00018 – ಸಿಂಗಪೂರ ಸುತ್ತಾಟ, ಊಟ – ಸಿಕ್ಕಿತ ಕನಿಷ್ಟ ರೋಟಿ, ಪರಾಟ..?

ಈಚಿನ ದಿನಗಳಲ್ಲಿ ಸಿಂಗಾಪುರದಲ್ಲೂ ಆಗಾಗ್ಗೆ ಮೊದಲಿಗಿಂತಲೂ ಹೆಚ್ಚು ಕನ್ನಡ ಕೇಳುವ ಭಾಗ್ಯ – ಕಾರಣ, ಹೆಚ್ಚೆಚ್ಚು ಜನ ಕನ್ನಡಿಗರು ಬಂದು ನೆಲೆಸಿದ್ದು, ಅವರ ಬಂಧು ಬಳಗದವರ ಬಂದು ಹೋಗಾಟ, ಮತ್ತು ಅಗ್ಗವಾದ ವಿಮಾನ ಪ್ರಯಾಣ ತೆರೆದಿಟ್ಟ ಪ್ರವಾಸಿಗರ ಹೆಚ್ಚಿದ ಪ್ರವಾಹ ಇತ್ಯಾದಿ. ಆ ಹಿನ್ನಲೆಯಲ್ಲಿ ಲಘು ಹಾಸ್ಯ, ಛೇಡಿಕೆಯ ದನಿಯಲ್ಲಿ ಹೊರಬಿದ್ದ ಲಹರಿ ಇಲ್ಲಿದೆ. ಈ ರೀತಿಯ ಪಯಣ ಮಾಡಿ ಬಂದವರಿಗಾದರೂ ಇಷ್ಟವಾದೀತೆಂಬ ಆಶಯ 🙂

ಕೆಳಗೆ ಕಾಣಿಸಿದ ಮುಕ್ಕಾಲೂ ಪಾಲು ಸಿಂಗಪುರದ ಪ್ರವಾಸಿ ತಾಣ / ಶಾಪಿಂಗಿನ ಜಾಗೆಗಳು. ಸಾಧಾರಣ ಈ ಎಲ್ಲದರ ಪ್ರವೇಶ ಶುಲ್ಕ ಸಾಕಷ್ಟು ತೀಕ್ಷ್ಣವಾಗಿರುವುದಾದರು, ಪ್ರವಾಸಿಗಳಾಗಿ ಎಲ್ಲಾ ನೋಡಬೇಕಾದ ಅಗತ್ಯ ಅಥವ ಸಮಯವಿರದೆ ಇರುವುದರಿಂದ ಕೆಲವನ್ನು ಆರಿಸಿ, ಕೆಲವನ್ನು ಆಯ್ದುಕೊಳ್ಳುವುದು ಸೂಕ್ತ ಹಾಗೂ ಅನಿವಾರ್ಯ ಸಹ. ಈ ಕವನದಲ್ಲಿ ತೀರಾ ಪ್ರಮುಖವಾದ ಹಾಗೂ ಪ್ರವಾಸಿಗಳು ಭೇಟಿ ಕೊಡುವ ಸ್ಥಳಗಳ ಹೆಸರುಗಳನ್ನು ಕಾಣಬಹುದು.

ಸಿಂಗಪೂರ ಸುತ್ತಾಟ, ಊಟ – ಸಿಕ್ಕಿತ ಕನಿಷ್ಟ ರೋಟಿ, ಪರಾಟ..?
——————————————————————-

ಹೇಗಿತ್ತೂರಿ ಸಿಂಗಪೂರು ಸುತ್ತಾಟ?
ನೋಡಿದ್ದೆಲ್ಲಾ ಸಖತ್ತೂ, ಬೊಂಬೋಟಾ..
ಏನು, ಸಿಗಲಿಲ್ಲವೇನ್ರಿ ಸರಿ ನಮ್ಮೂರಿನೂಟ?
ಇರಬೇಕಿತ್ತಲ್ಲ ಕನಿಷ್ಟ ರೋಟಿ, ಪರಾಟ…??

ನೋಡಿದಿರಿ ತಾನೆ ಸೆಂಟೋಸಾ ಪಾರ್ಕ್?
ಎಳೆದೆಳೆದರೂ ಡಾಲರು ಎಷ್ಟೊಂದು ಸರಕು..
ಒಂದು ದಿನದಲೆಷ್ಟೊ, ಆಗಲಿ ಬಿಡಿ ಅಷ್ಟು
ಉಳಿದಿದ್ದೆ ಇದೆಯಲ್ಲ, ಬೇಡಾ ಕಾಸೂ ವೇಷ್ಟು!

ರಿಸಾರ್ಟ್ ವರ್ಡೂ, ಸ್ಟುಡಿಯೊ ಯುನಿವರ್ಸಲ್ಲು
ಹಾಗೆ ದೈತ್ಯಾಕಾರದ ಗ್ರೇಟ್ ಸಿಂಗಾಪುರ ವ್ಹೀಲು
ಸಿಟಿ ರೈಡು, ಡಕ್ ಟೂರು, ಕ್ಯಾಸಿನೋಗು ಚೂರು
ಟೈಮಿತ್ತಾ ಎಲ್ಲಾ ಕಡೆ ಮುಟ್ಟೋ ಪ್ಯಾಕೇಜ್ ಟೂರು?

ಸಫಾರಿಯ ರಾತ್ರಿ ಹುಲಿ, ಬೆಕ್ಕು, ಆನೆ ಸಿಕ್ಕಿತ್ತಾ..
ಬೆಳಗಿನ ಹೊತ್ತಲಿ ತರತರ ಶೋಗಳೂ ಇತ್ತಾ?
ಜೂ ಮುಗಿಸಿದ ಹಾಗೆ ಬರ್ಡ್ಸ್ ಪಾರ್ಕಿಗು ಸುತ್ತಾ
ಮೊಸಳೆ ಪಾರ್ಕಿನ ಭೇಟಿ ಬಿಟ್ಟು ಹೋಗಿತ್ತಾ?

ಮುಜಿಯಮ್ಮು, ಆರ್ಚರ್ಡ್ ಬೀದಿ ಸುತ್ತಾಡಿಸಿತ್ತ
ಚೈನಾಟೌನು, ಚಿಕ್ಕಿಂಡಿಯ ಎಲ್ಲಾ ಸೇರಿಸಿತ್ತಾ?
ಮುಸ್ತಾಫಾ ಶಾಪಿಂಗು ತೆರೆದಿಟ್ಟು ಇಪ್ಪತ್ನಾಕು ಗಂಟೆ
ಹಗಲಾಗದ ಶಾಪಿಂಗು ರಾತ್ರಿ ನಿದ್ದೆಗಾಯ್ತೆ ಜಾಗಟೆ?

ಟಿಕೆಟ್ಟಿಲ್ಲದ ಜಾಗ ಗೊತ್ತ ಹಾವ್ ಪಾರ ವಿಲ್ಲಾ
ಇಲ್ಲಿನವರು ನಂಬುವ ಹತ್ತು ನರಕಗಳ ಜಾಲ
ಬಣ್ಣ ಮಾಯಾ ಕನಸ ಕಲ್ಪನಾಲೋಕದ ಜಾಗ
ಬಿಟ್ಟಿಯೆಂದೊ ಏನೊ ಜನರು ಹೆಚ್ಚಿರದ ಸೊಗ!

ಅಂತೂ ನೋಡೆಬಿಟ್ಟಿರಿ ಭಲೆ ಸಿಂಗಪುರವನ್ನಿಲ್ಲೆ
ಕೆಂಪು ಚುಕ್ಕಿಯ ಊರನೆಲ್ಲ, ಪಕ್ಷಿ ನೋಟದಲ್ಲೆ
ಸಾಕು ಬಿಡಿ ಮೂರ್ದಿನ, ಎಷ್ಟು ನೋಡೂ ಅಷ್ಟೆ
ಎಷ್ಟೆ ಸುತ್ತಿ ಬಂದರೂ ಕೊನೆಗೆ ನಮ್ಮೂರೆ ಬೆಸ್ಟೆ!

– ನಾಗೇಶ ಮೈಸೂರು, ಸಿಂಗಾಪುರದಿಂದ, 13.04.2013

2 thoughts on “00018 – ಸಿಂಗಪೂರ ಸುತ್ತಾಟ, ಊಟ – ಸಿಕ್ಕಿತ ಕನಿಷ್ಟ ರೋಟಿ, ಪರಾಟ..?”

ನಿಮ್ಮ ಟಿಪ್ಪಣಿ ಬರೆಯಿರಿ