00165. ಅನುದಿನದ ವ್ಯಾಲೆಂಟೈನೆ ಗೃಹಿಣಿಗೆ ..

00165. ಅನುದಿನದ ವ್ಯಾಲೆಂಟೈನೆ ಗೃಹಿಣಿಗೆ ..
________________________________

ನಿನ್ನೆಯ ದಿನ ಇಣುಕಿದ ವ್ಯಾಲೆಂಟೈನಿನ ದಿನದಲಿ ಈ ಬಾರಿ ಒಂದು ಕುತೂಹಲಕಾರಿ ಅಂಶ ಸೇರಿಕೊಂಡಿತ್ತು. ಪಾಶ್ಚಾತ್ಯರ ವ್ಯಾಲೆಂಟೈನಿನ ದಿನದಂತೆಯೆ ಚೈನೀಸರ ಹೊಸ ವರ್ಷದ ಕಡೆಯ ದಿನ (ಅಂದರೆ ಹದಿನೈದನೆ ದಿನ) ಚೈನೀಸ್ ವ್ಯಾಲಂಟೈನ್ ದಿನವಾಗಿ ಆಚರಿಸುತ್ತಾರೆ…ಈ ಬಾರಿ ಎರಡೂ ಒಂದೆ ದಿನದಲ್ಲಿ ಬಂದಿರುವುದು ಕಾಕತಾಳೀಯ ವಿಶೇಷ. ಅದನ್ನು ಓದುತ್ತಿದ್ದಂತೆ ಇನ್ಯಾವ್ಯಾವ ಸಂಸ್ಕೃತಿಯಲ್ಲಿ ಇನ್ನೇನೇನು ಹೆಸರಿನಲ್ಲಿ ಇದರ ಆಚರಣೆ ನಡೆದಿರಬಹುದು ಎಂಬ ಪ್ರಶ್ನೆಯ ತುಣುಕು ಹಾದು ಹೋಯ್ತು. ಅದರ ಹಿಂದೆಯೆ ಮೂಡಿದ ಮೊದಲ ಭಾವ – ಈ ಪ್ರೀತಿ, ಪ್ರೇಮದ ಹೆಸರನ್ನು ಹೇಗೆ ವಾಣಿಜ್ಯೋದ್ಯಮಕ್ಕೆ ಅನುಕೂಲಕರವಾಗಿ ಒದಗಿ ಬರುವಂತೆ ತಿರುಗಿಸಿಬಿಡುತ್ತಾರೆ ಎನ್ನುವ ವಿಸ್ಮಯ. ಇಷ್ಟೊಂದು ಜಾಹೀರಾತು, ಪ್ರೇರೇಪಣೆಗಳ ವೆಚ್ಚವನ್ನೆಲ್ಲ ಪ್ರೀತಿ, ಪ್ರೇಮದ ನವಿರು ಭಾವನೆಯೊಂದಿಗೆ ಸೂಕ್ಷ್ಮವಾಗಿ ಬೆರೆಸಿ ತನ್ಮೂಲಕ ವಾಣಿಜ್ಯ ಜಗದ ಹಿತಾಸಕ್ತಿಯ ಮೂಲ ಸರಕಾಗಿಸಿಕೊಳ್ಳುವ ಹುನ್ನಾರ ಅಂತರ್ಗತವಾಗಿ ಹುದುಗಿದ್ದರೂ ಮೇಲ್ನೋಟಕ್ಕೆ ಕಾಣದಂತೆ ಸೊಗಸಾಗಿ ಪ್ಯಾಕೇಜಾಗಿಬಿಡುತ್ತದೆ. ಭಾವನೆಗಳ ಬಂಡವಾಳದ ಜತೆಗೆ ಜೇಬಿನ ಭಾರ ಹಗುರವಾಗಿಸುವ ಈ ಪರಿ ಬರಿ ಇದೊಂದು ಹಬ್ಬಕ್ಕೆ ಮಾತ್ರವಲ್ಲ, ಇಂತಹ ಹಲವಾರು ಹಬ್ಬಗಳಲ್ಲಿ ಸಹಜವಾಗಿ ಕಾಣುವ ನೋಟ (ಸ್ಥಳೀಯದ್ದಿರಲಿ, ಬಾಹ್ಯದ್ದಿರಲಿ). ಇದೆಲ್ಲ ಗೋಜು ಗದ್ದಲದ ನಡುವೆಯೆ ಖರ್ಚು ವೆಚ್ಚಗಳ ಗದ್ದಲವಿರದೆ ದಿನವೂ ನಡೆಯುವ / ನಡೆಯುತ್ತಲೆ ಬಂದಿರುವ ವ್ಯಾಲೆಂಟೈನುಗಳು (ಆ ಹೆಸರಿನಿಂದ ಕರೆಯಲ್ಪಡದಿದ್ದರೂ) ಯಾರ ಕಣ್ಣಿಗೂ ಬೀಳುವುದಿಲ್ಲ – ಯಾಕೆಂದರೆ ಅಲ್ಲಿ ವಾಣಿಜ್ಯದ ಹಿತಾಸಕ್ತಿಯನ್ನು ಕಾಯುವ ಯಾವುದೆ ಆಡಂಬರ, ಆಕರ್ಷಣೆಯಿರದೆ ಬರಿ ಸ್ವಚ್ಚ ಪ್ರೀತಿ, ಪ್ರೇಮದ ನಿಚ್ಚಳ ಪ್ರದರ್ಶನವಷ್ಟೆ ಅಡಗಿರುತ್ತದೆ, ಯಾವುದೆ ತೋರಿಕೆಯ ಹೊದರಿಲ್ಲದೆ. ಅಂತಹ ಒಂದು ಸರಳ ಚಿತ್ರಣದ ಹುನ್ನಾರ ಈ ಪುಟ್ಟ, ಸರಳ ಕವಿತೆಯದು. ಕೆಲಸ ಮುಗಿಸಿ ಮನೆಗ್ಹೊರಟ ಸಾಧಾರಣ ಪುರುಷನೊಬ್ಬನ ಮನದ ಚಿಂತನೆಯ ಜಾಡು ಹಿಡಿದು ನಡೆವ ಭಾವ – ಈ ಅಧುನಿಕ ದಿನಗಳಲ್ಲಿ ಇನ್ನು ಅದೆಷ್ಟರ ಮಟ್ಟಿಗೆ ಉಳಿದಿದೆಯೊ ಹೇಳಬರದಿದ್ದರೂ, ವ್ಯಾಲೆಂಟೈನಿನ ನಿಜವಾದ ಅರ್ಥಕ್ಕೆ ಇದಕ್ಕಿಂತ (ಈ ಸಹಜ ಸಾಧಾರಣ ನಡುವಳಿಕೆಯ ಪ್ರಕ್ರಿಯೆಗಿಂತ) ದೊಡ್ಡ ವಾಖ್ಯೆ ಬೇರಾವುದೂ ಇರಲಾರದು ಅನಿಸುತ್ತದೆ.

ಅನುದಿನದ ವ್ಯಾಲೆಂಟೈನೆ
_________________

ಬೆಳಗಿಂದ ಬೈಗಿನತನಕ
ದುಡಿತಾನೆ ಮೈಮುರಿದು
ಮುಗಿದಾಗ ಸಂಜೆ ಹೊತ್ತು
ನಡೆದಾನೆ ಮನ ಕಡೆ ಚಿತ್ತ ||

ಬಿಟ್ಟಿರಬೇಕೀಗಾಗಲೆ ಶಾಲೆ
ಮಕ್ಕಳೀಗಾಗಲೆ ಮನೆಯಲಿ
ಬಂದು ಕಾದಿರಬೇಕು ಕಾತರ
ತರಬಹುದೇನೆಂಬಾ ಆತುರ ||

ಅರಿವಿಲ್ಲದಿರುವುದೆ ನಿರೀಕ್ಷೆ?
ಸಂತೃಪ್ತಿಗೊಳಿಸುವ ಕರುಳು
ಮಿಡಿದು ಹುರಿಗಾಳಾಗಿ ಮನ
ದಾರಿಯುದ್ದಕು ಹುಡುಕಿದನ ||

ಸಿಹಿದ್ರಾಕ್ಷಿಯೊ ಗೊಡಂಬಿಯೊ
ಕಿತ್ತಳೆ ಸೇಬು ಮೂಸಂಬಿಯೊ
ತುಂಟ ಹುಡುಗರ ಆಟಿಕೆಗು ಸರಿ
ಏನಾದರೂ ಕೊಂಡು ನಡೆಯೊ ||

ಕುರುಕು ತಿಂಡಿಯ ಪೊಟ್ಟಣ
ಕುಡಿವ ಪಾನೀಯಗಳ ಶೀಷೆ
ಟೇಪು ಬ್ರೋಚು ಪೆನ್ನು ಪೆನ್ಸಿಲ್ಲು
ಕಥೆ ಪುಸ್ತಕಗಳ ಜತೆ ಪರಿಷೆ ||

ಮರೆತಿದ್ದ ಎಣ್ಣೆ ಕೊಬ್ಬರಿ ಬೆಲ್ಲ
ದಿನಸಿ ಸಾಮಾನಿನ ತರಲೆ
ಕಟ್ಟಿಸೆಲ್ಲ ಪೊಟ್ಟಣ ನಡೆದವ
ಬಗಲಿನ ಕೈ ಚೀಲ ಹಿಡಿದವ ||

ತೂಗಾಡಿದ ಸಾಮಾನಿನ ಜತೆ
ನಡೆದಾ ಮನೆಯತ್ತ ಸಂಪ್ರೀತ
ಹಾದಿಬೀದಿ ಗಲ್ಲಿ ಆಟೊ ಸೈಕಲ್ಲು
ಸಮವಸ್ತ್ರ ಅವಿತಿಡದೆ ಗುರುತ ||

ಕೊನೆ ತಿರುವಿನತ್ತ ಬಂದಾಗ
ನೆನಪಾಗುವುದು ತಂಬಾಕು
ಎಲೆಯಡಿಕೆ ಜತೆ ಸಿಗರೇಟು
ಜೇಬು ಸೇರಿದ ಪ್ಯಾಕೆಟ್ಟು ||

ಪೆಟ್ಟಿಗೆಯಂಗಡಿ ಬಾಳೆಗೊನೆ
ನೆನಪಿಸಿದಾಗ ರಸಬಾಳೆ ಚಿಪ್ಪು
ಸೇರಾಯಿತೆಲ್ಲ ಪೊಟ್ಟಣ ಚೀಲ
ದಿನದಂತೆ ಮುಗುಳ್ನಕ್ಕ ನಿರಾಳ ||

ಹತ್ತೆ ಹೆಜ್ಜೆಯ ದೂರಕೆ ಮುನ್ನ
ತಟ್ಟನೆ ನೆನಪಾಗಿ ಮುಡಿ ಮಲ್ಲಿಗೆ
ಕಟ್ಟೆಯ ಬುಟ್ಟಿಯಲೊಂದು ಮೊಳ
ಅನುದಿನದ ವ್ಯಾಲೆಂಟೈನೆ ಗೃಹಿಣಿಗೆ ||

————————————————————————————
ನಾಗೇಶ ಮೈಸೂರು, ೧೪. ಫೆಬ್ರವರಿ. ೨೦೧೪, ಸಿಂಗಪುರ
————————————————————————————-

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s