00039. “ಮುದ್ದಣ್ಣ ಮನೋರಮೆ ಕಲಿತ ಚೀನಿ ಭಾಷೆ – 01” (ಭಾಗ – 01)

ಮುದ್ದಣ್ಣ ಮನೋರಮೆ ಕಲಿತ ಚೀನಿ ಭಾಷೆ – 01″ (ಭಾಗ – 01)

ಪೀಠಿಕೆ /ಟಿಪ್ಪಣಿ:

ಈ ಲಘು ಹಾಸ್ಯದ ಬರಹ ಓದುವ ಮೊದಲು ಈ ಕೆಲವು ನಿವೇದನೆ, ತಪ್ಪೊಪ್ಪಿಗೆಗಳು 🙂

1. ನಾನು ಮುದ್ದಣ್ಣನನ್ನು ಚೆನ್ನಾಗಿ ಓದಿ ತಿಳಿದುಕೊಂಡವನಲ್ಲ. ಶಾಲಾ ದಿನಗಳಲ್ಲಿ ಎಂದೊ ಓದಿದ್ದ “ಮುದ್ದಣ್ಣ ಮನೋರಮೆಯ ಸರಸ ಸಲ್ಲಾಪ” ಎಂಬ ಪಾಠ ಓದಿದ ನೆನಪಷ್ಟೆ ಇದರ ಮೂಲ ಬಂಡವಾಳ. ಹೀಗಾಗಿ ಅವರಿಬ್ಬರ ಸಂಭಾಷಣೆಯ ಎಳೆಯನ್ನೆ ಈ ಬರಹದ ಹಂದರವನ್ನಾಗಿ ಬಳಸಿದ್ದೇನೆ.
2. ಮೇಲ್ನೋಟಕ್ಕೆ ತಿಳಿಯುವಂತೆ ಇದೊಂದು ಲಘು ಹಾಸ್ಯದ ಬರಹ. ಖಂಡಿತ ಮುದ್ದಣ ಮನೋರಮೆಯ ಅಗೌರವವಾಗಲಿ, ಛೇಡನೆಯಾಗಲಿ ಅಲ್ಲ. ಬದಲಿಗೆ ಆ ಹಾಸ್ಯ ದ್ರವವನ್ನು ಈಗಿನ ಅಧುನಿಕ ಜಗಕ್ಕೆ ಹೊಂದಾಣಿಸುವ ಕಿರು ಪ್ರಯತ್ನವಷ್ಟೆ ಹೊರತು ಅವಹೇಳನವಲ್ಲ.
3. ಕಲಿಯಲು ತುಸು ಕಬ್ಬಿಣದ ಕಡಲೆ ಎಂದೆ ಹೆಸರಾದ ‘ಚೀಣಿ’ ಭಾಷೆಯ ಕೆಲ ತುಣುಕುಗಳನ್ನು ಪರಿಚಯ ಮಾಡಿಕೊಡುವುದಷ್ಟೆ ಇಲ್ಲಿನ ಉದ್ದೇಶ. ಹಾಗೆಂದು ನಾನೇನೂ ಚೀನಿ ಭಾಷಾ ಪಂಡಿತನಲ್ಲ, ಮತ್ತು ಇಲ್ಲಿರುವುದೆಲ್ಲಾ ಪಕ್ಕಾ ಸರಿಯಾದ ಶಾಸ್ತ್ರೀಯ ಚೀಣಿ ಭಾಷೆಯೆ ಎಂದು ಹೇಳುವ ಧಾರ್ಷ್ಟ್ಯವಾಗಲಿ, ಜ್ಞಾನವಾಗಲಿ ನನ್ನಲ್ಲಿಲ್ಲ. ಕೇವಲ ಕೆಲಸದ ನಿಮಿತ್ತದ ಒಡನಾಟದಲ್ಲಿ, ಸಾಮಾನ್ಯನೊಬ್ಬನಾಗಿ ನಾ ಕಂಡ, ನಾನರಿತುಕೊಂಡ ಬಗೆಯ ದಾಖಲೆಯಷ್ಟೆ; ಗ್ರಹಿಕೆಯಲ್ಲಿ ತಪ್ಪಿದ್ದರೆ ಕ್ಷಮೆಯಿರಲಿ, ಹಾಗೆಯೆ ತಿಳಿದವರು ಯಾರಾದರೂ ಇದ್ದರೆ ತಿದ್ದಲಿ. ಮೆಲು ಹಾಸ್ಯದೊಂದಿಗೆ ಕೇವಲ ಮೇಲ್ನೋಟದ ಸರಳತೆ, ಸಂಕೀರ್ಣತೆಗಳ ಪರಿಚಯವಷ್ಟೆ ಈ ಬರಹ ಉದ್ದೇಶ.
4. ಸಾಧಾರಣ ಪರಭಾಷೆ, ಅದರಲ್ಲೂ ವಿದೇಶಿ ಭಾಷೆ ಕಲಿಯುವುದು ತುಸು ತ್ರಾಸದಾಯಕ ಕೆಲಸ. ಈ ಮುದ್ದಣ್ಣ ಮನೋರಮೆಯ ಹಾಸ್ಯ ಸಂವಾದದ ರೂಪದಲ್ಲಿ ಹೇಳಿದರೆ ತುಸು ಸುಲಭವಾಗಿ ಗ್ರಾಹ್ಯವೂ, ಜೀರ್ಣವೂ ಆಗುವುದೆಂಬ ಅನಿಸಿಕೆಯೊಂದಿಗೆ ಬರೆಯುತ್ತಿದ್ದೇನೆ. ಒಂದು ವೇಳೆ ಈ ವಿಧಾನ ಹಿಡಿಸಿದರೆ, ಮತ್ತಷ್ಟು ಚೀನಿ ಪದಗಳ ಕಲಿಕೆಗೆ ಇದೆ ತರಹದ ಬರಹಗಳ ಮೂಲಕ ಯತ್ನಿಸುತ್ತೇನೆ. ಕೊನೆಗೆ ಕನಿಷ್ಠ ಮುದ್ದಣ್ಣ ಮನೋರಮೆಯ ಹಾಸ್ಯವಾದರೂ ಹಿಡಿಸೀತೆಂಬ ಆಶಯ.
5. ತುಸು ಹಳತು ಹೊಸತಿನ ಮಿಶ್ರಣದ ಹೊದಿಕೆ ಕೊಡಲು ಭಾಷಾಪ್ರಯೋಗದಲ್ಲಿ ಹಳೆ ಮತ್ತು ಹೊಸತಿನ ಶೈಲಿಗಳ ಮಿಶ್ರಣವನ್ನು ಯಾವುದೆ ನಿಯಮಗಳ ಬಂಧವಿಲ್ಲದೆ, ಧಾರಾಳವಾಗಿ ಬಳಸಿದ್ದೇನೆ – ಓದುವಾಗ ಆಭಾಸವಾಗದೆಂದುಕೊಂಡಿದ್ದೇನೆ, ನೋಡೋಣ!

ಇನ್ನು ಪೀಠಿಕೆಯಿಂದ ಹೊರಡೋಣ , ಲೇಖನದತ್ತ – “ಮುದ್ದಣ್ಣ ಮನೋರಮೆ ಕಲಿತ ಚೀನಿ ಭಾಷೆ – 01” (ಭಾಗ – 01)

– ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು

_______________________________________________________________________________
ಮುದ್ದಣ್ಣ ಮನೋರಮೆ ಸಂವಾದವೂ…… (ಭಾಗ – 01)
_______________________________________________________________________________

ಅಂದೊಂದು ದಿನ ಸೊಗಸಾದ, ಪೂರ್ಣ ಚಂದ್ರಮನಾವರಿಸಿದ ತುಂಬು ಹುಣ್ಣಿಮೆಯ ಇರುಳು. ಎಂದಿನಂತೆ ಮಡದಿ ಮನೋರಮೆಯೊಡನೆ ಊಟ ಮುಗಿಸಿದ ಮುದ್ದಣ್ಣ, ಚಂದ್ರಿಕೆಯ ತಂಬೆಲರನ್ನು ಮೆಲ್ಲಲು ಮನೋರಮೆಯ ಜತೆ ಮಹಡಿಯನ್ಹತ್ತಿದ್ದಾನೆ. ನಿಷೆಗೆ ತೆರೆದುಕೊಂಡಿದ್ದ ಛಾವಣಿಯಿರದ ಬಯಲ ಸಜ್ಜೆಯ ತೂಗುಯ್ಯಾಲೆಯ ಮೇಲ್ಕುಳಿತವನ ಪಕ್ಕ ಚಂದ್ರಮನ ಜತೆಗೆ ಚಕೋರಿಯಂತೆ ಮನೋರಮೆ ಕುಳಿತಿದ್ದಾಳೆ, ತನ್ನ ಚಿಗುರು ಬೆರಳುಗಳಿಂದ ಎಳೆ ಚಿಗುರೆಲೆಗಳನ್ನು ಮಡಿಸಿ ತಾಂಬೂಲವಾಗಿಸುತ್ತ. ಮೆಲುವಾಗಿ ಉಯ್ಯಾಲೆಯನ್ನು ಜೀಕುತ್ತಲೆ ಪ್ರಿಯೆಯ ತೊಡೆಯ ಮೇಲೆ ಒರಗಿ ಹಾಗೆ ಕಣ್ಮುಚ್ಚಿದ ಮುದ್ದಣ್ಣನ ಕೊರಳ ಸುತ್ತ ಎಡತೋಳಿನಾಧಾರವಿರಿಸಿ, ತುದಿಯುಗುರಿನಿಂದ ಅವನ ಮುಂದಲೆಯನ್ನು ನೇವರಿಸುತ್ತ, ಬಲದ ಕೈಯಿಂದ ಅವನ ತೆರೆದ ಬಾಯಿಗೆ ಮಡಿಚಿಟ್ಟ ತಾಂಬೂಲದ ಕಿರುಪಿಂಡಿಯ ನೀಡುತ, ಮೆಲುದನಿಯಲಿ ರಾಗವಾಗಿ ಹಾಡುತ್ತಿದ್ದಾಳೆ ಪ್ರಿಯಸತಿ. ಕೇಳುತ ಕೇಳುತಲೆ ತನ್ಮಯನಾಗಿ ತಲೆದೂಗುತ್ತ ಹಾಗೆಯೆ ನಿದ್ದೆಯ ಮಂಪರಿಗಿಳಿಯುತಿದ್ದವನನ್ನು ಮೆಲುವಾಗಿ ಬೀಸುವ ತಂಗಾಳಿಯೂ ಮೃದುವಾಗಿ ಸ್ಪರ್ಶಿಸಿ ತಟ್ಟಿ ತಟ್ಟಿ ಮಲಗಿಸುತ್ತಿದೆ. ಆ ಗಳಿಗೆಯೆ ಅಖಂಡವಾಗಿರಲಿ, ನಿರಂತರವಾಗಿರಲಿ ಎಂದು ಆಶಿಸುತ್ತಾ ನಿದಿರಾದೇವಿಯ ಮಡಿಲಿಗೆ ಜಾರುತ್ತಿದ್ದಾನೆ ಕವಿವರ್ಯ ಮುದ್ದಣ್ಣ…

ಅಂತಿರುವ ಸೊಗಸಾದ ಇರುಳಿನ ರಾತ್ರಿ ಇನ್ನೇನು ಮಂಪರು ಕವಿದು ಗಾಢನಿದ್ರೆಗೆ ಜಾರಿದನೇನೊ ಎನುವಷ್ಟರಲ್ಲಿ ತಟ್ಟನೆ ಅದೆಲ್ಲಿತ್ತೊ ಕಾಣೆ – ಶುರುವಾಯ್ತೆ ಮಳೆರಾಯನ ಆರ್ಭಟ…. ಕಡುಕಪ್ಪಿನ ಕಾರ್ಮೋಡಗಳ ಪುಂಡರ ಗುಂಪು ಶಶಾಂಕನ ಸುತ್ತಲಾವರಿಸಿ, ಅವನನ್ನೆ ಕಬಳಿಸಿ ನುಂಗಿ ಕತ್ತಲಾಗಿಸಿದ್ದೆ ಅಲ್ಲದೆ, ಅವನ ಮೃದುಲ, ಶೀತಲ, ಸ್ಪಟಿಕದ ಮೈ ಸೋಕಿ ಬೆವರಿತೇನೊ ಎಂಬಂತೆ ದಪ್ಪ ಹನಿಹನಿಗಳಾಗಿ ಕರಗಿ ಒಂದೊಂದೆ ಕಳಚಿ ಉದುರಲು ಆರಂಭವಾಯ್ತು. ಗಗನ ಕಳೆದು ಭುವಿ ಮುಟ್ಟುವ ಹೊತ್ತಿಗೆ ಆ ಮೊದಲ ಹನಿ, ಚಂದ್ರ-ಚಕೋರಿಯರಂತಿದ್ದ ಮುದ್ದಣ್ಣ ಮನೋಹರ ಜೋಡಿ ಕುಳಿತಿದ್ದ ಜಾಗೆಯನ್ನು ನೋಡಿ ಆಕರ್ಷಿತವಾದಂತೆ, ತಟ್ಟನೆ ಮುದ್ದಣನ ಹಣೆಯ ಮೇಲೆ ಹೆಜ್ಜೆಯೂರಿ ಮುಗ್ದೆ ಮನೋರಮೆಯ ಸೌಂದರ್ಯವನ್ನೆ ದಿಟ್ಟಿಸಿನೋಡತೊಡಗಿತು. ಆಯಾಚಿತವಾಗಿ ಮದನನತ್ತಲೆ ದೃಷ್ಟಿ ನೆಟ್ಟಿದ್ದ ಮಡದಿ, ಹಣೆಯ ಮೇಲೆ ಬೆವರಿಳಿಯಿತೇನೋ ಎಂದೆ ಭ್ರಮಿಸಿ, ತಂಗಾಳಿಯಲಿದೆಂತ ಬೆವರೆಂದು ಬೆರಗಾಗುತ್ತಲೆ ಸೆರಗ ತುದಿಯಿಡಿದು ಬೆರಳಿಂದ ಆ ಬೆವರ ಹನಿಯನ್ನು ಸವರಿದಳು. ಸೆರಗ ತುದಿವಸ್ತ್ರಕ್ಕಂಟಿದ ಹನಿ ಆ ಮುಗುದೆಯ ಮೊಗ ನೋಡಲಾಗದಲ್ಲ ಎಂಬ ಕೊರಗಲೆ ಬೇಸತ್ತು ಹೀರಿದ ವಸ್ತ್ರದುಡಿಗೆ ಸೇರಿತು. ಅದನ್ನೆ ಕಾಯುತ್ತಿದ್ದಂತೆ ಮತ್ತುರುಳಿತು ಮತ್ತೊಂದು ಹನಿ; ಮಗದೊಂದು, ತದ ನಂತರ ಇನ್ನೊಂದು. ಮೊದಮೊದಲಂದುಕೊಂಡ ಹಾಗಿದು ಬೆವರ ಹನಿಯಲ್ಲ; ಬದಲು ಮಳೆ ನೀರು ಜೋರಾಗುವ ಮುನ್ನಡಿಯೆಂದರಿತಾಗ ದಿಗ್ಬ್ರಮೆಯಿಂದ ಪತಿಯನ್ನು ಮೆಲುವಾಗಿ ತಟ್ಟೆಬ್ಬಿಸಿ ಒಳ ಕರೆತಂದಳು. ಇನ್ನು ಬಾಗಿಲನು ಹಾಕಿ ಒಳಗೆ ಸ್ವಸ್ತವಾಗಿ ಕೂರುವುದಕ್ಕಿಲ್ಲ, ಭೋರೆಂದು ಶುರುವಾಯ್ತು ಮಳೆ.

ಜೋರಾದ ಸದ್ದಿನಿಂದಾಗಿ ಪೂರ್ತಿ ಎಚ್ಚರನಾಗಿದ್ದ ಮುದ್ದಣ್ಣ, ನಲ್ಲೆಯತ್ತ ತಿರುಗಿ, “ಮನೋಹರಿ, ಇದೇನಿದು ಇದ್ದಕ್ಕಿದ್ದ ಹಾಗಿಂತಹ ಮಳೆ? ನನ್ನ ಸೊಗಸಾದ ಪಲ್ಲಂಗ-ತೂಗಾಟದ ನಿದ್ರೆಯೆಲ್ಲಾ ಹಾಳಾಗಿ ಹೋಯ್ತೆ..” ಎಂದು ವಿಲಪಿಸಿದ.

ಅದನ್ನು ಕೇಳಿ ನಸುನಕ್ಕ ಮಡದಿ ಮನೋರಮೆ ಛೇಡನೆಯ ದನಿಯಲ್ಲಿ, ” ನಿಮಗೆ ಪಲ್ಲಂಗದ ನಿದ್ರೆ, ನನಗೆ ‘ಜೋಮು’ ಹಿಡಿದರೂ ಅಲುಗಾಡದೆ ನಿಮ್ಮ ನಿದ್ದೆ ಕೆಡದಂತೆ ಕೂರುವ ಶಿಕ್ಷೆ…ಸದ್ಯ, ಮಳೆ ಬಂತಾಗಿ, ನಾನು ಬದುಕಿದೆ..”

ಮಳೆಯ ಹೆಸರನ್ನು ಮತ್ತೆ ಕೇಳುತ್ತಿದ್ದಂತೆ ಮುದ್ದಣ್ಣನ ಕವಿ ಹೃದಯ ಜಾಗೃತವಾಗಿ, “ಆಹಾ! ರಮಣಿ, ಈ ಮಳೆಯೆಂತಾ ಮನೋಹರವಾಗಿದೆ..ನನಗಿದರ ಸದ್ದು ಕೇಳುತ್ತಿದ್ದಂತೆ, ಲೇಖನಿ ಹಿಡಿದು ಕೂತು ಕಾವ್ಯ ಬರೆವ ಹಂಬಲವುಟ್ಟುತ್ತಿದೆ…ಈ ಸೊಗಸಾದ ಮಳೆಯೆಬ್ಬಿಸಿದ ಮಣ್ವಾಸನೆ, ವಿಕಸಿತ ಸುಮದ ಸುವಾಸನೆಯ ಜತೆ ಆಘ್ರಾಣಿತವಾಗಿ ಮನದಲಿ ಹುರುಪು ಹುಟ್ಟಿಸುತ್ತಿದೆ…ನಾನು ಬರೆಯುವ ಪರಿಕರಗಳನ್ನು ತಂದಿಡುವೆಯ ರಮಣಿ..?” ಎಂದ.

ಬರಹದ ಸಲಕರಣೆಗಳ ಸುದ್ಧಿಯೆತ್ತುತ್ತಲೆ ತಟ್ಟನೆ ಬೆಚ್ಚಿ ಬಿದ್ದ ಮನೋರಮೆಯು, “ಅಯ್ಯಯ್ಯೊ, ಪ್ರಾಣನಾಥ! ದಯವಿಟ್ಟು ಹಾಗೆ ಮಾಡಬೇಡಿ..ನೀವು ಬರೆಯ ಕೂತರೆ ಪಕ್ಕದಲ್ಲೊಂದು ಕಟ್ಟಿಕೊಂಡ ಹೆಣ್ಣು ಪುತ್ಥಳಿ ಬಂದು ನಿಂತರೂ ಗಮನಿಸದ ವೈರಾಗ್ಯ ನಿಮ್ಮದು..ಅದೂ ಅಲ್ಲದೆ, ಇಂದು ನಮ್ಮ ವಿವಾಹದ ವಾರ್ಷಿಕ ದಿನಾಚರಣೆ. ಬರಿ ನಾವಿಬ್ಬರೆ ಆರಾಮವಾಗಿ, ಖುಷಿಯಿಂದ ಕಾಲ ಕಳೆಯುವ ಉದ್ದೇಶದಿಂದಲ್ಲವೆ ಹೊರ ಹೋಗಿ ಕೂತಿದ್ದು? ಹಾಳು ಮಳೆಯಿಂದಾಗಿ ಎಲ್ಲವೂ ಹಾಳಾಯ್ತು..” ಎನ್ನುತ್ತ ಮಳೆಯನ್ನು ಶಪಿಸಿದಳು.

“ಅದೂ ನಿಜವೆನ್ನು….ಈ ದಿನ ವನ-ವಿಹಂಗಮ ವಿಹಾರ ನಡೆಸುತ್ತ, ಜೋಡಿ ಹಕ್ಕಿಗಳ ಹಾಗೆ ಆಡಿಕೊಂಡಿರಬೇಕಾದ ದಿನ…ಆದರೀ ಮಳೆಯೇಕೊ ಹೊರಗ್ಹೋಗಬಿಡದೆ ಕಟ್ಟಿಹಾಕುತ್ತಿದೆಯಲ್ಲ…ಸರಿ ಪ್ರಿಯೆ, ನೀನೆ ಹೇಳು ಏನು ಮಾಡುವುದೀಗ? ನಮ್ಮೀ ವಿಶೇಷ ದಿನದ ಸಲುವಾಗಿ ಏನಾದರೂ ವಿಶೇಷ ಆಲೋಚನೆಯಿದ್ದರೆ ಅದನ್ನೆ ಅನುಸರಿಸೋಣ…”

“ಪ್ರಿಯಾ, ಹೇಗೂ ಹೊರಗಂತೂ ಹೋಗುವಂತಿಲ್ಲಾ…ಇಲ್ಲೆ ಏನಾದರೂ ರಸವತ್ತಾದ, ಆಸಕ್ತಿಯುಟ್ಟಿಸುವುದೇನಾದರೂ ಇದ್ದಲ್ಲಿ ಹೇಳಲಾರೆಯಾ?” ಎಂದ ಮಡದಿಯತ್ತ ಮೆಚ್ಚುಗೆಯಿಂದ ನೋಡುತ್ತ, “ಪ್ರಿಯೆ, ಕವಿಯಾಗಿ ಹೇಳೆಂದರೆ ನನ್ನ ಹೊಸ ಕವನವನ್ನು ಓದಬೇಕಷ್ಟೆ.. ಅದಂತೂ ನೀನು ಹೇಗೂ ಕೇಳಿಯೆ ಇರುತ್ತಿ….ಬೇಕಿದ್ದರೆ ಮತ್ತೊಮ್ಮೆ….”

“ಅಯ್ಯೊ..ಅದು ದಿನವೂ ನಡೆಯುವ ಪ್ರಸಂಗ ತಾನೆ? ಅದು ಬೇಡ..ಮತ್ತೇನಾದರೂ ಹೊಸತಿದ್ದರೆ ಹೇಳು…ಅಲ್ಲದೆ ನೀ ಬರಿ ಹೇಳುವುದು ಮತ್ತು ನಾನು ಬರಿ ಕೇಳುವುದು – ಅಂತಹ ವಿಷಯವೂ ಬೇಡ…”

“ಮತ್ತೆಂತಿರಬೇಕು ರಮಣಿ…?”

“ನನಗೂ ಆಸಕ್ತಿ ಹುಟ್ಟಿಸುವಂತಿರಬೇಕು, ಕೊನೆತನಕ ಕುಂದದಂತಿರಬೇಕು, ಜತೆಗೆ ನಾನೂ ಸಕ್ರೀಯವಾಗಿ ಪಾಲುಗೊಳ್ಳುವಂತಿರಬೇಕು!”

” ಹಾಗಾದರೆ ನಾವಿಬ್ಬರೂ ಜುಗಲಬಂದಿಯ ಹಾಗೆ ಒಂದು ಹೊಸ ಕವನ ಬರೆದರೆ ಹೇಗೆ? ನಾನೊಂದು ಪ್ರಶ್ನೆಯ ಕಾವ್ಯ ಹಾಕುವೆ, ನೀನೊಂದು ಉತ್ತರದ ಕಾವ್ಯ ಹೇಳು..ಆಗ ಇಬ್ಬರೂ ಉತ್ಸಾಹದಿಂದ ಪಾಲ್ಗೊಳ್ಳಬಹುದು…”

ಮುದ್ದಣನ ರಣೋತ್ಸಾಹದ ಮಾತುಗಳನ್ನಲ್ಲೆ ತುಂಡಿರಿಸುತ್ತಾ, “ಅಯ್ಯೊ ..ಕಾವ್ಯ, ಕವನವೆಲ್ಲ ಬರೆಯುವುದು ನಿಮ್ಮಂತಹ ಕವಿಗಳದು… ನಾನೋ ಕೇಳಿ ಹರ್ಷಿಸುವ ರಸಿಕೆಯೆ ಹೊರತು ಕವಿಯತ್ರಿಯಲ್ಲ…ಅದು ಬಿಟ್ಟು ಬೇರೇನಾದರೂ ಹೇಳಬಾರದೆ? ಅಲ್ಲದೆ ಕಾವ್ಯವನ್ನು ನಾವು ದಿನವೂ ನೋಡುತ್ತಲೆ, ಕೇಳುತ್ತಲೆ ಇರುತ್ತೇವಲ್ಲ…”

ಚಣಕಾಲ ಚಿಂತನೆಯಲ್ಲಿ ತಲ್ಲೀನನಾದ ಮುದ್ದಣ್ಣ… ಪ್ರಿಯಸತಿಯ ಬೇಡಿಕೆ ಸಾಧುವಾದದ್ದೆ; ಅದರಲ್ಲೂ ವಿವಾಹೋತ್ಸವ ಆಚರಿಸುತ್ತಿರುವ ಈ ದಿನ ಏನು ಮಾಡಿದರೆ ಅವಳು ಮುದಗೊಂಡು ಪ್ರಸನ್ನಳಾದಾಳು ಅನ್ನುವ ಪ್ರಶ್ನೆ ಕೊಂಚ ಒಳಗೆಲ್ಲ ತಡಕಾಡಿಸುತ್ತಿತ್ತು. ಕಣ್ಣು ಮುಚ್ಚಿ ಆಲೋಚನಾ ಪ್ರಸವವನ್ನನುಭವಿಸುತ್ತಿದ್ದ ಮುದ್ದಣ್ಣ ತಟ್ಟನೆ ಸಮಾಧಿಯಿಂದೆಚ್ಚರಗೊಂಡಂತೆ ಕಣ್ಣು ಬಿಟ್ಟು, “ಪ್ರಿಯೆ, ಈ ದಿನವನ್ನು ವಿನೋದಮಯವಾಗಿಸಲು ನಾವ್ಹೀಗೆ ಮಾಡಿದರೆ ಹೇಗೆ?”

ಹುಬ್ಬುಗಂಟಿಕ್ಕಿ ಪತಿದೇವನನ್ನೆ ನೋಡುತ್ತಾ ಕುಳಿತಿದ್ದ ಮನೋರಮೆ ಚಕ್ಕನೆ, “ಸರಿ ಹಾಗೆಯೆ ಮಾಡುವ” ಎಂದಳು!

ಬಿಲ್ಲಿನಿಂದ ಚಿಮ್ಮಿದ ಬಾಣದಂತೆ ಬಿರುಸಾಗಿ ಬಂದ ಅವಳ ಮಾತಿನ ಹಿಂದಿನ ಅಸಹನೆ ಅರಿತವನಂತೆ ನಸುನಗೆ ನಕ್ಕ ಮುದ್ದಣ್ಣ, “ಮುನಿಯದಿರು, ಹೃದಯೇಶ್ವರಿ.. ಸಮಾಧಾನದಲಿ ನಾ ಹೇಳಲಿರುವುದು ಕೇಳು..ಅದು ನಿನಗೂ ಉಚಿತವೆನಿಸಿದರೆ, ಹಿತವೆನಿಸಿದರೆ ಅದರ ಕುರಿತು ಸಂವಾದಿಸಬಹುದು…ಇಲ್ಲವಾದರೆ ಬೇರೆ ವಿಷಯ ಹುಡುಕಿಕೊಳ್ಳಬಹುದು…”

“ಅಂದ ಮೇಲೆ ಮನದಾಲೋಚನೆಯೇನಿದೆಯೆಂದು ಪಟ್ಟನೆ ಹೇಳಿಬಿಡುವುದು ತಾನೆ? ನಿಮ್ಮ ಮನದಲ್ಲೆ ಎಲ್ಲ ಚಿಂತನೆ ನಡೆಸಿ,’ಹೀಗೆ ಮಾಡಿದರೆ ಹೇಗೆ?’ ಅಂತ ಪ್ರಶ್ನಿಸಿದರೆ ಅದು ನನಗರಿವಾಗಲಾದರೂ ಹೇಗೆ, ರಮಣ?”

“ಅರ್ಥವಾಯಿತು ಸುಂದರಿ…ಇಗೋ, ಇದೋ ಇನ್ನು ತಡವಿಲ್ಲದೆ ಹೇಳಿಬಿಡುತ್ತೇನೆ…ನಿನಗೆ ತಿಳಿದಿರುವಂತೆ ನಾನು ಈಚೇಗೆ ಹಲವಾರು ಭಾಷೆಗಳನ್ನು ಕಲಿಯುತ್ತಿರುವುದು ಸರಿಯಷ್ಟೆ?”

“ಹೌದು ನಲ್ಲಾ, ನೆನಪಿದೆ…..ನೀನಿತ್ತೀಚಿನ ದಿನಗಳಲ್ಲಿ ಕನ್ನಡವಲ್ಲದೆ ಹಿಂದಿ, ಆಂಗ್ಲ, ಜರ್ಮನ್, ಚೀಣಿ ಮತ್ತು ಸ್ಪಾನಿಷ್ ಭಾಷೆಗಳನ್ನು ಕಲಿಯಲು ಹೆಣಗುತ್ತಿರುವುದು…ಅದರಿಂದಾಗಿ ತಾನೆ ನನಗವುಗಳ ಮೇಲೆ ಕೋಪ! ನನ್ನ ಸವತಿಯ ಹಾಗೆ ಬಂದು, ನಿನ್ನ ಸಮಯವನ್ನೆಲ್ಲಾ ಹಿಂಡಿ ಹಾಕಿ ನನಗೆ ನಿನ್ನ ಜತೆ ಒಡನಾಡಲೂ ಸಮಯವಿರದ ಹಾಗೆ ಮಾಡಿಬಿಟ್ಟಿವೆ…ಅವನ್ನು ಹೇಗೆ ತಾನೆ ಮರೆಯಲು ಸಾಧ್ಯ?”

“ನಲ್ಲೆ, ನಿನ್ನ ಮಾತು ನಿಜವೆ….ನಮ್ಮ ಕನ್ನಡ ನಾಡು ನುಡಿಯ ಪರಿಮಳ ಬರಿ ಕನ್ನಡದಲ್ಲೆ ಇದ್ದರೆ, ಹೊರಗಿನ ಮಂದಿ ಅದನ್ನು ಅರಿಯುವುದಾದರೂ ಹೇಗೆ? ಸಂಸ್ಕೃತಿ, ಸಾಹಿತ್ಯದ ಮೂಲಕವೆ ತಾನೆ ಪಸರಿಸಬೇಕು? ಆದರೆ ನಮ್ಮಲ್ಲೆ ಎಷ್ಟೊ ಶ್ರೇಷ್ಟ ಸಾಹಿತ್ಯ, ಹೇರಳವಾದ ಸಾಂಸ್ಖೃತಿಕ ಹಿನ್ನಲೆ ಇದ್ದರು ಇದು ಬರಿ ನಮಗಷ್ಟೆ ತಿಳಿದು ನಮ್ಮಲ್ಲೆ ಉಳಿದುಕೊಂಡುಬಿಟ್ಟಿದೆ. ಹೀಗಾಗಿ, ಇದನ್ನೆಲ್ಲ ಬೇರೆಯವರಿಗೂ ಮುಟ್ಟಿಸುವ ಕೆಲಸ ಆಗಬೇಕಿದೆ…ನಾನೀ ಕೆಲವು ಭಾಷೆಗಳನ್ನು ಕಲಿತರೆ ನಮ್ಮ ಶ್ರೀಮಂತ ಕನ್ನಡದ ಸೊಗಡನ್ನು ಬೇರೆಯವರಿಗೂ ಕಾಣಿಸಬಹುದು ಮತ್ತು ಹಾಗೆಯೆ ಆ ಭಾಷೆಯನ್ನು ಅರಿತು, ಆ ಸಾಹಿತ್ಯವನ್ನು ಕನ್ನಡಕ್ಕೂ ತರಬಹುದೆಂಬ ಆಶಯವಷ್ಟೆ..”

” ನಾನೆಲ್ಲಿ ಅದನ್ನು ತಪ್ಪೆಂದೆ ಮನೋಹರ? ಇಷ್ಟೆಲ್ಲಾ ಭಾಷೆಗಳ ಕಲಿಕೆ, ಒಡನಾಟ, ಸಹವಾಸ – ಇದರ ನಡುವೆ ನಿಮಗೆ ನನಗೆಂದು ಸಮಯವೆಲ್ಲಿರುತ್ತದೆನೆಂದು ಹೇಳಿದೆನಷ್ಟೆ…”

“ನಾನೀಗೇನು ಐದನ್ನು ಒಟ್ಟಾಗಿ ಕಲಿಯುತ್ತಿಲ್ಲವಲ್ಲ? ಸದ್ಯಕ್ಕೆ ಅತಿ ಹೆಚ್ಚು ಜನರು ಮಾತಾಡುವ ಸರಳ ಚೀಣಿ ಭಾಷೆಯಾದ ‘ಮ್ಯಾಂಡರಿನ್’ ಅನ್ನು ಮಾತ್ರವೆ ಕಲಿಯುತ್ತಿದ್ದೇನೆ. ಅದು ಕರಗತವಾದ ಮೇಲೆ ಮತ್ತೊಂದು, ಹಾಗೆ ಮಗದೊಂದು…ಅಂದ ಹಾಗೆ, ನಾನು ಹೇಳ ಹೊರಟಿದ್ದು ಈ ಭಾಷೆಯ ಕುರಿತಾಗೆ….”

ಈಗ ಮನೋರಮೆಯ ಮುಖದಲ್ಲಿ ಇನ್ನು ದೊಡ್ಡ ಪ್ರಶ್ನಾರ್ಥಕವೆದ್ದು ಗಂಟಿಕ್ಕಿದ ಹುಬ್ಬಿನ ಜತೆಗೆ ಕಣ್ಣುಗಳು ಅಗಲವಾದವು…

“ತಾಳು, ತಾಳು….ನಾ ಹೇಳಬೇಕಿರುವುದನ್ನು ಪೂರ್ತಿ ಕೇಳು…ಇನ್ನು ಕೆಲವು ದಿನಗಳಲ್ಲೆ, ನಮ್ಮ ನೆಚ್ಚಿನ ಕನ್ನಡದ ರಾಯಭಾರಿಯಾಗಿ ನಾನು ಕೆಲ ತಿಂಗಳುಗಳ ಮಟ್ಟಿಗೆ ಚೀನಾಕ್ಕೆ ಹೋಗಬೇಕಾಗುತ್ತದೆ…..ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದನ್ವಯ…”

“ಹಾಂ….? ಇದೇನಿದು ಹೊಸ ಧೂಮಕೇತು? ನನಗೆ ಇದರ ಬಗ್ಗೆ ಮೊದಲೆ ಏನೂ ಹೇಳಿರಲ್ಲೆ ಇಲ್ಲಾ….” ಗಾಬರಿಯ ದನಿಯಲ್ಲಿ ಬಂತು ಮಡದಿಯ ಮಾರುತ್ತರ…

” ಗಾಬರಿಯಾಗದಿರು ಭಾಮಾಮಣೀ…ಇದು ನನಗೂ ಈಗಲೆ ಗೊತ್ತಾಗಿದ್ದು. ನಮ್ಮ ವಿವಾಹೋತ್ಸವದ ಈ ದಿನವೆ ನಿನಗೀ ಅಚ್ಚರಿ ಸುದ್ದಿ ಹೇಳಲೆಂದೆ ನಾನೂ ಕಾತುರತೆಯಿಂದ ಕಾಯುತ್ತಿದ್ದೆನಷ್ಟೆ….”

” ಇದರಲ್ಲಿ ಅಚ್ಚರಿಯೆಲ್ಲಿ ಬಂತು ಪ್ರಾಣಕಾಂತ? ನೀನು ತಿಂಗಳುಗಟ್ಟಲೆ ನನ್ನನ್ನಿಲ್ಲಿ ಬಿಟ್ಟು ಅಲ್ಲೆಲ್ಲೊ ಕಾಣದ ದೇಶದಲ್ಲಿ ಹೋಗಿಬಿಟ್ಟರೆ, ನಾನಿಲ್ಲಿ ಏಕಾಕಿಯಾಗಿ ಪಡುವ ವಿರಹ ವೇದನೆಯನ್ನು ಮುಚ್ಚಿಟ್ಟು ಆನಂದವಾಗಿರಬೇಕೆಂದೆ?”

ದನಿಯಲಿದ್ದ ತುಸು ಕೋಪ, ವ್ಯಂಗ್ಯ, ಅಸಹನೆಯನ್ನು ಗಮನಿಸದೆ ಮುಂದುವರೆಸಿದ ಮುದ್ದಣ್ಣ, ” ಅಲ್ಲೆ ಅಚ್ಚರಿಯ ವಿಷಯವಿರುವುದು..ನಾನು ಅಚ್ಚರಿಯೆಂದದ್ದು ನಾನು ಹೋಗುವ ವಿಷಯದ ಕುರಿತಲ್ಲಾ…”

“ಮತ್ತೆ…?”

“ಮತ್ತಿನ್ನೇನು….? ಹೀಗೆ ಹೋಗುವ ಕಾಲಾವಧಿ ಸಾಕಷ್ಟು ದೊಡ್ಡದಿರುವುದರಿಂದ, ಬೇಕಿದ್ದರೆ ಜತೆಯಲ್ಲಿ ಜೋಡಿಯಾಗೊಬ್ಬರನ್ನೂ ಕರೆದುಕೊಂಡು ಹೋಗಬಹುದು!”

” ನಿಜವೆ ಪ್ರಾಣನಾಥ…..?” ನಿಜಕ್ಕೂ ಅಚ್ಚರಿ, ಉದ್ವೇಗಗಳಿಂದೊಡಗೂಡಿದ ದೊಡ್ಡ ದನಿಯಲ್ಲಿ ಹೆಚ್ಚು ಕಡಿಮೆ ಕಿರುಚಿದಂತೆ ಕೇಳಿದಳು ಮನೋರಮೆ.

ತುಟಿಯಂಚಿನಲ್ಲೆ ನಗುತ್ತ ಮುದ್ದಣ್ಣ, “ಹೌದು ಕಮಲವದನೆ… ಆರು ತಿಂಗಳಿಂದೊಂದು ವರ್ಷದ ತನಕ ಅಲ್ಲಿರಬೇಕಾದ ಪ್ರಮೇಯವಿರುವುದರಿಂದ, ‘ಯಾರ ಜೋಡಿಯಾದರು’ ಸರಿ ಜತೆಗೊಬ್ಬರು ಬರಲು ಅವಕಾಶವಿದೆಯಂತೆ…ಇದು ಒಂದು ವಿಧದ ಸಾಂಸ್ಕೃತಿಕ ವಿನಿಮಯ ತಾನೆ….?”

“ಓಹೊಹೊ….ನಿಮಗೆ ಬೇರೆ ಯಾರೂ ಸರಿಯಾದ ಜೋಡಿ ಸಿಗಲಿಲ್ಲವೆಂದು ನನಗೆ ಕೇಳುತ್ತಿದ್ದೀರಾ…ನನಗೇನೂ ಹಾಗೆಲ್ಲಾ ಅಲ್ಲೆಲ್ಲ ಸುತ್ತಾಡಬೇಕೆಂಬ ಹಂಬಲವೇನೂ ಇಲ್ಲಾ…ಯಾವಳಾದರೂ ಬರುವವಳಿದ್ದರೆ ಧಾರಾಳವಾಗಿ ಕರೆದುಕೊಂಡು ಹೋಗಿ…”

ಈರ್ಷೆ ಮುನಿಸಿನ ಮಡದಿಯ ದನಿಗೆ ಮತ್ತಷ್ಟು ಉಪ್ಪೆರಚಲು ಯತ್ನಿಸದೆ ಮುದ್ದಣ್ಣ ಇಂತೆಂದ, “ಈ ಹಾಳು ಮುನಿಸು, ವಾಗ್ವಾದವನ್ನು ಕೈಬಿಡು ಪ್ರಿಯೆ…ಹುಬ್ಬುಗಂಟಿಕ್ಕಿದ ನಿನ್ನ ಕೋಪದ ಮೊಗ ನೋಡಲು ಸುಂದರವಾದರೂ, ಈ ದಿನ ನಿನ್ನನ್ನು ನಗು ಮೊಗದಲ್ಲಿರಿಸಿ ನೋಡಲೆ ನನಗೆ ಹೆಚ್ಚು ಪ್ರಿಯ….ನಾನು ಯಾರಾದರೂ ಜೋಡಿಯೆಂದದ್ದು ಯಾರೋ ಹೆಣ್ಣೆಂಬರ್ಥದಲ್ಲಲ್ಲ…”

ಪತಿಯ ಮುದನೀಡುವ ಹೊಗಳಿಕೆಯ ನುಡಿಗಳಿಗೊಳಗೆ ಖುಷಿಯಾದರೂ, ಹೊರಗೆ ಬಿಗುಮಾನ ಬಿಡದ ಮುಖದಲ್ಲೆ,”ಮತ್ತಿನ್ನಾವ ಅರ್ಥದಲ್ಲೊ….?” ಎಂದು ಕೊಂಕು ನುಡಿದಳು.

” ರಮಣಿ, ನಾವು ಹೋಗುವ ಗುಂಪಿನಲ್ಲಿ ಮದುವೆಯಾದ ನನ್ನಂತಹವರು, ಇನ್ನು ಮದುವೆಯಾಗದ ಬ್ರಹ್ಮಚಾರಿಗಳು, ವಯಸ್ಸಾದ ವೃದ್ಧರು – ಹೀಗೆ ಎಲ್ಲಾ ವಯಸಿನವರೂ ಇರುತ್ತಾರೆ; ಹೀಗಾಗಿ, ಅವರವರಿಗೆ ಅನುಕೂಲವಾದ ಜೋಡಿ ಜತೆಗೆ ಬರಬೇಕಾಗುತ್ತದೆ…. ವಯಸ್ಸಾದವರಿಗೆ ನೋಡಿಕೊಳ್ಳಲೆ ಒಬ್ಬರ ಜೋಡಿಯಿರಬೇಕಲ್ಲವೆ? ಹಾಗೆ..”

” ಹೌದಲ್ಲವೆ ಮತ್ತೆ?” ಎಂದವಳ ಮುಖ ಕಮಲವೆ ಅರಳಿದ ನೈಜ್ಯ ತಾವರೆಯಂತಾಗಿ, ಮೊಗದ ಬಿಗಿ ಸಡಿಲಾಗಿ ಪೂರ್ಣ ಚಂದ್ರಿಕೆಯಂತರಳಿದ ಪ್ರಪುಲ್ಲತೆಯು ಇಡಿ ವದನದಲ್ಲಿ ಪಸರಿಸಿದಾಗ, ನೆಮ್ಮದಿಯ ನಿಟ್ಟುಸಿರುಬಿಟ್ಟ ಮುದ್ದಣ್ಣ.

” ನಾನೀದಿನ ನಿನಗೆ ಹೇಳ ಹೊರಟ ಮೊದಲ ಸಿಹಿ ಸುದ್ಧಿ ಇದೇನೆ….ಹೇಗೂ ನಾನು ಹೊರಟರೆ ಅಲ್ಲಿ ಏಕಾಕಿ. ಅಲ್ಲೊ ಚಿಟ್ಟೆ ಪಟ್ಟೆಗಳಿಂದಿಡಿದು ಹಾವು, ಹಂದಿ, ಕೋತಿಗಳೆಲ್ಲರನ್ನು ತಿಂದುಹಾಕುವ ಪದ್ದತಿಯೆಂದು ಕೇಳಿದ್ದೇನೆ….ನಿನ್ನ ಕೈಯಲ್ಲಿ ದಿನದಿನವೂ ಸೊಗಸಾದ ಅಡುಗೆ ಮಾಡಿ ಬಡಿಸುಣಿಸುತ್ತ, ಜತೆ ಜತೆಗೆ ನಂಚಿಕೊಳ್ಳುವ ನಿನ್ನ ಹಿತವಾದ ಮಾತುಗಳನ್ನು ಕೇಳುತ್ತ ಉಣ್ಣುತ ಆನಂದವಾಗಿರುವ ನಾನು, ಅಲ್ಲಿ ಹೇಗೆ ತಾನೆ ಒಬ್ಬನೆ ಸಂಭಾಳಿಸಬಲ್ಲೆ, ನಳಪಾಕಿಣಿ? ಜತೆಗೆ ನೀನಿಲ್ಲದೆ ನನಗಲ್ಲಿ ಸ್ಪೂರ್ತಿಯಾದರೂ ಯಾರು? ಆ ಕಾರಣಕ್ಕೆ ನಾನಾಗಲೆ ನೀನು ನನ್ನ ಜತೆ ಬರಲಿರುವೆಯೆಂದು ಹೇಳಿ, ಸುಳಿವು ಕೊಟ್ಟುಬಿಟ್ಟಿರುವೆ…!”

“ಆಗಲೆ ಹೇಳಿಯೂ ಬಿಟ್ಟಿರುವಿರಾ….” ರಾಗದಲ್ಲಿ ಮನೋರಮೆ ಎಳೆದಾಗ ಅದನ್ನಲ್ಲೆ ತಡೆಯುತ್ತ, “ಇನ್ನು ಖಚಿತವಾಗಿ ಹೇಳಿಲ್ಲ…ಮೊದಲು ನಿನ್ನೊಡನೆ ಚರ್ಚಿಸಿ ಅನುಮತಿ ಪಡೆದ ಮೇಲೆ ತಿಳಿಸುತ್ತೇನೆಂದು ಹೇಳಿ ಬಂದೆ….”

“ಆರು ತಿಂಗಳೊಂದು ವರ್ಷವೆಂದರೆ ಸ್ವಲ್ಪ ಹೆಚ್ಚಾಗಲಿಲ್ಲವೆ ದೊರೆ?”

” ನಮ್ಮ ಮದುವೆಯಾಗಿ ಸಾಕಷ್ಟು ಕಾಲ ಕಳೆದು ನಾವಿಬ್ಬರು ಒಟ್ಟಾಗಿದ್ದರು, ಈ ಕಾವ್ಯ, ಕಥನಗಳ ನಡುವಲ್ಲಿ ನಿನ್ನ ಜತೆ ಏಕಾಂತವಾಗಿ ಹೊರಗೆ ಸುತ್ತಾಡಲೆ ಆಗಲಿಲ್ಲ…ಆದರೆ ಈಗ ಆ ಸದಾವಕಾಶ ತಾನಾಗೆ ಬಂದಿದೆ – ಸ್ವಾಮಿಕಾರ್ಯದ ಜತೆಗೆ ಸ್ವಕಾರ್ಯದ ಹಾಗೆ… ನೀನು ‘ಹೂಂ’ ಅಂದರೆ ಸಾಕು ನೋಡು, ಒಂದು ಕೈ ನೋಡೆಬಿಡೋಣ, ಒಟ್ಟಾಗಿ..”

“ಅಂತೂ ಹೇಗಾದರೂ ಮಾಡಿ ನನ್ನ ಬಾಯಿಂದ ‘ಹೂಂ’ ಅನಿಸುವುದರಲ್ಲಿ ನೀವು ಚತುರರು…..’

“ಇದರರ್ಥ ಒಪ್ಪಿದೆಯೆಂದೆ ತಾನೆ ಪ್ರಿಯೆ?”

“ಒಪ್ಪಲಿ ಬಿಡಲಿ ಅಷ್ಟುಕಾಲ ನಿಮ್ಮನ್ನಗಲಿ ದೂರವಿರುವುದು ಆಗದ ಮಾತು…. ಅಲ್ಲೇನೇನೊ ತಿಂದು ನಿಮ್ಮ ಆರೋಗ್ಯದ ಗತಿಯೇನಾದರು ಆದರೆ ನೋಡುವವರಿರಬೇಕಲ್ಲವೆ? ಮೊದಲೆ ಅದು ಮಾಯಾಂಗನೆಯರ ನಾಡೆಂದು ಕೇಳಿದ್ದೇನೆ… ಹೀಗಾಗಿ ಇಷ್ಟವೊ ಕಷ್ಟವೊ, ನಾನಂತೂ ಹೊರಡುವೆ..”

ಮಡದಿಯ ಮಾತಿಗೆ ಮತ್ತೊಮ್ಮೆ ನಕ್ಕ ಮುದ್ದಣ್ಣ,”ಈ ಹೆಂಗಳೆಯರು ಭಾಷಾಚತುರರು. ತಮಗೆ ಬೇಕಾದ ರೀತಿಯಲ್ಲಿ ಮಾತಿನ ಓಘವನ್ನೆ ತಿರುಗಿಸಬಲ್ಲ ಚಾಣಾಕ್ಷೆಯರು….ಅದೇನೆ ಇರಲಿ, ನೀನು ಬರಲೊಪ್ಪಿದೆಯಲ್ಲ ಸಾಕು ಬಿಡು….”

“ಮಾತಿನಲ್ಲಿ ನೀನೇನು ಕಡಿಮೆಯಿರುವೆ ಪ್ರಿಯಾ…ನಾನಾಡುವ ಮಾತೆಲ್ಲ ನಿನ್ನಿಂದ ಪಡೆದ ಬಳುವಳಿಯೆ ತಾನೆ? ಅದರ ಶ್ರೇಯಸ್ಸು ನಿನಗೆ ತಾನೆ ಸೇರಬೇಕು?” ಎಂದು ಮುದ್ದಣನತ್ತ ಮುದ್ದಿನ ಕುಡಿನೋಟವೊಂದನ್ನು ಬೀರಿದಳು ಸತೀಮಣಿ. ನಾರಿಯ ಪ್ರೇಮಾದರ ತುಂಬಿದ ಕುಡಿನೋಟಕೆ ಶರಣಾಗದ ಗಂಡಾದರೂ ಯಾರು? ಅದಕೆ ಮುದ್ದಣನೇನು ಹೊರತಾಗಬಲ್ಲನೆ? ಅದರಲ್ಲು ಸತಿಯ ಕೈಯಲ್ಲಿ ಹೊಗಳಿಸಿಕೊಳ್ಳುವ ಗಂಡಿನ ಕಥೆಯೆ ಬೇರೆ!

ಆ ದಿವ್ಯಾನಂದದ ಹೊದರಿನಲ್ಲೆ,”ಅಯ್ಯೊ ಹಾಳು ಮರೆವೆ! ನಾನು ನಿಜಕ್ಕು ಹೇಳಹೊರಟಿದ್ದು ಇಷ್ಟು ಮಾತ್ರವಲ್ಲ…”

“ಮತ್ತಿನ್ನೇನು ಹೇಳಲಿತ್ತು?”

” ಈ ಮಳೆಯ ಏಕತಾನತೆಯ ಬೇಸರ ಕಳೆಯಲು ಆಗುವಂತೆ, ನಮಗುಪಯೋಗವೂ ಆಗುವಂತೆ ಒಂದು ಹೊಸ ಆಟದ ಆಲೋಚನೆ ಹೊಳೆದಿದೆ…”

“ಏನು ಆಟ ಪ್ರಿಯತಮ?”

“ಹೇಗೂ ನಾವಿಬ್ಬರು ಅಲ್ಲಿದ್ದಾಗ ಚೀಣಿ ಭಾಷೆಯ ಅವಶ್ಯಕತೆಯಿರುತ್ತದೆ…..”

“ಅದಕ್ಕೆ…?”

“ಹೇಗೂ ನಾನೀಗಾಗಲೆ ಚೀನಿ ಭಾಷೆ ಕಲಿಯುತ್ತಿದ್ದೇನೆ………”

“ಸರಿ….?”

“…..ಅದನ್ನೆ ನಿನಗು ಕಲಿಸಿದರೆ, ನೀನು ಕಲಿತಂತಾಗುತ್ತದೆ, ನನಗೂ ಅಭ್ಯಾಸಕ್ಕೆ ಜೊತೆಯಾಗುತ್ತಿದೆ…..”

ಬೇರೆಯ ದಿನಗಳಲ್ಲಾಗಿದ್ದರೆ ಆದೇನನ್ನುತ್ತಿದ್ದಳೊ- ಆದರೆ ಇಂದು ಚೀನಾಕ್ಕೆ ಹೋಗುವ ಮಾತಿನ ಹಿನ್ನಲೆಯಲ್ಲಿ ,’ಹೌದಲ್ಲವೆ? ಅಲ್ಲಿ ಹೇಗೂ ಭಾಷೆ ಕಲಿಯಲೆ ಬೇಕು…ಈಗಲೆ ಒಂದು ಸ್ವಲ್ಪ ಹೇಗಿರುವುದೆಂಬ ರುಚಿ ನೋಡಿದರೆ, ಎಷ್ಟು ಕಷ್ಟ, ಎಷ್ಟು ಸುಲಭವೆಂಬ ಅರಿವಾಗುತ್ತದೆ’ ಎಂದು ಯೋಚಿಸಿದ ಭಾಮಾಮಣಿ ತಲೆಯಾಡಿಸುತ್ತ ಒಪ್ಪಿಗೆ ಸೂಚಿಸಿದಳು.

“ಕಲಿಯಲಿಕ್ಕೆ ತುಂಬ ಕಷ್ಟದ ಭಾಷೆಯೆಂದು ನೀವೆ ಹೇಳುವುದನ್ನು ಕೇಳಿದ್ದೇನೆ…ನಾವಿರುವ ಕೆಲ ತಿಂಗಳಲ್ಲಿ ಅದೆಷ್ಟು ಕಲಿಯಲು ಸಾಧ್ಯ ಪ್ರಿಯಾ? ಆದರೂ ಕಲಿಯಲು ನನ್ನ ಅಭ್ಯಂತರವೇನೂ ಇಲ್ಲ…ಜತೆ ಜತೆಗೆ ಕಲಿತರೆ ತಾನೆ ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯ?”

“ಹೌದು ನಲ್ಲೆ..ಈ ಭಾಷೆ ಕಲಿಯುವುದು ನಮ್ಮ ಕನ್ನಡದ ಹಾಗೆ ‘ಸುಲಿದ ಬಾಳೆಯ ಹಣ್ಣಿನಂದದಿ..’ ಅಲ್ಲವಲ್ಲ…? ಆದರೆ ನೀನೇನು ಓದಿ, ಬರೆದು ಮಾಡುವ ಅಗತ್ಯವೇನೂ ಇರುವುದಿಲ್ಲ. ತುಸು ಮಾತಾಡುವುದು ಕಲಿತರೆ ಸಾಕು; ನನಗಾದರೆ ಎಲ್ಲವನ್ನು ಕಲಿವ ಅಗತ್ಯವಿದೆ. ನಿನಗದನ್ನೆಲ್ಲ ವಿವರವಾಗಿ ಹೇಳುವೆ..ಹೇಗೂ ಎಚ್ಚರವಾಗಿಬಿಟ್ಟಿದೆ, ತುಸು ಕಾಫಿ ಮಾಡಿ ಕುಡಿಯುತ್ತ ಮಾತಾಡೋಣವೆ, ರಮೆ?”

“ಅಯ್ಯೊ..ಹಾಳು ಮರೆವು…ನಿಮಗಿಷ್ಟವಾದ ಪಕೋಡ ಕರಿಯಲೆಂದೆ, ಹಿಟ್ಟೆಲ್ಲಾ ಕಲಸಿಟ್ಟಿದ್ದೆ, ಮರೆತೆ ಹೋಗಿತ್ತು ನೋಡಿ! ಬನ್ನಿ ಹಾಗೆ ಅಡುಗೆ ಮನೆಯಲ್ಲೆ ಕರಿಯುತ್ತಾ ಮಾತನಾಡೋಣ… ಬಿಸಿಬಿಸಿ ಕಾಫಿಯ ಜತೆಗೆ…”

ಪಕೋಡ ಎನ್ನುವ ಹೆಸರಿನ ವಾಸನೆಗೆ ಮೂಗಿನ ಹೊಳ್ಳೆ ಅರಳಿಸಿದ ಮುದ್ದಣ್ಣ, ” ಅದೀಗ ಸರಿಯಾದ ಮಾತು…ನಡೆ ಅಲ್ಲೆ ಹೋಗಿ ಕರಿಯುತ್ತಾ, ತಿನ್ನುತ್ತ ಮಾತಾಡೋಣ..ಕಲಿಯುವುದು ಸರಾಗವಾಗಿ ನಡೆಯುತ್ತದೆ…ಮೆದುಳಿನ ಜತೆಗೆ ಹೊಟ್ಟೆಗೂ ಮೇವು” ಎಂದು ಮೇಲೆದ್ದು ಅಡಿಗೆ ಮನೆಯತ್ತ ಹೊರಟ ಮಡದಿಯನ್ನು ಹಿಂಬಾಲಿಸಿದ.

(ಇನ್ನೂ ಇದೆ – ಮುಂದಿನ ಭಾಗಕ್ಕೆ ಲೇಖನ 98 ನ್ನು ಓದಿ)

00098. “ಮುದ್ದಣ್ಣ ಮನೋರಮೆ ಕಲಿತ ಚೀನಿ ಭಾಷೆ – 02” (ಭಾಗ – 02)

ನಿಮ್ಮ ಟಿಪ್ಪಣಿ ಬರೆಯಿರಿ