00027 – ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 02)

ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 02)

(ಉತ್ತರಾರ್ಧ…..)

ಕನ್ನಡ ಸಂಘದ ಕಾರ್ಯಕ್ರಮ ಅದ್ದೂರಿಯಾಗಿ ನಡೆದು ‘ನ ಭೂತೊ, ನ ಭವಿಷ್ಯತೆ..’ಯೆನ್ನುವಷ್ಟರ ಮಟ್ಟಿಗೆ ಯಶಸ್ವಿಯಾದರೂ, ಯಾಕೊ ಆ ನಂತರ ವಾರಗಟ್ಟಲೆ ಗುಬ್ಬಣ್ಣ ನಾಪತ್ತೆ…ಸುದ್ದಿಯು ಇಲ್ಲಾ, ಸುಳಿವೂ ಇಲ್ಲ. ಸಾಧಾರಣ ಫೋನಾದರು ಮಾಡಿರುತಿದ್ದ, ಈ ಬಾರಿ ಅದೂ ಖೋತ. ಪ್ರಯಾಣದಲ್ಲಿದ್ದಾನೆನ್ನಲು ಪ್ರಾಜೆಕ್ಟೆಲ್ಲಾ ಸದ್ಯಕ್ಕೆ ಸಿಂಗಾಪುರದಲ್ಲೆ ನಡೆಯುತ್ತಿರುವುದರಿಂದ ಆ ಸಾಧ್ಯತೆಯೂ ಕಮ್ಮಿ – ರಜೆ ಹಾಕಿ ಊರಿಗ್ಹೋಗುವುದನ್ನು ಬಿಟ್ಟರೆ; ಹಾಗಿದ್ದರೆ ಹೇಳಿಯೆ ಹೋಗುತ್ತಿದ್ದ – ಸಾಧಾರಣ ಒಂದು ಜತೆ ಬೀಗದ ಕೈ ನಮ್ಮ ಮನೆಯಲ್ಲೆ ಇಟ್ಟುಬಿಟ್ಟು. ಯಾಕೊ ಇವತ್ತು ತುಂಬಾನೆ ಕಾಡ್ತಾ ಇದಾನಲ್ಲ ಅನಿಸಿ ಮೊಬೈಲಿಗೆ ಪೋನಾಯಿಸಿದೆ. ನೊ ರೆಸ್ಪಾನ್ಸ್..! ಸರಿ, ಮೊಬೈಲಿಂದಲೆ ಒಂದು ಚುಟುಕ ಮೆಸೇಜ್ ಕಳಿಸಿದೆ -“ಡೆಡ್ ಆರ್ ಅಲೈವ್?”. ಚಕ್ಕನೆ ಐದೆ ನಿಮಿಷದಲ್ಲಿ ಮಾರುತ್ತರ ಬಂತು ” ಇನ್ ಬಿಟ್ವೀನ್..ಹಾಫ್ ಡೆಡ್, ರಿಮೈನಿಂಗ್ ಹಾಫ್ ವೆಸ್ಟೆಡ್ ಇಂಟರೆಸ್ಟ್ಸ್ ಮೆಕಿಂಗ್ ಶ್ಯೂರ ಟು ಕೀಪ್ ಇಟ್ ಅಲೈವ್…ಮೀಟ್ ಯೂ ಇನ್ ವೀಕ್ ಎಂಡ್ ಸಾರ್….”

ಸದ್ಯ ಬದುಕಿದ್ದಾನೆ ಅಂತ ಖಾತ್ರಿಯಾದರೂ ಮತ್ತೊಂದೇನೊ ಸಸ್ಪೆನ್ಸ್ ಥ್ರಿಲ್ಲರ ಸ್ಟೋರಿ ತರ ಇನ್ನೊಂದೇನೊ ಹೊಸ ಕೊಕ್ಕೆ ತಗಲಿಸ್ತಾ ಇದಾನಲ್ಲ ಅನಿಸ್ತು. ನಾವು ಹೋದ ಬಾರಿ ಮುರುಗನ್ನಲ್ಲಿ ಭೇಟಿಯಾದ ಮೇಲೆ ನೆಂಟರ ಕಥೆ ಏನಾಯ್ತೊ ಗೊತ್ತಾಗಿರಲಿಲ್ಲ. ಯುನಿವರ್ಸಲ್ ಟಿಕೆಟ್ಟು ಸಿಕ್ಕಿದ ಮೇಲೆ ಎಲ್ಲಾ ಸುಗಮವಾಗಿ ಮುಕ್ತಾಯವಾಗಿರಬೇಕಿತ್ತು..ಇವನ ಹಳವಂಡ ನೋಡಿದರೆ ಇನ್ನೇನೊ ಹೊಸ ಕಥೆ ಇರುವಾ ಹಾಗಿದೆಯಲ್ಲ ಅಂದುಕೊಂಡೆ ಕೆಲಸದತ್ತ ಗಮನ ಹರಿಸಿದೆ; ಹೇಗೂ ವಾರದಕೊನೆ ಭೇಟಿಯಲ್ಲಿ ಗೊತ್ತಾಗಲಿದೆಯಲ್ಲ ಎಂಬ ನಿರಾಳದೊಂದಿಗೆ.

ಎರಡು ದಿನ ಕಳೆದ ಮೇಲೆ ಅಚಾನಕ್ಕಾಗಿ ಗುಬ್ಬಣ್ಣನಿಂದ ಪೋನ್ ಬಂತು. ದನಿಯಲ್ಲಿದ್ದ ಆಯಾಸ, ಸುಸ್ತು ಗಮನಿಸಿ, ” ಏನು ಗುಬ್ಬಣ್ಣ, ಮೈ ಆರಾಮಿದಿಯೊ ಇಲ್ಲವೊ? ಸೌಂಡುಬಾಕ್ಸ್ ಪೂರ್ತ ಕೂತು ಹೋಗಿರೊ ಹಾಗಿದೆ? ಅಷ್ಟು ದಿನದಿಂದ ಫೋನ್ ಬೇರೆ ಇಲ್ಲಾ..ಸಿಕ್ಕಲು ಇಲ್ಲ…ನಾನು ಫೋನ್ ಮಾಡಿದ್ರೂ ಮೊಬೈಲ್ ಎತ್ತಲಿಲ್ಲ..? ಸದ್ಯ ಮೆಸೇಜ್ ಆದ್ರೂ ರಿಪ್ಲೈ ಮಾಡಿದ್ಯಲ್ಲ….ನಂಗೇನೊ ಬದುಕಿದ್ದಿಯೋ, ಸತ್ತಿದ್ದಿಯೊ ಅಂತಾನೆ ಅನುಮಾನ ಬಂದ್ಬಿಟ್ಟಿತ್ತಲ್ಲಪ್ಪಾ ದೊರೆ…..” ಎಂದೆ ಅವನಿಗೆ ಉತ್ತರಿಸಲೂ ಅನುವು ಕೊಡದೆ.

ನನ್ನ ಪ್ರಶ್ನಾವಳಿಯಿಂದ ಕೊಂಚ ಗಡಿಬಿಡಿಗೊಂಡರೂ ಸಿಡಿಮಿಡಿಗೊಳ್ಳದ ಶಾಂತ ನರಸಿಂಹನಂತೆ ಗುಬ್ಬಣ್ಣ ಸಾವಕಾಶವಾಗಿಯೆ ಉತ್ತರಿಸಿದ…”ಏನು ಆರಾಮೊ..ಸಾರ್..ಮೊಂಡಾ ಮೊಗುಚ್ತು…ಯಾಕೊ ನನ್ನ ಟೈಮೆ ಸರಿಯಿಲ್ಲಾ. ಕಷ್ಟಗಳು ಬಂದ್ರೆ ಒಂದರ ಹಿಂದೆ ಒಂದು ಬರುತ್ವೆ ಅಂತ ಗಾದೆ ಮಾತು ಕೇಳ್ತಿದ್ದಾಗ ಅದರ ಬಿರುಸು ಅರ್ಥವಾಗಿರಲಿಲ್ಲ…ಈಗ ಅದರ ನಿಜವಾದ ಅರ್ಥ ಗೊತ್ತಾಗ್ತಾ ಇದೆ..”

“ಯಾಕೊ ಗುಬ್ಬಣ್ಣ ಈಚೆಗೆ ನೀನು ಒಗಟಲ್ಲಿ ಮಾತಾಡೋದು ಜಾಸ್ತಿಯಾಯ್ತು…ನೋಡಪ್ಪ ನಾನು ನಿನ್ನ ಕ್ಲೈಂಟ್ ಅಲ್ಲಾ, ಹೇಳಿದ್ದನೆ ಹೇಳ್ತಾ, ವಿಷಯಕ್ಕೆ ಬರದೆ ಸುತ್ತಮುತ್ತ ಗಿರಕಿ ಹೊಡೆಸ್ತಾ ಇರೋಕೆ….ಪಟ ಪಟ ನೇರಾ ಹೇಳಿಬಿಡೋದು ತಾನೆ?” ಅವನ ಪೀಠಿಕೆ ಬೆಳೆದು ಉದ್ದವಾಗುವ ಮೊದಲೆ ಮುನ್ನೆಚ್ಚರಿಕೆ ಕ್ರಮವಾಗಿ ನಾನೆ ವಾಗ್ಧಾಳಿಯಿಟ್ಟರೂ ನನ್ನಂತಹ ನೂರಾರು ಕುರಿಗಳನ್ನು ಪಳಗಿಸಿರೊ ಗುರು ಅವನು. ವಿಚಲಿತನಾಗದೆ ಸಾವಕಾಶದಿಂದ, ” ನಾನು ಡಿಟೈಲಾಗಿ ಹೇಳದಿದ್ದರೆ ನಿಮಗೆ ವಿಷ್ಯ ಎಲ್ಲ ತಿಳಿಯೊದ್ ಹೆಂಗೆ ಸಾರ್? ಅದೂ ಅಲ್ದೆ ಒಂದೆ ಸಾರಿ ಅಷ್ಟೊಂದು ಪ್ರಶ್ನೆ ಕೇಳ್ದೋರು ನೀವೆ , ಈಗ ಉತ್ತರ ಹೇಳೋಕೆ ಹೊರಟರೆ ಬೇಡಾ ಅಂತಿರಲ್ಲಾ? ನಿಮ್ಮ ಮೊಬೈಲು ಬಂದಾಗ ಆಸ್ಪತ್ರೆಯಲ್ಲಿದ್ದೆ, ಅಲ್ಲಿ ಪೋನಲ್ಲಿ ಮಾತಾಡೋಂಗಿಲ್ಲ..ಅದಕ್ಕೆ ಬರಿ ಮೆಸೇಜ್ ಮಾಡಿದ್ದು…”

“ನಾನು ಅದೆ ಅನ್ಕೊಂಡೆ ನೋಡು, ಏನೊ ಹೆಚ್ಚು ಕಮ್ಮಿ ಆಗಿ ಆಸ್ಪತ್ರೆ ಸೇರಿದ್ದಿಯಾ ಅಂತ…ಏನು ಎರಡು ವಾರಕ್ಕೆ ನಿನ್ನ ಜಾಲಾಡಿಸಿ ಆಸ್ಪತ್ರೆ ಮೆಟ್ಲು ಹತ್ತೊ ಹಂಗೆ ಮಾಡಿಬಿಟ್ಟರಲ್ಲಯ್ಯಾ ಜನ…ಏನಾಗಿತ್ತಯ್ಯ ಮನೇಲಿ ಔಷಧಿ ತೊಗೊಳ್ದೆ ಅಡ್ಮಿಟ್ಟು ಮಾಡಿಸ್ಕೊಳ್ಳೊ ಅಂತಾದ್ದು….?”

“ಅಯ್ಯೊ..ಅಡ್ಮಿಟ್ಟು ಆಗಿದ್ದು ನಾನಲ್ಲಾ ಸಾರ್…ಈಗ ನಡೀತಾ ಇರೋದೆಲ್ಲಾ ನೋಡಿದ್ರೆ ಸದ್ಯಕ್ಕೆ ಅದೂ ಆಗಿಬಿಡೊ ಹಂಗೆ ಕಾಣುತ್ತೆ….ನಾನು ಆಸ್ಪತ್ರೆಲಿದ್ದಿದ್ದೂ ಗೇಟ್ ಕೀಪರು ತರ ಪೇಷೆಂಟು ಕಾಯೋಕೆ….?”

” ನೀನಲ್ಲಾ ಅಂದ್ರೆ ಇನ್ಯಾರಪ್ಪ ಆಸ್ಪತ್ರೆ ಸೇರಿದ್ದು? ನಿನ್ನ ಹೆಂಡ್ತಿ ಮಗಳಿಬ್ಬರು ಕ್ಷೇಮ ತಾನೆ?”

” ಅವರಿಬ್ಬರೂ ಓಕೆ ಸಾರ್…ಅದೆ ನಮ್ಮ ನೆಂಟರುಗಳು ಬಂದು ಅಟ್ಯಾಕ್ ಮಾಡಿದ್ದ ವಿಷಯ ಹೇಳಿದ್ನಲ್ಲ …? ಯುನಿವರ್ಸಲ್ಲೂ, ಕನ್ನಡ ಸಂಘ? ಜ್ಞಾಪಕವಿದೆಯಾ?”

“ಇಲ್ದೇ ಏನು ಮತ್ತೆ? ನನ್ನ ಒಂದಿನ ಪೂರ ವೇಸ್ಟು ಮಾಡ್ಸಿ ಆ ಪ್ರೋಗ್ರಾಮಲ್ಲಿ ಗಳ ನೆಟ್ಟು ಕೂರೊ ಹಾಗೆ ಮಾಡ್ಬಿಟ್ಟೆ ಅವತ್ತು..ಅದು ಸಾಲ್ದೂಂತ ಪ್ರೋಗ್ರಾಮ್ ನೋಡೊ ಗಡಿಬಿಡಿಯಲ್ಲಿ ಊಟ ತಿಂಡೀನೂ ತಿನ್ನೋಕಾಗ್ದೆ ರಾತ್ರಿಯೆಲ್ಲ ಖಾಲಿ ಹೊಟ್ಟೆಲಿ ಮಲಗೊ ಹಾಗೆ ಮಾಡ್ದೆ….”..

ಅವತ್ತು ಪ್ರೋಗ್ರಾಮ್ ಕವರ ಮಾಡೊ ಗಡಿಬಿಡಿಯಲ್ಲಿ ಊಟಕ್ಕೆ ಹೋಗೊ ಹೊತ್ತಿಗೆ ಕ್ಯಾಟರಿಂಗಿನವರು ಗಂಟು ಮೂಟೆ ಕಟ್ಟುತ್ತಿದ್ದರು. ಗುಬ್ಬಣ್ಣನ ಕಥೆಯು ಹೆಚ್ಚು ಕಡಿಮೆ ಅದೆ ಅಗಿದ್ದರಿಂದ ಅವನನ್ನೂ ಬೈಯುವಂತಿರಲಿಲ್ಲ…” ಆ ಪಾರ್ಟಿಗಳೆಲ್ಲಾ ಆಗ್ಲೆ ಹೋಗಾಗಿರ್ಬೇಕಲ್ಲಾ? ಯುನಿವರ್ಸಲ್ಲೂ ಅವತ್ತೆ ಆಗೋಯ್ತಲ್ಲ..? ಅದೆಲ್ಲ ಮುಗಿದ ಕಥೆ ಅನ್ಕೊಂಡಿದ್ದೆನಲ್ಲಾ ಗುರುವೆ?” ಎಂದೆ

“ಎಲ್ಲಾ ಸರಿಯಾಗಿ ನಡೆದಿದ್ರೆ ಅದರ ಮುಂದಿನ ದಿನಾನೆ ಅವರೆಲ್ಲ ಪ್ಲೇನು ಹತ್ತಿರಬೇಕಾಗಿತ್ತು ಸಾರ್…”

ನಾನು ಬೆಚ್ಚಿ ಬಿದ್ದವನಂತೆ, “ಏನಯ್ಯಾ ಹಾಗಂದ್ರೆ?ಅವರೆಲ್ಲಾ ಇನ್ನೂ ಇಲ್ಲೆ ಟೆಂಟು ಹಾಕ್ಕೊಂಡು ಕೂತಿದ್ದಾರಾ ಏನು ಕಥೆ?”

“ಎಲ್ಲಾ ನನ್ನ ಕರ್ಮಕಾಂಡ ಸಾರ್…ಎಲ್ಲಾ ಮುಗೀತು ಅನ್ಕೋತಾ ಇರೋದ್ರಲ್ಲೆ, ನಮ್ಮ ಒಬ್ಬ ಕೊ ಬ್ರದರಿಗೆ ಇದ್ದಕ್ಕಿದ್ದಂತೆ ಸೀರಿಯಸ್ಸಾಗಿ ಹೋಗಿ ಬಂದಂಗೆ ಆಗೋಯ್ತು ಸಾರ್…ಸರಿ ಇದ್ದ ಬದ್ದ ಕೆಲಸವೆಲ್ಲ ಕೈ ಬಿಟ್ಟು ಈ ಆಸ್ಪತ್ರೆ ಸೇವೆ ನಡೆಸ್ತಾ ಇದೀನಿ …ನಿನ್ನೆ ತಾನೆ ಆಸ್ಪತ್ರೆಯಿಂದ ಡಿಸ್ಚಾರ್ಜು ಆಯ್ತು…ಅದಕ್ಕೆ ಈವಾಗ ಪೋನು ಮಾಡೋಕೆ ಪುರುಸೊತ್ತಾಯ್ತು ನೋಡಿ ಸಾರ್…”

“ಶಿವ..ಶಿವಾ..ಏನಪ್ಪಾ ನಿನ್ನ ಅವಸ್ತೆ? ನೀನು ಹೇಳ್ತಾ ಇರೋದು ನೋಡಿದ್ರೆ ಡಜನ್ ಸೀಟೂ ಹಂಗೆ ಜಾಂಡಾ ಊರಿರೊ ಹಂಗೆ ಕಾಣುತ್ತೆ……”

“ಅದೂ ಆಗಿ ಹೋಗ್ತಿತ್ತೊ ಏನೊ..ನಾನು ಹುಷಾರಾಗಿಬಿಟ್ಟು ಮೊದಲು ಉಳಿದೆಲ್ಲಾ ಫ್ಯಾಮಿಲಿಗಳನ್ನೆಲ್ಲಾ ಹೊರಗ್ಹಾಕೋಕೆ ನೋಡ್ದೆ ಸಾರ್…ಆದರೂ ಎಲ್ಲಾರೂ ಕಾಯಿಲೆ, ಸೀರಿಯಸ್ಸು ಮಲಗಿರೊ ಸಮಯ, ಬಿಟ್ಟು ಹೋದ್ರೆ ಜನ ಏನು ಅನ್ಕೋತಾರೆ ಹಂಗೆ, ಹಿಂಗೆ ಅಂತೇನೇನೊ ಹೇಳಿ ಎಲ್ಲಾರ ಟಿಕೆಟ್ಟು ಒಂದು ವಾರ ಲೇಟ್ ಮಾಡಿಸಿಬಿಟ್ರು….ಹೋದ ವಾರ ಹಂಗೂ ಹಿಂಗೂ ಮಾಡಿ ಅವರನ್ನೆಲ್ಲಾ ದಬ್ಬಿದ್ದಾಯ್ತು..ಇನ್ನುಳಿದಿರೊ ನಾಲ್ಕು ಜನ ಕಾಲೆತ್ತಿದರೆಂದ್ರೆ ಧರ್ಮಸ್ಥಳಕ್ಕೊ, ತಿರುಪತಿಗೊ ಒಂದು ವಿಸಿಟ್ ಕೊಟ್ಟು ತಲೆ ಮುಡಿ ಕೊಟ್ಟು ಬುರುಡೆ ಹೊಡೆಸ್ಕೊಂಡು ಬರ್ತಿನಿಂತ ಹರಕೆ ಕಟ್ಕೊಂಡಿದ್ದೀನಿ ಸಾರ್…”

ನಾನು ಕನಿಕರದಿಂದ ಲೊಚಗುಟ್ಟುತ್ತಾ “ಕೊಡಬೇಕಾದ್ದೆ , ಕೊಡಬೇಕಾದ್ದೆ….ಇನ್ನು ಬೋಳಿಸಿಕೊಳ್ಳದೆ ಹಾಗೆ ಉಳ್ಕೊಂಡಿದ್ರೆ…ಪಾಪ, ಪಾಪ…”ಎಂದೆ.

” ಹಾಳಾಗ್ಲಿ ಆ ವಿಷಯ…ನನಗೆ ಮೈಯೆಲ್ಲಾ ಜಡ್ಡು ಹಿಡಿದಂತಾಗಿ ಹೋಗಿದೆ ಸಾರ್..ಐ ರಿಯಲಿ ನೀಡ್ ಏ ಬ್ರೇಕ್….ಇ ವೀಕೆಂಡಲ್ಲಾದರೂ ಮೀಟ್ ಮಾಡೋಣ್ವ ಅಂತ ಕೇಳೋಕೆ ಪೋನ್ ಮಾಡಿದೆ ಸಾರ್….”

“ಈಟು ಮೀಟು ಅಂದ್ರೆ ಇನ್ನೇನ್ ಮಾಮೂಲಿ ಲಿಟಲ್ ಇಂಡಿಯಾದಲ್ಲಿ ತಾನೆ?” ಎಂದೆ

” ಬೇಡಾ ಸಾರ್..ಈ ಜಡ್ಡಿಗೆ ಆ ಮಾಮೂಲಿ ಜಾಗ ಸರಿ ಹೋಗಲ್ಲಾ…ಎಲ್ಲಾದ್ರು ಬೇರೆ ಕಡೆ ಸ್ವಲ್ಪ ರಿಲ್ಯಾಕ್ಸಿಂಗ್ ಆಗಿರೊ ಜಾಗ ಹೇಳಿ ಸಾರ್…”

” ರಿಲ್ಯಾಕ್ಸಿಂಗ್ ಬೇಕೂಂದ್ರೆ – ‘ಸರ್ವಿಸ್ ಇಂಡಸ್ಟ್ರಿನೆ’ ಹುಡುಕ್ಕೋಂಡು ಹೋಗ್ಬೇಕಾಗುತ್ತೆ…ಹೌ ಅಬೌಟ್ ಥಾಯ್ ಮಸಾಜ್ ಫಾಲೊಡ್ ಬೈ ಊಟಾ?” ಅಂತ ಅಣಕಿಸಿದೆ.

“ಸಾರ್..ನಿಮಗ್ಯಾವಾಗ್ಲೂ ಜೋಕೆ…ಮಸಾಜು ಅದೂ ಇದೂ ಅಂತ ಹೋದ್ರೆ ಅಲ್ಲೆ ಟೈಮ್ ಹೋಗ್ಬಿಡುತ್ತೆ…ಮಾತಾಡೋಕೆ ಟೈಮು ಸಿಗಲ್ಲ…ಅದೂ ಅಲ್ದೆ ಇದು ಸಿಂಗಾಪುರ ಸಾರ್…ಥಾಯ್ ಗರ್ಲ್ಸ್ ಮಸಾಜು ಮಾಡುದ್ರು, ರೇಟು ಸಿಂಗಾಪುರಾನೆ ಇರುತ್ತೆ…….ಅದರ ಬದ್ಲು ಬೇರೆ ಏನಾದ್ರೂ ಐಡಿಯಾ ಇದ್ರೆ ಹೇಳಿ, ಸದ್ದು ಗದ್ದಲ ಇಲ್ದೆ ನೆಮ್ಮದಿಯಾಗಿರೊ ಅಂತದ್ದು….”

” ಸರಿ ಗುಬ್ಬಣ್ಣ ಒಂದು ಕೆಲಸ ಮಾಡಿಬಿಡೋಣ…..ಸ್ವಲ್ಪ ಬೆಳಿಗ್ಗೆ ಬೇಗ ಹೊರಟು ಬಾ..ಆರ್ಚಡ್ ಕಂಟ್ರಿ ಕ್ಲಬ್ಬಿಗೆ ಹೋಗೋಣ..ನಾನು ಹೇಗೂ ಅಲ್ಲೆ ಮೆಂಬರು…ಬೆಳಿಗ್ಗೆ ಯಾರೂ ಇರಲ್ಲ..ಆರಾಮಾವಾಗಿ ‘ತಂಪು ಬೀರು’ ಹಾಕ್ತಾ ಮಾತಾಡ್ಬೋದು…ಪರಮಾತ್ಮ ಜತೆ ಇದ್ರೆ ಮಾತಿಗೂ ಸರಾಗ ”

ಗುಬ್ಬಣ್ಣ ಆಗಲೆ ಕಿಕ್ ಹೊಡೆದವನಂತೆ,” ಅದು ಗ್ರೇಟ್ ಐಡಿಯಾ ಸಾರ್….ನನಗೂ ಬಾಯೆಲ್ಲ ಒಣಗಿ, ನಾಲಿಗೆ ಕೆಟ್ಟು ಕೆರ ಆದ ಹಾಗೆ ಆಗ್ಬಿಟ್ಟಿದೆ….ಸ್ವಲ್ಪ ‘ಬೀರ್ನೀರೆ’ ಹರಿದರೆ ಸರಿ ಹೋಗ್ಬಹುದೊ ಏನೊ…ಆ ಕ್ಲಬ್ಬು ಇರೋದು ಯಿಶೂನ್ ಹತ್ರ ಅಲ್ವಾ…”

” ಹೌದು…ಎನಿವೆ, ನೀನು ರೆಡಿಯಾಗಿ ನಮ್ಮ ಮನೆಗೆ ಬಾ…ಅಲ್ಲಿಂದ ಒಟ್ಟಿಗೆ ಹೋಗೋಣ..ಹುಡುಕಾಡೊ ತಾಪತ್ರಯ ಇರೊಲ್ಲ”

“ಸರಿ ಸಾರ್..ನಿಮ್ಮ ಹತ್ರ ಪೋನಲ್ಲಿ ಮಾತಾಡೆ ಎಷ್ಟೊ ನಿರಾಳವಾಯ್ತು….ಒಂದು ಒಳ್ಳೆ ಬ್ರೇಕ್ ಮಾಡಿಕೊಂಡು ಬ್ಯಾಚಲರ ಪಾರ್ಟಿ ಮಾಡಿಕೊಂಡುಬಿಡೋಣ…ನನಗೂ ನಿಮಗೆ ಹೇಳೋಕೆ ಸುಮಾರು ವಿಷಯ ಇದೆ… ವಿಶೇಷವಾಗಿ ನಮ್ಮ ನೆಂಟರ ಯುನಿವಸಲ್ ಗಂಡಾಗುಂಡಿ ಹಾವಳಿ…”

“ಏನು ದೊಡ್ಡ ದಾಂಧಲೇನೆ ಮಾಡಿರೊ ಹಾಗಿದೆ…ಸರಿ ಎಲ್ಲಾ ಮಾತಾಡುವ…ಯಾರಿಗ್ಗೊತ್ತು..ನನ್ನ ಮುಂದಿನ ಕಥೆಗೆ ಅವೆ ಸ್ಪೂರ್ತಿ ಯಾಗುತ್ತೊ ಏನೊ!”ಎಂದೆ.

“ಕಥೆಯಾಗುತ್ತೊ ಬಿಡುತ್ತೊ….ಕಥೆ ಅಂದಾಗ ನೆನಪಾಯ್ತು…ನಿಮ್ಮ ಕನ್ನಡ ಸಂಘ ಪ್ರೋಗ್ರಾಮ್ ಇವೇಂಟ್ ರಿಪೋರ್ಟು ಚೆನ್ನಾಗಿ ಬಂದಿದೆ ಸಾರ್…ಆನ್ಲೈನ್ ನ್ಯೂಸಲಿ ಓದಿದೆ… ನಮ್ಮ ಫ್ರೆಂಡ್ಸು ಕೂಡ ಓದಿ ಲೈಕ್ ಮಾಡಿದ್ರು ಸಾರ್”

” ಏನು ಗುಬ್ಬಣ್ಣ ಮಸ್ಕಾ ಹೊಡಿತಿರೊ ಹಾಗಿದೆ? ಏನೂ ಅಜೆಂಡಾ ಇಲ್ಲ ತಾನೆ?”

” ಬಿಡ್ತು ಅನ್ನಿ ಸಾರ್..ಮಸ್ಕಾನೂ ಇಲ್ಲ , ಮಸ್ಕಾರನೂ ಇಲ್ಲ ..ಇರೊ ವಿಷ್ಯ ಹೇಳ್ದೆ ಅಷ್ಟೆ…..ಯಾಕ್ ಸಾರ್..ನಿಮಗೆ ಗೊತ್ತಾಗಿರಬೇಕಲ್ಲ ಅವತ್ತು ಪ್ರೊಗ್ರಮ್ ಎಷ್ಟು ಚೆನ್ನಾಗಿ ನಡೀತು ಅಂತ…ನಿಮ್ಮ ಕವನಕ್ಕೂ ಜನ ಚಪ್ಪಾಳೆ ತಟ್ಟಿದ್ರೊ ಇಲ್ವೊ..? ಅದೂ ಅಲ್ದೆ ಈ ಸಾರಿ ಯಾವ ಟಿಕೆಟ್ಟಿಗ್ಗು ಪ್ರಮೊಶನ್ನು ಇಲ್ಲಾ..ಜಿನೈನು ಫೀಡುಬ್ಯಾಕಷ್ಟೆ ಸಾರ್” ಎಂದ ಕನ್ನಡ ಸಂಘದ ಯುನಿವರ್ಸಲ್ ಟಿಕೆಟ್ಟು ಎಪಿಸೋಡ್ ನೆನಪಿಸುತ್ತ.

ನಾನು ಒಳಗೊಳಗೆ ಉಬ್ಬುತ್ತಾ, ಆದರೂ ಹೊರಗೆ ತೋರ್ಪಡಿಸಿಕೊಳ್ಳದೆ, ” ಕನ್ನಡಿಗರ ಚಪ್ಪಾಳೆ ವಿಷಯ ಬಿಡೊ…ಅವರ ಹೃದಯ ವೈಶಾಲ್ಯವೆ ಅಂತದ್ದು..ಚೆನ್ನಾಗಿ ಇರಲಿ, ಇಲ್ದೆನೂ ಇರಲಿ ‘ಕರ್ಟೇಸಿ’ಗಾದ್ರು ಚಪ್ಪಾಳೆ ತಟ್ಟೆ ತಟ್ತಾರೆ…”

“ಅಷ್ಟೊಂದು ಜನರಲ್ಲಿ ಕೆಲವರಾದ್ರೂ ಕವಿತೆ ಇಷ್ಟ ಪಡೋರು ಖಂಡಿತ ಎಂಜಾಯ್ ಮಾಡಿರ್ತಾರೆ ಬಿಡಿ ಸಾರ್..ನನಗಂತೂ ಇಷ್ಟವಾಯ್ತು..ಎಲ್ಲ ಸೇರಿಸಿ ಕ್ಲಬ್ಬಿನಲ್ಲೆ ಸೆಲೆಬ್ರೇಟು ಮಾಡಿಬಿಡೋಣ ಬಿಡಿ ಸಾರ್” ಎಂದವನೆ ಹೊಗಳಿಕಾ ಕಾಂಡವನ್ನು ಅಷ್ಟಕ್ಕೆ ಕತ್ತರಿಸಿ, ‘ಬೈ ಬೈ’ ಹೇಳಿ ಪೋನಿರಿಸಿದ – “ಮೊದಲೆ ಕ್ಲಬ್ಬಿನಲ್ಲಿ ಬುಕ್ಕಿಂಗ್ ಮಾಡಿಬಿಡಿ ಸಾರ್” ಎಂದೇಳಲು ಮರೆಯದಂತೆ ಜ್ಞಾಪಿಸಿಕೊಂಡು.

*************************************************************************************************************

ಮುಂದಿನ ವಾರದ ಕೊನೆಗೆ ಪ್ಲಾನಿಗನುಸಾರ ಗುಬ್ಬಣ್ಣ ಮನೆಯ ಹತ್ತಿರ ಬಂದ..ಪಾಪ ಕೊಂಚ ಇಳಿದು ಹೋದಂತೆ ಕಂಡ. ಗಡ್ಡ, ಮೀಸೆನೂ ತೆಗೆಸದೆ ಬಂದವನನ್ನು ” ಏನಯ್ಯಾ, ಶೇವಿಂಗಿಗೂ ಟೈಮ್ ಇಲ್ವಾ…ಇಲ್ಲೆ ಮಾಡ್ಕೋತೀಯಾ, ಶೇವಿಂಗ್ ಬ್ಲೇಡ್ ಕೊಡ್ಲಾ….?” ಎಂದೆ ಛೇಡನೆಯ ದನಿಯಲ್ಲಿ. ಅದರರಿವಾದರೂ ವಿಚಲಿತನಾಗದವನಂತೆ “ಅಯ್ಯೊ..ಇನ್ನೆರಡು ದಿನ ಕಳೆಯೊವರೆಗಾದ್ರೂ ಸುಮ್ಮನಿರಿ ಸಾರ್….ಈ ಕೊನೆ ಬ್ಯಾಚು ಹೊರಡೋಕೆ ಸಿದ್ದವಾಗಿ ನಿಂತಿದ್ದಾರೆ…ಅವರು ಹೊರಟ ತಕ್ಷಣ ಇದೆ ಮೊದಲ ಕೆಲಸ…”

“ಓಹೊ…ಅಂದರೆ ಇದು ದೇವದಾಸ್ ಸೋಗು ಹಾಕಿರೋದು , ಇಂಟೆನ್ಶನಲಿ ಅನ್ನು…”

ಇಬ್ಬರೂ ಅಲ್ಲಿಂದ ಒಟ್ಟಿಗೆ ಹೊರಟು ಕ್ಲಬ್ಬಿನತ್ತ ಬಸ್ಸು ಹತ್ತಿದೆವು. ಸುಮಾರು ಅರ್ಧಗಂಟೆಯ ದಾರಿಯಾದ್ದರಿಂದ ಮಾತಾಡಿಕೊಂಡು ಹೊಗಲಿಕ್ಕೆ ಸಾಕಷ್ಟು ಸಮಯವೂ ಇತ್ತು, ಸೀಟುಗಳೂ ಖಾಲಿಯಿತ್ತು. ಅಲ್ಲಿ ಕೂತಾಗಲಿಂದಲೆ ಶುರುವಾಯ್ತು ನಮ್ಮ ಸಂಭಾಷಣೆ.

” ಹೂಂ…ಈಗ ಶುರು ಮಾಡಪ್ಪ..ನಿನ್ನ ನೆಂಟರ ಭಾಗವತ, ರಾಮಾಯಣ, ಮಹಾಭಾರತ…”

“ಇದು ಅದೆಲ್ಲಕ್ಕೂ ಮಿಕ್ಕಿದ್ದು ಸಾರ್..ಹೊಸ ಹೆಸರೆ ಕೊಟ್ಟು ಕರಿಬೇಕೊ ಏನೊ….’ಮಹಾಭಾಗವತಭಾರತಾಯಣ’ ಅಂತಲೊ ‘ಗುಬ್ಬಣ್ಣ ಭಾಗವತರ ಮಹಾಭಾರತಾಯಣ’ ಅಂತಲೊ. ಸದ್ಯ ಅರಬಿಯನ್ ನೈಟ್ಸ್ ಅಂದ ಹಾಗೆ ‘ಗುಬ್ಬಣ್ಣನ ನೈಟ್ಸ್’ ಅನ್ನದಿದ್ರೆ ಸರಿ…”

” ಏನಾದರೂ ಕರ್ಕೊ…ಈ ಆಸ್ಪತ್ರೆ ಗಿಸ್ಪತ್ರೆ ಹುಚ್ಚಾಟದಲ್ಲಿ ನೀನು ಹುಚ್ಚು ಹಿಡಿದು ಹುಚ್ಚಾಸ್ಪತ್ರೆ ಸೇರದಿದ್ರೆ ಸರಿ…” ಎಂದೆ ಮತ್ತೆ ರೇಗಿಸುವ ದನಿಯಲ್ಲಿ..

” ಒಂದು ತರ ಹುಚ್ಚಲ್ಲ ಸಾರ್..ಭಯಂಕರ ಮನೋವ್ಯಾಧಿ ಅನ್ನಿ…ಅದೇನೊ ಅಂತಾರಲ್ಲ ‘ಹುಚ್ಚಲ್ಲ ಬೆಪ್ಪಲ್ಲ ಎಲ್ಲಾ ಶಿವಲೀಲೆ’ ಅಂಥ…ಹಾಗೇನೆ ಇದೂವೆ…”

“ಅದಿರ್ಲಿ ನಿಮ್ಮ ಕ್ರಿಕೆಟ್ಟು ಟೀಮಿನ ಯುನಿವರ್ಸಲ್ ದಂಡಯಾತ್ರೆ ಹೇಗಿತ್ತಪ್ಪಾ? ನೀನೂ ಜತೆ ಹೋಗಿ ಏಂಜಾಯ್ ಮಾಡಿರಬೇಕಲ್ಲಾ?”

” ಅಲ್ಲಿಂದ್ಲೆ ಅಲ್ವೆ ಸಾರ್..ಈ ಮಹಾನ್ ಹುಚ್ಚು ಹೆಚ್ಚಾಗೋಕೆ ಶುರುವಾಗಿದ್ದು….ಅದನ್ನ ಹೇಳೊಕೋದ್ರೆ ಅದೆ ಒಂದು ಕಾವ್ಯ ಶಾಕುಂತಲವಾಗುತ್ತೆ ಸಾರ್..”

“ಸರಿ ಹಾಗಾದ್ರೆ ಅದನ್ನೆ ಮೊದಲು ಹೇಳಿಬಿಡು….ನೋಟ್ಸ್ ಬರೆದಿಟ್ಟುಕೊಂಡುಬಿಡ್ತೀನಿ…. ಯಾರಿಗೆ ಗೊತ್ತು…ಅದೆ ಹಿಟ್ ಸ್ಟೋರಿಲೈನ್ ಆಗೋಗುತ್ತೊ ಏನೊ…ಆದ್ರೆ ಗದ್ಯದಲ್ಲೆ ಹೇಳು, ಪದ್ಯದಲ್ಲಿ ಬೇಡ…ಮುದ್ದಣ್ಣನೆ ಹೇಳಿಬಿಟ್ಟಿದ್ದಾನೆ ‘ಗದ್ಯ ಹೃದ್ಯಂ..ಪದ್ಯಂ ವಧ್ಯಂ’….”

” ಏನಾದ್ರೂ ಮಾಡ್ಕೊಳ್ಳಿ ಸಾರ್..ನಾನಂತೂ ಯಾರತ್ರನಾದ್ರೂ ಹೇಳ್ಕೊಳ್ದಿದ್ರೆ ಆ ಪ್ರೆಷರಿಗೆ ಕುಕ್ಕರು ತರ ಎಲ್ಲಿ ಎಕ್ಸ್ ಪ್ಲೊಡು ಆಗಿಬಿಡ್ತೀನೋ ಅಂತ ಭಯವಾಗುತ್ತೆ ಸಾರ್…ನಮ್ಮ ಪ್ರಾಜೆಕ್ಟು ಮ್ಯಾನೇಜರು ತುಂಬಾ ಒಳ್ಳೆಯವರು, ನನ್ನ ಕಂಡ್ರೆ ಎಷ್ಟು ಗೌರವ, ಮರ್ಯಾದೆ ಕೊಡ್ತಾ ಇದ್ರೂ…ಅಂತಹವರೂ ಮೊನ್ನೆ ಪೋನಲ್ಲಿ ಕರೆದು, ಚೆನ್ನಾಗಿ ಬೈದು ಉಗಿದು ಉಪ್ಪಿನ ಕಾಯಿ ಹಾಕಿಬಿಟ್ರು ಗೊತ್ತಾ?…ಇದುವರ್ಗು ನನ್ನ ಕಡೆ ಬೆರಳೆತ್ತೂ ತೋರಿಸಿದೋರಲ್ಲಾ ಅವರು….ಅವರ ಕೈಲೂ ಬೈಸಿಕೊಳ್ಳೊ ಹಂಗಾಗೋಯ್ತು ಈ ಗುಲಾಮಗಿರಿಯಿಂದಾಗಿ….ನಾನಂತೂ ಈ ಆಸ್ಪತ್ರೆ ಓಡಾಟ, ಆಫೀಸು ಆಸ್ಪತ್ರೆ ಬೆಂಡು, ಇನ್ಶೂರೆನ್ಸಿಲ್ಲದ ಪ್ರಯಾಣ ಎಲ್ಲಾ ಸೇರ್ಕೊಂಡು ಪೂರ್ತಿ ಬರ್ಬಾದ್ ಆಗ್ಬಿಟ್ಟಿದೀನಿ ಸಾರ್…”

“ಹೋಗಲಿ ಸಮಾಧಾನ ಮಾಡಿಕೊ ಗುಬ್ಬಣ್ಣ….ಆಗಿದ್ದಾಯ್ತು. ನೀನು ಹೇಳಿದ್ದೆಲ್ಲ ಕನಿಷ್ಟ ಕೇಳಿಸ್ಕೊಳ್ಳೊಕಾದ್ರು ನಾನಿಲ್ವ…? ಬೇಕೂಂದ್ರೆ ನೀ ಹೇಳಿದ್ದೆಲ್ಲಾ ಸೇರಿಸಿ ಒಂದು ಕಥೆ ಬರಿತೀನಿ.. ಅವರೆಲ್ಲಾರ್ಗು ಒಂದೊಂದು ಕಾಪಿ ಕಳಿಸಿ ಸೇಡು ತೀರಿಸಿಕೊಳ್ಳೊವಂತೆ….”

“ಅಯ್ಯೊ…ಅವರೆಲ್ಲಾ ಮಹಾನ್ ಭಯಂಕರ ಎಮ್ಮೆ ಚರ್ಮ ಸಾರ್…ಅಷ್ಟು ಸೂಕ್ಷ್ಮ ಎಲ್ಲಾ ಎಲ್ಲಿಂದ ಬರ್ಬೇಕು? ಒಂದು ವೇಳೆ ಇದ್ರೂನು ಯಾರೂ ಕೇರು ಮಾಡಲ್ಲ….ನಾವು ಕಳಿಸಿದ್ದ ಪೇಪರ ವೇಷ್ಟಾಗಿ ಕ.ಬು. ಸೇರುತ್ತಷ್ಟೆ…..”

“ಅದೆಲ್ಲ ಇರಲಪ್ಪಾ.. ಈಗ ವಿಷಯಕ್ಕೆ ಬಾರಪ್ಪ…ನಿನ್ನ ಯುನಿವರ್ಸಲ್ ಕಥಾನಕನೂ ಏನಾಯ್ತು ಅಂತ ಹಚ್ಚಿಕೊಂಡುಬಿಡು ಪುರಾಣಾನ…” ನಾನು ಮತ್ತೆ ಟ್ರಾಕಿನತ್ತ ಪೆಡಲ್ ತುಳಿದೆ..

” ಒಟ್ಟಿಗದು ಎರಡು ಪುರಾಣ ಸಾರ್…ಎಪಿಸೋಡ್ ಒಂದು ‘ಯುನಿವರ್ಸಲ್ಲು’, ಎಪಿಸೋಡ್ ಟೂ ಬಂದು ‘ಹಾಸ್ಪಿಟಲ್ಲು’….”

” ಸರಿ ಎಪಿಸೋಡು ಒಂದರಿಂದಲೆ ಶುರುವಾಗಲಿ ಕಥಾನಕ….” ನಡುವೆ ನನ್ನ ಸೈಕಲ್ ಬೆಲ್ಲು…

” ಹಾಗೂ ಹೀಗೂ ಭಯಂಕರ ಗುದ್ದಾಡಿ ಹನ್ನೆರಡು ಟಿಕೆಟ್ಟೆನೊ ಹೊಂಚಿದ್ವಲ್ಲ ಸಾರ್…ಅದನ್ನ ತಗೊಂಡು ಹೋಗಿ ಅವರ ಕೈಗಿಟ್ಟುಬಿಟ್ಟು ಒಂದು ಸಾಷ್ಟಾಂಗ ನಮಸ್ಕಾರ ಹೊಡೆದುಬಿಟ್ಟೆ…”

“ಹೊಡಿಬೇಕಾದ್ದೆ….ಮತ್ತೆ….”

“ಅವರಿದ್ದುಕೊಂಡು, ‘ಎಂತಾ ದೇವರಂಥಾ ಮನುಷ್ಯ ನೀನು ಗುಬ್ಬಣ್ಣ…ಇಂತಾ ತುಟ್ಟಿ ಕಾಲದಲ್ಲೂ ನಮ್ಮನ್ನೆಲ್ಲಾ ಇಲ್ಲಿಗೆ ಕರೆಸಿಕೊಂಡು ರಾಜೋಪಚಾರ ಮಾಡಿದ್ದು ಅಲ್ದೆ ಇಲ್ಲಿ ಎಲ್ಲಾ ನೋಡಬೇಕಾದ ಜಾಗಾನೆಲ್ಲ ತೋರಿಸಿ ನಮ್ಮನ್ನ ತುಂಬಾ ದೊಡ್ಡ ಋಣಕ್ಕೆ ಸಿಕ್ಕಿಸ್ತಿದ್ದಿಯಲ್ಲಪ್ಪ…’ ಅಂತ ಬೇರೆ ರಾಗಾ ಎಳೆದರು, ಕೇಳಿಬಿಟ್ರೆ ದುಡ್ಡು ಕೊಟ್ಟೆಬಿಡ್ತಿದ್ರೇನೋ ಅನ್ನೊ ತರದಲ್ಲಿ…” ಎಂದವನೆ ಕಟಕಟನೆ ಹಲ್ಲು ಕಡಿದ ಗುಬ್ಬಣ್ಣ.

ಅಂದ ಹಾಗೆ ಮಾತು ಮಾತಿಗೂ ‘ಅಯ್ಯೊ ಸಾರ್, ಅಯ್ಯೊ ಸಾರ್’ ಅನ್ನೋದು ಗುಬ್ಬಣ್ಣನಿಗೆ ಚಿಕ್ಕಂದಿನಿದಲೂ ಬಂದ ಅಭ್ಯಾಸ..ಬೇಕಿರಲಿ ಬಿಡಲಿ ಎಲ್ಲಾದಕ್ಕೂ ‘ಅಯ್ಯೊ’ ಸೇರಿಸ್ತಾ ಇರ್ತಾನೆ ಅಂತ ಯಾರೊ ಅವನಿಗೆ ‘ಅಯ್ಯೊ ಗುಬ್ಬಣ್ಣಾ..” ಅಂತಾನೆ ಅಡ್ಡ ಹೆಸರು ಇಟ್ಟುಬಿಟ್ಟಿದ್ರು ಸ್ಕೂಲ್ ಡೇಸಲ್ಲೆ. ಅದು ಹೆಚ್ಚುಕಡಿಮೆ ಶಾಶ್ವತವಾಗಿ ನಿಂತುಹೋಯ್ತು. ಸಿಂಗಪುರದಲ್ಲಿ ಆ ಸೀಕ್ರೇಟ್ ಗೊತ್ತಿರೊನು ಬಹುಶಃ ನಾನೊಬ್ನೆ ಅಂತ ಕಾಣುತ್ತೆ, ಹೀಗಾಗಿ ಗುಬ್ಬಣ್ಣ ಬಚಾವ್..! ಹಾಗೆ ಅವನ ಮತ್ತೊಂದು ಅಭ್ಯಾಸ – ಕಟ ಕಟ ಹಲ್ಲು ಕಡಿಯೋದು..! ಇದು ‘ಅಯ್ಯೊ’ ಅನ್ನೊಷ್ಟೂ ಇಲ್ದೆ ಇದ್ರೂ, ತಮಾಷೆಗೆ ನಾವೆಲ್ಲ ‘ಹಲ್ಕಟ್ ಹಲ್ಕಟ್ ಗುಬ್ಬಣ್ಣ ‘ ಅಂತ ರೇಗಿಸಿ ಗೋಳು ಹುಯ್ಕೋತಾ ಇದ್ವಿ…ಈಗದೆಲ್ಲ ಹಳೆ ಕತೆ ಬಿಡಿ.
ಗುಬ್ಬಣ್ಣ ಆವತ್ತು ಯುನಿವರ್ಸಲ್ನಲ್ಲಿ ನಡೆದ ಸಂಭ್ರಮವನ್ನು ವರ್ಣಿಸುತ್ತಾ ಇದ್ದರೆ ಕೇಳೋಕೇನೊ ಮನೋಹರವಾಗಿ, ಉಲ್ಲಾಸದಾಯಕವಾಗಿ ಇದ್ರು, ಅದೆಲ್ಲ ಸಂಭಾಳಿಸೋಕೆ ಅವನು ಪಟ್ಟ ಪಾಡಿಗೆ ‘ಅಯ್ಯೊ ಪಾಪ! ಬಡಪಾಯಿ ಗುಬ್ಬಣ್ಣ’ ಅಂಥ ಕನಿಕರವೂ ಆಯ್ತು. ಪಾಪ ಚೆನ್ನಾಗಿ ಅಲ್ಲಾಡಿಸಿ, ಚೆಲ್ಲಾಡಿಸಿಬಿಟ್ಟಿದ್ದರು ಅವನನ್ನ – ಮೇಲಿಂದ ಕೆಳಗಿನ ತನಕ. ಸದ್ಯ ಟಿಕೆಟ್ಟು ಸಿಕ್ಕಿತಲ್ಲ ಅನ್ನೊ ಖುಷಿಯಲ್ಲಿ ಗುಬ್ಬಣ್ಣನೇನೊ ಡಜನ್ ಟಿಕೆಟ್ಟಿನ ಜತೆಲಿ ಫ್ರೀಯಾಗಿ ಸಿಕ್ಕಿದ್ದ ಹತ್ತತ್ತು ಡಾಲರು ‘ಪುಡ್ ಕೂಪನ್ನನ್ನು’ ಸೇರಿಸಿಯೆ ಹಂಚಿದ್ದ – ಅದರ ನಿಜವಾಗಿ ತೆತ್ತ ಬೆಲೆಯನ್ನು ಅವರಿಗೆಲ್ಲಾ ಹೇಳದೆಯೆ. ಅವರೆಲ್ಲ ಅದರ ಮುಖಬೆಲೆ ಎಪ್ಪತೈದೆಪ್ಪತೈದು ಡಾಲರು ಅಂದಾಗ, ” ಏನೂ, ಎರಡು ಬೆರಳಗಲಾನೂ ಇಲ್ಲದ ಚೀಟಿಗೆ ಮೂರುವರೆ ಸಾವಿರ ರೂಪಾಯಿನಾ…. ರಾಮ್ರಾಮಾ! ಬಿಡಿಬಿಡಿ ನಾವೆ ಹೋಗೋದಾಗಿದ್ರೆ ಜಪ್ಪಯ್ಯ ಅಂದ್ರು ಇಷ್ಟೊಂದು ದುಡ್ಡು ಕೊಟ್ಟು ಹೋಗ್ತಾ ಇರಲಿಲ್ಲ…” ಅಂದ್ರಂತೆ. “..’ಹೌದಲ್ವೆ ಮತ್ತೆ ? ಯಾರದೊ ರೊಕ್ಕ ಎಲ್ಲಮ್ಮನ ಜಾತ್ರೆ…ಕಾಸು ಕೊಡೋನು ನಾನು, ಮಜಾ ಮಾಡೋಕೆ ಪಾಪ! ಕಷ್ಟಾನ ನಿಮಗೆ?’ – ಅಂತ ಮನಸ್ನಲ್ಲೆ ಬೈಕೊಂಡೆ ಸಾರ್ “- ಅಂದ ಗುಬ್ಬಣ್ಣ.

“ಸದ್ಯ ಡಿಸ್ಕೌಂಟೆಡ್ ಟಿಕೆಟ್ಟು ಅಂತ ಹೇಳ್ದೆ ಒಳ್ಳೇದೆ ಮಾಡ್ದೆ ಬಿಡು…ಇಲ್ಲಾಂದ್ರೆ, ಯಾವ್ದೊ ಧರ್ಮದ ಟಿಕೆಟ್ ತಂದುಕೊಟ್ಟುಬಿಟ್ಟಿದಾರೆ, ಅಂತ ಅದಕ್ಕು ಒಂದು ಕೊಂಕು ಹಾಕಿರ್ತಿದ್ರೊ ಏನೊ…”

“ಅವರ ಕೊಂಕಿನ ಮನೆ ಹಾಳಾಯ್ತು ಸಾರ್..ಟಿಕೆಟ್ಟು ಜತೆಗೆ ಕವಳಕ್ಕೂ ಸೇರಿಸಿ ಕೊಟ್ಟ ಮೇಲೆ ಬಾಯ್ಮುಚ್ಕೊಂಡು ತೆಪ್ಪಗೆ ಹೋಗ್ಬೇಕು ತಾನೆ? ”

” ಮತ್ತೇನಂತೆ ಕಥೆ? ಜತೆಗೆ ಎಸ್ಕಾರ್ಟೊಬ್ಬರು ಬರಬೇಕೂಂದ್ರಾ…?”

” ನೋಡಿದ್ರಾ ಸಾರ್.. ಅವರ ಕ್ರಿಮಿನಲ್ ಮೈಂಡ್ನ ಎಷ್ಟು ಚೆನ್ನಾಗಿ ತಿಳ್ಕೊಂಡ್ಬಿಟ್ಟಿದ್ದಿರಾ…ಒಬ್ಬಾ ಕ್ರಿಮಿನಲ್ಗೆ ಇನ್ನೊಬ್ಬ ಕ್ರಿಮಿನಲ್ನ ಮೈಂಡು ಗೊತ್ತಾಗೋದು ಸಾರ್…ನಾನೊ ಇಲ್ಲಾ ನನ್ನ ಹೆಂಡ್ತಿನೊ ಜತೆಗೋಗ್ಲೆ ಬೇಕಂತೆ ಸಾರ್…ಅವರಿಗೆ ಇಲ್ಲೆಲ್ಲಾ ಭಾಳ ಭಯವಾಗುತ್ತಂತೆ ಇಲ್ಲಿಯವರ ಜತೆಯಿಲ್ದೆ ಓಡಾಡಕೆ…!”

ಗುಬ್ಬಣ್ಣ ಏನು ನನ್ನ ಗೆಸ್ಸಿಂಗನ್ನ ಹೊಗಳ್ತಾ ಇದಾನೊ, ಇಲ್ಲಾ ಕ್ರಿಮಿನಲ್ ಅಂತಾ ಬೈಯ್ತಾ ಇದಾನೊ ಗೊತ್ತಾಗಲಿಲ್ಲ….ಸರಿ ಹಾಳಾಗಲಿ ಜೋಶಿನಲ್ಲಿದಾನೆ, ತಡೆಯೋದು ಬೇಡಾ ಅನಿಸಿ,”ಸರಿ..ಸರಿ.. ಕಥೆ ಗೊತ್ತಾಯ್ತು ಬಿಡು…ಬೇರೆ ದಾರಿಯಿಲ್ದೆ ನಿನ್ನ ಹೆಂಡ್ತೀನೂ ಅವ್ರ ಜತೆ ಗಂಟಾಕಿ ಕಳ್ಸೊ ಸ್ಥಿತಿ ಬಂತೂನ್ನು..?”

“ಅಷ್ಟು ಮಾತ್ರ ಅಲ್ಲಾ ಸಾರ್….ಈಗ ತಾನೆ ಪರೀಕ್ಷೆ ಮುಗ್ಸಿ ರಜೆದಲ್ಲಿರೊ ನನ್ನ ಮಗಳೂ ಮೂಲೆಲಿ ಮುಖ ಊದಿಸಿಕೊಂಡು ನಿಂತಿದ್ಲು….”

“ಯಾಕಂತೆ…? ಅವ್ಳ್ ಹೋಗ್ಬೇಕಂತಲಾ? ಸರಿ, ಅವಳ್ನೆ ಜತೆ ಹಾಕಿ ಕಳಿಸಿದ್ರಾಗಿತ್ತಲ್ಲಾ?”

” ಅವಳೂ ಆರು ತಿಂಗಳಿಂದ್ಲೆ ಯುನಿವರ್ಸಲ್ಲಿಗೆ ಕರ್ಕೊಂಡೋಗಪ್ಪ, ಕರ್ಕೊಂಡೋಗಪ್ಪ ..ನನ್ನ ಫ್ರೆಂಡ್ಸೆಲ್ಲಾ ಆಗ್ಲೆ ಎರಡೆರಡು ಮೂರ್ಮೂರು ಸಾರಿ ನೋಡ್ಬಿಟ್ಟಿದ್ದಾರೆ…ನಾನೊಬ್ಳೆ ಇನ್ನೂ ನೋಡ್ದೆ ಇರೋ ಪ್ರಾಣಿ ಆ ಗುಂಪಲ್ಲಿ …ಎಲ್ಲಾ ರೇಗಿಸ್ತಾರೆ” ಅಂತ ಒಂದೆ ಕಣ್ಣಲ್ಲಿ ನೀರು ಹಾಕ್ತಾನೆ ಇದ್ಲು…ನಾನೂನು, ಬಿಜಿಯಿದ್ದೀನಿ ಬಂಗಾರಾ, ಪ್ರಾಜೆಕ್ಟಿದೆ ಈಗ, ಮುಂದಿನ ರಜೆಗ್ಹೋಗೋಣ ” ಅಂತ ತಳ್ತಾನೆ ಬಂದಿದ್ದೆ. ಈಗ ನೋಡಿದ್ರೆ ‘ದಾನ ಶೂರ ಕರ್ಣನ’ ಹಾಗೆ ಚೀಪಾಗಿ ಸಿಕ್ಕಿದ ಟಿಕೆಟ್ಟಿನಲ್ಲೂ ಹೆಂಡ್ತಿ, ಮಕ್ಕಳ್ನ ಕರ್ಕೊಂಡು ಹೋಗ್ದೆ, ಯಾರ್ಯಾರ್ಗೊ ದಾನ ಮಾಡಿ, ‘ಮನೆಗೆ ಮಾರಿ, ಪರರಿಗೆ ಉಪಕಾರಿ’ಆಗ್ತಾ ಇದಾನೆ ನಮಪ್ಪ…ಅಂತ ಅವರಮ್ಮನ ಹತ್ರ ಗೋಳಾಡಿದ್ಲಂತೆ ಸಾರ್…”

” ಅವಳು ಹೇಳೋದು ನ್ಯಾಯವಾಗೆ ಇದೆಯಲ್ಲಯ್ಯ…ಅದೇನೆ ಇರ್ಲಿ..ಒಂದು ವಿಷಯಕ್ಕೆ ನೀನು ಖುಷಿ ಪಡ್ಬೇಕು ನೋಡು…ಇಂಥಾ ಊರಲ್ಲಿ ಹುಟ್ಟಿ ಬೆಳೆದ್ರೂ, ಎಷ್ಟು ಚೆನ್ನಾಗಿ ಗಾದೆ ಮಾತು ಕಲ್ತ್ಕೊಂಡು ಅರ್ಥ ಮಾಡ್ಕೊಂಡು ಸರಿಯಾಗಿ ಉಪಯೋಗಿಸಿದಾಳೆ ನೋಡು…ಕನ್ನಡಕ್ಕೆ ಇದು ಹೆಮ್ಮೆ ಪಡೊ ವಿಷ್ಯ ಅಲ್ವೇನಯ್ಯಾ?” ಅಂಥ ನಾನು ನಯವಾಗೆ ಕ್ರಿಮಿನಲ್ ಪದಕ್ಕೆ ಸೇಡು ತೀರಿಸಿಕೊಳ್ಳುವ ಹಾಗೆ , ಸಣ್ಣ ತಿರುಗೇಟು ಕೊಟ್ಟೆ!

ಅದನ್ನು ಗಮನಿಸಿಯೂ ಗಮನಿಸದವನಂತೆ ಗುಬ್ಬಣ್ಣ, ” ನ್ಯಾಯವೊ, ಅನ್ಯಾಯವೊ ಬಿಡಿ ಸಾರ್…ಇನ್ನು ಅಮ್ಮ ಹೊರಡ್ತಾಳೆ ಅಂದ್ಮೇಲೆ ಮಗಳನ್ನ ಕಳಿಸ್ದೆ ಇರೋಕಾಗುತ್ಯೆ – ಅದೂ ಸ್ಕೂಲ್ ರಜೆ ಇದ್ದಾಗ?..ಹನ್ನೆರಡಕ್ಕೆ ಇನ್ನೆರಡು ಅಂತ ಈ ಕಪಿಗಳನ್ನು ಸೇರಿಸ್ಬೇಕಾಯ್ತು, ಆ ಕಪಿ ಸೈನ್ಯದ ಜತೆಗೆ…”

” ಹೆಂಡ್ತಿ ಮಗಳ್ನ ಕಪಿ ಗೀಪಿ ಅಂತ ಯಾಕಯ್ಯ ಬೈಯ್ತೀಯಾ? ಮೊದಲೆ ಕಾಲ ಕೆಟ್ದು..ಈಗೀಗಂತೂ ಬಸ್ಸುಗಳ್ಗೂ ಕಿವಿಗಳಿರ್ತಾವಂತೆ…” ಎನ್ನುತ್ತಾ ಕೂತಿದ್ದ ಜಾಗದಿಂದಲೆ ಬಸ್ಸಿನ ಸುತ್ತಾ ಕಣ್ಣಾಡಿಸಿದೆ, ಯಾರಾದರೂ ಸಿಐಡಿಗಳಿದ್ದರಾ – ಅನ್ನುವಂತೆ. ಗುಬ್ಬಣ್ಣನೂ ತಟ್ಟನೆ ವಾಸ್ತವಕ್ಕೆ ಬಂದವನಂತೆ ಸುತ್ತಲೂ ಯಾರೊ ಹೊಂಚು ಹಾಕಿ ಕಾಯುತ್ತಿದ್ದಾರೊ ಎಂಬಂತೆ ತಲೆ ಬಗ್ಗಿಸಿ, ಕುಗ್ಗಿದ ದನಿಯಲಿ ಪಿಸುಗುಡತೊಡಗಿದ – ಇಡಿ ಬಸ್ಸಿನಲ್ಲೆ ನಾವಿಬ್ಬರೆ ಇರುವುದೆಂದು ಗೊತ್ತಿದ್ದರೂ! ನಾವು ಮಾತು ಮಾತಾಡುತ್ತಲೆ ಆಗಲೆ ಅರ್ಧಧಾರಿ ಕ್ರಮಿಸಿಬಿಟ್ಟಿದ್ದೆವಾದರೂ ಮಾತಿನ ಭರದಲ್ಲಿ ಕಾಲ ಉರುಳಿದ್ದೆ ಅರಿವಾಗದಂತಾಗಿಹೋಗಿತ್ತು. ಗುಬ್ಬಣ್ಣ ತಗ್ಗಿದ ದನಿಯಲ್ಲೆ,

” ಕಪಿಗಳೆನ್ನದೆ ಇನ್ನೇನನ್ನಬೇಕು?…ಆಗ್ಲೆ ಸಾವಿರಾರುಗಟ್ಲೆ ಬೋಳಿಸ್ಕೊಂಡಾಗಿದೆ..ಈಗ ಈವರಿಬ್ಬರು ಹೊರಟ್ರೆ ಇವರಿಗೆಲ್ಲಿಂದ ಡಿಸ್ಕೌಂಟು ಟಿಕೆಟ್ಟು ತರಲಿ ಹೇಳಿ ಸಾರ್..?..ಕೊನೆಗೆ ಇವರನ್ನು ಜತೆಗೆ ಕಳಿಸದಿದ್ರೆ ಇನ್ನು ವರ್ಷವೆಲ್ಲಾ ನನ್ನ ಜನ್ಮ ಜಾಲಾಡಿಬಿಡ್ತಾರಲ್ಲ ಅಂತ ಹೆದರಿ ಮಾಮೂಲಿ ರೇಟಿನಲ್ಲೆ ಎಪ್ಪತ್ತೈದು-ಎಪ್ಪತ್ತೈದು ಡಾಲರು ಕೊಟ್ಟು ಇನ್ನೆರಡು ಟಿಕೆಟ್ಟು ತರಿಸಿಕೊಟ್ಟೆ ಸಾರ್….”

ನನಗೊ ನಗು ತಡೆಯಲಾಗದೆ ಬಿದ್ದು ಬಿದ್ದೂ ನಗಲಾರಂಭಿಸಿದೆ, “ಅಲ್ಲಯ್ಯ ಬಂದವರಿಗೆಲ್ಲ ಚೀಪಾಗಿ ಟಿಕೆಟ್ಟು ಕೊಡಿಸಿ ಎಂಟರ್ಟೈನ್ ಮಾಡಿಸಿಬಿಟ್ಟು, ನಿನ್ಹೆಂಡ್ತಿ ಮಗಳಿಗೆ ಪುಲ್ ಚಾರ್ಜು ಕೊಟ್ಟು ಟಿಕೆಟ್ ತೊಗೊಂಡ್ಯಾ….ಚೆನ್ನಾಗಿದೆ ಕಣಯ್ಯ ತಮಾಷೆ….” ಎನ್ನುತ್ತ ಹೊಟ್ಟೆ ಹಿಡಿದುಕೊಂಡೆ..

” ನೀವು ನಗಿ ಸಾರ್..ನಿಮಗೆಲ್ಲಾ ತಮಾಷೆನೆ…ಬಂದವರೇನೊ ಮೂರು ದಿನ ಇದ್ದು ಖಾಲಿ ಮಾಡ್ತಾರೆ…ಬೆಳಗಾಗೆದ್ದು ಮುಖಕ್ಕೆ ಮೂರು ಕಾಫಿ ನೀರು ತೋರ್ಸಕೊ, ಇಲ್ಲಾ ಬಿಸ್ಲಲ್ಲಿ ಓಡಾಡಿ ಬಂದಾಗ ತಂಪಾಗೊಂದು ಲೋಟ ತಣ್ಣೀರೊ, ಎಳನೀರೊ ಕೊಡೋಕು ಕೂಗ್ಬೇಕೂಂದ್ರೂ, ಇರೋವ್ರೆ ಇವರಿಬ್ರು. ಅವರ ಜತೆ ಎಡಬಿಡಂಗಿ ಮಾಡ್ಕೊಂಡು ನಾನು ಎಲ್ಲಿಗೆ ಬದುಕಕೆ ಹೋಗ್ಲಿ?… ಹೇಗಿದ್ದರೂ ಖರ್ಚು ಮೇಲೊಂದು ಖರ್ಚು ಶಿವಾ ಅಂತ ಅಲ್ಲೂ ತಲೆ ಕೊಟ್ಬಿಟ್ಟೆ ಸಾರ್….”

“ನಿಜಾ ಗುಬ್ಬಣ್ಣ..ಹೊರಗಡೆ ಗೊತ್ತಿರೊ ಶತ್ರುಗಳ ಜತೆ ಯುದ್ಧ ಮಾಡ್ಬೋದು ಆದರೆ ಮನೇಲೇನಾದರೂ ಹಿತಶತ್ರುಗಳನ್ನು ಹುಟ್ಟಿಸ್ಕೊಂಡ್ರೆ ಬದ್ಕೋದು ಕಷ್ಟ..ಅದರಲ್ಲೂ ತಲೆ ಮೇಲೆ ತಲೆ ಬೀಳ್ಲಿ, ಮನೆ ದೇವ್ರುಗಳನ್ನ ಮಾತ್ರ ಸರಿಯಾಗಿಟ್ಕೊಂಡು ಬಿಡಬೇಕಪ್ಪ..ಯಾವ ಹರಕೆ, ಬೇಡಿಕೆ ಏನೂ ಬಾಕಿ ಇಟ್ಕೋಬಾರ್ದು..”

“ಹೌದು ಸಾರ್.. ಅದಕ್ಕೆ ಗಾದೆನೆ ಇದೆಯಲ್ಲಾ ಸಾರ್..’ಮನೆದೇವರುಗಳ ಮೆಚ್ಚಿಸದೆ ಸತ್ರೆ, ಮಸಣದಲೂ ಇಲ್ಲ ಪಾಪಿಗೆ ನಿದ್ರೆ..’ ಅಂತ”

“ಅದ್ಯಾವುದೊ ಗುಬ್ಬಣ್ಣಾ ಹೊಸಾ ಗಾದೆ…ಎಲ್ಲೂ ಕೇಳ್ದಂಗೆ ಇಲ್ವಲ್ಲೊ”

” ಎಲ್ಲೂ ಕೇಳಿಲ್ವಾ ಸಾರ್…ನಾನು ಹಾಗಂತ ಗಾದೆನೆ ಇರ್ಬೋದೇನೊ ಅನ್ಕೊಂಡ್ ಹೇಳ್ದೆ…ನೀವು ಕೇಳಿಲ್ಲಾಂದ್ರೆ ಆ ತರ ಗಾದೆನೆ ಇಲ್ಲಾಂತ ಕಾಣುತ್ತೆ… ”

“ಹಾಳಾಗ್ಲಿ ಇದ್ಯೊ ಇಲ್ವೊ…ಇಲ್ಲಂದ್ರೆ ನಾವೆ ಹೊಸ್ದಾಗಿ ಹುಟ್ಸುದ್ರಾಯ್ತು ..ಮುಂದಕ್ಕೇನಾಯ್ತು ಹೇಳು ..ಎಲ್ಲಿಗೆ ಬಂತು ಬಯಲಾಟದ ಪ್ರಸಂಗ….?”

“ಪ್ರಸಂಗವೆಲ್ಲಿ ಬರೋದು ಇನ್ನು ಭಾಗವತರ ಪೀಠಿಕೆ ಹಾಡೆ ಆಗಿಲ್ಲಾ…”

” ಏನೊ ಹಾಗಂದ್ರೆ ಗುಬ್ಬಣ್ಣ ..ಇನ್ನು ಪ್ರಸಂಗ ಶುರೂನೆ ಇಲ್ಲಾಂತ ಬಾಂಬು ಹಾಕ್ತಾ ಇದೀಯಾ..ಒಳಗಿನ್ನು ಏನೇನೊ ಮುಂಗಾರು ಮಳೆ ತರ ಕಥೆ ಇನ್ನು ಉಳ್ಕೊಂಡಿರೊ ಹಾಗಿದೆ…?”

” ಆ ಪ್ರಸಂಗ ಕೇಳ್ಬೇಕೂಂದ್ರೆ ‘ಬ್ರೇಕ್ ಕೆ ಬಾದ್’ ಸಾರ್..ನೋಡಿ ನಮ್ಮ ಸ್ಟಾಪು ಬಂದ್ಬಿಡ್ತು…ನಿಮ್ಮ ತಂಪಾದ ಕ್ಲಬ್ಬಿನಲ್ಲಿ ಸೊಂಪಾಗಿ ಕೂತ್ಕೊಂಡು ಬೀರಾಡ್ತಾ ಹಾರಾಡ್ತ ಮಾತಾಡೋಣ…”

ಘಾಟಿ ಗುಬ್ಬಣ್ಣ..ಮಾತಿನ ಮಧ್ಯೆನೂ ಸ್ಟಾಪಿನ ಪರದೆ ಮೇಲೆ ನಿಗಾ ಹಾಗೆ ಇಟ್ಟಿದ್ದಾ; ನಾನು ನಿಗಾ ಇಟ್ರೂ ಅದು ಹೆಂಗೊ ಮಧ್ಯದಲ್ಲಿ ಮರೆತುಹೋಗಿದೆ ಅಂತ ಗೊತ್ತಾಗ್ತಾ ಇದ್ದಿದ್ದೆ ಇಳಿಬೇಕಾದ ಸ್ಟಾಪು ಕಳೆದು ಎರಡು ಸ್ಟಾಪು ಬಂದ್ಮೇಲೆ..ಮುಂದಿನ ಸ್ಟಾಪಲ್ಲಿ ಬಸ್ಸು ನಿಲ್ಲಿಸಲ್ಲು ಕೋರು ಗುಂಡಿಯೊತ್ತುತ್ತ ಇಬ್ಬರೂ ಬಾಗಿಲಿನತ್ತ ನಡೆದೆವು. ಇನ್ನೂ ಯಾರೂ ಅಷ್ಟಾಗಿ ಜನರಿರದ ಕ್ಲಬ್ಬು ಸೇರಿದ ತಕ್ಷಣ ಗುಬ್ಬಣ್ಣ ಮೊದಲು ಮಾಡಿದ ಕೆಲಸ, ಸೊಗಸಾದ ‘ದೇವ ಮೂಲೆ’ಯೊಂದನ್ನು ಹಿಡಿದು ಆಸೀನನಾಗಿ ಬೇರರನ್ನು ಕರೆದು ‘ ಎರಡು ಟೈಗರು’ ಅಂದಿದ್ದು!

+++++++++++++++++++++++++++++++++++++++++++++++++++++++++++++++++++++++

ಗುಬ್ಬಣ್ಣ ಸಾಧಾರಣವಾಗಿ ತೀರಾ ಸಾಧುಪ್ರಾಣಿಯಾದರೂ, ಅವನ ಸ್ವಭಾವದ ಇನ್ನೊಂದು ವಿಶ್ವರೂಪ ಅವಿಷ್ಕಾರವಾಗಿ ಬೆಳಕಿಗೆ ಬರುತ್ತಿದ್ದುದು ‘ಪರಮಾತ್ಮ’ನ ಆಶ್ರಯದಡಿಯಲ್ಲಿ ಮಾತ್ರ. ಸಾಧಾರಣ ಎಲ್ಲಾ ಮೊದಲ ಪೆಗ್ಗಿನ ನಂತರ ‘ಮಹಿಷಾಸುರನಾಗಿ’ ಬಯಲಾಟಕ್ಕಿಳಿಯುತ್ತಿದ್ದರೆ, ಗುಬ್ಬಣ್ಣನಿಗೆ ಪ್ಲಾನು ಹಾಕಿದ ಗಳಿಗೆಯಿಂದಲೆ ಒಂದು ತರದ ಮತ್ತು ಏರಲಾರಂಭಿಸಿ ಗುಂಡೇರಿಸಲು ಕೂಡುವ ಹೊತ್ತಿಗೆ, ಮೊದಲ ಹನಿ ಒಳಗಿಳಿಯುವ ಮೊದಲೆ ‘ಕಿಕ್’ ಏರಿಸಿಬಿಟ್ಟಿರುತ್ತಿತ್ತು. ಅದೃಷ್ಟವಶಾತ್ ಮದುವೆ, ಮಕ್ಕಳು, ಕೆಲಸ, ಸಿಂಗಾಪುರ ಅಂತ ಹೊಸದಾರಿ ಹಿಡಿದ ಮೇಲೆ ಎಲ್ಲಾ ತರದ ‘ಹೈಕ್ಲಾಸು’ ಸರಕೆಲ್ಲಾ ಬಿಟ್ಟು ಹೋಗಿ ಈಗ ಬರಿಯ ಬೀರಿನ ಮಟ್ಟಕ್ಕೆ ಬಂದು ನಿಂತಿತ್ತು. ಇದರಿಂದಾಗಿ ಆ ಮೊದಲಿನ ದೃಶ್ಯ ವೈಭವವೆಲ್ಲಾ ಕಾಣಲು ಸಾಧ್ಯವಿರದಿದ್ದರೂ, ಹಳೆ ವೈಭವದ ಕಿರು ತುಣುಕುಗಳು ‘ಬೀರಬಲ್ಲ’ನಾದ ಹೊತ್ತಲು ಕಾಣಲು ಸಿಗುತ್ತಿತ್ತು. ಮೊದಲಿನ ಹಾಗೆ ‘ಮಜಾ’ ಸಿಗದಿದ್ದರೂ ಹಳೆ ನೆನಪುಗಳ ನೆನೆಸುತ್ತ ಇಬ್ಬರು ಮಾತಿನಲ್ಲೆ ಗುದ್ದಾಡುತ್ತ ಬಾಕಿಯ ಮಜ ಕಾಣಲು ಯತ್ನಿಸುತ್ತಿದ್ದೆವು.

ಇವತ್ತು ಗುಬ್ಬಣ್ಣ “ಟೈಗರ” ಅನ್ನುತ್ತಿದ್ದಂತೆ ನಾನು ಎದುರಿನ ಕುರ್ಚಿಯಲ್ಲಿ ಕೂರುತ್ತಾ “ಯಾಕೊ ಗುಬ್ಬಣ್ಣ , ಬೆಳ್ಬೆಳಿಗ್ಗೆ ‘ಓಂ’ ನಾಮನೆ ಬಿಯರು ಹಾಕ್ತಾ ಇದ್ದಿಯಾ..ಇನ್ನೂ ನಾಷ್ಟಾ, ಕಾಫಿ ಹೊತ್ತು ಕಣಯ್ಯಾ..” ಎಂದೆ.

” ಅಯ್ಯೋ ಹಾಳಾಗೋಗ್ಲಿ ಟೈಮಿಂಗು ಬಿಡಿ ಸಾರ್…ಆಗ್ಲೆ ಹೇಳಿದ್ನಲ್ಲಾ ನಾಲ್ಗೆಯೆಲ್ಲಾ ಎಕ್ಕುಟ್ಟೊದಂಗಾಗ್ಬಿಟ್ಟಿದೆ… ಸ್ವಲ್ಪ ಬಿಯರು ಬಿದ್ದು ‘ಗರಂ’ ಆದ್ರೆ ‘ನರಂ’ ಆಗಿರೊ ನರಗಳೆಲ್ಲ ಎದ್ದು ಕೆಲ್ಸ ಮಾಡೋಕೆ ಸರಿಯ್ಯೊಗುತ್ತೆ…”

ಅದೆಲ್ಲಾ ಬುರುಡೆ ಸಿದ್ದಾಂತ ಅಂತ ಇಬ್ಬರಿಗೂ ಗೊತ್ತಿತ್ತು. ನಿಜವಾದ ಗುಟ್ಟು ಏನೆಂದರೆ, ಎಷ್ಟು ಬೇಗ ಕುಡಿದು ಏರಿ ಎಷ್ಟು ಬೇಗ ಅಮಲಿಳಿಯುತ್ತೊ, ಅಷ್ಟು ಒಳ್ಳೇದು ಗುಬ್ಬಣ್ಣನಿಗೆ..ಯಾಕೆಂದ್ರೆ ಮನೆಗ್ಹೋಗೊಷ್ಟೊತ್ತಿಗೆ ಅಮಲು ಇಳಿದಿರುತ್ತೆ, ವಾಸನೆನು ಹೋಗಿರುತ್ತೆ.. ಹಾಕರ ಸೆಂಟರಲ್ಲಿ ಒಂದು ‘ತೇಸಿ’ ಹಾಕಿ, ಎರಡು ಮಿಂಟಿ ಚಪ್ಪರಿಸಿ ಹೊರಟುಬಿಟ್ರೆ, ಹೆಂಡ್ತಿ ಬೆಕ್ಕಿನ ತರ ಮೂಸುದ್ರೂ ವಾಸನೆ ಹಿಡಿಯೊಕಾಗಲ್ಲ ಅಂತ ಅವನ ಪ್ಲಾನು. ಗುಬ್ಬಣ್ಣನ ಹೆಂಡ್ತಿ ಪಾರ್ವತಿ ಮಹಾ ಸಾಧ್ವಿಮಣಿ, ದೇವ್ರೂ ದಿಂಡರೂ ಅಂತ ಕಂಡ ಕಂಡ ಕಲ್ಗೂ ಕೈ ಮುಗಿದು ಅಡ್ಡಬೀಳೊ ಜಾತಿ. ಅವಳಿಗೆ ‘ತಾನು ಕುಡಿಯೊ ಅಭ್ಯಾಸವೆ ಇಲ್ಲದ ‘ಸಂತ ತುಕಾರಾಂ’, ಜೀವಮಾನದಲ್ಲಿ ಅದರ ವಾಸನೆನೂ ನೋಡಿಲ್ಲ’ ಅಂತ ಏನೇನೊ ಆಣೆ, ಪ್ರಮಾಣ ಮಾಡಿ ನಂಬಿಸಿಬಿಟ್ಟಿದ್ದ. ಹೀಗಾಗಿ ಕುಡಿಯೊದಿದ್ರೆ ಇಲ್ಲಾ ಹೀಗೆ ಕದ್ದು ಮುಚ್ಚೊ ಅಥವಾ ಬಿಜಿನೆಸ್ಸು ಟ್ರಿಪ್ಪು ಅಂತ ದೇಶ ಬಿಟ್ಟು ಹೋದ ದಿನಗಳಲ್ಲೊ ಎಕ್ಕಾಮುಕ್ಕ ಕುಡಿದೊ ತೆವಲು ತೀರಿಸ್ಕೊತಾ ಇದ್ದಾ..ಈ ಸಾರಿ ಬಿಜಿನೆಸ್ಸ್ ಟ್ರಿಪ್ಪುಗಳು ಇಲ್ದೆ, ತಿಂಗಳಾನುಗಟ್ಲೆ ದೊಡ್ಡ ಬರಗಾಲವೆ ಬಂದಂತಾಗಿಬಿಟ್ಟಿತ್ತೇನೊ…ಅದಕ್ಕೆ ಈಗ ಅವಕಾಶ ಸಿಕ್ಕಿದ ತಕ್ಷಣ ‘ಓಪನರ’ ಹಿಡಿದು ಕೂತುಬಿಟ್ಟಿದ್ದ!

ಸಿಂಗಾಪುರದಲ್ಲಿ ಕಾರು ಡ್ರೈವ್ ಮಾಡೋದಾದ್ರೆ ಮಾತ್ರ ಕುಡಿಯೊ ಹಂಗಿಲ್ಲ…ಪಬ್ಲಿಕ್ ಟ್ರಾನ್ಸ್ಪೊರ್ಟು ಹಿಡಿಯುವವರಿಗೇನು ಲೆಕ್ಕವಿಲ್ಲವಲ್ಲಾ…? ಹೀಗಾಗಿ ನಾನು ಒಂದು ಗ್ಲಾಸು ವೈಟು ವೈನ್ಹಿಡಿದು ಕಡಲೆಕಾಯಿ ಬೀಜದ ಪ್ಲೇಟ್ ಜತೆ ಅವನ ಮುಂದೆ ಕುಳಿತೆ.

” ಏನ್ ಸಾರ್… ಬಿಯರು ಹಾಕೋದು ಬಿಟ್ಟು, ವೈನಾಗಿ ‘ವೈನು’ ಹಾಕ್ತಾ ಇದೀರ…ಬಿಯರು ಬೇಡಾಂತ್ಲೊ ಅಥವ ಫಸ್ಟು ಹೆಲ್ತಿ ವೈನಿಂದ ‘ಓಂ’ ನಾಮ ಹಾಕಲಿಕ್ಕೊ? ”

” ಇಲ್ಲಾ ಗುಬ್ಬಣ್ಣ ಈಗ ಬಿಯರು ಹಾಕೋದು ನಿಲ್ಸಿಬಿಟ್ಟಿದ್ದಿನಪ್ಪಾ..ನೀನೆ ನೋಡ್ತಾಯಿದಿಯಲ್ಲಪ್ಪ ಈ ಹಾಳು ಹೊಟ್ಟೆಪಾಡನ್ನ… ಬಡ್ಡಿಮಗಂದು ಬಸುರಿ ಹೊಟ್ಟೆ ಸೇರ್ಕೊಂಡಿರೊ ಹುಣ್ಮೆ ಚಂದ್ರನ್ತರ ದಿನದಿನಾ ಬೆಳಿತಾನೆ ಇದೆ…ಹಾಳಾದ್ದು ಮಧ್ಯಾಹ್ನದ ಹೊತ್ತು ನಮ್ಮ ಸಿಂಗಾಪುರ ಚೈನಿ ಕೊಲೀಗ್ಸ್ ಜತೆ ಊಟಕ್ಕೆ ಹೋಗ್ತಾ ಇದ್ರೆ, ಅವರ ಸಮಕ್ಕೆ ನಡೆಯೋಕು ಎದುಸಿರು ಬಿಡ್ತಾ, ವದ್ದಾಡ್ತಾ ಅವರು ನಡೀತಿದ್ರೆ ನಾನು ಓಡೊಂಗಾಗುತ್ತಯ್ಯ…ನಂಗಿಂತ್ಲೂ ವಯಸಾದವರೆ ಎಳೆಮಕ್ಕಳ ಹಾಗೆ ಕಾಣ್ತಾರೆ…ತುಂಬಾ ನಾಚಿಕೆಯಾಗುತ್ತೆ….ಅದಕ್ಕೆ ಹೊಟ್ಟೆನ ಬಿಯರ ಗಟ್ಟರ ಮಾಡೋದು ಬೇಡಾ ಅಂತ ವೈನು ಹಿಡ್ದಿದ್ದೀನಪ್ಪಾ..ಹಾರ್ಟ್ಗೂ ಒಳ್ಳೆದಂತಾರಲ್ಲ ಹೇಗಿದ್ರೂ..”

“ಅಲ್ಲೆ ಸಾರ್ ನೀವು ತಪ್ಪು ತಿಳ್ಕೊಂಡಿರೋದು… ಗಾದೆನೆ ಇಲ್ವಾ ಸಾರ್…’ಇನ್ಕ್ರೀಮೆಂಟು ನೋಡೋಕೆ ಲೆನ್ಸ್ ಬೇಕು, ಹೊಟ್ಟೆ ಸೈಜು ನೊಡೋಕೆ ಸೆನ್ಸು ಬೇಕು’ ಅಂತ…” ಎಂದು ಹೊಸ ಗಾದೆ ಒಗೆದ!

‘ಸೊ ಪರಮಾತ್ಮಾ ಆಗಲೆ ಕೆಲ್ಸ ಶುರು ಮಾಡ್ಕೊಂಡಿದಾನೆ’ ಅಂತ ಕನ್ಫರ್ಮು ಆಯ್ತು. ಅದಕ್ಕೆ ಈ ಸಾರಿ ‘ಹೊಸ ಗಾದೆನಾ ‘ ಅಂತ ಕೇಳಲಿಲ್ಲ..” ಹಾಗಲ್ಲಾ ಗುಬ್ಬಣ್ಣ…..”

“ಹಾಗೂ ಇಲ್ಲಾ ಹೀಗೂ ಇಲ್ಲ ಸುಮ್ನಿರಿ ಸಾರ್..ಇದೂನು ಹೊಸ್ಗಾದೇನಾ ಅಂತ ಕೇಳ್ತಿರಾ ಅಂತ ಗೊತ್ತು ನನಗೆ….ಹೊಸಾದೆ ಅಂತಿಟ್ಕೊಳಿ, ಏನೀಗ? ಅಲ್ಲಾ ಸಾರ್ ನಮ್ಮ ಕನ್ನಡದವರ ಹೊಟ್ಟೆ ಯಾಕೆ ಹೀಗೆ ದಪ್ಪಗೆ, ದುಂಡಗೆ, ವಿಶಾಲವಾಗಿ ಇರುತ್ತೆ ಅಂತಾ ಯಾವಾಗ್ಲಾದ್ರೂ ಯೋಚನೆ ಮಾಡಿದ್ದೀರಾ?”

ನಾನು ಗುಬ್ಬಣ್ಣನ ಹೊಟ್ಟೆ ನೋಡಿದೆ..ನನಗಿಂತ ಎರಡರಷ್ಟು ಗುಂಡಗೆ , ಗೋಲಾಕಾರವಾಗಿ ಕಾಣ್ತಿತ್ತು. ನನ್ನ ಹೊಟ್ಟೆ ಒಳಗೆ ಚಂದ್ರ ಇದೆ ಅಂದ್ರೆ, ಅವನ್ಹೊಟ್ಟೆ ಒಳಗೆ ನಮ್ಮ ಭೂಮಿ ತಾಯಿನೆ ಸೇರ್ಕೊಂಡಿದಾಳೆ ಅಂತ ಧಾರಾಳವಾಗಿ ಹೇಳೊವಂತ , ವಿಶಾಲವಾದ ಅಪ್ಪಟ ಕನ್ನಡದ ಹೊಟ್ಟೆ…

” ನಾನು ಕನ್ನಡಿಗರ ವಿಶಾಲ ಹೃದಯಾಂತ ಕೇಳಿದ್ದಿನಪ್ಪ..ವಿಶಾಲ ಹೊಟ್ಟೆ ಅಂತ ಇದುವರ್ಗೂ ಕೇಳಿರಲಿಲ್ಲ…” ಗುಬ್ಬಣ್ಣನ ಮುಂದೆ ಖಾಲಿಯಾಗುತ್ತಿದ್ದ ಎರಡನೆ ಗ್ಲಾಸು ನೋಡುತ್ತಲೆ ನಾನು ಉತ್ತರಿಸಿದೆ.

“ಅಲ್ಲೆ ಸಾರ್..’ಮಿಸ್ಸಿಂಗ್ ಲಿಂಕು’ ಇರೋದು..ನಮ್ಮ ಜನಕ್ಕೆ ಈ ಹೃದಯಕ್ಕೂ ಹೊಟ್ಟೆಗೂ ಇರೊ ಕನೆಕ್ಷನ್ ಮೇಲ್ಮೇಲೆ ನೋಡಿದ್ರೆ ಗೊತ್ತಾಗೋದಿಲ್ಲ…ಆದಕ್ಕೆ ಸ್ವಲ್ಪ ಡೀಪ್ ಇನ್ಸೈಟು ಬೇಕು ಸಾರ್…ಇನ್ಸೈಟು” ಅಂತ ಫಿಪ್ಟಿ ಪರ್ಸೆಂಟು ತೇಜಸ್ವಿ ಟರ್ನು, ಇನ್ನು ಫಿಪ್ಟೀ ಪರ್ಸೆಂಟು ಫಿಲಾಸಫಿಕಲ್ ಆಂಗಲ್ಲೂ ಕೊಟ್ಟು, ಬುದ್ಧಿಜೀವಿ ತರ ಪೋಸಿನಲ್ಲಿ ಕುಳಿತ..

ನಾನು ಇನ್ನೊಂದು ಸಾರಿ ಗುಬ್ಬಣ್ಣನ ಹೊಟ್ಟೆ ನೋಡುತ್ತ ‘ಏನೂಂತ ಗೊತ್ತಿಲ್ದೆ ಇದ್ರೂ ಕನೆಕ್ಷನ್ನಂತೂ ಗ್ಯಾರಂಟಿ ಇದೆ’ ಅಂದುಕೊಳ್ಳುತ್ತಾ, “ಅದೇನಂಥಾ ಕನೆಕ್ಷನ್ನು ಗುಬ್ಬಣ್ಣ…ನಮ್ಮ ಘಟಾನುಘಟಿಗಳ ತರದವ್ರೂ ಮಿಸ್ ಮಾಡ್ಕೊಂಡಿರೊ ಅಂಥಾದ್ದು?” ಅಂತ ಕೇಳಿದೆ, ಪ್ರಶ್ನಾರ್ಥಕ ಚಿಹ್ನೆಯ ಹಾಗೆ ಆಗುತ್ತಿದ್ದ ಅವನ ದೇಹವನ್ನೆ ಗಮನಿಸುತ್ತಾ..

” ‘ನಮ್ ಕನ್ನಡದವರ್ದು ವಿಶಾಲ ಹೃದಯಾ’ ಅನ್ನೊ ಬೇಸಿಕ್ ಅಸಂಪ್ಶನ್ನಿಂದ್ಲೆ ಶುರು ಮಾಡಿ ನೋಡಿ ಸಾರ್…ಅದಕ್ಕೆ ತಾನೆ ನಾವು ಬಂದ ಬಂದವರ್ಗೆಲ್ಲ ಇಲ್ಲಾ ಅನ್ನದೆ ಬೆಂಗ್ಳೂರು, ಮೈಸೂರು ಅನ್ನದೆ ಕರ್ನಾಟಕದ ಎಲ್ಲಾ ಕಡೆ ಎಲ್ಲಾ ಹೊರಗ್ನೋರ್ನೂ ಒಳಗೆ ಬಿಟ್ಕೊಂಡ್ವಿ..? ಅದೂ ನಮ್ಮಂತೋರು ಕೆಲವರು ರಾಜ್ಯಾ, ದೇಶಾನೆ ಬಿಟ್ಟು ಹೊರದೇಶಕ್ಕೊಗೊವಷ್ಟು ವಿಶಾಲ ಹೃದಯಾನೂ ತೋರಿಸಿಬಿಟ್ವಿ….”

ಈ ಕಡೆ ಪಾಯಿಂಟು ಸ್ವಲ್ಪ ಹೊಸ ಆಂಗಲ್ಲು ಅನ್ಸುದ್ರೂ, ಅವನ ವಾಗ್ಝರಿಗೆ ತಡೆ ಹಾಕ್ದೆ , ” ಸೊ….” ಅಂದೆ.

ಗುಬ್ಬಣ್ಣ ಗ್ಲಾಸು ಎತ್ತಿ ಇನ್ನೊಂದು ಸಿಪ್ ಎಳೆದು, “ಈ ಹಾಳು ವಿಶಾಲ ಹೃದಯ ಅಂತ ಬ್ಯಾನರು ಹಾಕ್ಕೊಂಡು ನಮಗೆ ಎಲ್ಲಾರ ತಪ್ಪುಗಳ್ನೂ ಕ್ಷಮಿಸಿ ಕ್ಷಮಿಸಿ ಅಭ್ಯಾಸ ಸಾರ್…ಮನೆಲಿ ಮನೆಯವ್ರು – ಅಪ್ಪ, ಅಮ್ಮ, ಅಕ್ಕ, ತಮ್ಮ, ಮಕ್ಕಳು- ಹೀಗೆ ಎಲ್ಲಾರು ಮಾಡೊ ತಪ್ಪೆಲ್ಲ ಬೈದು ಗದರಿ ಜಗಳ ಮಾಡಿದ್ರೂ ಹೊಟ್ಟೆಗಾಕ್ಕೊಂಡು ಕ್ಷಮಿಸ್ತಿವಿ…”

“ಹೌದಲ್ಲಾ….” ನನಗೆ ನನ್ನ ಮಗನ ಪ್ರಚಂಡ ಆಟಗಳು, ಕಾಟಗಳು ನೆನಪಾಯ್ತು.

” ಹಂಗೆ ಅದೆ ಟೋನಲ್ಲಿ , ಹೊರಗ್ನಿಂದ ಬಂದವ್ರೂ ಮೊದ್ಮೊದ್ಲು ಬೆಕ್ಕಂಗಿದ್ದೂ ಆಮೇಲಾಮೇಲೆ, ನಮ್ಮನ್ನೆ ಏಮಾರ್ಸಿ ನಮ್ಮೇಲೆ ಸವಾರಿ ಮಾಡ್ತಾ ಹೋದ್ರೂ, ಮಾಡಬಾರದ ಪಾಪ ಮಾಡ್ತಾ ಕಾಟ ಕೊಡ್ತಾ ಹೋದ್ರೂ, ಹಂಗೆ ಹೊಟ್ಟೆಗ್ ಹಾಕ್ಕೊಂಡು ಕ್ಷಮಿಸ್ತಾನೆ ಹೋಗ್ತೀವಿ…ಹೌದೊ , ಅಲ್ವೊ ಯೋಚ್ನೆ ಮಾಡಿ ನೀವೇ ಹೇಳಿ ಸಾರ್….”

ಅವನು ಹೇಳ್ತಾ ಇರೋದ್ರಲ್ಲೂ ಲಾಜಿಕ್ಕಿದೆ ಅಲ್ವಾ ಅನಿಸಿ , “ನಿಜಾ ಅಲ್ವಾ…?” ಎಂದು ಅವನನ್ನೆ ಪ್ರಶ್ನಿಸಿದೆ..

“ಹಿಂಗೆ ಸ್ವಂತದವರ್ದು, ಹೊರಗ್ನವರದು, ಗೊತ್ತಿದ್ದೊರದು, ಗೊತ್ತಿಲ್ದೋರದು – ಹೀಗೆ ಎಲ್ಲಾರ ಪಾಪನೂ ಮೊಖಮೂತಿ ನೋಡ್ದೆ ನುಂಗ್ಕೊಂಡು, ಕ್ಷಮಿಸ್ತಾ, ಹೊಟ್ಟೆಗ್ಹಾಕ್ಕೊಂತಾ ಹೋದ್ರೆ, ನೀವೆ ಹೇಳಿ ಸಾರ್..ಯಾವ ಕನ್ನಡಿಗನ ಹೊಟ್ಟೆ ತಾನೆ ಇದ್ದಂಗೆ ಇರುತ್ತೆ? ಆ ಪಾಪಗಳನ್ನ ತಿಂದೆ ತಿಂದೆ ಅರ್ಧ ಊದೋಗ್ಬಿಡಲ್ವಾ…..ಅಂತಾ ಉದರ ವೈಶಾಲ್ಯದ ಹೊಟ್ಟೆನ, ಬೀಯರು ಕುಡಿದು ಬೆಳೆದ ಹೊಟ್ಟೆ ಅಂತ ಆಡ್ಕೋತಿರಲ್ಲಾ..? ಇದು ಕನ್ನಡಿಗರ ಮೇಲಿನ ಸಾರಾಸಗಟು ಅನ್ಯಾಯ ಹಾಗೂ ದೌರ್ಜನ್ಯ ಅಲ್ವಾ…ಹೇಳಿ ಸಾರ್…”

ನಾನು ‘ಎಲಾ ಇವನಾ…ಬಡ್ಡಿಮಗ ನಿಜವಾದ ಕನ್ಸಲ್ಟೆಂಟು…ತಲೆ ಸವರಿ ಏನೊ ಲಾಜಿಕ್ ಹಾಕಿ ನಂಬಿಸಿಬಿಡ್ತಾನಲ್ಲಾ…ವಾದಾನಾ’ ಅನ್ಕೊಂಡೆ, ಸ್ವಲ್ಪ ಕಿಚಾಯ್ಸೋಣ ಅನ್ಸಿ ” ಗುಬ್ಬಣ್ಣ ನೀನು ಹೇಳ್ತಾ ಇರೊ ಪಾಪಾ ಅಂದ್ರೆ ಮನುಷ್ಯರು ಮಾಡೊ ಪಾಪಾನ (ಸಿನ್ನು) ಅಥವಾ ಗಂಡು ಹೆಣ್ಣಿಗೆ ಹುಟ್ಟೊ ‘ಪಾಪು ಕಂದ’ ಪಾಪಾನ ” ಅಂದೆ..

ಪುಲ್ ಜೋಶಿನಲ್ಲಿದ್ದ ಗುಬ್ಬಣ್ಣನಿಗೆ ನಾನು ಕಿಚಾಯಿಸಿದ್ದೂ ಗಮನಕ್ಕೆ ಬರಲೆ ಇಲ್ಲವೆಂಬಂತೆ,”ಅದಕ್ಕೆ ಸಾರ್…ಇನ್ಮೇಲೆ ಕನ್ನಡಿಗರ ಗುಢಾಣದ ಹೊಟ್ಟೆ ಕಂಡ್ರೆ ಮಾತ್ರ, ಕಂಡಂ ಮಾಡ್ಬೇಡಿ…ಜನಗಳು ಮಾಡೊ ಪಾಪಾ ಸೇರಿ ಗುಢಾಣವಾದರೂ ಸರಿ, ಪಾಪ ಮಾಡಿದ ಜನರಿಂದ ಹುಟ್ಟೊ ‘ಪಾಪಾ’ ಆದ್ರೂ ಸರಿ…ವೀ ಶುಡ್ ಬಿ ಪ್ರೌಢ್ ಆಫ್ ಅವರ್ ಕಣ್ಣಡಿಗ ಸ್ಟಮಕ್..” ಅಂತ ಅಪ್ಪಣೆ ಬೇರೆ ಕೊಡಿಸಿದ. ಜತೆಗೆ ‘ಕನ್ನಡಿಗ’ ಹೋಗಿ ‘ಕಣ್ಣಡಿಗ’ ಆಯ್ತು ಅಂದ್ರೆ ಮೂರನೆ ಗ್ಲಾಸು ಓಡ್ತಾಯಿದೆ ಅಂತ ಅರ್ಥ…ಹೀಗೆ ಬಿಟ್ರೆ, ನಮಗೆ ಬೇಕಾದ್ದ ವಿಷಯ ಬಿಟ್ಟು ಎಲ್ಲೆಲ್ಲೊ ಹೋಗ್ಬಿಡ್ತಾನೆ ಅಂತ ಖಚಿತವಾಯ್ತು. ಇನ್ನು ನಾಲ್ಕನೆ ಗ್ಲಾಸು ಮುಗಿಯೊದ್ರೊಳಗೆ, ಅವನ ‘ಪ್ರಸಂಗ’ದ ಕಥಾನಕ ಮುಗಿಸಲಿಲ್ಲಾ ಅಂದ್ರೆ, ಅದರ ಕಥೆ ಇವತ್ತಿಗೆ ಮುಗಿದ ಹಾಗೆ ಅನಿಸಿ, “ಗುಬ್ಬಣ್ಣ, ಹೊಟ್ಟೆ ಮನೆ ಒಲೆಗ್ಹಾಕು…ನಾವಿಲ್ಲಿ ಬಂದಿದ್ದು ಏನುಕ್ಕೆ , ಮಾತಾಡ್ತಾ ಇರೋದು ಯಾವುದರ ಬಗ್ಗೆ? ನಾನೇನೊ ಯುನಿವರ್ಸಲ್ ಪ್ರಸಂಗ ಹೇಳ್ತಿಯಾ ಅಂಥ ಕಾಯ್ತ ಕೂತಿದ್ರೆ, ನೀನು ‘ಉದರ ಪುರಾಣ’ ಶುರು ಮಾಡ್ತಿದ್ದಿಯಲ್ಲಪ್ಪ, ಗುರುವೆ?” ಅಂತ ಬ್ರೇಕು ಹಾಕಿದೆ.

ಗ್ಲಾಸುಗಳಿಳಿತಾ ಇದ್ರೂ ಮಾತಲ್ಲಿ ಮಾತ್ರ ಗುಬ್ಬಣ್ಣ ಪಕ್ಕ ಕನ್ಸಲ್ಟೆಂಟೆ. ಯಾವಾಗ ಬೇಕಾದ್ರೂ, ಯಾವ ವಿಷಯ ಬೇಕಾದ್ರೂ ಕೊಡಿ ಕುಡಿದಿರಲಿ, ಬಿಡಲಿ – ನೀಟಾಗಿ ಮಾತಾಡಿಬಿಡ್ತಾನೆ. ಕುಡ್ದಾಗ ಸ್ವಲ್ಪ ಹೆಚ್ಚು ರಸಮಯವಾಗಿ ಆಡ್ಬೋದು ಅನ್ನೋದು ಬಿಟ್ರೆ, ಬಾಕಿ ಖದರೆಲ್ಲಾ ಒಂದೆ. ಸ್ವಲ್ಪ ತೇಲುಗಣ್ಣಲ್ಲೆ, ” ವರಿ ಮಾಡ್ಕೋಬೇಡಿ ಸಾರ್…ನಾನು ಸ್ವಲ್ಪ ಟೈಟಾದ್ರೂ, ಮಾತು ಅಷ್ಟೆ ನೀಟು. ನಿಮಗೆ ಗೊತ್ತಲ್ಲಾ..? ನಿಮ್ಗೆ ಬೇಕಾಗಿರೋದು ಯೂನಿವರ್ಸಲ್ ಪುರಾಣ ತಾನೆ? ಹೇಳ್ತೀನಿ, ಕೇಳ್ಬಿಟ್ಟು ಕಥೆನೊ, ಕವನನೊ ಏನ್ಬೇಕಾದ್ರೂ ಗೀಚ್ಕೊಳ್ಳಿ ಸಾರ್…” ಅನ್ನುತ್ತ ಗ್ಲಾಸು ಎತ್ತಿ ಸಿಪ್ಪೆರಿಸಿದ.

ಅಷ್ಟರಲ್ಲಿ ಕ್ಲಬ್ಬಿನ ಪರಿಚಾರಕ ಒಂದಷ್ಟು ಫಿಂಗರು ಚಿಪ್ಸು ತಂದು ಸುರಿದ. ಕುರುಕು ತಿಂಡಿಗಳೆಂದರೆ ಮೊದಲೆ ಕಾರಣ ಕೇಳದೆ, ಹೊತ್ತು ಗೊತ್ತಿಲ್ಲದೆ ತಿನ್ನೊ ಜನ; ಸಾಸಿಗದ್ದಿ ಬಾಯಿಗಿಡುತ್ತಲೆ ಆರಂಭಿಸಿದ ಗುಬ್ಬಣ್ಣ. ಅಂಕ ಅಂಕವಾಗಿ ಬಿಚ್ಚುತ್ತಾ ಹೋದಂತೆ, ಅಷ್ಟೆ ವಿವರವಾಗಿ, ಕಲಾತ್ಮಕವಾಗಿ, ರಸವತ್ತಾಗಿ ಪೋಣಿಸುತ್ತಾ ಪ್ರಸಂಗವನ್ನು ತೆರೆದಿಡುತ್ತ ಹೋದ ಗುಬ್ಬಣ್ಣ..

“ಅವತ್ತು ಇವರೆಲ್ಲಾರನ್ನು ಒಟ್ಟಿಗೆ ಸೇರ್ಸಿ, ಯುನಿವರ್ಸಲ್ಲು ಸ್ಟೂಡಿಯೊಗೆ ಹೊರಡಿಸಿ, ನಾನೂ ಆಫೀಸಿನತ್ತ ಹೊರಟೆ..ಅದೂ ಭಾನುವಾರವಾದ್ರೂ, ಅವತ್ತು ಸ್ಪೆಶಲ್ಲಾಗಿ ಟೆಸ್ಟಿಂಗು, ಟ್ರೈನಿಂಗಿಗೆ ಅಂತ ಬರಹೇಳಿದ್ರು ಸಾರ್….ಇವರ ಬಂದು ಹೋದ ಓಡಾಟ , ಎಳೆದಾಟದಲ್ಲಿ ಆಗ್ಲೆ ಸುಮಾರು ದಿನ ರಜೆ ಹಾಕಿದ್ದೆ; ಈ ದಿನ ನನ್ನಿಂದಾಗಿಯೆ ತಡವಾಗಿರೊ ಭಾಗಾನ ಕವರಪ್ಪ್ ಮಾಡೋಕೆ ಅಂಥ ಅರೆಂಜು ಮಾಡಿದ್ದು, ಓವರು ಟೈಮು…;ಭಾನುವಾರದ ದಿನವೂ ಆಫೀಸಿಗೆ ಬರಬೇಕಲ್ಲಾ ಅಂತ ಬೈಕೊಂಡು ಬೈಕೊಂಡೆ ಕೆಲಸಕ್ಕೆ ಬಂದಿದ್ರು ಆ ಪ್ರಾಜೆಕ್ಟು ಯೂಸರುಗಳು ಸಾರ್..”

ಸದ್ಯ ಕೊನೆಗೂ ಕಥಾನಕ ಪ್ರಸಂಗ ಆರಂಭವಾಯ್ತಲ್ಲಾ ಅನ್ನುತ್ತ ಖುಷಿಯಲ್ಲಿ,”ಅದು ಹೆಂಗೊ ಗುಬ್ಬಣ್ಣ.. ಇಲ್ಲಿನವರು ಭಾನುವಾರಾ, ರಜೆ ದಿನದ ಕೆಲಸಾ ಅಂದ್ರೆ ಮೂರು ಮೈಲಿ ಆಚೆ…ಅಂಥಾದ್ರಲ್ಲಿ ನಿನ್ನ ಪ್ರಾಜೆಕ್ಟಲ್ಲಿ ಬರೋಕೆ ಒಪ್ಕೊಂಡ್ರು ಅಂದ್ರೆ, ಬಾಳ ಒಳ್ಳೆ ಜನಾಂತ ಕಾಣುತ್ತೆ…”

“ಒಳ್ಳೆ ಜನಾ ಮಣ್ಣಾಂಗಟ್ಟಿ….ಕಾಲ್ಕಾಲಿಗೆ ಬಿದ್ದು , ದಮ್ಮಯ್ಯ ಗುಡ್ಡೆ ಹಾಕಿ ಇದೋಂದೆ ಒಂದು ಸಾರಿ ಬನ್ನಿ ಅಂತ ಗೋಳಾಡಿದ್ದಕ್ಕೆ, ಅವ್ರು ಅತ್ತು ಕರೆದು ಒಪ್ಕೊಂಡ್ರು ಸಾರ್…ಅದೂ ಸುಮ್ನೆ ಅಲ್ಲಾ…ಕಂಪನಿಯಿಂದ ಡಬ್ಬಲ್ ಪೇ ಜತೆಗೆ ಕಾಂಪನ್ಸೇಟರಿ ಲೀವು ಎಲ್ಲಾ ಅರೇಂಜು ಮಾಡಿಸಿದ ಮೇಲೆ, ಧರ್ಮಕ್ಕೆ ಅನ್ನೊ ಹಾಗೆ ಒಪ್ಕೊಂಡು ಬಂದಿದ್ರು..ನಮ್ಮ ಪ್ರಾಜೆಕ್ಟು ಮ್ಯಾನೇಜರು ಸುಮ್ಮನೆ ಉರು ಉರು ಅಂಥ ಉರಿದು ಬೀಳ್ತಾ ಇದ್ದಾ ಸಾರ್…”

“ಆಮೇಲೆ…?”

” ಅವತ್ತು ಪ್ಲಾನು ಇದ್ದದ್ದು, ಮೊದಲು ನಾನು ಟ್ರೈನಿಂಗು ಮುಗಿಸಿ, ಆಮೇಲೆ ಅವರ ಕೈಯಲ್ಲಿ ಟೆಸ್ಟಿಂಗು ಮಾಡಿಸಿ ಪಾಸೊ, ಫೇಲೊ ರಿಸಲ್ಟು ತೊಗೊಬೇಕಿತ್ತು ಸಾರ್..ಅದಕ್ಕೆ ಸರಿಯಾಗಿ ಎಲ್ಲಾ ಒಂಭತ್ತಕ್ಕೆ ಸರಿಯಾಗಿ ಬನ್ನಿ ಅಂತ ಹೇಳಿದ್ರೆ ಒಬ್ಬೊಬ್ಬರೆ ಬಂದು ಕ್ಲಾಸು ಶುರುವಾಗುವಷ್ಟೊತ್ತಿಗೆ ಆಗ್ಲೆ ಹತ್ತು ಗಂಟೆ..ಸರಿ ಹಾಳಾಗ್ಲಿ ಅಂಥ ಇನ್ನೇನು ಶುರು ಮಾಡಿದಿನಿ ಕ್ಲಾಸು….”, ಎನ್ನುತ್ತ ಒಳ್ಳೆ ಕುತೂಹಲಕರ ಘಟ್ಟದಲ್ಲಿ ಸಸ್ಪೆನ್ಸು ಇಡುವವನಂತೆ ‘ಪಾಹ್ಸ್’ ಮಾಡಿ ಮತ್ತೆ ಗ್ಲಾಸು ಕೈಗೆತ್ತಿಕೊಂಡ ಗುಬ್ಬಣ್ಣ.

” ಏನಯ್ಯ ಯುನಿವರ್ಸಲ್ ನೋಡೋದು, ಒಳ್ಳೆ ಸಸ್ಪೆನ್ಸು ಥ್ರಿಲ್ಲರ ತರ ಓಡ್ತಾ ಇರೊ ಹಂಗೆ ಕಾಣುತ್ತೆ ನಿನ್ನ ಕಥೆ? ಅಥವ ನನಗೆ ಸುಮ್ಮನೆ ಹೋಳು ಬಿಡೋಕೆ ಅಂತ ಎಲ್ಲ ಬಣ್ಣ ಕಟ್ಟಿ ಹೇಳ್ತಾ ಇದೀಯಾ ಹೇಗೆ?”

ಗುಬ್ಬಣ್ಣ ಸಾವಕಾಶದಿಂದ ಎರಡು ಮೂರು ಸಿಪ್ ಬಿಯರು ಗುಟುಕರಿಸಿ, ಜತೆಗೆ ಒಂದೆರಡು ಫಿಂಗರು ಚಿಪ್ಸು, ಸಾಸಿನ ಜತೆ ನೆಂಚಿಕೊಂಡು ನಿಧಾನವಾಗಿ ಮೆದ್ದವನೆ, ಒಂದು ‘ಬಿಯರ್ವಾಸನಭರಿತ’ ಸದ್ದಿನೊಂದಿಗೆ ‘ಢರ್ರೆಂದು’ ತೇಗಿ ಅದರ ಆಸ್ವಾದನೆಯನ್ನೆ ಆಹ್ಲಾದತೆಯಿಂದ, ಅನುಭೂತಿಯಾಗಿ ಅನುಭವಿಸುತ್ತಾ, ” ಸ್ವಲ್ಪ ತಾಳ್ಮೆಯಿಂದ ಕೇಳಿ ಸಾರ್..ನಿಮಗೆ ಗೊತ್ತಾಗುತ್ತೆ..ನಾನು ಹೇಳ್ತಾ ಇರೋದು ರೀಲೊ, ಇಲ್ಲ ರಿಯಲ್ಲೊ ಅಂತ…ನೀವು ಕೇಳೊಕೆ ಇಷ್ಟು ಸಂಕಟ ಪಡೊ ಹಾಗೆ ಇದೆ, ನಾನು ಅನುಭವಿಸಿದವನು ಎಷ್ಟು ಸಂಕಟಪಟ್ಟಿರಬೇಕು ಯೋಚ್ನೆ ಮಾಡಿ ಸಾರ್….”

“ಆಯ್ತಪ್ಪ..ರೀಲಲ್ಲ ಅಂತ ನಂಬ್ತೀನಿ, ಮುಂದೇನಾಯ್ತು ಹೇಳು” ಅಂದೆ

” ಹೂಂ…ಎಲ್ಲಿಗೆ ನಿಲ್ಲಿಸಿದ್ದೆ ಪ್ರಸಂಗ?”

“ಅದೇ..ಇನ್ನೇನು ಟ್ರೈನಿಂಗು ಶುರುಮಾಡ್ಬೇಕು… ಅಷ್ಟರಲ್ಲಿ….”

“ಆಷ್ಟರಲ್ಲಿ ಮೊಬೈಲು ಹೊಡ್ಕೊಳ್ಳೊಕೆ ಶುರುವಾಯ್ತು….. ಇದ್ಯಾರಪ್ಪಾ ಸರಿಯಾದ ಹೊತ್ನಲ್ಲಿ ಅಂತ ನೋಡಿದ್ರೆ ಮಗಳ ನಂಬರು ಕಾಣಿಸ್ತು…ಇನ್ನೇನು ಗ್ರಾಚಾರಾನಪ್ಪ ಶಿವನೆ ಅಂತ ಹೊರಗಡೆ ಬಂದು ಮಾತಾಡ್ದೆ….” ಅಂತ ಆ ಸಂಭಾಷಣೆಯನ್ನೂ ವಿವರಿಸತೊಡಗಿದ ಗುಬ್ಬಣ್ಣ;

” ಅಪ್ಪಾ…ನಾನಪ್ಪ….”

“ಎಲ್ಲಿದ್ದಿ ಮಗಳೆ, ಏನು ಫೋನು ಮಾಡಿದ್ದು.. ಅರ್ಜೆಂಟಾ? ನಾನು ಮೀಟಿಂಗಿನಲ್ಲಿದ್ದಿನಮ್ಮ…”

“ಅಪ್ಪಾ..ಎಲ್ಲಾ ಬಂದು ಯುನಿವರ್ಸಲ್ಲಿಗೆ ಸೇರಿದ್ವಿ… ಎಂಟ್ರೆನ್ಸತ್ರ ನಿಂತಿದಿವಿ…”

“ಅಲ್ಲ್ಯಾಕೆ ನಿಂತ್ಕೊಂಡ್ರಿ…ಹೋಗೊದಲ್ವಾ ಓಳಗೆ? ಇನ್ನು ಓಪನ್ನು ಆಗಿದಿಯೊ ಇಲ್ವೊ?”

“ಓಪನ್ನು ಆಗಿದೆ ಅಪ್ಪಾ..ಆದರೆ ನಾವು ಓಳಗೆ ಹೋಗೋಕಾಗಲ್ಲಾ..ಅಪ್ಪಾ…”

“ಹೋಗೋಕಾಗಲ್ಲ ಅಂದ್ರೇನಮ್ಮ ಅರ್ಥ? ಏನು ಬಾಗಿಲು ಚಿಕ್ಕದೂಂತನಾ? ಅಲ್ಲೆಲ್ಲಾ ಗೇಟು ದೊಡ್ದೆ ಇರುತ್ತಲ್ಲಾ…”

” ಅಯ್ಯೊ..ಅಪ್ಪಾ ಅದಲ್ಲಾ…ಸ್ವಲ್ಪ ಎಡವಟ್ಟಾಗ್ಹೋಗಿದೆ…”

“ಏನು ಎಡವಟ್ಟಮ್ಮ? ಎಲ್ಲಾ ಹುಷಾರಾಗಿದೀರಾ ತಾನೆ…?”

” ಎಲ್ಲಾ ಚೆನ್ನಾಗೆ ಇದ್ದಾರಪ್ಪ….ಆದ್ರೆ ಒಳಗೆ ಹೋಗೋಕೆ ಯಾರತ್ರಾನು ಟಿಕೇಟ್ಟೆ ಇಲ್ಲಪ್ಪಾ….”

“ನನ್ನ ಕೈಲಿದ್ದ ಪೋನು ಕೆಳಗೆ ಬೀಳೊದೊಂದು ಬಾಕಿ ಸಾರ್..ಯಾಕೊ ಈ ಟಿಕೆಟ್ಟು ಬೆನ್ನುಹತ್ತಿದ ಭೇತಾಳದ ತರ ಕಾಡ್ತಾ ಇದೆಯಲ್ಲಾ ಅಂತಾ…” ಮಧ್ಯದಲ್ಲೆ ತಜ್ಞ ವೀಕ್ಷಕ ವಿವರಣೆ ಕೊಟ್ಟ ಗುಬ್ಬಣ್ಣ..ನಾನು ಕುತೂಹಲದಿಂದ, “ಮತ್ತೆ ಟಿಕೆಟ್ಟಿಗೇನಾಗಿತ್ತಪ್ಪ ಅಲ್ಲಿ? ” ಅನ್ನುತ್ತ ಮತ್ತೆ ಪ್ರಸಂಗಕ್ಕೆ ಚಾಲನೆ ಕೊಟ್ಟೆ.

” ನಾನು ಅದನ್ನೆ ಕೇಳ್ದೆ ಸಾರ್….ಕೋಪದ ದನಿಯಲ್ಲಿ..’ಯಾಕಮ್ಮಾ ಮಗಳೆ? ಈಗೇನಂತೆ ಅವರ ಗೋಳು? ಅವರಿಗೆಲ್ಲ ಹೇಳು, ಈಗ ಕೈಲಿ ಟಿಕೆಟ್ಟಿಲ್ಲಾಂತ ನಖರ ಮಾಡಿದ್ರೆ ನಡೆಯೊದಿಲ್ಲ..ಅವ್ರವ್ರ ಕೈಯಲ್ಲೆ ಬೇಕಾದ್ರೆ ಕಾಸು ಕೊಟ್ಟು ಹೊಸಾದು ಟಿಕೆಟ್ಟು ತೊಗೊಳ್ಳಿ ಅಂತ’…”

“ಅಯ್ಯೊ ಅಪ್ಪ ಕಿರುಚ್ಬೇಡಾ…ಎಡವಟ್ಟು ಮಾಡಿರೋದು ಅವರಲ್ಲಾ…ಅಮ್ಮ…!”

“ಹಾಂ…..!!”

“ನೀನು ಅವರ ಕೈಗೆ ಕೊಟ್ಟಿದ್ದ ಟಿಕೆಟ್ಟೆಲ್ಲ ಎಲ್ಲರೂ ಜೋಪಾನವಾಗಿರಲಿ ಅಂತ ಅಮ್ಮನ ಹತ್ರ ಕೊಟ್ಟಿದ್ರಂತೆ…”

“ಅಯ್ಯೊ…ಗೂಬೆ ಮುಂಡೇವಾ…ಅವಕ್ಯಾಕೆ ಆ ದುರ್ಬುದ್ಧಿ ಬಂತೂ…..ಮೊದಲೆ ಅವ್ಳಿಗೆ ಅಸಾಧ್ಯ ಮರೆವು ಅಂತ ಗೊತ್ತಿಲ್ವಾಮ್ಮ…..ಎಷ್ಟೊ ಸಾರಿ ನನ್ಮುಖಾನೆ ಮರ್ತು ‘ಯಾರಪ್ಪಾ ನೀವು, ಯಾರು ಬೇಕಿತ್ತು’ ಅಂತ ಕೇಳ್ದೋಳು… ನಿಂಗೊತ್ತಿತ್ತಲ್ಲಾ.. ನೀನಾದ್ರೂ ತೆಗೆದು ಇಟ್ಕೊಬಾರದಾಗಿತ್ತಾ….”

“ಈ ಕಥೆಯೆಲ್ಲಾ ನಂಗೇನು ಗೊತ್ತಪ್ಪಾ…ಎಲ್ಲಾ ಈಗ ಹೇಳ್ತಾ ಇದಾರೆ….ಗೇಟು ಹತ್ರ ಹೋದ್ವಿ…ಎಲ್ಲ ಅಮ್ಮನ್ನ ‘ಪಾರಕ್ಕ ಟಿಕೆಟು ಕೊಡೆ’ ಅಂದಾಗ ಅಮ್ಮ ಟಿಕೆಟ್ಟು ಇಟ್ಟು ಇಟ್ಟಿದ್ದ ಪರ್ಸೆಲ್ಲಿ ಅಂತಾ ಹುಡ್ಕಾಡೋಕೆ ಶುರು ಮಾಡಿದ್ಲು…ಆಮೇಲೆ, ಜ್ಞಾಪಿಸ್ಕೊಂಡು ‘ಬೀಗ ಹಾಕೊ ಹೊತ್ನಲ್ಲಿ ಟೀವಿ ಪಕ್ಕ ಇಟ್ಟಿದ್ದೆ’ ಅಂದ್ಲು…ಹೊರಡೊ ಗಡಿಬಿಡಿಲಿ ಅಲ್ಲೆ ಮರೆತು, ಬೀಗಾ ಮಾತ್ರ ಹಾಕ್ಕೋಂಡು ಬಂದ್ಬಿಟ್ಲಂತಪ್ಪ…”

“ಅಯ್ಯೊ…ಹಾಳದವಳನ್ನ ತಗೊಂಡು ಬಂದು, ಹಾಳದವಳನ್ನ ತಗೊಂಡು ಬಂದು….ಮೊದ್ಲೆ ಮರೆವು ಅಂತ ಗೊತ್ತಿದ್ದು ಈಸ್ಕೊಂಡಿಟ್ಕೊಂಡಿದಾಳಲ್ಲಾ, ಗೂಬೆನ್ತಂದು…..ಸರಿ ಸರಿ…ನನಗೀಗ ಮೀಟಿಂಗ್ ವಾಪಸ್ ಹೋಗ್ಬೇಕು ಹೊತ್ತಾಯ್ತು…ನಿಮ್ಮಮ್ಮನ್ನೆ ಮನೆಗೆ ಹೋಗಿ ಟಿಕೆಟ್ ತೊಗೊಂಡು ಬಾ ಅಂತೇಳು….ಎಲ್ಲ ಅಲ್ಲೆ ಪಿಕ್ನಿಕ್ ಮಾಡ್ಕೊಂಡು ಕಾಯ್ಲಿ ಅಲ್ಲಿ ತನಕ…”

“ಅದನ್ನ ಕೇಳಕೆ ಪೋನ್ ಮಾಡಿದ್ದಪ್ಪಾ…ಅಮ್ಮ ಹೇಳುದ್ಲು , ನಿಮ್ಮಪ್ಪನಿಗೆ ಪೋನು ಮಾಡಿ ಮನೆಗೆ ಹೋಗಿ ಬೇಗಾ ಟಿಕೆಟ್ಟು ತೊಗೊಂಬರೊಕೇಳೆ ಅಂತ….”

“ಹೇಳ್ತಾಳೆ ಹೇಳ್ತಾಳೆ…ಹೇಳ್ದೆ ಏನು ಮಾಡ್ತಾಳೆ ಪಂಕಜವಲ್ಲಿ…ಅವಳಲ್ಲಿ ಮಹಾರಾಣಿತರ ಆರ್ಡರು ಮಾಡ್ಲಿ, ನಾನಿಲ್ಲಿ ಅಬ್ಬೆಪಾರಿತರ ಗೂಬೆಮುಂಡೆ ಟವಲ್ ಹಾಕ್ಕೊಂಡು, ಅವಳು ಹೇಳಿದ್ದುಕ್ಕೆಲ್ಲಾ ಕಪೀಶನ ತರ ತಲೆಯಾಡಿಸ್ಕೊಂಡು..’ಜೀಹುಕುಂ’, ‘ಜೀಹುಕುಂ’ ಅಂತ ಗುಲಾಮ ಸೇವೆ ಮಾಡ್ತಾ ಇರ್ತೀನಿ….ಎಲ್ಲಿ ಅವಳು? ಕೊಡವಳ ಕೈಗೆ ಪೋನು? ಅದಕ್ಕೆ ಅವಳೆ ಮಾತಾಡ್ದೆ ನಿನ್ಕೈಲಿ ಫೋನು ಮಾಡ್ಸುದ್ಲಾ?”

” ಅಮ್ಮ..ಇಲ್ಲಿಲ್ಲಪ್ಪ…ಟಿಕೆಟ್ ಕೌಂಟರತ್ರ ಹೋಗ್ತಾ ಇದಾಳೆ…..”

“ಅಲ್ಲ್ಯಾಕೆ ಹೋಗ್ತಾಳಂತೆ ಅವಳು? ಅವಳೇನು ದಮ್ಮಯ್ಯ ಗುಡ್ಡೆ ಹಾಕಿದ್ರೂ ಅವರು ಟಿಕಿಟಿಲ್ದೆ ಒಳಗೆ ಬಿಡೊಲ್ಲಾ ಅಂತಾ ಗೊತ್ತಿಲ್ವಾ…ಇವಳ್ನೇನೂ ಅವರ ಮಾವನ ಮಗಳು ಅನ್ಕೊಂಡ್ಲಾ ಹೇಗೆ…”

” ಇಲ್ಲಪ್ಪಾ..ಶಂಕರ ಚಿಕ್ಕಪ್ಪ ಇದ್ಕೊಂಡು, ‘ಗುಬ್ಬಣ್ಣಂಗೆ ಹೇಳಿ ಟಿಕೆಟ್ಟು ತರಸ್ಕೊಳಿ ಪಾರ್ವತಕ್ಕ’..ಅಂದ್ರು…ಅದಕ್ಕೆ ಅಮ್ಮ ‘ಅಯ್ಯಯ್ಯೊ… ಈಗವರನ್ನ ಕೇಳಿದ್ರೆ ರೇಗ್ಕೊಂಡು ಉರ್ರಂತ ಮೈಮೇಲೆ ಬೀಳ್ತಾರೆ…ನಾನಂತೂ ಕೇಳಲ್ಲಪ್ಪಾ…’ ಅಂದ್ಲು. ಚಿಕ್ಕಪ್ಪ ಇದ್ಕೊಂಡು ‘ಹಾಗಾದ್ರೆ ಒಂದು ಕೆಲಸ ಮಾಡೋಣ…ಅಪ್ಪನಿಗೆ ಮಗಳೂಂದ್ರೆ ಪ್ರಾಣ…ಅವಳೆ ಕೇಳ್ನೋಡ್ಲಿ…’ ಅಂದ್ರು. ಅಮ್ಮ ಮಾತ್ರ, ‘ಅವರು ಕೋಪದಲ್ಲಿ ವಿಶ್ವಾಮಿತ್ರ, ದೂರ್ವಾಸನ ವಂಶದೋರು…ಮಗಳಾದ್ರೂ ಅಷ್ಟೆ, ಹೆಂಡ್ತಿ ಆದ್ರೂ ಅಷ್ಟೆ…’ ಅಂದ್ಲು..”

“ಸದ್ಯ ಅಷ್ಟನ್ನಾದ್ರೂ ಸರಿಯಾಗಿ ತಿಳ್ಕೊಂಡಿದಾಳಲ್ಲಾ…ಮಂಕು ಮುಂಡೆದನ್ನ ತಂದು…. ಅದು ಗೊತ್ತಿದ್ದೂ ತಿರುಗಾ ಬೂತತ್ರ ಯಾಕೋದ್ರಂತೆ?”

“ಅದಾ..ಚಿಕ್ಕಪ್ಪ ಇದ್ಕೊಂಡು… ‘ಪಾತಕ್ಕ.. ನಿಮ್ಮೆಜಮಾನ್ರು ಯಾವುದಕ್ಕೂ ಇರಲಿ ಅಂತ ನಿಮ್ಮ ಹತ್ರ ಸಪ್ಲಿಮೆಂಟರಿ ಕ್ರೆಡಿಟ್ ಕಾರ್ಡ್ ಕೊಟ್ಟಿದ್ದಾರಲ್ಲಾ…ಅದ್ರಲ್ಲಿ ಹೋಗಿ ಹೊಸ ಟಿಕೆಟ್ಟಾದ್ರೂ ತೋಗೊಂಡು ಹೋಗೋಣ ಬನ್ನಿ…ಈಗ್ಲೆ ಲೇಟು ಆಗಿದೆ….”ಅಂದ್ರು…..

“ಅಯ್ಯೊ ಮನೆಮುರುಕ ನನ್ನ ಮಕ್ಳಾ…ಅಷ್ಟೊಂದು ದುಡ್ಡಾಕಿ ತಂದಿರೊ ಹೊಸಾ ಟಿಕೆಟ್ಟನ್ನ ಮೂಲೆಗ್ಹಾಕಿ ತಿರುಗಾ ಹೊಸಾ ಟಿಕೆಟ್ಟು, ಅದೂ ನಮ್ಮ ಕ್ರೆಡಿಟ್ಟು ಕಾರ್ಡಿನಲ್ಲಿ ತೊಗೊಬೇಕಂತಾ? ನಿಮ್ಮಮ್ಮ ಖಡಾಖಂಡಿತವಾಗಿ ‘ ಬಿಲ್ಕುಲ್ ಆಗಲ್ಲ..’ ಅಂತ ಹೇಳಿದ್ಲೂ ತಾನೆ?”

“ಅಯ್ಯೊ ಇರೊ ಟಿಕೆಟ್ಟು ಹಾಳಾಗಲ್ವ …ಅಂತ ಅಮ್ಮ ಅಂದ್ಲು ಅಪ್ಪ….ಅದಕ್ಕೆ ಚಿಕ್ಕಪ್ಪ ಬಂದು, ‘ನಿಮ್ಮೆಜ್ಮಾನ್ರಿಗೆ ಅಷ್ಟೊಂದು ಇನ್ ಫ್ಲುಯೆನ್ಸಿದೆ…ಏನಾದ್ರೂ ಮಾಡಿ ಟಿಕೆಟ್ಟು ವಾಪಸ್ಸು ಮಾಡ್ಬಿಡ್ತಾರೆ ಬಿಡಿ ಪಾತಕ್ಕ…ಇಲ್ಲಾಂದ್ರು ಯಾರ್ಗಾದ್ರೂ ಮಾರಾಕಿಬಿಡ್ತಾರೆ….ಮಹಾ ಪ್ರಚಂಡರೂ ಅವರು’ ಅಂತೆಲ್ಲ ಹೇಳಿ ಈಗ ಟಿಕೆಟ್ಟು ತರೋಕೆ ಅಂತ ಕೌಂಟರಹತ್ರ ಹೋಗಿ ‘ಕ್ಯೂ’ನಲ್ಲಿ ನಿಂತಿದಾರಪ್ಪ…”

“ಅಯ್ಯಯ್ಯೊ…ಮನೆ ಹಾಳ್ ನನ್ಮಕ್ಳ, ಮನೆ ಹಾಳ್ ನನ್ಮಕ್ಳ….ಒಂದೊಂದು ಟಿಕೆಟ್ಟು ಎಪ್ಪತ್ತೈದು, ಹದಿನಾಲ್ಕು ಜನಕ್ಕೆ ಅಂದ್ರೆ ಹುಡುಗಾಟ ಅನ್ಕೊಂಡಿದಾರ ಏನ್ಕತೆ… ನಿಮ್ಮಮ್ಮಂಗಾದ್ರೂ ಬುದ್ಧಿ ಬೇಡ್ವಾ…ಕೋಲೆ ಬಸವನ ಹಾಗೆ ಅವನ್ಯಾವನೊ ಗೋಸುಂಬೆ ಹೇಳ್ದಾ ಅಂತಾ ಕೇಳ್ತಾ ಹೋಗಿದಾಳಲ್ಲಾ, ರಾಮ ರಾಮ….”

” ನಂಗೂ ಯಾಕೊ ಒಂಥರ ಅನ್ನುಸ್ತಪ್ಪಾ…ಅದಕ್ಕೆ ಯಾವುದಕ್ಕೂ ನಿನಗೆ ಹೇಳ್ಬಿಡೋಣ ಅಂತ ಪೋನ್ ಮಾಡ್ದೆ ಅಪ್ಪಾ…ಪೋನಿಡ್ಲಾಪ್ಪಾ, ನಿಂಗೆ ಮೀಟಿಂಗಿಗೆ ಲೇಟಾಗುತ್ತೆ….”

“ಮಗಳೆ, ಮಿಟೀಂಗ್ ಮನೆ ಹಾಳಾಯ್ತು…ಇಲ್ಲಿ ನನ್ನ ಸರ್ವನಾಶ ಆಗೋಗ್ತಾ ಇದೆ….ನನಗೊಂದು ಹೆಲ್ಪು ಮಾಡ್ತೀಯಾ ಪುಟ್ಟಾ….”

“ಏನಪ್ಪಾ ಅದು? ಮನೆಲಿರೊ ಟಿಕೆಟ್ಟುನ ನನ್ನ ಫ್ರೆಂಡ್ಸಿಗೆಲ್ಲಾ ಮಾರ್ಕೊಡ್ಬೇಕಾ…ನಂಗೆ ತುಂಬಾ ಫ್ರೆಂಡ್ಸ್ ಇದಾರಪ್ಪಾ…ಫಿಫ್ಟಿ ಪರ್ಸೆಂಟು ಡಿಸ್ಕೌಂಟು ಅಂದ್ರೆ ಎಲ್ಲಾ ನಾನೂ, ತಾನೂ ಅಂತ ಮೇಲ್ಬಿದ್ದು ತೊಗೊತಾರಪ್ಪ…”

“ಸದ್ಯಕ್ಕೆ ಅದು ಬೇಡಾ ಮಗಳೆ…ಹೇಗಾದ್ರೂ ಮಾಡಿ ನಿಮ್ಮಮ್ಮನ್ನ ಹೊಸ ಟಿಕೆಟ್ಟು ತೊಗೊಳ್ದೆ ಇರೊ ತರ ಬ್ರೇಕು ಹಾಕ್ಸು….”

“ಅಪ್ಪಾ ಮತ್ತೆ ಯುನಿವರ್ಸಲ್ಲೂ…”

” ನಾನು ಪೂರ್ತಿ ಹೇಳೊದನ್ನ ಕೇಳೊ ಮಗಳೆ ಮೊದಲು…..ನೀನು ನಿಮ್ಮಮ್ಮನ್ನ ಹಿಡಿದು ಮೊದಲು ಆ ಕ್ರೆಡಿಟ್ ಕಾರ್ಡು ಕಿತ್ತು ಕೈಗಿಟ್ಟುಕೊ…..ಅದೊಂತರ ಏತಿ ಅಂದ್ರೆ ಪ್ರೇತಿನ್ನೊ ಜಾತಿ….”

“ಅಮ್ಮನ್ನ ಬೈಬೇಡಾಪ್ಪ…”

“ಸರಿ ಕೇಳಮ್ಮಾ…..ನಾನು ಈ ಮೀಟಿಂಗನ್ನ ಕ್ಯಾನ್ಸಲ್ ಮಾಡಿಸಿಬಿಟ್ಟು, ಇದೊ ಈಗ್ಲೆ ಟ್ಯಾಕ್ಸಿ ತಗೊಂಡು ಮನೆಗೆ ಹೋಗಿ ಟಿಕೆಟ್ಟು ತಗೊಂಡು ಬರ್ತೀನಿ ಒಂದರ್ಧ ಮುಕ್ಕಾಲು ಗಂಟೆ ಒಳಗೆ ..ಅಲ್ಲಿತನಕ ಏನೂ ಎಡವಟ್ಟು ಮಾಡದೆ ತೆಪ್ಪಗಿರೋಕೆ ಹೇಳು, ಆ ಮೊದ್ಮಣಿಗೆ…”

“ಆಗ್ಲಪ್ಪಾ..ಆದ್ರೆ ಬೇಗಾ ಬಾರಪ್ಪ …ಒಳಗೆ ತುಂಬಾ ದೊಡ್ಡ ‘ಕ್ಯೂ’ ಇರುತ್ತೆ…ಈಗ್ಲೆ ನಾವು ತುಂಬಾ ಲೇಟು….”

“ಸರಿಯಮ್ಮ..ಇದೋ ಈಗ ಹೊರಟೆ……”

“ಸರೀಪ್ಪಾ..ನಾನು ಅಮ್ಮಂಗೆ ಹೇಳ್ತಿನಿ…ಬೈ…ಬೈ….”

ಅಷ್ಟು ಹೇಳಿ ಗುಬ್ಬಣ್ಣ ಸ್ವಲ್ಪ ಹೊತ್ತು ಮಾತು ನಿಲ್ಲಿಸಿ ಮೌನದ ಜತೆ ಬಿಯರು ಹೀರತೊಡಗಿದ…ಬಹುಶಃ ಹಳೆಯದೆಲ್ಲಾ ಸಿನಿಮಾ ರೀಲಿನಂತೆ ನೆನೆಸಿಕೊಳ್ಳುತ್ತಲೆ ಎಲ್ಲರಿಗೂ ಹಿಡಿ ಶಾಪ ಹಾಕುತ್ತಿದ್ದಾ ಅಂತ ಕಾಣುತ್ತೆ.. ನಾನೂ ಎಲ್ಲಾ ಸ್ವಲ್ಪ ಡೈಜೆಸ್ಟಾಗಲಿ ಅಂತ ಸುಮ್ಮನಿದ್ದೆ..ಅಲ್ಲದೆ ಮಾತಾಡುತ್ತಾಡುತ್ತ ಮೂರನೆ ಗ್ಲಾಸು ಖಾಲಿಯಾಗಿತ್ತು, ಬಾಟಲಿಯೂ ಬರಿದಾಗಿತ್ತು…ನಾನು ಮತ್ತೊಂದು ಬಿಯರಿನ ಬಾಟಲಿಗೆ ಆರ್ಡರು ಕೊಟ್ಟು ನನ್ನ ವೈನಿನ ಗ್ಲಾಸಿಗೆ ತುಟಿ ತಾಕಿಸುತ್ತ ಮೌನ ಮುರಿದೆ…

” ಗುಬ್ಬಣ್ಣ…ಕೊನೆಗೆ ಮೀಟಿಂಗ್ ಹೇಗೆ ಕ್ಯಾನ್ಸಲ್ ಮಾಡ್ಸಿದ್ಯೊ?”

ಗುಬ್ಬಣ್ಣ ತಗ್ಗಿಸಿದ್ದ ತಲೆಯನ್ನು ನಿಧಾನವಾಗಿ ಮೇಲೆತ್ತಿ , “ನಾವು ಬೇಡಾಂದ್ರೂ ಎಷ್ಟು ತರ ಡ್ರಾಮಾ..ಮಾಡ್ಬೇಕು ನೋಡಿ ಸಾರ್..ಅದೂ ಬೇರೆಯವರ್ಗೊಸ್ಕರ…ಅವರಿಗೆಲ್ಲ ಒಂದು ಇನ್ ಸ್ಟಂಟ್ ಹೊಸಾ ಬುರುಡೆ ಬಿಟ್ಟು, ಯಾರೊ ಕ್ಲೋಸು ರಿಲೆಟೀವ್ಗೆ ತುಂಬಾ ಸೀರಿಯಸ್ಸು , ಎಮರ್ಜೆನ್ಸಿ ಅಂತೆಲ್ಲ ಬಣ್ಣ ಕಟ್ಟಿದೆ….ನಾನು ಪೋನಲ್ಲಿ ಕೂಗಾಡ್ತಾ ಇದ್ದುದ್ದನ್ನೆಲ್ಲಾ ನೋಡ್ತಿದ್ರಲ್ಲಾ, ಬಾಳ ಸೀರಿಯಸ್ಸೆ ಇರ್ಬೇಕು ಅನ್ಕೊಂಡು ‘ಮೊದಲು ಹೋಗಿ, ಈ ಸೆಶನ್ನು ಮುಂದಿನ ವಾರ ಮಾಡೋಣ ‘ ಅಂದ್ರು. ಪುಣ್ಯಕ್ಕೆ ಮಾತಾಡಿದ್ದೆಲ್ಲಾ ಕನ್ನಡದಲ್ಲಿ, ಅದಕ್ಕೆ ಯಾರಿಗೂ ಏನು ಮಾತಾಡಿದ್ದು ಅಂತ ಗೊತ್ತಾಗಲಿಲ್ಲ. ಇದು ನಮ್ಮ ಯುನಿವರ್ಸಲ್ ಕಥೆ ಅಂತೇನಾದ್ರೂ ಗೊತ್ತಗಿದ್ರೆ ಮಾತ್ರ ಅಲ್ಲೆ ಹೂತು ಹಾಕಿ ಬಿಡೋರೊ ಏನೊ….”

“ಅಂತು ಅಲ್ಲಿಂದ ಹೆಂಗೊ ಬಚಾವಾದೆ ಅನ್ನು…”

” ಬಚಾವೆಲ್ಲಿ ಬಂತು ಸಾರು…ಶಿಕಾರಿ ತೋಳದ ಕೈಯಿಂದ ತಪ್ಪಿಸ್ಕೊಂಡು ಸಿಂಹದ ಬಾಯಿಗೆ ಸೇರಿದ ಹಾಗಾಯ್ತು ಅಷ್ಟೆ…ಅಲ್ಲಿಂದ ಟ್ಯಾಕ್ಸಿ ಹಿಡಿದು, ದೂರದಲ್ಲಿರೊ ಜುರಾಂಗ್ ಮನೆಯಿಂದ ಟಿಕೆಟ್ಟು ಹುಡುಕಿ ಎತ್ಕೊಂಡು ಯುನಿವರ್ಸಲ್ ತಲುಪೊ ಹೊತ್ತಿಗೆ ಟ್ಯಾಕ್ಸಿನೆ ಐವತ್ತು ಡಾಲರು ಆಗಿತ್ತು ಸಾರ್….”

“ಹೋಗ್ಲಿ ಟಿಕೆಟ್ಟಾದ್ರು ಹೇಳಿದಂಗೆ ಟಿವಿ ಪಕ್ಕ ಇತ್ತಾ?”

” ಎಲ್ಲಿ ಸಾರ್…ಇರುತ್ತೆ? ನನ ಹೆಂಡ್ತಿ ಬಗ್ಗೆ ನಿಮಗೆ ಗೊತ್ತಿಲ್ವ? ಕೊನೆಗೆ ಅದು ಅಡುಗೆ ಮನೆಲಿ ಸಕ್ಕರೆ ಡಬ್ಬದೊಳಗಿತ್ತು….ಶರ್ಲಾಕ್ ಹೋಂ ತರ ಅದನ್ನು ಪತ್ತೆ ಮಾಡಿ ಎತ್ಕೊಂಡು ಓಡಿ ಹೋದೆ ಸಾರ್…”

” ಸರಿ ಬಿಡು ಅಲ್ಲಿಗೆಲ್ಲಾ ಸುಖಾಂತ ಆಯ್ತಲ್ಲಾ…”

“ಯಾವ ಸೀಮೆ ಸುಖಾಂತ ಸಾರ್…ಹೋಗಿ ಟಿಕೆಟ್ಟು ಕೊಟ್ಟುಬಿಟ್ಟು, ಮನೆಲಾದ್ರೂ ಆರಾಮಾವಾಗಿ ಮಲಗಿಕೊಳ್ಳೋಣವೆಂದ್ರೆ, ಅಲ್ಲಿ ‘ಬರೋದು ಬಂದಿದ್ದೀಯ..ಹೆಂಡ್ತಿ ಮಗಳು ಹೇಗೂ ಜತೆಗಿದಾರೆ….ಇನ್ನು ನೀನೊಬ್ಬನೆ ಏನು ಮಾಡ್ತಿ, ಗುಬ್ಬಣ್ಣ? ನೀನು ಬನ್ಬಿಡೋದೆ ಅಲ್ವ’ ಅಂತ ತಲೆ ತಿಂದು, ನನಗೂ ಎಪ್ಪತ್ತೈದು ಡಾಲರು ಬೋಳಿಸ್ಕೊಳ್ಳೋ ಹಾಗೆ ಮಾಡಿದ್ರು…”

“ವಾರೆಹ್ವಾ ಗುಬ್ಬಣ್ಣ! ಅಂತೂ ನೀನೂ ಯುನಿವರ್ಸಲ್ ದಂಡಯಾತ್ರೆ ಹೊಡೆದುಬಿಟ್ಯಾ ನೆಂಟರ ಜತೆಯಲ್ಲಿ….”

” ಬೇಕಿದ್ದೊ, ಬೇಡದೇನೊ ಹೋಗಿದ್ದೇನೊ ನಿಜ..ಆದರೆ ಹೋದ್ಮೇಲೆ ಯಾಕಾದರೂ ಹೋದೆನೊ ಅನಿಸಿಬಿಟ್ಟಿತು ಸಾರ್…”

“ಯಾಕಪ್ಪಾ..ಅಲ್ಲಿಂದಾಚೆಗೆಲ್ಲಾ ಸುಗಮವಾಗಿರಬೇಕಲ್ಲಾ?”

“ಎಲ್ಲಿ ಬಂತು ಸಾರ್..ಅಜ್ಜಿ ಪಿಂಡಾ…ಯುನಿವರ್ಸಲ್ ಅಂದ್ರೆನು ಅಂತಾನೂ ಐಡಿಯ ಇಲ್ದೆ ಬನ್ಬುಟ್ಟಿದಾರೆ ಸಾರ್…ಮೊದಲು ನ್ಯೂಯಾರ್ಕ್ ಜೋನಿನಲ್ಲಿ ಒಂದು ಬೋಟು ರೈಡು ತರ ಕೂತು ಮೊದಲ ರೌಂಡು ಹಾಕಿದ್ವಿ ಸಾರೂ…ತುಂಬಾ ಸಿಂಪಲ್ಲು…ಆದರೆ ಹಳ್ಳಿ ಜಾತ್ರೆಲೊ , ಎಗ್ಸಿಬಿಷನ್ನಲ್ಲೊ ಗಿರಗಿಟ್ಲೆ ಸುತ್ತಿರೋದ್ ಬಿಟ್ರೆ, ಬೇರೇನೂ ಕಾಣದವುಕ್ಕೆ, ಇಂಥಾದಕ್ಕೆಲ್ಲ ಯೋಗ್ಯತೆಯೆಲ್ಲಿ ಬರಬೇಕು? ಆ ಬೋಟು ರೈಡಿಗೆ ಹೆದರಿ, ಅದುರಿ ಅಲ್ಲಡಿ ಹೋಗಿ ‘ ಅಯ್ಯಯ್ಯಪ್ಪ…ಇಂಥಾದ್ದು ಅಂತ ಗೊತ್ತಿದ್ರೆ ನಾವು ಬರ್ತಾನೆ ಇರ್ಲಿಲ್ಲಪ್ಪ…ಶ್ಯಾನೆ ಭಯವಾಗುತ್ತೆ…ನಾನೊಲ್ಲೆ, ನಾನೊಲ್ಲೆ ಅಂಥ ಡ್ರಾಮ ಮಾಡ್ಕೊಂಡು ಯಾರೂ ಉಳಿದಿದ್ದ ರೈಡು, ಅಡ್ವೆಂಚರ್ಸಿಗೆ ಬರಲೆ ಇಲ್ಲಾ ಸಾರು…ಕೊನೆಗೆ ನಾನೂ, ನನ್ನ ಮಗಳು, ಅವರ ಒಂದಿಬ್ಬರು ಹುಡುಗರಷ್ಟೆ ಎಲ್ಲಾದರಲ್ಲು ಕ್ಯೂನಲ್ಲಿ ಕಾದು, ಕೂತು ಬಂದ್ವಿ…ಟ್ರಾನ್ಸ್ಫಾರ್ಮರ, ಮಮ್ಮಿಸ್ ರಿವೆಂಜ್ ಅದೂ ಇದೂ ಅಂತ ಬರಿ ನಾವು ಮೂರ್ನಾಲ್ಕು ಜನರಷ್ಟೆ ಹೋಗಿಬಂದಿದ್ದು…..”

“ಅಯ್ಯೊ ಶಿವನೆ, ಹಾಗಾದ್ರೆ ಉಳಿದವರೆಲ್ಲಾ ಏನು ಮಾಡ್ತಿದ್ರೂ ಮತ್ತೆ?”

“ಮತ್ತೇನು ಮಾಡ್ತಾರೆ ಸಾರು….ನಾವು ಬರುವ ತನಕ ಆಚೆನೆ ಕಾಯೋದು…ಕೆಲವು ಕೂತು ನೋಡೊ ಆಟ ಇತ್ತಲ್ಲ -‘ವಾಟರು ವರ್ಡ್’, ‘ಲಾಂಗ್ ಲಾಂಗ್ ಎಗೊ’ ತರದ್ದು ಅದು ನೋಡಿದ್ದು ಬಿಟ್ರೆ ಬೇರೇನೂ ಇಲ್ಲಾ ನೋಡಿ….ಕೊನೆಗೆ ಎಲ್ಲಾರ್ನೂ ಬಲವಂತ ಮಾಡಿ ಹಂಗಿಸಿದ್ದಿಕ್ಕೆ…ಎಲ್ಲ ಬಹಳ ಧೈರ್ಯಾ ಮಾಡಿ, ‘ಮೆರ್ರಿ ಗೋ ರೌಂಡಲ್ಲಿ ‘ ಬಂದು ಅದೂ ಆ ಸೀಟುಗಳ ಮೇಲೆ ಕೂತ್ಕೊಂಡ್ರು…ಪ್ರಾಣಿಗಳ ಮೇಲೂ ಹತ್ತಿ ಕೂರಲಿಲ್ಲ ಒಬ್ಬರಾದ್ರು…ಅಲ್ಲು ನಾನು ನನ್ನ ಮಗಳೆ ಸರಿಯಾಗಿ ಆಡಿದ್ದು ಅಂದ್ರೆ…”

” ದುಡ್ಡೆಲ್ಲ ಹಾಳು ವೇಸ್ಟಾಗಿ ಹೋಯ್ತಲ್ಲೊ ಗುಬ್ಬಣ್ಣ…”

” ಕಸದ ತೊಟ್ಟಿಗೆ ಹಾಕಿದ ಹಾಗಾಯ್ತು ಸಾರು….ಇದು ಸಾಲದೂಂತಾ ಊಟದ ಹೊತ್ತಿಗೆ ಸರಿಯಾಗಿ ನಮಗೆ ಇಂಡಿಯನ್ ಪುಡ್ಡೆ ಬೇಕೂಂತ ಒಂದೆ ವರಾತ. ಅಲ್ಲಿ ಇಂಡಿಯನ್ ರೆಸ್ಟೊರೆಂಟೆಲ್ಲಿ ಹುಡುಕೋಣ ಸಾರ್….ಕೊನೆಗೆ ಈಜಿಪ್ಟ್ ಅಟ್ರಾಕ್ಷನ್ ಎದುರು ‘ಓಯಸಿಸ್’ ಅಂಥ ಇರೊ ಮುಸ್ಲೀಮ್ ಶಾಪೊಂದರಲ್ಲಿ, ಬಿರಿಯಾನಿ, ಬಟರ್ ಚಿಕನ್, ಮಸಲಾ ಮಟನ್ ಹಾಗೆ ಹೀಗೆ ಅಂತ ಏನೆಲ್ಲಾ ಇತ್ತು…ಸರಿ, ಎಲ್ಲ ಒಳಗೆ ಸೇರಿ ಹೊಡೆದಿದ್ದೆ, ಹೊಡೆದಿದ್ದು…”

” ಕೊನೆಗೆ ಆ ಬಿಲ್ಲು ನಿನ್ನ ತಲೆಗೆ ಕಟ್ಟಿತೂ ಅನ್ನು”

” ಹೌದು ಸಾರು, ಮುನ್ನೂರು ನಾನೂರು ಡಾಲರು ದಿಢೀರ ಭಸ್ಮ….ಒಳಗೆಲ್ಲ ಎಕ್ಸ್ಪೆನ್ಸಿವ್ ಬೇರೆ…ಅಂತೂ ಕೊನೆಗೆ ಚೆನ್ನಾಗಿ ತಿನ್ಸಿ, ಗಿರಗಿಟ್ಲೆ ಆಡ್ಸಿ ಚೂರು ಪಾರು ಶೋ ತೋರಿಸಿ ಕರೆದುಕೊಂಡು ಬಂದದ್ದಾಯ್ತು…ಅಷ್ಟೊಂದು ದುಡ್ಡು ಸುರಿದೂನೂ…”

“ಹಾಳಾಗಿ ಹೊಗ್ಲಿ ಬಿಡು ಗುಬ್ಬಣ್ಣ..ಅಂತೂ ನೀವಾದ್ರೂ ನೋಡಿದ ಹಾಗೆ ಆಯ್ತಲ್ಲಾ……ಇದೆಲ್ಲದರ ಮಧ್ಯೆ ಆ ಅಸ್ಪತ್ರೆ ಕತೆ ಎಲ್ಲಿಂದ ಬಂತಪ್ಪಾ?”

” ಸಾರ್…ಇಷ್ಟರವರೆಗೂ ಹೇಳಿದ್ದೇನೆ ಒಂದು ದೊಡ್ಡ ಪ್ರಸಂಗ…ಅದರ ಜತೆಗೆ ಈಗಾ ಆ ಆಸ್ಪತ್ರೆ ಕಥೆನೂ ಹೇಳೊಕೆ ಮೂಡಿಲ್ಲಾ…ಸಾರ್…ನೆಕ್ಸ್ಟು ಮೀಟಿಂಗ್ನಲ್ಲಿ ಆ ಅಜೆಂಡಾ ಇಟ್ಟುಕೊಳ್ಳೊನ ಈ ಸಾರಿಗೆ ಇಷ್ಟು…ಸಾಕು”

“ಸರಿ ಗುಬ್ಬಣ್ಣ….ನಿನ್ನಿಷ್ಟ…ಈಗ ನಿನ್ನ ಕೊನೆ ಗ್ಲಾಸು ಮುಗಿಸು…ಊಟಕ್ಕೆ ಇಲ್ಲೆ ಆರ್ಡರು ಮಾಡಿದೀನಿ… ಊಟ ಮುಗಿಸಿ ಹೊರಟು ಬಿಡೋಣ…ಬೇಕಿದ್ರೆ, ನನ್ನ ರೂಮಲ್ಲಿ ರೆಸ್ಟು ತೊಗೊಂಡು ಸಾಯಾಂಕಾಲ ಆದ ಮೇಲೆ ಮನೆಗ್ಹೋಗುವಿಯಂತೆ…”

“ಸರಿ ಸಾರ್…ಅಂದ ಹಾಗೆ ಇನ್ನೊಂದು ವಿಷಯ; ನಾವು ಮೂರು ಜನರೂ ಸೇರಿ ಯುನಿವರ್ಸಲ್ ವರ್ಷದ ಸೀಸನ್ ಟಿಕೆಟ್ಟು ತಲಾ ಇನ್ನೂರು ಡಾಲರು ಕೊಟ್ಟು ಖರೀದಿಸಿಬಿಟ್ಟೆವು…”

” ಆಹಾ…! ಯಾಕಣ್ಣ ? ಯೂನಿವರ್ಸಲ್ ಅಷ್ಟೋಂದು ಇಷ್ಟವಾಗೋಯ್ತ?”

“ಅಯ್ಯೊ..ಅದಿನ್ನೊಂದು ಕತೆ ಸಾರ್….”ನಿಟ್ಟುಸಿರಿಟ್ಟ ಗುಬ್ಬಣ್ಣ…” ಈ ಹಾಳು ಪೀಡೆಗಳೆಲ್ಲ ಬಂದು ಹೋದರಲ್ಲಾ, ಹೋಗಿ ಏನೇನು ಕೊಚ್ಚಿಕೊಂಡರೊ, ಏನೇನು ಹೇಳಿದರೊ ಗೊತ್ತಿಲ್ಲಾ ಸಾರ್….ನಮಗಂತೂ ಪೋನ್ ಮೇಲೆ ಪೋನ್ ಊರಿಂದ….”

“ಏನಂಥ?”

“ಎಲ್ಲಾ ಹತ್ತಿರ ದೂರದ ಉಳಿದ ನೆಂಟರೂ ಪೋನು ಮಾಡಿ, ‘ತುಂಬಾ ಚೆನ್ನಾಗಿ ನೋಡ್ಕೊಂಡ್ರಂತೆ… ನಮ್ಮನ್ನೆಲ್ಲಾ ಕರೀಲೆ ಇಲ್ಲಾ, ನಾವು ಸದ್ಯಕ್ಕೆ ಬರೋಣಾಂತಿದಿವಿ ಸಾರು, ಬರೋಕು ಮುಂಚೆ ಹೇಳ್ತೀವಿ’ ಅಂತ ಒಂದೆ ವರಾತಾ, ಅದೂ ಒಬ್ರಾದ್ಮೇಲೊಬ್ರು!”

“ಅಯ್ಯೊ ಭಗವಂತ….!”

” ಅದಕ್ಕೆ ಪದೆ ಪದೆ ಹೋಗಿ ಹೊಸ ಟಿಕೆಟ್ಟು ಕೊಳ್ಳೊದ್ಬೇಡಾ ಅಂತ ಹೇಳಿ ವರ್ಷದ ಟಿಕೆಟ್ ಖರೀದಿಸಿಬಿಟ್ಟೆ…. ಕನಿಷ್ಟ ಯಾರ ಜತೆ ಹೋದ್ರು ನಮಗೆ ಮಾತ್ರ ತಿರುಗಿ ಕೊಳ್ಳೊ ಹಂಗಿರೊಲ್ಲಾ… ಜತೆಗೆ ಬರ್ತೀವಿ ಅನ್ನೊರನ್ನ ಹೇಗಾದ್ರೂ ಮಾಡಿ ತಡೆದು ನಿಲ್ಸೋದಂತು ನಡೆದೆ ಇದ್ದೆ ಇರುತ್ತೆ; ಇದು ಬರಿ ಬ್ಯಾಕಪ್ಪು ಪ್ಲಾನು..”

” ಸರಿಯಪ್ಪಾ ಏಡುಕೊಂಡಲವಾಡ…! ನಿನಗೆ ಅಡ್ಡಬೀಳಬೇಕೊ,ಅಥವಾ ಆ ಭಗವಂತ ಅವನಿಗೆ ಬೀಳಬೇಕೊ ಗೊತ್ತಾಗ್ತಾ ಇಲ್ಲಾ……”

“ನೀವ್ಯಾರಿಗಾದರೂ ಬೀಳಿ ಸಾರ್…ಈಗ ಹೊಟ್ಟೆ ಹಸಿವಾಗೋಕೆ ಶುರುವಾಗಿ ತಾಳ ಕುಟ್ತಾ ಇದೆ ಒಳಗೆ….”

“ಸರಿಯಪ್ಪಾ ನಿನ್ನ ಕಥೆ…ನಿನ್ನ ಕೊನೆ ಗ್ಲಾಸು ಬೀರು ಮುಗಿಸು…ಡೈನಿಂಗು ಹಾಲಿಗೆ ಹೋಗೋಣ…ಊಟ ರೆಡಿಯಿರುತ್ತೆ ಈಗ…”

“ಹೀಗಾಗಿದೆ ನೋಡಿ ಸಾರ್ ನನ್ನ ಕಥೆ…ಬಂದ ನೆಂಟರೆಲ್ಲಾ ಊರಿಗೆ ವಾಪಸ್ಸಾಗುವಷ್ಟರಲ್ಲಿ ಬೊನಸ್ಸೆಲ್ಲಾ ಖಾಲಿ…ಆ ಬೇಜಾರಿನ್ನೂ ಆರೊ ಮೊದಲೆ ಇನ್ನೊಂದು ಬ್ಯಾಚು ಕಮಿಂಗು ಅನ್ನೊ ಸುದ್ದಿ….ಅದಕ್ಕೆ ಮುನ್ನೆಚ್ಚರಿಕೆಯಾಗಿ ನಿಮ್ಮತ್ರ ಮೊದಲೆ ಕೇಳಿಬಿಡೋಣಾ ಅನ್ಕೊಂಡೆ ಸಾರ್…”

“ಏನನ್ನಪ್ಪಾ?”

“ಈಗ ಎಮರ್ಜೆನ್ಸೀಗೆ ಅಂತ ಯಾವುದಕ್ಕೂ ಒಂದಿಷ್ಟು ಕೈ ಸಾಲಾ ಕೊಟ್ಟಿರ್ತೀರಾ..ಸಾರ್…” ದೈನ್ಯತೆಯಲ್ಲಿ ನುಡಿದ ಗುಬ್ಬಣ್ಣ.

ಗುಬ್ಬಣ್ಣ ಇಡಿ ಬಾಟಲನೆತ್ತಿ, ಲೋಟಕ್ಕೆ ಸುರಿದುಕೊಂಡು; ಒಂದೆ ಸಾರಿಗೆ ಗಟಗಟನೆ ಕುಡಿಯುತ್ತಿದ್ದುದನ್ನು ನೋಡುತ್ತಲೆ ನಾನು – “ಗುಬ್ಬಣ್ಣಾ ಸಾಲದ ವಿಷಯ ಕುಡಿದ ಹೊತ್ನಲ್ಲಿ ಮಾತಾಡಬಾರದಪ್ಪ” ಅಂತ ಏಮಾರಿಸಿ, “ಶ್ರೀಮದ್ ರಮಾರಮಣ ಗೋವಿಂದಾ…” ಎಂದೆ!

ಅದೆ ರಾಗದಲ್ಲಿ “ಗೋವಿಂದಾ”ಎಂದವನೆ ಗ್ಲಾಸು ಕೆಳಗಿಟ್ಟ ಗುಬ್ಬಣ್ಣ, “ನಡೆಯಿರಿ ಸಾರ್…ಈಗ ಊಟಕ್ಕೆ ಹೋಗೋಣಾ” ಎಂದು ಎದ್ದು ನಿಂತ. ನಾನೂ ಜತೆಗೆ ನಡೆದೆ ‘ಅವನೆಲ್ಲಾ ಪ್ರಾಬ್ಲಮ್ಮಿಗೆ ನಾನೆ ಯೂನಿವರ್ಸಲ್ ಸಾಲ್ವೆಂಟ್ ಅನ್ನೊ ತರಹ’!

——————————————————————————————————————————
ನಾಗೇಶ ಮೈಸೂರು, 11.05.2013, ಸಿಂಗಾಪುರ
naagESa maisuuru, 11.05.2013, siMgaapura
——————————————————————————————————————————

ಕೊ.ಕೊ: ನಾನು ಮಾತನಾಡದೆ ಜತೆಗೆ ನಡೆಯುತ್ತಾ, ನನ್ನ ಕಿರು ಹೊತ್ತಗೆ ತೆಗೆದು ಗುರುತು ಮಾಡಿಕೊಂಡೆ ಟೈಟಲ್ : “ಗುಬ್ಬಣ್ಣನ ಯೂನಿವರ್ಸಲ್ ದಂಡಯಾತ್ರೆಗಳು…”

2 thoughts on “00027 – ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 02)”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s