ಒತ್ತಡಗಳ ಬೆತ್ತ !
___________________________
ಒತ್ತಡಗಳ ಬೆತ್ತ ಮೈಮನ ಮೂಳೆ ಮುರಿಸಿತ್ತ
ಉಳುಕಿದಾ ಕತ್ತ ನೇರ ನಿಲಿಸಗಾಗದೆ ಅತ್ತಿತ್ತ
ಹೊತ್ತ ಮುಂಡಕೆ ಬಿಡದೆ ಹೆಗಲೇರಿದ ಬಗಲ
ಮೊತ್ತ ಹುಡುಕಾಡಿಸಿ ತಡಕಾಡಿಸಿ ಕಳವಳ!
ಬೇಕೆಂದವರಾರು ಹಾಳು ಒತ್ತಡಗಳ ಜೋರು
ಬೇಡವೆಂದರು ಬಿಡ ಪುಟ್ಟ ಕಂದನ ತಕರಾರು
ಜೋಳಿಗೆಗಿಳಿದಾ ಹೊಟ್ಟೆಪಾಡಿನ ಕೊಸರಿಡಿದು
ಮಾಳಿಗೆಯಿಂದಾ ಗುಡಿಸಲಿಗು ಹೆಸರನ್ಹಿಡಿದು!
ಬುದ್ದಿ ಬಲಿತಿರಲಿ ಬಿಡಲಿ ತರ್ಕಕೆ ಕೊನೆಯೆಲ್ಲಿ
ಬಲಿತಿರಲೊತ್ತಡ ಸಾಧಿಸೆ ಜಂಗುಳಿ ನಡುವಲ್ಲಿ
ಎಳಸಿಗೆ ಒತ್ತಡ ಇನ್ನೂ ಬಲಿಯದಿಹ ಭಯಕೆ
ಬಲಿಯಲೂ ಬಿಡದೆ ಹಿಚುಕಿ ಹಣ್ಣಾಗಿಸ್ಹವಣಿಕೆ!
ಒತ್ತಡಗಳೆ ಶತೃ ಮಿತ್ರ ಕಾಲಧರ್ಮದ ಹರಕೆ
ಏಗಿ ಜಯಿಸಿದವ ಗೆದ್ದ ಸೋಲುಗೆಲುವೆ ಬೆರಕೆ
ಗೆದ್ದೂ ಸೋತಭಾವ ಸೋತಜೀವನವೆ ಅಭಾವ
ಒತ್ತಡಕುತ್ತರಿಸೊ ಬಾಳಲೆಲ್ಲಿ ಜೀವನಾನುಭವ!
ಮನದಿಚ್ಚೆಯ ಮಾಡುವ ಮನ ಸ್ವೇಚ್ಛಾ ಭವನ
ಮನಸಾ ಮಾಡಲೆಲ್ಲಿ ಬಿಡಲೊಲ್ಲ ಒತ್ತಡ ಕ್ಷಣ
ಹೊಂದಾಣಿಸೊ ಜಗ ಯಾರೊ ಎಳೆವಾ ತೇರು
ದೊಂಬಿಯಲೆ ಕೈಯೆಳೆದೊತ್ತಡಿಸುವವರಿವರು!
– ನಾಗೇಶ ಮೈಸೂರು
(ಸಂಪದದಲ್ಲಿ ಪ್ರಕಟಿಸಿದ ಬರಹ)
April 9, 2013 – 1:01pm ,