00038 – ಹೊಸ (ಹಳೆ) ರುಚಿ: “ಹಸಿ-ಹುಳಿ”

ಹೊಸ (ಹಳೆ) ರುಚಿ: “ಹಸಿ-ಹುಳಿ”

(ಕೈತುತ್ತನ್ನದ ಪ್ರೇಮಿಗಳಿಗಾಗಿ ಮತ್ತೊಂದು ವೆರೈಟಿ!)

ಓದು ಮುಗಿಸಿ ಕೆಲಸಕ್ಕೆ ಪುಡಿಗಾಸಿನ ಸಂಬಳಕ್ಕೆ ಸೇರಿದ ಹೊಸತು – ಆಗ ಸಿಗುತ್ತಿದ್ದ ಕಾಸಿಗೆ ಬಸ್ಸುಕಾರುಗಳು ಓಡಾಡದ ಕಚ್ಚಾರಸ್ತೆಯ ರೆವಿನ್ಯೂ ಸೈಟುಗಳಲ್ಲಿ ಕಟ್ಟಿದ ಮನೆಗಳಲ್ಲಿ ಮಹಡಿಯ ಮೇಲೊ, ಔಟು-ಹೌಸಿನಲ್ಲೊ ರೂಮೊಂದನ್ನು ಎಷ್ಟು ಕಡಿಮೆಗೆ ಸಾಧ್ಯವೊ ಅಷ್ಟು ಕಡಿಮೆ ಬಾಡಿಗೆಗೆ ಹಿಡಿದು ದೂಡುತ್ತಿದ್ದ ದಿನಗಳು. ಕೆಲಸದ ಜಾಗದಿಂದ ಎರಡೆರಡು ಬಸ್ಸು ಹಿಡಿದು ರೂಮು ಸೇರುವ ಹೊತ್ತಿಗೆ ಆಗಲೆ ಸಾಕಷ್ಟು ತಡವಾಗಿ ಹೋಗಿರುತ್ತಿತ್ತು. ಬಸ್ಸಿನಿಂದಿಳಿಯುತ್ತಲೆ ಅಲ್ಲೆ ತಳ್ಳುಗಾಡಿಯ ಇಡ್ಲಿ, ವಡೆ, ಚಿತ್ರಾನ್ನ ಇನ್ನೂ ಮುಚ್ಚಿರದಿದ್ದರೆ ರಾತ್ರಿಯೂಟಕೆ ಅದೆ ಪಾರ್ಸಲ್; ಒಮ್ಮೊಮ್ಮೆ ತಡವಾಗಿ ಹೋದರೆ ಅದೂ ಇಲ್ಲ! ಹತ್ತಿರದಲ್ಲಿ ಆ ಹೊತ್ತಿನಲ್ಲಿ ಬೇರೇನೂ ಸಿಗುವ ಸಾಧ್ಯತೆಯೂ ಇರುತ್ತಿರಲಿಲ್ಲ. ಇದರ ನಡುವೆ ಗೇಟಿಗೆ ಬೀಗ ಹಾಕುವ ಮುನ್ನ ಹೋಗಿ ರೂಮು ಸೇರಿಕೊಳ್ಳುವ ಧಾವಂತ ಬೇರೆ..

ಈ ರೀತಿ ತಡವಾದ ದಿನಗಳಲ್ಲಿ ನಟರಾಜ ಸರ್ವೀಸಿನಲ್ಲಿ ಬೇಗ ಮನೆಯತ್ತ ಹೆಜ್ಜೆಹಾಕಿ ಬಂದಾಗ ತಾಳ ಹಾಕುತ್ತಿದ್ದ ಹೊಟ್ಟೆಗೆ ಶಮನ ಮಾಡಲು ಏನಾದರೂ ಇದ್ದರೆ ಅದೆ ಭಕ್ಷ್ಯ ಭೋಜ್ಯ ಪರಮಾನ್ನ. ಏನೂ ಇರದಿದ್ದ ದಿನಗಳ ಪಾಡೆ ವರ್ಣನಾತೀತ – ನಿದ್ದೆಗಣ್ಣಿಗೆ ಮಲಗುವ ಆತುರ, ಮಲಗಲಿಕ್ಕೆ ಬಿಡದ ಖಾಲಿ ಹೊಟ್ಟೆಯ ಹುನ್ನಾರ, ಜತೆಗೆ ಮತ್ತೆ ಐದಕ್ಕೆ ಎದ್ದು ಓಡಬೇಕಾದ ಗೋಳು ಬೇರೆ ಸೇರಿಕೊಂಡು, ಮಲಗುವ ಮುನ್ನ ಅಡಿಗೆ ಮಾಡಿ ಉಣ್ಣುವ ಸಾಧ್ಯತೆ ಹೆಚ್ಚು ಕಡಿಮೆ ಇರಲೆ ಇಲ್ಲವೆಂದೆ ಹೇಳಬಹುದು. ಅಂಥಾ ದಿನಗಳಲ್ಲಿ ಆಪತ್ಭಾಂಧವನಂತೆ ಎಷ್ಟೊ ದಿನ ಕೈಹಿಡಿದು ಕಾಪಾಡಿದ ಬ್ರಹ್ಮಚಾರಿ ದೀನಬಂಧು ಈ ‘ಹಸಿಹುಳಿ’ (ಅಥವಾ ‘ದಿಢೀರ ಕೋಲ್ಡ್ ಬ್ಯಾಚುಲರ ಸಾಂಬಾರ’ ಎನ್ನಿ). ಅಂದಹಾಗೆ ಇದೇನೂ ನಾನು ಕಂಡುಹಿಡಿದ ರುಚಿಯೇನಲ್ಲ – ಬಾಲ್ಯದ ದಿನಗಳಲ್ಲಿ, ಇಕ್ಕಟ್ಟಿನ ಪುಟ್ಟ ಮನೆಯಲ್ಲಿ ವಾಸಿಸುವ ನಮ್ಮಂತಹ ಬಡ ಮಧ್ಯಮ ವರ್ಗದ ಕುಟುಂಬಗಳಲ್ಲಿ ಸೀಮೆಣ್ಣೆ ಸ್ಟೌವ್ವುಗಳೆ ಅಡಿಗೆ ಮಾಡುವ ಮೂಲ ಸರಕು. ಸೀಮೇಣ್ಣೆ ಸಿಗದಾಗಲೊ, ತಿಂಗಳ ಕೊನೆಯಲ್ಲೊ, ರಾತ್ರಿ ಒಂದು ಹೊತ್ತಲೆದ್ದು ಹಸಿವು ಅಂದಾಗಲೊ, ಅಥವಾ ಸಾರಿಲ್ಲದೆ ಬರಿ ಅನ್ನ ಮಾತ್ರ ಇದ್ದಾಗಲೊ – ಆಗೆಲ್ಲ ಅಮ್ಮಂದಿರು ಹತ್ತೆ ನಿಮಿಷಗಳಲ್ಲಿ ಚಕ್ಕನೆ ಮಾಡಿಕೊಡುತ್ತಿದ್ದ ದಿಢೀರ ಕೈತುತ್ತನ್ನವೆಂದರೆ ಇದೇನೆ. ಹೀಗಾಗಿ ಅದನ್ನು ತಿಂದು ಅಭ್ಯಾಸವಿತ್ತು; ಹೇಗೆ ಮಾಡುವುದೆಂಬ ಸ್ವಾನುಭವವಿರದಿದ್ದರೂ ಮಾಡುವುದನ್ನು ನೋಡಿದ್ದ ಸ್ಥೂಲ ಕಲ್ಪನೆ ಮನದಲ್ಲಿತ್ತು. ಅಷ್ಟು ಜ್ಞಾನದಲ್ಲೆ ಬ್ರಹ್ಮಚರ್ಯ ದಿನದಲ್ಲಿ ಸಂಭಾಳಿಸಲು ಸಾಧ್ಯವಾಗಿದ್ದು ನನ್ನ ಕೈ ಚಳಕಕ್ಕಿಂತ ಅದರ ಸರಳತೆಯೆ ಕಾರಣವೆನ್ನಬಹುದು. ಮೊದಲೊಂದೆರಡು ಬಾರಿ ಮುಗ್ಗುರಿಸಿದರೂ, ಮುಂದೆ ಹತ್ತೆ ನಿಮಿಷದಲ್ಲಿ ಮಾಡುವ ಪ್ರಾವೀಣ್ಯ ಸಾಧಿಸಿದ್ದೆ. ಅಂದಿನಿಂದ, ಅದಕ್ಕೆಂದೆ ಬೇಕಾದ ಮೂಲ ಸಾಮಾಗ್ರಿಗಳನ್ನು ಮಾತ್ರ ಯಾವಾಗಲೂ ಸ್ಟಾಕು ಇಡುವುದನ್ನು ಮಾತ್ರ ಮರೆಯುತ್ತಿರಲಿಲ್ಲ! ಬನ್ನಿ, ನನ್ನ ಆ ಸಾಹಸದ ರುಚಿಯನ್ನು ಒಮ್ಮೆ ನೋಡೆಬಿಡುವ!!

ಬೇಕಾದ ಸಾಮಾಗ್ರಿಗಳು:

1. ಫ್ರಿಡ್ಜಿನಿಂದ ತೆಗೆದ ತಂಗಳನ್ನ (ಫ್ರಿಡ್ಜಿರದಿದ್ದರೆ ಕೆಡದ ಮಿಕ್ಕಿದ ಅನ್ನವೂ ನಡೆದೀತು – ಅದರಲ್ಲು ಬ್ರಹ್ಮಚಾರಿಗಳಿಗೆ)
2. ಒಂದು ಬಟ್ಟಲು ನೀರು (ಸುಮಾರು ಎರಡು ಲೋಟದಷ್ಟಿದ್ದರೆ ಸಾಕು) – ಕಾಯಿಸದ ಕಾರಣ ಫಿಲ್ಟರಿಸಿದ ನೀರೊ, ಬಿಸ್ಲರಿ ನೀರೊ ಆದರೆ ಒಳಿತು!
3. ಒಂದು ಚಮಚೆಯಷ್ಟು ಉಪ್ಪು (ಅಳತೆಯನ್ನು ನಿಮ್ಮ ನಿಮ್ಮ ಬಿ.ಪಿ.ಯ ಮೇಲೆ ನೀವೆ ನಿರ್ಧರಿಸಬಹುದು)
4. ಒಂದೆರಡು ಚಮಚೆಯಷ್ಟು ಕಾರದ ಪುಡಿ ( ಯಥಾರೀತಿ – ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೆ ಹೆಚ್ಚು ಕಡಿಮೆ ಮಾಡಬಹುದು)
4. ಬೀಜ ತೆಗೆದ ಹುಣಸೆ ಹಣ್ಣು ( ಹುಳಿ ಪ್ರಿಯರಾದರೆ ಹೆಚ್ಚು, ಇಲ್ಲವಾದರೆ ತುಸು ಕಡಿಮೆ; ಹೆಸರೆ ‘ಹಸಿ ಹುಳಿ’ ಎಂದಿರುವುದರಿಂದ, ಸ್ವಲ್ಪ ಧಾರಾಳವಾಗಿ ಬಳಸಿದರೆ ಒಳಿತು – ರುಚಿ ಹೆಚ್ಚು ಕಡಿಮೆಯಾದರೆ, ನಂತರ ಬೆಲ್ಲ ಉಪ್ಪು ಖಾರದಲ್ಲಿ ಹೇಗೂ ಸರಿದೂಗಿಸಬಹುದು!)
5. ತುಸು ಉಂಡೆ ಬೆಲ್ಲ (ಅಚ್ಚು ಬೆಲ್ಲವಾದರೂ ನಡೆದೀತು – ತೀರಾ ಅತಿ ಮಾಡಬೇಡಿ, ‘ತಂಗಳು’ ಪಾಯಸವಾಗಿಬಿಟ್ಟೀತು!) – ಸಕ್ಕರೆ ಮಾತ್ರ ಬಿಲ್ಕುಲ್ ಬೇಡಾ!
6. ಸಣ್ಣಗೆ ಕತ್ತರಿಸಿದ ಹಸಿ ಈರುಳ್ಳಿ (ನಿಮ್ಮ ಅಭಿರುಚಿಗೆ ತಕ್ಕಷ್ಟು)
7. ಒಣಗಿದ ಕರಿಬೇವಿನೆಲೆ (ಎಷ್ಟಿದ್ದರೂ ನಡೆದೀತು)

ಮಾಡುವ ವಿಧಾನ:

1. ನೀರಿನ ಬಟ್ಟಲಿಗೆ ಹುಣಸೆ ಹಣ್ಣನ್ನು ಚೆನ್ನಾಗಿ ಕಿವುಚಿ ಹುಣಸೆ ರಸ ಮಾಡಿಕೊಳ್ಳಿ (ಕಿವುಚಿದ ಹಣ್ಣನ್ನು ಹೊರಗೆಸೆಯಲು ಮರೆಯಬೇಡಿ – ಬಾಯಿಗೆ ಸಿಕ್ಕರೆ, ರುಚಿ ಮುಖ ಕಿವಿಚಿಸುತ್ತದೆ; ಬೇಕಿದ್ದರೆ ಆ ಹಿಂಡಿ ಹಿಪ್ಪೆ ಮಾಡಿದ ಹಣ್ಣನ್ನು ಪಾತ್ರೆ ತೊಳೆಯಲು ಉಪಯೋಗಿಸಬಹುದು).
2. ಕಿವುಚಿ ತೆಗೆದ ಹುಣಸೆ ನೀರಿಗೆ ಉಪ್ಪನ್ನು ಹಾಕಿ ಕಲಕಿ.
3. ಈಗ ಕಾರದ ಪುಡಿಯನ್ನು ಹಾಕಿ ಚೆನ್ನಾಗಿ ಕಲಕಿ.
4. ನಂತರದ ಸರದಿ – ಬೆಲ್ಲದ ಚೂರಿಗೆ; ತುಸು ಮೆಲು ರುಚಿಗೆ ಬೆರೆಸಿದರೆ ಸಾಕು – ಬೆಲ್ಲದ ಪಾನಕವಾಗುವಷ್ಟು ಬೇಡಾ!
5. ಇನ್ನು ಕರಿಬೇವಣ್ಣನ ಸರದಿ – ಎಂಟತ್ತು ಎಲೆಯನ್ನು ಈ ಮಿಶ್ರಣಕ್ಕೆ ಹಾಕಿ ತಿರುವಿ ಬಿಡಿ – ವಾಸನೆ ಗಮ್ಮೆನ್ನುವತನಕ!
6. ಇನ್ನುಳಿದವರು – ಸಣ್ಣಗೆ ಹೆಚ್ಚಿದ ಹಸಿ ಇರುಳ್ಳಿ ಸಾಹೇಬರು- ಅವರನ್ನು ಸೇರಿಸಿಬಿಟ್ಟರೆ ಮಿಶ್ರಣ ಹೆಚ್ಚು ಕಮ್ಮಿ ರೆಡಿ ( ಚೂರು ಹಾಕದೆ ಹೋಳಾಗಿ ಕತ್ತರಿಸಿಟ್ಟುಕೊಂಡು, ಕಟ್ಟಿದ ಅನ್ನದ ಉಂಡೆಯ ಜತೆ ನೆಂಚಿಕೊಂಡು ತಿನ್ನುವುದು ಉಂಟು – ಲೋಕೋ’ವಿ’ಭಿನ್ನ ರುಚಿಃ!)
7. ಇನ್ನು ಕಟ್ಟ ಕಡೆಯ ವಿಧಿ – ತಂಗಳನ್ನಕ್ಕೆ ಈ ಮಿಶ್ರಣವನ್ನು ಹದವಾಗಿ ಬೆರೆಸಿ ಕಲಸಿ. ಗಟ್ಟಿಯುಂಡೆಯಾಗಿ ಕಟ್ಟಲು ಸಾಧ್ಯವಾಗುವಂತೆ ಕಲಸಿದರೆ ಉತ್ತಮ ಹಾಗು ರುಚಿಗೂ ಚೆನ್ನ ( ವಿ.ಸೂ. : ಬಿಸಿ ಅನ್ನವನ್ನೆ ಬಳಸಬೇಕೆಂದರೆ, ಹೇಗಾದರೂ ಅದನ್ನು ತಂಗಳಾಗಿಸುವ ದಾರಿ ಕಂಡುಹಿಡಿದರೆ ಒಳಿತು ; ಈ ಹಸಿಹುಳಿಗೆ ಬಿಸಿಯನ್ನ ತಂಗಳನ್ನದಷ್ಟು ರುಚಿಯಿರದೆಂದೆಂದು ಇದನ್ನು ಚಪ್ಪರಿಸಿ ತಿನ್ನುವವರೆಲ್ಲರ ಅಂಬೋಣ!)

ಇಷ್ಟಾದರೆ ನಮ್ಮ ‘ದಿಢೀರ ತಂಗಳು ಸಾಂಬಾರನ್ನ’ ರೆಡಿ! ಲಕ್ಷಣವಾಗಿ ಮುದ್ದೆ ಕಟ್ಟಿ ತಟ್ಟೆಯಲ್ಲಿ ಜೋಡಿಸಿಟ್ಟುಕೊಂಡು ರೇಡಿಯೊ ಹಾಡು ಕೇಳುತ್ತಲೊ, ಪೇಪರೊ, ಪುಸ್ತಕವೊ ಓದುತ್ತಲೊ ಅಥವಾ ಟಿವಿ ನೋಡುತ್ತಲೊ ಪಟ್ಟಾಗಿ ಹೊಡೆಯಬಹುದು. ಬೆಳದಿಂಗಳ ರಾತ್ರಿಯಾದರೆ ಸೀನನ್ನು ರೂಮಿನೊಳಗಿಂದ ತಾರಸಿಗೆ ಶಿಪ್ಟು ಮಾಡಿದರೆ ಸಾಕು – ಅದೆ ಬೆಳದಿಂಗಳೂಟವೂ ಆಗುತ್ತದೆ ( ಹುಷಾರು – ಒಬ್ಬರೆ ಇದ್ದರೆ ರೂಮೊಳಗೆ ಕ್ಷೇಮವೆಂದು ಕಾಣುತ್ತದೆ – ಒಂಟಿಯಾಗಿ, ತಾರಸಿಯಲ್ಲಿ, ಬೆಳದಿಂಗಳ ರಾತ್ರಿಯಲ್ಲಿ, ದೆವ್ವ ಮೋಹಿನಿಗಳ ಭಯವಿಲ್ಲದೆ ತಿನ್ನುವುದಾದರೂ ಹೇಗೆ? ಜತೆಯಿದ್ದರೆ ಓಕೆ!). ಇನ್ನೊಂದು ಪುಕ್ಕಟೆ ಸಲಹೆಯೆಂದರೆ – ಸ್ವಲ್ಪ ತಂಗಳನ್ನ ಜಾಸ್ತಿಯಿದ್ದು, ಹೆಪ್ಪು ಹಾಕಿದ ಮೊಸರೂ ಇದ್ದರೆ, ಜತೆಗೆ ಮೊಸರನ್ನದ ಚೆಂಡುಗಳನ್ನು ಕಲಸಿಟ್ಟುಕೊಂಡರೆ ಊಟ ಇನ್ನೂ ‘ಬೊಂಬೋಟ್’!

ಈ ಹೊಸ ರುಚಿಯನ್ನು ಪ್ರಯತ್ನಿಸಿ ನೋಡಿ, ತಿಂದು ಆನಂದಿಸಿ!

ವಿಶೇಷ ಎಚ್ಚರಿಕೆ: ಲೇಖನದಲ್ಲಿ ವರ್ಣಿಸಿದಂತ ತುರ್ತು ಪರಿಸ್ಥಿತಿಗಳಲ್ಲೆ ಈ ಹೊಸರುಚಿಯನ್ನು ಮಾಡಿ ಕಬಳಿಸಬೇಕಲ್ಲದೆ, ಯಥೇಚ್ಚವಾಗಿ ಸೋಮಾರಿಗಳಂತೆ ಪ್ರತಿದಿನ ಇದನ್ನೆ ಮಾಡಿ ಪತಿ (ಪತ್ನಿ) ದೇವರುಗಳ ಕೋಪ, ತಾಪ, ಶಾಪಕ್ಕೆ ಗುರಿಯಾಗಬಾರದು (ರೂಮಿನ ಬ್ರಹ್ಮಚಾರಿಗಳಿಗೆ ಈ ನಿಯಮದಿಂದ ವಿನಾಯ್ತಿ ಕೊಡಲಾಗಿದೆ). ಅಲ್ಲದೆ, ಈ ಖಾದ್ಯವನ್ನು ಮಾಡಿ, ತಿಂದು ಯಾವುದೆ ಅಡ್ಡ ಪರಿಣಾಮಕ್ಕೊಳಗಾದರೂ ಅದಕ್ಕೆ ಮಾಡುಗರೆ ಸ್ವತಃ ಹೊಣೆಯಲ್ಲದೆ, ಈ ಲೇಖನ, ಮತ್ತಿದರ ಕತೃ ಯಾವ ರೀತಿಯಲ್ಲು ಜಾವಾಬ್ದಾರನಲ್ಲವೆಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ.

ಇತಿ ಈ ಹೊಸ (ಹಳೆ) ರುಚಿ ತಿಂದು ಇನ್ನು ಬದುಕಿರುವ ಜೀವಂತ ಸಾಕ್ಷಿ,
ನಾಗೇಶ ಮೈಸೂರು, ಸಿಂಗಪುರದಿಂದ
(ಅಂದ ಹಾಗೆ ಆ ಚಿಕ್ಕಂದಿನ ದಿನಗಳಲ್ಲಿ ಇದು ಒಂದು ವಿಶೇಷ ಖಾದ್ಯವೆಂದುಕೊಂಡು, ಕೇಳಿ ಮಾಡಿಸಿಕೊಂಡು ತಿನ್ನುತ್ತಿದ್ದ ದಿನಗಳೂ ಹೇರಳ!!)

ಕೊಟ್ಟ ಕೊನೆಯ ಮಾತು:
ಇದನ್ನು ಹಾಸ್ಯ ಲೇಖನದಡಿ ಸೇರಿಸಬೇಕೊ, ರುಚಿ ಸಂಪದದಡಿ ಸೇರಿಸಬೇಕೊ ಗೊಂದಲವಾಗಿ – ಕಡೆಗೆ ನಿಜವಾದ ‘ಖಾದ್ಯವಾದ’ ಕಾರಣ ‘ರುಚಿ ಸಂಪದದಲ್ಲೆ’ ಉಳಿಸಿಕೊಳ್ಳಲಾಗಿದೆ. ಓದುಗರು ಯಾವ ತಲೆಬರಹದಡಿಯಲ್ಲಾದರೂ ಓದಿಕೊಳ್ಳಲು ಸರ್ವ ತಂತ್ರ ಸ್ವತಂತ್ರರು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s