00015 – ತರ ತರ ಋತು ಸಂವತ್ಸರ

015 – ತರ ತರ ಋತು ಸಂವತ್ಸರ……ಹಳತೊಸತು ಮೇಳೈಸಿತೊ ಬೆರೆತು!
—————————————————————————-

ಮೆಲ್ಲಮೆಲ್ಲಗಡಿಯಿಡುತ್ತ ಇನ್ನೇನು ಕಾಲಿಕ್ಕಲಿದ್ದಾಳೆ ಹೊಸ ವರ್ಷದ, ಹೊಸ ಋತುವಿನ ‘ಯುಗಾದಿ’ ರಾಣಿ (11.ಏಪ್ರಿಲ್); ಹಸಿರು ಬಳೆ ತೊಟ್ಟು ಸಿಂಗರಿಸಿಕೊಂಡ ನವವಧುವಿನಂತೆ ಬರುವ ಈ ಋತುಗಾನಕೆ ಅದೆಲ್ಲಿಯದೊ ಕಸುವು – ಪ್ರತಿ ವರ್ಷವೂ ಎಳಸಾಗಿ, ಬಾಲ್ಯದೆ ಸಾಗಿ, ಪ್ರಾಯದೆ ಮಾಗಿ, ವಯಸಾಗಿ ತಲೆಬಾಗಿ ಮತ್ತದೆ ಚಕ್ರದಲಿ ಮರುಕಳಿಸುವ ಅಸೀಮ ಸಾಮರ್ಥ್ಯ, ಜಾದೂಗಾರಿಕೆ ಹಾಗು ಸರಳ ತಂತ್ರ. ಅದನ್ನಾಗಲೆ ಹಾಡಿ ಹೊಗಳಿ ಕುಣಿದಾಡಿಸಿದ ವರಕವಿ ಅಂಬಿಕಾತನಯದತ್ತರಿಗಿಂತಲೂ ಸೊಗಸಾಗಿ ಹೇಳಲು ಬೇರಾರಿಗೆ ತಾನೆ ಸಾಧ್ಯವೆಲ್ಲಿದೆ? ಮತ್ತೆ ಮತ್ತೆ ಅದನ್ನೆ ಉದಾಹರಿಸಬಹುದಷ್ಟೆ – ಮತ್ತೆ ಮತ್ತೆ ಬರುವ ಅದೇ ಉಗಾದಿಯ ತರದಿ!

ಇನ್ನೊಂದೇ ವಾರದಲಿ ಹೆಜ್ಜೆಯಿಟ್ಟು ಹಳತನು ಸರಿಸಿ, ಹೊಸತಿನ ಪರದೆಯ ತೆರೆಯೆಳೆವ ನಿಸರ್ಗದ ಹಾಡಿಗೆ ದನಿಗೂಡಿಸುವ ಒಂದು ಸಣ್ಣ ಯತ್ನ – ಈ ಕವನದ ರೂಪದಲ್ಲಿ ಹೊರಬಿದ್ದಿದೆ. ಹೊಸ ವರ್ಷದತ್ತ ಹೊಸ ಆಶಯದಿಂದ, ಹೊಸ ನಿರೀಕ್ಷೆಯಿಂದ ನೋಡುವ ಹಾಗೆಯೆ, ಕಳೆದ ಸಾಲನು ಬಿಗಿದಪ್ಪಿ, ನೇವರಿಸಿ ಧನ್ಯವಾದ ಹೇಳಿ ಬೀಳ್ಕೊಡುವ ಹವಣಿಕೆ ಮತ್ತು ಹೊಸತು-ಹಳತಿನ ಸಂಧಿ ಕಾಲದ ಸಂದಿಗ್ದತೆ, ಉಲ್ಲಾಸ, ಆತಂಕಾ, ಕುತೂಹಲ – ಎಲ್ಲವೂ ಮೇಳೈಸಿದ ಕಲಸುಮೇಲೋಗರದ ಸಂಯುಕ್ತಭಾವ ಇದರ ಹಿನ್ನಲೆ.

ಹಳತು ಹಳಸದಿರಲಿ, ಹೊಸತಿಗೆ ಮುನಿಸದಿರಲಿ; ಹೊಸತು ಹಳತ ತೊಳೆಸದಿರಲಿ, ಕಳವಳಿಸದಿರಲಿ. ಎರಡರ ಮಿಳಿತ ಹಳೆ ಬೇರು ಹೊಸ ಚಿಗುರಿನ ಅವಿನಾಭಾವ ಸಂಬಂಧದಲಿ ಸೊಗಡ ಚೆಲ್ಲಲ್ಲಿ ಎಂದು ಹಾರೈಸುತ್ತ, ಹೊಸ ಸಂವತ್ಸರದ ಋತುಗಾನಕ್ಕೆ ಸ್ವಾಗತ ಹೇಳೋಣ!

——————————————–

ಋತು ಸಂವತ್ಸರ ಗುಣ ಮತ್ಸರ
ಬಿಸಿಲು ಮಳೆ ಚಳಿಗ್ಹಾಹಾಕಾರ
ವರ್ಷಪೂರ ಕಾಡೇ ಕುಣಿಸಿದರ
ಹೊಸವರ್ಷಕದ ತೆರೆಯವಸರ!

ಹಳತೆಲ್ಲಾ ಒಳಿತಾಗಿಸೊ ಪೂರ
ಹೊಸತೆಲ್ಲ ಹಳತಾಗೊ ಪ್ರವರ
ಹಳೆಯದ ಹಳಿಯದ ಚಾದರ
ಹೊಸತೆ ಹಸನೆನ್ನದಿಹ ಎಚ್ಚರ!

ಸುರಿದು ಬಿಸಿಲಾಗೊನೆ ಬಿಸಿಲೆ
ಮಳೆಯಾಗುವಳೆ ಮೈಯ್ಬೆವರೆ
ಬಿದ್ದರೆ ಹನಿಗೆ ಫಲವತ್ತಿನ ಬೆಳೆ
ಸದ್ದಿರದೆಲೆ ಚಿಗುರಿ ಹೊಂಬಾಳೆ!

ಚೈತ್ರ ವೈಶಾಖ ಚಿತ್ತ ಋತುಗತ್ತ
ಋತು ಋತುಮತಿ ಕೆಳೆ ನಡೆದಿತ್ತ
ಹೂವ್ವನರಳಿಸೊ ಕಾಲ ಸನ್ನಿಹಿತ
ಪುಷ್ಪವತಿಯಾದಳೆ ಪ್ರಕೃತಿಸುತ್ತ!

ಚಿಗುರೊಡೆದು ಪ್ರಾಯಾಡಿಪಾಯ
ಹುಡುಕೇನೆಲ್ಲ ಉಪಾಯಮಾಯ
ಕಾಲಾ ಜಾರಿದರೆಷ್ಟು ಅಪಾಯವೆ
ಋತೃತು ಮರುಕಳಿಸಿದ ಲಯವೆ!

ತಲೆ ನರೆಸಿ ಮೈನೆರೆದ ಪುಷ್ಪಮತಿ
ಗಣಿಸಿ ಎಣಿಸಿ ಸಾಲುಸಾಲ ಪ್ರಣತಿ
ಬರಲಿ ಬೇವುಬೆಲ್ಲದ ತರದಿ ಶರಧಿ
ಹಾಯೆ ಹರಿಗೋಲೆ ಮನದಂಬುದಿ!

——————————————–
ನಾಗೇಶ ಮೈಸೂರು, 04.ಏಪ್ರಿಲ್.2013
——————————————–

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s