00035 – ಜುಟ್ಟಿನ ಬಟ್ಟೆ ಹೊದ್ದ ‘ಕೇಶೀರಾಜ’, ಮುತ್ತಿನ ಬಣ್ಣದ ‘ರಂಬೂತಾನ್’ ಹಣ್ಣೆ ಖನಿಜ!

ಜುಟ್ಟಿನ ಬಟ್ಟೆ ಹೊದ್ದ ‘ಕೇಶೀರಾಜ’, ಮುತ್ತಿನ ಬಣ್ಣದ ‘ರಂಬೂತಾನ್’ ಹಣ್ಣೆ ಖನಿಜ!——————————————————————– ಹೊರಮೈಯೆಲ್ಲಾ ರೋಮದ ಹೆಣ್ಣು, ಒಳಗೆ ಮುತ್ತಿನ ಬಿಳಿ ಬಿಳಿ ಹಣ್ಣು!
——————————————————————–


ಪಿಳಿಪಿಳಿ ಕಣ್ಣು ಬಿಡುತ್ತ ಡ್ರಾಗನ್ನನ್ನು ನೆನಪಿಸಿದ ‘ಲೋಂಗನ್’ ಹಣ್ಣಿನ ತರವೆ ಸಿಂಗಪುರದಲ್ಲಿ ನಾನು ನೋಡಿದ ಮತ್ತೊಂದು ವಿಶಿಷ್ಟವಾದ ಹಣ್ಣೆಂದರೆ ‘ರಂಬೂತಾನ್’. ಇದೂ ಸಹ ಉಷ್ಣವಲಯ ದೇಶಗಳ ಸಾಮಾನ್ಯ ಹಣ್ಣಾದ ಕಾರಣ, ನಮ್ಮಲ್ಲಿ ಸಾಕಷ್ಟು ಅಪರಿಚಿತವೆ ಎನ್ನಬಹುದು – ಅದರಿಂದಾಗಿಯೆ ಸಂಪದದಲ್ಲಿ ಪರಿಚಯಿಸಿರುವ ಸಾಧ್ಯತೆ ಕಡಿಮೆ ಅಂದುಕೊಂಡೆ ಈ ಪರಿಚಯ ಲೇಖನ ( ಅಪ್ಪಿತಪ್ಪಿ ಯಾರಾದರೂ ಆಗಲೆ ಪರಿಚಯಿಸಿದ್ದರೂ, ಆರೋಗ್ಯಕ್ಕೆ ಒಳ್ಳೆಯದಾದ ಹಣ್ಣುಗಳ ಬಗ್ಗೆ ಮತ್ತೊಮ್ಮೆ ತಿಳಿದರೆ ಲಾಭವೆ ತಾನೆ? ಹಾಗೆಯೆ,ನೆನಪಿನ ಶಕ್ತಿಗೊಂದು ಪುಟ್ಟ ಪರೀಕ್ಷೆಯೂ ಆದೀತು!)

ಮೊದಲಿಗೆ ತುಸು ವಾಸ, ಹೆಸರಿನ ಹಿನ್ನಲೆ – ಮೂಲತಃ ಇಂಡೋನೇಶಿಯ ಹಾಗೂ ಮಲೇಶಿಯಾ ಮೂಲನಿವಾಸಿಯಾದ ಈ ಹಣ್ಣು, ಈಗ ಹೆಚ್ಚುಕಡಿಮೆ ಆಗ್ನೇಯ ಏಷಿಯಾದ ಪ್ರಮುಖ ದೇಶಗಳಲೆಲ್ಲಾ ಬೆಳೆಯುವ ಹಣ್ಣು; ಲೋಂಗನ್, ಲೈಚಿ ಹಣ್ಣುಗಳ ಹತ್ತಿರದ ನೆಂಟ. ಮೂಲ ಇಂಡೋನೇಶಿಯಾದಿಂದ ವಿಯೆಟ್ನಾಂ, ಫಿಲಿಫೈನ್ಸ್ ,ಥಾಯ್ಲಂಡ್, ಬರ್ಮ, ಶ್ರೀಲಂಕಾ ಜತೆಗೆ ಭಾರತಕ್ಕು ಕಾಲಿಟ್ಟಿತಂತೆ. ಇದರ ಹೆಸರಿನ ಅರ್ಥ ಕೂಡ, ಲೋಂಗನಿನ ಹಾಗೆ ಅನ್ವರ್ಥಕ: ಮಲೈ ಮತ್ತು ಇಂಡೋನೇಶಿಯಾ ಭಾಷೆಯಲ್ಲಿ ‘ರಂಬೂತ್’ ಎಂದರೆ ‘ರೋಮ ಅಥವ ಕೂದಲು’ ಎಂದರ್ಥ. ಈ ಹಣ್ಣಿನ ಹೊರ ಕವಚದ ಮೇಲಿರುವ ರೋಮಗಳಿಂದಲೆ ಈ ಕೇಶೀರಾಜನ ಹೆಸರು (ಚಿತ್ರ ಗಮನಿಸಿ). ಅಂದಹಾಗೆ ವಿಯೆಟ್ನಾಮಿಗಳು ಇದನ್ನು ಪ್ರೀತಿಯಿಂದ ‘ಚೊಂ ಚೊಂ’ ಅನ್ನುತ್ತಾರಂತೆ ಮುಳ್ಳಂತಿರುವ ಹಣ್ಣಿನ ಚರ್ಮದ ಹೊರಮೈಗೆ ಬೆರಗಾಗಿ – ಅರ್ಥಾತ್ ‘ಅಸ್ತವ್ಯಸ್ತ ಅಥವ ಕೆದರಿದ ಕೂದಲು’ ಅಂತ. ನೋಡಿ, ಒಮ್ಮೆ ಒಂದು ಕಡೆ ಹೆಸರು ಕೆಡಿಸಿಕೊಂಡುಬಿಟ್ಟರೆ, ಬೇರೆ ಕಡೆ ಎಲ್ಲೇ ಹೋದರೂ ಅದನ್ನು ಬದಲಿಸುವುದು ಎಷ್ಟು ಕಷ್ಟ ಅಂತ!

ಅಂದ ಹಾಗೆ ಪನಾಮ ಹಾಗೂ ಕೋಸ್ಟರೀಕಾ ದೇಶಗಳಲ್ಲಿ ಇದರ ರೂಪಾಂತರಿಸಿದ ಹಳದಿ ಬಣ್ಣದ ‘ವೈಲ್ಡ್ ರಂಬೂತಾನ್’ಗಳೂ ಲಭ್ಯವಂತೆ. ಗಾತ್ರದಲ್ಲಿ ಮೂಲ ಕೆಂಪು ಬಣ್ಣದ ಹಣ್ಣಿಗಿಂತ ತುಸು ಕಿರಿದಾಗಿ, ಹಳದಿ ಬಣ್ಣದಲ್ಲಿ ಸಿಗುವ ಈ ಹಣ್ಣು ರುಚಿಯಲ್ಲಿ ತುಸು ಸಿಹಿ – ತುಸು ಹುಳಿಯಂತೆ. ಈ ಹಳದಿ ಬಣ್ಣದ ವೈವಿಧ್ಯ ಮಲೇಶಿಯಾದಲ್ಲೂ ಲಭ್ಯವಿದೆ.

ರಂಬೂತಾನುಗಳು ಹವಾಗುಣಾಧಾರಿತ ಹಣ್ಣುಗಳಲ್ಲವಾದ ಕಾರಣ ಬಾಳೆ, ಮಾವಿನ ಹಾಗೆ ಕಾಯಿ ತಂದಿಟ್ಟುಕೊಂಡು ಹಣ್ಣಾಗುವುದೆಂದು ಕಾದರೆ, ಕಾದಿದ್ದಷ್ಟೆ ಲಾಭ – ಯಾಕೆಂದರೆ, ಇದು ಮರದ ಮೇಲೆ ಮಾತ್ರವೆ ಹಣ್ಣಾಗುವ ಜಾತಿ – ಒಂದು ರೀತಿ ನಮ್ಮ ಸಾಂಪ್ರದಾಯಿಕ ಮದುವೆ ನಡುವಳಿಕೆಯ ಹಾಗೆ, ಕಾಯಾಗಿದ್ದಾಗಿನ ಡೇಟಿಂಗಿಗಿಂತ ಹಣ್ಣಾಗುವತನಕ ಕಾಯೊ ಅರೆಂಜ್ಡ್ ಮ್ಯಾರೇಜೆ ಇಷ್ಟಪಡುವ ಗುಂಪೆಂದು ಕಾಣುತ್ತದೆ!

ಹೀಗಾಗಿಯೊ ಏನೊ, ಇನ್ನೂ ಮರದ ಕೊಂಬೆಗಂಟಿಕೊಂಡಿರುವ ರಂಬುತಾನ್ ಮಾತ್ರವೆ ಉತ್ತಮವೆಂದು ಸಾಮಾನ್ಯ ನಂಬಿಕೆ. ಅಲ್ಲದೆ ಕ್ರಿಮಿ-ಕೀಟಗಳ ಕೈಗೆ ಸಿಕ್ಕಿ ಹಾಳಾಗದೆ ಹೆಚ್ಚು ಕಾಲ ‘ಫ್ರೆಶ್’ ಆಗಿರುವುದಂತೆ. ಅಂದ ಹಾಗೆ ಈ ಹಣ್ಣಿನ ಕೇಶಿ ಕವಚವನ್ನು ಬೆರಳುಗಳಿಂದ ಬಹಳ ಸುಲಭವಾಗಿ ಬಿಡಿಸಬಹುದಾದ್ದರಿಂದ ತಿನ್ನುವಾಗ ಹೆಚ್ಚಿನ ಸರ್ಕಸ್ಸಿಲ್ಲದೆ ‘ಸ್ವಾಹ’ ಮಾಡಬಹುದು (ಹಣ್ಣಿಗಿಂತ ಹೆಚ್ಚು ಭಾಗವುಳ್ಳ ರೋಮಧಾರಿ ಸಿಪ್ಪೆಯನ್ನು ಹಾಕಲು ಸಾಕಷ್ಟು ದೊಡ್ಡ ಪಾತ್ರೆಯನ್ನೊ, ಪೇಪರು ಚೀಲವನ್ನೊ ಜತೆಗಿಟ್ಟುಕೊಂಡಿದ್ದರೆ ಸಾಕು). ಆದರೆ, ಕೆಮ್ಮಿಂದೇನಾದರೂ ನರಳುತ್ತಿದ್ದರೆ ಸ್ವಲ್ಪ ಜೋಪಾನ – ಸುಲಭವಾಗಿ ಬಿಡಿಸಿಕೊಂಡುಬರುವ ತಿರುಳು, ಜತೆಗೆ ತೊಗಟೆಯ ಪದರವನ್ನು ಅಂಟಿಸಿಕೊಂಡೆ ಬರಬಹುದು! (ಮೂಲ ಮಲೈ ಜನಪದರು ಕೆಮ್ಮಿದ್ದಾಗ ಯಾಕೆ ಕಡಿಮೆ ರಂಬೂತಾನ್ ತಿನ್ನುತ್ತರೆಂದು ಈಗ ಗೊತ್ತಾಗಿರಬೇಕಲ್ಲಾ?)

ಅಂದ ಹಾಗೆ ಈ ಹಣ್ಣನ್ನು ಜಾಮ್ ಮತ್ತು ಜೆಲ್ಲಿಗಳಲ್ಲಿ ಕೂಡ ಯಥೇಚ್ಚವಾಗಿ ಬಳಸುತ್ತಾರೆ, ಹಾಗೆಯೆ ಕ್ಯಾನುಗಳಲ್ಲಿಯೂ ಲಭ್ಯ. ಸದಾ ಹಸಿರಿನಿಂದ ಮೆರೆಯುವ ರಂಬೂತಾನ್ ಮರ ಬಣ್ಣಬಣ್ಣದ ಕೆಂಪು ಹಣ್ಣುಗಳಿಂದ ತುಂಬಿಕೊಂಡಾಗ ನೋಡುವ ನೋಟವನ್ನು ವಿಹಂಗಮ ಹಾಗು ಮನೋಹರವಾಗಿಸುತ್ತದೆ. ಎಂಬತ್ತರ ದಶಕದವರೆಗೆ ಸಿಂಗಪುರದಲ್ಲಿಯೂ ಯಥೇಚ್ಚವಾಗಿ ಬೆಳೆಯುತ್ತಿದ್ದ ಈ ಹಣ್ಣು, ನಗರೀಕರಣದ ಸುಳಿಗೆ ಸಿಕ್ಕಿ, ಈಗ ಹೆಚ್ಚು ಕಡಿಮೆ ಮಾಯವೆ ಆಗಿಹೋಗಿದೆಯೆಂದು ಹೇಳಬಹುದು. ಇದರಿಂದಾದ ವಾಣಿಜ್ಯ ಅನುಕೂಲವೆಂದರೆ, ಸದ್ಯಕ್ಕೆ ಸಿಂಗಪುರವೆ ಜಗತ್ತಿನ ಅತಿ ಹೆಚ್ಚು ರಂಬೂತಾನಿನ ಆಮದುಗಾರನಾಗಿ ಮಾರ್ಪಾಡಾಗಿದ್ದು (ಶೇಕಡಾ 60ಕ್ಕಿಂತಲು ಹೆಚ್ಚು ಪಾಲು!). ಭಾರತದ ಮಟ್ಟಿಗೆ ಹೇಳುವುದಾದರೆ ಸಾಧಾರಣವಾಗಿ ಥಾಯ್ಲಾಂಡಿನಿಂದ ಈ ಹಣ್ಣನ್ನು ಆಮದು ಮಾಡಿಕೊಳ್ಳಲಾಗುತ್ತಿದೆ, ಜತೆಗೆ ಕೇರಳದ ‘ಪತನಂತಿಟ್ಟ’ ಜಿಲ್ಲೆಯಲ್ಲು ಬೆಳೆಯುತ್ತಾರಂತೆ ( ಜಿಲ್ಲೆಯ ಉಚ್ಚಾರಣೆ ಸರಿಯಿದೆಯೊ, ಇಲ್ಲವೊ ಗೊತ್ತಿಲ್ಲ – ಆದರೆ ಪಕ್ಕದ ಕೇರಳದಲ್ಲೆ ಬೆಳೆಯುವುದರಿಂದ ಬೆಂಗಳೂರಿನ ಮಲ್ಲೇಶ್ವರದಲ್ಲಿ (ಹಾಗೆ ಮತ್ತೂ ಕೆಲವೆಡೆ) ಲೋಂಗನ್ನಿನ ತರವೆ ಸಿಗುತ್ತಿರಬೇಕೆಂದು ನನ್ನನುಮಾನ; ನೋಡಿರುವ ಸಂಪದಿಗರಿದ್ದರೆ ತಿಳಿಸಿ).


ಮರದ ಮೇಲಷ್ಟೆ ಹಣ್ಣಾಗುವುದರಿಂದ ಕಿತ್ತು ತಂದು ಮಾರುಕಟ್ಟೆಯಲ್ಲಿಟ್ಟು ಮಾರುವತನಕ ಏನೇನು ಕಥೆ, ಗತಿಯಾಗಿರುತ್ತದೊ ಅನ್ನುವ ಸಂಶಯ ಸಹಜ. ಅದಕ್ಕಾಗಿ ಈ ಪುಕ್ಕಟೆ ಮಾಹಿತಿ, ಸಲಹೆ : ಕೊಳ್ಳುವಾಗ ಗಾಢ ಕೆಂಪು ಬಣ್ಣವಿರುವವನ್ನೆ ಆರಿಸಿಕೊಳ್ಳಿ. ತುಸು ಕಿತ್ತಲೆ ಅಥವ ಹಳದಿ ಜತೆ ಮಿಶ್ರವಾಗಿದ್ದರೂ ಪರವಾಗಿಲ್ಲ; ಆದರೆ ಬರಿ ಹಸಿರಾಗಿದ್ದರೆ ಮಾತ್ರ ಮುಟ್ಟಲು ಹೋಗಬೇಡಿ (ಪ್ರಾಯೋಗಿಕವಾಗಿ ಎಳೆಗಾಯಿಯೊಡನೆ ‘ಡೇಟಿಂಗ್’ ಮಾಡುವ ಹಂಬಲವಿದ್ದರೆ ಮಾತ್ರ ಓಕೆ!). ಅದೇ ರೀತಿ, ಕಪ್ಪು ಬಣ್ಣಕ್ಕೆತಿರುಗಿದ ಅಥವಾ ಸಿಕ್ಕಾಪಟ್ಟೆ ಕಪ್ಪು ಕೂದಲಿರುವವರ ಸಹವಾಸವೂ ಬೇಡ – ಅದಾಗಲೆ ಮಾಗಿಹೋದವರ, ಹಳತಾದವರ ಗುರುತಿನ ಒಕ್ಕಲಂತೆ.

ಅರೆರೆರೆ! ಎಲ್ಲಾ ವಿಷಯ ಗಮನಿಸುತ್ತಾ ಇದರ ರೂಪು ಆಕಾರಗಳ ಪೂರ್ಣ ಪರಿಚಯ ಮಾಡಿಕೊಳ್ಳುವುದನ್ನೆ ಮರೆತುಬಿಟ್ಟೆವಲ್ಲ? ಇದೊಂದು ರೀತಿ ಅಂಡಾಕಾರದ, ಒಂದರಿಂದ ಎರಡು ಇಂಚಿರುವ ಹಣ್ಣು. ಇದರ ತೆಳುಚರ್ಮದ ಕವಚ ಈ ಮೊದಲೆ ಹೇಳಿದಂತೆ ಬಳುಕುವ ಮುಳ್ಳಿನಂತಹ ರೋಮಗಳಿಂದ ತುಂಬಿದ್ದು, ಪ್ರತಿ ರೋಮವು ತುದಿಯಲ್ಲಿ ಬಾಗಿಕೊಂಡಿರುತ್ತದೆ (ಬುಡದಲ್ಲಿ ದಪ್ಪಗಿದ್ದು, ತುದಿಯಲ್ಲಿ ತೆಳ್ಳಗಿರುವ ಕಾರಣ). ಹೊರಗಿನ ಬಣ್ಣ ಹಸಿರು ಮಿಶ್ರಿತ ಹಳದಿಯಿಂದಿಡಿದು ಕಿತ್ತಲೆ ಅಥವಾ ಗಾಢಕೆಂಪಿನವರೆಗೂ ಕಾಣಬಹುದು. ಕವಚದೊಳಗಿನ ರಸಭರಿತ ಹಣ್ಣಿನ ಬಣ್ಣ ಸಾಮಾನ್ಯವಾಗಿ ಬಿಳಿ ಅಥವ ತೆಳು ಗುಲಾಬಿ ಲೇಪಿತವಾಗಿದ್ದು, ಒಳಗೆ ಅಂಡಾಕಾರದ್ದೆ ಆದ ಬೀಜವನ್ನು ಒಳಗೊಂಡಿರುತ್ತದೆ. ಹಣ್ಣಿನೊಳಗಿರುವ ಅಂಡಾಕಾರದ ಬೀಜಗಳು ಒಂದೊಂದೆ ಇದ್ದು, ರುಚಿಯಲ್ಲಿ ಕಹಿಯಾಗಿರುತ್ತದೆ ಮತ್ತು ಹೆಚ್ಚು ಕೊಬ್ಬಿನಂಶದಿಂದ ಕೂಡಿರುತ್ತದೆ.

ರುಚಿಯಲ್ಲಿ ಮಧುರವಾದ ಸಿಹಿಯನ್ನು ಸೂಸುವ ಈ ಹಣ್ಣನ್ನು ಜ್ಯೂಸುಗಳಲ್ಲಿ, ಐಸ್ಕ್ರೀಮುಗಳಲ್ಲಿ, ಶರಬತ್ತುಗಳಲ್ಲಿ, ಜ್ಯಾಮು-ಜೆಲ್ಲಿಗಳಲ್ಲಿ, ಯೋಗರ್ಟುಗಳಲ್ಲಿ ಬಳಸುತ್ತಾರೆ. ಕೊಂಚ ಅತಿರೇಖದ ಬಳಕೆ ಬೇಕೆಂದರೆ – ರಂಬೂತಾನ್ ಸೂಪ್, ರಂಬೂತಾನ್ ಐಸ್ಕ್ರೀಮ್, ರಂಬೂತಾನ್ ಸ್ಮೋಕ್ಡ್ ಮೀಟ್, ರಂಬೂತಾನ್ ಸೀಫುಡ್ ಸಲಾಡುಗಳೂ ಸಾಧ್ಯವಂತೆ (ರಾಮರಾಮ ಮಾಂಸಾಹಾರದ ಜತೆಗೂ ಹಣ್ಣಿನ ಬೆರಕೆ ಸಾಧ್ಯವೆ ಎನ್ನಬೇಡಿ – ಅದು ಅವರವರ ರುಚಿ-ಅಭಿರುಚಿಗೆ ಬಿಟ್ಟ ವಿಷಯ!). ಇದೂ ಸಾಲದಿದ್ದರೆ ರಂಬೂತಾನ್ ಸಾಸ್ ಮಾಡಲು ಪ್ರಯತ್ನಿಸಿ – ಕೆಂಪು ‘ಕರ್ರಿ ಪೇಸ್ಟಿನ’ ಜತೆಗೊ, ಅಥವಾ ‘ತೆಂಗಿನ ಕ್ರೀಮಿನ’ ಜತೆಗೊ. ಉಷ್ಣವಲಯದ ಬೇರೆಯ ತರಕಾರಿ, ಹಣ್ಣುಗಳ ಜತೆಗೂಡಿಸಿ ‘ರಂಬೂತಾನ್ ಸಾಲ್ಸ’ ಮತ್ತು ‘ರಂಬೂತಾನ್ ಚಟ್ನಿ’ಯೂ ಮಾಡುತ್ತಾರಂತೆ! ನೀವೇನಾದರೂ ಟ್ರೈ ಮಾಡಿದರೆ, ದೋಸೆ, ಇಡ್ಲಿಗೆ ಈ ಚಟ್ನಿ ಹೇಗಿರುತ್ತದೆಂದು ಒಂದು ಪ್ರತಿಕ್ರಿಯೆ ಹಾಕಿಬಿಡಿ! (ಒಂದು ವೇಳೆ ರಂಬೂತಾನ್ ಸಿಕ್ಕಿದರೆ…..)


ಇಷ್ಟೆಲ್ಲ ಬರಿ ರೂಪಾಕಾರದ ಹಣ್ಪುರಾಣವೆ ಆಯ್ತು – ಅದರ ಗುಣಾವಗುಣಗಳೇನೆಂದು ತಿಳಿಯಬೇಡವೆ? ಇಗೊ ಇಲ್ಲಿದೆ ನೋಡಿ ಈ ಹಣ್ಣಿನ ವಿಶೇಶತೆಗಳು – ಇವುಗಳಲ್ಲಿ ಹೆಚ್ಚಿನ ವಿಟಮಿನ್ ಸಿ, ಹಾಗೂ ತಾಮ್ರ (ಕಾಪರ್), ಮ್ಯಾಂಗನೀಸುಗಳು ಮಾತ್ರವಲ್ಲದೆ ಸಣ್ಣ ಪ್ರಮಾಣದಲ್ಲಿ ಇತರ ಪೋಷಕಗಳಾದ ಪೊಟಾಶಿಯಮ್, ಕ್ಯಾಲ್ಶಿಯಂ ಮತ್ತು ಕಬ್ಬಿಣವೂ ಉಂಟಂತೆ. ಕರುಳಿನಲ್ಲಿರುವ ಹುಳುಗಳಿಂದ ವಿಮುಕ್ತರಾಗಲೂ ಸಹ ಈ ಹಣ್ಣನ್ನೆ ಬಳಸಬಹುದಂತೆ. ಡಯೊರಿಯವಾದಾಗ ಪರಿಹಾರಕ್ಕೂ ಇದರ ಬಳಕೆ ಸಾಧ್ಯವೆನ್ನುತ್ತಾರೆ (ಮುಂದಿನ ಸಾರಿ ಹೊಟ್ಟೆ ಕೆಟ್ಟಾಗ ಹೊಸದೊಂದು ಪರಿಹಾರ ಪ್ರಯೋಗಿಸಬಹುದು ನೋಡಿ!)

ಇನ್ನು ಕಡೆಯದಾಗಿ ಅಧಿಕೃತ ಹೆಸರುಗಳ ಕುರಿತು: ಸಾಮಾನ್ಯವಾಗಿ ಕರೆಯುವ ಹೆಸರು ರಂಬೂತಾನ್, ವೈಜ್ಞಾನಿಕ ವಾಗಿ ‘Nephelium lappaceum’ ಅನ್ನುತ್ತಾರೆ. ಚೈನೀಸ್ನಲ್ಲಿ (ನೀವು ಚೀಣಾದಲ್ಲಿ ಪ್ರಯಾಣಿಸುತ್ತಲೊ, ವಾಸಿಸುತ್ತಲೊ ಇದ್ದರೆ) ‘ಹೊಂಗ್ ಮಾವ್ ದನ್’ ಅನ್ನಬೇಕು. ಇನ್ನು ಬೇರೆ ದೇಶಗಳಲ್ಲಿ ಇನ್ನೂ ಹಲವಾರು ಹೆಸರುಗಳುದ್ದರು, ಈ ಲೇಖನಕ್ಕೆ ಇಷ್ಟು ಮಾಹಿತಿ ಸಾಕೆನಿಸುತ್ತದೆ. ಯಥಾರೀತಿ ಹೆಚ್ಚಿನ ಮಾಹಿತಿ, ಚಿತ್ರಗಳಿಗಾಗಿ ಕೆಳಗಿನ ಗುಂಡಿಗಳನ್ನು ಗಿಂಡಿ!

– ನಾಗೇಶ ಮೈಸೂರು, ಸಿಂಗಾಪುರದಿಂದ
ಚಿತ್ರ, ಮಾಹಿತಿ ಕೃಪೆ : ಕೆಳಗಿನ ಕೊಂಡಿಗಳಿಂದ ಹಿಂಡಿ ತೆಗೆದದ್ದು!
________________________________________________________________________
1. http://en.wikipedia.org/wiki/Rambutan
2. http://infopedia.nl.sg/articles/SIP_208_2004-12-16.html
3. http://www.ititropicals.com/rambutan-fruit-fact-tidbits
http://thaifood.about.com/od/howtopreparethaifruit/ss/rambutanfruit.htm
________________________________________________________________________

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s