00017 – ಹುಡುಕೂ, ವರ್ಷದ್ಹುಡುಕು ..!

——————————————————————————
……ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ!
——————————————————————————

ನಿನ್ನೆ ಹೀಗೆ ಏನೊ ಮಾಡುತ್ತ ಕೂತಿದ್ದಾಗ “ಹಬ್ಬಕ್ಕೆ ಚಿನ್ನುವಿಗೆ ಬಟ್ಟೆ ತೆಗಿಯಬೇಕು”ಎಂದಳು. ಕೆಲಸದ ಗುಂಗಿನಲ್ಲಿ ನಿರತನಾಗಿದ್ದ ನಾನು ‘ಹೂಂ’ಗುಟ್ಟಿದೆ. ಬಹುಶಃ ಮಗನ ಬಟ್ಟೆಯ ಜತೆ ಅವಳಿಗೂ ಕೊಡಿಸಬೇಕೆಂದು ಇಂಗಿತವಿತ್ತೆಂದು ಕಾಣುತ್ತದೆ. ನನಗೆ ಈ ಬಟ್ಟೆ, ಆಯ್ಕೆ ಇತ್ಯಾದಿಗಳ ಪರಿಜ್ಞಾನ ಅಷ್ಟಕಷ್ಟೆ. ಯುವುದೊ ತಗುಲಿಸಲೊಂದು ಬಟ್ಟೆ ಮೈ ಮೇಲಿದ್ದರೆ ಸರಿ – ಕೊಳ್ಳುವಾಗಲೂ ಅಷ್ಟೆ, ಯಾವ ಕ್ವಾಲಿಟಿ ಚೆನ್ನ, ದರ ಸರಿಯಿದೆಯೊ ಇಲ್ಲವೊ ಇತ್ಯಾದಿಗಳ ವಿಮರ್ಶಿಸುವ ಅಥವಾ ನಿರ್ಧರಿಸುವ ಚಾತುರ್ಯವೂ ಇಲ್ಲ. ಹೀಗಾಗಿ, ಯಾರಾದರೂ ‘ತಜ್ಞ’ ಗೆಳೆಯರ ಸಲಹೆ ಜತೆಯಿರದಿದ್ದರೆ – ನನ್ನ ಆಯ್ಕೆಯ ಕೆಲಸ ತುಂಬ ಸುಲಭ; ಮನದಲ್ಲೆ ತೀರ ಕೈ ಕಚ್ಚದ ಗರಿಷ್ಟ ಬೆಲೆಯೊಂದನ್ನು ನಿರ್ಧರಿಸುವುದು. ಅಷ್ಟರೊಳಗೆ ಸಿಕ್ಕಿದ್ದು, ಮನಸಿಗೊಪ್ಪಿದ್ದನ್ನು ಎತ್ತಿಕೊಂಡು ನಡೆಯುವುದು. ಒಂದು ವೇಳೆ ಅದು ತಪ್ಪಾಯ್ಕೆಯೆ ಆಗಿದ್ದರೂ ಸರಿ, ತೀರಾ ತಲೆ ಕೆಡಿಸಿಕೊಳ್ಳುವಂತಿಲ್ಲ. ಒಳ್ಳೆ ಆಯ್ಕೆಯಾಗಿದ್ದರೆ ಪ್ರಶ್ನೆಯೆ ಇಲ್ಲವಲ್ಲ? ಇದೆ ಕಾರಣದಿಂದ ಮನೆಯವರಿಗು ಅಷ್ಟೆ, ಕೈಗಿಷ್ಟು ಅಂತ ದುಡ್ಡು ಕೊಟ್ಟು ಏನಾದರೂ ತೆಗೆದುಕೊಳ್ಳಿ ಎಂದು ಬಿಟ್ಟು ಬಿಡುವುದು! ಬಹುಶಃ ಈ ಬಾರಿಯ ಹಬ್ಬಕ್ಕೂ ಅದೆ ಮಾಡುವುದಿದ್ದರೂ , ಹೊರದೇಶದಲ್ಲಿರುವ ಕಾರಣದಿಂದ ಹೋಗದಿರದೆ ವಿಧಿಯಿರುವುದಿಲ್ಲವೇನೊ ಅಂದುಕೊಂಡೆ ಕೆಲಸ ಮುಂದುವರೆಸಿದೆ.

ಯುಗಾದಿಯ ಆ ದಿನಗಳ ನೆನಪಿಗೋಡಿದರೆ ಕಣ್ಮುಂದೆ ನಿಲ್ಲುವ ಮೂರು ಚಿತ್ರಗಳೆಂದರೆ : ಹೊಸ ಬಟ್ಟೆ, ಆಶೀರ್ವರ್ಚನದ ಭಕ್ಷೀಸು, ಮತ್ತು ಹಬ್ಬದ ಮರುದಿನದ ಸಂಭ್ರಮಾತಂಕದ ವರ್ಷದ್ಹುಡುಕು. ಈ ಮೂರರ ಜತೆಗೆ ಮತ್ತೊಂದು ಸೇರಿಸಬೇಕೆಂದರೆ ಹಬ್ಬದಡುಗೆ ಮಾಡುವ ಸಂಭ್ರಮ, ಸಿದ್ದತೆಗಳ ವರಸೆ. ಕಾಲಗತಿ ಪಯಣದಲ್ಲಿ ಎಲ್ಲವು ಮಸುಕಾಗಿ ಆಚರಣೆಗಳೆ ಅರ್ಥ ಕಳೆದುಕೊಂಡು ಮಾಯವಾಗುತ್ತಿರುವ ಈ ದಿನಗಳಲ್ಲಿ, ಬಾಲ್ಯದಾ ದಿನಗಳ ತುಂತುರು ಸಿಂಚನವೆ ಎಂತಹದೊ ಮುದ ತಂದು, ಈ ನಾಗರೀಕ ವೇಗ ಜೀವನದಲ್ಲಿ ನಾವೇನೊ ಕಳೆದುಕೊಳ್ಳುತ್ತಿರುವ ಭಾವ ಮನಕಾವರಿಸಿದರೆ, ಬಹುಶಃ ನೀವು ಒಬ್ಬಂಟಿಯಲ್ಲ.

ನೀವೇನಾದರೂ ಸಾಮಾನ್ಯ ಮಧ್ಯಮವರ್ಗ ಕುಟುಂಬಕ್ಕೆ ಸೇರಿದವರಾಗಿ ಬೆಳೆದು ಬಂದವರಾಗಿದ್ದರೆ, ನಾನೀಗ್ಹೇಳಲಿರುವ ಕೆಲ ವಿಷಯಗಳು ಅಚ್ಚರಿಯಾಗೇನೂ ತೋರುವುದಿಲ್ಲ – ಬಹುಶಃ ಹಾಗೆಯೆ, ಹೊಸ ಪೀಳಿಗೆಯವರಿಗೆ ಹಾಗೇನಿಸದಿದ್ದರು ಅಚ್ಚರಿಯೇನಿಲ್ಲ. ನಾವು ಬೆಳೆದ ಬಾಲ್ಯದಲ್ಲಿ, ದೈನಂದಿನ ಚಟುವಟಿಕೆಗಳಲ್ಲಿ ಕೆಲವು ನಿರೀಕ್ಷೆಗಳ ಸಂಭ್ರಮವಿರುತ್ತಿತ್ತು – ಅಂತಹದರಲ್ಲಿ ಒಂದು, ಕೆಲವು ಹಬ್ಬಗಳಿಗಾಗಿ ಕಾತರದಿಂದ, ಸಂಭ್ರಮದಿಂದ ಎದುರುನೋಡುವುದು. ಅದಕ್ಕೆ ಒಂದು ಕಾರಣ, ಹಬ್ಬಕ್ಕೆ ಸ್ಕೂಲಿಗೆ ಸಿಕ್ಕುವ ರಜೆಯಾದರೂ, ಅದಕ್ಕಿಂತ ಮಿಗಿಲಾಗಿ ಹಬ್ಬದ ನಿರೀಕ್ಷಣೆ – ಅದರಲ್ಲೂ ಯುಗಾದಿಯೆಂದರೆ ಇನ್ನೂ ಖುಷಿ; ಯಾಕೆಂದರೆ, ವರ್ಷದ ಒಂದೆರಡು ಸಂಧರ್ಭದಲ್ಲಿ ಮಾತ್ರವೆ ನಮಗ್ಹೊಸಬಟ್ಟೆ ಸಿಗುತ್ತಿದ್ದುದು! ಅದರಲ್ಲಿ ಒಂದು ಯುಗಾದಿಗೆ. ಆಗೆಲ್ಲ ವ್ಯವಹಾರ ನಿಮಿತ್ತ ಹೊರಗಿನೂರು, ರಾಜ್ಯಗಳಲ್ಲಿ ಸುತ್ತಾಡುತ್ತಿದ್ದ ಅಪ್ಪ, ತಿಂಗಳುಗಟ್ಟಲೆ ಹೊರಗಿರಬೇಕಾಗುತ್ತಿತ್ತು. ಅಲ್ಲಿದ್ದಾಗಲೆ ನಮಗೆ ಹೊಲಿಸಲು ಬಟ್ಟೆ ಕೊಂಡಿದ್ದಾರೆಂಬ ಸುದ್ದಿ ಪತ್ರ ಮುಖೇನವೊ, ಅಥವಾ ಇನ್ಯಾರಾದರೂ ತಂದ ಸುದ್ದಿಯಿಂದ ತಿಳಿಯುತ್ತಿತ್ತು. ಆದರೆ, ಅದನ್ನು ನೋಡಲು ವಾರ, ತಿಂಗಳುಗಟ್ಟಲೆ ಕಾಯಬೇಕಾಗುತ್ತಿತ್ತು. ಬರಿ ಅದರ ಬಣ್ಣನೆಗಳನಷ್ಟೆ ಕೇಳಲು ಅಥವಾ ಓದಿ ಊಹಿಸಲಷ್ಟೆ ಸಾಧ್ಯವಿದ್ದಿದ್ದು. ಅದು ಎಷ್ಟು ನಿರೀಕ್ಷೆಯ ಬಲೂನಾಗಿ ಉಬ್ಬಿಬಿಡುತ್ತಿತ್ತೆಂದರೆ ಅದರ ಬಣ್ಣ, ಸ್ಪರ್ಶಗಳೆಲ್ಲಾ ಊಹಾ ಜಗದಲ್ಲೆ ಅವತರಿಸಿ, ಕರತಲಾಮಲಕವಾದಂತನಿಸಿಬಿಡುತ್ತಿತ್ತು. ಎಷ್ಟೊ ಬಾರಿ, ನಿರೀಕ್ಷೆಯ ಕಲ್ಪನೆಗಳ ಭಾರವೆ ವಾಸ್ತವಕ್ಕಿಂತ ಅಧಿಕ ಪ್ರಖರವಾಗಿ, ನೈಜ್ಯದಲಿ ನೋಡಿದಾಗ ನಿರಾಶೆಯಾಗಿದ್ದು ಉಂಟು. ಅದೇನೆ ಇದ್ದರು, ಆ ಕಾಯುವಿಕೆಯ ಕಾತರ, ಉದ್ವೇಗ, ಹರ್ಷೋಲ್ಲಾಸ, ಖೇದಗಳ ಸಂಗಮಿಸಿದ ಅನುಭಾವ, ಅನುಭೂತಿ ಮಾತ್ರ ಅತಿಶಯದ ವಿಷಯ.

ಈ ಕಾಯುವಿಕೆ ಒಂದು ವಿಧವಾಗಿದ್ದರೆ, ತಂದ ಬಟ್ಟೆಯನ್ನು ಹೊಲಿಸಲು ಹಾಕಿ, ಅಳತೆ ಕೊಟ್ಟು ಅದು ಸಿದ್ದವಾಗುವತನಕ ಕಾಯುವ ವ್ಯಾಪಾರ ಮತ್ತೊಂದು ತರ! ಆ ದರ್ಜಿಗಳ ಕಥೆಯೆ ಇನ್ನೊಂದು ಪುರಾಣ; ಹೇಳಿದ್ದ ಹೊತ್ತಿಗೆ ಹೊಲಿದು ಕೊಟ್ಟನೆಂದರೆ, ಅವ ದರ್ಜಿಯೇ ಅಲ್ಲ! ಕೊಟ್ಟ ತಾರೀಖಿಗೆ ಹೋಗಿ, ಅವನಂಗಡಿಯ ಮುಂದೆ ನಿಂತಾಗಲೆಲ್ಲಾ, ಏನಾದರೂ ನೆಪ ಹೇಳಿ ವಾಪಸ್ಸು ಅಟ್ಟುತ್ತಿದ್ದ ; ಹೊಲಿಗೆ ಶುರು ಮಾಡಿದ್ದಾನೆಂದು ನಂಬಿಸಲು ಅಳತೆಗೆ ತಕ್ಕಂತೆ ಕತ್ತರಿಸಿಟ್ಟ ಬಟ್ಟೆ ತೋರಿಸಿ, ‘ಹೊಲಿಗೆಯೇನು ಬರಿ ಒಂದು ಗಂಟೆ ಕೆಲಸ’ ಎಂದು ಆಶೆ ತೋರಿಸಿ ಓಡಿಸಿಬಿಡುತ್ತಿದ್ದ. ಕೊನೆಗೆ, ಎಷ್ಟೆ ಮುಂಚೆ ಹೊಲಿಯಲು ಹಾಕಿದರೂ ಹಬ್ಬದ ಹಿಂದಿನ ಅಥವಾ ಹಬ್ಬದ ದಿನವಷ್ಟೆ ಹೊಲಿಗೆ ಸಿದ್ದವಾಗುತ್ತಿದ್ದುದು…ಒಂದು ಬಾರಿಯಂತೂ, ಹಬ್ಬ ಕಳೆದ ಎರಡು ದಿನಗಳಿಗೆ ಕೊಟ್ಟಾಗ, ಅಳುವೆ ಬಂದು ಮುಂದೆಂದು ಅವನ ಹತ್ತಿರ ಹೊಲಿಸಬಾರದೆಂಬ ಶಪಥಗೈದು ಅತ್ತಿದ್ದುಂಟು – ನಾಳೆಯೆ ಅವನ ಹತ್ತಿರ ಹೊಲಿಸಲು ಬಟ್ಟೆ ತರುವವರಂತೆ! ಪಾಪ, ಅವನು ತಾನೆ ಏನು ಮಾಡಿಯಾನು? ಎಲ್ಲರು ತಂದು ಹಬ್ಬಕ್ಕೆ ಹೊಲಿಯಹಾಕುವವರೆ ಹಾಗೂ ಎಲ್ಲರದೂ ಅರ್ಜೆಂಟೆ…ಆ ಸಮಯದಲ್ಲಿ ಹಗಲೂ ರಾತ್ರಿ ಎರಡು ಮೂರು ಶಿಪ್ಟಿನಲ್ಲಿ ಕೆಲಸ ಮಾಡಿದರೂ ಕರಗುತ್ತಲೆ ಇರದಷ್ಟು ಆರ್ಡರುಗಳು..ಒಟ್ಟಾರೆ, ಆ ಅನುಭವವೆ ಮೆಲುಕು ಹಾಕಲರ್ಹ ನೆನಪಾಗಿ ಆಗೀಗ ಕಾಡುವುದುಂಟು…ಈಗದರ ಚಿತ್ರಣವೆ ಬೇರೆಯಾಗಿದ್ದರೂ ಸಹ!

ಮೊಟ್ಟ ಮೊದಲಿಗೆ, ಆ ದಿನಗಳ ‘ಹಬ್ಬಕ್ಕೆ’ ಹೊಸ ಬಟ್ಟೆ ತೊಡುವ ಉದ್ವೇಗ, ಕಾತರಗಳೆ ಮಂಗಮಾಯ. ಆ ದಿನಗಳಲ್ಲಿ ವರ್ಷಕ್ಕೆ ಒಂದೊ, ಎರಡೊ ಹೊಸ ಬಟ್ಟೆ ಕಾಣುತ್ತಿದ್ದುದೆ ಹೆಚ್ಚು; ಈಗ ಹಾಗೆಲ್ಲಿ? ಆರ್ಥಿಕ ಪ್ರಗತಿಯೆನ್ನಿ, ಹೆಚ್ಚಿದ ಕೊಂಡುಕೊಳ್ಳುವ ಶಕ್ತಿಯ ಖದರೆನ್ನಿ, ಶ್ರೀಮಂತಿಕೆಯ ಹೊದರೆನ್ನಿ – ಬಟ್ಟೆ ಕೊಳ್ಳುವುದು (ಅದರಲ್ಲೂ ಮಕ್ಕಳಿಗೆ), ಈಗ ಬರಿಯ ಹಬ್ಬ, ಹರಿದಿನದ ವ್ಯವಹಾರವಾಗಿ ಉಳಿದಿಲ್ಲ. ಬದಲಿಗೆ, ಯಾವಾಗ ಬೇಕೊ ಆವಾಗ ಮನಸಿಗೆ ಬೇಕೆನಿಸಿದಾಗ ಕೊಳ್ಳುವ ಪ್ರಕ್ರಿಯೆ ( ಇದು ಬರಿ ಹೊಸ ಬಟ್ಟೆಗೆ ಮಾತ್ರವೇನು ಸೀಮಿತವಲ್ಲ, ಅದು ಬೇರೆ ವಿಷಯ ಬಿಡಿ). ಸುಮ್ಮನೆ ಬೇಸರ ಕಳೆಯಲು ‘ವಿಂಡೊ ಶಾಪಿಂಗ್’ಗೆ ಹೋಗಿ, ‘ಡಿಸ್ಕೌಂಟು ಸೇಲ್’ ನಲ್ಲಿ ಒಂದಷ್ಟು ಬಟ್ಟೆ ಹೊತ್ತು ತಂದು, ಕಬೋರ್ಡಿನಲ್ಲಿ ಗುಡ್ಡೆ ಹಾಕುವುದು ಈಗ ಸರ್ವೆ ಸಾಧಾರಣ. ಅದರಲ್ಲು, ಈ ‘ಮಾಲ್ ಕಲ್ಚರಿನ’ ಪ್ರಮೋಶನ್ನಿನ ದೆಸೆಯಿಂದಾಗಿ ಕಣ್ಣಿಗೆ ಬಿದ್ದಿದ್ದೆಲ್ಲಾ ಅಗ್ಗವೆನಿಸಿ, ಒಂದು ಕೊಳ್ಳುವ ಕಡೆ ಎರಡು, ಎರಡು ಕೊಳ್ಳುವ ಕಡೆ ಮೂರು..ಹೀಗೆ ಕೊಳ್ಳುವ, ಧರಿಸುವ, ಖುಷಿಪಡುವ ‘ಜೀವನ ಚಕ್ರ’ವೆ ಕ್ಷಯಗೊಂಡು ಇಡೀ ಪ್ರಸಂಗವೆ ‘ಕಾಯುವಿಕೆಯ ಉದ್ವೇಗ, ಕಾತರ’ವಿಲ್ಲದೆ ಕಳೆದುಹೋಗುತ್ತದೆ. ಒಂದು ಅನುಭವವಾಗಿ ನಮಗೇನೊ ಕಳಕೊಂಡ ಹಾಗೆ ಅನಿಸಿದರೂನೂ, ಇದರ ಅರಿವೆ ಇರದ ಹೊಸ ಪೀಳಿಗೆಗಳಿಗೆ ಬಹುಶಃ ಏನೂ ಅನಿಸುವುದಿಲ್ಲ ; ಏಕೆಂದರೆ, ಅವರಿಗೆ ಹೋಲಿಸಿ ನೋಡಲು ಮತ್ತು ಅನುಭಾವಿಸಲು ಅಂಥ ಅನುಭವಗಳೆ ಇರುವುದಿಲ್ಲವಲ್ಲ? ಜತೆಗೆ ಆ ಅನುಭೂತಿಯ ಮಾಧುರ್ಯ, ಅದನ್ನು ಅಂತರ್ಗತವಾಗಿ ಹೊಕ್ಕು, ಪ್ರಕೃತಿ ಸಹಜವಾಗಿ, ಅದರ ಸರಳ ರೂಪ, ಸಂಕಿರ್ಣತೆ ಮತ್ತು ತೊಡಕು / ಸಂಕಷ್ಟಗಳ ಸಮೇತ ಅನುಭವಿಸಿದ್ದಲ್ಲದೆ, ಬರಿಯ ಕಲ್ಪನಾವಿಲಾಸದ ನೋಟದ ಗಮ್ಯಕ್ಕೆ ನಿಲುಕದು. ಹೀಗಾಗಿ, ಒಂದು ಅಡುಗೋಲಜ್ಜಿಯ ಕಥೆಯಾಗಿ ಅದನ್ನು ಹೇಳಲೊ, ಕೇಳಲೊ ಸಾಧ್ಯವಾಗುವಷ್ಟರ ಮಟ್ಟಕ್ಕೆ ಸೀಮಿತವಾಗಿಬಿಡುವ ಅಪಾಯವೆ ಹೆಚ್ಚು.

ಮತ್ತೆ ಎಲ್ಲೊ ಹಾರಿ ಹೋಗಿ ಬಿಟ್ಟೆವೆ? ಬೈ ದಿ ವೆ, ಮಗನಿಗೆ ಅಂಗಡಿಗೆ ಕರೆದೊಯ್ದು ‘ಹಬ್ಬದ ಬಟ್ಟೆ’ ಕೊಡಿಸಲು ತೀರ್ಮಾನಿಸಿದ್ದೇನೆ – ಕನಿಷ್ಠ, ಆ ಅನುಭವದ ಅನುಭೂತಿಯ ಪದರಗಳಾದರೂ ನೇವರಿಸಲೆಂದು…….

ಯುಗಾದಿಯ ಮತ್ತೊಂದು ಸಾಂಪ್ರದಾಯಿಕ ನೆನಪೆಂದರೆ – ಹತ್ತಿರದ ಬಂಧುಗಳ ಮನೆಯ ಭೇಟಿ, ಮಾತಾಟ ( ಚೀನಿ ಹೊಸವರ್ಷದಾಚರಣೆಯಲ್ಲೂ ಇದು ಆಳವಾಗಿ, ಗಾಢವಾಗಿ ಹಾಸುಹೊಕ್ಕಾಗಿರುವುದನ್ನು ನೋಡಿದರೆ, ಇದು ಬಹುಶಃ ಏಷಿಯ ಸಂಸ್ಕೃತಿಯ ಸಮಾನ ಮನಸ್ಕ, ಸಾಮಾನ್ಯ ಅಚಾರದ ಸಂಪ್ರದಾಯ ಎನ್ನಬಹುದೆಂದು ಕಾಣುತ್ತದೆ). ಹಬ್ಬದ ದಿನ ಹೊಸ ಉಡುಗೆ ತೊಟ್ಟು, ನೆಂಟರಿಷ್ಟರ ಮನೆಗೆ ಹೋಗಿ ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಚನ ಪಡೆದು, ಮಾತಾಡಿ ಹಿಂದಿರುಗುವುದು ಸಾಮಾನ್ಯವಾದ ಮಾತಾಗಿತ್ತು, ಆ ದಿನಗಳಲ್ಲಿ. ನಾವು ಹುಡುಗರಾಗಿದ್ದಾಗ, ನಮಗಂತೂ ತುಂಬಾ ಉತ್ಸಾಹ – ಬೇರೆಯವರ ಮನೆಗೆ ಹೋಗಲೂ ಮತ್ತು ಅವರಿವರು ನಮ್ಮ ಮನೆಗೆ ಬಂದಾಗ ಸಹ. ಅದೇನು ಅವರ ಮೇಲಿದ್ದ ಪ್ರೀತಿ, ಗೌರವ, ಆದರಕ್ಕಲ್ಲ ಬಿಡಿ; ಆಗಿನ್ನೂ ಅದನ್ನರಿಯುವ ವಯಸ್ಸೂ ಆಗಿರುತ್ತಿರಲಿಲ್ಲ. ಆಗ ಸಾಮಾನ್ಯ ಹಿರಿಯರೆಲ್ಲ ಚಾಚೂ ತಪ್ಪದೆ ಪಾಲಿಸುತಿದ್ದ ಒಂದು ಸಂಪ್ರದಾಯದ ತುಣುಕೆಂದರೆ, ಬಂದು ನಮಸ್ಕರಿಸಿದ ಕಿರಿಯರಿಗೆಲ್ಲ (ಅದರಲ್ಲೂ ಮಕ್ಕಳಿಗೆ) , ಕೈಗೊಂದಷ್ಟು ‘ಕಾಸನ್ನು’ ಭಕ್ಷೀಸು ಕೊಡುವುದು. ನೆಂಟಸ್ತಿಕೆ, ಸಂಬಂಧದನುಗುಣವಾಗಿ ಈ ‘ಭಕ್ಷೀಸಿನ ಗಾತ್ರ’ ಸಹ ಏರಿಳಿಯುತ್ತಿದ್ದುದರಿಂದ, ನಮಗೆಲ್ಲ ಅದರ ಮೇಲೆಯೆ ಕಣ್ಣು – ಯಾರೆಷ್ಟು ಕೊಡಲಿದ್ದಾರೆಂದು! ಇಲ್ಲೆ ನೋಡಿ ಅನುಭವವೆನ್ನುವುದು ; ಹಳೆ ವರ್ಷಗಳ ನೆನಪಿನಿಂದ ಯಾವ ದೊಡ್ಡಪ್ಪ, ಚಿಕ್ಕಪ್ಪಗಳು ಎಷ್ಟೆಷ್ಟು ಕೊಟ್ಟಿದ್ದರೆಂದು ನೆನಪಿನ ಚೀಲಗಳಲ್ಲೆ ಶೋಧಿಸಿ, ಅದಕ್ಕನುಗುಣವಾಗಿ ಅವರ ಕಾಲಿಗೆ ನಮಸ್ಕರಿಸುವ ‘ಉದ್ದಳತೆ’ , ‘ಕಾಲಾವಧಿ’ ಮತ್ತು ‘ ಭಯ, ಭಕ್ತಿ’ಗಳೂ ನಿರ್ಧರಿತವಾಗುತ್ತಿದ್ದವು! ಹೋದ ವರ್ಷ ಕಮ್ಮಿ ಕೊಟ್ಟಿದ್ದರೆ ಕಾಟಾಚಾರದ ಶ್ರದ್ದೆ, ಹೆಚ್ಚು ಕೊಟ್ಟಿದ್ದರೆ ಹೆಚ್ಚೆಚ್ಚು ಭಕ್ತಿ; ಹೇಗೆ ಇದ್ದರೂ ಕಣ್ಣು ಮಾತ್ರ ಅವರ ಜೇಬಿನತ್ತಲೆ ಮತ್ತು ಅಲ್ಲಿಂದ ಎಷ್ಟರ ನೋಟು ಹೊರಬರಲಿದೆ ಎಂಬುದರತ್ತಲೆ! ಹುಡುಗುಡುಗರಲ್ಲೂ ಅದೇ ಒಂದು ಬಗೆಯ ‘ಕಾಂಪಿಟೇಷನ್’ – ಯಾರ್ಯಾರ ಕಲೆಕ್ಷನ್ ಎಷ್ಟೆಷ್ಟಾಯಿತೂ ಎಂದು ಮತ್ತು ಯಾರದು ‘ಗರಿಷ್ಟ’ ಮತ್ತು ಯಾರದು ‘ಕನಿಷ್ಟ’ ಎಂಬ ಸ್ಪರ್ಧೆ ಮತ್ತು ಜಂಬ, ಬಿಂಕಗಳ ಗಮ್ಮತ್ತು (ಕಡಿಮೆಯಿದ್ದರೆ ಬೇರೆಯೆ ಕಥೆ – ಅವರ ಅಪ್ಪ, ಅಮ್ಮನ ಕೈಯಿಂದ ಮತ್ತಷ್ಟು ಹಾಕಿಸಿ, ಬೇರೆಯವರ ಸಮಕ್ಕೆ ತಲುಪಿದಾಗಲೆ ರೋಷ ಶಮನವಾಗಿ ಆಳು ನಿಲ್ಲುತ್ತಿದ್ದುದು!) ಪ್ರಾಸಾಂಗಿಕವಾಗಿ, ಈ ಆಚರಣೆಯು ಚೀಣಿ ಹೊಸ ವರ್ಷದ ‘ಹೊಂಗ್ಬಾವ್’ ಗೆ (ಕೆಂಪು ಕವರಿನಲಿಟ್ಟು ಕೊಡುವ ಹಣ) ಸಮೀಪದ ಬಂಧು!

ಈಗಿನ ಗಡಿಬಿಡಿ ಪ್ರಪಂಚದಲ್ಲಿ ನೆಂಟರ ಮನೆಗೆ ಹೋಗಿ ಬರುವ ಸಮಯಕ್ಕೆ ಜನರ ಬಳಿ ಹೊತ್ತಿಲ್ಲ…ಅಂತೆಯೆ ಪುಡಿಗಾಸಿನ್ಹಿಂದೆ ಬೀಳುವ ಅನಿವಾರ್ಯದ ಸ್ಥಿತಿಯು ನಮ್ಮ ಮಕ್ಕಳಿಗಿಲ್ಲ. ಹೆಚ್ಚು ಕಡಿಮೆ ಪೋನಿನಲ್ಲೆ ಮಾತಾಡಿ ಎಲ್ಲಾ ಮುಗಿದುಹೋಗುವ ಕಥೆ. ಇನ್ನು ದೇಶ ಕೋಶ ಬಿಟ್ಟು ಪ್ರಪಂಚ ಪರ್ಯಟನೆಗಿಳಿದವರಿಗಂತೂ ಬೇರೆ ದಾರಿಯೂ ಇಲ್ಲ…

ಹಬ್ಬದ ದಿನವೆ ನಮಸ್ಕಾರಕ್ಕೆ ಹೊರಡುವುದರಿಂದ ಹೆಚ್ಚುಕಡಿಮೆ ಹೋದ ಕಡೆಯೆಲ್ಲ ತಿಂಡಿ ತಿನ್ನಲು ಸಹಜವಾಗೆ ಒತ್ತಾಯ, ಬಲವಂತ ಇದ್ದೆ ಇರುತ್ತಿತ್ತು. ಆದರೆ ಹೆಚ್ಚು ಕಡಿಮೆ, ಎಲ್ಲರ ಮನೆಯಲ್ಲೂ ಒಂದೆ ತಿಂಡಿ – ಇಡ್ಲಿ, ಚಟ್ನಿ, ಪಲ್ಯ! ನಮಗೊ ಎಲ್ಲಾಕಡೆ ಅದೆ ತಿನ್ನಬೇಕೆಂದರೆ ಬೋರು ಹೊಡೆದುಹೋಗುತ್ತಿತ್ತು; ತಿನ್ನುವುದಕ್ಕಿಂತ ಭಕ್ಷೀಸಿಗೆ ಗಮನ. ಬಾಯಿಬಿಟ್ಟು ಕೇಳುವಂತಿಲ್ಲ, ಕೊಡುವವರೆಗೂ ಕಾಯಬೇಕು, ಕೊಡುವರೊ ಬಿಡುವರೊ ಕಡೆತನಕ ಅನುಮಾನ! ಅದರ ಮಧ್ಯೆ ತಿಂಡಿ ಯಾರಿಗೆ ಬೇಕು? ನಿಜಕ್ಕು ತಿನ್ನುವ ಮಜವಿರುತ್ತಿದ್ದುದು ಹಬ್ಬದ ದಿನವಲ್ಲ; ಅದರ ನಾಳೆಯಾದ – ವರ್ಷದ್ಹುಡುಕಿಗೆ!

ಈ ‘ವರ್ಷದ್ಹುಡುಕು’ ಒಂದು ರೀತಿಯಲ್ಲಿ ನಮಗೆಲ್ಲ ನಂಬಿಕೆ, ಸಂಪ್ರದಾಯದ ಅಡಿಕಟ್ಟು ತೊಡಿಸಿಟ್ಟ ಪರಿಕರ. ದೊಡ್ಡವರೆಲ್ಲ ಹೇಳುತ್ತಿದ್ದರು – ಆ ದಿನ ನಾವು ಏನು ಮಾಡುತ್ತಿರುತ್ತೇವೊ, ಅದನ್ನೆ ವರ್ಷವೆಲ್ಲಾ ಮಾಡುತ್ತೇವೆ; ಅಂದೇನಾಗುವುದೊ ವರ್ಷವೆಲ್ಲ ಅದೆ ಆಗಲಿದೆ. ಖುಷಿಯಿಂದಿದ್ದರೆ ವರ್ಷವೆಲ್ಲ ಖುಷಿ, ದುಃಖ ಬೇಸರವಿದ್ದರೆ ವರ್ಷವೆಲ್ಲ ಕಾಡುವ ಅದೆ ಅನುಭೂತಿ(ಭೂತ)ಗಳು.. ಈ ನಂಬಿಕೆ ನಮ್ಮಲದೆಷ್ಟು ಬೇರೂರಿತ್ತೆಂದರೆ – ನಮಗದು ನಂಬಿಕೆಯೆ ಅಲ್ಲ, ಸತ್ಯದ ಸಾಕ್ಷಾತ್ಕಾರವಾಗಿತ್ತು! ಬರುವ ವರ್ಷದಲದೇನಡಗಿದೆಯೊ, ಅಡಕವಾಗಿದೆಯೊ, ಕಾಡಲಿದೆಯೊ, ಕಾಪಾಡಲಿದೆಯೊ – ಎಲ್ಲದರ ಮುನ್ನುಡಿ ಆ ದಿನವೆ ಬರೆಯಲಿರುವುದರಿಂದ, ನಾವು ಎಲ್ಲಿಲ್ಲದ ಭಯ ಭಕ್ತಿಯಿಂದ ರಾತ್ರೋರಾತ್ರಿ ಸಾಧು ಸಜ್ಜನರಾಗಿಬಿಡುತ್ತಿದ್ದೆವು. ಅ ದಿನವೆಲ್ಲ ನಮ್ಮದು ಅದೇನು ವಿನಯ, ಏನು ನಡೆನುಡಿ – ಸಾಧು ಬೆಕ್ಕಿನ ಹಾಗೆ! ಸ್ಕೂಲಿನಲಂತು ಹೇಗಾದರೂ ಸರಿ ಮೇಡಂ, ಮಾಸ್ಟರುಗಳ ಕೈಲಿ ಬೈಸಿಕೊಂಡು ಹೊಡೆತ ತಿನ್ನಬಾರದು; ಇಲ್ಲದಿದ್ದರೆ ವರ್ಷವೆಲ್ಲ ಅದೆ ಎಲ್ಲಿ ಪುನರಾವರ್ತನೆಯಾದೀತೊ ಎಂಬ ಭೀತಿ. ಓದುವುದರಿಂದ ಹಿಡಿದು ಹೋಂವರ್ಕ್ ಮುಗಿಸುವತನಕ ಅದೆ ಶ್ರದ್ದೆ. ಏನಾದರು ಅಂದುಕೊಂಡಂತೆ ಮಾಡಲಾಗದಿದ್ದರಂತು , ಆ ಹೆದರಿಕೆಯೆ ಸುಮಾರು ದಿನ ಕಾಡುತ್ತಿದ್ದುದುಂಟು.

ಇನ್ನು ಹಿರಿಯರ ಕಥೆಯೇನೂ ಅದಕ್ಕಿಂತ ಕಮ್ಮಿ ಇರುತ್ತಿರಲಿಲ್ಲ ಬಿಡಿ. ವರ್ಷವೆಲ್ಲ ಹರ್ಷ, ಸುಖ ಸ್ರವಿಸುತ್ತಿರಲೆಂದು ಆ ದಿನವೆಲ್ಲ ಮನೆಯಲ್ಲಿ ಹೋಳಿಗೆಯೂಟ, ಬಗೆಬಗೆ ಬಣ್ಣದನ್ನ, ತಾಳದ, ಸರ್ಜಪ್ಪ, ತರತರದೊಡೆಯಾಂಬೊಡೆಗಳ ಸಾಲೌತಣ. ಅವರುಗಳೂ ಸಹ ಜಗಳವಾಡದೆ, ಮಕ್ಕಳಿಗು ಗದರದೆ, ಬೈಯ್ಯದೆ ಆದಷ್ಟೂ ತಂಪಾದ, ಸಹನೀಯ ವಾತಾವರಣದಲ್ಲಿಡುವ ಹಂಬಲ, ಹವಣಿಕೆ. ಇನ್ನು ಶಾಖಾಹಾರಿಯಲ್ಲದವರಾದರೆ ಅಂದು ಗ್ಯಾರಂಟಿ ಬಾಡಿನೂಟದ ಜಾತ್ರೆ! ಒಟ್ಟಾರೆ ಆ ದಿನವನ್ನು ಹರ್ಷೋಲ್ಲಾಸದಲ್ಲಿಡಬೇಕೆಂಬ, ಆ ಸಂಭ್ರಮವನ್ನು ಜತನದಲಿ ಕಾಪಾಡಬೇಕೆಂಬ ಹಂಬಲ ಎಲ್ಲರಲ್ಲೂ ಪ್ರತ್ಯಕ್ಷವಾಗೊ, ಪರೋಕ್ಷವಾಗೊ – ಮೌಲಿಕವಿರಲಿ ಬಿಡಲಿ, ವ್ಯಕ್ತವಾಗುತ್ತಿತ್ತೆಂದೆ ಹೇಳಬಹುದು.

ಸಾಂಕೇತಿಕವಾಗಿ ವರ್ಷದ ಹೊಟ್ಟೆಯಲ್ಲಡಗಿರುವ ಸಿಹಿಕಹಿಯ ಗುಟ್ಟನು, ಬೇವಾಗಿಸದೆ ಬೆಲ್ಲದ ಹೂರಣವಾಗಿಸೆಂಬ ಆಶಯ, ಬೇಡಿಕೆಯನ್ನು ಮಂಡಿಸುವ ಈ ‘ವರ್ಷದ ತಡುಕು’, ಸಾಂಸ್ಕೃತಿಕವಾಗಿ ಒಂದು ಜನ ಸಮುದಾಯ, ಸಮಾಜದ ಮನೋಭಾವ, ಹಾರೈಕೆ, ಸದಾಶಗಳಿಗಿಡಿದ ಕನ್ನಡಿ. ಮುಂದೆ ಕಹಿಯಿರಲಿ ಸಿಹಿಯಿರಲಿ, ಕನಿಷ್ಟ ಆ ದಿನವಾದರೂ ಧನಾತ್ಮಕ ಆಶಯಗಳು ಅನುರಣಿತಗೊಂಡಲ್ಲಿ, ಅದೇ ಪ್ರೇರಕ ಶಕ್ತಿಯಾಗಿ ವಾತಾವರಣದಲಿ ಪಸರಿಸಿ, ಋಣಾತ್ಮಕಗಳನ್ನು ಧನಾತ್ಮಕವಾಗಿಸುವತ್ತ ಪ್ರಭಾವ ಬೀರಬಹುದೆಂಬ ಸಮಷ್ಟಿ ಪ್ರಜ್ಞೆ. ಆ ದೃಷ್ಟಿಯಿಂದ ಆಚಾರ ವಿಚಾರ ಸಂಹಿತೆಯ ನೆಲೆಗಟ್ಟಿನಲ್ಲಿ ಈ ಸಡಿಲ ಸಂಪ್ರದಾಯಾ, ನಡವಳಿಕೆಗಳು ಗಮನಾರ್ಹ ಮತ್ತು ಆದರ್ಶಪ್ರಾಯ. ಇಲ್ಲಿಯ ಮುಖ್ಯ ಒರತೆ ಸದಾಶಯ – ಕೇವಲ ಸ್ವಹಿತಾಸಕ್ತಿ ಮಾತ್ರವಲ್ಲದೆ, ಇಡಿ ಸಮುದಾಯದತ್ತ; ಅದೂ ಸಹ ನಿಯಮ ನೀತಿಗಳ ಕಟ್ಟುಪಾಡಿಲ್ಲದ ಸರಳ ಸಡಿಲ ಸಾಂಪ್ರದಾಯಿಕ ಹಾಗೂ ಜನಪದ ನೆಲೆಗಟ್ಟಿನಲ್ಲಿ. ಬಹುಶಃ ಅದೆ ಇದರ ಶಕ್ತಿ ಹಾಗೂ ದೌರ್ಬಲ್ಯ ಸಹ ( ಮರೆಯಾಗುತ್ತಿರುವ ಆಚಾರ ವಿಚಾರ ಸಂಪ್ರದಾಯದ ನೆಲೆಗಟ್ಟಿನಲ್ಲಿ ನೋಡಿದರೆ).

ಬೆಳೆದು ದೊಡ್ಡವರಾಗಿ ನಂಬಿಕೆ, ಆಚರಣೆಗಳ ನೆಲೆಗಟ್ಟೆ ಬದಲಾಗಿ ಕುರುಡು ನಂಬಿಕೆಗಳ ಜಾಗವನ್ನು ವಿಚಾರವಾದ ಆಕ್ರಮಿಸಿ ನಮ್ಮ ವ್ಯಕ್ತಿತ್ವದ ಹೂರಣವನ್ನೆ ಬದಲಿಸಿದ್ದರೂ, ನಾನಿಂದಿಗೂ ಆ ಹೆಸರು ‘ವರ್ಷದ್ಹುಡುಕು’ ಹುಟ್ಟಿಸುವ ಜಾದೂ, ಝಲಕ್ಕಿನಿಂದ ಹೊರಬರಲಾಗಿಲ್ಲ. ಬಹುಶಃ ಅದರಿಂದಲೆ ಇರಬೇಕು, ದೂರದೇಶದಲ್ಲಿದ್ದರೂ ಕನಿಷ್ಟ ಮಾನಸಿಕ ಸ್ತರದಲ್ಲಾದರೂ, ಆ ವರ್ಷದ ಹುಡುಕನ್ನು ಹುಡುಕುತ್ತಾ ಆಚರಿಸುವುದು.

ಈ ಬಾರಿ ಅದನ್ನೆ ಸ್ವಲ್ಪ ಪ್ರಕಟವಾಗಿ ಆಚರಿಸೋಣವೆಂದುಕೊಂಡಿದ್ದೇನೆ, ಮಗನ ಸಲುವಾಗಿ. ಅವನಿಗದರ ಸಂಪೂರ್ಣ ಅನುಭವವಾಗದಿದ್ದರೂ ಕನಿಷ್ಟ ಆ ಅನುಭೂತಿಯ ಭಾಗಾಂಶವಾದರೂ ತೆಳುವಾಗಿ ತೀಡಲೆಂದು!

ನಿಮಗೆಲ್ಲರಿಗು ಉಗಾದಿಯ ಶುಭಾಶಯಗಳು; ಹಾಗೆಯೆ ವರ್ಷದ್ಹುಡುಕಿನ ಸವಿನೆನಪುಗಳು, ಹುಡುಕುಗಳು ಹಾಗೂ ತಡಕುಗಳು!

ನಾಗೇಶ ಮೈಸೂರು, ಸಿಂಗಾಪುರ,
09.ಏಪ್ರಿಲ್. 2013

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s