00028 – ಸಿಂಗನ್ನಡಿಗರಿಂದ ಸಿಂಗನ್ನಡಿಗರಿಗಾಗಿ! – ಸಿಂಗಾರ ಉತ್ಸವ 2013

———————————————————————————————————————————
ಸಿಂಗಾರೋತ್ಸವ – 2013 ರ ವರದಿ (ಇದು ಕನ್ನಡ / One India – Kannada ಆನ್ಲೈನ್ ಪತ್ರಿಕೆಯಲ್ಲಿ ಪ್ರಕಟಿತವಾದ ವರದಿ)
———————————————————————————————————————————

ಕನ್ನಡ ಸಂಘ (ಸಿಂಗಪುರ)ವು ವಾರ್ಷಿಕವಾಗಿ ಆಯೋಜಿಸುವ ಸಿಂಗಾರ ಉತ್ಸವ ಸರಣಿಯಲ್ಲಿ ದಾಖಲೆಯೋಪಾದಿಯಲ್ಲಿ ಇನ್ನೂರ ಐವತ್ತಕ್ಕೂ ಹೆಚ್ಚು ಸಿಂಗನ್ನಡಿಗರ ಭಾಗವಹಿಸುವಿಕೆ ಮತ್ತು ಪ್ರತಿಭಾಪ್ರದರ್ಶನದಿಂದ ಅಭೂತಪೂರ್ವ ಕಲಾಪ್ರದರ್ಶನ ವೇದಿಕೆಯಾಗಿ ಪರಿಣಮಿಸಿದ “ಸಿಂಗಾರೋತ್ಸವ – 2013” ಹಬ್ಬ, ಏಪ್ರಿಲ್ 27ರ ಶನಿವಾರ, ಸಿಂಗಪುರದ ‘ಬುಕಿತ್ ಮೇರಾ ಸೆಂಟ್ರಲ್’ ನಲ್ಲಿರುವ ‘ಸ್ಪ್ರಿಂಗ್ ಸಿಂಗಪುರ’ ಸಭಾಂಗಣದಲ್ಲಿ ಸಿಂಗನ್ನಡಿಗರ ಸಮಕ್ಷಮದಲ್ಲಿ ಅದ್ದೂರಿ, ವೈಭವ, ಉತ್ಸಾಹ, ಉಲ್ಲಾಸಗಳಿಂದ ಅಮೋಘವಾಗಿ ಆಚರಿಸಲ್ಪಟ್ಟಿತು. ಹಿಂದಿನ ವರ್ಷಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಕೋರಿ ಬಂದ ಕಲಾವಿದ ಹಾಗೂ ಪ್ರತಿಭಾವಂತರ ದೊಡ್ಡ ಹಿಂಡಿನಿಂದಾಗಿ ಕಾರ್ಯಕ್ರಮದ ಹಂದರವನ್ನು ಸುಮಾರು ಆರು ಗಂಟೆಗಳಿಗೂ ಮೀರಿದ ‘ಬಿಡುವಿಲ್ಲದ ತಡೆರಹಿತ’ ಕಾರ್ಯಕ್ರಮವಾಗಿ ಮಾರ್ಪಡಿಸಬೇಕಾಗಿ ಬಂದದ್ದು, ಸಿಂಗಾರ ವಾರ್ಷಿಕ ಹಬ್ಬ ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಜನಪ್ರಿಯಗೊಳ್ಳುತ್ತ ಬರುತ್ತಿರುವುದಕ್ಕೆ ಸಾಕ್ಷಿಯೇನೊ ಎಂಬಂತಿತ್ತು. ಆ ಸಂಭ್ರಮಾಚರಣೆಗೆ ಕಲಶವಿಟ್ಟಂತೆ ಮಧ್ಯಾಹ್ನ ಮೂರುವರೆ ಗಂಟೆಯ ಆಸುಪಾಸಿನಲ್ಲಿ ಆರಂಭವಾದ ಕಾರ್ಯಕ್ರಮವನ್ನು ಸರಿಸುಮಾರು ರಾತ್ರಿ ಹತ್ತು ಗಂಟೆಯವರೆಗೆ ಮನಸಾರೆ ಆಸ್ವಾದಿಸಿದ ಸಿಂಗನ್ನಡಿಗರು, ಅದು ತಮ್ಮ ಮನೆಯ ಸಮಾರಂಭವೇನೋ ಎನ್ನುವಂತಹ ಆತ್ಮೀಯ ವಾತಾವರಣವನ್ನು ಮೂಡಿಸಿ, ಎಂದಿನಂತೆ ಕನ್ನಡಿಗರ ಸರಳತೆ, ಸಜ್ಜನಿಕೆ, ಔದಾರ್ಯಗಳ ತುಣುಕಿನ ಪರಿಚಯ ಮಾಡಿಕೊಟ್ಟರು.

ಸಭಿಕರೆಲ್ಲಾ ಒಬ್ಬೊಬ್ಬರಾಗಿ ಸಭಾಂಗಣಕ್ಕೆ ಬರಲಾರಂಭಿಸುತ್ತಿದ್ದಂತೆ ‘ಬಂದೆವು ನಾವು ನಿಮ್ಮ ಚರಣಕ್ಕ….’ ಹಾಡಿನ ಗಣೇಶನ ಆರಾಧನೆಯೊಂದಿಗೆ ಹಲವಾರು ಪುಟಾಣಿಗಳು, ಮಕ್ಕಳು ಹಾಗೂ ಉತ್ಸಾಹಿ ಮಹಿಳೆಯರ ಅಂದಚಂದದ, ರಂಗುರಂಗಿನ ದಿರುಸಿನಲ್ಲಿ ಅಲಂಕಾರಭರಿತ ಆಕರ್ಷಕ ನೃತ್ಯದೊಂದಿಗೆ “ಅದ್ದೂರಿ ಹಾಗೂ ವೈಭವಪೂರ್ಣ” ಆರಂಭ ಕಂಡಿತು. ನಂತರ ರಸಸ್ವಾದನೆಗಡ್ಡಿ ಮಾಡದೆ, ಸಾಲಂಕೃತವಾಗಿ ಕಾದುನಿಂತ ಕಾರ್ಯಕ್ರಮಗಳಿಗೆ ಅನ್ಯಾಯವಾಗದಿರಲೆಂದು ಸಂಘದ ಅಧ್ಯಕ್ಷರಾದ ಡಾ. ವಿಜಯಕುಮಾರ್‌ರವರು ತಮ್ಮ ಕಿರು ಸ್ವಾಗತ ಭಾಷಣವನ್ನೂ ಕ್ಷಿಪಣಿ ವೇಗದಲ್ಲಿ ಮುಗಿಸಿ ಮುಂದಿನ ಕಾರ್ಯಕ್ರಮಗಳಿಗೆ ಚಾಲನೆ ಕೊಟ್ಟರು. ಹಿಂದೆಯೆ ತೆರೆಯ ಮೇಲೆ ಕಾರ್ಯಕ್ರಮದ ಪೂರ್ವಸಿದ್ದತೆಗಳ ‘ತುಣುಕು ಸಂಗಮ’ವು ಇಣುಕಿ ಮುಂದಿನ ರಸಪೂರ್ಣ ಪ್ರದರ್ಶನಗಳಿಗೆ ನಾಂದಿ ಹಾಡಿತು.

ಇಡೀ ಕಾರ್ಯಕ್ರಮದ ಹಂದರವನ್ನು ನಾಲ್ಕು ಪ್ರಮುಖ ಗುಂಪುಗಳಾಗಿ ವಿಭಾಗಿಸಿ (ಏಕವ್ಯಕ್ತಿ ಪ್ರದರ್ಶನ, ಸಮೂಹ ಪ್ರದರ್ಶನ, ವಸ್ತ್ರ-ವೈಯಾರ ಪ್ರದರ್ಶನ, ನಾಟಕ-ಕಿರು ಪ್ರಹಸನ-ನೃತ್ಯ ರೂಪಕ) ಆಯಾ ವಿಭಾಗದಲ್ಲಿ ಸುಲಭವಾಗಿ ಆಯ್ದುಕೊಳ್ಳಲನುವಾಗುವಂತೆ ‘ವಿಷಯಾಧಾರಿತ’ ಉಪವಿಭಾಗಗಳಾಗಿ (ಕರ್ನಾಟಕ ಜಿಲ್ಲೆ / ಪ್ರಾಂತ್ಯ, ಕರ್ನಾಟಕದ ಹಬ್ಬಗಳು, ಭಾರತದ ಪೌರಾಣಿಕ ಹಿನ್ನಲೆ, ಕರ್ನಾಟಕದ ಶ್ರೇಷ್ಟ ವ್ಯಕ್ತಿತ್ವಗಳು, ಎಪ್ಪತ್ತರಿಂದ ತೊಂಭತ್ತರ ದಶಕದ ಕನ್ನಡ ಹಾಡುಗಳು, ಕನ್ನಡ ಸಾಹಿತ್ಯ ಮತ್ತು ಇತರೆ) ವಿಂಗಡಿಸಿಕೊಡಲಾಗಿತ್ತು. ಈ ರೀತಿಯ ವಸ್ತು-ವೈವಿಧ್ಯದ ಆಯ್ಕೆಗಳ ಸಾಧ್ಯತೆಯಿಂದಾಗಿ ಭಾಗವಹಿಸಿದವರಿಗೆಲ್ಲಾ ಒಂದಲ್ಲ ಒಂದು ವಿಷಯ ಸಾಕಷ್ಟು ಸುಲಭದಲ್ಲಿ ಆಯ್ದುಕೊಳ್ಳಲು ಸಾಧ್ಯವಿದ್ದುದರಿಂದಲೋ ಏನೋ, ಪ್ರದರ್ಶನ ನೀಡಲಿಚ್ಚಿಸುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿತ್ತು. ಸಿಂಗಾರೋತ್ಸವದ ಗಮನೀಯ ಅಂಶವೆಂದರೆ ಅಷ್ಟು ಅಗಾಧ ಸಂಖ್ಯೆಯಲ್ಲಿ ಮಕ್ಕಳು ಹಾಗೂ ಪುಟಾಣಿಗಳು ಭಾಗವಹಿಸಿ, ಮನರಂಜಿಸಿದ್ದು. ತಾಯಿನೆಲದ ನಂಟಿನಿಂದ ದೂರವಾಗಿ ಬೆಳೆಯುತ್ತಿರುವ ಕುಡಿಗಳಿಗೆ ಹೇಗಾದರೂ ಮಾಡಿ ನಾಡು, ನುಡಿ, ಕಲಾಚಾರ, ಆಚಾರ, ವಿಚಾರಗಳನ್ನು ಆಪೋಶಿಸುವ ಅವರ ಪೋಷಕರುಗಳ ಹಿನ್ನಲೆ, ಶ್ರಮ, ಶ್ರದ್ದೆ, ಛಲ, ತಾಯ್ನಾಡಿನ ಪ್ರೇಮ, ಕಳಕಳಿ ಆ ದಿನದ ಪ್ರತಿಯೊಂದು ಪ್ರದರ್ಶನದಲ್ಲೂ ಅನುರಣಿತಗೊಂಡಿತ್ತು. ಪೂರ್ತಿ ಕಾರ್ಯಕ್ರಮದಲ್ಲಿ ಕಳಪೆ ಎನ್ನಬಹುದಾದ ಒಂದೇ ಒಂದು ಪ್ರದರ್ಶನವೂ ಇರದೆ ಇದ್ದದ್ದೂ ಅವರೆಲ್ಲರ ಸಿದ್ದತೆ, ಶ್ರಮಗಳಿಗೆ ಜೀವಂತ ಸಾಕ್ಷಿಯಾಗಿತ್ತೆನ್ನಬಹುದು. ಅದಕ್ಕಿಂತಲೂ ಕುತೂಹಲಕರ ವಿಷಯವೆಂದರೆ, ಮಕ್ಕಳಷ್ಟೆ ಉತ್ಸಾಹ, ಉಲ್ಲಾಸಗಳಿಂದ ಸಮೂಹದ ಜತೆಯಲ್ಲಿ ಅಥವಾ ಏಕವ್ಯಕ್ತಿ ಪ್ರದರ್ಶನಗಳಲ್ಲಿ ಪ್ರತಿಭೆ ಹೊರಗೆಡವಿದ ದೊಡ್ಡವರು ಸಹ ಕಾರ್ಯಕ್ರಮಕ್ಕೆ ಇನ್ನು ಹೆಚ್ಚಿನ ಮೆರುಗು ತಂದಿತ್ತರು.

ಅಂದಿನ ದಿನದ ದೃಶ್ಯ ವೈಭವದಲ್ಲಿ ಏನಿತ್ತು ಎಂದು ಹುಡುಕುವುದಕ್ಕಿಂತ, ಏನಿರಲಿಲ್ಲ ಎಂದು ಹುಡುಕುವುದೆ ಸುಲಭವೆಂದು ಕಾಣುತ್ತದೆ – ಅಷ್ಟೊಂದು ವೈವಿಧ್ಯಗಳ ತುಂಬು ಕೊಡಗಳಿಂದಾಗಿ. ಭರತ ನಾಟ್ಯ, ಹಾಡುಗಾರಿಕೆ,ದೇವರ ಭಕ್ತಿ ಗೀತೆ, ಬಗೆಬಗೆಯ ನೃತ್ಯ / ಸಮೂಹ ನೃತ್ಯ, ಜುಗಲ್ ಬಂದಿ ಸಮೂಹ ಗಾಯನ, ಪಿಟೀಲು ವಾದನ, ಕೀಬೋರ್ಡ್ ವಾದನ, ತಬಲಾ ಹಾಗೂ ತರತರದ ವಾದ್ಯ ಪ್ರಕಾರಗಳ ಝೇಂಕಾರ, ಚಲನ ಚಿತ್ರದ ಹಾಡುಗಳು, ಭಾವಗೀತೆಗಳು, ಹಿಂದೂಸ್ತಾನಿ ಸ್ವರಮಾಲ, ಬಡಗ ಜಾನಪದ ನೃತ್ಯ – ಹೀಗೆ ಸಿಂಗನ್ನಡಿಗರಿಗೆ ಬಗೆಬಗೆ ಭಕ್ಷ್ಯ, ಭೋಜನದ ‘ಬಫೆ’ಯ ರಸದೌತಣ ನೀಡಿತು. ಸಮಾರಂಭದುದ್ದಕ್ಕೂ ಅನೇಕ ಪ್ರತಿಭೆಗಳು ತಮ್ಮ ಕಲಾ ಕೌಶಲದಿಂದ ಮನಸೆಳೆದರು. ಸ್ವಚ್ಚವಾಗಿ ಶುದ್ಧವಾಗಿ ಶ್ಲೋಕ ಪಠನದಲ್ಲಿ ಚಪ್ಪಾಳೆ ಗಿಟ್ಟಿಸಿದ ಪುಟಾಣಿ ಅನಘ ಬಾಳೆಹಿತ್ಲು, ತಪ್ಪಿಲ್ಲದೆ ಮುದ್ದುಮುದ್ದಾಗಿ ‘ಶುಕ್ಲಾಂ ಭರದರಂ’ ಹಾಡುತ್ತಲೆ, ‘ಗಣೇಶ ಬಂದ ಕಾಯಿ ಕಡುಬು ತಿಂದ’ ಹಾಡಿ ರಂಜಿಸಿದ ಮಾನ್ಯ ವೆಂಕಟೇಶ್, ನಾಟ್ಯದಲ್ಲಿ ತಮ್ಮ ಉತ್ತಮ ಭಾವ ಭಂಗಿಯಿಂದ ಮನ ಸೆಳೆದ ಇಶಾಚಂದ್ರ, ನೋಡುಗರಷ್ಟೆ ಮೋದದಿಂದ ಸ್ವತಃ ತಾವೇ ಆನಂದದಿಂದ ಆಸ್ವಾದಿಸುತ್ತ ‘ಶ್ರೀ ಗಣೇಶಾಯ ಏಕದಂತಾಯ..’ದಲ್ಲಿ ಜೋಡಿ ನರ್ತನ ಪ್ರದರ್ಶನದಿಂದ ಮುದ ನೀಡಿದ ವೃಂದಾ ಕುಲಕರ್ಣಿ ಮತ್ತು ಪ್ರಜ್ವಲಾ ಕನಕೇಶ್, ಲೀಲಾಜಾಲ ಭರತನಾಟ್ಯ ಪ್ರದರ್ಶನದಿಂದ ಮನಸೆಳೆದ ಅನನ್ಯ ಬಾಳೆಹಿತ್ಲು – ಹೀಗೆ ಒಂದರ ಹಿಂದೆ ಒಂದರಂತೆ ಹರಿದು ಹೋದ ಕಲಾ ರಸಸ್ವಾದನೆಯಲ್ಲಿ ಆರು ಗಂಟೆಗಳು ಆರೆ ಕ್ಷಣಗಳಂತೆ ಕಳೆದಂತೆನಿಸಿದ್ದು ಅತಿಶಯವೇನಲ್ಲ. ಆ ರಸಲಹರಿಯಲ್ಲೆ ಹರಿದು ಬಂದ ಪುಟಾಣಿಗಳ ‘ಸಹ್ಯಾದ್ರಿ ಕಾಡಿನಲಿ..’ ಪಕ್ಷಿ, ಪ್ರಾಣಿಗಳ ರಂಗು ರಂಗಿನ ಲೋಕಕ್ಕೆ ಪ್ರೇಕ್ಷಕರನ್ನು ಕರೆದೊಯ್ದು ಜತೆಗೆ ಚಪ್ಪಾಳೆ ತಟ್ಟಿಸಿ ಹಾಡಿಸಿತು. ಅದೇ ಗುಂಗಿನಲ್ಲಿ ಮತ್ತೊಂದು ಗಮನ ಸೆಳೆದ ಸಮೂಹ ನೃತ್ಯಗಾನ, ಬಿಷಾನ್ ಕನ್ನಡಿಗರು ಪ್ರಸ್ತುತಪಡಿಸಿದ ‘ಎಲ್ಲೊ ಜೋಗಪ್ಪ ನಿನ್ನರಮನೆ..’ಯಲ್ಲಿ ಚಿಣ್ಣರ ಜತೆ ಸರಿಸಮಾನವಾಗಿ ಉತ್ಸಾಹ, ಉಲ್ಲಾಸದಿಂದ ಕುಣಿದು ಕುಪ್ಪಳಿಸಿದ ದೊಡ್ಡವರ ಸಹಯೋಗದಿಂದ ಮೆಚ್ಚುಗೆಗೆ ಪಾತ್ರವಾಯ್ತು. ಅದೆ ಬಿರುಸಿನಲ್ಲಿ ಭಾರದ್ವಾಜ್ ಸೋದರಿ-ಸೋದರರು ಮೂಡಿಸಿದ ‘ಹಿಂದೂಸ್ತಾನಿ ಸ್ಚರಮಾಲೆ’ ತಂಗಾಳಿಯಂತೆ ಮೂಡಿಬಂದರೆ, ಸಮೂಹ ನೃತ್ಯಗಳಡಿ ಬಡಗ ಜಾನಪದ ನೃತ್ಯ; ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿದ ‘ಕರುನಾಡ ಹುಡುಗರು’; ಹಾಸ್ಯದ ತುಣುಕಾಗಿ ‘ರತ್ನಗಿರಿ ರಹಸ್ಯ’ದ ಹಾಡಿನ ನೃತ್ಯ ‘ ಕೈಯಬಳೆ ಗಲಕ್ಕು, ಕಾಲ ಗೆಜ್ಜೆ ಝಣಕ್ಕು’; ಜೋಡಿ ಹಾಡಾಗಿ ರಂಜಿಸಿದ ‘ಪ್ರಾಯ, ಪ್ರಾಯ,ಪ್ರಾಯ’ ಚಿತ್ರದ ‘ ಥೈಯ್ಯ ಥಕ್ಕ..’ ನೃತ್ಯಗಳು; ಮಕ್ಕಳು ಹಾಡಿದ ‘ತರವಲ್ಲ ತಗಿ ನಿನ್ನ ತಂಬೂರಿ’ ವೃಂದಗಾನ ಮತ್ತು ‘ವಿಷ್ಣುವರ್ಧನ’ ಹಾಡಿಗೆ ಅದ್ಬುತವಾಗಿ ನರ್ತಿಸಿದ ಆವಳಿ ಜೋಡಿ, ತಾಯಿ ಮಗನ ಜುಗಲ್ಬಂದಿಯಾದ ಕಿರು ಪ್ರಹಸನ (ಅವರ ಬಿಟ್ ಇವರ್ಯಾರು) – ಎಲ್ಲವೂ ನೋಡುಗರ ಮನ ಗೆಲ್ಲುವಲ್ಲಿ ಯಶಸ್ವಿಯಾದವು.

ಪುಟಾಣಿಗಳ ಹಾಗೂ ಮಕ್ಕಳ ಈ ಜಾತ್ರೆಯಲ್ಲಿ, ದೊಡ್ಡವರೂ ಕಣಕ್ಕಿಳಿದು ಕಿರಿಯರಿಗಿಂತ ತಾವೇನು ಕಮ್ಮಿಯಿಲ್ಲವೆಂದು ಸಾಬೀತು ಪಡಿಸಿದರು. ‘ಮಾಯದಂತ ಮಳೆ ಬಂತಣ್ಣ..’ ಮತ್ತು ‘ನಿಂಬೀಯಾ ಬನದ ಮ್ಯಾಗಳ..’ ಎನ್ನುತ್ತಲೆ, ಜಾನಪದ ಲೋಕದ ಸೊಗಡಿನ ಮತ್ತಷ್ಟು ಹಾಡುಗಳಿಂದ ರಂಜಿಸಿದ ಭಾಗ್ಯಮೂರ್ತಿ ತಂಡ ಪ್ರೇಕ್ಷಕರ ಅಪಾರ ಕರತಾಡನ ಗಳಿಸುತ್ತಲೆ ‘ಒನ್ಸ್ ಮೋರ್’ ಕೋರಿಕೆಯನ್ನು ಸಮಯದ ಅಭಾವದಿಂದಾಗಿ ನಯವಾಗಿಯೇ ತಿರಸ್ಕರಿಸುವ ಸಂದಿಗ್ಧಕ್ಕೆ ಒಳಗಾಗಬೇಕಾಯ್ತು! ಇದರ ನಡುವಲ್ಲೆ ಪ್ರೇಕ್ಷಕರನ್ನು ನಕ್ಕು ನಲಿಸಿದ ‘ನಮ್ಮ ಇಸ್ಕೂಲು’ ನಾಟಕ ಹಲವಾರು ಚಿಣ್ಣರ ಅದ್ಭುತ ಹಾಗೂ ಸಹಜ ನಟನೆ ಜತೆ ಅಪ್ಪಟ ‘ಹಳ್ಳಿ ಮೇಷ್ಟ್ರು’, ವೆಂಕಟ್ ಮತ್ತಿತರು ಕಲಾವಿದರ ಅಮೋಘ ತಾಳಮೇಳ, ಸಹಯೋಗದಿಂದಾಗಿ ಇಡಿ ಪ್ರೋಗ್ರಾಮಿನ ಪ್ರಮುಖ ಹೈಲೈಟುಗಳಲ್ಲೊಂದಾಗುವಲ್ಲಿ ಯಶಸ್ವಿಯಾಯ್ತು. ಅದೇ ಲಹರಿಯಲ್ಲಿ ಚುರುಕು ಮುಟ್ಟಿಸುವ ಡೈಲಾಗುಗಳ ಮೂಲಕ ನಗೆಯುಕ್ಕಿಸಿದ ಸ್ವಾಮೀಜಿಗಳ ಕಿರು ಪ್ರಹಸನವೂ ಪ್ರೇಕ್ಷಕರನ್ನು ಕಟ್ಟಿಡುವಲ್ಲಿ ಯಶಸ್ವಿಯಾಯ್ತು.

ಹೀಗೆ ವಿಧವಿಧ ಸ್ತರ, ಲಹರಿಗಳಲ್ಲಿ ಹರಿದಾಡಿದ ಉತ್ಸವ ಸುಧೆ ಸಾಹಿತ್ಯಾಸಕ್ತರನ್ನು ತಟ್ಟದೆ ಬಿಡಲಿಲ್ಲ – ನೃತ್ಯರೂಪದಲ್ಲಿ, ವಾದ್ಯ ಗಾಯನವಾಗಿ (ಹಚ್ಚೇವು ಕನ್ನಡದ ದೀಪ), ಕಾವ್ಯ ವಾಚನವಾಗಿ (ನಾಗೇಶ ಮೈಸೂರು) ಮತ್ತು ಹಾಡಿನ ರೂಪದಲ್ಲಿ ಹರಿದ ಈ ಸಾಹಿತ್ಯ ಗಂಗೆಯನ್ನು ಕವಿಗಳಾದ ವಸಂತ ಕುಲಕರ್ಣಿ, ಗಿರೀಶ್, ಸುರೇಶ ಮತ್ತು ವೆಂಕಟರ ಕಾವ್ಯಗಳಿಗೆ ರಾಗ ಹಾಕಿ ಸುಮಧುರ ಹಾಡಿನ ರೂಪದಲ್ಲಿ ಉಣಬಡಿಸಿ ಸಾಹಿತ್ಯಾಸಕ್ತರ ಮನ ತಣಿಸಿದರು. ಸಾಧಾರಣವಾಗಿ ಪ್ರಶಾಂತವಾಗಿರುವ ಕಾವ್ಯಸುಧೆಗೆ ರಂಗು ರಂಗಿನ ಮೆರುಗು ಕೊಡುವ ಕೈಲಾಸಂರವರ ‘ಕೋಳೀಕೆ ರಂಗ’ ಹಾಡಿನ ನೃತ್ಯವು ಎಲ್ಲರ ಮನಸೆಳೆಯಿತು. ಇವುಗಳೆಲ್ಲಾ ಕಾರ್ಯಕ್ರಮದ ನಡುವೆಯೆ ಕನ್ನಡ ಚಲನ ಚಿತ್ರ ರಂಗದ ಹಳೆ ಮತ್ತು ಹೊಸ ತುಣುಕುಗಳನ್ನು ಒಗ್ಗೂಡಿಸಿದ ‘ಕನ್ನಡ ಚಲನ ಚಿತ್ರ’ ಎರಡು ಭಾಗಗಳಲ್ಲಿ ಪ್ರಸ್ತುತವಾಗಿ ನೋಡುಗರಿಗೆ ನೆನಪಿನ ಕಚಗುಳಿಯಿಟ್ಟಿತು. ಇತ್ತೀಚೆಗಷ್ಟೆ ನಮ್ಮನ್ನಗಲಿದ ಪ್ರತಿವಾದಿ ಭಯಂಕರ ಶ್ರೀನಿವಾಸರ (ಡಾಕ್ಟರ್ ಪಿ.ಬಿ.ಎಸ್.) ನೆನಪಿನ ತುಣುಕು ಮತ್ತು ಹಾಡುಗಳನ್ನೊಡಗೂಡಿಸಿದ್ದ ಭಾವಪೂರ್ಣ ಶ್ರದ್ದಾಂಜಲಿಗೆ ಅಲ್ಲಿ ನೆರೆದಿದ್ದ ಕನ್ನಡಿಗರೆಲ್ಲ ಅಶ್ರುತರ್ಪಣದೊಂದಿಗೆ ಕಣ್ಮರೆಯಾದ ಗಾನ ಗಂಧರ್ವನಿಗೆ ತಮ್ಮ ಕೊನೆಯ ನಮನ ಸಲ್ಲಿಸಿದರು. ಸಿಂಗಾರೋತ್ಸವದ ಅಂಗವಾಗಿ ನಡೆದ ಬ್ಯಾಡ್ಮಿಂಟನ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯು ಇದೇ ಸಂದರ್ಭದಲ್ಲಿ ನಡೆಯಿತು (ಬಳ್ಳಾರಿ, ಧಾರವಾಡ ತಂಡಗಳಿಗೆ).

ಹೀಗೆ ಸಮರೋಪಾದಿಯಲ್ಲಿ ನಡೆದ ‘ಸಿಂಗಾರೋತ್ಸವ – 2013’ ಒಂದು ಅದ್ಬುತ ಅನುಭವ, ಅನುಭೂತಿಯಾಗಿ ಸಿಂಗನ್ನಡಿಗರೆಲ್ಲರನ್ನು ರಂಜಿಸುವಲ್ಲಿ ಯಶಸ್ವಿಯಾಯ್ತು. ಅಚ್ಚುಕಟ್ಟಾದ ಮತ್ತು ಸುವ್ಯವಸ್ಥೆಯಿಂದ ನಡೆದ ಈ ಕಾರ್ಯಕ್ರಮ ಕನ್ನಡ ಸಂಘದ ಮತ್ತು ಕಾರ್ಯಕ್ರಮದ ಉಸ್ತುವಾರಿ ಜವಾಬ್ದಾರಿ ಹೊತ್ತಿದ್ದ ಉಪಸಮಿತಿಯ ದಕ್ಷ ಮತ್ತು ಸುಲಲಿತ ನಿರ್ವಹಣೆಯಿಂದಾಗಿ ಸರ್ವರ ಮೆಚ್ಚುಗೆಗೆ ಪಾತ್ರವಾಯ್ತು. ಭಾಗವಹಿಸಿದವರಿಗೆ ಊಟ, ತಿಂಡಿಗೂ ಅನಾನುಕೂಲವಾಗದಿರಲೆಂದು ಕನ್ನಡ ನಾಡಿನ ಊಟ ಕೂಡ ವ್ಯವಸ್ಥೆ ಮಾಡಲಾಗಿತ್ತು – ಮಣಿ ಅಯ್ಯರ್ ಮೆಸ್ಸಿನಿಂದ. ಯೋಜನಾಬದ್ಧವಾಗಿ, ಪೂರ್ವ ನಿಯೋಜಿತ ಯೋಜನೆಯನುಸಾರವೇ ನಡೆದ ಈ ಉತ್ಸವದ ಯಶಸ್ಸಿಗೆ ಅಂದಿನ ಸ್ವಯಂಸೇವಾಕಾರ್ಯಕರ್ತರ, ನಿರೂಪಕರ, ಉತ್ಸಾಹದಿಂದ ಪ್ರೋತ್ಸಾಹಿಸಿ ಭಾಗವಹಿಸಿದ ಸಿಂಗನ್ನಡಿಗರೆಲ್ಲರ ಕಾಣಿಕೆಯ ಜತೆ ಮತ್ತೊಂದು ಯಶಸ್ಸಿನ ಮುಖ್ಯ ಕಾರಣ – ಇಷ್ಟು ವ್ಯವಸ್ಥಿತವಾಗಿ ನಡೆಸಿದ ಕಾರ್ಯಕಾರಿ ಸಮಿತಿಯದು. ವಾರಕ್ಕೂ ಮೊದಲೆ ಮಾಹಿತಿ ಹಂಚುವ ಸಭೆಯಿಂದ ಹಿಡಿದು, ಸತತ ಮಿಂಚಂಚೆಯ ಮೂಲಕ ಕಳಿಸಿದ ಮಾಹಿತಿಯ ತನಕ ಎಲ್ಲವನ್ನು ಸೊಗಸಾಗಿ ನಿರ್ವಹಿಸಿದ ಶ್ರೇಯಸ್ಸು ಈ ಕಾರ್ಯವನ್ನು ನೇರ ಮತ್ತು ಪರೋಕ್ಷವಾಗಿ ಸಂಭಾಳಿಸಿದ ೪೦ಕ್ಕೂ ಐವತ್ತಕ್ಕೂ ಸ್ವಯಂಸೇವಕರಿಗೆಲ್ಲರಿಗೂ ಸಲ್ಲಬೇಕು – ಸಿಂಗನ್ನಡಿಗರೆಲ್ಲ ಒಂದಾಗುವ ಮತ್ತೊಂದು ಸುವರ್ಣಾವಕಾಶವನ್ನು ಇಷ್ಟು ಕಲಾತ್ಮಕವಾಗಿ ಕಲ್ಪಿಸಿದ್ದಕ್ಕಾಗಿ!

ಇಂಥಹ ಒಂದು ಸೊಗಸಾದ ಸಂಜೆ, ಎಲ್ಲರೂ ಇನ್ನೊಂದಷ್ಟು ಹೊತ್ತು ನಡೆದಿದ್ದರೆ ಚೆನ್ನಿತ್ತೆಂದು ಅಂದುಕೊಳ್ಳುತ್ತಿರುವಾಗಲೆ, ಸಂಘದ ಉಪಾಧ್ಯಕ್ಷ ವಿಜಯರಂಗರವರ ವಂದನಾರ್ಪಣೆ ಮತ್ತು ನಾಡಗೀತೆಯೊಂದಿಗೆ ವಿಧ್ಯುಕ್ತವಾಗಿ ಹಾಗೂ ಸುಗಮವಾಗಿ ಮುಕ್ತಾಯವಾದಾಗ ತಾಯ್ನಾಡಿನಿಂದ ದೂರವಿದ್ದರೂ ತಾಯ್ನಾಡಿನ, ಭಾಷೆ, ಸಂಸ್ಕೃತಿ, ಕಲಾಪ್ರಕಾರಗಳ ಸುಂದರ ಸಮ್ಮಿಳನವೆನಿಸಿದ ಈ ಕಾರ್ಯಕ್ರಮವನ್ನು ಆಯೋಜಿಸಿದ ಕನ್ನಡ ಸಂಘ (ಸಿಂಗಪುರ)ಕ್ಕೆ ಮನಃಪೂರ್ವಕ ಧನ್ಯವಾದ ಹೇಳುತ್ತಾ ತುಂಬುಹೃದಯದೊಂದಿಗೆ ಸಭಾಂಗಣದಿಂದ ನಿರ್ಗಮಿಸಿದರು.

ಕನ್ನಡ ಸಂಘ (ಸಿಂಗಪುರ)ದ ಈ ಕಾರ್ಯಕ್ರಮದ ಛಾಯಾಚಿತ್ರಗಳಿಗೆ ಸಿಂಗಾರ ಉತ್ಸವ-೨೦೧೩ ಕೊಂಡಿಯನ್ನು ಕ್ಲಿಕ್ಕಿಸಿ.

ವರದಿ: ನಾಗೇಶ ಮೈಸೂರು (nageshamysore.wordpress.com), ಸಿಂಗಪುರ
ಛಾಯಾಚಿತ್ರ: ಶ್ರೀನಿವಾಸ್ ಸಿ. ಜೆ., ಸಿಂಗಪುರ
http://kannada.oneindia.in/nri/article/2013/singarotsava-2013-celebrated-in-singapore-073737.html

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s