ್ರರಿ ಹೊಕ್ಕರೆ, ಅವಳು ಕೂಡ ಮಾಮೂಲಲ್ಲದ ಸಮಯದಲ್ಲಿ ಬಂದು ಕೂರುತ್ತಿದ್ದಳು, ಅದು ನಾನಿರುವ ಸಾಲಿಗ್ಹತ್ತಿರದಲ್ಲೆ. ಮತ್ತದೆ ಪರಿಚಿತ ನೋಟ , ಮುಳ್ನಗೆಯ ವಿನಿಮಯ, ‘ಹೆಲೋ’ ಎಂದದುರುವ ತುಟಿ..ಬಹುಶಃ ಅವಳಿಗೂ ನನ್ನಂತೆಯೆ ಅನಿಸಿಕೆ, ಭಾವನೆಗಳಿರಬಹುದೆಂಬ ನನ್ನ ಅನುಮಾನಕ್ಕೆ ಪುಷ್ಟಿ ಕೊಟ್ಟಂತಾಗುತ್ತಿತ್ತು.

ಆದರೆ, ಈ ಅನುಮಾನದ ಪ್ರಾಣಿ ಎನ್ನುವ ನಿತ್ರಾಣದ ರಾಣಿ ಅಷ್ಟು ಸುಲಭದಲ್ಲಿ ಬಿಡುವಳೆ? ಕಾಕತಾಳೀಯತೆಯನ್ನು ಆರೋಪಿಸುತ್ತಲೊ, ಇಲ್ಲಸಲ್ಲದ ಆತಂಕಾನುಮಾನಗಳನ್ನು ಆರೋಪಿಸುತ್ತಲೊ, ಅಥವಾ ನಿರುತ್ತೇಜಕರ ಯಾ ತಿರಸ್ಕರಿಸಿದ ಉತ್ತರ ದೊರಕಿಬಿಟ್ಟೀತೆಂಬ ಭೀತಿಯಲ್ಲೊ – ಈ ಪ್ರಾಥಮಿಕ ಹಂತದ ಕುರುಹಗಳನ್ನು ದಾಟಿ ಮುಂದೋಡುವ ಧೈರ್ಯವೆ ಮಾಡಲಿಲ್ಲ ಮನಸು. ಇನ್ನೋಂದು ಮೂಲೆಯ ಆಸೆ , ಅವಳೆ ಏನಾದರು ಕುರುಹು ತೋರಿ ಪ್ರೋತ್ಸಾಹಿಸಬಹುದೇನೊ ಎಂಬ ಆಸೆ; ಅಥವ ಅವಳೆ ಮೊದಲ ಹೆಜ್ಜೆಯೆತ್ತಿ ಹೇಳಿಬಿಡಲೆಂಬ ದೂರದ ದುರಾಸೆ…!

ಒಟ್ಟಿನಲ್ಲಿ ಈ ನೋಡಾಟದ ಓಡಾಟದ ನಡುವೆ ಕಾಲೇಜು ವರ್ಷಗಳು ವೇಗವಾಗುರುಳಿದ್ದು ಗಮನಕ್ಕೆ ಬರಲೆ ಇಲ್ಲ. ರಜೆಯ ದಿನಗಳಲ್ಲು ಅವಳಿರುವ ಮನೆಯ ಸುತ್ತಾಮುತ್ತಾ ಸುತ್ತಾಡಿ, ಆಗೀಗೊಮ್ಮೆ ಆಕಸ್ಮಿಕ ಭೇಟಿಯಾಗಿಬಿಡಬಹುದೆಂದೆಲ್ಲ ಓಡಾದಿದ್ದರುಅದು ಫಲಕಾರಿಯಾಗಲಿಲ್ಲ. ಆದರೆ ಆ ದಿನಗಳಲ್ಲು ತಪ್ಪಿಸದೆ ಲೈಬ್ರರಿಗೆ ಬಂದು ಓದುವ ಅಭ್ಯಾಸ ಮಾತ್ರ ತಪ್ಪಿಸಿರಲಿಲ್ಲ ಅವಳು. ಅವಳ ಹಿಂದೆ ಬಸವನ ಹಿಂದಿನ ಬಾಲದಂತೆ ನಾನು!

ಕೊನೆಯ ವರ್ಷವೂ ಬಂದು ಹೋಯ್ತು. ಇನ್ನೇನು ಪರೀಕ್ಷೆಗಳೆಲ್ಲ ಮುಗಿದರೆ ಮತ್ತೆ ಈ ರೀತಿ ಭೇಟಿಯಾಗಲು ಆಗುವುದೊ ಇಲ್ಲವೊ ಎಂಬ ಭೀತಿ ಕಾಡುತ್ತಲೆ ಇತ್ತು. ಆದರೆ ಪರೀಕ್ಷೆಯತ್ತ ಗಮನ ಬೇರೆ ಹರಿಸಬೇಕಿತ್ತಲ್ಲ…ಹಾಗೂ ಒಂದು ದಿನ ಏನಾದರಾಗಲಿ ಅವಳಿಗೆ ಹೇಳಿಬಿಡಬೇಕೆಂದೂ ಅಂದುಕೊಂಡೆ…ಆದರೆ ಇದ್ದಕಿದ್ದಂತೆ ಆ ದಿನಗಳಲ್ಲಿ ಅವಳ ಸಹಪಾಠಿಯೊಬ್ಬಳು ಜತೆಗೋದಲು ಬಂದು ಕೂರತೊಡಗಿದಳು. ಮೊದಲಿನಂತೆ ದೃಷ್ಟಿ, ನಗುಗಳ ವಿನಿಮಯವೂ ಈಗ ದುಸ್ತರವಾಗತೊಡಗಿತು. ಅವಳೂ ಆಗಾಗ ಕದ್ದುಕದ್ದು ನೋಡುತ್ತಿದ್ದಳೆಂಬ ಭಾವ ಮಾತ್ರ ಕೊಂಚ ನೆಮ್ಮದಿ ಕೊಡುತ್ತಿದ್ದ ಅಂಶ.

ಪರೀಕ್ಷೆಗಳೆಲ್ಲಾ ಆಗಿ ರಿಸಲ್ಟೂ ಬಂತು. ಆ ದಿನ ಖಂಡಿತಾ ಬರುವಳೆಂದು ಗೊತ್ತಿತ್ತು – ಲಗುಬಗೆಯಿಂದ ಕಾಲೇಜಿಗೆ ಹೋದೆ. ಆದರೆ, ಎಷ್ಟು ಹೊತ್ತು ಕಾದರೂ ಆವಳ ಸುಳಿವೆ ಇಲ್ಲ. ಬಹುಶಃ ಲೈಬ್ರರಿಯಲ್ಲಿ ಕಾದರೆ, ಅಲ್ಲಿಗೆ ಬರುವಳೆಂದು ಅನಿಸಿ ಅಲ್ಹೋಗಿ ಕುಳಿತೆ, ಹಾಗೆ ದಿನಪತ್ರಿಕೆ ಬಿಡಿಸುತ್ತ. ಅಲ್ಲೊಂದು ಶಾಖ್ ಕಾದಿತ್ತು ಮುಖಪುಟದ ವಾರ್ತೆಯ ರೂಪದಲ್ಲಿ, ಬಲ ಕಾಲಮ್ಮಿನಡಿ; ಅಲ್ಲಿ ಅಚ್ಚಾಗಿದ್ದ ಪುಟ್ಟ ಬರಹ ಮತ್ತು ಕೆಳಗೆ ” ಕ್ಲಿಯೋಪಾತ್ರ”ಳ ಚಿತ್ರ…’ ನಗರಕ್ಕೆ ಮೊದಲ ರಾಂಕು ತಂದಿತ್ತ ವಾಣಿ’ ಎಂಬ ತಲೆಬರಹದಡಿ! ಅಲ್ಲಿಗೆ ಅವಳೀದಿನ ಬರುವ ಸಾಧ್ಯತೆ ಕಮ್ಮಿ ಎನಿಸಿತು – ಪೇಪರಿನಲ್ಲೆ ವಿಷಯ ಗೊತ್ತಾಗಿರುತ್ತಲ್ಲಾ? ಅಭಿನಂದಿಸಲೂ ಆಗದ ಕಸಿವಿಸಿ, ಈ ಹುಡುಗಿ ಇಷ್ಟೊಂದು ಪ್ರತಿಭಾವಂತೆಯೆ ಎಂಬ ಅಚ್ಚರಿ ಬೆರೆತ ಆತಂಕ ಮನದ ಮೂಲೆಯಲೇನೊ ಕಸಿವಿಸಿ ಎಬ್ಬಿಸಿ, ಏನೊ ಕಳುವಾದ ಪಿಚ್ಚನೆಯ , ಖಾಲಿ ಖಾಲಿ ಭಾವನೆ…

ಆದಿನ ಬಹಳ ದಿನಗಳ ನಂತರ ಮೊದಲ (ಕೊನೆಯ) ಬಾರಿಗೆ ಕ್ಯಾಂಟಿನ್ನಿನತ್ತ ಹೆಜ್ಜೆ ಹಾಕಿದೆ!

ಅದೇ ಕೊನೆ, ಅವಳ ಕುರಿತು ಸುದ್ದಿ ಕೇಳಿದ್ದು, ಓದಿದ್ದು. ಕೆಲ ವರ್ಷಗಳ ಹಿಂದೆ ಯಾರೊ ಪ್ರಾಸಂಗಿಕವಾಗಿ ಅವಳೀಗ ಅಮೇರಿಕದಲ್ಲಿ ಸೆಟಲ್ ಆಗಿದ್ದಳೆ, ಇಬ್ಬರು ಮಕ್ಕಳಂತೆ ಅಂದರು.

ನಾನು ಮನಸಿನಲ್ಲೆ ‘ಸುಖವಾಗಿರಮ್ಮ’ ಎಂದೆ!

ಸೂಚನೆ: ಹಾಳು ಶ್ರೀನಿವಾಸ ಎಲ್ಲಿ ಹಾಳಾಗಿ ಹೋದನೊ ಗೊತ್ತಿಲ್ಲ. ಅವನ ಸುದ್ದಿ ಕೇಳೆ ವರ್ಷಗಳ ಮೇಲಾಯ್ತು.

ನಾಗೇಶ ಮೈಸೂರು , ಸಿಂಗಾಪುರ

2 thoughts on “00008 – ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(03)”

 1. ಎಲ್ಲಾ ಸ್ವಾಭಿಮಾನದ ನಲ್ಲೆಯರನ್ನು SSLC ಫೇಲ್ ಮಾಡಿಸಿದ್ದೀರಾ… ಪರವಾಗಿಲ್ಲ ಲೈಬ್ರರಿಲಿ ಕುಳಿತಿದ್ದಕ್ಕೆ ಈ ಹುಡುಗಿ ರಾಂಕ್ ಬಂದಳು.

  ಚೆನ್ನಾಗಿದೆ ಸ್ವಾಮಿ ರಾಜ ಶ್ರೀನಿವಾಸರ ನೆನಪುಗಳು

  Liked by 1 person

  1. ನಾನೇನು ಮಾಡುವುದು ಹೇಳಿ – ಕತೆಗೆ ಸಿಕ್ಕ ಪಾತ್ರ ವಸ್ತುಗಳು ಫೇಲಾದ ಭೂಮಿಕೆ ನಿಭಾಯಿಸುತ್ತಿದ್ದರೆ? ಇಲ್ಲಿ ಫೇಲಾದರೇನಂತೆ ಬಿಡಿ, ಬದುಕಿನಲ್ಲಿ ಪಾಸಾಗಿದ್ದರೆ ಸಾಕಲ್ಲವಾ 🙂

   ಲೈಬ್ರರಿಯಲ್ಲಿ ಕೂತು ನ್ಯೂಸ್ ಪೇಪರಲ್ಲಿ ಪೋಟೊ ಬರಿಸಿಕೊಂಡವರು ಇರುವಂತೆ ಹಿಂದೆ ಬಿದ್ದು ಆ ಕಡೆಯೂ ಸಲ್ಲದೆ ಈ ಕಡೆಯೂ ಸಲ್ಲದೆ ಹೋದ ಹುಡುಗರ ಕೆಲವು ಕಥಾನಕಗಳ ನೆನಪಿಗೆ ಬರೆದ ತುಣುಕುಗಳಿವು. ಈಗ ಆ ರಾಜಾ, ಸ್ವಾಮಿ, ಶ್ರೀನಿವಾಸರೆಲ್ಲಿದ್ದಾರೊ ಗೊತ್ತಿಲ್ಲ.. ಆದರೆ ಅವರ ಹೊಸ ಅವತಾರಗಳಾಗಿ ಇನ್ನಾರೊ ಈಗಳು ಅದೇ ರೀತಿಯ ಪಾತ್ರ ವಹಿಸುತ್ರಾ, ನಿರಂತರ ಪ್ರಸ್ತುತರಿರುತ್ತಾರೆನ್ನುವುದು ನನ್ನ ಊಹೆ 😊

   Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s