00042. ವಚನದಲ್ಲಿ ನಾಮಾಮೃತ ತುಂಬಿದ ವಚನಾಂಜಲಿ ಕಾರ್ಯಕ್ರಮ (ವರದಿ)

ಸಿಂಗಪುರದಲ್ಲಿ ವಚನದಲ್ಲಿ ನಾಮಾಮೃತ ತುಂಬಿದ ವಚನಾಂಜಲಿ ಕಾರ್ಯಕ್ರಮ

ವರದಿ: ನಾಗೇಶ ಮೈಸೂರು, ಸಿಂಗಪುರ
ಚಿತ್ರಗಳು: ವೆಂಕಟ್, ಸಿಂಗಪುರ.

ಅಪರೂಪಕ್ಕೆಂಬಂತೆ ಆಷಾಡದ ರೀತಿಯ ಹವಾಮಾನವನ್ಹೊತ್ತು ಬೆಳಗಿನಿಂದ ಹನಿಯುತ್ತಿದ್ದ ಮಳೆರಾಯ, ಶಾಂತನಾಗಿ ತಂಪಾದ ಸಂಜೆಯ ಮುಸುಕು ಹೊದಿಸಿದಾಗ ಸಿಂಗಪುರ ಕನ್ನಡ ಸಂಘ ಮತ್ತು ವುಡ್ಲ್ಯಾಂಡ್ಸ್ ಕಮ್ಯುನಿಟಿ ಸೆಂಟರ್ (ಐಎಇಸಿ) ಇವರುಗಳ ಜಂಟಿ ಸಹಯೋಗದಲ್ಲಿ 2013 ಜುಲೈ 27ರ ಶನಿವಾರ ಸಂಜೆ, ಸಿಂಗಪುರದಲ್ಲಿ ಆಯೋಜಿಸಿದ್ದ ಮೂರನೆ ವರ್ಷದ ವಚನಾಂಜಲಿ ಕಾರ್ಯಕ್ರಮಕ್ಕೆ ಸೂಕ್ತ ಮುನ್ನುಡಿ ಬರೆದಂತಾಗಿತ್ತು. ಇತ್ತೀಚೆಗೆ ತಾನೆ ಸಿಂಗಪುರ ಕನ್ನಡ ಸಂಘದ ನೂತನ ಪದಾಧಿಕಾರಿಗಳು ಹೊಸದಾಗಿ ಅಧಿಕಾರ ವಹಿಸಿಕೊಂಡ ನಂತರ ನಡೆದ ಮೊದಲ ಸಮಾರಂಭವಾಗಿ ಸಂಜೆ ಸುಮಾರು 5:30ಕ್ಕೆ ಆರಂಭವಾದ ಈ ಭಕ್ತಿಭಾವದ ಸಂಜೆ, ಹೊಸ ಸಮಿತಿಯಲ್ಲಿರುವ ಹೆಚ್ಚಿನ ಸಂಖ್ಯೆಯ ಮಹಿಳಾ ಪದಾಧಿಕಾರಿಗಳಿಂದಾಗಿಯೂ ಗಮನ ಸೆಳೆದ ವಿಶೇಷ ಕಾರ್ಯಕ್ರಮವಾಗಿತ್ತು. ಇದಕ್ಕೆ ಕಲಶವಿಟ್ಟಂತೆ ಕನ್ನಡನಾಡಿಂದ ಆಗಮಿಸಿ ತಮ್ಮ ವಿಶೇಷ ಉಪಸ್ಥಿತಿಯಿಂದ ಕಾರ್ಯಕ್ರಮವನ್ನು ಕಳೆಗಟ್ಟಿಸಿದವರು ಮಾಜಿ ಸಂಸದೆ ಡಾ. ಲೀಲಾದೇವಿ ಆರ್ ಪ್ರಸಾದ್. ಗೌರವ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಂಡ ಸಿಂಗಪುರದ ಎಂ.ಪಿ ಶ್ರೀಮತಿ. ಐಲೀನ್ ಲೀಯವರು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗಿತ್ತರು.

ಕಣ್ಗೆ ಶೃಂಗಾರ ಗುರುಹಿರಿಯರ ನೋಡುವುದು
ಕರ್ಣಕ್ಕೆ ಶೃಂಗಾರ ಪುರಾತನರ ಸಂಗೀತಂಗಳ ಕೇಳುವುದು

ವಚನಕ್ಕೆ ಶೃಂಗಾರ ಸತ್ಯವ ನುಡಿವುದು
ಸಂಭಾಷಣೆಗೆ ಶೃಂಗಾರ ಸದ್ಭಕ್ತರ ನುಡಿಗಡಣ
ಕರಕ್ಕೆ ಶೃಂಗಾರ ಸತ್ಪಾತ್ರಕ್ಕೀವುದು
ಜೀವಿಸುವ ಜೀವನಕ್ಕೆ ಶೃಂಗಾರ ಗಣಮೇಳಾಪ
ಇವಿಲ್ಲದ ಜೀವಿಯ ಬಾಳುವೆ ಏತಕ್ಕೆ ಬಾತೆಯಯ್ಯಾ
ಚೆನ್ನಮಲ್ಲಿಕಾರ್ಜುನಾ?

ಅಕ್ಕಮಹಾದೇವಿಯವರ ಮೇಲಿನ ಸುಂದರ ವಚನದೊಂದಿಗೆ ಆರಂಭಿಸುತ್ತ ಕಾರ್ಯಕ್ರಮ ನಿರೂಪಿಸಿದ ವಿಜಯ ಮಹಂತೇಶ ಶೀಗಿಯವರು, 2011ರಲ್ಲಿ ಆರಂಭವಾದ ವಚನಾಂಜಲಿ ಕಾರ್ಯಕ್ರಮದ ಹಿನ್ನೆಲೆಯನ್ನು ವಿವರಿಸಿ ಜತೆಗೆ ವಚನ ಎಂದರೇನು ಎಂಬ ಸರಳ ವಿವರಣೆಯೊಂದಿಗೆ, ಕನ್ನಡ ತಿಳಿಯದವರು ಹಾಗು ಕನ್ನಡೇತರರಿಗಾಗಿ ಇಂಗ್ಲೀಷ್ ಸಾರಾಂಶ ಸಹ ಜತೆಜತೆಯಲ್ಲೆ ಸಮೀಕರಿಸುತ್ತ ವಚನಾಂಜಲಿ-2013ಕ್ಕೆ ನಾಂದಿ ಹಾಡಿದರು. ಸಿಂಗಪುರ ಕನ್ನಡ ಸಂಘದ ಮೊದಲ ಅಧ್ಯಕ್ಷರ, ಕಳೆದ ಬಾರಿಯ ಹಾಗೂ ನೂತನ ಅಧ್ಯಕ್ಷರ ಜತೆಯಲ್ಲಿ ಶ್ರೀಮತಿ ಡಾ. ಲೀಲಾದೇವಿ ಆರ್ ಪ್ರಸಾದ್ ರವರು ಶ್ರೀಮತಿ ಚೈತ್ರ ಮತ್ತು ಶ್ರೀಮತಿ ಶಶಿಮುಖಿಯವರ ಕಂಠ ಸಿರಿಯಿಂದ ಹೊಮ್ಮಿದ ‘ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ’ ಗೀತೆಯ ಪ್ರಾರ್ಥನಾ ಹಿನ್ನೆಲೆಯಲ್ಲಿ ಜ್ಯೋತಿ ಬೆಳಗಿಸುವ ಮೂಲಕ ವಿಧ್ಯುಕ್ತವಾಗಿ ಉದ್ಘಾಟನೆ ಮಾಡಿದರು. ನಂತರ ಕನ್ನಡ ಸಂಘದ ನೂತನ ಅಧ್ಯಕ್ಷೆ ಶ್ರೀಮತಿ ವಿಶಾಲಾಕ್ಷಿ ವೈದ್ಯರಿಂದ ಸ್ವಾಗತ ಭಾಷಣ ಮತ್ತು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಡಾ. ಲೀಲಾದೇವಿ ಪ್ರಸಾದರ ಕಿರುಪರಿಚಯದೊಂದಿಗೆ ಕಾರ್ಯಕ್ರಮ ಮುಂದುವರೆಯಿತು.

ಈ ಸಮಾರಂಭದ ಹಿನ್ನಲೆಯಲ್ಲಿ ಒಂದು ವಾರದ ಹಿಂದೆ ನಡೆದಿದ್ದ, ಸುಮಾರು 30 ಸ್ಪರ್ಧಿಗಳು ಭಾಗವಹಿಸಿದ್ದ ವಚನ ಪಠಣ ಸ್ಪರ್ಧೆಯ ವೀಡಿಯೊ ತುಣುಕುಗಳನ್ನು ಪ್ರದರ್ಶಿಸಲಾಯ್ತು. ಪುಟಾಣಿಗಳಿಂದ ಹಿಡಿದು ವಯೋವೃದ್ದರವರೆಗೆ ಎಲ್ಲಾ ವಯಸಿನವರು ಪಾಲ್ಗೊಂಡಿದ್ದ ಈ ಸ್ಪರ್ಧೆಯಲ್ಲಿ ತೀಪುಗಾರರಾಗಿ ಕಾರ್ಯ ನಿರ್ವಹಿಸಿದವರು ಶ್ರೀಮತಿ ವಾಣಿ ರಾಮದಾಸ್, ಶ್ರೀ ಗಿರೀಶ್ ಜಮದಗ್ನಿ ಮತ್ತು ಶ್ರೀಮತಿ ಕವಿತಾ ಬಾದಾಮಿಯವರು. ನಂತರದ ಕಾರ್ಯಕ್ರಮ ಸಿಂಗಪುರದ ಹೆಸರಾಂತ ವಿದುಷಿ ಭಾಗ್ಯ ಕೃಷ್ಣಮೂರ್ತಿ ತಂಡದಿಂದ ಆಯ್ದ ವಚನಗಳ ಸಮೂಹ ಗಾಯನ. ಪ್ರತಿ ವಚನವನ್ನು ಓದಿ ಅದರ ಹಿಂದಿನ ಅರ್ಥ ಸಾರವನ್ನು ಡಾ. ಲೀಲಾದೇವಿ ಪ್ರಸಾದರವರು ವಚನ ವಿಶ್ಲೇಷಣೆಯ ರೂಪದಲ್ಲಿ ವಿವರಿಸಿದ ಬಳಿಕ, ತಂಡದ ಗಾಯಕ, ಗಾಯಕಿಯರು ಪಕ್ಕ ವಾದ್ಯದವರ ಸಹಯೋಗದೊಂದಿಗೆ ಮಧುರ ಗಾಯನದ ರೂಪದಲ್ಲಿ ಪ್ರಸ್ತುತಪಡಿಸಿದರು. ಅಕ್ಕ ಮಹಾದೇವಿಯ ಎರಡು ವಚನಗಳು (ಮರವಿದ್ದು ಫಲವೇನು ನೆರಳಿಲ್ಲದನ್ನಕ್ಕ, ಚಿಲಿಮಿಲಿ ಎಂದೋಡುವ ಗಿಳಿಗಳಿರಾ), ಕ್ರಾಂತಿಯೋಗಿ ಬಸವಣ್ಣನವರ ಎರಡು ವಚನಗಳು (ಲೋಕದ ಡೊಂಕ ನೀವೇಕೆ ತಿದ್ದುವಿರಿ, ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ), ಅಲ್ಲಮ ಪ್ರಭುವಿನ ಎರಡು ವಚನ (ವಾಯು ನಿದ್ರೆಗೈದೊಡೆ ಆಕಾಶ ಜೋಗುಳವಾಡಿತ್ತು, ಹರಿವ ನದಿಗೆ ಮೈಯೆಲ್ಲಾ ಕಾಲು) ಮಾತ್ರವಲ್ಲದೆ ಸರ್ಪಭೂಷಣ ಸ್ವಾಮಿಗಳ ಒಂದು ರಚನೆ (ಬೆರೆಯಬಾರದೆ ತಿಳಿದು ಬೆರೆಯಬಾರದೆ) ಮತ್ತು ನಂಜುಂಡ ಶಿವಯೋಗಿಗಳ ಮತ್ತೊಂದು ರಚನೆಯನ್ನು (ಭಜಿಸಿರಿ ಗುರುವರನ ಸುಜನರು) ವಿಶ್ಲೇಷಿಸಿ ಹಾಡಿ ನೆರೆದಿದ್ದ ಸಭಿಕರಿಗೆ ಭಕ್ತಿ ಸುಧೆಯನುಣಿಸಿದರು.

ಈ ನಡುವೆ ಸಮಾರಂಭಕ್ಕೆ ಆಗಮಿಸಿದ ಗೌರವ ಅತಿಥಿ ಶ್ರೀಮತಿ. ಐಲೀನ್ ಲೀ ಯವರಿಗೆ ಡಾ. ಲೀಲಾದೇವಿ ಪ್ರಸಾದರವರಿಂದ ಶಾಲು ಹೊದಿಸಿ ಮಾಲಾರ್ಪಣೆಯೊಂದಿಗೆ ಗೌರವಿಸಲಾಯ್ತು. ನಂತರ ವಚನಗಳಿಗೆ ನೃತ್ಯವನ್ನಳವಡಿಸುತ ‘ಬೆಟ್ಟದಾ ಮೇಲೊಂದು ಮನೆಯ ಮಾಡಿ’ ಅಕ್ಕನ ವಚನಕ್ಕೆ ರಾಗ ತಾಳ ಭಾವ ಅಳವಡಿಸಿದ ಅಮೋಘ ನೃತ್ಯದ ಪ್ರದರ್ಶನವಿತ್ತವರು ಶ್ರೀಮತಿ ರಚನಾ ಹೆಗ್ಡೆ. ವಚನಗಳನ್ನು ದೃಶ್ಯ ಕಾವ್ಯವನ್ನಾಗಿಸುವ ಕಠಿಣತಮ ಕೆಲಸವನ್ನು ತಮ್ಮ ಉತ್ತಮ ಆಂಗಿಕ ಭಾವಾಭಿನಯ, ನೃತ್ಯ ಲಾಸ್ಯಗಳೊಂದಿಗೆ ಯಶಸ್ವಿಯಾಗಿ ವೇದಿಕೆಯಲ್ಲಿ ಪ್ರಸ್ತುತಪಡಿಸಿದ ರಚನಾ ಹೆಗಡೆ ಎಲ್ಲ ಸಭಿಕರ ಮೆಚ್ಚುಗೆಗೆ ಪಾತ್ರರಾದರು.
ನಂತರ ವಚನ ಪಠನ ವಿಜೇತರಿಗೆ ಬಹುಮಾನ ವಿತರಣೆ. ಐದರಿಂದ ಎಂಟು ವರ್ಷದ ವಿಭಾಗದಲ್ಲಿ ಹಿತೈಷಿ ಶ್ರಿನಿವಾಸ ಮೊದಲನೆ ಬಹುಮಾನಗಳಿಸಿದರು. ವೇದಾಭಟ್ ಎರಡನೆ ಸ್ಥಾನ ಪಡೆದರೆ, ಆದಿತ್ಯ ವೆಂಕಟೇಶ್ ಮತ್ತು ರಕ್ಷಿತ್ ಹೆಗಡೆ ಮೂರನೆ ಬಹುಮಾನಕ್ಕೆ ಪಾತ್ರರಾದರು. ಶಾಶ್ವತ್ ಕಂಬಾರ ಭಟ್ ಸಮಾಧಾನಕರ ಬಹುಮಾನ ಗಳಿಸಿದರು. ಒಂಬತ್ತರಿಂದ ಹದಿನಾಲ್ಕರ ವಯಸಿನ ಎರಡನೆ ಗುಂಪಿನಲ್ಲಿ ಮೊದಲನೆ ಬಹುಮಾನ ಶೇಫಾಲಿ ಜಗದೀಶ್ ಪಾಲಾದರೆ, ಎರಡನೆ ಬಹುಮಾನ ಖುಷಿ ಉದಯಕುಮಾರರಿಗೆ; ಅನುಷ್ಕಾ ಮತ್ತು ರಾಹುಲ್ ಕರ್ಕೆ ಮೂರನೆ ಸ್ಥಾನವನ್ನು ಹಂಚಿಕೊಂಡರೆ ಹೇಮಂತ್ ಶ್ರೀನಿವಾಸ ಮೂರ್ತಿ ಯವರು ಸಮಾಧಾನಕರ ಬಹುಮಾನ ಗಳಿಸಿದರು. ಹದಿನೈದನ್ನು ದಾಟಿದವರ ಕೊನೆಯ ಗುಂಪಿನಲ್ಲಿ ಮೊದಲ ಸ್ಥಾನ ಭೀಮಪ್ಪ ಕಡಲಗೆಯವರ ಪಡೆದರೆ , ರೇಖಾ ಹೆಗ್ಡೆಯವರು ಎರಡನೆ ಸ್ಥಾನ ಗಳಿಸಿದರು. ಸುರೇಶ ಭಟ್ಟರು ಮೂರನೆಯ ಸ್ಥಾನ ಪಡೆದರು.

ತದನಂತರ ಪುಟಾಣಿ ವಿಜೇತರುಗಳಿಂದ ವೇದಿಕೆಯ ಮೇಲೆ ವಚನ ಪಠನವನ್ನು ಮಾಡಿಸಲಾಯ್ತು. ಬಹುಮಾನಿತ ಪುಟಾಣಿಗಳು ತಮಗೆ ಬಹುಮಾನ ತಂದಿತ್ತ ವಚನಗಳನ್ನು ಪುನರ್ವಾಚಿಸಿದರು. ಇದರ ಹಿಂದೆಯೆ ‘ವಚನದಲ್ಲಿ ನಾಮಾಮೃತ ತುಂಬಿ’ ಗಾಯನಕ್ಕೆ ನರ್ತಿಸಿ ಸಮೂಹ ನೃತ್ಯದ ಸಿಹಿಯನುಣಿಸಿದವರು ವಿದೂಷಿ ಶ್ರೀಮತಿ ಎಂ. ಎಸ್. ಶ್ರೀಲಕ್ಷ್ಮಿ ತಂಡದ ಬಾಲಕಿಯರು (ಕುಮಾರಿ ಚೈತ್ರ ಅರ್ಚಕ್, ಕುಮಾರಿ ಅನುಷ್ಕ, ಕುಮಾರಿ ಮೇಘನ, ಕುಮಾರಿ ಸಿಮ್ರಿತ, ಕುಮಾರಿ ಲೀರ ಶರ್ಮ). ನಂತರ ಮಾತನಾಡಿದ ಡಾ. ಲೀಲಾವತಿ ಪ್ರಸಾದರು ಹನ್ನೆರಡನೆ ಶತಮಾನದ ಭಕ್ತಿ ಕ್ರಾಂತಿ, ಅಕ್ಕಮಹಾದೇವಿಯ ಔನ್ನತ್ಯ, ಕನ್ನಡದ ಉಪನಿಷದ್ಗಳೆಂಬ ಖ್ಯಾತಿಗೆ ಪಾತ್ರವಾದ ವಚನಗಳ ಹಿರಿಮೆಯನ್ನು ಸಭಿಕರಿಗೆ ಪರಿಚಯ ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ ಶ್ರೀಮತಿ ವಿಶಾಲಾಕ್ಷಿ ವೈದ್ಯ, ಶ್ರೀಮತಿ ಭಾಗ್ಯಮೂರ್ತಿ, ಶ್ರೀಮತಿ ರಶ್ಮಿ ಹಾಗೂ ನಿರೂಪಕ ಮಹಾಂತೇಶರಿಗೆ ಡಾ. ಲೀಲಾದೇವಿ ಪ್ರಸಾದರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಹೀಗೆ ಸೊಗಸಾಗಿ ನಡೆದ ಕಾರ್ಯಕ್ರಮಕ್ಕೆ ಸಿಂಗಪುರ ಕನ್ನಡ ಸಂಘದ ಕಾರ್ಯಕಾರಿ ಸಮಿತಿಯ ಪರವಾಗಿ ಶ್ರೀ ಕಿಶೋರ್ ರವರು ವಂದನಾರ್ಪಣೆ ಸಲ್ಲಿಸಿದರು. ಅಚ್ಚುಕಟ್ಟಾಗಿ ನಡೆದ ಸಮಾರಂಭವು ಲಘು ಉಪಹಾರದೊಂದಿಗೆ ಮುಕ್ತಾಯವಾದಾಗ, ಸಮಾರಂಭದ ವಚನಧಾರೆಯ ತೂಕಕ್ಕೇ ಹೆದರಿತೇನೋ ಎಂಬಂತೆ ಹೊರಗಿನ ಮಳೆಯೂ ಪೂರ್ತಿ ನಿಂತು ಭಕ್ತಿಸುಧೆಯನ್ನು ಆಸ್ವಾದಿಸಿದ ಸಭಿಕರು ಸುಗಮವಾಗಿ ಹಿಂತಿರುಗಲಿಕ್ಕೆ ಅನುವು ಮಾಡಿಕೊಟ್ಟಿತ್ತು.

ವರದಿ: ನಾಗೇಶ ಮೈಸೂರು, ಸಿಂಗಪುರ
ಚಿತ್ರಗಳು: ವೆಂಕಟ್, ಸಿಂಗಪುರ.

Published in VK Newz: on August 7 2013 08:15:13 AM. ವಿದೇಶ ಸುದ್ದಿಗಳು.

20130807-131323.jpg

20130807-131357.jpg

20130807-131403.jpg

20130807-131410.jpg

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s