00034 – ವಿಷಾಪಹಾರಿ ‘ಡ್ರಾಗನ್ನಿನ ಕಣ್ಣು’, ಈ ರುಜಾಪಹಾರಿ ‘ಲೊಂಗನ್’ ಹಣ್ಣು! (Longan Fruit)

ವಿಷಾಪಹಾರಿ ‘ಡ್ರಾಗನ್ನಿನ ಕಣ್ಣು’, ಈ ರುಜಾಪಹಾರಿ ‘ಲೊಂಗನ್’ ಹಣ್ಣು! (Longan Fruit)

ಹಣ್ಣಿನ ಹೆಸರು: ಲೊಂಗೊನ್ 

ಈ ಹಣ್ಣನ್ನು ಈ ಹಿಂದೆ ಯಾರಾದರೂ ಪರಿಚಯಿಸಿದ್ದರೊ ಗೊತ್ತಿಲ್ಲ. ಸಿಂಗಪುರದಲ್ಲಿ ಸಾಧಾರಣ ಕಾಣುವ ಹಣ್ಣಾದ ಕಾರಣ ಈ ಕಿರು ಪರಿಚಯ.


ಉಷ್ಣವಲಯದ ಹಣ್ಣುಗಳಲ್ಲೊಂದಾದ ಈ ಹಣ್ಣು ಸಿಂಗಪುರದಂತ ಭೂಮಧ್ಯ ರೇಖೆಯ ದೇಶಗಳಲ್ಲಿ ಬೆಳೆಯುವ, ದೊರಕುವ ಹಣ್ಣು. ಸುಮಾರು ಕಿರು ನಿಂಬೆ ಹಣ್ಣಿನ ಅಥವ ಹೆಚ್ಚು ಕಡಿಮೆ ನಮ್ಮ ಗೋಲಿಯಷ್ಟೆ ಗಾತ್ರದ, ಗೋಲಾಕಾರದ ಈ ಹಣ್ಣಿನ ಬಿಳಿ ತಿರುಳು, ಒಂದು ರೀತಿಯ ಕಂದು-ಹಳದಿ ಮಿಶ್ರ ಬಣ್ಣದ ಹೊರ ಕವಚವನ್ನು ಹೊಂದಿರುತ್ತದೆ. ತುಸು ಮೆಲುವಾದ ಒತ್ತಡ ಹಾಕಿದರೆ ಕೈ ಬೆರಳುಗಳಿಂದಲೆ ಸಿಡಿ ತೆರೆಸಿ, ಬಿಚ್ಚಿಸಬಹುದಾದ ಹೊರಕವಚವಿದು – ಸರಳ ಹೋಲಿಕೆಯಲ್ಲಿ ಕಡಲೆಕಾಯಿಯ ಕವಚ ತೆರೆಯುವಂತೆ (ಅಥವ ಬೇಯಿಸಿದ ಮೊಟ್ಟೆಯ ಕವಚ ತೆರೆದ ಹಾಗೆ ಅಂತಲು ಹೇಳಬಹುದು). ಕವಚದ ಒಳಗೆ ಕೂತ ಬಿಳಿ ಗೋಲಾಕಾರದ ತಿರುಳೆ ತಿನ್ನಲು ಬರುವ ಲೊಂಗನ್ ಹಣ್ಣು. ಹಣ್ಣಿನ ಮಧ್ಯದಲ್ಲಿ ಸಪೋಟ ಬೀಜದ ತರಹದ ಒಂದು ಕಪ್ಪು ಬೀಜವಿರುತ್ತದೆ, ಆದರೆ ತುಸು ದೊಡ್ಡ, ಗುಂಡಾದ ಗಾತ್ರದಲ್ಲಿ. ಅದು ಬಿಟ್ಟರೆ, ಮಿಕ್ಕೆಲ್ಲ (ಬಿಳಿ ಭಾಗ) ತಿನ್ನಲು ಯೋಗ್ಯವಾದ ರುಚಿಕರವಾದ ಭಾಗ. ಮೆಲುವಾದ ಸಿಹಿಯಲ್ಲಿ, ರಸಪೂರಿತವಾದ ಹಣ್ಣು ಕೆಲವು ಆರೋಗ್ಯಪೂರ್ಣ ಗುಣಗಳನ್ನು ಹೊಂದಿದೆಯಂತೆ. ಮರದಲಿ ದ್ರಾಕ್ಷಿಯ ಗೊಂಚಲಿನ ಹಾಗೆ ಬೆಳೆಯುವ ಈ ಹಣ್ಣು ಟಿವಿ ನೋಡುತ್ತಲೊ, ಏನಾದರು ಓದುತ್ತ ಕಾಲಹರಣ ಮಾಡುತ್ತ ಒಂದೊಂದೆ ‘ಗುಳುಂ’ ಎನಿಸಲು ಚೆನ್ನವಿರುತ್ತದೆ – ಆದರೆ ಸುಲಭದ ಕಬಳಿಸುವಿಕೆಗೆ ಮೊದಲೆ ಸಿಪ್ಪೆ ಬಿಡಿಸಿ, ಬೀಜ ತೆಗೆದು ಬಟ್ಟಲೊಂದರಲ್ಲೆತ್ತಿಟ್ಟುಕೊಂಡುಬಿಟ್ಟಿರೆ ಒಳಿತು! ಬೇರೆ ಹಣ್ಣುಗಳ ಜತೆ, ಈ ಹಣ್ಣಿನ ಚೂರನ್ನು ಸಲಾಡಿನ ತರದಲ್ಲಿ ಇಡುವುದನ್ನು ನಾನು ನೋಡಿದ್ದೇನೆ.

ಡಾಕ್ಟರ ಮರ್ಕೋಲ ಅವರ ಸೈಟಿನ ಮಾಹಿತಿಯ ಪ್ರಕಾರ (ಹೆಚ್ಚು ಮಾಹಿತಿಗೆ ಕೊಂಡಿಯನ್ನು ಗಿಂಡಿ http://articles.mercola.com/sites/articles/archive/2011/04/01/5-tropical-fruits-that-can-change-your-life.aspx) ಇದನ್ನು ಉಷ್ಣವಲಯ ದೇಶಗಳ ಐದು ಪ್ರಮುಖ ಹಣ್ಣುಗಳ ಪಟ್ಟಿಗೆ ಸೇರಿಸುತ್ತಾರೆ (ಉಳಿದ ನಾಲ್ಕೆಂದರೆ ತೆಂಗಿನ ಕಾಯಿ, ಮಾವಿನಹಣ್ಣು, ಮ್ಯಾಂಗೊಸ್ಟೀನ್ ಮತ್ತು ಅವೊಕಾಡೊ (ಬೆಣ್ಣೆಹಣ್ಣು)). ಚೀನಾ ಮೂಲದ ಈ ಹಣ್ಣನ್ನು, ಚೀನ ಮತ್ತು ವಿಯಟ್ನಾಮುಗಳಲ್ಲಿ ಔಷಧಿಯ ಹಾಗು ವಿಷ ಪರಿಹಾರಕದ ರೂಪದಲ್ಲಿ ಬಳಸುತ್ತಾರೆಂದು ಹೇಳುತ್ತಾರೆ. ಇದು ಒತ್ತಡ ಪರಿಹಾರಕ ಮತ್ತು ಆರಾಮದಾಯಿ ಗುಣಗಳ ತವರಂತೆ. ಇದರಲ್ಲಿ ಹೆಚ್ಚಿನ ಕಬ್ಬಿಣ, ಪೊಟಾಶಿಯಮ್ ಇರುವುದರ ಜತೆಗೆ ವಿಟಮಿನ್ ಏ ಮತ್ತು ಸೀ ಕೂಡ ಹೇರಳವಂತೆ. ಇದು ಕ್ಯಾನ್ಸರು ನಿರೋಧಕ ಮತ್ತು ಪಿತ್ತಜನಕಾಂಗದ ರಕ್ಷಕವೂ ಕೂಡಾ ಎನ್ನುತ್ತಾರೆ.

ಈ ಹಣ್ಣಿನ ಕುರಿತು ‘ವಿಕ್ಕಿ’ ಏನು ಹೇಳುತ್ತದೆ? (ಹೆಚ್ಚು ವಿವರಕ್ಕೆ ಕೊಂಡಿಯನ್ನು ಗಿಂಡಿ http://en.wikipedia.org/wiki/Longan)

‘ಡಿಮೊಕಾರ್ಪಸ್ ಲೊಂಗನ್’ ಅಥವ ಬರಿ ‘ಲೊಂಗನ್’ ಹೆಸರಿನಿಂದ ಕರೆಯಲ್ಪಡುವ ಈ ಮರವನ್ನು ‘ಲೈಚಿ’ ಹಣ್ಣಿನದೆ ಆದ ‘ಸೋಪ್ ಬೆರ್ರಿ’ ಗುಂಪಿಗೆ ಸೇರಿಸುತ್ತಾರೆ – ಬಹುಶಃ, ಒಳಗಿನ ಜಾರುವ, ಮೃದುವಾದ ತಿರುಳಿನ ಕಾರಣದಿಂದಲೊ ಏನೊ. ಈ ಮರ ದಕ್ಷಿಣ ಏಶಿಯ ಮತ್ತು ಆಗ್ನೇಯ ಏಶಿಯದಲ್ಲಿ ಬೆಳೆಯುತ್ತದೆಂದು ವಿಕ್ಕಿ ಹೇಳುತ್ತದೆ – ಅಂದರೆ ಭಾರತದಲ್ಲು ಎಲ್ಲೊ ಕೆಲವು ಕಡೆ ಬೆಳೆಯಬಹುದೆಂದು ಕಾಣುತ್ತದೆ, ಬಹುಶಃ ಬೇರೆಯ ಹೆಸರಿರಬಹುದು. ಈ ಕೆಳಗಿನ ಮೂಲದ ಪ್ರಕಾರ ಈ ಹಣ್ಣು ಬರಿ ಚೀನ ಮೂಲ ಮಾತ್ರವಲ್ಲ ಭಾರತದ್ದು ಕೂಡಾ ಆಗಿರಬೇಕು (ಅಸ್ಸಾಂ ಸುತ್ತ ಮುತ್ತಲ ಪ್ರಾಂತ್ಯದಲ್ಲಿ). ಕೆಳಗಿನ ಮಾಹಿತಿ ಗಮನಿಸಿ, ಮತ್ತು ಹೆಚ್ಚು ವಿವರಣೆಗೆ ಕೊಂಡಿಯನ್ನು ಗಿಂಡಿ (http://www.hort.purdue.edu/newcrop/morton/longan.html)

” Groff says that the longan was introduced into India in 1798 but, in Indian literature, it is averred that the longan is native not only to China but also to southwestern India and the forests of upper Assam and the Garo hills, and is cultivated in Bengal and elsewhere as an ornamental and shade tree. It is commonly grown in former Indochina (Thailand, Cambodia, Laos and Vietnam and in Taiwan). The tree grows but does not fruit in Malaya and the Philippines. There are many of the trees in Reúnion and Mauritius.”

ಇನ್ನು ಇದರ ಹೆಸರಿನ ಮೂಲದ ಕುರಿತು : ಲೊಂಗನ್ ಎನ್ನುವ ಹೆಸರು ಚೀನಿ ಮೂಲದ್ದು. 龍眼 ‘ಲೊಂಗ್’ ಮತ್ತು ‘ಯನ್’ ಎಂಬ ಎರಡು ಚೀನಿ ಪದಗಳ ಸಂಗಮ ರೂಪ. ಇದರರ್ಥ “ಡ್ರಾಗನ್ನಿನ ಕಣ್ಣು” ಎಂದು. ಇದರ ಸಿಪ್ಪೆಯನ್ನು ಅರೆ ಸಿಡಿಸಿ ತೆರೆದಾಗ ಇದು ಕಣ್ಣಿನ ಹಾಗೆಯೆ ಕಾಣುವುದರಿಂದ ಈ ಹೆಸರು – ಅದರಲ್ಲು ಒಳಗಿನ ತಿರುಳ ಬಿಳಿ ಹಣ್ಣಿನ ಅರೆ-ಪಾರದರ್ಶಕತೆಯಿಂದಾಗಿ, ಮಧ್ಯದಲ್ಲಡಗಿದ ಗುಂಡನೆಯ ಕಪ್ಪು ಬೀಜವು ಕಣ್ಣಿನ ಪಾಪೆಯ ಹಾಗೆ ಕಾಣುವುದರಿಂದ. ಕವಚದ ಒಳಗಿನ ತೇವಾಂಶ ಕಡಿಮೆಯಿದ್ದರೆ, ಸೂರ್ಯಕಾಂತಿ ಬೀಜ ಬಿಡಿಸುವಂತೆ ಸುಲಭವಾಗಿ ಬಿಚ್ಚಿಕೊಳ್ಳುವ ಈ ಹಣ್ಣು, ಅದೆ ಹೆಚ್ಚು ತೇವಾಂಶವಿದ್ದರೆ ಕೊಂಚ ಸತಾಯಿಸುತ್ತದೆ. ಆದರೆ ಕವಚ ಬಿಚ್ಚಿತೆಂದರೆ – ‘ಕೊಂದ ಪಾಪ ತಿಂದು ಪರಿಹಾರ’ ಅಂದುಕೊಂಡು ಸವಿಯಬಹುದು.

ಕೊನೆಗೊಂದು ಚಿತ್ರದ ತುಣುಕಿಗೆ ಈ ಕೆಳಗಿನ ಕೊಂಡಿಯನ್ನು ಗಿಂಡಿ: (ಚಿತ್ರ ಕೃಪೆ: ಇದೆ ಕೊಂಡಿಗೆ ಸಲ್ಲುತ್ತದೆ)
http://passionateeater.blogspot.sg/2009/02/longans-dragon-eyes.html

– ನಾಗೇಶ ಮೈಸೂರು, ಸಿಂಗಪುರದಿಂದ, 25.04.2013

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s